ಭಾವಿ ಶಾಸಕರಿಗೊಂದು ಬಹಿರಂಗ ಪತ್ರವು….!

ಶಾಸಕರಾಗುವ ಕನಸಿನಲ್ಲಿರುವ ಎಲ್ಲ ನಾಯಕರುಗಳಿಗೆ-ನಮಸ್ಕಾರ.
ಮಹನೀಯರೆ, ಚುನಾವಣೆ ನಡೆವ ದಿನ ಹತ್ತಿರಾಗುತ್ತಿದೆ. ಎಲ್ಲ ಪಕ್ಷಗಳೂ ತಮ್ಮ ತಮ್ಮ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿವೆ/ನೀಡುತ್ತಿವೆ. ಈ ಸಂದರ್ಭದಲ್ಲಿಯೇ ಮತದಾರನ ಮುಂದೆ ಬಂದು ನಿಲ್ಲಲು ನೀವು ತಯಾರಾಗಿದ್ದೀರಿ. ಈಗಾಗಲೇ ಪ್ರಯಾಣ ಶುರು ಮಾಡಿದ್ದೀರಿ. ಯಾವ ಊರಿಗೆ ಯಾವತ್ತು, ಎಷ್ಟು ಹೊತ್ತಿಗೆ ಹೋಗಬೇಕು? ಅಲ್ಲಿ ಮೊದಲಿಗೆ ಯಾರೊಂದಿಗೆ ಮಾತಾಡಬೇಕು? ಯಾರ ಮನೇಲಿ ತಿಂಡಿ ತಿನ್ನಬೇಕು? ಯಾರ ಕಾಲಿಗೆ ಡೈವ್ ಹೊಡೆಯಬೇಕು? ಯಾರ ಮುಂದೆ ಕಂಬನಿ ಸುರಿಸಬೇಕು? ಯಾವ ಏಜೆಂಟನನ್ನು ‘ಸರಿ’ ಮಾಡಿಕೊಳ್ಳಬೇಕು? ಯಾರ್ಯಾರ ಮೇಲೆ ಕಣ್ಣಿಡಬೇಕು ಎಂದೆಲ್ಲಾ ಆಗಲೇ ಡಿಸೈಡ್ ಮಾಡಿಬಿಟ್ಟಿದೀರ. ಹೊಸ ಖಾದಿ ಡ್ರೆಸ್ಸಲ್ಲಿ ನೀವು ಮನೆ ಮನೆಗೆ ಬರುವ ಸಂದರ್ಭದಲ್ಲೇ ಎಲ್ಲ ಮತದಾರರ ಪರವಾಗಿ ನಿಮಗೊಂದು ಪತ್ರವಿದೆ. ಓದಿಕೊಳ್ಳಿ…
****
ಕೇಳಿ ಸ್ವಾಮಿ, ಈಗ್ಗೆ ಇಪ್ಪತ್ತು ವರ್ಷದ ಹಿಂದೆ ‘ಶಾಸಕರು’ ಅಂದರೆ ನಮಗೆ ಒಂದು ಅಂದಾಜಿತ್ತು. ಏನೆಂದರೆ-‘ಆತ ನಮ್ಮವನು. ನಾವೇ ಆರಿಸಿ ಕಳಿಸಿದಂಥವನು. ನಮ್ಮ ಕಷ್ಟ-ಸುಖ ವಿಚಾರಿಸುವುದು ಅವನ ಕೆಲಸ ಮತ್ತು ಕರ್ತವ್ಯ…’ ಇತ್ಯಾದಿ, ಇತ್ಯಾದಿ. ನಮ್ಮ ಪುಣ್ಯಕ್ಕೆ ಆಗ ಶಾಸಕರೂ ಹಾಗೇ ಇದ್ದರು. ಅವರಿಗೆ ಪಕ್ಷವಿತ್ತು. ಸಿದ್ಧಾಂತವಿತ್ತು. ಕ್ಷೇತ್ರದ ಜನರ ಬಗ್ಗೆ ಪ್ರೀತಿಯಿತ್ತು. ಆರಿಸಿ ಕಳಿಸಿದವರನ್ನು ಯಾವತ್ತೂ ಅಳಿಸಬಾರದು ಎಂಬ ಅವಿವೇಕವಿತ್ತು. ಒಂದಿಷ್ಟು ಪ್ರಾಮಾಣಿಕತೆಯಿತ್ತು. ಅದೆಲ್ಲಕ್ಕಿಂತ ಹೆಚ್ಚಾಗಿ, ಕ್ಷೇತ್ರವನ್ನು ಕಡೆಗಣಿಸಿದರೆ, ಜನ ಸಿಟ್ಟಾಗ್ತಾರೆ. ಸರಿಯಾಗಿ ಉಗೀತಾರೆ. ಮುಂದಿನ ಚುನಾವಣೇಲಿ ಸೀದಾ ಮನೆಗೆ ಕಳಿಸ್ತಾರೆ ಎಂಬ ಹೆದರಿಕೆಯಿತ್ತು. ಈ ಕಾರಣದಿಂದಲೇ ಆಗೆಲ್ಲ ಶಾಸಕ ಅನ್ನಿಸಿಕೊಂಡಾತ ‘ಅಣ್ಣೋ’ ಅಂದರೆ ಸಾಕು, ಕೈಗೆ ಸಿಗುತ್ತಿದ್ದ. ಕಷ್ಟಕ್ಕೆ ಕರಗುತ್ತಿದ್ದ. ‘ಹೆದರಬೇಡ ಕಣಪ್ಪಾ. ಜತೆಗೆ ನಾನಿರ್ತೀನಿ’ ಎಂದು ಸಾಂತ್ವನದ ಮಾತಾಡುತ್ತಿದ್ದ. ಹಾಗಂತ ಅವನೇನು ಧರ್ಮರಾಯನ ತಮ್ಮ ಆಗಿರಲಿಲ್ಲ. ಆದರೂ ಒಂದಿಷ್ಟು ಒಳ್ಳೆಯವನಿದ್ದ.
ಆದರೆ ಈಗಿನ ಪರಿಸ್ಥಿತಿ ಅದಕ್ಕೆ ಉಲ್ಟಾ ಆಗಿದೆ! ಈಗಾಗಲೇ ಶಾಸಕರಾಗಿ ಮೆರೆದಿರುವವರು ಹಾಗೂ ಶಾಸಕರಾಗಲು ರೆಡಿ ಇರುವವರ ಪೈಕಿ ಶೇಕಡ ತೊಂಬತ್ತೈದು ಮಂದಿಗೆ ಪಕ್ಷ-ಸಿದ್ಧಾಂತದಲ್ಲಿ ನಂಬಿಕೆಯಿಲ್ಲ. ಶಿಸ್ತು ಮೊದಲೇ ಇಲ್ಲ. ಕ್ಷೇತ್ರದ ಬಗ್ಗೆ ಕಾಳಜಿ ಹಾಗೂ ಮತದಾರನ ಬಗ್ಗೆ ಒಂದು ಸಣ್ಣ ಹೆದರಿಕೆ-ದೇವರಾಣೆಗೂ ಇಲ್ಲ. ಬದಲಿಗೆ, ಆಡಬಾರದ ನಾಟಕ ಆಡಿ, ಕಣ್ಣೀರು ಸುರಿಸಿ, ದುಡ್ಡು ಕೊಟ್ಟು, ಸೀರೆ ಹಂಚಿ, ಕಡೆಗೆ ಬೆದರಿಸಿ ವೋಟು ಪಡೆಯುವ ಕಲೆ ಎಲ್ಲರಿಗೂ ಕರಗತ ಆಗಿಬಿಟ್ಟಿದೆ. ಜತೆಗೆ ವೋಟು ಪಡೆಯಲೆಂದೇ ಒಂದೂರಿನ ಜನರನ್ನು ಇಬ್ಭಾಗ ಮಾಡುವ ಗುಣ ನಿಮಗೆ ಮೈಗೂಡಿ ಹೋಗಿದೆ.
ಪರಿಣಾಮ ಏನಾಗಿದೆ ಅಂದರೆ- ಶಾಸಕರೆಲ್ಲ ಶೋಷಕರು. ಎಲ್ಲ ಒಂದೇ ಜಾತಿಗೆ ಸೇರಿದವರು. ಅವರೆಲ್ಲ ಊಸರವಳ್ಳಿಯ ಥರದವರು. ಲಜ್ಜೆಗೆಟ್ಟವರು. ಅವರ ಸಹವಾಸವೇ ಬೇಡ. ಏನಾದ್ರೂ ಆಗಿ ಹಾಳಾಗ್ಲಿ. ಸುಮ್ನೆ ಹೋಗಿ ವೋಟ್ ಹಾಕಿ ಬರೋಣ ಎನ್ನುತ್ತಿದ್ದಾನೆ ಮತದಾರ. ಹಾಗೆಯೇ ಮಾಡ್ತಾ ಇದಾನೆ ಕೂಡಾ. ಅದಕ್ಕೆ ಸರಿಯಾಗಿ, ಚುನಾವಣೇಲಿ ಗೆದ್ದ ತಕ್ಷಣವೇ ನೀವು ಕ್ಷೇತ್ರವನ್ನು, ಅಲ್ಲಿನ ಮತದಾರರನ್ನು, ಅವರ ಸಮಸ್ಯೆಗಳನ್ನು ಮರೆತುಬಿಡ್ತಾ ಇದೀರ. ಕ್ಷೇತ್ರದ ಮನೆ ಹಾಳಾಗಲಿ, ಅಲ್ಲಿನ ಉದ್ಧಾರ ಕಟ್ಕೊಂಡು ನಮಗೆ ಆಗಬೇಕಾದ್ದೇನು ಅಂದ್ಕೊಂಡು ಬೆಂಗ್ಳೂರಲ್ಲಿ ಆರಾಮಾಗಿ ಉಳೀತೀರಿ. ಬಂಗಲೆ ಕಟ್ಟಿಸ್ತೀರಿ. ಸೈಟ್ ತಗೋತೀರಿ. ಬೇನಾಮಿ ಹೆಸರಲ್ಲಿ ಆಸ್ತಿ ಮಾಡ್ತೀರಿ. ಒಂದೆರಡಲ್ಲ, ಹತ್ತತ್ತು ಕಾರು ಇಟ್ಕೋತೀರಿ. ಇಷ್ಟೆಲ್ಲ ಆದ ನಂತರವೂ ಯಾವುದಾದ್ರೂ ವೇದಿಕೇಲಿ ಮಾತಾಡಲು ಛಾನ್ಸು ಸಿಕ್ಕರೆ- ‘ಭ್ರಷ್ಟಾಚಾರದ ವಿರುದ್ಧ ಹೋರಾಡುವುದೇ ನನ್ನ ಗುರಿ’ ಎಂದು ಘೋಷಿಸ್ತೀರಿ! ಮತ ಕೇಳೋಕೆ ಬರ್ತಾ ಇರೋ ಮಹನೀಯರೆ, ನಿಮ್ಮ ಮನಸ್ಸೊಳಗೆ ಇರೋದು ಇಂಥವೇ ಆಲೋಚನೆಗಳು. ನಾಳೆ ನೀವು ಎಮ್ಮೆಲ್ಲೆ ಆಗಿ ವಿಧಾನಸೌಧಕ್ಕೆ ಹೋದ್ರೆ ಮಾಡೋದೇ ಹೀಗೆ. ಒಪ್ತೀರಾ ಅಲ್ವಾ?
ಇಂಥ ಸಂದರ್ಭದಲ್ಲೇ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಹೇಳಬೇಕು ಅನ್ನಿಸ್ತಿದೆ. ಹೌದು, ಇವತ್ತಿಗೂ ಅದೆಷ್ಟೋ ಸಾವಿರ ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ತೊಂದರೆಯಿದೆ. ಕರೆಂಟು ದಿನಕ್ಕೆ ಹತ್ತು ಬಾರಿ ಕೈಕೊಡ್ತಿದೆ. ರಸ್ತೆ ಎಂಬುದು ಇಲ್ವೇ ಇಲ್ಲ. ರಸ್ತೆಯೇ ಇಲ್ಲ ಅಂದ್ಮೇಲೆ ಬಸ್ಸಿನ ಮಾತೆಲ್ಲಿ? ಕೆಲವು ಕಡೆ ಆಸ್ಪತ್ರೆಗಳಿವೆ ನಿಜ. ಆದರೆ ಅಲ್ಲಿ ಡಾಕ್ಟ್ರಿಗೇ ಕಾಯಿಲೆ. ಶೌಚಾಲಯದ ಸಮಸ್ಯೆ ಬಿಡಿ, ಬಹುಶಃ ಮಂದಿನ ಹತ್ತು ವರ್ಷದ ನಂತರ ಕೂಡಾ ನಮ್ಮ ಹಳ್ಳಿಯ ಜನ ನಾಚಿಕೆಯಿಂದ ಗದ್ದೆಯ ಕಡೆ ಹೋಗುವ ದೃಶ್ಯ ಜೀವಂತ ಇದ್ದೇ ಇರುತ್ತೆ ಅನಿಸುತ್ತೆ. ಇದೆಲ್ಲ ಗೊತ್ತಿದ್ರೂ ನೀವು, ನಿಮ್ಮನ್ನು ಆಯ್ಕೆ ಮಾಡುವ ಪಕ್ಷಗಳು- ‘ನಾವು ಸೈಕಲ್ ಕೊಡ್ತೀವಿ. ಕಲರ್ ಟಿ.ವಿ. ಕೊಡ್ತೀವಿ. ಅಕ್ಕಿ ಕೊಡ್ತೀವಿ’ ಎಂದು ಘೋಷಿಸಿದಾಗ ನಗು ಬರುತ್ತೆ.
ಸುಮ್ನೇ ಯೋಚಿಸಿ ನೋಡಿ: ‘ಮನೇಲಿ ಕರೆಂಟೇ ಇರಲ್ಲ. ಹಾಗಿರೋವಾಗ ಕಲರ್ ಟಿ.ವಿ. ತಗೊಂಡು ಉಪ್ಪು-ಕಾರ ಹಾಕ್ಕಂಡು ನೆಕ್ಕೋಕಾಗ್ತದಾ? ಊರಿಗೆ ರಸ್ತೇನೇ ಇರಲ್ಲ, ಅಲ್ಲಿ ಸೈಕಲ್ ಹೊಡೆಯೋಕಾಗ್ತದಾ? ಕುಡಿಯೋಕೇ ನೀರಿಲ್ಲ ಅಂದ ಮೇಲೆ ನಿಮ್ಮ ಅಕ್ಕಿ ತಿಂದು ಬದುಕೋಕಾಗ್ತದಾ? ಇಲ್ಲ ತಾನೆ? ಪರಿಸ್ಥಿತಿ ಹೀಗಿರೋವಾಗ ನೀವು ಕೊಡುವ ಆಶ್ವಾಸನೆಗಳಿಗೆ ಏನಾದ್ರೂ ಅರ್ಥ ಇದೆಯಾ ಸ್ವಾಮೀ…?
ಹೌದಲ್ವ? ನೀವೇನು ಆಕಾಶದಿಂದ ಇಳಿದು ಬಂದವರಲ್ಲ. ನೀವೂ ಹಳ್ಳಿಯವರೇ. ರೈತರ ಮನೆಯ ಮಕ್ಕಳೇ. ಎಲ್ಲ ಸಮಸ್ಯೆಯನ್ನೂ ಹತ್ತಿರದಿಂದ ಕಂಡಿರುವವರೇ. ಹಾಗಿದ್ದೂ ಅದೇನೂ ಗೊತ್ತೇ ಇಲ್ಲ ಅನ್ನೋಥರ ನಡ್ಕೊಳ್ಳೋದು ಕಲಿತುಬಿಟ್ಟಿದ್ದೀರಿ. ಹಣಬಲದಿಂದ ಏನ್ ಬೇಕಾದ್ರೂ ಮಾಡಬಹುದು ಅಂತ ಮೆರೀತಾ ಇದೀರಿ. ಮತದಾರರ ಕಿವಿ ಮೇಲೆ ಹೂವಿಡೋದು ಸುಲಭ ಅಂತ ತಿಳ್ದಿದೀರಿ. ಅದೇ ಕಾರಣದಿಂದ ನೆನಪು ಮಾಡಿಕೊಡ್ತಾ ಇದೀನಿ. ಕೇಳಿ: ಈ ಕಡೆ ಬೆಂಗ್ಳೂರು ಸುತ್ತಮುತ್ತ ರೈತನ ಜಮೀನು ರಿಯಲ್ ಎಸ್ಟೇಟಿನ ಪಾಲಾಗಿದೆ. ಮಂಡ್ಯದ ರೈತನ ಕಬ್ಬಿಗೆ ಬೆಂಬಲ ಬೆಲೆ ಕುಸಿದಿದೆ. ಅಡಿಕೆಗೆ ರೇಟು ಬಿದ್ದು ಹೋಗಿ ಮಲೆನಾಡ ರೈತನ ಕನಸು ಮಣ್ಣು ಪಾಲಾಗಿದೆ. ಬಿಜಾಪುರದ ಬಡವ ದ್ರಾಕ್ಷಿ ಬೆಳೆದೂ ಕಹಿ ಅನುಭವಿಸಿದ್ದಾನೆ. ತೊಗರಿ ಬೆಳೆದವರ ಬದುಕು ತೂಫಾನಿಗೇ ಸಿಕ್ಕಿಕೊಂಡಿದೆ. ಗಂಟಲಲ್ಲೇ ಸಿಕ್ಕಿಕೊಂಡ ಮುಸುಕಿನ ಜೋಳ ಹುಬ್ಬಳ್ಳಿ ರೈತನ ಜೀವ ತೆಗೆಯುತ್ತಿದೆ. ಹೀಗಿರುವಾಗ ಅವರೆಲ್ಲ ಒಂದು ಆಸರೆಗಾಗಿ, ಒಂದು ಸಾಂತ್ವನದ ಮಾತಿಗಾಗಿ, ತಮ್ಮ ಕಂಬನಿ ಒರೆಸುವ ಕೈಗಾಗಿ ಕಾದು ನಿಂತಿದ್ದಾರೆ.
****
ಹೌದು ಸಾರ್. ಇಂಥ ಸಂದರ್ಭದಲ್ಲೇ ಚುನಾವಣೆ ಎದುರಾಗಿದೆ. ನೀವು-‘ವೋಟು ಕೊಡೀಪ್ಪಾ. ನೀವೇ ನಮ್ಮ ಪಾಲಿನ ದೇವರೂ. ನೀವು ಕೈಬಿಟ್ರೆ ನಾವು ಬದುಕೋದು ಹೇಗೆ? ಈ ಸರ್ತಿ ನನ್ನನ್ನು ಗೆಲ್ಲಿಸಿದ್ರೆ ಸಾಕು, ಇಂದ್ರನ ದೇವಲೋಕವನ್ನೇ ತಂದು ನಿಮ್ಮೆದುರು ಇಡ್ತೀನಿ’ ಎಂದೆಲ್ಲ ಬಡಾಯಿ ಕೊಚ್ಚಿಕೊಳ್ತಾ ಇದೀರ. ದುಡ್ಡಿನ ಆಸೆ ತೋರಿಸ್ತಾ ಇದೀರ. ಹಿಂಬಾಲಕರ ಕಡೆಯಿಂದ ಸೀರೆ- ಶರಾಬು ಕಳಿಸ್ತಾ ಇದೀರ.
ಒಂದು ಮಾತು ಹೇಳಲಾ ಸ್ವಾಮೀ, ಭಾರತದ ಕೋಟ್ಯಾನುಕೋಟಿ ಮತದಾರರು ಇವತ್ತಿಗೂ ಬಡವರಷ್ಟೇ ಅಲ್ಲ, ಕಡುಬಡವರು ಎಂಬುದು ನಿಜ. ಆದರೆ ಅವರೆಲ್ಲ ನಿಮ್ಮ ದುಡ್ಡನ್ನೇ, ನೀವು ಕೊಡುವ ತುಂಡು ಬಟ್ಟೆಯನ್ನೇ ನಂಬಿಕೊಂಡು ಕುಳಿತಿಲ್ಲ. ಅವರ ಬದುಕು ಅಷ್ಟರಮಟ್ಟಿಗೆ ಹೇಗೋ ನಡೀತಾ ಇದೆ. ನಿಜಕ್ಕೂ ಈಗ ಮತ್ತು ಮುಂದೆ ನೀವು ಮಾಡಬೇಕಿರೋದು ಏನು ಗೊತ್ತ? ಹಳ್ಳಿಗಳಿಗೆ ವಿದ್ಯುತ್ ಕೊಡಿಸಿ. ನೀರಿನ ವ್ಯವಸ್ಥೆ ಕಲ್ಪಿಸಿ. ಗಬ್ಬೆದ್ದು ನಾರುತ್ತಿರುವ ಒಳಚರಂಡಿಗಳನ್ನ ಕ್ಲೀನ್ ಮಾಡಿಸುವ ಮಾತಾಡಿ. ಎಸ್ಸೆಸ್ಸೆಲ್ಸಿ/ಪಿಯೂಸಿಯ ನಂತರ ಮುಂದೆ ಓದೋಕಾಗದೆ ಹಳ್ಳೀಲೇ ಉಳಿದುಬಿಟ್ಟಿದಾರಲ್ಲ, ಅಂಥವರಿಗೆ ಅಂತಾನೇ ಕ್ಷೇತ್ರದಲ್ಲಿ ಒಂದು ಫ್ಯಾಕ್ಟರಿ ಶುರು ಮಾಡಲು ಮುಂದಾಗಿ. ಚುನಾವಣೇಲಿ ಮಾಡುವ ದುಂದುವೆಚ್ಚದ ಬದಲು, ಅದೇ ದುಡ್ಡನ್ನು ಬಡವರ ಬದುಕು ನೇರ್ಪುಗೊಳಿಸಲು ಬಳಸಿ. ಸೋತರೂ ಪರವಾಗಿಲ್ಲ ಕ್ಷೇತ್ರದ ಜನರನ್ನು ಮರೆಯಲಾರೆ ಅಂತ ಶಪಥ ಮಾಡಿ. ರೈತನ ಕೈ ಹಿಡಿಯಿರಿ. ಕಷ್ಟ ಸುಖ ವಿಚಾರಿಸಿ. ಕಣ್ಣೀರು ಒರೆಸಿ. ‘ನಾನಿರೋವಾಗ ನೀನು ಹೆದರೋದೇನಪ್ಪ? ನಿಂಗೆ ತೊಂದರೆ ಆಗದಂತೆ ನೋಡ್ಕೋತೇನೆ ಹೆದರಬೇಡ’ ಎಂದು ಧೈರ್ಯ ಹೇಳಿ. ನಿರ್ಗತಿಕರಿಗೆ ಒಂದಿಷ್ಟು ಅನ್ನ, ಒಂದು ಸೂರು ಒದಗಿಸಲು ರವಷ್ಟಾದರೂ ಪ್ರಯತ್ನ ಮಾಡಿ.
ಅದು ಬಿಟ್ಟು, ಹಳ್ಳಿಯ ಜನರನ್ನೇ ಎರಡು ಗುಂಪು ಮಾಡೋದು, ಒಬ್ಬರ ವಿರುದ್ಧ ಇನ್ನೊಬ್ಬರನ್ನು ಎತ್ತಿಕಟ್ಟೋದು, ಕ್ಷೇತ್ರವನ್ನೇ ಮರೆತು ಕಾಸು ಮಾಡಲು ನಿಂತುಬಿಡೋದು, ಊರ ಜನ ಹೊಡೆದಾಟಕ್ಕೆ ನಿಂತರೆ ತೆಪ್ಪಗೆ ಬೆಂಗ್ಳೂರು ಸೇರೋದು. ಬಡವರು ಸಾಯ್ತಾ ಇದ್ರೂ ಆ ಕಡೆ ತಿರುಗಿ ಕೂಡಾ ನೋಡ್ದೆ ಇರೋದು, ಯಾರಾದ್ರೂ ಕೇಳಿದ್ರೆ ‘ದಿನಾ ಸಾಯೋರಿಗೆ ಅಳೋರು ಯಾರ್ರೀ’ ಎಂದು ಉಡಾಫೆಯ ಮಾತಾಡುವುದು-ಛಿ, ಛಿ, ಅದೆಲ್ಲ ಸಣ್ಣತನ ಕಣ್ರೀ…
ಪ್ಲೀಸ್, ಅಂಥ ಕೆಲಸ ಮಾಡಬೇಡಿ. ಇಲ್ಲ, ನಾವು ಹಾಗೆ ಮಾಡೋದೇ ಸೈ ಅನ್ನುವಂತಿದ್ರೆ ವೋಟು ಕೇಳಲು ಬರಲೇಬೇಡಿ. ಮುಂದೆ ನೀವೆಲ್ಲಾ ಜನರನ್ನು ಪೋಷಿಸುವ ನಾಯಕರಾಗಬೇಕೇ ವಿನಃ ಶೋಷಿಸುವ ಶಾಸಕರಾಗಬಾರದು. ಹಂಗೇನಾರ ಮಾಡಿದ್ರೋ- ನೆನಪಿರಲಿ. ಕುದುರೆ ನಿಮ್ಮದಿರಬಹುದು. ಅದರ ಲಗಾಮು ನಮ್ಮ ಹತ್ರಾನೇ ಇರುತ್ತೆ. ನಮಗೆ ಮೇಲೆ ಹತ್ತಿಸಿ ಮೆರೆಸುವುದೂ ಗೊತ್ತು. ಕೆಳಗೆ ಬೀಳಿಸಿ ಮಣ್ಣು ಮುಕ್ಕಿಸುವುದೂ ಗೊತ್ತು. ಈ ಸೂಕ್ಷ್ಮವನ್ನು ಅರ್ಥಮಾಡಿಕೊಂಡಾದರೂ ನೀವೆಲ್ಲ ಜನಪರ ಕೆಲಸ ಮಾಡಲು ಮುಂದಾಗ್ತೀರಿ ಅನ್ನೋ ನಿರೀಕ್ಷೆಯೊಂದಿಗೆ ಪತ್ರ ಮುಗಿಸ್ತಿದೀನಿ. ನಮಸ್ಕಾರ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: