ಪ್ರೇಮಗೀತೆಯೊಂದು ದಿಢೀರನೆ ಭಕ್ತಿಗೀತೆಯಾದ ಚಮತ್ಕಾರ!

ಜೂನ್ 23, 2011

ನಿನ್ನ ಸವಿನೆನಪೆ ಮನದಲ್ಲಿ…

ಚಿತ್ರ: ಅನುರಾಗ ಬಂಧನ. ಗೀತರಚನೆ: ವಿಜಯನಾರಸಿಂಹ.
ಸಂಗೀತ: ರಾಜನ್-ನಾಗೇಂದ್ರ. ಗಾಯನ: ಎಸ್. ಜಾನಕಿ.

ನಿನ್ನ ಸವಿನೆನಪೆ ಮನದಲ್ಲಿ ಆರಾಧನೆ
ಪ್ರೀತಿಯ ಸವಿಮಾತೆ ಉಪಾಸನೆ
ನಿನ್ನ ಸಂಗದಲ್ಲಿ ಅಂಗಾಂಗ ಮಿಂಚಾಯಿತು
ಶೃಂಗಾರ ರಸಧಾರೆ ಉಸಿರಾಯಿತು ||ಪ||

ಹೂ ಬಾಣ ಹೂಡಲು ಕಾಮನಬಿಲ್ಲು
ಈ ಪ್ರಾಣ ಮುಡಿಪಾಯ್ತು ನಿನ್ನ ಸೇರಲು
ಉಸಿರಾಟ ನೀನು ಬಿಸಿ ಮಿಡುಕಾಟ ನಾನು
ನಿನ್ನಲಿ ನಾ ಮರುಳಾದೆನು
ನೀನೆ ಈ ಬಾಳ ಬಾನು ||೧||

ಕಣ್ಣಲ್ಲೆ ಸನ್ನೆಯ ಸ್ವಾಗತ ನೀಡಿ
ನೀ ತಂದೆ ರಸಕಾವ್ಯ ಸವಿ ಹೊನ್ನುಡಿ
ಮನತುಂಬ ನೀನು ನಿನ್ನ ಪ್ರತಿಬಿಂಬ ನಾನು
ನಿನ್ನ ವಿನಾ ನಾ ಬಾಳೆನೂ
ಇನ್ನೂ ದಯೆ ಬಾರದೇನು
ಸ್ವಾಮಿ ಶಂಕರನೆ ಶಶಿಧರನೆ ಗಂಗಾಧರ
ಬಾಳಲಿ ಬೆಳಕಾಗು ಮಹೇಶ್ವರ
ನಮ್ಮ ಕೈಹಿಡಿದು ಕಾಪಾಡು ಕರುಣಾಕರ
ನಿನ್ನಲ್ಲಿ ಶರಣಾದೆ ಶಿವಶಂಕರ
ಶರಣು ಶಿವಶಂಕರ ಶರಣು ಅಭಯಂಕರ
ಶರಣು ಶಿವಶಂಕರ ಶರಣು ಅಭಯಂಕರ ||೨||

ಕನ್ನಡದ ಸಾರ್ವಕಾಲಿಕ ಶ್ರೇಷ್ಠ ಗೀತೆಗಳಲ್ಲಿ ‘ನಿನ್ನ ಸವಿನೆನಪೆ ಮನದಲ್ಲಿ ಆರಾಧನೆ’ ಗೀತೆಯೂ ಒಂದು. ‘ಅನುರಾಗ ಬಂಧನ’ ಚಿತ್ರದ ಈ ಹಾಡನ್ನು ಕಾನಡಾ ರಾಗದಲ್ಲಿ ಸಂಯೋಜಿಸಲಾಗಿದೆ. ಪ್ರೇಮದ ವರ್ಣನೆಯೊಂದಿಗೆ ಶುರುವಾಗಿ, ಭಕ್ತಿಯ ಪರವಶತೆಯೊಂದಿಗೆ ಮುಕ್ತಾಯವಾಗುವುದು ಈ ಹಾಡಿನ ವೈಶಿಷ್ಟ್ಯ. ವಿಜಯನಾರಸಿಂಹ ಅವರ ಸಾಹಿತ್ಯ, ರಾಜನ್-ನಾಗೇಂದ್ರ ಅವರ ಸಂಗೀತ ಮತ್ತು ಎಸ್. ಜಾನಕಿ ಅವರ ಇಂಪಿಂಪು ದನಿ- ಈ ಹಾಡನ್ನು ಸ್ಮರ ಣೀಯವಾಗಿಸಿವೆ. ೧೯೭೮ರಿಂದ ೧೯೭೯ರ ಅವಯಲ್ಲಿ ಆಕಾಶವಾಣಿಯಿಂದ ಮೆಚ್ಚಿನ ಗೀತೆಯಾಗಿ ಅತಿ ಹೆಚ್ಚು ಬಾರಿ ಪ್ರಸಾರವಾದದ್ದು ಈ ಗೀತೆಯ ಹೆಗ್ಗಳಿಕೆ.
ಗೀತಪ್ರಿಯ ನಿರ್ದೇಶನದ ‘ಅನುರಾಗ ಬಂಧನ’ ದಲ್ಲಿ ಬಸಂತ್‌ಕುಮಾರ್ ಪಾಟೀಲ್-ಆರತಿ ತಾರಾ ಜೋಡಿಯಿತ್ತು. ಜತೆಗೆ ಕಲ್ಯಾಣ್‌ಕುಮಾರ್-ಕಲ್ಪನಾ, ಆದವಾನಿ ಲಕ್ಷ್ಮೀದೇವಿ, ಸಂಪತ್, ದ್ವಾರಕೀಶ್, ನರಸಿಂಹರಾಜು, ಅಂಬರೀಷ್, ದಿನೇಶ್, ಮಂಜುಳಾ ಮುಂತಾದವರ ತಾರಾಗಣವೂ ಇತ್ತು. ಆಕಸ್ಮಿಕವಾಗಿ ಒಬ್ಬನನ್ನು ಕೊಲೆ ಮಾಡುವ ನಾಯಕ ನಂತರ ತಪ್ಪಿಗಾಗಿ ಪಶ್ಚಾತ್ತಾಪಪಟ್ಟು ಬದಲಾಗುವುದು ಹಾಗೂ ಅವನ ಸುತ್ತ ಹೆಣೆದುಕೊಳ್ಳುವ ಸಂಬಂಧಗಳ ತಾಕಲಾಟ ಈ ಚಿತ್ರದ ಕಥಾವಸ್ತು.
ಜೈಲುಪಾಲಾಗಿದ್ದ ವ್ಯಕ್ತಿ ‘ಬದಲಾಗುವ’ ಕಥಾ ಹಂದರ ಇತ್ತಲ್ಲ? ಅದೇ ಕಾರಣದಿಂದ ‘ಬದಲಾಗುವ’ ಹಾದಿಯಲ್ಲಿದ್ದ ಕೈದಿಯೊಬ್ಬನಿಂದಲೇ ಚಿತ್ರಕ್ಕೆ ಕ್ಯಾಮೆರಾ ಆನ್ ಮಾಡಿಸಿದ್ದು, ಸೆಂಟ್ರಲ್ ಜೈಲ್‌ನ ಜೈಲರ್‌ರಿಂದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿಸಿದ್ದು ಈ ಚಿತ್ರದ ಮತ್ತೊಂದು ವಿಶೇಷ. ಮುಖ್ಯಮಂತ್ರಿ ದೇವರಾಜ ಅರಸು, ಸಚಿವರಾಗಿದ್ದ ಬಂಗಾರಪ್ಪ, ಎಸ್.ಎಂ. ಯಾಹ್ಯಾ, ಪೊಲೀಸ್ ಆಯುಕ್ತ ವೀರಭದ್ರಪ್ಪ… ಹೀಗೆ ವಿಐಪಿ ಅನ್ನಿಸಿಕೊಂಡವರೆಲ್ಲ ಬಂದು ಈ ಸಿನಿಮಾ ನೋಡಿದರು, ಮೆಚ್ಚಿಕೊಂಡರು. ಚಿತ್ರದಲ್ಲಿ ಒಳ್ಳೆಯ ಸಂದೇಶವಿದೆ ಎಂಬ ಕಾರಣ ನೀಡಿ ಎಂಟು ವಾರ ಗಳವರೆಗೆ ತೆರಿಗೆ ವಿನಾಯಿತಿಯ ಸೌಲಭ್ಯವನ್ನೂ ಸರಕಾರ ನೀಡಿತು. ಅಷ್ಟೇ ಅಲ್ಲ, ಸೆಂಟ್ರಲ್ ಜೈಲ್‌ನಲ್ಲಿ ಕೈದಿಗಳಿಗಾಗಿಯೇ ವಿಶೇಷ ಪ್ರದರ್ಶನವನ್ನೂ ಏರ್ಪ ಡಿಸಲಾಗಿತ್ತು!
ಹಿಂದಿಯ ‘ದಾಗ್’ ಚಿತ್ರದಿಂದ ಸೂರ್ತಿ ಪಡೆದು ತಯಾರಾದ ಚಿತ್ರ ‘ಅನುರಾಗ ಬಂಧನ’. ಆದರೆ ಇಲ್ಲಿ ಆ ಚಿತ್ರದಿಂದ ಯಾವ ಸನ್ನಿವೇಶವನ್ನೂ ಹಾಗ್‌ಹಾಗೇ ಎತ್ತಿಕೊಳ್ಳಲಿಲ್ಲ. ಬದಲಿಗೆ, ಈ ನೆಲದ್ದೇ ಆದ ಕಥೆ ಹೆಣೆಯಲಾಯಿತು. ಅದಕ್ಕಾಗಿ ನಿರ್ದೇಶಕ ಗೀತಪ್ರಿಯ, ಗೀತರಚನೆಕಾರ ವಿಜಯನಾರಸಿಂಹ, ಹಂಚಿಕೆದಾರ ಕೆ.ವಿ. ಗುಪ್ತಾ, ನಿರ್ಮಾಪಕ ಬಸಂತ್‌ಕುಮಾರ್ ಪಾಟೀಲ್ ಚರ್ಚೆಗೆ ಕೂತರು. ಕಥೆ ಹಾಗೂ ಚಿತ್ರಕಥೆ ಸಿದ್ಧಪಡಿಸಲು ಆರು ತಿಂಗಳು ಹಿಡಿಯಿತು. ಈ ಕೆಲಸವೆಲ್ಲ ನಡೆದದ್ದು ಬಸಂತ್ ಅವರ ಮನೆ ಕಂ ನಿರ್ಮಾಣ ಕಚೇರಿಯಲ್ಲಿ.
ಹಾಡಿನ ಸಂದರ್ಭ ಹೀಗೆ: ನಾಯಕ ಕಾಲೇಜು ವಿದ್ಯಾರ್ಥಿ. ಹೀರೊನ ತಂಗಿ ಕೂಡ ವಿದ್ಯಾರ್ಥಿನಿ. ಒಬ್ಬ ಹುಡುಗ ಅವಳ ಹಿಂದೆ ಬೀಳುತ್ತಾನೆ. ಅವಳನ್ನು ರೇಗಿಸುತ್ತಾನೆ. ಬಗೆಬಗೆಯಲ್ಲಿ ಕಾಡುತ್ತಾನೆ. ತಂಗಿ ಯಿಂದ ಈ ವಿಷಯ ತಿಳಿದ ಹೀರೊ ‘ವಿಚಾರಿಸಲು ಹೋದರೆ’ ಆ ಪುಂಡು ಹುಡುಗ ಕುಸ್ತಿಗೇ ನಿಲ್ಲುತ್ತಾನೆ. ಹೀಗೆ ಅನಿರೀಕ್ಷಿತವಾಗಿ ಶುರುವಾದ ಹೊಡೆದಾಟ ಆ ಪುಂಡನ ಕೊಲೆಯಲ್ಲಿ ಮುಗಿಯುತ್ತದೆ. ನಾಯಕನಿಗೆ ಜೈಲುಶಿಕ್ಷೆಯಾಗುತ್ತದೆ.
ಮುಂದೆ, ಜೈಲಿಂದ ಬಿಡುಗಡೆಯಾಗಿ ಬರುವ ದಾರಿಯಲ್ಲಿ, ವೃದ್ಧೆಯೊಬ್ಬಳು ನೀರಲ್ಲಿ ಕೊಚ್ಚಿಹೋಗುತ್ತಿ ರುತ್ತಾಳೆ. ನಾಯಕ, ತಕ್ಷಣವೇ ನೀರಿಗೆ ಧುಮುಕಿ ಆಕೆಯನ್ನು ಕಾಪಾಡುತ್ತಾನೆ. ಕೃತಜ್ಞತೆ ಹೇಳುವ ನೆಪ ದಲ್ಲಿ ಈ ಅಜ್ಜಿ ನಾಯಕನನ್ನು ಮನೆಗೆ ಕರೆದೊ ಯ್ಯುತ್ತಾಳೆ. ಮಗಳಿಗೆ(ಅವಳೇ ಕಥಾನಾಯಕಿ) ‘ಅವನನ್ನು’ ಪರಿಚಯಿಸುತ್ತಾಳೆ. ‘ಅಮ್ಮನ’ ಜೀವ ಉಳಿಸಿದ ಎಂಬ ಕಾರಣಕ್ಕೆ ಮಗಳಿಗೆ ಇವನ ಮೇಲೆ ಮೋಹ ಉಂಟಾಗುತ್ತದೆ. ಕೆಲವೇ ದಿನಗಳಲ್ಲಿ, ಇಬ್ಬರಲ್ಲೂ ಪ್ರೀತಿ ಅರಳುತ್ತದೆ. ಅದೊಂದು ರಾತ್ರಿ, ನಾಯಕನನ್ನು, ಅವನ ಮೇಲಿರುವ ಪ್ರೀತಿಯನ್ನು ನೆನಪಿಸಿಕೊಂಡ ನಾಯಕಿ ‘ನಿನ್ನ ಸವಿನೆನಪೇ ಮನದಲ್ಲಿ ಆರಾಧನೆ’ ಎಂದು ಹಾಡಲು ಶುರುಮಾಡುತ್ತಾಳೆ. ಈ ಸಂದರ್ಭದಲ್ಲಿ ಮಲಗಿದ್ದ ತಾಯಿ, ಮಗಳ ಹಾಡು ಕೇಳಿ ಎದ್ದು ಬರುತ್ತಾಳೆ. ಅಮ್ಮನನ್ನು ಕಂಡು, ಗಾಬರಿ ಯಾಗಿ ನಾಯಕಿ, ತನ್ನ ಪ್ರೀತಿಯ ಕಥೆ ಗೊತ್ತಾಗ ದಿರಲಿ ಎಂಬ ಕಾರಣಕ್ಕೆ, ತಕ್ಷಣವೇ ದೇವರ ಫೋಟೊ ಕಡೆ ತಿರುಗಿ ಕೈಜೋಡಿಸುವ ನಾಯಕಿ- ‘ಸ್ವಾಮಿ ಶಂಕರನೆ ಶಶಿಧರನೆ ಗಂಗಾಧರ’ ಎಂದು ಹಾಡಿಬಿಡುತ್ತಾಳೆ. ಪರಿ ಣಾಮ, ಅದುವರೆಗೂ ಪ್ರೇಮಗೀತೆಯಾಗಿದ್ದ ಹಾಡು, ದಿಢೀರನೆ ಭಕ್ತಿಗೀತೆಯಾಗುತ್ತದೆ; ಮಾಯೆಯಂತೆ!
ಒಂದು ಹಾಡು ಪ್ರೇಮದಿಂದ ಭಕ್ತಿಗೆ ದಿಢೀರ್ ಬದಲಾಗುವಂಥ ‘ಚಮತ್ಕಾರ’ ಮಾಡಿದವರು ವಿಜಯನಾರಸಿಂಹ. ಚಿತ್ರಕಥೆ ಚರ್ಚೆಯ ವೇಳೆಯಲ್ಲೇ ನಾಯಕನ ಹೆಸರು ‘ಶಂಕರ’ ಎಂಬುದು ಅವರಿಗೆ ತಿಳಿದಿತ್ತು. ಈ ಹಾಡಿನ ಸಂದರ್ಭದಲ್ಲಿ ನಾಯಕಿ ಸಂತೋಷದಿಂದ ಗಾಬರಿಗೆ,ನಾಯಕ ಗಾಬರಿಯಿಂದ ಗೊಂದಲಕ್ಕೆ, ನಾಯಕಿಯ ತಾಯಿ ಭಕ್ತಿಭಾವದ ಮೋದಕ್ಕೆ ಒಳಗಾಗುವಂಥ ಸನ್ನಿವೇಶ ಸೃಷ್ಟಿಯಾಗಬೇಕು ಎಂದಿದ್ದರಂತೆ ನಿರ್ದೇಶಕ ಗೀತಪ್ರಿಯ. ಅದನ್ನೆಲ್ಲ ಮನ ದಲ್ಲಿಟ್ಟುಕೊಂಡು ಯಾವುದೋ ಧ್ಯಾನದಲ್ಲಿ ಶಾರದೆ ಯನ್ನು ಆವಾಹಿಸಿಕೊಂಡು ಹಾಡು ಬರೆದೇಬಿಟ್ಟರು ವಿಜಯನಾರಸಿಂಹ. ಮುಂದೆ ಈ ಹಾಡು, ಪ್ರೀತಿಸುವ ಎಲ್ಲ ಹುಡುಗಿಯರ ಕೊರಳ ಗೀತೆಯಾಯಿತು. ಆಟೋಗ್ರಾಫ್ ಪುಸ್ತಕಗಳ ಅಕ್ಷರವಾಯಿತು. ‘ಹುಡುಗಿ ಯರ’ ಪ್ರೀತಿಗೆ ಮುನ್ನುಡಿಯಾಯಿತು. ಕಳ್ಳಪ್ರೇಮಕ್ಕೆ ಸಾಕ್ಷಿಯೂ ಆಯಿತು!
ಪ್ರೀತಿಯಲ್ಲಿ ಮೊದಲು ಮೋಹವಿರುತ್ತದೆ. ನಂತರ ಆರಾಧನೆ ಜತೆಯಾಗುತ್ತದೆ. ಈ ಎರಡೂ ಭಾವವೂ ‘ನಿನ್ನ ಸವಿನೆನಪೇ’ ಹಾಡಲ್ಲಿದೆ. ಈ ಹಾಡಿಗೆ ಸಂಬಂಸಿದ ಎಲ್ಲ ಮಾಹಿತಿ ಕೊಟ್ಟವರು ಬಸಂತ್‌ಕುಮಾರ್ ಪಾಟೀಲ್. ಅವರಿಗೆ ಪ್ರೀತಿ, ಧನ್ಯವಾದ. ಪ್ರೀತಿಸುವ ಹುಡುಗಿಯೊಬ್ಬಳ ಅನುರಾಗವನ್ನೆಲ್ಲ ಕೊರಳಲ್ಲಿ ತುಂಬಿಕೊಂಡು ಹಾಡಿದ ಎಸ್. ಜಾನಕಿ ಅಮ್ಮನ ಸಿರಿಕಂಠಕ್ಕೆ ಒಂದು ಸವಿಮುತ್ತು. ವಿಜಯನಾರಸಿಂಹ ಅವರ ಕಾವ್ಯಶಕ್ತಿಗೆ ಸಾಷ್ಟಾಂಗ ನಮಸ್ಕಾರ!
ಅಂದಹಾಗೆ, ಈ ವಾರ ‘ಹಾಡು ಹುಟ್ಟಿದ ಸಮಯ’ಕ್ಕೆ ೧೫೦ನೇ ವಾರದ ಸಂಭ್ರಮ. ಅಂಕಣವನ್ನು ಒಪ್ಪಿಕೊಂಡ ಎಲ್ಲ ಮನಸ್ಸುಗಳಿಗೂ ಕೃತಜ್ಞತೆ.
************
ತಿಂಗಳ ಹಿಂದಿನ ಮಾತು.
ಲಹರಿ ವೇಲು ಅವರ ಕುಟುಂಬದ ಮದುವೆ ಕಾರ್ಯಕ್ರಮದಲ್ಲಿ ಆಕಸ್ಮಿಕವಾಗಿ ಬಸಂತ್ ಕುಮಾರ್ ಪಾಟೀಲ್ ಸಿಕ್ಕರು.’ಹಾಡು ಹುಟ್ಟಿದ ಸಮಯ’ ಅಂಕಣಕ್ಕೆ ನಾನು ಸ್ವಲ್ಪ ಮಾಹಿತಿ ಕೊಡ್ತೇನೆ.ನಿಮಗೆ ಉಪಯೋಗ ಆಗಬಹುದು ಅಂದರು.ಯಾವ ಹಾಡಿನ ಬಗ್ಗೆ ಸರ್ ಅಂದಿದ್ದಕ್ಕೆ- ‘ನಿನ್ನ ಸವಿನೆನಪೇ ಮನದಲ್ಲಿ ಆರಾಧನೆ…’ಅಂದರು.ಆ ಕ್ಷಣದ ಖುಷಿಯನ್ನು ಪದಗಳಲ್ಲಿ ವಿವರಿಸಲಾರೆ.ಯಾಕೆಂದರೆ,ಆ ಹಾಡಿನ ಬಗ್ಗೆ ಬರೆಯಲು ವರ್ಷದ ಹಿಂದೆಯೇ ಯೋಚಿಸಿದ್ದೆ.ಆದರೆ ಮಾಹಿತಿಯೇ ಇರಲಿಲ್ಲ.ಈಗ ಅಚಾನಕ್ಕಾಗಿ, ಹುಡುಕುತ್ತಿದ್ದ ಬಳ್ಳಿ ಕಾಲಿಗೇ ತೊಡರಿತ್ತು.ನಿಮ್ಮ ಬಿಡುವಿನ ಸಮಯ ತಿಳಿಸಿ…ನಾನು ಬಂದು ಮಾಹಿತಿ ತಗೋತೇನೆ ಅಂದೆ.’ನಾಳೆ ಬೆಳಗ್ಗೆನೇ ಬನ್ನಿ ಸ್ವಾಮಿ…ನಾನು ಫ್ರೀ ಇದ್ದೇನೆ’ ಅಂದರು ಬಸಂತ್.
ಮರುದಿನ ಬೆಳಗ್ಗೆ ಸುಮ್ಮನೆ ನೆನಪಿಸಿದರೆ…ದಯವಿಟ್ಟು ತಪ್ಪು ತಿಳ್ಕೊಬೇಡಿ…ನಾನು ಬ್ಯುಸಿ ಇವತ್ತು…ನಾಳೆ ಬನ್ನಿ ಅಂದರು.ಆ ಅನಂತರ ಸತತ ೩೦ ದಿನಗಳವರೆಗೆ ನಾವು ಭೇಟಿಗೆ ಸಮಯ ಕೇಳುವುದು,ಬಸಂತ್ ಅವರು-‘ ಅಯ್ಯೋ ಸಾರ್…ಸಾರೀ ..’.ಅನ್ನುವುದು ಮಾಮೂಲಾಯಿತು.ಈ ಮಧ್ಯೆ ಮುಂಬಯಿಯಲ್ಲಿರುವ ಚಿದಂಬರ ಕಾಕತ್ಕರ್ ಅವರೂ ನಾಲ್ಕು ಸಾಲಿನ ಮಾಹಿತಿ ಕಳಿಸಿಕೊಟ್ಟರು.ಗೆಳೆಯ ನಾಗರಾಜ್ ಕೂಡ ನೆರವಿಗೆ ಬಂದರು.ಆದರೆ ಬಸಂತ್ ಕುಮಾರ್ ಪಾಟೀಲ್ ಅವರಿಗೆ ಸಮಯ ಒದಗಿ ಬರಲೇ ಇಲ್ಲ.ಈ ಮಧ್ಯೆ ಅವರ ಪರಿಚಯದವರೊಬ್ಬರು ಹೋಗಿಬಿಟ್ಟರು.ಶೋಕದಲ್ಲಿರುವ ಬಸಂತ್ ಅವರಲ್ಲಿ ಪ್ರೇಮಗೀತೆಯ ಬಗ್ಗೆ ಮಾಹಿತಿ ಕೇಳಲು ಮನಸ್ಸು ಬರಲಿಲ್ಲ. ಕೊನೆಗೂ ಒಮ್ಮೆ ಕಾಲ ಕೂಡಿ ಬಂತು.ಪರಿಣಾಮ, ಹಾಡು ಹುಟ್ಟಿದ ಸಮಯ ಅಂಕಣದ ೧೫೦ ನೇ ಮಾಲಿಕೆಯಲ್ಲಿ ‘ನಿನ್ನ ಸವಿನೆನಪೇ ಮನದಲ್ಲಿ ಆರಾಧನೆ…’ಹಾಡಿನ ಕಥೆ ಅರಳಿಕೊಂಡಿತು.
ನಿಜ ಹೇಳಬೇಕೆಂದರೆ, ಪ್ರತಿ ಹಾಡಿನ ಮಾಹಿತಿ ಹುಡುಕಿ ಹೊರಟಾಗಲೂ ಇಂಥ ಸಂದರ್ಭಗಳು ಜೊತೆಯಾಗಿವೆ.ಈ ಅಂಕಣದಲ್ಲಿ ಬರೆದದ್ದೆಲ್ಲ ಚೆನ್ನಾಗಿದೆ ಅಂತ ನಾನಂತೂ ಭಾವಿಸಿಲ್ಲ.ಆಗೊಮ್ಮೆ ಈಗೊಮ್ಮೆ ಸಾಧಾರಣ ಅನ್ನುವಂಥ ಬರಹಗಳೂ ಬಂದುಹೋಗಿವೆ.ಆದರೂ,ಯಾರಿಗೂ ಗೊತ್ತಿಲ್ಲದ ಹಾಡುಗಳ ಕಥೆ ಕೇಳುವ/ಬರೆಯುವ ಉತ್ಸಾಹ ಮಾತ್ರ ಹೆಚ್ಚುತ್ತಲೇ ಇದೆ.ಹಾಡೆಂಬ ಜೋಗುಳಕ್ಕೆ ನಮಸ್ಕಾರ…

ಅಮ್ಮ ಪುಸ್ತಕಕ್ಕೆ ಅಕಾಡೆಮಿ ಪ್ರಶಸ್ತಿ…

ಏಪ್ರಿಲ್ 14, 2011

 

 

 

 

 

 

 

 

 

 

ಪ್ರಿಯರೆ,ನಿಮ್ಮೊಂದಿಗೆ ಹಂಚಿಕೊಳ್ಳಲು ಒಂದು ಸಂತೋಷದ ಸಂಗತಿ ಇದೆ.ಏನೆಂದರೆ,ನನ್ನ ‘ಅಮ್ಮ ಹೇಳಿದ ಎಂಟು ಸುಳ್ಳುಗಳು’ ಪುಸ್ತಕಕ್ಕೆ ೨೦೦೯ ನೆ ಸಾಲಿನ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ಈ ಪ್ರಶಸ್ತಿ ನನ್ನ ಜವಾಬ್ದಾರಿ ಹೆಚ್ಚಿಸಿದೆ.ಉತ್ಸಾಹವನ್ನೂ ತುಂಬಿದೆ.ನನ್ನ ಖುಷಿ ನಿಮ್ಮದೂ ಆಗಲಿ.ಭವಿಷ್ಯದಲ್ಲಿ ಎಲ್ಲರ ಪ್ರೀತಿ ನನ್ನನ್ನು ಕಾಯಲಿ…ಇದು ನನ್ನ ಪ್ರಾರ್ಥನೆ.
ಅಮ್ಮ ಹೇಳಿದ ಎಂಟು ಸುಳ್ಳುಗಳು ಪುಸ್ತಕ ರಾಜ್ಯದ ಎಲ್ಲಾ ಪ್ರಮುಖ ಪುಸ್ತಕದ ಅಂಗಡಿಗಳಲ್ಲಿ ಸಿಗುತ್ತದೆ.ಇನ್ನೂ ಓದಿಲ್ಲದಿದ್ದರೆ ದಯವಿಟ್ಟು ಓದಿ. ನಿಮ್ಮ ಬದುಕಿನ ಕಥೆಯೂ ಆ ಪುಸ್ತಕದಲ್ಲಿ ಸಿಗುತ್ತದೆ.ಜೊತೆಗೆ ಅಮ್ಮನೂ ಸಿಕ್ಕುತಾಳೆ…

ಅಪರಾತ್ರಿಯಲ್ಲೂ ಈ ಹಾಡು ಕೇಳುತ್ತ ಕೂತಿದ್ದರಂತೆ ಎಸ್ಪಿಬಿ

ಫೆಬ್ರವರಿ 17, 2011

 

 

 

 

 

 

 

 

 

 

ಪ್ರೀತಿಯ ಕನಸೆಲ್ಲಾ ಕರಗಿ ಹೋಯಿತೆ…

ಚಿತ್ರ: ಏನೇ ಬರಲಿ ಪ್ರೀತಿ ಇರಲಿ. ಗೀತೆ ರಚನೆ: ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ.
ಸಂಗೀತ: ಅಶ್ವತ್ಥ್ -ವೈದಿ. ಗಾಯನ: ಎಸ್.ಪಿ. ಬಾಲಸುಬ್ರಹ್ಮಣ್ಯಂ.

ಪ್ರೀತಿಯ ಕನಸೆಲ್ಲಾ ಕರಗಿ ಹೋಯಿತೆ ಕೊನೆಗೂ
ಸೋತು ಹೋಯಿತೆ ಜೀವ
ಮೂಕವಾಯಿತೆ ಭಾವ
ತೂಕ ತಪ್ಪಿತೆ ಬದುಕಿಗೆ ||ಪ||

ಗಾಳಿಯ ಅಲೆಯಲ್ಲಿ ನೀ ನಕ್ಕ ದನಿಯಿದೆ
ನೀರಿನ ತೆರೆಯಲ್ಲಿ ಸರಿದಂಥ ನೆನಪಿದೆ
ಮನಸೆಲ್ಲ ಹೊಯ್ದಾಡಿದೆ ||೧||

ಜೊತೆಯಾಗಿ ಬಾಳಿದ ಹಿತವೆಲ್ಲ ತೀರಿತೆ
ನಿಂತ ನಂಬಿಕೆ ನೆಲವೆ ಮೆಲ್ಲನೆ ಸರಿಯಿತೆ
ನೋವೊಂದೆ ಫಲವಾಯಿತೆ ||೨||

ಸುಗಮ ಸಂಗೀತ ಕ್ಷೇತ್ರದಲ್ಲಿ ಮಾತ್ರವಲ್ಲ; ಚಿತ್ರರಂಗದಲ್ಲೂ ಅಪರೂಪದ, ಅನುಪಮ ಗೀತೆಗಳಿಗೆ ರಾಗ ಸಂಯೋಜಿಸಿ ದವರು ಸಿ. ಅಶ್ವತ್ಥ್. ಭೂ ಲೋಕದಲ್ಲಿ ಯಮರಾಜ, ನಾರದ ವಿಜಯ, ಕಾಕನ ಕೋಟೆ, ಆಲೆಮನೆ, ಬಾಡದ ಹೂ, ಸ್ಪಂದನ, ಅನುಪಮ, ಶಿಶುನಾಳ ಷರೀಫ, ಮೈಸೂರು ಮಲ್ಲಿಗೆ, ನಾಗಮಂಡಲ, ಚಿನ್ನಾರಿಮುತ್ತ, ಕೊಟ್ರೇಶಿ ಕನಸು… ಹೀಗೆ, ಅಶ್ವತ್ಥ್ ಸಂಗೀತ ಸಂಯೋಜನೆಯ ಸಿನಿಮಾಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಗಾಂಧಿನಗರದ ಇತಿಹಾಸವನ್ನು ಒಮ್ಮೆ ತಿರುವಿ ಹಾಕಿದರೆ- ಒಂದು ಸಿನಿಮಾದ ಹಾಡುಗಳು ಸೂಪರ್‌ಹಿಟ್ ಆದರೆ ಸಾಕು; ನಂತರದ ಒಂದಿಡೀ ವರ್ಷ ಆ ಚಿತ್ರದ ಸಂಗೀತ ನಿರ್ದೇಶಕ ಬ್ಯುಸಿಯಾಗಿರುತ್ತಾನೆ ಎಂಬ ಸಂಗತಿ ಸ್ಪಷ್ಟವಾಗುತ್ತದೆ.
ಆದರೆ, ಸಿ. ಅಶ್ವತ್ಥ್ ಅವರ ವಿಷಯದಲ್ಲಿ ಈ ಮಾತು ಸುಳ್ಳಾಗಿತ್ತು. ಏಕೆಂದರೆ, ಒಂದು ಸಿನಿಮಾಕ್ಕೆ ಸಂಗೀತ ನೀಡಿದ ನಂತರ, ಚಿತ್ರರಂಗಕ್ಕೂ ತಮಗೂ ಸಂಬಂಧವೇ ಇಲ್ಲ ಎಂಬಂತೆ, ಅಲ್ಲಿಂದ ಎದ್ದು ಸುಗಮ ಸಂಗೀತ ಕ್ಷೇತ್ರಕ್ಕೆ ಬಂದುಬಿಡುತ್ತಿದ್ದರು ಅಶ್ವತ್ಥ್. ಮುಂದೆ ಒಂದೋ ಎರಡೋ ವರ್ಷಗಳು ಭಾವಗೀತೆಗಳ ರಾಗ ಸಂಯೋಜನೆಯಲ್ಲಿಯೋ, ಗಾಯನದಲ್ಲಿಯೊ ಅಥವಾ ಇನ್ಯಾವುದೋ ಹೊಸ ಸಾಹಸದಲ್ಲಿಯೋ ಕಳೆದುಹೋಗುತ್ತಿದ್ದವು. ಹೀಗೆ, ಚಿತ್ರರಂಗದಲ್ಲಿ ಎಲ್ಲರೂ ಸ್ವಲ್ಪ ಸ್ವಲ್ಪ ಮರೆತಿದ್ದಾರೆ ಎನ್ನುವಾಗ ದಢದಢನೆ ನಡೆದು ಬಂದು ಇನ್ನೊಂದು ಹೊಸ ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡಿ ಗೆಲುವಿನ ನಗು ಬೀರುತ್ತಿದ್ದರು ಅಶ್ವತ್ಥ್.
೧೯೭೯ರಲ್ಲಿ ತೆರೆಗೆ ಬಂದ ಸಿನಿಮಾ-ಏನೇ ಬರಲಿ ಪ್ರೀತಿ ಇರಲಿ. ಈ ಚಿತ್ರದ ‘ಪ್ರೀತಿಯ ಕನಸೆಲ್ಲಾ ಕರಗಿ ಹೋಯಿತೆ ಕೊನೆಗೂ…’ ಗೀತೆಯ ಬಗ್ಗೆ ಬರೆಯಲು ಹೊರಟಾಗ, ಅಶ್ವತ್ಥ್ ಅವರ ಗೀತಯಾತ್ರೆಯ ಬಗ್ಗೆಯೂ ಪ್ರಾಸಂಗಿಕವಾಗಿ ನಾಲ್ಕು ಮಾತು ಹೇಳಬೇಕಾಯಿತು. ಇಲ್ಲಿ ದಾಖಲಿಸಬೇಕಾದ ಇನ್ನೊಂದು ಮುಖ್ಯ ವಿಷಯವಿದೆ. ಏನೆಂದರೆ, ಸಿ. ಅಶ್ವತ್ಥ್ ಹಾಗೂ ಎಲ್. ವೈದ್ಯನಾಥನ್ ಅವರು ಒಂದಾಗಿ ಸಂಗೀತ ನಿರ್ದೇಶನ ಮಾಡಲು ಆರಂಭಿಸಿದ್ದು ‘ ಏನೇ ಬರಲಿ ಪ್ರೀತಿ ಇರಲಿ’ ಚಿತ್ರದಿಂದ. ಅದಕ್ಕೂ ಮುಂಚೆ ಅಶ್ವತ್ಥ್, ಹಾಡುಗಳಿಗೆ ಟ್ಯೂನ್ ಸಿದ್ಧಮಾಡಿಕೊಂಡು ಮದ್ರಾಸಿಗೆ ಹೋಗುತ್ತಿದ್ದರು. ಅಲ್ಲಿ ರೆಕಾರ್ಡಿಂಗ್ ಸಂದರ್ಭದಲ್ಲಿ ಅರ್ಕೆಸ್ಟ್ರಾ ತಂಡವನ್ನು ಬ್ಯಾಲೆನ್ಸ್ ಮಾಡುವ ಕೆಲಸವನ್ನು ವೈದ್ಯ ನಾಥನ್ ಮುಗಿಸಿಕೊಡುತ್ತಿದ್ದರು. ಸಿನಿಮಾದ ಟೈಟಲ್ ಕಾರ್ಡ್ ನಲ್ಲಿ ಸಂಗೀತ: ಸಿ. ಅಶ್ವತ್ಥ್, ನೆರವು/ಸಹಾಯ: ಎಲ್. ವೈದ್ಯನಾಥನ್ ಎಂದು ಹಾಕಲಾಗುತ್ತಿತ್ತು.
ತಾವಿಬ್ಬರೂ ಜತೆಯಾಗಿ ಸಂಗೀತ ನಿರ್ದೇಶನ ಮಾಡಲು ಕಾರಣ ವಾದ ಸಂದರ್ಭ ಮತ್ತು ‘ಪ್ರೀತಿಯ ಕನಸೆಲ್ಲಾ-‘ಹಾಡು ಸೃಷ್ಟಿಯ ಸಂದರ್ಭದಲ್ಲಿ ನಡೆದ ಸ್ವಾರಸ್ಯಕರ ಸಂಗತಿಗಳನ್ನು ಸ್ನೇಹಿತರಾದ ಸುಪ್ರಭಾ ಅವರಿಗೆ ಹಿಂದೊಮ್ಮೆ ಅಶ್ವತ್ಥ್ ಅವರೇ ಹೀಗೆ ವಿವರಿಸಿದ್ದರು:
‘ಸ್ಪಂದನ’ ಚಿತ್ರ ನಿರ್ಮಿಸಿದ್ದ ಪಿ. ಶ್ರೀನಿವಾಸ್, ಆನಂತರದಲ್ಲಿ ‘ಏನೇ ಬರಲಿ ಪ್ರೀತಿ ಇರಲಿ’ ಚಿತ್ರ ತಯಾರಿಸಲು ಮುಂದಾದರು. ಆ ಚಿತ್ರಕ್ಕೆ ಅವರದೇ ಕಥೆ. ನಾಯಕನೂ ಅವರೇ. ನಾಯಕಿಯ ಪಾತ್ರಕ್ಕೆ ಮಂಜುಳಾ ಅವರನ್ನು ಆಯ್ಕೆ ಮಾಡಿದ್ದರು. ಸಂಗೀತ ನಿರ್ದೇಶನದ ಹೊಣೆ ನನ್ನ ಹೆಗಲಿಗೆ ಬಿದ್ದಿತ್ತು. ಈ ಸಿನಿಮಾದ ಮಾತುಕತೆಯ ಸಂದರ್ಭದಲ್ಲಿ ಪಿ. ಶ್ರೀನಿವಾಸ್ ಹಾಗೂ ನನಗೆ ಆತ್ಮೀಯರಾಗಿದ್ದ ಕೃಷ್ಣರಾವ್ ಅವರೂ ಇದ್ದರು. ಚಿತ್ರದಲ್ಲಿ ಸಂಗೀತ ಬಳಕೆ ಹೇಗಿರಬೇಕು ಎಂದು ಚರ್ಚಿಸುತ್ತಿದ್ದಾಗ ಅವರು ಹೇಳಿದರು: ‘ರೀ ಅಶ್ವತ್ಥ್, ನಿಮ್ಮದೂ- ವೈದೀದೂ ಒಳ್ಳೇ ಸಾಮರಸ್ಯದ ಜೋಡಿ ಕಣ್ರೀ. ಈವರೆಗಿನ ನಿಮ್ಮ ಚಿತ್ರ ಸಂಗೀತದ ಯಾತ್ರೆಯಲ್ಲಿ ಜತೆಗಾರನಾಗಿ ವೈದಿ ಯಾವಾಗಲೂ ಇದ್ದಾರೆ. ನೀವ್ಯಾಕೆ ಈಗ ಅಧಿಕೃತವಾಗಿ ಅಶ್ವತ್ಥ್-ವೈದಿ ಅಂತ ಜೋಡಿಯಾಗಿ ಸಂಗೀತ ನಿರ್ದೇಶನಕರಾಗಬಾರದು?’
ಕೃಷ್ಣರಾವ್ ಅವರ ಈ ಮಾತು ನನಗೆ ಒಪ್ಪಿಗೆಯಾಯಿತು. ವೈದಿ ಅವರಿಗೂ ಒಪ್ಪಿಗೆಯಾಯಿತು. ಪರಿಣಾಮವಾಗಿ-‘ ಏನೇ ಬರಲಿ ಪ್ರೀತಿ ಇರಲಿ’ ಸಿನಿಮಾದ ಮೂಲಕ ನಾವು ಜತೆಯಾಗಿ ಕೆಲಸ ಮಾಡಲು ಆರಂಭಿಸಿದೆವು.
ಹೊಸದಾಗಿ ಮದುವೆಯಾದ ದಂಪತಿಗಳ ಸುತ್ತ ಹೆಣೆಯಲಾದ ಕಥೆ ‘ಏನೇ ಬರಲಿ ಪ್ರೀತಿ ಇರಲಿ’ ಚಿತ್ರದಲ್ಲಿತ್ತು. ಮಧ್ಯಮ ವರ್ಗದವರ ಪೇಚಾಟಗಳು, ಆರ್ಥಿಕ ತೊಂದರೆ, ಅವರ ಪ್ರೀತಿ, ಸಂಕಟ… ಇತ್ಯಾದಿ ಇತ್ಯಾದಿ ಈ ಸಿನಿಮಾದ ಕಥಾವಸ್ತು. ಬಯಸಿದ್ದೆಲ್ಲಾ ಬಾಳಲ್ಲಿ ಸಿಗದೇ ಹೋದಾಗ ನಾಯಕ ಅಸಹಾಯಕನಾಗಿ ಕೂತುಬಿಡುವ ಒಂದು ಸಂದರ್ಭವಿತ್ತು. ಅಲ್ಲಿಗೆ ಒಂದು ಹಾಡು ಹಾಕಿದರೆ ಚೆಂದ ಎಂದು ನನಗೆ ಅನ್ನಿಸಿತು. ಅದನ್ನೇ ಶ್ರೀನಿವಾಸ್‌ಗೆ ಹೇಳಿದೆ. ನನ್ನ ಮಾತು ಅವರಿಗೂ ಇಷ್ಟವಾಯ್ತು. ಹಾಡನ್ನು ಯಾರಿಂದ ಬರೆಸುವುದು ಎಂದುಕೊಂಡಾಗ ನೆನಪಾದದ್ದು ಕವಿ ಲಕ್ಷ್ಮೀ ನಾರಾಯಣ ಭಟ್ಟರು. ಈ ಹಿಂದೆ ‘ಸ್ಪಂದನ’ ಚಿತ್ರಕ್ಕೂ ಭಟ್ಟರು-‘ ಎಂಥಾ ಮರುಳಯ್ಯ ಇದು ಎಂಥಾ ಮರುಳೂ…’ ಎಂಬ ಗೀತೆ ಬರೆದುಕೊಟ್ಟಿದ್ದರು. ಅದೇ ಸೆಂಟಿಮೆಂಟ್ ಜತೆಗಿಟ್ಟುಕೊಂಡು ಭಟ್ಟರಲ್ಲಿ ಹೊಸ ಗೀತೆಗೆ ಮನವಿ ಮಾಡಿಕೊಂಡೆವು. ಭಟ್ಟರು ತುಂಬ ಸಂಭ್ರಮದಿಂದ ‘ಪ್ರೀತಿಯ ಕನಸೆಲ್ಲಾ ಕರಗಿ ಹೋಯಿತೆ ಕೊನೆಗೂ’… ಗೀತೆ ಬರೆದುಕೊಟ್ಟರು.
ಈ ಹಾಡಿಗೆ ರಾಗ ಸಂಯೋಜಿಸಿದ ಸಂದರ್ಭ ಇದೆಯಲ್ಲ? ಅದು ಬಹಳ ವಿಶೇಷವಾದದ್ದು. ಹಾಡಿನ ಸಂಯೋಜನೆಗೆ ಕೂತಾಗ ವೈದಿ ಹಾರ್ಮೋನಿಯಂ ತಂದ್ರು. ಮದ್ರಾಸಿನ ಹೋಟೆಲ್ ರೂಂನಲ್ಲಿ ಕುಳಿತೆವು. ಆಗೆಲ್ಲ ನಾನು-ವೈದಿ ಸಂವಾದ ನಡೆಸುತ್ತಿದ್ದುದು ಹೆಚ್ಚಾಗಿ ಇಂಗ್ಲಿಷಿನಲ್ಲೇ. qsಟ್ಠ oಠಿZಠಿ ಠಿeಛಿ oಟ್ಞಜ ಅoeಡಿZಠಿe ಅಂದ್ರು ವೈದಿ. ಎರಡು ನಿಮಿಷದ ನಂತರ, ನಾನು ಈ ಗೀತೆಯನ್ನು ಹಾಡಿದಾಗ, ವೈದಿ ಭಾವಪರವಶರಾಗಿ ಅತ್ತೇ ಬಿಟ್ರು. ಆಗಲೇ ನನಗೆ ಅನ್ನಿಸಿಬಿಡ್ತು: ‘ಈ ಹಾಡಲ್ಲಿ, ಈ ಸಂಗೀತದಲ್ಲಿ ಏನೋ ಆಕರ್ಷಣೆ ಇದೆ…’
ಈ ಹಾಡಿನ ರೆಕಾರ್ಡಿಂಗ್ ಸಂದರ್ಭದಲ್ಲಿ ನಡೆದ ಒಂದು ಘಟನೆಯ ಬಗ್ಗೆ ಹೇಳಬೇಕು. ಈ ಗೀತೆಯನ್ನು ಎಸ್ಪಿ ಬಾಲಸುಬ್ರಹ್ಮಣ್ಯಂ ಅವರಿಂದ ಹಾಡಿಸುವುದೆಂದು ನಿರ್ಧರಿಸಲಾಗಿತ್ತು. ಜೆಮಿನಿ ಸ್ಟುಡಿ ಯೋದಲ್ಲಿ ರೆಕಾರ್ಡಿಂಗ್. ಆರ್ಕೆಸ್ಟ್ರಾ ತಂಡದವರೆಲ್ಲ ಸಿದ್ಧವಾಗಿದ್ದರು. ಎಸ್ಪಿ ಕೂಡಾ ಹಾಡಲು ಸಿದ್ಧರಾಗಿ ಬಂದರು. ಆಗ ವೈದಿ ಹೇಳಿದರು: ಅಶ್ವತ್ಥ್, ನಾನು ಆರ್ಕೆಸ್ಟ್ರಾ ಬ್ಯಾಲೆನ್ಸ್ ಮಾಡುತ್ತೇನೆ. ನೀವು ಆ ಕಡೆಯಲ್ಲಿ ನಿಂತು ೧,೨,೩-೧,೨,೩ ಹೇಳಿ ಎಂದರು. (ಸಂಗೀತ ನಿರ್ದೇಶನದ ಸಂದರ್ಭದಲ್ಲಿ ಸ್ವರ ತಾಳದ ಏರಿಳಿತವನ್ನು ಗಾಯಕರು ಹಾಗೂ ವಾದ್ಯಗಾರರಿಗೆ ತಿಳಿಸಲೆಂದು ೧,೨,೩ ಹೇಳಲಾಗುತ್ತದೆ.) ಆ ರೀತಿ ಮಾಡಲು ನನಗೆ ಸಂಕೋಚ, ಭಯ ಇತ್ತು. ಹಾಗಾಗಿ- ‘ಇಲ್ರೀ, ನನ್ನಿಂದ ಈ ಕೆಲಸ ಆಗಲ್ಲ’ ಅಂದುಬಿಟ್ಟೆ. ಅದೇನೂ ಅಂಥ ಕಷ್ಟವಲ್ಲ ಅಶ್ವತ್ಥ್. ನೀವು ಸುಮ್ನೆ ೧,೨,೩ ಹೇಳ್ತಾ ಹೋಗಿ ಎಂದು ವೈದಿ ಇನ್ನಿಲ್ಲದಂತೆ ಹೇಳಿದರು. ನನಗೆ ಅದ್ಯಾಕೋ ಆ ಕೆಲಸ ಮಾಡಲು ಧೈರ್ಯ ಬರಲಿಲ್ಲ. ಸುಮ್ಮನಾಗಿಬಿಟ್ಟೆ. ಇದನ್ನು ಗಮನಿಸಿದ ಎಸ್ಪಿ ಅವರು- ನಾನೇ ಆರ್ಕೆಸ್ಟ್ರಾ ಬ್ಯಾಲೆನ್ಸ್ ಮಾಡ್ತೇನೆ ಬಿಡಿ’ ಎಂದರು. ಹಾಗೆಯೇ ಮಾಡಿದರು!
ಮೂರನೇ ಟೇಕ್‌ನಲ್ಲಿ ಹಾಡು ಓಕೆ ಆಯಿತು. ನಂತರ ಪಿ.ಎನ್. ಶ್ರೀನಿವಾಸ್ ಹಾಗೂ ಕೃಷ್ಣರಾವ್ ಈ ಹಾಡು ಕೇಳಿ ಮೆಚ್ಚಿಕೊಂಡರು. ನಮ್ಮ ಕೃಷ್ಣರಾವ್ ಅವರ ಸ್ನೇಹಿತನೊಬ್ಬ ಇದ್ದ. ಕುಮಾರ್ ಎಂದು ಅವನ ಹೆಸರು. ಅವನು ಕೊಳಲು ವಾದಕ. ಅವನಿಗೆ ಅದೇನೋ ಮನೆ ಕಡೆಯ ತೊಂದರೆ. ಈ ಕಾರಣಕ್ಕೇ ಕುಡಿಯಲು ಕಲಿತಿದ್ದ. ಅವನು, ಈ ಹಾಡು ಕೇಳಿದವನೇ-ಈ ಹಾಡೊಳಗೆ ನನ್ನ ಸಂಕಟವೆಲ್ಲಾ ಇದೆ ಅಂದ. ಈ ಹಾಡನ್ನು ಪದೇ ಪದೆ ಕೇಳೋದು, ಮತ್ತೆ ಕುಡಿದು ಬಿಕ್ಕಳಿಸೋದು… ಹೀಗೇ ಮಾಡ್ತಾ ಇದ್ದ. ಮಧ್ಯರಾತ್ರಿ ೧.೩೦ ಆದರೂ ಆ ಮಹರಾಯನ ಅಳು ನಿಲ್ಲಲೇ ಇಲ್ಲ.
ಇದೆಲ್ಲ ನನ್ನ ಕಣ್ಣೆದುರೇ ನಡೀತಿತ್ತು ನೋಡಿ, ಹಾಗಾಗಿ ಸಹಜ ವಾಗಿಯೇ ಖುಷಿಯಾಗ್ತಾ ಇತ್ತು. ಒಂದು ಹಾಡಿಗೆ ಹೀಗೆ ಹತ್ತಾರು ಮಂದಿಯನ್ನು ಕಾಡುವ ಶಕ್ತಿ ಬರಬೇಕಾದರೆ ಅದಕ್ಕೆ ಎಸ್ಪಿ ಬಾಲಸುಬ್ರಹ್ಮಣಂ ಅವರ ದನಿಯಲ್ಲಿನ ಮಾಧುರ್ಯವೇ ಕಾರಣ ಅನ್ನಿಸ್ತು. ಅವರಿಗೆ ಅಭಿನಂದನೆ ಹೇಳೋಣ ಅನ್ನಿಸ್ತು. ಅದು ಅಪರಾತ್ರಿ. ಸವಿನಿದ್ರೆಯ ಸಮಯ. ಪೋನ್ ಮಾಡಲು ಇದು ಸಮಯವಲ್ಲ ಎಂದು ಗೊತ್ತಿದ್ದೂ ಡಯಲ್ ಮಾಡಿಬಿಟ್ಟೆ. ಅವರು ಹಲೋ ಎಂದ ತಕ್ಷಣ- ಬಾಲು ಅವರೇ, ನಮಸ್ಕಾರ. ನಿಮ್ಮ ದನಿಯಿಂದ ನನ್ನ ಈ ಹಾಡಿಗೆ ಜೀವ ಬಂದಿದೆ. ನಾವೆಲ್ಲರೂ ಇಷ್ಟು ಹೊತ್ತು ಆ ಹಾಡನ್ನೇ ಕೇಳ್ತಾ ಇದ್ವಿ. ಧನ್ಯವಾದಗಳು’ ಅಂದೆ.
ಆಗ ಬಾಲು ಏನೆಂದರು ಗೊತ್ತೇ? ಈಟ qsಟ್ಠ hಟಡಿ ಡಿeZಠಿ ಐZಞ ಈಟಜ್ಞಿಜ ಘೆಟಡಿ ಅoeಡಿZಠಿeಜಿ, ಐZಞ ಔಜಿoಠಿಛ್ಞಿಜ್ಞಿಜ ಠಿಟ qsಟ್ಠ್ಟ oಟ್ಞಜ. ಐಠಿ ಜಿo ಠಿeಛಿ ಟಞmಟoಜಿಠಿಜಿಟ್ಞ ಡಿeಜ್ಚಿe eZo bಟ್ಞಛಿ ಠಿeಛಿ ಞZಜಜ್ಚಿ (ನಾನು ಏನ್ಮಾಡ್ತಾ ಇದ್ದೆ ಗೊತ್ತಾ ಅಶ್ವತ್ಥ್? ಆ ಹಾಡನ್ನೇ ಕೇಳ್ತಾ ಇದ್ದೆ. ನಿಮ್ಮ ಅಪೂರ್ವ ಸಂಯೋಜನೆಯಿಂದ ಈ ಹಾಡಿಗೊಂದು ಕಳೆ ಬಂದಿದೆ) ಅಂದರು. ಎಸ್ಪಿ ಅವರಂಥ ಮಹಾನ್ ಗಾಯಕನಿಂದ ಈ ಮಾತು ಕೇಳಿ ನನಗೆ ಮಾತೇ ಹೊರಡಲಿಲ್ಲ. ಭಾವುಕನಾಗಿ-‘ಬಾಲು ಅವರೇ, ನಿಮ್ಮ ಮಾತು ದೊಡ್ಡದು, ಮನಸೂ ದೊಡ್ಡದು’ ಎಂದು ಹೇಳಿ ಪೋನ್ ಇಟ್ಟೆ.
ಮರುದಿನ ಬೆಳಗ್ಗೆ ಅದೇ ಜೆಮಿನಿ ಸ್ಟುಡಿಯೋದಲ್ಲಿ ನನ್ನ ಸಂಗೀತ ನಿರ್ದೇಶನದಲ್ಲಿ ಇನ್ನೊಂದು ಚಿತ್ರದ ರೆಕಾರ್ಡಿಂಗ್ ಇತ್ತು. ಅಲ್ಲಿಗೆ ವೈದಿ ಕೂಡ ಬಂದಿದ್ದರು. ನನ್ನನ್ನು ಕಂಡವರೇ ಕೈ ಕುಲುಕಿ- ‘ಅಶ್ವತ್ಥ್, ಎಂಥ ಅದ್ಭುತ ಸಂಯೋಜನೆಯಯ್ಯಾ ನಿನ್ನದು? ನಾನು, ನಿನ್ನೆ ರಾತ್ರಿ ಕನಿಷ್ಠ ಪಕ್ಷ ಹತ್ತು ಬಾರಿಯಾದರೂ ಆ ಹಾಡು ಕೇಳಿದ್ದೇನೆ. ಮನಸ್ಸು ಹಾಗೂ ಹೃದಯವನ್ನು ಏಕಕಾಲಕ್ಕೆ ಆವರಿಸಿಕೊಂಡ ಗೀತೆ ಅದು. ಗಾಯನಕ್ಕಿಂತ ರಾಗ ಸಂಯೋಜನೆ ಚೆಂದ. ಸಂಗೀತಕ್ಕಿಂತ ಗಾಯನವೇ ಚೆಂದ ಎಂದು ನನಗಂತೂ ಪದೇ ಪದೆ ಅನ್ನಿಸ್ತಾ ಇತ್ತು’ ಅಂದರು. ಏಕಕಾಲದಲ್ಲಿ ಒಬ್ಬ ಗಾಯಕ, ಒಬ್ಬ ಸಂಗೀತ ಸಂಯೋಜಕ ಹಾಗೂ ವಾದ್ಯ ಸಂಯೋಜಕರು ಒಂದು ಹಾಡಿನಿಂದ ಪ್ರಭಾವಿತರಾದರಲ್ಲ… ಅಂಥದೊಂದು ಗೀತೆಗೆ ನಾನು ಸಂಗೀತ ಸಂಯೋಜನೆ ಮಾಡಿದೆನಲ್ಲ? ಅದು ನನ್ನ ಬದುಕಿನ ಮಹತ್ವದ ಕ್ಷಣ ಎಂದೇ ಭಾವಿಸ್ತೇನೆ…’
ಹೀಗೆಂದು ಮಾತು ಮುಗಿಸಿದ್ದರು ಅಶ್ವತ್ಥ್ .
***
ಸಮಯ ಸಿಕ್ಕರೆ ಈ ಅಪರೂಪದ ಹಾಡು ಕೇಳಿ. ಎಂಥ ಅರಸಿಕನಿಗೂ ಹಾಡು ಇಷ್ಟವಾಗುತ್ತದೆ. ಆನಂತರ ಅದನ್ನು ಮರೆಯುವುದೇ ಕಷ್ಟವಾಗುತ್ತದೆ!

ಸಹಪ್ರಯಾಣಿಕನ ಅಭಿಮಾನದ ಮಾತೇ ಹಾಡಿನ ಸೃಷ್ಟಿಗೆ ಸೂರ್ತಿಯಾಯಿತು!

ಫೆಬ್ರವರಿ 11, 2011

 

 

 

 

 

 

 

 

 

 

ನಾಡ ಚರಿತೆ ನೆನಪಿಸುವಾ ವೀರಗೀತೆಯಾ
ಚಿತ್ರ: ತಾಯಿಯ ಹೊಣೆ. ಗೀತೆರಚನೆ: ಸಿ.ವಿ. ಶಿವಶಂಕರ್.
ಸಂಗೀತ: ಸತ್ಯಂ. ಗಾಯನ: ಪಿ. ಸುಶೀಲ, ಬೆಂಗಳೂರು
ಲತಾ, ಬಿ.ಆರ್. ಛಾಯಾ, ಕೋರಸ್

ನಾಡ ಚರಿತೆ ನೆನಪಿಸುವಾ ವೀರಗೀತೆಯಾ
ಹಾಡು ನೀನು ಕನ್ನಡಿಗಾ ದೇಶಗೀತೆಯಾ ||ಪ||

ವೀರರಾದ ನಾಡವರ ಸಾಹಸದಾ ನಾಡಿದು
ನಾಡಪ್ರೇಮಿ ಕೆಂಪೇಗೌಡ ಮೆರೆದ ನಾಡಿದು
ಚಿತ್ರದುರ್ಗ ವೀರರ ಪೌರುಷದಾ ನಾಡಿದು
ಕೆಳದಿಯಾ ನಾಯಕರು ಆಳಿದಂಥ ನಾಡಿದು ||೧||

ಬೃಂದಾವನ ಚೆಲುವಲಿ ನಲಿವಂಥ ನಾಡಿದು
ವಿಶ್ವೇಶ್ವರಯ್ಯ ಹುಟ್ಟಿದಂಥ ನಾಡಿದು
ಹನುಮಂತಯ್ಯ ಕಟ್ಟಿದ ವಿಧಾನ ಸೌಧ ನೋಡಿದು
ಸ್ವಾಭಿಮಾನಿ ಪ್ರಜೆಗಳಾ ಸಂತಸದಾ ನಾಡಿದು ||೨||

ತಾಯಿನಾಡ ರಕ್ಷಿಸಲು ವೀರಮರಣ ಅಪ್ಪಿದ
ಸಂಗೊಳ್ಳಿ ರಾಯಣ್ಣನ ತ್ಯಾಗಭೂಮಿ ನಮ್ಮದು
ನೇಗಿಲ್ಹೊತ್ತ ರೈತರ ಪುಣ್ಯ ಭೂಮಿ ನಮ್ಮದು
ಎಂದೆಂದೂ ಅಳಿಯದಾ ಇತಿಹಾಸ ನಮ್ಮದು ||೩||

ಕನ್ನಡ ನಾಡು-ನುಡಿಯ ಮಹತ್ವ ಸಾರುವ ಗೀತೆಗಳ ರಚನೆಯಲ್ಲಿ ಸಿ.ವಿ. ಶಿವಶಂಕರ್ ಅವರಿಗೆ ಅಗ್ರಸ್ಥಾನ. ಬದುಕಿನುದ್ದಕ್ಕೂ ಕನ್ನಡದ ವೈಭವವನ್ನೇ ಧ್ಯಾನಿಸುತ್ತ, ಪ್ರೀತಿಸುತ್ತ, ಆರಾಸುತ್ತ ಬಂದವರು ಶಿವಶಂಕರ್. ‘ತಾಯಿಯ ಹೊಣೆ’ ಚಿತ್ರದಲ್ಲಿ ಶಾಲಾ ಮಕ್ಕಳು ಹಾಡುವ ಸಂದರ್ಭಕ್ಕೆಂದು ಅವರು ಬರೆದ ಸುಂದರ ಗೀತೆ: ‘ನಾಡಚರಿತೆ ನೆನಪಿಸುವಾ ವೀರಗೀತೆಯಾ/ ಹಾಡು ನೀನು ಕನ್ನಡಿಗಾ ದೇಶಗೀತೆಯಾ…’ ಸೃಷ್ಟಿಯಾದ ಸಂದರ್ಭದಲ್ಲಿ ನಡೆದ ಸ್ವಾರಸ್ಯಕರ ಸಂಗತಿಗಳು ಒಂದೆರಡಲ್ಲ. ಅವುಗಳನ್ನು ಶಿವಶಂಕರ್ ಅವರೇ ರಸವತ್ತಾಗಿ ವಿವರಿಸಿದ್ದು ಹೀಗೆ:
‘ಇದು ೧೯೮೫ರ ಮಾತು. ನಿರ್ಮಾಪಕ ಅಬ್ಬಯ್ಯ ನಾಯ್ಡು ಅವರು ‘ತಾಯಿಯ ಹೊಣೆ’ ಚಿತ್ರದ ನಿರ್ಮಾಣ ಆರಂಭಿಸಿದ್ದರು. ತಮ್ಮ ನಿರ್ಮಾಣದ ಸಿನಿಮಾದಲ್ಲಿ ನಾಡು-ನುಡಿಯ ಮಹತ್ವ ಸಾರುವ ಸನ್ನಿವೇಶವಿದ್ದರೆ, ಅದಕ್ಕೆ ನನ್ನಿಂದಲೇ ಹಾಡು ಬರೆಸಬೇಕೆಂಬ ಹಟ ಅವರದಾಗಿತ್ತು. ಅದಕ್ಕೆ ಕಾರಣವೂ ಇಲ್ಲದಿರಲಿಲ್ಲ. ಅಬ್ಬಯ್ಯ ನಾಯ್ಡು ನಿರ್ಮಾಣದ ಮೊದಲ ಚಿತ್ರ ‘ಹೂವು-ಮುಳ್ಳು’. ಆ ಚಿತ್ರದ ಹಂಚಿಕೆ ಪಡೆಯಲು ಯಾರೂ ಮುಂದೆ ಬಂದಿರಲಿಲ್ಲ. ಆಗ, ನನ್ನ ಪರಿಚಯದ ಹಂಚಿಕೆದಾರರನ್ನು ಪುಸಲಾಯಿಸಿ ಅಬ್ಬಯ್ಯನಾಯ್ಡು ಅವರ ಸಿನಿಮಾದ ಹಂಚಿಕೆ ಪಡೆಯುವಂತೆ ಮನವೊಲಿಸಿದ್ದೆ. ಹೂವು-ಮುಳ್ಳು ಸಿನಿಮಾ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿತ್ತು. ಈ ಸೆಂಟಿಮೆಂಟನ್ನೇ ಜತೆಗಿಟ್ಟುಕೊಂಡಿದ್ದ ಅಬ್ಯಯ್ಯ ನಾಯ್ಡು, ನನ್ನ ಸಿನಿಮಾಕ್ಕೆ ಹಾಡು ಬರೆಯಿರಿ ಎಂದು ಸಿಕ್ಕಾಗಲೆಲ್ಲ ಒತ್ತಾಯಿಸುತ್ತಿದ್ದರು. ಅವರ ಒತ್ತಾಯಕ್ಕೆ ಕಟ್ಟುಬಿದ್ದು ‘ತಾಯಿಯ ಮಡಿಲಲ್ಲಿ’ ಚಿತ್ರಕ್ಕೆ ‘ಕನ್ನಡದಾ ರವಿ ಮೂಡಿ ಬಂದಾ…’ ಗೀತೆ ಬರೆದಿದ್ದೆ.
ಅದನ್ನೇ ನೆಪ ಮಾಡಿಕೊಂಡ ಅಬ್ಬಯ್ಯ ನಾಯ್ಡು, ತಾಯಿಯ ಹೊಣೆ ಚಿತ್ರಕ್ಕೂ ಒಂದು ಹಾಡು ಬರೆಯಿರಿ. ಉಳಿದ ಹಾಡುಗಳನ್ನು ಉದಯಶಂಕರ್ ಬರೀತಾರೆ ಅಂದ್ರು. ಸ್ವಾರಸ್ಯವೇನೆಂದರೆ, ಚಿ. ಉದಯ ಶಂಕರ್ ಮತ್ತು ನಾನು, ಒಂದೇ ಊರಿನವರು. (ತುಮಕೂರು ಜಿಲ್ಲೆ, ಗುಬ್ಬಿ ತಾಲೂಕಿನ ಚಿಟ್ಟನಹಳ್ಳಿ ನಮ್ಮ ಊರು), ಈ ಮೊದಲು ‘ತಾಯಿಯ ಮಡಿಲಲ್ಲಿ’ ಚಿತ್ರಕ್ಕೆ ನಾನು ಒಂದು ಹಾಡು ಬರೆದಾಗಲೂ, ಬಾಕಿ ಹಾಡುಗಳನ್ನು ಉದಯಶಂಕರ್ ಬರೆದಿದ್ದರು. ಉದಯಶಂಕರ್, ಅಪಾರ ಪ್ರತಿಭೆಯ ಗೀತೆರಚನೆಕಾರ. ಅವರ ಹಾಡು ಗಳು ‘ಅದ್ಭುತ’ ಎಂಬಂತಿರುತ್ತವೆ. ಅವುಗಳನ್ನು ಸರಿಗಟ್ಟುವಂಥ ಒಂದು ಹಾಡು ಬರೆಯಬೇಕು. ಹೇಗೆ ಶುರುಮಾಡುವುದು ಎಂದೆಲ್ಲಾ ಯೋಚಿ ಸುತ್ತಿದ್ದೆ. ಅದೇ ವೇಳೆಗೆ ಅಬ್ಬಯ್ಯ ನಾಯ್ಡು ಅವರು ಹಾಡು ಬರೆಯಲು ಮದ್ರಾಸಿಗೆ ಬರುವಂತೆ ರಿಸರ್ವೇಶನ್ ಟಿಕೆಟ್ ಕಳಿಸಿದರು.
ಶಾಲಾ ಮಕ್ಕಳು ಹಾಡಿ ಕುಣಿಯುವ ಸಂದರ್ಭಕ್ಕೆ ನೀವು ಹಾಡು ಬರೆಯಬೇಕು ಎಂದು ಅಬ್ಬಯ್ಯ ನಾಯ್ಡು ಮೊದಲೇ ತಿಳಿಸಿದ್ದರು. ಶಾಲಾ ಮಕ್ಕಳ ಗೀತೆ ಅಂದ ಮೇಲೆ, ಅದು ನಾಡಿನ ವೈಭವ ಸಾರು ವಂತೆಯೇ ಇರಲಿ ಎಂದು ನಿರ್ಧರಿಸಿದೆ. ಪಲ್ಲವಿ ಹೇಗಿರಬೇಕು? ಚರಣದಲ್ಲಿ ಏನೇನೆಲ್ಲ ಬರಬೇಕು ಎಂದು ಯೋಚಿಸುತ್ತ, ಮನದಲ್ಲೇ ಏನೇನೋ ಲೆಕ್ಕ ಹಾಕುತ್ತ ಮದ್ರಾಸಿನ ಬಸ್ ಹತ್ತಿದೆ.
ಬಸ್‌ನಲ್ಲಿ ಪಕ್ಕ ಕೂತಿದ್ದವರೊಬ್ಬರು ತುಂಬ ವಿಶ್ವಾಸದಿಂದ ಮಾತಾ ಡಿಸಿದರು. ‘ಶಿವಶಂಕರ್ ಅವರೇ, ನಿಮ್ಗೆ ನಾಡು-ನುಡಿಯ ಬಗ್ಗೆ ವಿಪ ರೀತ ಅಭಿಮಾನ ಅನ್ಸುತ್ತೆ. ಅದೇ ಕಾರಣದಿಂದ ಪ್ರತಿ ಚಿತ್ರದಲ್ಲೂ ನಾಡಿನ ಹಿರಿಮೆ ಸಾರುವ ಹಾಡುಗಳನ್ನು ಬರೆದಿದ್ದೀರಿ ಅನ್ಸುತ್ತೆ. ನಿಮ್ಮ ಗೀತೆಯಾತ್ರೆ ಹೀಗೆಯೇ ಸಾಗಲಿ. ಕನ್ನಡನಾಡಿನ ವೈಭವ ಹಾಡುಗಳ ಮೂಲಕ ಮನೆ ಮನೆ ತಲುಪಲಿ’ ಎಂದರು.
ಆ ಅನಾಮಿಕ ಜತೆಗಾರ, ಸಹ ಪ್ರಯಾ ಣಿಕನ ಈ ಅಭಿಮಾನದ ಮಾತು ಕೇಳಿ ದಾಗಲೇ ಹಾಡಿನ ಮೊದಲ ಸಾಲು ಹೊಳೆ ದುಬಿಟ್ಟಿತು. ತಕ್ಷಣವೇ, ಪ್ರಯಾಣದ ಸಂದ ರ್ಭದಲ್ಲಿ ಓದಲೆಂದು ಇಟ್ಟುಕೊಂಡಿದ್ದ ನ್ಯೂಸ್ ಪೇಪರಿನ ಮೇಲೆ ‘ನಾಡಚರಿತೆ ನೆನಪಿಸುವಾ ವೀರಗೀತೆಯಾ…’ ಎಂದು ಬರೆದುಕೊಂಡೆ. ಈ ಗೀತೆ ಹಾಡುವವರು ಕನ್ನಡದ ಕಂದಮ್ಮಗಳು ತಾನೆ ಅಂದುಕೊಂ ಡಾಗ-‘ಹಾಡು ನೀನು ಕನ್ನಡಿಗಾ ದೇಶ ಗೀತೆಯಾ’ ಎಂಬ ಇನ್ನೊಂದು ಸಾಲು ಹೊಳೆಯಿತು! ಬಸ್ಸಿನೊಳಗೇ ಹಾಡಿನ ಪಲ್ಲವಿ ಸಿದ್ಧವಾಗಿಹೋಯಿತು.
ಕನ್ನಡದ ಇತಿಹಾಸವನ್ನು, ಕನ್ನಡಕ್ಕೆ ಕೋಡು ಮೂಡಿಸಿದ ಮಹಾನು ಭಾವರ ಚರಿತ್ರೆಯನ್ನು ಚರಣಗಳಲ್ಲಿ ಹೇಳಬೇಕು ಅಂದುಕೊಂಡೆ. ಆಗಲೇ ಕಿತ್ತೂರು ಚೆನ್ನಮ್ಮ, ಮದಕರಿ ನಾಯಕ, ಕೆಂಗಲ್ ಹನುಮಂತಯ್ಯ, ಸರ್. ಎಂ. ವಿಶ್ವೇಶ್ವರಯ್ಯ, ಸಂಗೊಳ್ಳಿ ರಾಯಣ್ಣ ಮುಂತಾದ ಮಹಾಮಹಿಮರ ನೆನಪು ಬಂತು. ಅವರ ಸಾಧನೆಯ ಸಾಲುಗಳನ್ನೂ ಚರಣದಲ್ಲಿ ತಂದೆ. ಇದೆಲ್ಲಾ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿಯೇ ನಡೆದುಹೋಯಿತು.
ಮರುದಿನ ಚೆನ್ನೈನ ಜೆಮಿನಿ ಸ್ಟುಡಿಯೋಗೆ ಬಂದ ಸಂಗೀತ ನಿರ್ದೇ ಶಕ ಸತ್ಯಂ, ಕೆಲ ಸಮಯದ ನಂತರ ಅದ್ಭುತ ಎಂದು ಉದ್ಗರಿಸುವಂಥ ಟ್ಯೂನನ್ನೇ ಕೊಟ್ಟರು ನಿಜ. ಆದರೆ ಒಂದು ಯಡವಟ್ಟಾಗಿ ಹೋಗಿತ್ತು. ಚರಣದಲ್ಲಿ ‘ಹನುಮಂತಯ್ಯ ಕಟ್ಟಿದ ವಿಧಾನ ಸೌಧ ನೋಡಿದು’ ಎಂಬ ಸಾಲೊಂದಿತ್ತು. ಅದರಲ್ಲಿ ಹನುಮಂತಯ್ಯ ಎಂಬ ಪದ ರಾಗಕ್ಕೆ ಹೊಂದುತ್ತಿಲ್ಲ ಎಂದುಕೊಂಡು ‘ಯ್ಯ’ ಎಂಬುದನ್ನು ಕಿತ್ತುಹಾಕಿ ಹಾಡಿನ ಸಾಲಲ್ಲಿ ‘ಹನುಮಂತ’ ಎಂದಷ್ಟೇ ಬಳಸಿಬಿಟ್ಟಿದ್ದರು ಸತ್ಯಂ. ಆ ಪ್ರಕಾರವೇ ಹೋಗಿದ್ದರೆ ‘ಹನುಮಂತ ಕಟ್ಟಿದ ವಿಧಾನಸೌಧ ನೋಡಿದು’ ಎಂದು ಹಾಡಬೇಕಿತ್ತು. ಈ ವಿಷಯ ತಿಳಿದು ನನಗೆ ಶಾಕ್ ಆಯ್ತು. ತಕ್ಷಣವೇ ಸತ್ಯಂ ಅವರನ್ನು ಉದ್ದೇಶಿಸಿ ಹೇಳಿದೆ: ‘ಸಾರ್, ನೀವು ನೆರೆರಾಜ್ಯದವರು. ನಿಮಗೆ ಕನ್ನಡ ನಾಡಿನ ಗಣ್ಯರ ಹೆಸರೇ ಗೊತ್ತಿಲ್ಲ. ಹೀಗಿರುವಾಗ ನನ್ನ ಹಾಡಿನ ಸಾಲನ್ನೇ ವಿರೂಪಗೊಳಿಸುವುದು ಎಷ್ಟು ಸರಿ? ‘ಹನು ಮಂತಯ್ಯ ಕಟ್ಟಿದ ವಿಧಾನಸೌಧ ನೋಡಿದು’ ಎಂದು ನಾನು ಬರೆದರೆ ಅದನ್ನು ‘ಹನುಮಂತ ಕಟ್ಟಿದ ವಿಧಾನ ಸೌಧ ನೋಡಿದು’ ಅಂತ ಬದಲಿ ಸಿದ್ದೀರಲ್ಲ? ನೆನಪಿಟ್ಟುಕೊಳ್ಳಿ. ಹನುಮಂತ ಲಂಕೆಗೆ ಸೇತುವೆ ಕಟ್ಟಿದ. ನಮ್ಮ ಹನುಮಂತಯ್ಯ ವಿಧಾನಸೌಧ ಕಟ್ಟಿದ’ ಎಂದು ಜೋರು ಮಾಡಿದೆ.
ಆಗ ತಕ್ಷಣವೇ ಸತ್ಯಂ ಹೀಗೆಂದರು: ‘ನೀವು ಬರೆದಿರುವ ಸಾಲು ತಾಳಕ್ಕೆ ಹೊಂದಿಕೆಯಾಗುತ್ತಿಲ್ಲ. ಹಾಗಾಗಿ ಬೇರೆ ಬರೆದುಕೊಡಿ…’ ಸತ್ಯಂ ಅವರ ಮಾತನ್ನು ಅಲ್ಲೇ ಇದ್ದ ನಿರ್ದೇಶಕ ವಿಜಯ್ ಕೂಡಾ ಅನುಮೋದಿಸಿದರು. ಈ ಮಾತನ್ನು ನಾನು ಬಿಲ್‌ಕುಲ್ ಒಪ್ಪಲಿಲ್ಲ. ‘ನಾನು ಬರೆದಿರೋದು ಕನ್ನಡ ನಾಡು ಸದಾ ನೆನಪಿಡಬೇಕಾದವರ ಹೆಸರಗಳನ್ನು. ಅದನ್ನು ಬದಲಿಸಲಾರೆ. ಈಗ ಹನುಮಂತಯ್ಯ ಎಂಬುದನ್ನು ಬದಲಿಸಿದೆ ಅಂದುಕೊಳ್ಳಿ: ಅದಕ್ಕೂ ಮೊದಲೇ ವಿಶ್ವೇಶ್ವರಯ್ಯ ಎಂಬ ಪದ ಇದೆ. ಅದನ್ನೂ ಬದಲಿಸಿ ಅಂತೀರ ನೀವು. ಹೀಗೆ ಮಾಡಿದ್ರೆ ಹಾಡಿಗೆ ಯಾವ ಅರ್ಥ ಇರುತ್ತೆ? ಈ ಒಂದು ಹಾಡಿಗೆ ಮಾತ್ರ, ಸಾಹಿತ್ಯ ನೋಡಿಕೊಂಡೇ ಟ್ಯೂನ್ ಹಾಕಿ’ ಎಂದೆ.
ನನ್ನ ಮಾತನ್ನು ಸತ್ಯಂ ಒಪ್ಪಲೇ ಇಲ್ಲ. ಸರಿ, ಈ ವಿಷಯಕ್ಕೆ ನಮ್ಮ ನಮ್ಮಲ್ಲಿ ಜಗಳವೇ ಶುರುವಾಗಿಹೋಯಿತು. ಆ ವೇಳೆಗೆ ಮಧ್ಯೆ ಪ್ರವೇಶಿಸಿದವರು ಗಾಯಕಿ ಬಿ.ಆರ್. ಛಾಯಾ. ಅವರು, ‘ತಾಯಿಯ ಹೊಣೆ’ ಚಿತ್ರಕ್ಕೆ ಹಾಡಲೆಂದು ಮದ್ರಾಸಿಗೆ ಬಂದಿದ್ದರು. ಅವರು ರಿಹರ್ಸಲ್ ಆರಂಭಿಸುವ ಮೊದಲೇ ನಮ್ಮ ಜಗಳ ಶುರುವಾಗಿತ್ತು. ವಿಷಯ ಏನೆಂದು ತುಂಬ ಬೇಗ ಅರ್ಥಮಾಡಿಕೊಂಡ ಛಾಯಾ- ‘ಹನುಮಂತಯ್ಯ’ ಎಂಬ ಪದವನ್ನು ತಾಳಕ್ಕೆ ಸರಿಯಾಗಿ ಹೊಂದಿಸಿ ಕೊಂಡು ಹಾಡಬಹುದು ಎಂದು ತೋರಿಸಿಬಿಟ್ಟರು.
ಈ ಹಾಡನ್ನು ಪಿ. ಸುಶೀಲ, ಬೆಂಗಳೂರು ಲತಾ ಹಾಗೂ ಬಿ.ಆರ್. ಛಾಯಾರಿಂದ ಹಾಡಿಸುವುದೆಂದು ತೀರ್ಮಾನಿಸಲಾಗಿತ್ತು. ಬಿ.ಆರ್. ಛಾಯಾ ಕನ್ನಡತಿ. ಆಕೆಗೆ ನಮ್ಮ ನಾಡಿನ ಸಂಸ್ಕೃತಿಯ ಬಗ್ಗೆ ಚೆನ್ನಾಗಿ ಗೊತ್ತಿದೆ. ಹಾಗಾಗಿ ಆಕೆಯೇ ಮೊದಲಿಗಳಾಗಿ ಹಾಡಲಿ ಎಂದು ನಾನು ವಾದಿಸಿದೆ. ಪಿ. ಸುಶೀಲಾ ತುಂಬಾ ಹಿರಿಯ ಗಾಯಕಿ. ಹಾಗಾಗಿ ಅವರೇ ಮೊದಲು ಶುರುಮಾಡಲಿ ಎಂದು ಸತ್ಯಂ ಪಟ್ಟು ಹಿಡಿದರು. ಈ ಬಾರಿ ನಾನೇ ಸೋತೆ.
ಕೆಲ ದಿನಗಳ ನಂತರ, ಈ ಹಾಡಿನ ಚಿತ್ರೀಕರಣ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆಯುತ್ತಿದೆ ಎಂದು ತಿಳಿಯಿತು. ಕುತೂಹಲ ದಿಂದಲೇ ಅಲ್ಲಿಗೆ ಹೋದೆ. ಹೋದವನೇ, ಎದುರಿಗೆ ಕಂಡ ದೃಶ್ಯ ನೋಡಿ ತತ್ತರಿಸಿಹೋದೆ. ಏಕೆಂದರೆ, ನಿರ್ದೇಶಕ ವಿಜಯ್ ಅವರು, ಬಾಲನಟಿ ಬೇಬಿ ರೇಖಾಗೆ ರಾಣಿ ಚೆನ್ನಮ್ಮನ ವೇಷ ಹಾಕಿದ್ದರು. ಆ ವೇಷ ಹೇಗಿತ್ತು ಗೊತ್ತೆ? ಚೆನ್ನಮ್ಮನ ವೇಷಧಾರಿಯು ಹಣೆಯಲ್ಲಿ ಕುಂಕುಮವಿತ್ತು. ಕೊರಳಲ್ಲಿ ತಾಳಿಯಿತ್ತು!
ತಕ್ಷಣವೇ ನಿರ್ದೇಶಕ ವಿಜಯ್ ಅವರನ್ನು ಕರೆಸಿ ಕೇಳಿದೆ: ‘ ಸಾರ್, ರಾಣಿ ಚೆನ್ನಮ್ಮ ವಿಧವೆಯಾದ ನಂತರ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಇಳೀತಾಳೆ. ವಿಷಯ ಹೀಗಿರುವಾಗ ನೀವು ಆಕೆಯ ಪಾತ್ರಧಾರಿಗೆ ಹಣೆ ಯಲ್ಲಿ ಕುಂಕುಮ ಇಟ್ಟಿದ್ದೀರಿ. ಕೊರಳಲ್ಲಿ ತಾಳಿಯನ್ನೂ ಹಾಕಿದ್ದೀರಿ. ಹೀಗೇ ಚಿತ್ರೀಕರಿಸಿದರೆ ಅದು ನೋಡುವವರಿಗೆ ಆಭಾಸ ಅನ್ನಿಸು ವುದಿಲ್ಲವೇ?’
ವಿಜಯ್ ತಕ್ಷಣವೇ ತಪ್ಪು ಒಪ್ಪಿಕೊಂಡರು. ನನಗೆ ನಿಮ್ಮ ನಾಡಿನ ಇತಿಹಾಸದ ಬಗ್ಗೆ ಗೊತ್ತಿಲ್ಲ. ಹಾಗಾಗಿ ತಪ್ಪಾಗಿದೆ, ಕ್ಷಮಿಸಿ’ ಎಂದರು. ಆಗ ಅಲ್ಲಿದ್ದ ಅಬ್ಬಯ್ಯ ನಾಯ್ಡು ಅವರಿಗೆ ಹೇಳಿದೆ: ‘ಈ ಹಾಡಲ್ಲಿ ಮದಕರಿ ನಾಯಕ, ಸಂಗೊಳ್ಳಿ ರಾಯಣ್ಣ, ವಿಶ್ವೇಶ್ವರಯ್ಯ, ಕೆಂಗಲ್ ಹನುಮಂತಯ್ಯನವರ ಪ್ರಸ್ತಾಪವೂ ಬರುತ್ತದೆ. ಅವರ ವೇಷಭೂಷಣ ನೈಜವಾಗಿದ್ದರೆ ಆ ಸಂದರ್ಭ ಕಳೆ ಕಟ್ಟುತ್ತದೆ….’
ಈ ಮಾತು ಕೇಳಿದ ವಿಜಯ್-‘ ಈ ಹಾಡಿನ ನೃತ್ಯ ನಿರ್ದೇಶನವನ್ನು ನೀವೇ ಮಾಡಿಬಿಡಿ ಶಿವಶಂಕರ್’ ಎಂದರು. ಈ ಮಾತಿಗೆ ಅಬ್ಬಯ್ಯ ನಾಯ್ಡು ಕೂಡ ದನಿಗೂಡಿಸಿದರು. ಪರಿಣಾಮ, ಸುಮ್ಮನೇ ಶೂಟಿಂಗ್ ನೋಡಲೆಂದು ಹೋಗಿದ್ದ ನಾನು, ಹಾಡೊಂದರ ನೃತ್ಯ ನಿರ್ದೇಶನ ಮಾಡಿ ಬಂದೆ. ನಾಡಿನ ಹಿರಿಮೆ ಬಣ್ಣಿಸುವ ಹಾಡೊಂದನ್ನು ಬರೆದದ್ದು ಮಾತ್ರವಲ್ಲದೆ ಅದಕ್ಕೆ ನೃತ್ಯ ನಿರ್ದೇಶನವನ್ನೂ ಮಾಡಿದ ಹೆಮ್ಮೆ ನನಗಿದೆ…’
ಇಷ್ಟು ಹೇಳಿ ಹಾಡಿನ ಕಥೆಗೆ ‘ಶುಭಂ’ ಹೇಳಿದರು ಶಿವಶಂಕರ್…

ಬಂದೇ ಇಲ್ಲಿಗೆ ನಾ ಸಂಜೆ ಮಲ್ಲಿಗೆ

ಜನವರಿ 28, 2011

 

 

 

 

 

 

 

 

 

 

ಪ್ರೇಮವಿದೆ ಮನದೆ…
ಚಿತ್ರ: ಅಂತ ಗೀತೆರಚನೆ: ಗೀತಪ್ರಿಯ
ಸಂಗೀತ: ಜಿ.ಕೆ. ವೆಂಕಟೇಶ್, ಗಾಯನ: ಎಸ್. ಜಾನಕಿ

ಪ್ರೇಮವಿದೆ ಮನದೆ ನಗುತಾ ನಲಿವಾ ಹೂವಾಗಿ
ಬಂದೇ ಇಲ್ಲಿಗೆ ನಾ ಸಂಜೆ ಮಲ್ಲಿಗೆ
ನಾ ಸಂಜೇ ಮಲ್ಲಿಗೆ ||ಪ||

ಕಣ್ಣಲ್ಲಿ ನಿನ್ನ ನಾ ಕಂಡೆ ನನ್ನ
ದಿನದಿನವ ಎಣಿಸಿ, ಮನದಿ ಗುಣಿಸಿ, ಬಿಡುವ ಬಯಸಿ
ಸೋಲು ಈ ದಿನ, ಗೆಲುವೂ ಈ ಕ್ಷಣಾ ಹಾ… ಎಂಥಾ ಬಂಧನ ||೧|

ಹೊಂಗನಸ ಕಂಡೆ ನನಗಾಗಿ ನೀನು
ಬಗೆಬಗೆಯ ಆಸೆ ಮನದೆ ಇರಿಸಿ, ನೆನಪ ಉಳಿಸಿ,
ದೂರ ಸಾಗಿದೆ, ದಾಹ ತೀರದೆ, ತೀರ ಸೇರುವೆ ||೨||

ಪ್ರೀತಿ-ಪ್ರೇಮದ ಹಾಡು, ಸ್ನೇಹದ ಹಾಡು, ಸೇಡಿನ ಹಾಡು, ಸಂತೋಷದ ಹಾಡು, ಸಂಕಟದ ಹಾಡು, ಸಂಗೀತದ ಹಾಡು, ಮದುವೆಯ ಹಾಡು, ಹುಟ್ಟು ಹಬ್ಬದ ನೆಪದಲ್ಲಿ ಕೇಳುವ ಹಾಡು, ಆರತಕ್ಷತೆಯ ಸಂದರ್ಭಕ್ಕೆಂದೇ ಬರೆಯುವ ಹಾಡು, ದೇವರನ್ನು ಪ್ರಾರ್ಥಿಸುವ ಹಾಡು, ಅದೇ ದೇವರಿಗೆ ಆವಾಜ್ ಹಾಕುವ ಹಾಡು… ಹೀಗೆ, ಸಿನಿಮಾಗಳಲ್ಲಿ ಬಳಕೆಯಾಗುವ ಹಾಡುಗಳ ವೆರೈಟಿ ದೊಡ್ಡದು. ಪ್ರೇಮ, ಸ್ನೇಹ, ವಿರಸ, ವಿರಹ, ಸಂತೋಷ, ಸಂಕಟ ಮುಂತಾದ ಭಾವಗಳು ಗೀತೆರಚನೆಕಾರನನ್ನೂ ಆಗಿಂದಾಗ್ಗೆ ತಟ್ಟಿರುತ್ತವೆ. ಹಾಗಾಗಿ, ಮೇಲೆ ವಿವರಿಸಿದ ವೆರೈಟಿಯ ಹಾಡುಗಳನ್ನು ಬರೆಯುವ ಸಂದರ್ಭದಲ್ಲಿ ತನ್ನ ಅನುಭವವನ್ನೆಲ್ಲ ಆತ ಹಾಡಲ್ಲಿ ತರಬಹುದು. ಆ ಮೂಲಕ ಹಾಡಿನ ಹಾಗೂ ಸಂದರ್ಭದ ತೀವ್ರತೆಯನ್ನು ಹೆಚ್ಚಿಸಬಹುದು.
ಆದರೆ, ಕ್ಯಾಬರೆ ಹಾಡು ಬರೆಯುವ ಸಂದರ್ಭದಲ್ಲಿ ಮಾತ್ರ ಗೀತೆರಚನೆಕಾರ ಸವಾಲು ಎದುರಿಸಬೇಕಾಗುತ್ತದೆ. ಏಕೆಂದರೆ ಕ್ಯಾಬರೆ ಹಾಡಿನ ಸಂದರ್ಭದಲ್ಲಿ ಒಂದೊಂದು ಪದದಲ್ಲೂ ವಯ್ಯಾರ, ನಾಚಿಕೆ, ಬಿಗುಮಾನ, ವಿಪರೀತದ ಆಸೆ, ಒಂದಿಷ್ಟು ನಿರಾಸೆ… ಇತ್ಯಾದಿ ಇತ್ಯಾದಿಗಳನ್ನು ತರಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ಗೀತೆರಚನೆಕಾರ ಶಬ್ದಗಳನ್ನು ಅದು ಹೇಗೆ ಆವಾಹಿಸಿಕೊಳ್ಳುತ್ತಾನೆ? ಕೇಳುವವರು ಮತ್ತು ನೋಡುವವರಿಗೆ ಅಮಲೇರಿಸುವಂಥ ಹಾಡನ್ನು ಹೇಗೆ ಬರೆಯುತ್ತಾನೆ?
ಇದು, ಹಲವರ ಕುತೂಹಲದ ಪ್ರಶ್ನೆ.
ಈ ಪ್ರಶ್ನೆಗೆ ‘ಇದಮಿತ್ಥಂ’ ಎಂಬಂಥ ಉತ್ತರವಿಲ್ಲ. ಏಕೆಂದರೆ, ಒಬ್ಬೊಬ್ಬ ಚಿತ್ರಸಾಹಿತಿಯ ಗೀತೆರಚನೆಯ ಶೈಲಿ ಒಂದೊಂದು ರೀತಿಯದ್ದಾಗಿರುವುದು. ಆದರೆ, ಕ್ಯಾಬರೆ ಹಾಡುಗಳ ಸೃಷ್ಟಿಯ ಸಂದರ್ಭ ತಿಳಿಯಲು ಹೊರಟರೆ ಒಂದಿಷ್ಟು ಸ್ವಾರಸ್ಯಕರ ಸಂಗತಿಗಳಂತೂ ಖಂಡಿತ ಸಿಗುತ್ತವೆ.
ಅದಕ್ಕೊಂದು ಉದಾಹರಣೆ ಕೇಳಿ: ಅಬ್ಬಯ್ಯನಾಯ್ಡು ನಿರ್ಮಾಣದ ‘ಚೆಲ್ಲಿದ ರಕ್ತ’ ಸಿನಿಮಾದ ಕೆಲಸ ಆರಂಭವಾಗಿತ್ತು. ಅದಕ್ಕೆ ಗೀತೆರಚನೆಯ ಹೊಣೆ ಹೊತ್ತಿದ್ದವರು ಚಿ. ಉದಯಶಂಕರ್. ಸಿನಿಮಾ ಆರಂಭವಾದ ಕೆಲವೇ ನಿಮಿಷಗಳ ನಂತರ ‘ಶಿವಸ್ತುತಿಯ ಒಂದು ಹಾಡು ಬೇಕು’ ಎಂದರಂತೆ ಅಬ್ಬಯ್ಯನಾಯ್ಡು ಮತ್ತು ಆ ಚಿತ್ರದ ನಿರ್ದೇಶಕ ಸುಬ್ಬರಾವ್. ‘ಸರಿ, ನಾಳೆ ಸಂಜೆ ಜನಾರ್ದನ ಹೋಟೆಲಿಗೆ ಬನ್ನಿ. ಹಾಡು ಬರೆದು ಇಟ್ಟಿರ್‍ತೇನೆ’ ಎಂದರಂತೆ ಉದಯಶಂಕರ್. ಮರುದಿನ, ನಿಗದಿತ ಸಮಯಕ್ಕೆ ಸರಿಯಾಗಿ ಅಬ್ಬಯ್ಯ-ಸುಬ್ಬರಾವ್ ಜೋಡಿ ಜನಾರ್ದನ ಹೋಟೆಲಿಗೆ ಹೋಗಿದೆ. ಇವರನ್ನು ಕಂಡ ಉದಯಶಂಕರ್- ‘ಐದು ನಿಮಿಷ ಕೂತಿರಿ. ಹಾಡು ಬರೆದು ಕೊಡ್ತೇನೆ’ ಎಂದವರು-ನಂತರದ ಐದೇ ನಿಮಿಷದಲ್ಲಿ ‘ಶಿವನೊಲಿದರೆ ಭಯವಿಲ್ಲಾ’ ಎಂಬ ಹಾಡು ಬರೆದುಕೊಟ್ಟರಂತೆ.
ಉದಯಶಂಕರ್ ಅವರಿಂದ ಮತ್ತೊಂದು ಹಾಡು ಬರೆಸಿಕೊಂಡು ಹೋಗೋಣ ಎಂದು ಮಾತಾಡಿಕೊಂಡೇ ಬಂದಿದ್ದರು ಅಬ್ಬಯ್ಯನಾಯ್ಡು-ಸುಬ್ಬರಾವ್. ಶಿವಸ್ತುತಿಯ ಹಾಡನ್ನು ಉದಯಶಂಕರ್ ಕೊಟ್ಟ ಮರುಕ್ಷಣವೇ -‘ಸಾರ್, ಒಂದು ಕ್ಯಾಬರೆ ಹಾಡು ಬೇಕಾಗಿದೆ. ಅದನ್ನೂ ಬರೆದು ಕೊಡಿ. ಖಳನಾಯಕನ ಅಡಗುದಾಣದಲ್ಲಿ ಕ್ಯಾಬರೆ ಹಾಡು ಹಾಕೋಣ ಅನ್ಕೊಂಡಿದೀವಿ. ಆ ಸಂದರ್ಭಕ್ಕೆ ಒಂದು ಹಾಡು ಬೇಕು’ ಈಗಲೇ ಬೇಕು ಎಂದರಂತೆ.
ಬಹುಶಃ ಅವತ್ತು ಉದಯಶಂಕರ್ ಅವರಿಗೆ ಇನ್ನೊಂದು ಹಾಡು ಬರೆವ ‘ಮೂಡ್’ ಇರಲಿಲ್ಲವೆಂದು ಕಾಣುತ್ತದೆ. ಅವರು- ‘ನೋಡ್ರಿ, ಈಗಷ್ಟೇ ಶಿವಸ್ತುತಿಯ ಹಾಡು ಬರೆದಿದ್ದೇನೆ. ಅದರ ಹಿಂದೆಯೇ ಒಂದು ಕ್ಯಾಬರೆ ಹಾಡು ಬರೆದುಕೊಡಿ ಅಂದ್ರೆ ಹ್ಯಾಗೆ? ಅದನ್ನು ನಾಳೆ ಬರೀತೇನೆ’ ಅಂದಿದ್ದಾರೆ. ಈ ಮಾತು ಒಪ್ಪದ ಅಬ್ಬಯ್ಯನಾಯ್ಡು-ಸುಬ್ಬರಾವ್ ಜೋಡಿ-‘ಸಾರ್, ನಮಗೆ ಹಾಡು ಈಗಲೇ ಬೇಕು. ಬೇಕೇ ಬೇಕು’ ಎಂದು ಪ್ರೀತಿಯಿಂದಲೇ ಒತ್ತಾಯಿಸಿದ್ದಾರೆ. ಅಷ್ಟಕ್ಕೇ ಸುಮ್ಮನಾಗದೆ-‘ನೀವು ಏನು ಬರೆದ್ರೂ ಚೆನ್ನಾಗಿರುತ್ತೆ. ಬರೆದು ಕೊಡಿ ಸಾರ್ ಎಂದು ಪಟ್ಟು ಹಿಡಿದಿದ್ದಾರೆ. ಇವರ ಒತ್ತಾಯ ‘ಅತೀ’ ಅನ್ನಿಸಿದಾಗ, ಉದಯಶಂಕರ್ ಅವರಿಬ್ಬರ ಹೆಸರು ಹಾಗೂ ಅವರಿಗೆ ತಾನು ಮಾತುಗಳನ್ನೇ ಜತೆಗಿಟ್ಟುಕೊಂಡು, ಕಚಗುಳಿ ಇಡುವಂಥ ಒಂದು ಕ್ಯಾಬರೆ ಹಾಡು ಬರೆದುಬಿಟ್ಟರಂತೆ. ಆ ಹಾಡು ಹೀಗೆ ಶುರುವಾಗುತ್ತದೆ.
ಅಯ್ಯೊ ಅಬ್ಬಯ್ಯಾ ಬೇಡ ಸುಬ್ಬಯ್ಯಾ
ನಾಳೆ ಬಾರಯ್ಯಾ , ನಾಳೆ ಬಾರಯ್ಯಾ ಹೋ ಹೋ…
‘ಅಂತ’ ಚಿತ್ರದ ಸೂಪರ್ ಹಿಟ್ ಗೀತೆ ‘ಪ್ರೇಮವಿದೆ ಮನದೆ ನಗುತಾ ನಲಿವಾ ಹೂವಾಗಿ…’ ಹಾಡನ್ನು ಗೀತಪ್ರಿಯ ಹೇಗೆ ಬರೆದರು ಎಂದು ಸುಮ್ಮನೇ ಯೋಚಿಸಿದಾಗ ಅದಕ್ಕೊಂದು ಪೂರಕ ಮಾಹಿತಿಯಂತೆ ಉದಯಶಂಕರ್ ಬರೆದ ಅಯ್ಯೋ ಅಬ್ಬಯ್ಯಾ ಬೇಡ ಸುಬ್ಬಯ್ಯಾ ಹಾಡು ಮತ್ತು ಆ ಹಾಡು ಸೃಷ್ಟಿಯಾದ ಸಂದರ್ಭ ನೆನಪಾಯಿತು.
‘ಇದೇನ ಸಂಸ್ಕೃತಿ, ಇದೇನ ಸಭ್ಯತೆ’, ‘ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು’, ‘ಬೆಳುವಲದಾ ಮಡಿಲಲ್ಲಿ ಬೆವರು ಹನಿ ಬಿದ್ದಾಗ…’, ‘ನೀನೆಲ್ಲಿ ನಡೆವೆ ದೂರ ಎಲ್ಲೆಲ್ಲೂ ಶೋಕವೇ…’, ‘ಗೋಪಿಲೋಲ ಹೇ ಗೋಪಾಲ, ಈ ಜಗವೆಲ್ಲಾ ನಿನದೇ ಜಾಲ…’ ಮುಂತಾದ ಮಾಧುರ್ಯದ ಗೀತೆಗಳನ್ನು ಬರೆದವರು ಗೀತಪ್ರಿಯ. ಅವರಿಂದ ಕ್ಯಾಬರೆ ಹಾಡು ಬರೆಸಿದ ಖ್ಯಾತಿ ರಾಜೇಂದ್ರಸಿಂಗ್ ಬಾಬು ಅವರದ್ದು. ಆ ಸಂದರ್ಭವನ್ನು ಗೀತಪ್ರಿಯ ಅವರು ನೆನಪಿಸಿಕೊಂಡದ್ದು ಹೀಗೆ:
ಇದು ೧೯೮೧-೮೨ರ ಮಾತು. ತನ್ನ ಜೀವದ ಗೆಳೆಯ ಅಂಬರೀಷ್ ಅವರನ್ನು ಹೀರೊ ಮಾಡಬೇಕು ಎಂಬ ಆಸೆಯಿಂದ ರಾಜೇಂದ್ರಸಿಂಗ್ ಬಾಬು ‘ಅಂತ’ ಚಿತ್ರದ ತಯಾರಿಗೆ ಸಿದ್ಧತೆ ನಡೆಸಿದ್ದರು. ಆ ಚಿತ್ರಕ್ಕೆ ನನ್ನಿಂದ ಒಂದು ಹಾಡು ಬರೆಸಬೇಕೆಂಬುದು ಅವರ ಆಸೆಯಾಗಿತ್ತು. ನನ್ನನ್ನು ಸಂಪರ್ಕಿಸಿ ಹೇಳಿದರು: ‘ಸಾರ್, ನಮ್ಮ ಹೊಸ ಸಿನಿಮಾದಲ್ಲಿ ಹೀಗೊಂದು ಸನ್ನಿವೇಶ. ನಾಯಕ ಮತ್ತು ಅವನ ಸೋದರಿ ಚಿಕ್ಕಂದಿನಲ್ಲಿಯೇ ಬೇರೆ ಬೇರೆಯಾಗಿರುತ್ತಾರೆ. ಮುಂದೆ ನಾಯಕ ತಂಗಿಯನ್ನು ಹುಡುಕಲೆಂದೇ ಪೊಲೀಸ್ ಇನ್‌ಸ್ಪೆಕ್ಟರ್ ಆಗುತ್ತಾನೆ. ಹಲವಾರು ಕಡೆ ಹುಡುಕಿದರೂ. ಆಕೆ ಸಿಕ್ಕುವುದಿಲ್ಲ. ಮುಂದೆ ನಾಯಕನ ವೃತ್ತಿ ಬದುಕಿನಲ್ಲಿ ಹಲವಾರು ಏರುಪೇರುಗಳಾಗುತ್ತವೆ. ಈತ ವೇಷ ಮರೆಸಿಕೊಂಡು ಖಳನಾಯಕರ ಅಡ್ಡೆಗೇ ಬರುತ್ತಾನೆ. ಖಳನಾಯಕರ ಜೊತೆಯಲ್ಲಿದ್ದುಕೊಂಡೇ ಅವರನ್ನು ನಿರ್ಮೂಲನ ಮಾಡುವ ಹವಣಿಕೆ ಅವನದು. ಕನ್ವರ್‌ಲಾಲ್ ಹೆಸರಿನ ಈತ ತಮ್ಮೊಂದಿಗೆ ಸೇರಿಕೊಂಡ ಖುಷಿಗೆ, ಆತನ ಹಿನ್ನೆಲೆ ಗೊತ್ತಿಲ್ಲದ ಖಳರೇ ಒಂದು ಕ್ಯಾಬರೆ ಡ್ಯಾನ್ಸ್ ಏರ್ಪಡಿಸುತ್ತಾರೆ. ಆಗ ನರ್ತಿಸಲು ಬಂದಾಕೆ ನಾಯಕನ ಸೋದರಿಯೇ ಆಗಿರುತ್ತಾಳೆ.
ಈ ಸಂದರ್ಭದಲ್ಲಿ ಅಣ್ಣ-ತಂಗಿಗೆ ಪರಸ್ಪರರ ಗುರುತು ಸಿಕ್ಕುತ್ತದೆ. ಆದರೆ ಇಬ್ಬರೂ ಪರಿಚಯ ಹೇಳಿಕೊಳ್ಳದ ಪರಿಸ್ಥಿತಿಯಲ್ಲಿರುತ್ತಾರೆ. ತಂಗಿಯನ್ನು ಆ ವೇಷದಲ್ಲಿ, ಅಂಥ ಜಾಗದಲ್ಲಿ ನೋಡಿ ನಾಯಕನಿಗೆ ಶಾಕ್ ಆಗುತ್ತದೆ. ಕ್ಯಾಬರೆ ಡ್ಯಾನ್ಸರ್ ಆಗಿದ್ದ ತಂಗಿಯದೂ ಅದೇ ಸ್ಥಿತಿ. ಇಂಥ ಸಂದರ್ಭದಲ್ಲಿ ಮನದ ಸಂಕಟವೆಲ್ಲಾ ಹಾಡಾಗಿ ಬರಬೇಕು… ಅದು ಕ್ಯಾಬರೆ ಹಾಡಿನಂತೆಯೂ ಭಾಸವಾಗಬೇಕು. ಅಣ್ಣ-ತಂಗಿಯ ಮನದ ನೋವು ಪ್ರೇಕ್ಷಕರನ್ನು ತಾಕಬೇಕು, ಅಂಥದೊಂದು ಹಾಡು ಬರೆದು ಕೊಡಿ’ ಎಂದಿದ್ದರು ರಾಜೇಂದ್ರಸಿಂಗ್ ಬಾಬು.
ಅದುವರೆಗೂ ಮೃದು, ಮಧುರ ಹಾಡು ಬರೆಯುತ್ತಿದ್ದವ ನಾನು. ಈಗ ಕ್ಯಾಬರೆ ಹಾಡಿಗೆ ಪೆನ್ ತಿರುಗಿಸಬೇಕಿತ್ತು. ‘ಇರಲಿ, ಇಂಥ ಸವಾಲುಗಳು ಆಗಿಂದಾಗ್ಗೆ ಎದುರಾಗಬೇಕು. ಆಗಲೇ ಬಾಳಿಗೊಂದು ಅರ್ಥ’ ಎಂದು ಕೊಂಡೆ. ಸ್ವಲ್ಪ ಹೊತ್ತಿನ ನಂತರ ಜಿ.ಕೆ. ವೆಂಕಟೇಶ್ ಅವರು ಟ್ಯೂನ್ ಕೇಳಿಸಿದರು. ಈ ಹಾಡು ಮುಗಿಯುತ್ತಿದ್ದಂತೆಯೇ ಪ್ರೀತಿಯ ಅಣ್ಣನ ಮುಂದೆ ಕ್ಯಾಬರೆ ಡ್ಯಾನ್ಸ್ ಮಾಡಬೇಕಾಯ್ತಲ್ಲ ಎಂಬ ಸಂಕಟದಿಂದ, ಆ ನರ್ತಕಿ ಮಹಡಿ ಮೇಲಿಂದ ಜಿಗಿದು ಪ್ರಾಣ ಬಿಡುತ್ತಾಳೆ ಎಂದೂ ಹೇಳಿದ್ದರು ಸಿಂಗ್ ಬಾಬು. ಈ ಮಾತು ನನ್ನ ಮನದಲ್ಲಿ ಗಟ್ಟಿಯಾಗಿ ಉಳಿದುಹೋಗಿತ್ತು. ಅಂದರೆ ನಾಯಕನ ತಂಗಿಯ ಪಾತ್ರ ಸ್ವಲ್ಪ ಸಮಯ ಮಾತ್ರ ಕಾಣಿಸಿಕೊಂಡು ಮರೆಯಾಗುವಂಥಾದ್ದು. ಹೀಗೆ ಕಾಣಿಸಿಕೊಂಡು ಹಾಗೆ ಕಣ್ಮರೆಯಾಗುವ ಪಾತ್ರಕ್ಕೆ ಹೇಗೆ ಹಾಡು ಬರೆಯುವುದು? ಆ ಪಾತ್ರವನ್ನು ಯಾವ ವಸ್ತುವಿಗೆ ಹೋಲಿಸುವುದು ಎಂದು ಚಿಂತಿಸಿದೆ. ಈ ಸಂದರ್ಭದಲ್ಲಿಯೇ ಹೆಣ್ಣನ್ನು ಹೂವಿಗೆ ಹೋಲಿಸುವುದು ನೆನಪಿಗೆ ಬಂತು. ಆದರೆ ಈ ಸಿನಿಮಾದಲ್ಲಿ ಬರುತ್ತಿದ್ದ ಹೆಣ್ಣು ಕೆಲವೇ ಹೊತ್ತು ಕಾಣಿಸಿಕೊಂಡು ಕಣ್ಮರೆಯಾಗುವಾಕೆ. ಅವಳನ್ನು ಯಾವ ಹೂವಿಗೆ ಹೋಲಿಸಬಹುದು ಎಂದು ಯೋಚಿಸುತ್ತಾ ಕೂತೆ.
ಆಗ ಕಣ್ಮುಂದೆ ಕಂಡ ಚಿತ್ರವೇ ಸಂಜೆಮಲ್ಲಿಗೆಯದ್ದು!
ಸಾಮಾನ್ಯವಾಗಿ ಎಲ್ಲ ಹೂಗಳೂ ಮುಂಜಾನೆ ಅರಳುತ್ತವೆ. ಅವುಗಳನ್ನು ಮಂಗಳ ಕಾರ್ಯಗಳಿಗೆ, ದೇವರ ಪೂಜೆಗೆ ಬಳಸುತ್ತಾರೆ. ಹೆಂಗಳೆಯರು ಅವುಗಳನ್ನು ಮುಡಿಗೇರಿಸಿಕೊಳ್ಳುತ್ತಾರೆ. ಹೆಚ್ಚಿನ ಹೂಗಳು ಬೆಳಗಿಂದ ಸಂಜೆಯವರೆಗೂ ಫ್ರೆಶ್ ಆಗಿರುವಂಥ ಗುಣ ಹೊಂದಿರುತ್ತವೆ. ಆದರೆ, ಸಂಜೆ ಮಲ್ಲಿಗೆಯದು ಹಾಗಲ್ಲ. ಇನ್ನೇನು ಸೂರ್ಯ ಮುಳುಗುತ್ತಾನೆ ಎನ್ನುವ ಹೊತ್ತಿನಲ್ಲಿ ಅದು ಅರಳುತ್ತದೆ. ಕತ್ತಲಾಗುತ್ತಿದ್ದಂತೆಯೇ ಬಾಡಿ ಹೋಗುತ್ತದೆ. ಈ ಹೂವಿನ ಅರಳುವ ಮುದುಡುವ ಪ್ರಕ್ರಿಯೆ ಕೆಲವೇ ಗಂಟೆಗಳ ಕಾಲ. ಚಿಕ್ಕಂದಿನಲ್ಲಿ ನಾನು ಈ ಹೂವುಗಳನ್ನೇ ಆಸೆಯಿಂದ, ಪ್ರೀತಿ, ಬೆರಗಿನಿಂದ ನೋಡುತ್ತಿದ್ದೆ. ಅದನ್ನು ಬಿಡಿಸಿಕೊಂಡೂ ಹೋಗುತ್ತಿದ್ದೆ. ‘ಅಯ್ಯೋ, ಅದು ಸಂಜೆ ಮಲ್ಲಿಗೆ. ಅದನ್ನು ದೇವರಿಗೆ ಮುಡಿಸಬಾರ್‍ದು’ ಎಂದು ಅಮ್ಮ ಎಚ್ಚರಿಸುತ್ತಿದ್ದಳು. ಹೊರಗೆ ಸಿಕ್ಕ ಗೆಳೆಯರು, ಬಂಧುಗಳೂ ಇದೇ ಮಾತು ಹೇಳುತ್ತಿದ್ದರು. ಇಂಥ ಮಾತುಗಳನ್ನು ಕೇಳಿದಾಗ-‘ಬೇರೆಲ್ಲ ಹೂಗಳೂ ಅರಳಿ, ಮಂಗಳ ಕಾರ್ಯಗಳಿಗೆ ತಮ್ಮನ್ನು ಸಮರ್ಪಿಸಿಕೊಂಡು ಪುನೀತವಾಗುವ ಸಂದರ್ಭದಲ್ಲಿ ಈ ಸಂಜೆಮಲ್ಲಿಗೆಗೆ ಕೆಲವೇ ಕ್ಷಣಗಳಲ್ಲಿ ಅರಳಿ ಬಾಡುವ ಅನಿವಾರ್‍ಯತೆ. ಏಕೆ ಎಂದು ನನ್ನಷ್ಟಕ್ಕೆ ನಾನೇ ಅಂದುಕೊಳ್ಳುತ್ತಿದ್ದೆ.
ಹೀಗೆ, ಸಂಜೆ ಮಲ್ಲಿಗೆಯ ಬಗ್ಗೆ ಯೋಚಿಸುತ್ತಿದ್ದಾಗಲೇ ನರ್ತಕಿಯರ ಬದುಕು ನೆನಪಾಯಿತು. ಯೌವನವಿದ್ದಾಗ ಎಲ್ಲರೂ ನರ್ತಕಿಯರನ್ನು ಪ್ರೀತಿಸುತ್ತಾರೆ, ಆರಾಸುತ್ತಾರೆ, ಆಸೆಗಣ್ಣಿಂದ ನೋಡುತ್ತಾರೆ. ಬಯಸುತ್ತಾರೆ. ಆದರೆ, ಮುಪ್ಪು ಸಮೀಪಿಸಿದರೆ ಸಾಕು, ಅವರನ್ನು ಯಾರೂ ತಿರುಗಿಯೂ ನೋಡುವುದಿಲ್ಲ. ಅವರ ಬದುಕೂ ಥೇಟ್ ಸಂಜೆ ಮಲ್ಲಿಗೆಯ ಥರವೇ ಮುಗಿದು ಹೋಗುತ್ತದೆ…
ಹೀಗೊಂದು ಯೋಚನೆ ಬರುತ್ತಿದ್ದಂತೆಯೇ ಒಂದೊಂದೇ ಹೊಸ ಪದಗಳು ಹಾಡಿನ ಸಾಲುಗಳಾಗಿ ಜತೆಯಾಗತೊಡಗಿದವು. ಅಣ್ಣನಿಗೆ ತನ್ನ ಬದುಕಿನ ಸಂಕಟ ಹೇಳಲೆಂದು ಆ ಕ್ಯಾಬರೆ ನರ್ತಕಿ ತನ್ನನ್ನು ತಾನು ‘ಸಂಜೆ ಮಲ್ಲಿಗೆ’ ಎಂದು ಕರೆದುಕೊಂಡರೆ ಚೆಂದ ಅನ್ನಿಸಿತು. ಹಾಗೇ ಬರೆದೆ. ಆ ನಂತರದಲ್ಲಿ ಒಂದೊಂದೇ ಹೊಸ ಪದ, ಒಂದೊಂದೇ ಹೊಸ ಸಾಲು ಸೇರಿಕೊಳ್ಳುತ್ತಾ ಹಾಡು ಸಿದ್ಧವಾಗಿಹೋಯಿತು. ಅಣ್ಣ-ತಂಗಿಯಾಗಿ ತಮ್ಮ ಅಸಹಾಯಕತೆಯನ್ನು ಮುಖಭಾವದಲ್ಲಿ ಪ್ರದರ್ಶಿಸುವ ಸಂದರ್ಭದಲ್ಲಿ ಅಂಬರೀಷ್- ಜಯಮಾಲಾ ಪೈಪೋಟಿಗೆ ಬಿದ್ದು ನಟಿಸಿದರು. ಈ ಹಾಡಿನ ದೃಶ್ಯೀಕರಣ ಎಲ್ಲರ ಮನಸ್ಸಿಗೂ ನಾಟುವಂತಿತ್ತು. ಜತೆಗೆ, ಎಸ್. ಜಾನಕಿಯವರ ದನಿಯಲ್ಲಿನ ಮಾದಕತೆ, ಜಿ.ಕೆ. ವೆಂಕಟೇಶ್ ಅವರ ಮಧುರ ಸಂಗೀತ ಈ ಗೀತೆಯನ್ನು ಸೂಪರ್ ಹಿಟ್ ಹಾಡಾಗಿಸಿತು.
ಇಷ್ಟೇ ನೋಡಿ ಆ ಹಾಡಿನ ಕಥೆ ಎನ್ನುತ್ತಾ ಮಾತು ಮುಗಿಸಿದರು ಗೀತಪ್ರಿಯ.

ಮೊದಲ ಸಾಲು ಹಾಡಿದವರಿಗೆ, ಎರಡನೇ ಸಾಲು ಬರೆದವರಿಗೆ!

ಜನವರಿ 25, 2011

 

 

 

 

 

 

 

 

 

 

ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ

ಚಿತ್ರ: ಸಂಗಮ. ಗೀತೆರಚನೆ: ಸಿ.ವಿ. ಶಿವಶಂಕರ್
ಸಂಗೀತ: ಸುಖದೇವ್. ಗಾಯನ: ಪಿ.ಬಿ. ಶ್ರೀನಿವಾಸ್-ಸಿ.ಕೆ. ರಮಾ.

ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ
ಭಿಕ್ಷುಕನಾದರೂ ಕನ್ನಡ ನಾಡಲ್ಲೆ ಮಡಿವೆ
ಸಿರಿವಂತಳಾದರೂ ಕನ್ನಡ ನಾಡಲ್ಲೆ ಮೆರೆವೆ
ಭಿಕ್ಷುಕಿಯಾದರೂ ಕನ್ನಡ ನಾಡಲ್ಲೆ ಮಡಿವೆ ||ಪ||

ಸಂಗೀತ ಕಲೆ ಮೆಚ್ಚಿ ವೀಣೆಯ ಹಿಡಿದೊಡೆ
ಶೃಂಗೇರಿ ಶಾರದೆಯ ಮಡಿಲಲ್ಲಿ ನಲಿವೆ
ವೀರ ಖಡ್ಗವ ಝಳಪಿಸುವ ವೀರ ನಾನಾದೊಡೆ
ಚಾಮುಂಡಾಂಬೆಯ ಕರದಲ್ಲಿ ಹೊಳೆವೆ ||೧||

ಶರಣರಿಗೆ ವಂದಿಪ ಶರಣೆ ನಾನಾದೊಡೆ
ವಚನವೆ ಬದುಕಿನ ಮಂತ್ರವೆನುವೆ
ವೀರಗೆ ವಂದಿಪ ಶೂರ ನಾನಾದೊಡೆ
ಕಲ್ಲಾಗಿ ಹಂಪೆಯಲಿ ಬಹುಕಾಲ ನಿಲುವೆ ||೨||

ದಾಸರಿಗೆ ವಂದಿಪ ಅಭಿಮಾನಿಯಾದೊಡೆ
ಕನ್ನಡ ಸಾಹಿತ್ಯ ನನ್ನಾಸೆ ಎನುವೆ
ಪುಣ್ಯನದಿಯಲಿ ಮೀಯುವೆನಾದೊಡೆ
ಕಾವೇರಿ ತುಂಗೆಯ ಮಡಿಲಲ್ಲಿ ನಲಿವೆ ||೩||

ಇನ್ನೊಮ್ಮೆ ಮರುಜನ್ಮ ಪಡೆಯುವೆನಾದರೆ
ಕನ್ನಡದ ಮಣ್ಣಲ್ಲಿ ಮಣ್ಣಾಗಿ ನಿಲುವೆ.

ವಿಚಿತ್ರ, ಆದರೂ ಸತ್ಯ ಎಂದು ಹೇಳಬಹುದಾದ ಮೂರು ಸಂಗತಿ ಗಳಿವೆ. ಮೊದಲನೆಯದು- ಒಂದು ಹಾಡನ್ನು ಸಭೆ-ಸಮಾ ರಂಭಗಳಲ್ಲಿ ಎದೆತುಂಬಿ ಹಾಡಿದ ಗಾಯಕನೊಬ್ಬ, ಆ ಗಾಯ ನಕ್ಕೆ ಭಕ್ಷೀಸಿನ ರೂಪದಲ್ಲಿ ಬಂದ ಹಣದಿಂದಲೇ ಒಂದು ಮನೆ ಕಟ್ಟಿಕೊಂಡ! ಎರಡನೆಯದು-ಆ ಹಾಡು ಬರೆದ ಚಿತ್ರ ಸಾಹಿತಿ ಮಾತ್ರ ಬಡವನಾಗಿಯೇ ಉಳಿದ! ಮೂರನೆಯದು-ಕನ್ನಡದ ಸೂಪರ್‌ಹಿಟ್ ಗೀತೆಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಹಾಡನ್ನು ಒಳಗೊಂಡಿರುವ ಸಿನಿಮಾ ಇನ್ನೂ ಬಿಡುಗಡೆಯ ಭಾಗ್ಯವನ್ನೇ ಕಂಡಿಲ್ಲ!
ಅಮ್ಮನ ಜೋಗುಳದಂತೆ, ಗೆಳತಿಯ ಕಾಲ್ಗೆಜ್ಜೆ ದನಿಯಂತೆ, ಕಂದನ ನಗೆಯಂತೆ ಮತ್ತು ಅಪ್ಪ ಹೇಳಿದ ಕಥೆಯಂತೆ ಈ ವಾರ ನಿಮ್ಮೆದುರು ತೆರೆ ದುಕೊಳ್ಳಲಿರುವುದು-‘ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ/ ಭಿಕ್ಷುಕನಾದರೂ ಕನ್ನಡ ನಾಡಲ್ಲೆ ಮಡಿವೆ’ ಎಂಬ ಹಾಡಿನ ಚರಿತೆ. ಈ ಅಪರೂಪದ, ಅನುಪಮ ಗೀತೆ ಬರೆದವರು ಸಿ.ವಿ. ಶಿವಶಂಕರ್.
ಬಹುಮಂದಿಗೆ ಗೊತ್ತಿರಲಿಕ್ಕಿಲ್ಲ; ಕನ್ನಡದ ಶ್ರೇಷ್ಠ ಕವಿಗಳಲ್ಲಿ ಒಬ್ಬರಾದ ಲಕ್ಷ್ಮಣರಾವ್ ಹೊಯಿಸಳ ಅವರ ಅಳಿಯ ಸಿ.ವಿ. ಶಿವಶಂಕರ್. ಚಿತ್ರ ನಿರ್ದೇಶಕ ಹುಣಸೂರು ಕೃಷ್ಣಮೂರ್ತಿಯವರ ಗರಡಿಯಲ್ಲಿ ಪಳಗಿದ ಶಿವಶಂಕರ್, ನಟ, ನಿರ್ಮಾಪಕ, ನಿರ್ದೇಶಕ, ಸಂಭಾಷಣೆಕಾರ, ಗೀತೆ ರಚನೆಕಾರ… ಹೀಗೆ ಎಲ್ಲ ಕ್ಷೇತ್ರದಲ್ಲೂ ಕೈಯಾಡಿಸಿ ಗೆದ್ದವರು. ಕನ್ನಡ ನಾಡು-ನುಡಿಯ ವೈಭವ ಸಾರುವ ಹಾಡುಗಳನ್ನು ಹೆಚ್ಚಾಗಿ ಬರೆದದ್ದು ಶಿವಶಂಕರ್ ಅವರ ಹೆಗ್ಗಳಿಕೆ. ‘ಸಿರಿವಂತನಾದರೂ ಕನ್ನಡ ನಾಡಲ್ಲಿ ಮೆರೆವೆ’ ಗೀತೆಯನ್ನು ಬರೆದ ಸಂದರ್ಭ ಯಾವುದು? ಆ ಹಾಡು ಹುಟ್ಟಿದ್ದಾದರೂ ಹೇಗೆ ಎಂಬ ಪ್ರಶ್ನೆಗೆ ಶಿವಶಂಕರ್ ಉತ್ತರಿಸಿದ್ದು ಹೀಗೆ:
‘ಇದು ೭೦ರ ದಶಕದ ಮಾತು. ನಾನಾಗ ‘ಕೂಡಲ ಸಂಗಮ’ ಹೆಸರಿನ ಸಿನಿಮಾ ನಿರ್ಮಾಣ-ನಿರ್ದೇಶನದ ಕನಸು ಕಂಡಿದ್ದೆ. ಕೂಡಲ ಸಂಗಮ ಕ್ಷೇತ್ರ ಸುತ್ತಮುತ್ತ ಶೂಟಿಂಗ್ ಮಾಡಬೇಕೆಂಬುದು ನನ್ನ ಆಸೆಯಾಗಿತ್ತು. ಅದಕ್ಕೂ ಮೊದಲು ಲೋಕೇಶನ್ ನೋಡಿಕೊಂಡು ಬರೋಣವೆಂದು ಅಂಬಾಸಿಡರ್ ಕಾರಿನಲ್ಲಿ ಐದಾರು ಮಂದಿ ಚಿತ್ರ ತಂಡದೊಂದಿಗೆ ಹೊರಟೆ. ಮಾರ್ಗ ಮಧ್ಯೆ ಕಾರಿನ ಟೈರ್ ಪಂಕ್ಚರ್ ಆಯಿತು. ಡ್ರೈವರ್ ಬಳಿ ಸ್ಟೆಫ್ನಿ ಇರಲಿಲ್ಲ. ಸಮೀಪದ ಹಳ್ಳಿಯಲ್ಲಿದ್ದ ಸೈಕಲ್ ಶಾಪ್‌ನಲ್ಲಿ ಪಂಕ್ಚರ್ ಹಾಕಿಸಿಕೊಂಡು ಪಯಣ ಮುಂದುವರಿಸಿ ದೆವು. ಕೂಡಲ ಸಂಗಮ ಕ್ಷೇತ್ರ ಅರ್ಧ ಕಿಲೋಮೀಟರ್ ದೂರವಿದೆ ಎನ್ನುವಾಗ ಮತ್ತೆ ಟೈರ್ ಪಂಕ್ಚರ್ ಆಯ್ತು. ಆದದ್ದಾಗಲಿ ಎಂದುಕೊಂಡು ನಡಿಗೆಯಲ್ಲೇ ದೇವಾಲಯ ತಲುಪಿದೆವು.
ದೇವರ ದರ್ಶನದ ನಂತರ ಒಂದು ಸ್ಥಳದಲ್ಲಿ ಒಬ್ಬನೇ ಕೂತೆ. ಆಗಲೇ, ಕೂಡಲ ಸಂಗಮ ಕ್ಷೇತ್ರದ ಐತಿಹಾಸಿಕ ಹಿನ್ನೆಲೆ, ಬಸವಣ್ಣನವರ ಬದುಕು, ಅವರ ಸರಳತೆ, ಒಂದು ಪಿಡುಗಾಗಿ ಕಾಡುತ್ತಿದ್ದ ಜಾತೀಯತೆ, ಅಸಮಾನತೆಯನ್ನು ತೊಡೆದುಹಾಕಲು ಅವರು ನಡೆಸಿದ ಹೋರಾಟ… ಇದೆಲ್ಲವೂ ಕಣ್ಮುಂದೆ ಬಂತು. ಅದೇ ಸಂದರ್ಭದಲ್ಲಿ ಕನ್ನಡ ನಾಡಿನ ಇತಿಹಾಸ, ವೈಭವವೆಲ್ಲ ಬಿಟ್ಟೂ ಬಿಡದೆ ನೆನಪಾಗತೊಡ ಗಿತು. ಆಗ ನನ್ನೊಳಗೆ ನಾನೇ ಅಂದುಕೊಂಡೆ: ‘ನಮ್ಮ ಕನ್ನಡ ನಾಡು ಯಾರೂ, ಎಂದೂ ಮರೆಯಲಾಗದಂಥ ಪುಣ್ಯಭೂಮಿ. ಮರುಜನ್ಮವೆಂಬುದಿದ್ದರೆ ಆಗಲೂ ಈ ಪುಣ್ಯಭೂಮಿಯಲ್ಲೇ ಹುಟ್ಟಬೇಕು…’
ಇಂಥದೊಂದು ಯೋಚನೆ ಬಂತಲ್ಲ? ಅದೇ ಕ್ಷಣಕ್ಕೆ ಇದ್ದಕ್ಕಿದ್ದಂತೆ ನನ್ನೊಳಗೆ ಈ ಹಾಡಿನ ಸಾಲುಗಳು ಹುಟ್ಟಿಬಿಟ್ಟವು: ‘ಸಿರಿವಂತನಾದರೂ ಕನ್ನಡನಾಡಲ್ಲೆ ಮೆರೆವೆ/ ಭಿಕ್ಷುಕನಾದರೂ ಕನ್ನಡ ನಾಡಲ್ಲೆ ಮಡಿವೆ…’ ಹಾಡಿನ ಪಲ್ಲವಿಯ ಜತೆ ಜತೆಗೇ ಒಂದು ಚರಣಕ್ಕೆ ಆಗುವಷ್ಟು ಸಾಲು ಗಳೂ ಹೊಳೆದವು. ಹೀಗೆ ಹಾಡು -ಚರಣ ಬರೆದ ಹಾಳೆಯನ್ನು ಅರ್ಚಕರಿಗೆ ಕೊಟ್ಟು, ಇದನ್ನು ಸಂಗಮನಾಥನ ಲಿಂಗದ ಮೇಲಿಟ್ಟು ಅರ್ಚನೆ ಮಾಡಿಕೊಡಿ ಎಂದು ಬೇಡಿಕೊಂಡೆ. ಅವರು ಹಾಗೇ ಮಾಡಿ ದರು. ಸಿನಿಮಾದ ಹೆಸರನ್ನು ‘ಸಂಗಮ’ ಎಂದು ಬದಲಿಸಿಕೊಂಡೆ.
ಹೊಸ ಸಿನಿಮಾ ಹೇಗಿರಬೇಕು ಎಂದು ಲೆಕ್ಕಾಚಾರ ಹಾಕಿಕೊಂಡು ಬೆಂಗಳೂರಿಗೆ ಹಿಂದಿರುಗಿದೆ. ಆಗಲೇ ಚಿಕ್ಕಬಳ್ಳಾಪುರ ಮೂಲದ ಸುಖದೇವ್ ಎಂಬ ಯುವಕನ ಪರಿಚಯವಾಯಿತು. ಆತನಿಗೆ ಸಂಗೀತ ಸಂಯೋಜನೆ ಗೊತ್ತಿತ್ತು. ಚಿತ್ರರಂಗ ಸೇರ ಬೇಕೆಂಬ ಆಸೆಯೂ ಜತೆಗಿತ್ತು. ಆತನನ್ನು ಸಂಗಮ ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಯಿಸಲು ನಿರ್ಧರಿಸಿದೆ. ಬೆಂಗಳೂ ರಿಗೆ ಬಾರಯ್ಯಾ ಅಂದೆ. ಆತ ತಕ್ಷಣವೇ ಬಂದ. ನನ್ನ ಸಿನಿಮಾ, ಅದರ ಉದ್ದೇಶ ಹಾಗೂ ಹಾಡಿನ ಬಗ್ಗೆ ವಿವರಿಸಿದೆ. ಈ ಹಿಂದೆ ಸಿದ್ಧವಾಗಿತ್ತಲ್ಲ, ಅಷ್ಟನ್ನೇ ಅವನ ಮುಂದಿಟ್ಟು, ‘ಈ ಹಾಡಿಗೆ ರಾಗ ಸಂಯೋಜನೆ ಮಾಡಪ್ಪಾ’ ಎಂದೆ. ಸುಖದೇವ್ ತುಂಬ ಶ್ರದ್ಧೆಯಿಂದ ರಾಗ ಸಂಯೋಜಿಸಿದ. ಆತನ ರಾಗ ಸಂಯೋಜನೆ ಕೇಳುತ್ತಿದ್ದಂತೆ, ಈತನಿಗೆ ಸಂಗೀತ ಶಾರದೆ ಒಲಿದಿದ್ದಾಳೆ ಎನ್ನಿಸಿತು. ಆ ಸಂತೋಷದಲ್ಲಿ ಶೃಂಗೇರಿ ಶಾರದೆಯ ಸ್ತುತಿಯಂತಿರುವ ಒಂದು ಚರಣ ಹೊಳೆಯಿತು. ಅದನ್ನು ಮೊದಲ ಚರಣವೆಂದು ಸೇರಿಸಿಕೊಂಡೆ.
ಈ ಗೀತೆಯನ್ನು ನಾಯಕ-ನಾಯಕಿ ಹಾಡುವುದೆಂದು ನಿರ್ಧರಿಸ ಲಾಗಿತ್ತು. ನಾಯಕನ ಪಾಲಿನದನ್ನು ಹಾಡಲು ಪಿ.ಬಿ. ಶ್ರೀನಿವಾಸ್ ಇದ್ದರು. ನಾಯಕಿಯ ಪಾಲಿನದನ್ನು ಯಾರಿಂದ ಹಾಡಿಸುವುದು ಎಂದುಕೊಂಡಾಗ ಹೊಳೆದದ್ದು ಉದಯೋನ್ಮುಖ ಗಾಯಕಿ ಸಿ.ಕೆ. ರಮಾ ಅವರ ಹೆಸರು. ಆಕೆಗಿದು ಮೊಟ್ಟ ಮೊದಲ ಸಿನಿಮಾ. ಕೇಳಿದವ ರೆಲ್ಲ ‘ವಾಹ್ ವಾಹ್’ ಎನ್ನಬೇಕು-ಹಾಗೆ ಹಾಡಿಬಿಟ್ಟಳು ರಮಾ. ಧ್ವನಿ ಮುದ್ರಣದ ನಂತರ ಯಾರೆಂದರೆ ಯಾರೂ ನಿರೀಕ್ಷಿಸಿರಲಿಲ್ಲ; ಅಷ್ಟೊಂದು ಜನಪ್ರಿಯವಾಯಿತು ಹಾಡು. ರಾಜ್ಯೋತ್ಸವ ಕಾರ್ಯ ಕ್ರಮಗಳಲ್ಲಿ, ಮೆಚ್ಚಿನ ಚಿತ್ರಗೀತೆಗಳ ಸಂದರ್ಭದಲ್ಲಿ ಈ ಗೀತೆ ಮೊಳಗು ವುದು ಕಡ್ಡಾಯವೇ ಆಗಿಹೋಯಿತು. ಹೀಗಿದ್ದಾಗಲೇ, ಈ ಗೀತೆಯ ಜನಪ್ರಿಯತೆಯನ್ನು ಎನ್‌ಕ್ಯಾಷ್ ಮಾಡಿಕೊಳ್ಳುವ ಉದ್ದೇಶದಿಂದ ಕೊಲಂಬಿಯಾ ಕಂಪನಿಯವರು ಗ್ರಾಮಫೋನ್ ರೆಕಾರ್ಡ್‌ಗಳಲ್ಲಿ ಈ ಹಾಡನ್ನು ಹೊರ ತಂದರು. ಆದರೆ ನನಗೆ ನಯಾಪೈಸೆಯ ಸಂಭಾವನೆ ಕೊಡಲಿಲ್ಲ.
ವಿಪರ್‍ಯಾಸಗಳು ಹೇಗಿರುತ್ತವೋ ನೋಡಿ: ‘ಸಿರಿವಂತನಾದರೂ…’ ಹಾಡು ಕನ್ನಡಿಗರ ಮನೆ-ಮನವನ್ನು ಆವರಿಸಿಕೊಂಡಿತು. ರೇಡಿಯೋ ಸಿಲೋನ್‌ನಲ್ಲಿ ವಾರಕ್ಕೊಮ್ಮೆಯಂತೆ ವರ್ಷಗಳ ಕಾಲ ತಪ್ಪದೇ ಪ್ರಸಾರ ವಾಯಿತು. ಆದರೆ, ಅನಿವಾರ್ಯ ಕಾರಣಗಳಿಂದ ‘ಸಂಗಮ’ ಸಿನಿ ಮಾದ ಕೆಲಸ ಆರಂಭವಾಗಲೇ ಇಲ್ಲ. ಮುಂದೆ ನಾನು ಇಳಕಲ್‌ನ ಮಹಾಂತ ಶಿವಯೋಗಿಗಳ ಮಹಿಮೆ ಸಾರುವ ‘ಮಹಾತಪಸ್ವಿ’ ಹೆಸ ರಿನ ಸಿನಿಮಾ ತಯಾರಿಗೆ ನಿಂತೆ ನಿಜ. ಆದರೆ ಆ ಚಿತ್ರದಲ್ಲಿ ‘ಸಂಗಮ’ದ ಹಾಡಿಗೆ ‘ಸೂಕ್ತ ಸ್ಥಳ’ ಇರಲಿಲ್ಲ. ಈ ಬೇಸರದ ಮಧ್ಯೆ ನಾನಿದ್ದಾಗಲೇ, ಈ ಹಾಡನ್ನು ಆಕಾಶವಾಣಿ ಹಾಗೂ ವೇದಿಕೆಗಳಲ್ಲಿ ಹಾಡಿ ಜನರಿಂದ ಕಾಣಿಕೆ ಪಡೆದು, ಆ ಹಣದಿಂದಲೇ ಗುಲಬರ್ಗಾದ ಗಾಯಕನೊಬ್ಬ ಮನೆ ಕಟ್ಟಿಸಿಕೊಂಡ ಎಂಬ ಸುದ್ದಿ ಬಂತು. ಕೆಲದಿನಗಳ ನಂತರ ಆ ಗಾಯಕನೇ ನನ್ನನ್ನು ಹುಡುಕಿಕೊಂಡು ಬಂದ. ಒತ್ತಾಯದಿಂದ ತನ್ನ ಮನೆಗೆ ಕರೆದೊಯ್ದ. ತನ್ನ ಮನೆಗೆ ಆತ ‘ಸಿರಿವಂತ’ ಎಂದೇ ಹೆಸರಿಟ್ಟಿದ್ದ. ಮನೆಯ ಹೆಸರಿನ ಫಲಕದ ಮೇಲೆ ಕೈಯಾಡಿಸುತ್ತಾ- ‘ಸ್ವಾಮಿ, ನಿಮ್ಮ ಹಾಡಿಂದ ನಾನು ಬದುಕು ಕಟ್ಟಿಕೊಂಡೆ’ ಎಂದು ಕೈಮುಗಿದ. ನಾನು ತಕ್ಷಣವೇ ಹೇಳಿದೆ: ‘ಈ ಹಾಡಿನ ಮೊದಲ ಸಾಲು-ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ’-ಅದು ನಿನ್ನದು. ಎರಡನೇ ಸಾಲು- ‘ಭಿಕ್ಷುಕನಾದರೂ ಕನ್ನಡ ನಾಡಲ್ಲೆ ಮಡಿವೆ’ ಎಂದಿದೆ; ಅದು ನನ್ನದು!’
ಮುಂದೆ ಹಣಕಾಸಿನ ತೊಂದರೆಯ ಕಾರಣದಿಂದ ‘ಸಂಗಮ’ ಸಿನಿಮಾ ಶುರುವಾಗಲೇ ಇಲ್ಲ. ಆದರೆ ಹಾಡು ದಿನದಿನಕ್ಕೂ ಜನಪ್ರಿಯ ವಾಗುತ್ತಲೇ ಹೋಯಿತು. ಈ ಸಂದರ್ಭದಲ್ಲೇ ರೀಮಿಕ್ಸ್ ಕೆಲಸ ಶುರುವಾಯಿತಲ್ಲ? ಆಗ ಕೆಲ ಗಾಯಕರು-ಕ್ಯಾಸೆಟ್ ಕಂಪನಿಗಳು ಸೇರಿ ಕೊಂಡು ನನ್ನ ಹಾಡನ್ನು ಮತ್ತೆ ಧ್ವನಿಮುದ್ರಿಸಿಕೊಂಡು – ದುಡ್ಡು ಮಾಡಿಕೊಂಡರು. ಆದರೆ, ಯಾರೊಬ್ಬರೂ ಹಾಡಿನ ಪುನರ್ ಬಳಕೆಯ ಬಗ್ಗೆ ನನ್ನ ಅನುಮತಿ ಕೇಳಲಿಲ್ಲ. ಸಂಭಾವನೆ ಯನ್ನೂ ಕೊಡಲಿಲ್ಲ. ಹಾಡು ಅಮರವಾಯಿತು. ಹಾಡಿದವರು ಶ್ರೀಮಂತರಾದರು. ಆದರೆ ಹಾಡು ಬರೆದ ನಾನು ಬಡವನಾಗಿಯೇ ಉಳಿದುಹೋದೆ’. ಒಂದು ತೆರನಾದ ಸಂಕಟದಿಂದಲೇ ಮಾತು ನಿಲ್ಲಿಸಿದರು ಶಿವಶಂಕರ್.
***
ಒಂದು ಸ್ವಾರಸ್ಯ ಕೇಳಿ: ಈ ಎಲ್ಲ ನೋವು, ನಿರಾಸೆ, ಸಂಕಟಗಳಿಂದ ಶಿವಶಂಕರ್‌ನೊಂದಿದ್ದಾರೆ ನಿಜ. ಆದರೆ ಹತಾಶರಾಗಿಲ್ಲ. ‘ಸಿರಿವಂತನಾ ದರೂ…’ ಹಾಡನ್ನು ಹೇಗಾದರೂ ಮಾಡಿ ಕನ್ನಡಿಗರಿಗೆ ತೋರಿಸಬೇಕು ಎಂಬುದು ಅವರ ಮಹದಾಸೆ. ಅದಕ್ಕೆಂದೇ ಅವರು ‘ಕನ್ನಡ ಕುವರ’ ಹೆಸರಿನ ಸಿನಿಮಾ ತಯಾರಿಸಿದ್ದಾರೆ. ಅದರಲ್ಲಿ ಪಿ.ಬಿ.ಎಸ್.-ರಮಾ ದನಿಯಿರುವ ‘ಸಿರಿವಂತನಾದರೂ…’ ಗೀತೆಯನ್ನು ಬಳಸಿಕೊಂಡಿದ್ದಾರೆ. ಕನ್ನಡ ಭಾಷಾಭಿಮಾನದ ಕಥೆ ಹೊಂದಿರುವ ಈ ಚಿತ್ರ ಆರ್ಥಿಕ ಸಮಸ್ಯೆಯಿಂದ ‘ಡಬ್ಬಾ’ದಲ್ಲಿಯೇ ಉಳಿದುಹೋಗಿದೆ. ಕರ್ನಾಟಕ ಸರಕಾರದ ‘ಅನುಗ್ರಹ’ ಸಿಗದಿದ್ದರೆ ಈ ಸಿನಿಮಾ ತೆರೆಕಾಣಲು ಸಾಧ್ಯವೇ ಇಲ್ಲ. ನಾಡಿನ ಮಹಿಮೆ ಸಾರುವ ಈ ಅಪರೂಪದ ಗೀತೆಯನ್ನು ‘ಕಾಣುವ’ ನೆಪದಿಂದಾದರೂ ಈ ಸಿನಿಮಾಕ್ಕೆ ಆರ್ಥಿಕ ನೆರವು ನೀಡ ಬಾರದೆ? ವೇದಿಕೆಯ ಮೇಲೆ ಕನ್ನಡದ ಉದ್ಧಾರಕ್ಕೆ ಕೋಟಿ ಕೋಟಿ ಖರ್ಚು ಮಾಡುವುದಾಗಿ ಹೇಳುವ ನಮ್ಮ ಮಂತ್ರಿಗಳು, ಅಕಾರಿಗಳಿಗೆ ಈ ಹಾಡು ಮತ್ತು ಅದರ ಹಿಂದಿನ ಕತೆ ಈಗಲಾದರೂ ಕೇಳಿಸಲಿ. ಹಾಡು ಬರೆದಾತನ ಎದೆಯಾಳದ ಸಂಕಟ ಅರ್ಥವಾಗಲಿ.
ಹೌದಲ್ಲವಾ? ‘ಸಿರಿವಂತನಾದರೂ….’ ಹಾಡು ಕೇಳಿದಾಗೆಲ್ಲ ಖುಷಿ ಯಾಗುತ್ತದೆ. ಕಣ್ತುಂಬಿ ಬರುತ್ತದೆ. ಈ ಹಾಡು ಬರೆದಾತನನ್ನು ಒಮ್ಮೆ ಮಾತಾಡಿಸಬೇಕು, ಅಭಿನಂದಿಸಬೇಕು ಎಂಬ ಆಸೆಯಾಗುತ್ತದೆ. ಅಂಥ ದೊಂದು ಭಾವ ನಿಮ್ಮ ಕೈ ಹಿಡಿದರೆ ೯೯೦೧೮ ೦೪೦೦೬ಕ್ಕೆ ಪೋನ್ ಮಾಡಿ. ಈ ನಂಬರಿನಲ್ಲಿ ಶಿವಶಂಕರ್ ಸಿಗುತ್ತಾರೆ. ಒಂದು ಮೆಚ್ಚು ಮಾತು ಕೇಳಿದರೆ ಆ ಹಿರಿಯ ಜೀವಕ್ಕೆ ಖುಷಿಯಾಗುತ್ತದೆ. ಮಾತಾಡಿದ ನಂತರ ಆ ಖುಷಿ ನಿಮ್ಮದೂ ಆಗುತ್ತದೆ!

ಈ ಹಾಡಲ್ಲಿ ಎಷ್ಟೋ ಮನೆಯ ತಾಯ್ತಂದೆಯರ ಸಂಕಟದ ಮಾತುಗಳಿವೆ…

ಜನವರಿ 13, 2011

 

 

 

 

 

 

 

 

 

 

ಕೇಳು ಸಂಸಾರದಲ್ಲಿ ರಾಜಕೀಯ

ಚಿತ್ರ: ಮಾತೃದೇವೋಭವ. ಸಂಗೀತ: ಹಂಸಲೇಖ.
ಗಾಯಕ: ಸಿ. ಅಶ್ವತ್ಥ್. ರಚನೆ: ಸು. ರುದ್ರಮೂರ್ತಿ ಶಾಸ್ತ್ರಿ

ಕೇಳು ಸಂಸಾರದಲ್ಲಿ ರಾಜಕೀಯ
ತಾನು ತನ್ನ ಮನೆಯಲ್ಲೆ ಪರಕೀಯ
ಇಲ್ಲಿ ಅತ್ತಿಯ ಹಣ್ಣು ಬಿಚ್ಚಿ ನೋಡಿದರೆ
ಬರಿ ಹುಳುಕು ತುಂಬಿಹುದು ಕೇಳೊ ದೊರೆ ||ಪಲ್ಲವಿ||

ಎಲ್ಲರು ಒಟ್ಟಿಗೆ ಓಟನು ನೀಡಿ, ಕೊಡುವರು ನಾಯಕ ಪಟ್ಟ
ನಂತರ ಅವನನೆ ಕಿತ್ತು ತಿನ್ನುತ, ಹಿಡಿವರು ಆತನ ಜುಟ್ಟ;
ನಾನೊಂದು ಲೆಕ್ಕದ ಬುಕ್ಕು, ನೂರೆಂಟು ವೆಚ್ಚದ ಚೆಕ್ಕು
ಸೋಮಾರಿ ಮಕ್ಕಳ ‘ಕುಕ್ಕು’, ನನಗೀಗ ದೇವರೆ ದಿಕ್ಕು ||೧||

ಮಮತೆಯ ತುಂಬಿದ ನೀರು ಉಣಿಸಿದೆ, ಬೆಳಸಿದೆ ಹೂವಿನ ತೋಟ
ಅರಳಿದ ಸುಂದರ ಹೂವುಗಳೆಲ್ಲ, ಗಾಳಿಗೆ ತೂಗುವ ಆಟ;
ನೋಡುತಾ ಸಂತಸಗೊಂಡೆ, ಜೀವನವು ಸಾರ್ಥಕವೆಂದೆ
ಹೂವುಗಳೆ ಮುಳ್ಳುಗಳಾಗಿ, ಚುಚ್ಚಿದರೆ ನೋವನು ತಿಂದೆ
ಬಾಳು ಮೆತ್ತನೆ ಹುತ್ತದಂತೆ ಅಲ್ಲವೇನು
ಅಲ್ಲಿ ಮುಟ್ಟಲು ಹಾವು ಕಚ್ಚಿ ನೊಂದೆ ನೀನು||೨||

ಹಾಸಿಗೆಯನ್ನು ಪಡೆದವರೆಲ್ಲರು, ಕೊಟ್ಟರು ಮುಳ್ಳಿನ ಚಾಪೆ
ಮಕ್ಕಳ ಪಡೆದ ಒಂದೇ ತಪ್ಪಿಗೆ, ಜೀವನ ಚಿಂದಿಯ ತೇಪೆ;
ಭಾಷಣವ ಮಾಡುವರೆಲ್ಲ, ನನಗಂತು ಬಾಯೇ ಇಲ್ಲ
ಅದರೂ ನಾ ಯಜಮಾನ, ಹೇಗಿದೆ ನನ್ನಯ ಮಾನ ||೩||

ಚಿನ್ನದ ಸೂಜಿಯು ಕಣ್ಣು ಚುಚ್ಚಿತು, ಚಿಮ್ಮಿತು ನೆತ್ತರ ನೀರು
ಮೆತ್ತನೆ ಕತ್ತಿಯು ಎದೆಯ ಇರಿದರೆ, ನೋವನು ಅಳೆಯುವರಾರು?
ಅಕ್ಕರೆಯ ಸಕ್ಕರೆ ತುಂಬಿ, ಮಕ್ಕಳನು ಸಾಕಿದೆ ನಂಬಿ
ಸಿಹಿಯೆಲ್ಲ ಕಹಿಯಾದಾಗ, ಬಾಳೊಂದು ದುಃಖದ ರಾಗ!
ಅಂದು ಮುತ್ತಿನ ಮಾತುಗಳ ಹೇಳಿದರು
ಇಂದು ಮಾತಿನ ಈಟಿಯಿಂದ ಮೀಟಿದರು||೪||

ನಟರಾದ ಜೈ ಜಗದೀಶ್ ಹಾಗೂ ಶ್ರೀನಿವಾಸಮೂರ್ತಿ ಸೇರಿ ಕೊಂಡು ಆರಂಭಿಸಿದ ನಿರ್ಮಾಣ ಸಂಸ್ಥೆ ಜೈಶ್ರೀ ಕಂಬೈನ್ಸ್. ಈ ಸಂಸ್ಥೆ ತಯಾರಿಸಿದ ಮೊದಲ ಸಿನಿಮಾ-ಮಾತೃದೇವೋಭವ. ಮಕ್ಕಳಿಂದ ನಿರ್ಲಕ್ಷ್ಯಕ್ಕೆ ಒಳಗಾದ ತಂದೆ-ತಾಯಿಗಳ ಸಂಕಟವನ್ನು ವಿವರಿಸುವ ಗೀತೆಯೊಂದು ಈ ಚಿತ್ರದಲ್ಲಿದೆ. ಅದೇ-‘ಕೇಳು ಸಂಸಾರ ವೊಂದು ರಾಜಕೀಯ, ತಾನು ತನ್ನ ಮನೆಯಲ್ಲೆ ಪರಕೀಯ…’ ಗಾಯಕ ಸಿ. ಅಶ್ವತ್ಥ್ ತಮ್ಮ ವಿಶಿಷ್ಟ ದನಿಯಲ್ಲಿ ಹಾಡಿರುವ ಈ ಗೀತೆ ಮಾತೃದೇವೋಭವ ಚಿತ್ರಕ್ಕೆ ಒಂದು ವಿಲಕ್ಷಣ ಮೆರುಗು ತಂದು ಕೊಟ್ಟಿದ್ದು ನಿಜ. ಈಗ ಹೇಳಲಿರುವುದು ಹಾಡು ಹುಟ್ಟಿದ ಕಥೆಯಲ್ಲ; ಈ ಸಿನಿಮಾದ ಕಥೆ ನಿರ್ಮಾಪಕರಿಗೆ ಹೇಗೆ ದಕ್ಕಿತು ಎಂಬ ವಿವರ! ವಿಶೇಷ ಏನೆಂದರೆ, ಈ ಸಿನಿಮಾ ಕಥೆ ಸಿಕ್ಕಿದ ವಿವರಣೆಯೂ ಈ ಹಾಡಿನ ಸೃಷ್ಟಿಗೆ ಪರೋಕ್ಷವಾಗಿ ಕಾರಣವಾಯಿತು!
ಈ ಸಿನಿಮಾ ಕಂ ಹಾಡಿನ ಕಥೆಯನ್ನು ವಿವರಿಸಿದವರು ನಟ ಶ್ರೀನಿವಾಸಮೂರ್ತಿ. ಅದು ಹೀಗೆ: ‘ಚಿತ್ರನಟ ಅನ್ನಿಸಿಕೊಳ್ಳುವ ಮೊದಲು ನಾನು ಗುರುರಾಜಲು ನಾಯ್ದು ಅವರ ಹರಿಕಥೆ ತಂಡ ದಲ್ಲಿದ್ದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿದ್ದ ಬಿ.ಸಿ. ವೆಂಕಟಪ್ಪ ಕೂಡ ನಾಯ್ಡು ಅವರ ಹರಿಕಥೆ ತಂಡದಲ್ಲಿದ್ರು. ನಾವು ಆಗ ಆರ್.ಡಿ. ಕಾಮತ್ ಅವರ ‘ಮಾತೃ ದೇವೋಭವ ಎಂಬ ಸಾಂಸಾರಿಕ ನಾಟಕ ಆಡುತ್ತಿದ್ದೆವು. ನಮ್ಮದೇ ನಿರ್ಮಾಣದಲ್ಲಿ ಸಿನಿಮಾ ತಯಾರಿಸಬೇಕು ಅಂದುಕೊಂಡಾಗ ತಕ್ಷಣವೇ ನೆನಪಾದದ್ದು ‘ಮಾತೃದೇವೋಭವ’. ಅದರಲ್ಲಿ ಫ್ಯಾಮಿಲಿ ಸೆಂಟಿಮೆಂಟ್ ಇತ್ತು. ಸದಭಿರುಚಿಯೂ ಇತ್ತು. ಹಾಗಾಗಿ ಅದನ್ನೇ ಸಿನಿಮಾ ಮಾಡೋಣ ಅಂದುಕೊಂಡೆ. ನಟ ಜೈಜಗದೀಶ್‌ಗೆ ಕಥೆ ಹೇಳಿದೆ. ಅವರು- ‘ತುಂಬಾ ಚೆನ್ನಾಗಿದೆ. ಇದನ್ನೇ ಸಿನಿಮಾ ಮಾಡುವಾ’ ಅಂದರು. ಚಿತ್ರಕ್ಕೆ ನಟ-ನಟಿಯರು, ತಂತ್ರಜ್ಞರ ಆಯ್ಕೆಯೂ ಮುಗಿಯಿತು. ಸಂಗೀತ ನಿರ್ದೇಶನದ ಜವಾಬ್ದಾರಿ ಯನ್ನು ಹಂಸಲೇಖಾ ಹೊತ್ತುಕೊಂಡರು. ಕಥೆ ನನಗೇ ಗೊತ್ತಿತ್ತಲ್ಲ? ಅದನ್ನೇ ಸಿನಿಮಾಕ್ಕೆ ಒಗ್ಗುವಂತೆ ಮಾರ್ಪಡಿಸಿಕೊಂಡೆವು. ಚಿತ್ರಕಥೆ ಸಂಭಾಷಣೆಯೂ ಸಿದ್ಧವಾಯಿತು. ಕಂಠೀರವ ಸ್ಟುಡಿಯೋದಲ್ಲಿ ಸೆಟ್ ಹಾಕಿಸಿ ಚಿತ್ರೀಕರಣ ನಡೆಸುವುದೆಂದೂ ನಿರ್ಧಾರವಾಯಿತು.
ಎಲ್ಲವೂ ರೆಡಿಯಾಗೇ ಇತ್ತು. ಆದರೆ, ನಾಟಕವನ್ನು ಸಿನಿಮಾ ಮಾಡಲು ಕಾಮತ್ ಅವರಿಂದ ಒಪ್ಪಿಗೆ ಪತ್ರ ಪಡೆಯಬೇಕಿತ್ತು. ನನಗೆ ಗೊತ್ತಿದ್ದಂತೆ ಕಾಮತ್‌ರು ಬಾಂಬೆಯಲ್ಲಿದ್ರು. ಆದರೆ ನನ್ನಲ್ಲಿ ಅವರ ವಿಳಾಸವಾಗಲಿ, ಫೋನ್ ನಂಬರ್ ಆಗಲಿ ಇರಲಿಲ್ಲ. ಮಂಗಳೂರಿನಲ್ಲಿ ಕಾಮತ್‌ರ ಮಗಳು ಇರುವುದು ಗೊತ್ತಿತ್ತು. ಆಕೆಯನ್ನು ಸಂಪರ್ಕಿಸಿ ವಿಷಯ ತಿಳಿಸಿದೆ. ನಿಮ್ಮ ತಂದೆಯವರಿಂದ ನಾಟಕದ ರೈಟ್ಸ್ ತಗೋಬೇಕು ಅಂತಾನೇ ಬಾಂಬೆಗೆ ಹೋಗಲು ಸಿದ್ಧನಾಗಿದ್ದೀನಿ. ಅಡ್ರೆಸ್ ಕೊಡ್ತೀರಾ ಮೇಡಂ?’ ಎಂದೆ.
‘ ಕ್ಷಮಿಸಿ ಸಾರ್. ನಮ್ಮ ತಂದೆ ಈಗ ಬಾಂಬೆಯಲ್ಲಿಲ್ಲ. ಅಂಕೋಲಾ ದಲ್ಲಿ ಇದ್ದಾರೆ. ಅಪ್ಪನ ಜತೆಗೆ ಅಮ್ಮನೂ ಅಂಕೋಲಾದಲ್ಲಿ ಇದ್ದಾರೆ. ಆದರೆ ಅಂಕೋಲೆಯಲ್ಲಿ ಎಲ್ಲಿದ್ದಾರೆ ಅಂತ ನನಗೆ ಗೊತ್ತಿಲ್ಲ. ಅಂಕೋಲಾ ಚಿಕ್ಕ ಊರು. ಹಾಗಾಗಿ ಅವರನ್ನು ಹುಡುಕೋದು ಕಷ್ಟ ಆಗಲಾರದು’ ಎಂದು ಕಾಮತ್‌ರ ಮಗಳು ಹೇಳಿದ್ರು.
ನಾನು ಕಾಮತ್‌ರನ್ನು ಪ್ರತ್ಯಕ್ಷ ನೋಡಿರಲಿಲ್ಲ. ಆದರೆ ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾಗಿದ್ದ ವೆಂಕಟಪ್ಪ ಅವರಿಗೆ ಕಾಮತ್‌ರ ಪರಿಚಯವಿತ್ತು. ಅವರೊಂದಿಗೆ ಸಲುಗೆಯೂ ಇತ್ತು. ನಾನೂ ಬರ್‍ತೀನಿ ನಡೀರಿ ಮೂರ್ತಿಗಳೇ ಅಂದ್ರು ವೆಂಕಟಪ್ಪ. ಅವರನ್ನೂ ಕರೆದುಕೊಂಡೇ ನಾನು ಅಂಕೋಲಾ ಬಸ್ ಹತ್ತಿದೆ.
ಅಂಕೋಲದಲ್ಲಿ ನನಗಾಗಲಿ, ಶಂಕರಪ್ಪ ಅವರಿಗಾಗಲಿ ಅತ್ಯಾಪ್ತ ರೆಂದು ಹೇಳಿಕೊಳ್ಳಲು ಯಾರೂ ಇರಲಿಲ್ಲ. ಆದರೂ ನಾನು ಭಂಡ ಧೈರ್ಯದಿಂದ ಅಲ್ಲಿಗೆ ಹೋಗಿದ್ದೆವು. ಅಲ್ಲಿ ಒಂದು ತಮಾಷೆ ನಡೆಯಿತು. ಬಸ್‌ನಲ್ಲಿ ಅಂಕೋಲದವರೇ ಆಗಿದ್ದ ಮೋಹನ್ ಬಾಸ್ಕೋಡ್ ಎಂಬಾತ ತಾವಾಗಿಯೇ ಬಂದು ಪರಿಚಯ ಹೇಳಿಕೊಂಡ್ರು. ಅವರ ಸೋದರ ಮಾವ, ಥೇಟ್ ನನ್ನ ಥರಾನೇ ಇದ್ದರಂತೆ. ಆ ಸೆಂಟಿಮೆಂಟ್‌ನ ಮೇಲೆ-‘ನೀವು ನಮ್ಮ ಮನೆಗೆ ಬರಬೇಕು. ನಮ್ಮಲ್ಲೇ ಉಳಿಯಬೇಕು’ ಎಂದು ಒತ್ತಾಯಿಸಿದರು ಮೋಹನ್. ಅಪರಿಚಿತ ಜಾಗ ದಲ್ಲಿ ಪರಿಚಿತರೊಬ್ಬರು ಸಿಕ್ಕಿದ್ರಲ್ಲ ಎನಿಸಿ ನಾವೂ ಒಪ್ಪಿದೆವು. ನಾವು ಬಂದಿರುವ ಉದ್ದೇಶವನ್ನೂ ವಿವರಿಸಿದೆವು. ಆಗ ಮೋಹನ್ ಬಾಸ್ಕೋಡ್ ಹೇಳಿದ್ರು: ‘ನಂದು ಜೀಪ್ ಇದೆ. ನಾಳೆ ಇಡೀ ದಿನ ಅವರನ್ನು ಹುಡುಕೋಣ’.
ಮರುದಿನ ಬೆಳಗ್ಗೆಯೇ ಕಾಮತ್‌ರ ವಿವರಗ ಳನ್ನು ಶಂಕರಪ್ಪ ಅವರು ಮೋಹನ್‌ರಿಗೆ ಹೇಳಿ ದರು. ಮೋಹನ್ ಅದನ್ನು ತಮ್ಮ ಪರಿಚಿತರೆಲ್ಲ ರಿಗೂ ತಿಳಿಸಿದರು. ಇಂಥ ಮುಖ ಚಹರೆಯ ವ್ಯಕ್ತಿಯನ್ನು ನೀವು ಕಂಡಿರಾ ಎಂದು ಸಿಕ್ಕವರನ್ನೆಲ್ಲ ಕೇಳುತ್ತಲೇ ಹೋದೆವು. ಕಡೆಗೆ ಒಬ್ಬರು ಹೇಳಿದರು. ಇಲ್ಲಿಂದ ೧೫ ಕಿ.ಮೀ ದೂರದಲ್ಲಿ ಒಂದು ದೇವಸ್ಥಾನ ಇದೆ. ಅಲ್ಲಿ ನೀವು ಹೇಳಿದಂಥ ಒಬ್ರು ಇದ್ದಾರೆ…’
ಬಾಸ್ಕೋಡ್ ಅವರ ಜೀಪಿನಲ್ಲಿ ನಾವೆಲ್ಲಾ ಆ ದೇವಸ್ಥಾನದ ಬಳಿಗೆ ಹೋದಾಗ ಬೆಳಗಿನ ೧೧ ಗಂಟೆ. ಬಿಸಿಲು ಚುರುಗುಡುತ್ತಿತ್ತು. ಆ ಪ್ರದೇಶದಲ್ಲಿ ಒಂದು ದೇವಾಲಯವಿತ್ತು. ಎದುರಿಗೇ ಒಂದು ಹಳೆಯ ಬಾವಿ. ಅಲ್ಲಿಂದ ಕೂಗಳತೆ ದೂರದಲ್ಲಿ ಒಂದು ಗುಡಿಸಲಿತ್ತು. ಅಷ್ಟು ಬಿಟ್ಟರೆ ಇಡೀ ಪ್ರದೇಶ ಬಟಾಬಯಲು! ಇಂಥ ಜಾಗದಲ್ಲಿ ನನ್ನ ಪ್ರೀತಿಯ ನಾಟಕಕಾರ ಹೇಗಿರಲು ಸಾಧ್ಯ? ನಮಗೆ ಸಿಕ್ಕಿದ ಮಾಹಿ ತಿಯೇ ತಪ್ಪಿರಬೇಕು ಅಂದುಕೊಂಡೆ ನಾನು. ಈ ಸಂದರ್ಭದಲ್ಲೇ ತುಂಡು ಪಂಚೆ ಉಟ್ಟ ವ್ಯಕ್ತಿಯೊಬ್ಬರು ದೇವಾಲಯದ ಮುಂದೆ ಬಂದರು ನೋಡಿ, ಆ ಕ್ಷಣವೇ ನನ್ನ ಜತೆಗಿದ್ದ ಶಂಕರಪ್ಪನವರು-
‘ರೀ ಸ್ವಾಮಿ ಕಾಮತ್ರೇ, ನಿಂತ್ಕೊಳ್ಳಿ, ನಿಂತ್ಕೊಳ್ಳಿ’ ಅಂದರು!
ಈ ಮಾತು ಕೇಳಿದ ಕಾಮತ್ ಗಕ್ಕನೆ ನಿಂತರು. ಎರಡೇ ನಿಮಿಷ ದಲ್ಲಿ ಗೆಳೆಯನ ಗುರುತು ಹಿಡಿದು ಬಾಚಿ ತಬ್ಬಿಕೊಂಡರು. ‘ಸ್ವಲ್ಪ ಮಾತಾಡಲಿಕ್ಕಿದೆ ಕಾಮತ್ರೇ. ನೀವಿರುವ ಗುಡಿಸಲಿಗೆ ಹೋಗೋಣ ನಡೀರಿ’ ಎಂದರು ಶಂಕರಪ್ಪ. ಎಲ್ಲರೂ ಗುಡಿಸಲಿಗೆ ಬಂದೆವು. ಅಲ್ಲಿ ಕಾಮತರ ಪತ್ನಿ ಇದ್ದರು. ಅವರು ಹೇಳಿದ ವಿಷಯ ಕೇಳಿ ನಾನು ಕೂತಲ್ಲೇ ನಡುಗಿದೆ. ಏನೆಂದರೆ ಕಾಮತ್ ಮತ್ತು ಅವರ ಪತ್ನಿ ಇದ್ದ ಗುಡಿಸಲು ಅವರದಾಗಿರಲಿಲ್ಲ. ಅವರಿಗೆ ಅಲ್ಲಿ ಜಮೀನೂ ಇರಲಿಲ್ಲ. ಯಾರದೋ ಗುಡಿಸಲು. ಯಾರದೋ ಜಮೀನು. ಅಲ್ಲಿದ್ದ ಭತ್ತದ ಗದ್ದೆಯ ಬದುವಿನಲ್ಲಿ ಸಿಗುತ್ತಿದ್ದ ಗೆಡ್ಡೆ-ಗೆಣಸು ತಿಂದೇ ಈ ದಂಪತಿ ಬದುಕ್ತಾ ಇದ್ರು. ಬಹುಶಃ ಏನೋ ಆರ್ಥಿಕ ತೊಂದರೆ ಇತ್ತೆಂದು ಕಾಣುತ್ತೆ. ವಿಷಯ ತಿಳಿಸಿದ್ದರೆ ಮಂಗಳೂರಿನಲ್ಲಿದ್ದ ಮಗಳು ಸಹಾಯ ಮಾಡ್ತಿದ್ದಳು. ಆದರೆ, ಮಹಾಸ್ವಾಭಿಮಾನಿಯಾದ ಕಾಮತ್ ಯಾರಿಗೂ ಏನೂ ಹೇಳದೆ ದೇಶಾಂತರ ಹೊರಟವರಂತೆ ಬಂದುಬಿಟ್ಟಿದ್ರು. ಗುಡಿಸಲಿನಲ್ಲಿದ್ದ ಪಾತ್ರೆ ಪಗಡಗಳೆಲ್ಲ ಖಾಲಿ ಖಾಲಿ! ಅವರು ಊಟ ಮಾಡಿ ನಾಲ್ಕು ದಿನ ಆಗಿತ್ತು ಎಂಬ ವಿಷಯ ಕೂಡ ಆಗಲೇ ಗೊತ್ತಾಯ್ತು. ನನ್ನ ಪ್ರೀತಿಯ ನಾಟಕಕಾರ ಇದ್ದ ಸ್ಥಿತಿ ಕಂಡು ಕರುಳು ಕಿವಿಚಿದ ಹಾಗಾಯ್ತು. ತಕ್ಷಣವೇ ಬಾಸ್ಕೋಡ್ ಅವರನ್ನು ಹೊರಡಿಸಿಕೊಂಡು ಅಂಕೋಲಾಕ್ಕೆ ಬಂದೆ. ಅಲ್ಲಿ, ಒಂದು ತಿಂಗಳಿಗೆ ಆಗುವಷ್ಟು ದಿನಸಿ ಸಾಮಾನು ಖರೀದಿಸಿ ವಾಪಸ್ ಕಾಮತರ ಗುಡಿಸಲಿಗೆ ಹೋದೆವು. ಕಾಮತರ ಪತ್ನಿ, ನಮ್ಮನ್ನೇ ಬೆರಗಿನಿಂದ ನೋಡಲು ಶುರು ಮಾಡಿದ್ರು. ಆಗ ಹೇಳಿದೆ. ‘ಅಮ್ಮಾ, ಅಡುಗೆ ಮಾಡಿ. ಎಲ್ರೂ ಜತೇಲಿ ಊಟ ಮಾಡೋಣ…’
ಊಟಕ್ಕೆ ಕೂತ ಕಾಮತ್‌ರು ಸಂತೋಷ, ಭಾವೋದ್ವೇಗ ತಡೆಯ ಲಾಗದೆ ಬಿಕ್ಕಳಿಸಿ ಅಳಲು ಶುರು ಮಾಡಿದ್ರು. ಅವರನ್ನು ಸಮಾಧಾನಿ ಸಿದೆ. ನಂತರ ಹತ್ತು ಸಾವಿರ ರೂಪಾಯಿ ಕೊಟ್ಟು ನಮಸ್ಕಾರ ಮಾಡಿ ಹೇಳಿದೆ: ‘ನಿಮ್ಮ ನಾಟಕವನ್ನು ಸಿನಿಮಾ ಮಾಡ್ತಿದೀನಿ. ಒಪ್ಪಿಗೆ ಕೊಡಿ ಸಾರ್’. ತಕ್ಷಣವೇ ಎರಡು ಬಾಕ್ಸ್‌ಗಳನ್ನು ತಂದ ಕಾಮತರು-‘ಒಪ್ಪಿಗೆ ಕೊಟ್ಟಿದೀನಿ. ಜತೆಗೆ, ಅಲ್ಲಿರೋ ಎಲ್ಲಾ ಪುಸ್ತಕಗಳೂ ನಿಮಗೇ. ತಗೊಂಡು ಹೋಗಿ’ ಎಂದರು.
‘ಶೂಟಿಂಗ್ ನೋಡಲು ಬನ್ನಿ ಸಾರ್’ ಎಂದು ಆಹ್ವಾನಿಸಿದೆ. ಕಾಮತ್‌ರೂ ಒಪ್ಪಿದ್ದರು. ಆದರೆ ದುರಂತ ನೋಡಿ, ಶೂಟಿಂಗ್‌ಗೆ ಒಂದು ವಾರ ಬಾಕಿ ಇದೆ ಅನ್ನುವಾಗ ಹೃದಯಾಘಾತದಿಂದ ಕಾಮತರು ತೀರಿಕೊಂಡ ಸುದ್ದಿ ಬಂತು. ಈ ಬೇಸರದ ಮಧ್ಯೆಯೇ ಗೀತೆರಚನೆಯ ಕೆಲಸ ಶುರುವಾಯ್ತು. ಅದಕ್ಕೆಂದೇ ಶಿವಾನಂದ ಸರ್ಕಲ್ ಬಳಿಯ ಪ್ರಣಾಮ್ ಹೋಟೆಲಿನಲ್ಲಿ ರೂಂ ಮಾಡಿದ್ವಿ. ಈ ಸಂದರ್ಭದಲ್ಲಿಯೇ ದೊಡ್ಡರಂಗೇಗೌಡರ ಮೂಲಕ ಪರಿಚಯ ವಾದವರು ಸು. ರುದ್ರಮೂರ್ತಿ ಶಾಸ್ತ್ರಿ. ‘ಶಾಸ್ತ್ರಿಗಳು ಚೆನ್ನಾಗಿ ಬರೀ ತಾರೆ. ಅವರಿಂದಲೂ ಒಂದು ಹಾಡು ಬರೆಸಿ’ ಅಂದರು ದೊ.ರಂ. ಗೌಡ. ‘ಸರಿ’ ಎಂದು ಶಾಸ್ತ್ರಿಗಳಿಗೆ ಸಿನಿಮಾದ ಸನ್ನಿವೇಶ ವಿವರಿಸಿದೆ. ಅದೇ ಸಂದರ್ಭದಲ್ಲಿ ಕಾಮತ್‌ರನ್ನು ಭೇಟಿ ಮಾಡಿ ಬಂದ ಕಥೆ ಯನ್ನೂ ಹೇಳಿದೆ. ಈ ವೇಳೆಗಾಗಲೇ ದೊಡ್ಡರಂಗೇಗೌಡರ ಕವಿತೆಯ ಮೊದಲ ಎರಡು ಸಾಲು ಬಳಸಿ ಹಂಸಲೇಖಾ ರಾಗ ಸಂಯೋಜನೆ ಮುಗಿಸಿದ್ರು. ಆ ಟ್ಯೂನ್ ಕೇಳಿಸಿಕೊಂಡು ಥೀಮ್ ಸಾಂಗ್ ಬರೆಯ ಬೇಕಿತ್ತು. ಶಾಸ್ತ್ರಿಗಳು ಇಡೀ ಸಂದರ್ಭವನ್ನು ಅನುಭವಿಸಿದವರಂತೆ ಹಾಡು ಬರೆದರು. ಸ್ವಾರಸ್ವವೆಂದರೆ-ಆ ಹಾಡಲ್ಲಿ ಸಿನಿಮಾದ ಸಂದರ್ಭವಿರಲಿಲ್ಲ. ಬದಲಿಗೆ-ಇಡೀ ಭರತ ಖಂಡದ ಮನೆಮನೆಯ ತಾಯ್ತಂದೆಯರ ವಿಷಾದ ಗೀತೆಯಿತ್ತು ಮತ್ತು ಅದೇ ಕಾರಣಕ್ಕೆ ಹಾಡು ಎಂದೆಂದಿಗೂ ಪ್ರಸ್ತುತ ಎಂಬಂತೆ ಆಗಿಹೋಯ್ತು…’
ಇಷ್ಟು ಹೇಳಿ ಹಾಡಿನ ಕಥೆಗೆ ‘ಶುಭಂ’ ಹೇಳಿದರು ಶ್ರೀನಿವಾಸಮೂರ್ತಿ.

ಅವರು-ಏನ್ ಕೇಳಿದ್ರೂ ಕೊಡ್ತೇನೆ ಅಂದರು;ಇವರು -ಅದನ್ನೇ ಹಾಡಾಗಿಸಿದರು!

ಜನವರಿ 6, 2011

ಏನೇ ಕೇಳು ಕೊಡುವೆ ನಿನಗೆ ನಾನೀಗ
ಚಿತ್ರ: ಗೀತಾ. ಗೀತೆರಚನೆ: ಚಿ. ಉದಯಶಂಕರ್
ಸಂಗೀತ: ಇಳಯರಾಜ. ಗಾಯನ: ಎಸ್ಪೀಬಿ-ಎಸ್. ಜಾನಕಿ

ಮಾತು: ‘ಹಲೋ, ಈಸ್ ಇಟ್ ೨೬೨೬೬?’
‘ಯೆಸ್’
‘ಹಾಯ್ ಸಂಜು…’
‘ಹಾಯ್ ಗೀತಾ…’
‘ಸಂಜು, ನಾ ಊಟಿಗೆ ಹೋಗ್ತಿದೀನಿ’
‘ಕಂಗ್ರಾಜುಲೇಷನ್ಸ್, ಯಾವಾಗ?’
‘ನಾಳೆ ಬರ್‍ತೀಯ ತಾನೇ?’

ಹಾಡು: ಏನೇ ಕೇಳು ಕೊಡುವೆ ನಿನಗೆ ನಾನೀಗ
ನಿನ್ನ ಬಯಕೆ ಏನು ಮನದಾಸೆ ಏನು
ಬಾ ಹೇಳು ಕಿವಿಯಲ್ಲಿ
ಏನೇ ಕೇಳು ಕೊಡುವೆ ನಿನಗೆ ನಾನೀಗ ||ಪ||

‘ಬಾಳು ಒಂದಾಟ ದಿನವೂ ಹೊಸ ನೋಟ
ಒಲಿದ ಹುಡುಗ ಜತೆಯಾಗಿರಲು ಸಂತೋಷ’
‘ಬಾಳು ಒಂದಾಟ ದಿನವೂ ಹೊಸನೋಟ
ಒಲಿದ ಹುಡುಗಿ ಜತೆಯಾಗಿರಲು ಸಂತೋಷ’

ಪುಟ್ಟದೊಂದು ಮಾತು ಹೇಳೋ ಆಸೆ ಬಂತು
ಹಗಲು ಇರುಳು ಹೀಗೆ ಸೇರಿ ಜೋಡಿಯಾಗಿ ಹಾಡೋಣ
ಬೇರೆ ಏನು ಬೇಕು ನೀನು ಇರುವಾಗ
ನಿನ್ನ ಜತೆಯೇ ಸಾಕು…ಸವಿನುಡಿಯೇ ಸಾಕು, ಸಾಕು ನಿನ್ನೊಲುಮೆ
ಬೇರೆ ಏನು ಬೇಕು ನೀನು ಇರುವಾಗ? ||೧||

ಹಾ… ಕಣ್ಣುಗಳು ಕಲೆತಾಗ ಮನಸೆರಡು ಬೆರೆತಾಗ
ಮಿಂಚೊಂದು ಮೈಯಲ್ಲಿ ಸಂಚರಿಸಿದಾಗ
ಹೃದಯದಲಿ ಬಿರುಗಾಳಿ ಬೀಸಿಬಂದಂತಾಗಿ
ವಿರಹದುರಿ ಒಡಲಲ್ಲಿ ಸುಡುತಲಿರುವಾಗ
ನಿನ್ನ ಸೇರಿ ಹಾಯಾಗಿರಲು ನಾ ಬಂದೆ
ನಿನ್ನ ಬಯಕೆ ಅರಿತೆ, ಮನದಾಸೆ ತಿಳಿದೆ, ಬಾ ಇನ್ನೂ ಹತ್ತಿರಕೆ ||೨||

ಒಂದು ನೆನಪಾಗಿ, ಒಂದು ನಗುವಾಗಿ, ಒಂದು ಕನಸಾಗಿ, ಒಂದು ಪಾತ್ರವಾಗಿ, ಮರೆಯಲಾಗದ ‘ಚಿತ್ರ’ವಾಗಿ ಕನ್ನಡಿಗರನ್ನು ಬಿಟ್ಟೂ ಬಿಡದೆ ಕಾಡುವ ವ್ಯಕ್ತಿತ್ವ ನಟ ಶಂಕರ್‌ನಾಗ್ ಅವರದು. ಶಂಕರ್‌ನಾಗ್ ಅಂದರೆ ಸಾಕು- ಮನಸು ಮೂಕವಾಗುತ್ತದೆ. ಹೃದಯ ಭಾರವಾಗುತ್ತದೆ. ಹೆಸರೇ ಗೊತ್ತಿಲ್ಲದ ಕೆಲವರು ಶಂಕರ್‌ನಾಗ್ ಕುರಿತು ಮಾತಿಗೆ ನಿಂತಿದ್ದರೆ ಅದನ್ನು ಕೇಳುತ್ತಲೇ ನಿಂತುಬಿಡುವ ಆಸೆಯಾಗುತ್ತದೆ. ಅಂಥ ಸಂದರ್ಭದಲ್ಲೆಲ್ಲ ಮನಸು ಮಾತಾಡುವುದು ಹೀಗೆ: ’Uಛಿ ಞಜಿoo qsಟ್ಠ oeZhZ Zಜ..’
ಶಂಕರ್‌ನಾಗ್ ಸಿನಿಮಾದ ಹಾಡುಗಳ ಹಿಂದಿರುವ ಕಥೆಯನ್ನು ಈ ಅಂಕಣದಲ್ಲಿ ಬರೆಯಲೇಬೇಕು ಎಂದು ಕನಸು ಕಂಡಿದ್ದು ವರ್ಷದ ಹಿಂದೆ. ಆದರೆ ಕನಸು ನನಸಾದದ್ದು ಮಾತ್ರ ಮೊನ್ನೆ ಮೊನ್ನೆ- ಹೊಸ ವರ್ಷದ ಮುಸ್ಸಂಜೆ. ಅವತ್ತು ಆಕಸ್ಮಿಕವಾಗಿ ಸಿಕ್ಕವರು ಶಂಕರ್‌ನಾಗ್ ಅವರ ಜೀವದ ಗೆಳೆಯ ರಮೇಶ್ ಭಟ್. ಭಟ್ಟರು ಅವತ್ತು ಮಾತಾಡುವ ಮೂಡ್‌ನಲ್ಲಿದ್ದರು. ‘ಸಾರ್ ಹಾಡಿನ ಕಥೆ..’ ಅನ್ನುತ್ತಿದ್ದಂತೆಯೇ ‘ಗೀತಾ’ ಸಿನಿಮಾದ ಒಂದು ಹಾಡಿನ ಕಥೆ ಹೇಳಲಾ? ಎಂದವರೇ ಶುರುಮಾಡಿಯೇ ಬಿಟ್ಟರು. ಮಾತು ಮುಂದುವರಿದಿದ್ದು ಹೀಗೆ:
***
ಆಗಷ್ಟೇ ‘ಮಿಂಚಿನ ಓಟ’ ಸಿನಿಮಾ ಬಿಡುಗಡೆಯಾಗಿ ಪ್ರಚಂಡ ಯಶಸ್ಸು ಕಂಡಿತ್ತು. ಆಗಲೇ ಒಂದು ಕಮರ್ಷಿಯಲ್ ಸಿನಿಮಾ ನಿರ್ದೇಶಿಸುವ ಯೋಚನೆಯಲ್ಲಿದ್ದ ಶಂಕರ್. ಅದಕ್ಕೆ ಕಥೆ-ಚಿತ್ರಕಥೆಯ ಕೆಲಸವೂ ಮುಗಿದಿತ್ತು. ರಾಜ್‌ಕುಮಾರ್ ಚಿತ್ರಗಳನ್ನು ನಿರ್ಮಿಸುತ್ತಿದ್ದ ದ್ವಾರಕಾನಾಥ್ ಮತ್ತು ಭಕ್ತವತ್ಸಲಂ ನಿರ್ಮಾಣದ ಜವಾಬ್ದಾರಿ ಹೊರಲು ಮುಂದೆ ಬಂದಿದ್ದರು. ಹೊಸ ಚಿತ್ರಕ್ಕೆ ‘ಗೀತಾ’ ಎಂದು ಹೆಸರಿಟ್ಟಿದ್ದ ಶಂಕರ್‌ನಾಗ್, ಅದಕ್ಕೆ ಇಳಯರಾಜಾ ಅವರಿಂದಲೇ ಸಂಗೀತ ನಿರ್ದೇಶನ ಮಾಡಿಸಲು ನಿರ್ಧರಿಸಿದ್ದ. ಈ ಸಂಬಂಧವಾಗಿ ಚರ್ಚಿಸಲೆಂದೇ ಶಂಕರ್‌ನಾಗ್ ಮತ್ತು ಅರುಂಧತಿ ಮದ್ರಾಸ್‌ಗೆ ತೆರಳಿದ್ದರು. ಜತೆಗೆ ನನ್ನನ್ನೂ ಕರೆದೊಯ್ದಿದ್ದರು.
ಆಗೆಲ್ಲ ಈಗಿನಂತೆ ಪೆನ್‌ಡ್ರೈವ್, ಮೊಬೈಲ್ ರೆಕಾರ್ಡಿಂಗ್ ವ್ಯವಸ್ಥೆ ಇರಲಿಲ್ಲ. ಹಾಗಾಗಿ ಹಾಡಿನ ಟ್ಯೂನ್‌ಗಳನ್ನು ಟೇಪ್ ರೆಕಾರ್ಡರ್‌ನಲ್ಲಿ ಧ್ವನಿಮುದ್ರಿಸಿಕೊಳ್ಳಬೇಕಿತ್ತು. ಅದಕ್ಕೆಂದೇ ಬೆಂಗಳೂರಿನ ಬರ್ಮಾ ಬಜಾರ್‌ನಲ್ಲಿ ಒಂದು ಟೇಪ್ ರೆಕಾರ್ಡರ್ ಖರೀದಿಸಿಯೇ ನಾವು ಮದ್ರಾಸ್ ತಲುಪಿದ್ದೆವು. ಇಳಯರಾಜ ಹಾಗೂ ಶಂಕರ್‌ನಾಗ್ ಮಧ್ಯೆ ಒಳ್ಳೆಯ ಅಂಡರ್‌ಸ್ಟ್ಯಾಂಡಿಂಗ್ ಇತ್ತು. ಯಾವ ಯಾವ ಸಂದರ್ಭದಲ್ಲಿ ಹಾಡುಗಳಿರಬೇಕು ಎಂಬ ಮಾಹಿತಿ ಪಡೆದುಕೊಂಡ ಇಳಯ ರಾಜ, ಕೆಲವೇ ನಿಮಿಷದಲ್ಲಿ ಒಂದು ಟ್ಯೂನ್ ಕೇಳಿಸಿದರು. ಅದನ್ನು ರೆಕಾರ್ಡ್ ಮಾಡಿಕೊಂಡದ್ದಾಯಿತು. ನಂತರ- ‘ಶಂಕರ್, ಎಸ್ಪೀಬಿ-ಎಸ್.ಜಾನಕಿ ಇಬ್ರೂ ನನಗೆ ನಾಡಿದ್ದಿಗೆ ಕಾಲ್ ಶೀಟ್ ಕೊಟ್ಟಿದ್ದಾರೆ. ಅಷ್ಟರೊಳಗೆ ಒಂದು ಹಾಡು ಬರೆಸಿದ್ರೆ ರೆಕಾರ್ಡಿಂಗ್ ಮಾಡಬಹುದು’ ಅಂದರು. ಒಂದು ಹಾಡನ್ನು ಹಾಡಿಸಿ, ಚಿತ್ರದ ರೆಕಾರ್ಡಿಂಗ್‌ಗೆ ಚಾಲನೆ ನೀಡಬೇಕೆಂಬುದು ಶಂಕರ್‌ನಾಗ್ ನಿರ್ಧಾರವೂ ಆಗಿತ್ತು.
ಆ ದಿನಗಳಲ್ಲಿ ಗೀತೆರಚನೆಗೆ ಹೆಸರಾಗಿದ್ದವರೆಂದರೆ ಚಿ. ಉದಯಶಂಕರ್, ಆರ್.ಎನ್. ಜಯಗೋಪಾಲ್ ಮತ್ತು ವಿಜಯ ನಾರಸಿಂಹ. ‘ಗೀತಾ’ ಚಿತ್ರಕ್ಕೆ ಉದಯಶಂಕರ್ ಅವರಿಂದಲೇ ಹಾಡು ಬರೆಸಬೇಕೆಂಬುದು ಶಂಕರ್‌ನಾಗ್ ಆಸೆಯಾಗಿತ್ತು. ಸಾಮಾನ್ಯವಾಗಿ ಮದ್ರಾಸ್‌ನಲ್ಲಿ ಉಳಿದಿದ್ದರೆ ಪಾಮ್‌ಗ್ರೋವ್ ಹೋಟೆಲಿನ ರೂಂ. ನಂಬರ್ ೨೧೩ರಲ್ಲಿ ಎಂ. ರಂಗರಾವ್, ಅಥವಾ ಸ್ವಾಗತ್ ಹೋಟೆಲಿನ ರೂಂ. ನಂ. ೧೦೮ರಲ್ಲಿ ಇರುತ್ತಿದ್ದರು ಉದಯಶಂಕರ್. ಈ ಎರಡೂ ಕಡೆಗಳಲ್ಲಿ ಇಲ್ಲ ಎಂದಾದರೆ ರಾಜ್‌ಕುಮಾರ್ ಬ್ಯಾನರ್‌ನ ಸಿನಿಮಾದ ಕಥೆ-ಚಿತ್ರಕಥೆ- ಸಂಭಾಷಣೆ- ಗೀತೆರಚನೆಯ ಕೆಲಸದಲ್ಲಿ ಅವರು ಬ್ಯುಸಿಯಾಗಿದ್ದಾರೆ ಎಂದು ನಂಬಲಾಗುತ್ತಿತ್ತು.
‘ಗೀತಾ’ ಚಿತ್ರಕ್ಕೆ ಅರ್ಜೆಂಟಾಗಿ ಹಾಡು ಬರೆಸಬೇಕು ಅನ್ನಿಸಿದಾಗ ನಾವು ಪಾಮ್‌ಗ್ರೋಮ್ ಹಾಗೂ ಸ್ವಾಗತ್ ಹೋಟೆಲ್‌ಗಳಲ್ಲಿ ವಿಚಾರಿಸಿ ನೋಡಿದೆವು. ಚಿ.ಉ. ಅಲ್ಲಿರಲಿಲ್ಲ. ಅವರು ಎಲ್ಲಿರಬಹುದು ಎಂದು ವಿಚಾರಿಸಿದಾಗ ಮೈಸೂರಿನಲ್ಲಿ ರಾಜ್ ಅಭಿನಯದ ಚಿತ್ರವೊಂದರ ಶೂಟಿಂಗ್ ನಡೆಯುತ್ತಿದೆಯೆಂದೂ, ಉದಯ ಶಂಕರ್ ಅಲ್ಲಿದ್ದಾರೆಂದೂ ಗೊತ್ತಾಯಿತು. ‘ಭಟ್ರೆ, ನೀವು ಈಗಿಂದೀಗಲೇ ಮೈಸೂರಿಗೆ ಹೊರಡಿ. ಉದಯಶಂಕರ್ ಅವರನ್ನು ನಾಳೆ ಬೆಳಗ್ಗೇನೇ ಭೇಟಿ ಮಾಡಿ ಟ್ಯೂನ್ ಕೇಳಿಸಿ. ಕನಿಷ್ಠ ಒಂದು ಹಾಡನ್ನಾದ್ರೂ ಬರೆಸಿಕೊಂಡು ರಾತ್ರಿ ೧೧ ಗಂಟೆಗೆ ಮೈಸೂರು ಬಿಡಿ. ಹಾಗೆ ಮಾಡಿದ್ರೆ ಮರುದಿನ ಬೆಳಗಿನ ಜಾವಕ್ಕೇ ಮದ್ರಾಸಿಗೆ ಬಂದಿರ್‍ತೀರಿ. ಆನಂತರ ನಾವು ಹಾಡಿನ ರೆಕಾರ್ಡಿಂಗ್ ಮುಗಿಸೋಣ’ ಅಂದ ಶಂಕರ್. ನಾನು ಟೇಪ್ ರೆಕಾರ್ಡರ್ ತಗೊಂಡು ತರಾತುರಿಯಲ್ಲೇ ಮೈಸೂರಿಗೆ ಹೊರಟೆ.
ಬೆಳಗಿನ ಜಾವಕ್ಕೇ ಮೈಸೂರು ತಲುಪಿ, ರಾಜ್ ಸಿನಿಮಾ ಚಿತ್ರೀಕರಣವಾಗುತ್ತಿದ್ದ ಜಾಗಕ್ಕೆ ಹೋದೆ. ಆದರೆ ಅಲ್ಲಿ ಉದಯಶಂಕರ್ ಸಿಗಲಿಲ್ಲ. ಸಂಜೆಯವರೆಗೆ ನಾನು ಹುಡುಕಿದ್ದೇ ಹುಡುಕಿದ್ದು. ಆದರೂ ಉದಯಶಂಕರ್ ಸಿಗಲಿಲ್ಲ. ಈ ಹುಡುಕಾಟದ ವೇಳೆಯಲ್ಲೇ ಉದಯಶಂಕರ್ ಅವರು ಮೈಸೂರಿನ ಸುಜಾತಾ ಹೋಟೆಲಿನಲ್ಲಿ ಉಳಿದುಕೊಂಡಿದ್ದಾರೆ ಎಂದು ತಿಳಿದು ಬಂತು. ಸಂಜೆಯಾಗುತ್ತಿದ್ದಂತೆಯೇ ಆ ಹೋಟೆಲಿಗೆ ಹೋಗಿ ವಿಚಾರಿಸಿದೆ. ‘ಸಾರ್, ಉದಯಶಂಕರ್ ಅವರು ಇಲ್ಲಿ ಉಳ್ಕೊಂಡಿರೋದು ನಿಜ. ಆದರೆ ಈಗ ಅವರು ಹೊರಗೆ ಹೋಗಿದ್ದಾರೆ. ಅವರು ಎಲ್ಲಿಯೇ ಇದ್ರೂ ರಾತ್ರಿ ಒಂಭತ್ತು ಗಂಟೆಗೆ ಬಂದೇ ಬರ್‍ತಾರೆ. ಕಾದು ನೋಡಿ’ ಎಂದರು ಆ ಹೋಟೆಲಿನ ಮ್ಯಾನೇಜರ್.
ರಾತ್ರಿ ಒಂಭತ್ತು ಗಂಟೆಗೆ ಮತ್ತೆ ಆ ಹೋಟೆಲಿಗೆ ಹೋದೆ. ಅಲ್ಲಿ ಉದಯ ಶಂಕರ್ ಇದ್ದರು. ತಕ್ಷಣವೇ ಅವರ ಬಳಿ ಧಾವಿಸಿ ಎಲ್ಲ ವಿಷಯ ಹೇಳಿದೆ. ‘ಈಗ ೧೧.೩೦ಗೆ ಮದ್ರಾಸಿಗೆ ಬಸ್ಸಿದೆ. ನಾನು ಹೋಗಲೇಬೇಕು ಸಾರ್. ಅಷ್ಟರೊಳಗೆ ನೀವು ಒಂದು ಹಾಡನ್ನಾದ್ರೂ ಬರೆದು ಕೊಡಲೇಬೇಕು. ಏಕೆಂದರೆ ನಾಳೆ ರೆಕಾರ್ಡಿಂಗ್‌ಗೆ ಎಸ್ಪೀಬಿ ಹಾಗೂ ಎಸ್. ಜಾನಕಿಯವರ ಕಾಲ್‌ಶೀಟ್ ತಗೊಂಡಿದೀವಿ. ನಿಮ್ಮ ಹಾಡಿಗಾಗಿ ಮದ್ರಾಸಿನಲ್ಲಿ ಇಳಯರಾಜ, ಶಂಕರ್ ಹಾಗೂ ಅರುಂಧತಿ ಕಾಯ್ತಾ ಇದ್ದಾರೆ’ ಅಂದೆ.
ನನ್ನ ಅವಸರದ ಮಾತುಗಳನ್ನೆಲ್ಲ ಕೇಳಿ, ಒಮ್ಮೆ ಮಗುವಿನಂತೆ ನಕ್ಕರು ಉದಯಶಂಕರ್. ನಂತರ-‘ಅಲ್ಲಪ್ಪಾ, ಈಗಾಗ್ಲೇ ರಾತ್ರಿ ೯ ಗಂಟೆ ಆಗಿದೆ. ೧೧.೩೦ಕ್ಕೆ ಮದ್ರಾಸ್ ಬಸ್ ಹತ್ತಬೇಕು. ಅಷ್ಟರೊಳಗೇ ಹಾಡು ಬೇಕು ಅಂತಿದ್ದೀರ. ನಿಮಗೆ ಹಾಡು ಕೊಡಲು ನಾನು ರೆಡಿ. ಆದರೆ ಈಗ ನನ್ನ ಜೇಬೊಳಗೆ ಯಾವ ಹಾಡೂ ಇಲ್ವಲ್ಲ, ಏನು ಮಾಡಲಿ?’ ಎಂದರು. ಕ್ಷಣ ಕಾಲದ ನಂತರ -‘ಗಾಬರಿಯಾಗಬೇಡಿ. ನಿಮ್ಗೆ ಖಂಡಿತ ಒಂದು ಹಾಡು ಬರೆದುಕೊಡ್ತೀನಿ. ಅದ್ರೆ ನೀವು ನನಗೇನು ಕೊಡ್ತೀರಾ?’ ಎಂದು ಕೇಳಿಬಿಟ್ಟರು.
ಈ ಪ್ರಶ್ನೆ ನನಗೆ ಅನಿರೀಕ್ಷಿತವಾಗಿತ್ತು. ‘ಉದಯ ಶಂಕರ್ ಅವರಿಗೆ ಮೊದಲು ಟ್ಯೂನ್ ಕೇಳಿಸು. ಇದೊಂದು ಪ್ರೇಮಗೀತೆ, ಯುಗಳಗೀತೆ ಎಂದು ಹೇಳು. ನಂತರ ಅವರು ಹಾಡು ಕೊಡ್ತಾರೆ. ತಗೊಂಡು ಬಾ…’ ಇಷ್ಟು ಮಾತ್ರ ಹೇಳಿದ್ದ ಶಂಕರ. ಆದರೆ ಹಾಡು ಬರೆದ್ರೆ ಏನು ಕೊಡ್ತೀರಿ ಎಂಬ ಪ್ರಶ್ನೆ ಹಾಕಿದ್ದರು ಉದಯಶಂಕರ್. ‘ಆದದ್ದಾಗಲಿ’ ಎಂದುಕೊಂಡು ‘ಏನು ಕೊಡಬೇಕು ಅಂತ ನೀವೇ ಹೇಳಿಬಿಡಿ ಸಾರ್’ ಅಂದೇಬಿಟ್ಟೆ.
ಈ ಮಾತು ಕೇಳಿ ನನ್ನನ್ನೇ ವಾರೆನೋಟದಿಂದ ನೋಡಿದ ಉದಯಶಂಕರ್-ಹಾಗಾಗೊಲ್ಲ ಭಟ್ರೇ. ಈಗ ಹಾಡು ಕೊಟ್ರೆ ಏನು ಕೊಡ್ತಾನೆ ಅಂತ ಒಮ್ಮೆ ಶಂಕರ್‌ನಾಗ್‌ನನ್ನೇ ಕೇಳಿಬಿಡಿ’ ಅಂದವರೇ, ಒಂದು ಖಾಲಿ ಹಾಳೆ ತಗೊಂಡು ಅದರ ಮೇಲೆ ‘ಓಂ’ ಎಂದು ಬರೆದರು.
ಉದಯಶಂಕರ್ ಮಾತಿಗೆ ಪ್ರತಿ ಹೇಳುವ ಹಾಗಿರಲಿಲ್ಲ. ನಾನು ಸರಸರನೆ ರಿಸೆಪ್ಶನ್‌ಗೆ ಬಂದೆ. ಅಲ್ಲಿಂದ ಮದ್ರಾಸಿಗೆ ಫೋನ್ ಮಾಡಿ ಶಂಕರ್‌ನಾಗ್‌ಗೆ ಎಲ್ಲವನ್ನೂ ವಿವರವಾಗಿ ಹೇಳಿದೆ. ಈಗ ಹಾಡು ಬರೆದುಕೊಟ್ರೆ ಏನು ಕೊಡ್ತಾರೋ ಕೇಳ್ಕೊಂಡು ಬನ್ನಿ ಅಂದಿದಾರೆ. ನಾನು ಏನೆಂದು ಉತ್ತರ ಹೇಳಲಿ ಶಂಕರ್?’ ಎಂದು ಗಾಬರಿಯಿಂದ ಪ್ರಶ್ನಿಸಿದೆ.
ನನ್ನ ಮಾತು ಕೇಳಿ ಒಮ್ಮೆ ಜೋರಾಗಿ ನಕ್ಕ ಶಂಕರ್‌ನಾಗ್-‘ ಅವರು ಏನು ಕೇಳಿದ್ರೂ ಕೊಡ್ತಾರೆ’ ಅಂತ ಹೇಳು ‘ ಅಂದುಬಿಟ್ಟ. ನಾನು ಸರ್ರನೆ ಉದಯ ಶಂಕರ್ ರೂಮಿಗೆ ಬಂದು-‘ಸಾರ್, ನೀವು ಏನು ಕೇಳಿದ್ರೂ ಕೊಡ್ತಾನಂತೆ ಶಂಕರ್‌ನಾಗ್’ ಎಂದೆ. ನನ್ನ ಮಾತು ಕೇಳಿ ಒಮ್ಮೆ ಖುಷಿಯಿಂದ ಕಣ್ಣರಳಿಸಿದರು ಉದಯಶಂಕರ್. ನಂತರ, ‘ಹೌದಾ? ಏನು ಕೇಳಿದ್ರೂ ಕೊಡ್ತೀನಿ ಅಂದಿದಾನಾ ಶಂಕರ್‌ನಾಗ್? ಸರಿ ಸರಿ. ಸ್ವಲ್ಪ ಹೊತ್ತು ಇಲ್ಲೇ ಕುಳಿತಿರಿ. ಹಾಡು ಬರೆದುಕೊಡ್ತೀನಿ’ ಅಂದರು. ನಂತರದ ಇಪ್ಪತ್ತನೇ ನಿಮಿಷಕ್ಕೆ ನನ್ನ ಕೈಲಿ ಹಾಡಿನ ಹಾಳೆಯಿತ್ತು. ಮೊದಲೆರಡು ಸಾಲು ನೋಡಿದೆನೋ ಇಲ್ಲವೋ; ನನಗೇ ಗೊತ್ತಿಲ್ಲದಂತೆ ಕಣ್ತುಂಬಿಕೊಂಡಿತು. ಏಕೆಂದರೆ-‘ಏನು ಕೇಳಿದ್ರೂ ಕೊಡ್ತೇನೆ’ ಎಂದು ಶಂಕರ್‌ನಾಗ್ ಹೇಳಿದ್ದನಲ್ಲ? ಆ ಸಾಲನ್ನೇ ಇಟ್ಟುಕೊಂಡು-‘ ಏನೇ ಕೇಳು ಕೊಡುವೆ ನಿನಗೆ ನಾನೀಗ/ ನಿನ್ನ ಬಯಕೆ ಏನು, ಮನದಾಸೆ ಏನು/ ಹೇಳು ಬಾ ಕಿವಿಯಲ್ಲಿ’ ಎಂದು ಬರೆದಿದ್ದರು.
ನಾನು ಮಾತೇ ಹೊರಡದೆ ನಿಂತುಬಿಟ್ಟಿದ್ದೆ. ಆಗಲೇ ಉದಯಶಂಕರ್ ಮೆಲ್ಲಗೆ ನನ್ನ ಮೈ ತಟ್ಟಿ ಹೇಳಿದರು: ಇನ್ನೂ ಸಮಯವಿದೆ. ಈ ಹಾಡಲ್ಲಿ ಏನಾದ್ರೂ ಬದಲಾವಣೆ ಬೇಕಿದ್ರೆ ಹೇಳಿ, ಬದಲಿಸಿ ಕೊಡ್ತೇನೆ…’
ಅವರ ಸರಳತೆ, ದೊಡ್ಡ ಮನಸ್ಸು ಕಂಡು ಮತ್ತಷ್ಟು ಖುಷಿಯಾಯಿತು. ಹಾಡು ಅದ್ಭುತವಾಗಿದೆ ಸಾರ್. ನಾನು ಹೋಗಿಬರ್‍ತೀನಿ ಎನ್ನುತ್ತಾ ತಕ್ಷಣ ಹೊರಟೆ. ಹಾಡಿನ ಸಾಹಿತ್ಯ ಕಂಡು ಶಂಕರ್‌ನಾಗ್, ಇಳಯರಾಜಾ ತುಂಬಾ ಖುಷಿಪಟ್ಟರು. ಎಸ್ಪೀಬಿ- ಎಸ್. ಜಾನಕಿ ಅದ್ಭುತವಾಗಿ ಹಾಡಿದರು. ಪರಿಣಾಮ, ಅದು ಎಂದೂ ಮರೆಯದ ಹಾಡಾಯಿತು!’
***
ಹಾಡಿನ ನೆಪದಲ್ಲಿ ಇಬ್ಬರು ‘ಶಂಕರ’ರನ್ನೂ ಮತ್ತೆ ಮತ್ತೆ ನೆನೆಯುವಂತೆ ಮಾಡಿದ ರಮೇಶ್‌ಭಟ್ ಅವರಿಗೆ -‘ಸಾರ್, ಇನ್ನೊಂದೆರಡು ಕಥೆ ಹೇಳಿ’ ಎಂದು ಬೇಡಿಕೊಂಡರೆ -ಅವರು ‘ತಥಾಸ್ತು’ ಅಂದೇ ಬಿಟ್ಟರು!

ಸಾಧನೆಗೆ ಅಸಾಧ್ಯವಾದುದು ಇಲ್ಲ, ಇಲ್ಲ, ಇಲ್ಲ !

ಡಿಸೆಂಬರ್ 30, 2010

 

 

 

 

 

 

 

ಕಣ್ಮುಂದೆ ಇರೋದು ಇನ್ನು ಒಂದೇ ದಿನ. ಒಂದು ದಿನ ಕಳೆಯಿತೆಂದರೆ- ಚಿಯರ್‍ಸ್! ಅದು ಹೊಸ ವರ್ಷದ ಮೊದಲ ದಿನ. ಪ್ರತಿಬಾರಿಯೂ ಅಷ್ಟೆ. ಡಿಸೆಂಬರ್ ಬಂದಾಕ್ಷಣವೇ ನಮಗೆ ಹೊಸ ವರ್ಷ ನೆನಪಾಗುತ್ತದೆ. ಸರಿದು ಹೋಗುತ್ತಿರುವ ವರ್ಷದಲ್ಲಿ ಒಂದು ಸೋಲಿಗೆ, ಸಂಕಟಕ್ಕೆ, ಅವಮಾನಕ್ಕೆ, ಯಾತನೆಗೆ ಸಿಕ್ಕಿಕೊಂಡವರು ಹೊಸ ವರ್ಷದಲ್ಲಾದರೂ ನನಗೆ ನೆಮ್ಮದಿ ಸಿಗಲಿ ಎಂದು ಆಸೆ ಪಡುತ್ತಾರೆ. ಅದೇ ರೀತಿ, ಈಗಾಗಲೇ ಯಶಸ್ಸಿನ ಕುದುರೆ ಮೇಲಿರುವ ಜನ, ಅದೇ ಯಶಸ್ಸು ಹೊಸ ವರ್ಷದಲ್ಲೂ ಮುಂದುವರಿಯಲಿ ಎಂದು ಬಯಸುತ್ತಾರೆ. ಅದಕ್ಕಾಗಿ ಪ್ರಾರ್ಥಿಸುತ್ತಾರೆ. ಪೂಜೆ ಮಾಡುತ್ತಾರೆ. ಹರಕೆ ಕಟ್ಟಿಕೊಳ್ಳುತ್ತಾರೆ. ಹೋಮ ಮಾಡಿಸುತ್ತಾರೆ. ಜ್ಯೋತಿಷ್ಯದ ಮೊರೆ ಹೋಗುತ್ತಾರೆ…
ಇಂಥ ಸಂದರ್ಭದಲ್ಲಿಯೇ ಕೆಲವರು ಬೇರೆಯದೇ ಧಾಟಿಯಲ್ಲಿ ಮಾತಾಡಲು ಶುರು ಮಾಡುತ್ತಾರೆ. ಅವರ ಪ್ರಕಾರ- ‘ಗೆಲುವು ಎಂಬುದು ಕೇವಲ ಅದೃಷ್ಟದ ಆಟ. ಅದು ಹಣೆಬರಹ. ಅದು ದೈವಕೃಪೆ! ಅದೊಂಥರಾ ಲಾಟರಿ ಇದ್ದ ಹಾಗೆ! ಯಶಸ್ಸು ಎಂಬುದು ಯಾವತ್ತೂ ಶ್ರೀಮಂತರ ಪಕ್ಷಪಾತಿ. ಹಾಗಾಗಿ, ಆಕಾಶಕ್ಕೆ ಏಣಿ ಹಾಕುವ ಕೆಲಸ ಮಾಡಲೇಬಾರದು. ‘ಬಡವಾ, ನೀ ಮಡಗಿದಹಾಂಗಿರು’ ಎಂದು ಗಾದೆಯೇ ಇದೆ. ಅದರಂತೆ ಇದ್ದು ಬಿಡಬೇಕು. ಅದೇ ಸರಿ….’
ವಿಪರಾಸ್ಯವೆಂದರೆ, ಇಂಥ ಪೆದ್ದು ಪೆದ್ದು ಮಾತುಗಳನ್ನೇ ನಂಬುವ, ಅದನ್ನು ಅನುಮೋದಿಸುವ, ಅದನ್ನೇ ಅನುಸರಿಸಿ ಬದುಕುವ ಮಂದಿ ಕೂಡಾ ನಮ್ಮ ಮಧ್ಯೆ ಇದ್ದಾರೆ.
ಒಂದು ಮಾತು ನೆನಪಿರಲಿ : ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ, ಅಲ್ಲೆಲ್ಲ ಮಹಾನ್ ವ್ಯಕ್ತಿಗಳ ಸಾಧನೆಯ ಬದುಕಿನ ಕಥೆಗಳು ಕಣ್ಣು ಕುಕ್ಕುತ್ತವೆ. ಸ್ವಾರಸ್ಯವೇನೆಂದರೆ, ಒಂದು ಗೆಲುವಿನ ಮೆಟ್ಟಿಲು ಹತ್ತಿ ನಿಲ್ಲುವ ಮುನ್ನ ಅದೇ ಸಾಧಕ ಹತ್ತಕ್ಕೂ ಹೆಚ್ಚು ಬಾರಿ ಸೋಲಿನ ಮೆಟ್ಟಿಲು ಮೇಲೆ ಹೊರಳಾಡಿರುತ್ತಾನೆ ಮತ್ತು ಆತ ಕೂಡ ನಮ್ಮ ನಿಮ್ಮೆಲ್ಲರಂತೆಯೇ ಜನ ಸಾಮಾನ್ಯನೇ ಆಗಿರುತ್ತಾನೆ. ಈ ಮಾತಿಗೆ ಉದಾಹರಣೆಯಾಗಿ ಒಂದು ಕಥೆ ಕೇಳಿ :
ಅವನು ಅಮೆರಿಕನ್. ಆತ ನಮ್ಮ ನಿಮ್ಮಂತೆಯೇ ಇದ್ದ ಮನುಷ್ಯ. ಬದುಕಲ್ಲಿ ಏನಾದರೂ ಸಾಸಬೇಕು ಎಂದು ಅವನಿಗೆ ಆಸೆಯಿತ್ತು. ಕನಸುಗಳಿದ್ದವು. ಛಲವಿತ್ತು, ಆತ್ಮವಿಶ್ವಾಸವಿತ್ತು. ‘ಸಾಧನೆ’ ಮಾಡಲು ಹಣ ಬೇಕು ಅನ್ನಿಸಿದಾಗ ಈತ ಚಿಕ್ಕಂದಿನಲ್ಲೇ ದುಡಿಯಲು ನಿಂತ. ವರ್ಷ ವರ್ಷವೂ ಇಷ್ಟಿಷ್ಟೇ ದುಡ್ಡು ಸೇರಿಸಿಕೊಂಡ. ಹಣದ ಗಂಟು ಒಂದಿಷ್ಟು ದೊಡ್ಡದಾಗುವ ವೇಳೆಗೆ ಅವನಿಗೆ ೨೧ ವರ್ಷವಾಯ್ತು. ಗಂಟಿನ ಹಣದ ಬಲದಿಂದಲೇ ಆತ ವ್ಯಾಪಾರ ಶುರು ಮಾಡಿದ. ಒಂದು ವರ್ಷ ಬಿಸಿನೆಸ್ ಮಾಡಿದ. ಲಾಭದ ಮಾತು ಹಾಗಿರಲಿ, ಹಾಕಿದ ಬಂಡವಾಳವೂ ಬರಲಿಲ್ಲ. ಈ ಸೋಲು ಮರೆಯುವ ಸಲುವಾಗಿ, ಮುಂದಿನ ವರ್ಷ ಆತ ಜಿಲ್ಲಾ ಮಟ್ಟದ ಚುನಾವಣೆಯಲ್ಲಿ ರ್ಸ್ಪಸಿದ. ಅಲ್ಲೂ ಸೋತ. ಛೆ, ಯಾಕೋ ನನ್ನ ನಸೀಬು ನೆಟ್ಟಗಿಲ್ಲ ಎಂದು ಗೊಣಗಿಕೊಂಡು ಮತ್ತೆ ದುಡಿಮೆಗೆ ನಿಂತ. ಭರ್ತಿ ಎರಡು ವರ್ಷ ಹಗಲಿರುಳೂ ದುಡಿದ. ಪರಿಣಾಮ, ಒಂದಿಷ್ಟು ದುಡ್ಡು ಜತೆಯಾಯಿತು. ವ್ಯಾಪಾರದಲ್ಲಿ ಹಿಂದೊಮ್ಮೆ ಸೋತಿದ್ದನಲ್ಲ? ಆ ತಪ್ಪುಗಳನ್ನೆಲ್ಲ ನೆನಪಿಟ್ಟುಕೊಂಡೇ ಮತ್ತೆ ವ್ಯಾಪಾರ ಆರಂಭಿಸಿದ. ಅದೇ ಸಂದರ್ಭದಲ್ಲಿ ಮದುವೆಯಾದ. ಮೊದಲ ವರ್ಷ ವ್ಯವಹಾರ ಮತ್ತು ದಾಂಪತ್ಯ ಚೆನ್ನಾಗಿಯೇ ಇತ್ತು. ಆದರೆ ಈ ಮಹಾರಾಯನ ೨೬ನೇ ವರ್ಷದಲ್ಲಿ ಮತ್ತೊಂದು ಆಘಾತವಾಯಿತು. ಒಂದೆಡೆ ವ್ಯಾಪಾರದಲ್ಲಿ ಲಾಸ್ ಆಯಿತು. ಆ ಬಗ್ಗೆ ಯೋಚಿಸುತ್ತಿದ್ದ ಸಂದರ್ಭದಲ್ಲಿಯೇ ನ್ಯುಮೋನಿಯಾಕ್ಕೆ ತುತ್ತಾಗಿ ಆತನ ಹೆಂಡತಿಯೂ ತೀರಿಹೋದಳು. ಹೀಗೆ, ಒಂದರ ಹಿಂದೊಂದರಂತೆ ಸೋಲು, ಸಂಕಟಗಳಿಂದ ಆತ ಮನೋರೋಗಿಯೇ ಆಗಿ ಹೋದ. ಓಹ್, ಇನ್ನು ಇವನ ಕಥೆ ಮುಗೀತು. ಇವನು ಹುಚ್ಚ ಆಗೋದು ಗ್ಯಾರಂಟಿ ಎಂದು ಗೆಳೆಯರು, ಬಂಧುಗಳೆಲ್ಲ ನಿರ್ಧರಿಸಿದ್ದರು. ಆದರೆ, ಪವಾಡ ನಡೆದೇ ಹೋಯಿತು. ಒಂದು ವರ್ಷದ ಅವಯಲ್ಲಿ ಈತ ವೈದ್ಯರೇ ಬೆರಗಾಗುವಂತೆ ಚೇತರಿಸಿಕೊಂಡ.
ಮುಂದಿನ ಏಳು ವರ್ಷಗಳ ಕಾಲ ಆತ ಎಲ್ಲಿದ್ದ, ಏನು ಮಾಡುತ್ತಿದ್ದ ಎಂಬುದು ಹೆಚ್ಚಿನವರಿಗೆ ಗೊತ್ತಾಗಲೇ ಇಲ್ಲ. ಆತ ಕ್ಷಣಕ್ಷಣವೂ ಒಂದು ಗೆಲುವಿಗಾಗಿ ಕಾತರಿಸುತ್ತಲೇ ಬದುಕಿದ. ಅವನಿಗೆ ೩೪ ವರ್ಷವಾಗಿದ್ದಾಗ ಮತ್ತೊಂದು ಮಹಾಚುನಾವಣೆ ಬಂತು. ಪಕ್ಷವೊಂದರ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತ. ಸೋತ. ಅದುವರೆಗೂ ಈತನ ಹಲವಾರು ವಿಫಲ ಸಾಹಸಗಳನ್ನು ನೋಡಿದ್ದ ಜನ ನಕ್ಕರು. ಗೇಲಿ ಮಾಡಿದರು. ‘ಏನಪ್ಪಾ ನಿನ್ನ ಆಟ, ಹೀಗೆಲ್ಲ ಆಡುವ ಬದಲು ತೆಪ್ಪಗಿರಬಾರದಾ?’ ಎಂದು ಬುದ್ಧಿ ಹೇಳಿದರು.
ಎಲ್ಲರ ಬುದ್ಧಿಮಾತನ್ನೂ ತಾಳ್ಮೆಯಿಂದ ಕೇಳಿಸಿಕೊಂಡ ಈತ, ತನ್ನ ೪೫ನೇ ವಯಸ್ಸಿನಲ್ಲಿ ಸೆನೆಟ್ ಸಭೆಯ ಚುನಾವಣೆಗೆ ನಿಂತು ಸೋತ. ಇಷ್ಟಾದ ಮೇಲಾದರೂ ಸುಮ್ಮನಿರಬಾರದೆ? ಅವನು ಸುಮ್ಮನಿರಲಿಲ್ಲ. ಎರಡು ವರ್ಷಗಳ ನಂತರ, ಅಂದರೆ ತನ್ನ ೪೭ನೇ ವಯಸ್ಸಿನಲ್ಲಿ ಅದೇ ಅಮೆರಿಕದ ಉಪಾಧ್ಯಕ್ಷ ಸ್ಥಾನಕ್ಕೇ ರ್ಸ್ಪಸಿದ. ಯಥಾಪ್ರಕಾರ ಸೋತ. ಈ ಮತ್ತೊಂದು ಮಹಾಸೋಲೂ ಅವನನ್ನು ಧೃತಿಗೆಡಿಸಲಿಲ್ಲ. ಎರಡು ವರ್ಷ ಸುಮ್ಮನಿದ್ದವನು ಮತ್ತೆ ಸೆನೆಟ್ ಚುನಾವಣೆಗೆ ರ್ಸ್ಪಸಿ ಅಲ್ಲಿಯೂ ಸೋತ!
ಇದನ್ನು ಕಂಡ ಅಮೆರಿಕದ ಜನ ತಲೆಗೊಂದು ಮಾತಾಡಿದರು. ಇವನನ್ನು ಗೇಲಿ ಮಾಡಿದರು. ಮರುಕದಿಂದ ನೋಡಿದರು. ಸೋಲಿನ ದೊರೆ ಎಂದು ಹೀಯಾಳಿಸಿದರು. ಸೋಲುವುದರಲ್ಲಿ ಗಿನ್ನಿಸ್ ರೆಕಾರ್ಡ್ ಸೇರೋ ಆಸಾಮಿ ಎಂದರು. ಯಾರು ಅದೆಷ್ಟೇ ಟೀಕಿಸಿದರೂ ಈತ ಅದನ್ನು ಕಂಡೂ ಕಾಣದವನಂತೆ ಮುನ್ನಡೆದ ಮತ್ತು ತನ್ನ ೫೨ನೇ ವಯಸ್ಸಿನಲ್ಲಿ ಅಮೆರಿಕದ ಅಧ್ಯಕ್ಷ ಪದವಿಗೆ ರ್ಸ್ಪಸಿ ಪ್ರಚಂಡ ಬಹುಮತದಿಂದ ಗೆದ್ದ!
ಅಂದಹಾಗೆ, ನೂರಾರು ಸೋಲುಗಳ ಮಧ್ಯೆಯೇ ಗೆಲುವಿನ ಅರಮನೆಗೆ ನಡೆದು ಬಂದ ಆತ ಯಾರು ಗೊತ್ತೆ?
ಅಬ್ರಹಾಂ ಲಿಂಕನ್!

ಈಗ ಯೋಚಿಸಿ. ಹಣೆಬರಹವನ್ನೋ, ವಿಯಾಟವನ್ನೋ, ಅದೃಷ್ಟವನ್ನೋ ಹಳಿದುಕೊಂಡು ಅಬ್ರಹಾಂ ಲಿಂಕನ್ನನೂ ಸುಮ್ಮನೇ ಉಳಿದಿದ್ದರೆ ಏನಾಗುತ್ತಿತ್ತು ಹೇಳಿ? ಆತನೂ ಜಗತ್ತಿನ ಕೋಟ್ಯಂತರ ಸೋತು ಹೋದವರ, ಕನಸನ್ನೇ ಕಾಣದವರ ಪಟ್ಟಿಗೆ ಸೇರಿ ಹೋಗುತ್ತಿದ್ದ. ಆದರೆ, ನನ್ನಿಂದ ಏನೂ ಆಗುವುದಿಲ್ಲ ಎಂದು ಯೋಚಿಸುವ ಬದಲಿಗೆ ನನ್ನಿಂದ ಎಲ್ಲವೂ ಸಾಧ್ಯ ಎಂದು ಅವನು ಸೋಲಿನ ಹಾದಿಯಲ್ಲೂ ಒಂದೊಂದೇ ದಿಟ್ಟ ಹೆಚ್ಚೆ ಇಟ್ಟಿದ್ದರಿಂದ ಆಕಾಶಕ್ಕೇ ಏಣಿ ಹಾಕುವುದು ಅವನಿಂದ ಸಾಧ್ಯವಾಯಿತು.
ಗೆಳೆಯರೆ, ಸಾಧನೆಗೆ ಅಸಾಧ್ಯವಾದುದು ಉಹುಂ- ಇಲ್ಲ, ಇಲ್ಲ, ಇಲ್ಲ. ಲಿಂಕನ್‌ನ ಗೆಲುವಿನ ಬದುಕು ಎಲ್ಲರಿಗೂ ಮಾದರಿಯಾಗಿರಲಿ. ಅವನಿಗೆ ಸಿಕ್ಕಂಥ ಹೆಸರು, ಯಶಸ್ಸು ಈ ಹೊಸ ವರ್ಷದಲ್ಲಿ ಎಲ್ಲರದೂ ಆಗಲಿ ಎಂಬ ಶುಭಾಕಾಂಕ್ಷೆಯೊಂದಿಗೆ- ಒಂದು ದಿನ ಮುಂಚಿತವಾಗಿ ಹೊಸ ವರ್ಷದ ಶುಭಾಶಯಗಳು.

ಈ ಗೀತೆಯ ಮಾಧುರ್ಯಕ್ಕೆ ಸಾಟಿಯಿಲ್ಲ ಅಂದಿದ್ದರು ಇಳಯರಾಜ!

ಡಿಸೆಂಬರ್ 30, 2010

ಇರಬೇಕು ಇರಬೇಕು…
ಚಿತ್ರ ನಗುವ ಹೂವು. ಗೀತೆ ರಚನೆ: ಆರ್.ಎನ್. ಜಯಗೋಪಾಲ್
ಸಂಗೀತ: ಜಿ.ಕೆ. ವೆಂಕಟೇಶ್. ಗಾಯನ: ಆರ್.ಎನ್. ಸುದರ್ಶನ್

ಇರಬೇಕು ಇರಬೇಕು ಅರಿಯದ ಕಂದನ ತರಹ
ನಗಬೇಕು ಅಳಬೇಕು ಇರುವಂತೆ ಹಣೆಬರಹ ||ಪ||

ಇರಬೇಕು ಇರಬೇಕು ತಾವರೆ ಎಲೆಯ ತರಹ
ಕಣ್ಣೀರೋ ಪನ್ನೀರೋ ಯಾರಲಿ ಮಾಡಲಿ ಕಲಹ
ಯಾರಲಿ ಮಾಡಲಿ ಕಲಹ ||೧||

ಇರಬೇಕು ಇರಬೇಕು ಬಾಳಲಿ ಭರವಸೆ ಮುಂದೆ
ನೋವಿರಲಿ ನಲಿವಿರಲಿ ನೋಡಲೆಬಾರದು ಹಿಂದೆ
ನೋಡಲೆ ಬಾರದು ಹಿಂದೆ ||೨||
೧೯೭೧ರಲ್ಲಿ ತೆರೆಕಂಡು, ರಾಷ್ಟ್ರಪ್ರಶಸ್ತಿಗೆ ಪಾತ್ರವಾದ ಚಿತ್ರ ನಗುವ ಹೂವು. ಈ ಚಿತ್ರಕ್ಕೆ ಸಂಬಂಸಿದಂತೆ ಒಂದಿಷ್ಟು ಸ್ವಾರಸ್ಯಗಳಿವೆ. ಏನೆಂದರೆ-ಇದು ಆರೆನ್ನಾರ್ ಕುಟುಂಬದವರ ಚಿತ್ರ. ಹೇಗೆ ಗೊತ್ತಾ? ನಗುವ ಹೂವು ಚಿತ್ರದ ನಿರ್ಮಾಣ ಆರೆನ್ನಾರ್ ಕುಟುಂಬದ್ದು. (ಸಹ ನಿರ್ಮಾಪಕರಾಗಿ ಸೇರಿಕೊಂಡವರು, ಕಾಡಿನ ರಹಸ್ಯ ಚಿತ್ರ ನಿರ್ಮಿಸಿದ ರಂಗಪ್ಪ ಮತ್ತು ಚಿನ್ನಪ್ಪ.) ಚಿತ್ರದ ನಾಯಕ-ಆರ್. ನಾಗೇಂದ್ರರಾವ್ ಅವರ ಕಿರಿಯ ಪುತ್ರ ಆರ್.ಎನ್. ಸುದರ್ಶನ್. ನಾಯಕಿಯಾಗಿದ್ದುದಲ್ಲದೆ, ಚಿತ್ರಕ್ಕೆ ಕಥೆ- ಚಿತ್ರಕಥೆ ಒದಗಿಸಿದವರು ಸುದರ್ಶನ್ ಅವರ ಪತ್ನಿ ಶೈಲಶ್ರೀ. ಸಂಭಾಷಣೆ ಹಾಗೂ ಗೀತೆ ರಚನೆಯ ಹೊಣೆ ಹೊತ್ತವರು ಆರೆನ್ನಾರ್ ಅವರ ಎರಡನೇ ಮಗ ಆರ್.ಎನ್. ಜಯಗೋಪಾಲ್. ಛಾಯಾಗ್ರಹಣದೊಂದಿಗೆ ನಿರ್ದೇಶನದ ಹೊಣೆಯನ್ನೂ ಹೊತ್ತವರು ಅರೆನ್ನಾರ್ ಅವರ ಮೊದಲ ಮಗ ಆರ್.ಎನ್. ಕೃಷ್ಣ ಪ್ರಸಾದ್. ಸುದರ್ಶನ್ ಅವರು ಈ ಚಿತ್ರದ ನಾಯಕನಾಗಿ ಮಾತ್ರವಲ್ಲ, ಗಾಯಕನಾಗಿಯೂ ಮಿಂಚಿದರು ಎಂಬುದು ಮತ್ತೊಂದು ವಿಶೇಷ.
ನಗುವ ಹೂವು-ಕ್ಯಾನ್ಸರ್ ರೋಗಿಯೊಬ್ಬನ ಬದುಕಿನ ಸುತ್ತ ಹೆಣೆದ ಕಥೆ. ಅಂಥ ಕಥೆಯನ್ನೇ ಏಕೆ ಆಯ್ಕೆ ಮಾಡಿಕೊಂಡಿರಿ ಎಂಬ ಪ್ರಶ್ನೆಗೆ ಸುದರ್ಶನ್ ಹೀಗೆಂದರು: ‘ನಮ್ಮ ತಾಯಿಯವರು ಕ್ಯಾನ್ಸರ್‌ನಿಂದ ತೀರಿಕೊಂಡರು. ಅವರ ಅಗಲಿಕೆ ನಮ್ಮ ಕುಟುಂಬಕ್ಕೆ ಎರಗಿದ ಬಹುದೊಡ್ಡ ಆಘಾತ. ಒಂದು ಮನೆಯ ನೆಮ್ಮದಿಯನ್ನೇ ಹಾಳು ಮಾಡುವ ಕ್ಯಾನ್ಸರ್ ಬಗ್ಗೆ ತಿಳಿ ಹೇಳಬೇಕು. ಆ ರೋಗದ ವಿರುದ್ಧ ಜಾಗೃತಿ ಮೂಡಿಸಬೇಕು ಅನ್ನಿಸ್ತು. ಈ ಕಾರಣದಿಂದಲೇ ಕ್ಯಾನ್ಸರ್ ರೋಗಿಯೊಬ್ಬನ ಬದುಕಿನ ಕಥೆ ಹೊಂದಿದ್ದ ಸಿನಿಮಾ ತಯಾರಿಸಲು ನಿರ್ಧರಿಸಿದ್ದೆವು…’
ಸಂಕ್ಷಿಪ್ತವಾಗಿ ಹೇಳುವುದಾದರೆ ‘ನಗುವ ಹೂವು’ ಚಿತ್ರದ ಕಥೆ ಇಷ್ಟು. ಒಂದು ಕ್ಯಾನ್ಸರ್ ಆಸ್ಪತ್ರೆ. ಈ ಆಸ್ಪತ್ರೆಯ ಒಡತಿಯ ಮಗನಿಗೇ ಕ್ಯಾನ್ಸರ್! (ಈತ ಚಿತ್ರದ ಎರಡನೇ ನಾಯಕ) ನಾಯಕ-ನಾಯಕಿ, ಈ ಆಸ್ಪತ್ರೆಯಲ್ಲಿ ಕ್ರಮವಾಗಿ ಡಾಕ್ಟರ್ ಹಾಗೂ ನರ್ಸ್ ಆಗಿರುತ್ತಾರೆ. ನರ್ಸ್ ಮೇಲೆ ಡಾಕ್ಟರ್‌ಗೆ ಮೋಹ. ಆದರೆ ಸಂಕೋಚದ ಕಾರಣದಿಂದ ಆತ ಹೇಳಿಕೊಂಡಿರುವುದಿಲ್ಲ. ಇದೇ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ಗೆ ತುತ್ತಾದ ಮಕ್ಕಳೂ ಇರುತ್ತವೆ. ಆ ಮಕ್ಕಳ ವಾರ್ಡ್‌ಗೆ ದಿನವೂ ಹೋಗಿ ಸಿಹಿ ಹಂಚುತ್ತಿರುತ್ತಾನೆ ಡಾಕ್ಟರ್. ಈ ಮಕ್ಕಳ ಪೈಕಿ ಒಂದು ಮಗು- ಕಥಾ ನಾಯಕ-ನಾಯಕಿಯನ್ನು ತುಂಬಾ ಹಚ್ಚಿಕೊಂಡಿರುತ್ತದೆ. ಅವನನ್ನು ‘ಅಪ್ಪಾ’ ಎಂದೂ, ನಾಯಕಿಯನ್ನು ಅಮ್ಮಾ ಕರೆಯುತ್ತಿರುತ್ತದೆ. ಈ ನಾಯಕ, ಶಸ್ತ್ರ ಚಿಕಿತ್ಸೆ ಯಶಸ್ವಿಯಾದರೆ ಸಾಕು- ಒಂದು ಗುಲಾಬಿ ಹೂ ತಗೊಂಡು ತನ್ನ ಛೇಂಬರ್‌ಗೆ ಹೋಗುತ್ತಿರುತ್ತಾನೆ. ಬಹುಶಃ ಆತ ದೇವರ ಫೋಟೋಗೆ ಇಡಲೆಂದು ಹೂ ಕೊಂಡೊಯ್ಯುತ್ತಾನೆ ಎಂದೇ ಆಸ್ಪತ್ರೆಯ ಅಷ್ಟೂ ಜನ ತಿಳಿದಿರುತ್ತಾರೆ.
ಅದೊಮ್ಮೆ ಡಾಕ್ಟರ್ ಬೇರೊಂದು ಊರಿಗೆ ಹೋಗಿದ್ದ ಸಂದರ್ಭದಲ್ಲಿ ವಾರ್ಡ್‌ನಲ್ಲಿದ್ದ ಮಕ್ಕಳೆಲ್ಲ ಡಾಕ್ಟರ್ ಛೇಂಬರ್‌ಗೆ ನುಗ್ಗುತ್ತವೆ. ಅಲ್ಲಿದ್ದ ಎಲ್ಲಾ ವಸ್ತುಗಳನ್ನೂ ಚಲ್ಲಾಪಿಲ್ಲಿ ಮಾಡುತ್ತವೆ. ಈ ಸಂದರ್ಭದಲ್ಲಿಯೇ ನಾಯಕಿ ಅಲ್ಲಿಗೆ ಬರುತ್ತಾಳೆ. ಡಾಕ್ಟರ್ ಛೇಂಬರಿನಲ್ಲಿ ತನ್ನ ಫೋಟೋ ಇರುವುದೂ, ಅದರ ಪಕ್ಕದಲ್ಲಿಯೇ ಒಂದು ಗುಲಾಬಿ ಇರುವುದೂ ಅವಳ ಗಮನಕ್ಕೆ ಬರುತ್ತದೆ. ಇದೇ ವೇಳೆಗೆ ನಾಯಕನೂ ಅಲ್ಲಿಗೆ ಬರುತ್ತಾನೆ. ಒಬ್ಬರ ಮನಸ್ಸು ಒಬ್ಬರಿಗೆ ಅರ್ಥವಾಗುತ್ತಿದ್ದಂತೆಯೇ ಪ್ರೀತಿ ಚಿಗುರುತ್ತದೆ. ತನ್ನ ಪ್ರೀತಿಯ ಕಾಣಿಕೆಯಾಗಿ ನಾಯಕ ಒಂದು ಉಂಗುರ ತೊಡಿಸುತ್ತಾನೆ.
ಆಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಿ ಇರುತ್ತಾನಲ್ಲ? ಅವನನ್ನು ನಾಯಕಿ (ನರ್ಸ್) ತುಂಬ ಆಪ್ತವಾಗಿ ಉಪಚರಿಸುತ್ತಾಳೆ. ಆತ ಅದನ್ನೇ ತಪ್ಪಾಗಿ ಭಾವಿಸಿ ಅವಳಲ್ಲಿ ಪ್ರೇಮ ನಿವೇದನೆ ಮಾಡಿಬಿಡುತ್ತಾನೆ. ಈ ವಿಷಯ ತಿಳಿದ ನಾಯಕ-‘ಹೇಳಿ ಕೇಳಿ ಆತ ಕ್ಯಾನ್ಸರ್ ರೋಗಿ. ನೀನು ನಿರಾಕರಣೆಯ ಮಾತಾಡಿದರೆ ಆತನಿಗೆ ಶಾಕ್ ಆಗಬಹುದು. ಆ ಶಾಕ್‌ಗೆ ಆತ ಬೇಗನೆ ಸತ್ತೂ ಹೋಗಬಹುದು. ಹಾಗೆ ಮಾಡಬೇಡ. ರೋಗಿಗಳ ಸೇವೆಯೇ ನಮ್ಮ ಪರಮಗುರಿ. ನಿನ್ನ ಮಾತಿಂದ ಆತ ಒಂದಷ್ಟು ದಿನವಾದರೂ ನೆಮ್ಮದಿಯಿಂದ ಇರ್‍ತಾನೆ. ಹಾಗಾಗಿ ಆತನ ಆಹ್ವಾನವನ್ನು ಒಪ್ಪಿಕೋ’ ಎನ್ನುತ್ತಾನೆ. ಬೇರೆ ದಾರಿ ಕಾಣದೆ ನಾಯಕಿ ಒಪ್ಪಿಗೆಯ ಮಾತಾಡಿದರೆ ಒಂದೆರಡೇ ದಿನಗಳಲ್ಲಿ ಮದುವೆ ನಡೆಸುವುದೆಂದು ನಿರ್ಧರಿಸಲಾಗುತ್ತದೆ.
ಮದುವೆಯ ಹಿಂದಿನ ದಿನ, ತನ್ನ ಪರಿಸ್ಥಿತಿ ನೆನೆದು ನಾಯಕಿ ಅಳುತ್ತಿರುತ್ತಾಳೆ. ಅದನ್ನು ಕಂಡ ಒಂದು ಮಗು-‘ಅಮ್ಮಾ ಯಾಕೆ ಅಳ್ತಾ ಇದೀಯ?’ ಎನ್ನುತ್ತದೆ. ಈಕೆ-‘ಎಲ್ಲಾ ನನ್ನ ಹಣೆಬರಹ’ ಎಂದು ಬಿಕ್ಕಳಿಸುತ್ತಾಳೆ. ‘ಹಣೆಬರಹ’ ಅಂದ್ರೆ ಏನಮ್ಮಾ ಎಂದು ಮಗು ಮತ್ತೆ ಕೇಳುತ್ತದೆ.’ ಅದನ್ನು ನಿಮ್ಮ ಅಪ್ಪನ ಬಳಿ ಕೇಳು’ ಅನ್ನುತ್ತಾಳೆ ನಾಯಕ. ಅಮಾಯಕ ಮಗು ನಾಯಕನ ಬಳಿ ಬಂದು ಕೇಳಿದಾಗ-‘ನಾವು ಏನನ್ನು ಬಯಸುತ್ತೇವೆಯೋ, ಅದು ನಡೆಯದೇ ಹೋದರೆ- ಅದನ್ನೇ ಹಣೆಬರಹ’ ಅಂತಾರೆ ಅನ್ನುತ್ತಾನೆ ನಾಯಕ. ನಂತರ-‘ತುಂಬಾ ಹೊತ್ತಾಗಿದೆ. ನಿನ್ನನ್ನು ಮಲಗಿಸಿ ಬರ್‍ತೇನೆ ನಡಿ’ ಎನ್ನುತ್ತಾ ಮಕ್ಕಳ ವಾರ್ಡ್‌ಗೆ ಬರುತ್ತಾನೆ. ಅಲ್ಲಿ ಕೆಲವು ಮಕ್ಕಳು ಮಲಗಿರುತ್ತವೆ. ಕೆಲವು ತಮ್ಮ ಪಾಡಿಗೆ ತಾವು ಕೂತಿರುತ್ತವೆ. ಭವಿಷ್ಯದ ಬಗ್ಗೆ, ಕಣ್ಮುಂದೆಯೇ ಇರುವ ಸಾವಿನ ಬಗ್ಗೆ ಏನೊಂದೂ ಗೊತ್ತಿಲ್ಲದ ಈ ಮಕ್ಕಳು ಎಷ್ಟೊಂದು ನೆಮ್ಮದಿಯಿಂದ ಇದ್ದಾವಲ್ಲ; ಎಲ್ಲರೂ ಹೇಗೇ ಬದುಕಿದರೆ ಚೆಂದ ಅಲ್ಲವೇ ಎಂದುಕೊಂಡು ಆ ಮಕ್ಕಳನ್ನು ನೋಡುತ್ತಾ ಹಾಡುತ್ತಾನೆ: ‘ ಇರಬೇಕು ಇರಬೇಕು ಅರಿಯದ ಕಂದನ ತರಹ/ ನಗಬೇಕು ಅಳಬೇಕು ಇರುವಂತೆ ಹಣೆ ಬರಹ..!
ಪಾಸಿಟಿವ್ ಥಿಂಕಿಂಗ್ ಸಂದೇಶದ ಈ ಹಾಡು ರೂಪುಗೊಂಡ ಬಗೆಯನ್ನು ಸುದರ್ಶನ್ ಅವರು ವಿವರಿಸಿದ್ದು ಹೀಗೆ: ಚಿತ್ರದಲ್ಲಿ ಎಲ್ಲಿ ಹಾಡು ಬರಬೇಕು, ಹಾಡುಗಳು ಹೇಗಿರಬೇಕು ಎಂಬ ಚರ್ಚೆ ಶುರುವಾಗಿತ್ತು. ಆಗ ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್ ಥಟ್ಟನೆ ಹೇಳಿದರು. ಇದು ಮಕ್ಕಳ ಮುಂದೆ ಹೇಳುವ ಹಾಡು. ಹಾಗಾಗಿ ಸರಳವಾಗಿರಲಿ. ಹಾಡಲ್ಲಿ ಶೋಕ ಅಥವಾ ಪ್ರೇಮದ ಸಾಲುಗಳು ಬರುವುದು ಬೇಡ. ಬದಲಿಗೆ, ಬದುಕಲ್ಲಿ ಭರವಸೆ ಮೂಡಿಸುವ ಸಾಲುಗಳಿರಲಿ…’ ಹೀಗೆ ಸಲಹೆ ನೀಡಿದ ಜಿ.ಕೆ.ವಿ. ಮರುಕ್ಷಣವೇ- ಲಲಲಾಲ ಲಲಲಾಲ ಲಲಲಲ ಲಲಲ ಲಾಲ…. ಲಲಲಾಲ ಲಲಲಾಲ ಲಲಲಲ ಲಾಲಲ ಲಲಲ…’ ಎಂದು ಟ್ಯೂನ್ ಕೊಟ್ಟರು. ಈ ಸಂದರ್ಭದಲ್ಲಿ ಜಿ.ಕೆ.ವಿ ಅವರ ಶಿಷ್ಯರಾಗಿದ್ದವರು ಇಳಯರಾಜಾ.
ನಮ್ಮಣ್ಣ ಆರ್. ಎನ್. ಜಯಗೋಪಾಲ್ ಅತ್ಯುತ್ತಮ ವಯಲಿನ್ ವಾದಕನಾಗಿದ್ದ. ಹಾಗಾಗಿ ಅವನಿಗೆ ರಾಗದ ಮೇಲೆ ಒಳ್ಳೆಯ ಹಿಡಿತವಿತ್ತು. ಹಾಡು- ಪ್ರೇಮಗೀತೆಯಾಗಬಾರದು, ಶೋಕ ಗೀತೆಯೂ ಆಗಬಾರದು. ಮಕ್ಕಳ ಗೀತೆಯಂತೆಯೂ ಇರಬಾರದು. ಬದಲಿಗೆ ಮಕ್ಕಳನ್ನು ಸಾಧನೆಯೆಡೆಗೆ ಪ್ರಚೋದಿಸುವಂಥ ಹಾಡಾಗಬೇಕು ಎಂಬ ಜಿ.ಕೆ.ವಿ ಯವರ ಮಾತನ್ನೇ ಮತ್ತೆ ಮತ್ತೆ ನೆನಪಿಸಿಕೊಂಡ ಆತ ಪಲ್ಲವಿ ಮತ್ತು ಮೊದಲ ಚರಣವನ್ನು ಚಕಚಕನೆ ಬರೆದು ಹೇಳಿದ. ‘ತಾವರೆ ನೀರಲ್ಲಿರುತ್ತದೆ. ಆದರೆ ಅದರ ಎಲೆಯ ಮೇಲೆ ಒಂದೇ ಒಂದು ಹನಿಯೂ ನಿಲ್ಲುವುದಿಲ್ಲ. ಅಂತೆಯೇ ಬದುಕೂ ಸಹ. ನಾವು ಸಂತೋಷ ಮತ್ತು ದುಃಖವನ್ನು ಒಂದೇ ಭಾವದಿಂದ ಸ್ವೀಕರಿಸಬೇಕು ಎಂಬುದಕ್ಕೆ ಮೊದಲ ಚರಣ’ ಎಂದು ವಿವರಣೆಯನ್ನೂ ನೀಡಿದ.
‘ಸರಿ, ಎರಡನೇ ಚರಣದಲ್ಲಿ ಮಕ್ಕಳಿಗೆ ಭರವಸೆ ಹೆಚ್ಚಿಸುವಂಥ ಸಾಲುಗಳು ಬೇಕು ಅನ್ನಿಸಿತು. ಚರ್ಚೆಗೆ ಕೂತಿದ್ದ ಎಲ್ಲರೂ ಅದೇ ಮಾತು ಹೇಳಿದೆವು. ಆಗ ಜಯಗೋಪಾಲ್ ಒಂದೆರಡು ನಿಮಿಷ ಯೋಚಿಸಿ- ‘ಇರಬೇಕು, ಇರಬೇಕು ಬಾಳಲಿ ಭರವಸೆ ಮುಂದೆ/ ನೋವಿರಲಿ ನಲಿವಿರಲಿ ನೋಡಲೆ ಬಾರದು ಹಿಂದೆ’ ಎಂಬ ಅಪೂರ್ವ ಕಾಂತಿಯ ಸಾಲುಗಳನ್ನು ಬರೆದುಕೊಟ್ಟ. ಚಿಕ್ಕಂದಿನಲ್ಲೇ ನಾನು ಶಾಸ್ತ್ರೀಯ ಸಂಗೀತ ಕಲಿತಿದ್ದೆ. ಯೌವನದ ದಿನಗಳಲ್ಲಿ ನಾವು ಅರೆನ್ನಾರ್ ಸೋದರರು ಸಂಗೀತ ಕಾರ್ಯಕ್ರಮವನ್ನೂ (ಆರ್‌ಎನ್‌ಜೆ ವಯಲಿನ್, ಕೃಷ್ಣಪ್ರಸಾದ್- ಮೃದಂಗ ವಾದ್ಯ ಪ್ರವೀಣರಾಗಿದ್ದರು) ನೀಡುತ್ತಿದ್ದೆವು. ಈ ವಿಷಯ ಗೊತ್ತಿದ್ದ ಜಿ.ಕೆ. ವೆಂಕಟೇಶ್- ‘ಈ ಹಾಡನ್ನು ನೀನೇ ಹಾಡಯ್ಯ ಚಿನ್ನೂ’ ಅಂದರು. ಪರಿಣಾಮ- ಈ ಹಾಡಿಗೆ ದನಿಯಾಗುವ ಸುಯೋಗ ನನ್ನದಾಯಿತು.
ನಗುವ ಹೂವು ಸಿನಿಮಾ ಗೆದ್ದಿತು. ರಾಷ್ಟ್ರಪ್ರಶಸ್ತಿ ಪಡೆಯಿತು. ಇದಾಗಿ ಎರಡು ದಶಕದ ನಂತರ ಚೆನ್ನೈನ ಒಂದು ರೆಕಾರ್ಡಿಂಗ್ ಸ್ಟುಡಿಯೋಗೆ ಯಾವುದೋ ಕೆಲಸದ ನಿಮಿತ್ತ ಹೋಗಿದ್ದೆ. ಆ ವೇಳೆಗೆ ಖ್ಯಾತಿಯ ತುತ್ತು ತುದಿಯಲ್ಲಿದ್ದ ಇಳಯರಾಜಾ ಅವರೂ ಅಲ್ಲಿಗೆ ಬಂದಿದ್ದರು. ಅವರನ್ನು ಒಮ್ಮೆ ಮಾತಾಡಿಸಬೇಕೆಂಬ ಆಸೆ. ಆದರೆ, ಅವರು ಗುರುತಿಸದಿದ್ದರೆ ಏನು ಮಾಡುವುದು ಎಂಬ ಸಹಜ ಆತಂಕ ನನ್ನದು. ನಾನು ಈ ಚಡಪಡಿಕೆಯಲ್ಲಿದ್ದಾಗಲೇ ಇಳಯ ರಾಜಾ ನನ್ನನ್ನು ನೋಡಿದರು. ತಕ್ಷಣ, ನಿಂತ ಜಾಗದಲ್ಲೇ ಜೋರಾಗಿ- ‘ಇರಬೇಕು, ಇರಬೇಕೂ ಅರಿಯದ ಕಂದನ ತರಹ’ ಎಂದು ಹಾಡುತ್ತ ಹಾಡುತ್ತಲೇ ನನ್ನೆಡೆಗೆ ಬಂದರು. ನನ್ನ ಕೈ ಹಿಡಿದು ಎದೆಗೆ ಒತ್ತಿಕೊಂಡು. ‘ಎಂಥಾ ಒಳ್ಳೆಯ ಹಾಡಲ್ವಾ ಸಾರ್ ಇದೂ? ಈ ಹಾಡಿನ ಮಾಧುರ್ಯಕ್ಕೆ ಸಾಟಿ ಯಾವುದಿದೆ ಹೇಳಿ’ ಎಂದು ಉದ್ಗರಿಸಿದರು. ಅವರ ಮನದ ಮಾತು ಕೇಳಿದಾಗ ಸಂತೋಷ ಹೆಚ್ಚಾಯಿತು. ಆ ಕಾರಣಕ್ಕೆ ಕಣ್ತುಂಬಿಕೊಂಡಿತು…. ಹೀಗೆ ಹೇಳುತ್ತ ಹೇಳುತ್ತಲೇ ಭಾವಪರವಶರಾಗಿ ಮತ್ತೆ ಹಾಡಿದರು ಸುದರ್ಶನ್: ಇರಬೇಕು ಇರಬೇಕು ಅರಿಯದ ಕಂದನ ತರಹ/ ನಗಬೇಕು ಅಳಬೇಕು ಇರುವಂತೆ ಹಣೆ ಬರಹ…’
***
ಸೂಕ್ಷ್ಮವಾಗಿ ಗಮನಿಸಿ: ಈ ಹಾಡು ರಚನೆಯಾಗಿ ನಾಲ್ಕು ದಶಕಗಳೇ ಕಳೆದಿವೆ. ಆದರೆ ಈ ಹಾಡು, ಅದರಲ್ಲಿರುವ ಸಂದೇಶ ಇಂದಿಗೂ ಪ್ರಸ್ತುತ ಎನ್ನುವಂತಿದೆ. ಮುಗಿದು ಹೋಗುತ್ತಿರುವ ವರ್ಷದಲ್ಲಿ ಕೈ ಹಿಡಿದಿದ್ದ ನೋವು, ಸೋಲು, ಯಾತನೆಗಳಿಂದ ಬೇಸರಗೊಂಡವರಿಗೆ- ‘ಇರಬೇಕು ಇರಬೇಕು ಬಾಳಲಿ ಭರವಸೆ ಮುಂದೆ/ ನೋವಿರಲಿ ನಲಿವಿರಲಿ ನೋಡಲೆ ಬಾರದು ಹಿಂದೆ’ ಎಂಬ ಹಾಡಿನ ಸಾಲುಗಳನ್ನೇ ನೆನಪಿಸುತ್ತ- ಹೊಸ ವರ್ಷದ ಶುಭಾಶಯ-ಒಂದು ದಿನ ಮುಂಚಿತವಾಗಿ!

‘ಪ್ರೇಮ ಸಂಭಾಷಣೆ’ಯ ಸಂದರ್ಭದಲ್ಲಿ ಗುರು-ಶಿಷ್ಯರ ಮೌನ ಸಂಭಾಷಣೆ!

ಡಿಸೆಂಬರ್ 15, 2010


ಚಿತ್ರ: ಧರ್ಮಸೆರೆ ಗೀತೆರಚನೆ: ವಿಜಯ ನಾರಸಿಂಹ
ಸಂಗೀತ: ಉಪೇಂದ್ರ ಕುಮಾರ್ ಗಾಯನ: ಎಸ್.ಪಿ. ಬಾಲಸುಬ್ರಹ್ಮಣ್ಯಂ-ಎಸ್. ಜಾನಕಿ
ಈ ಸಂಭಾಷಣೆ ನಮ್ಮ ಈ ಪ್ರೇಮ ಸಂಭಾಷಣೆ
ಅತಿ ನವ್ಯ ರಸಕಾವ್ಯ ಮಧುರಾ ಮಧುರಾ ಮಧುರಾ||ಪ||

ಪ್ರೇಮಗಾನ ಪದಲಾಸ್ಯ ಮೃದುಹಾಸ್ಯ
ಶೃಂಗಾರ ಭಾವಗಂಗಾ
ಸುಂದರ, ಸುಲಲಿತ, ಮಧುರಾ ಮಧುರಾ ಮಧುರಾ||೧||

ರ ಶರದಿ ಮೆರೆವಂತೆ ಮೊರೆವಂತೆ
ಹೊಸರಾಗ ಧಾರೆಯಂತೆ
ಮಂಜುಳ, ಮಧುಮಯ, ಮಧುರಾ ಮಧುರಾ ಮಧುರಾ||೨||

ಚೈತ್ರ ತಂದ ಚಿಗುರಂತೆ, ಚೆಲುವಂತೆ
ಸೌಂದರ್ಯ ಲಹರಿಯಂತೆ
ನಿರ್ಮಲ, ಕೋಮಲಾ, ಮಧುರಾ ಮಧುರಾ ಮಧುರಾ||೩||

‘ಧರ್ಮಸೆರೆ’ ಚಿತ್ರದ ಹಾಡಿನ ಬಗ್ಗೆ ಹೇಳ್ತೀನಿ ಅಂದಿದ್ದೆ ಅಲ್ವಾ? ಆ ಸ್ವಾರಸ್ಯವನ್ನೇ ಹೇಳ್ತೀನಿ ಕೇಳಿ ಎನ್ನುತ್ತಾ ಮಾತು ಆರಂಭಿಸಿದರು ಪ್ರಣಯರಾಜ ಶ್ರೀನಾಥ್. ಅವರ ಮಾತಿನ ಕಥೆ ಮುಂದುವರಿದಿದ್ದು ಹೀಗೆ:
‘ಇದು ೧೯೭೮-೭೯ರ ಮಾತು. ಆಗ ನಟ ವಜ್ರಮುನಿ ಅವರು ತಮ್ಮ ಸ್ವಂತ ನಿರ್ಮಾಣದಲ್ಲಿ ‘ಗಂಡ ಭೇರುಂಡ’ ಸಿನಿಮಾ ಆರಂಭಿಸಿದ್ದರು. ಇದೇ ಸಂದಭ ದಲ್ಲಿ ಪುಟ್ಟಣ್ಣ ಕಣಗಾಲ್ ಅವರು ‘ಧರ್ಮಸೆರೆ’ ಆರಂಭಿಸಿದ್ದರು. ಎರಡೂ ಚಿತ್ರಗಳಿಗೂ ನಾನೇ ನಾಯಕನಾಗಿದ್ದೆ. ಮೊದಲು ಪುಟ್ಟಣ್ಣ ಅವರ ಸಿನಿಮಾಕ್ಕೆ, ನಂತರ ವಜ್ರಮುನಿಯವರ ಚಿತ್ರಕ್ಕೆ ಕಾಲ್‌ಶೀಟ್ ನೀಡಿದ್ದೆ. ಮೈಸೂರಿನ ಪ್ರೀಮಿಯರ್ ಸ್ಟುಡಿಯೋದಲ್ಲಿ ಹಾಕಿದ್ದ ಸೆಟ್‌ನಲ್ಲಿ ೭-೮ ದಿನಗಳ ಕಾಲ ‘ಧರ್ಮಸೆರೆ’ಯ ಶೂಟಿಂಗ್ ನಡೆಯಿತು.
ಅದೊಂದು ರಾತ್ರಿ ಊಟ ಮುಗಿಸಿಕೊಂಡು ನಾನು ಉಳಿದುಕೊಂಡಿದ್ದ ಹೈವೇ ಹೋಟೆಲಿಗೆ ಬರುವಾಗಲೇ ಯಾಕೋ ಹೊಟ್ಟೆ ತೊಳೆಸಿದಂತಾಯಿತು. ರೂಂಗೆ ಬಂದರೆ ಬಿಟ್ಟೂ ಬಿಡದಂತೆ ವಾಂತಿ-ಬೇ. ಹೌದು. ನನಗೆ ಫುಡ್ ಪಾಯಿಸನ್ ಆಗಿತ್ತು. ಬೆಳಗ್ಗೆ ಆಗುವ ವೇಳೆಗೆ ಹಾಸಿಗೆಯಿಂದ ಮೇಲೇಳಲೂ ಆಗದಷ್ಟು ನಿತ್ರಾಣನಾಗಿ ಹೋಗಿದ್ದೆ. ಸಾಮಾನ್ಯವಾಗಿ ಹೈವೇ ಹೋಟೆಲಿನಲ್ಲಿ ಉಳಿದುಕೊಂಡರೆ, ಬೆಳಗ್ಗೆ ಎದ್ದ ತಕ್ಷಣ ರಿಸೆಪ್ಶನ್‌ಗೆ ಫೋನ್ ಮಾಡಿ ನನ್ನ ಇಷ್ಟದ ಹಾಡು ಹಾಕುವಂತೆ ಹೇಳುತ್ತಿದ್ದೆ. ರೂಂನಲ್ಲಿದ್ದ ಸ್ಪೀಕರ್ ಮೂಲಕ ಹಾಡು ಕೇಳಿ ನಂತರ ಶೂಟಿಂಗ್‌ಗೆ ಹೊರಡುತ್ತಿದ್ದೆ.
ಆದರೆ, ಎಷ್ಟು ಹೊತ್ತಾದರೂ ನನ್ನಿಂದ ‘ಹಾಡುಗಳ ಪ್ರಸಾರ ಕೋರಿ’ ಫೋನ್ ಬಾರದ್ದನ್ನು ಕಂಡು ಅನುಮಾನಗೊಂಡ ನನ್ನ ಆತ್ಮೀಯರೂ, ಹೋಟೆಲಿನ ಮ್ಯಾನೇಜರೂ ಆಗಿದ್ದ ಶಮ್ಮಿಯವರು ತಮ್ಮಲ್ಲಿದ್ದ ಮಾಸ್ಟರ್ ಕೀ ಬಳಸಿ ನನ್ನ ರೂಂ ಬಾಗಿಲು ತೆರೆದಿದ್ದಾರೆ. ಆಗ ನಾನು ಹೊಟ್ಟೆ ನೋವು ತಡೆಯಲಾಗದೆ ಒದ್ದಾಡುತ್ತಿದ್ದೆ. ಶಮ್ಮಿಯವರು ತಕ್ಷಣವೇ ಫೋನ್ ಮಾಡಿ ಡಾಕ್ಟರನ್ನು ಕರೆಸಿ, ಚಿಕಿತ್ಸೆ ಕೊಡಿಸಿದರು.
ಆ ಕ್ಷಣದಲ್ಲಿ ಯಾಕೆ ಹಾಗನ್ನಿಸಿತೋ ಕಾಣೆ. ಮೈಸೂರಲ್ಲಿಯೇ ಇದ್ದರೆ ನಾನು ಉಳಿಯಲಾರೆ ಅನ್ನಿಸಿಬಿಡ್ತು. ಎರಡನೇ ಹೆರಿಗೆಗೆ ಗರ್ಭಿಣಿಯಾಗಿದ್ದ ಹೆಂಡತಿಯ ಚಿತ್ರ ಕಣ್ಮುಂದೆ ಬಂತು. ‘ಶಮ್ಮೀ, ಒಂದೇ ಒಂದ್ಸಲ ನನ್ನ ಹೆಂಡತೀನ ನೋಡಬೇಕು ಅನ್ನಿಸ್ತಿದೆ. ದಯವಿಟ್ಟು ಈಗಲೇ ನನ್ನನ್ನು ಬೆಂಗಳೂರ್‍ಗೆ ಕಳಿಸಿಕೊಡಿ’ ಎಂದು ಕೇಳಿಕೊಂಡೆ. ತಕ್ಷಣವೇ ಒಂದು ಅಂಬಾಸಿಡರ್ ಕಾರನ್ನು ಗೊತ್ತು ಮಾಡಿದ ಶಮ್ಮಿ, ಹಿಂದಿನ ಸೀಟ್‌ನಲ್ಲಿ ಮಲಗಿ ಪ್ರಯಾಣಿಸುವಂತೆ ಸೂಚಿಸಿದರು. ಹೋಟೆಲಿನಿಂದ ದಿಂಬುಗಳನ್ನೂ ಒದಗಿಸಿಕೊಟ್ಟರು.
ಈ ವೇಳೆಗಾಗಲೇ ಬೆಳಗಿನ ಹತ್ತು ಗಂಟೆ ಆಗಿತ್ತು. ಅತ್ತ ಚಿತ್ರೀಕರಣಕ್ಕೆ ಸಿದ್ಧರಾಗಿದ್ದ ಪುಟ್ಟಣ್ಣನವರು-ಶ್ರೀನಾಥ್ ಇನ್ನೂ ಶೂಟಿಂಗ್ ಸ್ಪಾಟ್‌ಗೆ ಬಂದಿಲ್ಲ. ಯಾಕೆ ಅಂತ ತಿಳಿದು ಬಾ’ ಎಂದು ತಮ್ಮ ಸಹಾಯಕನನ್ನು ಕಳಿಸಿದ್ದರು. ನಾನು ಅವರಿಗೆ ನನ್ನ ಅನಾರೋಗ್ಯದ ಬಗ್ಗೆ ವಿವರಿಸಿದೆ. ತುಂಬಾ ನಿಶ್ಶಕ್ತಿ ಆಗಿರುವುದರಿಂದ ಬೆಂಗಳೂರಿಗೆ ಹೋಗ್ತಾ ಇದೀನಪ್ಪಾ. ಗುರುಗಳಿಗೆ ಹಾಗಂತ ಹೇಳಿಬಿಡು’ ಎಂದೂ ಹೇಳಿದೆ.
ವಿಪರ್‍ಯಾಸ ಕೇಳಿ: ಪುಟ್ಟಣ್ಣನವರ ಬಳಿಗೆ ಹೋದ ಆ ‘ಸಹಾಯಕ’ ನನ್ನ ಅನಾರೋಗ್ಯದ ಬಗ್ಗೆ ಹೇಳಲೇ ಇಲ್ಲ. ಬದಲಾಗಿ-‘ಶ್ರೀನಾಥ್ ನಾಟಕ ಮಾಡ್ತಾ ಇದಾರೆ ಸಾರ್. ಬಹುಶಃ ಬೇರೆ ನಿರ್ಮಾಪಕರಿಗೆ ಡೇಟ್ಸ್ ಕೊಟ್ಟಿದಾರೆ ಅನ್ನುತ್ತೆ. ಹಾಗಾಗಿ ಬೆಂಗಳೂರಿಗೆ ಹೊರಟಿದ್ದಾರೆ’ ಅಂದು ಬಿಟ್ಟಿದ್ದಾನೆ!
ಪುಟ್ಟಣ್ಣನವರಿಗೆ ನನ್ನ ಮೇಲೆ ಅಪಾರ ಪ್ರೀತಿ, ನಂಬಿಕೆ. ಅವರು ತಕ್ಷಣವೇ ಅಡ್ಡಡ್ಡ ತಲೆಯಾಡಿಸಿ-ಶ್ರೀನಾಥ್ ನನ್ನ ಪ್ರೀತಿಯ ಶಿಷ್ಯ. ಅವನು ಹಾಗೆ ಮಾಡೋದಿಲ್ಲ’ ಎಂದಿದ್ದಾರೆ. ನಂತರ ಏನಾಗಿದೆ ಅಂತ ನೋಡಿಕೊಂಡು ಬಾಪ್ಪಾ ಎಂದು ಮತ್ತೊಬ್ಬ ಸಹಾಯಕರನ್ನು ಕಳಿಸಿದ್ದಾರೆ. ಬೇರೊಬ್ಬ ಸಹಾಯಕರು ಹೋಟೆಲಿಗೆ ಬರುವ ವೇಳೆಗೆ ನನ್ನ ಕಾರು ಬೆಂಗಳೂರಿನ ಹಾದಿ ಹಿಡಿದಿತ್ತು. ವಾಪಸ್ ಹೋದ ಎರಡನೇ ಸಹಾಯಕ-‘ಸರ್, ಶ್ರೀನಾಥ್ ಅವರು ನನಗೆ ಸಿಗಲಿಲ್ಲ’ ಎಂದು ಬಿಟ್ಟಿದ್ದಾರೆ. ಈ ಸಂದರ್ಭ ಬಳಸಿಕೊಂಡ ಮೊದಲು ಬಂದಿದ್ದ ವ್ಯಕ್ತಿ-‘ನಾನು ಮೊದಲೇ ಹೇಳಲಿಲ್ವ ಸಾರ್? ಶ್ರೀನಾಥ್ ಖಂಡಿತ ನಾಟಕ ಮಾಡ್ತಾ ಇದ್ದಾರೆ. ಅಲ್ಲಿ ಬೇರೆ ಸಿನಿಮಾದ ಶೂಟಿಂಗ್ ಇರಬೇಕು. ಅದಕ್ಕೇ ಅವಸರದಲ್ಲಿ ಹೋಗಿದ್ದಾರೆ’ಎಂದು ಬಿಟ್ಟಿದ್ದಾನೆ.
ಈ ಮಾತು ಕೇಳಿದ ಪುಟ್ಟಣ್ಣ ಕಿಡಿಕಿಡಿಯಾಗಿದ್ದರೆ. ಅವರಿಗೆ ಸಿಟ್ಟು ನೆತ್ತಿಗೇರಿದೆ. ತಕ್ಷಣವೇ ನಿರ್ಮಾಪಕ ಎನ್. ವೀರಾಸ್ವಾಮಿ ಅವರಿಗೆ ಟ್ರಂಕ್ ಕಾಲ್ ಮಾಡಿ ವಿಷಯ ತಿಳಿಸಿ, ಶ್ರೀನಾಥ್‌ಗೆ ನೀವು ಬುದ್ಧಿ ಹೇಳಿ ಎಂದಿದ್ದಾರೆ. ಶ್ರೀನಾಥ್ ನನಗೇ ಹೀಗೆ ಮಾಡಬಹುದಾ ಎಂದೂ ಪ್ರಶ್ನೆ ಹಾಕಿದ್ದಾರೆ. ‘ಛೆ ಛೆ, ಶ್ರೀನಾಥ್ ಅಂಥವರಲ್ಲ’ ಎಂದು ವೀರಾಸ್ವಾಮಿಯವರು ಹೇಳಿದರೂ ಪುಟ್ಟಣ್ಣನವರಿಗೆ ಸಮಾಧಾನವಾಗಿಲ್ಲ. ಇದರಿಂದ ಬೇಸರಗೊಂಡ ವೀರಾಸ್ವಾಮಿಯವರು ನನ್ನನ್ನೇ ಗದರಿಸಿ ಬುದ್ಧಿ ಹೇಳಲು ಮಲ್ಲೇಶ್ವರಂನಲ್ಲಿದ್ದ ನಮ್ಮ ಅತ್ತೆಯ ಮನೆಗೆ ಬಂದರು. ಅಲ್ಲಿ ನಿತ್ರಾಣನಾಗಿ ಮಲಗಿದ್ದ ನನ್ನನ್ನು ಕಂಡು ಆವಾಕ್ಕಾದರು. ಪುಟ್ಟಣ್ಣನವರ ಸಿಟ್ಟು, ಅದಕ್ಕೆ ಕಾರಣ ವಿವರಿಸಿ-‘ಹೆದರಬೇಡ. ಬೇಗ ಹುಶಾರಾಗು’ ಎಂದು ಧೈರ್ಯ ಹೇಳಿದರು. ನಂತರ ಪುಟ್ಟಣ್ಣನವರಿಗೆ ಫೋನ್ ಮಾಡಿ ಎಲ್ಲ ವಿಷಯ ತಿಳಿಸಿದ್ದಾರೆ. ಆದರೆ, ವೀರಸ್ವಾಮಿಯವರ ಮಾತು ನಂಬದ ಪುಟ್ಟಣ್ಣ-‘ ನೀವೂ ಕೂಡ ಶ್ರೀನಾಥ್ ಪರವಾಗಿಯೇ ಮಾತಾಡ್ತಾ ಇದೀರಾ? ಎನ್ನುತ್ತಾ ಪೋನ್ ಕುಕ್ಕಿದ್ದಾರೆ!
ನಾನು ಸಂಪೂರ್ಣ ಗುಣಮುಖನಾಗುವ ವೇಳೆಗೆ ಮೂರು ವಾರ ಕಳೆದುಹೋಗಿತ್ತು. ಆ ವೇಳೆಗೆ ಪುಟ್ಟಣ್ಣ ಅವರಿಗೆ ನೀಡಿದ್ದ ಡೇಟ್ಸ್ ಮುಗಿದಿತ್ತು. ಈ ಕಡೆ ವಜ್ರಮುನಿ ಅವರ ‘ಗಂಡು ಭೇರುಂಡ’ ಸಿನಿಮಾದ ಚಿತ್ರೀಕರಣ ಆರಂಭವಾಗುವುದಿತ್ತು. ಪುಟ್ಟಣ್ಣ ಅವರು-ನನ್ನ ಸಿನಿಮಾದ ಚಿತ್ರೀಕರಣ ಮುಗಿಸದೆ ಹೋಗುವಂತಿಲ್ಲ’ ಎಂದು ಮೊದಲೇ ಹೇಳಿದ್ದರು. ಈ ಸಂದರ್ಭದಲ್ಲಿ ಒಂದು ಕಡೆ ಗುರುಗಳು, ಮತ್ತೊಂದು ಕಡೆ ಪ್ರೀತಿಯ ಗೆಳೆಯ! ಇಬ್ಬರಿಗೂ ನಾನು ನ್ಯಾಯ ಒದಗಿಸಲೇ ಬೇಕಿತ್ತು. ಯಾರನ್ನೂ ಬಿಟ್ಟು ಕೊಡುವ ಹಾಗಿರಲಿಲ್ಲ. ಮುಂದೇನು ಮಾಡುವುದು ಎಂದು ನಾನು ದಿಕ್ಕು ತೋಚದೆ ಕೂತಿದ್ದಾಗ ಮತ್ತೆ ವೀರಾಸ್ವಾಮಿಯವರು ನನ್ನ ಸಹಾಯಕ್ಕೆ ಬಂದರು. ಅವರೇ ಮುಂದೆ ನಿಂತು ಖಾಜಿ ನ್ಯಾಯ ಮಾಡಿದರು. ಅದರಂತೆ ಒಂದೊಂದು ದಿನ ಒಬ್ಬೊಬ್ಬರ ಚಿತ್ರದಲ್ಲಿ ನಾನು ನಟಿಸುವುದೆಂದು ತೀರ್ಮಾನವಾಯಿತು. ಈ ನ್ಯಾಯಕ್ಕೆ ಎರಡೂ ಕಡೆಯವರು ಒಪ್ಪಿದರು. ಉಡುಪಿ-ಕುಂದಾಪುರದ ಮಧ್ಯೆ ಇದ್ದ ಒಂದು ನದಿ ಪ್ರದೇಶದಲ್ಲಿ ‘ಈ ಸಂಭಾಷಣೆ’ ಹಾಡಿನ ಚಿತ್ರೀಕರಣ ಶುರುವಾಯಿತು. ಆಗಷ್ಟೇ ಮದುವೆಯಾದ ಜೋಡಿಯ ಪ್ರಣಯಗೀತೆ ಇದು. ಇದನ್ನು ಪುಟ್ಟಣ್ಣ ವಿಶೇಷ ಆಸಕ್ತಿ ವಹಿಸಿ ಬರೆಸಿದ್ದರು. ಆದರೆ ಚಿತ್ರೀಕರಣ ಶುರುವಾಗುವ ವೇಳೆಗೆ ನಮ್ಮ ಮಧ್ಯೆ ಮುನಿಸು ಬೆಳೆದಿತ್ತು. ಮಾತುಕತೆ ನಿಂತುಹೋಗಿತ್ತು. ನಾನು ಮೇಕಪ್ ಮಾಡಿಸಿಕೊಂಡು ಕೂತಿದ್ದರೆ, ಪುಟ್ಟಣ್ಣನವರು ತಮ್ಮ ಸಹಾಯಕರನ್ನು ಕರೆದು-‘ ಎಲ್ಲಪ್ಪಾ ನಮ್ಮ ಹೀರೋ? ಕರೆಯಪ್ಪಾ ಅವರನ್ನು… ಕ್ಯಾಮರಾ ಮುಂದೆ ನಿಲ್ಲೋಕೆ ಹೇಳಿ ಅವರಿಗೆ…’ ಎಂದು ನನಗೆ ಕೇಳಿಸುವಂತೆಯೇ ಹೇಳುತ್ತಿದ್ದರು. ನಾನು ಒಂದೂ ಮಾತಾಡದೆ ಕ್ಯಾಮರಾ ಮುಂದೆ ನಿಂತರೆ-‘ಅವರಿಗೆ ಹಾಡಿನ ಸಾಲು ಹೇಳಪ್ಪಾ’ ಅನ್ನುತ್ತಿದ್ದರು. ಸಹಾಯಕರು-ಹಾಡಿನ ಸಾಲು ಹೇಳಿ, ಮುಖ ಭಾವ ಹೇಗಿರಬೇಕೆಂದು ವಿವರಿಸಲು ಹೊರಟರೆ-ಹಾಗಲ್ಲಪ್ಪಾ, ಅವರಿಗೆ ಹಾಡಿನ ಸಾಲು ಹೇಳಿದರೆ, ಸಾಕು. ಅವರು ಹೀರೋ! ಅವರಿಗೆ ಉಳಿದಿದ್ದೆಲ್ಲಾ ಅರ್ಥವಾಗುತ್ತೆ’ ಎನ್ನುತ್ತಿದ್ದರು. ಅವರ ಪ್ರತಿ ಮಾತಲ್ಲೂ ಪ್ರೀತಿ, ವ್ಯಂಗ್ಯ, ಸಿಡಿಮಿಡಿ ಇರುತ್ತಿತ್ತು. ತಮ್ಮ ಸಿಟ್ಟನ್ನು ಅವರು ಮಾತಿನ ಮೂಲಕವೇ ತೋರಿಸುತ್ತಿದ್ದರು.
‘ಈ ಸಂಭಾಷಣೆ…’ ಹಾಡನ್ನು ಹೆಚ್ಚಾಗಿ ಕ್ಲೋಸ್ ಅಪ್ ಶಾಟ್‌ನಲ್ಲಿ ಚಿತ್ರಿಸಲಾಗಿದೆ. ಶೂಟಿಂಗ್ ಸಂದರ್ಭದಲ್ಲಿ ನನ್ನ ಮುಂದೆ ಕ್ಯಾಮರಾ, ಅದರ ಹಿಂದೆ ಛಾಯಾಗ್ರಾಹಕ ಮಾರುತಿರಾವ್, ಅವರ ಹಿಂದೆ ಪುಟ್ಟಣ್ಣ ಇರುತ್ತಿದ್ದರು. ಗುರುಗಳ ಮನಸ್ಸು ಗೆಲ್ಲಬೇಕು ಎಂದುಕೊಂಡು ನಾನೂ ತನ್ಮಯವಾಗಿ ಅಭಿನಯಿಸಿದೆ. ತಮ್ಮ ಕಲ್ಪನೆಯಂತೆಯೇ ದೃಶ್ಯ ಮೂಡಿ ಬಂದಾಗ, ಸಿಟ್ಟು ಮರೆತು ನಿಂತಲ್ಲೇ ಕಣ್ತುಂಬಿಕೊಳ್ಳುತ್ತಿದ್ದರು ಪುಟ್ಟಣ್ಣ. ಕೆಲವೊಂದು ಬಾರಿ ಮಾತೇ ಆಡದೆ ‘ಸೂಪರ್’ ಎಂಬಂತೆ ಕೈ ಸನ್ನೆಯ ಮೂಲಕ ತೋರ್ಪಡಿಸಿ ಸಂತೋಷ ಪಡುತ್ತಿದ್ದರು. ನಟಿಸುತ್ತಿದ್ದಾಗಲೇ ಅವರ ಸಂತೋಷ, ಸಂಭ್ರಮವನ್ನು ನಾನು ಸೂಕ್ಷ್ಮವಾಗಿ ಗಮನಿಸುತ್ತಲೇ ಇದ್ದೆ.
ಹಾಡಿನ ಚಿತ್ರೀಕರಣ ಮುಗಿವ ವೇಳೆಗೆ ಗುರುಗಳ ಸಿಟ್ಟು ಇಳಿದಿತ್ತು. ಮಾತಾಡಲು ಶುರು ಮಾಡಿದ್ದರು. ಅದೊಂದು ದಿನ ನಾನು-‘ಗುರುಗಳೇ ನನ್ನ ಅನಾರೋಗ್ಯದಿಂದ ಎಲ್ಲರಿಗೂ ತೊಂದ್ರೆ ಆಯ್ತು. ಕ್ಷಮಿಸಿ. ನಿಮಗೆ ನನ್ನ ಮೇಲೆ ವಿಪರೀತ ಪ್ರೀತಿ, ನಂಬಿಕೆ. ಹಾಗಿದ್ರೂ ಸಿಟ್ಟು ಮಾಡಿಕೊಂಡ್ರಿ. ಮಾತು ಬಿಟ್ಟಿರಿ. ಛೇಡಿಸಿದಿರಿ. ಎಷ್ಟೇ ಸಿಟ್ಟು ಬಂದ್ರೂ ನನ್ನ ಮೇಲಿದ್ದ ಪ್ರೀತಿ ಕಡಿಮೆಯಾಗಲಿಲ್ಲ. ಶೂಟಿಂಗ್ ವೇಳೆಯಲ್ಲಿ ನೀವು ಭಾವುಕರಾದದ್ದನ್ನು, ಕಣ್ಣಲ್ಲೇ ಮೆಚ್ಚುಗೆ ಸೂಚಿಸಿದ್ದನ್ನು ನಾನು ಗಮನಿಸಿ ಸಂತೋಷಪಟ್ಟೆ’ ಎಂದೆ.
ತಕ್ಷಣವೇ ಪುಟ್ಟಣ್ಣನವರು- ‘ಓ… ಅದನ್ನೂ ನೀನು ನೋಡಿಬಿಟ್ಯಾ? ಅಯ್ಯೋ ಮುಂಡೇದೆ, ಅದನ್ನು ನೋಡಿ ಬಿಟ್ಟೆಯಾ ನೀನೂ?’ ಎನ್ನುತ್ತಾ ನಕ್ಕರು. ಮುಂದುವರಿದು-‘ಕಲಿತು ಬಿಟ್ಟಿದ್ದೀಯ ಕಣೋ. ನನ್ನಿಂದ ಎಲ್ಲವನ್ನೂ ಕಲಿತು ಬಿಟ್ಟಿದ್ದೀಯ’ ಎಂದರು. ‘ನಿಮ್ಮ ಶಿಷ್ಯ ಅಂದ ಮೇಲೆ ಕಲಿಯಲೇ ಬೇಕಲ್ವಾ ಗುರುಗಳೇ’ ಅಂದೆ. ಕೆಲ ಸಮಯದ ನಂತರ ಪುಟ್ಟಣ್ಣನವರು ಹೇಳಿದರು: ಶ್ರೀನಾಥ್, ಈ ಸಂಭಾಷಣೆ… ಹಾಡು ಪ್ರೀತಿಸುವ ಗಂಡು-ಹೆಣ್ಣಿಗೆ ಮಾತ್ರ ಸಂಬಂಸಿದ್ದಲ್ಲ. ಅದು ಗೆಳೆಯರ ಮಾತೂ ಆಗಬಹುದು. ಮುನಿದು ಕೂತವರ ಮನಸುಗಳ ಮಾತೂ ಆಗಬಹುದು. ಮಾತಿಲ್ಲದ ಸಂದರ್ಭದಲ್ಲೂ ಜತೆಗಿರುತ್ತೆ ನೋಡು, ಆ ನಂಬಿಕೆಯ ಸಂಭಾಷಣೆಯೂ ಆಗಬಹುದು. ಹಾಗಾಗಿ ಈ ಹಾಡು ಎಲ್ಲರ ಮನಸಿನ ಹಾಡು. ಇದು ಎಲ್ಲ ವಯೋಮಾನದವರಿಗೂ ಇಷ್ಟವಾಗುತ್ತೆ’ ಎಂದರು. ಅವರ ಮಾತು ನಿಜವಾಗಿದೆ. ಈ ಹಾಡಿನ ಚಿತ್ರೀಕರಣದ ವೇಳೆಯಲ್ಲಿ ಒತ್ತಡದ ಕಾರಣದಿಂದ ನಾನು ಗೊಂದಲಕ್ಕೆ ಬೀಳದಂತೆ ನೋಡಿಕೊಂಡ ಪುಟ್ಟಣ್ಣ, ಆರತಿ ಹಾಗೂ ವಜ್ರಮುನಿಯವರಿಗೆ ನಾನು ಎಂದೆಂದೂ ಋಣಿ…’
ಹಾಡಿನ ಕಥೆ ಮುಗಿಸಿ, ಅಗಲಿದ ಗುರುಗಳು ಹಾಗೂ ಗೆಳೆಯನನ್ನು ನೆನೆದು ಕಣ್ತುಂಬಿಕೊಂಡರು ಶ್ರೀನಾಥ್.

ಇದು ಬರೀ ಚಿತ್ರಗೀತೆಯಲ್ಲ, ಎಲ್ಲರ ಬದುಕಿನ ಹಾಡು….

ಡಿಸೆಂಬರ್ 9, 2010

ಸ್ನೇಹದ ಕಡಲಲ್ಲೀ, ನೆನಪಿನ ದೋಣಿಯಲೀ
ಚಿತ್ರ: ಶುಭಮಂಗಳ , ಗೀತರಚನೆ: ಚಿ. ಉದಯಶಂಕರ್
ಸಂಗೀತ ವಿಜಯಭಾಸ್ಕರ್. ಗಾಯನ‘ ಎಸ್.ಪಿ. ಬಾಲಸುಬ್ರಹ್ಮಣ್ಯಂ

ಸ್ನೇಹದ ಕಡಲಲ್ಲೀ, ನೆನಪಿನ ದೋಣಿಯಲೀ
ಪಯಣಿಗ ನಾನಮ್ಮಾ, ಪಯಣಿಗ ನಾನಮ್ಮಾ
ಪ್ರೀತಿಯ ತೀರವ, ಸೇರುವುದೊಂದೇ
ಬಾಳಿನ ಗುರಿಯಮ್ಮ, ಬಾಳಿನ ಗುರಿಯಮ್ಮಾ ||ಪ||

ಬಾಲ್ಯದ ಆಟ, ಆ ಹುಡುಗಾಟ ಇನ್ನೂ ಮಾಸಿಲ್ಲ ಆಹಾ…
ಆಟದೆ ಸೋತು ರೋಷದಿ ಕಚ್ಚಿದ
ಗಾಯವ ಮರೆತಿಲ್ಲಾ ಆಹಾ… ಗಾಯವ ಮರೆತಿಲ್ಲ ||೧||

ಶಾಲೆಗೆ ಚಕ್ಕರ್ ಊಟಕೆ ಹಾಜರ್ ಲೆಕ್ಕದಿ ಬರಿಸೊನ್ನೆ
ಎನ್ನುತ ನಾನು ಕೆಣಕಲು ನಿನ್ನ
ಊದಿಸಿದೇ ಕೆನ್ನೇ ಆಹಾ… ನಾನದ ಮರೆಯುವೆನೇ ||೨||
‘ಸ್ನೇಹದ ಕಡಲಲ್ಲೀ… ನೆನಪಿನ ದೋಣಿಯಲೀ…’

ಸಂಗವ ಬಿಟ್ಟು ಜಗಳ ಆಡಿದ ದಿನಾವಾ ಮರೆತಿಲ್ಲ, ಆಹಾ….
ಮರೆಯಲಿ ನನ್ನಾ ಮೋರಿಗೆ ತಳ್ಳಿದ
ತುಂಟಿಯ ಮರೆತಿಲ್ಲ, ಆಹಾ… ಜಾಣೆಯ ಮರೆತಿಲ್ಲ ||೩||

ಈ ಹಾಡು ಕೇಳುತ್ತಿದ್ದಂತೆಯೇ ಬಹುಪಾಲು ಜನರಿಗೆ ತಮ್ಮ ಬಾಲ್ಯ ನೆನಪಾಗುತ್ತದೆ. ಬಾಲ್ಯದ ದಿನಗಳಲ್ಲಿ ತಾವು ಆಡಿದ ತುಂಟಾಟಗಳು, ಮಾಡಿದ ಚೇಷ್ಟೆಗಳು, ತಮಾಷೆಗಳು, ಗೆಳಯರೊಂದಿಗೆ ಆಡಿದ ಆಟ, ಜಗಳ, ಕುಸ್ತಿ…. ಎಲ್ಲವೂ ಒಂದೊಂದಾಗಿ ನೆನಪಿಗೆ ಬರುತ್ತವೆ. ಆ ಸಂದರ್ಭದಲ್ಲಿಯೇ ಎದುರು ಮನೆಯಲ್ಲಿಯೋ, ಪಕ್ಕದ ಬೀದಿಯಲ್ಲಿಯೋ ಇದ್ದ ಗೆಳತಿಯೂ ನೆನಪಾಗುತ್ತಾಳೆ. ಅವಳೊಂದಿಗೆ ಕುಂಟಾಬಿಲ್ಲೆ ಆಡಿದ್ದು, ಕಾಗೆ ಎಂಜಲು ಮಾಡಿಕೊಂಡು ಪೆಪ್ಪರ್‌ಮೆಂಟ್ ತಿಂದದ್ದು, ಯಾವುದೋ ಸಣ್ಣ ಕಾರಣಕ್ಕೆ ‘ಠೂ’ ಬಿಟ್ಟಿದ್ದು, ನಂತರ ಭರ್ತಿ ಎರಡೂವರೆ ತಿಂಗಳು ಮಾತಾಡದೆ ಉಳಿದದ್ದು; ಹಾಗಿದ್ದರೂ ಕದ್ದು ಕದ್ದು ಅವಳ ಬಗ್ಗೆ ವಿಚಾರಿಸಿಕೊಂಡದ್ದು, ಕಡೆಗೊಮ್ಮೆ ಹಬ್ಬದ ನೆಪದಲ್ಲಿ ಮಾತಾಡಿಸಿದ್ದು; ನಂತರ-ನೀನೇ ಮೊದಲು ಮಾತಾಡಿಸಿದ್ದು ಎಂದು ಇಬ್ಬರೂ ಜಂಭ ಹೊಡೆದದ್ದು… ಇಂಥ ಘಟನೆಗಳೆಲ್ಲ ಬಿಟ್ಟೂ ಬಿಡದೆ ನೆನಪಾಗುತ್ತವೆ. ಹಾಗಾಗಿ, ಹಾಡು ಕೇಳುತ್ತಾ ಹೋದಂತೆಲ್ಲ ಅದು ಚಿತ್ರಗೀತೆ ಅನ್ನಿಸುವುದಿಲ್ಲ. ಬದಲಿಗೆ, ನಮ್ಮ ಬದುಕಿನ ಹಾಡು, ಹಾಡಲ್ಲಿರುವುದೆಲ್ಲ ನಮ್ಮದೇ ಪಾಡು ಎನ್ನಿಸಿಬಿಡುತ್ತದೆ.
ಈ ಹಾಡು ಬರೆದವರು ಚಿ. ಉದಯಶಂಕರ್. ‘ಶುಭಮಂಗಳ’ ಚಿತ್ರದಲ್ಲಿ ಬಾಲ್ಯದ ‘ಸ್ನೇಹ’ ಹೊಂದಿದ್ದ ನಾಯಕ-ನಾಯಕಿ ಯೌವ್ವನದ ದಿನಗಳಲ್ಲಿ ಭೇಟಿಯಾಗುತ್ತಾರೆ. ಆಗ ನಾಯಕಿಯನ್ನು ದೋಣಿಯಲ್ಲಿ ಕೂರಿಸಿಕೊಂಡು ಹಾಗೇ ಸುಮ್ಮನೆ ಒಂದು ರೌಂಡ್ ಹೊರಡುತ್ತಾನೆ ನಾಯಕ. ಅವನಿಗೆ ಆ ಕ್ಷಣಕ್ಕೆ ಬಾಲ್ಯದ ಬದುಕು ನೆನಪಾಗುತ್ತದೆ. ಅವಳಿಗೂ ಹಳೆಯ ದಿನಗಳನ್ನು ನೆನಪಿಸಬೇಕು ಎಂಬ ಮಹದಾಸೆಯಿಂದ ಆತ ಹಾಡುತ್ತಾನೆ: ‘ಸ್ನೇಹದ ಕಡಲಲ್ಲೀ… ನೆನಪಿನ ದೋಣಿಯಲೀ… ಪಯಣಿಗ ನಾನಮ್ಮ…’
‘ಬಾಲ್ಯದ ಸ್ನೇಹವೇ ಯೌವ್ವನದಲ್ಲಿ ಪ್ರೇಮವಾಗಿ ಬದಲಾಗುತ್ತದೆ!’ -ಇದು ಎಂಥವರೂ ಒಪ್ಪಲೇಬೇಕಾದ ಕಹಿ ಸತ್ಯ. ಎಷ್ಟೋ ಸಂದರ್ಭದಲ್ಲಿ ಚಿಕ್ಕಂದಿನಿಂದಲೂ ತುಂಬಾ ಸಲುಗೆಯಿದೆ ಎಂಬ ಕಾರಣ ಮುಂದಿಟ್ಟುಕೊಂಡೇ ಹುಡುಗರು ಪ್ರೊಪೋಸ್ ಮಾಡಿಬಿಡುತ್ತಾರೆ. ವಾಸ್ತವ ಹೀಗಿದ್ದರೂ, ಚಂದುಳ್ಳಿ ಚೆಲುವೆಯಂಥ ನಾಯಕಿ ಎದುರಿಗೇ ಇದ್ದಾಗಲೂ ಪ್ರೇಮದ ಹಾಡು ಹೇಳುವ ಬದಲು ಸ್ನೇಹದ ಹಾಡು ಹೇಳುತ್ತಾನೆ. ‘ಅವಳ’ ಸನ್ನಿಯಲ್ಲಿ ‘ಅವನು’ ಸ್ನೇಹವನ್ನೇ ಧ್ಯಾನಿಸುವಂಥ ಹಾಡನ್ನು ಹೇಗೆ ಬರೆದರು ಉದಯಶಂಕರ್? ಈ ಹಾಡು ಸೃಷ್ಟಿಗೆ ಅವರಿಗೆ ಪರೋಕ್ಷವಾಗಿ ನೆರವಿಗೆ ಬಂದ ಅಂಶಗಳಾದರೂ ಯಾವುವು?
ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಹೇಳಿದವರು ‘ಶುಭಮಂಗಳ’ದ ನಾಯಕನೂ ಆಗಿದ್ದ ಪ್ರಣಯ ರಾಜ ಶ್ರೀನಾಥ್. ಆ ಹಾಡಿನ ಕಥೆ ಹೀಗೆ…
ಇದು ೧೯೭೫ರ ಮಾತು. ಆ ವೇಳೆಗೆ ನಾನು ೩೯ ಚಿತ್ರಗಳಲ್ಲಿ ಅಭಿನಯಿಸಿದ್ದೆ. ನಾಯಕ ಅನ್ನಿಸಿಕೊಂಡಿದ್ದೆ ನಿಜ. ಆದರೆ ‘ಸ್ಟಾರ್’ ಅನ್ನಿಸಿಕೊಂಡಿರಲಿಲ್ಲ. ಮನಸ್ಸಿಗೆ ತೃಪ್ತಿಕೊಡುವಂಥ ಪಾತ್ರಗಳು ಸಿಕ್ಕಿರಲಿಲ್ಲ. ಅಂಥ ಸಂದರ್ಭದಲ್ಲಿ ನಿರ್ದೇಶಕ ಕೆ.ಎಸ್.ಎಲ್. ಸ್ವಾಮಿ (ರವೀ) ತಮ್ಮ ರಘುನಂದನ್ ಇಂಟರ್‌ನ್ಯಾಷನಲ್ ಸಂಸ್ಥೆಗಾಗಿ ಒಂದು ಸಿನಿಮಾ ನಿರ್ದೇಶಿಸುವಂತೆ ಪುಟ್ಟಣ್ಣ ಕಣಗಾಲ್ ಅವರನ್ನು ಕೇಳಿಕೊಂಡರು. ಆ ವೇಳೆಗಾಗಲೇ ನಿರ್ದೇಶಕರಾಗಿ, ಅದರಲ್ಲೂ ಕಾದಂಬರಿ ಆಧಾರಿತ ಸಿನಿಮಾಗಳ ನಿರ್ದೇಶನದಿಂದಾಗಿ ಖ್ಯಾತಿಯ ತುತ್ತ ತುದಿಯಲ್ಲಿದ್ದರು ಪುಟ್ಟಣ್ಣ. ರವೀ ಅವರು ಒಂದು ಸಿನಿಮಾ ನಿರ್ದೇಶಿಸಿ ಕೊಡಿ ಎಂದು ಕೇಳಿಕೊಂಡರಲ್ಲ? ಆಗ, ಶ್ರೀಮತಿ ‘ವಾಣಿ’ ಅವರ ‘ಶುಭಮಂಗಳ’ ಕಾದಂಬರಿಯನ್ನು ಕೈಗೆತ್ತಿಕೊಂಡಿದ್ದರು ಪುಟ್ಟಣ್ಣ.
ಆ ಚಿತ್ರಕ್ಕೆ ನಟ ಶಿವರಾಂ ಸಹಾಯಕ ನಿರ್ದೇಶಕರು. ಅವರಿಗೆ ನನ್ನ ಮೇಲೆ ಯಾಕೋ ವಿಶೇಷ ಪ್ರೀತಿ. ನಿರ್ಮಾಪಕ ರವೀ ಅವರಿಗೂ ನನ್ನ ಮೇಲೆ ವಿಪರೀತ ಮಮಕಾರ. ಈ ಹೊಸ ಚಿತ್ರಕ್ಕೆ ಶ್ರೀನಾಥ್ ಅವರನ್ನೇ ನಾಯಕನನ್ನಾಗಿ ತೆಗೆದುಕೊಳ್ಳಿ ಎಂದು ರವೀ ಹಾಗೂ ಶಿವರಾಂ ಇಬ್ಬರೂ ಪುಟ್ಟಣ್ಣ ಅವರಲ್ಲಿ ಕೇಳಿಕೊಂಡಿದ್ದರು. ‘ನನ್ನ ಸಿನಿಮಾದ ನಾಯಕ-ನಾಯಕಿಯ ಬಗ್ಗೆ ನನಗಿರುವ ಅಂದಾಜುಗಳೇ ಬೇರೆ. ನನ್ನ ಕಥೆಗೆ ಒಪ್ಪುವಂತಿದ್ದರೆ ಮಾತ್ರ ಶ್ರೀನಾಥ್‌ನನ್ನು ಹೀರೋ ಮಾಡ್ತೀನಿ’ ಎಂದು ಮೊದಲೇ ಹೇಳಿದ್ದರು ಪುಟ್ಟಣ್ಣ. ನಂತರ, ನನ್ನನ್ನು ಐದಾರು ಬಗೆಯಲ್ಲಿ ‘ಟೆಸ್ಟ್’ ಮಾಡಿದರು. ಕಡೆಗೊಮ್ಮೆ ನಾನು ‘ಶುಭಮಂಗಳ’ದ ಹೀರೋ ಆದೆ.
ಸಿನಿಮಾಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಗೀತೆ ರಚನೆಯ ಕೆಲಸ ಶುರುವಾಯಿತು. ಈ ಎಲ್ಲ ಕೆಲಸ ನಡೆದದ್ದು ಮದ್ರಾಸಿನಲ್ಲಿ. ಪುಟ್ಟಣ್ಣನವರ ಸಿನಿಮಾ ಕುರಿತ ಚರ್ಚೆ ಎಂದರೆ, ಅದೊಂಥರಾ ಪಿಕ್‌ನಿಕ್ ಇದ್ದಂತೆ ಇರುತ್ತಿತ್ತು. ಸಿನಿಮಾದ ಚರ್ಚೆಯಲ್ಲಿ ನಾಯಕ, ನಾಯಕಿ, ಸಂಗೀತ ನಿರ್ದೇಶಕ, ಗೀತೆರಚನೆಕಾರ, ಗಾಯಕ…. ಹೀಗೆ ಎಲ್ಲರೂ ಪಾಲ್ಗೊಳ್ಳಬಹುದಿತ್ತು. ನಿರ್ದೇಶಕ ಪುಟ್ಟಣ್ಣ ಕಣಗಾಲ್, ನಿರ್ಮಾಪಕ ರವೀ, ಸಹ ನಿರ್ದೇಶಕ ಶಿವರಾಂ, ಸಂಗೀತ ನಿರ್ದೇಶಕ ವಿಜಯ ಭಾಸ್ಕರ್, ಗೀತ ರಚನೆಕಾರ ಚಿ. ಉದಯಶಂಕರ್… ಇವರೆಲ್ಲಾ ಈ ಸಿನಿಮಾದಿಂದ ಶ್ರೀನಾಥ್‌ಗೆ ಒಳ್ಳೆಯದಾಗಲಿ ಎಂದೇ ಬಯಸಿದ್ದರು.
ಈ ಸಂದರ್ಭದಲ್ಲಿಯೇ- ಸಿನಿಮಾ ಮೊದಲ ಹಾಡು ಹೇಗಿರಬೇಕು ಎಂಬ ಚರ್ಚೆ ಶುರುವಾಯಿತು. ‘ಬಾಲ್ಯವನ್ನು ನೆನಪು ಮಾಡಿಕೊಂಡು ನಾಯಕ ಹಾಡುವಂತಾಗಲಿ. ಇವನ ಹಾಡು ಕೇಳಿ ನಾಯಕಿಗೂ ಬಾಲ್ಯ ನೆನಪಾಗುವಂತೆ ಹಾಡು ಸೃಷ್ಟಿಯಾಗಲಿ’ ಎಂದರು ಪುಟ್ಟಣ್ಣ. ಹೀಗೆ, ಹಾಡಿನ ಸಂದರ್ಭದ ಬಗ್ಗೆ ಹೇಳಿದವರೇ-ತಮ್ಮ ಬಾಲ್ಯದ ಬಗ್ಗೆಯೂ ಹೇಳಿಕೊಂಡರು. ತಾವು ಶಾಲೆಗೆ ಚಕ್ಕರ್ ಹೊಡೆಯುತ್ತಿದ್ದುದು, ತರಲೆ ಮಾಡುತ್ತಿದ್ದುದು, ಕಾಲೇಜು ಮೆಟಟಿಲೇರದೇ ಹೋದದ್ದು… ಎಲ್ಲವನ್ನೂ ನೆನಪಿಸಿಕೊಂಡರು. ಅವರ ಮಾತು ಕೇಳುತ್ತಿದ್ದಂತೆಯೇ ಚಿ. ಉದಯಶಂಕರ್, ಕೆ.ಎಸ್.ಎಲ್. ಸ್ವಾಮಿ, ವಿಜಯಭಾಸ್ಕರ್ ಕೂಡ ಬಾಲ್ಯದ ಬಗ್ಗೆ ತಮ್ಮ ತುಂಟತನದ ಬಗ್ಗೆ ಹೇಳಿಕೊಂಡರು. ಎಲ್ಲರ ಕಥೆ ಕೇಳಿದ ನಂತರ- ‘ಸಾರ್, ನಾಯಕ ಕಡಲಿನಲ್ಲಿ ದೋಣಿ ವಿಹಾರ ಹೋಗ್ತಾ ಇರ್‍ತಾನೆ. ಆಗಲೇ ಹಳೆಯ ನೆನಪಲ್ಲಿ ತೇಲಿ ಹೋಗಿ ಬಾಲ್ಯದ ಮಧುರ ಸ್ನೇಹವನ್ನು ನೆನಪು ಮಾಡಿಕೊಳ್ತಾನೆ ಅಲ್ಲವಾ? ಅಂದರೆ, ಇದು ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಾನ…. ಅಂದರು ಚಿ. ಉದಯಶಂಕರ್.
ಅವರ ಮಾತು ಎಲ್ಲರಿಗೂ ಇಷ್ಟವಾಯಿತು. ಒಪ್ಪಿಗೆಯಾಯತು. ನಂತರದ ಹತ್ತು ನಿಮಿಷದಲ್ಲಿ ಒಬ್ಬರೇ ಕೂತು ಏನನ್ನೋ ಗುಣಗುಣಿಸುತ್ತಾ ಹಾಡಿನ ಪಲ್ಲವಿ ಹಾಗೂ ಚರಣವನ್ನು ಬರೆದರು ಉದಯಶಂಕರ್. ಮೊದಲ ಚರಣದಲ್ಲಿ ಅವರು-‘ಆಟದೆ ಸೋತೂ ರೋಷದಿ ಕಚ್ಚಿದ ಗಾಯವ ಮರೆತಿಲ್ಲ…’ ಎಂದು ಬರೆದರಲ್ಲ? ಅದನ್ನು ನೋಡಿ ಎಲ್ಲರಿಗೂ ಖುಷಿಯಾಯಿತು. ನಗು ಬಂತು. ತಂತಮ್ಮ ಬಾಲ್ಯ ಬಿಟ್ಟೂ ಬಿಡದೆ ನೆನಪಾಯ್ತು. ಪುಟ್ಟಣ್ಣ ಅವರಂತೂ ಆನಂದ ತುಂದಿಲರಾಗಿ-ಇದೇ, ಇದೇ ನನಗೆ ಬೇಕಾಗಿದ್ದುದ್ದು. ಈ ಸಾಲುಗಳಲ್ಲಿ ನಾಯಕ-ನಾಯಕಿ ಇಬ್ರೂ ಸಿಕ್ತಾರೆ. ಹಾಡು ಅವರಿಬ್ಬರದೇ ಅಲ್ಲ, ಎಲ್ಲರದೂ ಆಗುತ್ತೆ. ಇದು ಖಂಡಿತ ಎಲ್ಲರನ್ನೂ ತಲುಪುತ್ತೆ ಎಂದು ಭವಿಷ್ಯ ಹೇಳಿಬಿಟ್ಟರು.
ಈ ಪ್ರೋತ್ಸಾಹದ ಮಾತುಗಳಿಂದ ಸಹಜವಾಗಿಯೇ ಖುಷಿಯಾದ ಉದಯಶಂಕರ್, ಎರಡನೇ ಚರಣದಲ್ಲಿ ಎಲ್ಲರ ಬದುಕಲ್ಲೂ ನಡೆದಿರಬಹುದಾದ ಒಂದು ಅದ್ಭುತ ಸಾಲನ್ನೇ ಹಾಡಾಗಿಸಿದರು. ಅದೇ-ಶಾಲೆಗೆ ಚಕ್ಕರ್, ಊಟಕೆ ಹಾಜರ್ ಲೆಕ್ಕದಿ ಬರಿ ಸೊನ್ನೆ…’ ಇಷ್ಟನ್ನು ಮಾತ್ರ ಕೇಳಿದರೆ-ಅದು, ಹೀರೊ ತನ್ನ ಬಗ್ಗೆಯೇ ಹೇಳಿಕೊಳ್ಳುವ ಮಾತು ಅನ್ನಿಸುವುದುಂಟು. ಆದರೆ ಹಾಡಿನ ಸಾಲನ್ನು ಅಷ್ಟಕ್ಕೇ ಬಿಡಲಿಲ್ಲ ಉದಯಶಂಕರ್… ಎನ್ನುತ ನಾನು ಕೆಣಕಲು ನಿನ್ನ ಊದಿಸಿದೇ ಕೆನ್ನೆ, ಆಹಾ… ನಾನದ ಮರೆಯುವೆನೇ?’ ಎಂಬ ಇನ್ನೊಂದು ಸಾಲು ತಂದಿಟ್ಟರು. ಪರಿಣಾಮ, ಹಾಡಿನ ಮೊದಲ ಸಾಲು ಕೇಳಿದಾಗ ಖುಷಿಯಿಂದ ನಗುವ ನಾಯಕಿ ಹಿಂದೆಯೇ ಬರುವ ಇನ್ನೊಂದು ಸಾಲು ಕೇಳಿದಾಗ ಹುಸಿ ಮುನಿಸಿನಿಂದ ನಾಯಕನಿಗೆ ಹೊಡೆಯಲು ಹೋಗುತ್ತಾಳೆ. ಹಾಡು ನೋಡುತ್ತಾ ಕೂತವರಿಗೆ ಇದೆಲ್ಲಾ ತಮ್ಮದೇ ಬದುಕಿನ, ನೆನಪಿನ ಪುಟ ಎಂದು ಮತ್ತೆ ಮತ್ತೆ ಅನ್ನಿಸುವುದೇ ಆಗ.
ಹೀಗೆ, ಗೆಳೆತನದ ಬಗ್ಗೆ ಸವಿ ಮಾತುಗಳನ್ನು ಆಡಿಕೊಂಡು, ಶ್ರೀನಾಥ್‌ಗೆ ಒಳಿತಾಗಲಿ, ಎಂಬ ಸದಾಶಯದಿಂದಲೇ ಉದಯಶಂಕರ್ ಹಾಡು ಬರೆದರು. ವಿಜಯಭಾಸ್ಕರ್ ಅದಕ್ಕೆ ರಾಗ ಸಂಯೋಜಿಸಿದರು. ಅದೊಂದು ದಿನ ಎಸ್ಪೀಬಿ-ಎದೆ ತುಂಬಿ ಹಾಡಿಯೂ ಬಿಟ್ಟರು.
‘ಶುಭಮಂಗಳ’ದ ಶೂಟಿಂಗ್ ನಡೆಯುತ್ತಿದ್ದುದು ಕಾರವಾರದಲ್ಲಿ ನಾವೆಲ್ಲರೂ ಶೂಟಿಂಗ್‌ನಲ್ಲಿ ‘ಬ್ಯುಸಿ’ಯಾಗಿದ್ದ ಸಂದರ್ಭದಲ್ಲಿಯೇ ಈ ಕಡೆ ಬೆಂಗಳೂರಿನಲ್ಲಿ ನನ್ನ ಪತ್ನಿ ಗೀತಾ, ಹೆರಿಗೆಗೆಂದು ಆಸ್ಪತ್ರೆ ಸೇರಿದ್ದಳು. ೧೯೭೫ರ ನವೆಂಬರ್ ೨೬, ೨೭ ಎಂದು ಡಾಕ್ಟರು ಡೇಟ್ ಕೊಟ್ಟಿದ್ದರು. ಶೂಟಿಂಗ್‌ನಲ್ಲಿದ್ದ ನನಗೆ ಆಗಿಂದಾಗ್ಗೆ ಗೀತಾಳ ನೆನಪಾಗುತ್ತಿತ್ತು. ಚೊಚ್ಚಲು ಹೆರಿಗೆಯ ಸಂದರ್ಭದಲ್ಲಿ ನಾನು ದೂರ ಇದ್ದೇನಲ್ಲ? ಅವಳಿಗೆ ಗಾಬರಿಯಾಯ್ತೋ ಏನೋ ಎಂದೆಲ್ಲಾ ಚಡಪಡಿಸುತ್ತಿದ್ದೆ. ಒಂದು ದಿನ ಸಂದರ್ಭ ನೋಡಿ ಪುಟ್ಟಣ್ಣ ಅವರಿಗೂ ಈ ವಿಷಯ ತಿಳಿಸಿದೆ’. ಒಂದೆರಡು ದಿನ ರಜೆ ಕೊಡಿ ಸಾರ್, ಹೋಗಿ ಒಮ್ಮೆ ನೋಡಿಕೊಂಡು ಬರ್‍ತೇನೆ’ ಎಂದೆ. ಪುಟ್ಟಣ್ಣ ಒಪ್ಪಿದರು. ‘ನೀನು ವಾಪಸ್ ಬಂದ ನಂತರವೇ ಹಾಡಿನ ಚಿತ್ರೀಕರಣ ನಡೆಸೋಣ. ಖುಷಿಯಾಗಿ ಹೋಗಿ ಬಾ ಮರೀ’ ಅಂದರು.
ಬೆಂಗಳೂರಿಗೆ ಬಂದವನೇ ಆಸ್ಪತ್ರೆಯಲ್ಲಿದ್ದ ಗೀತಾಗೆ ಹೊಸ ಸಿನಿಮಾದ ಎಲ್ಲ ವಿಷಯ ತಿಳಿಸಿದೆ. ಡಾಕ್ಟರು ಹೇಳಿದ್ದ ದಿನಾಂಕದಲ್ಲಿ ಹೆರಿಗೆ ಆಗಲಿಲ್ಲ. ಆಗ ಗೀತಾ ಹೇಳಿದ್ಲು: ‘ನನ್ನನ್ನು ಹುಷಾರಾಗಿ ನೋಡಿಕೊಳ್ಳಲು ಇಲ್ಲಿ ಜನ ಇದ್ದಾರೆ. ನನ್ನ ಬಗ್ಗೆ ಚಿಂತೆ ಬೇಡ. ಈ ಸಿನಿಮಾ ನಿಮಗೆ ಒಂಥರಾ ಛಾಲೆಂಜ್ ಇದ್ದ ಹಾಗೆ. ಅಲ್ಲಿ ಇಡೀ ಚಿತ್ರತಂಡವೇ ನಿಮಗಾಗಿ ಕಾಯುತ್ತಿದೆ. ನೀವು ಹೋಗದಿದ್ರೆ ನಿರ್ಮಾಪಕರಿಗೆ ತೊಂದರೆ ಆಗುತ್ತೆ. ನಿಮ್ಮ ಯಶಸ್ಸು ಬಯಸುವ ಅವರೆಲ್ಲರ ಗೆಳೆತನಕ್ಕೆ ಬೆಲೆ ಕಟ್ಟಲು ಆಗೋದಿಲ್ಲ. ನೀವು ತಕ್ಷಣ ಹೊರಡಿ…’
ಸರಿ, ತಕ್ಷಣವೇ ಕಾರವಾರಕ್ಕೆ ವಾಪಸ್ ಬಂದೆ. ಶೂಟಿಂಗ್ ಶುರುವಾಯಿತು. (ನಾನು ಕಾರವಾರ ತಲುಪಿದ ನಂತರ ಡಿಸೆಂಬರ್ ೨ರಂದು ಬೆಂಗಳೂರಲ್ಲಿ ಮಗ ಹುಟ್ಟಿದ ಸುದ್ದಿ ಬಂತು.) ಇಲ್ಲಿ ಮುಖ್ಯವಾಗಿ ಇನ್ನೂ ಒಂದು ಮಾತು ಹೇಳಬೇಕು. ಆರತಿ ನನಗೆ ಆಗ (ಮತ್ತು ಈಗಲೂ) ಆಪ್ತ ಗೆಳತಿ. ಎಲ್ಲ ವಿಷಯವನ್ನೂ ಆಕೆ ನನ್ನೊಂದಿಗೆ ಮುಕ್ತವಾಗಿ ಮಾತಾಡುತ್ತಿದ್ದಳು. ಚಿತ್ರತಂಡದವರ ಒಡನಾಟ, ಆರತಿಯ ಆಪ್ತ ಮಾತು, ಪುಟ್ಟಣ್ಣನವರ ಹಾರೈಕೆ, ಬಾಳಸಂಗಾತಿ ಗೀತಾಳ ಹಿತವಚನ… ಇದೆಲ್ಲವನ್ನೂ ಮತ್ತೆ ಮತ್ತೆ ನೆನಪಿಸಿಕೊಂಡೇ ಚಿತ್ರೀಕರಣದಲ್ಲಿ ಪಾಲ್ಗೊಂಡೆ. ಆ ಹಾಡಲ್ಲಿ ನನ್ನ ಮುಖಭಾವ ತುಂಬ ಆಪ್ತವಾಗಿ ಕಾಣಲು ಇದೂ ಒಂದು ಕಾರಣ ಆಗಿರಬೇಕು….
*****
‘ಸ್ನೇಹದ ಕಡಲಲ್ಲೀ…’ ಎಂದು ಮತ್ತೆ ಮತ್ತೆ ಗುನುಗುತ್ತಲೇ ಈ ಕಥೆ ಹೇಳಿದ ಶ್ರೀನಾಥ್, ‘ಶುಭಮಂಗಳ’ದ ಮೂಲಕ ನಾನೂ ‘ಸ್ಟಾರ್’ ಅನ್ನಿಸಿಕೊಂಡೆ ಎಂದು ಹೆಮ್ಮೆಯಿಂದ ಹೇಳಿದರು. ಅಷ್ಟಕ್ಕೇ ಸುಮ್ಮನಾಗದೆ ‘ಧರ್ಮಸೆರೆ’ ಚಿತ್ರದ ‘ ಈ ಸಂಭಾಷಣೆ ನಮ್ಮ ಈ ಪ್ರೇಮ ಸಂಭಾಷಣೆ’ ಹಾಡಿನ ಕಥೆಯನ್ನೂ ಹೇಳಿದರು. ಆ ಗಂಧರ್ವ ಗೀತೆಯ ಕಥೆ ಮುಂದಿನವಾರ!

ಅಧಿಕಾರದ ಮದದಲ್ಲಿ ತೇಲಬೇಡ

ಡಿಸೆಂಬರ್ 6, 2010

 

 

 

 

 

 

 

 

 

ಆ ಊರಿನ ಹೆಸರು ರಾಂಪುರ. ವನವಾಸದ ಸಂದರ್ಭದಲ್ಲಿ ಶ್ರೀರಾಮಚಂದ್ರ, ಸೀತಾ, ಲಕ್ಷ್ಮಣರು ಇಲ್ಲಿ ಒಂದು ದಿನ ತಂಗಿದ್ದರೆಂದೂ, ಅದೇ ಕಾರಣಕ್ಕೆ ಈ ಊರಿಗೆ ರಾಮಪುರ ಎಂಬ ಹೆಸರು ಬಂತೆಂದೂ, ಕಾಲಕ್ರಮೇಣ ಜನರ ಆಡು ಭಾಷೆಯಲ್ಲಿ ಅದು ರಾಂಪುರ ಎಂದಾಯಿತೆಂದೂ ಜನ ಈಗಲೂ ಮಾತಾಡುತ್ತಾರೆ. ಊರ ಮುಂದಿರುವ ಈಶ್ವರನ ದೇವಾಲಯ ತೋರಿಸಿ, ಇಲ್ಲಿ ಶ್ರೀರಾಮಚಂದ್ರ ಶಿವನನ್ನು ಪೂಜಿಸಿದನಂತೆ ಎಂದು ಇನ್ನೊಂದು ಕತೆಯನ್ನು ಹೇಳುತ್ತಾರೆ.
ಈಗ ಹೇಳಲಿರುವ ಕಥೆ [^] ಅದೆಷ್ಟೋ ವರ್ಷಗಳ ಹಿಂದೆ ನಡೆದದ್ದು. ಅಂದರೆ, ರಾಜರ ಆಡಳಿತವಿತ್ತಲ್ಲ? ಆಗ ನಡೆದದ್ದು. ರಾಂಪುರದಲ್ಲಿ ಆಗ ಒಬ್ಬ ಭಿಕ್ಷುಕನಿದ್ದ. ಅವನ ಹೆಸರು ಸುಬ್ಬ. ಒಂದು ಮಾಸಲು ಅಂಗಿ, ಅಲ್ಯುಮಿನಿಯಂ ತಟ್ಟೆ ಹಾಗೂ ಮಾರುದ್ದದ ಒಂದು ಕೋಲು. ಇವಿಷ್ಟೂ ಸುಬ್ಬನ ಆಸ್ತಿ. ಬೆಳಗಿನ ಹೊತ್ತು, ಈಶ್ವರನ ದೇವಾಲಯದ ಮುಂದಿನ ಅರಳೀಕಟ್ಟೆಯಲ್ಲಿ ಆತ ಕೂತಿರುತ್ತಿದ್ದ. ದೇವಸ್ಥಾನಕ್ಕೆಂದು ಬಂದವರು ಏನಾದರೂ ಕೊಟ್ಟರೆ ಅದನ್ನು ಪಡೆದುಕೊಳ್ಳುತ್ತಿದ್ದ. ಬೆಳಗ್ಗೆ-ಮಧ್ಯಾಹ್ನ-ಸಂಜೆ ಏನು ಸಿಗುತ್ತಿತ್ತೋ ಅದನ್ನು ಖುಷಿಯಿಂದ ತಿನ್ನುತ್ತಿದ್ದ. ಬಹುಶಃ ಅವನಿಗೆ ಆಸೆಯಿರಲಿಲ್ಲ. ನಾಳೆಗೆ ಕೂಡಿಡುವ ಬುದ್ಧಿಯೂ ಇರಲಿಲ್ಲ. ಹಾಗಾಗಿ ಅವನು ಮನೆಮನೆಯಲ್ಲಿ ಭಿಕ್ಷೆ ಕೇಳಲು ಹೋಗುತ್ತಿರಲಿಲ್ಲ. ಸಂಜೆಯಾಗುತ್ತಿದ್ದಂತೆ ಊರಿನ ಯಾರದಾದರೂ ಮನೆಯ ಜಗುಲಿಯಲ್ಲಿ ಮಲಗಿಬಿಡುತ್ತಿದ್ದ. ಬೆಳಗ್ಗೆ ಆದದ್ದೇ ತಡ, ಊರ ಸಮೀಪವಿದ್ದ ಕೆರೆಯ ಬಳಿ ಹೋಗಿ, ನಿತ್ಯಕರ್ಮಗಳನ್ನು ಮುಗಿಸಿ ಸೀದಾ ಬಂದು ಅರಳೀಕಟ್ಟೆಯಲ್ಲಿ ಕೂತುಬಿಡುತ್ತಿದ್ದ.
ಸುಬ್ಬನಿಂದ ಯಾವತ್ತೂ ಯಾರಿಗೂ ತೊಂದರೆಯಾಗಿರಲಿಲ್ಲ. ದಿನವೂ ಒಂದೊಂದು ಮನೆಯ ಜಗುಲಿಯಲ್ಲಿ ಮಲಗುತ್ತಿದ್ದನಲ್ಲ? ಆಗ, ಕೂಡ ಮನೆಯವರಿಗೆ ಯಾವುದೇ ರೀತಿಯ ಕಿರಿಕಿರಿಯಾಗದಂತೆ ಎಚ್ಚರವಹಿಸುತ್ತಿದ್ದ. ಅವನು ಹೊರಗಿದ್ದಾನೆ ಎಂದರೆ, ಮನೆಯ ರಕ್ಷಣೆಗೆ ಒಬ್ಬ ಸಮರ್ಥ ಕಾವಲುಗಾರ ಇದ್ದಂತಾಗುತ್ತಿತ್ತು. ಈ ಕಾರಣದಿಂದ ಊರಿನ ಯಾರೂ ಸುಬ್ಬನನ್ನು ಯಾಕಪ್ಪಾ ಇಲ್ಲಿ ಉಳ್ಕೊಂಡಿದೀಯ ಎಂದು ಕೇಳುತ್ತಿರಲಿಲ್ಲ.
ಹುಟ್ಟು ಸೋಮಾರಿಯಂತಿದ್ದ, ಭಿಕ್ಷೆಯನ್ನೇ ಬದುಕಾಗಿಸಿಕೊಂಡಿದ್ದ ಸುಬ್ಬನಿಗೆ ಒಂದು ವಿಶೇಷ ಗುಣವಿತ್ತು. ಜನ ಏನಾದರೂ ಸಮಸ್ಯೆ ಹೇಳಿದರೆ, ಅವನು ಅದಕ್ಕೆ ಪರಿಹಾರ ಹೇಳುತ್ತಿದ್ದ. ಎಷ್ಟೇ ಕಷ್ಟದ ಸಮಸ್ಯೆ ಅಂದುಕೊಂಡರೂ ಅದನ್ನು ಸುಲಭವಾಗಿ ಬಿಡಿಸುತ್ತಿದ್ದ. ಹೀಗೆ ಪರಿಹಾರ ಹೇಳುತ್ತಿದ್ದನಲ್ಲ? ಅದಕ್ಕೆ ನಯಾಪೈಸೆಯ ಗೌರವಧನವನ್ನೂ ಪಡೆಯುತ್ತಿರಲಿಲ್ಲ. ಬದಲಾಗಿ, ಇದು ನನ್ನ ಆತ್ಮ ಸಂತೋಷದ ಕೆಲಸ ಎಂದು ಬಿಡುತ್ತಿದ್ದ. ರಾಂಪುರದ ಕಡುಬಡವನಿಂದ ಹಿಡಿದು ಪಟೇಲರವರೆಗೆ ಎಲ್ಲರೂ ಒಂದಲ್ಲ ಒಂದು ಸಂದರ್ಭದಲ್ಲಿ ಸುಬ್ಬನ ಬಳಿಗೆ ಸಮಸ್ಯೆಹೊತ್ತುಕೊಂಡು ಬರುತ್ತಿದ್ದರು. ಆತ ಎಲ್ಲವನ್ನೂ ಕೇಳಿಸಿಕೊಂಡು ಐದಾರು ನಿಮಿಷದ ನಂತರ ಪರಿಹಾರ ಹೇಳುವುದನ್ನು ವಿಸ್ಮಯದಿಂದ ಕೇಳುತ್ತಿದ್ದರು. ನಂತರ, ಇಷ್ಟೊಂದು ಬುದ್ಧಿವಂತನಾಗಿದ್ದರೂ ಈತ ಪಟ್ಟಣಕ್ಕೆ ಹೋಗಿ ಕೈ ತುಂಬಾ ಸಂಪಾದಿಸದೆ, ಕುಗ್ರಾಮದಲ್ಲಿ ಭಿಕ್ಷೆ ಬೇಡುವುದಾದರೂ ಏಕೆ ಎಂದು ತಮಗೆ ತಾವೇ ಕೇಳಿಕೊಳ್ಳುತ್ತಿದ್ದರು. ಉತ್ತರ ಹೊಳೆಯದೇ ಹೋದಾಗ ಸುಮ್ಮನಾಗುತ್ತಿದ್ದರು.
ಹೀಗಿರುವಾಗಲೇ ಒಂದು ದಿನ ಮಹಾರಾಜರ ಸವಾರಿ ರಾಂಪುರ ಗ್ರಾಮಕ್ಕೆ ಬಂತು. ಅಂದಮೇಲೆ ಕೇಳಬೇಕೆ? ಈಶ್ವರ ದೇವಾಲಯವನ್ನು ಬಗೆಬಗೆಯಲ್ಲಿ ಅಲಂಕರಿಸಲಾಯಿತು. ಪಟೇಲರೂ ಸೇರಿದಂತೆ ಊರ ಹಿರಿಯರೆಲ್ಲ ಬೆಳಗಿನಿಂದಲೇ ಮಹಾರಾಜರ ದಾರಿ ಕಾಯುತ್ತಿದ್ದರು. ಕಡೆಗೊಮ್ಮೆ ಮಹಾರಾಜರ ಸವಾರಿ ಬಂದೇ ಬಂತು. ಮುಖಂಡರಿಂದ ಮಹಾರಾಜರು ಆತಿಥ್ಯ ಸ್ವೀಕರಿಸಿದರು. ತುಸು ಹೊತ್ತು ವಿಶ್ರಾಂತಿ ಪಡೆದರು. ನಂತರ ಪ್ರಜೆಗಳ ಸುಖ-ದುಃಖ ಕೇಳಲು ಹೊರಟ. ಆ ಸಂದರ್ಭದಲ್ಲಿಯೇ ಅರಳೀ ಕಟ್ಟೆಯಲ್ಲಿ ಒಂದು ಮಾಸಲು ಅಂಗಿ-ಅಲ್ಯುಮಿನಿಯಂ ತಟ್ಟೆ ಹಿಡಿದು ಕೂತಿದ್ದ ಸುಬ್ಬ ಮಹಾರಾಜರ ಕಣ್ಣಿಗೆ ಬಿದ್ದ.
ತಮ್ಮದು ರಾಮರಾಜ್ಯ, ಸುಭಿಕ್ಷಾ ಸಾಮ್ರಾಜ್ಯ ಎಂಬುದು ಮಹಾರಾಜರ ನಂಬಿಕೆಯಾಗಿತ್ತು. ಇಂಥ ಸಂದರ್ಭದಲ್ಲಿ ಭಿಕ್ಷುಕನೊಬ್ಬ ಕಣ್ಣಿಗೆ ಬಿದ್ದುದರಿಂದ ಅವರಿಗೆ ತುಂಬ ಬೇಜಾರಾಯಿತು. ಛೆ, ನಮ್ಮ ರಾಜ್ಯದಲ್ಲಿ ಈಗಲೂ ಭಿಕ್ಷುಕರು ಇದ್ದಾರಲ್ಲ ಎಂದು ನೊಂದುಕೊಂಡರು. ನಂತರ ಪಟೇಲರನ್ನು ಕರೆದು-ಯಾರೀತ? ನೋಡೋಕೆ ಗಟ್ಟಿಮುಟ್ಟಾಗೇ ಇದ್ದಾನೆ. ಇವನಿಗೆ ದುಡಿದು ತಿನ್ನಲು ಏನು ದಾಡಿ ಎಂದು ಪ್ರಶ್ನೆ ಹಾಕಿದರು. `ಮಹಾಪ್ರಭುಗಳೆ, ಈತ ಭಿಕ್ಷುಕ ನಿಜ. ಆದರೆ ಇವನು ಅಪಾರ ಬುದ್ಧಿವಂತನೂ ಹೌದು. ಎಂಥ ಸಮಸ್ಯೆಗೂ ಪರಿಹಾರ ಹೇಳಬಲ್ಲ ಶಕ್ತಿ ಈ ಭಿಕ್ಷುಕನಿಗಿದೆ. ಅಂದಹಾಗೆ, ಇವನ ಹೆಸರು ಸುಬ್ಬ. ಇವನನ್ನು ನಮ್ಮ ಊರಿನ ಆಸ್ತಿ ಎಂದು ಕರೆದರೂ ತಪ್ಪಿಲ್ಲ ಸ್ವಾಮಿ…!’
ಪಟೇಲರಿಂದ ಈ ಬಗೆಯ ಉತ್ತರ ಕೇಳಿ ಮಹಾರಾಜರಿಗೆ ಆಶ್ಚರ್ಯವಾಯಿತು. ಹಿಂದೆಯೇ, ಈ ಭಿಕ್ಷುಕನ ಇನ್ನೊಂದು ಮುಖವನ್ನು ನೋಡಿಬಿಡುವ ಆಸೆಯೂ ಬಲಿಯಿತು. ಅದೇ ಸಂದರ್ಭಕ್ಕೆ, ತುಂಬ ದಿನಗಳಿಂದಲೂ ಪರಿಹಾರವಾಗದೆ ತಲೆ ತಿನ್ನುತ್ತಿದ್ದ ಆಡಳಿತಕ್ಕೆ ಸಂಬಂಸಿದ ಸಮಸ್ಯೆಯೊಂದು ನೆನಪಾಯಿತು. ತಕ್ಷಣವೇ ಭಿಕ್ಷುಕನ ಬಳಿ ಹೋದ ಮಹಾರಾಜರು-`ನೋಡಯ್ಯ, ನನ್ನದೊಂದು ಸಮಸ್ಯೆ ಇದೆ. ಅದಕ್ಕೆ ಪರಿಹಾರ ಸೂಚಿಸಿದರೆ ನಿನಗೆ ಬಹುಮಾನವಾಗಿ ಒಂದು ಚಿನ್ನದ ನಾಣ್ಯ ಕೊಡ್ತೇನೆ’ ಎಂದರು.
ಈ ಸುಬ್ಬ ತಕ್ಷಣವೇ ಹೀಗೆಂದ: `ಮಹಾಪ್ರಭುಗಳೆ, ನನಗೆ ಚಿನ್ನದ ನಾಣ್ಯ ಬೇಡ. ಅದನ್ನು ನೀವೇ ಇಟ್ಟುಕೊಳ್ಳಿ. ನಿಮ್ಮನ್ನು ಕಾಡುತ್ತಿರುವ ಸಮಸ್ಯೆ ಏನೆಂದು ಹೇಳಿ…’ ಒಬ್ಬ ಯಃಕಶ್ಚಿತ್ ಭಿಕ್ಷುಕನಿಂದ ಈ ಬಗೆಯ ಉತ್ತರವನ್ನು ಮಹಾರಾಜರು ನಿರೀಕ್ಷಿಸಿರಲಿಲ್ಲ. ಅವರಿಗೆ ತುಂಬ ಬೇಸರವಾಯಿತು. ಆದರೆ ಏನೂ ಮಾಡುವಂತಿರಲಿಲ್ಲ. `ಇರಲಿ’ ಎಂದುಕೊಂಡು ತಮ್ಮ ಸಮಸ್ಯೆಯನ್ನು ಹೇಳಿಕೊಂಡರು.
ಭಿಕ್ಷುಕ ಸುಬ್ಬ ಐದಾರು ನಿಮಿಷ ತಲೆ ತಗ್ಗಿಸಿದ್ದ. ಆ ಸಮಯದಲ್ಲಿ ತನ್ನಷ್ಟಕ್ಕೆ ತಾನೇ ಏನೇನೋ ಮಾತಾಡಿಕೊಂಡ. ಕೈ ಬೆರಳುಗಳನ್ನು ಬಿಡಿಸಿ, ಮಡಿಚಿ ಅದೇನೇನೋ ಲೆಕ್ಕಾಚಾರ ಮಾಡಿದ. ನಂತರ ಒಂದು ಪರಿಹಾರ ಹೇಳಿಯೇ ಬಿಟ್ಟ. ಅದು ಮಹಾರಾಜರಿಗೆ ಸರಿ ಕಾಣಿಸಿತು. ಅವರು ಸುಬ್ಬನನ್ನು ಪ್ರೀತಿ, ಅಭಿಮಾನ, ಮೆಚ್ಚುಗೆಯಿಂದ ನೋಡುತ್ತ, ಒಂದು ಚಿನ್ನದ ನಾಣ್ಯವನ್ನು ಅವನ ಮುಂದಿಟ್ಟು: ಇದನ್ನು ನೀನು ಸ್ವೀಕರಿಸಲೇಬೇಕು ಎಂದು ಹೇಳಿ ಅರಮನೆಗೆ ಬಂದರು. ಮರುದಿನ ಮಹಾರಾಜರಿಗೆ, ಆಡಳಿತದ ವಿಷಯಕ್ಕೆ ಸಂಬಂಸಿದಂತೆ ಇನ್ನೊಂದು ಸಮಸ್ಯೆ ತಲೆದೋರಿತು. ಮಂತ್ರಿಮಂಡಲದ ಪ್ರಮುಖರ ಮುಂದೆ ಈ ಸಮಸ್ಯೆ ಇಟ್ಟರು. ಅವರು ಸೂಚಿಸಿದ ಪರಿಹಾರಗಳು ಮಹಾರಾಜರಿಗೆ ಇಷ್ಟವಾಗಲಿಲ್ಲ. ಇಂಥ ಸಂದರ್ಭದಲ್ಲಿ ಸಹಜವಾಗಿಯೇ ಮತ್ತೆ ರಾಂಪುರದ ಭಿಕ್ಷುಕ ಸುಬ್ಬನ ನೆನಪಾಯಿತು. ಅವತ್ತೇ ಸಂಜೆ ಸಮಸ್ಯೆಯೊಂದಿಗೆ ರಾಜ, ಸುಬ್ಬನ ಮುಂದೆ ನಿಂತಿದ್ದ.
ಸುಬ್ಬ ಈ ಬಾರಿಯೂ ಮಹಾರಾಜನಿಗೆ ತುಂಬ ಇಷ್ಟವಾಗುವಂಥ ರೀತಿಯಲ್ಲೇ ಸಮಸ್ಯೆಗೆ ಪರಿಹಾರ ಸೂಚಿಸಿದ. ಅದನ್ನು ಕೇಳಿದ ನಂತರವಂತೂ ಸುಬ್ಬನ ಪ್ರಚಂಡ ಬುದ್ಧಿಶಕ್ತಿಯ ಕುರಿತು ಮಹಾರಾಜರಿಗೆ ಅನುಮಾನವೇ ಉಳಿಯಲಿಲ್ಲ. ಅವರು ಎರಡೇ ಕ್ಷಣದಲ್ಲಿ ಒಂದು ನಿರ್ಧಾರಕ್ಕೆ ಬಂದು ಸುಬ್ಬನನ್ನು ಉದ್ದೇಶಿಸಿ ಹೀಗೆಂದರು: `ಸುಬ್ಬು ಅವರೇ, ನೀವು ಒಂದೊಂದು ಸಮಸ್ಯೆಗೂ ಪರಿಹಾರ ಸೂಚಿಸುವ ರೀತಿ ಸೊಗಸಾಗಿದೆ. ಒಬ್ಬ ಮಹಾಮಂತ್ರಿಗೆ ಇರಬೇಕಾದ ಬುದ್ಧಿ ಶಕ್ತಿ ನಿಮಗಿದೆ. ಅದು ಸದುಪಯೋಗ ಆಗಬೇಕು. ಹಾಗಾಗಿ ನೀವು ದಯವಿಟ್ಟು ಅರಮನೆಗೆ ಬನ್ನಿ. ನನ್ನ ವಿಶೇಷ ಸಲಹೆಗಾರರೆಂದು ನೇಮಿಸಿಕೊಳ್ಳುತ್ತೇನೆ. ನಿಮಗೆ ಅರಮನೆಯಲ್ಲಿ ಸಂಪೂರ್ಣ ಸ್ವಾತಂತ್ರ್ಯವಿರುತ್ತದೆ. ನಿಮಗೆ ಎಷ್ಟು ದಿನ ಸಾಧ್ಯವೋ ಅಷ್ಟು ದಿನ ನಮಗೆ ಆಡಳಿತದಲ್ಲಿ ಮಾರ್ಗದರ್ಶನ ಮಾಡಿ…’
ಮಹಾರಾಜರು ಹೇಳಿದ ಮೇಲೆ ಕೇಳಬೇಕೆ? ಅವತ್ತೇ ಅಲ್ಲಲ್ಲಿ ಹರಿದುಹೋಗಿದ್ದ, ಗಬ್ಬುನಾತ ಹೊಡೆಯುತ್ತಿದ್ದ ಶರ್ಟು, ಅಲ್ಯುಮಿನಿಯಂ ತಟ್ಟೆ ಹಾಗೂ ಹಳೆಯ ಊರುಗೋಲಿನೊಂದಿಗೇ ಸುಬ್ಬ ಅರಮನೆಗೆ ಬಂದ. ಮರುದಿನದಿಂದಲೇ ಅವನ ಗೆಟಪ್ಪು ಬದಲಾಗಿಹೋಯಿತು. ಮೊದಲಿಗೆ, ಸುಬ್ಬನ ಹೆಸರು ಸುಬ್ರಾಯ ಶರ್ಮ ಎಂದಾಯಿತು. ಕೆಲವರು ಅವನನ್ನು ಜೋಯ್ಸರೇ ಎನ್ನಲೂ ಶುರುಮಾಡಿದರು. ಮಹಾರಾಜರಂತೂ ತುಂಬ ಪ್ರೀತಿಯಿಂದ `ಮಂತ್ರಿಗಳೇ…’ ಎಂದೇ ಕರೆಯುತ್ತಿದ್ದರು. ಮಹಾರಾಜರ ನಿವಾಸದ ಪಕ್ಕದಲ್ಲೇ ಇದ್ದ ಇನ್ನೊಂದು ಸೌಧದಲ್ಲಿ ಸುಬ್ಬುವಿನ ವಾಸಕ್ಕೆ ವ್ಯವಸ್ಥೆ ಮಾಡಲಾಯಿತು. ಒಂದು ಕಾಲದಲ್ಲಿ ವಾರವಿಡೀ ಸ್ನಾನ ಮಾಡದಿದ್ದ ಸುಬ್ಬ, ಈಗ ಪ್ರತಿದಿನವೂ ಸುಗಂಧದ್ರವ್ಯ ಹಾಕಿದ್ದ ನೀರಲ್ಲೆ ಕೈ ತೊಳೆಯುವುದನ್ನು, ದಿನದಿನವೂ ಮಡಿ ವಸ್ತ್ರ ಧರಿಸುವುದನ್ನು; ಅರಮನೆಯ ಶಿಸ್ತು, ಶಿಷ್ಟಾಚಾರದೊಂದಿಗೆ ಬದುಕುವುದನ್ನು ರೂಢಿ ಮಾಡಿಕೊಂಡ. ಈ ಹಿಂದೆಲ್ಲಾ ರಾಂಪುರದ ಅರಳೀಕಟ್ಟೆಯಲ್ಲಿ ಕೂತು ಅವರಿವರ ಸಂಕಟಗಳಿಗೆ ಪರಿಹಾರ ಹೇಳುತ್ತಿದ್ದವನು, ಈಗ ರಾಜನ ಎಲ್ಲ ಸಮಸ್ಯೆಗಳಿಗೂ ಪರಿಹಾರ ಹೇಳುವಂಥವನಾದ. ಮಹಾರಾಜರು ಈ ಸುಬ್ರಾಯನನ್ನು ಅದೆಷ್ಟು ಹಚ್ಚಿಕೊಂಡರೆಂದರೆ, ಅರಮನೆಯ ಹಾಗೂ ರಾಜ್ಯದ ಎಲ್ಲ ರಹಸ್ಯಗಳನ್ನೂ ಅವನೊಂದಿಗೆ ಹೇಳಿಕೊಂಡರು.
ಮಹಾರಾಜರು ಮೊನ್ನೆ ಮೊನ್ನೆಯಷ್ಟೇ ಬಂದ ಸುಬ್ರಾಯಶರ್ಮನಿಗೆ ಇನ್ನಿಲ್ಲದ ಪ್ರಾಮುಖ್ಯತೆ ನೀಡಿದ್ದು ಅರಮನೆಯಲ್ಲಿದ್ದ ಉಳಿದ ಮಂತ್ರಿಗಳನ್ನು ಕೆರಳಿಸಿತು. ಹಾಗೆಯೇ ಸುಬ್ರಾಯನ ಅತಿಯಾದ ಬುದ್ಧಿವಂತಿಕೆ ಕಂಡು ಅವರಿಗೆ ಅನುಮಾನವೂ ಬಂತು. ಸಮಯ ನೋಡಿ ಮಹಾರಾಜರಿಂದ ಅವನನ್ನು ದೂರ ಮಾಡಲೇಬೇಕು ಎಂದು ಅವರೆಲ್ಲ ಲೆಕ್ಕ ಹಾಕಿಯೇಬಿಟ್ಟರು. ಸುಬ್ರಾಯನ ಒಂದೇ ಒಂದು ತಪ್ಪಿಗಾಗಿ ಹುಡುಕುತ್ತಿದ್ದವರಿಗೆ, ಕಡೆಗೂ ಅಂಥದೊಂದು ಸಂದರ್ಭ ಒದಗಿಬಂತು. ಈ ವೇಳೆಗೆ ಸುಬ್ರಾಯ ಅರಮನೆಗೆ ಬಂದು ವರ್ಷವೇ ಕಳೆದಿತ್ತು. ಅದೊಂದು ದಿನ ಮಂತ್ರಿಮಂಡಲದ ಎಲ್ಲರೂ ಸೇರಿ ಮಹಾರಾಜರ ಬಳಿ ಹೋದರು. `ಪ್ರಭೂ, ನಾವೆಲ್ಲ ನಿಮ್ಮೊಂದಿಗೆ ಒಂದು ಮಹತ್ವದ ವಿಷಯ ಕುರಿತು ಚರ್ಚಿಸಬೇಕಾಗಿದೆ. ಒಂದು ರಹಸ್ಯ ಸಭೆಯ ಏರ್ಪಾಡು ಮಾಡಿ. ಆದರೆ, ಒಂದು ವಿನಂತಿ. ಈ ಸಭೆಗೆ ಸುಬ್ರಾಯ ಶರ್ಮರನ್ನು ಕರೆಯಬಾರದು’ ಎಂದರು.
ಈ ಮಂತ್ರಿಗಳೆಲ್ಲ ಅರಮನೆಯಲ್ಲಿ ದಶಕಗಳಿಂದ ಇದ್ದವರು. ಹಾಗಾಗಿ ಅವರನ್ನು ಸಂದೇಹದಿಂದ ನೋಡಲು ರಾಜನಿಗೆ ಮನಸ್ಸಾಗಲಿಲ್ಲ. `ವಿಷಯ ಮಹತ್ವದ್ದೇ ಇರಬೇಕು. ಹೇಗಿದ್ದರೂ ದಿನವೂ ಸಂಜೆ ಸುಬ್ರಾಯ ಶರ್ಮ ಅಂತಃಪುರದಲ್ಲಿ ನಡೆವ ಚರ್ಚೆಗೆ ಬರುತ್ತಾನೆ. ಆಗ ಇದನ್ನೆಲ್ಲ ಹೇಳಿದರಾಯಿತು ಎಂದೇ ರಾಜ ಯೋಚಿಸಿದ. ನಂತರ, ಗುಪ್ತ ಸಭೆಗೆ ದಿನವನ್ನೂ ನಿಗದಿಪಡಿಸಿದ.
`ಮಹಾರಾಜರೆ, ನಮ್ಮ ಮಾತನ್ನು ದಯಮಾಡಿ ನಂಬಿ. ನಾವು ಕಳೆದು ಐದು ತಿಂಗಳಿನಿಂದಲೂ ದಿನದಿನವೂ ಕಣ್ಣಲ್ಲಿ ಕಣ್ಣಿಟ್ಟು ನೋಡಿದ ನಂತರವೇ ಈ ಮಾತು ಹೇಳುತ್ತಿದ್ದೇನೆ. ಏನೆಂದರೆ- ಸುಬ್ರಾಯ ಶರ್ಮ ಬೇರೆ ಯಾರೂ ಅಲ್ಲ. ಆತ ಶತ್ರುದೇಶದ ಗೂಢಚಾರಿ. ಅವನಿಗೆ ಸಕಲೆಂಟು ವಿದ್ಯೆಗಳನ್ನು ಕಲಿಸಿದ ನಂತರವೇ ನಮ್ಮ ದೇಶಕ್ಕೆ ಕಳಿಸಲಾಗಿದೆ. ಇಲ್ಲವಾದರೆ, ಒಬ್ಬ ಯಃಕಶ್ಚಿತ್ ಭಿಕ್ಷುಕನಿಗೆ ಇಂಥ ಅಪರೂಪದ ಬುದ್ಧಿವಂತಿಕೆ ಬರಲು ಹೇಗೆ ಸಾಧ್ಯ? ನಾವು ಕಣ್ಣಾರೆ ಕಂಡಿರುವ ಮಾತು ಕೇಳಿ; ಸುಬ್ರಾಯ ಪ್ರತಿದಿನವೂ ಸಂಜೆ ತನ್ನ ಮಹಲಿನ ಸಮೀಪವಿರುವ ಪುಟ್ಟದೊಂದು ಕೋಣೆಗೆ ತಪ್ಪದೇ ಹೋಗುತ್ತಾನೆ. ಒಬ್ಬನೇ ಹೋಗುತ್ತಾನೆ. ಹಾಗೆ ಹೋಗುವ ಮುನ್ನ ಸುತ್ತಮುತ್ತ ಯಾರೂ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾನೆ. ಹಾಗೆ ಕೋಣೆಯ ಒಳಗೆ ಹೋದವನು, ಅರ್ಧ ಗಂಟೆಯ ನಂತರ ಹೊರಗೆ ಬರುತ್ತಾನೆ. ಹಾಗೆ ಹೊರಬಂದವನನ್ನು ಕೋಣೆಯಲ್ಲಿ ಇಷ್ಟು ಹೊತ್ತು ಏನು ಮಾಡುತ್ತಿದ್ದೆ ಎಂದು ಕೇಳಿದರೆ ಹಾರಿಕೆಯ ಉತ್ತರ ಕೊಡುತ್ತಾನೆ. ಬಹುಶಃ ಅವನು ತನ್ನವರಿಗೆ ಆ ಕೋಣೆಯಲ್ಲಿ ನಿಂತು ನಮ್ಮ ರಾಜ್ಯದ ರಹಸ್ಯವನ್ನೆಲ್ಲ ಹೇಳುತ್ತಾನೆ ಅನಿಸುತ್ತೆ. ಆ ಕೋಣೆಯಿಂದ ಹೊರಹೋಗಲು ಸುರಂಗ ಮಾರ್ಗವಿದ್ದರೂ ಇದ್ದೀತು. ಯಾವುದನ್ನೂ ನೀವೇ ಪರಿಶೀಲಿಸಿ ಬೇಕಾದರೆ…’ ಎಂದರು.
ಒಂದು ಅನುಮಾನದ ಅಡ್ಡಗೆರೆ ಎಂಥ ಮಧುರ ಬಾಂಧವ್ಯವನ್ನೂ ಅಳಿಸಿಹಾಕಬಲ್ಲದು. ಮಹಾರಾಜನ ವಿಷಯದಲ್ಲೂ ಹೀಗೇ ಆಯಿತು. ಮಂತ್ರಿಮಂಡಲದ ಸದಸ್ಯರೆಲ್ಲರ ಮಾತುಗಳನ್ನೇ ಮತ್ತೆ ಮತ್ತೆ ಮೆಲುಕು ಹಾಕಿದ ರಾಜನಿಗೆ ಸುಬ್ರಾಯ ಶರ್ಮ ಒಬ್ಬ ಗೂಢಚಾರಿ ಎಂಬುದು ಗ್ಯಾರಂಟಿಯಾಗಿ ಹೋಯಿತು. ಅದುವರೆಗೆ ಅವನ ಬುದ್ಧಿವಂತಿಕೆಯ ವಿಷಯದಲ್ಲಿ ಇದ್ದ ಅಭಿಮಾನವೆಲ್ಲ ಕ್ಷಣ ಮಾತ್ರದಲ್ಲಿಯೇ ಅನುಮಾನವಾಗಿ ಬದಲಾಯಿತು. ಇರಲಿ. ಎಲ್ಲವನ್ನೂ ಪ್ರತ್ಯಕ್ಷವಾಗಿ ನೋಡೋಣ. ಆನಂತರವೇ ಸುಬ್ರಾಯನನ್ನು ಶಿಕ್ಷಿಸೋಣ ಎಂದು ನಿರ್ಧರಿಸಿದ ರಾಜ. ಅದೊಂದು ಸಂಜೆ ಸುಬ್ರಾಯ ಆ ಕೋಣೆಗೆ ಹೋದ ಹತ್ತು ನಿಮಿಷದ ನಂತರ ತಾನೂ ಹೋಗಲು ನಿರ್ಧರಿಸಿದ. ಕೋಣೆಯ ಸುತ್ತಲೂ ಮಾರುವೇಷದಲ್ಲಿ ಸೈನಿಕರನ್ನು ಬಿಟ್ಟು ಒಳಗಿನಿಂದ ಯಾರೇ ಅಪರಿಚಿತರು ಬಂದರೂ ಹಿಂದೆ ಮುಂದೆ ನೋಡದೆ ಕತ್ತರಿಸಿ ಹಾಕಿ ಎಂದು ಸೈನಿಕರಿಗೆ ತನ್ನ ಆದೇಶ ನೀಡಿದ.
ಕಡೆಗೂ, ಎಲ್ಲರೂ ಅಂದುಕೊಂಡಿದ್ದ ಸಮಯ ಬಂತು. ಸುಬ್ರಾಯ ಶರ್ಮ ಅವಸರದಲ್ಲಿ ಎಂಬಂತೆ ತನ್ನ ಮನೆಗೆ ಸಮೀಪದ ಕೋಣೆ ಹೊಕ್ಕ. ಸ್ವಲ್ಪ ದೂರದಲ್ಲಿ ಮಾರು ವೇಷದಲ್ಲಿದ್ದ ರಾಜ ಇದನ್ನು ಗಮನಿಸಿದ. ಸುಬ್ರಾಯ, ಕಳ್ಳನಂತೆ ಸುತ್ತಮುತ್ತ ನೋಡಿ ಕೊಣೆ ಪ್ರವೇಶಿಸಿದನಲ್ಲ? ಅದನ್ನು ಕಂಡು ರಾಜನ ರಕ್ತ ಕುದಿಯಿತು. ಅವನ ದೇಶದ್ರೋಹ ಏನಿರಬಹುದು ಎಂದು ನೆನಪು ಮಾಡಿಕೊಂಡು ನಿಂತಲ್ಲೇ ಕಟಕಟನೆ ಹಲ್ಲು ಕಡಿದ. ನಂತರ, ತನ್ನನ್ನು ತಾನೇ ನಿಗ್ರಹಿಸಿಕೊಂಡು, ಸಮಾಧಾನ ಮಾಡಿಕೊಂಡು ಸದ್ದಾಗದಂತೆ ಆ ಕೋಣೆಯ ಬಳಿ ಬಂದು, ದಬದಬನೆ ಬಾಗಿಲು ಬಡಿದ.
`ಯಾರದು?’ ಎಂದ ಸುಬ್ರಾಯನ ತಣ್ಣಗಿನ ದನಿಗೆ `ನಾನು. ಬಾಗಿಲು ತೆಗೆ’ ಎಂದ ರಾಜ. ಬಾಗಿಲು ತೆರೆಯಿತು. ರಾಜ ಕತ್ತಿ ಹಿಡಿದುಕೊಂಡೇ ಒಳಗೆ ಬಂದ. ಸುಬ್ರಾಯನನ್ನು ಬಿಟ್ಟು ಯಾವ ಕುನ್ನಿಯೇ ಕಂಡರೂ ಅದರ ತಲೆ ಹಾರಿಸಬೇಕು ಎಂಬುದು ರಾಜನ ಎಣಿಕೆಯಾಗಿತ್ತು. ಆದರೆ, ಅಲ್ಲಿ ಯಾರೆಂದರೆ ಯಾರೂ ಇರಲಿಲ್ಲ. ಬದಲಿಗೆ ಸುಬ್ರಾಯನ ಹಳೆಯ ಸಂಗಾತಿಗಳಾದ ಹರಕು ಬಟ್ಟೆ, ಅಲ್ಯುಮಿನಿಯಂ ತಟ್ಟೆ ಹಾಗೂ ಊರುಗೋಲಿತ್ತು. ಅವನನ್ನೇ ಬೆರಗಿನಿಂದ ನೋಡಿದ ರಾಜ-`ನೀನು ದಿನಾಲೂ ಇಲ್ಲಿಗೆ ಬರ್‍ತೀಯಂತೆ. ಸ್ವಲ್ಪ ಹೊತ್ತು ಇಲ್ಲೇ ಇರ್‍ತೀಯಂತೆ. ಇಲ್ಲಿ ನೀನು ಏನು ಮಾಡ್ತಿರ್‍ತೀಯ? ಹೇಳು…’ ಅಂದ.
`ಮಹಾಪ್ರಭುಗಳೆ, ಒಂದು ಕಾಲದಲ್ಲಿ ಬೀದೀಲಿ ಕೂತು ಭಿಕ್ಷೆ ಬೇಡುತ್ತಿದ್ದವ ನಾನು. ಅಂಥವನಿಗೆ ಈಗ ರಾಜ ಮರ್ಯಾದೆ ಸಿಗುತ್ತಿದೆ. ಅಧಿಕಾರದ ಅಮಲಿನಲ್ಲಿ ತೇಲಬೇಡ. ಈ ಹಿಂದೆ ನೀನು ಏನಾಗಿದ್ದೆ ಎಂಬುದನ್ನು ಮರೆಯಬೇಡ ಎಂದು ನನಗೆ ನಾನೇ ಹೇಳಿಕೊಳ್ಳುವ ಸಲುವಾಗಿ ದಿನವೂ ಕೋಣೆಗೆ ಬರುತ್ತಿದ್ದೆ. ಈ ಹಳೆಯ ಸಂಗಾತಿಗಳ ಮುಂದೆ ನಿಂತು ಆ ಮಾತುಗಳನ್ನು ನನಗೆ ನಾನೇ ಹೇಳಿಕೊಳ್ಳುತ್ತಿದ್ದೆ. ನೀವು ಯಾರನ್ನೋ ಬೇಟೆಯಾಡಲು ಬಂದಂತಿದೆಯಲ್ಲ, ಯಾರ ನಿರೀಕ್ಷೆಯಲ್ಲಿ ಬಂದಿರಿ ಮಹಾಪ್ರಭು ಎಂದ ಸುಬ್ಬ ಉರುಫ್ ಸುಬ್ರಾಯ ಶರ್ಮ.
ಈ ಮಾತು ಕೇಳಿ ರಾಜನಿಗೆ ತನ್ನ ಕುರಿತು ನಾಚಿಕೆಯಾಯಿತು. ಸುಬ್ರಾಯನ ವಿಷಯವಾಗಿ ಏನೇನೋ ಕಲ್ಪಿಸಿಕೊಂಡಿದ್ದಕ್ಕೆ ಅಸಹ್ಯ ಅನ್ನಿಸಿತು. ಆತ ಏನೊಂದೂ ಮಾತಾಡದೆ, ಸುಬ್ರಾಯನನ್ನು ಬಾಚಿ ತಬ್ಬಿಕೊಂಡ. ಆ ಅಪ್ಪುಗೆ, ಅದರ ಬಿಸುಪು ಜತೆಗೇ ಇದ್ದ ಮೌನ-ಅದೆಷ್ಟೊ ಪ್ರಶ್ನೆಗಳಿಗೆ ಉತ್ತರ ಹೇಳಿತು…

ಒಂದೇ ಒಂದು ಕಣ್ಣ ಬಿಂದು…

ಡಿಸೆಂಬರ್ 2, 2010

ಒಂದೇ ಒಂದು ಕಣ್ಣ ಬಿಂದು…
ಚಿತ್ರ: ಬೆಳ್ಳಿ ಕಾಲುಂಗುರ. ಸಾಹಿತ್ಯ-ಸಂಗೀತ: ಹಂಸಲೇಖ.
ಗಾಯನ: ಎಸ್.ಪಿ. ಬಾಲಸುಬ್ರಮಣ್ಯಂ, ಚಿತ್ರಾ

ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ
ನಿನ್ನ ನೋವ ಜತೆ ಎಂದೂ ನಾನಿರುವೆ ನಿನ್ನಾಣೆ
ರಾತ್ರಿಯ ಬೆನ್ನಿಗೆ ಬೆಳ್ಳನೆ ಹಗಲು
ಚಿಂತೆಯ ಹಿಂದೆಯೇ ಸಂತಸ ಇರಲು ||ಪ||

ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ
ಚಿಂತೆಯಲ್ಲಿ ನಿನ್ನ ಮನ ದೂಡಿದರೆ ನನ್ನಾಣೆ
ನೋವಿನ ಬಾಳಿಗೆ ಧೈರ್ಯವೆ ಗೆಳೆಯ
ಪ್ರೇಮದ ಜೋಡಿಗೆ ತಾಕದು ಪ್ರಳಯ ||ಅ.ಪ||

ದಾಹ ನೀಗೋ ಗಂಗೆಯೇ ದಾಹ ಎಂದು ಕುಂತರೆ
ಸುಟ್ಟು ಹಾಕೊ ಬೆಂಕಿಯೇ ತನ್ನ ತಾನೇ ಸುಟ್ಟರೆ
ದಾರಿ ತೊರೋ ನಾಯಕ, ಒಂಟಿ ಎಂದು ಕೊಂಡರೆ
ಧೈರ್ಯ ಹೇಳೊ ಗುಂಡಿಗೆ ಮೂಕವಾಗಿ ಹೋದರೆ
ಸೂರ್ಯನಿಲ್ಲ ಪೂರ್ವದಲ್ಲಿ ಚಂದ್ರನಿಲ್ಲ ರಾತ್ರಿಯಲ್ಲಿ
ದಾರಿ ಇಲ್ಲ ಕಾಡಿನಲ್ಲಿ ಆಸೆ ಇಲ್ಲ ಬಾಳಿನಲ್ಲಿ
ನಂಬಿಕೆ ತಾಳುವ ಅಂಜಿಕೆ ನೀಗುವ
ಶೋಧನೆ ಸಮಯ ಚಿಂತಿಸಿ ಗೆಲ್ಲುವ ||೧||

ಮೂಡಣದಿ ಮೂಡಿ ಬಾ ಸಿಂಧೂರವೆ ಆಗಿ ಬಾ
ಜೀವಧಾರೆ ಆಗಿ ಬಾ ಪ್ರೇಮಪುಷ್ಪ ಸೇರು ಬಾ
ಬಾನಗಲ ತುಂಬಿ ಬಾ ಆಸೆಗಳ ತುಂಬು ಬಾ
ಸಿಂಗಾರವೆ ತೇಲಿ ಬಾ ಸಂತೋಷವ ನೀಡು ಬಾ
ಪ್ರೇಮದಾಸೆ ನನ್ನ ನಿನ್ನ ಬಂಸಿದೆ ನನ್ನಾಣೆ
ಸಂತಸದ ಕಣ್ಣ ರಪ್ಪೆ ಸಂಸಿದೆ ನನ್ನಾಣೆ

ದೇವರ ಗುಡಿಗು ಭಿನ್ನಗಳಿರಲು ಬಾಳಿನ ನಡೆಗೂ ಅಡ್ಡಿಗಳಿರಲು
ಭೂಮಿಯಾಗಿ ನಾನಿರುವೆ ಚಿಂತೆ ಬೇಡ ನನ್ನಾಣೆ
ನಿನ್ನ ನೋವ ಮೇರುಗಿರಿಯ ನಾ ಹೊರುವೆ ನಿನ್ನಾಣೆ ||೨|

‘ಪತ್ರಿಕೆ’ಯ ಓದುಗರೂ, ಈ ಅಂಕಣದ ಅಭಿಮಾನಿಯೂ ಆದ ರಾಘವೇಂದ್ರ ಉಡುಪ ಅವರು ಚಿತ್ರರಂಗಕ್ಕೆ ಸಂಬಂಸಿದಂತೆ ಮೂರು ಕುತೂಹಲಕರ ಪ್ರಶ್ನೆಗಳನ್ನು ಕೇಳಿದ್ದಾರೆ. ಅವು ಹೀಗಿವೆ:
೧. ಕನ್ನಡದ ಅತ್ಯುತ್ತಮ ಸಂಗೀತ ನಿರ್ದೇಶಕರಲ್ಲಿ ವಿಜಯ ಭಾಸ್ಕರ್ ಒಬ್ಬರು. ಪುಟ್ಟಣ್ಣ ಕಣಗಾಲ್ ಅವರ ಅತಿ ಹೆಚ್ಚು ಸಿನಿಮಾಗಳಿಗೆ ಸಂಗೀತ ನೀಡಿದ್ದು ಅವರ ಹೆಗ್ಗಳಿಕೆ. ಅವರಿಗೆ ಸುರ್‌ಸಿಂಗಾರ್ ಎಂಬ ಬಿರುದೂ ಇತ್ತು. ಇಷ್ಟಾದರೂ, ರಾಜ್ ಕುಮಾರ್ ಸಂಸ್ಥೆಯ ಯಾವುದೇ ಚಿತ್ರಕ್ಕೂ ವಿಜಯಭಾಸ್ಕರ್ ಅವರು ಸಂಗೀತ ನೀಡಲಿಲ್ಲವಲ್ಲ ಏಕೆ? ವಿಜಯ ಭಾಸ್ಕರ್ ಅವರ ಸಂಗೀತ ನಿರ್ದೇಶನದಲ್ಲಿ ರಾಜ್‌ಕುಮಾರ್ ಅವರು ಒಂದೇ ಒಂದು ಚಿತ್ರ ಗೀತೆಯನ್ನೂ ಹಾಡಲಿಲ್ಲವಲ್ಲ ಏಕೆ?
೨. ಆಯಾ ಕ್ಷೇತ್ರದ ಪ್ರತಿಭಾವಂತರನ್ನು ಹುಡುಕಿ, ಅವರಿಂದ ಅತ್ಯುತ್ತಮ ಕೆಲಸ ತೆಗೆಯುತ್ತಿದ್ದವರು ನಿರ್ದೇಶಕ ಪುಟ್ಟಣ್ಣ ಕಣಗಾಲ್. ಆದರೆ ಕನ್ನಡ ಚಿತ್ರರಂಗ ಕಂಡ ಮಹಾನ್ ಸಂಗೀತ ನಿರ್ದೇಶಕರಾದ ಜಿ.ಕೆ. ವೆಂಕಟೇಶ್ ಹಾಗೂ ರಾಜನ್-ನಾಗೇಂದ್ರ ಅವರಿಗೆ ಒಂದೇ ಒಂದು ಸಿನಿಮಾದಲ್ಲೂ ಪುಟ್ಟಣ್ಣನವರು ಅವಕಾಶ ಕೊಡಲಿಲ್ಲವಲ್ಲ ಯಾಕೆ? ಈ ಮಹಾನ್ ಪ್ರತಿಭೆಗಳ ಜತೆ ಕೈಜೋಡಿಸಿದ್ದರೆ ಇನ್ನೂ ಅತಿಮಧುರ ಗೀತೆಗಳನ್ನು ಕೊಡಬಹುದಿತ್ತು. ಆದರೆ ಪುಟ್ಟಣ್ಣ ಕಣಗಾಲ್ ಅವರಂಥ ಮಹಾನ್ ನಿರ್ದೇಶಕ ಕೂಡ ಈ ಬಗ್ಗೆ ಯೋಚಿಸಲಿಲ್ಲವಲ್ಲ ಏಕೆ?
೩. ಕನ್ನಡದ ಶ್ರೇಷ್ಠ ಗೀತೆರಚನೆಕಾರರ ಪೈಕಿ ವಿಜಯ ನಾರಸಿಂಹ ಕೂಡ ಒಬ್ಬರು. ಹಾಗಿದ್ದರೂ ಅವರು ರಾಜ್‌ಕುಮಾರ್ ಸಂಸ್ಥೆಯ ಚಿತ್ರಕ್ಕೆಂದು ಬರೆದದ್ದು ಒಂದೇ ಹಾಡು-ಅದು ‘ಪ್ರೇಮದ ಕಾಣಿಕೆ’ ಚಿತ್ರಕ್ಕೆ. (ಓಹಿಲೇಶ್ವರ ಚಿತ್ರಕ್ಕೆ ವಿಜಯ ನಾರಸಿಂಹ ಹಾಡು ಬರೆದಿದ್ದಾರೆ ನಿಜ. ಆದರೆ ಅದು ರಾಜ್ ಕಂಪನಿ ತಯಾರಿಸಿದ ಚಿತ್ರವಲ್ಲ.) ಯಾಕೆ ಹೀಗೆ? ಈ ವಿಷಯಗಳಿಗೆ ಸಂಬಂಸಿದಂತೆ ಏನಾದರೂ ‘ಕಥೆಗಳು’ ಇವೆಯೋ ಹೇಗೆ?
ಚಿತ್ರರಂಗದ ‘ಹಳೆಯ ಪುಟಗಳನ್ನು’ ತಿರುವಿ ಹಾಕಿದರೆ ಇಂಥವೇ ಹತ್ತಾರು ಪ್ರಶ್ನೆಗಳು ಹುಟ್ಟುತ್ತಾ ಹೋಗುತ್ತವೆ. ಒಂದೊಂದು ಸಂದರ್ಭದಲ್ಲಿ ಇಂಥ ಪ್ರಶ್ನೆಗಳಲ್ಲೇ ತಪ್ಪುಗಳಿರಬಹುದು! ಈ ಪ್ರಶ್ನೆಗಳಿಗೆಲ್ಲ ‘ಇದಮಿತ್ಥಂ’ ಎಂದು ಉತ್ತರ ಹೇಳಲು ಸಾಧ್ಯವೇ ಇಲ್ಲ. ಇಂಥ ವಿಷಯಗಳ ಬಗ್ಗೆ ಸಂಬಂಧಪಟ್ಟವರೇ ಉತ್ತರ ಹೇಳಬೇಕು, ಸ್ಪಷ್ಟನೆ ನೀಡಬೇಕು,… ಅಷ್ಟೇ….
***
ರಾಘವೇಂದ್ರ ಉಡುಪ ಅವರ ಪ್ರಶ್ನೆಗಳ ಕುರಿತು ಯೋಚಿಸುತ್ತಿದ್ದಾಗಲೇ ಕೇಳಿಬಂದದ್ದು-‘ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ’ ಎಂಬ ಹಾಡು… ಒಮ್ಮೆ ಎಸ್ಪಿ, ಬಾಲಸುಬ್ರಹ್ಮಣ್ಯಂ, ಇನ್ನೊಮ್ಮೆ ಎಸ್, ಜಾನಕಿ ಹಾಡಿರುವ ಈ ಸೋಲೊ ಹಾಡು ‘ಬೆಳ್ಳಿ ಕಾಲುಂಗುರ’ ಚಿತ್ರದ್ದು. ಪ್ರೀತಿಯ ಮಹತ್ವ ಸಾರುವ, ಪ್ರೀತಿಸಿದ ಜೀವಕ್ಕೆ ಸಮಾಧಾನ ಹೇಳುವ, ಧೈರ್ಯ ತುಂಬುವ, ಮಧುರ ಪ್ರೀತಿಗೆ ಸಾಕ್ಷಿಯಾಗುವ ಈ ಹಾಡು ಬರುವ ಎರಡು ಸಂದರ್ಭಗಳೂ ಆಪ್ತವಾಗಿವೆ. ಆ ಸನ್ನಿವೇಶಗಳ ವಿವರಣೆ ಹೀಗೆ:
ಸಂಶೋಧನೆಯ ನೆಪದಲ್ಲಿ ಹಂಪಿಗೆ ಬರುವ ನಾಯಕ, ಅಲ್ಲಿಯೇ ನಾಯಕಿಯನ್ನು ನೋಡುತ್ತಾನೆ. ಮೊದಲ ಭೇಟಿಯೇ ಪ್ರೀತಿಗೂ ಕಾರಣವಾಗುತ್ತದೆ. ಆದರೆ, ನಾಯಕಿಯ ಮನೆಯಲ್ಲಿ ಇವರ ಪ್ರೀತಿಗೆ, ಪಿಸುಮಾತಿಗೆ, ಭೇಟಿಗೆ ತೀವ್ರ ವಿರೋಧ ವ್ಯಕ್ತವಾಗುತ್ತದೆ. ನಾಯಕಿಯ ನೆರಳಿನಂತಿದ್ದ ಆ ಮನೆಯ ಕಾವಲುಗಾರ- ‘ನಮ್ಮ ಹುಡುಗಿಯ ತಂಟೆಗೆ ಬಂದರೆ ಹುಶಾರ್’ ಎಂದು ನಾಯಕನನ್ನು ಎಚ್ಚರಿಸುತ್ತಾನೆ. ಈ ಎಚ್ಚರಿಕೆಯನ್ನೂ ಮೀರಿ ನಾಯಕ ಮುಂದುವರಿದಾಗ ಅವನಿಗೆ ಚನ್ನಾಗಿ ಬಾರಿಸುತ್ತಾನೆ. ಇಷ್ಟಾದರೂ ನಾಯಕ-ನಾಯಕಿಯ ಪ್ರೀತಿ ಮುಂದುವರಿಯುತ್ತದೆ. ಯಾರು ಏನೇ ಅಂದರೂ ಸರಿ, ನಾವು ಜತೆಯಾಗಿರೋಣ ಎಂದು ನಿರ್ಧರಿಸುವ ಈ ಜೋಡಿ ನಿರ್ಧರಿಸುತ್ತದೆ. ಈ ಸಂದರ್ಭದಲ್ಲಿ ಹೇಳಿದ ಮಾತು ಮೀರಿ ನಡೆದ ಕಾರಣಕ್ಕೆ ನಾಯಕಿಯ ಕಾಲಿಗೆ ‘ಬರೆ’ ಹಾಕಲಾಗುತ್ತದೆ. ಇಷ್ಟೆಲ್ಲ ರಗಳೆಯ ನಂತರವೂ ಸೀದಾ ಕಾಡಿಗೆ ಹೋಗುತ್ತದೆ. ಕಾಡಲ್ಲಿ ನಡೆದೂ ನಡೆದು ನಾಯಕಿಯ ಕಾಲಲ್ಲಿ ಗಾಯವಾಗುತ್ತದೆ. ಈ ಸಂದರ್ಭದಲ್ಲಿ ನಾಯಕನೇ ತನ್ನ ಗೆಳತಿಯ ಸೇವೆಗೆ ನಿಲ್ಲುತ್ತಾನೆ.
ಪ್ರೀತಿಯ ಹುಡುಗ ತನ್ನ ಸೇವೆಗೆ ನಿಂತದ್ದು ಕಂಡು ನಾಯಕಿಗೆ ಕಣ್ತುಂಬಿ ಬರುತ್ತದೆ. ಅವಳು -‘ಛೆ ಛೆ, ನಾನು ನಿಮ್ಮ ಸೇವೆ ಮಾಡಬೇಕೇ ವಿನಃ ನೀವು ನನ್ನ ಸೇವೆಗೆ ನಿಲ್ಲಬಾರದು’ ಅನ್ನುತ್ತಾಳೆ. ಆಗ ನಾಯಕ- ‘ನಾನು ಬೇರೆ, ನೀನು ಬೇರೆಯಲ್ಲ. ನಾವಿಬ್ರೂ ಒಂದೇ. ನಮ್ಮದು ಜೋಡಿ ಜೀವ…’ ಎನ್ನುತ್ತಾ ಅವಳ ಸೇವೆಗೆ ನಿಲ್ಲುತ್ತಾನೆ. ಈ ಪ್ರೀತಿಯ ಮಾತು ಕೇಳಿ ಭಾವುಕಳಾದ ಆಕೆ ಕಣ್ತುಂಬಿಕೊಂಡರೆ, ತಕ್ಷಣ ನಾಯಕ ಹಾಡುತ್ತಾನೆ: ‘ ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ…’
ಮುಂದೆ ಕಥೆ ಬೇರೊಂದು ತಿರುವಿಗೆ ಹೊರಳಿಕೊಳ್ಳುತ್ತದೆ. ಆಸ್ತಿಯ ಆಸೆಯಿಂದ ಸ್ವಂತ ಅಕ್ಕ- ಭಾವನೂ, ನಾಯಕಿಯ ಮೇಲಿನ ಆಸೆಯಿಂದ ಪ್ರೀತಿಯ ಗೆಳೆಯನೂ ನಾಯಕನಿಗೆ ಮೋಸ ಮಾಡುತ್ತಾರೆ. ಗೆಳೆಯ ಮತ್ತು ಅವನ ‘ಕಡೆಯವರಿಂದ’ ನಾಯಕನಿಗೆ ವಿಪರೀತ ಏಟೂ ಬೀಳುತ್ತದೆ. ಆತ ಆಸ್ಪತ್ರೆಯಲ್ಲಿದ್ದಾಗ ನಾಯಕಿ ಬರುತ್ತಾಳೆ. ಈ ಸಂದರ್ಭದಲ್ಲಿ ತನ್ನ ದುರಾದೃಷ್ಟ ಹಾಗೂ ಅಸಹಾಯಕ ಸ್ಥಿತಿಯನ್ನು ನೆನೆದು ನಾಯಕ ಕಣ್ತುಂಬಿಕೊಳ್ಳಬೇಕು… ಅಷ್ಟರಲ್ಲಿಯೇ ಗೆಳೆಯನ ಹಳೆಯ ಮಾತನ್ನು ಅವನಿಗೇ ನೆನಪಿಸುವಂತೆ ಥೇಟ್ ಅಮ್ಮನ ದನಿಯಲ್ಲಿ ನಾಯಕಿ ಹಾಡುತ್ತಾಳೆ: ‘ ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ…’
ಈ ಹಾಡು ಕೇಳುತ್ತಿದ್ದಂತೆ ಯಾಕೋ ಖುಷಿಯಾಗುತ್ತದೆ. ಹಾಡಿನ ಒಂದೊಂದೇ ಸಾಲು ಮುಗಿಯುತ್ತಾ ಹೋದಂತೆಲ್ಲ ಹಳೆಯ ಗೆಳತಿ(ಳೆಯ), ಹಳೆಯ ಪ್ರೇಮ, ಹಳೆಯ ಮಾತು, ಆಗ ನೀಡಿದ ಭಾಷೆ-ಎಲ್ಲವೂ ನೆನಪಾಗುತ್ತದೆ ಮತ್ತು ಎಷ್ಟೇ ತಡೆದುಕೊಂಡರೂ ಕಣ್ಣೀರ ಹನಿಯೊಂದು ಕೆನ್ನೆ ತೋಯಿಸಿ ಬಿಡುತ್ತದೆ.
ಆಣೆ -ಪ್ರಮಾಣದ ಈ ಹಾಡನ್ನು ಹೇಗೆ, ಎಲ್ಲಿ ಬರೆದರು ಹಂಸಲೇಖ? ಈ ಹಾಡು ಬರೆವ ಸಂದರ್ಭದಲ್ಲಿ ಅವರ ಕಣ್ಮುಂದೆ ಇದ್ದ ಚಿತ್ರ ಯಾವುದು? ಎಲ್ಲ ಪ್ರೇಮಿಗಳೂ ತಾವು ಪ್ರೀತಿಸುವ ವ್ಯಕ್ತಿಗೆ ಸಮಾಧಾನ ಹೇಳುವ ಧಾಟಿಯಲ್ಲಿದೆ ಈ ಹಾಡು. ಅಂದಹಾಗೆ, ಈ ಹಾಡಿನ ಹಿಂದಿರುವ ಕಥೆ ಯಾರದು? ಯಾವುದನ್ನೂ ಸುಲಭವಾಗಿ ಒಪ್ಪದ ನಿರ್ದೇಶಕ ಕೆ.ವಿ. ರಾಜು ಈ ಹಾಡನ್ನು ಹೇಗೆ ಬರೆಸಿದರು?
ಇಂಥವೇ ಹತ್ತಾರು ಪ್ರಶ್ನೆಗಳನ್ನು ಮುಂದಿಟ್ಟಾಗ ಹಂಸಲೇಖಾ ಉತ್ತರಿಸಿದ್ದು ಹೀಗೆ: ‘ಬೆಳ್ಳಿ ಕಾಲುಂಗುರ ಚಿತ್ರದ ನಿರ್ದೇಶಕ ಕೆ.ವಿ. ರಾಜು. ಆತ ಚಿತ್ರರಂಗದ ಜೀನಿಯಸ್. ಸಿನಿಮಾದ ಎಲ್ಲ ವಿಭಾಗವೂ ಅವರಿಗೆ ಅಂಗೈ ಗೆರೆಯಷ್ಟೇ ಚನ್ನಾಗಿ ಪರಿಚಯವಿತ್ತು. ಸಿನಿಮಾ ಅಂದರೆ ಸಾಕು, ಎಲ್ಲವನ್ನೂ ಮರೆತು ಬಿಡುತ್ತಿದ್ದ ರಾಜುಗೆ ಕನ್ನಡದಲ್ಲಿ ಮಾತ್ರವಲ್ಲ, ಬಾಲಿವುಡ್‌ನಲ್ಲೂ ಗೌರವವಿತ್ತು. ಆತನ ಸಿನಿಮಾದಲ್ಲಿ ನಟಿಸಿದ್ದ ಅಮಿತಾಭ್ ಬಚ್ಚನ್, ರಾಜು ಪ್ರತಿಭೆಯನ್ನು ಮುಕ್ತವಾಗಿ ಕೊಂಡಾಡಿದ್ದರು.
ರಾಜುವಿನ ಯೋಚನೆ ಹಾಗೂ ಸಿನಿಮಾ, ಪ್ರೀತಿ ನನಗೆ ತುಂಬ ಇಷ್ಟವಾಗಿತ್ತು. ಆತ ತನ್ನ ಮನಸನ್ನೇ ನನ್ನೆದುರು ತೆರೆದಿಡುತ್ತಿದ್ದ ತನ್ನ ಸಿನಿಮಾ ಪ್ರತಿಯೊಂದು ವಿಭಾಗದಲ್ಲೂ ಸೂಪರ್ ಆಗಿರಬೇಕು ಎಂದು ಆತ ಆಸೆ ಪಡುತ್ತಿದ್ದ. ಗುಣಮಟ್ಟದ ದೃಷ್ಟಿಯಲ್ಲಿ ಯಾವ ರಾಜಿಗೂ ಆತ ಒಪ್ಪುತ್ತಿರಲಿಲ್ಲ. ನನ್ನ ಸಿನಿಮಾಕ್ಕೆ ಇಂಥದೇ ಹಾಡು ಬೇಕೆಂದು ಕೇಳುತ್ತಿದ್ದ. ಒಂದು ಹಾಡು ಬರೆದುಕೊಟ್ಟರೆ, ಯಾಕೋ ಮನಸ್ಸಿಗೆ ಸಮಾಧಾನ ಆಗಿಲ್ಲ. ಇದಕ್ಕಿಂತ ಚನ್ನಾಗಿರೊದನ್ನು ಬರೆದು ಕೊಡಿ ಗುರುಗಳೇ ಎಂದು ದುಂಬಾಲು ಬೀಳುತ್ತಿದ್ದ. ಆತನ ಒತ್ತಾಯ ಕಂಡು ನನಗೂ ಖುಷಿಯಾಗುತ್ತಿತ್ತು. ಕೆ.ವಿ. ರಾಜು-ಹಂಸಲೇಖಾ ಕಾಂಬಿನೇಷನ್‌ನಲ್ಲಿ ಹಿಟ್ ಹಾಡುಗಳು ಬಂದಿರುವುದಕ್ಕೆ ಇದೂ ಒಂದು ಕಾರಣ ಅನ್ಕೋತೀನಿ ನಾನು…
ಪರಿಸ್ಥಿತಿ ಹೀಗಿದ್ದಾಗಲೇ ಸಾ.ರಾ. ಗೋವಿಂದು ನಿರ್ಮಾಣದ ‘ಬೆಳ್ಳಿ ಕಾಲುಂಗುರ’ ಚಿತ್ರದ ನಿರ್ದೇಶನಕ್ಕೆ ರಾಜು ಆಯ್ಕೆಯಾದ. ಬೆಂಗಳೂರಿನ ಮೋತಿ ಮಹಲ್ ಹೋಟೆಲಿನಲ್ಲಿ ಸಿನಿಮಾದ ಕೆಲಸ ಆರಂಭವಾಯಿತು. ಈ ಸಂದರ್ಭದಲ್ಲಿಯೇ ಅದೊಮ್ಮೆ ನನ್ನನ್ನು ಕರೆಸಿಕೊಂಡ ರಾಜು ಕಥೆ ಹೇಳಿದ. ಹಾಡುಗಳು ಯಾವ್ಯಾವ ಸಂದರ್ಭದಲ್ಲಿ ಬೇಕು ಎಂಬುದನ್ನೂ ಹೇಳಿದ. ಕಡೆಗೆ ಒಂದು ದಿನವನ್ನು ‘ಫಿಕ್ಸ್’ ಮಾಡಿ- ‘ಅವತ್ತು ನೀವು ನನ್ನೆದುರೇ ಕೂತು ಹಾಡಿನ ಟ್ಯೂನ್ ಮತ್ತು ಸಾಹಿತ್ಯವನ್ನು ಕೊಡಬೇಕು ಗುರುಗಳೇ…’ ಅಂದ.
ನಿಗಯಾಗಿದ್ದ ದಿನ ಬಂದೇ ಬಂತು. ಅವತ್ತು ಹೋಟೆಲಿಗೆ ಹೋದೆ. ಹಾರ್‍ಮೋನಿಯಂ ಮುಂದಿಟ್ಟುಕೊಂಡು ಕೂತೆ. ಸಿನಿಮಾದ ಕಥೆಯನ್ನು ಕಣ್ಮುಂದೆ ತಂದುಕೊಂಡೆ. ನಾಯಕ, ನಾಯಕಿ ಇಬ್ಬರೂ ತುಂಬ ಕಷ್ಟದಲ್ಲಿದ್ದಾಗ ಕೇಳಿಬರುವ ಹಾಡಿದು. ಹಾಡು ಬರೆಯಬೇಕು ಅಂದುಕೊಂಡಾಗ ನನ್ನ ಕಣ್ಮುಂದೆ ಬಂದದ್ದು ಕೇವಲ ನಾಯಕ- ನಾಯಕಿಯ ಚಿತ್ರವಲ್ಲ. ಬದಲಿಗೆ ಸಮಸ್ತ ಪ್ರೇಮಿಗಳದ್ದು. ತನ್ನ ಬದುಕಿನ ನಾವೆ ಮುಳುಗಿಹೋಯಿತು ಎಂಬಂಥ ಸಂದರ್ಭದಲ್ಲಿ ಆಕಸ್ಮಿಕವಾಗಿ ಒಲಿದು ಬಂದವನು(ಳು) ಕಾಣಿಸಿಕೊಂಡರೆ ಪ್ರೇಯಸಿ/ ಪ್ರಿಯಕರನಿಗೆ ದುಃಖ ಉಮ್ಮಳಿಸಿ ಬರುತ್ತದೆ. ಅಂಥ ಸಂದರ್ಭದಲ್ಲಿ ಒಲಿದು ಬಂದವನು(ಳು)-‘ ಉಹುಂ, ನೀನೀಗ ಅಳಬಾರ್‍ದು. ಹೀಗೆಲ್ಲ ಅತ್ತರೆ ನನ್ನ ಮೇಲಾಣೆ’ ಎಂದು ಬಿಡುತ್ತಾರೆ. ಈ ‘ಆಣೆ’ಗೆ ಮೀರಿ ನಡೆದುಕೊಂಡರೆ ಒಲಿದವರಿಗೆ ಕೆಡುಕಾಗಬಹುದು ಎಂಬ ಒಂದೇ ಕಾರಣಕ್ಕೆ ಕಣ್ಣೀರೇ ಬತ್ತಿ ಹೋಗುವಂತೆ ಮಾಡುವ ಪ್ರೇಮಿಗಳು ಎಲ್ಲ ಕಡೆಯೂ ಇದ್ದಾರೆ…
ನಾನು ಕಂಡಿದ್ದ, ಕೇಳಿದ್ದ ಹಲವಾರು ಪ್ರೇಮಿಗಳ ನೆನಪು ಒಂದರ ಹಿಂದೊಂದರಂತೆ ಕಣ್ಮುಂದೆ ಬರುತ್ತಿದ್ದಂತೆಯೇ ಹಾಡಿನ ಮೊದಲ ಸಾಲು ಹೊಳೆದುಬಿಟ್ಟಿತು. ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ…’ ಮೊದಲ ಸಾಲು ಮುಗಿಸುವುದರೊಳಗೆ ನಾನೇ ಭಾವುಕನಾಗಿದ್ದೆ. ಈ ಸಾಲಲ್ಲಿ ಏನೋ ಆಕರ್ಷಣೆ ಇದೆ ಅನಿಸಿದ್ದೇ ಆಗ. ನಂತರದ್ದೆಲ್ಲ ಸರಾಗ. ತುಂಬ ಸುಲಭದಲ್ಲಿ ಮೊದಲ ಚರಣ ಮುಗಿದು ಹೋಯಿತು. ನಾನು ಸರಸರನೆ ಬರೀತಾ ಇದ್ದುದು ನೋಡಿದ ರಾಜು- ‘ಆಯ್ತಾ ಗುರುಗಳೇ?’ ಎಂದರು.
ಯಾವುದೇ ಹಾಡು ಕೊಟ್ಟರೂ-ಇದಕ್ಕಿಂತ ಸೂಪರ್ ಆಗಿರೋದು ಕೊಡಿ ಎನ್ನುತ್ತಿದ್ದ ರಾಜು ಮಾತು ನೆನಪಿಗೆ ಬಂತು. ನಂತರದ ಹದಿನೈದು ನಿಮಿಷದಲ್ಲಿ ಅದೇ ಟ್ಯೂನ್‌ಗೆ ಇನ್ನೂ ನಾಲ್ಕು ಹಾಡು ಬರೆದೆ. ನಂತರ, ಮೊದಲು ಬರೆದಿದ್ದ ಹಾಡನ್ನು ಎತ್ತಿಟ್ಟುಕೊಂಡು, ಬಾಕಿ ನಾಲ್ಕು ಹಾಡುಗಳನ್ನು ಒಂದರ ನಂತರ ಒಂದನ್ನು ಕೇಳಿಸಿದೆ. ಆ ಪುಣ್ಯಾತ್ಮ ನಾಲ್ಕನ್ನೂ ಒಪ್ಪಲಿಲ್ಲ. ‘ಗುರುಗಳೇ ನನಗೆ ಇದೆಲ್ಲಕ್ಕಿಂತ ಚನ್ನಾಗಿರೋದು ಬೇಕು. ಬೇರೆಯದು ಕೊಡಿ’ ಅಂದ!
ಆಗ ಮೆಲ್ಲಗೆ ಮೊದಲೇ ಬರೆದಿಟ್ಟಿದ್ದ ‘ಒಂದೇ ಒಂದು ಕಣ್ಣ ಬಿಂದು’ ಹಾಡು ಹೊರತೆಗೆದೆ. ಹಾರ್‍ಮೋನಿಯಂ ಬಾರಿಸುತ್ತಾ ಅದರ ಪಲ್ಲವಿಯನ್ನು ಹಾಡಿದೆ ನೋಡಿ- ಅವನ್ನು ಕೇಳಿ, ಕೆ.ವಿ. ರಾಜು ಮುಖ ಊರಗಲವಾಯಿತು. ಆತ ಸಂಭ್ರಮದಿಂದ-‘ಗುರುಗಳೇ, ಈ ಹಾಡು ಸೂಪರ್’ ಎಂದು ಉದ್ಗರಿಸಿದ. ಮುಂದೆ ಸಿನಿಮಾ ಬಿಡುಗಡೆಯಾದಾಗ ರಾಜು ತೆಗೆದ ಉದ್ಗಾರವನ್ನೇ ಪ್ರೇಕ್ಷಕರೂ ರಿಪೀಟ್ ಮಾಡಿದರು….’
ಹಳೆಯ ನೆನಪೊಂದು ಥೇಟ್ ಹಾಡಿನಂತೆಯೇ ತಮ್ಮ ಕೈ ಹಿಡಿದು ಕಾಡಿದ ಸೊಗಸಿಗೆ ತಾವೇ ಒಮ್ಮೆ ಬೆರಗಾಗಿ ನಗುತ್ತಾ ಮಾತು ಮುಗಿಸಿದರು ಹಂಸಲೇಖ.
***
ಇವತ್ತು ಎಲ್ಲರೂ ಮಾತು ಮಾತಿಗೂ ಪಾಸಿಟಿವ್ ಥಿಂಕಿಂಗ್ ಎನ್ನುತ್ತಾರೆ. ಅಂಥದೇ ಭಾವ ಹೊಮ್ಮಿಸುವ ಹಾಡನ್ನು ಹಂಸಲೇಖ ದಶಕಗಳ ಹಿಂದೆಯೇ ಬರೆದಿದ್ದರಲ್ಲ? ಆ ಕಾರಣಕ್ಕಾಗಿ ಎಲ್ಲ ಪ್ರೇಮಿಗಳ ಪರವಾಗಿ ಅವರಿಗೆ ಅಭಿನಂದನೆ.

ಕವಿಯೊಬ್ಬನ ತಳಮಳ ನಾಯಕ-ನಾಯಕಿಯ ಪ್ರೇಮ ಪಲ್ಲವಿಯಾಯ್ತು!

ನವೆಂಬರ್ 18, 2010

ಹೇಳಲಾರೆನು ತಾಳಲಾರೆನು…
ಚಿತ್ರ: ಬೆಂಕಿ-ಬಿರುಗಾಳಿ. ಗೀತೆರಚನೆ: ದೊಡ್ಡರಂಗೇಗೌಡ
ಸಂಗೀತ: ಎಂ. ರಂಗರಾವ್ ಗಾಯನ: ಯೇಸುದಾಸ್, ವಾಣಿ ಜಯರಾಂ

ಹೇಳಲಾರೆನು ತಾಳಲಾರೆನು
ನನ್ನ ಮನಸಿನ ಭಾವನೆ
ನಾನು ನಿನ್ನನು ನೀನು ನನ್ನನು
ಮೆಚ್ಚಿ ಪ್ರೀತಿಯ ಕಾಮನೆ ||ಪ||

ಎಂದೋ ನಾನು ನಿನ್ನ ಕಂಡೆ
ಅಂದೇ ಆಸೆ ಮೂಡಿದೆ
ಕೂಗಿ ಕರೆದ ಕಣ್ಣ ಭಾಷೆ
ನನ್ನ ಹೃದಯ ಕದ್ದಿದೆ ||೧||

ಸ್ವರ್ಗಲೋಕ ಇಲ್ಲೇ ತೇಲಿ
ಒಲಿದ ಜೀವ ಹಾಡಿದೆ
ಎಲ್ಲಿ ನೀನೋ ಅಲ್ಲೆ ನಾನು
ನಮ್ಮ ನಲ್ಮೆ ಕೂಡಿದೆ ||೨||

ನೋವು ನಲಿವು ತುಂಬಿಕೊಂಡು
ಪ್ರೇಮ ಪಯಣ ಸಾಗಿದೆ
ಅರಿತ ಮೇಲೆ ಬೆರೆತ ಮೇಲೆ
ರಾಗ ಧಾರೆ ಹರಿದಿದೆ ||೩||

ಸಾವಿರ ಮಾತುಗಳಲ್ಲಿ ಹೇಳಲಾಗದ ವಿಷಯವನ್ನು ಒಂದು ಹಾಡಿನ ಮೂಲಕ ಹೇಳಿಬಿಡಬಹುದು. ಅದು ಹಾಡಿಗಿರುವ ಶಕ್ತಿ. ಈ ಕಾರಣದಿಂದಲೇ ಉತ್ಕಟ ಸನ್ನಿವೇಶದ ಸಂದರ್ಭಗಳಲ್ಲಿ ಹಾಡುಗಳನ್ನು ಬಳಸುವ; ಆ ಮೂಲಕ ಸನ್ನಿವೇಶದ ತೀವ್ರತೆ ಹೆಚ್ಚುವಂತೆ ಮಾಡುವ ಪರಿಪಾಠ ಚಿತ್ರರಂಗದಲ್ಲಿ ಮೊದಲಿನಿಂದಲೂ ಚಾಲ್ತಿಯಲ್ಲಿದೆ. ಪ್ರೀತಿ ಬದುಕಾದಾಗ, ಮನಸು ಮೈಮರೆತಾಗ, ಕನಸು ಕಣ್ಣಾದಾಗ, ಸಂಕಟ ಕೈ ಹಿಡಿದಾಗ, ಸಂಭ್ರಮ ಹೆಚ್ಚಿದಾಗ, ವಿಪರೀತ ಸಿಟ್ಟು ಬಂದಾಗ, ಪರಮಾಪ್ತರು ಕಣ್ಮರೆಯಾದಾಗ, ಪರಮಾತ್ಮ ಪ್ರತ್ಯಕ್ಷವಾದಾಗ… ಇಂಥ ಸೂಕ್ಷ್ಮ ಸಂದರ್ಭಗಳಲ್ಲಿ ಆ ಕ್ಷಣದ ಭಾವನೆಗಳನ್ನು ವ್ಯಕ್ತಪಡಿಸಲು ಪದಗಳಿಂದ ಸಾಧ್ಯವೇ ಇಲ್ಲ. ಆದರೆ ಆ ಕೆಲಸವನ್ನು ಹಾಡುಗಳು ಮಾಡಬಲ್ಲವು. ಸಿನಿಮಾ ಅಂದ ಮೇಲೆ ಅದರಲ್ಲಿ ಒಂದೆರಡಾದರೂ ಹಾಡುಗಳು ಇರಲೇಬೇಕು ಎಂಬಂಥ ಪರಿಸ್ಥಿತಿ ನಿರ್ಮಾಣವಾಗಿರುವುದು ಈ ಕಾರಣದಿಂದಲೇ.
ಸ್ವಾರಸ್ಯ ಕೇಳಿ: ಒಂದು ಸಿನಿಮಾಕ್ಕೆ ಕಥೆ ಹುಡುಕಲು, ಸಂಭಾಷಣೆ ಬರೆಯಲು, ಚಿತ್ರಕಥೆ ಸಿದ್ಧಪಡಿಸಲು, ಚಿತ್ರೀಕರಣಕ್ಕೆ ಲೊಕೇಶನ್ ಹುಡುಕಲು ನಿರ್ಮಾಪಕ, ನಿರ್ದೇಶಕರು ಆರೇಳು ತಿಂಗಳ ಕಾಲ ತೆಗೆದುಕೊಳ್ಳುತ್ತಾರೆ. ಆದ್ರೆ ಹಾಡುಗಳ ರಚನೆಗೆ ಮಾತ್ರ ದಮ್ಮಯ್ಯ ಅಂದರೂ ಹತ್ತು-ಹನ್ನೆರಡು ದಿನಗಳಿಗಿಂತ ಹೆಚ್ಚು ಸಮಯ ನೀಡಿದ ಉದಾಹರಣೆಗಳಿಲ್ಲ. ಎಷ್ಟೋ ಸಂದರ್ಭಗಳಲ್ಲಿ ಹಾಡಿನ ಸಂದರ್ಭ ವಿಹರಿಸಿ-‘ಈಗ್ಲೇ ಆಗಬೇಕ್’ ಎಂದು ಅಪ್ಪಣೆ ಹೊರಡಿಸಿ ಹಾಡು ಬರೆಸಿಕೊಂಡ ಉದಾಹರಣೆಗಳೂ ಇವೆ.
ಒಂದು ಸಂತೋಷವೆಂದರೆ ನಮ್ಮ ಗೀತರಚನೆಕಾರರು ಇಂಥ ಸವಾಲುಗಳಿಗೆ ಸದಾ ಸ್ಪಂದಿಸುತ್ತಲೇ ಬಂದಿದ್ದಾರೆ. ತಮಗೆ ದೊರಕಿದ ೧೫-೨೦ ನಿಮಿಷಗಳ ಅಲ್ಪಾವಯಲ್ಲಿಯೇ ದಶಕಗಳ ನಂತರವೂ ನೆನಪಲ್ಲಿ ಉಳಿಯುವಂಥ ಗೀತೆಗಳನ್ನು ರಚಿಸಿದ್ದಾರೆ; ರಚಿಸುತ್ತಿದ್ದಾರೆ. ಗೀತೆರಚನೆಕಾರರಿಗೆ ಸಿಗುವ ಅಲ್ಪಾವಯ ಬಗ್ಗೆ ಹಾಡುಗಳ ರಚನೆಗೆ ಸಂಬಂಸಿದಂತೆ ಹಿರಿಯ ಗೀತೆರಚನೆಕಾರರೊಬ್ಬರು ಪ್ರತಿಕ್ರಿಯಿಸಿದ್ದು ಹೀಗೆ:
ಗೀತೆ ರಚನೆಕಾರ ಸದಾ ಕಾಲವೂ ಎಚ್ಚರದಿಂದಿರಬೇಕು. ಹಾಡು ಸೃಷ್ಟಿಗೆ ಆತ ಸದಾ ಸಿದ್ಧನಾಗಿರಬೇಕು. ಗೀತೆರಚನೆ ಎಂಬುದು ಅವಸರದ ಹೆರಿಗೆ. ಅದು ಒಂದು ರೀತಿಯಲ್ಲಿ ಆಶುಭಾಷಣ ಸ್ಪರ್ಧೆ ಇದ್ದ ಹಾಗೆ. ಹಾಡು ಬರೆಯಲು ಸಿಗುವ ಸಮಯ ತುಂಬಾ ಕಡಿಮೆ. ಆ ಅಲ್ಪಾವಯಲ್ಲೇ ಅವನು ಮಿಂಚಬೇಕು. ಪದಗಳೊಂದಿಗೆ ಆಟ ಆಡಬೇಕು. ಹಾಡು ಕಟ್ಟಬೇಕು. ಹೀಗೆ ಹಾಡು ಹೆಣೆಯುವ ನೆಪದಲ್ಲಿ ಆ ಸಂದರ್ಭದ ತೀವ್ರತೆಯನ್ನು ಹೆಚ್ಚಿಸಬೇಕು. ಹಾಡಿನ ಪ್ರತಿ ಸಾಲೂ ಸಂದರ್ಭಕ್ಕೆ ಪೂರಕವಾಗಿರುವಂತೆ ನೋಡಿಕೊಳ್ಳಬೇಕು.
ಹೆಚ್ಚಿನ ಸಂದರ್ಭಗಳಲ್ಲಿ ಇಂಥದೇ ನಿರ್ದಿಷ್ಟ ಸಂದರ್ಭದಲ್ಲಿ ಹಾಡು ಬರಬೇಕು ಎಂದು ಸಿನಿಮಾ ತಯಾರಿಯ ಹಂತದಲ್ಲಿಯೇ ನಿರ್ಧರಿಸಲಾಗುತ್ತದೆ. ನಂತರ, ಅದನ್ನು ಸಂಗೀತ ನಿರ್ದೇಶಕ ಹಾಗೂ ಗೀತೆರಚನೆಕಾರರಿಗೆ ತಿಳಿಸಲಾಗುತ್ತದೆ. ಆ ನಂತರದಲ್ಲಿ ಮೊದಲು ಟ್ಯೂನ್ ಸಿದ್ಧವಾಗುತ್ತದೆ. ನಂತರ ಆ ಟ್ಯೂನ್‌ಗೆ ಹೊಂದಿಕೆಯಾಗುವಂತೆ ಚಿತ್ರ ಸಾಹಿತಿಗಳು ಹಾಡು ಬರೆಯುತ್ತಾರೆ. ಕೆಲವೊಂದು ಸಂದರ್ಭದಲ್ಲಿ ಮೊದಲೇ ಹಾಡು ಬರೆಸಿ ನಂತರ ಟ್ಯೂನ್ ಮಾಡುವುದೂ ಉಂಟು.
ಕೆಲವೊಂದು ಆಕಸ್ಮಿಕ ಸಂದರ್ಭದಲ್ಲಿ ಮಾತ್ರ, ಈ ತೆರನಾದ ಸಿದ್ಧ ಸೂತ್ರಗಳೆಲ್ಲ ಅರ್ಥ ಕಳೆದುಕೊಳ್ಳುತ್ತವೆ. ಏಕೆಂದರೆ, ಆಗ ನಿರ್ಮಾಪಕ-ನಿರ್ದೇಶಕರು ಒಂದು ಖಚಿತ ಸಂದರ್ಭವನ್ನು ವಿವರಿಸುವುದೇ ಇಲ್ಲ. ಬದಲಾಗಿ-‘ಜನರಲ್ಲಾಗಿ ಬರೆದು ಬಿಡಿ ಸಾರ್’ ಅಂದಿರುತ್ತಾರೆ.( ಜನರಲ್ಲಾಗಿ ಯೋಚಿಸಿ ಡ್ಯೂಯೆಟ್ ಸಾಂಗ್ ಬರೆಯಿರಿ ಅಂದ್ರೆ ಏನರ್ಥ?) ತಮಾಷೆ ಕೇಳಿ: ಇಂಥ ಸಂದರ್ಭದಲ್ಲಿ ಕೂಡ ಗೀತರಚನೆಕಾರ ನಿರಾಕರಣೆಯ ಮಾತಾಡುವಂತಿಲ್ಲ. ಬದಲಿಗೆ, ನನಗಿದು ಸತ್ವಪರೀಕ್ಷೆಯ ಸಂದರ್ಭ ಎಂದುಕೊಂಡೇ ಆತ ಗೀತೆರಚನೆಗೆ ತೊಡಗಬೇಕು. ಅಚಾನಕ್ಕಾಗಿ ಎದುರಾದ ಪರೀಕ್ಷೆಯಲ್ಲಿ ‘ಪಾಸ್’ ಆಗಬೇಕು!
‘ಬೆಂಕಿ-ಬಿರುಗಾಳಿ’ ಚಿತ್ರದ ಸೂಪರ್ ಹಿಟ್ ಗೀತೆ-‘ಹೇಳಲಾರೆನು ತಾಳಲಾರೆನು ನನ್ನ ಮನಸಿನ ಭಾವನೆ… ಹೀಗೆ ಸೃಷ್ಟಿಯಾದ ಸಂದರ್ಭವನ್ನು ವಿವರಿಸುವ ಮುನ್ನ ಪೂರಕ ಮಾಹಿತಿಯಂತೆ ಇಷ್ಟೆಲ್ಲ ಹೇಳಬೇಕಾಯಿತು. ವಿಷ್ಣು ವರ್ಧನ್-ಜಯಮಾಲಾ ಅಭಿನಯದಲ್ಲಿ ಚಿತ್ರಿಸಿರುವ ಈ ಹಾಡಿಗೆ ದನಿಯಾಗಿರುವವರು ಯೇಸುದಾಸ್-ವಾಣಿ ಜಯರಾಂ. ಈ ಹಾಡು ಬರೆದವರು-ದೊಡ್ಡರಂಗೇಗೌಡ. ವಿಶೇಷ ಏನೆಂದರೆ ದೊಡ್ಡರಂಗೇಗೌಡರು ಈ ಹಾಡು ಬರೆದದ್ದು ತೀರಾ ತೀರಾ ಆಕಸ್ಮಿಕವಾಗಿ. ಆ ಸಂದರ್ಭವನ್ನು ಗೌಡರು ವಿವರಿಸಿದ್ದು ಹೀಗೆ:
೭೦ ಹಾಗೂ ೮೦ರ ದಶಕದಲ್ಲಿ ಚಿತ್ರರಂಗದ ಸಮಸ್ತ ಚಟುವಟಿಕೆ ನಡೆಯುತ್ತಿದ್ದುದು ಚೆನ್ನೈನಲ್ಲಿ. ಮೂಲತಃ ಕಾಲೇಜು ಉಪನ್ಯಾಸಕನಾಗಿದ್ದವ ನಾನು. ಸಿನಿಮಾಗಳಿಗೆ ಹಾಡು ಬರೆಯಬೇಕಾದ ಸಂದರ್ಭ ಬಂದರೆ, ಹೆಚ್ಚಿನ ಸಂದರ್ಭಗಳಲ್ಲಿ ಶನಿವಾರ ಕಾಲೇಜು ಮುಗಿಸಿಕೊಂಡು ಚೆನ್ನೈಗೆ ಹೋಗುತ್ತಿದ್ದೆ. ಭಾನುವಾರ ಬೆಳಗಿನಿಂದ ಸಂಜೆಯೊಳಗೆ ಹಾಡುಗಳನ್ನು ಬರೆದುಕೊಟ್ಟು, ಅವತ್ತೇ ರಾತ್ರಿ ಹೊರಟು ಸೋಮವಾರ ಬೆಳಗಿನ ಜಾವಕ್ಕೇ ಬೆಂಗಳೂರು ತಲುಪಿಕೊಳ್ಳುತ್ತಿದ್ದೆ. ನಂತರ ಕಾಲೇಜಿನ ನಂಟು ಮುಂದುವರಿಸುತ್ತಿದ್ದೆ.
ಹೀಗಿದ್ದಾಗಲೇ ವಿಷ್ಣು ವರ್ಧನ್ ಅಭಿನಯದ ‘ಮಿನುಗಲೆ ಮಿನುಗಲೆ ನಕ್ಷತ್ರ’ ಹೆಸರಿನ ಸಿನಿಮಾಕ್ಕೆ ಹಾಡು ಬರೆಯಲು ಕರೆಬಂತು. ಅದಕ್ಕೆ ಮಾರುತಿ ಶಿವರಾಂ ನಿರ್ದೇಶನ, ಜಿ.ಕೆ. ವೆಂಕಟೇಶ್ ಅವರ ಸಂಗೀತವಿತ್ತು. ಪದ್ಧತಿಯಂತೆ ಒಂದು ಶನಿವಾರ ಚೆನ್ನೈಗೆ ಹೊರಟೆ. ಅಲ್ಲಿನ ಸ್ವಾಗತ್ ಹೋಟೆಲಿನಲ್ಲಿ ಉಳಿದುಕೊಂಡೆ. ಮರುದಿನ ಬೆಳಗ್ಗೆ ಸೀದಾ ಪ್ರಸಾದ್ ಸ್ಟುಡಿಯೋಗೆ ಹೋದೆ. ಜಿ.ಕೆ. ವೆಂಕಟೇಶ್, ಟ್ಯೂನ್ ಕೇಳಿಸಿದರು. ಆ ಸಿನಿಮಾಕ್ಕೆಂದು ಮಧ್ಯಾಹ್ನದೊಳಗೇ ಐದು ಹಾಡುಗಳನ್ನು ಬರೆದು ಮುಗಿಸಿದೆ. (ಮುಂದೆ ಕಾರಣಾಂತರಗಳಿಂದ ಆ ಸಿನಿಮಾ ಬಿಡುಗಡೆಯಾಗಲಿಲ್ಲ.) ಬಂದ ಕೆಲಸ ಮುಗೀತು ಎಂಬ ನಿರಾಳ ಭಾವದಲ್ಲಿ ನಾನಿದ್ದಾಗಲೇ ಅಲ್ಲಿಗೆ ಎಚ್.ಡಿ. ಗಂಗರಾಜು ಬಂದರು. ನನ್ನನ್ನು ಕಂಡವರೇ-‘ಮೇಸ್ಟ್ರೆ, ಎವಿಎಂಸಿ ಥಿಯೇಟರ್‌ಗೆ ಹೋಗೋಣ ಬನ್ನಿ. ಅಲ್ಲಿ ಸ್ವಲ್ಪ ಕೆಲಸ ಇದೆ’ ಎಂದು ಹೊರಡಿಸಿಯೇ ಬಿಟ್ರು. ಅಲ್ಲಿ ಬಂದು ನೋಡಿದರೆ-ಒಂದು ಸಿನಿಮಾದ ಚರ್ಚೆ ನಡೀತಿತ್ತು. ಅದೇ-ಬೆಂಕಿ ಬಿರುಗಾಳಿ. ವಿಷ್ಣು ವರ್ಧನ್, ಜಯಮಾಲಾ, ಶಂಕರ್‌ನಾಗ್ ತಾರಾಗಣವೆಂದು ನಿರ್ಧರಿಸಿದ್ದಾಗಿತ್ತು. ತಿಪಟೂರು ರಘು ನಿರ್ದೇಶನ, ಎಂ. ರಂಗರಾವ್ ಸಂಗೀತದ ಹೊಣೆ ಹೊತ್ತಿದ್ದರು.
ನಾನು ಎವಿಎಂಸಿ ಥಿಯೇಟರಿಗೆ ಹೋದಾಗ ಅಲ್ಲಿ ಯೇಸುದಾಸ್, ವಾಣಿ ಜಯರಾಂ, ಎಂ. ರಂಗರಾವ್, ತಿಪಟೂರು ರಘು ಸೇರಿದಂತೆ ಐವತ್ತಕ್ಕೂ ಹೆಚ್ಚು ಮಂದಿ ಇದ್ದರು. ನನ್ನನ್ನು ಕಂಡ ತಿಪಟೂರು ರಘು-‘ನೋಡಿ ಸಾರ್, ನಮ್ಮ ಹೊಸ ಸಿನಿಮಾಕ್ಕೆ ಹಾಡು ಬೇಕು. ಈಗಾಗಲೇ ಟ್ಯೂನ್ ಸಿದ್ಧವಾಗಿದೆ. ಸಂಗೀತ ಕೂಡ ರೆಡಿಯಾಗಿದೆ. ಆದರೆ ಸಾಹಿತ್ಯ ಇಲ್ಲ. ದಯವಿಟ್ಟು ಹಾಡು ಬರೆದುಕೊಡಿ’ ಅಂದ್ರು.
ತೀರಾ ಅನಿರೀಕ್ಷಿತವಾಗಿ ಸಿಕ್ಕಿದ ಅವಕಾಶ ಕಂಡು ಖುಷಿ, ಅಚ್ಚರಿ ಎರಡೂ ಆಯ್ತು. ಒಂದೆರಡು ನಿಮಿಷ ಯೋಚಿಸಿ-‘ಆಯ್ತು, ಬರೆದುಕೊಡ್ತೀನಿ. ಸಂದರ್ಭ ಏನೂಂತ ಹೇಳಿ’ ಅಂದೆ. ಆಗ ತಿಪಟೂರು ರಘು ಅವರು-‘ಅಯ್ಯೋ, ಈ ಹಾಡಿಗೆ ಅಂಥ ಮಹತ್ವವಾದ ಸಂದರ್ಭವೇನೂ ಇಲ್ಲ, ಜನರಲ್ ಡ್ಯೂಯೆಟ್ ಸಾಂಗ್ ಅಷ್ಟೇ. ಜನರಲ್ಲಾಗಿ ಯೋಚಿಸಿ ಬರೆದುಬಿಡಿ ಸಾರ್’ ಅಂದ್ರು.
ಇಂಥದೇ ಎಂದು ಸಂದರ್ಭ ಇದ್ದಾಗ, ಅದನ್ನು ಒಂದು ರೀತಿಯಲ್ಲಿ ಕಲ್ಪಿಸಿಕೊಂಡು ನಾಯಕ-ನಾಯಕಿಯರ ಮಾತುಗಳು ಹೀಗೇ ಇರಬಹುದೇನೋ ಎಂದು ಅಂದಾಜು ಮಾಡಿಕೊಂಡು ಬರೆಯುವುದು ಸುಲಭ. ಆದರೆ, ಜನರಲ್ಲಾಗಿ ಯೋಚಿಸಿ ಡ್ಯೂಯೆಟ್ ಸಾಂಗ್ ಬರೆಯುವುದು ಹೇಗೆ? ನಾನು ಈ ತಾಕಲಾಟದ ಮಧ್ಯೆಯೇ ಬರೆಯಲು ಕುಳಿತಿದ್ದೆ. ಸುತ್ತಮುತ್ತ ಚಿತ್ರ ತಂಡದ ಬಾಕಿ ಜನರಿದ್ದರು. ಮೊದಲ ಐದಾರು ನಿಮಿಷದಲ್ಲಿ ಏನೆಂದರೆ ಏನೂ ಹೊಳೆಯಲಿಲ್ಲ. ಅದೇ ಬೇಸರದಲ್ಲಿ ಒಮ್ಮೆ ತಲೆ ಎತ್ತಿದೆ. ನನ್ನನ್ನು ನೋಡಿದವರು-‘ಆಯ್ತಾ ಸಾರ್?’ ಎಂದು ಕೇಳುವುದೆ?
ನನ್ನ ಸಂಕಟ ನನಗೆ. ಇವರಿಗೆ ತಮಾಷೆ ಅಂದುಕೊಂಡೆ. ನಂತರದ ಒಂದೆರಡು ನಿಮಿಷದಲ್ಲಿ -‘ಸಾರ್, ಏನಾದ್ರೂ ಹೊಳೀತಾ?’ ಎಂಬ ಪ್ರಶ್ನೆಯನ್ನು ಎಂ. ರಂಗರಾವ್ ಮತ್ತು ತಿಪಟೂರು ರಘು ಕೂಡ ಕೇಳಿದರು. ನನ್ನ ಮನಸ್ಸಿನ ಸಂಕಟವನ್ನು ಯಾರಿಗೂ ಹೇಳುವಂತಿಲ್ಲವಲ್ಲ ಅನಿಸ್ತು. ಇಂಥದೊಂದು ಯೋಚನೆ ಬಂದಾಗಲೇ ಮಿಂಚು ಹೊಳೆದಂತಾಯ್ತು. ಹೆಚ್ಚಿನ ಸಿನಿಮಾಗಳಲ್ಲಿ ಪ್ರೀತಿಯಲ್ಲಿ ಮುಳುಗಿದ ನಾಯಕ-ನಾಯಕಿ ಕೂಡ ಪರಸ್ಪರ ಭಾವನೆಗಳನ್ನು ಹೇಳಲಾರದ, ಸುಮ್ಮನಿರಲೂ ಆಗದಂಥ ಮನಸ್ಥಿತಿಯಲ್ಲಿ ಬದುಕ್ತಾ ಇರ್‍ತಾರಲ್ವ? ಹಾಗಾಗಿ ‘ಹೇಳಲಾರೆನು ತಾಳಲಾರೆನು ನನ್ನ ಮನಸಿನ ಭಾವನೆ’ ಎಂಬುದನ್ನೇ ಹಾಡಿನ ಮೊದಲು ಸಾಲು ಮಾಡಿದರೆ ಹೇಗೆ ಅನ್ನಿಸ್ತು. ಈ ಸಾಲು ಎಂ. ರಂಗರಾವ್ ಅವರು ಕೇಳಿಸಿದ್ದ ಟ್ಯೂನ್‌ಗೆ ತುಂಬಾ ಚನ್ನಾಗಿ ಹೊಂದಿಕೊಳ್ತಾ ಇತ್ತು. ಹೀಗೆ ಯೋಚಿಸುತ್ತಿದ್ದಾಗಲೇ ಸರಸರನೆ ಪಲ್ಲವಿಯ ಸಾಲುಗಳು ಹೊಳೆದುಬಿಟ್ಟವು.
ಸಂಕೋಚದಿಂದಲೇ ಅವುಗಳನ್ನು ರಂಗರಾವ್ ಅವರಿಗೆ ತೋರಿಸಿದೆ. ರಾಯರು ‘ಅದ್ಭುತ’ ಎಂದು ಉದ್ಗರಿಸಿದರು. ‘ಮುಂದುವರಿಸಿ ಸಾರ್’ ಎಂದು ಹುರಿದುಂಬಿಸಿದರು. ಆ ನಂತರದಲ್ಲಿ ಎಲ್ಲವೂ ಸರಾಗ, ಸರಾಗ. ಮುಂದಿನ ಹತ್ತೇ ನಿಮಿಷದ ಅವಯಲ್ಲಿ ಪ್ರೇಮಿಗಳ ಮನದ ಮಾತಾಗುವಂಥ ಒಂದು ಯುಗಳ ಗೀತೆ ಸೃಷ್ಟಿಯಾಗಿ ಹೋಯ್ತು. ನಿಜ ಹೇಳಬೇಕೆಂದರೆ, ಅವತ್ತು ಚೆನ್ನೈನಲ್ಲಿ ಬೇರೆ ಯಾವ ಗೀತ ರಚನೆಕಾರರೂ ಸಿಗಲಿಲ್ಲ ಎಂಬ ಕಾರಣಕ್ಕೆ ನನ್ನಿಂದ ಹಾಡು ಬರೆಸಿದ್ದರು! ಆ ಕ್ಷಣದ ಸತ್ವಪರೀಕ್ಷೆಯಲ್ಲಿ ನಾನು ಗೆದ್ದಿದ್ದೆ. ಮುಂದೆ ಆ ಗೀತೆಯ ಪ್ರತಿ ಅಕ್ಷರನ್ನೂ ಅಕ್ಕರೆಯಿಂದ ಹಾಡಿದ ಯೇಸುದಾಸ್-ವಾಣಿಜಯರಾಂ, ಅದನ್ನೊಂದು ಸ್ಮರಣೀಯ ಯುಗಳ ಗೀತೆಯನ್ನಾಗಿ ಮಾಡಿಬಿಟ್ಟರು….’
ಇಪ್ಪತ್ತಾರು ವರ್ಷಗಳ ಹಿಂದೆ ನಡೆದಿದ್ದ ಈ ಘಟನೆಯನ್ನು ನೆನಪಿಸಿಕೊಂಡು ಮತ್ತೆ ಮತ್ತೆ ಖುಷಿ ಪಡುತ್ತಲೇ ಹಾಡಿನ ಕತೆಗೆ ಮಂಗಳ ಹಾಡಿದರು ದೊಡ್ಡರಂಗೇಗೌಡ.
***
ಅನಿರೀಕ್ಷಿತವಾಗಿ ಹಾಡು ಬರೆಯಬೇಕಾಗಿ ಬಂದಾಗ ಕವಿಯೊಬ್ಬ ಅನುಭವಿಸುವ ತಳಮಳ-ಚಿತ್ರದಲ್ಲಿ ಒಂದು ಯುಗಳ ಗೀತೆಗೆ ವಸ್ತುವಾದದ್ದು ವಿಚಿತ್ರ ಮತ್ತು ಸ್ವಾರಸ್ಯ. ಅಲ್ಲವೇ?

ಈ ಹಾಡಿನಿಂದಾಗಿ ಮುನಿಸು ಮರೆಯಾಯಿತು,ಮನಸು ತಿಳಿಯಾಯಿತು…

ನವೆಂಬರ್ 12, 2010

 

 

 

 

 

 

 

ನೀನು ನೀನೆ… ಇಲ್ಲಿ ನಾನು ನಾನೆ…
ಚಿತ್ರ: ಗಡಿಬಿಡಿ ಗಂಡ . ಸಾಹಿತ್ಯ, ಸಂಗೀತ: ಹಂಸಲೇಖ
ಗಾಯನ: ಎಸ್.ಪಿ. ಬಾಲಸುಬ್ರಹ್ಮಣ್ಯಂ

ನೀನು ನೀನೆ… ಇಲ್ಲಿ ನಾನು ನಾನೆ
ನೀನು ಎಂಬುವನಿಲ್ಲಿ ನಾದವಾಗಿರುವಾಗ
ನಾನೇನು ಹಾಡಲಯ್ಯ ದಾಸಾನುದಾಸ ||ಪ||

ನಾದದ ಶೃತಿ ನೀಡಿ ತುಂಬುರ ಸ್ಮೃತಿ ಹಾಡಿ
ಕೈಲಾಸವೆಲ್ಲ ನಾದೋಪಾಸನೆಯಾಗಿ
ಷಣ್ಮುಖಪ್ರಿಯ ರಾಗ ಮಾರ್ಗ ಹಿಂದೋಳವಾಗಿ
ನಡೆಸಿದೆ ದರಬಾರು ನೋಡು
ಹಾಡುವೆಯ ಪಲ್ಲವಿಯ, ಕೇಳುವೆಯ, ಮೇಲೆ ಎಳುವೆಯ
ನೀನು ಎಂಬುವನಿಲ್ಲಿ ನಾದವಾಗಿರುವಾಗ
ನಾನೇನು ಹಾಡಲಯ್ಯ ದಾಸಾನುದಾಸ ||೧||

ಈ ಸ್ವರವೆ ವಾದ ಈಶ್ವರನೆ ನಾದ
ಗತಿಗತಿಯ ಕಾಗುಣಿತ ವೇದ ಶಿವಸ್ಮರಣೆ ಸಂಗೀತ ಸ್ವಾದ
ಗಮಕಗಳ ಪಾಂಡಿತ್ಯ ಶೋಧ ಸುಮತಿಗಳ ಸುಜ್ಞಾನ ಬೋಧ
ಬದುಕುಗಳ ವಿಚಾರಣೆ ಕ್ಷಮಾಪಣೆ ವಿಮೋಚನೆ
ಗೆಲುವುಗಳ ಆಲೋಚನೆ ಸರಸ್ವತಿ ಸಮರ್ಪಣೆ
ನವರಸ ಅರಗಿಸಿ ಪರವಶ ಪಳಗಿಸಿ
ಅಪಜಯ ಅಡಗಿಸಿ ಜಯಿಸಲು ಇದು
ಶಕುತಿಯ ಯುಕುತಿಯ ವಿಷಯಾರ್ಥ
ಗಣಗಣ ಶಿವಗಣ ನಿಜಗುಣ ಶಿವಮನ
ನಲಿದರೆ ಒಲಿದರೆ ಕುಣಿದರೆ ಅದೆ
ಭಕುತಿಯ ಮುಕುತಿಯ ಪರಮಾರ್ಥ ||೨||

೧೯೯೩ರಲ್ಲಿ ಜಯಭೇರಿ ಹೊಡೆದ ಚಿತ್ರ- ಗಡಿಬಿಡಿ ಗಂಡ. ತೆಲುಗಿನ ‘ಅಲ್ಲರಿ ಮೊಗುಡು’ ಚಿತ್ರದ ರಿಮೇಕ್ ಆದ ಈ ಚಿತ್ರದಲ್ಲಿ ರವಿಚಂದ್ರನ್, ಜಗ್ಗೇಶ್, ರಮ್ಯಕೃಷ್ಣ, ರೋಜಾ ತಾರಾಗಣವಿತ್ತು. ರವಿಚಂದ್ರನ್‌ಗೆ ಎದುರಾಳಿಯಂತಿದ್ದ ಹಿರಿಯ ಸಂಗೀತಗಾರನ ಪಾತ್ರದಲ್ಲಿ ತಮಿಳಿನ ಜನಪ್ರಿಯ ನಟ ತಾಯ್‌ನಾಗೇಶ್ ಅಭಿನಯಿಸಿದ್ದರು. ಈ ಚಿತ್ರದಲ್ಲಿ ತಮ್ಮಿಬ್ಬರ ಪರಿಚಯ ಹೇಳಿಕೊಳ್ಳುವ ಸಂದರ್ಭದಲ್ಲಿ ರವಿಚಂದ್ರನ್-‘ನಾನು ಹಾರ್ಮೋನಿಯಂ ಸರಸ್ವತಿ. ಇವನು ತಬಲಾ ಸರಸ್ವತಿ’ ಎಂದೇ ಹೇಳುತ್ತಾರೆ. ಈ ಡೈಲಾಗ್ ಕೇಳಿಸಿದಾಕ್ಷಣ ಥಿಯೇಟರಿನ ತುಂಬಾ ಕಿಲಕಿಲ ನಗು, ಶಿಳ್ಳೆ, ಚಪ್ಪಾಳೆ…
ಆ ಚಿತ್ರದ ಒಂದು ಸಂದರ್ಭ ಹೀಗಿದೆ: ಆಕಾಶ್ ಆಡಿಯೋ ಹೆಸರಿನ ಸಂಸ್ಥೆ ಸಂಗೀತ ಸ್ಪರ್ಧೆಯೊಂದನ್ನು ಹಮ್ಮಿಕೊಂಡಿರುತ್ತದೆ. ನಾಡಿನ ಪ್ರಖ್ಯಾತ ಸಂಗೀತಗಾರ ಎಂದೇ ಹೆಸರಾದ ತಾಯ್‌ನಾಗೇಶ್ ಅದರಲ್ಲಿ ಭಾಗವಹಿಸಿರುತ್ತಾರೆ. ಅವರಿಗೆ ಪ್ರತಿರ್ಸ್ಪಯಾಗಿ ಸೆಣೆಸಲು ರವಿಚಂದ್ರನ್-ಜಗ್ಗೇಶ್ ಜೋಡಿ ನಾನಾ ಪ್ರಯತ್ನ ಮಾಡಿ ಸೋತಿರುತ್ತದೆ. ಕಡೆಗೆ ಅದೇ ಆಕಾಶ್ ಆಡಿಯೋದ ಮಾಲೀಕನ ಮಗಳು ರಮ್ಯಕೃಷ್ಣಳ ಶಿಫಾರಸಿನ ಕಾರಣದಿಂದಾಗಿ, ಸ್ಪರ್ಧೆಯಲ್ಲಿ ಕಡೆಯ ಅಭ್ಯರ್ಥಿಗಳಾಗಿ ಈ ಇಬ್ಬರ ಹೆಸರೂ ಸೇರ್ಪಡೆಯಾಗುತ್ತದೆ. ಸ್ಪರ್ಧೆಗೆ ಬಂದ ಎಲ್ಲರನ್ನೂ ಸೋಲಿಸುವ ತಾಯ್‌ನಾಗೇಶ್, ಈ ಇಬ್ಬರನ್ನು ‘ಅಯ್ಯೋ ಪಾಪ’ ಎಂಬಂತೆ ನೋಡುತ್ತಾನೆ. ‘ನನ್ನ ಪಾಂಡಿತ್ಯದ ಮುಂದೆ ನೀವು ತರಗೆಲೆಗಳು. ನಿಮ್ಮನ್ನು ಚಿಟಿಕೆ ಹೊಡೆಯುವಷ್ಟರಲ್ಲಿ ಸೋಲಿಸಬಲ್ಲೆ’ ಅನ್ನುತ್ತಾನೆ. ಅಷ್ಟಕ್ಕೇ ಸುಮ್ಮನಾಗದೆ- ‘ಈ ಸ್ಪರ್ಧೆಯಲ್ಲಿ ನೀವೇನಾದ್ರೂ ಸೋತರೆ ಮುಂದೆಂದೂ ಸಂಗೀತ ಹಾಡುವಂತಿಲ್ಲ. ಒಂದು ವೇಳೆ ನಾನೇ ಸೋತು ಹೋದರೆ, ನಿಮ್ಮ ಪಾದ ತೊಳೆದು ನನ್ನ ಕಡಗವನ್ನು ನಿಮಗೆ ತೊಡಿಸುತ್ತೇನೆ’ ಅನ್ನುತ್ತಾನೆ.
ಈ ಸವಾಲಿನ ಮುಂದುವರಿದ ಭಾಗವಾಗಿ ಶುರುವಾಗುತ್ತದೆ: ‘ನೀನು ನೀನೆ… ಇಲ್ಲಿ ನಾನು ನಾನೆ/- ನೀನು ಎಂಬುವನಿಲ್ಲಿ ನಾದವಾಗಿರುವಾಗ…’
ಚಿತ್ರದಲ್ಲಿ, ಇಬ್ಬರು ಸಂಗೀತಗಾರರ ಗಾಯನ ಶಕ್ತಿ ಪ್ರದರ್ಶನಕ್ಕೆ ಈ ಹಾಡು ಬಳಕೆಯಾಗಿದೆ ನಿಜ. ಆದರೆ, ನಿಜವಾಗಿ ಈ ಹಾಡು ಸೃಷ್ಟಿಯಾದ ಸಂದರ್ಭದ ಹಿಂದೆ ಸ್ವಾರಸ್ಯವಿದೆ, ಪ್ರೀತಿಯಿದೆ. ಕೊಂಚ ಅಸಮಧಾನವಿದೆ. ರವಷ್ಟು ಸಿಡಿಮಿಡಿಯಿದೆ. ಬೊಗಸೆ ತುಂಬುವಷ್ಟು ಭಾವುಕತೆಯಿದೆ. ವಿಶೇಷವೇನೆಂದರೆ, ಈ ಹಾಡಿನ ಒಂದೊಂದು ಸಾಲೂ ಗಾನಗಾರುಡಿಗ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರನ್ನು ಉದ್ದೇಶಿಸಿಯೇ ಬರೆದಿದ್ದಾಗಿದೆ!
ಬಹುತ್ ಪಸಂದ್ ಹೈ ಎಂಬಂತಿರುವ ಈ ಹಾಡ ಹಿಂದಿನ ಕಥೆಯನ್ನು ಹಂಸಲೇಖ ಅವರು ವಿವರಿಸಿದ್ದು ಹೀಗೆ: ‘ರವಿಚಂದ್ರನ್-ಹಂಸಲೇಖಾ-ಎಸ್.ಪಿ.ಬಿ. ಕಾಂಬಿನೇಷನ್ ಇದ್ದರೆ ಸಾಕು, ಆ ಸಿನಿಮಾದ ಹಾಡುಗಳು ಸೂಪರ್ ಹಿಟ್ ಆಗ್ತವೆ’ ಎಂದು ಗಾಂ ನಗರ ಮಾತಾಡಿಕೊಳ್ಳುತ್ತಿದ್ದ ಕಾಲ ಅದು. ಆ ಸಂದರ್ಭದಲ್ಲಿಯೇ ನನ್ನ ಏಳಿಗೆಯನ್ನು ಸಹಿಸದ ಒಂದು ಗುಂಪು ಹುಟ್ಟಿಕೊಂಡಿತು. ಹಂಸಲೇಖಾ ಅವರಿಗೆ ಜಂಭ ಬಂದಿದೆ. ಅವರು, ಹತ್ತಿದ ನಡೆದು ಬಂದ ದಾರೀನ ಮರೆತಿದ್ದಾರೆ. ಹತ್ತಿದ ಏಣಿಯನ್ನು ಒದೆಯುತ್ತಿದ್ದಾರೆ. ಎಸ್.ಪಿ.ಬಿ. ಅವರನ್ನು ಬೇಕೆಂದೇ ನಿರ್ಲಕ್ಷಿಸುತ್ತಿದ್ದಾರೆ. ಅವರಿಗೆ ಪರ್‍ಯಾಯ ಆಗಬಲ್ಲ ಗಾಯಕರನ್ನು ತಯಾರು ಮಾಡ್ತಾ ಇದ್ದಾರೆ’ ಎಂದೆಲ್ಲ ಆ ಗುಂಪು ಸುದ್ದಿ ಹಬ್ಬಿಸಿತು. ಈ ಸುದ್ದಿ ಎಸ್.ಪಿ. ಅವರಿಗೂ ತಲುಪುವಂತೆ ನೋಡಿಕೊಂಡಿತು.
ನಾನು ಆತ್ಮಸಾಕ್ಷಿಯಾಗಿ ಹೇಳಬೇಕಾದ ಮಾತೊಂದಿದೆ. ಏನೆಂದರೆ, ಈಗಲೂ ಮನುಷ್ಯತ್ವಕ್ಕೆ, ಸಹನೆ-ತಾಳ್ಮೆಗೆ, ಸಮಚಿತ್ತಕ್ಕೆ, ಶಿಸ್ತಿಗೆ ನನಗೆ ಮಾದರಿಯಾಗಿರುವವರು ಡಾ. ರಾಜ್‌ಕುಮಾರ್ ಮತ್ತು ಎಸ್.ಪಿ.ಬಿ. ನನ್ನ ಆಲ್ ಟೈಂ ಫೇವರಿಟ್ ಹಾಗೂ ನನ್ನ ಸಂಗೀತ ನಿರ್ದೇಶನದಲ್ಲಿ ಅತಿ ಹೆಚ್ಚು ಗೀತೆ ಹಾಡಿರುವ ಗಾಯಕ ಕೂಡ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರೇ. ವಾಸ್ತವ ಹೀಗಿದ್ದಾಗ ಎಸ್ಪೀಬಿ ಅವರನ್ನು ವಿರೋಸುವಂಥ ಯೋಚನೆಯನ್ನಾದ್ರೂ ಹೇಗೆ ಮಾಡಲಿ ನಾನು?
ಆದರೆ, ಶತಾಯಗತಾಯ ನನ್ನನ್ನು ಹಣಿಯಬೇಕು ಎಂಬ ಹಟಕ್ಕೆ ಬಿದ್ದಿದ್ದ ಗುಂಪು ಸುಳ್ಳು ಸುದ್ದಿಗಳನ್ನು ಮೇಲಿಂದ ಮೇಲೆ ಎಸ್ಪಿ ಅವರಿಗೆ ತಲುಪಿಸುವಲ್ಲಿ ಯಶಸ್ವಿಯಾಯಿತು. ಬಹುಶಃ ಈ ಸಂದರ್ಭದಲ್ಲಿ ಎಸ್ಪಿ ಮನಸ್ಸನ್ನು ಕಹಿ ಮಾಡಿಕೊಂಡರು ಅನಿಸುತ್ತೆ.
ಈ ಸಂದರ್ಭದಲ್ಲೇ ರವಿಚಂದ್ರನ್ ಎಕ್ಸ್‌ಪ್ರೆಸ್ ವೇಗದಲ್ಲಿ ‘ರಾಮಾಚಾರಿ’ ತೆಗೆಯುತ್ತಿದ್ದರು. ಸತತ ಸೋಲುಗಳಿಂದ ಕಂಗೆಟ್ಟಿದ್ದ ಅವರಿಗೆ ತಕ್ಷಣಕ್ಕೆ ಒಂದು ಹಿಟ್ ಸಿನಿಮಾ ಬೇಕಿತ್ತು. ಈ ಚಿತ್ರಕ್ಕೆ ಹಾಡುವಂತೆ ಕೇಳಿಕೊಳ್ಳಲು ನಾವು ಮೇಲಿಂದ ಮೇಲೆ ಎಸ್ಪಿ ಅವರಿಗೆ ಫೋನ್ ಮಾಡುತ್ತಲೇ ಇದ್ದೆವು. ಫೋನ್ ರಿಸೀವ್ ಮಾಡುತ್ತಿದ್ದ ಅವರ ಸಹಾಯಕರು-‘ಸರ್‌ಗೆ ಹುಶಾರಿಲ್ಲ. ಗಂಟಲು ನೋವಿನ ತೊಂದರೆ. ಅವರು ಚಿಕಿತ್ಸೆಗಾಗಿ ಲಂಡನ್‌ಗೆ ಹೋಗಿದ್ದಾರೆ’ ಎನ್ನುತ್ತಿದ್ದರು. ಹದಿನೈದು ದಿನಗಳ ನಂತರವೂ ಇದೇ ಉತ್ತರ ರಿಪೀಟ್ ಆದಾಗ ಅನಿವಾರ್ಯವಾಗಿ ಮನು ಹಾಗೂ ಯೇಸುದಾಸ್ ಅವರಿಂದ ಹಾಡಿಸಿದೆ. ನನ್ನ ಈ ನಿರ್ಧಾರ ಮತ್ತಷ್ಟು ಗುಸುಗುಸುಗಳಿಗೆ ಕಾರಣವಾಯ್ತು. ಗಾಳಿ ಸುದ್ದಿಗಳಿಗೆ ರೆಕ್ಕೆ ಪುಕ್ಕ ಅಂಟಿಕೊಂಡಿತು. ಪರಿಣಾಮ, ಎಸ್ಪಿ ಹಾಗೂ ನನ್ನ ಮಧ್ಯೆ ನಮಗೇ ಗೊತ್ತಿಲ್ಲದ ಹಾಗೆ ಒಂದು ಅಂತರ ಬೆಳೆದುಬಿಡ್ತು.
ನಂತರದ ದಿನಗಳಲ್ಲಿ ಬಂದದ್ದೇ ಗಡಿಬಿಡಿ ಗಂಡ. ಮೂಲ ತೆಲುಗು ಚಿತ್ರದಲ್ಲಿ ಎಸ್ಪಿ ಹಾಡಿದ್ದ ಎಲ್ಲ ಹಾಡುಗಳೂ ಹಿಟ್ ಆಗಿದ್ದವು. ಹಾಗಾಗಿ ಕನ್ನಡದಲ್ಲೂ ಅವರಿಂದಲೇ ಹಾಡಿಸಬೇಕೆಂಬ ಹಂಬಲ ನಿರ್ಮಾಪಕ ರಾಘವೇಂದ್ರರಾವ್ ಅವರದಿತ್ತು. ಅವರಿಗೆ ನಮ್ಮ ಮಧ್ಯೆ ಬೆಳೆದಿರುವ ‘ಅಂತರ’ದ ಬಗ್ಗೆ ತಿಳಿಸಿದೆ. ರಾಘವೇಂದ್ರರಾವ್ ಅವರ ಸಿನಿಮಾ ಪ್ರೀತಿ ದೊಡ್ಡದು. ಅವರು ಎಸ್ಪಿ ಅವರೊಂದಿಗೆ ಮಾತಾಡಿದರು. ಎಲ್ಲ ಸಂಗತಿ ವಿವರಿಸಿದರು. ತಮ್ಮ ಸಿನಿಮಾಕ್ಕೆ ಹಾಡಲು ಒಪ್ಪಿಸಿಯೂ ಬಿಟ್ಟರು. ನಂತರ ನನ್ನ ಬಳಿ ಬಂದು-ಎಸ್ಪಿ ಹಾಡಲು ಒಪ್ಪಿದ್ದಾರೆ. ನಾಳೆಯೇ ಬರ್‍ತಾರಂತೆ. ಹಾಡಿನ ಸಾಹಿತ್ಯ ಹಾಗೂ ಟ್ಯೂನ್ ರೆಡಿ ಮಾಡಿಕೊಳ್ಳಿ’ ಎಂದರು.
ಆವೇಳೆಗಾಗಲೇ ಹಿಂಧೋಳ ರಾಗದಲ್ಲಿ ಟ್ಯೂನ್ ಮಾಡಿದ್ದೆ. ಎಸ್ಪಿ ಬರುವ ದಿನವೇ ಬೆಳ್ಳಂಬೆಳಗ್ಗೆಯೇ ಹಾಡು ಬರೆಯಲು ಕೂತೆ. ಹಾಡು ಬರಬೇಕಿದ್ದ ಸಂದರ್ಭ ನೆನಪಿತ್ತು. ಹಾಡು ಬರೆಯಲು ಶುರುಮಾಡಿದಾಗ ಮನದಲ್ಲಿ ಯಾವ್ಯಾವ ಯೋಚನೆಗಳು ಸರಿದಾಡುತ್ತಿದ್ದವು ಎಂಬುದು ನನ್ನ ಪಾಲಿಗೂ ನಿಗೂಢ. ಹಾಡಿನ ಸಾಲುಗಳು ತಂತಾನೇ ಸೇರಿಕೊಳ್ಳುತ್ತಾ ಹೋದವು.
ಕೆಲ ಸಮಯದ ನಂತರ ರೆಕಾರ್ಡಿಗ್ ರೂಂ ಗೆ ಬಂದರು ಎಸ್ಪಿ. ನನ್ನನ್ನು ನೋಡಿದವರೇ ತೆಲುಗಿನಲ್ಲಿ- ‘ನಿಮ್ಮ ಮೇಲೆ ಬೇಜಾರಾಗಿತ್ತು’ ಅಂದ್ರು. ನಾನೂ ಅದೇ ತೆಲುಗಿನಲ್ಲಿ ‘ನನ್ನಗೂ ನಿಮ್ಮ ಮೇಲೆ ಬೇಜಾರಾಗಿತ್ತು’ ಅಂದೆ. ತಕ್ಷಣವೇ ನನ್ನತ್ತ ನೋಡಿ ನಸುನಕ್ಕ ಎಸ್ಪಿ, -‘ಹಳೆಯದನ್ನೆಲ್ಲ ಮರೆತು ಬಿಡೋಣ ಗುರುಗಳೇ’ ಎಂಬರ್ಥದ ಮಾತಾಡಿದರು. ಅವರ ಮಾತಿಗೆ ತಕ್ಷಣವೇ ಒಪ್ಪಿಕೊಂಡೆ.
ಎರಡು ನಿಮಿಷದ ನಂತರ ಸಾಹಿತ್ಯ ಬರೆದುಕೊಳ್ಳಲು ರೆಡಿಯಾದರು ಎಸ್ಪಿ. ಮೊದಲ ಸಾಲೆಂದು-‘ನೀನು ನೀನೆ… ಇಲ್ಲಿ ನಾನು ನಾನೆ’ ಎಂದೆ ನೋಡಿ? ಆ ಸಾಲು ಓದಿದ ನನ್ನನ್ನೇ ತೀಕ್ಷ್ಣವಾಗಿ ನೋಡಿದರು ಎಸ್ಪಿ. ಇದೆಂಥ ಅಹಂಕಾರ ನಿಮ್ಮದು ಎಂಬಂತಿತ್ತು ಆ ನೋಟ, ನಾನು ಅದನ್ನು ಕಂಡೂ ಕಾಣದವನಂತೆ ನಿರ್ಲಿಪ್ತ ಭಾವದಲ್ಲಿ ಎರಡನೇ ಸಾಲು ಓದಿದೆ: ನೀನು ಎಂಬುವನಿಲ್ಲಿ ನಾದವಾಗಿರುವಾಗ! ನಾನೇನು ಮಾಡಲಯ್ಯಾ ದಾಸಾನುದಾಸ..!
ಈ ಸಾಲುಗಳನ್ನು ಕೇಳುತ್ತಿದ್ದಂತೆಯೇ ಎಸ್ಪಿ ಭಾವುಕರಾದರು. ಛಕ್ಕನೆ ನನ್ನ ಕೈ ಹಿಡಿದುಕೊಂಡು-‘ನಿಮ್ಮನ್ನು ಅಪಾರ್ಥ ಮಾಡಿಕೊಂಡಿದ್ದೆ. ಸಾರಿ’ ಎಂದರು. ಅವರ ಮಾತಲ್ಲಿ ತಾಯ್ತನದ ಸ್ಪರ್ಶವಿತ್ತು. ಪ್ರೀತಿಯಿತ್ತು. ಗೆಳೆತನವಿತ್ತು. ಸಂತೋಷವಿತ್ತು. ಅವರ ಮಾತು ಕೇಳಿ ನನಗೂ ಮನಸು ತುಂಬಿ ಬಂದಿತ್ತು. ಪುನರ್ ಮಿಲನದ ಈ ಸಡಗರದ ಮಧ್ಯೆಯೇ ತಾಯ್ ನಾಗೇಶ್ ಹಾಗೂ ರವಿಚಂದ್ರನ್ ಇಬ್ಬರಿಗೂ ಹೊಂದುವಂಥ ಭಿನ್ನ ಧ್ವನಿಯಲ್ಲಿ ಅದ್ಭುತವಾಗಿ ಹಾಡಿದರು ಬಾಲು…’
***
ದೇಶ ಕಂಡ ಮಹಾನ್ ಗಾಯಕ ಎಸ್ಪಿ. ಅಂಥ ಹಾಡುಗಾರನ ಮನಸನ್ನು ಒಂದು ಹಾಡಿಂದಲೇ ಗೆದ್ದವರು ಹಂಸಲೇಖ. ಅವರಿಗೆ ಪ್ರೀತಿ, ನಮಸ್ಕಾರ, ಕೃತಜ್ಞತೆ, ಅಭಿನಂದನೆ…

ಮಾತು ನಿಂತರೂ ಅವನು ಮಹಾಸೇತುವೆ ಕಟ್ಟಿದ !

ನವೆಂಬರ್ 10, 2010

 

 

 

 

 

 

 

ಇದು, ೧೨೭ ವರ್ಷಗಳ ಹಿಂದೆ ನಡೆದ ಪ್ರಸಂಗ.
ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ೧೮೮೩ರಲ್ಲಿ ಆರಂಭವಾಗಿ ನಂತರದ ಹದಿನೈದಿಪ್ಪತ್ತು ವರ್ಷಗಳ ನಂತರ ಮುಗಿದು ಹೋದ ಮಹಾಸೇತುವೆ ನಿರ್ಮಾಣವೊಂದರ ಸಾಹಸಗಾಥೆ.
ಅವನ ಹೆಸರು ಜಾನ್ ರಾಬ್ಲಿಂಗ್. ಮೂಲತಃ ಜರ್ಮನಿಯವನು. ಬರ್ಲಿನ್‌ನಲ್ಲಿ ಸಿವಿಲ್ ಎಂಜಿನಿಯರಿಂಗ್ ಡಿಪ್ಲೊಮಾ ಮುಗಿಸಿದ ರಾಬ್ಲಿಂಗ್, ಮುಂದೇನು ಮಾಡುವುದು ಎಂದು ಯೋಚಿಸುತ್ತಿದ್ದಾಗಲೇ ಅವನ ಗುರುಗಳಾದ ಪ್ರೊಫೆಸರ್ ಹೇಗಲ್ ಹೇಳಿದರಂತೆ : ‘ನಿನ್ನೊಳಗೆ ಛಲವಿದೆ. ಉತ್ಸಾಹವಿದೆ. ಕನಸುಗಳಿವೆ. ಕನಸುಗಾರನೂ ಇದ್ದಾನೆ. ಸೀದಾ ಅಮೆರಿಕಕ್ಕೆ ಹೋಗು. ಸಾಹಸಿಗರಿಗೆ ಅಲ್ಲಿ ಅವಕಾಶಗಳು ಸಾವಿರ’.
ಗುರುಗಳ ಮಾತಿನಂತೆ, ಅಮೆರಿಕದ ನ್ಯೂಯಾರ್ಕ್ ಮಹಾನಗರಕ್ಕೆ ಬಂದ ರಾಬ್ಲಿಂಗ್. ಹೇಳಿ ಕೇಳಿ ಸಿವಿಲ್ ಎಂಜಿನಿಯರಿಂಗ್ ಓದಿದ್ದವನಲ್ಲವೇ? ಮೊದಲಿಗೆ ಪುಟ್ಟಪುಟ್ಟ ಕಾಲುವೆ ನಿರ್ಮಾಣದ ಕಾಮಗಾರಿಯನ್ನು ಗುತ್ತಿಗೆಗೆ ಹಿಡಿದ. ಈ ಸಂದರ್ಭದಲ್ಲಿಯೇ ಸೇತುವೆ ನಿರ್ಮಾಣದ ವಿಷಯದಲ್ಲಿ ಅವನಿಗೆ ವಿಶೇಷ ಆಸಕ್ತಿ ಬೆಳೆಯಿತು. ಮೊದಲಿಗೆ ಒಂದಿಬ್ಬರು ಹಿರಿಯ ಗುತ್ತಿಗೆದಾರರ ಬಳಿ ಸಹಾಯಕನಾಗಿ ಕೆಲಸ ಮಾಡಿದ ನಂತರ, ಐದಾರು ಚಿಕ್ಕಪುಟ್ಟ ಸೇತುವೆಗಳ ನಿರ್ಮಾಣ ವಹಿಸಿಕೊಂಡ ರಾಬ್ಲಿಂಗ್. ಕೆಲವೇ ದಿನಗಳಲ್ಲಿ ಆ ಕೆಲಸದ ಹಿಂದಿರುವ ಪಟ್ಟುಗಳು ಹಾಗೂ ಗುಟ್ಟುಗಳು ಆವನಿಗೆ ಅರ್ಥವಾಗಿ ಹೋದವು. ಆನಂತರದಲ್ಲಿ ನ್ಯೂಯಾರ್ಕ್ ಮಹಾನಗರದ ನಂಬರ್ ಒನ್ ಕಂಟ್ರಾಕ್ಟರ್ ಎಂಬ ಅಭಿದಾನಕ್ಕೂ ಪಾತ್ರನಾದ.
ಅಮೆರಿಕದ ಭೂಪಟವನ್ನು ಒಮ್ಮೆ ನೋಡಿ. ನ್ಯೂಯಾರ್ಕ್ ಮತ್ತು ಮ್ಯಾನ್‌ಹಟನ್ (ಇದಕ್ಕೆ ಬ್ರೂಕ್‌ಲೈನ್ ಸಿಟಿ ಎಂಬ ಹೆಸರೂ ಇದೆ). ನಗರಗಳ ಮಧ್ಯೆ ಮಹಾಸಾಗರದಷ್ಟೇ ದೊಡ್ಡದಾದ ಈಸ್ಟ್‌ರಿವರ್ ಹೆಸರಿನ ನದಿ ಹರಿಯುತ್ತದೆ. ಈ ನದಿಯ ಅಗಲವೇ ಎರಡೂವರೆ ಕಿ.ಮೀ.ಗಳಷ್ಟಿದೆ. ಹಾಗಾಗಿ ೧೨೭ ವರ್ಷಗಳ ಹಿಂದೆ ಮ್ಯಾನ್‌ಹಟನ್ ಸಿಟಿಯಿಂದ ನ್ಯೂಯಾರ್ಕ್ ಸಂಪರ್ಕವೇ ಇರಲಿಲ್ಲ. ಅನಿವಾರ್ಯವಾಗಿ ಬರಲೇಬೇಕೆಂದರೆ ಹಡಗು, ದೋಣಿಯನ್ನೇ ಅವಲಂಬಿಸಬೇಕಿತ್ತು.
ಇಂಥ ಸಂದರ್ಭದಲ್ಲಿ, ನ್ಯೂಯಾರ್ಕ್ ಮತ್ತು ಮ್ಯಾನ್‌ಹಟನ್ ನಗರದ ಮಧ್ಯೆ ಸಂಪರ್ಕ ಕಲ್ಪಿಸಲು ಒಂದು ತೂಗುಸೇತುವೆಯನ್ನು ಏಕೆ ನಿರ್ಮಿಸಬಾರದು ಎಂದು ರಾಬ್ಲಿಂಗ್ ಯೋಚಿಸಿದ. ಅದನ್ನೇ ತನ್ನ ಜತೆಗಾರರಿಗೆ, ಗೆಳೆಯರಿಗೆ, ಬಂಧುಗಳಿಗೆ ಹೇಳಿದ. ಎಲ್ಲರೂ ಅವನನ್ನು ಅನುಕಂಪದಿಂದ ನೋಡಿದರು. ಆಪ್ತರೆಲ್ಲ ಬಳಿ ಬಂದು ‘ನಿನ್ನದು ಹುಚ್ಚು ಆಲೋಚನೆ ಕಣಯ್ಯ. ಈಸ್ಟ್ ರಿವರ್‌ನ ಆಳ-ಅಗಲ ಬಲ್ಲವರಿಲ್ಲ. ಅದು ವರ್ಷವಿಡೀ ತುಂಬಿ ಹರಿಯುತ್ತದೆ. ಹೀಗಿರುವಾಗ ತೂಗುಸೇತುವೆ ನಿರ್ಮಾಣಕ್ಕೆ ನದಿ ಹರಿವಿನ ಉದ್ದಕ್ಕೂ ಅಲ್ಲಲ್ಲಿ ಪಿಲ್ಲರ್‌ಗಳನ್ನು ಹಾಕಬೇಕಲ್ಲ? ಅಂಥ ಸಂದರ್ಭದಲ್ಲಿ ನದಿಯ ಆಳವೇ ಗೊತ್ತಾಗದಿದ್ದರೆ ಗತಿ ಏನು? ನದಿಯೊಳಗೆ ಪಿಲ್ಲರ್‌ಗಳನ್ನು ನಿಲ್ಲಿಸುವುದಾದರೂ ಹೇಗೆ? ಅಲ್ಲಿ ಕೆಲಸ ಮಾಡುವಾಗ ಯಾರಾದರೂ ಅಯತಪ್ಪಿ ಬಿದ್ದರೆ ನೀರು ಪಾಲಾಗುತ್ತಾರೆ. ಹಾಗಾಗಿ ಇದು ಹುಚ್ಚು ಸಾಹಸ. ಈ ಕೆಲಸದಿಂದ ನಿನಗೆ ಖಂಡಿತ ಒಳ್ಳೆಯ ಹೆಸರು ಬರುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ಇಂಥದೊಂದು ಮಹಾಸೇತುವೆ ನಿರ್ಮಾಣಕ್ಕೆ ದಶಕಗಳೇ ಹಿಡಿಯಬಹುದು. ಅಷ್ಟೂ ದಿನ ನೀನು ಬದುಕಿರ್‍ತೀಯ ಅಂತ ಏನು ಗ್ಯಾರಂಟಿ? ಒಂದು ಮಹಾನಗರ ಹಾಗೂ ಒಂದು ದ್ವೀಪದ ಮಧ್ಯೆ ಸಂಪರ್ಕ ಕಲ್ಪಿಸಲು ರಸ್ತೆಗಳಿಂದ ಮಾತ್ರ ಸಾಧ್ಯ. ಹಾಗಿರುವಾಗ ನೀನು ಮೇಲ್ಸುತುವೆಯ ಕನಸು ಕಾಣ್ತಿದ್ದೀ. ಇದು ಹುಚ್ಚಾಟ? ಸುಮ್ಮನೇ ರಿಸ್ಕ್ ತಗೋಬೇಡ’ ಎಂದೆಲ್ಲ ‘ಬುದ್ಧಿ’ ಹೇಳಿದರು.
ಆದರೆ, ರಾಬ್ಲಿಂಗ್‌ನ ಮನಸ್ಸಿನೊಳಗೆ ಕನಸಿತ್ತು. ತೂಗುಸೇತುವೆಯನ್ನು ನಿರ್ಮಿಸಲೇಬೇಕು ಎಂಬ ಹಠವಿತ್ತು. ನಿರ್ಮಿಸಬಲ್ಲೆ ಎಂಬ ಛಲವಿತ್ತು. ಈ ಧೈರ್ಯದಿಂದಲೇ ಆತ ಎಲ್ಲರ ಬುದ್ಧಿಮಾತನ್ನೂ ನಿರ್ಲಕ್ಷಿಸಿ ಹೆಜ್ಜೆ ಮುಂದಿಟ್ಟ. ತಾನು ನಿರ್ಮಿಸಲು ಉದ್ದೇಶಿಸಿರುವ ತೂಗುಸೇತುವೆ, ಅದಕ್ಕೆ ತಗುಲಬಹುದಾದ ಅಂದಾಜು ವೆಚ್ಚ, ಈ ಸೇತುವೆ ನಿರ್ಮಾಣದಿಂದ ಆಗಲಿರುವ ಅನುಕೂಲದ ಸಮಗ್ರ ಮಾಹಿತಿಯನ್ನು ಅಮೆರಿಕ ಸರಕಾರದ ಮುಂದಿಟ್ಟು ಒಪ್ಪಿಗೆಯನ್ನೂ ಪಡೆದುಬಿಟ್ಟ!
ಸೇತುವೆ ನಿರ್ಮಾಣ ಕಾಮಗಾರಿ ಆರಂಭಿಸುವ ಮುನ್ನ, ತನ್ನ ಕನಸು, ಕಲ್ಪನೆ, ಕನವರಿಕೆ, ಆಕಸ್ಮಿಕವಾಗಿ ಎದುರಾಗಬಹುದಾದ ಸವಾಲುಗಳು ಹಾಗೂ ಅದಕ್ಕೆ ಇರುವ ಪರಿಹಾರಗಳು… ಇವನ್ನೆಲ್ಲ ಹೇಳಿಕೊಳ್ಳಲು ಒಂದು ಆಪ್ತ ಜೀವದ ಅಗತ್ಯ ರಾಬ್ಲಿಂಗ್‌ಗೆ ಇತ್ತು. ಆಗ ಅವನ ಕಣ್ಮುಂದೆ ಕಂಡವನೇ ವಾಷಿಂಗ್‌ಟನ್ ರಾಬ್ಲಿಂಗ್.
ಈ ವಾಷಿಂಗ್ಟನ್ ಬೇರೆ ಯಾರೂ ಅಲ್ಲ. ರಾಬ್ಲಿಂಗ್‌ನ ಏಕೈಕ ಪುತ್ರ. ರಾಬ್ಲಿಂಗ್ ಒಂದು ಮಹಾಯಾತ್ರೆಗೆ ಮುಂದಾಗುವ ವೇಳೆಯಲ್ಲಿ ಈ ವಾಷಿಂಗ್ಟನ್ ಸಿವಿಲ್ ಎಂಜಿನಿಯರಿಂಗ್ ಡಿಪ್ಲೊಮಾದ ಅಂತಿಮ ವರ್ಷದಲ್ಲಿದ್ದ. ಅಪ್ಪನ ಮಾತು, ಮನಸು ಎರಡೂ ಅವನಿಗೆ ಅರ್ಥವಾಗುತ್ತಿದ್ದವು. ಒಂದೆರಡು ನಿಮಿಷ ಅಪ್ಪನನ್ನೇ ದಿಟ್ಟಿಸಿ ನೋಡಿದ ವಾಷಿಂಗ್ಟನ್ ಟಠಿeಜ್ಞಿಜ ಜಿಞmಟooಜಿಚ್ಝಿಛಿ mZmmZ. ಐZಞ ಡಿಜಿಠಿe qsಟ್ಠ. ಎಟ ZeಛಿZb ಅಂದ!
ನೋಡನೋಡುತ್ತಲೇ ಅಪಾರ ಉತ್ಸಾಹ ಹಾಗೂ ಭಾರೀ ಪ್ರಚಾರದೊಂದಿಗೆ ತೂಗುಸೇತುವೆಯ ನಿರ್ಮಾಣ ಕಾಮಗಾರಿ ಆರಂಭವಾಯಿತು. ಈ ಸಂದರ್ಭದಲ್ಲಿ ಮ್ಯಾನ್‌ಹಟನ್ ನಗರದ ಮೀನುಗಾರರು ಪ್ರತಿಭಟನೆಗೆ ನಿಂತರು. ತೂಗುಸೇತುವೆ ನಿರ್ಮಾಣದಿಂದ ತಮ್ಮ ಮೂಲ ಆದಾಯಕ್ಕೆ ಹೊಡೆತ ಬೀಳುತ್ತದೆ. ಹಾಗಾಗಿಬಿಟ್ಟರೆ ತಾವು ಬದುಕುವುದೇ ಕಷ್ಟವಾಗುತ್ತದೆ ಎಂಬ ವಾದ ಅವರದಿತ್ತು. ಈ ಹಂತದಲ್ಲಿ ಇದ್ದ ಬುದ್ಧಿಯನ್ನೆಲ್ಲ ಉಪಯೋಗಿಸಿದ ರಾಬ್ಲಿಂಗ್- ‘ನನ್ನದು ಜನಪರ ಯೋಜನೆಯೇ ವಿನಃ ಜನವಿರೋ ಯೋಜನೆಯಲ್ಲ’ ಎಂದು ಎಲ್ಲರಿಗೂ ಮನವರಿಕೆ ಮಾಡಿಕೊಟ್ಟ.
ನ್ಯೂಯಾರ್ಕ್ ಮತ್ತು ಮ್ಯಾನ್‌ಹಟನ್ ನಗರಗಳ ಮಧ್ಯೆ ಹರಿಯುತ್ತಿದ್ದ ಈಸ್ಟ್ ರಿವರ್‌ನ ಅಗಲವೇ ಎರಡು ಕಿಲೋಮೀಟರ್ ಉದ್ದವಿತ್ತಲ್ಲ? ರಾಬ್ಲಿಂಗ್ ಅಷ್ಟೂ ಉದ್ದದ ತೂಗುಸೇತುವೆ ನಿರ್ಮಿಸಬೇಕಿತ್ತು. ಮೊದಲ ಐದು ತಿಂಗಳ ಕಾಲ ಕಾಮಗಾರಿ ಕೆಲಸ ಅಂದುಕೊಂಡಂತೆಯೇ ನಡೆಯಿತು. ಆದರೆ, ಆರನೇ ತಿಂಗಳ ಮೊದಲ ವಾರ ಆಗಬಾರದ್ದು ಆಗಿಹೋಯಿತು.
ಅದು ಮಳೆಗಾಲದ ಸಂದರ್ಭ. ಕಾಮಗಾರಿ ಪರಿಶೀಲನೆಗೆಂದು ರಾಬ್ಲಿಂಗ್ ಮತ್ತು ವಾಷಿಂಗ್ಟನ್ ಇಬ್ಬರೂ ಬಂದಿದ್ದರು. ಅವರು ಅಕಾರಿಗಳೊಂದಿಗೆ ಮಾತಾಡುತ್ತ ನಿಂತಿದ್ದಾಗಲೇ ಸೇತುವೆಯ ಒಂದು ಭಾಗ ದಿಢೀರ್ ಕುಸಿಯಿತು. ಈ ದುರ್ಘಟನೆ ಜರುಗಿದ್ದು ೧೮೬೯ರಲ್ಲಿ. ಈ ದುರಂತದಲ್ಲಿ ತೀವ್ರವಾಗಿ ಗಾಯಗೊಂಡ ರಾಬ್ಲಿಂಗ್, ಕೆಲವೇ ದಿನಗಳಲ್ಲಿ ಸತ್ತುಹೋದ. ಈ ಕಡೆ ವಾಷಿಂಗ್ಟನ್‌ಗೂ ಭಾರೀ ಪೆಟ್ಟು ಬಿದ್ದಿತ್ತು. ತಂದೆಯ ಕನಸಿನ ಸೇತುವೆ ಕಣ್ಮುಂದೆಯೇ ಕುಸಿದದ್ದು, ತಂದೆ ಸತ್ತೇ ಹೋದದ್ದನ್ನು ಕಂಡು ವಾಷಿಂಗ್ಟನ್ ಆಘಾತಗೊಂಡ. ಈ ಚಿಂತೆಯಲ್ಲಿದ್ದಾಗಲೇ ಅವನಿಗೆ ಸ್ಟ್ರೋಕ್ ಆಯಿತು. ಮಾತು ನಿಂತುಹೋಯಿತು. ಕೈ ಕಾಲುಗಳೆಲ್ಲ ಚಲನೆ ಕಳೆದುಕೊಂಡವು. ಈ ಸಂದರ್ಭದಲ್ಲಿ ವಾಷಿಂಗ್ಟನ್‌ನನ್ನು ಪರೀಕ್ಷಿಸಿದ ವೈದ್ಯರು ಅವನ ಹೆಂಡತಿ ಎಮಿಲಿಯನ್ನು ಕರೆದು ಹೇಳಿದರು : ‘ಮುಂದೆ ಇವರಿಗೆ ಮಾತಾಡಲು ಸಾಧ್ಯವಾಗುತ್ತೋ ಇಲ್ಲವೋ ಹೇಳಲಾಗುವುದಿಲ್ಲ. ಬಹುಶಃ ಸಾಯುವವರೆಗೂ ಇವರು ಇದೇ ಸ್ಥಿತೀಲಿ ಇರ್‍ತಾರೆ ಅನಿಸುತ್ತೆ. ಹುಷಾರಾಗಿ ನೋಡಿಕೊಳ್ಳಿ…’
ಈ ಘಟನೆಯ ನಂತರ ಅಮೆರಿಕದ ಜನ ತಲೆಗೊಂದು ಮಾತಾಡಿದರು. ಕೆಲವರು ಸೇತುವೆ ನಿರ್ಮಾಣದ ಪ್ಲಾನ್ ಸರಿಯಿಲ್ಲ ಎಂದರು. ಕೆಲವರು ಕಳಪೆ ಕಾಮಗಾರಿಯ ಪ್ರತಿಫಲ ಎಂದರು. ಇನ್ನೊಂದಷ್ಟು ಮಂದಿ ಭೂತದ ಕಾಟ ಎಂದು ಹುಯಿಲೆಬ್ಬಿಸಿದರು. ಈ ವೇಳೆಗಾಗಲೇ ಸೇತುವೆ ನಿರ್ಮಾಣದ ಕಾಮಗಾರಿ ಅರ್ಧ ಮುಗಿದಿತ್ತು. ಹಾಗಾಗಿ ಅದನ್ನು ಅಷ್ಟಕ್ಕೇ ಕೈಬಿಡುವಂತಿರಲಿಲ್ಲ. ಈ ಮಹಾಯೋಜನೆಯನ್ನು ಮುಂದುವರಿಸಲು ಯಾರೊಬ್ಬರೂ ಮುಂದೆ ಬರಲಿಲ್ಲ.
ಒಂದು ಕಡೆ ಪರಿಸ್ಥಿತಿ ಹೀಗಿದ್ದಾಗಲೇ ಅದೇ ಮ್ಯಾನ್‌ಹಟನ್ ನಗರದ ಒಂದು ಆಸ್ಪತ್ರೆಯಲ್ಲಿ ವಾಷಿಂಗ್ಟನ್ ರಾಬ್ಲಿಂಗ್ ಚಿಕಿತ್ಸೆ ಪಡೆಯುತ್ತಿದ್ದ. ಗಂಡನನ್ನು ಉಳಿಸಿಕೊಳ್ಳಲೇಬೇಕು ಎಂಬ ಹಟಕ್ಕೆ ಬಿದ್ದಿದ್ದ ಎಮಿಲಿ, ಅವನೊಂದಿಗೆ ಮಾತಾಡುವ ಆಸೆಯಿಂದಲೇ ‘ಮೂಗರ ಭಾಷೆ’ ಕಲಿತಿದ್ದಳು. ಹೀಗೊಂದು ದಿನ ಸಂeಗಳ ಮೂಲಕ ಮಾತಾಡುತ್ತಿದ್ದಾಗಲೇ, ನಾನು ಹೇಳಿದ್ದನ್ನೆಲ್ಲ ಅರ್ಥ ಮಾಡಿಕೊಂಡು, ನೋಟ್ಸ್ ಮಾಡಿಕೊಂಡು ಅದನ್ನೇ ಅಕಾರಿಗಳಿಗೆ ಹೇಳಲು ಸಾಧ್ಯವಾ ಎಂದು ಕೇಳಿದ ವಾಷಿಂಗ್ಟನ್.
ಗಂಡನ ಮಾತು ಕೇಳುತ್ತಿದ್ದಂತೆಯೇ ‘ಈ ಮಹಾಯಾತ್ರೆಗೆ ನಾನು ಸಾರಥಿಯಾಗಬೇಕು ಎಂದು ನಿರ್ಧರಿಸಿದಳು ಎಮಿಲಿ. ನಿಮ್ಮ ಮಾತು ನಡೆಸಿಕೊಡ್ತೀನಿ ಎಂದು ಕಣ್ಣ ಭಾಷೆಯಲ್ಲೇ ಹೇಳಿದಳು. ನಂತರದ ಕೆಲವೇ ದಿನಗಳಲ್ಲಿ ಅವಳು ಸಿವಿಲ್ ಎಂಜಿನಿಯರಿಂಗ್ ಡಿಪ್ಲೊಮಾಗೆ ಸೇರಿಕೊಂಡಳು. ಗಂಡನನ್ನು ಜೋಪಾನವಾಗಿ ನೋಡಿಕೊಳ್ಳುತ್ತಲೇ ಕೋರ್ಸ್ ಮುಗಿಸಿಯೇಬಿಟ್ಟಳು. ಈ ವೇಳೆಗೆ ಅವಳಿಗೂ ಸೇತುವೆ ನಿರ್ಮಾಣ ಕಾಮಗಾರಿಯ ಒಳಗುಟ್ಟುಗಳು ಹಾಗೂ ಅಲ್ಲಿ ಬಳಕೆಯಾಗುವ ತಂತ್ರeನ ಹಾಗೂ ಭಾಷೆಯ ಬಗ್ಗೆ ಅರ್ಥವಾಗಿ ಹೋಗಿತ್ತು.
೧೮೭೨ರಲ್ಲಿ ಎಮಿಲಿಯ ಸಾರಥ್ಯದಲ್ಲಿ ಮಹಾಸೇತುವೆಯ ನಿರ್ಮಾಣ ಕಾರ್ಯ ಮತ್ತೆ ಶುರುವಾಯಿತು. ದಿನಾ ಬೆಳಗ್ಗೆ ವಾಷಿಂಗ್ಟನ್ ಆಸ್ಪತ್ರೆಯ ಬೆಡ್‌ನಲ್ಲಿ ಅಂಗಾತ ಮಲಗಿಕೊಂಡೇ ಕಾಮಗಾರಿ ಕೆಲಸದ ಬಗ್ಗೆ ಸಂeಯ ಮೂಲಕವೇ ಡಿಕ್ಟೇಶನ್ ಕೊಡುತ್ತಿದ್ದ. ಎಮಿಲಿ ಅದನ್ನು ತನ್ನ ಕೈಕೆಳಗಿನ ಎಂಜಿನಿಯರ್‌ಗಳು ಹಾಗೂ ಅಕಾರಿಗಳಿಗೆ ದಾಟಿಸುತ್ತಿದ್ದಳು. ಹೀಗೆ ಶುರುವಾದ ಕೆಲಸ ಸತತ ಹನ್ನೊಂದು ವರ್ಷ ನಡೆದು ಕಡೆಗೂ ಮುಕ್ತಾಯವಾಯಿತು. ರಾಬ್ಲಿಂಗ್ ಕಂಡಿದ್ದ ಕನಸು ಅವನ ಸೊಸೆಯ ಮೂಲಕ ನನಸಾಗಿತ್ತು.
೧೮೮೩, ಮೇ ೨೪ರಂದು ಈ ಸೇತುವೆಯನ್ನು ಪ್ರವೇಶಕ್ಕೆ ತೆರವುಗೊಳಿಸಲಾಯಿತು. ಈ ಸ್ಮರಣೀಯ ಸಂದರ್ಭಕ್ಕೆ ಸಾಕ್ಷಿಯಾಗಲು ಅಮೆರಿಕದ ಅಂದಿನ ಅಧ್ಯಕ್ಷ ಚೆಸ್ಟರ್ ಎ. ಆರ್ಥರ್, ನ್ಯೂಯಾರ್ಕ್‌ನ ಮೇಯರ್ ಫ್ರಾಂಕ್ಲಿನ್ ಎಡಿಸನ್ ಹಾಗೂ ಮ್ಯಾನ್‌ಹಟನ್ ನಗರದ ಮೇಯರ್ ಸೇತ್‌ಲೋ ಬಂದಿದ್ದರು. ಸೇತುವೆಯ ಮೇಲೆ ನ್ಯೂಯಾರ್ಕ್‌ನಿಂದ ಮ್ಯಾನ್‌ಹಟನ್ ಸಿಟಿ ತಲುಪುವ ಮೊದಲ ಅವಕಾಶವನ್ನು ಎಮಿಲಿಗೇ ನೀಡಲಾಯಿತು. ಆಕೆ ಗಮ್ಯ ತಲುಪಿದ ನಂತರ ಒಂದೇ ದಿನದಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಮಂದಿ ತೂಗುಸೇತುವೆಯ ಮೇಲೆ ವ್ಯಾನ್, ಕಾರು, ಬಸ್ಸು, ಬೈಕ್‌ಗಳ ಮೂಲಕ ಪ್ರಯಾಣ ಮಾಡಿ ಖುಷಿಪಟ್ಟರು.
***
ಕತೆ ಇಲ್ಲಿಗೇ ಮುಗಿಯಲಿಲ್ಲ. ಉದ್ಘಾಟನೆಯಾದ ಆರೇ ದಿನಗಳಲ್ಲಿ ಈ ಮಹಾಸೇತುವೆಯ ಒಂದು ಭಾಗ ಮತ್ತೆ ಕುಸಿಯಿತು. ಈ ದುರಂತದಲ್ಲಿ ೧೨ ಮಂದಿ ಸತ್ತರು. ಪರಿಣಾಮವಾಗಿ, ಟೀಕೆ, ಅವಹೇಳನ, ಕೊಂಕುಮಾತು, ಬೆದರಿಕೆ ಎಲ್ಲವೂ ಎಮಿಲಿಯ ಬೆನ್ನು ಬಿದ್ದವು. ಆದರೆ ಎಮಿಲಿ ಹೆದರಲಿಲ್ಲ. ಮೂರೇ ದಿನಗಳಲ್ಲಿ ಅಕಾರಿಗಳು ಹಾಗೂ ಕಾರ್ಮಿಕರೊಂದಿಗೆ ನಡೆದುಹೋಗಿ ಸೇತುವೆಯ ಕುಸಿದಿದ್ದ ಭಾಗದ ರಿಪೇರಿ ಮಾಡಿಸಿಬಿಟ್ಟಳು. ಈ ಬಾರಿ ಸೇತುವೆಯ ಗುಣಮಟ್ಟದ ಬಗ್ಗೆ ಪರೀಕ್ಷಿಸಲು ನಿರ್ಧರಿಸಿದ ಅಮೆರಿಕ ಸರಕಾರ, ಸರ್ಕಸ್‌ನಿಂದ ೨೧ ಆನೆಗಳನ್ನು ಕರೆಸಿ, ಅವುಗಳನ್ನು ಏಕಕಾಲಕ್ಕೆ ಸೇತುವೆಯ ಈ ತುದಿಯಿಂದ ಆ ತುದಿಯವರೆಗೂ ಓಡಿಸಿ ನೋಡಿತು. ಏನೂ ತೊಂದರೆಯಿಲ್ಲ ಎಂದು ಗ್ಯಾರಂಟಿ ಮಾಡಿಕೊಂಡಿತು. ಸಂಚಾರಕ್ಕೆ ತೆರವುಗೊಳಿಸುವ ಮುನ್ನ ಆ ಮಹಾಸೇತುವೆಗೆ ಬ್ರೂಕ್‌ಲೈನ್ ಬ್ರಿಡ್ಜ್ ಎಂಬ ಹೆಸರಿಟ್ಟಿತು.
ರಾಬ್ಲಿಂಗ್‌ನ ಕನಸು, ವಾಷಿಂಗ್ಟನ್‌ನ ದೂರದೃಷ್ಟಿ ಹಾಗೂ ಎಮಿಲಿಯ ತ್ಯಾಗದ ಪ್ರತಿಫಲ ಬ್ರೂಕ್‌ಲೈನ್ ಬ್ರಿಡ್ಜ್. ಇವತ್ತು ಅದರ ಮೇಲೆ ಓಡಾಡುವುದೆಂದರೆ ಪ್ರತಿ ಅಮೆರಿಕನ್ನರಿಗೂ ಹೆಮ್ಮೆ ಖುಷಿ. ‘ಅಕ್ಕ’ ಸಮ್ಮೇಳನದ ನೆಪದಲ್ಲಿ ರಾಬ್ಲಿಂಗ್ ಓಡಾಡಿದ್ದ ನ್ಯೂಜೆರ್ಸಿಯಲ್ಲಿ ಅಡ್ಡಾಡಿದ ನಂತರ, ಬ್ರೂಕ್‌ಲೈನ್ ಬ್ರಿಡ್ಜ್‌ನ ಅಗಾಧತೆಯನ್ನು ಪ್ರತ್ಯಕ್ಷ ಕಂಡ ನಂತರ ನಿಮಗೂ ಈ ಕತೆ ಹೇಳಬೇಕೆನ್ನಿಸಿತು…

ನಾಡಗೀತೆಯಂಥ ಈ ಹಾಡು ಹುಟ್ಟಲು ಅಣ್ಣಾವ್ರ ನೋಟವೇ ಕಾರಣವಾಯ್ತು

ನವೆಂಬರ್ 7, 2010

 

 

 

 

 

 

 

 

ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು

ಚಿತ್ರ: ಆಕಸ್ಮಿಕ. ಸಾಹಿತ್ಯ ಮತ್ತು ಸಂಗೀತ: ಹಂಸಲೇಖ
ಗಾಯನ: ಡಾ. ರಾಜ್‌ಕುಮಾರ್

ಹೇ ಹೇ ಬಾಜೋ. ಟಾಣ ಟಕಟಕಟ.. ಟಾಣ ಟಕಟಕಟ.. ಹೇ ಹೇ..

ಹುಟ್ಟಿದರೇ ಕನ್ನಡ ನಾಡಲ್ ಹುಟ್ಟಬೇಕು
ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು
ಬದುಕಿದು ಜಟಕಾ ಬಂಡಿ,
ಇದು ವಿ ಓಡಿಸುವ ಬಂಡಿ
ಬದುಕಿದು ಜಟಕಾ ಬಂಡಿ
ವಿ ಅಲೆದಾಡಿಸುವಾ ಬಂಡಿ… ||ಪ||

ಕಾಶಿಲಿ ಸ್ನಾನ ಮಾಡು, ಕಾಶ್ಮೀರ ಸುತ್ತಿ ನೋಡು
ಜೋಗದ ಗುಂಡಿ ಒಡೆಯ ನಾನೆಂದು ಕೂಗಿ ಹಾಡು
ಅಜಂತ ಎಲ್ಲೋರವ ಬಾಳಲ್ಲಿ ಒಮ್ಮೆ ನೋಡು
ಬಾದಾಮಿ ಐಹೊಳೆಯ ಚೆಂದಾನ ತೂಕಮಾಡು
ಕಲಿಯೋಕೆ ಕೋಟಿ ಭಾಷೆ, ಆಡೋಕ್ಕೆ ಒಂದೇ ಭಾಷೆ…
ಕನ್ನಡಾ… ಕನ್ನಡಾ… ಕಸ್ತೂರಿ ಕನ್ನಡಾ ||೧||

ಧ್ಯಾನಕ್ಕೆ ಭೂಮಿ ಇದು, ಪ್ರೇಮಕ್ಕೆ ಸ್ವರ್ಗ ಇದು
ಸ್ನೇಹಕ್ಕೆ ಶಾಲೆ ಇದು, ಜ್ಞಾನಕ್ಕೆ ಪೀಠ ಇದು
ಕಾವ್ಯಕ್ಕೆ ಕಲ್ಪ ಇದು, ಶಿಲ್ಪಕ್ಕೆ ತಲ್ಪ ಇದು
ನಾಟ್ಯಕ್ಕೆ ನಾಡಿ ಇದು, ನಾದಾಂತರಂಗವಿದು
ಕುವೆಂಪು ಬೇಂದ್ರೆಯಿಂದ, ಕಾರಂತ ಮಾಸ್ತಿಯಿಂದ
ಧನ್ಯವೀ ಕನ್ನಡ… ಗೋಕಾಕಿನ ಕನ್ನಡಾ. ||೨||

ಬಾಳಿನ ಬೆನ್ನು ಹತ್ತಿ ನೂರಾರು ಊರು ಸುತ್ತಿ
ಏನೇನೋ ಕಂಡ ಮೇಲೂ ನಮ್ಮೂರೇ ನಮಗೆ ಮೇಲು
ಕೈಲಾಸಂ ಕಂಡ ನಮಗೆ ಕೈಲಾಸ ಯಾಕೆ ಬೇಕು?
ದಾಸರ ಕಂಡ ನಮಗೆ ವೈಕುಂಠ ಯಾಕೆ ಬೇಕು?
ಮುಂದಿನ ನನ್ನ ಜನ್ಮ ಬರೆದಿಟ್ಟನಂತೆ ಬ್ರಹ್ಮ
ಇಲ್ಲಿಯೇ… ಇಲ್ಲಿಯೇ…. ಈ ಮಣ್ಣಿನಲ್ಲಿಯೇ
ಎಂದಿಗೂ ನಾನಿಲ್ಲಿಯೇ…. ||೩||

ಇದು ಸಮಸ್ತ ಕನ್ನಡಿಗರ ನೆಚ್ಚಿನ ಹಾಡು, ಮೆಚ್ಚಿನ ಹಾಡು. ಕರುನಾಡ ಪ್ರಭಾವಳಿಗೆ ಸಾಕ್ಷಿ ಹೇಳುವ ಹಾಡು. ಹಸು ಕಂದಮ್ಮಗಳೂ ತಾಳ ಹಾಕುವಂತೆ, ಮುಪ್ಪಾನು ಮುದುಕರನ್ನೂ ಕುಣಿಯುವಂತೆ ಮಾಡುವ ಹಾಡು. ಹೌದು. ಈ ಹಾಡಿನ ಪ್ರತಿ ಅಕ್ಷರದಲ್ಲಿ ಕನ್ನಡದ ಕಂಪಿದೆ. ಕನ್ನಡದ ಇಂಪಿದೆ. ಜನಪದ ಕುಣಿತದ ವೈಭವವಿದೆ. ಈ ಕಾರಣದಿಂದಲೇ, ನಾಡಗೀತೆ ಪಡೆದುಕೊಂಡಷ್ಟೇ ಜನಪ್ರಿಯತೆಯನ್ನು ಈ ಚಿತ್ರಗೀತೆಯೂ ಪಡೆದುಕೊಂಡಿದೆ. ನಿದ್ದೆ ಯಲ್ಲಿ ನಗುವ ಕಂದನ ಮೊಗದಷ್ಟ ಚೆಂದಕ್ಕಿರುವ ಈ ಹಾಡು ಶುರು ವಾಗುವುದು ಹೀಗೆ: ‘ ಹುಟ್ಟಿದರೇ ಕನ್ನಡ ನಾಡಲ್ ಹುಟ್ಟಬೇಕು, ಮೆಟ್ಟಿ ದರೇ ಕನ್ನಡ ಮಣ್ಣ ಮೆಟ್ಟಬೇಕು….’
೧೯೯೩ರಲ್ಲಿ ಡಾ. ರಾಜ್ ಕುಮಾರ್ ಅಭಿನಯದ ‘ ಆಕಸ್ಮಿಕ’ ಚಿತ್ರ ತೆರೆ ಕಂಡ ಸಂದರ್ಭದಲ್ಲಿ ಈ ಹಾಡು ಸೃಷ್ಟಿಸಿದ ಸಂಚಲನದ ಬಗ್ಗೆ ಹೇಳಲೇಬೆಕು. ಉತ್ತರ ಕರ್ನಾಟಕದ ಸೀಮೆಯ ಜನ ಥಿಯೇಟರಿನಲ್ಲಿ ಈ ಹಾಡು ಬಂದಾಕ್ಷಣ ಭಾವುಕರಾಗುತ್ತಿದ್ದರು. ಬೆಳ್ಳಿತೆರೆಗೆ ಪೂಜೆ ಮಾಡಿಸುತ್ತಿದ್ದರು. ತೆರೆಯ ಮೇಲೆ ಥೇಟಾನುಥೇಟ್ ಉತ್ತರ ಕರ್ನಾಟಕದ ಆಸಾಮಿಯಂತೆ ಕುಣಿಯುತ್ತಿದ್ದ ಅಣ್ಣಾವ್ರಿಗೆ ‘ದೃಷ್ಟಿ’ ತೆಗೆಯುತ್ತಿದ್ದರು. ನಂತರ, ಹಾಡಿನುದ್ದಕ್ಕೂ ತಾವೂ ಕುಣಿಯುತ್ತಿದ್ದರು. ಅಷ್ಟೇ ಅಲ್ಲ, ಈ ಹಾಡನ್ನೇ ಇನ್ನೊಂದ್ಸಲ ತೋರಿಸಿ ಎಂದು ಥಿಯೇಟರ್ ಮಾಲೀಕರಿಗೆ ದುಂಬಾಲು ಬೀಳುತ್ತಿದ್ದರು.
ಇಂಥದೊಂದು ಅಪರೂಪದ, ಅಕ್ಕರೆಯ ಹಾಡು ಹುಟ್ಟಿದ್ದಾದರೂ ಹೇಗೆ? ಹಂಸಲೇಖ ಎಂಬ ಅಣ್ಣಯ್ಯನಿಗೆ ಗುಲಾಬಿ ಪಕಳೆಯಂಥ ಪದಗಳು ಹೊಳೆದಿದ್ದಾದರೂ ಹೇಗೆ? ಈ ಹಾಡಿನ ಹಿಂದೆಯೂ ಒಂದು ಕತೆ ಇರಬಹುದೇ? ಇಂಥ ಪ್ರಶ್ನೆಗಳ ಸುತ್ತಲೂ ಗಿರಕಿ ಹೊಡೆಯುತ್ತಿದ್ದಾಗ ‘ಆಕಸ್ಮಿಕ’ವಾಗಿ ಸಾಕ್ಷಾತ್ ಹಂಸಲೇಖ ಅವರೇ ಮಾತಿಗೆ ಸಿಕ್ಕಿಬಿಟ್ಟರು. ಈ ಹಾಡಿನ ಹಿಂದಿರುವ ಕಥೆಯನ್ನು ಅವರು ವಿವರಿಸಿದ್ದು ಹೀಗೆ:
ತ.ರಾ.ಸು. ಅವರ ಆಕಸ್ಮಿಕ-ಅಪರಾ-ಪರಿಣಾಮ ಈ ಮೂರು ಕಾದಂಬರಿಗಳನ್ನು ಆಧರಿಸಿ ತಯಾರಾದ ಚಿತ್ರ ‘ಆಕಸ್ಮಿಕ’. ಅದಕ್ಕೆ ನಾಗಾಭರಣ ಅವರ ನಿರ್ದೇಶನವೆಂಬುದು ಖಚಿತವಾಗಿತ್ತು. ಸಂಗೀತ, ಸಾಹಿತ್ಯ ಒದಗಿಸಲು ನನಗೆ ಕರೆ ಬಂತು. ಚಿ. ಉದಯಶಂಕರ್ ಅವರು ಇದ್ದಾಗಲೂ ಅಣ್ಣಾವ್ರ ಚಿತ್ರಕ್ಕೆ ಹಾಡು ಬರೆಯಲು ಎರಡನೇ ಬಾರಿ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಅಂದುಕೊಂಡೆ. ಆ ಕಥೆಗೆ ತಿಂಗಳಾನುಗಟ್ಟಲೆ ಸ್ಕ್ರಿಪ್ಟ್ ವರ್ಕ್ಸ್ ನಡೆಯಿತು. ಸದಾಶಿವನಗರದಲ್ಲಿದ್ದ ಶಿವರಾಜ್‌ಕುಮಾರ್ ಅವರ ಮನೆಯಲ್ಲಿ ಎಲ್ಲ ಚರ್ಚೆಗಳೂ ನಡೆಯು ತ್ತಿದ್ದವು. ಚರ್ಚೆಯಲ್ಲಿ ಅಣ್ಣಾವ್ರು, ಪಾರ್ವತಮ್ಮ, ವರದಪ್ಪ, ನಾಗಾ ಭರಣ, ಉದಯಶಂಕರ್, ನಾನು, ಸಹಾಯಕ ನಿರ್ದೇಶಕರಾಗಿದ್ದ ಪಿ. ಶೇಷಾದ್ರಿ, ರಾಜಶೇಖರ್, ನರಸಿಂಹನ್…. ಹೀಗೆ ಎಲ್ರೂ ಸೇರಿ ಕೊಳ್ತಿದ್ವಿ. ಆಫೀಸ್ ಟೈಮಿಂಗ್ ಥರಾ ಬೆಳಗ್ಗೆ ಒಂಬತ್ತೂವರೆಯಿಂದ ಸಂಜೆಯವರೆಗೆ ತುಂಬ ಶ್ರದ್ಧೆ, ಶಿಸ್ತಿನಿಂದ ಕೆಲಸ ನಡೀತಿತ್ತು. ಊಟೋಪ ಚಾರದ ಸಂದರ್ಭದಲ್ಲಿ ಅಣ್ಣಾವ್ರೇ ಆತಿಥ್ಯಕ್ಕೆ ನಿಂತುಬಿಡ್ತಿದ್ರು. ಒಂದೊಂದೇ ತಿಂಡಿಯನ್ನು ಮುಂದಿಟ್ಟು- ‘ಇದು ತುಂಬಾ ಚನ್ನಾಗಿರ್‍ತದೆ. ಸ್ವಲ್ಪ ಟೇಸ್ಟ್ ನೋಡಿ. ಸಿನಿಮಾದಲ್ಲಿ ಇಂಟರ್‌ವೆಲ್ ಬಿಟ್ಟಾಗ ಕುರುಕಲು ತಿಂಡಿ ತಗೊಳ್ತೀವಲ್ಲ? ಹಾಗೆ ಇದೂನೂ’ ಎಂದು ನಗುತ್ತಿದ್ದರು.
ಚರ್ಚೆಯ ಸಂದರ್ಭದಲ್ಲಿಯೇ ಯಾವ್ಯಾವ ಸಂದರ್ಭದಲ್ಲಿ ಹಾಡುಗಳು ಬರಬೇಕು ಹಾಗೂ ಅವು ಹೇಗಿರಬೇಕೆಂದು ವರದಪ್ಪ ಹಾಗೂ ನಾಗಾಭರಣ ನನಗೆ ಹೇಳಿದ್ದರು. ಕೆಲವೇ ದಿನಗಳಲ್ಲಿ ಹಾಡು ಬರೆದಿದ್ದಾಯ್ತು. ಟ್ಯೂನ್ ಮಾಡಿದ್ದೂ ಆಯ್ತು. ಭಾವ ಪ್ರಧಾನವಾದ ಆ ಟ್ಯೂನ್ ಹಾಡುಗಳು ಎಲ್ಲರಿಗೂ ಇಷ್ಟವಾದವು. ಆದರೆ, ವರದಪ್ಪ ನವರ ತಲೇಲಿ ಬೇರೊಂದು ಯೋಚನೆ ಓಡಾಡ್ತಾ ಇತ್ತು ಅನ್ಸುತ್ತೆ. ಅದೊಂದು ದಿನ ನಾನು ಚರ್ಚೆಗೆಂದು ಹೋಗುತ್ತಿದ್ದಂತೆಯೇ ಕರೆದು ವರದಪ್ಪ ಹೇಳಿದ್ರು: ‘ಹಂಸ ಲೇಖಾ ಅವ್ರೆ, ಈ ಸಿನಿಮಾಕ್ಕೆ ಒಂದು ಮಾಸ್ ಹಾಡು ಬೇಕು. ಬೇಕೇಬೇಕು. ಅದು ಹೇಗಿರ ಬೇಕು, ಹೇಗಿದ್ರೆ ಚೆಂದ, ಯಾವ ಸಂದರ್ಭದಲ್ಲಿ ಬಳಸಿದ್ರೆ ಚೆಂದ ಅನ್ನೋದನ್ನೆಲ್ಲ ಯೋಚಿಸಿ ಮಾಸ್ ಸಾಂಗ್ ಮಾಡಿಬಿಡಿ. ಅದು ಚಿತ್ರದ ಉಳಿದ ಎಲ್ಲ ಹಾಡುಗಳನ್ನು ಮೀರಿಸುವಂಥ ಹಾಡಾಗಬೇಕು…’
ಈ ಸಿನಿಮಾದಲ್ಲಿ ಮಾಸ್ ಸಾಂಗ್‌ನ ಹೇಗೆ ಸೇರಿಸೋದು? ಅಣ್ಣಾವ್ರಿಗೂ ಕಥೆಗೂ ಸೂಟ್ ಆಗೋ ಹಾಗೆ, ಕಥೆಯ ಓಟಕ್ಕೆ ಧಕ್ಕೆ ಬಾರದ ಹಾಗೆ ಇದನ್ನು ಪ್ಲೇಸ್ ಮಾಡುವುದು ಹೇಗೆ ಎಂದು ಯೋಚಿಸ್ತಾನೇ ಇದ್ದೆ. ಏನೂ ಹೊಳೆದಿರಲಿಲ್ಲ. ಆದರೆ, ವರದಪ್ಪನವರು ಮಾತ್ರ ಬಿಡಲಿಲ್ಲ. ದಿನವೂ ಮಾಸ್ ಸಾಂಗ್ ಬಗ್ಗೆ ಕೇಳ್ತಾನೇ ಇದ್ರು…
ಹೀಗಿದ್ದಾಗಲೇ ಅದೊಂದು ದಿನ ಸ್ವಲ್ಪ ಬೇಗನೇ ಶಿವಣ್ಣನ ಮನೆಗೆ ಹೋದೆ. ವರದಪ್ಪ ಹಾಗೂ ಉದಯಶಂಕರ್ ಆಗಲೇ ಚರ್ಚೆಗೆ ಕೂತಿದ್ರು. ನಾನು ಹೋದ ಸ್ವಲ್ಪ ಹೊತ್ತಿಗೇ ರಾಜಶೇಖರ್ ಹಾಗೂ ನರಸಿಂಹನ್ ಬಂದರು. ಈ ಇಬ್ಬರಿಗೂ ರಾತ್ರಿ ಗುಂಡು ಹಾಕುವ ಅಭ್ಯಾ ಸವಿತ್ತು. ಅವತ್ತು ಅದೇಕೋ ರಾತ್ರಿಯ ಹ್ಯಾಂಗೋವರ್‌ನಲ್ಲೇ ಬಂದು ಬಿಟ್ಟಿದ್ರು. ಮುಖದಲ್ಲಿ ಕಳೆಯೇ ಇರಲಿಲ್ಲ. ಪಕ್ಕದಲ್ಲಿ ಕೂತ ಅವರನ್ನು ಕಡೆಗಣ್ಣಲ್ಲೇ ಗಮನಿಸಿದೆ. ತಲೆಯ ತುಂಬಾ ಮಾಸ್‌ಗೀತೆಯ ಟ್ಯೂನ್ ಮತ್ತು ಸಾಹಿತ್ಯದ ಯೋಚನೆಯೇ ತುಂಬಿತ್ತು. ಅದೇ ಗುಂಗಿನಲ್ಲಿ ಹಾರ್ಮೋನಿಯಂ ಮೇಲೆ ಕೈ ಇಟ್ಟು ಏನೋ ಗುನುಗುತ್ತಿದ್ದೆ.
ಅಣ್ಣಾವ್ರು, ಆಗಷ್ಟೇ ಯೋಗ, ಸ್ನಾನ, ಪೂಜೆ ಮುಗಿಸಿ ಶುಭ್ರ ಬಿಳಿ ಷರ್ಟು ಧರಿಸಿ, ಫುಲ್ ಕೈ ತೋಳನ್ನು ಮಡಿಸುತ್ತಾ ಅದ್ಭುತ ಎಂಬಂಥ ಸ್ಟೈಲ್‌ನಲ್ಲಿ ಹಾಲ್‌ನ ಆ ಕಡೆಯಿಂದ ಬಂದು ನಿಂತರು. ವಾಹ್… ಆ ಪ್ರೊಫೈಲ್ ಆಂಗಲ್‌ನಲ್ಲಿ ಅವರನ್ನು ನೋಡ್ತಿದ್ರೆ ಯಾರಿಗೂ ರೆಪ್ಪೆ ಬಡಿಯಲೂ ಮನಸ್ಸಾಗ್ತಿರಲಿಲ್ಲ. ಅಣ್ಣಾವ್ರ ಆ ಚಿತ್ರವನ್ನು ಕಣ್ಣ ಕ್ಯಾಮೆರಾ ದೊಳಗೆ ಇಟ್ಟುಕೊಂಡೇ ನರಸಿಂಹನ್ ಕಡೆ ತಿರುಗಿ ಮೆಲ್ಲಗೆ ಉದ್ಗರಿಸಿದೆ: ನೋಡಯ್ಯ ಆ ಕಡೆ. ನಾವು ಏನಂತ ಹುಟ್ತೀವೋ… ಹುಟ್ಟಿದ್ರೆ ಅಣ್ಣಾವ್ರ ಥರಾ ಹುಟ್ಟಬೇಕು.
ತಕ್ಷಣವೇ ಮ್ಯಾಜಿಕ್ ನಡೆದೇ ಹೋಯ್ತು. ಮಾಸ್ ಹಾಡಿನ ಗುಂಗ ಲ್ಲಿದ್ದ ನನಗೆ ಅಣ್ಣಾವ್ರ ಆ ಲುಕ್ಕೇ ಸೂರ್ತಿ ಆಗಿಬಿಡ್ತು. ಎಫ್ ಶಾರ್ಪ್ (ನಾಲ್ಕೂವರೆ ಮನೆ ಶ್ರುತಿ) ನನ್ನ ಫೇವರಿಟ್. ಅದರಲ್ಲಿ ಟ್ಯೂನ್‌ನ ಪ್ರಯತ್ನಿಸ್ತಿದ್ದೆ. ಆ ಕ್ಷಣದಲ್ಲೇ ಅದಕ್ಕೆ ಹೊಂದುವಂಥ ಮೊದಲ ಸಾಲು ಹೊಳೆದೇ ಬಿಡ್ತು: ‘ಹುಟ್ಟಿದರೇ ಕನ್ನಡ ನಾಡಲ್ ಹುಟ್ಟಬೇಕು…’ ಅದರ ಹಿಂದೆಯೇ ‘ಮೆಟ್ಟಿದರೇ ಕನ್ನಡ ಮಣ್ಣ ಮೆಟ್ಟಬೇಕು’ ಎಂಬ ಇನ್ನೊಂದು ಸಾಲು ಕೂಡ ತಂತಾನೇ ಬಂದುಬಿಡ್ತು. ವರದಪ್ಪ ಹಾಗೂ ಅಣ್ಣಾವ್ರ ಮುಂದೆ ಆ ಎರಡು ಸಾಲುಗಳನ್ನೇ ಮತ್ತೆ ಮತ್ತೆ ಹೇಳ್ತಾ ಹೋದೆ.
ವಿಲನ್‌ನನ್ನು ಹಿಡಿಯುವ ನೆಪದಲ್ಲಿ ನಾಯಕ ವೇಷ ಮರೆಸಿಕೊಂಡು ಹುಬ್ಬಳ್ಳಿಗೆ ಹೋಗ್ತಾನೆ ಎಂದು ವರದಪ್ಪ ಹಾಗೂ ನಾಗಾಭರಣರು ಹೇಳಿದ್ದ ಮಾತು ಆಗಲೇ ನೆನಪಿಗೆ ಬಂತು. ಆ ಸಂದರ್ಭಕ್ಕೇ ಈ ಹಾಡು ಹಾಕಿದ್ರೆ ಹೇಗೆ ಅನ್ನಿಸ್ತು. ಅದನ್ನೇ ವರದಪ್ಪ ನವರಿಗೆ ಹೇಳುತ್ತಾ- ‘ಸಾರ್, ಹುಬ್ಬಳ್ಳಿಯ ಸಂದರ್ಭದಲ್ಲಿ ಮಾರುವೇಷ, ಜಟಕಾಗಾಡಿ ಎಲ್ಲವನ್ನೂ ಹಾಡಿನ ಮೂಲಕ ತರಬಹುದು. ಅದಕ್ಕೆ ತಕ್ಕಂತೆ ಹಾಡಾಗುತ್ತೆ’ ಅಂದೆ.
ಪಲ್ಲವಿಯ ಮುಂದಿನ ಸಾಲು ಹುಟ್ಟಿದ್ದು ಕೂಡಾ ಸ್ವಾರಸ್ಯಕರವೇ. ‘ಆಕಸ್ಮಿಕ’ ಸಿನಿಮಾದಲ್ಲಿ ವಿ ನಾಯಕನ ಬದುಕಲ್ಲಿ ಏನೆಲ್ಲಾ ಆಟವಾ ಡುತ್ತೆ. ಚಿತ್ರ ತಂಡದವರೆಲ್ಲ ಅದನ್ನೇ ಮತ್ತೆ ಮತ್ತೆ ನೆನಪಿಸಿಕೊಂಡು ಡಿವಿಜಿಯವರ ಬದುಕು ಜಟಕಾ ಬಂಡಿ, ವಿ ಅದರ ಸಾಹೇಬ ಎಂಬ ಸಾಲುಗಳನ್ನೇ ಉದ್ಗರಿಸ್ತಾ ಇದ್ರು. ಪಲ್ಲವಿ ಮುಂದುವರಿಸುವಾಗ ಅಚಾನಕ್ಕಾಗಿ ಎಲ್ಲರ ಮಾತೂ ನೆನಪಾಯ್ತು. ತಕ್ಷಣವೇ ಮತ್ತೇನೋ ಹೊಳೆದಂತಾಗಿ… ‘ಬದುಕಿದು ಜಟಕಾ ಬಂಡಿ, ಇದು ವಿಯೋಡಿ ಸುವಾ ಬಂಡಿ’ ಎಂದು ಹಾಡಿಬಿಟ್ಟೆ. ತಕ್ಷಣವೇ ಅಣ್ಣಾವ್ರು ಫಟ್ಟಂತ ಉದ್ಗರಿಸಿದರು. ‘ತಗುಲ್‌ಕೊಳ್ತಲಾ ನನ್‌ಮಗಂದು..’
ಮುಂದೆ ಸವಾಲು ಅನ್ನಿಸಲೇ ಇಲ್ಲ. ನೋಡನೋಡುತ್ತಲೇ ಆರು ಚರಣಗಳು ರೆಡಿಯಾದವು. ಅದರಲ್ಲಿ ಮೂರನ್ನು ವರದಪ್ಪ ಆಯ್ದುಕೊಂಡರು. ಮುಂದೆ ರೆಕಾರ್ಡಿಂಗ್ ಸಮಯದಲ್ಲಿ ಒಂದು ಮ್ಯಾಜಿಕ್ ನಡೀತು. ನನ್ನ ಹೆಗಲು ತಟ್ಟಿದ ಅಣ್ಣಾವ್ರು-‘ಹಂಸಲೇಖಾ ಅವರೇ, ಒಂದು ಪುಟ್ಟ ಸಲಹೆ. ಹಾಡು ಹೀಗೆ ನೇರವಾಗಿ ಶುರು ಆದ್ರೆ ಜೋಶ್ ಇರೋದಿಲ್ಲ. ಇದಕ್ಕೊಂದು ಭರ್ಜರಿ ಸ್ಟಾರ್ಟ್ ಬೇಕು. ಕುದುರೆ ಓಡಿಸುವಾಗ ಜಟಕಾ ಸಾಬಿಗಳು ದಾರಿ ಬಿಡಿ ಅನ್ನೋಕೆ ‘ಬಾಜೋ’ ಅಂತಾರೆ. ಕುದುರೆಗೆ ಜೋಶ್ ಬರಿಸಲಿಕ್ಕೆ ಅಂತಾನೇ ಚಾವಟಿಯ ಕೋಲನ್ನು ಚಕ್ರಕ್ಕೆ ಕೊಟ್ಟು ಕಟಗುಟ್ಟಿಸ್ತಾರೆ. ಅದನ್ನೂ ಹಾಡಿನ ಭಾಗವಾಗಿ ಬಳಸಿಕೊಂಡ್ರೆ ಹೇಗೆ? ಅಂದರು. ಅಣ್ಣಾವ್ರ ಆ ಆಪ್ತ ಸಲಹೆಯ ಕಾರಣದಿಂದಲೇ ಪಲ್ಲವಿಗೂ ಮೊದಲು ‘ಹೇ ಹೇ ಬಾಜೋ… ಟಾಣ ಟಕಟಕಟ.’ ಎಂಬ ಅನನ್ಯ ಸಾಲು ಸೇರಿ ಕೊಂಡಿತು…’ ನಾಲ್ಕೂವರೆ ನಿಮಿಷದ ಈ ಹಾಡಿಗೆ ಹುಬ್ಬಳ್ಳಿಯ ರಾಣಿ ಚನ್ನಮ್ಮ ಸರ್ಕಲ್ ಹಾಗೂ ಸಿದ್ಧಾ ರೂಢ ಮಠದ ಆವರಣದಲ್ಲಿ ಐದು ದಿನಗಳ ಕಾಲ ಶೂಟಿಂಗ್ ನಡೀತು…’
ಹೀಗೆ ಹಾಡಿನ ಕಥೆ ಹೇಳಿದ ಹಂಸಲೇಖ ಮಾತು ಮುಗಿಸುವ ಮುನ್ನ ಹೇಳಿದರು: ‘ಇದು ನವೆಂಬರ್ ಅಲ್ಲ. ಕನ್ನಡ ಮಾಸ. ಇದನ್ನು ಸಮಸ್ತ ಕನ್ನಡಿಗರಿಗೂ ನೆನಪಿಸಿ…!’

ಕರಿಹೈದನೆಂಬೋರು ಮಾದೇಶ್ವರಾ…

ಅಕ್ಟೋಬರ್ 30, 2010

ಕರಿಹೈದನೆಂಬೋರು ಮಾದೇಶ್ವರಾ…

ಚಿತ್ರ: ಕಾಕನ ಕೋಟೆ. ಗೀತೆರಚನೆ: ಮಾಸ್ತಿ ವೆಂಕಟೇಶ ಅಯ್ಯಂಗಾರ್
ಸಂಗೀತ: ಅಶ್ವತ್ಥ್-ವೈದಿ. ಗಾಯನ: ಬಿ.ವಿ. ಕಾರಂತ.
ಕೋರಸ್: ಜಿ.ಕೆ. ವೆಂಕಟೇಶ್, ಸಿ. ಅಶ್ವತ್ಥ್

ಕರಿಹೈದನೆಂಬೋರು ಮಾದೇಶ್ವರಾ
ಮಾದೇಶ್ವರಗೇ ಶರಣು ಮಾದೇಶ್ವರ
ಮಾದೇಶ್ವರಗೇ ಶರಣು ಮಾದೇಶ್ವರ
ಮಾದೇಶ್ವರ ಗೇ ಶರಣು ಮಾದೇಶ್ವರ ||ಪ||

ಕರಿಹೈದನವ್ವನಾ ಹೆಸರೆಂದು ನಿಲ್ಲಲಿ
ಅವನ ಬಳಿ ಎಂದೆಂದು ಒಳ್ಳಿದನು ಮೆಲ್ಲಲಿ
ಅವನ ಹೆತ್ತಾ ಕಾಡು ಎಂದೆಂದೂ ಚಿಗುರಲಿ ||೧||

ಅವನ ಬಳಿ ಎಂದೆಂದು ಮಿಕ್ಕಿರಲಿ ಹೊಗರಲಿ
ಅವನ ಹಾಡಿಗಳಿರಲಿ ಎಂದೆಂದು ಸೊಗದಲಿ
ಅವನ ಬಳಿಗೆಂದೆಂದು ನಗೆಯಿರಲಿ ಮೊಗದಲಿ ||೨||

ಅವನ ಹೊಗಳುವ ಹಾಡು ಎಂದೆಂದು ಹಾಡಲಿ
ಅವನ ಬಳಿ ಎಂದೆಂದು ಹಬ್ಬವನು ಮಾಡಲಿ
ಕರಿಹೈದ ನಪ್ಪಾಜಿ ಮಾದೇಶ್ವರಾ
ಮಾದೇಶ್ವರಗೆ ಶರಣು ಮಾದೇಶ್ವರಾ ||೩||

ಮೊದಲು ನಾಟಕವಾಗಿ ಜನಮನ್ನಣೆಗಳಿಸಿ, ನಂತರ ಚಲನ ಚಿತ್ರವಾಗಿಯೂ ಯಶಸ್ವಿಯಾದ ಸಿನಿಮಾಗಳ ಪಟ್ಟಿ ದೊಡ್ಡದಿದೆ. ‘ವಸಂತಸೇನಾ’ ‘ಭಕ್ತ ಪ್ರಹ್ಲಾದ‘ ‘ಸದಾ ರಮೆ’ ಸಂಪತ್ತಿಗೆ ಸವಾಲ್…’ ಇವೆಲ್ಲ ಮೊದಲು ರಂಗಭೂಮಿಯಲ್ಲಿ ಮಿಂಚಿ ನಂತರವೇ ಬೆಳ್ಳಿ ತೆರೆಯ ಮೇಲೂ ಬೆಳಗಿದ ಸಿನಿಮಾಗಳು. ಈ ಸಾಲಿಗೆ ಸೇರುವ ಇನ್ನೊಂದು ಸಿನಿಮಾ – ಕಾಕನ ಕೋಟೆ.
ಮೈಸೂರು ಜಿಲ್ಲೆಯ ಹೆಗ್ಗಡದೇವನ ಕೋಟೆ ತಾಲೂಕಿನಲ್ಲಿರುವ ಒಂದು ಸ್ಥಳ ಕಾಕನ ಕೋಟೆ. ಅದು ಮಲೆನಾಡು ಪ್ರದೇಶ. ಅದರ ಸುತ್ತಮುತ್ತಲ ಪ್ರದೇಶವನ್ನು ಕಾಕನಕೋಟೆ ಕಾಡು ಎಂದು ಕರೆಯು ತ್ತಾರೆ. ದಶಕಗಳಿಗೂ ಹಿಂದೆ ಅಲ್ಲಿ ಹೆಚ್ಚಾಗಿ ಕಾಡು ಕುರುಬರೇ ವಾಸಿಸುತ್ತಿದ್ದರಂತೆ. ಈ ಜನ ಆಗ ಹೆಗ್ಗಡದೇವನ ಕೋಟೆಯಲ್ಲಿದ್ದ ಹೆಗ್ಗಡೆಯವರಿಗೆ ಕಪ್ಪ ಕೊಡಬೇಕಿತ್ತಂತೆ. ಅದೊಮ್ಮೆ ಕಪ್ಪ ಸಲ್ಲಿಕೆಯ ವಿಚಾರವಾಗಿಯೇ ಕಾಡು ಕುರುಬರ ನಾಯಕ ಕಾಕ ಎಂಬಾತನಿಗೂ ಹೆಗ್ಗಡೆಯವರಿಗೂ ವೈಮನಸ್ಸು ಉಂಟಾಯಿತಂತೆ. ಆ ಸಂದರ್ಭದಲ್ಲಿ ಮೈಸೂರನ್ನು ಆಳುತ್ತಿದ್ದ ದೊರೆ ರಣರ ಕಂಠೀರವ ನರಸರಾಜ ಒಡೆಯರ್. ಒಂದು ಆಕಸ್ಮಿಕ ಸಂದರ್ಭದಲ್ಲಿ ಮಹಾರಾಜರ ಪ್ರಾಣ ಉಳಿಸುವ ಮೂಲಕ ಅವರ ಒಲವುಗಳಿಸಿದ್ದ ಕಾಕ, ಮಹಾರಾಜರ ಸಹಾಯ ಪಡೆದು ತನ್ನ ಜನರನ್ನು ಕಪ್ಪ ಸಲ್ಲಿಕೆಯ ಸಂಕಟದಿಂದ ಪಾರುಮಾಡಿದನಂತೆ. ಇದಿಷ್ಟೂ ಕಾಕನ ಕೋಟೆ ಚಿತ್ರದ ಕಥಾವಸ್ತು.
‘ಕಾಕನಕೋಟೆ’ ಚಿತ್ರಕ್ಕೆ ಸಂಬಂಸಿದಂತೆ ಕೆಲವು ಸ್ವಾರಸ್ಯಗಳಿವೆ. ಏನೆಂದರೆ, ಇದು ಸಿ.ಆರ್. ಸಿಂಹ ನಿರ್ದೇಶನದ ಮೊದಲ ಚಿತ್ರ. ಸಿ. ಅಶ್ವತ್ಥ್ ಸಂಗೀತ ನಿರ್ದೇಶನದ ಮೊದಲ ಚಿತ್ರವೂ ಇದೇ. ಅಶ್ವತ್ಥ್ ಅವರಿಗೆ ಎಲ್. ವೈದ್ಯನಾಥನ್ ಅವರ ಪರಿಚಯವಾಗಿದ್ದೂ ಈ ಚಿತ್ರ ದಲ್ಲಿಯೇ. (ಮುಂದೆ ಅಶ್ವತ್ಥ್-ವೈದಿ ಜೋಡಿ ತುಂಬ ಜನಪ್ರಿಯವಾ ಯಿತು) ಇವತ್ತು ದಕ್ಷಿಣ ಭಾರತದ ನಂಬರ್ ಒನ್ ಸಂಗೀತ ನಿರ್ದೇಶಕ ಎನ್ನಿಸಿಕೊಂಡಿರುವ ಇಳಯರಾಜಾ, ‘ಕಾಕನಕೋಟೆ’ಯಲ್ಲಿ ಗಿಟಾರ್ ವಾದಕರಾಗಿದ್ದರು. ಅಷ್ಟೇ ಅಲ್ಲ;‘ಕರಿಹೈದನೆಂಬೋರು ಮಾದೇಶ್ವರಾ..’ ಹಾಡನ್ನು ಬಿ.ವಿ. ಕಾರಂತ ಅವರು ಮುಖ್ಯ ಗಾಯಕ ರಾಗಿ ಹಾಡಿದಾಗ ಅವತ್ತಿನ ಮಹಾನ್ ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್, ಕೋರ ಸ್‌ಗೆ ದನಿಯಾಗಿದ್ದರು.
‘ಕಾಕನಕೋಟೆ’ಯ ಹಾಡಿನ ಸಂದರ್ಭ, ಅದರ ಧ್ವನಿಮುದ್ರಣ, ತಮಗೆ ಜಿ.ಕೆ. ವೆಂಕಟೇಶ್, ವೈದ್ಯನಾಥನ್, ಇಳಯರಾಜ ಮುಂತಾದ ವರು ಜೊತೆಯಾದ ಕ್ಷಣಗಳನ್ನು ‘ಕಾಕನಕೋಟೆ’ಯ ನಿರ್ದೇಶಕ ಸಿ.ಆರ್. ಸಿಂಹ ವಿವರಿಸಿದ್ದು ಹೀಗೆ:
ಇದು ೧೯೭೪ರ ಮಾತು. ‘ನಾನು, ಲೋಕೇಶ್, ಸಿ. ಅಶ್ವತ್ಥ್, ವೆಂಕಟರಾವ್, ಶ್ರೀನಿವಾಸ ಕಪ್ಪಣ್ಣ ಮುಂತಾದವರು ಸೇರಿ ‘ನಟರಂಗ’ ಎಂಬ ಒಂದು ನಾಟಕ ತಂಡ ಕಟ್ಟಿದೆವು. ಮೊದಲಿಗೆ ನಾವು ಆಯ್ದುಕೊಂಡದ್ದು ಮಾಸ್ತಿಯವರ ಕಾಕನಕೋಟೆ. ಆ ವೇಳೆಗಾಗಲೇ ‘ರವಿ ಕಲಾವಿದರು’ ತಂಡ ಕಾಕನಕೋಟೆಯನ್ನು ರಂಗಕ್ಕೆ ತಂದಿದ್ದರು. ಅವರಿಗಿಂತ ಭಿನ್ನವಾಗಿ ನಾವು ಈ ನಾಟಕ ಪ್ರದರ್ಶಿಸಬೇಕು ಎಂಬುದು ನನ್ನ ಆಸೆ-ಹಠವಾಗಿತ್ತು. ಅದನ್ನೇ ಜತೆಗಾರರಿಗೆ ಹೇಳಿದೆ. ಎಲ್ಲರೂ ಒಪ್ಪಿದರು. ಪರಿಣಾಮ, ನಮ್ಮ ನಾಟಕ ಅಪಾರ ಜನಪ್ರೀತಿ ಪಡೆಯಿತು. ನೋಡನೋಡುತ್ತಲೇ ಐವತ್ತು ಪ್ರದರ್ಶನಗಳು ಆಗಿಹೋದವು. ಅದೊಮ್ಮೆ ನಮ್ಮ ನಾಟಕ ನೋಡಿದ ವಾದಿರಾಜ್-ಜವಾಹರ್-‘ಈ ಕತೆ ಯನ್ನೇ ಸಿನಿಮಾ ಮಾಡಿ. ನಾವು ನಿರ್ಮಾಪಕರಾಗುತ್ತೇವೆ’ ಅಂದರು.
‘ಸರಿ’ ಅಂದೆ. ನಾಟಕ ನಿರ್ದೇಶಿಸಿದ್ದ ಅನುಭವವಿತ್ತಲ್ಲ? ಅದೇ ಧೈರ್ಯದ ಮೇಲೆ ಸಿನಿಮಾ ನಿರ್ದೇಶನಕ್ಕೂ ಮುಂದಾದೆ. ನಾಟಕಕ್ಕೆ ಸಂಗೀತ ನಿರ್ದೇಶನ ಮಾಡಿದ್ದ ಸಿ. ಅಶ್ವತ್ಥ್, ಸಿನಿಮಾ ಅಂದಾಕ್ಷಣ ಹಿಂದೇಟು ಹಾಕಿದ. ‘ನನ್ನ ಕೈಲಿ ಆಗಲ್ಲಪ್ಪ, ನಾಟಕಕ್ಕೆ ಸಂಗೀತ ನಿರ್ದೇಶನ ಮಾಡುವುದೇ ಬೇರೆ. ಚಿತ್ರ ಸಂಗೀತವೇ ಬೇರೆ. ಸಿನಿಮಾದಲ್ಲಿ ವಾದ್ಯ ಸಂಯೋಜನೆ ಮಾಡಬೇಕು. ಹಿನ್ನೆಲೆ ಸಂಗೀತ ಮಾಡಬೇಕು. ಅವಕ್ಕೆಲ್ಲ ‘ಅರೇಂಜರ್’ ಅಂತ ಇರ್‍ತಾರೆ. ಅಂಥವರು ಯಾರೂ ನನಗೆ ಗೊತ್ತಿಲ್ಲ. ಹಾಗಾಗಿ ಇದು ನನ್ನಿಂದ ಆಗೋದಿಲ್ಲ. ಬೇರೆ ಯಾರಿಂದಲಾದ್ರೂ ಸಂಗೀತ ನಿರ್ದೇಶನ ಮಾಡಿಸಿ’ ಅಂದುಬಿಟ್ಟ.
ಆಗ ನಾನು ಹೇಳಿದೆ: ‘ಅಶ್ವತ್ಥ್, ನಾವು ಕಾಕನಕೋಟೆ ನಾಟಕವನ್ನು ಈಗಾಗಲೇ ಐವತ್ತು ಬಾರಿ ಆಡಿದ್ದಾ ಗಿದೆ. ನಾಟಕಕ್ಕೆ ಅದ್ಭುತ ಸಂಗೀತ ನೀಡಿದವ ನೀನು. ಸಿನಿಮಾಕ್ಕೆ ಆಗೋ ದಿಲ್ಲ ಅಂದ್ರೆ ಹೇಗೆ? ನಿರ್ದೇಶಕನಾಗಿ ನನಗೂ ಇದು ಮೊದಲ ಸಿನಿಮಾ. ನಾನೇ ಹೆದರ್‍ತಾ ಇಲ್ಲ. ಹಾಗಿರುವಾಗ ನೀನ್ಯಾಕೆ ಹಿಂಜರೀತೀಯ? ವಾದ್ಯ ಸಂಯೋಜನೆಗೆ ಅರೇಂಜರ್ ಒಬ್ಬರನ್ನು ಗೊತ್ತು ಮಾಡಿಕೊಂಡರಾಯ್ತು. ಈ ಕಥೆಗೆ ಎಂಥ ಸಂಗೀತ ಬೇಕೆಂದು ನಿನಗೆ ಗೊತ್ತಿದೆ. ಹಾಗಾಗಿ ನೀನೇ ಸಂಗೀತ ನಿರ್ದೇಶನ ಮಾಡು’ ಎಂದು ಧೈರ್ಯ ತುಂಬಿದೆ.
ಈ ಮಾತಿಗೆ ಒಪ್ಪಿದ ಅಶ್ವತ್ಥ್, ನಂತರ ಜಿ.ಕೆ. ವೆಂಕಟೇಶ್ ಅವರಿಗೆ ಫೋನ್ ಮಾಡಿ ಎಲ್ಲ ವಿಷಯ ತಿಳಿಸಿ-‘ಸಾರ್, ನಮಗೆ ಮ್ಯೂಸಿಕ್ ಅರೇಂಜರ್ ಒಬ್ಬರು ಬೇಕು‘ ಅಂದಿದ್ದಾರೆ. ‘ನೀವು ಮದ್ರಾಸ್‌ಗೆ ಬನ್ನಿ, ವ್ಯವಸ್ಥೆ ಮಾಡೋಣ’ ಅಂದಿದ್ದಾರೆ ವೆಂಕಟೇಶ್. ಅದಕ್ಕೆ ಒಪ್ಪಿದ ಅಶ್ವತ್ಥ್, ಮದ್ರಾಸ್‌ನ ಪ್ರಸಾದ್ ಸ್ಟುಡಿಯೋಕ್ಕೆ ಹೋದಾಗ-ಎಲ್. ವೈದ್ಯ ನಾಥನ್ ಹಾಗೂ ಇಳಯರಾಜರನ್ನು ಪರಿಚಯಿಸಿ, ಇವರಿಬ್ಬರೂ ನನ್ನ ಶಿಷ್ಯರು. ನಿಮಗೆ ಮ್ಯೂಸಿಕ್ ಅರೇಂಜರ್ ಆಗಿ ಸಹಾಯ ಮಾಡ್ತಾರೆ. ಯಾರು ಬೇಕೊ ಆಯ್ದುಕೊಳ್ಳಿ ಅಂದರಂತೆ. ನಂತರ ‘ಕಾಕನಕೋಟೆ’ಯ ಕಥೆ ಕೇಳಿ-ಈ ಕಥೆಗೆ ಅಗತ್ಯವಿರೋದು ರಫ್ ಅನ್ನಿಸುವಂಥ ಸಂಗೀತ. ಅದನ್ನು ಅರೇಂಜ್ ಮಾಡೋಕೆ ವೈದೀನೇ ಸರಿ. ಅವರನ್ನೇ ಇಟ್ಕೊಳ್ಳಿ ಅಂದರಂತೆ. ನಂತರ ಪಕ್ಕದಲ್ಲಿದ್ದ ಇಳಯರಾಜ ಅವರತ್ತ ತಿರುಗಿ-‘ನೀನು ಗಿಟಾರ್ ನುಡಿಸು ರಾಜಾ’ ಅಂದರಂತೆ.
‘ಕರಿ ಹೈದನೆಂಬೋರು ಮಾದೇಶ್ವರಾ…’ ಹಾಡಿನ ಸಂದರ್ಭದ ಚಿತ್ರಣದಲ್ಲಿ ನಾಟಕ ಹಾಗೂ ಸಿನಿಮಾಕ್ಕೆ ಒಂದು ವ್ಯತ್ಯಾಸವಿದೆ. ಭೇಟಿಯ ಸಂದರ್ಭದಲ್ಲಿ ಹೆಗ್ಗಡೆಯವರು ತನ್ನನ್ನು ಬಂಸುತ್ತಾರೆ ಎಂಬ ಸುದ್ದಿ ಕಾಕನಿಗೆ ಸಿಕ್ಕಿರುತ್ತದೆ. ಅದರಿಂದ ಪಾರಾಗಲು ಆತ ಒಂದು ಉಪಾಯ ಹೆಣೆದಿರುತ್ತಾನೆ. ‘ಸತ್ತು ಹೋಗಿರುವ ಒಂದು ಹಾವಿನೊಂದಿಗೆ ನೀನು ಮರದ ಮೇಲೆ ಕೂತಿರು. ಹೆಗ್ಗಡೆಯ ಕಡೆಯವರು ನನ್ನನ್ನು ಬಂಸಲು ಬಂದಾಕ್ಷಣ ಅವರ ಮೇಲೆ ಹಾವನ್ನು ಎಸೆದುಬಿಡು’ ಎಂದು ತನ್ನ ಕಡೆಯ ಹುಡುಗನಿಗೆ ಹೇಳಿಕೊಟ್ಟಿರುತ್ತಾನೆ. ಸಂದರ್ಭ ಹಾಗೆಯೇ ಒದಗಿ ಬರುತ್ತದೆ. ಹಾವು ಕಂಡು ಹೆಗ್ಗಡೆ ಕಡೆಯ ಜನ ಹೆದರಿ ಗಲಿಬಿಲಿಗೊಂಡಾಗ, ಕಾಕ ತಪ್ಪಿಸಿಕೊಳ್ಳುತ್ತಾನೆ. ಇದು ನಾಟಕದಲ್ಲಿರುವ ಸನ್ನಿವೇಶ.
ಸಿನಿಮಾ ಮಾಡುವಾಗ, ಹಾವಿನ ಬದಲಿಗೆ ಕಾಡಾನೆ ಹಿಂಡು ಬಂತು ಎಂದು ಕೂಗಿಸಿದರೆ ಚೆಂದ ಅನ್ನಿಸಿತಂತೆ. ಹಾಗೆಯೇ ಮಾಡಿದೆ. ಈ ದೃಶ್ಯಕ್ಕೂ ಮುಂಚೆ, ತಮ್ಮ ಕಾಡಿನ ದೈವವನ್ನು ಆವಾಹಿಸಿಕೊಂಡು ಕಾಕ ಮೈಮರೆಯಬೇಕು. ಅವನನ್ನು ಕಂಡು ಅವನ ಕಡೆಯ ಜನರೆಲ್ಲಾ ಮಾದೇಶ್ವರಾ ಮಾದೇಶ್ವರಾ ಎಂಬ ಆವೇಶದ, ಭಕ್ತಿಯ, ಪ್ರಾರ್ಥನೆಯಂಥ ಹಾಡಿಗೆ ಹೆಜ್ಜೆ ಹಾಕುತ್ತಾರೆ. ಈ ಸಂದರ್ಭದಲ್ಲಿ ಕೇಳಿಬರುವುದೇ ‘ಕರಿಹೈದ ನೆಂಬೋರು ಮಾದೇಶ್ವರಾ…‘ ಹಾಡು.
ಕಾಡಲ್ಲಿರುವ ಜನ ಹಾಡುವ ಗೀತೆ ಅಂದ ಮೇಲೆ ಅದಕ್ಕೆ ಗಡಸುತನ ಬೇಕು. ಅಂಥದೊಂದು ಗಡಸುತನ ಬಿ.ವಿ. ಕಾರಂತ ಅವರ ದನಿಗಿದೆ ಅನ್ನಿಸಿದಾಗ ಅವರಿಂದಲೇ ಹಾಡಿಸಲು ಅಶ್ವತ್ಥ್ ಮುಂದಾದರು. ಹಿಮ್ಮೇಳದ ದನಿಯಾಗಿ ಕೋರಸ್ ಹಾಡುವವರು ಬೇಕು ಅನ್ನಿಸಿದಾಗ, ವೈದ್ಯನಾಥನ್‌ಗೆ ಈ ವಿಷಯ ತಿಳಿಸಲು ಮುಂದಾದರು. ಆಗ ರೀರೆಕಾರ್ಡಿಂಗ್‌ಗೆ ಬಂದಿದ್ದ ಜಿ.ಕೆ. ವೆಂಕಟೇಶ್-‘ನಾನೇ ಕೋರಸ್‌ನಲ್ಲಿ ಹಾಡ್ತೇನೆ’ ಅಂದರಂತೆ. (ಅಂದಿನ ಸಂದರ್ಭದಲ್ಲಿ ದಕ್ಷಿಣ ಭಾರತದ ನಂಬರ್ ಒನ್ ಸಂಗೀತ ನಿರ್ದೇಶಕ ಅನ್ನಿಸಿಕೊಂಡಿದ್ದವರು ಜಿ.ಕೆ. ವೆಂಕಟೇಶ್. ಅಂಥವರು ತಾವೇ ಮುಂದಾಗಿ ಕೋರಸ್ ಹಾಡಿದ್ದು ಅವರ ದೊಡ್ಡತನಕ್ಕೆ ಸಾಕ್ಷಿ.) ಅವರ ಜತೆಗೇ ಅಶ್ವತ್ಥ್ ಕೂಡ ದನಿಗೂಡಿಸಿ ದರು. ಪರಿಣಾಮ, ಮೂವರು ಸಂಗೀತ ನಿರ್ದೇಶಕರು ಒಂದೇ ಹಾಡಿಗೆ ದನಿ ನೀಡಿದಂತಾಯಿತು….’
***
ಈವರೆಗೂ ಓದಿದ್ದು ಸಿಂಹ ಅವರ ಅನುಭವದ ಮಾತು. ‘ಕಾಕನ ಕೋಟೆ’ ಹಾಡಿಗೆ ಸಂಬಂಸಿದ ಇನ್ನೊಂದು ರೋಚಕ ಘಟನೆಯನ್ನು ಅಶ್ವತ್ಥ್ ಅವರೇ ಅದೊಮ್ಮೆ ನೆನಪಿಸಿಕೊಂಡಿದ್ದು ಹೀಗೆ: ಕಾಕನಕೋಟೆಯ ದಟ್ಟ ಅರಣ್ಯದಲ್ಲಿ ‘ಒಂದು ದಿನ ಕರಿಹೈದ ಕಾಡಲ್ಲಿ ಅಲೆದಾನೋ… ಎಂಬ ಇನ್ನೊಂದು ಗೀತೆ ಚಿತ್ರೀಕರಣವಾಗುತ್ತಿತ್ತು, ನಾನು ಹಾಗೂ ನನ್ನ ಮಿತ್ರ ಚಿಂತಾಮಣಿ ಅಲ್ಲಿಗೆ ಹೋಗಿದ್ವಿ. ಸಂಜೆ ಗೆಸ್ಟ್ ಹೌಸ್‌ನಿಂದ ಶೂಟಿಂಗ್ ನಡೆಯುತ್ತಿದ್ದ ಜಾಗಕ್ಕೆ ಹೊರಟೆವು. ನಮಗೆ ಚಿತ್ರೀಕರಣದ ಸ್ಥಳ ಗೊತ್ತಿರಲಿಲ್ಲ, ಸಂಜೆ ೭ರ ಸಮಯ, ಮಬ್ಬು ಕತ್ತಲು, ಆ ಜಾಗಕ್ಕೆ ಹೋಗೋಕೆ ನದಿ ದಾಟಬೇಕಿತ್ತು. ಅಲ್ಲಿದ್ದ ತೆಪ್ಪ ನಡೆಸುವ ನಾವಿಕ, ‘ನನಗೆ ಜಾಗ ಗೊತ್ತು ಸಾರ್, ಕರೆದುಕೊಂಡು ಹೋಗ್ತೇನೆ’ ಅಂದ. ನಾವು ತೆಪ್ಪ ಹತ್ತಿದ್ವಿ. ಮಾರ್ಗ ಮಧ್ಯದಲ್ಲಿ ನದಿ ಉಕ್ಕಿ ಬಂತು, ನಮ್ಮ ನಾವಿಕನಿಗೆ ದಾರಿ ತಪ್ಪಿತು. ಅಲ್ಲಿ ಚಿತ್ರೀಕರಣದ ಜಾಗವೂ ತಿಳಿಯಲ್ಲಾ ಅಂತಾನೆ, ವಾಪಸ್ ಹೋಗುವ ದಾರಿಯೂ ತಿಳಿಯುತ್ತಿಲ್ಲಾ ಅಂತಾನೆ. ನಾವು ಇದೇನಪ್ಪಾ ಗತಿ ಅಂತ ಯೋಚಿಸುತ್ತಿರುವಾಗಲೇ ದೂರದಲ್ಲಿ ‘ಡಿಂಕ್ಟಾಟ ಡಿಂಕ್ಟಾ… ಕರಿಹಯ್ದ..’ ಎಂಬ ದನಿ ಕೇಳಿಸಿತು. ಆ ಹಾಡಿನ ಜಾಡು ಹಿಡಿದು ನಾವು ದಡ ಸೇರಿದೆವು. ನಿಜಕ್ಕೂ ಆವತ್ತು ನಮ್ಮನ್ನು ಕಾಪಾಡಿದ್ದು ಆ ಮಹದೇಶ್ವರನೇ.

ಆರಾಧಿಸುವೆ ಮದನಾರಿ…

ಅಕ್ಟೋಬರ್ 21, 2010

 

 

 

 

 

 

 

 

 

 

ಚಿತ್ರ: ಬಭ್ರುವಾಹನ. ಗೀತೆರಚನೆ: ಹುಣಸೂರು ಕೃಷ್ಣಮೂರ್ತಿ
ಸಂಗೀತ: ಟಿ.ಜಿ. ಲಿಂಗಪ್ಪ. ಗಾಯನ: ಡಾ. ರಾಜ್‌ಕುಮಾರ್

ಆರಾಧಿಸುವೆ ಮದನಾರಿ
ಆರಾಧಿಸುವೆ ಮದನಾರಿ
ಆದರಿಸು ನೀ ದಯೆತೋರಿ, ಆರಾಧಿಸುವೆ ಮದನಾರಿ ||ಪ||

ಅಂತರಂಗದಲ್ಲಿ ನೆಲೆಸಿರುವೇ
ಅಂತರ್ಯ ತಿಳಿಯದೆ ಏಕಿರುವೆ?
ಸಂತತ ನಿನ್ನ ಸಹವಾಸ ನೀಡಿ
ಸಂತತ ನಿನ್ನ ಸಹವಾಸ ನೀಡಿ
ಸಂತೋಷದಿಂದೆನ್ನ ನಲಿಸೆಂದು ಕೋರುವೆ ||೧||

ಮೈದೋರಿ ಮುಂದೆ ಸಹಕರಿಸು
ಆಮಾರ ನೊಲವಣೆ ಪರಿಹರಿಸು
ಪ್ರೇಮಾಮೃತವನು ನೀನುಣಿಸು
ಪ್ರೇಮಾಮೃತವನು ನೀನುಣಿಸು
ತನ್ಮಯಗೊಳಿಸು ಮೈಮರೆಸೂ
ಚಿನ್ಮಯ ಭಾವ ತುಂಬುತ ಜೀವ
ಆನಂದ ಆನಂದ ಆನಂದವಾಗಲಿ
ಆರಾಧಿಸುವೆ ಮದನಾರಿ, ಆರಾಧಿಸುವೆ ಮದನಾರಿ
ಸನಿದಪಮ ಆರಾಧಿಸುವೆ ಮದನಾರಿ

೬೦-೭೦ರ ದಶಕದಲ್ಲಿ ಕನ್ನಡ, ತೆಲುಗು ಹಾಗೂ ತಮಿಳು ಚಿತ್ರರಂಗದ ಎಲ್ಲ ಕೆಲಸವೂ ನಡೆಯುತ್ತಿದ್ದುದು ಮದ್ರಾಸಿನಲ್ಲಿ. ಆ ದಿನಗಳಲ್ಲಿ ತೆಲುಗಿನಲ್ಲಿ ಎನ್.ಟಿ.ಆರ್. ಕೃಷ್ಣ, ಅಕ್ಕಿನೇನಿ ನಾಗೇಶ್ವರರಾವ್ ಇದ್ದರು. ತಮಿಳಿನಲ್ಲಿ ಎಂಜಿಆರ್, ಶಿವಾಜಿ ಗಣೇಶನ್ ಇದ್ದರು. ಕನ್ನಡದ ಪಾಲಿಗೆ ಡಾ. ರಾಜ್‌ಕುಮಾರ್, ಆರ್. ನಾಗೇಂದ್ರರಾವ್, ಕಲ್ಯಾಣ್ ಕುಮಾರ್ ಮುಂತಾದವರಿದ್ದರು.
ಆ ದಿನಗಳಲ್ಲಿ ಕಲಾವಿದರ ಮಧ್ಯೆ ಅಪರೂಪದ ಹೊಂದಾಣಿಕೆಯಿತ್ತು. ಪರಸ್ಪರ ಪ್ರೀತಿ, ವಿಶ್ವಾಸ- ಗೌರವವಿತ್ತು. ಒಂದು ಭಾಷೆಯ ಸಿನಿಮಾ ಬಿಡುಗಡೆಯಾದರೆ, ಅದನ್ನು ಎಲ್ಲ ಕಲಾವಿದರೂ ಒಟ್ಟಿಗೇ ಕೂತು ನೋಡುತ್ತಿದ್ದರು. ಆ ಚಿತ್ರದಲ್ಲಿರುವ ತಾಂತ್ರಿಕ ವೈಭವವನ್ನು, ಸಂದೇಶವನ್ನು ತಮ್ಮ ಚಿತ್ರದಲ್ಲೂ ತರುವ ಪ್ರಯತ್ನ ಮಾಡುತ್ತಿದ್ದರು.
‘ಬಭ್ರವಾಹನ’ ಚಿತ್ರದ ಆರಾಧಿಸುವೆ ಮದನಾರಿ… ಹಾಡಿನಲ್ಲಿ ಡಾ. ರಾಜ್‌ಕುಮಾರ್ ಅವರನ್ನು ಐದು ವಿವಿಧ ಭಂಗಿಗಳಲ್ಲಿ ತೋರಿರುವ ಅಪರೂಪದ ದೃಶ್ಯವೊಂದಿದೆ. ಆ ದೃಶ್ಯದ ಕಲ್ಪನೆ ಬಂದದ್ದು ಹೇಗೆ ಎಂಬುದಕ್ಕೆ ಪೂರಕವಾಗಿ ಮೇಲಿನ ಮಾತುಗಳನ್ನು ಹೇಳಬೇಕಾಯಿತು.
ಹುಣಸೂರು ಕೃಷ್ಣಮೂರ್ತಿಯವರು ತುಂಬ ಇಷ್ಟಪಟ್ಟು ಮಾಡಿದ ಚಿತ್ರ ಬಭ್ರುವಾಹನ. ಅರ್ಜುನನಿಂದ ಆರಂಭವಾಗಿ, ಬಭ್ರುವಾಹನನ ಕಥೆಯನ್ನು ಸಂಪೂರ್ಣವಾಗಿ ತೋರಿಸಿದ ಚಿತ್ರ ಇದು. ಉಲೂಚಿ, ಚಿತ್ರಾಂಗದಾ ಮತ್ತು ಸುಭದ್ರೆಯರೊಂದಿಗೆ ಅರ್ಜುನ ನಡೆಸಿದ ಪ್ರಣಯ ಪ್ರಸಂಗ, ಶೃಂಗಾರ ಲೀಲೆಗಳನ್ನು ಅರಸಿಕನೂ ಮೆಚ್ಚುವಂತೆ ಬೆಳ್ಳಿತೆರೆಯ ಮೇಲೆ ತೋರಿಸಿದ ಸಿನಿಮಾ ಇದು.
ಸಿನಿಮಾದ ಹೆಸರು ‘ಬಭ್ರುವಾಹನ’ ಎಂದಿದ್ದರೂ, ಅರ್ಜುನನ ಪಾತ್ರವನ್ನೂ ಹೈಲೈಟ್ ಮಾಡಬೇಕು ಎಂಬುದು ಹುಣಸೂರು ಕೃಷ್ಣಮೂರ್ತಿಯವರ ಆಸೆಯಾಗಿತ್ತು. ಅರ್ಜುನ ಎಂದರೆ ಕೇವಲ ಬಿಲ್ವಿದ್ಯಾ ಪ್ರವೀಣ ಮಾತ್ರವಲ್ಲ, ಅವನೊಬ್ಬ ಅಪ್ರತಿಮ ಗಾಯಕ, ಸಂಗೀತಗಾರ. ಚೆಲುವಾಂತ ಚೆನ್ನಿಗ, ಮಹಾ ಪ್ರೇಮಿ ಮತ್ತು ರಸಿಕ. ಈ ಎಲ್ಲಾ ವೇಷದಲ್ಲಿಯೂ ಅವನನ್ನು ತೋರಿಸಬೇಕು ಎಂದು ಹುಣಸೂರು ನಿರ್ಧರಿಸಿದ್ದರು. ಉಲೂಚಿ, ಚಿತ್ರಾಂಗದಾ, ಸುಭದ್ರೆಯರೊಂದಿಗಿನ ಪ್ರಣಯದ ಸಂದರ್ಭಗಳಿಗೆಂದೇ ‘ನಿನ್ನ ಕಣ್ಣ ನೋಟದಲ್ಲಿ’, ‘ಈ ಸಮಯಾ ಶೃಂಗಾರಮಯ’, ‘ಆರಾಧಿಸುವೆ ಮದನಾರಿ..’ ಹಾಡುಗಳನ್ನು ಬರೆದಿದ್ದರು.
ಒಂದೊಂದು ಹಾಡನ್ನೂ ತುಂಬ ಭಿನ್ನವಾಗಿ ಚಿತ್ರೀಕರಿಸಬೇಕು ಎಂಬುದು ಹುಣಸೂರು ಅವರ ಅಪೇಕ್ಷೆಯಾಗಿತ್ತು. ಅದನ್ನೇ ಡಾ. ರಾಜ್‌ಕುಮಾರ್ ಅವರಿಗೂ ಹೇಳಿದರು. ಮುಂದುವರಿದು-‘ಅರ್ಜುನ ಸುಭದ್ರೆಯನ್ನು ಮರೆತು, ನಾಗಲೋಕದಲ್ಲಿ ಉಲೂಚಿಯ ಮೋಹದಲ್ಲಿ ಮೈಮರೆತಿರುತ್ತಾನೆ. ಆಗ ಕೃಷ್ಣ ಘಟೋತ್ಕಚನನ್ನು ಕರೆಸಿ, ಅರ್ಜುನನನ್ನು ಮಾಯೆಯಿಂದ ಎತ್ತಿಕೊಂಡು ಬಾ ಎನ್ನುತ್ತಾನೆ. ಘಟೋತ್ಕಚ ಹಾಗೇ ಮಾಡಿದಾಗ, ಮತ್ತೆ ತನ್ನ ‘ಪ್ರಭಾವ’ ತೋರಿ ನಾಗಲೋಕದ ನೆನಪೇ ಅರ್ಜುನನಿಗೆ ಹೋಗಿಬಿಡುವಂತೆ ಮಾಡುತ್ತಾನೆ ಕೃಷ್ಣ. ಜತೆಗೆ, ಅರ್ಜುನನನ್ನು ಕಾವಿಧಾರಿಯನ್ನಾಗಿ ಮಾಡಿಬಿಡುತ್ತಾನೆ. ನಂತರ, ಸುಭದ್ರೆಯನ್ನು ಕರೆದು-‘ಸೋದರಿ, ನಮ್ಮ ಅರಮನೆಗೆ ಸ್ವಾಮೀಜಿಯೊಬ್ಬರು ಬಂದಿದ್ದಾರೆ. ಅವರ ಅಶೀವಾದ ತಗೋ, ಒಳ್ಳೆಯದಾಗುತ್ತೆ’ ಎನ್ನುತ್ತಾನೆ. ಕೃಷ್ಣನ ಸಲಹೆಯಂತೆ ಸುಭದ್ರೆ ಸನ್ಯಾಸಿ ವೇಷದಲ್ಲಿದ್ದ ಅರ್ಜುನನ ಬಳಿ ಬರುತ್ತಾಳೆ. ಆಗ ದೇವರ ಪೂಜೆಗೆ ಸಿದ್ಧವಾಗಿದ್ದ ಅರ್ಜುನ, ಸುಭದ್ರೆಯನ್ನು ಕಂಡು ಮೋಹಗೊಳ್ಳುತ್ತಾನೆ. ದೇವರಿಗೆ ಪುಷ್ಪಾರ್ಚನೆ ಮಾಡುತ್ತಲೇ ಹಾಡಲು ಶುರುಮಾಡುತ್ತಾನೆ. ಆ ಸಂದರ್ಭಕ್ಕೆ ‘ ಆರಾಧಿಸುವೆ ಮದನಾರಿ’ ಹಾಡು ಹಾಕೋಣ ಎಂದೂ ರಾಜ್ ಕುಮಾರ್ ಅವರಿಗೆ ಹೇಳಿದರು.
ಮುಂದೆ ಏನಾಯಿತು? ಒಂದೇ ದೃಶ್ಯದಲ್ಲಿ ಐದು ಭಿನ್ನ ಗೆಟಪ್‌ನಲ್ಲಿ ರಾಜ್‌ಕುಮಾರ್ ಅವರನ್ನು ತೋರಿಸಬೇಕೆಂಬ ಐಡಿಯಾ ಹೇಗೆ ಬಂತು ಎಂಬುದನ್ನು ‘ಬಭ್ರುವಾಹನ’ ಚಿತ್ರದ ಸಹಾಯಕ ನಿರ್ದೇಶಕರಾಗಿದ್ದ ಭಾರ್ಗವ ಅವರು ವಿವರಿಸಿದ್ದು ಹೀಗೆ:
ಹುಣಸೂರು ಕೃಷ್ಣಮೂರ್ತಿಯವರು ನನ್ನ ಚಿಕ್ಕಪ್ಪ. ಅವರ ನಿರ್ದೇಶನದ ಚಿತ್ರಗಳಲ್ಲಿ ನಾನು ಸಹಾಯಕ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿರುತ್ತಿದ್ದೆ. ಬಭ್ರುವಾಹನ ಚಿತ್ರಕ್ಕೆ ಯಾವ ಹಾಡನ್ನು ಹೇಗೆ ಚಿತ್ರಿಸಬೇಕು ಎಂದೆಲ್ಲ ಅವರು ತಲೆಕೆಡಿಸಿಕೊಂಡಿದ್ದರಲ್ಲ? ಅದೇ ಸಂದರ್ಭದಲ್ಲಿ ನನಗೆ ಶಿವಾಜಿ ಗಣೇಶನ್ ಅಭಿನಯದ ತಮಿಳಿನ ಹಳೆಯ ಚಿತ್ರವೊಂದು ನೆನಪಾಯಿತು. ಅದರಲ್ಲಿ ಒಂದು ಹಾಡಿನ ಸನ್ನಿವೇಶದಲ್ಲಿ ಶಿವಾಜಿಯವರು ಐದು ಸಂಗೀತವಾದ್ಯಗಳನ್ನು ನುಡಿಸುವ ದೃಶ್ಯವಿತ್ತು. ಈ ದೃಶ್ಯವನ್ನೇ ‘ಬಭ್ರುವಾಹನ’ದಲ್ಲಿ ಏಕೆ ತರಬಾರದು ಎನ್ನಿಸಿತು. ತಕ್ಷಣವೇ ಇದನ್ನೇ ಹುಣಸೂರು ಅವರಿಗೆ ಹೇಳಿದೆ. ಅವರು- ಅಲ್ಲಯ್ಯಾ, ಇಂಥ ಸಂದರ್ಭ ಆಗಲೇ ತಮಿಳು ಸಿನಿಮಾದಲ್ಲಿ ಬಂದಿದೆ ಅಂತ ನೀನೇ ಹೇಳ್ತಾ ಇದೀಯ. ಅದನ್ನೇ ನಾವು ರಿಪೀಟ್ ಮಾಡೋದು ಸರಿಯಾ? ಅದನ್ನು ಜನ ಒಪ್ತಾರಾ? ಅದಕ್ಕಿಂತ ಮುಖ್ಯವಾಗಿ ಆ ದೃಶ್ಯ ಈ ಪೌರಾಣಿಕ ಸಿನಿಮಾಕ್ಕೆ ಹೊಂದಿಕೆಯಾಗುತ್ತಾ?’ ಎಂದರು.
‘ಅಪ್ಪಾಜಿ, ಆ ದೃಶ್ಯವನ್ನು ಬೇಸ್ ಆಗಿ ಇಟ್ಟುಕೊಳ್ಳೋಣ. ನಾವು ಬೇರೆಯದೇ ರೀತಿಯಲ್ಲಿ ತೆಗೆಯೋಣ. ಆಗ ಜನ ಖಂಡಿತ ಇಷ್ಟಪಡ್ತಾರೆ’ ಅಂದೆ. ಈ ಮಾತು ಹುಣಸೂರು ಅವರಿಗೆ ಒಪ್ಪಿಗೆಯಾಯಿತು. ತಕ್ಷಣವೇ ತಲೆ ಓಡಿಸಿ, ಮೃದಂಗ, ವೀಣೆ, ಕೊಳಲು ಹಾಗೂ ಘಟಂ ನುಡಿಸುವ ನಾಲ್ಕು ಭಿನ್ನ ವೇಷ ಹಾಗೂ ಈ ನಾಲ್ಕೂ ಜನರ ಮಧ್ಯೆ ಸಂಗೀತಗಾರನನ್ನು ಕೂರಿಸಲು; ಅವನು ಹಾಡುತ್ತಾ ಸ್ವರಗಳ ತಾಳ ಹಾಕುತ್ತಾ ಹೋದಂತೆಲ್ಲ ಉಳಿದ ಪಾತ್ರಗಳು ವಾದ್ಯ ಮೇಳದ ಸಾಥ್ ಕೊಡುವಂತೆ ಚಿತ್ರಿಸಲು ಹುಣಸೂರು ನಿರ್ಧರಿಸಿದರು. ರಾಜ್‌ಕುಮಾರ್ ಅವರಿಗೂ ಈ ವಿಷಯ ತಿಳಿಸಿದರು.
ಈ ಪಾತ್ರಗಳ ನಿರ್ವಹಣೆಗೆ ರಾಜ್‌ಕುಮಾರ್ ಅವರು ಮಾಡಿಕೊಂಡ ಸಿದ್ಧತೆಯ ಬಗ್ಗೆ ನಾಲ್ಕು ಮಾತು. ರಾಜ್ ಅವರಿಗೆ ಸಂಗೀತದ ಬಗ್ಗೆ ತುಂಬ ಚನ್ನಾಗಿ ಗೊತ್ತಿತ್ತು. ಆದರೆ ಅವರು ನನಗೆಲ್ಲಾ ಗೊತ್ತಿದೆ ಎಂದು ಸುಮ್ಮನಾಗಲಿಲ್ಲ. ಬದಲಿಗೆ, ಘಟಂ, ಮೃದಂಗ, ವೀಣೆ ಹಾಗೂ ಕೊಳಲು ನುಡಿಸುವವರನ್ನು ಹತ್ತಾರು ಬಾರಿ ಗಮನಿಸಿದರು. ವಾದ್ಯಗಳನ್ನು ಬಾರಿಸುವ ಸಂದರ್ಭದಲ್ಲಿ ಕಣ್ಣಿನ ಚಲನೆ, ಹಣೆಯ ನಿರಿಗೆ ಹಾಗೂ ಕೆನ್ನೆಯ ಅದುರುವಿಕೆಯಲ್ಲಿ ಕಲಾವಿದರು ತೋರಿಸುವ ಭಾವನೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಆಯಾ ವಾದ್ಯಗಳಿಗೆ ತಕ್ಕಂತೆ ಮುಖ ಭಾವ ಪ್ರದರ್ಶನಕ್ಕೆ ತಮ್ಮನ್ನು ಸಿದ್ಧಮಾಡಿಕೊಂಡರು. ನಂತರ -‘ಗುರುಗಳೇ ನಾನೀಗ ರೆಡಿ’ ಎಂದರು. ಆರಾಸುವೆ ಮದನಾರಿ… ಹಾಡಿಗೆ, ಒಂದೊಂದು ಪಾತ್ರಕ್ಕೆ ಒಂದೊಂದು ಬಗೆಯ ಮಾಸ್ಕ್ ತಯಾರಿಸಲಾಗಿತ್ತು. ಬಭ್ರುವಾಹನ ತಯಾರಾಗಿದ್ದು ೧೯೭೪ರಲ್ಲಿ. ಆ ದಿನಗಳಲ್ಲಿ ಕಟ್ ಅಂಡ್ ಪೇಸ್ಟ್ ವಿದ್ಯೆಯಾಗಲಿ, ಗ್ರಾಫಿಕ್ ತಂತ್ರಜ್ಞಾನದ ಹೆಸರಾಗಲಿ ಯಾರಿಗೂ ಗೊತ್ತಿರಲಿಲ್ಲ. ಆಗ ಐದು ಪಾತ್ರದಾರಿಗಳ ಐದು ಮಾಸ್ಕ್ ತಯಾರಿಸಿಕೊಂಡು ಮೂರು ಕ್ಯಾಮರಾ ಬಳಸಿ ಮೂರು ದಿಕ್ಕುಗಳಿಂದ ಶೂಟ್ ಮಾಡಬೇಕಾಗಿತ್ತು.
ಇಷ್ಟೆಲ್ಲ ಸಿದ್ಧತೆಯ ನಂತರ ಒಂದು ದಿನ ಬೆಳಗ್ಗೆ ಎಂಟು ಗಂಟೆಗೇ ಶೂಟಿಂಗ್ ಶುರುವಾಯಿತು. ಆರಂಭದಿಂದಲೂ ಅಪಾರ ಉತ್ಸಾಹದಿಂದ ರಾಜ್ ಅವರು-‘ಗುರುಗಳೇ, ಈ ದೃಶ್ಯ ಬಹಳ ಚನ್ನಾಗಿ ಬರ್‍ತಾ ಇದೆ. ಮುಂದುವರಿಸೋಣ’ ಎನ್ನುತ್ತಲೇ ಎಲ್ಲರನ್ನೂ ಉತ್ತೇಜಿಸಿದರು. ಮಧ್ಯಾಹ್ನ ೧೨ರವರೆಗೂ ನಿರಂತರವಾಗಿ ಶೂಟಿಂಗ್ ನಡೆಸಿ ಸ್ವಲ್ಪ ಹೊತ್ತು ವಿರಾಮ ಘೋಷಿಸಲಾಯಿತು. ನಮಗೋ, ಬೆಳಗಿನಿಂದ ಚಿತ್ರೀಕರಿಸಿದ ದೃಶ್ಯಗಳು ಹೇಗೆ ಬಂದಿವೆಯೋ ಎಂದು ನೋಡುವ ಅವಸರ. ಈ ಆಸೆಯಿಂದಲೇ ರಶಸ್ ನೋಡಲು ಕುಳಿತೆವು.
ಆ ಮಟಮಟ ಮಧ್ಯಾಹ್ನದಲ್ಲಿ ಬಿಟ್ಟಕಣ್ಣು ಬಿಟ್ಟಂತೆಯೇ ರಶಸ್ ನೋಡಲು ಕೂತವರಿಗೆ ಎದೆಯೊಡೆದವಂತಾಯಿತು. ಏಕೆಂದರೆ, ಎಲ್ಲಿ ತಪ್ಪಾಗಿತ್ತೋ ಗೊತ್ತಿಲ್ಲ. ಬೆಳಗಿಂದ ಚಿತ್ರೀಕರಿಸಿದ್ದೆವಲ್ಲ? ಆ ಪೈಕಿ ಒಂದು ದೃಶ್ಯವೂ ಬಂದಿರಲಿಲ್ಲ. ಅಷ್ಟೂ ಹಾಳಾಗಿಹೋಗಿತ್ತು. ಮತ್ತೆ ಮೊದಲಿನಿಂದ ಕೆಲಸ ಶುರುಮಾಡಲೇಬೇಕಿತ್ತು.
ವಿಷಯ ತಿಳಿದ ಹುಣಸೂರು ಕೃಷ್ಣಮೂರ್ತಿಗಳು ಬೇಸರದಿಂದ ಕೂತುಬಿಟ್ಟರು. ರಾಜ್‌ಕುಮಾರ್ ಅವರಿಗೆ ಈ ವಿಷಯ ತಿಳಿಸುವುದು ಹೇಗೆ ಎಂಬುದು ಎಲ್ಲರ ಸಂಕಟವಾಗಿತ್ತು. ನಾನು ಸಂಕೋಚದಿಂದಲೇ ರಾಜ್ ಅವರ ಬಳಿ ಹೋಗಿ ಎಲ್ಲ ವಿಷಯ ತಿಳಿಸಿದೆ. ‘ಸಾರ್, ಹೀಗಾಗಿರುವುದಕ್ಕೆ ದಯವಿಟ್ಟು ಬೇಸರ ಮಾಡಿಕೊಳ್ಳಬೇಡಿ’ಎಂದೂ ಸೇರಿಸಿದೆ.
ಅದಕ್ಕೆ ಅಣ್ಣಾವ್ರು ಹೇಳಿದ್ದೇನು ಗೊತ್ತೆ? ‘ಭಾರ್ಗವ ಅವರೇ, ಕೆಲಸ ಅಂದ ಮೇಲೆ ಇಂಥ ತಪ್ಪುಗಳೆಲ್ಲ ಆಗೋದು ಸಹಜ. ಆಗೋದು ಆಗಿಹೋಗಿದೆ. ಈಗ ನಾನು ಬೇಸರ ಮಾಡಿಕೊಂಡ್ರೂ ಅಷ್ಟೆ. ಮಾಡಿಕೊಳ್ಳದಿದ್ರೂ ಅಷ್ಟೆ. ಅಲ್ಲವೆ? ಈಗ ಹೇಗಿದ್ರೂ ಈ ದೃಶ್ಯದ ಚಿತ್ರೀಕರಣ ಚನ್ನಾಗಿ ಬರ್‍ತಾ ಇದೆ ತಾನೆ? ಅದನ್ನೇ ಇನ್ನೊಮ್ಮೆ ತೆಗೆಯೋಣ. ಬೆಳಗ್ಗೆ ಆಕಸ್ಮಿಕವಾಗಿ ಮಾಡಿರುವ ತಪ್ಪುಗಳನ್ನು ತಿದ್ದಿಕೊಳ್ಳಲು ಈಗ ಒಂದು ಅವಕಾಶ ತಂತಾನೇ ಸಿಕ್ಕಿದೆ. ಅದನ್ನು ಬಳಸಿಕೊಳ್ಳೊಣ. ಮಧ್ಯಾಹ್ನ ಊಟವಾದ ನಂತರ ಬೆಳಗ್ಗೆ ಹಾಕ್ಕೊಂಡು ಬಂದಿದ್ದ ಮಾಸ್ಕ್ ಅನ್ನೇ ಮತ್ತೆ ಹಾಕ್ಕೊಂಡು ಬರ್‍ತೇನೆ. ನೀವೂ ಸಿದ್ಧರಾಗಿ. ಶಿವಾ ಅಂತ ಜಮಾಯಿಸ್‌ಬಿಡೋಣ’ ಎಂದರು.
ರಾಜ್‌ಕುಮಾರ್ ಅವರೇ ಹೀಗೆ ಹೇಳಿದ್ದು ಕೇಳಿ ನಮ್ಮ ಚಿಕ್ಕಪ್ಪನವರಿಗೂ ಉತ್ಸಾಹ ಬಂತು. ಅವರೂ ಗೆಲುವಿನಿಂದ ಎದ್ದು ನಿಂತರು.
ನೋಡನೋಡುತ್ತಲೇ ಶೂಟಿಂಗ್ ಮತ್ತೆ ಶುರುವಾಯಿತು. ಬೆಳಗ್ಗೆ ಆಗಿಹೋದ ಪ್ರಮಾದದ ಬಗ್ಗೆ ಏನೇನೂ ಗೊತ್ತಿಲ್ಲದವರಂತೆ ರಾಜ್‌ಕುಮಾರ್ ಪಾತ್ರದಲ್ಲಿ ಲೀನವಾಗಿ ಹೋದರು. ಮಧ್ಯಾಹ್ನ ಶುರುವಾದ ಹಾಡಿನ ಚಿತ್ರೀಕರಣ ಮುಗಿದಾಗ ರಾತ್ರಿ ಎಂಟುಗಂಟೆಯಾಗಿತ್ತು… ಕಡೆಗೊಮ್ಮೆ ರಶಸ್ ನೋಡಿದಾಗ ಎಲ್ಲರಿಗೂ ಕಣ್ತುಂಬಿಬಂದಿತ್ತು…
ಹಳೆಯ ನೆನಪುಗಳಲ್ಲಿ ಹೀಗೆ ತೇಲಿ ಹೋಗಿ ಖುಷಿಪಟ್ಟರು ಭಾರ್ಗವ…
***
ಹೇಳಲೇಬೇಕಾದ ಮಾತು: ‘ಆರಾಧಿಸುವೆ ಮದನಾರಿ’ ಗೀತೆಯಲ್ಲಿ ರಾಜ್‌ಕುಮಾರ್ ಐದು ಭಿನ್ನ ಗೇಟಪ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಐದೂ ಪಾತ್ರಗಳ ಮುಖಭಾವ ಪ್ರದರ್ಶನವನ್ನು ಪದಗಳಲ್ಲಿ ಹಿಡಿದಿಟಿರುವುದು ಸಾಧ್ಯವೇ ಇಲ್ಲ. ರಾಜ್ ಅವರ ಪರಿಪೂರ್ಣ ನಟನೆ ಸಾಕ್ಷತ್ ಅರ್ಜುನನೂ ಬೆರಗಿನಿಂದ ಚಪ್ಪಾಳೆ ಹೊಡೆದು ವಾಹ್‌ವಾಹ್ ಎಂದು ಉದ್ಗರಿಸುವ ಮಟ್ಟಕ್ಕಿದೆ. ಇಂಥದೊಂದು ಅಪರೂಪದ ದೃಶ್ಯ ಭಾರತದ ಬೇರಾವುದೇ ಭಾಷೆಯ ಚಿತ್ರಗಳಲ್ಲೂ ಈವರೆಗೆ ಬಂದಿಲ್ಲ. ಮುಂದೆ ಬರುತ್ತಾ?ಬಹುಶ: ಇಲ್ಲ.

ಅವಸರ, ಗಡಿಬಿಡಿ, ಧಾವಂತದ ಮಧ್ಯೆಯೇ- ಹೊಸ ಗಾನ ಬಜಾನಾ…

ಅಕ್ಟೋಬರ್ 9, 2010

ಹೊಸ ಗಾನ ಬಜಾನಾ…
ಚಿತ್ರ: ರಾಮ್. ಗೀತೆರಚನೆ: ಯೋಗರಾಜಭಟ್
ಗಾಯನ: ಪುನೀತ್ ರಾಜಕುಮಾರ್, ಸಂಗೀತ: ವಿ. ಹರಿಕೃಷ್ಣ.

ಹೊಸ ಗಾನ ಬಜಾನಾ, ಹಳೇ ಪ್ರೇಮ ಪುರಾಣ
ನೀನು ತುಂಬ ನಿಧಾನ, ಸ್ಪೀಡಾಗಿದೆ ಜಮಾನಾ
ನನ್ನ ಜತೆ ಜೋಪಾನ… ಹೊಸಾ ಗಾನ ಬಜಾನಾ ||ಪ||

ನಿಧಾನವೇ ಪ್ರಧಾನ, ಅದೇ ಸೇಫು ಪ್ರಯಾಣ
ಹೇಳಿಕೊಂಡೇ ಸಾಗೋಣ… ಹಳೇ ಪ್ರೇಮ ಪುರಾಣ
ಯಾಕೋ…ಹ..ಹಾ… ನಂಗೇ….ಹ…ಹಾ
ತುಂಬಾ… ಹೊ…. ಹೋ… ಬೋರೂ… ಹಂಗಾ|?
ಎರಡೇ ಎರಡು ಸ್ಟೆಪ್ಪು ಕುಣಿದು ಬಿಡೋಣಾ
ಹೊಸಾ ಗಾನ ಬಜಾನಾ ||ಅ.ಪ||

ಗಾನಾ… ಸಿಂಗು… ಗಾನಾ…
ಜಾನಿ ಜಾನಿ ಎಸ್ ಪಪ್ಪಾ, ಈಟಿಂಗ್ ಶುಗರ್ ನೋ ಪಪ್ಪಾ
ಕನ್ನಡದಲ್ಲಿ ಹೇಳ್ಬೇಕಪ್ಪ…
ಆ… ಅವಲಕ್ಕಿ ಪವಲಕ್ಕಿ ಡಾಮ್ ಡೂಂ ಟಸ್ಕು ಪುಸ್ಕು
ಪ್ರೀತಿ ಗೀತಿ ಇರಲಿ ಸ್ವಲ್ಪ
ಐ ಲವ್‌ಯೂ ಹೇಳ್ಬೇಕಪ್ಪ, ತುಂಬಾನೇ ಸುಸ್ತಾಗುತ್ತೆ
ನೀನಂತೂ ಸಿಕ್ಕಾಪಟ್ಟೆ ಸೋಂಬೇರಿ ಆಗಿಬಿಟ್ಟೆ
ದೂರ ಕುಳಿತು ನಡುವೆ ಗ್ಯಾಪು ಬಿಡೋಣಾ ||೧||

ಐಯಾಮ್ ಕ್ರೇಜಿ ಎಬೌಟ್ ಯೂ
ಮುತ್ತು ಕೊಡೋ ಬೆಟ್ಟಿಂಗ್ ಕಟ್ಟಿ ಹೆಡ್ಡು ಪುಶ್ಶು ಆಡೋಣಾ ಬಾ
ತುಂಬಾ ಕಾಸ್ಟ್‌ಲಿ ನನ್ನ ಮುತ್ತು
ಯಾವ್ದೋ ಒಂದು ಬೆಟ್ಟ ಹತ್ತಿ ಅಪ್ಪಿಕೊಂಡು ಕೂರೋಣ ಬಾ
ನಂಗೆ ಬೇರೆ ಕೆಲಸಾ ಇತ್ತು
ಈ ಹಾಡು ಹೇಳೋಕಿಂತಾ ಬೇರೊಂದು ಕೆಲ್ಸಬೇಕಾ
ಸಾಕಾಯ್ತು ಥೈಯ್ಯಾಥಕ್ಕ, ಮಾತಾಡು ಕಷ್ಟ ಸುಖ
ಫ್ಯೂಚರ್ರು ಪಾಪುಗೊಂದು ಹೆಸರು ಇಡೋಣ ||೨||

ಮುಂಗಾರು ಮಳೆ’ಯ ಮೂಲಕ ಮನೆಮನೆಯ ಮಾತಾದವರು, ಪ್ರತಿ ಮನದ ಕದ ತಟ್ಟಿದವರು ಯೋಗರಾಜ ಭಟ್. ಮಾತು ಮಾಣಿಕ್ಯ ಎಂಬ ಮಾತಲ್ಲಿ ಅವರಿಗೆ ಅಪಾರ ನಂಬಿಕೆ. ಈ ಕಾರಣಕ್ಕೇ ಇರಬೇಕು: ಅವರ ಎಲ್ಲ ಸಿನಿಮಾಗಳಲ್ಲೂ ಚಿನಕುರುಳಿ ಪಟಾಕಿಯಂಥ ಡೈಲಾಗುಗಳಿರು ತ್ತವೆ. ಒಂದೊಂದು ಸಂಭಾಷಣೆಯೂ ಎದೆಯಾಳದಿಂದ ಎದ್ದು ಬಂದಿರುತ್ತದೆ. ಅನಿಸಿದ್ದನ್ನು ಮುಲಾಜಿಲ್ಲದೆ ಹೇಳಿಬಿಡಬೇಕು ಎಂದು ಗಟ್ಟಿಯಾಗಿ ನಂಬಿರುವ ಯೋಗರಾಜ ಭಟ್, ತಮ್ಮ ಪ್ರತಿಯೊಂದು ಸಿನಿಮಾದಲ್ಲೂ ಹಾಗೇ ಮಾಡಿದ್ದಾರೆ. ತಮ್ಮ ಸಂಭಾಷಣೆಯ ಬಗ್ಗೆ- ಅದರ ಹಸಿ-ಬಿಸಿ ಶೈಲಿಯ ಬಗ್ಗೆ ಟೀಕೆ ಬಂದರೆ ಕತ್ತೆ ಬಾಲ, ಕುದುರೆ ಜುಟ್ಟು ಎಂದುಕೊಂಡೇ ಮಾತು ಹೊಸೆದಿದ್ದಾರೆ. ಆ ಮಾತುಗಳನ್ನು ಎಲ್ಲರಿಗೂ ತಲುಪಿಸಿದ್ದಾರೆ.
ಈ ಸಾದಾ ಸೀದಾ ಕೆಲಸದಿಂದ ಒಂದಷ್ಟು ರೂಮರ್‌ಗಳು ಹುಟ್ಟಿ ಕೊಂಡಿವೆ. ಯೋಗ್ರಾಜ್ ಭಟ್ರು ಸಕತ್ ಸಿಡುಕ ಅಂತೆ. ತುಂಬಾ ಮೂಡಿ ಯಂತೆ. ಒಂದೊಂದ್ಸಲ ಸುಚಿತ್ರಾ ಫಿಲಂ ಸೊಸೈಟಿ ರಸ್ತೇಲಿ ಒಬ್ಬೊಬ್ರೇ ಮಾತಾಡಿಕೊಂಡು ಅಡ್ಡಾಡ್ತಾರಂತೆ. ಎಸ್.ಎಲ್.ವಿ. ಹೋಟೆಲಲ್ಲಿ ಆ ಗಜಿಬಿಜಿಯ ಮಧ್ಯೆಯೇ ಇಡ್ಲಿ ತಿಂದು ಹೋಗ್ತಾರಂತೆ. ಆಮೇಲೆ… ಒಂದು ಸಿನಿಮಾಕ್ಕೆ ಅವರ ಪಡೆಯೋ ಸಂಭಾವನೆ ಐವತ್ ಲಕ್ಷಕ್ಕೂ ಜಾಸ್ತಿಯಂತೆ…. ಮನುಷ್ಯ ಒಂಥರಾ ಅಂತೆ… ಹೀಗೆ ಏನೇನೋ ಮಾತುಗಳು.
ಜನ ಹೀಗೆಲ್ಲ ಮಾತಾಡಿಕೊಂಡ ಸಂದರ್ಭದಲ್ಲೇ ಭಟ್ಟರು ಪದ್ಯ ಬರೆದಿದ್ದಾರೆ. ಅದರ ಹಿಂದೆಯೇ ಸಿನಿಮಾಗಳಿಗೆ ಹಾಡು ಬರೆದಿದ್ದಾರೆ; ಬರೆಯುತ್ತಿದ್ದಾರೆ. ಈ ‘ಅವತಾರಗಳನ್ನೆಲ್ಲ ಜನ ಕುತೂಹಲದಿಂದ ನೋಡುತ್ತಿರುವಾಗಲೇ’ ‘ಲೈಫು ಇಷ್ಟೇನೆ’ ಎಂದು ಘೋಷಿಸಿಬಿಟ್ಟಿದ್ದಾರೆ!
ಇಂತಿಪ್ಪ ಯೋಗರಾಜಭಟ್ಟರು ತೀರಾ ಆಕಸ್ಮಿಕವಾಗಿ ‘ರಾಮ್’ ಚಿತ್ರಕ್ಕೆ ‘ಹೊಸ ಗಾನ ಬಜಾನಾ’ ಎಂಬ ಹಾಡು ಬರೆದರು. ಆ ಸಮಯ- ಸಂದರ್ಭ ಸೃಷ್ಟಿಯಾದದ್ದು ಹೇಗೆ ಎಂಬುದನ್ನು ಭಟ್ಟರ ಮಾತುಗಳಲ್ಲೇ ಕೇಳೋಣ ಬನ್ನಿ:
***
‘ಹೊಸ ಸಿನಿಮಾವೊಂದರ ಕುರಿತು ಪರಭಾಷಾ ನಿರ್ಮಾಪಕರೊಂದಿಗೆ ಚರ್ಚಿಸು ವುದಿತ್ತು. ಈ ಕೆಲಸಕ್ಕೆಂದೇ ಸಂಗೀತ ನಿರ್ದೇಶಕ ಹರಿಕೃಷ್ಣ ಅವರೊಂದಿಗೆ ವಿಜಯನಗರದ ಅಶ್ವಿನಿ ಸ್ಟುಡಿಯೋಗೆ ಹೋದೆ. ಆ ಸಂದರ್ಭದಲ್ಲಿಯೇ ನಾನು ‘ಮನಸಾರೆ’ ಚಿತ್ರದ ಹಾಡುಗಳನ್ನು ಹರಿಕೃಷ್ಣ ಅವರಿಗೆ ಕೇಳಿಸಿದೆ. ಅವರು, ರಾಮ್ ಚಿತ್ರದ ಹಾಡುಗಳನ್ನು ನನಗೆ ಕೇಳಿಸಿದರು, ಹಾಡುಗಳು ಬರುವ ಸಂದರ್ಭವನ್ನೂ ಹೇಳಿದರು. ಅದರಲ್ಲಿ ನಾಯಕ-ನಾಯಕಿ-ಸುಮ್ನೇ ತಮಾಷೆಯಾಗಿ ಹಾಡಿಕೊಳ್ಳುವ ಒಂದು ಹಾಡೂ ಇತ್ತು. ಯಾಕೋ ಆ ಹಾಡಲ್ಲಿ ಜೋಷ್ ಇಲ್ಲ ಅನ್ನಿಸ್ತು. ಅದನ್ನೇ ಹರಿಕೃಷ್ಣ ಅವರಿಗೆ ಹೇಳಿದೆ. ‘ಜಂಗ್ಲಿ’ ಚಿತ್ರದ ನಂತರ ಪ್ರೇಕ್ಷಕರು ಸ್ಪೀಡ್ ಹಾಡುಗಳ ನಿರೀಕ್ಷೆಯಲ್ಲಿದ್ದಾರೆ. ನೀವು ಈ ಹಾಡಿನ ಬದಲಿಗೆ ಅದೇ ಥರದ ಒಂದು ಹಾಡು ಹಾಕಿದ್ರೆ ಚೆಂದ ಎಂಬ ಸಲಹೆಯನ್ನೂ ಕೊಟ್ಟೆ!
ಆಗ ಹರಿಕೃಷ್ಣ ಅವರು ಅಡ್ಡಡ್ಡ ಕತ್ತು ಒಗೆದು-‘ಹಾಗೆ ಮಾಡೋಕೆ ಆಗಲ್ಲ ಸಾರ್. ಯಾಕಂದ್ರೆ ಈ ಹಾಡಿನ ಶೂಟಿಂಗ್‌ಗೆಂದು ಚಿತ್ರತಂಡ ಈಗಾಗಲೇ ಸ್ವೀಡನ್‌ಗೆ ಹೋಗಿಬಿಟ್ಟಿದೆ. ನಾಳೆ ಬೆಳಗ್ಗೆ ಅಲ್ಲಿ ಚಿತ್ರೀಕರಣ ಶುರುವಾಗ್ತಿದೆ’. ಈಗಾಗಲೇ ಚೆನ್ನೈನಲ್ಲಿ ಹಾಡಿನ ರೆಕಾರ್ಡಿಂಗ್ ಕೂಡ ನಡೀತಿದೆ’ ಅಂದರು. ‘ಸರಿ ಹಾಗಾದ್ರೆ. ಹೋಗ್ಲಿ ಬಿಡಿ’ ಎಂದು ನಾನೂ ಮನೆಗೆ ಬಂದೆ.
ಅವತ್ತೇ, ಸಂಜೆ ಏಳು ಗಂಟೆಗೆ ಹರಿಕೃಷ್ಣ ಫೋನ್ ಮಾಡಿದರು: ‘ಏನ್ಸಾರ್?’ ಎಂದೆ. ‘ಬೆಳಗ್ಗೆ ನಿಮ್ಮ ಮಾತು ಕೇಳಿದಾಗಿಂದ ನನಗೂ ತಲೇಲಿ ಹುಳ ಬಿಟ್ಟಂತೆ ಆಗಿದೆ. ಈಗ ಒಂದು ಕೆಲ್ಸ ಮಾಡೋಣ. ರಾತ್ರಿ ೧೦ ಗಂಟೆ ಹೊತ್ತಿಗೆ ಅಶ್ವಿನಿ ಸ್ಟುಡಿಯೋಗೆ ಬನ್ನಿ. ಅಲ್ಲಿ ನಿಮ್ಗೆ ಟ್ಯೂನ್ ಕೇಳಿಸ್ತೇನೆ. ಅದಕ್ಕೆ ಹೊಂದು ವಂತೆ ನೀವೇ ಹಾಡು ಬರೆದುಬಿಡಿ’ ಎಂದರು.
ಇದೊಳ್ಳೆ ಫಜೀತಿ ಆಯ್ತಲ್ಲ, ಸುಮ್ನೇ ಒಂದು ಸಲಹೆ ಕೊಟ್ರೆ ನೀವೇ ಹಾಡು ಬರೀರಿ ಅಂತಿದಾರಲ್ಲ ಅಂದುಕೊಂಡೆ. ನಂತರ ‘ಈಗಾಗ್ಲೇ ರಾತ್ರಿ ಆಗಿದೆ. ನಾಳೆ ಹಾಡಿನ ಚಿತ್ರೀಕರಣ ಶುರುವಾಗುತ್ತೆ ಅಂತ ಬೇರೆ ಹೇಳಿದ್ದೀರಿ. ಹೀಗಿರುವಾಗ ಹೇಗೆ ಸಾರ್ ಹಾಡು ಬರೆಯೋದು?’ ಅಂದೆ.’ ತಂಡಕ್ಕೆ ಈಗಾಗಲೇ ಇ-ಮೇಲ್ ಮೂಲಕ ವಿಷಯ ತಿಳಿಸಿದ್ದೀನಿ. ಸ್ವೀಡನ್, ಭಾರತಕ್ಕಿಂತ ಆರು ಗಂಟೆ ಹಿಂದಿರುತ್ತೆ. ಹಾಗಾಗಿ ನಮಗೆ ಟೈಂ ಇದೆ. ನೀವು ಹತ್ತು ಗಂಟೆಗೆ ಅಶ್ವಿನಿ ಸ್ಟುಡಿಯೋಗೆ ಬನ್ನಿ. ಅಲ್ಲಿ ಟ್ಯೂನ್ ಕೇಳಿಸ್ತೇನೆ. ನೀವು ಬೆಳಗ್ಗೆ ಎಂಟೂವರೆ ಹೊತ್ತಿಗೆ ಹಾಡು ಕೊಟ್ರೂ ಸಾಕು’ ಅಂದರು ಹರಿಕೃಷ್ಣ.
ನಾನು ಸ್ಟುಡಿಯೋ ತಲುಪುವ ವೇಳೆಗೆ ಟ್ಯೂನ್ ಸಿದ್ಧವಾಗಿತ್ತು. ಇಬ್ಬರು ಟ್ರ್ಯಾಕ್ ಸಿಂಗರ್‌ಗಳಿಂದ ಅದನ್ನು ಲಲಲಾಲ, ಲಲಲ, ಲಾಲಲಾ…. ಧಾಟಿಯಲ್ಲಿ ಹಾಡಿಸ್ತಿದ್ರು ಹರಿಕೃಷ್ಣ. ನಂತರ ಆ ಧ್ವನಿಯನ್ನು ರೆಕಾರ್ಡ್ ಮಾಡಿ, ಒಂದು ಸಿ.ಡಿ.ಗೆ ಹಾಕಿ ಕೊಟ್ರು. ಬೆಳಗ್ಗೆ ಹೊತ್ತಿಗೆ ಹಾಡು ಕೊಡಿ ಸಾರ್. ಅದನ್ನು ಟ್ರ್ಯಾಕ್‌ನಲ್ಲಿ ಹಾಡಿಸಿ, ಸ್ವೀಡನ್‌ಗೆ ಮೇಲ್ ಮಾಡ್ತೇನೆ’ ಅಂದರು.
ಸ್ಟುಡಿಯೊದಿಂದ ಹೊರಬಂದ ತಕ್ಷಣ, ಟೆನ್ಷನ್ ಶುರುವಾಯ್ತು. ನಾನು ಏನೂ ಹೇಳದೆ ಇದ್ದಿದ್ರೇ ಚೆನ್ನಾಗಿರ್‍ತಿತ್ತು ಅಂದುಕೊಂಡೆ. ಆದರೆ, ಈಗ ಯೋಚಿಸಿ ಪ್ರಯೋಜನವಿರಲಿಲ್ಲ. ಅಲ್ಲಿಂದ ಸೀದಾ ಗೆಳೆಯ ದುನಿಯಾ ಸೂರಿಯ ಮನೆಗೆ ಹೊರಟೆ. ಸೂರಿ, ಆಗಷ್ಟೇ ಒಂದು ಹೊಸ ಟೇಬಲ್ ತಗೊಂಡಿದ್ದ. ಅದು ಎಷ್ಟೊಂದು ಚೆನ್ನಾಗಿತ್ತು ಅಂದರೆ- ಅದನ್ನು ನೋಡಿದಾಗೆಲ್ಲ ಇಲ್ಲಿ ಕೂತು ಏನಾದ್ರೂ ಬರೀಬೇಕು ಎಂಬ ಆಸೆ ಹುಟ್ಟುತ್ತಿತ್ತು. ನೋಡೋಣ, ಇಲ್ಲಾದರೂ ಹಾಡಿನ ಸಾಲುಗಳು ಹೊಳೆದ್ರೆ ಸಾಕು ಎಂದುಕೊಂಡು ಆ ಟೇಬಲ್ ಮುಂದೆ ಕೂತೆ. ಏನೇ ತಿಪ್ಪರಲಾಗ ಹಾಕಿದ್ರೂ ಒಂದು ಸಾಲೂ ಹೊಳೆಯಲಿಲ್ಲ.
ಬೇಜಾರಾಯ್ತು. ಸೀದಾ ಮನೆಗೆ ಬಂದೆ. ನನ್ನ ಆಗಮನಕ್ಕೇ ಕಾಯುತ್ತಿದ್ದ ಹೆಂಡತಿ-‘ಮರೆತು ಬಿಟ್ಟಿದೀರಾ? ನಾಳೆ ನಿಮ್ಮ ಮಾವನವರ ತಿಥಿ ಇದೆ; ಬೆಳಗ್ಗೆ ಆ ಕೆಲಸಕ್ಕೆ ಹೋಗಲೇಬೇಕು. ಹಾಗಾಗಿ ನಿಮ್ಮ ಸಿನಿಮಾದ ಕೆಲಸಗಳಿಗೆ ನಾಳೆ ರಜೆ ಕೊಡಿ’ ಎಂದಳು.
ಮಾವನವರ ತಿಥಿ ಕಾರ್ಯವನ್ನು ಮಿಸ್ ಮಾಡುವಂತಿರಲಿಲ್ಲ. ಈ ಕಡೆ ಹಾಡು ಬರೆಯುವುದರಿಂದ ತಪ್ಪಿಸಿಕೊಳ್ಳುವಂತೆಯೂ ಇರಲಿಲ್ಲ. ಇರಲಿ, ಬೆಳಗ್ಗೆ ಬೇಗ ಎದ್ದು ಬರೆದು ಬಿಡೋಣ ಅಂದುಕೊಂಡೇ ಮಲಗಿದೆ. ರಾತ್ರಿಯಿಡೀ ಹಾಡು, ಹಾಡು, ಹಾಡು ಎಂದು ಗುನುಗಿಕೊಂಡೆ. ಪರಿಣಾಮ, ಬೆಳಗ್ಗೆ ಐದು ಗಂಟೆಗೇ ಎಚ್ಚರವಾಯಿತು. ಏನು ಬರೆಯೋದು, ಹೇಗೆ ಶುರು ಮಾಡೋದು ಎಂದು ಯೋಚಿಸಿದೆ. ಆಗಲೇ -ಹಿಂದಿನ ದಿನ ಅಶ್ವಿನಿ ಸ್ಟುಡಿಯೋದಲ್ಲಿ ಟ್ರ್ಯಾಕ್ ಸಿಂಗರ್ ಒಬ್ಬನಿಂದ ‘ಐಯಾಮ್ ಕ್ರೇಜಿ ಎಬೌಟ್ ಯೂ’ ಎಂದು ಹರಿಕೃಷ್ಣ ಹಾಡಿಸಿದ್ದು ನೆನಪಾಯಿತು. ಹೇಳಿ ಕೇಳಿ ಅದು ಇಂಗ್ಲಿಷ್ ಸಾಲು. ಇಂಗ್ಲಿಷ್ ಬೇಡ. ಈ ಹಾಡು ಕನ್ನಡದ ಸಾಲಿನಿಂದಲೇ ಶುರುವಾಗಲಿ ಅಂದುಕೊಂಡೆ ನಿಜ. ಆದರೆ, ಒಂದೇ ಒಂದು ಪದವೂ ಹೊಳೆಯುತ್ತಿಲ್ಲ.
ಆಗ ನನ್ನಷ್ಟಕ್ಕೆ ನಾನೇ-‘ ಹೊಸ ಹಾಡಿಗೆ ಯಾವ ಸಾಲು? ಹೊಸ ಹಾಡು, ಹೊಸ ಸಾಲು ಹೊಸರಾಗ… ಎಂದೆಲ್ಲ ಬಡಬಡಿಸಿದೆ. ಆಗಲೇ ತಲೆಯೊಳಗೆ ಟ್ಯೂಬ್ ಲೈಟ್ ಝಗ್ ಎಂದಿರಬೇಕು. ಇದ್ದಕ್ಕಿ ದ್ದಂತೆ-‘ಹೊಸ ಗಾನ ಬಜಾನಾ’ ಎಂಬ ಸಾಲು, ಹೊಳೆಯಿತು. ತಕ್ಷಣ ಅದನ್ನು ಬರೆದಿಟ್ಟುಕೊಂಡೆ. ಇದನ್ನೇ ಮೊದಲ ಸಾಲಾಗಿಸಬೇಕು ಅಂದುಕೊಂಡೆ. ಈ ಹಾಡು ಬರೆಯೋಕೆ ತುಂಬಾ ಸಮಯ ಹಿಡಿಯಿತಲ್ಲ? ಅದನ್ನೇ ನೆಪವಾಗಿಟ್ಟುಕೊಂಡು, ನನ್ನನ್ನು ನಾನೇ ಗೇಲಿ ಮಾಡಿಕೊಂಡು-‘ನೀನು ತುಂಬ ನಿಧಾನ, ಸ್ಪೀಡಾಗಿದೆ ಜಮಾನಾ’ ಎಂದು ಬರೆದೆ. ಇದೇ ಸಂದರ್ಭದಲ್ಲಿ, ಹಿಂದಿನ ದಿನವಷ್ಟೆ ಒಂದು ವಾಹನದ ಹಿಂದೆ ನೋಡಿದ್ದ -‘ನಿಧಾನವೇ ಪ್ರಧಾನ’ ಎಂಬ ಸಾಲು ನೆನಪಾಯ್ತು. ಅದನ್ನೂ ಜತೆಗಿಟ್ಟುಕೊಂಡೆ. ನಂತರ, ಹರಯದ ಜೋಡಿಗಳು ಗುನುಗುವ ಒಂದೊಂದೇ ಹೊಸ ಪದಗಳನ್ನು ನೆನಪಿಸಿಕೊಂಡೆ. ನಂತರದ ಕೆಲವೇ ನಿಮಿಷಗಳಲ್ಲಿ ಇಡೀ ಹಾಡು ಸಿದ್ಧವಾಗಿ ಹೋಯ್ತು.
ಗಡಿಯಾರ ನೋಡಿಕೊಂಡೆ: ಬೆಳಗ್ಗೆ ಎಂಟೂವರೆ. ತಕ್ಷಣವೇ ಹರಿಕೃಷ್ಣ ಅವರಿಗೆ ಫೋನ್ ಮಾಡಿದೆ. ಅವರು ಆಗಲೇ ಚೆನ್ನೈನಲ್ಲಿ, ಮ್ಯೂಸಿಕ್ ರೆಕಾರ್ಡಿಂಗ್‌ನ ಸಿದ್ಧತೆಯಲ್ಲಿದ್ದರು. ಹಾಡಿನ ಸಾಲುಗಳನ್ನು ಫೋನ್‌ನಲ್ಲಿಯೇ ಹೇಳಿದೆ. ತಕ್ಷಣವೇ ಟ್ರಾಕ್ ಹಾಡು ಹಾಗೂ ಮ್ಯೂಸಿಕ್ ಟ್ರ್ಯಾಕ್ ಸಿದ್ಧಪಡಿಸಿ, ಅದನ್ನು ಸ್ವೀಡನ್‌ನಲ್ಲಿದ್ದ ಚಿತ್ರತಂಡಕ್ಕೆ ಮೇಲ್ ಮೂಲಕ ಕಳಿಸಿಬಿಟ್ಟರು ಹರಿಕೃಷ್ಣ.
ಒಂದು ಬಾರಿ ತಿದ್ದುವುದಕ್ಕೂ ಅವಕಾಶವಿಲ್ಲದಂತೆ ಬರೆದ ಹಾಡದು. ಹಾಗಾಗಿ ಚೆನ್ನಾಗಿರಲಿಕ್ಕಿಲ್ಲ ಎಂಬ ಅಂದಾಜು ನನ್ನದಿತ್ತು. ಹಾಗಾಗಿ, ಈ ಬಗ್ಗೆ ವಿಚಾರಿಸುವುದನ್ನೇ ಮರೆತೆ. ಆದರೆ, ಕೆಲ ದಿನಗಳ ನಂತರ ಫೋನ್ ಮಾಡಿದ ಹರಿಕೃಷ್ಣ, ಆಡಿಯೋ ಸಿ.ಡಿ. ಬಿಡುಗಡೆಯಾಗಿದೆ ಸಾರ್ ಅಂದರು. ಹಿಂಜರಿಕೆಯಿಂದಲೇ ಸಿ.ಡಿ. ಖರೀದಿಸಿ ಕೇಳಿದೆ. ತಕ್ಷಣಕ್ಕೇ ಇಷ್ಟವಾಯಿತು. ಮುಂದೆ ಅದೇ ಹಾಡು ಹಿಟ್ ಆದಾಗ ಗಡಿಬಿಡಿಯ ಮಧ್ಯೆ, ಟೆನ್ಷನ್‌ನ ಮಧ್ಯೆ, ತುಂಬ ಅವಸರದ ಮಧ್ಯೆ ಅಂಥದೊಂದು ಹಾಡು ಬರೆದದ್ದಕ್ಕೆ ಸ್ವಲ್ಪ ಜಾಸ್ತಿಯೇ ಖುಷಿಯಾಯಿತು….
ಇಷ್ಟು ಹೇಳಿ ಮಾತು ನಿಲ್ಲಿಸಿದ ಯೋಗರಾಜ ಭಟ್. ನಂತರ ಫಾರ್ ಎ ಛೇಂಜ್ ಎಂಬಂತೆ ನಸುನಕ್ಕು ಹೇಳಿದರು: ಮಾತು ಇಷ್ಟೇನೆ…

ಸಂಪಿಗೆ ಮರದ ಹಸಿರೆಲೆ ನಡುವೆ…

ಅಕ್ಟೋಬರ್ 1, 2010

ಸಂಪಿಗೆ ಮರದ ಹಸಿರೆಲೆ ನಡುವೆ…
ಚಿತ್ರ: ಉಪಾಸನೆ. ಗೀತೆರಚನೆ: ಆರ್.ಎನ್. ಜಯಗೋಪಾಲ್
ಸಂಗೀತ: ವಿಜಯಭಾಸ್ಕರ್. ಗಾಯನ : ಬಿ.ಕೆ. ಸುಮಿತ್ರಾ

ಸಂಪಿಗೆ ಮರದ ಹಸಿರೆಲೆ ನಡುವೆ ಕೋಗಿಲೆ ಹಾಡಿತ್ತು
ಚಿಕ್ಕವ್ವ… ಚಿಕ್ಕವ್ವ… ಎನ್ನುತ ತನ್ನಯ ಗೆಳೆಯರ ಕರೆದಿತ್ತು
ಅದ ಕೇಳಿ ನಾ ಮೈ ಮರೆತೆ, ಸ್ವರವೊಂದು ಆಗಲೆ ಕಲಿತೆ
ಹಾಡಿದೆ ಈ ಕವಿತೆ ನಾ ಹಾಡಿದೆ ಈ ಕವಿತೆ ||ಪ||

ದೂರದ ಗುಡಿಯಲಿ ಪೂಜೆಯ ವೇಳೆಗೆ ಘಂಟೆಯು ಮೊಳಗಿತ್ತು
ಟಣ್ ಡಣ್ ಟಣ್ ಡಣ್…
ಎನ್ನುತ ಸೇವೆಗೆ ಎಲ್ಲರ ಕರೆದಿತ್ತು
ಅದಕೇಳಿ ನಾ ಮೈಮರೆತೆ, ಸ್ವರವೊಂದು ಆಗಲೆ ಕಲಿತೆ
ಹಾಡಿದೆ ಈ ಕವಿತೆ ನಾ ಹಾಡಿದೆ ಈ ಕವಿತೆ ||೧||

ಹರಿಯುವ ನದಿಯಾ ನೋಡುತ ನಿಂತೆ ಅಲೆಗಳು ಕುಣಿದಿತ್ತು
ಕಲ ಕಲ ಕಲ ಕಲ…
ಮಂಜುಳ ನಾದವು ಕಿವಿಗಳ ತುಂಬಿತ್ತು
ಅದಕೇಳಿ ನಾ ಮೈ ಮರೆತೆ, ಸ್ವರವೊಂದು ಆಗಲೆ ಕಲಿತೆ
ಹಾಡಿದೆ ಈ ಕವಿತೆ ನಾ ಹಾಡಿದೆ ಈ ಕವಿತೆ ||೨||
ಎಪ್ಪತ್ತರ ದಶಕದಿಂದ ಆರಂಭಿಸಿ ಈಗಲೂ ಹಲವರನ್ನು ಬಿಟ್ಟೂ ಬಿಡದೆ ಕಾಡುತ್ತಿರುವ ಗೀತೆ ‘ಸಂಪಿಗೆ ಮರದ ಹಸಿರೆಲೆ ನಡುವೆ ಕೋಗಿಲೆ ಹಾಡಿತ್ತು…’ ‘ಉಪಾಸನೆ’ ಚಿತ್ರದ ಈ ಗೀತೆ, ಆರ್.ಎನ್.ಜೆ. ಅವರ ಅನುಪಮ ಸೃಷ್ಟಿಗಳಲ್ಲಿ ಒಂದು. ಈ ಹಾಡು ಕೇಳುತ್ತ ಕೂತರೆ, ಗ್ರಾಮೀಣ ಪ್ರದೇಶದಿಂದ ಬಂದ ಪ್ರತಿಯೊಬ್ಬರಿಗೂ ತಂತಮ್ಮ ಊರು ನೆನಪಾಗುತ್ತದೆ. ಪಲ್ಲವಿ ಮುಗಿದು ಮೊದಲ ಚರಣ ಶುರುವಾದ ತಕ್ಷಣ ಊರಲ್ಲಿರುವ ದೇವಸ್ಥಾನ, ಅದರ ಘಂಟಾನಾದ, ಗರ್ಭಗುಡಿಯಲ್ಲಿರುವ ದೇವರ ವಿಗ್ರಹ, ಅದಕ್ಕೆ ಮಂಗಳಾರತಿ ಶುರುವಾಗುತ್ತಿದ್ದಂತೆಯೇ ಭಕ್ತಾದಿಗಳೆಲ್ಲ ಕೈ ಮುಗಿದು, ಕೆನ್ನೆ ಕೆನ್ನೆ ಬಡಿದುಕೊಂಡು ಮೈಮರೆಯುವ ಕ್ಷಣಗಳೆಲ್ಲ ನೆನಪಿಗೆ ಬರುತ್ತವೆ. ಹಿಂದೆಯೇ-ಈ ಹಾಡು ನನಗೆಂದೇ ಬರೆದಿರುವಂತಿದೆ ಎಂಬ ಭಾವ ಎಲ್ಲರನ್ನೂ ಆವರಿಸಿಕೊಳ್ಳುತ್ತದೆ.
ಕೋಗಿಲೆಯೂ ಅಸೂಯೆ ಪಡುವಂತೆ ಈ ಗೀತೆಯನ್ನು ಹಾಡಿದವರು ಬಿ.ಕೆ. ಸುಮಿತ್ರಾ. ಈ ಹಾಡಿನ ಕಥೆಗೆ ಹೊರಳಿಕೊಳ್ಳುವ ಮುನ್ನ ಸುಮಿತ್ರಾ ಅವರ ಗಾನಯಾನದ ಬಗ್ಗೆಯೂ ನಾಲ್ಕು ಮಾತು. ಚಿಕ್ಕಮಗಳೂರು ಜಿಲ್ಲೆಯ ಬಿಳಿಲುಕೊಪ್ಪ ಗ್ರಾಮದವರು ಸುಮಿತ್ರಾ. ಅವರ ತಂದೆ ಪಟೇಲ್ ಕೃಷ್ಣಯ್ಯ. ಊರ ಪಟೇಲರೂ, ಕಾಫಿ ತೋಟದ ಮಾಲೀಕರೂ ಆಗಿದ್ದ ಕೃಷ್ಣಯ್ಯನವರು, ಅರವತ್ತರ ದಶಕದಲ್ಲಿಯೇ ಆಧುನಿಕ ಮನೋಭಾವ ಪ್ರದರ್ಶಿಸಿದ ಮಂತರು. ಹೆಣ್ಣು ಮಕ್ಕಳೂ ಸಹ ಹುಡುಗರಂತೆಯೇ ಓದಿ ದೊಡ್ಡ ಹೆಸರು ಮಾಡಬೇಕು ಎಂಬುದು ಅವರ ಆಸೆಯಾಗಿತ್ತು. ಮುದ್ದಿನ ಮಗಳು ಸುಮಿತ್ರಾ ಅವರಿಗೂ ಹಾಗೆಯೇ ಹೇಳಿದ್ದರು. ಮಗಳಿಗೆ ಸಂಗೀತ ಕಲಿಕೆಯಲ್ಲಿ ಆಸಕ್ತಿಯಿದೆ ಎಂದು ಗೊತ್ತಾದಾಗ-ನಟಿ ಪಂಢರಿಬಾಯಿ ಅವರ ಸೋದರ ಪ್ರಭಾಕರ ಅವರ ಬಳಿ ಸಂಗೀತ ಕಲಿಕೆಗೆ ವ್ಯವಸ್ಥೆ ಮಾಡಿದರು. ಮಗಳು ಕಾಲೇಜು ಓದಲು ಆಸೆಪಟ್ಟಾಗ ಶಿವಮೊಗ್ಗದಲ್ಲಿ ಓದಿಸಿದ್ದರು.
ಕಾಲೇಜು ಶಿಕ್ಷಣದ ನಂತರ, ಹೇಗಿದ್ದರೂ ಸುಗಮ ಸಂಗೀತ ಕಲಿತಿದ್ದಾಗಿದೆ. ಹಾಗಾಗಿ ಚಿತ್ರರಂಗದಲ್ಲಿ ಹಿನ್ನೆಲೆಗಾಯಕಿಯಾಗಿ ಯಾಕೆ ಅದೃಷ್ಟ ಪರೀಕ್ಷಿಸಬಾರದು ಎನ್ನಿಸಿದಾಗ ಅದನ್ನೇ ತಂದೆಯ ಬಳಿ ಹೇಳಿಕೊಂಡರು ಸುಮಿತ್ರಾ. ಇದು ೧೯೬೦-೭೦ರ ದಶಕದ ಮಾತು. ಆಗ ಕನ್ನಡ ಚಿತ್ರರಂಗದ ಸಮಸ್ತ ಚಟುವಟಿಕೆಯೂ ಮದ್ರಾಸ್‌ನಲ್ಲೇ ನಡೆಯುತ್ತಿತ್ತು. ಹಾಗಾಗಿ ಚಿತ್ರರಂಗ ಸೇರುವ ಆಸೆ ಹೊಂದಿದವರು ಸೀದಾ ಮದ್ರಾಸ್‌ಗೇ ಬರಬೇಕಾಗುತ್ತಿತ್ತು. ಮಗಳ ಮಾತು ಕೇಳಿದ ನಂತರ, ತಾವೇ ಮುಂದಾಗಿ ಮದ್ರಾಸ್‌ಗೆ ಬಂದು ಒಂದು ಬಾಡಿಗೆ ಮನೆಯನ್ನು ಗೊತ್ತುಮಾಡಿದರು ಪಟೇಲ್ ಕೃಷ್ಣಯ್ಯ. ನಂತರ ಮಗಳಿಗೆ ಅಡುಗೆ ಮಾಡಲೆಂದೇ ತಮ್ಮ ಊರಿಂದ ಒಂದು ಹುಡುಗಿಯನ್ನೂ ಕರೆತಂದರು. ನಂತರ ಮಗಳ ಮುಂದೆ ನಿಂತು ಹೇಳಿದರಂತೆ: ‘ನೋಡಮ್ಮಾ, ಒಪ್ಪಿಕೊಂಡ ಕೆಲಸವನ್ನು ಶ್ರದ್ಧೆ, ಭಕ್ತಿಯಿಂದ ಮಾಡು. ಆದರೆ, ಅವಕಾಶ ಕೊಡಿ ಎಂದು ಯಾರಲ್ಲೂ ಕೇಳಿಕೊಂಡು ಹೋಗಬೇಡ. ಇಲ್ಲಿ ಒಂದೆರಡು ವರ್ಷ ಇದ್ದು ನೋಡು. ಈ ಕ್ಷೇತ್ರ ನಿನಗೆ ಹಿಡಿಸದಿದ್ದರೆ ಆರಾಮಾಗಿ ಊರಿಗೆ ಬಂದುಬಿಡು…’
‘ಹಾಗೇ ಆಗಲಿ ಅಪ್ಪಾಜೀ’ ಎಂದರು ಸುಮಿತ್ರಾ. ಆದರೆ, ಒಂದೆರಡು ಸಿನಿಮಾಗಳಿಗೆ ಹಾಡಿದ್ದೇ ತಡ, ಇಡೀ ಚಿತ್ರರಂಗ ಅವರ ಸಿರಿಕಂಠದ ಇಂಪನ್ನು ಗುರ್ತಿಸಿತು. ಮೆಚ್ಚಿಕೊಂಡಿತು. ಹಾಡಿ ಹೊಗಳಿತು. ಪರಿಣಾಮ,ಅದುವರೆಗೂ ಬಿಳಿಲು ಕೊಪ್ಪದ ಜನರಿಗೆ ಮಾತ್ರ ಪರಿಚಯವಿದ್ದ ಸುಮಿತ್ರಾ, ಕರ್ನಾಟಕದಾದ್ಯಂತ ಮನೆ ಮಾತಾದರು.
***
ಈಗ, ‘ಉಪಾಸನೆ’ ಚಿತ್ರದಲ್ಲಿ ಈ ಹಾಡು ಬರುವ ಸಂದರ್ಭ ತಿಳಿದುಕೊಂಡು, ಆನಂತರವೇ ಹಾಡಿನ ಹಿಂದಿರುವ ಕಥೆಗೆ ಹೊರಳಿಕೊಳ್ಳೋಣ.
‘ಉಪಾಸನೆ’ ಚಿತ್ರದ ಕಥಾನಾಯಕಿಯ ಹೆಸರು ಶಾರದೆ. ಆಕೆ, ವಕೀಲ ಭೀಮರಾಯರ ಹಿರಿಯ ಮಗಳು. ಶಾರದೆ ಇದ್ದ ಊರಲ್ಲಿಯೇ ಸಂಗೀತ ವಿದ್ವಾನ್ ಅನಂತಶಾಸ್ತ್ರಿಗಳಿರುತ್ತಾರೆ. ಸಂಗೀತದಲ್ಲಿ ಆಸಕ್ತಿ ಹೊಂದಿದ್ದ ಶಾರದೆ, ಶಾಲೆಗೆ ಹೋಗುವಾಗ ಮತ್ತು ಬರುವಾಗ, ಅನಂತ ಶಾಸ್ತ್ರಿಗಳ ಮನೆಯ ಬಾಗಿಲ ಬಳಿ ನಿಂತು ಅವರು ವೀಣೆ ನುಡಿಸುವುದನ್ನೇ ನೋಡುತ್ತ ಖುಷಿ ಪಡುತ್ತಿರುತ್ತಾಳೆ. ಈ ಸಂದರ್ಭದಲ್ಲಿಯೇ ಶಾಸ್ತ್ರಿಗಳನ್ನು ಕಾಣುವ ಭೀಮರಾಯರು, ತಮ್ಮ ಮಗಳಿಗೆ ಸಂಗೀತ ಹೇಳಿಕೊಡುವಂತೆ ಪ್ರಾರ್ಥಿಸುತ್ತಾರೆ. ಅದಕ್ಕೆ ಒಪ್ಪದ ಶಾಸ್ತ್ರಿಗಳು- ‘ನಾನು ಯಾರಿಗೂ ಸಂಗೀತ ಹೇಳಿಕೊಡಲಾರೆ, ಕ್ಷಮಿಸಿ’ ಎನ್ನುತ್ತಾರೆ.
ಹೀಗಿದ್ದಾಗಲೇ ಒಂದು ದಿನ ಶಾಸ್ತ್ರಿಯವರು ವೀಣೆ ನುಡಿಸುತ್ತಿದ್ದಾಗ ಅವರ ಮನೆಗೆ ಬರುತ್ತಾಳೆ ಶಾರದೆ. ಬಂದವಳು ನಮಸ್ಕರಿಸಿ, ವೀಣೆಯನ್ನೇ ಆರಾಧನಾ ಭಾವದಿಂದ ನೋಡುತ್ತಾಳೆ. ಅದನ್ನು ಗಮನಿಸಿದ ಶಾಸ್ತ್ರಿಗಳು-’ಮಗೂ, ನಿಂಗೆ ಹಾಡಲು ಬರುತ್ತಾ? ಒಂದು ಹಾಡು ಹಾಡ್ತೀಯಾ?’ ಅನ್ನುತ್ತಾರೆ. ಆಗ, ಶಾಸ್ತ್ರಿಗಳನ್ನೇ ಪ್ರೀತಿ, ಭಯ-ಭಕ್ತಿಯಿಂದ ನೋಡುತ್ತಾ ಶಾರದೆ ಹಾಡುತ್ತಾಳೆ: ‘ಸಂಪಿಗೆ ಮರದಾ ಹಸಿರೆಲೆ ನಡುವೆ ಕೋಗಿಲೆ ಹಾಡಿತ್ತು…’
ಈ ಹಾಡು ಹುಟ್ಟಿದ ಸಂದರ್ಭವನ್ನು, ಅದನ್ನು ತಾವು ಮೈಮರೆತು ಹಾಡಿದ ಕ್ಷಣವನ್ನು ಬಿ.ಕೆ. ಸುಮಿತ್ರಾ ಅವರು ನೆನಪು ಮಾಡಿಕೊಂಡದ್ದು ಹೀಗೆ:
‘ತಮ್ಮ ಸಿನಿಮಾಗಳಿಗೆ ಹಾಡು- ಸಂಭಾಷಣೆ ಬರೆಸುವ ಸಂದರ್ಭದಲ್ಲಿ ಪುಟ್ಟಣ್ಣ ಕಣಗಾಲ್ ಅವರು ಸಂಗೀತ ನಿರ್ದೇಶಕ, ಸಂಭಾಷಣೆಕಾರ ಹಾಗೂ ಗೀತೆರಚನೆಕಾರರೊಂದಿಗೆ ಪಿಕ್‌ನಿಕ್‌ಗೆ ತೆರಳುತ್ತಿದ್ದರು. ಸಿನಿಮಾ ಸಂದರ್ಭದ ತೀವ್ರತೆಯನ್ನು ಹೆಚ್ಚಿಸುವ, ಪದ ಪದದಲ್ಲೂ ಮಾಧುರ್ಯವನ್ನೇ ತುಂಬಿಕೊಂಡ ಹಾಡು ಹಾಗೂ ಎಲ್ಲರನ್ನೂ ಮೋಡಿ ಮಾಡುವಂಥ ಟ್ಯೂನ್ ಸಿದ್ಧವಾಗುವವರೆಗೂ ಬಿಡುತ್ತಿರಲಿಲ್ಲ ಪುಟ್ಟಣ್ಣ.
‘ಉಪಾಸನೆ’ಯಲ್ಲಿ ಶಾಲಾ ಬಾಲಕಿಯೊಬ್ಬಳ ದನಿಯಲ್ಲಿ ನಾನು ಹಾಡಬೇಕಿತ್ತು. ಆರ್.ಎನ್. ಜಯಗೋಪಾಲ್ ಅವರು ಬರೆದಿದ್ದ ಹಾಡನ್ನು ನೋಡಿದಾಗ, ನನಗೆ ಆಶ್ಚರ್ಯವಾಯಿತು. ಏಕೆಂದರೆ- ‘ಸಂಪಿಗೆ ಮರದ ಹಸಿರೆಲೆ ನಡುವೆ ಕೋಗಿಲೆ ಹಾಡಿತ್ತು..’ ಎಂದು ಬರೆದಿದ್ದರು ಆರ್.ಎನ್. ಜೆ.
‘ಕೋಗಿಲೆ ಮಾವಿನ ಚಿಗುರನ್ನು ತಿನ್ನುತ್ತದೆ. ಮಾವಿನ ಮರದಲ್ಲಿ ಕೂತು ಕೂಹೂ, ಕೂಹೂ ಎಂದು ಹಾಡುತ್ತದೆ’ ಎಂದಷ್ಟೇ ನಮ್ಮ ಶಾಲೆಯಲ್ಲಿ ಹೇಳಿಕೊಟ್ಟಿದ್ದರು. ನಾನೂ ಅದನ್ನೇ ನಂಬಿಕೊಂಡಿದ್ದೆ. ನಮ್ಮ ಊರಿನ ಮಾವಿನ ತೋಪುಗಳಲ್ಲಿ ಆಗಿಂದಾಗ್ಗೆ ಕೋಗಿಲೆಗಳು ಹಾಡುವುದನ್ನು ಕೇಳಿಸಿಕೊಂಡಿದ್ದೆ. ಅದು ಒಮ್ಮೆ ಕೂಹೂ ಎಂದರೆ ಸಾಕು, ನಾನು ಅದರ ದನಿಯನ್ನೇ ಅನುಕರಿಸಿ-‘ಕೂಹೂ, ಕೂಹೂ’ ಅನ್ನುತ್ತಿದ್ದೆ. ಆ ಸಂದರ್ಭದಲ್ಲಿ ಕೋಗಿಲೆ ಸ್ಪರ್ಧೆಗೆ ಬಿದ್ದಂತೆ-ಕೂಹೂ ಕೂಹೂ ಎಂದು ಏಳೆಂಟು ಬಾರಿ ಕೂಗಿಬಿಡುತ್ತಿತ್ತು…
ಈ ಕಾರಣದಿಂದಲೇ-‘ಕೋಗಿಲೆ, ಮಾವಿನ ಮರದಲ್ಲಿ ಮಾತ್ರ ಇರುತ್ತದೆ’ ಎಂಬುದು ನನ್ನ ಭಾವನೆಯಾಗಿತ್ತು. ಆದರೆ ಆರ್.ಎನ್.ಜೆ. ಅವರ ಹಾಡಿನಲ್ಲಿ- ಸಂಪಿಗೆ ಮರದಲ್ಲಿ ಕೋಗಿಲೆ ಇತ್ತು! ಅನುಮಾನ ಬಂತು ನೋಡಿ; ಸೀದಾ ಆರ್.ಎನ್. ಜೆ. ಬಳಿ ಹೋಗಿ ‘ಸಾರ್, ಕೋಗಿಲೆ ಮಾವಿನ ಮರದಲ್ಲಿ ಹಾಡುತ್ತೆ. ಸಂಪಿಗೆ ಮರದಲ್ಲೂ ಹಾಡುತ್ತಾ?’ ಎಂದು ಪ್ರಶ್ನೆ ಹಾಕಿದೆ.
ಆಗ ಆರ್.ಎನ್.ಜೆ. ‘ಹೌದಮ್ಮಾ, ಕೋಗಿಲೆ ಸಂಪಿಗೆ ಮರದಲ್ಲೂ ಹಾಡುತ್ತೆ. ಈಗ ನೀನು ಹಾಡು. ಮುಂದೆ ಈ ಹಾಡು ಕೂಡ ಕೋಗಿಲೆಯ ದನಿಯಂತೆಯೇ ಪ್ರಸಿದ್ಧಿ ಪಡೆಯುತ್ತದೆ’ ಅಂದರು.
ಆ ದಿನಗಳಲ್ಲಿ ಧ್ವನಿಮುದ್ರಣ ಅಂದರೆ-ಒಂದು ಹಾಡನ್ನು ಗಾಯಕರು ಮೊದಲಿಂದ ಕಡೆಯವರೆಗೂ ಹೇಳಬೇಕಿತ್ತು. ಆರ್ಕೆಸ್ಟ್ರಾದವರ ಹಿನ್ನೆಲೆ ವಾದ್ಯವೂ ಜತೆಗಿರುತ್ತಿತ್ತು. ಹೀಗೆ ಹಾಡುವಾಗ ಮಧ್ಯೆ ವಾದ್ಯದವರು ಅಥವಾ ಗಾಯಕರು ಚಿಕ್ಕದೊಂದು ತಪ್ಪು ಮಾಡಿದರೂ ಮತ್ತೆ ಮೊದಲಿಂದ ಹಾಡಲು ಶುರುಮಾಡಬೇಕಿತ್ತು. ಈ ಕಾರಣದಿಂದಲೇ ಆಗ ಬೆಳಗ್ಗೆ ೯ ರಿಂದ ಮಧ್ಯಾಹ್ನ ೧ರವರೆಗೆ ಒಂದು ಹಾಡು, ೩ ರಿಂದ ರಾತ್ರಿ ೯ರ ವರೆಗೆ ಇನ್ನೊಂದು ಹಾಡು- ಹೀಗೆ ದಿನಕ್ಕೆ ಎರಡು ಹಾಡುಗಳನ್ನು ಮಾತ್ರ ಹಾಡಿಸುತ್ತಿದ್ದರು. ಒಂದು ಹಾಡು ‘ಓ.ಕೆ. ಆಗಬೇಕಾದರೆ ಎಂಟು, ಹತ್ತು, ಹನ್ನೆರಡು ಟೇಕ್‌ಗಳೂ ಆಗುತ್ತಿದ್ದವು…
ಹಾಡುವ ಮುನ್ನ, ಎರಡೆರಡು ಬಾರಿ ಟ್ಯೂನ್ ಕೇಳಿಸಿಕೊಂಡೆ. (ವಿಜಯ ಭಾಸ್ಕರ್ ಅವರ ಸಂಗೀತದ ಇಂಪನ್ನು ವಿವರಿಸಲು ಕ್ಷಮಿಸಿ-ಪದಗಳಿಲ್ಲ.) ನಂತರ, ಆರ್.ಎನ್.ಜೆ.ಯವರ ಹಾಡನ್ನು ಮನದೊಳಗೇ ಓದಿಕೊಂಡೆ. ಪಲ್ಲವಿಯನ್ನು ಮುಗಿಸಿ, ಮೊದಲ ಚರಣಕ್ಕೆ ಬಂದೆ ನೋಡಿ, ತಕ್ಷಣವೇ ನಮ್ಮೂರು ಬಿಳಿಲುಕೊಪ್ಪ ನೆನಪಾಯಿತು. ಆಗ, ನಮ್ಮ ಮನೆಗೆ ತುಂಬ ಹತ್ತಿರದಲ್ಲೇ ಒಂದು ಮರವಿತ್ತು. ಅದಕ್ಕೆ ಹತ್ತಿರದಲ್ಲೇ ಒಂದು ಝರಿ. (ಇವು ಈಗಲೂ ಇವೆ) ಚಿಕ್ಕಂದಿನಲ್ಲಿ ನಾನು ಈ ಝರಿಯಲ್ಲಿ ಕಾಲುಗಳನ್ನು ಇಳಿಬಿಟ್ಟುಕೊಂಡು ವಾರಿಗೆಯ ಗೆಳತಿಯರೊಂದಿಗೆ ಆಟವಾಡುತ್ತಿದ್ದೆ. ಊರಿಗೆ ಹತ್ತಿರದಲ್ಲೇ ಹರಿಯುತ್ತಿದ್ದ ಚಿಕ್ಕ ನದಿಯನ್ನು ನೋಡುತ್ತಾ ಮೈಮರೆಯುತ್ತಿದ್ದೆ. ದೇವಾಲಯದಲ್ಲಿ ಪೂಜೆ ಶುರುವಾದರೆ ಸಾಕು, ಹೂಗಳೊಂದಿಗೆ ಅಲ್ಲಿಗೆ ಓಡಿ ಹೋಗುತ್ತಿದ್ದೆ. ಅಪ್ಪನ ಜತೆಯಲ್ಲಿ ನಿಂತು ಖುಷಿಯಿಂದ ನೆಗೆನೆಗೆದು ಗಂಟೆ ಹೊಡೆಯುತ್ತಿದ್ದೆ. ನಾನು ಒಂದೊಂದು ಸಾರಿ ಗಂಟೆ ಬಾರಿಸಿದಾಗಲೂ ದೇವಾಲಯದಲ್ಲಿದ್ದ ಮಂದಿ ಕಣ್ಮುಚ್ಚಿಕೊಂಡು ಧ್ಯಾನಿಸುತ್ತಿದ್ದರು. ದೇವರಿಗೆ ಕೈ ಮುಗಿಯುತ್ತಿದ್ದರು…
ಹಾಡಿನ ಸಾಲುಗಳ ಮೇಲೆ ಕಣ್ಣು ಹಾಯಿಸಿದ ತಕ್ಷಣವೇ ನನಗೆ ಇಷ್ಟೆಲ್ಲ ನೆನಪಾಗಿ ಬಿಡ್ತು. ಈ ಹಾಡು ಸಿನಿಮಾಕ್ಕಲ್ಲ, ನನಗೋಸ್ಕರ ಬರೆದಿರೋದು ಅನ್ನಿಸಿಬಿಡ್ತು. ಅದೇ ಕಾರಣದಿಂದ, ಒಂದೊಂದು ಪದವನ್ನೂ ಅನುಭವಿಸಿಕೊಂಡು ಹಾಡಿದೆ. ಹಾಡು, ಮನೆಮನೆಯ ಮಾತಾಯಿತು. ಕನ್ನಡದ ಮನೆಮನೆಯಲ್ಲೂ ನನಗೊಂದು ಜಾಗ ಕಲ್ಪಿಸಿತು… ಹೀಗೆ ಹೇಳುತ್ತ ಹೇಳುತ್ತ ಭಾವುಕರಾಗುತ್ತಾರೆ ಬಿ.ಕೆ. ಸುಮಿತ್ರಾ.
ಮುಗಿಸುವ ಮುನ್ನ ಇದನ್ನಿಷ್ಟು ಓದಿಬಿಡಿ: ಅರವತ್ತರ ದಶಕದಲ್ಲಿ ಕನ್ನಡ ಚಿತ್ರಗೀತೆಗಳು ಪ್ರಸಾರವಾಗುತ್ತಿದ್ದುದು ರೇಡಿಯೊ ಸಿಲೋನ್‌ನಲ್ಲಿ. ಆಗೆಲ್ಲ ನೋಟ್‌ಬುಕ್, ಪೆನ್ ಜತೆಗಿಟ್ಟುಕೊಂಡೇ ರೇಡಿಯೊ ಮುಂದೆ ಕೂರುತ್ತಿದ್ದರಂತೆ ಬಿ.ಕೆ. ಸುಮಿತ್ರಾ. ಹಾಡು ಶುರುವಾದ ತಕ್ಷಣ ಇವರು ಅವಸರದಲ್ಲಿಯೇ ಬರೆದುಕೊಳ್ಳಲು ಆರಂಭಿಸುತ್ತಿದ್ದರು. ಆದರೆ, ಇವರು ಮೂರು ಸಾಲು ಮುಗಿಸುವಷ್ಟರಲ್ಲಿ ಹಾಡು ಮುಗಿದಿರುತ್ತಿತ್ತಂತೆ. ಆಗ, ಮುಂದಿನ ವಾರದವರೆಗೂ ಕಾದಿದ್ದು, ಮತ್ತೆ ಅದೇ ಹಾಡು ಬಂದರೆ ಉಳಿದ ಭಾಗವನ್ನು ಬರೆದುಕೊಂಡು ಅಭ್ಯಾಸ ಮಾಡುತ್ತಿದ್ದರಂತೆ ಸುಮಿತ್ರಾ.
ಗಾನಯಾನದಲ್ಲಿ ಇಂಥ ಕಸರತ್ತು ಮಾಡಿದ್ದರಿಂದಲೇ ಕೋಗಿಲೆಯೂ ಅಸೂಯೆ ಪಡುವಂತೆ ಹಾಡಲಿಕ್ಕೆ ಸುಮಿತ್ರಾ ಅವರಿಗೆ ಸಾಧ್ಯವಾಯಿತು. ಸರಿತಾನೆ?

ಪ್ರಾರ್ಥನೆ

ಸೆಪ್ಟೆಂಬರ್ 25, 2010

kids prayer

ಬೆಂಗಳೂರಿನಲ್ಲಿ ಇರುವ ಜನಕ್ಕೆ ಕತ್ರಿಗುಪ್ಪೆ ಚೆನ್ನಾಗಿ ಗೊತ್ತು. ಕತ್ರಿಗುಪ್ಪೆ ಸಿಗ್ನಲ್‌ನಲ್ಲಿ ಇಳಿದು, ಫುಡ್‌ವರ್ಲ್ಡ್ ದಾಟಿದ್ರೆ ಸಿಗೋದೇ ಅನ್ನ ಕುಟೀರ ಹೋಟೆಲು. ಅದರ ಎದುರಿಗೆ ಬಿಗ್‌ಬಜಾರ್. ಅದೇ ರಸ್ತೇಲಿ ಮುಂದೆ ಹೋಗಿ ಮೊದಲು ಎಡಕ್ಕೆ ತಿರುಗಬೇಕು. ಹಾಗೇ ಐದು ನಿಮಿಷ ನಡೆದರೆ ಎರಡು ಸಂಪಿಗೆ ಮರಗಳು ಸಿಗುತ್ತವೆ. ಆ ಮರದ ಎದುರಿಗಿರೋದೇ ಹರೀಶ-ಭಾರತಿ ದಂಪತಿಯ ಮನೆ. ಡಬಲ್ ಬೆಡ್‌ರೂಂನ ಆ ಮನೆಗೆ ಎರಡು ಲಕ್ಷ ಅಡ್ವಾನ್ಸ್. ಎಂಟು ಸಾವಿರ ಬಾಡಿಗೆ.
ಭಾರತಿ-ಹರೀಶ್ ದಂಪತಿಗೆ ಒಂದು ಮುದ್ದಾದ ಮಗುವಿದೆ. ಅದರ ಹೆಸರು ಸ್ನೇಹಾ. ಹರೀಶನಿಗೆ ಒಂದು ಎಂಎನ್‌ಸಿಯಲ್ಲಿ ಕೆಲಸವಿದೆ. ಎಂಎನ್‌ಸಿ ಕೆಲಸ ಅಂದ ಮೇಲೆ ಹೇಳೋದೇನಿದೆ? ಆ ನೌಕರಿಯಲ್ಲಿ ಒಳ್ಳೆಯ ಸಂಬಳವೇನೋ ಇದೆ ನಿಜ. ಆದರೆ ಆ ದುಡಿಮೆಗೆ ಹೊತ್ತು-ಗೊತ್ತು ಎಂಬುದೇ ಇಲ್ಲ. ಶಿಫ್ಟ್ ಲಿಸ್ಟಿನ ಪ್ರಕಾರ ಬೆಳಗ್ಗೆ ೧೧ ರಿಂದ ಸಂಜೆ ಆರೂವರೆಯವರೆಗೂ ಕೆಲಸ ಅಂತ ಇದೆ ನಿಜ. ಆದರೆ ಹೆಚ್ಚಿನ ದಿನಗಳಲ್ಲಿ ಕೆಲಸ ಮುಗಿಯೋವಷ್ಟರಲ್ಲಿ ರಾತ್ರಿ ಎಂಟು ಗಂಟೆ ದಾಟಿರುತ್ತೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಆಫೀಸಿಂದ ಹೊರಟು ಹರೀಶ ಕತ್ರಿಗುಪ್ಪೆಯ ಮನೆ ತಲುಪಿಕೊಳ್ಳುವುದರೊಳಗೆ ರಾತ್ರಿ ಒಂಭತ್ತೂವರೆ ಆಗಿಬಿಡುತ್ತಿತ್ತು. ಶನಿವಾರ-ಭಾನುವಾರಗಳಂದು ಆಫೀಸಿನ ಗೆಳೆಯರೊಂದಿಗೆ ವೀಕೆಂಡ್ ಪಾರ್ಟಿಗೆಂದು ಆತ ಹಾರಿಬಿಡುತ್ತಿದ್ದ. ಆ ಎರಡು ದಿನಗಳಲ್ಲಿ ಆತ ಮನೆ ತಲುಪುತ್ತಿದ್ದುದು ರಾತ್ರಿ ಹನ್ನೊಂದು, ಹನ್ನೊಂದೂವರೆಗೆ!
ಬೆಳಗ್ಗೆ ಒಂಭತ್ತು ಗಂಟೆಗೆಲ್ಲ ಗಂಡ-ಮಗಳು ಮನೆಯಿಂದ ಹೊರಟುಬಿಡುತ್ತಿದ್ದರು. ಆನಂತರ ಇಡೀ ದಿನ ಮನೇಲಿ ನಾನೊಬ್ಬಳೇ ಎನ್ನಿಸಿದಾಗ ಭಾರತಿಗೆ ಬೋರ್ ಎನ್ನಿಸತೊಡಗಿತು. ಅವಳಾದರೂ ಇಂಗ್ಲಿಷಿನಲ್ಲಿ ಎಂ.ಎ. ಮಾಡಿಕೊಂಡಿದ್ದವಳು. ಇಡೀ ದಿನ ಮನೇಲಿರುವ ಬದಲು ಯಾವುದಾದರೂ ಸ್ಕೂಲ್‌ನಲ್ಲಿ ಟೀಚರ್ ಆಗಿ ಸೇರಬಾರದೇಕೆ ಅಂದುಕೊಂಡಳು. ಅವಳ ಅದೃಷ್ಟಕ್ಕೆ, ಅದೇ ವೇಳೆಗೆ ಸ್ನೇಹಾ ಓದುತ್ತಿದ್ದ ಶಾಲೆಯಲ್ಲಿ ಶಿಕ್ಷಕಿಯರ ಕೊರತೆ ಇದೆ ಎಂಬ ವಿಷಯವೂ ಗೊತ್ತಾಯಿತು. ಒಮ್ಮೆ ಪ್ರಯತ್ನಿಸಿ ನೋಡೋಣ. ಕೆಲಸ ಸಿಕ್ಕಿಬಿಟ್ಟರೆ ಹೋಗೋದು. ಇಲ್ಲವಾದರೆ, ಒಂದು ಸಂದರ್ಶನ ಎದುರಿಸಿದ ಅನುಭವವಂತೂ ಆಗುತ್ತದೆ ಎಂದುಕೊಂಡು ಅರ್ಜಿ ಹಾಕಿಯೇಬಿಟ್ಟಳು ಭಾರತಿ. ಹದಿನೈದೇ ದಿನಗಳಲ್ಲಿ ಆ ಕಡೆಯಿಂದ ಉತ್ತರ ಬಂತು : ‘ಸಹ ಶಿಕ್ಷಕಿಯಾಗಿ ನಿಮ್ಮನ್ನು ನೌಕರಿಗೆ ತೆಗೆದುಕೊಳ್ಳಲಾಗಿದೆ. ಅಭಿನಂದನೆ…’
ಹೆಂಡತಿ ಕೆಲಸಕ್ಕೆ ಹೊರಟು ನಿಂತಾಗ ಹರೀಶ ಎಗರಾಡಿದ. ತಕ್ಷಣವೇ ಭಾರತಿ ಹೇಳಿದಳು : ‘ಯೋಚನೆ ಮಾಡಿ ಹರೀ. ಬೆಳಗ್ಗಿಂದ ಸಂಜೆಯ ತನಕ ಮನೇಲಿ ನಾನೊಬ್ಳೇ ಇರಬೇಕು. ಅದರ ಬದಲು ಟೀಚರ್ ಆಗಿ ಕೆಲಸ ಮಾಡಿದ್ರೆ ತಪ್ಪೇನು? ನಾನು ಹೋಗ್ತಿರೋದು ಮಗು ಓದ್ತಾ ಇರೋ ಸ್ಕೂಲೇ ತಾನೆ? ಇದರಿಂದ ಅವಳಿಗೂ ಒಂದು ಕಂಫರ್ಟ್ ಸಿಕ್ಕ ಹಾಗಾಯ್ತು. ಇನ್ನು ಮುಂದೆ ಪ್ರತಿ ತಿಂಗಳೂ ನಾನೂ ಒಂದಿಷ್ಟು ದುಡ್ಡು ಉಳಿಸ್ತೀನಿ. ಒಂದೈದು ವರ್ಷ ನಾವಿಬ್ರೂ ಕಷ್ಟಪಟ್ಟು ಎಷ್ಟು ಸಾಧ್ಯವೋ ಅಷ್ಟು ಉಳಿಸೋಣ. ಎಲ್ಲವನ್ನೂ ಮರೆತು ದುಡಿಯೋಣ. ಹಾಗೆ ಮಾಡಿದ್ರೆ ಆರನೇ ವರ್ಷದ ಹೊತ್ತಿಗೆ ನಾವೂ ಒಂದು ಸ್ವಂತ ಮನೆ ಮಾಡ್ಕೋಬಹುದೋ ಏನೋ…
ಹೆಂಡತಿಯ ಕಡೆ ಕಡೆಯ ಮಾತುಗಳು ಹರೀಶನಿಗೆ ತುಂಬ ಇಷ್ಟವಾದವು. ತಿಂಗಳು ತಿಂಗಳೂ ನಾನೂ ಒಂದಿಷ್ಟು ದುಡ್ಡು ಉಳಿಸ್ತೀನಿ ಅಂದಳಲ್ಲ? ಅದೊಂದೇ ಕಾರಣದಿಂದ ಅವಳನ್ನು ಕೆಲಸಕ್ಕೆ ಕಳುಹಿಸಲು ಒಪ್ಪಿಕೊಂಡ.
************************
‘ಮಿಸ್ ಭಾರತೀ, ಬನ್ನಿ ಕೂತ್ಕೊಳ್ಳಿ. ನಿಮ್ಗೆ ಒಂದಿಷ್ಟು ಹೆಚ್ಚುವರಿ ಕೆಲ್ಸ ಕೊಡ್ತಾ ಇದೀನಿ. ಐದನೇ ತರಗತಿಗೆ ಕನ್ನಡ ತಗೋತಾರಲ್ಲ? ಅವರಿಗೆ ಚಿಕೂನ್‌ಗುನ್ಯಾ ಅಂತೆ. ಹಾಗಾಗಿ ಅವರು ಒಂದು ವಾರ ರಜೇಲಿದ್ದಾರೆ. ಹೇಗಿದ್ರೂ ನಿಮ್ದು ಎಂ.ಎ. ಇಂಗ್ಲಿಷ್ ತಾನೆ? ಹಾಗಾಗಿ ಒಂದು ವಾರದ ಮಟ್ಟಿಗೆ ಕನ್ನಡ ಪಾಠ ಮಾಡೋದು ನಿಮ್ಗೆ ಕಷ್ಟ ಆಗೋದಿಲ್ಲ ಅನ್ಕೋತೀನಿ. ಈಗ ಮೊದಲು ಒಂದು ಕೆಲ್ಸ ಮಾಡಿ. ಮಂತ್ಲೀ ಟೆಸ್ಟ್‌ದು ಆನ್ಸರ್ ಶೀಟ್‌ಗಳಿವೆ ಇಲ್ಲಿ. ಅದನ್ನು ಚೆಕ್ ಮಾಡಿ, ಮಾರ್ಕ್ಸ್ ಕೊಡಿ. ಈ ವಾರದ ಕೊನೆಯಲ್ಲಿ ಪೇರೆಂಟ್-ಟೀಚರ್ ಮೀಟಿಂಗ್ ಇರೋದ್ರಿಂದ ಈ ಕೆಲಸ ಅರ್ಜೆಂಟಾಗಿ ಆಗಲೇಬೇಕು. ನನಗೆ ನಿಮ್ಮ ಬಗ್ಗೆ, ನಿಮ್ಮ ಕೆಲಸದ ಬಗ್ಗೆ ನಂಬಿಕೆಯಿದೆ. ಈ ಉತ್ತರ ಪತ್ರಿಕೆಗಳನ್ನು ಮನೆಗೇ ತಗೊಂಡು ಹೋಗಿ ವ್ಯಾಲ್ಯುಯೇಷನ್ ಮಾಡ್ಕೊಂಡು ಬನ್ನಿ ಪರ್ವಾಗಿಲ್ಲ…’ ಹೆಡ್‌ಮೇಡಂ ಹೀಗೆ ಹೇಳಿದಾಗ ‘ಸರಿ ಮೇಡಂ’ ಎಂದಷ್ಟೇ ಹೇಳಿ ಸಮ್ಮತಿಸಿದಳು ಭಾರತಿ.
ಕೆಲಸಕ್ಕೆ ಸೇರಿಕೊಂಡ ನಾಲ್ಕೇ ತಿಂಗಳಲ್ಲಿ ಹೀಗೊಂದು ಹೊಸ ಜವಾಬ್ದಾರಿ ಹೆಗಲೇರಿದ್ದು ಕಂಡು ಭಾರತಿಗೆ ಖುಷಿಯಾಗಿತ್ತು. ಉತ್ತರ ಪತ್ರಿಕೆಗಳನ್ನು ಬಂಡಲ್ ಥರಾ ಕಟ್ಟಿಕೊಂಡು ಬ್ಯಾಗ್‌ನೊಳಗೆ ಇಟ್ಟುಕೊಂಡಳು. ಹೊಸದಾಗಿ ಸೇರಿದ್ದ ಕೆಲಸ ತಾನೆ? ಹಾಗಾಗಿಯೇ, ಪ್ರಶ್ನೆಗಳು ಹೇಗಿವೆ ಎಂಬುದನ್ನು ಇಲ್ಲಿಯೇ ನೋಡಿಬಿಡೋಣ ಎಂಬ ಕುತೂಹಲ ಅವಳದು. ಈ ಕಾರಣದಿಂದಲೇ ಒಮ್ಮೆ ಪ್ರಶ್ನೆ ಪತ್ರಿಕೆಯತ್ತ ಕಣ್ಣು ಹಾಯಿಸಿದಳು ಭಾರತಿ. ಅಲ್ಲಿದ್ದ ಒಂದು ಪ್ರಶ್ನೆ ಅವಳಿಗೆ ಬಹಳ ಇಷ್ಟವಾಯಿತು : ‘ದೇವರಲ್ಲಿ ನನ್ನ ಬೇಡಿಕೆ’ ಎಂಬ ವಿಷಯವಾಗಿ ಪ್ರಬಂಧ ಬರೆಯಿರಿ ಎಂಬುದೇ ಆ ಪ್ರಶ್ನೆ. ಇದಕ್ಕೆ ಉತ್ತರವಾಗಿ ಮಕ್ಕಳು ಏನೇನು ಬರೆದಿರಬಹುದೋ ನೋಡೋಣ ಎಂದುಕೊಂಡೇ ಮನೆ ತಲುಪಿದಳು ಭಾರತಿ.
ಒಂದೆರಡು ಸೀರಿಯಲ್ ನೋಡಿಕೊಂಡೇ ಅಡುಗೆ ಕೆಲಸ ಮುಗಿಸುವುದರೊಳಗೆ ಒಂಭತ್ತೂವರೆ ಆಗಿಹೋಯಿತು. ಮಗಳು ಆಗಲೇ ತೂಕಡಿಸುತ್ತಿದ್ದಳು. ಅವಳಿಗೆ ಊಟ ಮಾಡಿಸಿ ಮಲಗಿಸಿ ಉತ್ತರ ಪತ್ರಿಕೆಗಳ ಮುಂದೆ ಕೂತಳು ಭಾರತಿ. ಅದೇ ಸಂದರ್ಭಕ್ಕೆ ಹರೀಶನೂ ಬಂದ. ಅವನಿಗೆ ಸಂಕ್ಷಿಪ್ತವಾಗಿ ವಿಷಯ ತಿಳಿಸಿದಳು. ‘ಸರಿ ಬಿಡು. ನಾನೇ ಹಾಕ್ಕೊಂಡು ಊಟ ಮಾಡ್ತೇನೆ. ನೀನು ಕೆಲ್ಸ ಮುಗಿಸು’ ಎಂದ ಹರೀಶ.
ಮೊದಲ ಆರು ಉತ್ತರ ಪತ್ರಿಕೆಗಳಲ್ಲಿ ಅಂಥ ವಿಶೇಷವೇನೂ ಕಾಣಿಸಲಿಲ್ಲ. ಆದರೆ, ಏಳನೇ ಉತ್ತರ ಪತ್ರಿಕೆ ತಗೊಂಡಳಲ್ಲ, ಆ ನಂತರದಲ್ಲಿ ಅವಳು ಒಂದರ್ಥದಲ್ಲಿ ಮೈಮರೆತಳು. ಒಂದೊಂದೇ ಸಾಲು ಓದುತ್ತಾ ಹೋದಂತೆ ಅವಳ ಮುಖ ಕಳೆಗುಂದಿತು. ಕಂಗಳಲ್ಲಿ ನೀರು ತುಂಬಿಕೊಂಡಿತು. ಒಂದೆರಡು ಹನಿಗಳು ಪೈಪೋಟಿಗೆ ಬಿದ್ದಂತೆ ಕೆನ್ನೆ ಮೇಲಿಂದ ಜಾರಿ ಉತ್ತರ ಪತ್ರಿಕೆಯ ಮೇಲೆ ಬಿದ್ದು ಟಪ್ ಟಪ್ ಎಂದು ಸದ್ದು ಮಾಡಿದವು.
ಹೆಂಡತಿಯ ಈ ವರ್ತನೆಯಿಂದ ಹರೀಶ ಪೆಚ್ಚಾದ. ಸರಸರನೆ ಊಟ ಮುಗಿಸಿ, ಕೈ ತೊಳೆದು ಬಂದವನೇ- ‘ಯಾಕೇ ಭಾರ್‍ತಿ, ಏನಾಯ್ತು? ಯಾಕೆ ಅಳ್ತಾ ಇದೀಯ? ಪೇಪರ್ ನೋಡಿ ನೋಡಿ ಕಣ್ಣು ಉರಿಬಂತಾ?’ ಎಂದು ವಿಚಾರಿಸಿದ.
ಅವನ ಮಾತು ಕೇಳಿಸಲೇ ಇಲ್ಲ ಎಂಬಂತೆ- ‘ಒಂದು ಮಗು ಬರೆದಿರೋ ಪ್ರಬಂಧ ಇದು. ಓದಿ’ ಎಂದಳು ಭಾರತಿ. ಆ ಪ್ರಬಂಧದಲ್ಲಿ ಆ ಮಗುವಿನ ಮಾತು ಹೀಗಿತ್ತು : ‘ಕಾಣದ ದೇವರೇ, ನಿನಗೆ ನಮಸ್ಕಾರ. ನಾನು ನಿನ್ನಲ್ಲೊಂದು ವಿಚಿತ್ರವಾದ ಬೇಡಿಕೆ ಇಡ್ತಾ ಇದೀನಿ. ಏನ್ ಗೊತ್ತಾ? ದಯವಿಟ್ಟು ನನ್ನನ್ನು ಒಂದು ಟಿವಿಯನ್ನಾಗಿ ಮಾಡಿಬಿಡು! ಪ್ಲೀಸ್, ನಮ್ಮ ಮನೇಲಿ ಟೀವಿ ಇದೆಯಲ್ಲ? ಆ ಜಾಗದಲ್ಲಿ ನಾನಿರಬೇಕು. ನಮ್ಮ ಮನೇಲಿ ಟಿವಿಗೆ ಅಂತ ಒಂದು ಜಾಗ ಇದೆ. ಅದೇ ಥರ ನನಗೂ ಒಂದು ಜಾಗ ಕೊಡು ದೇವ್ರೇ, ಪ್ಲೀಸ್…
… ನಮ್ಮ ಮನೇಲಿರೋದು ಮೂರೇ ಜನ. ನಾನು, ಪಪ್ಪ, ಮಮ್ಮಿ… ಪಪ್ಪ ಬೆಳಗ್ಗೇನೆ ಕೆಲಸಕ್ಕೆ ಹೋಗಿಬಿಡ್ತಾರೆ. ಅಮ್ಮನೂ ಅಷ್ಟೆ. ನಾನು ಸಂಜೆ ಸ್ಕೂಲಿಂದ ಬರ್‍ತೀನಲ್ಲ? ಬಂದ ತಕ್ಷಣ- ‘ಹೋಂವರ್ಕ್ ಎಲ್ಲಾ ಮುಗಿಸೇ’ ಅಂತಾರೆ ಅಮ್ಮ. ಎಲ್ಲಾ ಮುಗಿಸಿ, ಆಸೆಯಿಂದ ಓಡಿ ಹೋಗಿ ಕುತ್ತಿಗೇಗೆ ಜೋತುಬಿದ್ರೆ ‘ಅಯ್ಯೋ, ದನ ಬಿದ್ದ ಹಾಗೆ ಮೇಲೆ ಬೀಳ್ತೀಯಲ್ಲೆ? ಅಲ್ಲೇ ನಿಂತ್ಕೊಂಡು ಮಾತಾಡು. ಯಾಕೆ ಹಾಗೆ ಮೈಮೇಲೆ ಬೀಳ್ತೀಯ. ನೀನೇನು ಎಳೇ ಮಗುವಾ?’ ಅಂತಾರೆ. ಯಾವತ್ತಾದ್ರೂ ಒಂದು ದಿನ ‘ಅಮ್ಮಾ, ಸ್ವಲ್ಪ ತಲೆ ನೋಯ್ತಿದೆ’ ಅಂದರೆ- ‘ಓದಬೇಕಾಗ್ತದೆ ಅಂತ ನಾಟಕ ಆಡ್ತಾ ಇದೀಯ’ ಅಂತ ರೇಗ್ತಾರೆ. ‘ಸ್ಕೂಲಲ್ಲಿ ನಿನಗಿಂತ ಚೆನ್ನಾಗಿ ಓದೋರು ಎಂಟು ಜನ ಇದ್ದಾರಂತೆ. ಅವರನ್ನೆಲ್ಲ ಹಿಂದೆ ಹಾಕ್ತೀಯ ನೋಡು, ಅವತ್ತು ನನ್ನ ಹತ್ರ ಬಂದು ಎಷ್ಟು ಬೇಕೋ ಅಷ್ಟು ಮಾತಾಡು, ಮುದ್ದು ಮಾಡು’ ಅಂತಾರೆ. ಯಾವಾಗಲಾದ್ರೂ ಒಂದೈದು ದಿನ ಜ್ವರ ಬಂದು ಮಲಗಿಬಿಟ್ರೆ; ಶೀತ ಆಗಿ ಕೆಮ್ಮು ಶುರುವಾದ್ರೆ- ‘ಆವಾಗವಾಗ ಏನಾದ್ರೂ ಒಂದು ಕಾಯ್ಲೆ ಇದ್ದೇ ಇರ್‍ತದಲ್ಲ ನಿಂಗೆ? ನಮ್ಗೆ ಒಳ್ಳೇ ಪ್ರಾಣ ಸಂಕಟ. ಇದೆಲ್ಲ ಯಾವ ಜನ್ಮದ ಕರ್ಮಾನೋ…’ ಅಂದು ರೇಗಿಬಿಡ್ತಾರೆ…
ಈಗ ಅಪ್ಪನ ವಿಷ್ಯಕ್ಕೆ ಬರ್‍ತೀನಿ. ಬೆಳಗ್ಗೆ ನಾನು ಪೇಸ್ಟ್ ಮಾಡಿ ಬೋರ್ನ್ ವಿಟಾ ಕುಡಿಯೋ ಹೊತ್ತಿಗೆ ಅಪ್ಪ ರೆಡಿಯಾಗಿರ್‍ತಾರೆ. ಲ್ಯಾಪ್‌ಟಾಪಲ್ಲಿ ಮುಳುಗಿಹೋಗಿರ್‍ತಾರೆ. ಅವರದು ಯಾವಾಗ್ಲೂ ಗಡಿಬಿಡೀನೆ. ಅಪ್ಪನ ಜತೆ ಆಟ ಆಡಬೇಕು, ಅವರ ಹತ್ರ ಕತೆ ಹೇಳಿಸ್ಕೋಬೇಕು. ಲೆಕ್ಕ ಹೇಳಿಸ್ಕೋಬೇಕು ಅಂತೆಲ್ಲ ತುಂಬಾ ಆಸೆ ನಂಗೆ. ಆದ್ರೆ ಅದಕ್ಕೆಲ್ಲ ಅವಕಾಶಾನೇ ಇಲ್ಲ. ಅಪ್ಪ, ಒಂದ್ಸಲಾನೂ ನನ್ನ ನೋಟ್ಸ್ ನೋಡಿಲ್ಲ. ರಾತ್ರಿ ಆಪ್ಪನ ಹತ್ರ ಹೋದ್ರೆ ಸಾಕು- ‘ನಂಗೆ ಸುಸ್ತಾಗಿದೆ. ತಲೆ ಸಿಡೀತಾ ಇದೆ. ನೀನು ಮತ್ತೆ ತಲೆ ಕೆಡಿಸಬೇಡಿ. ಏನಿದ್ರು ಅಮ್ಮಂಗೆ ಹೇಳು. ಈಗ ಮಲ್ಕೋ ಹೋಗು’ ಎಂದು ಗದರಿಸಿಬಿಡ್ತಾರೆ ಪಪ್ಪ. ಅದಕ್ಕೇ ನನ್ನನ್ನು ಟಿವಿಯನ್ನಾಗಿ ಮಾಡಿಬಿಡು, ಪ್ಲೀಸ್.
ಯಾಕೆ ಗೊತ್ತ? ಎಷ್ಟೇ ಸುಸ್ತಾಗಿದ್ರೂ, ಜ್ವರ ಬಂದಿದ್ರೂ ಕೂಡ ಅಪ್ಪ, ಮನೆಗೆ ಬಂದ ತಕ್ಷಣ ಟಿವಿ ಹಾಕ್ತಾರೆ. ಆನಂತರ ಟಿವಿ ನೋಡ್ತಾ ನೋಡ್ತಾ ತಮ್ಮಷ್ಟಕ್ಕೆ ತಾವೇ ನಗ್ತಾರೆ, ಮಾತಾಡ್ತಾರೆ. ಹಾಡು ಹೇಳ್ತಾರೆ. ಮಧ್ಯೆ ಮಧ್ಯೆ ನಮ್ಮ ಟೀವಿ ಎಷ್ಟೊಂದು ಚೆನ್ನಾಗಿ ಬರ್‍ತಿದೆ ಅಲ್ವಾ? ಅನ್ನುತ್ತಾರೆ. ಅದನ್ನು ದಿನಕ್ಕೆ ಎರಡು ಬಾರಿ ಒರೆಸ್ತಾರೆ. ಒಂದು ವೇಳೆ ಅದು ಕೆಟ್ಟು ಹೋದ್ರೆ ಐದಾರು ಜನಕ್ಕೆ ಫೋನ್ ಮಾಡಿ ತಕ್ಷಣವೇ ರಿಪೇರಿ ಮಾಡಿಸ್ತಾರೆ. ಆನಂತರ ಮತ್ತೆ ಟಿವಿ ಹಾಕ್ಕೊಂಡು ತಮ್ಮಷ್ಟಕ್ಕೆ ತಾವೇ ಮಾತಾಡ್ತಾ, ಹಾಡು ಕೇಳ್ತಾ ಉಳಿದುಬಿಡ್ತಾರೆ….
ಅಮ್ಮ ಕೂಡ ಅಷ್ಟೆ. ಪಾತ್ರೆ ತೊಳೆಯುವಾಗ, ಅಡುಗೆ ಮಾಡುವಾಗ, ಕಸ ಗುಡಿಸುವಾಗ, ಫೋನ್ ಮಾಡುವಾಗ ಕೂಡ ಅವಳ ಕಣ್ಣು ಟಿವಿ ಕಡೆಗೇ ಇರ್‍ತದೆ. ಒಂದೇ ಮಾತಲ್ಲಿ ಹೇಳಬೇಕು ಅಂದ್ರೆ- ಟೀವಿ ಜತೆ ಅಪ್ಪನಿಗಿದೆಯಲ್ಲ? ಅದಕ್ಕಿಂತ ಹೆಚ್ಚಿನ ಅಟ್ಯಾಚ್‌ಮೆಂಟ್ ಅಮ್ಮನಿಗಿದೆ!
ಅದಕ್ಕೆ ದೇವ್ರೇ, ಪ್ಲೀಸ್, ನನ್ನನ್ನು ಟಿವಿಯನ್ನಾಗಿ ಮಾಡಿಬಿಡು. ನಮ್ಮ ಅಪ್ಪ-ಅಮ್ಮ, ಇಬ್ರೂ ಸಂತೋಷ-ಬೇಸರದ ಸಂದರ್ಭದಲ್ಲೆಲ್ಲ ನನ್ನ ಮುಂದೇನೇ ಕೂತಿರ್ಬೇಕು. ನನ್ನ ಮಾತನ್ನು ಅವರು ಆಸಕ್ತಿಯಿಂದ ಕೇಳಬೇಕು. ನಾನು ಈ ಮನೆಯ ಆಸಕ್ತಿಯ ಕೇಂದ್ರಬಿಂದು ಆಗಬೇಕು. ಆಮೇಲೆ ನಮ್ಮ ಮನೆಯ ಜನ ಪ್ರಶ್ನೆ ಮಾಡದೆ, ಅಡ್ಡಿ ಮಾಡದೆ, ರೇಗದೆ ನನ್ನ ಮಾತು ಕೇಳಿಸ್ಕೋಬೇಕು. ಟಿವಿ ಕೆಟ್ಟು ಹೋದಾಗ ಅದನ್ನು ಎಷ್ಟು ಜೋಪಾನ ಮಾಡ್ತಾರೋ ಅಷ್ಟೇ ಕಾಳಜಿಯನ್ನು ನನ್ನ ವಿಷಯದಲ್ಲೂ ತಗೋಬೇಕು. ಅಮ್ಮ, ತನ್ನ ನೋವನ್ನೆಲ್ಲ ಮರೆಯೋದಕ್ಕೆ ನನ್ನನ್ನು ಉಪಯೋಗಿಸಬೇಕು. ನನ್ನ ಜತೇಲಿರೋದಕ್ಕೋಸ್ಕರ ಎಲ್ರೂ ತಮ್ಮ ಕೆಲಸ ಮರೆತು ಬರ್‍ತಾರೆ ಅಂತ ನಂಗೆ ಅನ್ನಿಸಬೇಕು. ಎಲ್ಲರೂ ನನ್ನ ಮಾತಿಂದ, ಹಾಡಿಂದ, ಆಟದಿಂದ ಖುಷಿ ಪಡಬೇಕು. ಹೌದು ದೇವ್ರೆ, ಇದಿಷ್ಟೂ ನನ್ನ ಪ್ರೀತಿಯ ಕೋರಿಕೆ. ಪ್ಲೀಸ್, ನನ್ನನ್ನು ಒಂದು ಟಿವಿಯನ್ನಾಗಿ ಮಾಡಿಬಿಡು. ನಾನಿರಬೇಕಾದ ಜಾಗದಲ್ಲಿ ಈಗ ಟಿವಿ ಇದೆ…’
***************************
ಇದಿಷ್ಟನ್ನೂ ಓದಿ ಮುಗಿಸಿದ ಹರೀಶ- ‘ಛೀ, ಈ ಮಗುವಿನ ಪೇರೆಂಟ್ಸ್ ಎಷ್ಟೊಂದು ಕ್ರೂರಿಗಳು ಅಲ್ವಾ? ಇರೋ ಒಂದು ಮಗೂನ ಸರಿಯಾಗಿ ನೋಡಿಕೊಳ್ದೇ ಇರೋರು…’ ಎಂದ.
ಭಾರತಿ, ಗಂಡನನ್ನೇ ಅನುಕಂಪದಿಂದ ನೋಡುತ್ತ ಸಂಕಟದಿಂದ ಹೇಳಿದಳು : ‘ಈ ಪ್ರಬಂಧ ಬರೆದಿರೋದು ನಮ್ಮ ಮಗಳು ಕಣ್ರೀ…’
****************************
ಕೆಲಸ, ಸಂಪಾದನೆ, ಪ್ರೊಮೋಷನ್, ಪಾರ್ಟಿ… ಇತ್ಯಾದಿ ಗದ್ದಲದಲ್ಲಿ ಮುಳುಗಿ ಹೋಗಿ ಮಕ್ಕಳನ್ನು ಸುಖ-ದುಃಖ ವಿಚಾರಿಸಲು ಮರೆತ ಎಲ್ಲ ಪೋಷಕರಿಗೆ ಪ್ರೀತಿಯಿಂದ – ಈ ಬರಹ.

ಒಂದು ಲೋಟ ಹಾಲು ಮತ್ತು…

ಫೆಬ್ರವರಿ 29, 2012

ಕೇಳಿ : ಕಥೆಗಳು ಮಕ್ಕಳನ್ನು ರಂಜಿಸುತ್ತವೆ. ಅವರಿಗೆ ಒಳ್ಳೆಯ ಬುದ್ದಿ ಕಲಿಯಲು ಪ್ರೇರೇಪಿಸುತ್ತವೆ. ಸೆಂಟಿಮೆಂಟ್ ಕಥೆಗಳು ಬದುಕಿಡೀ ನೆನಪಿರುತ್ತವೆ. ಒಂದೊಂದು ಹೃದ್ಯ ಕತೆ ಕೂಡ ಒಂದು ಕಂದ ಭವಿಷ್ಯ ಬದಲಿಸುವ ಶಕ್ತಿ ಹೊಂದಿದೆ ಎಂಬ ಮಾತು ಸುಳ್ಳಲ್ಲ. ಅಂಥ ಒಂದು ಕಥೆ ಇಲ್ಲಿದೆ. ನಿಮಗಷ್ಟೇ ಅಲ್ಲ ಮಕ್ಕಳಿಗೂ ಇಷ್ಟವಾಗುತ್ತೆ.
ಅವನು ಬಡವರ, ಅಲ್ಲಲ್ಲ ಕಡು ಬಡವರ ಮನೆಯ ಹುಡುಗ. ಹೆಸರು ಚಂದ್ರಶೇಖರ. ಆತ, ಚಿತ್ರದುರ್ಗಕ್ಕೆ ಸಮೀಪದ ಹಳ್ಳಿಯವನು. ಎಳವೆಯಲ್ಲೇ ಅಪ್ಪ ಅಮ್ಮನನ್ನು ಕಳೆದುಕೊಂಡಿದ್ದ ಅವನಿಗೆ ಓದಬೇಕೆಂಬ ಆಸೆಯೇನೋ ಇತ್ತು ಆದರೆ, ಓದಿಸುವವರು ಯಾರು? ಓದಲು ಹಣ ಕೊಡುವವರು ಯಾರು? ಆದರೂ, ಈ ಹುಡುಗ ಸುಮ್ಮನಾಗಲಿಲ್ಲ. ಮನೆ ಮನೆಗೆ ಪೇಪರ್ ಹಾಕುತ್ತ, ಅದರಿಂದ ಸಿಗುವ ಪುಡಿಗಾಸಿನಲ್ಲಿ ಓದು ಮುಂದುವರಿಸಿದ್ದ.
ಅದೊಂದು ಭಯಂಕರ ಬೇಸಿಗೆಯ ಮಧ್ಯಾಹ್ನ. ಇವನು ಮನೆ ಮನೆಯಿಂದ ತಿಂಗಳ ಬಿಲ್ ವಸೂಲಿಗೆ ಹೊರಟಿದ್ದ. ಬೆಳಗಿನಿಂದ ಏನೂ ತಿಂದಿರಲಿಲ್ಲ. ಹೊತ್ತಾದಂತೆಲ್ಲಾ ಹಸಿವಿನಿಂದ ಕಂಗಾಲಾದ. ಕಡೆಗೆ ‘ಅಮ್ಮಾ, ಒಂದಿಷ್ಟು ತಂಗಳು ಇದ್ರೆ ಕೊಡಿ. ತುಂಬಾ ಹಸಿವಾಗಿದೆ’ ಎಂದು ಕೇಳಿಯೇ ಬಿಡೋಣ ಎಂದುಕೊಂಡೇ ಒಂದು ಮನೆಯ ಬಾಗಿಲು ಬಡಿದ.
ಈ ಹುಡುಗ ನಿರೀಕ್ಷಿಸಿದ್ದು ಮಧ್ಯವಯಸ್ಕ ಹೆಂಗಸನ್ನು. ಆದರೆ, ಬಾಗಿಲು ತೆಗೆದದ್ದು ಅವನಿಗಿಂತ ೧೦-೧೨ ವರ್ಷ ದೊಡ್ಡವಳಿದ್ದ ಹುಡುಗಿ. ‘ಅಮ್ಮಾ, ಏನಾದ್ರೂ ತಂಗಳು ಇದ್ರೆ ಕೊಡಿ ಅನ್ನಬೇಕು ಅಂತಿದ್ದವನು. ಆಕೆಯಲ್ಲಿ ಹಾಗೆ ಕೇಳಲು ಸಂಕೋಚವೆನಿಸಿ, ಒಂದು ಲೋಟ ನೀರು ಕೊಡ್ತೀರ? ಅಂದುಬಿಟ್ಟ. ಒಮ್ಮೆ ಈ ಹುಡುಗನನ್ನೇ ಅಪಾದಮಸ್ತಕ ನೋಡಿದ ಆಕೆ ‘ಸರಿ’ ಎಂದು ಒಳಗೆ ಹೋದಳು. ನೀಡಿದ ಲೋಟ ಕೈಗೆತ್ತಿಕೊಂಡವಳು ತಕ್ಷಣವೇ ಯೋಚಿಸಿದಳು. ‘ಪಾಪ ಆತ ತುಂಬಾ ಹಸಿದಿರುವಂತೆ ಕಾಣುತ್ತಿದ್ದಾನೆ. ಇದು ಊಟದ ಹೊತ್ತು. ಬರೀ ನೀರು ಕೊಟ್ರೆ ಹೊಟ್ಟೆ ತುಂಬುತ್ತಾ?’ ಎರಡು ನಿಮಿಷ ಹೀಗೇ ಯೋಚಿಸಿದ ಆಕೆ ಒಂದು ದೊಡ್ಡ ಲೋಟದೊಂದಿಗೆ ಹೊರಬಂದಳು. ಅದರ ತುಂಬಾ ಹಾಲಿತ್ತು. ಹುಡುಗ ಅವಸರದಿಂದಲೇ ಅದನ್ನು ಪಡೆದ. ಸಂಕೋಚ ಬೇಡ. ಕುಡೀರಿ ಅಂದಳು ಈಕೆ. ಒಂದೊಂದು ಗುಟುಕಿಗೂ ಎರಡೆರಡು ಬಾದಾಮಿ ಸಿಗುತ್ತ ಹೋದಾಗ ಇಷ್ಟೊಂದು ಒಳ್ಳೆಯ ಹಾಲು ಕೊಟ್ಟಿದಾರಲ್ಲ, ಕುಡಿದ ಮೇಲೆ ದುಡ್ಡು ಕೊಡಿ ಅಂದ್ರೆ ಏನು ಮಾಡೋದು ಎಂದು ಯೋಚಿಸುತ್ತಲೇ ಈ ಹುಡುಗ ಹಾಲು ಕುಡಿದು ಮುಗಿಸಿದ. ನಂತರ ‘ನಾ ನಾ… ನಾನು, ಇದಕ್ಕೆ ಎಷ್ಟು ದುಡ್ಡು ಕೊಡಬೇಕು’ ಎಂದು ಕೇಳಿಬಿಟ್ಟ.
ಇದಕ್ಕೆಲ್ಲ ದುಡ್ಡು ಬೇಡ, ಕಷ್ಟದಲ್ಲಿ ಇದ್ದವರಿಂದ ಯಾವತ್ತೂ ದುಡ್ಡು ಪಡೀಬಾರ್‍ದು ಅಂತ ಅಮ್ಮ ಹೇಳಿಕೊಟ್ಟಿದ್ದಾರೆ. ಹೋಗಿ ಬನ್ನಿ ನಿಮಗೆ ಒಳ್ಳೇದಾಗ್ಲಿ, ಬಾಯ್ ಎಂದವಳೇ ಈ ಹುಡುಗಿ ಮನೆಯೊಳಗೆ ಹೋಗಿಯೇ ಬಿಟ್ಟಳು. ಅವಳ ಉದಾರ ಮನಸು ಕಂಡು ಈ ಹುಡುಗ ನಿಂತಲ್ಲೇ ಕಣ್ತುಂಬಿಕೊಂಡ.
******
೨೦ ವರ್ಷಗಳ ನಂತರ, ಏನೇನೋ ಬದಲಾವಣೆ ಆಗಿಹೋಗಿತ್ತು. ಈ ಹುಡುಗಿಗೆ ಮದುವೆಯಾಗಿ, ನಾಲ್ಕೇ ವರ್ಷಗಳಲ್ಲಿ ಗಂಡ ತೀರಿ ಹೋಗಿದ್ದ. ಅದೇ ಕೊರಗಿನಲ್ಲಿದ್ದವಳಿಗೆ ಕ್ಯಾನ್ಸರ್ ಅಮರಿಕೊಂಡಿತ್ತು. ಮೊದ ಮೊದಲು ಈಕೆಗೆ ಕಾಯಿಲೆ ಏನೆಂದೇ ಗೊತ್ತಾಗಲಿಲ್ಲ. ಗೊತ್ತಾಗುವ ವೇಳೆಗೆ ರೋಗ ಉಲ್ಬಣಿಸಿತ್ತು. ತಾಲೂಕು, ಜಿಲ್ಲಾ ಕೇಂದ್ರದ ವೈದ್ಯರು ಕೈ ಚೆಲ್ಲಿದರು. ಕಡೆಗೆ ಬೆಂಗಳೂರಿನ ವೈದ್ಯರು ಚೆನ್ನೈನ ಆಸ್ಪತ್ರೆಯೊಂದರ ವಿಳಾಸ ನೀಡಿ, ಕಾಯಿಲೆ ಕೈ ಮೀರಿ ಹೋಗಿದೆ. ತಕ್ಷಣ ಈ ಆಸ್ಪತ್ರೆಗೆ ಹೋಗಿ. ಹಾಗೆ ಮಾಡಿದರೆ ಮಾತ್ರ ಏನಾದ್ರೂ ಸಹಾಯ ಅದೀತೇನೋ ಎಂದರು. ಒಂದು ಕಾಲಕ್ಕೆ ಗೌರವಾನ್ವಿತ ಕುಟುಂಬವೊಂದರ ಮಗಳಾಗಿದ್ದವಳು ಆಕೆ. ಅಂಥವಳು, ಚಿಕ್ಕ ವಯಸ್ಸಿಗೆ ವೈಧವ್ಯಕ್ಕೆ ಒಳಗಾದಾಗ ಎಲ್ಲರೂ ದೂರವಾಗಿದ್ದರು. ಪತಿಯ ಸಾವಿನ ನಂತರ, ಬಡತನವೆಂಬುದು ಅವಳನ್ನು ಬಾಚಿ ತಬ್ಬಿಕೊಂಡಿತ್ತು. ಅಂಥ ಪರಿಸ್ಥಿತಿಯಲ್ಲಿದ್ದ ಈ ಹೆಂಗಸು ಅದು ಹೇಗೋ, ಯಾರ್‍ಯಾರ ಸಹಾಯದಿಂದಲೋ ಚೆನ್ನೈನ ಅಪೊಲೋ ಆಸ್ಪತ್ರೆ ಸೇರಿಕೊಂಡಳು.
ಅಲ್ಲಿ ಎದುರಿಗಿದ್ದ ಕಿರಿಯ ವೈದ್ಯನಿಗೆ, ಆ ಹಿರಿಯ ವೈದ್ಯರು ಹೇಳಿದರು. ನೋಡಿ ಚಂದ್ರು, ಕರ್ನಾಟಕದಿಂದ ಒಬ್ರು ಪೇಷಂಟ್ ಬಂದಿದಾರೆ. ಆಕೆಗೆ ಕ್ಯಾನ್ಸರ್ ಆಗಿದೆ. ಪೂರ್‌ಫೆಲೋ ಆಕೆ. ಆ ಕೇಸನ್ನು ನೀವೇ ಹ್ಯಾಂಡಲ್ ಮಾಡಿ… ‘ಕರ್ನಾಟಕ ಅಂದಾಕ್ಷಣ ಆ ಯುವ ವೈದ್ಯನ ಕಣ್ಣಲ್ಲಿ ಸಾವಿರ ಮಿಂಚು. ಆಕೆಗೆ ಚಿತ್ರದುರ್ಗ ಗೊತ್ತಿರಬಹುದಾ? ಟ್ರೀಟ್‌ಮೆಂಟ್ ಕೊಡುವಾಗ ಅದನ್ನೊಮ್ಮೆ ಕೇಳಿಬಿಡಬೇಕು ಎಂದುಕೊಂಡ. ತಕ್ಷಣ ಅವನಿಗೆ ತನ್ನ ಬಾಲ್ಯ, ಬಡತನ, ಒಂದು ಮಧ್ಯಾಹ್ನ ತಾನು ನೀರು ಕೇಳಿದಾಗ, ಒಂದು ದೊಡ್ಡ ಲೋಟದಲ್ಲಿ ಹಾಲು ಕೊಟ್ಟ ಆ ಹುಡುಗಿ, ಅವಳ ಮಮತೆ ಎಲ್ಲ ನೆನಪಾಯಿತು. ತಕ್ಷಣ ಆತ ಆ ರೋಗಿಯಿದ್ದ ವಾರ್ಡ್‌ಗೆ ಬಂದವನೇ, ಕ್ಷಣ ನಿಬ್ಬೆರಗಾಗಿ ನಿಂತುಬಿಟ್ಟ. ಅವನಿಗೆ ಅವಳ ಗುರುತಿಸಿತು ಸಿಕ್ಕಿಬಿಟ್ಟಿತು.
ದೇವರೇ, ಈಕೆಯನ್ನು ಉಳಿಸಲಿಕ್ಕಾಗಿ ನಿನ್ನ ಜತೆ ಯುದ್ದ ಮಾಡಲೂ ನಾನು ಸಿದ್ದ ಎಂದು ಮನದೊಳಗೇ ಉದ್ಗರಿಸಿದ ಡಾ. ಚಂದ್ರಶೇಖರ್. ನಂತರ ಆಕೆಯನ್ನು ತುರ್ತು ಚಿಕಿತ್ಸಾ ವಾರ್ಡ್‌ಗೆ ಸೇರಿಸಿದ. ಅಂದಿನಿಂದ ಹದಿನೈದು ದಿನಗಳ ಕಾಲ ತನ್ನ ಅನುಭವವನ್ನೆಲ್ಲಾ ಪಣಕ್ಕಿಟ್ಟು ಹೋರಾಡಿದ, ಇವನ ಶ್ರಮದ ಮುಂದೆ ದೇವರು ಸೋತು ಹೋದ. ಸಕಲೆಂಟು ಮಂದಿಯೂ ಬೆರಗಾಗುವ ರೀತಿಯಲ್ಲಿ ಆಕೆ ಕ್ಯಾನ್ಸರನ್ನು ಜಯಿಸಿದ್ದಳು.
ಚಿಕಿತ್ಸೆಯೆಲ್ಲಾ ಮುಗಿದು ಆಸ್ಪತ್ರೆಯಿಂದ ಡಿಸ್‌ಚಾರ್ಚ್ ಆಗುವ ದಿನ ಬಂದಾಗ ಆಕೆ ಹೆದರಿ ನಡುಗುತ್ತಿದ್ದಳು. ೧೫ ದಿನ ಐಸಿಯುನಲ್ಲಿದ್ದುದು ಆಕೆಗೆ ನೆನಪಿತ್ತು. ಆಕೆಯ ಬಳಿ ಚಿಕ್ಕಾಸೂ ಇರಲಿಲ್ಲ. ಏನೂ ಕೊಡದಿದ್ದರೆ ಆಸ್ಪತ್ರೆಯವರು ಬಿಟ್ಟಾರೆಯೇ? ಹೇಗೆಲ್ಲಾ ರೇಗುತ್ತಾರೋ ಏನೋ? ಕಾಸು ಕಟ್ಟದಿದ್ದರೆ ಜೈಲಿಗೆ ಕಳಿಸಿಬಿಟ್ಟರೆ ಗತಿ ಏನು? ಇಂಥ ಅಪಮಾನದ ಬದಲು ನಾನು ಸತ್ತು ಹೋಗಿದ್ದರೇ ಒಳ್ಳೆಯದಿತ್ತು ಅಂದುಕೊಳ್ಳುತ್ತಾ ಆಕೆ ವಾರ್ಡ್‌ನಲ್ಲಿ ಕುಳಿತಿದ್ದಳು. ಇತ್ತ ಆಕೆಯ ‘ಬಿಲ್ ಬಂತು. ಸಿಬ್ಬಂದಿಯಿಂದ ಬಿಲ್ ಪಡೆದ ಡಾ. ಚಂದ್ರಶೇಖರ್, ಅದರ ಒಂದು ಮೂಲೆಯಲ್ಲಿ ಹಸಿರು ಇಂಕ್‌ನಲ್ಲಿ ಏನೋ ಬರೆದು ಅದನ್ನು ಆಕೆಗೆ ಕಳುಹಿಸಿಕೊಟ್ಟ.
ನರ್ಸ್, ಬಿಲ್‌ನ ಕವರ್ ನೀಡಿದಾಗ ಈ ಹೆಂಗಸು ಮತ್ತೆ ಕಂಪಿಸಿದಳು. ನಡುಗುತ್ತಲೇ ಆ ಕವರ್ ಒಡೆದು ನೋಡಿದಳು. ಬಿಲ್‌ನ ಒಂದು ಬದಿಯಲ್ಲಿ ಒಂದು ಗ್ಲಾಸ್ ಹಾಲಿನ ರೂಪದಲ್ಲಿ ಆಸ್ಪತ್ರೆಯ ಚಿಕಿತ್ಸಾ ವೆಚ್ಚ ಪಾವತಿಯಾಗಿದೆ’ ಎಂದು ಬರೆದಿತ್ತು. ಈಕೆ ಶಾಕ್‌ಗೆ ಒಳಗಾದವಳಂತೆ’ ಕಣ್ತುಂಬಿಕೊಂಡು ಎದ್ದುನಿಂತಳು. ಎದುರಿಗೆ, ಅದೇ ಸ್ಥಿತಿಯಲ್ಲಿ ಡಾ. ಚಂದ್ರಶೇಖರ್ ನಿಂತಿದ್ದ.
****
ಅಂದಹಾಗೆ, ಈ ಬೇಸಿಗೆಯಲ್ಲಿ ನಿಮ್ಮ ಮಕ್ಕಳಿಗೆ ಯಾವ ಕತೆ ಹೇಳಿಕೊಟ್ಟಿರಿ?

ಒಂದು ಲೋಟ ಹಾಲು ಮತ್ತು…

ಫೆಬ್ರವರಿ 29, 2012

 

 

 

 

 

 

 

 

 

 

ಕೇಳಿ : ಕಥೆಗಳು ಮಕ್ಕಳನ್ನು ರಂಜಿಸುತ್ತವೆ. ಅವರಿಗೆ ಒಳ್ಳೆಯ ಬುದ್ದಿ ಕಲಿಯಲು ಪ್ರೇರೇಪಿಸುತ್ತವೆ. ಸೆಂಟಿಮೆಂಟ್ ಕಥೆಗಳು ಬದುಕಿಡೀ ನೆನಪಿರುತ್ತವೆ. ಒಂದೊಂದು ಹೃದ್ಯ ಕತೆ ಕೂಡ ಒಂದು ಕಂದ ಭವಿಷ್ಯ ಬದಲಿಸುವ ಶಕ್ತಿ ಹೊಂದಿದೆ ಎಂಬ ಮಾತು ಸುಳ್ಳಲ್ಲ. ಅಂಥ ಒಂದು ಕಥೆ ಇಲ್ಲಿದೆ. ನಿಮಗಷ್ಟೇ ಅಲ್ಲ ಮಕ್ಕಳಿಗೂ ಇಷ್ಟವಾಗುತ್ತೆ.

ಅವನು ಬಡವರ, ಅಲ್ಲಲ್ಲ ಕಡು ಬಡವರ ಮನೆಯ ಹುಡುಗ. ಹೆಸರು ಚಂದ್ರಶೇಖರ. ಆತ, ಚಿತ್ರದುರ್ಗಕ್ಕೆ ಸಮೀಪದ ಹಳ್ಳಿಯವನು. ಎಳವೆಯಲ್ಲೇ ಅಪ್ಪ ಅಮ್ಮನನ್ನು ಕಳೆದುಕೊಂಡಿದ್ದ ಅವನಿಗೆ ಓದಬೇಕೆಂಬ ಆಸೆಯೇನೋ ಇತ್ತು ಆದರೆ, ಓದಿಸುವವರು ಯಾರು? ಓದಲು ಹಣ ಕೊಡುವವರು ಯಾರು? ಆದರೂ, ಈ ಹುಡುಗ ಸುಮ್ಮನಾಗಲಿಲ್ಲ. ಮನೆ ಮನೆಗೆ ಪೇಪರ್ ಹಾಕುತ್ತ, ಅದರಿಂದ ಸಿಗುವ ಪುಡಿಗಾಸಿನಲ್ಲಿ ಓದು ಮುಂದುವರಿಸಿದ್ದ.

ಅದೊಂದು ಭಯಂಕರ ಬೇಸಿಗೆಯ ಮಧ್ಯಾಹ್ನ. ಇವನು ಮನೆ ಮನೆಯಿಂದ ತಿಂಗಳ ಬಿಲ್ ವಸೂಲಿಗೆ ಹೊರಟಿದ್ದ. ಬೆಳಗಿನಿಂದ ಏನೂ ತಿಂದಿರಲಿಲ್ಲ. ಹೊತ್ತಾದಂತೆಲ್ಲಾ ಹಸಿವಿನಿಂದ ಕಂಗಾಲಾದ. ಕಡೆಗೆ ‘ಅಮ್ಮಾ, ಒಂದಿಷ್ಟು ತಂಗಳು ಇದ್ರೆ ಕೊಡಿ. ತುಂಬಾ ಹಸಿವಾಗಿದೆ’ ಎಂದು ಕೇಳಿಯೇ ಬಿಡೋಣ ಎಂದುಕೊಂಡೇ ಒಂದು ಮನೆಯ ಬಾಗಿಲು ಬಡಿದ.

ಈ ಹುಡುಗ ನಿರೀಕ್ಷಿಸಿದ್ದು ಮಧ್ಯವಯಸ್ಕ ಹೆಂಗಸನ್ನು. ಆದರೆ, ಬಾಗಿಲು ತೆಗೆದದ್ದು ಅವನಿಗಿಂತ ೧೦-೧೨ ವರ್ಷ ದೊಡ್ಡವಳಿದ್ದ ಹುಡುಗಿ. ‘ಅಮ್ಮಾ, ಏನಾದ್ರೂ ತಂಗಳು ಇದ್ರೆ ಕೊಡಿ ಅನ್ನಬೇಕು ಅಂತಿದ್ದವನು. ಆಕೆಯಲ್ಲಿ ಹಾಗೆ ಕೇಳಲು ಸಂಕೋಚವೆನಿಸಿ, ಒಂದು ಲೋಟ ನೀರು ಕೊಡ್ತೀರ? ಅಂದುಬಿಟ್ಟ. ಒಮ್ಮೆ ಈ ಹುಡುಗನನ್ನೇ ಅಪಾದಮಸ್ತಕ ನೋಡಿದ ಆಕೆ ‘ಸರಿ’ ಎಂದು ಒಳಗೆ ಹೋದಳು. ನೀಡಿದ ಲೋಟ ಕೈಗೆತ್ತಿಕೊಂಡವಳು ತಕ್ಷಣವೇ ಯೋಚಿಸಿದಳು. ‘ಪಾಪ ಆತ ತುಂಬಾ ಹಸಿದಿರುವಂತೆ ಕಾಣುತ್ತಿದ್ದಾನೆ. ಇದು ಊಟದ ಹೊತ್ತು. ಬರೀ ನೀರು ಕೊಟ್ರೆ ಹೊಟ್ಟೆ ತುಂಬುತ್ತಾ?’ ಎರಡು ನಿಮಿಷ ಹೀಗೇ ಯೋಚಿಸಿದ ಆಕೆ ಒಂದು ದೊಡ್ಡ ಲೋಟದೊಂದಿಗೆ ಹೊರಬಂದಳು. ಅದರ ತುಂಬಾ ಹಾಲಿತ್ತು. ಹುಡುಗ ಅವಸರದಿಂದಲೇ ಅದನ್ನು ಪಡೆದ. ಸಂಕೋಚ ಬೇಡ. ಕುಡೀರಿ ಅಂದಳು ಈಕೆ. ಒಂದೊಂದು ಗುಟುಕಿಗೂ ಎರಡೆರಡು ಬಾದಾಮಿ ಸಿಗುತ್ತ ಹೋದಾಗ ಇಷ್ಟೊಂದು ಒಳ್ಳೆಯ ಹಾಲು ಕೊಟ್ಟಿದಾರಲ್ಲ, ಕುಡಿದ ಮೇಲೆ ದುಡ್ಡು ಕೊಡಿ ಅಂದ್ರೆ ಏನು ಮಾಡೋದು ಎಂದು ಯೋಚಿಸುತ್ತಲೇ ಈ ಹುಡುಗ ಹಾಲು ಕುಡಿದು ಮುಗಿಸಿದ. ನಂತರ ‘ನಾ ನಾ… ನಾನು, ಇದಕ್ಕೆ ಎಷ್ಟು ದುಡ್ಡು ಕೊಡಬೇಕು’ ಎಂದು ಕೇಳಿಬಿಟ್ಟ.

ಇದಕ್ಕೆಲ್ಲ ದುಡ್ಡು ಬೇಡ, ಕಷ್ಟದಲ್ಲಿ ಇದ್ದವರಿಂದ ಯಾವತ್ತೂ ದುಡ್ಡು ಪಡೀಬಾರ್‍ದು ಅಂತ ಅಮ್ಮ ಹೇಳಿಕೊಟ್ಟಿದ್ದಾರೆ. ಹೋಗಿ ಬನ್ನಿ ನಿಮಗೆ ಒಳ್ಳೇದಾಗ್ಲಿ, ಬಾಯ್ ಎಂದವಳೇ ಈ ಹುಡುಗಿ ಮನೆಯೊಳಗೆ ಹೋಗಿಯೇ ಬಿಟ್ಟಳು. ಅವಳ ಉದಾರ ಮನಸು ಕಂಡು ಈ ಹುಡುಗ ನಿಂತಲ್ಲೇ ಕಣ್ತುಂಬಿಕೊಂಡ.

******
೨೦ ವರ್ಷಗಳ ನಂತರ, ಏನೇನೋ ಬದಲಾವಣೆ ಆಗಿಹೋಗಿತ್ತು. ಈ ಹುಡುಗಿಗೆ ಮದುವೆಯಾಗಿ, ನಾಲ್ಕೇ ವರ್ಷಗಳಲ್ಲಿ ಗಂಡ ತೀರಿ ಹೋಗಿದ್ದ. ಅದೇ ಕೊರಗಿನಲ್ಲಿದ್ದವಳಿಗೆ ಕ್ಯಾನ್ಸರ್ ಅಮರಿಕೊಂಡಿತ್ತು. ಮೊದ ಮೊದಲು ಈಕೆಗೆ ಕಾಯಿಲೆ ಏನೆಂದೇ ಗೊತ್ತಾಗಲಿಲ್ಲ. ಗೊತ್ತಾಗುವ ವೇಳೆಗೆ ರೋಗ ಉಲ್ಬಣಿಸಿತ್ತು. ತಾಲೂಕು, ಜಿಲ್ಲಾ ಕೇಂದ್ರದ ವೈದ್ಯರು ಕೈ ಚೆಲ್ಲಿದರು. ಕಡೆಗೆ ಬೆಂಗಳೂರಿನ ವೈದ್ಯರು ಚೆನ್ನೈನ ಆಸ್ಪತ್ರೆಯೊಂದರ ವಿಳಾಸ ನೀಡಿ, ಕಾಯಿಲೆ ಕೈ ಮೀರಿ ಹೋಗಿದೆ. ತಕ್ಷಣ ಈ ಆಸ್ಪತ್ರೆಗೆ ಹೋಗಿ. ಹಾಗೆ ಮಾಡಿದರೆ ಮಾತ್ರ ಏನಾದ್ರೂ ಸಹಾಯ ಅದೀತೇನೋ ಎಂದರು. ಒಂದು ಕಾಲಕ್ಕೆ ಗೌರವಾನ್ವಿತ ಕುಟುಂಬವೊಂದರ ಮಗಳಾಗಿದ್ದವಳು ಆಕೆ. ಅಂಥವಳು, ಚಿಕ್ಕ ವಯಸ್ಸಿಗೆ ವೈಧವ್ಯಕ್ಕೆ ಒಳಗಾದಾಗ ಎಲ್ಲರೂ ದೂರವಾಗಿದ್ದರು. ಪತಿಯ ಸಾವಿನ ನಂತರ, ಬಡತನವೆಂಬುದು ಅವಳನ್ನು ಬಾಚಿ ತಬ್ಬಿಕೊಂಡಿತ್ತು. ಅಂಥ ಪರಿಸ್ಥಿತಿಯಲ್ಲಿದ್ದ ಈ ಹೆಂಗಸು ಅದು ಹೇಗೋ, ಯಾರ್‍ಯಾರ ಸಹಾಯದಿಂದಲೋ ಚೆನ್ನೈನ ಅಪೊಲೋ ಆಸ್ಪತ್ರೆ ಸೇರಿಕೊಂಡಳು.

ಅಲ್ಲಿ ಎದುರಿಗಿದ್ದ ಕಿರಿಯ ವೈದ್ಯನಿಗೆ, ಆ ಹಿರಿಯ ವೈದ್ಯರು ಹೇಳಿದರು. ನೋಡಿ ಚಂದ್ರು, ಕರ್ನಾಟಕದಿಂದ ಒಬ್ರು ಪೇಷಂಟ್ ಬಂದಿದಾರೆ. ಆಕೆಗೆ ಕ್ಯಾನ್ಸರ್ ಆಗಿದೆ. ಪೂರ್‌ಫೆಲೋ ಆಕೆ. ಆ ಕೇಸನ್ನು ನೀವೇ ಹ್ಯಾಂಡಲ್ ಮಾಡಿ… ‘ಕರ್ನಾಟಕ ಅಂದಾಕ್ಷಣ ಆ ಯುವ ವೈದ್ಯನ ಕಣ್ಣಲ್ಲಿ ಸಾವಿರ ಮಿಂಚು. ಆಕೆಗೆ ಚಿತ್ರದುರ್ಗ ಗೊತ್ತಿರಬಹುದಾ? ಟ್ರೀಟ್‌ಮೆಂಟ್ ಕೊಡುವಾಗ ಅದನ್ನೊಮ್ಮೆ ಕೇಳಿಬಿಡಬೇಕು ಎಂದುಕೊಂಡ. ತಕ್ಷಣ ಅವನಿಗೆ ತನ್ನ ಬಾಲ್ಯ, ಬಡತನ, ಒಂದು ಮಧ್ಯಾಹ್ನ ತಾನು ನೀರು ಕೇಳಿದಾಗ, ಒಂದು ದೊಡ್ಡ ಲೋಟದಲ್ಲಿ ಹಾಲು ಕೊಟ್ಟ ಆ ಹುಡುಗಿ, ಅವಳ ಮಮತೆ ಎಲ್ಲ ನೆನಪಾಯಿತು. ತಕ್ಷಣ ಆತ ಆ ರೋಗಿಯಿದ್ದ ವಾರ್ಡ್‌ಗೆ ಬಂದವನೇ, ಕ್ಷಣ ನಿಬ್ಬೆರಗಾಗಿ ನಿಂತುಬಿಟ್ಟ. ಅವನಿಗೆ ಅವಳ ಗುರುತಿಸಿತು ಸಿಕ್ಕಿಬಿಟ್ಟಿತು.

ದೇವರೇ, ಈಕೆಯನ್ನು ಉಳಿಸಲಿಕ್ಕಾಗಿ ನಿನ್ನ ಜತೆ ಯುದ್ದ ಮಾಡಲೂ ನಾನು ಸಿದ್ದ ಎಂದು ಮನದೊಳಗೇ ಉದ್ಗರಿಸಿದ ಡಾ. ಚಂದ್ರಶೇಖರ್. ನಂತರ ಆಕೆಯನ್ನು ತುರ್ತು ಚಿಕಿತ್ಸಾ ವಾರ್ಡ್‌ಗೆ ಸೇರಿಸಿದ. ಅಂದಿನಿಂದ ಹದಿನೈದು ದಿನಗಳ ಕಾಲ ತನ್ನ ಅನುಭವವನ್ನೆಲ್ಲಾ ಪಣಕ್ಕಿಟ್ಟು ಹೋರಾಡಿದ, ಇವನ ಶ್ರಮದ ಮುಂದೆ ದೇವರು ಸೋತು ಹೋದ. ಸಕಲೆಂಟು ಮಂದಿಯೂ ಬೆರಗಾಗುವ ರೀತಿಯಲ್ಲಿ ಆಕೆ ಕ್ಯಾನ್ಸರನ್ನು ಜಯಿಸಿದ್ದಳು.

ಚಿಕಿತ್ಸೆಯೆಲ್ಲಾ ಮುಗಿದು ಆಸ್ಪತ್ರೆಯಿಂದ ಡಿಸ್‌ಚಾರ್ಚ್ ಆಗುವ ದಿನ ಬಂದಾಗ ಆಕೆ ಹೆದರಿ ನಡುಗುತ್ತಿದ್ದಳು. ೧೫ ದಿನ ಐಸಿಯುನಲ್ಲಿದ್ದುದು ಆಕೆಗೆ ನೆನಪಿತ್ತು. ಆಕೆಯ ಬಳಿ ಚಿಕ್ಕಾಸೂ ಇರಲಿಲ್ಲ. ಏನೂ ಕೊಡದಿದ್ದರೆ ಆಸ್ಪತ್ರೆಯವರು ಬಿಟ್ಟಾರೆಯೇ? ಹೇಗೆಲ್ಲಾ ರೇಗುತ್ತಾರೋ ಏನೋ? ಕಾಸು ಕಟ್ಟದಿದ್ದರೆ ಜೈಲಿಗೆ ಕಳಿಸಿಬಿಟ್ಟರೆ ಗತಿ ಏನು? ಇಂಥ ಅಪಮಾನದ ಬದಲು ನಾನು ಸತ್ತು ಹೋಗಿದ್ದರೇ ಒಳ್ಳೆಯದಿತ್ತು ಅಂದುಕೊಳ್ಳುತ್ತಾ ಆಕೆ ವಾರ್ಡ್‌ನಲ್ಲಿ ಕುಳಿತಿದ್ದಳು. ಇತ್ತ ಆಕೆಯ ‘ಬಿಲ್ ಬಂತು. ಸಿಬ್ಬಂದಿಯಿಂದ ಬಿಲ್ ಪಡೆದ ಡಾ. ಚಂದ್ರಶೇಖರ್, ಅದರ ಒಂದು ಮೂಲೆಯಲ್ಲಿ ಹಸಿರು ಇಂಕ್‌ನಲ್ಲಿ ಏನೋ ಬರೆದು ಅದನ್ನು ಆಕೆಗೆ ಕಳುಹಿಸಿಕೊಟ್ಟ.

ನರ್ಸ್, ಬಿಲ್‌ನ ಕವರ್ ನೀಡಿದಾಗ ಈ ಹೆಂಗಸು ಮತ್ತೆ ಕಂಪಿಸಿದಳು. ನಡುಗುತ್ತಲೇ ಆ ಕವರ್ ಒಡೆದು ನೋಡಿದಳು. ಬಿಲ್‌ನ ಒಂದು ಬದಿಯಲ್ಲಿ ಒಂದು ಗ್ಲಾಸ್ ಹಾಲಿನ ರೂಪದಲ್ಲಿ ಆಸ್ಪತ್ರೆಯ ಚಿಕಿತ್ಸಾ ವೆಚ್ಚ ಪಾವತಿಯಾಗಿದೆ’ ಎಂದು ಬರೆದಿತ್ತು. ಈಕೆ ಶಾಕ್‌ಗೆ ಒಳಗಾದವಳಂತೆ’ ಕಣ್ತುಂಬಿಕೊಂಡು ಎದ್ದುನಿಂತಳು. ಎದುರಿಗೆ, ಅದೇ ಸ್ಥಿತಿಯಲ್ಲಿ ಡಾ. ಚಂದ್ರಶೇಖರ್ ನಿಂತಿದ್ದ.

****

ಅಂದಹಾಗೆ, ಈ ಬೇಸಿಗೆಯಲ್ಲಿ ನಿಮ್ಮ ಮಕ್ಕಳಿಗೆ ಯಾವ ಕತೆ ಹೇಳಿಕೊಟ್ಟಿರಿ?

ಪ್ರೇಮಗೀತೆಯೊಂದು ದಿಢೀರನೆ ಭಕ್ತಿಗೀತೆಯಾದ ಚಮತ್ಕಾರ!

ಜೂನ್ 23, 2011

ನಿನ್ನ ಸವಿನೆನಪೆ ಮನದಲ್ಲಿ…

ಚಿತ್ರ: ಅನುರಾಗ ಬಂಧನ. ಗೀತರಚನೆ: ವಿಜಯನಾರಸಿಂಹ.
ಸಂಗೀತ: ರಾಜನ್-ನಾಗೇಂದ್ರ. ಗಾಯನ: ಎಸ್. ಜಾನಕಿ.

ನಿನ್ನ ಸವಿನೆನಪೆ ಮನದಲ್ಲಿ ಆರಾಧನೆ
ಪ್ರೀತಿಯ ಸವಿಮಾತೆ ಉಪಾಸನೆ
ನಿನ್ನ ಸಂಗದಲ್ಲಿ ಅಂಗಾಂಗ ಮಿಂಚಾಯಿತು
ಶೃಂಗಾರ ರಸಧಾರೆ ಉಸಿರಾಯಿತು ||ಪ||

ಹೂ ಬಾಣ ಹೂಡಲು ಕಾಮನಬಿಲ್ಲು
ಈ ಪ್ರಾಣ ಮುಡಿಪಾಯ್ತು ನಿನ್ನ ಸೇರಲು
ಉಸಿರಾಟ ನೀನು ಬಿಸಿ ಮಿಡುಕಾಟ ನಾನು
ನಿನ್ನಲಿ ನಾ ಮರುಳಾದೆನು
ನೀನೆ ಈ ಬಾಳ ಬಾನು ||೧||

ಕಣ್ಣಲ್ಲೆ ಸನ್ನೆಯ ಸ್ವಾಗತ ನೀಡಿ
ನೀ ತಂದೆ ರಸಕಾವ್ಯ ಸವಿ ಹೊನ್ನುಡಿ
ಮನತುಂಬ ನೀನು ನಿನ್ನ ಪ್ರತಿಬಿಂಬ ನಾನು
ನಿನ್ನ ವಿನಾ ನಾ ಬಾಳೆನೂ
ಇನ್ನೂ ದಯೆ ಬಾರದೇನು
ಸ್ವಾಮಿ ಶಂಕರನೆ ಶಶಿಧರನೆ ಗಂಗಾಧರ
ಬಾಳಲಿ ಬೆಳಕಾಗು ಮಹೇಶ್ವರ
ನಮ್ಮ ಕೈಹಿಡಿದು ಕಾಪಾಡು ಕರುಣಾಕರ
ನಿನ್ನಲ್ಲಿ ಶರಣಾದೆ ಶಿವಶಂಕರ
ಶರಣು ಶಿವಶಂಕರ ಶರಣು ಅಭಯಂಕರ
ಶರಣು ಶಿವಶಂಕರ ಶರಣು ಅಭಯಂಕರ ||೨||

ಕನ್ನಡದ ಸಾರ್ವಕಾಲಿಕ ಶ್ರೇಷ್ಠ ಗೀತೆಗಳಲ್ಲಿ ‘ನಿನ್ನ ಸವಿನೆನಪೆ ಮನದಲ್ಲಿ ಆರಾಧನೆ’ ಗೀತೆಯೂ ಒಂದು. ‘ಅನುರಾಗ ಬಂಧನ’ ಚಿತ್ರದ ಈ ಹಾಡನ್ನು ಕಾನಡಾ ರಾಗದಲ್ಲಿ ಸಂಯೋಜಿಸಲಾಗಿದೆ. ಪ್ರೇಮದ ವರ್ಣನೆಯೊಂದಿಗೆ ಶುರುವಾಗಿ, ಭಕ್ತಿಯ ಪರವಶತೆಯೊಂದಿಗೆ ಮುಕ್ತಾಯವಾಗುವುದು ಈ ಹಾಡಿನ ವೈಶಿಷ್ಟ್ಯ. ವಿಜಯನಾರಸಿಂಹ ಅವರ ಸಾಹಿತ್ಯ, ರಾಜನ್-ನಾಗೇಂದ್ರ ಅವರ ಸಂಗೀತ ಮತ್ತು ಎಸ್. ಜಾನಕಿ ಅವರ ಇಂಪಿಂಪು ದನಿ- ಈ ಹಾಡನ್ನು ಸ್ಮರ ಣೀಯವಾಗಿಸಿವೆ. ೧೯೭೮ರಿಂದ ೧೯೭೯ರ ಅವಯಲ್ಲಿ ಆಕಾಶವಾಣಿಯಿಂದ ಮೆಚ್ಚಿನ ಗೀತೆಯಾಗಿ ಅತಿ ಹೆಚ್ಚು ಬಾರಿ ಪ್ರಸಾರವಾದದ್ದು ಈ ಗೀತೆಯ ಹೆಗ್ಗಳಿಕೆ.
ಗೀತಪ್ರಿಯ ನಿರ್ದೇಶನದ ‘ಅನುರಾಗ ಬಂಧನ’ ದಲ್ಲಿ ಬಸಂತ್‌ಕುಮಾರ್ ಪಾಟೀಲ್-ಆರತಿ ತಾರಾ ಜೋಡಿಯಿತ್ತು. ಜತೆಗೆ ಕಲ್ಯಾಣ್‌ಕುಮಾರ್-ಕಲ್ಪನಾ, ಆದವಾನಿ ಲಕ್ಷ್ಮೀದೇವಿ, ಸಂಪತ್, ದ್ವಾರಕೀಶ್, ನರಸಿಂಹರಾಜು, ಅಂಬರೀಷ್, ದಿನೇಶ್, ಮಂಜುಳಾ ಮುಂತಾದವರ ತಾರಾಗಣವೂ ಇತ್ತು. ಆಕಸ್ಮಿಕವಾಗಿ ಒಬ್ಬನನ್ನು ಕೊಲೆ ಮಾಡುವ ನಾಯಕ ನಂತರ ತಪ್ಪಿಗಾಗಿ ಪಶ್ಚಾತ್ತಾಪಪಟ್ಟು ಬದಲಾಗುವುದು ಹಾಗೂ ಅವನ ಸುತ್ತ ಹೆಣೆದುಕೊಳ್ಳುವ ಸಂಬಂಧಗಳ ತಾಕಲಾಟ ಈ ಚಿತ್ರದ ಕಥಾವಸ್ತು.
ಜೈಲುಪಾಲಾಗಿದ್ದ ವ್ಯಕ್ತಿ ‘ಬದಲಾಗುವ’ ಕಥಾ ಹಂದರ ಇತ್ತಲ್ಲ? ಅದೇ ಕಾರಣದಿಂದ ‘ಬದಲಾಗುವ’ ಹಾದಿಯಲ್ಲಿದ್ದ ಕೈದಿಯೊಬ್ಬನಿಂದಲೇ ಚಿತ್ರಕ್ಕೆ ಕ್ಯಾಮೆರಾ ಆನ್ ಮಾಡಿಸಿದ್ದು, ಸೆಂಟ್ರಲ್ ಜೈಲ್‌ನ ಜೈಲರ್‌ರಿಂದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿಸಿದ್ದು ಈ ಚಿತ್ರದ ಮತ್ತೊಂದು ವಿಶೇಷ. ಮುಖ್ಯಮಂತ್ರಿ ದೇವರಾಜ ಅರಸು, ಸಚಿವರಾಗಿದ್ದ ಬಂಗಾರಪ್ಪ, ಎಸ್.ಎಂ. ಯಾಹ್ಯಾ, ಪೊಲೀಸ್ ಆಯುಕ್ತ ವೀರಭದ್ರಪ್ಪ… ಹೀಗೆ ವಿಐಪಿ ಅನ್ನಿಸಿಕೊಂಡವರೆಲ್ಲ ಬಂದು ಈ ಸಿನಿಮಾ ನೋಡಿದರು, ಮೆಚ್ಚಿಕೊಂಡರು. ಚಿತ್ರದಲ್ಲಿ ಒಳ್ಳೆಯ ಸಂದೇಶವಿದೆ ಎಂಬ ಕಾರಣ ನೀಡಿ ಎಂಟು ವಾರ ಗಳವರೆಗೆ ತೆರಿಗೆ ವಿನಾಯಿತಿಯ ಸೌಲಭ್ಯವನ್ನೂ ಸರಕಾರ ನೀಡಿತು. ಅಷ್ಟೇ ಅಲ್ಲ, ಸೆಂಟ್ರಲ್ ಜೈಲ್‌ನಲ್ಲಿ ಕೈದಿಗಳಿಗಾಗಿಯೇ ವಿಶೇಷ ಪ್ರದರ್ಶನವನ್ನೂ ಏರ್ಪ ಡಿಸಲಾಗಿತ್ತು!
ಹಿಂದಿಯ ‘ದಾಗ್’ ಚಿತ್ರದಿಂದ ಸೂರ್ತಿ ಪಡೆದು ತಯಾರಾದ ಚಿತ್ರ ‘ಅನುರಾಗ ಬಂಧನ’. ಆದರೆ ಇಲ್ಲಿ ಆ ಚಿತ್ರದಿಂದ ಯಾವ ಸನ್ನಿವೇಶವನ್ನೂ ಹಾಗ್‌ಹಾಗೇ ಎತ್ತಿಕೊಳ್ಳಲಿಲ್ಲ. ಬದಲಿಗೆ, ಈ ನೆಲದ್ದೇ ಆದ ಕಥೆ ಹೆಣೆಯಲಾಯಿತು. ಅದಕ್ಕಾಗಿ ನಿರ್ದೇಶಕ ಗೀತಪ್ರಿಯ, ಗೀತರಚನೆಕಾರ ವಿಜಯನಾರಸಿಂಹ, ಹಂಚಿಕೆದಾರ ಕೆ.ವಿ. ಗುಪ್ತಾ, ನಿರ್ಮಾಪಕ ಬಸಂತ್‌ಕುಮಾರ್ ಪಾಟೀಲ್ ಚರ್ಚೆಗೆ ಕೂತರು. ಕಥೆ ಹಾಗೂ ಚಿತ್ರಕಥೆ ಸಿದ್ಧಪಡಿಸಲು ಆರು ತಿಂಗಳು ಹಿಡಿಯಿತು. ಈ ಕೆಲಸವೆಲ್ಲ ನಡೆದದ್ದು ಬಸಂತ್ ಅವರ ಮನೆ ಕಂ ನಿರ್ಮಾಣ ಕಚೇರಿಯಲ್ಲಿ.
ಹಾಡಿನ ಸಂದರ್ಭ ಹೀಗೆ: ನಾಯಕ ಕಾಲೇಜು ವಿದ್ಯಾರ್ಥಿ. ಹೀರೊನ ತಂಗಿ ಕೂಡ ವಿದ್ಯಾರ್ಥಿನಿ. ಒಬ್ಬ ಹುಡುಗ ಅವಳ ಹಿಂದೆ ಬೀಳುತ್ತಾನೆ. ಅವಳನ್ನು ರೇಗಿಸುತ್ತಾನೆ. ಬಗೆಬಗೆಯಲ್ಲಿ ಕಾಡುತ್ತಾನೆ. ತಂಗಿ ಯಿಂದ ಈ ವಿಷಯ ತಿಳಿದ ಹೀರೊ ‘ವಿಚಾರಿಸಲು ಹೋದರೆ’ ಆ ಪುಂಡು ಹುಡುಗ ಕುಸ್ತಿಗೇ ನಿಲ್ಲುತ್ತಾನೆ. ಹೀಗೆ ಅನಿರೀಕ್ಷಿತವಾಗಿ ಶುರುವಾದ ಹೊಡೆದಾಟ ಆ ಪುಂಡನ ಕೊಲೆಯಲ್ಲಿ ಮುಗಿಯುತ್ತದೆ. ನಾಯಕನಿಗೆ ಜೈಲುಶಿಕ್ಷೆಯಾಗುತ್ತದೆ.
ಮುಂದೆ, ಜೈಲಿಂದ ಬಿಡುಗಡೆಯಾಗಿ ಬರುವ ದಾರಿಯಲ್ಲಿ, ವೃದ್ಧೆಯೊಬ್ಬಳು ನೀರಲ್ಲಿ ಕೊಚ್ಚಿಹೋಗುತ್ತಿ ರುತ್ತಾಳೆ. ನಾಯಕ, ತಕ್ಷಣವೇ ನೀರಿಗೆ ಧುಮುಕಿ ಆಕೆಯನ್ನು ಕಾಪಾಡುತ್ತಾನೆ. ಕೃತಜ್ಞತೆ ಹೇಳುವ ನೆಪ ದಲ್ಲಿ ಈ ಅಜ್ಜಿ ನಾಯಕನನ್ನು ಮನೆಗೆ ಕರೆದೊ ಯ್ಯುತ್ತಾಳೆ. ಮಗಳಿಗೆ(ಅವಳೇ ಕಥಾನಾಯಕಿ) ‘ಅವನನ್ನು’ ಪರಿಚಯಿಸುತ್ತಾಳೆ. ‘ಅಮ್ಮನ’ ಜೀವ ಉಳಿಸಿದ ಎಂಬ ಕಾರಣಕ್ಕೆ ಮಗಳಿಗೆ ಇವನ ಮೇಲೆ ಮೋಹ ಉಂಟಾಗುತ್ತದೆ. ಕೆಲವೇ ದಿನಗಳಲ್ಲಿ, ಇಬ್ಬರಲ್ಲೂ ಪ್ರೀತಿ ಅರಳುತ್ತದೆ. ಅದೊಂದು ರಾತ್ರಿ, ನಾಯಕನನ್ನು, ಅವನ ಮೇಲಿರುವ ಪ್ರೀತಿಯನ್ನು ನೆನಪಿಸಿಕೊಂಡ ನಾಯಕಿ ‘ನಿನ್ನ ಸವಿನೆನಪೇ ಮನದಲ್ಲಿ ಆರಾಧನೆ’ ಎಂದು ಹಾಡಲು ಶುರುಮಾಡುತ್ತಾಳೆ. ಈ ಸಂದರ್ಭದಲ್ಲಿ ಮಲಗಿದ್ದ ತಾಯಿ, ಮಗಳ ಹಾಡು ಕೇಳಿ ಎದ್ದು ಬರುತ್ತಾಳೆ. ಅಮ್ಮನನ್ನು ಕಂಡು, ಗಾಬರಿ ಯಾಗಿ ನಾಯಕಿ, ತನ್ನ ಪ್ರೀತಿಯ ಕಥೆ ಗೊತ್ತಾಗ ದಿರಲಿ ಎಂಬ ಕಾರಣಕ್ಕೆ, ತಕ್ಷಣವೇ ದೇವರ ಫೋಟೊ ಕಡೆ ತಿರುಗಿ ಕೈಜೋಡಿಸುವ ನಾಯಕಿ- ‘ಸ್ವಾಮಿ ಶಂಕರನೆ ಶಶಿಧರನೆ ಗಂಗಾಧರ’ ಎಂದು ಹಾಡಿಬಿಡುತ್ತಾಳೆ. ಪರಿ ಣಾಮ, ಅದುವರೆಗೂ ಪ್ರೇಮಗೀತೆಯಾಗಿದ್ದ ಹಾಡು, ದಿಢೀರನೆ ಭಕ್ತಿಗೀತೆಯಾಗುತ್ತದೆ; ಮಾಯೆಯಂತೆ!
ಒಂದು ಹಾಡು ಪ್ರೇಮದಿಂದ ಭಕ್ತಿಗೆ ದಿಢೀರ್ ಬದಲಾಗುವಂಥ ‘ಚಮತ್ಕಾರ’ ಮಾಡಿದವರು ವಿಜಯನಾರಸಿಂಹ. ಚಿತ್ರಕಥೆ ಚರ್ಚೆಯ ವೇಳೆಯಲ್ಲೇ ನಾಯಕನ ಹೆಸರು ‘ಶಂಕರ’ ಎಂಬುದು ಅವರಿಗೆ ತಿಳಿದಿತ್ತು. ಈ ಹಾಡಿನ ಸಂದರ್ಭದಲ್ಲಿ ನಾಯಕಿ ಸಂತೋಷದಿಂದ ಗಾಬರಿಗೆ,ನಾಯಕ ಗಾಬರಿಯಿಂದ ಗೊಂದಲಕ್ಕೆ, ನಾಯಕಿಯ ತಾಯಿ ಭಕ್ತಿಭಾವದ ಮೋದಕ್ಕೆ ಒಳಗಾಗುವಂಥ ಸನ್ನಿವೇಶ ಸೃಷ್ಟಿಯಾಗಬೇಕು ಎಂದಿದ್ದರಂತೆ ನಿರ್ದೇಶಕ ಗೀತಪ್ರಿಯ. ಅದನ್ನೆಲ್ಲ ಮನ ದಲ್ಲಿಟ್ಟುಕೊಂಡು ಯಾವುದೋ ಧ್ಯಾನದಲ್ಲಿ ಶಾರದೆ ಯನ್ನು ಆವಾಹಿಸಿಕೊಂಡು ಹಾಡು ಬರೆದೇಬಿಟ್ಟರು ವಿಜಯನಾರಸಿಂಹ. ಮುಂದೆ ಈ ಹಾಡು, ಪ್ರೀತಿಸುವ ಎಲ್ಲ ಹುಡುಗಿಯರ ಕೊರಳ ಗೀತೆಯಾಯಿತು. ಆಟೋಗ್ರಾಫ್ ಪುಸ್ತಕಗಳ ಅಕ್ಷರವಾಯಿತು. ‘ಹುಡುಗಿ ಯರ’ ಪ್ರೀತಿಗೆ ಮುನ್ನುಡಿಯಾಯಿತು. ಕಳ್ಳಪ್ರೇಮಕ್ಕೆ ಸಾಕ್ಷಿಯೂ ಆಯಿತು!
ಪ್ರೀತಿಯಲ್ಲಿ ಮೊದಲು ಮೋಹವಿರುತ್ತದೆ. ನಂತರ ಆರಾಧನೆ ಜತೆಯಾಗುತ್ತದೆ. ಈ ಎರಡೂ ಭಾವವೂ ‘ನಿನ್ನ ಸವಿನೆನಪೇ’ ಹಾಡಲ್ಲಿದೆ. ಈ ಹಾಡಿಗೆ ಸಂಬಂಸಿದ ಎಲ್ಲ ಮಾಹಿತಿ ಕೊಟ್ಟವರು ಬಸಂತ್‌ಕುಮಾರ್ ಪಾಟೀಲ್. ಅವರಿಗೆ ಪ್ರೀತಿ, ಧನ್ಯವಾದ. ಪ್ರೀತಿಸುವ ಹುಡುಗಿಯೊಬ್ಬಳ ಅನುರಾಗವನ್ನೆಲ್ಲ ಕೊರಳಲ್ಲಿ ತುಂಬಿಕೊಂಡು ಹಾಡಿದ ಎಸ್. ಜಾನಕಿ ಅಮ್ಮನ ಸಿರಿಕಂಠಕ್ಕೆ ಒಂದು ಸವಿಮುತ್ತು. ವಿಜಯನಾರಸಿಂಹ ಅವರ ಕಾವ್ಯಶಕ್ತಿಗೆ ಸಾಷ್ಟಾಂಗ ನಮಸ್ಕಾರ!
ಅಂದಹಾಗೆ, ಈ ವಾರ ‘ಹಾಡು ಹುಟ್ಟಿದ ಸಮಯ’ಕ್ಕೆ ೧೫೦ನೇ ವಾರದ ಸಂಭ್ರಮ. ಅಂಕಣವನ್ನು ಒಪ್ಪಿಕೊಂಡ ಎಲ್ಲ ಮನಸ್ಸುಗಳಿಗೂ ಕೃತಜ್ಞತೆ.
************
ತಿಂಗಳ ಹಿಂದಿನ ಮಾತು.
ಲಹರಿ ವೇಲು ಅವರ ಕುಟುಂಬದ ಮದುವೆ ಕಾರ್ಯಕ್ರಮದಲ್ಲಿ ಆಕಸ್ಮಿಕವಾಗಿ ಬಸಂತ್ ಕುಮಾರ್ ಪಾಟೀಲ್ ಸಿಕ್ಕರು.’ಹಾಡು ಹುಟ್ಟಿದ ಸಮಯ’ ಅಂಕಣಕ್ಕೆ ನಾನು ಸ್ವಲ್ಪ ಮಾಹಿತಿ ಕೊಡ್ತೇನೆ.ನಿಮಗೆ ಉಪಯೋಗ ಆಗಬಹುದು ಅಂದರು.ಯಾವ ಹಾಡಿನ ಬಗ್ಗೆ ಸರ್ ಅಂದಿದ್ದಕ್ಕೆ- ‘ನಿನ್ನ ಸವಿನೆನಪೇ ಮನದಲ್ಲಿ ಆರಾಧನೆ…’ಅಂದರು.ಆ ಕ್ಷಣದ ಖುಷಿಯನ್ನು ಪದಗಳಲ್ಲಿ ವಿವರಿಸಲಾರೆ.ಯಾಕೆಂದರೆ,ಆ ಹಾಡಿನ ಬಗ್ಗೆ ಬರೆಯಲು ವರ್ಷದ ಹಿಂದೆಯೇ ಯೋಚಿಸಿದ್ದೆ.ಆದರೆ ಮಾಹಿತಿಯೇ ಇರಲಿಲ್ಲ.ಈಗ ಅಚಾನಕ್ಕಾಗಿ, ಹುಡುಕುತ್ತಿದ್ದ ಬಳ್ಳಿ ಕಾಲಿಗೇ ತೊಡರಿತ್ತು.ನಿಮ್ಮ ಬಿಡುವಿನ ಸಮಯ ತಿಳಿಸಿ…ನಾನು ಬಂದು ಮಾಹಿತಿ ತಗೋತೇನೆ ಅಂದೆ.’ನಾಳೆ ಬೆಳಗ್ಗೆನೇ ಬನ್ನಿ ಸ್ವಾಮಿ…ನಾನು ಫ್ರೀ ಇದ್ದೇನೆ’ ಅಂದರು ಬಸಂತ್.
ಮರುದಿನ ಬೆಳಗ್ಗೆ ಸುಮ್ಮನೆ ನೆನಪಿಸಿದರೆ…ದಯವಿಟ್ಟು ತಪ್ಪು ತಿಳ್ಕೊಬೇಡಿ…ನಾನು ಬ್ಯುಸಿ ಇವತ್ತು…ನಾಳೆ ಬನ್ನಿ ಅಂದರು.ಆ ಅನಂತರ ಸತತ ೩೦ ದಿನಗಳವರೆಗೆ ನಾವು ಭೇಟಿಗೆ ಸಮಯ ಕೇಳುವುದು,ಬಸಂತ್ ಅವರು-‘ ಅಯ್ಯೋ ಸಾರ್…ಸಾರೀ ..’.ಅನ್ನುವುದು ಮಾಮೂಲಾಯಿತು.ಈ ಮಧ್ಯೆ ಮುಂಬಯಿಯಲ್ಲಿರುವ ಚಿದಂಬರ ಕಾಕತ್ಕರ್ ಅವರೂ ನಾಲ್ಕು ಸಾಲಿನ ಮಾಹಿತಿ ಕಳಿಸಿಕೊಟ್ಟರು.ಗೆಳೆಯ ನಾಗರಾಜ್ ಕೂಡ ನೆರವಿಗೆ ಬಂದರು.ಆದರೆ ಬಸಂತ್ ಕುಮಾರ್ ಪಾಟೀಲ್ ಅವರಿಗೆ ಸಮಯ ಒದಗಿ ಬರಲೇ ಇಲ್ಲ.ಈ ಮಧ್ಯೆ ಅವರ ಪರಿಚಯದವರೊಬ್ಬರು ಹೋಗಿಬಿಟ್ಟರು.ಶೋಕದಲ್ಲಿರುವ ಬಸಂತ್ ಅವರಲ್ಲಿ ಪ್ರೇಮಗೀತೆಯ ಬಗ್ಗೆ ಮಾಹಿತಿ ಕೇಳಲು ಮನಸ್ಸು ಬರಲಿಲ್ಲ. ಕೊನೆಗೂ ಒಮ್ಮೆ ಕಾಲ ಕೂಡಿ ಬಂತು.ಪರಿಣಾಮ, ಹಾಡು ಹುಟ್ಟಿದ ಸಮಯ ಅಂಕಣದ ೧೫೦ ನೇ ಮಾಲಿಕೆಯಲ್ಲಿ ‘ನಿನ್ನ ಸವಿನೆನಪೇ ಮನದಲ್ಲಿ ಆರಾಧನೆ…’ಹಾಡಿನ ಕಥೆ ಅರಳಿಕೊಂಡಿತು.
ನಿಜ ಹೇಳಬೇಕೆಂದರೆ, ಪ್ರತಿ ಹಾಡಿನ ಮಾಹಿತಿ ಹುಡುಕಿ ಹೊರಟಾಗಲೂ ಇಂಥ ಸಂದರ್ಭಗಳು ಜೊತೆಯಾಗಿವೆ.ಈ ಅಂಕಣದಲ್ಲಿ ಬರೆದದ್ದೆಲ್ಲ ಚೆನ್ನಾಗಿದೆ ಅಂತ ನಾನಂತೂ ಭಾವಿಸಿಲ್ಲ.ಆಗೊಮ್ಮೆ ಈಗೊಮ್ಮೆ ಸಾಧಾರಣ ಅನ್ನುವಂಥ ಬರಹಗಳೂ ಬಂದುಹೋಗಿವೆ.ಆದರೂ,ಯಾರಿಗೂ ಗೊತ್ತಿಲ್ಲದ ಹಾಡುಗಳ ಕಥೆ ಕೇಳುವ/ಬರೆಯುವ ಉತ್ಸಾಹ ಮಾತ್ರ ಹೆಚ್ಚುತ್ತಲೇ ಇದೆ.ಹಾಡೆಂಬ ಜೋಗುಳಕ್ಕೆ ನಮಸ್ಕಾರ…

ಪ್ರೇಮಗೀತೆಯೊಂದು ದಿಢೀರನೆ ಭಕ್ತಿಗೀತೆಯಾದ ಚಮತ್ಕಾರ!

ಜೂನ್ 23, 2011

ನಿನ್ನ ಸವಿನೆನಪೆ ಮನದಲ್ಲಿ…

ಚಿತ್ರ: ಅನುರಾಗ ಬಂಧನ. ಗೀತರಚನೆ: ವಿಜಯನಾರಸಿಂಹ.
ಸಂಗೀತ: ರಾಜನ್-ನಾಗೇಂದ್ರ. ಗಾಯನ: ಎಸ್. ಜಾನಕಿ.

ನಿನ್ನ ಸವಿನೆನಪೆ ಮನದಲ್ಲಿ ಆರಾಧನೆ
ಪ್ರೀತಿಯ ಸವಿಮಾತೆ ಉಪಾಸನೆ
ನಿನ್ನ ಸಂಗದಲ್ಲಿ ಅಂಗಾಂಗ ಮಿಂಚಾಯಿತು
ಶೃಂಗಾರ ರಸಧಾರೆ ಉಸಿರಾಯಿತು ||ಪ||

ಹೂ ಬಾಣ ಹೂಡಲು ಕಾಮನಬಿಲ್ಲು
ಈ ಪ್ರಾಣ ಮುಡಿಪಾಯ್ತು ನಿನ್ನ ಸೇರಲು
ಉಸಿರಾಟ ನೀನು ಬಿಸಿ ಮಿಡುಕಾಟ ನಾನು
ನಿನ್ನಲಿ ನಾ ಮರುಳಾದೆನು
ನೀನೆ ಈ ಬಾಳ ಬಾನು ||೧||

ಕಣ್ಣಲ್ಲೆ ಸನ್ನೆಯ ಸ್ವಾಗತ ನೀಡಿ
ನೀ ತಂದೆ ರಸಕಾವ್ಯ ಸವಿ ಹೊನ್ನುಡಿ
ಮನತುಂಬ ನೀನು ನಿನ್ನ ಪ್ರತಿಬಿಂಬ ನಾನು
ನಿನ್ನ ವಿನಾ ನಾ ಬಾಳೆನೂ
ಇನ್ನೂ ದಯೆ ಬಾರದೇನು
ಸ್ವಾಮಿ ಶಂಕರನೆ ಶಶಿಧರನೆ ಗಂಗಾಧರ
ಬಾಳಲಿ ಬೆಳಕಾಗು ಮಹೇಶ್ವರ
ನಮ್ಮ ಕೈಹಿಡಿದು ಕಾಪಾಡು ಕರುಣಾಕರ
ನಿನ್ನಲ್ಲಿ ಶರಣಾದೆ ಶಿವಶಂಕರ
ಶರಣು ಶಿವಶಂಕರ ಶರಣು ಅಭಯಂಕರ
ಶರಣು ಶಿವಶಂಕರ ಶರಣು ಅಭಯಂಕರ ||೨||

ಕನ್ನಡದ ಸಾರ್ವಕಾಲಿಕ ಶ್ರೇಷ್ಠ ಗೀತೆಗಳಲ್ಲಿ ‘ನಿನ್ನ ಸವಿನೆನಪೆ ಮನದಲ್ಲಿ ಆರಾಧನೆ’ ಗೀತೆಯೂ ಒಂದು. ‘ಅನುರಾಗ ಬಂಧನ’ ಚಿತ್ರದ ಈ ಹಾಡನ್ನು ಕಾನಡಾ ರಾಗದಲ್ಲಿ ಸಂಯೋಜಿಸಲಾಗಿದೆ. ಪ್ರೇಮದ ವರ್ಣನೆಯೊಂದಿಗೆ ಶುರುವಾಗಿ, ಭಕ್ತಿಯ ಪರವಶತೆಯೊಂದಿಗೆ ಮುಕ್ತಾಯವಾಗುವುದು ಈ ಹಾಡಿನ ವೈಶಿಷ್ಟ್ಯ. ವಿಜಯನಾರಸಿಂಹ ಅವರ ಸಾಹಿತ್ಯ, ರಾಜನ್-ನಾಗೇಂದ್ರ ಅವರ ಸಂಗೀತ ಮತ್ತು ಎಸ್. ಜಾನಕಿ ಅವರ ಇಂಪಿಂಪು ದನಿ- ಈ ಹಾಡನ್ನು ಸ್ಮರ ಣೀಯವಾಗಿಸಿವೆ. ೧೯೭೮ರಿಂದ ೧೯೭೯ರ ಅವಯಲ್ಲಿ ಆಕಾಶವಾಣಿಯಿಂದ ಮೆಚ್ಚಿನ ಗೀತೆಯಾಗಿ ಅತಿ ಹೆಚ್ಚು ಬಾರಿ ಪ್ರಸಾರವಾದದ್ದು ಈ ಗೀತೆಯ ಹೆಗ್ಗಳಿಕೆ.
ಗೀತಪ್ರಿಯ ನಿರ್ದೇಶನದ ‘ಅನುರಾಗ ಬಂಧನ’ ದಲ್ಲಿ ಬಸಂತ್‌ಕುಮಾರ್ ಪಾಟೀಲ್-ಆರತಿ ತಾರಾ ಜೋಡಿಯಿತ್ತು. ಜತೆಗೆ ಕಲ್ಯಾಣ್‌ಕುಮಾರ್-ಕಲ್ಪನಾ, ಆದವಾನಿ ಲಕ್ಷ್ಮೀದೇವಿ, ಸಂಪತ್, ದ್ವಾರಕೀಶ್, ನರಸಿಂಹರಾಜು, ಅಂಬರೀಷ್, ದಿನೇಶ್, ಮಂಜುಳಾ ಮುಂತಾದವರ ತಾರಾಗಣವೂ ಇತ್ತು. ಆಕಸ್ಮಿಕವಾಗಿ ಒಬ್ಬನನ್ನು ಕೊಲೆ ಮಾಡುವ ನಾಯಕ ನಂತರ ತಪ್ಪಿಗಾಗಿ ಪಶ್ಚಾತ್ತಾಪಪಟ್ಟು ಬದಲಾಗುವುದು ಹಾಗೂ ಅವನ ಸುತ್ತ ಹೆಣೆದುಕೊಳ್ಳುವ ಸಂಬಂಧಗಳ ತಾಕಲಾಟ ಈ ಚಿತ್ರದ ಕಥಾವಸ್ತು.
ಜೈಲುಪಾಲಾಗಿದ್ದ ವ್ಯಕ್ತಿ ‘ಬದಲಾಗುವ’ ಕಥಾ ಹಂದರ ಇತ್ತಲ್ಲ? ಅದೇ ಕಾರಣದಿಂದ ‘ಬದಲಾಗುವ’ ಹಾದಿಯಲ್ಲಿದ್ದ ಕೈದಿಯೊಬ್ಬನಿಂದಲೇ ಚಿತ್ರಕ್ಕೆ ಕ್ಯಾಮೆರಾ ಆನ್ ಮಾಡಿಸಿದ್ದು, ಸೆಂಟ್ರಲ್ ಜೈಲ್‌ನ ಜೈಲರ್‌ರಿಂದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿಸಿದ್ದು ಈ ಚಿತ್ರದ ಮತ್ತೊಂದು ವಿಶೇಷ. ಮುಖ್ಯಮಂತ್ರಿ ದೇವರಾಜ ಅರಸು, ಸಚಿವರಾಗಿದ್ದ ಬಂಗಾರಪ್ಪ, ಎಸ್.ಎಂ. ಯಾಹ್ಯಾ, ಪೊಲೀಸ್ ಆಯುಕ್ತ ವೀರಭದ್ರಪ್ಪ… ಹೀಗೆ ವಿಐಪಿ ಅನ್ನಿಸಿಕೊಂಡವರೆಲ್ಲ ಬಂದು ಈ ಸಿನಿಮಾ ನೋಡಿದರು, ಮೆಚ್ಚಿಕೊಂಡರು. ಚಿತ್ರದಲ್ಲಿ ಒಳ್ಳೆಯ ಸಂದೇಶವಿದೆ ಎಂಬ ಕಾರಣ ನೀಡಿ ಎಂಟು ವಾರ ಗಳವರೆಗೆ ತೆರಿಗೆ ವಿನಾಯಿತಿಯ ಸೌಲಭ್ಯವನ್ನೂ ಸರಕಾರ ನೀಡಿತು. ಅಷ್ಟೇ ಅಲ್ಲ, ಸೆಂಟ್ರಲ್ ಜೈಲ್‌ನಲ್ಲಿ ಕೈದಿಗಳಿಗಾಗಿಯೇ ವಿಶೇಷ ಪ್ರದರ್ಶನವನ್ನೂ ಏರ್ಪ ಡಿಸಲಾಗಿತ್ತು!
ಹಿಂದಿಯ ‘ದಾಗ್’ ಚಿತ್ರದಿಂದ ಸೂರ್ತಿ ಪಡೆದು ತಯಾರಾದ ಚಿತ್ರ ‘ಅನುರಾಗ ಬಂಧನ’. ಆದರೆ ಇಲ್ಲಿ ಆ ಚಿತ್ರದಿಂದ ಯಾವ ಸನ್ನಿವೇಶವನ್ನೂ ಹಾಗ್‌ಹಾಗೇ ಎತ್ತಿಕೊಳ್ಳಲಿಲ್ಲ. ಬದಲಿಗೆ, ಈ ನೆಲದ್ದೇ ಆದ ಕಥೆ ಹೆಣೆಯಲಾಯಿತು. ಅದಕ್ಕಾಗಿ ನಿರ್ದೇಶಕ ಗೀತಪ್ರಿಯ, ಗೀತರಚನೆಕಾರ ವಿಜಯನಾರಸಿಂಹ, ಹಂಚಿಕೆದಾರ ಕೆ.ವಿ. ಗುಪ್ತಾ, ನಿರ್ಮಾಪಕ ಬಸಂತ್‌ಕುಮಾರ್ ಪಾಟೀಲ್ ಚರ್ಚೆಗೆ ಕೂತರು. ಕಥೆ ಹಾಗೂ ಚಿತ್ರಕಥೆ ಸಿದ್ಧಪಡಿಸಲು ಆರು ತಿಂಗಳು ಹಿಡಿಯಿತು. ಈ ಕೆಲಸವೆಲ್ಲ ನಡೆದದ್ದು ಬಸಂತ್ ಅವರ ಮನೆ ಕಂ ನಿರ್ಮಾಣ ಕಚೇರಿಯಲ್ಲಿ.
ಹಾಡಿನ ಸಂದರ್ಭ ಹೀಗೆ: ನಾಯಕ ಕಾಲೇಜು ವಿದ್ಯಾರ್ಥಿ. ಹೀರೊನ ತಂಗಿ ಕೂಡ ವಿದ್ಯಾರ್ಥಿನಿ. ಒಬ್ಬ ಹುಡುಗ ಅವಳ ಹಿಂದೆ ಬೀಳುತ್ತಾನೆ. ಅವಳನ್ನು ರೇಗಿಸುತ್ತಾನೆ. ಬಗೆಬಗೆಯಲ್ಲಿ ಕಾಡುತ್ತಾನೆ. ತಂಗಿ ಯಿಂದ ಈ ವಿಷಯ ತಿಳಿದ ಹೀರೊ ‘ವಿಚಾರಿಸಲು ಹೋದರೆ’ ಆ ಪುಂಡು ಹುಡುಗ ಕುಸ್ತಿಗೇ ನಿಲ್ಲುತ್ತಾನೆ. ಹೀಗೆ ಅನಿರೀಕ್ಷಿತವಾಗಿ ಶುರುವಾದ ಹೊಡೆದಾಟ ಆ ಪುಂಡನ ಕೊಲೆಯಲ್ಲಿ ಮುಗಿಯುತ್ತದೆ. ನಾಯಕನಿಗೆ ಜೈಲುಶಿಕ್ಷೆಯಾಗುತ್ತದೆ.
ಮುಂದೆ, ಜೈಲಿಂದ ಬಿಡುಗಡೆಯಾಗಿ ಬರುವ ದಾರಿಯಲ್ಲಿ, ವೃದ್ಧೆಯೊಬ್ಬಳು ನೀರಲ್ಲಿ ಕೊಚ್ಚಿಹೋಗುತ್ತಿ ರುತ್ತಾಳೆ. ನಾಯಕ, ತಕ್ಷಣವೇ ನೀರಿಗೆ ಧುಮುಕಿ ಆಕೆಯನ್ನು ಕಾಪಾಡುತ್ತಾನೆ. ಕೃತಜ್ಞತೆ ಹೇಳುವ ನೆಪ ದಲ್ಲಿ ಈ ಅಜ್ಜಿ ನಾಯಕನನ್ನು ಮನೆಗೆ ಕರೆದೊ ಯ್ಯುತ್ತಾಳೆ. ಮಗಳಿಗೆ(ಅವಳೇ ಕಥಾನಾಯಕಿ) ‘ಅವನನ್ನು’ ಪರಿಚಯಿಸುತ್ತಾಳೆ. ‘ಅಮ್ಮನ’ ಜೀವ ಉಳಿಸಿದ ಎಂಬ ಕಾರಣಕ್ಕೆ ಮಗಳಿಗೆ ಇವನ ಮೇಲೆ ಮೋಹ ಉಂಟಾಗುತ್ತದೆ. ಕೆಲವೇ ದಿನಗಳಲ್ಲಿ, ಇಬ್ಬರಲ್ಲೂ ಪ್ರೀತಿ ಅರಳುತ್ತದೆ. ಅದೊಂದು ರಾತ್ರಿ, ನಾಯಕನನ್ನು, ಅವನ ಮೇಲಿರುವ ಪ್ರೀತಿಯನ್ನು ನೆನಪಿಸಿಕೊಂಡ ನಾಯಕಿ ‘ನಿನ್ನ ಸವಿನೆನಪೇ ಮನದಲ್ಲಿ ಆರಾಧನೆ’ ಎಂದು ಹಾಡಲು ಶುರುಮಾಡುತ್ತಾಳೆ. ಈ ಸಂದರ್ಭದಲ್ಲಿ ಮಲಗಿದ್ದ ತಾಯಿ, ಮಗಳ ಹಾಡು ಕೇಳಿ ಎದ್ದು ಬರುತ್ತಾಳೆ. ಅಮ್ಮನನ್ನು ಕಂಡು, ಗಾಬರಿ ಯಾಗಿ ನಾಯಕಿ, ತನ್ನ ಪ್ರೀತಿಯ ಕಥೆ ಗೊತ್ತಾಗ ದಿರಲಿ ಎಂಬ ಕಾರಣಕ್ಕೆ, ತಕ್ಷಣವೇ ದೇವರ ಫೋಟೊ ಕಡೆ ತಿರುಗಿ ಕೈಜೋಡಿಸುವ ನಾಯಕಿ- ‘ಸ್ವಾಮಿ ಶಂಕರನೆ ಶಶಿಧರನೆ ಗಂಗಾಧರ’ ಎಂದು ಹಾಡಿಬಿಡುತ್ತಾಳೆ. ಪರಿ ಣಾಮ, ಅದುವರೆಗೂ ಪ್ರೇಮಗೀತೆಯಾಗಿದ್ದ ಹಾಡು, ದಿಢೀರನೆ ಭಕ್ತಿಗೀತೆಯಾಗುತ್ತದೆ; ಮಾಯೆಯಂತೆ!
ಒಂದು ಹಾಡು ಪ್ರೇಮದಿಂದ ಭಕ್ತಿಗೆ ದಿಢೀರ್ ಬದಲಾಗುವಂಥ ‘ಚಮತ್ಕಾರ’ ಮಾಡಿದವರು ವಿಜಯನಾರಸಿಂಹ. ಚಿತ್ರಕಥೆ ಚರ್ಚೆಯ ವೇಳೆಯಲ್ಲೇ ನಾಯಕನ ಹೆಸರು ‘ಶಂಕರ’ ಎಂಬುದು ಅವರಿಗೆ ತಿಳಿದಿತ್ತು. ಈ ಹಾಡಿನ ಸಂದರ್ಭದಲ್ಲಿ ನಾಯಕಿ ಸಂತೋಷದಿಂದ ಗಾಬರಿಗೆ,ನಾಯಕ ಗಾಬರಿಯಿಂದ ಗೊಂದಲಕ್ಕೆ, ನಾಯಕಿಯ ತಾಯಿ ಭಕ್ತಿಭಾವದ ಮೋದಕ್ಕೆ ಒಳಗಾಗುವಂಥ ಸನ್ನಿವೇಶ ಸೃಷ್ಟಿಯಾಗಬೇಕು ಎಂದಿದ್ದರಂತೆ ನಿರ್ದೇಶಕ ಗೀತಪ್ರಿಯ. ಅದನ್ನೆಲ್ಲ ಮನ ದಲ್ಲಿಟ್ಟುಕೊಂಡು ಯಾವುದೋ ಧ್ಯಾನದಲ್ಲಿ ಶಾರದೆ ಯನ್ನು ಆವಾಹಿಸಿಕೊಂಡು ಹಾಡು ಬರೆದೇಬಿಟ್ಟರು ವಿಜಯನಾರಸಿಂಹ. ಮುಂದೆ ಈ ಹಾಡು, ಪ್ರೀತಿಸುವ ಎಲ್ಲ ಹುಡುಗಿಯರ ಕೊರಳ ಗೀತೆಯಾಯಿತು. ಆಟೋಗ್ರಾಫ್ ಪುಸ್ತಕಗಳ ಅಕ್ಷರವಾಯಿತು. ‘ಹುಡುಗಿ ಯರ’ ಪ್ರೀತಿಗೆ ಮುನ್ನುಡಿಯಾಯಿತು. ಕಳ್ಳಪ್ರೇಮಕ್ಕೆ ಸಾಕ್ಷಿಯೂ ಆಯಿತು!
ಪ್ರೀತಿಯಲ್ಲಿ ಮೊದಲು ಮೋಹವಿರುತ್ತದೆ. ನಂತರ ಆರಾಧನೆ ಜತೆಯಾಗುತ್ತದೆ. ಈ ಎರಡೂ ಭಾವವೂ ‘ನಿನ್ನ ಸವಿನೆನಪೇ’ ಹಾಡಲ್ಲಿದೆ. ಈ ಹಾಡಿಗೆ ಸಂಬಂಸಿದ ಎಲ್ಲ ಮಾಹಿತಿ ಕೊಟ್ಟವರು ಬಸಂತ್‌ಕುಮಾರ್ ಪಾಟೀಲ್. ಅವರಿಗೆ ಪ್ರೀತಿ, ಧನ್ಯವಾದ. ಪ್ರೀತಿಸುವ ಹುಡುಗಿಯೊಬ್ಬಳ ಅನುರಾಗವನ್ನೆಲ್ಲ ಕೊರಳಲ್ಲಿ ತುಂಬಿಕೊಂಡು ಹಾಡಿದ ಎಸ್. ಜಾನಕಿ ಅಮ್ಮನ ಸಿರಿಕಂಠಕ್ಕೆ ಒಂದು ಸವಿಮುತ್ತು. ವಿಜಯನಾರಸಿಂಹ ಅವರ ಕಾವ್ಯಶಕ್ತಿಗೆ ಸಾಷ್ಟಾಂಗ ನಮಸ್ಕಾರ!
ಅಂದಹಾಗೆ, ಈ ವಾರ ‘ಹಾಡು ಹುಟ್ಟಿದ ಸಮಯ’ಕ್ಕೆ ೧೫೦ನೇ ವಾರದ ಸಂಭ್ರಮ. ಅಂಕಣವನ್ನು ಒಪ್ಪಿಕೊಂಡ ಎಲ್ಲ ಮನಸ್ಸುಗಳಿಗೂ ಕೃತಜ್ಞತೆ.
************
ತಿಂಗಳ ಹಿಂದಿನ ಮಾತು.
ಲಹರಿ ವೇಲು ಅವರ ಕುಟುಂಬದ ಮದುವೆ ಕಾರ್ಯಕ್ರಮದಲ್ಲಿ ಆಕಸ್ಮಿಕವಾಗಿ ಬಸಂತ್ ಕುಮಾರ್ ಪಾಟೀಲ್ ಸಿಕ್ಕರು.’ಹಾಡು ಹುಟ್ಟಿದ ಸಮಯ’ ಅಂಕಣಕ್ಕೆ ನಾನು ಸ್ವಲ್ಪ ಮಾಹಿತಿ ಕೊಡ್ತೇನೆ.ನಿಮಗೆ ಉಪಯೋಗ ಆಗಬಹುದು ಅಂದರು.ಯಾವ ಹಾಡಿನ ಬಗ್ಗೆ ಸರ್ ಅಂದಿದ್ದಕ್ಕೆ- ‘ನಿನ್ನ ಸವಿನೆನಪೇ ಮನದಲ್ಲಿ ಆರಾಧನೆ…’ಅಂದರು.ಆ ಕ್ಷಣದ ಖುಷಿಯನ್ನು ಪದಗಳಲ್ಲಿ ವಿವರಿಸಲಾರೆ.ಯಾಕೆಂದರೆ,ಆ ಹಾಡಿನ ಬಗ್ಗೆ ಬರೆಯಲು ವರ್ಷದ ಹಿಂದೆಯೇ ಯೋಚಿಸಿದ್ದೆ.ಆದರೆ ಮಾಹಿತಿಯೇ ಇರಲಿಲ್ಲ.ಈಗ ಅಚಾನಕ್ಕಾಗಿ, ಹುಡುಕುತ್ತಿದ್ದ ಬಳ್ಳಿ ಕಾಲಿಗೇ ತೊಡರಿತ್ತು.ನಿಮ್ಮ ಬಿಡುವಿನ ಸಮಯ ತಿಳಿಸಿ…ನಾನು ಬಂದು ಮಾಹಿತಿ ತಗೋತೇನೆ ಅಂದೆ.’ನಾಳೆ ಬೆಳಗ್ಗೆನೇ ಬನ್ನಿ ಸ್ವಾಮಿ…ನಾನು ಫ್ರೀ ಇದ್ದೇನೆ’ ಅಂದರು ಬಸಂತ್.
ಮರುದಿನ ಬೆಳಗ್ಗೆ ಸುಮ್ಮನೆ ನೆನಪಿಸಿದರೆ…ದಯವಿಟ್ಟು ತಪ್ಪು ತಿಳ್ಕೊಬೇಡಿ…ನಾನು ಬ್ಯುಸಿ ಇವತ್ತು…ನಾಳೆ ಬನ್ನಿ ಅಂದರು.ಆ ಅನಂತರ ಸತತ ೩೦ ದಿನಗಳವರೆಗೆ ನಾವು ಭೇಟಿಗೆ ಸಮಯ ಕೇಳುವುದು,ಬಸಂತ್ ಅವರು-‘ ಅಯ್ಯೋ ಸಾರ್…ಸಾರೀ ..’.ಅನ್ನುವುದು ಮಾಮೂಲಾಯಿತು.ಈ ಮಧ್ಯೆ ಮುಂಬಯಿಯಲ್ಲಿರುವ ಚಿದಂಬರ ಕಾಕತ್ಕರ್ ಅವರೂ ನಾಲ್ಕು ಸಾಲಿನ ಮಾಹಿತಿ ಕಳಿಸಿಕೊಟ್ಟರು.ಗೆಳೆಯ ನಾಗರಾಜ್ ಕೂಡ ನೆರವಿಗೆ ಬಂದರು.ಆದರೆ ಬಸಂತ್ ಕುಮಾರ್ ಪಾಟೀಲ್ ಅವರಿಗೆ ಸಮಯ ಒದಗಿ ಬರಲೇ ಇಲ್ಲ.ಈ ಮಧ್ಯೆ ಅವರ ಪರಿಚಯದವರೊಬ್ಬರು ಹೋಗಿಬಿಟ್ಟರು.ಶೋಕದಲ್ಲಿರುವ ಬಸಂತ್ ಅವರಲ್ಲಿ ಪ್ರೇಮಗೀತೆಯ ಬಗ್ಗೆ ಮಾಹಿತಿ ಕೇಳಲು ಮನಸ್ಸು ಬರಲಿಲ್ಲ. ಕೊನೆಗೂ ಒಮ್ಮೆ ಕಾಲ ಕೂಡಿ ಬಂತು.ಪರಿಣಾಮ, ಹಾಡು ಹುಟ್ಟಿದ ಸಮಯ ಅಂಕಣದ ೧೫೦ ನೇ ಮಾಲಿಕೆಯಲ್ಲಿ ‘ನಿನ್ನ ಸವಿನೆನಪೇ ಮನದಲ್ಲಿ ಆರಾಧನೆ…’ಹಾಡಿನ ಕಥೆ ಅರಳಿಕೊಂಡಿತು.
ನಿಜ ಹೇಳಬೇಕೆಂದರೆ, ಪ್ರತಿ ಹಾಡಿನ ಮಾಹಿತಿ ಹುಡುಕಿ ಹೊರಟಾಗಲೂ ಇಂಥ ಸಂದರ್ಭಗಳು ಜೊತೆಯಾಗಿವೆ.ಈ ಅಂಕಣದಲ್ಲಿ ಬರೆದದ್ದೆಲ್ಲ ಚೆನ್ನಾಗಿದೆ ಅಂತ ನಾನಂತೂ ಭಾವಿಸಿಲ್ಲ.ಆಗೊಮ್ಮೆ ಈಗೊಮ್ಮೆ ಸಾಧಾರಣ ಅನ್ನುವಂಥ ಬರಹಗಳೂ ಬಂದುಹೋಗಿವೆ.ಆದರೂ,ಯಾರಿಗೂ ಗೊತ್ತಿಲ್ಲದ ಹಾಡುಗಳ ಕಥೆ ಕೇಳುವ/ಬರೆಯುವ ಉತ್ಸಾಹ ಮಾತ್ರ ಹೆಚ್ಚುತ್ತಲೇ ಇದೆ.ಹಾಡೆಂಬ ಜೋಗುಳಕ್ಕೆ ನಮಸ್ಕಾರ…

ಅಪರಾತ್ರಿಯಲ್ಲೂ ಈ ಹಾಡು ಕೇಳುತ್ತ ಕೂತಿದ್ದರಂತೆ ಎಸ್ಪಿಬಿ

ಫೆಬ್ರವರಿ 17, 2011

ಪ್ರೀತಿಯ ಕನಸೆಲ್ಲಾ ಕರಗಿ ಹೋಯಿತೆ…

ಚಿತ್ರ: ಏನೇ ಬರಲಿ ಪ್ರೀತಿ ಇರಲಿ. ಗೀತೆ ರಚನೆ: ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ.
ಸಂಗೀತ: ಅಶ್ವತ್ಥ್ -ವೈದಿ. ಗಾಯನ: ಎಸ್.ಪಿ. ಬಾಲಸುಬ್ರಹ್ಮಣ್ಯಂ.

ಪ್ರೀತಿಯ ಕನಸೆಲ್ಲಾ ಕರಗಿ ಹೋಯಿತೆ ಕೊನೆಗೂ
ಸೋತು ಹೋಯಿತೆ ಜೀವ
ಮೂಕವಾಯಿತೆ ಭಾವ
ತೂಕ ತಪ್ಪಿತೆ ಬದುಕಿಗೆ ||ಪ||

ಗಾಳಿಯ ಅಲೆಯಲ್ಲಿ ನೀ ನಕ್ಕ ದನಿಯಿದೆ
ನೀರಿನ ತೆರೆಯಲ್ಲಿ ಸರಿದಂಥ ನೆನಪಿದೆ
ಮನಸೆಲ್ಲ ಹೊಯ್ದಾಡಿದೆ ||೧||

ಜೊತೆಯಾಗಿ ಬಾಳಿದ ಹಿತವೆಲ್ಲ ತೀರಿತೆ
ನಿಂತ ನಂಬಿಕೆ ನೆಲವೆ ಮೆಲ್ಲನೆ ಸರಿಯಿತೆ
ನೋವೊಂದೆ ಫಲವಾಯಿತೆ ||೨||

ಸುಗಮ ಸಂಗೀತ ಕ್ಷೇತ್ರದಲ್ಲಿ ಮಾತ್ರವಲ್ಲ; ಚಿತ್ರರಂಗದಲ್ಲೂ ಅಪರೂಪದ, ಅನುಪಮ ಗೀತೆಗಳಿಗೆ ರಾಗ ಸಂಯೋಜಿಸಿ ದವರು ಸಿ. ಅಶ್ವತ್ಥ್. ಭೂ ಲೋಕದಲ್ಲಿ ಯಮರಾಜ, ನಾರದ ವಿಜಯ, ಕಾಕನ ಕೋಟೆ, ಆಲೆಮನೆ, ಬಾಡದ ಹೂ, ಸ್ಪಂದನ, ಅನುಪಮ, ಶಿಶುನಾಳ ಷರೀಫ, ಮೈಸೂರು ಮಲ್ಲಿಗೆ, ನಾಗಮಂಡಲ, ಚಿನ್ನಾರಿಮುತ್ತ, ಕೊಟ್ರೇಶಿ ಕನಸು… ಹೀಗೆ, ಅಶ್ವತ್ಥ್ ಸಂಗೀತ ಸಂಯೋಜನೆಯ ಸಿನಿಮಾಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಗಾಂಧಿನಗರದ ಇತಿಹಾಸವನ್ನು ಒಮ್ಮೆ ತಿರುವಿ ಹಾಕಿದರೆ- ಒಂದು ಸಿನಿಮಾದ ಹಾಡುಗಳು ಸೂಪರ್‌ಹಿಟ್ ಆದರೆ ಸಾಕು; ನಂತರದ ಒಂದಿಡೀ ವರ್ಷ ಆ ಚಿತ್ರದ ಸಂಗೀತ ನಿರ್ದೇಶಕ ಬ್ಯುಸಿಯಾಗಿರುತ್ತಾನೆ ಎಂಬ ಸಂಗತಿ ಸ್ಪಷ್ಟವಾಗುತ್ತದೆ.
ಆದರೆ, ಸಿ. ಅಶ್ವತ್ಥ್ ಅವರ ವಿಷಯದಲ್ಲಿ ಈ ಮಾತು ಸುಳ್ಳಾಗಿತ್ತು. ಏಕೆಂದರೆ, ಒಂದು ಸಿನಿಮಾಕ್ಕೆ ಸಂಗೀತ ನೀಡಿದ ನಂತರ, ಚಿತ್ರರಂಗಕ್ಕೂ ತಮಗೂ ಸಂಬಂಧವೇ ಇಲ್ಲ ಎಂಬಂತೆ, ಅಲ್ಲಿಂದ ಎದ್ದು ಸುಗಮ ಸಂಗೀತ ಕ್ಷೇತ್ರಕ್ಕೆ ಬಂದುಬಿಡುತ್ತಿದ್ದರು ಅಶ್ವತ್ಥ್. ಮುಂದೆ ಒಂದೋ ಎರಡೋ ವರ್ಷಗಳು ಭಾವಗೀತೆಗಳ ರಾಗ ಸಂಯೋಜನೆಯಲ್ಲಿಯೋ, ಗಾಯನದಲ್ಲಿಯೊ ಅಥವಾ ಇನ್ಯಾವುದೋ ಹೊಸ ಸಾಹಸದಲ್ಲಿಯೋ ಕಳೆದುಹೋಗುತ್ತಿದ್ದವು. ಹೀಗೆ, ಚಿತ್ರರಂಗದಲ್ಲಿ ಎಲ್ಲರೂ ಸ್ವಲ್ಪ ಸ್ವಲ್ಪ ಮರೆತಿದ್ದಾರೆ ಎನ್ನುವಾಗ ದಢದಢನೆ ನಡೆದು ಬಂದು ಇನ್ನೊಂದು ಹೊಸ ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡಿ ಗೆಲುವಿನ ನಗು ಬೀರುತ್ತಿದ್ದರು ಅಶ್ವತ್ಥ್.
೧೯೭೯ರಲ್ಲಿ ತೆರೆಗೆ ಬಂದ ಸಿನಿಮಾ-ಏನೇ ಬರಲಿ ಪ್ರೀತಿ ಇರಲಿ. ಈ ಚಿತ್ರದ ‘ಪ್ರೀತಿಯ ಕನಸೆಲ್ಲಾ ಕರಗಿ ಹೋಯಿತೆ ಕೊನೆಗೂ…’ ಗೀತೆಯ ಬಗ್ಗೆ ಬರೆಯಲು ಹೊರಟಾಗ, ಅಶ್ವತ್ಥ್ ಅವರ ಗೀತಯಾತ್ರೆಯ ಬಗ್ಗೆಯೂ ಪ್ರಾಸಂಗಿಕವಾಗಿ ನಾಲ್ಕು ಮಾತು ಹೇಳಬೇಕಾಯಿತು. ಇಲ್ಲಿ ದಾಖಲಿಸಬೇಕಾದ ಇನ್ನೊಂದು ಮುಖ್ಯ ವಿಷಯವಿದೆ. ಏನೆಂದರೆ, ಸಿ. ಅಶ್ವತ್ಥ್ ಹಾಗೂ ಎಲ್. ವೈದ್ಯನಾಥನ್ ಅವರು ಒಂದಾಗಿ ಸಂಗೀತ ನಿರ್ದೇಶನ ಮಾಡಲು ಆರಂಭಿಸಿದ್ದು ‘ ಏನೇ ಬರಲಿ ಪ್ರೀತಿ ಇರಲಿ’ ಚಿತ್ರದಿಂದ. ಅದಕ್ಕೂ ಮುಂಚೆ ಅಶ್ವತ್ಥ್, ಹಾಡುಗಳಿಗೆ ಟ್ಯೂನ್ ಸಿದ್ಧಮಾಡಿಕೊಂಡು ಮದ್ರಾಸಿಗೆ ಹೋಗುತ್ತಿದ್ದರು. ಅಲ್ಲಿ ರೆಕಾರ್ಡಿಂಗ್ ಸಂದರ್ಭದಲ್ಲಿ ಅರ್ಕೆಸ್ಟ್ರಾ ತಂಡವನ್ನು ಬ್ಯಾಲೆನ್ಸ್ ಮಾಡುವ ಕೆಲಸವನ್ನು ವೈದ್ಯ ನಾಥನ್ ಮುಗಿಸಿಕೊಡುತ್ತಿದ್ದರು. ಸಿನಿಮಾದ ಟೈಟಲ್ ಕಾರ್ಡ್ ನಲ್ಲಿ ಸಂಗೀತ: ಸಿ. ಅಶ್ವತ್ಥ್, ನೆರವು/ಸಹಾಯ: ಎಲ್. ವೈದ್ಯನಾಥನ್ ಎಂದು ಹಾಕಲಾಗುತ್ತಿತ್ತು.
ತಾವಿಬ್ಬರೂ ಜತೆಯಾಗಿ ಸಂಗೀತ ನಿರ್ದೇಶನ ಮಾಡಲು ಕಾರಣ ವಾದ ಸಂದರ್ಭ ಮತ್ತು ‘ಪ್ರೀತಿಯ ಕನಸೆಲ್ಲಾ-‘ಹಾಡು ಸೃಷ್ಟಿಯ ಸಂದರ್ಭದಲ್ಲಿ ನಡೆದ ಸ್ವಾರಸ್ಯಕರ ಸಂಗತಿಗಳನ್ನು ಸ್ನೇಹಿತರಾದ ಸುಪ್ರಭಾ ಅವರಿಗೆ ಹಿಂದೊಮ್ಮೆ ಅಶ್ವತ್ಥ್ ಅವರೇ ಹೀಗೆ ವಿವರಿಸಿದ್ದರು:
‘ಸ್ಪಂದನ’ ಚಿತ್ರ ನಿರ್ಮಿಸಿದ್ದ ಪಿ. ಶ್ರೀನಿವಾಸ್, ಆನಂತರದಲ್ಲಿ ‘ಏನೇ ಬರಲಿ ಪ್ರೀತಿ ಇರಲಿ’ ಚಿತ್ರ ತಯಾರಿಸಲು ಮುಂದಾದರು. ಆ ಚಿತ್ರಕ್ಕೆ ಅವರದೇ ಕಥೆ. ನಾಯಕನೂ ಅವರೇ. ನಾಯಕಿಯ ಪಾತ್ರಕ್ಕೆ ಮಂಜುಳಾ ಅವರನ್ನು ಆಯ್ಕೆ ಮಾಡಿದ್ದರು. ಸಂಗೀತ ನಿರ್ದೇಶನದ ಹೊಣೆ ನನ್ನ ಹೆಗಲಿಗೆ ಬಿದ್ದಿತ್ತು. ಈ ಸಿನಿಮಾದ ಮಾತುಕತೆಯ ಸಂದರ್ಭದಲ್ಲಿ ಪಿ. ಶ್ರೀನಿವಾಸ್ ಹಾಗೂ ನನಗೆ ಆತ್ಮೀಯರಾಗಿದ್ದ ಕೃಷ್ಣರಾವ್ ಅವರೂ ಇದ್ದರು. ಚಿತ್ರದಲ್ಲಿ ಸಂಗೀತ ಬಳಕೆ ಹೇಗಿರಬೇಕು ಎಂದು ಚರ್ಚಿಸುತ್ತಿದ್ದಾಗ ಅವರು ಹೇಳಿದರು: ‘ರೀ ಅಶ್ವತ್ಥ್, ನಿಮ್ಮದೂ- ವೈದೀದೂ ಒಳ್ಳೇ ಸಾಮರಸ್ಯದ ಜೋಡಿ ಕಣ್ರೀ. ಈವರೆಗಿನ ನಿಮ್ಮ ಚಿತ್ರ ಸಂಗೀತದ ಯಾತ್ರೆಯಲ್ಲಿ ಜತೆಗಾರನಾಗಿ ವೈದಿ ಯಾವಾಗಲೂ ಇದ್ದಾರೆ. ನೀವ್ಯಾಕೆ ಈಗ ಅಧಿಕೃತವಾಗಿ ಅಶ್ವತ್ಥ್-ವೈದಿ ಅಂತ ಜೋಡಿಯಾಗಿ ಸಂಗೀತ ನಿರ್ದೇಶನಕರಾಗಬಾರದು?’
ಕೃಷ್ಣರಾವ್ ಅವರ ಈ ಮಾತು ನನಗೆ ಒಪ್ಪಿಗೆಯಾಯಿತು. ವೈದಿ ಅವರಿಗೂ ಒಪ್ಪಿಗೆಯಾಯಿತು. ಪರಿಣಾಮವಾಗಿ-‘ ಏನೇ ಬರಲಿ ಪ್ರೀತಿ ಇರಲಿ’ ಸಿನಿಮಾದ ಮೂಲಕ ನಾವು ಜತೆಯಾಗಿ ಕೆಲಸ ಮಾಡಲು ಆರಂಭಿಸಿದೆವು.
ಹೊಸದಾಗಿ ಮದುವೆಯಾದ ದಂಪತಿಗಳ ಸುತ್ತ ಹೆಣೆಯಲಾದ ಕಥೆ ‘ಏನೇ ಬರಲಿ ಪ್ರೀತಿ ಇರಲಿ’ ಚಿತ್ರದಲ್ಲಿತ್ತು. ಮಧ್ಯಮ ವರ್ಗದವರ ಪೇಚಾಟಗಳು, ಆರ್ಥಿಕ ತೊಂದರೆ, ಅವರ ಪ್ರೀತಿ, ಸಂಕಟ… ಇತ್ಯಾದಿ ಇತ್ಯಾದಿ ಈ ಸಿನಿಮಾದ ಕಥಾವಸ್ತು. ಬಯಸಿದ್ದೆಲ್ಲಾ ಬಾಳಲ್ಲಿ ಸಿಗದೇ ಹೋದಾಗ ನಾಯಕ ಅಸಹಾಯಕನಾಗಿ ಕೂತುಬಿಡುವ ಒಂದು ಸಂದರ್ಭವಿತ್ತು. ಅಲ್ಲಿಗೆ ಒಂದು ಹಾಡು ಹಾಕಿದರೆ ಚೆಂದ ಎಂದು ನನಗೆ ಅನ್ನಿಸಿತು. ಅದನ್ನೇ ಶ್ರೀನಿವಾಸ್‌ಗೆ ಹೇಳಿದೆ. ನನ್ನ ಮಾತು ಅವರಿಗೂ ಇಷ್ಟವಾಯ್ತು. ಹಾಡನ್ನು ಯಾರಿಂದ ಬರೆಸುವುದು ಎಂದುಕೊಂಡಾಗ ನೆನಪಾದದ್ದು ಕವಿ ಲಕ್ಷ್ಮೀ ನಾರಾಯಣ ಭಟ್ಟರು. ಈ ಹಿಂದೆ ‘ಸ್ಪಂದನ’ ಚಿತ್ರಕ್ಕೂ ಭಟ್ಟರು-‘ ಎಂಥಾ ಮರುಳಯ್ಯ ಇದು ಎಂಥಾ ಮರುಳೂ…’ ಎಂಬ ಗೀತೆ ಬರೆದುಕೊಟ್ಟಿದ್ದರು. ಅದೇ ಸೆಂಟಿಮೆಂಟ್ ಜತೆಗಿಟ್ಟುಕೊಂಡು ಭಟ್ಟರಲ್ಲಿ ಹೊಸ ಗೀತೆಗೆ ಮನವಿ ಮಾಡಿಕೊಂಡೆವು. ಭಟ್ಟರು ತುಂಬ ಸಂಭ್ರಮದಿಂದ ‘ಪ್ರೀತಿಯ ಕನಸೆಲ್ಲಾ ಕರಗಿ ಹೋಯಿತೆ ಕೊನೆಗೂ’… ಗೀತೆ ಬರೆದುಕೊಟ್ಟರು.
ಈ ಹಾಡಿಗೆ ರಾಗ ಸಂಯೋಜಿಸಿದ ಸಂದರ್ಭ ಇದೆಯಲ್ಲ? ಅದು ಬಹಳ ವಿಶೇಷವಾದದ್ದು. ಹಾಡಿನ ಸಂಯೋಜನೆಗೆ ಕೂತಾಗ ವೈದಿ ಹಾರ್ಮೋನಿಯಂ ತಂದ್ರು. ಮದ್ರಾಸಿನ ಹೋಟೆಲ್ ರೂಂನಲ್ಲಿ ಕುಳಿತೆವು. ಆಗೆಲ್ಲ ನಾನು-ವೈದಿ ಸಂವಾದ ನಡೆಸುತ್ತಿದ್ದುದು ಹೆಚ್ಚಾಗಿ ಇಂಗ್ಲಿಷಿನಲ್ಲೇ. qsಟ್ಠ oಠಿZಠಿ ಠಿeಛಿ oಟ್ಞಜ ಅoeಡಿZಠಿe ಅಂದ್ರು ವೈದಿ. ಎರಡು ನಿಮಿಷದ ನಂತರ, ನಾನು ಈ ಗೀತೆಯನ್ನು ಹಾಡಿದಾಗ, ವೈದಿ ಭಾವಪರವಶರಾಗಿ ಅತ್ತೇ ಬಿಟ್ರು. ಆಗಲೇ ನನಗೆ ಅನ್ನಿಸಿಬಿಡ್ತು: ‘ಈ ಹಾಡಲ್ಲಿ, ಈ ಸಂಗೀತದಲ್ಲಿ ಏನೋ ಆಕರ್ಷಣೆ ಇದೆ…’
ಈ ಹಾಡಿನ ರೆಕಾರ್ಡಿಂಗ್ ಸಂದರ್ಭದಲ್ಲಿ ನಡೆದ ಒಂದು ಘಟನೆಯ ಬಗ್ಗೆ ಹೇಳಬೇಕು. ಈ ಗೀತೆಯನ್ನು ಎಸ್ಪಿ ಬಾಲಸುಬ್ರಹ್ಮಣ್ಯಂ ಅವರಿಂದ ಹಾಡಿಸುವುದೆಂದು ನಿರ್ಧರಿಸಲಾಗಿತ್ತು. ಜೆಮಿನಿ ಸ್ಟುಡಿ ಯೋದಲ್ಲಿ ರೆಕಾರ್ಡಿಂಗ್. ಆರ್ಕೆಸ್ಟ್ರಾ ತಂಡದವರೆಲ್ಲ ಸಿದ್ಧವಾಗಿದ್ದರು. ಎಸ್ಪಿ ಕೂಡಾ ಹಾಡಲು ಸಿದ್ಧರಾಗಿ ಬಂದರು. ಆಗ ವೈದಿ ಹೇಳಿದರು: ಅಶ್ವತ್ಥ್, ನಾನು ಆರ್ಕೆಸ್ಟ್ರಾ ಬ್ಯಾಲೆನ್ಸ್ ಮಾಡುತ್ತೇನೆ. ನೀವು ಆ ಕಡೆಯಲ್ಲಿ ನಿಂತು ೧,೨,೩-೧,೨,೩ ಹೇಳಿ ಎಂದರು. (ಸಂಗೀತ ನಿರ್ದೇಶನದ ಸಂದರ್ಭದಲ್ಲಿ ಸ್ವರ ತಾಳದ ಏರಿಳಿತವನ್ನು ಗಾಯಕರು ಹಾಗೂ ವಾದ್ಯಗಾರರಿಗೆ ತಿಳಿಸಲೆಂದು ೧,೨,೩ ಹೇಳಲಾಗುತ್ತದೆ.) ಆ ರೀತಿ ಮಾಡಲು ನನಗೆ ಸಂಕೋಚ, ಭಯ ಇತ್ತು. ಹಾಗಾಗಿ- ‘ಇಲ್ರೀ, ನನ್ನಿಂದ ಈ ಕೆಲಸ ಆಗಲ್ಲ’ ಅಂದುಬಿಟ್ಟೆ. ಅದೇನೂ ಅಂಥ ಕಷ್ಟವಲ್ಲ ಅಶ್ವತ್ಥ್. ನೀವು ಸುಮ್ನೆ ೧,೨,೩ ಹೇಳ್ತಾ ಹೋಗಿ ಎಂದು ವೈದಿ ಇನ್ನಿಲ್ಲದಂತೆ ಹೇಳಿದರು. ನನಗೆ ಅದ್ಯಾಕೋ ಆ ಕೆಲಸ ಮಾಡಲು ಧೈರ್ಯ ಬರಲಿಲ್ಲ. ಸುಮ್ಮನಾಗಿಬಿಟ್ಟೆ. ಇದನ್ನು ಗಮನಿಸಿದ ಎಸ್ಪಿ ಅವರು- ನಾನೇ ಆರ್ಕೆಸ್ಟ್ರಾ ಬ್ಯಾಲೆನ್ಸ್ ಮಾಡ್ತೇನೆ ಬಿಡಿ’ ಎಂದರು. ಹಾಗೆಯೇ ಮಾಡಿದರು!
ಮೂರನೇ ಟೇಕ್‌ನಲ್ಲಿ ಹಾಡು ಓಕೆ ಆಯಿತು. ನಂತರ ಪಿ.ಎನ್. ಶ್ರೀನಿವಾಸ್ ಹಾಗೂ ಕೃಷ್ಣರಾವ್ ಈ ಹಾಡು ಕೇಳಿ ಮೆಚ್ಚಿಕೊಂಡರು. ನಮ್ಮ ಕೃಷ್ಣರಾವ್ ಅವರ ಸ್ನೇಹಿತನೊಬ್ಬ ಇದ್ದ. ಕುಮಾರ್ ಎಂದು ಅವನ ಹೆಸರು. ಅವನು ಕೊಳಲು ವಾದಕ. ಅವನಿಗೆ ಅದೇನೋ ಮನೆ ಕಡೆಯ ತೊಂದರೆ. ಈ ಕಾರಣಕ್ಕೇ ಕುಡಿಯಲು ಕಲಿತಿದ್ದ. ಅವನು, ಈ ಹಾಡು ಕೇಳಿದವನೇ-ಈ ಹಾಡೊಳಗೆ ನನ್ನ ಸಂಕಟವೆಲ್ಲಾ ಇದೆ ಅಂದ. ಈ ಹಾಡನ್ನು ಪದೇ ಪದೆ ಕೇಳೋದು, ಮತ್ತೆ ಕುಡಿದು ಬಿಕ್ಕಳಿಸೋದು… ಹೀಗೇ ಮಾಡ್ತಾ ಇದ್ದ. ಮಧ್ಯರಾತ್ರಿ ೧.೩೦ ಆದರೂ ಆ ಮಹರಾಯನ ಅಳು ನಿಲ್ಲಲೇ ಇಲ್ಲ.
ಇದೆಲ್ಲ ನನ್ನ ಕಣ್ಣೆದುರೇ ನಡೀತಿತ್ತು ನೋಡಿ, ಹಾಗಾಗಿ ಸಹಜ ವಾಗಿಯೇ ಖುಷಿಯಾಗ್ತಾ ಇತ್ತು. ಒಂದು ಹಾಡಿಗೆ ಹೀಗೆ ಹತ್ತಾರು ಮಂದಿಯನ್ನು ಕಾಡುವ ಶಕ್ತಿ ಬರಬೇಕಾದರೆ ಅದಕ್ಕೆ ಎಸ್ಪಿ ಬಾಲಸುಬ್ರಹ್ಮಣಂ ಅವರ ದನಿಯಲ್ಲಿನ ಮಾಧುರ್ಯವೇ ಕಾರಣ ಅನ್ನಿಸ್ತು. ಅವರಿಗೆ ಅಭಿನಂದನೆ ಹೇಳೋಣ ಅನ್ನಿಸ್ತು. ಅದು ಅಪರಾತ್ರಿ. ಸವಿನಿದ್ರೆಯ ಸಮಯ. ಪೋನ್ ಮಾಡಲು ಇದು ಸಮಯವಲ್ಲ ಎಂದು ಗೊತ್ತಿದ್ದೂ ಡಯಲ್ ಮಾಡಿಬಿಟ್ಟೆ. ಅವರು ಹಲೋ ಎಂದ ತಕ್ಷಣ- ಬಾಲು ಅವರೇ, ನಮಸ್ಕಾರ. ನಿಮ್ಮ ದನಿಯಿಂದ ನನ್ನ ಈ ಹಾಡಿಗೆ ಜೀವ ಬಂದಿದೆ. ನಾವೆಲ್ಲರೂ ಇಷ್ಟು ಹೊತ್ತು ಆ ಹಾಡನ್ನೇ ಕೇಳ್ತಾ ಇದ್ವಿ. ಧನ್ಯವಾದಗಳು’ ಅಂದೆ.
ಆಗ ಬಾಲು ಏನೆಂದರು ಗೊತ್ತೇ? ಈಟ qsಟ್ಠ hಟಡಿ ಡಿeZಠಿ ಐZಞ ಈಟಜ್ಞಿಜ ಘೆಟಡಿ ಅoeಡಿZಠಿeಜಿ, ಐZಞ ಔಜಿoಠಿಛ್ಞಿಜ್ಞಿಜ ಠಿಟ qsಟ್ಠ್ಟ oಟ್ಞಜ. ಐಠಿ ಜಿo ಠಿeಛಿ ಟಞmಟoಜಿಠಿಜಿಟ್ಞ ಡಿeಜ್ಚಿe eZo bಟ್ಞಛಿ ಠಿeಛಿ ಞZಜಜ್ಚಿ (ನಾನು ಏನ್ಮಾಡ್ತಾ ಇದ್ದೆ ಗೊತ್ತಾ ಅಶ್ವತ್ಥ್? ಆ ಹಾಡನ್ನೇ ಕೇಳ್ತಾ ಇದ್ದೆ. ನಿಮ್ಮ ಅಪೂರ್ವ ಸಂಯೋಜನೆಯಿಂದ ಈ ಹಾಡಿಗೊಂದು ಕಳೆ ಬಂದಿದೆ) ಅಂದರು. ಎಸ್ಪಿ ಅವರಂಥ ಮಹಾನ್ ಗಾಯಕನಿಂದ ಈ ಮಾತು ಕೇಳಿ ನನಗೆ ಮಾತೇ ಹೊರಡಲಿಲ್ಲ. ಭಾವುಕನಾಗಿ-‘ಬಾಲು ಅವರೇ, ನಿಮ್ಮ ಮಾತು ದೊಡ್ಡದು, ಮನಸೂ ದೊಡ್ಡದು’ ಎಂದು ಹೇಳಿ ಪೋನ್ ಇಟ್ಟೆ.
ಮರುದಿನ ಬೆಳಗ್ಗೆ ಅದೇ ಜೆಮಿನಿ ಸ್ಟುಡಿಯೋದಲ್ಲಿ ನನ್ನ ಸಂಗೀತ ನಿರ್ದೇಶನದಲ್ಲಿ ಇನ್ನೊಂದು ಚಿತ್ರದ ರೆಕಾರ್ಡಿಂಗ್ ಇತ್ತು. ಅಲ್ಲಿಗೆ ವೈದಿ ಕೂಡ ಬಂದಿದ್ದರು. ನನ್ನನ್ನು ಕಂಡವರೇ ಕೈ ಕುಲುಕಿ- ‘ಅಶ್ವತ್ಥ್, ಎಂಥ ಅದ್ಭುತ ಸಂಯೋಜನೆಯಯ್ಯಾ ನಿನ್ನದು? ನಾನು, ನಿನ್ನೆ ರಾತ್ರಿ ಕನಿಷ್ಠ ಪಕ್ಷ ಹತ್ತು ಬಾರಿಯಾದರೂ ಆ ಹಾಡು ಕೇಳಿದ್ದೇನೆ. ಮನಸ್ಸು ಹಾಗೂ ಹೃದಯವನ್ನು ಏಕಕಾಲಕ್ಕೆ ಆವರಿಸಿಕೊಂಡ ಗೀತೆ ಅದು. ಗಾಯನಕ್ಕಿಂತ ರಾಗ ಸಂಯೋಜನೆ ಚೆಂದ. ಸಂಗೀತಕ್ಕಿಂತ ಗಾಯನವೇ ಚೆಂದ ಎಂದು ನನಗಂತೂ ಪದೇ ಪದೆ ಅನ್ನಿಸ್ತಾ ಇತ್ತು’ ಅಂದರು. ಏಕಕಾಲದಲ್ಲಿ ಒಬ್ಬ ಗಾಯಕ, ಒಬ್ಬ ಸಂಗೀತ ಸಂಯೋಜಕ ಹಾಗೂ ವಾದ್ಯ ಸಂಯೋಜಕರು ಒಂದು ಹಾಡಿನಿಂದ ಪ್ರಭಾವಿತರಾದರಲ್ಲ… ಅಂಥದೊಂದು ಗೀತೆಗೆ ನಾನು ಸಂಗೀತ ಸಂಯೋಜನೆ ಮಾಡಿದೆನಲ್ಲ? ಅದು ನನ್ನ ಬದುಕಿನ ಮಹತ್ವದ ಕ್ಷಣ ಎಂದೇ ಭಾವಿಸ್ತೇನೆ…’
ಹೀಗೆಂದು ಮಾತು ಮುಗಿಸಿದ್ದರು ಅಶ್ವತ್ಥ್ .
***
ಸಮಯ ಸಿಕ್ಕರೆ ಈ ಅಪರೂಪದ ಹಾಡು ಕೇಳಿ. ಎಂಥ ಅರಸಿಕನಿಗೂ ಹಾಡು ಇಷ್ಟವಾಗುತ್ತದೆ. ಆನಂತರ ಅದನ್ನು ಮರೆಯುವುದೇ ಕಷ್ಟವಾಗುತ್ತದೆ!