ಹಾಡು ಹುಟ್ಟಿದ ಸಮಯ

ಚಿತ್ರ: ಸೊಸೆ ತಂದ ಸೌಭಾಗ್ಯ, ಸಂಗೀತ: ಜಿ.ಕೆ. ವೆಂಕಟೇಶ್, ಗೀತರಚನೆ: ಆರ್.ಎನ್. ಜಯಗೋಪಾಲ್, ಗಾಯನ: ಪಿ.ಬಿ. ಶ್ರೀನಿವಾಸ್.

ರವಿವರ್ಮನ ಕುಂಚದ ಕಲೆ ಬಲೆ ಸಾಕಾರವೂ
ಕವಿಕಲ್ಪನೆ ಕಾಣುವ ಚೆಲುವಿನ ಜಾಲವೂ

ಉಯ್ಯಾಲೆಯ ಆಡಿ ನಲಿವ ರೂಪಸಿ
ಸುರಲೋಕದಿಂದ ಇಳಿದು ಬಂದ ನಿಜ ಊರ್ವಶಿ
ನನ್ನೊಲವಿನ ಪ್ರೇಯಸಿ…// ರವಿವರ್ಮನ ಕುಂಚದ//

ಹೂರಾಶಿಯ ನಡುವೆ ನಗುವ ಕೋಮಲೆ
ಕವಿ ಕಾಳಿದಾಸ ಕಾವ್ಯರಾಣಿ ಶಾಕುಂತಲೆ
ಚಿರಯೌವನ ನಿನ್ನಲ್ಲೆ…//ರವಿವರ್ಮನ ಕುಂಚದ//
ಇವತ್ತಿಗೂ ಎಲ್ಲರನ್ನೂ ಮಾಧುರ್ಯದ ಕಡಲಲ್ಲಿ ತೇಲಿಸುವ ಗೀತೆ-‘ರವಿವರ್ಮನ ಕುಂಚದ ಕಲೆ ಬಲೆ…’ ವಿವಿಧಭಾರತಿಯಿಂದ ಪ್ರಸಾರವಾಗುವ ಹಾಡುಗಳ ಪೈಕಿ ಈ ಹಾಡು ಈಗಲೂ ನಂಬರ್ ಒನ್. ಈ ಹಾಡಿನಲ್ಲಿ ಮಧುರ ರಾಗವಿದೆ. ತಾನದಲ್ಲಿ ತೇಲಿಸಬಲ್ಲ ತಾಳವಿದೆ. ಇಂಪಾದ ಸಂಗೀತದ ಜತೆಗೆ ಪಿ.ಬಿ. ಶ್ರೀನಿವಾಸ್ ಅವರ ಜೇನ್ದನಿಯ ಸೊಗಸಿದೆ. ಅನುಮಾನವೇ ಬೇಡ, ಇನ್ನು ಹತ್ತು ವರ್ಷದ ನಂತರ ಈ ಹಾಡು ಕೇಳಿದರೂ ಅದು ನಮ್ಮನ್ನು ಹಾಡಾಗಿ ಕಾಡುತ್ತದೆ, ಕಾಡಿ ಹಾಡಿಸುತ್ತದೆ!
ಹೇಳಿ ಕೇಳಿ ಇದು ಶೃಂಗಾರ ಗೀತೆ. ಅಂದ ಮೇಲೆ ಈ ಹಾಡು ಸೃಷ್ಟಿಯಾದದ್ದೂ ಒಂದು ಸಂಭ್ರಮದ ಗಳಿಗೆಯಲ್ಲೇ ಇರಬೇಕು. ‘ಸೊಸೆ ತಂದ ಸೌಭಾಗ್ಯ’ ಚಿತ್ರಕ್ಕೆ ಈ ಹಾಡು ಬರೆದ ಸಂದರ್ಭದಲ್ಲಿ ಗೀತೆ ರಚನೆಕಾರ ಆರ್.ಎನ್. ಜಯಗೋಪಾಲ್, ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್ ಮತ್ತು ಗಾಯಕ ಪಿ.ಬಿ. ಶ್ರೀನಿವಾಸ್ ಮೂರು ಜನ ಸಂತೋಷದ ಕಡಲಲ್ಲೇ ತೇಲಿ ತೇಲಿ ಹೋದ ವೇಳೆಯಲ್ಲೇ ಈ ಮಧುರ ಗೀತೆ ಸೃಷ್ಟಿಯಾಗಿರಬೇಕು…
ಹೀಗೆಲ್ಲ ಅಂದುಕೊಂಡಿರಾ? ಕ್ಷಮಿಸಿ. ನಿಮ್ಮ ಊಹೆ ತಪ್ಪು. ಏಕೆಂದರೆ ‘ಅಮರಾ ಮಧುರ’ ಎಂದು ಕಣ್ಮುಚ್ಚಿ ಹೇಳಬಹುದಾದ ಈ ಹಾಡು ಸೃಷ್ಟಿಯಾದದ್ದು ಸಾವಿನ ಸನ್ನಿಯಲ್ಲಿ. ಸೂತಕದ ಸಂದರ್ಭದಲ್ಲಿ. ಇದನ್ನು ಆರ್.ಎನ್. ಜಯಗೋಪಾಲ್ ವಿವರಿಸುವುದು ಹೀಗೆ:‘ಸೊಸೆ ತಂದ ಸೌಭಾಗ್ಯ’ ಸಿನಿಮಾ ತಯಾರಿಸುವಾಗ ನಮಗೆ ಸದಾನಂದ್ ಎಂಬಾತ ಗೆಳೆಯನಾದ. ಬೇಗ ಪರಮಾಪ್ತನಾದ.ಚಿತ್ರದ ಪ್ರತಿ ಕೆಲಸದಲ್ಲೂ ಆತನ ಪಾಲಿರುತ್ತಿತ್ತು. ಈ ಹಾಡಿಗೆ ಟ್ಯೂನ್ ಮಾಡಬೇಕು ಅಂದುಕೊಂಡು ನಾನು ಜಿ.ಕೆ. ವೆಂಕಟೇಶ್ ಸಿದ್ಧವಾಗಿದ್ದಾಗಲೇ ಆತ ತಲೆ ಬೋಳಿಸಿಕೊಂಡು ಬಿಕ್ಕಳಿಸುತ್ತ ಬಂದ! ಯಾಕ್ರೀ, ಏನಾಯ್ತು ಅಂದರೆ-ಈಗಷ್ಟೇ ನನ್ನ ಇಬ್ಬರು ಅಣ್ಣಂದಿರೂ ಹೋಗಿಬಿಟ್ರು ಅಂದ. ಈ ಶಾಕ್ನ ಮಧ್ಯೆಯೇ ಟ್ಯೂನ್ ಮಾಡಿ, ಹಾಡು ಬರದದ್ದಾಯ್ತು…’
ಇದು, ಹಾಡು ಬರೆದವರ ಕತೆ. ಈ ಮಧುರಾತಿ ಮಧುರ ಗೀತೆಯನ್ನು ಎದೆ ತುಂಬಿ ಹಾಡಿದಾಗ ಪಿ.ಬಿ. ಶ್ರೀನಿವಾಸ್ ಅವರ ಮನಸ್ಥಿತಿ ಹೇಗಿತ್ತು ಎಂಬುದನ್ನು ಅವರಿಂದಲೇ ಕೇಳಿದರೆ ಚೆನ್ನ. ಓವರ್ ಟಿ ಪಿ.ಬಿ.ಶ್ರೀನಿವಾಸ್: ‘ನನ್ನ ಬದುಕಿನ ಯಾವಜ್ಜೀವ ಸೂರ್ತಿ ದೇವತೆಯಾಗಿದ್ದ ಅಮ್ಮ ತೀರಿಕೊಂಡು ಅರ್ಧಗಂಟೆಯಾಗಿತ್ತು. ಆಗಲೇ ಆರ್.ಎನ್. ಜಯಗೋಪಾಲ್, ಜಿ.ಕೆ. ವೆಂಕಟೇಶ್ ಫೋನ್ ಮಾಡಿ-‘ಒಂದು ಹಾಡಿದೆ. ನಾಳೆ ಬೆಳಗ್ಗೆಯೇ ಹಾಡಬೇಕು. ಹಾಡ್ತೀಯಾ’ ಅಂದ್ರು. ಹೇಗೆ ಉತ್ತರಿಸಲಿ? ಕ್ಷಣಕಾಲ ಯೋಚಿಸಿದೆ. ಕಲಾವಿದನಿಗೆ ಕರ್ತವ್ಯ ಮುಖ್ಯ. ಸೆಂಟಿಮೆಂಟ್ ಆಮೇಲೆ ಅನ್ನಿಸಿತು. ತಕ್ಷಣವೇ ‘ಹಾಡ್ತೀನಿ’ ಅಂದೆ! ಸರಿ ಮಾರಾಯ. ಈಗ ಏನ್ಮಾಡ್ತಾ ಇದೀಯ ಅಂದ್ರು. ಎಲ್ಲವನ್ನೂ ವಿವರಿಸಿದೆ. ದಿಗ್ಭ್ರಮೆಗೆ ಈಡಾಸ ಆ ಇಬ್ಬರೂ ಮಾತೇ ಆಡಲಿಲ್ಲ.
ಮರುದಿನ ಎಲ್ಲ ‘ಕಾರ್ಯ’ ಮುಗಿಸಿ ಹಾಡಲು ನಿಂತೆ. ಹಾಡಿನ ಮೇಲೆ ಕಣ್ಣಾಡಿಸುತ್ತಿದ್ದಂತೆಯೇ ನಮ್ಮ ಅಮ್ಮ, ಅವಳ ಮಮತೆ, ಅವಳ ಒಲವು, ಮಾಗಿದ ಚೆಲುವು ಎಲ್ಲವೂ ಕಣ್ಮುಂದೆ ಬಂದು ನಿಂತಿತು. ಈ ಹಾಡು ಪೂರ್ತ ಪೂರ್ತಾ ನಮ್ಮ ಅಮ್ಮನನ್ನು ಕುರಿತೇ ಬರೆದಿರೋದು ಅನ್ನಿಸಿಬಿಡ್ತು. ಅಮ್ಮ ಮರೆಯಲ್ಲಿ ನಿಂತೇ ಆಶೀರ್ವಾದಿಸ್ತಾ ಇದ್ದಾಳೆ ಅಂದುಕೊಂಡು, ಒಂದೊಂದು ಪದವನ್ನೂ ಅನುಭವಿಸಿ ಹಾಡಿದೆ. ಆದರೆ ಕಡೆಯ ಸಾಲು ‘ಚಿರಯೌವನ ನಿನ್ನಲೇ…’ ಎಂದು ಹಾಡುವಾಗ ಮಾತ್ರ ಕಳೆದುಹೋದ ಅಮ್ಮ ನೆನಪಾಗಿಬಿಟ್ಳು. ಅಮ್ಮ ಚಿರನೆನಪಾಗಿ ಹೋಗಿದ್ದ ಸಂದರ್ಭದಲ್ಲೇ ನಾನು ಚಿರಯೌವನದ ಹಾಡು ಹೇಳಿದ್ದೆನಲ್ಲ-ವಿಪರೀತ ದುಃಖವಾಯಿತು. ಹಾಡು ಮುಗಿಸಿ ಮನದಣಿಯ ಅತ್ತುಬಿಟ್ಟೆ…!’
ಈಗಲೂ ಅಷ್ಟೆ. ಪಿ.ಬಿ. ಶ್ರೀನಿವಾಸ್ ಎಲ್ಲಿಗೇ ಹೋದರೂ ಜನರು ‘ರವಿವರ್ಮನ…’ ಹಾಡು ಹೇಳುವಂತೆ ಒತ್ತಾಯಿಸುತ್ತಾರೆ. ಅಂಥ ಸಂದರ್ಭದಲ್ಲೆಲ್ಲ ಪಿ.ಬಿ. ಭಾವುಕರಾಗುತ್ತಾರೆ. ಹಾಡಿ ಮುಗಿಸಿದ ತಕ್ಷಣ ಅಮ್ಮನ ನೆನಪಲ್ಲಿ ತೇಲಿಹೋಗುತ್ತಾರೆ. ಮಾತಾಡುತ್ತಾ ಮಾತಾಡುತ್ತಾ ಕನ್ನಡಕ ತೆಗೆದು ಮತ್ತೆ ಹಾಕಿಕೊಳ್ತಾರೆ. ಧುಮುಕಿದ ಕಂಬನಿ ಯಾರಿಗೂ ಕಾಣದಿರಲಿ ಅಂತ ಹೀಗೆ ಮಾಡ್ತಾರಾ? ಗೊತ್ತಿಲ್ಲ!
-ಮಣೀ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: