ದುಡ್ಡು ಅವನಿಗೆ ಸಂತೋಷ ಕೊಡಲಿಲ್ಲ!

duddu swami duddu

‘ದುಡ್ಡು ಮಾಡಬೇಕು. ದೊಡ್ಡದೊಂದು ಬಂಗಲೆ ಕಟ್ಟಿಸಬೇಕು. ಇನ್ನೋವಾ ಕಾರನ್ನೇ ತಗೋಬೇಕು. ಒಂದಿಷ್ಟು ಜಾಸ್ತಿ ಬ್ಯಾಂಕ್ ಬ್ಯಾಲೆನ್ಸ್ ಹೊಂದಿರಬೇಕು. ಯಾವುದಾದ್ರೂ ಮಲ್ಟಿ ನ್ಯಾಷನಲ್ ಕಂಪನಿಗೆ ಸೇರಬೇಕೇ ವಿನಃ ಸರಕಾರಿ ನೌಕರಿ ಸೇರಬಾರದು…’ ಸುರ ಪದೇ ಪದೆ ಹೀಗೆ ಅಂದುಕೊಳ್ಳುತ್ತಿದ್ದ. ಅದೇ ಕಾರಣದಿಂದ ತುಂಬಾ ಶ್ರದ್ಧೆಯಿಂದ ಓದಿದ. ಕ್ಯಾಂಪಸ್ ಇಂಟರ್ವ್ಯೂನಲ್ಲಿ ಆಯ್ಕೆಯಾದ. ಕಂಪ್ಯೂಟರ್ ಎಂಜಿನಿಯರ್ ಅಂದ ಮೇಲೆ ಕೇಳಬೇಕೇ? ಮೊದಲ ಸಂಬಳವೇ ಅನಾಮತ್ತು ಮೂವತ್ತೆರಡು ಸಾವಿರವಿತ್ತು. ಪಿಡಬ್ಲ್ಯುಡಿಯಲ್ಲಿ ಗುಮಾಸ್ತನಾಗಿದ್ದ ಸುರನ ತಂದೆ, ರಿಟೈರ್ಮೆಂಟ್ ಕಾಲದಲ್ಲೂ ಅಷ್ಟು ದುಡ್ಡು ಕಂಡಿರಲಿಲ್ಲ. ಹೊಸ ನೌಕರಿಯ ಆರ್ಡರ್ ಜತೆ ಮನೆಗೆ ಬಂದವನೇ ಸುರ ಹೇಳಿದ:
‘ಅಪ್ಪಾ, ನಾಳೆಯಿಂದ ಕೆಲಸಕ್ಕೆ ಹೋಗ್ತಾ ಇದೀನಿ. ಬೆಂಗಳೂರಲ್ಲಿ ಬರೀ ಮೂರು ತಿಂಗಳು, ಅಷ್ಟೆ. ಆಮೇಲೆ ಸೀದಾ ಅಮೇರಿಕಕ್ಕೆ ಹೋಗಿಬಿಡ್ತೀನಿ. ಎರಡು ವರ್ಷ ಬರಲ್ಲ. ಚನ್ನಾಗಿ ದುಡೀತೀನಿ. ಆಮೇಲೆ ಬರ್ತೀನಲ್ಲ, ಆಗ, ಮೊದಲು ಉತ್ತರಹಳ್ಳಿಯ ಈ ಮನೇನ ಮಾರಿಬಿಡೋಣ. ಯಾವುದಾದ್ರೂ ಅಪಾರ್ಟ್ಮೆಂಟ್ ತಗೊಳ್ಳೋಣ. ನಾನೂ ನಿನ್ನ ಥರಾನೇ ಸರಕಾರಿ ನೌಕರೀನೇ ನಂಬಿಕೊಂಡ್ರೆ ಲಾಟರಿ ಹೊಡೀಬೇಕಾಗ್ತದೆ. ಈ ಉತ್ತರಹಳ್ಳಿಯ ಧೂಳು ಕುಡಿದೇ ಬದುಕಬೇಕಾಗ್ತದೆ. ಮೊದಲೇ ಹೇಳ್ತಾ ಇದೀನಿ. ನಂಗೆ ರಜೆ ಸಿಗಲ್ಲ. ಶನಿವಾರ, ಭಾನುವಾರ ವೀಕೆಂಡ್ ಪಾರ್ಟಿ ಇರ್ತವೆ. ಹಾಗಾಗಿ ಮದುವೆ, ಮುಂಜಿ, ಹಬ್ಬ, ತಿಥಿ ಅಂತೆಲ್ಲ. ನನ್ನನ್ನು ಕರೆಯಬೇಡಿ. ಯಾವ ಕಾರ್ಯಕ್ರಮಕ್ಕೂ ಬರೋಕೆ ಆಗೋದಿಲ್ಲ. ಸೆಂಟಿಮೆಂಟ್ ಮಧ್ಯೆ ಕಳೆದುಹೋದ್ರೆ ಪ್ರೊಮೋಷನ್ ಸಿಗಲ್ಲ. ನೆನಪಿರ್ಲಿ…’
‘ಅಲ್ಲ ಕಣೋ, ಈಗ ನಮಗೆ ಏನು ಕಡಿಮೆಯಾಗಿದೆ ಹೇಳು? ಸ್ವಂತ ಮನೆಯಿದೆ. ನನಗೆ ಒಂದಿಷ್ಟು ಪೆನ್ಷನ್ ಬರ್ತಿದೆ. ನೀನಾದ್ರೂ ಒಬ್ಬನೇ. ಅಷ್ಟು ದೂರ ಹೋಗಿ, ನಿದ್ರೆಗೆಟ್ಟು, ವಿಪರೀತ ದುಡಿದು ಯಾರನ್ನು ಸಾಕಬೇಕು ಹೇಳು? ನನ್ಮಾತು ಕೇಳು. ಅಮೆರಿಕದ ಜಪ ಬೇಡ. ಸಾಫ್ಟ್ವೇರ್ಗೇ ಸೇರ್ಕೊ. ಆದ್ರೆ ಸುಮ್ನೆ ಇಲ್ಲೇ ಆರಾಂ ಆಗಿರು…’ ಸುರನ ತಂದೆ ಇನ್ನೇನೋ ಹೇಳಲು ಹೋದರು. ಆದರೆ ಇವನು ಕೇಳಬೇಕಲ್ಲ? ಹಾಂ, ಹೂಂ ಅನ್ನುವುದರೊಳಗೆ ಬೆಂಗಳೂರಲ್ಲಿ ಮೂರು ತಿಂಗಳು ಕಳೆದ. ಅಪ್ಪನ ಮಾತಿಗೆ ಗೋಲಿ ಹೊಡೆದ. ಅಮ್ಮನಿಗೆ ತಾನೇ ಬುದ್ಧಿ ಹೇಳಿದ! ನಂತರ ಸೀದಾ ಅಮೆರಿಕಕ್ಕೆ ಹೋಗಿಯೇಬಿಟ್ಟ.
***
ದುಡ್ಡು ಮಾಡಬೇಕು ಎಂಬ ಹಪಹಪಿಗೆ ಬಿದ್ದವನಿಗೆ ದಿನ ಕಳೆದದ್ದೇ ಗೊತ್ತಾಗಲಿಲ್ಲ. ಭಾರತಕ್ಕೆ ಮರಳಿ ಹೋದರೆ, ಅದೇ ಉತ್ತರಹಳ್ಳಿಯ ಲಡಕಾಸಿ ಮನೇಲಿರಬೇಕು, ದಿನವೂ ಅಪ್ಪನ ಉಪದೇಶ ಕೇಳಬೇಕು. ಅದರ ಬದಲು ಇನ್ನೊಂದೆರಡು ವರ್ಷ ಇಲ್ಲೇ ಇದ್ದರೆ ಹೇಗೆ ಅಂದುಕೊಂಡ ಸುರ. ಅದೇ ಸರಿ ಅನ್ನಿಸಿತು. ಈ ಮಧ್ಯೆ ಎರಡು ವರ್ಷದ ನಂತರ ರಜೆಗೆಂದು ಬಂದವನು ತರಾತುರಿಯಲ್ಲಿ ಮದುವೆಯಾದ. ನಂತರದ ಒಂದೇ ತಿಂಗಳಲ್ಲಿ ಹೆಂಡತಿಯೊಂದಿಗೆ ಅಮೆರಿಕಕ್ಕೇ ಹೋಗಿಬಿಟ್ಟ. ‘ಬೇಡ ಕಣೋ, ಇಲ್ಲೇ ನಮ್ಮ ಜತೇಲೇ ಇರೋ’ ಎಂದು ಅಪ್ಪ-ಅಮ್ಮ ಅದೆಷ್ಟೋ ಹೇಳಿದರು. ಇವನು ಕೇಳಲಿಲ್ಲ.
ಓಡುವ ಕಾಲಕ್ಕೆ ಯಾವ ತಡೆ? ಹಾಂ ಹೂಂ ಅನ್ನುವುದರೊಳಗೇ ಸುರನಿಗೆ ಇಬ್ಬರು ಮಕ್ಕಳಾದರು. ಸಂಸಾರ ದೊಡ್ಡದಾಯಿತಲ್ಲ, ಅದೇ ಕಾಲಕ್ಕೆ ಖರ್ಚೂ ಹೆಚ್ಚಿತು. ಈ ಮಧ್ಯೆ ತಿಂಗಳು ತಿಂಗಳೂ ಸುರ ಊರಿಗೆ ದುಡ್ಡು ಕಳಿಸುತ್ತಿದ್ದ. ಅವನ ಅಪ್ಪ-ಅಮ್ಮ ತಿಂಗಳಿಗೆ ನಾಲ್ಕು ಸಾರಿ ಫೋನು ಮಾಡುತ್ತಲೇ ಇದ್ದರು. ಇವನು ಹಲೋ ಅಂದರೆ ಸಾಕು- ‘ಮಕ್ಕಳು ಹೇಗಿದ್ದಾರಪ್ಪ? ಅವರನ್ನು ನೋಡಬೇಕು, ಅವರ ಜತೆ ಮಾತಾಡಬೇಕು, ಅವರ ಸಂತೋಷ ಕಂಡು ಖುಷಿ ಪಡಬೇಕು ಅಂತೆಲ್ಲಾ ನಮಗೆ ಆಸೆ ಇಡಿ ಕಣೋ, ನೀವು ಗಂಡ-ಹೆಂಡ್ತಿ ಬರದೇ ಇದ್ರೆ ಪರವಾಗಿಲ್ಲ ಮಕ್ಕಳನ್ನಾದ್ರೂ ಕಳಿಸಪ್ಪಾ…’ ಎನ್ನುತ್ತಿದ್ದರು. ಅಂಥ ಸೆಂಟಿಮೆಂಟ್ ಎಲ್ಲಾ ಬ್ಯಾಡ ಕಣಪ್ಪಾ. ಒಂದಿಷ್ಟು ಜಾಸ್ತಿ ದುಡ್ಡು ದುಡಿದು ಬರ್ತೀನಿ. ಅಲ್ಲಿ ತನಕ ಸುಮ್ನಿರು ಎಂದು ಸುರ ಅಲ್ಲಿಂದಲೇ ಗದರುತ್ತಿದ್ದ.
ಈ ಮಧ್ಯೆ ತೀರಾ ಅನಿರೀಕ್ಷಿತವಾಗಿ ಸುರನ ತಾಯಿ ಕಾಯಿಲೆ ಬಿದ್ದಳು. ಸುದ್ದಿ ತಿಳಿದದ್ದೇ, ಸುರ ಹೌಹಾರಿದ. ಅಮ್ಮನನ್ನು ನೋಡಲೇಬೇಕು ಅನ್ನಿಸಿತು. ‘ಒಂದೇ ಒಂದು ವಾರದ ಮಟ್ಟಿಗೆ ರಜೆ ಕೊಡಿ, ಪ್ಲೀಸ್’ ಅಂದ. ಕಂಪನಿಯವರು ವಾರದೊಳಗೆ ಒಂದು ನಿಗದಿತ ಟಾರ್ಗೆಟ್ ತಲುಪಿದರೆ ಎಂಟು ಸಾವಿರ ಡಾಲರ್ ಸಂಬಳ ಹೆಚ್ಚಿಸುವುದಾಗಿ ಆಸೆ ತೋರಿಸಿದರು. ತಕ್ಷಣವೇ ಒಂದಿಷ್ಟು ದುಡ್ಡು ಕಳಿಸಿದ ಸುರ, ಒಳ್ಳೆಯ ಆಸ್ಪತ್ರೆಗೆ ಸೇರಿಸಪ್ಪ ಎಂದು ಫೋನ್ ಮಾಡಿ ಅಲ್ಲೇ ಉಳಿದುಬಿಟ್ಟ.
ದುಡ್ಡಿಂದ ಏನು ಬೇಕಾದರೂ ಖರೀದಿಸಬಹುದು. ಜೀವವನ್ನು ಖರೀದಿಸಲು ಆಗಲ್ಲ ಎಂಬ ಮಾತು ಸುರನ ವಿಷಯದಲ್ಲಿ ನಿಜವಾಯಿತು. ಅವನ ತಾಯಿ ಮೊಮ್ಮಕ್ಕಳ ಧ್ಯಾನದಲ್ಲೇ ಪ್ರಾಣಬಿಟ್ಟಳು. ಆಗ ಕೂಡ ಬಂದು ಹೋಗಲು ಸುರನಿಗೆ ಸಾಧ್ಯವಾಗಲಿಲ್ಲ. ಇತ್ತ ಹೆಂಡತಿಯನ್ನು ಕಳೆದುಕೊಂಡ ಬೇಸರದಲ್ಲಿ ಸುರನ ತಂದೆ ಕೂಡ ಅದೊಮ್ಮೆ ಹಾಸಿಗೆ ಹಿಡಿದವನು ಕೆಲವೇ ದಿನಗಳಲ್ಲಿ ತೀರಿ ಹೋದ.
ಕೆಲವೇ ದಿನಗಳ ಅಂತರದಲ್ಲಿ ಅಪ್ಪ-ಅಮ್ಮ ಇಬ್ಬರನ್ನು ಕಳೆದುಕೊಂಡನಲ್ಲ, ಅದೇ ಕಾರಣದಿಂದ ಸುರನಿಗೆ ಪಾಪಪ್ರಜ್ಞೆ ಕಾಡಿತು. ಅದೇ ವೇಳೆಗೆ ಅವನ ಕಂಪನಿಯ ವಹಿವಾಟಿನಲ್ಲಿ ದಿಢೀರನೆ ಏರುಪೇರಾಗಿ ಅದು ರಾತ್ರೋರಾತ್ರಿ ಮುಚ್ಚಿ ಹೋಯಿತು. ಜಾಸ್ತಿ ಲಾಭದ ಆಸೆಯಿಂದ ಖರೀದಿಸಿದ್ದ ಸುರನ ಷೇರುಗಳೆಲ್ಲ ಅದರೊಂದಿಗೇ ಕಣ್ಮುಚ್ಚಿದವು. ಇಷ್ಟಾದ ಮೇಲೆ ಆ ದುಬಾರಿ ದೇಶದಲ್ಲಿದ್ದು ಮಾಡುವುದೇನು? ಅಳಿದುಳಿದ ದುಡ್ಡು ಕೂಡಿಸಿಕೊಂಡು ಸೀದಾ ಸುರ ಬೆಂಗಳೂರಿಗೆ ಬಂದ.
ಲಾಭ-ನಷ್ಟದ ವಿಷಯ ಹಾಳಾಗಲಿ. ಪ್ರೆಸ್ಟೀಜ್ ಅಲ್ಲವೇ? ಅಮೆರಿಕ ರಿಟರ್ನ್ಡ್ ಅಂದ ಮೇಲೆ ಜೋರಾಗಿರಬೇಕು ತಾನೆ? ಅದೇ ಯೋಚನೆಯಿಂದ ಸುರ ಕಾರು ತಗೊಂಡ. ಉತ್ತರಹಳ್ಳಿಯ ಮನೆ ಕೆಡವಿಸಿ ಅಲ್ಲೇ ಹೊಸ ಮನೆ ಕಟ್ಟಿಸಿದ. ಅದೇನೋ ಗ್ರಹಚಾರವೋ ಏನು ಕತೆಯೋ… ಅದೊಮ್ಮೆ ಕತ್ರಗುಪ್ಪೆ ರಸ್ತೆಯಲ್ಲಿ ಅವನ ಕಾರು ಅಪಘಾತಕ್ಕೆ ಈಡಾಯಿತು. ನಂತರದಲ್ಲಿ ಆಸ್ಪತ್ರೆ-ಕೋರ್ಟು, ಪೊಲೀಸ್ ಠಾಣೆ ಎಂದೆಲ್ಲ ಸುತ್ತಾಡಿ ಸುರ ಅದೆಷ್ಟು ಹೈರಾಣದ ಅಂದರೆ-ಥತ್, ಈ ಇಂಡಿಯಾದ ಸಹವಾಸವೇ ಬೇಡ. ಮತ್ತೆ ಅಮೆರಿಕಕ್ಕೆ ಹೋಗೋಣ. ಕಳೆದುಕೊಂಡಲ್ಲೇ ಮರಳಿ ಸಂಪಾದಿಸೋಣ ಅಂದುಕೊಂಡು ಹೆಂಡತಿಯನ್ನು ಇಲ್ಲೇ ಉಳಿಸಿ, ಮಕ್ಕಳೊಂದಿಗೆ ಅಮೆರಿಕಕ್ಕೆ ಹೋಗಿಯೇಬಿಟ್ಟ.
ಎರಡನೇ ಬಾರಿಯ ಯಾತ್ರೆಯಲ್ಲಿ ಮತ್ತೆ ಕಷ್ಟಪಟ್ಟು ದುಡಿದ- ಒಂದಿಷ್ಟು ಲಾಭ ಮಾಡಿ, ವಾಹ್- ಸೆಟ್ಲ್ ಆದೆ ಎಂದು ಸುರ ಉದ್ಗಿರಿಸುವ ವೇಳೆಗೆ ಇಲ್ಲಿ ಬೆಂಗಳೂರಿನಲ್ಲಿ ಅನಾಹುತವಾಗಿಯೇ ಹೋಯಿತು. ಡಿಪ್ರೆಷನ್ಗೆ ಒಳಗಾಗಿ ಸುರನ ಹೆಂಡತಿಯೂ ತೀರಿಹೋದಳು. ಸುರನಿಗೆ ಇದು ದೊಡ್ಡ ಶಾಕ್. ಅವನು ತಕ್ಷಣವೇ ಮಕ್ಕಳೊಂದಿಗೆ ಓಡಿಬಂದ. ಎಲ್ಲ ಶಾಸ್ತ್ರ-ಆಚಾರವೂ ಮುಗಿಯುವ ವೇಳೆಗೆ ಹದಿನೈದು ದಿನಗಳೇ ಕಳೆದು ಹೋದವು. ಸುರನ ಮಕ್ಕಳು- ‘ಅಪ್ಪಾ, ಆಗಿದ್ದು ಆಗಿ ಹೋಯ್ತು. ಇಲ್ಲಿದ್ದು ಮಾಡುವುದೇನು? ನಾವು ಅಮೆರಿಕಕ್ಕೇ ಹೋಗ್ತೀವಿ ಎಂದು ಹಟ ಹಿಡಿದವು. ಇವನು ‘ಬೇಡ’ ಎಂದ. ಅವರು ಕೇಳಲಿಲ್ಲ. ನಾಲ್ಕೇ ದಿನಗಳಲ್ಲಿ ಹೋಗಿಯೇ ಬಿಟ್ಟರು.
ಉತ್ತರಹಳ್ಳಿಯ ಹಳೆ ಮನೆಯಲ್ಲಿ ತಿಂಗಳು ಕಳೆಯುವುದರೊಳಗೆ ಸುರ ಸುಸ್ತಾಗಿ ಹೋದ. ಚಿಕ್ಕಂದಿನಿಂದ ಆಡಿಕೊಂಡು ಬೆಳೆದ ಮನೆ ಅದು. ಅವನು ಎತ್ತ ತಿರುಗಿದರೂ ಅಪ್ಪ-ಅಮ್ಮನ; ಹೆಂಡತಿಯ ಚಿತ್ರಗಳೇ ಕಾಣುತ್ತಿದ್ದವು. ಅವರೊಂದಿಗೆ ಆಡಿದ ಮಾತುಗಳು, ಕಳೆದ ಮಧುರ ನೆನಪುಗಳು ಮೇಲಿಂದ ಮೇಲೆ ದಾಳಿ ಮಾಡುತ್ತಿದ್ದವು. ಅದೆಲ್ಲದರಿಂದ ಬಿಡುಗಡೆ ಪಡೆಯಬೇಕು ಅನ್ನಿಸಿತಲ್ಲ- ಲಾಭದ ಮುಖ ನೋಡದೆ ಅದನ್ನೂ ಮಾರಿಬಿಟ್ಟ.
***
ಇದ್ದ ಮನೆಯನ್ನೂ ಮಾರಿದ್ದಾಯಿತು. ವಾಸಕ್ಕೊಂದು ಹೊಸ ಮನೆ ಬೇಡವೆ? ಎಲ್ಲಾದರೂ ಒಂದು ಕಡೆ ಸೈಟು ತಗೊಂಡು ಮನೆ ಕಟ್ಟಿಸೋಣ ಎಂದುಕೊಂಡೇ ಅತ್ತ ತಿರುಗಿದ. ಬನ್ನೇರುಘಟ್ಟ ರಸ್ತೆಯಲ್ಲಿ ೩೦ ೪೦ ಅಳತೆಯ ಸೈಟ್ಗೆ ೬೦ ಲಕ್ಷ ಎಂದರು. ಅಯ್ಯಪ್ಪ, ಅಷ್ಟೊಂದು ರೇಟಾ ಅಂದುಕೊಂಡು ಈ ಕಡೆ ಕೆಂಗೇರಿಗೆ ಬಂದ, ಆ ಕಡೆ ನೆಲಮಂಗಲದಲ್ಲೂ ವಿಚಾರಿಸಿದ. ಕಡೆಗೆ ದೇವನಹಳ್ಳಿಗೂ ಹೋಗಿ ಬಂದ. ಸೈಟ್ನ ಬೆಲೆ ಎಲ್ಲೆಲ್ಲೂ ವಿಪರೀತ ಜಾಸ್ತಿ ಇತ್ತು. ಇರುವ ಹಣದಲ್ಲಿ ಸೈಟು ಖರೀದಿಸಬಹುದೇ ಹೊರತು ಮನೆ ಕಟ್ಟಿಸಲು ಸಾಧ್ಯವಿಲ್ಲ ಎಂಬುದು ಸುರನಿಗೆ ತುಂಬ ಬೇಗ ಅರ್ಥವಾಯಿತು. ಕಡೆಗೆ ಏನು ಮಾಡಲೂ ತೋಚದೆ, ಕೆ.ಆರ್. ರಸ್ತೆ-ಯಡಿಯೂರು ಕೆರೆ ಸೀಮೆಯಲ್ಲಿ ಒಂದು ಮನೆಯನ್ನು ಲೀಸ್ಗೆ ಹಿಡಿದು ಹೊಸ ಬದುಕು ಆರಂಭಿಸಿದ.
ಈಗ, ಪ್ರತಿದಿನವೂ ಸಂಜೆ ಕೃಷ್ಣರಾವ್ ಪಾರ್ಕ್ಗೆ ಸುರ ವಾಕಿಂಗ್ಗೆ ಬರುತ್ತಾನೆ. ಎದುರಿಗೆ ಸಿಕ್ಕವರನ್ನು ಪರಿಚಯ ಮಾಡಿಕೊಳ್ಳುತ್ತಾನೆ. ಇಲ್ಲವಾದರೆ ತನ್ನಷ್ಟಕ್ಕೆ ತಾನೇ ‘ಛೆ, ನಾನು ಎಂಥ ತಪ್ಪು ಮಾಡಿದೆ ಅಲ್ವ? ನನಗೆ ಸ್ವಂತ ಮನೆಯಿತ್ತು. ಜೀವಕ್ಕೆ ಮಿಗಿಲಾಗಿ ಪ್ರಿತಿಸುವ ಅಪ್ಪ-ಅಮ್ಮ ಇದ್ದರು. ಅವರಷ್ಟೇ ಪ್ರೀತಿಯ ಹೆಂಡತಿ ಇದ್ದಳು. ನಾನು, ದಿಢೀರ್ ದುಡ್ಡಿನ ಮೋಹಕ್ಕೆ ಬಿದ್ದೆ. ಮೊದಲು ಅಪ್ಪ-ಅಮ್ಮನಿಗೆ ನೋವು ಕೊಟ್ಟೆ, ಅವರನ್ನು ಮೊಮ್ಮಕ್ಕಳ ಪ್ರೀತಿಯಿಂದ ವಂಚಿಸಿದೆ. ಅವರ ಸಾವಿಗೆ ಪರೋಕ್ಷವಾಗಿ ಕಾರಣನಾದೆ. ಕಡೆಗೆ ಹೆಂಡತಿಯನ್ನೂ ಕಳೆದುಕೊಂಡೆ. ಈಗ ನೋಡಿದ್ರೆ ಒಂಟಿ ಪಿಶಾಚಿಯ ಥರಾ ಬದುಕ್ತಾ ಇದೀನಿ. ಮಗ-ಮಗಳು ಅಮೆರಿಕದಲ್ಲೇ ಸೆಟ್ಲಾಗಿದಾರೆ. ಇವತ್ತೋ ನಾಳೆಯೋ ನಾನು ಸತ್ತರೆ, ಯಾರೋ ಬೇರೆಯವರು ಬಂದು ನನ್ನನ್ನು ಮಣ್ಣು ಮಾಡ್ತಾರೆ. ದುಡ್ಡಿನ ಮೋಹಕ್ಕೆ ಬಿದ್ದು ಬದುಕಿನ ಸಂತೋಷವನ್ನೇ ಕಳೆದುಕೊಂಡೆನಲ್ಲ, ಛೆ…’ ಎನ್ನುತ್ತ ಚಿಕ್ಕಳಿಸುತ್ತಾನೆ.
***
ದುಡ್ಡಿನ ಹಿಂದೆ ಬಿದ್ದು ಎಲ್ಲರನ್ನೂ ಮರೆಯುತ್ತಿರುವ ಯುವಕರನ್ನು ನೆನೆದಾಗ ಯಾಕೋ ನಿಮಗೆಲ್ಲ ಸುರನ ಕಥೆ ಹೇಳಬೇಕು ಅನ್ನಿಸ್ತು…

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: