ಗುಟ್ಟು ಕಾಪಾಡೋದು ನಂಗೆ ಗೊತ್ತಿಲ್ಲ…

namma tejaswi

ತೇಜಸ್ವಿ ಮತ್ತೆ ನೆನಪಾಗುತ್ತಿದ್ದಾರೆ.
ಮೊನ್ನೆ ಏಪ್ರಿಲ್ ೫ಕ್ಕೆ ಅವರು ತೀರಿಕೊಂಡು ವರ್ಷವಾಯ್ತು. ಆದರೆ, ಈವತ್ತಿಗೂ ‘ಕರ್ವಾಲೋ’, ‘ಅಣ್ಣನ ನೆನಪು’, ‘ಚಿದಂಬರ ರಹಸ್ಯ’, ‘ಜಿಮ್ ಕಾರ್ಬೆಟ್’ನ ಬೇಟೆಯ ಪ್ರಸಂಗ ಅಥವಾ ‘ಅಲೆಮಾರಿಯ ಅಂಡಮಾನ್’ ಪುಸ್ತಕ ಓದುತ್ತ ಕುಳಿತರೆ- ಅರೆ, ತೇಜಸ್ವಿ ಇಲ್ಲೇ ನಮ್ಮ ಜತೆಗೇ ಇದ್ದಾರಲ್ಲ? ಅನಿಸುತ್ತದೆ. ಅದರಲ್ಲೂ ‘ಕರ್ವಾಲೋ’ ಓದಲು ಕುಳಿತರಂತೂ ಒಮ್ಮೆ ವಿಜ್ಞಾನಿ ಕರ್ವಾಲೋ ಆಗಿ, ಮತ್ತೊಮ್ಮೆ ಪೆದ್ದ ಮಂದಣ್ಣನಾಗಿ, ಇನ್ನೊಮ್ಮೆ ಗರಂ ಮಸಾಲಾದ ಕರಿಯಪ್ಪನಾಗಿ ತೇಜಸ್ವಿ ಕೈ ಹಿಡಿಯುತ್ತಾರೆ. ಕಾದಂಬರಿ ಓದಿ ಮುಗಿಸಿದಾಗ ಹಾರುವ ಓತಿ ಎಂಬ ಜೀವಿ ರೊಯ್ಯನೆ ಯಾರೂ ಕಾಣದ ನಿಗೂಢ ಲೋಕಕ್ಕೆ ಹಾರಿಹೋಯ್ತು ಎಂಬ ವಾಕ್ಯ- ತೇಜಸ್ವಿಯವರು ನಮ್ಮ ಜತೆಗಿಲ್ಲ ಎಂಬುದನ್ನು ಮತ್ತೆ ಮತ್ತೆ ನೆನಪಿಸುತ್ತದೆ.
ನಯ-ನಾಜೂಕು ಎಂಬ ಮಾತಿದೆಯಲ್ಲ, ಅದಕ್ಕೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ಬದುಕಿದವರು ತೇಜಸ್ವಿ. ಯಾರಾದರೂ ನಾಲ್ಕು ಮಂದಿ ಅಪರಿಚಿತರ ಜತೆ ಒಬ್ಬ ಪರಿಚಿತ ಬಂದು ನಿಂತರೆ ನಾವು-ನೀವೆಲ್ಲ ‘ಅವರ ಮುಂದೆ ವಿನಾಕಾರಣ ತಗ್ಗಿ-ಬಗ್ಗಿ ಮಾತಾಡಲು ಶುರುವಿಡುತ್ತೇವೆ. ತೇಜಸ್ವಿ ಹಾಗಿರಲೇ ಇಲ್ಲ. ಪರಿಚಿತನನ್ನು ‘ಥೂ ಹಲ್ಕ, ಹ್ಯಂಗಿದ್ದೀಯೋ ಮಾರಾಯ?’ ಎಂದೇ ಮಾತಿಗೆ ಎಳೆಯುತ್ತಿದ್ದರು. ಜತೆಗಿರುವವರು ಏನೆಂದುಕೊಂಡಾರೊ ಎಂದು ಯೋಚಿಸದೆ, ತಮಗೆ ಅನಿಸಿದ್ದನ್ನು ಹೇಳಿಬಿಡುತ್ತಿದ್ದರು.
ಅದೊಮ್ಮೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಒಂದು ಸಂದರ್ಶನ ನಡೀತಿತ್ತು. ಸಾಹಿತ್ಯ ಲೋಕದ ದಿಗ್ಗಜರೆಲ್ಲ ಪ್ರಶ್ನೆ ಕೇಳುವವರ ಸಾಲಿನಲ್ಲಿದ್ದರು. ವೇದಿಕೆಯಲ್ಲಿ ತೇಜಸ್ವಿ! ಸಂದರ್ಶನ ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸುತ್ತಾ ಸಾಗಿದ್ದಾಗ ಒಬ್ಬರು ಕೇಳಿದರು: ಸರ್, ನಿಮಗೆ ಭಾರತದ ಪ್ರಧಾನಿ ಅಥವಾ ರಾಷ್ಟ್ರಪತಿ ಆಗಲು ಆಹ್ವಾನ ಬಂದ್ರೆ ಒಪ್ತೀರಾ? ಒಪ್ಪೋದಿಲ್ಲ ಅಂದ್ರೆ ಯಾಕೆ ಒಪ್ಪುವುದಿಲ್ಲ ವಿವರಿಸ್ತೀರಾ?’
ತೇಜಸ್ವಿ ತಕ್ಷಣವೇ ಹೇಳಿದರು: ಅಂಥ ಯಾವ ಆಹ್ವಾನಗಳನ್ನು ನಾನು ಒಪ್ಪುವುದಿಲ್ಲ. ಯಾಕೆ ಗೊತ್ತಾ? ಈ ದೇಶದ ರಾಷ್ಟ್ರಪತಿ ಅಥವಾ ಪ್ರಧಾನಿಯಾದರೆ ಅದೆಷ್ಟೋ ಸಾವಿರ ಗುಟ್ಟುಗಳನ್ನು ಕಾಪಾಡಬೇಕಾದ ಹೊಣೆ ನನ್ನ ಮೇಲಿರುತ್ತೆ. ಆದ್ರೆ ಈ ಕೆಲಸ ನನ್ನಿಂದ ಸಾಧ್ಯವೇ ಇಲ್ಲ. ಯಾವುದೇ ಒಂದು ಚಿಕ್ಕ ವಿಷಯ ಗೊತ್ತಾದ್ರೂ ಸಾಕು, ತಕ್ಷಣವೇ ಅದನ್ನು ಇನ್ನೊಬ್ಬರಿಗೆ ದಾಟಿಸಬೇಕು- ಆ ಮೂಲಕ ಒಂದು ವಿಚಿತ್ರ ಖುಷಿ ಅನುಭವಿಸಬೇಕು ಅಂತ ಮನಸ್ಸು ಚಡಪಡಿಸ್ತಾ ಇರುತ್ತೆ. ಒಂದು ಸುದ್ದೀನ ಹತ್ತು ಜನಕ್ಕೆ ಹತ್ತೇ ನಿಮಿಷದಲ್ಲಿ ನಾನು ದಾಟಿಸಿಬಿಟ್ಟಿರ್ತೀನಿ. ಅದರರ್ಥ, ಗುಟ್ಟು ಕಾಪಾಡೋಕೆ ನಂಗೆ ಬರಲ್ಲ. ಗುಟ್ಟು ಕಾಪಾಡೋದು ನನ್ನ ಪಾಲಿಗೆ ದೊಡ್ಡ ಹಿಂಸೆ. ಹಾಗಾಗಿ ಯಾವುದೇ ದೊಡ್ಡ ಹುದ್ದೆಗೆ ಆಫರ್ ಬಂದ್ರೂ ನಾನು ಒಪ್ಪೋದಿಲ್ಲ…
ಈ ಉತ್ತರ ಕೇಳಿ ಪ್ರಶ್ನೆ ಕೇಳಿದ ಕಲಾಕ್ಷೇತ್ರದಲ್ಲಿದ್ದ ಅಷ್ಟೂ ಜನ ನಕ್ಕರು, ತೇಜಸ್ವಿಯವರ ಜತೆಯಲ್ಲೇ…

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: