ಒಂದು ರಾಜನ ಕಥೆ..( ನಮ್ಮ ಕಥೆ)

appa amma

ಇದು, ಎಲ್ಲರೂ ಓದಲೇಬೇಕಾದ ಕಥೆ…
ಒಂದೂರಿನಲ್ಲಿ ಒಬ್ಬ ರಾಜನಿದ್ದ. ಅಂದ ಮೇಲೆ ಕೇಳಬೇಕೆ? ಐಶ್ವರ್ಯಲಕ್ಷ್ಮಿ ಅವನ ಮುಂದೆ ಕಾಲು ಮುರಿದುಕೊಂಡು ಬಿದ್ದಿದ್ದಳು. ಈ ರಾಜನಿಗೆ ಒಬ್ಬರಲ್ಲ, ಇಬ್ಬರಲ್ಲ, ನಾಲ್ವರು ಹೆಂಡತಿಯರಿದ್ದರು.
ರಾಜನಿಗೆ ಸಹಜವಾಗಿಯೇ ನಾಲ್ಕನೇ ಹೆಂಡತಿಯ ಮೇಲೆ ದೊಡ್ಡ ಮೋಹ. ಆಕೆಯನ್ನು ಸಂತೋಷಪಡಿಸಲೆಂದೇ ಆತ ಬದುಕುತ್ತಿದ್ದ. ತನ್ನ ನಾಡಿಗೆ ಯಾವುದೇ ಹೊಸ ಆಭರಣ ಬರಲಿ, ಅದನ್ನು ಕಿರಿಯ ರಾಣಿಗೆ ಕಾಣಿಕೆಯಾಗಿ ಕೊಟ್ಟು, ‘ತಗೋ, ಇದೆಲ್ಲಾ ನಿನಗೆ’ ಅನ್ನುತ್ತಿದ್ದ. ಒಂದೇ ಮಾತಿನಲ್ಲಿ ಹೇಳಿಬಿಡುವುದಾದರೆ, ಕಿರಿಯ ರಾಣಿಯ ಸಂತೋಷಕ್ಕಾಗಿ ಏನು ಬೇಕಾದರೂ ಮಾಡಲು ಈ ರಾಜ ಭೂಪಾಲ ಸಿದ್ಧನಿದ್ದ.
ಮೂರನೇ ಹೆಂಡತಿ ಇದ್ದಳಲ್ಲ. ಅವಳ ಮೇಲೂ ರಾಜನಿಗೆ ಮೋಹವಿತ್ತು. ಆಕೆಯದು ಎಲ್ಲರ ಕಣ್ಣು ಕುಕ್ಕುವಂಥ ವ್ಯಕ್ತಿತ್ವ. ರಾಜ ಆಕೆಯನ್ನು ಸದಾ ಜತೆಗೇ ಇರಿಸಿಕೊಳ್ಳುತ್ತಿದ್ದ. ನೆರೆಹೊರೆಯ ರಾಜರು, ಬಂಧುಗಳು ಬಂದಾಗ, ಮೂರನೇ ರಾಣಿಯನ್ನು ಅವರಿಗೆ ತಪ್ಪದೇ ತೋರಿಸುತ್ತಿದ್ದ. ಅವಳು ಜತೆಗಿರುವುದೇ ನನ್ನ ಸೌಭಾಗ್ಯ. ದಿನಗಳು ಉರುಳಿದಂತೆಲ್ಲಾ ಇವಳ ಖ್ಯಾತಿ ಹೆಚ್ಚಬೇಕೇ ವಿನಃ ಕಡಿಮೆಯಾಗಬಾರದು ಎಂಬುದು ರಾಜನ ಆಸೆಯಾಗಿತ್ತು.
ಇಷ್ಟಾದರೂ, ರಾಜನಿಗೆ ಒಳಗೊಳಗೇ ಹೆದರಿಕೆಯಿತ್ತು; ಈ ಮೂರನೇ ರಾಣಿ ಛಕ್ಕನೆ ಮನಸು ಬದಲಾಯಿಸಿ ಬಂಧುಗಳ ಅಥವಾ ನೆರೆಹೊರೆಯ ರಾಜರಿಗೆ ಒಲಿದುಬಿಟ್ಟರೆ ಗತಿಯೇನು ಎಂಬುದೇ ಅವನ ಹೆದರಿಕೆಗೆ ಮುಖ್ಯ ಕಾರಣವಾಗಿತ್ತು.
ಎರಡನೇ ಹೆಂಡತಿ ಇದ್ದಳಲ್ಲ, ಅವಳ ವಿಷಯವಾಗಿ ರಾಜನಿಗೆ ದೊಡ್ಡ ನಂಬಿಕೆ. ಎಲ್ಲ ರಹಸ್ಯವನ್ನೂ ಅವಳೊಂದಿಗೆ ಸಮಸ್ಯೆಗಳು ಎದುರಾದಾಗ ಆಕೆಯ ಸಲಹೆ ಕೇಳುತ್ತಿದ್ದ. ಆಕೆಯಾದರೂ ಅಷ್ಟೆ. ರಾಜನ ಮೇಲೆ ಅಪಾರ ಪ್ರೀತಿ, ಕರುಣೆ ಹೊಂದಿದ್ದಳು ಅಥವಾ ಹಾಗೆ ತೋರಿಸಿಕೊಳ್ಳುತ್ತಿದ್ದಳು!
ಇನ್ನು, ಮೊದಲ ಹೆಂಡತಿಯನ್ನು ಕಂಡರೆ ರಾಜನಿಗೆ ಏನೋ ತಾತ್ಸಾರ. ಆಕೆ ಇರುವುದೇ ದಂಡ ಎಂಬುದು ಅವನ ಭಾವನೆಯಾಗಿತ್ತು. ಎಷ್ಟೋ ಸಂದರ್ಭದಲ್ಲಿ ಅದನ್ನು ಬಾಯಿಬಿಟ್ಟು ಹೇಳಿಯೂ ಬಿಟ್ಟಿದ್ದ. ಅಂಥ ಮಾತುಗಳಿಂದ ನೋವಾದರೂ ಆಕೆ ತೋರಿಸಿಕೊಂಡಿರಲಿಲ್ಲ. ಬದಲಿಗೆ, ಗಂಡನ ತಿರಸ್ಕಾರದ ನಂತರವೂ ಆತನನ್ನು ತೀವ್ರವಾಗಿ ಇಷ್ಟಪಡುತ್ತಿದ್ದಳು. ಆಕೆ ತನ್ನ ಬಗ್ಗೆ ಹೆಚ್ಚು ಕೇರ್ ತೆಗೆದುಕೊಂಡಾಗಲೆಲ್ಲ ಇವನಿಗೆ ಒಂಥರಾ ಕಿರಿಕಿರಿಯಾಗುತ್ತಿತ್ತು…
ಕಾಲಚಕ್ರ ಉರುಳಿತು. ಈ ರಾಜ ದಿಢೀರ್ ಕಾಯಿಲೆ ಬಿದ್ದ. ಎಷ್ಟೆಲ್ಲ ಔಷಧ ಸೇವಿಸಿ, ಚಿಕಿತ್ಸೆ ಪಡೆದರೂ ಕಾಯಿಲೆ ಗುಣವಾಗಲಿಲ್ಲ. ಬದಲಿಗೆ ಹೆಚ್ಚುತ್ತಲೇ ಹೋಯಿತು. ಓಹ್, ಈ ರೋಗ ಎಂದೆಂದೂ ವಾಸಿಯಾಗುವುದಿಲ್ಲ. ನನ್ನ ಕಡೆಗಾಲ ಸಮೀಪಿಸಿದೆ ಎಂದು ರಾಜನಿಗೂ ಖಚಿತವಾಗಿ ಗೊತ್ತಾಯಿತು. ತಕ್ಷಣ ಅವನಿಗೆ ನಾಲ್ವರು ಹೆಂಡತಿಯರ ನೆನಪಾಯಿತು. ಬದುಕಿಡೀ ಜತೆಯಾಗಿಯೇ ಇದ್ದವರನ್ನು ಸಾವಿನ ಸಂದರ್ಭದಲ್ಲೂ ಜತೆಗೆ ಬನ್ನಿ ಎಂದು ಕರೆವ ಆಸೆಯಾಯಿತು.
ಆತ ತಕ್ಷಣ ನಾಲ್ಕನೇ ಹೆಂಡತಿಯನ್ನು ಕರೆದು ಹೇಳಿದ: ‘ನೋಡು ಚಿನ್ನಾ, ಇಷ್ಟು ವರ್ಷ ನಿನ್ನ ಸಂತೋಷಕ್ಕೆ ಅಂತಾನೇ ಬದುಕಿದೆ. ನಿನ್ನ ನಗುವೇ ನನ್ನ ಸೌಭಾಗ್ಯ ಎಂದುಕೊಂಡೆ. ಆದರೆ, ಈಗ ನನ್ನ ಕಡೆಗಾಲ ಬಂದೇ ಬಿಟ್ಟಿದೆ. ಒಂಟಿಯಾಗಿ ಸಾಯಲು ವಿಪರೀತ ಭಯ. ಪ್ಲೀಸ್, ಸಾವಿನಲ್ಲೂ ನನ್ನೊಂದಿಗೆ ಬರುವೆಯಾ…?
ಮಾತು ಕೇಳಿ ಕಿರಿಯ ಹೆಂಡತಿ ‘ಛೀ’ ಎಂದಳು. ‘ಎಂಥ ಅಪಶಕುನದ ಮಾತು ರೀ ನಿಮ್ದು? ನೀವು ಸತ್ತರೆ ಅದು ನಿಮ್ಮ ಕರ್ಮ. ಸತ್ತಾಗ ನಾನೂ ನಿಮ್ಮೊಂದಿಗೆ ಬರಬೇಕು ಅನ್ನೋದು ಯಾವ ನ್ಯಾಯ? ನಾನಂತೂ ಬರಲಾರೆ. ನಿಮಗೆ ದೊಡ್ಡ ನಮಸ್ಕಾರ’ ಎಂದು ಹೇಳಿ ಸರಭರನೆ ಹೋಗಿಯೇ ಬಿಟ್ಟಳು.
ರಾಜನಿಗೆ ಬೀಸಿ ಹೊಡೆದಂತಾಯಿತು. ಬಿ.ಪಿ. ದಿಢೀರ್ ಹೆಚ್ಚಿತು. ಆದರೂ ಹೇಗೋ ತನ್ನನ್ನು ತಾನೇ ಕಂಟ್ರೋಲ್ ಮಾಡಿಕೊಂಡ. ಆಗಲೇ ಆತನಿಗೆ ಮೂರನೇ ಹೆಂಡತಿ ನೆನಪಾದಳು. ಪ್ರತಿ ಪ್ರವಾಸದ ಸಂದರ್ಭದಲ್ಲೂ ಜತೆಗೇ ಬರುತ್ತಿದ್ದ ಆಕೆ ಈ ಕಡೆಯ ಯಾತ್ರೆಯಲ್ಲೂ ಬಂದೇ ಬರ್ತಾಳೆ ಎಂದು ನಂಬಿ ಆಕೆಯನ್ನು ಕರೆದ. ತನ್ನ ಪರಿಸ್ಥಿತಿ ವಿವರಿಸಿ- ಈ ಕಡೆಯ ಯಾತ್ರೆಯಲ್ಲೂ ಜತೆಗೆ ಬರ್ತೀಯ ತಾನೆ’ ಎಂದು ಕೇಳಿದ.
‘ಛೆ, ಛೆ, ನಾನ್ಯಾಕೆ ಹಾಗೆ ಮಾಡ್ಲಿ? ಆಯಸ್ಸು ಮುಗೀತಾ ಬಂದಿರೋದು ನಿಮ್ದು. ಕ್ಷಮಿಸಿ, ನಿಮ್ಮೊಂದಿಗೆ ನಾನು ಬರಲಾರೆ. ನಿಮ್ಮ ನಿಧನಾನಂತರ ನಾನು ಬೇರೆಯವರೊಂದಿಗೆ ಬದುಕ್ತೇನೆ..’. ಎಂದಳಾಕೆ.
ಈ ಮಾತು ಕೇಳಿದ ರಾಜನಿಗೆ ಈಟಿಯಿಂದ ನೇರ ಹೃದಯವನ್ನೇ ಮೀಟಿದಂತಾಯಿತು. ಕೆಲ ಸಮಯದ ನಂತರ ಚೇತರಿಸಿಕೊಂಡು ಎರಡನೇ ಹೆಂಡತಿಯನ್ನು ಕರೆದು ಹೀಗೆಂದ: ‘ರಾಣೀ, ಈವರೆಗಿನ ಬದುಕಿನಲ್ಲಿ ಕಷ್ಟ-ಸುಖದ ಸಂದರ್ಭಗಳಲ್ಲಿ ನೀನಿದ್ದೆ. ತುಂಬ ಸಮಸ್ಯೆಗಳಿಗೆ ಪರಿಹಾರ ಹೇಳಿದೆ. ಈಗ ನಾನು ಒಂಟಿಯಾಗಿ ಸಾಯಲು ಇಷ್ಟಪಡಲಾರೆ. ಈ ಸಮಸ್ಯೆಗೆ ಒಂದು ಪರಿಹಾರ ಹೇಳು…’
ರಾಣಿ ಉದಾಸೀನದಿಂದ ಹೀಗೆಂದಳು: ‘ಪ್ರಭೂ, ಈವರೆಗೆ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರ ಹೇಳಿದೆ ನಿಜ. ಆದರೆ ಈಗ ನಿಮಗೆ ಯಾವ ಸಲಹೆಯನ್ನೂ ನೀಡಲಾರೆ. ಇನ್ಮೇಲೆ ನನ್ನ ದಾರಿ ನನಗೆ, ನಿಮ್ಮ ದಾರಿ ನಿಮಗೆ…’
ಇಷ್ಟು ಹೇಳಿ ಎರಡನೇ ಹೆಂಡತಿಯೂ ಹೋಗಿಬಿಟ್ಟಳು. ಆಗ ರಾಜನಿಗೆ ವಿಪರೀತ ನೋವಾಯಿತು. ತನ್ನ ಸ್ಥಿತಿಗಾಗಿ ಆತ ಬಿಕ್ಕಿ ಬಿಕ್ಕಿ ಅಳಲು ಆರಂಭಿಸಿದ. ಎರಡು ನಿಮಿಷ ಅತ್ತಿರಬೇಕು, ಅಷ್ಟರಲ್ಲಿ ಬಾಗಿಲ ಹಿಂದೆ ಯಾವುದೋ ನೆರಳು ಸರಿದಾಡಿದಂತಾಯಿತು. ರಾಜ ಕುತೂಹಲದಿಂದ ಅತ್ತ ನೋಡಿದರೆ-ಅಲ್ಲಿ ಮೊದಲ ಹೆಂಡತಿ ನಿಂತಿದ್ದಳು. ಆಕೆಯ ಕಂಗಳಲ್ಲಿ ದುಗುಡವಿತ್ತು. ಈ ರಾಜ ಬೆಪ್ಪು ಬೆಪ್ಪಾಗಿ ನೋಡುತ್ತಿದ್ದಾಗ ಆಕೆಯೇ ಹೇಳಿದಳು: ‘ರಾಜಾ, ಹೆದರಬೇಡ. ಸಾವಿನ ಮನೆಗೆ ನೀನು ಒಂಟಿಯಾಗಿ ಹೋಗಲು ನಾನು ಬಿಡಲಾರೆ. ನಿನ್ನೊಂದಿಗೆ ನಾನೂ ರ್ತೀನಿ. ಸಾವಿನ ನಂತರವೂ ಒಂದು ಬದುಕಿದೆ ಅನ್ನುವುದಾದರೆ ಅಲ್ಲಿ ಕೂಡ ನಿನ್ನನ್ನು ಪ್ರೀತಿಯಿಂದ ನೋಡ್ಕೋತೀನಿ…’
ಈ ಮಾತು ಕೇಳಿ ರಾಜನಿಗೆ ವಿಪರೀತ ಪಾಪಪ್ರಜ್ಞೆ ಕಾಡಿತು. ಆತ ಮೊದಲ ಹೆಂಡತಿಯ ಕೈ ಹಿಡಿದು ಕಣ್ಣಿಗೊತ್ತಿಕೊಂಡ. ಹಿಂದೆಯೇ ಸಂತೋಷದಿಂದ ಅಳಲಾರಂಭಿಸಿದ…
***
ಕಥೆ ಮುಗೀತಾ ಎಂದು ಪ್ರಶ್ನೆ ಕೇಳಬೇಡಿ.
ಈಗ ಹುಷಾರಾಗಿ ಕೇಳಿಸಿಕೊಳ್ಳಿ: ನಾನು-ನೀವು ಎಲ್ಲರೂ ರಾಜನ ಪಾತ್ರಧಾರಿಗಳೇ!
ಸ್ವಾರಸ್ಯವೆಂದರೆ, ನಮಗೂ ನಾಲ್ವರು ಹೆಂಡತಿಯರಿದ್ದಾರೆ!!
ನಾಲ್ಕನೆಯ, ಅತ್ಯಂತ ಮುದ್ದಿನ ಹೆಂಡತಿ ಯಾರು ಗೊತ್ತೆ?
ನಮ್ಮ ದೇಹ! ಅದರ ಮೇಲೆ ನಮಗೆ ಇನ್ನಿಲ್ಲದ ವ್ಯಾಮೋಹ. ಅದಕ್ಕೆ ಪನ್ನೀರು ಚಿಮುಕಿಸುವುದೇನು? ಬಗೆಬಗೆಯ ಸೋಪು, ಪೌಡರ್ ಹಾಕಿ ಘಂ ಅನಿಸುವುದೇನು? ಹೊಸ ಬಟ್ಟೆ, ಆಭರಣ ಧರಿಸಿ ಸಂಭ್ರಮ ಪಡುವಾಗಿನ ನಮ್ಮ ಗತ್ತೇನು, ವಾಹ್, ವಾಹ್…
ಆದರೆ, ನಾವು ಇಷ್ಟೆಲ್ಲಾ ಪ್ರೀತಿಸುವ, ಇಷ್ಟಪಡುವ ನಮ್ಮ ದೇಹ, ಉಸಿರು ನಿಂತೊಡನೆಯೇ ನಮ್ಮಿಂದ ದೂರವಾಗಿಬಿಡುತ್ತದೆ!
ಹೌದು ತಾನೆ? ನಮ್ಮ ಬದುಕಿನ ವೈಭವದ ದಿನಗಳಲ್ಲಿ ಅಧಿಕಾರ, ಅಂತಸ್ತು ಮತ್ತು ಸಂಪಾದನೆಯನ್ನು ಎಲ್ಲರಿಗೂ ಹೆಮ್ಮೆಯಿಂದ ತೋರಿಸಿಕೊಂಡು ಓಡಾಡಿರುತ್ತೇವೆ. ಸಂಪಾದನೆ ಎಂಬುದು ಸತ್ತ ನಂತರವೂ ಜತೆಗಿರುತ್ತದೆ ಎಂಬ ಭ್ರಮೆ ನಮ್ಮದು. ಆದರೆ, ನಾವು ಜೀವ ಬಿಟ್ಟ ಮರುಕ್ಷಣದಿಂದಲೇ ನಿಮ್ಮ ಅಧಿಕಾರ, ಹಣ, ಆಸ್ತಿ, ಸಂಪಾದನೆ ಇನ್ನಾರದೋ ಪಾಲಾಗುತ್ತದೆ. ಹೌದು. ನಮ್ಮ ಇದು ಮೂರನೇ ಹೆಂಡತಿ!
ಎರಡನೇ ಹೆಂಡತಿ ಬೇರೆ ಯಾರೂ ಅಲ್ಲ-ನಮ್ಮ ಗೆಳೆಯ, ಗೆಳತಿಯರು! ನಾವು ಗೆಲುವಿನ ಹಾದಿಯಲ್ಲಿದ್ದ ಸಂದರ್ಭಗಳಲ್ಲಿ ಎಲ್ಲ ಸಂಗತಿಗಳನ್ನೂ ಅವರೊಂದಿಗೆ ಹೇಳಿಕೊಂಡಿರುತ್ತೇವೆ. ಸಲಹೆ ಕೇಳಿರುತ್ತೇವೆ,ಅದರಂತೆಯೇ ನಡೆದುಕೊಂಡಿರುತ್ತೇವೆ. ಆದರೂ, ನಾವು ಸತ್ತು ಹೋಗುವುದು ಗ್ಯಾರಂಟಿ ಅನ್ನಿಸಿದಾಗ ಯಾರೂ ನೆರವಿಗೆ ಬರುವುದಿಲ್ಲ. ಬದಲಿಗೆ, ದೂರದಲ್ಲಿ ನಿಂತೇ ಟಾಟಾ ಮಾಡಿಬಿಡುತ್ತಾರೆ!
ಪ್ರಿಯ ಓದುಗಾ, ಇಷ್ಟು ಓದಿದ ನಂತರ-ಆ ಮೊದಲನೆ ಹೆಂಡತಿ ಯಾರೆಂದು ತಿಳಿಯುವ ಕುತೂಹಲವೇ? ಕೇಳು: ಅದು ಇನ್ಯಾರೂ ಅಲ್ಲ- ನಮ್ಮ ಪೋಷಕರು, ತಾಯ್ತಂದೆಯರು!
ಯಾಕೆ ಹಾಗೆ ಮಾಡ್ತೀವಿ? ಗೊತ್ತಿಲ್ಲ. ಆದರೆ, ನಾವೆಲ್ಲರೂ ನಮ್ಮ ತಾಯ್ತಂದೆಯರನ್ನು ತಾತ್ಸಾರದಿಂದ ನೋಡ್ತೀವಿ. ಅವರು ನಮ್ಮ ಬದುಕಿಗೆ ಭಾರವಾದವರು ಅಂದುಕೊಳ್ತೀವಿ. ಅವರು ನಮ್ಮ ಜತೆಗೆ ಇರುವುದೇ ಬೇಡ ಎಂದು ಎಷ್ಟೋ ಬಾರಿ ಅಂದುಕೊಳ್ತೀವಿ. ಅದನ್ನು ನಾಚಿಕೆಯಿಲ್ಲದೇ ಅವರೆದುರು ನಿಂತು ಹೇಳಿಯೂಬಿಡ್ತೀವಿ!
ಆದರೆ, ಅಂಥ ಹೇಳಿಕೆಗಳಿಂದ ಮರ್ಮಾಘಾತವಾದರೂ ನಮ್ಮ ತಾಯ್ತಂದೆಯರು ಮುನಿಯುವುದಿಲ್ಲ. ಬದಲಾಗಿ, ಸದಾ ನಮ್ಮ ಒಳಿತನ್ನೇ ಬಯಸುತ್ತಾರೆ. ಆಕಸ್ಮಾತ್ ನಾವು ಕಾಯಲೆ ಬಿದ್ದರೆ ಶುಶ್ರೂಷೆಗೆ ನಿಲ್ಲುತ್ತಾರೆ. ನಮ್ಮ ಒಳ್ಳೆಯದಕ್ಕೆಂದೇ ಪೂಜೆ ಮಾಡಿಸುತ್ತಾರೆ. ಹರಕೆ ಕಟ್ಟಿಕೊಳ್ಳುತ್ತಾರೆ. ಎಲ್ಲ ಪ್ರಯತ್ನಗಳ ನಂತರವೂ ನಾವು ಸತ್ತೇ ಹೋದರೆ, ಆಗಲೂ ತೀವ್ರ ಶೋಕದಿಂದ ಹಿಂದೆಯೇ ಬರುತ್ತಾರೆ. ಕೆಲವರಂತೂ ಮಕ್ಕಳ ಅಗಲಿಕೆ ಸಹಿಸದೆ ತಾವೂ ಸತ್ತು ಹೋಗುತ್ತಾರೆ!
ಅದರರ್ಥ ಇಷ್ಟೆ: ಈ ಕಥೆಯಲ್ಲಿನ ರಾಜನಿಗೆ ಬಂದ ದುರ್ಗತಿ ನಿಮಗೆ ಬರಬಾರದು ಅನ್ನುವುದಾದರೆ ಪ್ಲೀಸ್, ಮನೆಯಲ್ಲಿರುವ ಅಪ್ಪ-ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಿ…
ಅಂದ ಹಾಗೆ, ನಿಮ್ಮ ಅಪ್ಪ-ಅಮ್ಮ ಹೇಗಿದ್ದಾರೆ?

Advertisements

1 Comment »

 1. 1
  Aruna.R Says:

  Nanu nama maneyavaru odidaga kaninali niru bhadidu…
  changi edey..nothing is greater then family…
  i love my father and mother…with out them i can’t live…
  thank u…for good story and msg….


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: