ಪ್ರಿಯ ಅರಮನೆ ನಾಗಶೇಖರ್,

ಮಗಾ, ಹ್ಯಾಟ್ಸಾಫ್ ಕಣೋ…
‘ಬೇರೆ ಯಾರೂ ಅಲ್ಲಾರೀ, ಅವ್ನೇ. ಕಪ್ಪಗಿರಲಿಲ್ವಾಆಕ್ಟರ್ರು? ಅವ್ನೇ ನಾಗ್ಶೇಖರ್. ‘ನಿನಗಾಗಿ’, ‘ಮಣಿ’, ‘ಮರುಜನ್ಮ’ ಸಿನಿಮಾಗಳಲ್ಲಿ ಹಾಸ್ಯ ನಟನ ಪಾರ್ಟು ಮಾಡಿದ್ನಲ್ಲ ಅವ್ನೇ ಕಣ್ರೀ. ‘ಅರಮನೆ’ಗೆ ಅವನೇ ನಿರ್ದೇಶಕ. ಮಗ ಫಸ್ಟ್ ಸಿನಿಮಾದಲ್ಲೇ ಜಾಕ್ಪಾಟ್ ಹೊಡೆದಿದ್ದಾನೆ. ‘ಅರಮನೆ’ಯಲ್ಲಿ ಏನಿಲ್ಲ ಹೇಳಿ? ಅಲ್ಲಿ ಕಥೆಯಿದೆ. ಅದರೊಳಗೆ ಸಂತೋಷವಿದೆ. ಸಂಕಟವಿದೆ. ಕನಸಿದೆ. ಕಣ್ಣೀರೂ ಇದೆ. ನಾವು ಅಂದುಕೊಂಡಂತೆ ಏನೂ ನಡೆಯೋದಿಲ್ಲ ಎಂಬ ಸರಳ ಸತ್ಯದ ಅನಾವರಣವಿದೆ. ಒಂದೇ ಮಾತಲ್ಲಿ ಹೇಳಬೇಕು ಅಂದ್ರೆ, ಈಚೀಚಿನ ದಿನಗಳಲ್ಲಿ ಬಂದ ಬೆಸ್ಟ್ ಸಿನಿಮಾ ಇದು. ಇಂಥದೊಂದು ಸಿನಿಮಾ ಕೊಟ್ಟಿದಾನಲ್ಲ ಆ ನಾಗ್ಶೇಖ್ರ? ಅವ್ನಿಗೆ ಒಂದು ಥ್ಯಾಂಕ್ಸ್ ಹೇಳ್ಬೇಕು. ಒಂದ್ಸಲ ಕಂಗ್ರಾಟ್ಸ್ ಅನ್ನಬೇಕು. ಹಾಗೇ ಸುಮ್ನೆ ಕೈಕುಲುಕಬೇಕು ಅಥವಾ ಸಖತ್ ರಶ್ನಲ್ಲಿ ಅವನು ಕಳೆದು ಹೋಗಿದ್ರೆ ದೂರ ನಿಂತೇ ಒಂದು ಕಿಸ್ ಬಿಸಾಕಬೇಕು…’
ಪ್ರಿಯ ನಾಗಶೇಖರ್, ‘ಅರಮನೆ’ ನೋಡಿ ಬಂದವರೆಲ್ಲ ಹೀಗೆ ಮಾತಾಡುತ್ತಿದ್ದಾರೆ. ಅದೇ ವೇಳೆಗೆ ನೀನು-ಸಿನಿಮಾ ಮೆಚ್ಚಿಕೊಂಡವರಿಗೆಲ್ಲ ಥ್ಯಾಂಕ್ಸ್ ಹೇಳೋದು ಹೇಗೆ ಎಂದು ತಿಳಿಯದೆ ಒದ್ದಾಡ್ತಾ ಇದೀಯ. ಈ ಕಡೆ ಗಾಂನಗರದ ಜನ ನಿನ್ನ ಗೆಲುವನ್ನು ನಂಬಲಾಗದೆ ನಂಬುತ್ತಿದ್ದಾರೆ. ಇಂಥದೊಂದು ಅಪರೂಪದ ಸಿನಿಮಾ ಕೊಟ್ಟವನು ನಿಜಕ್ಕೂ ಇವ್ನಾ? ಇವನೇನಾ? ಇಷ್ಟು ದಿನ ಒಳ್ಳೇ ಕಾರ್ಟೂನ್ ನೆಟ್ವರ್ಕ್ ಥರಾ ಜೋಕು ಮಾಡಿಕೊಂಡು, ಸಿನಿಮಾದಲ್ಲಿ ಜೋಕರ್ ಆಗಿದ್ದ ಹುಡುಗ ಇವನೇನಾ? ಇವನೊಳಗೆ ‘ಅರಮನೆ’ಯಂಥ ಅದ್ಭುತ ಕಥೆಗಳಿವೆಯಾ? ಅವನೊಳಗೊಬ್ಬ ನಿರ್ದೇಶಕ ನಿಜವಾಗ್ಲೂ ಇದ್ದಾನಾ ಎಂದು ಮತ್ತೆ ಮತ್ತೆ ಕೇಳತೊಡಗಿದ್ದಾರೆ. ಅವರಿಗೆ ಕೆಟ್ಟ ಕುತೂಹಲ. ದೊಡ್ಡ ಅನುಮಾನ! ಹೌದಲ್ವಾ? ಅಂಥ ಮಾತು ಕೇಳಿದಾಗೆಲ್ಲ-ಥತ್, ಒಂದು ಸಂತೋಷವನ್ನು ಎಂಜಾಯ್ ಮಾಡೋಕೂ ಈ ಜನ ಬಿಡ್ತಾಯಿಲ್ಲ ಅಂದ್ಕೊಂಡಿರ್ತೀಯ ನೀನು. ಇಂಥ ಸಂದರ್ಭದಲ್ಲೇ ಹಾಗೇ ಸುಮ್ಮನೇ ನಿನ್ನ ಕೈ ಹಿಡಿದು ‘ಅರಮನೆ’ಯ ಹಾದಿಯಲ್ಲೇ ನಡೆದು ಹೋಗಿ ಸುಮ್ನೇ ಒಂದ್ಸಲ ಹಿಂದಿರುಗಿ ನೋಡಬೇಕು. ನಿನ್ನ ತಾಕತ್ತು, ಪರಿಶ್ರಮ, ಅದರ ಹಿಂದಿರುವ ನೋವು ಎಲ್ಲವನ್ನೂ ಎಲ್ಲರಿಗೂ ಹೇಳಿಬಿಡಬೇಕು ಅನ್ನಿಸಿದ್ದರಿಂದ ಈ ಪತ್ರ- ಉಳಿದವರ ಥರಾನೇ ನೀನೂ ಓದ್ತಾ ಹೋಗು. ಓಕೆ?
***
ಹೌದಲ್ವ ನಾಗ್? ಚನ್ನಪಟ್ಟಣ-ಮದ್ದೂರಿನ ಮಧ್ಯೆ ಸಿಗುವ ನಿಡಘಟ್ಟ ನಿನ್ನ ಊರು. ನಿನ್ನ ಬಾಲ್ಯ ಸಂಕಟದ ಮಧ್ಯೇನೇ ಕಳೀತು. ಮುಂದೆ ಮಂಡ್ಯದ ಎಂಜಿನಿಯರಿಂಗ್ ಕಾಲೇಜಿಗೆ ಬಂದೆ. ಸಿವಿಲ್ ಎಂಜಿನಿಯರಿಂಗ್ ಓದ್ತ ಓದ್ತಾನೇ ನಾಟಕದಲ್ಲಿ ಅಭಿನಯಿಸಿದೆ. ಕವಿತೆ ಬರೆದೆ. ಹಾಡು ಹೇಳಿದೆ. ಹತ್ತಲ್ಲ, ನೂರು ಮಂದಿ ಮೆಚ್ಚುವಂತೆ ಜೋಕು ಹೊಡೆದೆ. (ಆಗ್ಲೇ ಲವ್ವು ಮಾಡಿದ್ಯಾ? ಅದರಲ್ಲಿ ಪಲ್ಟಿ ಹೊಡೆದ್ಯಾ? ಗೊತ್ತಿಲ್ಲ) ಹಿಂದೇನೇ ಡಿಸ್ಟಿಂಕ್ಷನ್ನಲ್ಲಿ ಡಿಗ್ರಿ ಮುಗಿಸ್ದೆ. ಓಹ್, ಮುಂದೆ ಇವ್ನೆಲ್ಲೋ ಲೆಕ್ಚರರ್ ಆಗ್ತಾನೆ ಅಂದುಕೊಂಡ್ರೆ, ನೀನು ಸೀದಾ ಬೆಂಗಳೂರಿಗೆ ಬಂದೆ. ಸಿನಿಮಾದ ಹುಚ್ಚಿಗೆ ಬಿದ್ದೆ. ಅಭಿನಯ ತರಂಗ ಸೇರಿದೆ, ನಟನೆ ಕಲಿತೆ. ನಗಿಸುವುದು ಕಲಿತೆ. ಟೈಮಿಂಗು ತಂತಾನೇ ಒಲಿದು ಬಂತು. ನೋಡ್ತ ನೋಡ್ತಾನೇ ಟಿ.ವಿ. ಸೀರಿಯಲ್ನಲ್ಲಿ ಕಾಣಿಸಿಕೊಂಡೆ. ಮುಂದೆ ಗಾಂಬಜಾರ್ಗೆ ಹತ್ತಿರವಿದ್ದ ನಾಗಸಂದ್ರ ಸರ್ಕಲ್ನಲ್ಲಿ ಒಂದು ರೂಮು ಮಾಡಿದೆ. ಆ ವೇಳೆಗೆ ನಟರಾಗಬೇಕು ಎಂಬ ಹುಚ್ಚು ಅಂಟಿಸಿಕೊಂಡಿದ್ದ ಈ ಕಾಮಿಡಿ ಗಣೇಶು, ಆ ಶ್ರೀನಗರ ಕಿಟ್ಟಿ ನಿನ್ನ ಜತೆಗಾರರಾಗಿದ್ರು. ನೀವು ಮೂವರೂ ಜತೆಗಿದ್ದಾಗ ಅವರದು ಆಕ್ಟಿಂಗು. ನಿನ್ನದು ಡೈರೆಕ್ಷನ್ನು. ಮಧ್ಯೆ ಮಧ್ಯೆ ಹಾಸ್ಯದ ಹೆಸರಲ್ಲಿ ಅಪಹಾಸ್ಯ! ಆಗೆಲ್ಲ ನೀವು ಆಡಿದ ಮಾತು, ಕಂಡ ಕನಸು, ಬರೆದ ಕವಿತೆ, ಮರೆಯಲಾಗದ ವ್ಯಥೆ… ಒಂದಾ, ಎರಡಾ? ಅದನ್ನೆಲ್ಲ ಹೇಳಿಕೊಳ್ಳಲು ನೀವೇನೋ ರೆಡಿ ಇದ್ರಿ. ಆದರೆ ಕೇಳುವವರೇ ಇರಲಿಲ್ಲ. ಹೌದಲ್ವ ನಾಗ್?
ಬಹುಶಃ ನಿನಗೆ ಚಿತ್ರರಂಗದಿಂದ ಕರೆ ಬಂದದ್ದು ಇದೇ ದಿನಗಳಲ್ಲಿ. (ಅಥವಾ ಅದಕ್ಕೂ ಮೊದಲಾ? ಗೊತ್ತಿಲ್ಲ…!) ಸಿನಿಮಾದ ಹೆಸರು-ನಿನಗಾಗಿ! ಅವತ್ತಿನ ಅವಮಾನವನ್ನು ಬಹುಶಃ ನೀನು ಜನ್ಮ ವಿಡೀ ಮರೆಯಲಾರೆ ಅನಿಸ್ತದೆ. ಹೌದಲ್ವ? ಆ ಸಿನಿಮಾದಲ್ಲಿ ಹಾಸ್ಯ ನಟನ ಪಾತ್ರಕ್ಕೇಂತ ಕರೆಸ್ಕೊಂಡ್ರು. ಅವನ್ಯಾರೋ ಮೇಕಪ್ ಮ್ಯಾನು ನಿನ್ನನ್ನು ಕಂಡದ್ದೇ ‘ಹೋಗ್ ಹೋಗೊ ಕರಿಯಾ… ತಂದಿರೋ ಬಣ್ಣಾನೆಲ್ಲ ಮೆತ್ತಿದ್ರೂ ನೀನು ಕೆಂಪಗೆ ಕಾಣ್ಸೋದಿಲ್ಲ. ನಿಂಗೆ ಮೇಕಪ್ ಬೇರೆ ಕೇಡು’ ಅಂದುಬಿಟ್ಟ. ತಿಂಡಿ ಕೊಡಲು ಬಂದವನೂ ಗೇಲಿ ಮಾಡಿದ. ಅವತ್ತು ಇಡೀ ದಿನ ತಿಂಡಿಯಿಲ್ಲ. ಊಟ ಸಿಕ್ತಾ? ಅದೂ ನೆನಪಿಲ್ಲ. ಆದರೆ, ಅದನ್ನೆಲ್ಲ ಹೇಳಿಕೊಂಡು ನೀನು ಅಳಲಾರದೇ ನಕ್ಕಿದ್ದು ಮಾತ್ರ ಚನ್ನಾಗಿ ನೆನಪಿದೆ. ಬಹುಶಃ ಬೇರೆಯವರಾಗಿದ್ರೆ ಅವತ್ತೇ ಚಿತ್ರರಂಗಕ್ಕೆ ಗುಡ್ಬೈ ಹೇಳಿ ಹೋಗಿಬಿಡ್ತಿದ್ರು. ಆದ್ರೆ ನೀನು-ಭಂಡ. ಇಲ್ಲೇ ನಿಂತೆ. ಅವಮಾನಗಳನ್ನೆಲ್ಲ ಮರೆತೆ. ಉಕ್ಕಿ ಬಂದ ಕಂಬನಿಯನ್ನು ಕಣ್ಣೊಳಗೇ ಇಂಗಿಸಲು ಕಲಿತೆ. ನೋವನ್ನೆಲ್ಲಾ ಮರೆತೆ.
ಅಷ್ಟಾಯಿತಲ್ಲ, ನಿನ್ನೊಳಗಿದ್ದ ಕಲಾವಿದ ಎದ್ದು ನಿಂತ. ಅವನು ಮಾತಾಡಿ ನಗಿಸಿದ. ಮಾತಾಡದೇ ನಗಿಸಿದ. ಹೂಂ ಕಣೋ, ಒಂದೊಂದ್ಸಲ ನಿನ್ನ ಹಾವಭಾವ ಕಂಡ್ರೆ ಸಾಕು, ನಗು ಬಂದುಬಿಡ್ತಿತ್ತು. ನಿನ್ನ ಅದ್ಭುತ ಟೈಮಿಂಗ್ ಕಂಡಾಗಲೆಲ್ಲ ಮೆಚ್ಚುಗೆ-ಹೊಟ್ಟೆ ಉರಿ ಜತೆಜತೆಗೇ ಆಗ್ತಾ ಇತ್ತು. ಈ ಮಧ್ಯೆಯೇ ನೀನು ಸದ್ದಿಲ್ಲದೆ ಐವತ್ತೈದು ಸಿನಿಮಾಗಳನ್ನು ಮುಗಿಸಿಬಿಟ್ಟೆ. ಒಂದು ಐಡೆಂಟಿಟಿ ಗಳಿಸಿಕೊಂಡೆ. ಅದುವರೆಗೂ ಅವನ್ಯಾರೋ ನಾಗಶೇಖ್ರ ಅಂತಿದ್ದ ಜನ ‘ಇವ್ರೇ ಕಣ್ರೀ ನಾಗಶೇಖರ್’ ಎಂದು ಗುರುತಿಸುವ ಮಟ್ಟಿಗೆ ಬದಲಾಗಿಬಿಟ್ಟೆ. ಮುಂದೆ ನೀನು ಒಂದೆರಡು ಕಥೆ ಬರೆದರೆ, ಅವು ಇನ್ನೆಲ್ಲೋ ಕಳೆದು ಹೋದವು. ಮುಂದೆ ಒಂದು ಸಿನಿಮಾಕ್ಕೆ ಹಾಡು ಬರೆದಾಗ ಇದೇ ಗಾಂನಗರದ ಜನ ಹುಬ್ಬೇರಿಸಿದ್ದರು. ಆಗಲೇ ‘ಅರಮನೆ’ ಹೆಸರಿನ ಕಥೆ ರೆಡಿ ಮಾಡಿದೀನಿ. ಅದನ್ನು ನಾನೇ ನಿರ್ದೇಶಿಸ್ತೀನಿ ಅಂದೆ ನೋಡು-ಆಗಲೂ ಜನ ತಲೆಗೊಂದು ಮಾತಾಡಿದ್ರು.
ಆದರೆ, ‘ಅರಮನೆ’ಯ ಶೂಟಿಂಗು ಶುರುವಾದ ಒಂದೆರಡೇ ದಿನದಲ್ಲಿ ಹಿರಿಯ ನಟ ಅನಂತನಾಗ್ ನಿನ್ನ ಬೆನ್ನು ತಟ್ಟಿದ್ರು. ಜತೆಗಿದ್ದವರ ಮುಂದೆ- ‘ಈ ಹುಡುಗ ಸಾಮಾನ್ಯ ಅಲ್ಲ, ಭಾಳಾ ಪ್ರಚಂಡ. ಇವನ ನಿರೀಕ್ಷೆಯ ಮಟ್ಟಕ್ಕೆ ಅಭಿನಯಿಸ್ತೀನಾ ಎಂಬ ಅನುಮಾನ ನನ್ನನ್ನು ಕಾಡಿದೆ. ಅರಮನೇಲಿ ಖಂಡಿತ ಹೊಸತನವಿದೆ. ಅದು ಎಲ್ಲರಿಗೂ ಇಷ್ಟವಾಗೇ ಆಗುತ್ತೆ’ ಎಂದಿದ್ದರು!
ಛಿo. ಅವರ ಮಾತೀಗ ನಿಜವಾಗಿದೆ. ಪ್ರೀತಿ, ಸ್ನೇಹ, ಮೋಹ, ಪ್ರೇಮ, ಕಾಲೇಜು, ಅಲ್ಲಿನ ಕಣ್ತುಂಬೋ ಫಿಗರ್ರು, ನಾಯಕನ ಹುಡುಗಾಟ, ಅವನ ಕ್ಯಾಮರಾದ ಮೆರೆದಾಟ, ಚಿತ್ರದುದ್ದಕ್ಕೂ ಇರುವ ಕಲರ್ ಕಲರ್ ಕಾಮನ ಬಿಲ್ಲು, ಆಗೊಮ್ಮೆ ಈಗೊಮ್ಮೆ ಕಂಡು, ಕೆಣಕುವ ಬ್ಲ್ಯಾಕ್ ಅಂಡ್ ವೈಟ್ನ ಮೋಹಕ ನೆರಳು ಎಲ್ಲರಿಗೂ ಇಷ್ಟವಾಗಿ ಬಿಟ್ಟಿದೆ. ಒಂದು ದೊಡ್ಡ ಖುಷಿಯೆಂದರೆ- ‘ಅರಮನೆ’ಯಲ್ಲಿ ಹಿಂಸೆಯಿಲ್ಲ. ಡಿಶುಂಡಿಶುಂ ಫೈಟಿಂಗಿಲ್ಲ. ಐಟಂ ಸಾಂಗ್ ಇಲ್ಲ. ಡಬ್ಬಲ್ ಮೀನಿಂಗ್ ಹಾಸ್ಯವಿಲ್ಲ. ಆದರೆ ಇಡೀ ಸಿನಿಮಾಕ್ಕೆ ಒಂದು ಸ್ಪೀಡ್ ಇದೆ. ನಾಯಕನ ಪಾತ್ರದಲ್ಲಿ ನಾವೇ ಇದೀವಿ! ನಮ್ಮ ಮನಸ್ಸಿದೆ. ನಮ್ಮದೇ ತುಂಟಾಟವಿದೆ. ನಮ್ಮದೇ ಆಸೆ ಮತ್ತು ಕಣ್ಣೀರಿದೆ. ಅನಂತನಾಗ್ ಎಂಬ ಮುದುಕನ ಪಾತ್ರ ಬೇಡ ಬೇಡವೆಂದರೂ ಊರಲ್ಲಿರೋ ಒಂಟಿ ಅಜ್ಜನ ನೆನಪು ತರುತ್ತೆ. ಒಂದೊಂದು ಸಂದರ್ಭದಲ್ಲಂತೂ ನಮಗೇ ಗೊತ್ತಿಲ್ಲದಂತೆ ಕೆನ್ನೆ ಒದ್ದೆಯಾಗುತ್ತೆ. ಪಾಸ್ಪೋರ್ಟ್ ಸೈಜಿನ ಫೋಟೊ ತೆಗೆಯುವ ದೃಶ್ಯದಿಂದ ಶುರುವಾಗಿ, ಗ್ರೂಪ್ ಫೋಟೊ ತೆಗೆವ ದೃಶ್ಯದೊಂದಿಗೆ ಸಿನಿಮಾ ಮುಗಿಯುತ್ತೆ. ಕಡೆಯ ದೃಶ್ಯವಂತೂ ತುಂಬಾನೇ ಸಂಕಟ ಕೊಡುತ್ತೆ. ಅದೇ ಕಾರಣಕ್ಕೆ- ಮೊದಲು ನಗುತ್ತಾ ನೋಡಲು ಕುಳಿತವರು ಕಡೆಗೆ ಕಣ್ಣೀರು ಒರೆಸ್ಕೊಂಡು ಎದ್ದು ಬರ್ತಾರೆ. ಇಂಥದೊಂದು ಬೊಂಬಾಟ್ ಸಿನಿಮಾ ಕೊಟ್ಟಿದೀಯಲ್ಲ-ಮಗಾ, ಹ್ಯಾಟ್ಸಾಫ್ ಕಣೋ…
***
ಹೋಲ್ಡಾನ್, ಹೋಲ್ಡಾನ್. ಇಷ್ಟು ಹೇಳಿದ ಮಾತ್ರಕ್ಕೆ ‘ಅರಮನೆ’ ಅದ್ಭುತ ಸಿನಿಮಾ ಎಂಬ ನಿರ್ಧಾರಕ್ಕೆ ಖಂಡಿತ ಬರಬೇಡ. ಅದು ಅದ್ಭುತವಾಗಿಲ್ಲ ನಿಜ. ಆದರೆ ಒಂಥರಾ ಚೆನ್ನಾಗಿದೆ. ಒಂಥರಾ ಡಿಫರೆಂಟ್ ಆಗಿದೆ. ಆದ್ರೂ ಒಂದೊಂದ್ಸಲ ಬೋರ್ ಅನಿಸುತ್ತೆ. ಗೊತ್ತಾಯ್ತಾ? ಇದಿಷ್ಟೂ ನೆನಪಿರಲಿ. ಈ ಗೆಲುವು ನಿನ್ನಲ್ಲಿ ಅಹಂಕಾರ ತಾರದಿರಲಿ. ತಲೆ ಭುಜದ ಮೇಲೇ ಇರಲಿ. ಈವರೆಗೂ ನಿನ್ನನ್ನು ಕಾಪಾಡಿದ ಅಪರೂಪದ ವಿನಯ ಜತೆಜತೆಗೇ ಉಳಿಯಲಿ. ನಂಬಪ್ಪಾ, ನೀನೀಗ ಗಾಂನಗರದಲ್ಲಿ ಹತ್ತಿ ಮುಗಿಸಿರೋದು ಬರೀ ಹತ್ತೇ ಮೆಟ್ಟಿಲು. ಹತ್ತಬೇಕಿರೋದು ಇನ್ನೂ ಸಾವಿರ ಇದೆ. ಅದು ನೆನಪಿರಲಿ. ಒಂದು ಹಿಟ್ ಕೊಟ್ಟವನಿಂದ ಅದಕ್ಕಿಂತ ದೊಡ್ಡ ಮಟ್ಟದ ಸಿನಿಮಾನ ಜನ ನಿರೀಕ್ಷಿಸ್ತಾರೆ. ಅಂಥದೊಂದು ಸವಾಲು ಈಗ ನಿನ್ನ ಮುಂದೇನೂ ಇದೆ. ಹಾಗಾಗಿ ಹುಶಾರಾಗಿ ಹೆಜ್ಜೆ ಇಡು. ಮೊದಲ ಸಿನಿಮಾದಲ್ಲೇ ಜಾಣ ಅನ್ನಿಸ್ಕಂಡಿದೀಯ. ಮುಂದೆ ನೀನೇನಾದ್ರೂ ಸೋತರೆ ‘ಜಾರಿ ಬಿದ್ದ ಜಾಣ’ ಅನ್ನುತ್ತೆ ಚಿತ್ರರಂಗ. ಅದಕ್ಕೇ- ಅರಮನೆಯಲ್ಲಿರೋ ಓರೆ ಕೋರೆಗಳನ್ನು ಸುಮ್ನೇ ಒಂದಪಾ ಗಮನಿಸು. ಮುಂದಿನ ಸಿನಿಮಾದಲ್ಲಿ ಅಂಥದೇನೂ ಇರದ ಹಾಗೆ ನೋಡ್ಕೋ. ಹಾಗೆ ಮಾಡಿದ್ರೆ ಮಾತ್ರ ನಿನ್ನ ಗೆಲುವಿಗೆ, ನಿನ್ನ ಸಂಭ್ರಮಕ್ಕೆ, ನಿನ್ನ ಸಾಹಸಕ್ಕೆ, ಮುಖ ಮುಚ್ಚಿಕೊಂಡು ಸುರಿಸಿದ ಕಂಬನಿಗೆ ಒಂದು ಅರ್ಥ ಇರುತ್ತೆ.
ಅಂದ ಹಾಗೆ ನಾಗ್ಶೇಖ್ರಾ, ಹಿಂದೆ ಇದೇ ಗಾಂನಗರ ನಿನ್ನನ್ನ ‘ಕರಿಯ’ ಎಂದು ಹೀಯಾಳಿಸಿತ್ತಲ್ಲ? ನಿಂಗೆ ತಿಂಡಿ ಕೊಡದೆ, ಬಣ್ಣ ಹಾಕದೆ ಅವಮಾನಿಸಿತ್ತಲ್ಲ? ಅದೇ ಗಾಂನಗರ ಈಗ ‘ಕರಿಯಾ, ಐ ಲವ್ ಯೂ’ ಎಂದು ವರಸೆ ಬದಲಿಸಿದೆ. ಅಂಥ ಮಾತು ಕೇಳಿದಾಗ ಏನನ್ನಿಸ್ತದೆ ನಿಂಗೆ? ಹೆಮ್ಮೆಯಾಗುತ್ತಾ? ಅಥವಾ ಹಳೆಯದೆಲ್ಲಾ ನೆನಪಾಗಿ ಕಣ್ಣೀರು ಬರುತ್ತಾ…
-ಪ್ಲೀಸ್ ಕಣೋ, ‘ಅರಮನೆ’ಲಿ ಕೂತೇ ಪತ್ರ ಬರಿ. ಇವತ್ತಿಗೆ ಇಷ್ಟು ಸಾಕು, ನಮಸ್ಕಾರ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: