ಸಂತೆಯ ಸಂತಸ ಇನ್ನೆಲ್ಲಿ….!

nammur jaatre

ಅಳಬೇಡ ನನ ಕಂದ ಸಂತೆಗೋಗಿ ಬರ್ತೀನಿ.
ಸಂತೆಗ್ಹೋಗಿ ಬರ್ತೀನಿ ನಾನು ಮೊಸರು ಮಾರಿ ಬರ್ತೀನಿ
ಮೊಸರು ಮಾರಿ ಬರ್ತೀನಿ ನಿನಗೆ ಹಸಿರಿನಂಗಿ ತರ್ತೀನಿ
ಬೆಂಗಳೂರಿನ ಗಜಿಬಿಜಿ ಬದುಕಿನಲ್ಲಿ ಆಗೊಮ್ಮೆ ಈಗೊಮ್ಮೆ ಈ ಹಾಡು ಕೇಳಿದಾಗಲೆಲ್ಲ ನಮ್ಮೂರ ಸಂತೆ ನೆನಪಾಗುತ್ತದೆ. ಕುಂದಾಪುರದಲ್ಲಿ ನಡೆವ ಸೋಮವಾರದ ಸಂತೆ, ಬೇವೂರಿನ ಶನಿವಾರದ ಸಂತೆ, ನಾಗಮಂಗಲದ ಶುಕ್ರವಾರದ ಸಂತೆ ಅಂದುಕೊಂಡ ಮರುಕ್ಷಣದಿಂದಲೇ ಒಂದೆರಡಲ್ಲ, ಸಾವಿರ ನೆನಪುಗಳು ಒಮ್ಮೆಲೇ ಕೈ ಜಗ್ಗುತ್ತವೆ. ಕೈ ಕುಲುಕುತ್ತವೆ. ಕಾಲಿಗೇ ತೊಡರುತ್ತವೆ. ಅದೇ ಸಂತೆಯಲ್ಲಿ ಒಮ್ಮೆ ‘ಅವಳು’ ಕೈ ತಾಗಿಸಿದ್ದು ಅಕಸ್ಮಾತ್ ನೆನಪಾಗಿ ಕೆನ್ನೆ ಕೆಂಪಾಗುತ್ತದೆ. ಈ ಗಿಜಿಗಿಜಿ ಸದ್ದಿನ ಮಧ್ಯೆ ಅದ್ಯಾವುದೋ ಸಾಲಿನಲ್ಲಿ ನಿಂತು ಮೌನದಲ್ಲೇ ಮಾತಾಡಿದ ಹಾಗೇ ಹೋಗಿಬಿಟ್ಟ ಅವಳ/ಅವನ ನೆನಪಾದರೆ ಸಂತೋಷ ಮತ್ತು ಸಂಕಟ ಒಟ್ಟಿಗೇ ಆಗಿಬಿಡುತ್ತದೆ. ಆನಂತರದಲ್ಲಿ ಸಂತೆಯ ಹೆಸರಲ್ಲಿ ಒಂದೊಂದೇ ಸಾಲುದೀಪ ನಮ್ಮೆದುರು ತೆರೆದುಕೊಳ್ಳುತ್ತಾ ಹೋಗುತ್ತದೆ.
***
ಹೌದು. ಇವತ್ತು ಅಂಕಲ್ಲು/ಆಂಟಿ ಅನ್ನಿಸಿಕೊಂಡಿರುವ ಎಲ್ಲರಿಗೂ ‘ಸಂತೆ’ ಗೊತ್ತು. ಯಾಕೆಂದರೆ ಅವರೆಲ್ಲ ಸಂತೆಯಲ್ಲಿ ಅಡ್ಡಾಡಿ ಬಂದವರೇ. ‘ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕ್ಕೆ ಅಂಜಿದೊಡೆಂತಯ್ಯ’ ಎಂದು ಓದಿದ ಮೇಲೆ ಸಂತೆಯ ಮಧ್ಯೆ ನಿಂತು ಕೂಗಾಡಿ ಬಂದವರೇ. ಅದೇ ಸಂತೆಯೊಳಗೆ ಒಂದಲ್ಲ ಒಂದು ಸಂದರ್ಭದಲ್ಲಿ ಮೈಮರೆತು ನಿದ್ರೆ ಮಾಡಿದವರೇ! (ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ’ ಎಂಬ ಮಾತು ಈಗ ನೆನಪಾಯಿತೆ?) ಹೌದ್ ಹೌದು. ಆಗೆಲ್ಲ ಹಿಂದೆಲ್ಲಾ ನಾಲ್ಕೈದು ಊರುಗಳಿಗೆ ಸೆಂಟರ್ ಪಾಯಿಂಟ್ನಂತಿದ್ದ ಒಂದು ಊರಿನಲ್ಲಿ ಅಥವಾ ಒಂದು ಬಯಲಿನಲ್ಲಿ ಸಂತೆ ನಡೆಯುತ್ತಿತ್ತು. ವಿಶೇಷವೆಂದರೆ- ಸಂತೆ ನಡೆಯುತ್ತಿದ್ದುದು ವಾರದಲ್ಲಿ ಒಮ್ಮೆ ಮಾತ್ರ. ಬಾಕಿ ದಿನಗಳಲ್ಲಿ ಆ ಜಾಗ ಥೇಟು ಬಟಾಬಯಲೇ ಆಗಿರುತ್ತಿತ್ತು.
ಆದರೆ ಸಂತೆಯ ದಿನ ಮಾತ್ರ, ನಾಲ್ಕಲ್ಲ, ಎಂಟು ದಿಕ್ಕಿನಿಂದಲೂ ಜನ ಬರುತ್ತಿದ್ದರು. ಸಂತೆಯಲ್ಲಿ-ಆಗಷ್ಟೇ ಕಿತ್ತು ತಂದ ಮೂಲಂಗಿ, ಬೀನ್ಸ್, ಸೊಪ್ಪು, ಕುಂಬಳಕಾಯಿ, ಬದನೆಕಾಯಿ, ಆಲೂಗಡ್ಡೆ. ಕೊಬ್ಬರಿಯ ರಾಶಿ ಇರುತ್ತಿತ್ತು. ಇನ್ನೊಂದು ಸಾಲಿನಲ್ಲಿ ತರಹೇವಾರಿ ಕಾಳು, ಆಚೆ ಬದಿಯಲ್ಲಿ ಬೆಣ್ಣೆ, ತುಪ್ಪದ ಮಾರಾಟ ನಡೆಯುತ್ತಿತ್ತು. ಸಂತೆಗೆ ಬಂದ ಮೇಲೆ ಕಡಲೇಪುರಿ ಕೊಳ್ಳುವುದಂತೂ ಸಂಪ್ರದಾಯವೇ ಆಗಿಹೋಗಿತ್ತು. ಬೇರೇನೋ ವ್ಯಾಪಾರ ಮಾಡಲು ಆ ಸಾಲಿನಲ್ಲಿ ಬಂದವರೆಲ್ಲ – ‘ಹಾಗೇ ಸುಮ್ಮನೆ’ ಕೈ ಹಾಕಿ ಹಿಡಿ ಪುರಿಯನ್ನು ಬಾಯಿಗೆ ಎಸೆದುಕೊಂಡು ಟೇಸ್ಟ್ ನೋಡುತ್ತಿದ್ದರು!
ಇನ್ನು, ಸಂತೆಗೆ ಹೊರಟವರಿಗೆ ಎದುರಾಗುತ್ತಿದ್ದ ವಿಘ್ನಗಳು ಒಂದೆರಡಲ್ಲ. ಸಂತೆಗೆ ಹೋಗಬೇಕೆಂಬ ಧಾವಂತದಲ್ಲಿಯೇ ಗಡಿಬಿಡಿಯಿಂದ ಮನೆಯ ಕೆಲಸ ಮುಗಿಸಿ, ಬ್ಯಾಗು ಹಿಡಿದು ಹೊಸ್ತಿಲು ದಾಟುವ ಮೊದಲೇ-ರೊಯ್ಯನೆ ಓಡಿ ಬಂದ ಮಗ/ಮಗಳಿಂದ ಸಂತೆಗೆ ನಾನೂ ಬರ್ತೀನಿ ಎಂಬ ಬೇಡಿಕೆ. ವಿಪರೀತ ಬಿಸಿಲು ಕಂದಾ. ಮೋಡ ಬೇರೆ ತುಂಬ್ಕೋತಾ ಇದೆ. ಮಳೆ ಬಂದ್ರೂ ಬರಬಹುದು. ಸಂತೆ ತುಂಬಾ ದೂರ ಇದೆ. ಇನ್ನೊಂದ್ಸಲ ಹೋಗೋಣ. ಇವತ್ ಬೇಡ ಎಂದು ಅಪ್ಪ/ಅಮ್ಮ ಪೂಸಿ ಹೊಡೆಯುತ್ತಿದ್ದರು. ಅಷ್ಟಕ್ಕೇ- ತಗೋ, ‘ಹೋ’ ಎಂಬ ಅಳು. ಇಂಥ ಸಂದರ್ಭದಲ್ಲಿ ಮತ್ತೂ ಮುದ್ದು ಮಾಡುತ್ತಿದ್ದ ಅಪ್ಪ-ಅಮ್ಮ, ನಿಂಗೆ ಏನು ಬೇಕೋ ಕೇಳು. ತಂದು ಕೊಡ್ತೀನಿ ಅನ್ನುತ್ತಿದ್ದರು. ಇಲ್ಲವಾದರೆ- ‘ಆ ಕಡೆಯಿಂದ ಬಂದು ಕಾಲು ನೋವು ಅಂದ್ರೆ ನಾಲ್ಕು ಬಾರಿಸ್ತೀನಿ’ ಎಂದು ಎಚ್ಚರಿಸಿಯೇ ಕರೆದೊಯ್ಯುತ್ತಿದ್ದರು. ವಾಹ್, ಅಪ್ಪನ ಕೈ ಹಿಡಿದು ಸಂತೆಗೆ ಹೋದವನು ಜಗತ್ತನ್ನೇ ಗೆದ್ದವನಂತೆ ಹಾರಿ ಹಾರಿ ನಡೆಯುತ್ತಿದ್ದ!
ಸಂತೆಗೆ ಬಂದವರ ಬಳಿ ಒಂದಿಷ್ಟು ದುಡ್ಡಿರುತ್ತಿತ್ತು. ಕೈಲಿ ನಯಾ ಪೈಸೆ ಇಲ್ಲದವರು ಮನೆಯಿಂದ ಬೆಣ್ಣೆಯನ್ನೋ, ಕಾಳನ್ನೋ, ಕುರಿಯನ್ನೋ ತಂದು ಮಾರಿ, ಆ ಹಣದಿಂದ ದಿನಸಿ ಖರೀದಿಸುತ್ತಿದ್ದರು. (ಕುರಿ ಮಾರಿದವರಂತೂ ‘ನೋಡಿ ಸ್ವಾಮಿ, ನಮ್ಮ ಮನೆಯ ಲಕ್ಷ್ಮೀನ ನಿಮಗೆ ಕೊಡ್ತಾ ಇದೀವಿ. ಕಸಾಯಿಖಾನೆಗೆ ಮಾತ್ರ ಒಯ್ಯಬ್ಯಾಡ್ರಿ’ ಎಂದು ಮಾತು ಪಡೆದೇ ಮಾರುತ್ತಿದ್ದರು) ಅವ್ವ ಕೊಟ್ಟ ಚೀಟಿಗಳಲ್ಲಿ- ‘ಎರಡು ರೂ.ಗೆ ಉಪ್ಪು, ಐದು ಅಚ್ಚು ಬೆಲ್ಲ, ಅರ್ಧ ಕೇಜಿ ಈರುಳ್ಳಿ, ಐದ್ರುಪಾಯ್ಗೆ ಬೆಳ್ಳುಳ್ಳಿ…’ ಹೀಗೇ ವಿವರಣೆ ಇರುತ್ತಿತ್ತು. ಕಡೆಗಂತೂ ಕಡ್ಡಾಯವಾಗಿ ಎರಡು ಸೇರು ಕಡಲೇಪುರಿ ಎಂದಿರುತ್ತಿತ್ತು. ಒಂದು ವೇಳೆ ಎಲ್ಲ ವಸ್ತುಗಳ ಬೆಲೆಯೂ ಹೆಚ್ಚಿದ್ದರೆ ಅಪ್ಪ ಮೊದಲೇ ಪುರಿ ಖರೀದಿಸಿ ನಂತರ ಉಳಿದ ಹಣದಲ್ಲಿ ಎಲ್ಲಕ್ಕೂ ‘ಸರಿ’ ಮಾಡುತ್ತಿದ್ದ. ದಿನಸಿಗಳಲ್ಲಿ ಒಂದು ಕೈ ತಪ್ಪಿದರೆ ಪರವಾಗಿಲ್ಲ, ಆದರೆ ಕಡಲೇಪುರಿಯೇ ಇಲ್ಲವಾದರೆ ಸಂತೆಗೆ ಹೋಗಿ ಸುಖವೇನು?
ಹೌದು. ಸಂತೆಯಲ್ಲಿ ನಡೀತಿದ್ದುದು ಶುದ್ಧ ಚೌಕಾಸಿ. ಅವರು ಯಾವುದೋ ರೇಟು ಹೇಳಿದರೆ, ಇವರು ಅಷ್ಟೊಂದು ಹ್ಯಾಗ್ರೀ ಕೊಡೋದು? ಸ್ವಲ್ಪ ಕಡಿಮೆ ಮಾಡಿಕೊಳ್ಳಿ ಅನ್ನುತ್ತಿದ್ದರು. ಇಲ್ಲವಾದಲ್ಲಿ- ‘ಏನು ಶೆಟ್ರೆ? ಆರಾಮಾ? ಮಗಳಿಗೆ ಗಂಡು ಗೊತ್ತಾಯ್ತಂತೆ? ಅಂತೂ ಒಂದು ಹೊರೆ ಕಳೀತು ನೋಡ್ರಿ. ಮದುವೆಗೆ ಕರೆಯಲು ಮರೀಬ್ಯಾಡಿ. ನಿಮ್ಮ ಮಗಳು ನೆಮ್ಮದಿಯಿಂದ ಬಾಳಲಿ’ ಎಂದು ಹೃದಯದ ಮಾತಾಡುತ್ತಿದ್ದರು. ಜಾತಿ-ಧರ್ಮದ ಎಲ್ಲೆ ಮೀರಿ ಬಂದ ಈ ಮಾತಿಗೇ ಶೆಟ್ರು ಮೆತ್ತಗಾಗುತ್ತಿದ್ದರು. ನಂತರ- ‘ಏನೋ ದೇವರು ಕಣ್ಣು ತೆರದವ್ನೆ ಸ್ವಾಮಿ. ನಿಮ್ಮಂಥವರ ಹಾರೈಕೆಯ ಫಲ ಇದು. ಕಾರ್ಡು ಕೊಡ್ತೇನೆ. ಮನೆಯವರೆಲ್ಲ ಬರಬೇಕು, ತಪ್ಪಿಸಿಕೋಬೇಡಿ’ ಅನ್ನುತ್ತಿದ್ದ. ಹೀಗೆ ಸಂತೆಯೊಳಗೆ ಸಂಬಂಧವಲ್ಲದ ಸಂಬಂಧಗಳು ದಿಢೀರ್ ಹುಟ್ಟಿ, ಬದುಕಿಡೀ ಉಳಿಯುತ್ತಿದ್ದವು! ಈ ಕಾರಣದಿಂದ ವ್ಯಾಪಾರವೆಂಬುದು ಹೆಚ್ಚು ಲಾಭದ ಹಂಗಿಲ್ಲದೇ ಮುಗಿದು ಹೋಗುತ್ತಿತ್ತು.
***
ಹೌದು. ಸಂತೆಯೊಳಗೆ ಏನಿರಲಿಲ್ಲ ಹೇಳಿ? ಅಲ್ಲಿ ಸಂತೋಷ ಇರುತ್ತಿತ್ತು. ಸಿನಿಮಾ ಇರುತ್ತಿತ್ತು. ಸಂಕಟವಿರುತ್ತಿತ್ತು. ಎದುರು ಬಂದವರ ಮಾತುಗಳಲ್ಲಿ ಸೌಜನ್ಯವಿರುತ್ತಿತ್ತು. ಸಂತೆಗೆ ಬರುವ ನೆಪದಲ್ಲಿ ಢಾಳಾಗಿ ಸ್ನೋ, ಪೌಡರು ಬಳಿದುಕೊಂಡಿರುತ್ತಿದ್ದ ಹೆಂಗಸರಲ್ಲಿ ಒಂದು ಚೆಲುವಿರುತ್ತಿತ್ತು. ಬಿಸಿಲಿಗೆ ಇಳಿದ ಬೆವರಲ್ಲಿ ಒಂದು ಘಮ ಇರುತ್ತಿತ್ತು. ಎಣ್ಣೆ ಹಾಕಿದ ಬಾಚಿದ ಜಡೆಯಲ್ಲಿ ಒಂದು ಹೂವಿರುತ್ತಿತ್ತು. ಬೇಸಿಗೆ ದಸರಾ ರಜೆಗೆಂದು ಅಜ್ಜಿ ಊರಿಗೆ ಬಂದ ಬೆಡಗಿಯರು ಸಂತೆಗೆ ಹೋಗುವುದು ಕಡ್ಡಾಯವೇ ಆಗಿ ಹೋಗಿತ್ತು. ಹಾಗೆ ಬಂದ ಬೆಡಗಿಯರು ಅದೆಷ್ಟೋ ಹುಡುಗರ ಮನದಲ್ಲಿ ಹಾಗೇ ಸುಮ್ಮನೆ ಇಣುಕಿ,ಕಣ್ಣಲ್ಲೇ ಕೆಣಕಿ ಮೂಡು ಬಂದರೆ ಕಿಲಕಿಲನೆ ನಕ್ಕು, ಇಷ್ಟವಾದೆ ಕಣ್ಣು ಹೊಡೆದು, ಸಿಟ್ಟು ಬಂದರೆ ಮೂತಿಯಲ್ಲೇ ತಿವಿದು, ಕಷ್ಟವಾದರೆ ತಲೆ ತಗ್ಗಿಸಿ ನಡೆದು ಬಿಡುತ್ತಿದ್ದರು. ಅದನ್ನು ಗಮನಿಸಿಯೇ ಅದೊಮ್ಮೆ ಕೆ.ಎಸ್.ನ. ಬರೆದಿದ್ದರು:
ನಗುನಗುತ ನಮ್ಮೂರ ಹೆಣ್ಣುಗಳು ಬರುತ್ತಿರಲು
ನಿಮ್ಮೂರ ಸಂತೆಗಾಗಿ
ನವಿಲೂರಿಗಿಂತಲೂ ಹೊನ್ನೂರು ಸುಖವೆಂದು
ನಿಲ್ಲಿಸಿತು ಪ್ರೇಮ ಕೂಗಿ…
ಹಾಗೆ ಹೆಣ್ಣುಗಳ ನೆಪದಲ್ಲಿ ಹುಡುಗರನ್ನು ಸಂತೆಯೆಂಬುದು ದಿಕ್ಕು ತಪ್ಪಿಸಿದ ನಂತರ ಏನೇನೋ ಆಗಿಬಿಡುತ್ತಿತ್ತು. ಈ ಹುಡುಗ ಮುಂದಿನ ವಾರವೂ ಅದೇ ಸಮಯಕ್ಕೆ ಬಂದು ಅವಳಿಗಾಗಿ ಕಣ್ಣಲ್ಲೇ ಕಾಯುತ್ತಿದ್ದ. ಅವಳು ಬೇರೆಲ್ಲೋ ನಿಂತು ಅವನನ್ನು ಕಾಡುತ್ತಿದ್ದಳು.
ಒಂದೇ ದಿನದಲ್ಲಿ ಇಡೀ ವಾರಕ್ಕಾಗುವಷ್ಟು ದಿನಸಿ, ಬಾಯಿ ಚಪ್ಪರಿಸುವಂಥ ಬತ್ತಾಸು, ಬಾದೂಷಾ, ಜಿಲೇಬಿ, ಎಲ್ಲಿಂದಲೋ ಬಂದ ಅವಳು; ಅದೇ ವೇಳೆಗೆ ಪಕ್ಕದ ಸಾಲಿನಲ್ಲಿ ದಿಢೀರ್ ಸಿಗುತ್ತಿದ್ದ ಸ್ಕೂಲ್ ಮೇಸ್ಟ್ರು, ಮನೆ ಬಾಗಿಲಿಗೆ ಬಂದಾಕ್ಷಣ ನೆನಪಾಗುತ್ತಿದ್ದ ಖರೀದಿಸದ ವಸ್ತು, ಮೊರದಲ್ಲಿ ತುಂಬಿಕೊಂಡು ಅಮ್ಮ ಎಲ್ಲರಿಗೂ ಹಂಚುತ್ತಿದ್ದ ಕಡಲೇಪುರಿ… ವಾಹ್, ಸಂತೆ ನೀಡುತ್ತಿದ್ದ ಸಂಭ್ರಮಗಳು ಒಂದಾ, ಎರಡಾ? ಈವರೆಗೆ ಹೇಳಲಾದ ಎಲ್ಲ ಮಾತಿಗಿಂತ ಮಿಗಿಲಾಗಿ ಕಾಡುವ ನೆನಪೊಂದನ್ನು ಹೇಳಿ ಸಂತೆ ಕೊಟ್ಟ ಸಂಭ್ರಮಕ್ಕೆ ಸಲಾಂ ಹೇಳೋಣ.
ಸುಮ್ನೆ ಒಮ್ಮೆ ನೆನಪು ಮಾಡಿಕೊಳ್ಳಿ. ಅದೇ ಸಂತೆಗೆ ಮಾಯಾ ಪೆಟ್ಟಿಗೆಯ ಮಾವಯ್ಯ ಬಂದಿರುತ್ತಿದ್ದ. ಆ ಪೆಟ್ಟಿಗೆಯಲ್ಲಿ ಮೂರು ಕಿಂಡಿಗಳಿದ್ದವು. ತಲಾ ಎರಡು ರೂಪಾಯಿ ಕೊಟ್ಟು ಆ ಕಿಂಡಿಯಲ್ಲಿ ಕಣ್ಣು ತೂರಿಸಿದರೆ-ಅಲ್ಲೊಂದು ಮಾಯಾಲೋಕವೇ ತೆರೆದುಕೊಳ್ಳುತ್ತಿತ್ತು. ಆ ಮಾವಯ್ಯ ಹಿಂದೆ ನಿಂತು ಹೇಳುತ್ತಿದ್ದ: ‘ಹಾ, ಇವನು ಬೊಂಬಾಯ್ ಬಾಬು ನೋಡ್ರಿ, ಅವನ ಕನ್ನಡಕ ನೋಡ್ರಿ, ಪ್ಯಾಂಟು ನೋಡ್ರೀ, ಅರೆ ದಿಲ್ಲಿ ಬಂತಲ್ರಿ ದಿಲ್ಲಿ? ಆಗ್ರಾದ ಬಸ್ಸು ಹತ್ರೀ… ರೈಟ್! ಬಂದೇ ಬಿಡ್ತು ತಾಜ್ಮಹಲ್ಲೂ. ಏನ್ ಹೊಳೀತದೇ ನೋಡ್ರಿ, ಬೆಳದಿಂಗಳು ಇದ್ದಂಗಿದೆ… ಬಂತು ಬಂತೂ ಹೈದ್ರಾಬಾದ್, ವಾಹ್, ಚಾರ್ಮಿನಾರ್ ನೋಡಿ, ಮೋನಾ ಬಜಾರು ಇದೇ ಕಣ್ರಿ. ಟೈಂ ಆಗೋಯ್ತುರೀ, ಬೆಂಗಳೂರ್ ಬಸ್ಸು ಹೊರಟಿದೆ. ಅರರೆ, ಬಂದೇ ಬಿಡ್ತು ವಿಧಾನಸೌಧಾ, ನೋಡಿದ್ರಿ ತಾನೆ? ನಡೀರಿ ಮತ್ತೆ ಮನೆಗೆ…’
ಅವನ ಈ ಕಾಮೆಂಟರಿ ಮುಗಿದ ತಕ್ಷಣವೇ ಮಾಯಾ ಪೆಟ್ಟಿಗೆಯ ಚಿತ್ರಸಂಪುಟವೂ ಮುಗಿದು ಹೋಗುತ್ತಿತ್ತು.
***
ಈಗ ಏನಾಗಿದೆ ಅಂದರೆ, ಹಳ್ಳಿಗಳಲ್ಲಿ ಸಂತೆ ಮಾಯವಾಗಿದೆ. ನಾಲ್ಕು ಹೆಜ್ಜೆ ನಡೆಯಲೂ ಜನ ಹಿಂದೆ ಮುಂದೆ ನೋಡುತ್ತಿದ್ದಾರೆ. ಮೋರ್, ರಿಲಯನ್ಸ್ ಫ್ರೆಶ್, ಬಿಗ್ಬಜಾರ್ನ ಥಳುಕು ಸಂತೆಯ ಸಂತಸವನ್ನೂ ಸೈಡ್ಗೆ ತಳ್ಳಿಬಿಟ್ಟಿದೆ. ಸಂತೆಯ ಮೈದಾನವನ್ನೂ ಸೂತಕದ ಛಾಯೆ ಆವರಿಸಿಕೊಂಡಿದೆ. ನೀವೇ ಹೇಳಿ. ಸಂತೆಯೆಂಬುದು ಹೀಗೆ ಕಳೆದು ಹೋಗಬಾರದಿತ್ತು. ಅಲ್ಲವೇ?

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: