ಮತ್ತೆ ಮತ್ತೆ ತೇಜಸ್ವಿ

null

ಎಲ್ಲರ ಪ್ರೀತಿಯ ಪೂರ್ಣಚಂದ್ರ ತೇಜಸ್ವಿಯವರು ನಿಧನರಾಗಿ ವರ್ಷ ಮುಗಿದು ಹೋಗಿದೆ. ಆದರೆ ತೇಜಸ್ವಿಯವರು- ಅವರ ತಮಾಷೆಯ ಮಾತುಗಳೊಂದಿಗೆ; ಪ್ರೀತಿಯ ಗದರಿಕೆಯೊಂದಿಗೆ ಪದೇ ಪದೆ ನೆನಪಾಗುತ್ತಲೇ ಇದ್ದಾರೆ. ತೇಜಸ್ವಿ ಜತೆ ಮಾತಾಡ್ತಾ ಇದ್ದಾಗ ಒಂದ್ಸಲ ಏನಾಯ್ತು ಗೊತ್ತಾ? ಎಂದು ಯಾರಾದರೂ ಹೇಳಿದರೆ – ಅವರ ಮಾತು ಕೇಳಲು ನೂರು ಜನ ಸುತ್ತ ನಿಲ್ಲುತ್ತಾರೆ.
ಹಾಗೆ, ತೇಜಸ್ವಿ, ತೇಜಸ್ವಿ ಎಂದು ಕನವರಿಸುವವರಿಗೆಂದೇ ಒಂದು ತಮಾಷೀ ಪ್ರಸಂಗದ ವಿವರಣೆಯನ್ನು ಇಲ್ಲಿ ನೀಡಲಾಗಿದೆ.
ಅದೊಮ್ಮೆ ಮೂಡಿಗೆರೆಯಲ್ಲಿ ಯುವಕರೆಲ್ಲ ಸೇರಿ ಸಚೇತನ ಎಂಬ ಸಂಘ ಕಟ್ಟಿದರು. ಅದರ ಮೂಲಕ ಒಂದಷ್ಟು ಕಾರ್ಯಕ್ರಮ ಹಮ್ಮಿಕೊಂಡು, ಅದೊಂದು ಮುಂಜಾನೆ ತೇಜಸ್ವಿಯವರ ಬಳಿ ಹೋಗಿ- ಸಾರ್, ಹೀಗ್ಹೀಗೆ, ನಮ್ಮ ಸಂಘದಿಂದ ಒಂದು ಸಾಹಸ ಮಾಡ್ತಾ ಇದೀವಿ. ಅದನ್ನು ನೋಡಲು ನೀವು ಬರ್ಲೇಬೇಕು’ ಅಂದರಂತೆ. ತೇಜಸ್ವಿಯವರು ಕುತೂಹಲದಿಂದ- `ಹೌದೇನ್ರಯ್ಯ? ಬರೋಣ ಬಿಡಿ. ಅದ್ಸರಿ, ಕಾರ್ಯಕ್ರಮ ಎಲ್ಲಿ? ಯಾವಾಗ? ನೀವು ಮಾಡೋ ಸಾಹಸವಾದ್ರೂ ಏನು?’ ಎಂದು ಪ್ರಶ್ನಿಸಿದ್ದಾರೆ.
ಈ ಹುಡುಗರು ಖುಷಿಯಿಂದ – `ಸಾರ್, ಕಣ್ಣಿಗೆ ಬಟ್ಟೆ ಕಟ್ಕೊಂಡು ಮೂಡಿಗೆರೆಯ ತುಂಬಾ ಬೈಕ್ ಓಡಿಸ್ತೀವಿ ಸಾರ್. ಭಾರೀ ಜನ ಸೇರ್ತಾರೆ. ಬೊಂಬಾಟಾಗಿರ್ತದೆ ಸಾರ್ ಅಂದರಂತೆ. ತಕ್ಷಣ ತೇಜಸ್ವಿ- ವೆರೀಗುಡ್, ಮುಂಚೇನೆ ಹೇಳಿ ಒಳ್ಳೆ ಕೆಲ್ಸ ಮಾಡಿದ್ರಿ. ನಾನವತ್ತು ಮೂಡಿಗೆರೆ ಕಡೆ ತಲೇನೇ ಹಾಕಲ್ಲ, ಬಡ್ಡೀ ಮಕ್ಳ, ಮೂಡಿಗೆರೇಲಿ ಜನ ಕಣ್ಣು ಬಿಟ್ಕೊಂಡೇ ನೆಟ್ಟಗೆ ಬೈಕ್ ಓಡ್ಸಲ್ಲ. ಇನ್ನು ಕಣ್ಣು ಮುಚ್ಕೊಂಡು ಓಡಿಸ್ತಾರಂತೆ, ಯಾರ್ನಾದ್ರೂ ಸಾಯಿಸ್ತೀರಿ, ಇಲ್ಲ ನೀವೇ ಕೈಕಾಲು ಮುರ್ಕೋತೀರಿ. ಆರ್ಟಿಒ ಕಚೇರಿಯವರು ತಲೆ ಕೆಟ್ಟವರಿಗೆಲ್ಲ ಡ್ರೈವಿಂಗ್ ಲೈಸೆನ್ಸ್ ಬೇರೆ ಕೊಟ್ ಬಿಟ್ಟಿದ್ದಾರೆ. ಥ್ಯಾಂಕ್ಸ್ ಕಣ್ರಯ್ಯ, ಮುಂಚೇನೇ ಹೇಳಿದ್ದಕ್ಕೆ’ ಎಂದು ತಿರುಗಿ ಸಹ ನೋಡದೆ ಮನೆ ಸೇರಿಕೊಂಡರಂತೆ…

Leave a Comment