ಸುಧಾಕರರಾಯರಿಗೆ ಭರ್ತಿ ಐವತ್ತೆರಡು ವರ್ಷವಾಗಿತ್ತು. ಅವರೊಬ್ಬ ಯಶಸ್ವೀ ಉದ್ಯಮಿ. ಆತ ಸಖತ್ ಶ್ರೀಮಂತ ಮತ್ತು ರಸಿಕರ ರಾಜ. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬಳು ಮಹಿಳೆ ಇರ್ತಾಳೆ ಎಂಬ ಮಾತು ಅವರ ಮಟ್ಟಿಗೆ ಹಂಡ್ರೆಸ್ ಪರ್ಸೆಂಟ್ ನಿಜವಾಗಿತ್ತು. ಅವರ ಯಶಸ್ಸಿನ ಹಿಂದೆ-ಅವರ ಹೆಂಡತಿಯ ನಿಟ್ಟುಸಿರು ಹಾಗೂ ಸೆಕ್ರೆಟರಿಯ ಬಿಸಿಯುಸಿರು ಎರಡೂ ಇತ್ತು. ಆಫೀಸಿನ ಕೆಲಸದಲ್ಲಿ ಒಂದಿಷ್ಟೇ ಇಷ್ಟು ಬೇಸರ ಅನಿಸಿದರೂ ಸಾಕು, ತಕ್ಷಣವೇ ಸೆಕ್ರೆಟರಿಯ ಜತೆ ಟ್ರಿಪ್ ಹೋಗಿ ರಿಲ್ಯಾಕ್ಸ್ ಆಗುತ್ತಿದ್ದರು ಸುಧಾಕರರಾವ್.
ಹೀಗಿರುವಾಗ ಅದೊಂದು ದಿನ ಏನಾಯಿತೆಂದರೆ ರಾಯರು ಯಾವುದೋ ವಿಷಯವಾಗಿ ಬೇಸರದಿಂದ ತಲೆ ಮೇಲೆ ಕೈ ಹೊತ್ತು ಕೂತಿದ್ದಾಗಲೇ-ಥೇಟಾನುಥೇಟ್ ಅಪ್ಸರೆಯ ಥರಾ ಮೇಕಪ್ ಮಾಡಿಕೊಂಡು ಅವರ ಸೆಕ್ರೆಟರಿ ಬಂದೇ ಬಿಟ್ಟಳು. ಪುಣ್ಯಾತ್ಗಿತ್ತಿ ಅಷ್ಟಕ್ಕೇ ಸುಮ್ಮನಿರಬೇಕೋ ಬೇಡವೋ, ರಾಯರ ಪಕ್ಕ ನಿಂತು ಒಮ್ಮೆ ವಯ್ಯಾರದಿಂದ ನಕ್ಕಳು. ಅಷ್ಟಕ್ಕೇ ರಾಯರ ಟೆನ್ಷನ್ನು ಅರ್ಧಕ್ಕರ್ಧ ಮಾಯವಾಯಿತು. ತಕ್ಷಣವೇ ಒಮ್ಮೆ ಭುಜ ಕುಣಿಸಿ, ಅವಳಿಗಷ್ಟೇ ಅರ್ಥವಾಗುವಂತೆ ನಕ್ಕು ಹೇಳಿದರು: ‘ಒಂದು ವಾರದ ಮಟ್ಟಿಗೆ ಟ್ರಿಪ್ ಹೋಗಿ ಬರೋಣ. ನಾಳೆಯೇ ಹೊರಡೋಣ. ಎಲ್ಲ ವ್ಯವಸ್ಥೆ ಮಾಡಿ…’
ಈ ಸುಂದರಿ ತನ್ನ ಗಂಡನಿಗೆ ಫೋನ್ ಮಾಡಿ ಹೇಳಿದಳು: ‘ಅರ್ಜೆಂಟ್ ಮೀಟಿಂಗಂತೆ ಕಣ್ರಿ. ಒಂದು ವಾರದ ಮಟ್ಟಿಗೆ ಬಾಂಬೆಗೆ ಹೋಗಬೇಕಿದೆ. ನಾಳೇನೇ ಹೊರಡಬೇಕು. ಒಂದು ವಾರ, ನೀವು ಹುಶಾರಾಗಿರಿ…’
ಆ ಸುಂದರಿಯ ಗಂಡ ಕೂಡ ಕಡಿಮೆ ಆಸಾಮಿಯಲ್ಲ. ಹಗ್ಗ ಕಡಿಯೋ ಚಾಳೀಲಿ ಅವನೂ ಎಕ್ಸ್ಪರ್ಟು. ತಕ್ಷಣ ತನ್ನ ಲವರ್ ಮೊಬೈಲ್ಗೆ ಕಾಲ್ ಮಾಡಿ- ‘ನಾಳೆಯಿಂದ ನನ್ನ ಹೆಂಡ್ತಿ ಟ್ರಿಪ್ಗೆ ಹೋಗ್ತಿದಾಳೆ. ಒಂದು ವಾರ! ನಾವೂ ಎಲ್ಲಾದ್ರೂ ಟ್ರಿಪ್ ಹೋಗಿ ಬರೋಣ’.
ಈ ಲವರ್ ಹುಡುಗಿ ಇದ್ದಳಲ್ಲ, ಅವಳು ಶ್ರೀಮಂತರ ಮನೆಯ ಒಬ್ಬ ಪುಟ್ಟ ಹುಡುಗನಿಗೆ ಮನೆ ಪಾಠ ಹೇಳ್ತಿದ್ಲು. ಗೆಳೆಯನ ಫೋನು ಬಂತಲ್ಲ? ನಂತರ, ಆ ಹುಡುಗನಿಗೆ ಹೇಳಿದ್ಲು: ‘ನೋಡು ಪುಟ್ಟಾ, ನಾಳೆಯಿಂದ ಒಂದು ವಾರ ಟ್ಯೂಶನ್ ಇಲ್ಲ. ನಾನು ರಜೇಲಿದೀನಿ…’
ಒಂದು ವಾರ ಪೂರ್ತಾ ಟ್ಯೂಶನ್ ಇಲ್ಲ ಎಂದು ಗೊತ್ತಾದ ತಕ್ಷಣ ‘ಹುರ್ರಾ’ ಎಂದು ಖುಷಿಯಿಂದ ಚೀರಿದ ಆ ಹುಡುಗ ತಕ್ಷಣವೇ ತನ್ನ ಅಜ್ಜನಿಗೆ ಫೋನು ಮಾಡಿ ‘ತಾತಾ, ನಾಳೆಯಿಂದ ಒಂದು ವಾರ ನಮ್ಮ ಟ್ಯೂಶನ್ ಮಿಸ್ಸು ರಜಾ ಹಾಕಿದಾರೆ. ನಂಗೆ ನಿನ್ನ ಜತೇಲಿ ಇರಬೇಕು ಅಂತ ಇಷ್ಟ’ ಅಂದ.
ತಮಾಷೆ ಕೇಳಿ: ಈ ತಾತ ಬೇರೆ ಯಾರೂ ಆಗಿರದೆ, ಬಾಸ್ ಸುಧಾಕರರಾಯರೇ ಆಗಿದ್ದರು! ಮೊಮ್ಮಗನ ಪ್ರೀತಿಯ ಮುಂದೆ ಸೆಕ್ರೆಟರಿಯ ಮೇಕಪ್ಪು, ಆ ಸೆಂಟ್ನ ಘಮಲು ಯಾವ ಲೆಕ್ಕಕ್ಕೆ? ಅವರು ತಕ್ಷಣವೇ ಸೆಕ್ರೆಟರೀನ ಕರೆದು ‘ಯಾಕೋ ಮೊಮ್ಮಗನ ಜತೆ ಕಾಲ ಕಳೀಬೇಕು ಅನ್ನಿಸ್ತಿದೆ. ಟ್ರಿಪ್ ಕ್ಯಾನ್ಸಲ್ ಮಾಡಿ’ ಅಂದೇಬಿಟ್ಟರು.
ಈ ಸೆಕ್ರೆಟರಿ ನಂತರದ ಹತ್ತೇ ನಿಮಿಷಕ್ಕೆ ತನ್ನ ಗಂಡನಿಗೆ ಫೋನ್ ಮಾಡಿ- ‘ನಮ್ಮ ಬಾಸ್ಗೆ ಬೇರೆ ಏನೋ ಕೆಲ್ಸ ಇದೆಯಂತೆ. ಟೂರ್ ಕ್ಯಾನ್ಸಲ್ ಆಗಿದೆ’ ಅಂದಳು.
ಈ ಪತಿರಾಯ ಗಡಿಬಿಡಿಯಿಂದಲೇ ತನ್ನ ಗೆಳತಿಗೆ ಫೋನ್ ಮಾಡಿ- ‘ಸಾರಿ ಡಿಯರ್, ನನ್ನ ಹೆಂಡ್ತಿ ಟ್ರಿಪ್ ಕ್ಯಾನ್ಸಲ್ ಆಗಿದೆ. ಅವಳು ಮನೆಗೆ ಬರ್ತಾಳೆ. ಸೋ, ನಮ್ಮ ಟ್ರಿಪ್ ಕೂಡ ಕ್ಯಾನ್ಸಲ್. ಸಾರಿ’ ಅಂದ.
ಈ ಲೇಡಿ ಕಂ ಟೀಚರಮ್ಮ ತಾನು ಟ್ಯೂಷನ್ ಮಾಡುತ್ತಿದ್ದ ಹುಡುಗನಿಗೆ ಫೋನ್ ಮಾಡಿ- ಪುಟ್ಟಾ, ನಾನು ಟೂರ್ ಹೋಗ್ತಾ ಇಲ್ಲ. ನಾಳೆಯಿಂದ ಕ್ಲಾಸ್ ಇರುತ್ತೆ…’ ಅಂದಳು.
ಈ ಹುಡುಗನಿಗೆ ಸಿಕ್ಕಾಪಟ್ಟೆ ಬೇಜಾರಾಯಿತು. ಆತ ತಾತನಿಗೆ ತಕ್ಷಣವೇ ಫೋನ್ ಮಾಡಿ- ‘ನಮ್ಮ ಮಿಸ್ಸು ಈಗಷ್ಟೇ ಫೋನ್ ಮಾಡಿದ್ರು ತಾತಾ. ನಾಳೆಯಿಂದ ಕ್ಲಾಸ್ ತಗೋತಾರಂತೆ. ಸಾರಿ’ ಅಂದ!
ಮೊಮ್ಮಗ ದಿಢೀರನೆ ಉಲ್ಟಾ ಹೊಡೆದದ್ದು ಕೇಳಿ, ಸುಧಾಕರರಾಯರಿಗೆ ತಲೆ ಬಿಸಿಯಾಯಿತು. ಈ ಟೆನ್ಷನ್ನಿಂದ ಬೇಗ ಪಾರಾಗಬೇಕು ಅನ್ನಿಸಿತಲ್ಲ, ತಕ್ಷಣವೇ ಸೆಕ್ರೆಟರಿಯನ್ನು ಕರೆದು ಹೇಳಿಬಿಟ್ಟರು: ‘ಯಾಕೋ ಸಖತ್ ಬೇಜಾರಾಗ್ತಾ ಇದೆ. ನಾಳೆ ಟ್ರಿಪ್ ಹೋಗೇ ಬಿಡೋಣ. ಎಲ್ಲ ಅರೇಂಜ್ ಮಾಡಿ…’
ಮುಂದೆ ಏನಾಯಿತು ಎಂಬುದನ್ನು ಸುಮ್ಮನೇ ಕಲ್ಪಿಸಿಕೊಳ್ಳಿ…!