ಸ್ಪೀಡಿಗೆ ಬ್ರೇಕು ಬೀಳಲಿ.

damar

ರಾಜಾಜಿನಗರ ಇಂಡಸ್ಟ್ರಿಯಲ್ ಏರಿಯಾದ ತನ್ನ ಫ್ಯಾಕ್ಟರಿಯಿಂದ ಹೊರಬಂದ ಜಗತ್ ಒಮ್ಮೆ ಗಡಿಯಾರ ನೋಡಿಕೊಂಡ. ಆಗಲೇ ಆರೂ ಇಪ್ಪತ್ತು! ಅಲ್ಲಿಂದ ಇಪ್ಪತ್ತೆಂಟು ಕಿಲೋಮೀಟರು ದೂರದ ಡಾಬಸ್ ಪೇಟೆಯ ಹೊಸಮನೆಗೆ ಹೋಗಲಿಕ್ಕೆ ಎಷ್ಟು ಹೊತ್ತು ಬೇಕು? ಜಗತ್ ನಿಂತಲ್ಲಿಯೇ ಒಮ್ಮೆ ಲೆಕ್ಕ ಹಾಕಿದ. ಡ್ರೈವಿಂಗ್ಗೆ ಕೂತರೆ ತನ್ನ ಮುಂದೆ ಗಾಳಿಯೂ ಲೆಕ್ಕಕ್ಕೆ ಬಾರದು. ಅಂದ ಮೇಲೆ ಏನೇ ಟ್ರಾಫಿಕ್ ಅಂದುಕೊಂಡರೂ ಬರೀ ಹದಿನೆಂಟೇ ನಿಮಿಷದಲ್ಲಿ ಮನೆ ತಲುಪಬಲ್ಲೆ ಅಂದುಕೊಂಡವನೇ ತಿಳಿ ನೀಲಿಯ ಸ್ಕೋಡಾ ಕಾರು ಹತ್ತಿ ಕೂತ.
ನಂತರದ ಎರಡೇ ನಿಮಿಷದಲ್ಲಿ ಅವನ ಕಾರು ಮೋದಿ ಆಸ್ಪತ್ರೆಯ ತಿರುವು ದಾಟಿಯಾಗಿತ್ತು. ಅಷ್ಟು ಹೊತ್ತಿಗೇ ಒಮ್ಮೆ ಸಿಗ್ನಲ್ ಜಂಪ್ ಮಾಡಿದ್ದ. ಒಬ್ಬ ಬೈಕ್ ಸವಾರನಿಗೆ ಡಿಕ್ಕಿ ಹೊಡೆಯುವುದನ್ನು ಕೂದಲೆಳೆಯ ಅಂತರದಲ್ಲಿ ತಪ್ಪಿಸಿದ್ದ. ತನ್ನ ಮಿಂಚಿನ ವೇಗದ ಬಗ್ಗೆ ಅವನಿಗೆ ಹೆಮ್ಮೆಯಿತ್ತು. ಕಾರ್ ರೇಸ್ನ ಛಾಂಪಿಯನ್ ಶೂಮಾಕರ್ ಇದ್ದಾನಲ್ಲ, ಅವನೂ ಕೂಡ ಬೆರಗಾಗಬೇಕು ಅಂಥ ಸ್ಪೀಡು ಜಗತ್ನದ್ದು. ವೇಗವಾಗಿ ಹೋಗಬೇಕು ಎಂಬ ಆಸೆಯ ಜತೆಗೆ ಸಿರಿವಂತಿಕೆಯ ಅಹಂ ಕೂಡ ಸೇರಿಕೊಂಡಿತ್ತಲ್ಲ, ಅದೇ ಕಾರಣದಿಂದ ಅವನು ವಿಪರೀತ ಕೊಬ್ಬಿದ್ದ. ದಿನಾದಿನ ಒಂದಲ್ಲ ಒಂದು ಕಡೆ ಸಿಗ್ನಲ್ ಜಂಪ್ ಮಾಡುವುದು, ಬೈಕು, ಬಸ್ಗಳಿಗೆ ಡಿಕ್ಕಿ ಹೊಡೆಯುವುದು ಅವನ ಪಾಲಿಗೆ ಹವ್ಯಾಸವೇ ಆಗಿಹೋಗಿತ್ತು. ತುಂಬಾ ಸಂದರ್ಭಗಳಲ್ಲಿ ಫೈನ್ ಕಟ್ಟಿ ಬಂದು ಬಿಡುತ್ತಿದ್ದ. ಖಡಕ್ ಅಕಾರಿಗಳ ಕೈಗೆ ಸಿಕ್ಕಿಬಿದ್ದಾಗ ಮಾತ್ರ ತನ್ನ ಪ್ರಭಾವ ಬಳಸಿ ಹಿರಿಯ ಅಕಾರಿಗಳಿಂದ ಫೋನು ಮಾಡಿಸುತ್ತಿದ್ದ. ಹೇಳಿ ಕೇಳಿ ಲಕ್ಷಾಪತಿ. ಅಂಥವನಿಗೆ ಹಿರಿಯ ಅಕಾರಿಗಳನ್ನು ಓಲೈಸುವುದು ಅದ್ಯಾವ ಘನಂದಾರಿ ಕೆಲಸ?
ಜಗತ್ ಮತ್ತೊಮ್ಮೆ ಗಡಿಯಾರ ನೋಡಿಕೊಂಡ. ಸಮಯ ೬:೨೫! ಕೇವಲ ಐದೇ ನಿಮಿಷದಲ್ಲಿ ಅವನು ಇಸ್ಕಾನ್ ದಾಟಿ ಯಶವಂತಪುರವನ್ನೂ ಹಿಂದಿಕ್ಕಿ, ಪೀಣ್ಯ ತಲುಪಿಕೊಂಡಿದ್ದ. ಆ ಐದು ನಿಮಿಷದ ಅವಯಲ್ಲಿ ಓವರ್ ಟೇಕ್ ಮಾಡಿದ ವಾಹನಗಳೆಷ್ಟು? ತಾನು ಸ್ಪೀಡು ಹೆಚ್ಚಿಸುವ ರಭಸಕ್ಕೆ ಸ್ಪೀಡೋ ಮೀಟರಿನ ಮುಳ್ಳು ಸರ್ರಸರ್ರನೆ ಅತ್ತಿಂದಿತ್ತ ಸರಿದಾಡಿದ ಲೆಕ್ಕ ಎಷ್ಟು? ಹೀಗೊಮ್ಮೆ ಯೋಚಿಸಿದವನಿಗೆ ತನ್ನ ಬಗ್ಗೆ ವಿಪರೀತ ಹೆಮ್ಮೆಯೆನಿಸಿತು. ಅದೇ ಖುಷಿಯಲ್ಲಿ ಮತ್ತೆ ಆಕ್ಸರಲೇಟರ್ ತುಳಿದ. ನೋಡ ನೋಡುತ್ತಲೇ ಪಾರ್ಲೆ ಬಿಸ್ಕತ್ ಕಂಪನಿಯ ಫ್ಯಾಕ್ಟರಿ ಬಂದು ಹೋಯಿತು. ಇದೇ ವೇಗದಲ್ಲಿ ಹೋದರೆ, ಐದು ನಿಮಿಷದಲ್ಲಿ ನೆಲಮಂಗಲ, ನಂತರದ ಐದೇ ನಿಮಿಷದಲ್ಲಿ ಡಾಬಸ್ಪೇಟೆ! ಅಂದರೆ ಬರೀ ಹದಿನೈದು ನಿಮಿಷದ ಯಾತ್ರೆ! ಅದೂ ಜಾತ್ರೆಯಂಥ ರಸ್ತೆಯಲ್ಲಿ…
ಜಗತ್ ಹೀಗೆ ಯೋಚಿಸುತ್ತಲೇ ಡ್ರೈವ್ ಮಾಡುತ್ತಿದ್ದ. ರೆಪ್ಪೆ ಮಿಟುಕಿಸುವಷ್ಟರಲ್ಲಿ ನೆಲಮಂಗಲವೂ ಬಂದು ಹೋಯಿತು. ಆಗೊಮ್ಮೆ ಸೈಡ್ ಮಿರರ್ನಲ್ಲಿ ದೃಷ್ಟಿ ಹಾಯಿಸಿದವನಿಗೆ-ಪೊಲೀಸ್ ಜೀಪೊಂದು ತನ್ನನ್ನೇ ಹಿಂಬಾಲಿಸುತ್ತಿರುವುದು ಕಾಣಿಸಿತು. ಅದು ಹೇಗೆ ಹಿಡೀತಾನೋ ನೋಡೋಣ ಎಂದುಕೊಂಡೇ ಈತ ಆವೇಶದಿಂದ ವೇಗ ಹೆಚ್ಚಿಸಿದ. ಆದರೆ ಹಾಸನ-ತುಮಕೂರಿಗೆ ಸಂಪರ್ಕ ಕಲ್ಪಿಸುವ ಸರ್ಕಲ್ ಇದೆಯಲ್ಲ? ಅಲ್ಲಿ ಕಡೆಗೂ ಪೊಲೀಸ್ ಅಕಾರಿಯ ಜೀಪು ಜಗತ್ನ ಕಾರನ್ನು ಹಿಂದಿಕ್ಕಿತು.
***
‘ನಿಮ್ಮ ಲೈಸೆನ್ಸ್ ತೋರಿಸಿ’ ಎಂದ ಅಕಾರಿ. ಲೈಸೆನ್ಸ್ ಮಾತ್ರವಲ್ಲ, ಅದರ ಜತೆಗೆ ನೂರರ ಐದು ಗರಿಗರಿ ನೋಟುಗಳನ್ನೂ ಹಿಡಿದುಕೊಂಡೇ ಜಗತ್ ಸಿದ್ಧನಾಗಿ ನಿಂತಿದ್ದ. ಈ ಅಕಾರಿ ಇನ್ನೇನು ತಾನೆ ಮಾಡಿಯಾನು? ಅಬ್ಬಬ್ಬಾ ಅಂದರೆ ಐನೂರು ರೂ. ದಂಡ ಹಾಕಬಹುದು. ಅದಕ್ಕೂ ಹೆಚ್ಚು ಅಂದರೆ ಅದು ಸಾವಿರ ಆಗಬಹುದು. ದಿನಕ್ಕೆ ಲಕ್ಷ ದುಡಿವ ಫ್ಯಾಕ್ಟರಿಯ ಮಾಲೀಕನಾದ ತನಗೆ ಇದೆಲ್ಲ ಯಾವ ಲೆಕ್ಕ ಎಂಬ ಉಡಾಫೆ ಇವನದು. ಆದರೆ ಆ ಅಕಾರಿ ಲೈಸೆನ್ಸ್ ಪಡೆದವನೇ ಒಮ್ಮೆ ಅದನ್ನೇ ದಿಟ್ಟಿಸಿ ನೋಡಿದ. ನಂತರ ತನ್ನಲ್ಲಿದ್ದ ಪ್ಯಾಡ್ನಲ್ಲಿ ಗಂಭೀರವಾಗಿ ಏನನ್ನೋ ಬರೆದು, ನಿರ್ವಿಕಾರ ಭಾವದಿಂದಲೇ ಅದನ್ನು ಇವನ ಕೈಗಿಟ್ಟು ಹೋಗಿಬಿಟ್ಟ. ಆ ಪೊಲೀಸ್ ಅಕಾರಿಯ ವರ್ತನೆಯೇ ಜಗತ್ನನ್ನು ಅಚ್ಚರಿಯ ಮಡುವಿಗೆ ನೂಕಿತ್ತು. ಕುತೂಹಲದಿಂದಲೇ ಆ ಚೀಟಿಯನ್ನು ಓದಲು ಶುರುವಿಟ್ಟ. ಅಲ್ಲಿ ಹೀಗಿತ್ತು:
ಡಿಯರ್ ಜಗತ್, ಹತ್ತು ವರ್ಷಗಳ ಹಿಂದಿನ ಮಾತು. ನನಗೊಬ್ಬಳು ಮಗಳಿದ್ದಳು. ಅವಳಿಗೆ ಸುಂದ್ರೀ ಅನ್ನುತ್ತಿದ್ದೆ. ಹೌದು, ಆಕೆ ಹೆಸರಿಗೆ ತಕ್ಕಂತೆ ಸುಂದರಿಯೇ. ಮಗಳು ಬಂದ ಮೇಲೆ ನನ್ನ ಬದುಕು ಬದಲಾಯಿತು. ಅವಳ ಖುಷಿಯಲ್ಲೇ ನಾನು ದೇವರನ್ನು ನೋಡಿದೆ. ಅವಳ ನೆಮ್ಮದಿಯೇ ನನ್ನ ಬದುಕು ಅಂದುಕೊಂಡೆ. ಅವಳಿಲ್ಲದಿದ್ದರೆ ನಾನು ಬದುಕುವುದೇ ಇಲ್ಲ ಅಂದುಕೊಂಡಿದ್ದೆ. ಆದರೆ ನನ್ನ ಎಲ್ಲ ನಿರೀಕ್ಷೆಗಳಿಗೂ ವಿರುದ್ಧವಾಗಿ ಘಟನೆಯೊಂದು ಜರುಗಿಹೋಯಿತು. ಅದೊಂದು ದಿನ ಸ್ಕೂಲ್ನಿಂದ ಮನೆಗೆ ಬರುತ್ತಿದ್ದ ನನ್ನ ಮಗಳಿಗೆ ಅದೆಲ್ಲಿಂದಲೋ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆಯಿತು. ನನ್ನ ಬಂಗಾರದಂಥ ಮಗಳು ಸ್ಥಳದಲ್ಲೇ ಸತ್ತು ಹೋದಳು.
ಮುಂದೆ, ಎಲ್ಲ ಕಡೆ ಆಗುವಂತೆಯೇ ಆ ಕಾರಿನ ಚಾಲಕ ಕಂ ಮಾಲೀಕನಿಗೂ ಶಿಕ್ಷೆಯಾಯಿತು. ಆತ ನ್ಯಾಯಾಶರ ಮುಂದೆ ನಿಂತು ಬಿಕ್ಕಳಿಸುತ್ತಾ- ‘ಗೊತ್ತಿಲ್ದೆ ತಪ್ಪು ಮಾಡಿಬಿಟ್ಟೆ. ಕ್ಷಮಿಸಿಬಿಡಿ ಸ್ವಾಮೀ. ಮನೇಲಿ ಮೂರು ಹೆಣ್ಣು ಮಕ್ಕಳಿವೆ ಸ್ವಾಮೀ. ಅವರ ಮುಖ ನೋಡಿಯಾದರೂ ನನಗೆ ಕಡಿಮೆ ಶಿಕ್ಷೆ ಕೊಡಿ’ ಎಂದ.
ಅವನ ದುಃಖಕ್ಕೆ ನ್ಯಾಯಾಶರೂ ಕರಗಿದರು. ಒಂದಿಷ್ಟು ದಂಡ, ಮೂರು ತಿಂಗಳ ಸಾದಾ ಜೈಲು ಶಿಕ್ಷೆ ವಿಸಿದರು. ಆತ, ನೋಡ ನೋಡುತ್ತಿದ್ದಂತೆಯೇ ಜೈಲಿಂದ ಹೊರಬಂದ. ಮಕ್ಕಳನ್ನು ಮುದ್ದಾಡುವ ಬಯಕೆಯಿಂದ ಮನೆಗೆ ಓಡಿಹೋದ. ಆದರೆ ನನ್ನ ಕಥೆ?
ನನ್ನ ಮಗಳು ಎಂದೆಂದೂ ಬಾರದ ಲೋಕಕ್ಕೆ ಹೋಗಿಬಿಟ್ಟಿದ್ದಳು. ಅವಳನ್ನು ತಬ್ಬಿ ಮುದ್ದಾಡಬೇಕೆಂದರೆ-ನಾನೂ ಅವಳಿದ್ದ ಲೋಕಕ್ಕೇ ಹೋಗಬೇಕಿತ್ತು. ಮಗಳ ಮೇಲಿನ ಮೋಹದಿಂದ – ‘ದೇವರೇ, ನಂಗೆ ಸಾವು ಕೊಡು ಎಂದು ಪದೇ ಪದೆ ಬೇಡಿಕೊಂಡೆ. ಉಹುಂ, ದೇವರು ನನ್ನ ಮೇಲೆ ಕರುಣೆ ತೋರಲಿಲ್ಲ. ಪರಿಣಾಮ, ಸಾಯುವವರೆಗೂ ಕಣ್ಣೀರಿನಲ್ಲೇ ನಾನು ಕೈತೊಳೆಯುವ ಹಾಗಾಗಿದೆ. ಆ ಮಗಳನ್ನು ಕಳೆದುಕೊಂಡ ನಂತರದಲ್ಲಿ ಆ ಕಾರ್ ಮಾಲೀಕನನ್ನು ಕ್ಷಮಿಸಲು ಸಾವಿರ ಸಲ ಯೋಚಿಸಿದ್ದೇನೆ. ಕ್ಷಮಿಸಿದ್ದೇನೆ ಕೂಡಾ…
ಆದರೆ, ನನ್ನ ಮಗಳು, ಅವಳ ಮುಗ್ಧತೆ, ಮುದ್ದು ಮಾತು, ವಿಪರೀತ ಎನ್ನುವಂಥ ಮಮಕಾರ ನೆನಪಾದಾಗಲೆಲ್ಲ ಕಣ್ಣೀರು ಉಕ್ಕಿ ಬರುತ್ತೆ. ಇವತ್ತು ನೀವು ಹುಚ್ಚು ವೇಗದಲ್ಲಿ ಕಾರ್ ಓಡಿಸಿಕೊಂಡು ಬಂದದ್ದು ನೋಡಿ, ಇದೆಲ್ಲ ನೆನಪಾಗಿಬಿಡ್ತು. ಬಡಿ ಜಗತ್, ನಿಮ್ಮಂಥ ಶ್ರೀಮಂತರಿಗೆ ದಂಡ, ಕಾನೂನು, ಶಿಕ್ಷೆಯದು ಯಾವ ಲೆಕ್ಕ? ಆದರೆ ನೆನಪಿರಲಿ, ನನ್ನ ಮಗಳಂಥ ಅದೆಷ್ಟೋ ಮುಗ್ಧ ಜೀವಗಳು ನಿಮ್ಮಂಥವರ ಕಾರ್ಗೆ ಸಿಕ್ಕಿಕೊಳ್ಳುತ್ತಾರೆ. ಜೀವ ಬಿಡುತ್ತಾರೆ. ಆಮೇಲಿನದ್ದನ್ನು ವಿವರಿಸುವುದೇ ಬೇಡ ಅಲ್ವ? ಇರಲಿ, ಆದಷ್ಟು ಬೇಗ ನನ್ನ ಮಗಳಿರುವ ಜಾಗಕ್ಕೆ ಹೋಗಿಬಿಡಬೇಕೆಂಬ ಮಹದಾಸೆ ನನ್ನದು. ಉಹುಂ, ನೀವು ದಂಡ ಕೊಡೋದು ಬೇಡ. ಬದಲಿಗೆ ಈ ಅಮಾಯಕ ಪೊಲೀಸನ ಆಸೆ ಈಡೇರಲಿ ಅಂತ ನನಗೋಸ್ಕರ ಪ್ರಾರ್ಥಿಸ್ತೀರಾ? ಪ್ಲೀಸ್, ಮುಂದಾದರೂ ನಿಧಾನವಾಗಿ ಕಾರು ಓಡಿಸಿ. ಯಾಕೆಂದರೆ ರಸ್ತೇಲಿ ಮಕ್ಕಳಿರ್ತವೆ…
ಇದಿಷ್ಟನ್ನೂ ಒದೇ ಉಸುರಿನಲ್ಲಿ ಓದಿಕೊಂಡ ಜಗತ್, ಜೀವನದಲ್ಲಿ ಅದೇ ಮೊದಲ ಬಾರಿಗೆ ಭಾವುಕನಾದ. ಏನೋ ಹೇಳೋಣವೆಂದು ಕತ್ತೆತ್ತಿದರೆ, ಅಲ್ಲಿ ಆ ಪೊಲೀಸ್ ಅಕಾರಿಯಿರಲಿಲ್ಲ. ಅವನು ಜೀಪು ನಿಧಾನವಾಗಿ ಪೀಣ್ಯದ ಹಾದಿಯಲ್ಲಿ ಸಾಗುತ್ತಿದ್ದುದು ಅಸ್ಪಷ್ಟವಾಗಿ ಕಾಣಿಸಿತು. ಯಾವುದೋ ಸನ್ನಿಗೆ ಒಳಗಾಗದವನಂತೆ ಈತ ಕಾರು ಹತ್ತಿದ. ನಿಧಾನ ಅಂದರೆ ನಿಧಾನವಾಗಿ ಡ್ರೈವ್ ಮಾಡಿಕೊಂಡು ಮನೆಗೆ ಬಂದ.
ಅಪ್ಪನನ್ನು ಕಂಡದ್ದೇ ತಡ ಮಕ್ಕಳು ಓಡಿಬಂದವು. ಕೊರಳಿಗೆ ಜೋತುಬಿದ್ದವು. ಇವನು ತಕ್ಷಣ ಕಣ್ಣೀರಾದ. ಮಕ್ಕಳಿಗೋ ಗಾಬರಿ. ತಕ್ಷಣ ಹೆಂಡತಿ ಬಂದಳು. ಇವನ ಸಪ್ಪೆ ಮುಖ ಕಂಡು ಆಕೆಗೂ ಅಚ್ಚರಿ. ಏನಾಯ್ತುರೀ? ವ್ಯವಹಾರದಲ್ಲಿ ಏನಾದ್ರೂ ಲಾಸ್ ಆಯ್ತಾ ಎಂದಳಾಕೆ. ಇವನು ಅಡ್ಡಡ್ಡ ಕತ್ತು ಒಗೆದ. ನಂತರ ಹೆಂಡತಿ-ಮಕ್ಕಳನ್ನು ಜತೆಗೆ ಕೂರಿಸಿಕೊಂಡು ನಡೆದ ಘಟನೆ ವಿವರಿಸಿದ. ನನ್ನಲ್ಲಿ ಎಷ್ಟು ದುಡ್ಡಿದ್ದರೆ ತಾನೆ ಏನು ಬಂತು? ಆ ಪೊಲೀಸನ ಕಂಬನಿ ಒರೆಸುವ ಶಕ್ತಿ ನನಗಿಲ್ಲವಲ್ಲ ಎಂದು ನಿಟ್ಟಿಸಿರುಬಿಟ್ಟ. ನಂತರ ಏನನ್ನೋ ನಿರ್ಧರಿಸಿದವನಂತೆ, ಇವತ್ತೇ ಕಡೆ. ಇನ್ಮೇಲೆ ಜೋರಾಗಿ ಕಾರು ಓಡಿಸಲ್ಲ. ಯಾರಿಗೂ ಡಿಕ್ಕಿ ಹೊಡೆಸಲ್ಲ ಎಂದು ಮಗಳ ಕೈ ಹಿಡಿದು ಪ್ರಾಮಿಸ್ ಮಾಡಿದ. ಹಿಂದೆಯೇ ಹೆಂಡತಿ-ಮಕ್ಕಳೊಂದಿಗೆ ಕೂತು ಆ ಕಣ್ಮರೆಯಾದ ಕಂದನ ಪರವಾಗಿ ಪ್ರಾರ್ಥಿಸಿದ!
***
ಫ್ರೆಂಡ್ಸ್, ಯೋಚಿಸಿ ನೋಡಿ, ನಾವು-ನೀವೆಲ್ಲ ಈ ಕಥಾನಾಯಕ ಜಗತ್ ಇದ್ದಾನಲ್ಲ, ಅವನ ಬಂಧುಗಳೇ. ಯಾವತ್ತೂ ಅಷ್ಟೆ, ನಮ್ಮದು ಹೆಚ್ಚು ವೇಗ ಮತ್ತು ಹುಚ್ಚು ವೇಗ. ‘ಅಪಘಾತಕ್ಕೆ ಅವಸರವೇ ಕಾರಣ’ ಎಂದು ಗೊತ್ತಿದ್ದರೂ ನಾವೆಲ್ಲ ರೊಯ್ಯರೊಯ್ಯರೊಯ್ಯನೆ ಗಾಡಿ ಓಡಿಸುತ್ತೇವೆ. ಸಿಗ್ನಲ್ ಜಂಪ್ ಮಾಡುತ್ತೇವೆ. ಯಾರಿಗೋ ಗುದ್ದುತ್ತೇವೆ, ಸಿಕ್ಕಿಬೀಳುತ್ತೇವೆ. ಕಡೆಗೆ ಯಾವ್ಯಾವುದೋ ಪ್ರಭಾವ ಬ್ಯುಸಿ ಬಚಾವ್ ಆಗಿಬಿಡುತ್ತೇವೆ. ಆದರೆ ಯಾವ ಸಂದರ್ಭದಲ್ಲೂ ಅಪಘಾತಕ್ಕೆ ಈಡಾದವರ ಬಗ್ಗೆ; ಅವರ ಕುಟುಂಬದ ಬಗ್ಗೆ; ಅವರು ಅನುಭವಿಸುವ ಸಂಕಟದ ಬಗ್ಗೆ ಯೋಚಿಸುವುದಿಲ್ಲ. ಆ ಕ್ಷಣದಲ್ಲಿ ನಾವು ಬಚಾವಾಗುವುದಷ್ಟೇ ಮುಖ್ಯವಾಗಿರುತ್ತದೆ!
ಮುಂದಾದರೂ ವೇಗದ ಡ್ರೈವ್ಗೆ ಗುಡ್ಬೈ ಹೇಳೋಣ. ನಿಧಾನವೇ ಪ್ರಧಾನ ಎಂಬುದನ್ನು ಈಗಲಾದರೂ ಅರಿಯೋಣ. ಮುಂದೆ, ಡ್ರೈವಿಂಗ್ಗೆ ಕೂತಾಗಲ್ಲೆಲ್ಲ ಈ ಕಥೆ ನಿಮ್ಮ ನೆನಪಿಗೆ ಬರಲಿ. ಸ್ಪೀಡೆಂಬೋ ಸ್ಪೀಡಿಗೆ ಛಕ್ಕನೆ ಬ್ರೇಕು ಬೀಳಲಿ. ಯಾಕೆಂದರೆ-

Advertisements

1 Comment »

  1. 1
    shreepriye Says:

    ಮಣಿ,

    ಈ ಫೋಟೊ ನೋಡಿದ್ರೆ ಸಿಂಪ್ಲಿಸಿಟಿಯಲ್ಲಿ ಬರ್ತಿದ್ದ ಜ್ಯೂಸಿ ನ್ಯೂಸ್ ನೆನಪಾಗತ್ತೆ!


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: