ನಮ್ಮ ತ್ಯಾಗರಾಜನಿಗೊಂದು ಪತ್ರ..!!

namm ramesh

ಉಭಯ ಕುಶಲೋಪರಿ ಸಾಂಪ್ರತ

‘ಅಚ್ಚರಿಯೊಳಗಿನ ಅಚ್ಚರಿ’ ರಮೇಶ್ ಅರವಿಂದ್ ಅವರಿಗೆ-ವಂದನೆ, ಅಭಿನಂದನೆ.

ಸರ್, ಮೊನ್ನೆ ‘ಆಕ್ಸಿಡೆಂಟ್’ ನೋಡಿಬಂದ ಕ್ಷಣದಿಂದ ಖುಷಿ ಕೈ ಹಿಡಿದಿದೆ. ಸಂತೋಷ ಹೆಚ್ಚಾಗಿದೆ. ಒಂದು ಅನೂಹ್ಯ ಅನುಭವಕ್ಕೆ ಮನಸ್ಸು ತೆರೆದುಕೊಂಡಿದೆ. ಆ ಸಿನಿಮಾ, ಅದರೊಳಗಿನ ಸಸ್ಪೆನ್ಸು, ಅಲ್ಲಿನ ಭಾಷೆ, ಪೂಜಾಗಾಂಯ ಕಣ್ಮಿಂಚು, ಖಳನಾಯಕರ ಸಂಚು, ಜತೆಗೇ ಇದ್ದವನ ಹೊಂಚು-ಮತ್ತೆ ಮತ್ತೆ ನೆನಪಾಗುತ್ತಿದೆ. ಇಂಥದೊಂದು ವಂಡರ್-ಥಂಡರ್ ಸಿನಿಮಾ ನಿರ್ದೇಶಿಸಿದ್ದು ನಮ್ಮ ರಮೇಶ್ ಅರವಿಂದ್ ಅಂದುಕೊಂಡಾಗಲೆಲ್ಲ-ಸಂತೋಷ, ಉದ್ವೇಗ, ರೋಮಾಂಚನ ಮತ್ತು ಆಶ್ಚರ್ಯ ಒಟ್ಟೊಟ್ಟಿಗೇ ಆಗಿಬಿಡುತ್ತೆ. ಈ ಬೆರಗಿನ ಮಧ್ಯೆಯೇ ನಿಮ್ಮನ್ನು ಅಭಿನಂದಿಸಲು ಒಂದು ಹೊಸ ಪದ ಹುಡುಕಬೇಕು ಅನಿಸುತ್ತೆ. ಹಿಂದೆಯೇ, ಥೇಟ್ ನಿಮ್ಮ ಥರಾನೇ ಸದ್ದಿಲ್ಲದೇ ನಡೆದು ಬಂದು, ಛಕ್ಕನೆ ಹೆಗಲು ತಟ್ಟಿ, ಕಣ್ಣು ಮಿಟುಕಿಸಿ, ಮೌನದಲ್ಲೇ ಮಾತಾಡಿ, ಒಂದು ಕೋಲ್ಗೆಟ್ ನಗುವನ್ನು ತೇಲಿಬಿಟ್ಟು ಏನೇನೇನೇನೋ ಹೇಳಿ ನಿಮ್ಮ ಖುಷೀನ ಹೆಚ್ಚಿಸಬೇಕು ಅಂತ ಆಸೆಯಾಗುತ್ತೆ. ಅಂಥದೊಂದು ಆಸೆಯ ಮಧ್ಯೆಯೇ ‘ಆಕ್ಸಿಡೆಂಟಲಿ’ ಈ ಪತ್ರ ಸೃಷ್ಟಿಯಾಗಿದೆ. ಒಪ್ಪಿಸಿಕೊಳ್ಳಿ…

***

ರಮೇಶ್ ಜೀ, ಹೌದಲ್ವ? ಎಸ್ಸೆಸ್ಸೆಲ್ಸೀಲಿ ಒಮ್ಮೆ, ಪಿಯುಸೀಲಿ ಇನ್ನೊಮ್ಮೆ, ಬಿ.ಇ. ನಲ್ಲಿ ಮತ್ತೊಮ್ಮೆ ರ್‍ಯಾಂಕ್ ತಗೊಂಡವರು ನೀವು. ಆಮೇಲೆ ಎಂಜಿನಿಯರಿಂಗ್‌ನ ಪಾರ್ಟ್‌ಟೈಂ ಬಿಜಿನೆಸ್ ಮಾಡ್ಕೊಂಡು ಬಣ್ಣದ ಲೋಕಕ್ಕೆ ಬಂದ್ರಿ. ಮೊದಲು ಟಿ.ವಿ.ಯಲ್ಲಿ ನಿರೂಪಕರಾಗಿದ್ರಿ. ಆಗೊಮ್ಮೆ ದಿವಂಗತ ಶಂಕರನಾಗ್ ಕುರಿತು ಹೇಳ್ತಾ ಹೇಳ್ತಾ ನೀವೇ ಅತ್ತು ಬಿಟ್ರಿ. ಆ ಮೂಲಕ ನಮ್ಮನ್ನೂ ಅಳಿಸಿದ್ರಿ. ನಿಮ್ಮ ಮಾತು, ಮೌನ, ಕಣ್ರೆಪ್ಪೆಗಳ ಪಟಪಟ ಚಟಪಟ, ಹುಬ್ಬುಗಳ ಸರಿದಾಟ ಕಂಡವರೆಲ್ಲ-ಓಹ್, ಈ ಹುಡುಗ ಸ್ವಲ್ಪ ಕಮಲ ಹಾಸನ್ ಥರಾ ಇದಾನೇ ಎಂದು ಉದ್ಗರಿಸುವ ವೇಳೆಗೆ ನೀವು ಸಿನಿಮಾದ ಹೀರೋ ಆಗೇಬಿಟ್ಟಿದ್ರಿ…

ಯೆಸ್, ಮೊದಲು ‘ಸುಂದರ ಸ್ವಪ್ನಗಳು’ ಬಂತು. ಅದರ ಹಿಂದೆ ‘ಶ್ರೀಗಂಧ’ದ ಘಮ ಹರಡಿತು. ಮುಂದೆ ‘ಅರಗಿಣಿ’ಯ ತುಂಟತನ ಕಾಣಿಸಿತು. ಆಮೇಲೆ ‘ಪಂಚಮವೇದ’ ಕ್ಲಿಕ್ ಆಯಿತು. ನಂತರದ ‘ಅನುರಾಗ ಸಂಗಮ’ ಎಲ್ಲರ ಹಾಡಾಯಿತು. ‘ನಮ್ಮೂರ ಮಂದಾರ ಹೂವು’ ಅರಳಿತು; ಮತ್ತು ‘ಅಮೃತ ವರ್ಷಿಣಿ’ ಮೆರೆಯಿತು. ‘ಕರ್ಪೂರದ ಗೊಂಬೆ’ ಕುಣಿಯಿತು. ಒಂದು ಬೇಸರ ಅಂದರೆ, ಅದೆಷ್ಟೋ ಸಿನಿಮಾಗಳಲ್ಲಿ ನೀವು ಭಗ್ನಪ್ರೇಮಿ ಆಗಿರ್‍ತಾ ಇದ್ರಿ. ಪ್ರತಿ ಸಿನಿಮಾದಲ್ಲೂ ಲವ್ ಡಿಸಪಾಯಿಂಟೆಡ್ ಆಗೇ ಇರ್‍ತಿದ್ರಲ್ಲ, ಅದೇ ಕಾರಣಕ್ಕೆ ಜನ ನಿಮ್ಮನ್ನು ‘ತ್ಯಾಗರಾಜಾ’ ಅಂದರು. ಆ ಮಧ್ಯೆಯೇ ‘ನಮ್ ರಮೇಶು ಕಣ್ರಿ. ಭಾಳಾ ಒಳ್ಳೇ ಮನುಷ್ಯ’ ಎಂದು ಸರ್ಟಿಫಿಕೇಟ್ ಕೊಟ್ಟರು.

ಈ ಕಡೆ ಗಾಂನಗರದ ಜನ ಇದ್ರಲ್ಲ ಸರ್, ಅವರು ನಿಮ್ಮ ಪ್ರತಿಯೊಂದು ಹೆಜ್ಜೇನೂ ಹುಶಾರಾಗಿ ಗಮನಿಸ್ತಾ ಇದ್ರು. ನೀವು ಒಂದೊಂದೇ ಮೆಟ್ಟಿಲು ಹತ್ತುತ್ತಾ ಹೋದ್ರಿ ನೋಡಿ, ಆಗ ಬೆರಗಿನಿಂದ- ‘ರಮೇಶ್ ಅಲ್ವಾ? ಅವ್ರು ನೈಸ್ ಮ್ಯಾನ್. ಜಾಲಿಫೆಲೋ. ಅಜಾತಶತ್ರು. ಗಾಸಿಪ್‌ಗಳಿಂದ ಅವರು ಗಾವುದ ದೂರ. ಆ ಮನುಷ್ಯ ತಮಾಷೆಗೆ ಸೈತ ಯಾರ ವಿರುದ್ಧವೂ ಟೀಕೆ ಮಾಡೋದಿಲ್ಲ. ‘ಜಗಳ’ ಅನ್ನೋ ಪದವೇ ಅವರ ಡಿಕ್ಷನರೀಲೇ ಇಲ್ಲ’ ಎಂದರು. ಮೊದಲ ಹಂತಕ, ಆಮೇಲೆ ಆರ್ಯಭಟ ಎಂಬ ಎರಡು ಡಿಶುಂಡಿಶುಂ ಸಿನಿಮಾಗಳು ಪಲ್ಟಿ ಹೊಡೆದವಲ್ಲ-ಅವತ್ತು, ಇದೇ ಗಾಂನಗರದ ಜನ – ‘ರಮೇಶ್ ಏನಿದ್ರೂ ಚಾಕೊಲೇಟ್ ಹೀರೋ ಪಾತ್ರಕ್ಕೆ, ಹೀರೋಯಿನ್ ಜತೆ ಆಟಕ್ಕೆ, ಜಾಲಿ ಜಾಲಿ ಹುಡುಗಾಟಕ್ಕೆ ಮಾತ್ರ ಲಾಯಕ್ಕು ಕಣ್ರೀ. ರಫ್ ಅಂಡ್ ಟಫ್ ಅನ್ನುವಂಥ ಪಾತ್ರ ಅವರಿಗೆ ಸೂಟ್ ಆಗಲ್ಲ’ ಅಂದುಬಿಟ್ಟರು. ಮುಂದೆ ‘ರಾಮ ಶಾಮ ಭಾಮ’, ‘ಸತ್ಯವಾನ್ ಸಾವಿತ್ರಿ’ ಮಾಡಿದಾಗ; ಆ ಸಿನಿಮಾಗಳು ಸಾಧಾರಣ ಯಶಸ್ಸು ಕಂಡಾಗ- ಪಾಪ ಕಣ್ರೀ, ರಮೇಶ್ ಟೈಮು ಮುಗಿದು ಹೋಯ್ತೇನೋ ಎಂದು ಅದೇ ಜನ ಪಿಸುಗುಟ್ಟಿದ್ದರು!

ಡಿಯರ್ ರಮೇಶ್ ಮಾಮಾ, ಇದಿಷ್ಟೂ ಹಳೆಯ ರಾಗ. ಹಳೆಯ ಮಾತು. ಈಗ ಬಂದಿದೆಯಲ್ಲ- ‘ಆಕ್ಸಿಡೆಂಟ್’? ವಾಹ್, ಅದೊಂದು ವಂಡರ್. ನೋಡ್ತಿರಿ, ಅದೊಂದು ಟ್ರೆಂಡ್ ಸೆಟ್ಟರ್ ಆಗೇ ಆಗುತ್ತೆ. ರಮೇಶ್ ಅಂದ್ರೆ ಏನು ಎಂಬ ಮಾತಿಗೆ ಅದರಲ್ಲಿ ಉತ್ತರವಿದೆ. ಒಂದು ಸಸ್ಪೆನ್ಸ್ ಸಿನಿಮಾ ಹೇಗಿರಬೇಕು ಎಂಬುದಕ್ಕೆ ಅಲ್ಲಿ ಪುರಾವೆಯಿದೆ. ರಮೇಶ್ ಜಾಣ ಮತ್ತು ಜೀನಿಯಸ್. ಅವರದು ಟೆಕ್ನಿಕಲ್ ಮೈಂಡ್ ಎಂಬುದಕ್ಕೆ ಸಿನಿಮಾದ ಉದ್ದಕ್ಕೂ ಸಾಕ್ಷಿಗಳಿವೆ. ಅದೆಷ್ಟೋ ಸಂದರ್ಭಗಳಲ್ಲಿ ನಟ ರಮೇಶ್‌ನನ್ನು ಮೀರಿ ನಿರ್ದೇಶಕ ರಮೇಶ್ ಇಷ್ಟವಾಗಿ ಬಿಡ್ತಾನೆ. ಅಂಥ ಸಂದರ್ಭದಲ್ಲೆಲ್ಲ ಓಡಿ ಬಂದು, ಛಕ್ಕನೆ ತಬ್ಕೊಂಡು, ಒಮ್ಮೆ ದೃಷ್ಟಿ ತೆಗೆದು, ಛಕ್ಕನೆ ಒಂದು ಮುತ್ತು ಕೊಟ್ಟು- ‘ಇದೆಲ್ಲಾ ನೀ ಮಾಡಿರುವ ಸಾಧನೆಗೆ ದೊರೇ’ ಎದು ಪ್ರೀತಿಯಿಂದ ಹೇಳಬೇಕು ಅನ್ನಿಸಿಬಿಡುತ್ತೆ.

‘ಆಕ್ಸಿಡೆಂಟ್’ನಲ್ಲಿ ಅಂಥ ಸ್ಪೆಶಾಲಿಟಿ ಏನಿದೆ ಗೊತ್ತ ಸಾರ್? ಸಸ್ಪ್ನೆಸ್-ಥ್ರಿಲ್ಲರ್ ಹೆಸರಿನಲ್ಲಿ ಬರುವ ಬಹುಪಾಲು ಸಿನಿಮಾಗಳಲ್ಲಿ ಕೊಲೆ ಯಾಕಾಯ್ತು, ಕೊಲೆಗಾರ ಯಾರು ಅನ್ನೋದು ಇಂಟರ್‌ವಲ್‌ಗೆ ಮೊದಲೇ ಗೊತ್ತಾಗಿಬಿಡುತ್ತೆ. ಆಕ್ಸಿಡೆಂಟ್‌ನಲ್ಲಿ ಅಂಥದೊಂದು ಛಾನ್ಸೇ ಇಲ್ಲ! ಇವರೇ ಕೊಲೆ ಮಾಡಿರಬಹುದು ಎಂಬ ಅನುಮಾನದ ನೆರಳು, ತೆರೆಯ ಮೇಲೆ ಬರುವ ಅಷ್ಟೂ ಮಂದಿಯ ಮೇಲೂ ಬೀಳುತ್ತೆ ನಿಜ. ಒಂದೊಂದು ದೃಶ್ಯದಲ್ಲೂ ನೋಡುವ ಮನಸ್ಸು ಏನೇನೋ ಅಂದಾಜು ಮಾಡುತ್ತೆ ಅನ್ನೋದೂ ನಿಜ. ಸ್ವಾರಸ್ಯ ಅಂದ್ರೆ ಹಾಗೆ ಮಾಡುವ ಗೆಸ್‌ಗಳೆಲ್ಲ ಪಲ್ಟಿ ಹೊಡೀತವೆ. ಆನಂತರ ಕೂಡ ಕಥೆ ಶತಾಬ್ಧಿ ಎಕ್ಸ್‌ಪ್ರೆಸ್ ರೈಲಿನ ವೇಗದಲ್ಲೇ ಓಡುತ್ತಲ್ಲ, ಆಗ ಎದೆಯಲ್ಲಿ ಕುತೂಹಲದ ದೀಪ ಝಗ್ಗನೆ ಹೊತ್ತಿಕೊಳ್ಳುತ್ತೆ! ಆನಂತರ ಕೂಡ ಈ ಮನಸ್ಸು ಇನ್ನೇನೇನೋ ಲೆಕ್ಕಾಚಾರ ಹಾಕಿಕೊಂಡರೆ ಆ ಪಟಾಕಿ ಕೂಡ ನಂತರದ ಹತ್ತೇ ಸೆಕೆಂಡಿನಲ್ಲಿ ಠುಸ್ ಅಂದುಬಿಡುತ್ತೆ. ಅದರ ಹಿಂದೆಯೇ ಶುರುವಾಗುವ ಹಾಡೊಂದನ್ನು ಮನಸ್ಸು ಒಪ್ಪುವುದೇ ಇಲ್ಲ. ಛೆ, ಇದು ಬೇಡವಾಗಿತ್ತು ಅಂದುಕೊಂಡ ಘಳಿಗೆಯಲ್ಲೇ ಕಥೆಗೆ ತೀರಾ ಆಕಸ್ಮಿಕವಾಗಿ ಒಂದು ತಿರುವು ಸಿಕ್ಕಿಬಿಡುತ್ತೆ. ಸಿನಿಮಾ ಹೇಗೆಲ್ಲಾ ಇಷ್ಟವಗುತ್ತೆ ಎಂಬುದನ್ನು ಹೀಗೆಲ್ಲ ವಿವರಿಸುವ ಬದಲು ಒಂದು ಮಾತು ಹೇಳ್ತೇನೆ ಡಿಯರ್- ‘ಉಸಿರಾಡುವುದು ಮನುಷ್ಯನ ನಿಯಂತ್ರಣದಲ್ಲಿಲ್ಲದಿರುವುದರಿಂದ ಅದರ ಪಾಡಿಗೆ ಅದು ನಡೀತಿರುತ್ತೆ. ಇಲ್ಲವಾಗಿದ್ರೆ ಆ ಕುತೂಹಲದಲ್ಲೇ ಮೈಮರೆತು ಒಂದಿಬ್ಬರಾದರೂ ಉಸಿರಾಡುವುದನ್ನೇ ಮರೆತುಬಿಡ್ತಿದ್ರೋ ಏನೋ…’

***

ಹೌದು. ಆಕ್ಸಿಡೆಂಟ್ ನೋಡಿದ ನಂತರ ಹೀಗೆಲ್ಲ ಹೇಳಬೇಕು ಅನ್ನಿಸ್ತು. ಹಾಗಂತ ಇಡೀ ಸಿನಿಮಾದಲ್ಲಿ ನೆಗೆಟೀವ್ ಅಂಶಗಳೇ ಇಲ್ಲ ಅಂತ ಅರ್ಥವಲ್ಲ. ಅಂಥ ಪ್ರಸಂಗಗಳೂ ಒಂದಷ್ಟಿವೆ. ಆದರೆ, ಸಸ್ಪೆನ್ಸ್‌ನ ಮೋಡಿ ಅದನ್ನು ಮೀರಿ ನಿಂತಿದೆ. ಕಣ್ರೆಪ್ಪೆ ಬಡಿಯೋದಕ್ಕೂ ಪುರುಸೊತ್ತು ಕೊಡದಂತೆ ಸಿನಿಮಾ ನೋಡಿಸಿಕೊಳ್ಳುತ್ತೆ. ಪಕ್ಕದ ಸೀಟಿನಲ್ಲಿರೋ ಮಕ್ಕಳನ್ನೇ; ಕದ್ದು ಕರೆತಂದ ಗರ್ಲ್‌ಫ್ರೆಂಡ್‌ನೇ ಮರೆತು ಬಿಡುವಂತೆ ಮಾಡುತ್ತೆ. ಸಸ್ಪೆನ್ಸ್ ಸಿನಿಮಾ ಅಂದ್ರೆ ಹೀಗೇ ಇರಬೇಕು ಎಂದು ಪದೇ ಪದೆ ಉದ್ಗರಿಸೋ ಹಾಗೇ ಮಾಡಿಬಿಡುತ್ತೆ.

ಹೌದು ಡಿಯರ್, ಮೊದಲಿನಿಂದಲೂ ಅಷ್ಟೆ. ಚಿತ್ರದಿಂದ ಚಿತ್ರಕ್ಕೆ ನೀವು ಬೆಳೆದಿದ್ದೀರಿ. ಹದಿನೆಂಟಿಪ್ಪತ್ತು ವರ್ಷದ ನಂತರವೂ ಅದೇ ಹರೆಯ ಉಳಿಸಿಕೊಂಡಿದ್ದೀರಿ. ವರ್ಷಗಳು ಕಳೀತಾ ಹೋದಂತೆಲ್ಲ ನೀವು ಇನ್ನಷ್ಟಿನ್ನಷ್ಟು ಹುಡುಗ ಆಗ್ತಾ ಇದೀರಾ? ನಮಗಂತೂ ಹಾಗನ್ನಿಸಿದೆ. ಈ ಮಧ್ಯೆ ಆಕ್ಸಿಡೆಂಟ್‌ನ ನೆಪದಲ್ಲಿ ನಿಮ್ಮ ಬೆಳವಣಿಗೆಯ ಗ್ರಾಫ್ ಏಕ್‌ದಂ ನಾಲ್ಕುಪಟ್ಟು ಮೇಲೇರಿದೆ.

ಆದರೆ, ಇಂಥದೊಂದು ಯಶಸ್ಸು ಪಡೆಯಲು ನೀವು ಪಟ್ಟ ಶ್ರಮವಿದೆಯಲ್ಲ; ಒಂದೊಂದು ಸೀನ್‌ಗೂ ಸಸ್ಪೆನ್ಸ್-ಥ್ರಿಲ್ಲರ್‌ನ ಸ್ನೋ-ಪೌಡರು ಮೆತ್ತಲು ಪಟ್ಟ ಪಾಡಿದೆಯಲ್ಲ? ಯಾವುದೋ ಒಂದು ದೃಶ್ಯ ಅಂದುಕೊಂಡಂತೆ ಬಂದಿಲ್ಲ ಎಂದು ಇಡೀ ದಿನ ಚಡಪಡಿಸಿದ ಕ್ಷಣವಿದೆಯಲ್ಲ, ಹೌದು. ಅದ್ಯಾವುದೂ ನಮಗೆ ಕಾಣಿಸೋದಿಲ್ಲ. ಅವನ್ನೆಲ್ಲ ಒಂದಪ ಸುಮ್ನೆ ಅಂದಾಜು ಮಾಡಿಕೊಂಡು- “ನಿಮ್ಮ ಶ್ರಮಕ್ಕೆ ದೊಡ್ಡ ಪ್ರತಿಫಲ ಸಿಗಲಿ. ಈ ಯುಗಾದಿ ನಿಮ್ಮ ಪಾಲಿಗೆ ಸಿಹಿಯನ್ನಷ್ಟೇ ಕೊಡಲಿ. ಹತ್ತು ವರ್ಷದ ಗ್ಯಾಪ್ ನಂತರ ಒಂದು ಥ್ರಿಲ್ಲರ್ ಸಿನಿಮಾನ ಕನ್ನಡಿಗರಿಗೆ ನೀಡಿದ ನಿಮ್ಮ ಸಾಫ್ಟ್‌ವೇರ್ ಗೆಳೆಯರ ಬಾಯಿಗೆ ಸಿಹಿ ಬೀಳಲಿ. ಆಕ್ಸಿಡೆಂಟ್ ಇದೆಯಲ್ಲ, ಅದರಪ್ಪನಂಥ ಸಿನಿಮಾ ಆದಷ್ಟು ಬೇಗ ನಿಮ್ಮ ನಿರ್ದೇಶನದಲ್ಲಿ ಬರಲಿ” ಎಂದು ಹಾರೈಸುತ್ತೇನೆ.

ಆಮೇಲೆ ರಮೇಶ್ ಜೀ, ನಿಮ್ ರೇಖಂಗೂ, ನಮ್ ಪೂಜಾಗಾಂಗೂ ಯುಗಾದಿ ನೆಪದಲ್ಲಿ ಇಲ್ಲಿಂದಾನೇ ಫ್ಲೈಯಿಂಗ್ ಕಿಸ್ ಕಳಿಸ್ತಿದೀನಿ; ನಿಮ್ಕಡೇದು ಒಂದು, ನನ್ಕಡೇಯಿಂದ ಹತ್ತು!

ತಲುಪಿಸಿಬಿಡಿ. ಪ್ಲೀಸ್ ಅನ್ನುತ್ತಾ- ನಮಸ್ಕಾರ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: