3 ಚೋಟ ಸ್ಟೋರಿಗಳು….

...

ಅವನ ಪೂರ್ತಿ ಹೆಸರು ಶ್ರೀನಿವಾಸ ಕುಮಾರ್. ಮನೇಲಿ ಪ್ರೀತಿಯಿಂದ ಶ್ರೀನ್ವಾಸೂ ಅನ್ನುತ್ತಿದ್ದರು. ಕುಮಾರಾ, ಶ್ರೀನೀ, ಶ್ರೀ …. ಎಂದೆಲ್ಲಾ ಕರೆಯುತ್ತಿದ್ದರು. ಚಿಕ್ಕವರಂತೂ ಕುಮಾರಣ್ಣೋ… ಎನ್ನುತ್ತಿದ್ದರು. ಅವನು ಎಲ್ಲ ದನಿಗೂ ಓಗೊಡುತ್ತಿದ್ದ. ಪಿ.ಡಬ್ಲ್ಯು.ಡಿ.ಯಲ್ಲಿ ದೊಡ್ಡ ಹುದ್ದೆ ಸಿಕ್ಕ ನಂತರವೂ ತುಂಬ ಸಿಂಪಲ್ ಮನುಷ್ಯನಾಗಿಯೇ ಉಳಿದ. ಲವ್ ಮ್ಯಾರೇಜು ಮಾಡಿಕೊಂಡ. ರೈತ ಚಳವಳಿಯ ಕುರಿತು ವಿಪರೀತ ಆಸೆ ಮತ್ತು ಆಸಕ್ತಿಯನ್ನು ಕಡೆಯತನಕ ಉಳಿಸಿಕೊಂಡ. ಪ್ರಗತಿಪರ ಚಳವಳಿ ಎಲ್ಲೇ ನಡೆಯಲಿ, ಅಲ್ಲಿಗೆ ತಾನೇ ಮೊದಲಿಗನಾಗಿ ಬಂದು ಬಿಡುತ್ತಿದ್ದ. ತನಗಿಂತ ಕಿರಿಯರನ್ನು ತುಂಬ ಮಮಕಾರದಿಂದ ಜತೆಗೆ ಕೂರಿಸಿಕೊಂಡು- ‘ನೀವೆಲ್ಲ ಲವ್ ಮ್ಯಾರೇಜು ಮಾಡ್ಕೊಬೇಕು ನೋಡ್ರಪ್ಪ. ಆಗ ಮಾತ್ರ ಈ ಬಡ್ಡೀ ಮಗಂದು ಜಾತಿ ಅನ್ನೋ ಭೂತ ನಾಶವಾಗಲು ಸಾಧ್ಯ’ ಅನ್ನುತ್ತಿದ್ದ.
ಒಂದೇ ಮಾತಲ್ಲಿ ಹೇಳುವುದಾದರೆ ಅಣ್ಣ, ‘ಬಂಧ’ ಇಲ್ಲದಿದ್ದರೂ ಬಂಧುವಾಗಿದ್ದ. ಗೆಳೆಯನಾಗಿದ್ದ ಮತ್ತು ಆತ ತುಂಬ ಒಳ್ಳೆಯವನಿದ್ದ. ಅಂಥ ಸೀನಣ್ಣ ಹದಿನೈದು ದಿನದ ಹಿಂದೆ ಹೇಳದೇ ಕೇಳದೆ ಹೋಗಿಬಿಟ್ಟ, ಮರಳಿ ಬಾರದ ಊರಿಗೆ !
ಅವನ ಸಾವಿನ ಸುದ್ದಿಯನ್ನು ನಂಬುವುದೋ ಬೇಡವೋ ಎಂದು ತಿಳಿಯದೇ ಒದ್ದಾಡುತ್ತಿದ್ದಾಗಲೇ ಏಛಿ PZooಛಿb ZಡಿZqs, PಛಿZoಛಿ ಟಞಛಿ ಎಂಬ ಮೆಸೇಜು ಬಂತು, ಟೆಲಿಗ್ರಾಂನಂತೆ. ಯಾರಾದ್ರೂ ಗೆಳೆಯರು, ನಾನು ಭಾನುವಾರ ಹುಟ್ಟಿದೆ ಕಣೋ ಅಂದರೆ-ಛೆ, ಅವತ್ತು ರಜಾದಿನ. ಅವತ್ತು ಯಾರಾದ್ರೂ ಹುಟ್ತಾರೇನಯ್ಯ?’ ಎಂದು ಕಿಚಾಯಿಸುತ್ತಿದ್ದ ಸೀನಣ್ಣ ರಜಾದಿನವಾದ ಭಾನುವಾರವೇ ಸತ್ತು ಹೋಗಿದ್ದ! ‘ಭಾನುವಾರ ರಜೆ ಅಲ್ವ? ಅವತ್ತು ಯಾರಾದ್ರೂ ಸಾಯ್ತಾರೇನಣ್ಣಾ’ ಎಂದು ಕೇಳೋಣವೆಂದರೆ ಎದುರಿಗೆ ಅವನು ನಿಶ್ಚಲವಾಗಿ ಮಲಗಿಬಿಟ್ಟಿದ್ದ.
ಯಾವುದೇ ಮನೆಯಿರಲಿ, ಗಂಡ ಸತ್ತ ಅಂದರೆ, ಹೆಂಡತಿ ಅನ್ನಿಸಿಕೊಂಡಾಕೆ ವೈಧವ್ಯದ ಪಟ್ಟಕ್ಕೆ ಬಂದು ಕೂರುವುದನ್ನು ಎಲ್ಲರೂ ನೋಡಬೇಕು ತಾನೆ? ಭಗವಂತಾ, ಸೀನಣ್ಣನ ಮನೆಯಲ್ಲೂ ಅಂಥದೊಂದು ದೃಶ್ಯ ಕಾಣಬೇಕಾ? ಆತನ ಹೆಂಡತಿ ಬರೀ ೩೬ ವರ್ಷಕ್ಕೇ ಅಂಥದೊಂದು ನೋವಿಗೆ, ಸಂಕಟಕ್ಕೆ ಈಡಾಗಬೇಕಾ ಅಂದುಕೊಂಡೇ ಅಲ್ಲಿಗೆ ಹೋದರೆ- ಒಂದು ಅಚ್ಚರಿ ಕಾದಿತ್ತು. ಅಧ್ಯಾಪಕರಾಗಿದ್ದ ಸೀನಣ್ಣನ ತಂದೆ; ತುಂಬ ಸಂಭಾವಿತರಾದ ಸೀನಣ್ಣನ ತಮ್ಮಂದಿರು ಖಡಾಖಡಿ ಮಾತಲ್ಲಿ ಹೇಳಿಬಿಟ್ಟರು. ‘ಅವನು‘ ಇದ್ದಾಗ ಹೇಗಿದ್ದಳೋ ಅದೇ ಥರಾ ಮುಂದೇನೂ ಇರ್ತಾಳೆ ನಮ್ ಶೀನೂ ಹೆಂಡ್ತಿ. ಗೊಡ್ಡು ಸಂಪ್ರದಾಯಕ್ಕೆ ಬೆಂಕಿ ಬೀಳಲಿ. ಆಕೆಯ ಮಾಂಗಲ್ಯ, ಕಾಲುಂಗುರ, ಬಳೆ, ಮುಡಿಯ ಹೂವು…. ಯಾವುದು ಜಾರುವುದಕ್ಕೂ ನಾವು ಅವಕಾಶ ಕೊಡಲ್ಲ. ಹಾಗೆಲ್ಲ ಮಾಡಿದ್ರೆ ಅದು ಸೀನೂಗೆ ಇಷ್ಟವಾಗಲ್ಲ. ಅವನ ನೆನಪಲ್ಲಿ ಗೆಳೆಯರು ಬರ್ತಾರೆ. ಅವನು ಇದ್ದ ಅನ್ನಲಿಕ್ಕೆ ಸಾಕ್ಷಿಯಾಗಿ ಮಕ್ಕಳಿವೆ. ಹೀಗಿರುವಾಗ ಅವನು ಇಲ್ಲವೇ ಅಲ್ಲ ಅಂದುಕೊಳ್ಳೋದು ಯಾಕೆ? ಸೀನೂ ಹೆಂಡತಿ ಇನ್ಮೇಲೆ ನಮಗೆ ಸೊಸೆಯೂ ಹೌದು, ಮಗಳೂ ಹೌದು!
ಈ ಮಾತಿಗೆ ಸೀನಣ್ಣನ ಹೆಂಡತಿ ನಿಂತಲ್ಲೇ ಕಣ್ಣೀರಾದಳು, ಕೈಮುಗಿದಳು. ಅಣ್ಣ ಮರೇಲಿ ನಿಂತು ನಕ್ಕಂತಾಯಿತು…
****
ನಿಮಗೆ ಎಚ್ಚೆಲ್ಕೆ ಗೊತ್ತಿರಬೇಕು. ಅವರ ಪೂರ್ತಿ ಹೆಸರು ಎಚ್.ಎಲ್. ಕೇಶವಮೂರ್ತಿ. ಲಾಗಾಯ್ತಿನಿಂದಲೂ ಅವರು ಲಂಕೇಶರ ಅಪ್ತರಾಗಿದ್ದವರು. ಮಂಡ್ಯದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೂರು ದಶಕಗಳ ಕಾಲ ಅಧ್ಯಾಪಕರಾಗಿದ್ದವರು. ಅವರು ಸರಳದಲ್ಲಿ ಸರಳ. ಸಜ್ಜನರಲ್ಲಿ ಸಜ್ಜನ. ಅನಿಸಿದ್ದನ್ನು ಮುಖಕ್ಕೆ ಹೊಡೆದಂತೆ ಹೇಳುವುದು ಅವರ ಒಳ್ಳೆಯ ಗುಣ. ಅವರ ಕೆಟ್ಟ ಗುಣವೂ ಅದೇ ಅನ್ನುವುದು ಸ್ವಾರಸ್ಯ.
ಇಂಥ ಎಚ್ಚೆಲ್ಕೆ ಅವರಿಗೆ ಹಳ್ಳಿಯಿಂದ ಎಂಜಿನಿಯರಿಂಗ್ ಓದಲು ಬರುತ್ತಿದ್ದ ವಿದ್ಯಾರ್ಥಿಗಳ ಕಷ್ಟ ತುಂಬ ಚನ್ನಾಗಿ ಗೊತ್ತಿತ್ತು. ಎಂಜಿನಿಯರಿಂಗ್ನ ಇಂಗ್ಲಿಷ್ ಅರ್ಥವಾಗದೆ ಪರೀಕ್ಷೆಯಲ್ಲಿ ಡುಮ್ಕಿ ಹೊಡೆದವರಿಗೆಂದೇ ಅವರು ಟ್ಯೂಷನ್ ಮಾಡುತ್ತಿದ್ದರು. ಉಚಿತವಾಗಿ! ಪವಾಡ ಎಂಬಂತೆ, ಅವರಿಂದ ಟ್ಯೂಶನ್ ಹೇಳಿಸಿಕೊಂಡರೆ ಪರಮಪೆದ್ದನೂ ‘ಪಾಸ್’ ಆಗಿಬಿಡುತ್ತಿದ್ದ. ಈ ಕಾರಣದಿಂದಲೇ ಯಾರಾದ್ರೂ ಫೇಲ್ ಅದರೆ ಎಚ್ಚೆಲ್ಕೆ ಹತ್ರ ಟ್ಯೂಶನ್ಗೆ ಹೋಗೋ. ಪಾಸಾಗ್ತೀಯ ಎಂಬ ಮಾತು ಒಂದು ಕಾಲದಲ್ಲಿ ಮಂಡ್ಯದ ತುಂಬಾ ಚಾಲ್ತಿಯಲ್ಲಿತ್ತು.
ಎಚ್ಚೆಲ್ಕೆ ಅವರಿಗಿದ್ದುದು ಒಬ್ಬನೇ ಮಗ. ಉಳಿದೆಲ್ಲ ಅಪ್ಪಂದಿರಂತೆಯೇ ಅವರಿಗೂ ಮಗನ ಮೇಲೆ ವಿಪರೀತ ಭರವಸೆಯಿತ್ತು. ಅವನೂ, ತಂದೆಗೆ ವಿಧೇಯ ಮಗನಾಗಿಯೇ ಇದ್ದ. ಇವರು ಸಡಗರದಿಂದ ಮಗನ ಮದುವೆ ಮಾಡಿದರು. ಇನ್ನು ಒಂದೇ ವರ್ಷಕ್ಕೆ ಮೊಮ್ಮಗ ಬರ್ತಾನಲ್ಲ, ಆಗ ಅವನ ಜತೆ ಆಡಿಕೊಂಡು ಬದುಕೋದು. ಅದಷ್ಟೆ ನನ್ನ ಮಹದಾಸೆ ಎಂದು ಗೆಳೆಯರಿಗೆಲ್ಲ ಹೇಳಿಕೊಂಡರು ಎಚ್ಚೆಲ್ಕೆ. ಆದರೆ, ತೀರಾ ಅನಿರೀಕ್ಷಿತವಾಗಿ, ಮದುವೆಯಾದ ಒಂದೇ ವರ್ಷಕ್ಕೆ ಅವರ ಮಗನೇ ತೀರಿಹೋದ. ಒಂದು ಕಡೆ ಪುತ್ರಶೋಕ, ಇನ್ನೊಂದೆಡೆ ಸೊಸೆಯ ದುಃಖ. ಒಳಮನೆಯಲ್ಲಿ ಹೆಂಡತಿಯ ಕಂಬನಿ ಧಾರೆಧಾರೆ.
ಈ ಆಘಾತದಿಂದ ಮೊದಲು ಚೇತರಿಸಿಕೊಂಡವರೇ ಎಚ್ಚೆಲ್ಕೆ. ತಮ್ಮ ನೋವನ್ನೆಲ್ಲ ನುಂಗಿಕೊಂಡು ಅವರು ಸೊಸೆಯ ಮುಂದೆ ಕುಳಿತರು. ಆಕೆಯ ಕಂಬನಿ ತೊಡೆದರು. ಸಮಾಧಾನ ಹೇಳಿದರು. ಇವತ್ತಿಂದ ನೀನು ನಂಗೆ ಮಗ, ಮಗಳು ಮತ್ತು ಮಗು ಅಂದರು. ಕೆಲ ದಿನಗಳ ನಂತರ ತಾವೇ ಮುಂದೆ ನಿಂತು ಆಕೆಗೆ ಇನ್ನೊಂದು ಮದುವೆ ಮಾಡಿಕೊಟ್ಟರು. ಆಗ, ಮಾತಿಗೆ ತಡವರಿಸಿ ಬಿಕ್ಕಳಿಸಿದ ಸೊಸೆಗೆ- ‘ನಾನಿನ್ನೂ ಗಟ್ಟಿಯಿರುವಾಗ ನೀನು ಅಳಬಾರ್ದು ಮಗಾ’ ಎಂದರು. ಇದನ್ನೇ ಬೆರಗಿ ನಿಂದ ನೋಡುತ್ತಿದ್ದ ಬಂಧುಗಳಿಗೆ- ‘ಒಂದು ವೇಳೆ ಸೊಸೇನೇ ಸತ್ತು ಹೋಗಿ, ನನ್ನ ಮಗ ಬದುಕಿದ್ದಿದ್ರೆ ಅವನಿಗೆ ಇನ್ನೊಂದು ಮದುವೆ ಮಾಡ್ತಿದ್ದೆ ಅಲ್ವಾ? ಈಗ್ಲೂ ಇವಳನ್ನೇ ಮಗ ಅಂದ್ಕೊಂಡಿದೀನಿ’ ಅಂದರು.
ಪ್ರಿಯ ಓದುಗಾ, ನಾನು ದೇವರನ್ನು ನೋಡಿಲ್ಲ. ನಂಬುವುದೂ ಇಲ್ಲ. ಆದರೆ ಯಾರಾದರೂ- ದೇವರು ಎಲ್ಲಿದ್ದಾನೆ ಎಂದು ಕೇಳಿದಾಗ ತಕ್ಷಣವೇ ನನ್ನ ಪ್ರೀತಿಯ ಎಚ್ಚೆಲ್ಕೆ ಅವರತ್ತ ಬೊಟ್ಟು ಮಾಡಿ ತೋರಿಸುವ ಆಸೆಯಾಗುತ್ತದೆ…
****
ಈ ಮೇಲಿನ ಎರಡು ಪ್ರಸಂಗಗಳಿಗಿಂತ ಸ್ವಲ್ಪ ಡಿಫರೆಂಟ್ ಎಂಬಂಥ ಸ್ಟೋರಿ ಇದು. ಅದೊಂದು ಬಡ ಮಧ್ಯಮ ವರ್ಗದ ಕುಟುಂಬ. ಗಂಡ ದಿನಗೂಲಿ ನೌಕರ. ಹೆಂಡತಿ ಹೌಸ್ವೈಫ್, ಅವರಿಗೋ ಆರು ಮಕ್ಕಳು-ಐದು ಹೆಣ್ಣು, ಒಂದು ಗಂಡು! ಹೀಗಿದ್ದಾಗಲೇ ಈ ಹೌಸ್ವೈಫ್ಗೆ ಒಂದು ಆಸ್ಪತ್ರೇಲಿ ನರ್ಸ್ ಕೆಲಸ ಸಿಕ್ಕೇಬಿಟ್ಟಿತು. ಹೇಗಿದ್ರೂ ಹೆಂಡತಿ ಕೂಡ ಕೆಲಸಕ್ಕೆ ಹೋಗ್ತಾಳಲ್ಲ, ಇನ್ಮೇಲೆ ನನ್ನ ಕಷ್ಟ ಅರ್ಧಕ್ಕರ್ಧ ಕಡಿಮೆಯಾಯಿತು ಎಂದು ಈ ದಿನಗೂಲಿ ನೌಕರ ಅಂದುಕೊಳ್ಳುವ ವೇಳೆಗೇ ಆತನ ಪಾಲಿಗೆ ಬಹುದೊಡ್ಡ ಅಘಾತ ಬಂದೆರಗಿತು. ನರ್ಸ್ ಆಗಿದ್ದ ಹೆಂಡತಿ, ಅಷ್ಟೂ ಮಕ್ಕಳನ್ನು ನಿರ್ದಯವಾಗಿ ಮರೆತು ಶ್ರೀಮಂತಿಕೆಯ ಕನಸಲ್ಲಿ ಯಾರೊಂದಿಗೋ ಓಡಿ ಹೋಗಿದ್ದಳು.
ಆ ಕ್ಷಣದಿಂದಲೇ ಆ ಮನೆಯಲಿ ನಗು ಸತ್ತುಹೋಯಿತು. ಪೂಜೆ ನಿಂತು ಹೋಯಿತು. ಅಮ್ಮ ಎಂದರೆ ಮಮತೆ, ಅಮ್ಮ ಅಂದರೆ ವಾತ್ಸಲ್ಯ, ಅಮ್ಮ ಅಂದರೆ ಬೆಳದಿಂಗಳು, ಅಮ್ಮ ಅಂದರೆ ಕ್ಷಮೆ ಮತ್ತು ಅಮ್ಮ ಎಂದರೆ ಅಮ್ಮ ಎಂಬ ಮಾತಿಗೆ ಅರ್ಥವೇ ಇಲ್ಲವಾಯಿತು.
ಆದರೆ, ಕೈ ಹಿಡಿದಾಕೆ ಕೈ ಬಿಟ್ಟು ಹೋದ ನಂತರ, ಮನೆಯ ಆರೂ ಮಕ್ಕಳಿಗೆ ಆ ಅಪ್ಪನೇ ಅಮ್ಮನಾದ. ಇನ್ನೊಂದು ಮದುವೆ ಕುರಿತು ತಮಾಷೆಗೂ ಯೋಚಿಸದೆ ಎಲ್ಲ ಮಕ್ಕಳನ್ನೂ ಓದಿಸಿದ. ಮುಂದೆ ಎಲ್ಲ ಮಕ್ಕಳ ಮದುವೆ ಮಾಡಿದ. ಉಹುಂ, ಕಡೆಗಾಲದವರೆಗೂ ಆ ‘ಅಮ್ಮ’ ಅನ್ನಿಸಿಕೊಂಡಾಕೆ ಬರಲಿಲ್ಲ. ಬರಲೇ ಇಲ್ಲ…
ಹೌದು, ದೇವರಿದ್ದಾನೆ ಅಂದುಕೊಂಡಾಗಲೆಲ್ಲ ಆ ತ್ಯಾಗಮಯಿ ಅಪ್ಪನೂ, ದೇವರಿಲ್ಲವೇ ಇಲ್ಲ ಅನಿಸಿದಾಗಲೆಲ್ಲ ಮಮತೆಯೇ ಇಲ್ಲದ ಆ ಅಮ್ಮನೂ ನೆನಪಾಗುತ್ತಾರೆ.
ಹೌದಲ್ಲವಾ? ಈಗ ಕಾಲ ಬದಲಾಗಿದೆ. ಕಾಲಕ್ಕೆ ತಕ್ಕಂತೆ ನಾವೂ ಬದಲಾಗಿದ್ದೇವೆ. ಎಲ್ಲ ಬದಲಾವಣೆಯನ್ನೂ ಒಪ್ಪಿಕೊಂಡ ನಾವೇ ಹಳೆಯ ಸಂಪ್ರದಾಯಗಳಿಗೆ ಜೋತುಬಿದ್ದರೆ ಹೇಗೆ? ಕುಂಕುಮ, ಬಳೆ, ಹೂವು, ತಾಳಿ ಇವೆಲ್ಲ ಹೆಣ್ಣು ಮಕ್ಕಳ ಹಕ್ಕು. ಅದನ್ನು ಕಸಿಯುವ ಚಿಕ್ಕ ಪ್ರಯತ್ನವೂ ಕೂಡ ಕಿಡಿಗೇಡಿತನದ್ದೇ. ಆ ಕೆಲಸಕ್ಕೆ ಮುಂದಾದವರನ್ನು ದೇವರು ಕ್ಷಮಿಸಲಾರ.
ಅಂದಹಾಗೆ, ಈ ಮೂರೂ ಪ್ರಸಂಗಗಳನ್ನು ಓದಿದ ನಂತರ ನಿಮಗೆ ಹೇಗನ್ನಿಸಿತು? ಮಾರಾಯರೇ, ನೀವು ಹೇಗಿದ್ದೀರಿ? ಕುಶಲವಷ್ಟೆ ?

Advertisements

1 Comment »

  1. 1
    Satish Says:

    Tumba chennagi bhavanaathmakavagi barediruviri Thx


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: