ನಮ್ಮದೇ ಬದುಕಿನ ಒಂದು ಕತೆ….

ನಮ್ಮ-ನಿಮ್ಮ ಊರಿನಂಥಾದ್ದು ಒಂದು ಊರು.
ಅಲ್ಲಿ ಥೇಟಾನುಥೇಟ್ ವಜ್ರಮುನಿಯಂಥ ಅಥವಾ ಅಮರೀಷ್ಪುರಿಯಂಥ ಒಬ್ಬ ಶ್ರೀಮಂತ. ಅಂದ ಮೇಲೆ ಕೇಳಬೇಕಾ? ಅವನು ಕೇಡಿ ನಂಬರ್ ಒನ್. ಕ್ರೂರಿ ನಂಬರ್ ಒನ್ ಮತ್ತು ರೌಡಿ ನಂಬರ್ ಒನ್. ಆದರೆ ಹತ್ತು ಮಂದಿಯ ಎದುರಿಗೆ ಮಾತ್ರ ಭಾಳಾ ಅಂದ್ರೆ ಭಾಳಾ ಸಭ್ಯನ ಥರಾ ವರ್ತಿಸ್ತಿದ್ದ. ಅವನ ನಯ, ವಿನಯ, ಅದರ ಹಿಂದಿದ್ದ ವಂಚಕ ಬುದ್ಧಿ ಕಂಡ ಜನ ಅವನನ್ನು ನಂಬಬೇಕೋ ಬೇಡವೋ ಗೊತ್ತಾಗದೆ ನರಳುತ್ತಿದ್ದರು. ಸಂಕಟದ ಮಧ್ಯೆಯೇ ಬದುಕುತ್ತಿದ್ದರು.
ಕೇಡಿಗರು ಇರುವ ಕಡೆಯಲ್ಲೇ ಒಳ್ಳೆಯವರು; ಅಮಾಯಕರು ಇರ್ತಾರೆ ಅಲ್ವ? ಹಾಗೇನೇ ಆ ಊರಲ್ಲಿ ಒಬ್ಬ ಬಡವ ಇದ್ದ. ಅವನಿಗೆ, ವಯಸ್ಸಿಗೆ ಬಂದ ಒಬ್ಬ ಮಗಳಿದ್ದಳು. ಈ ಬಡವ, ಶ್ರೀಮಂತನಿಂದ ದೊಡ್ಡ ಮೊತ್ತದ ಸಾಲ ಪಡೆದಿದ್ದ. ಅದು ದಿನದಿಂದ ದಿನಕ್ಕೆ ಜೋಳದ ಕಡ್ಡಿಯ ಥರಾ ಬೆಳೀತಾನೇ ಹೋಯ್ತು. ಮೊದಲಿನಿಂದಲೂ ಆ ಹುಡುಗಿಯ ಮೇಲೆ ಕಣ್ಣಿಟ್ಟಿದ್ದ ಶ್ರೀಮಂತ ಕಡೆಗೊಂದು ದಿನ ಬಡವನನ್ನು ಕರೆಸಿ- ‘ನೋಡೋ ಇವ್ನೆ, ನಿನ್ನ ಯೋಗ್ಯತೆಗೆ ಈ ಜನ್ಮದಲ್ಲಂತೂ ಸಾಲ ತೀರಿಸಲು ಆಗೋದಿಲ್ಲ. ಸುಮ್ನೆ ನಿನ್ನ ಮಗಳನ್ನು ಕೊಟ್ಟು ಮದುವೆ ಮಾಡಿಬಿಡು’ ಅಂದೇಬಿಟ್ಟ.
ನಿಂತ ಜಾಗದಲ್ಲೇ ಸಿಡಿಲು ಹೊಡೆದಂಗಾಯ್ತು ಬಡವನಿಗೆ. ಬಂಗಾರ; ಬಂಗಾರದಂಥ ಮಗಳನ್ನು ಆ ಕ್ರೂರಿಗೆ ಕೊಡೋದಾದ್ರೂ ಹೇಗೆ? ಅದೆಲ್ಲ ಆಗೋದಿಲ್ಲ ಅನ್ನೋದಾದ್ರೆ- ಸಾಲ ತೀರಿಸಬೇಕಿತ್ತು. ಅಷ್ಟು ಸಾಲ ತೀರಿಸಿದ ಮೇಲಾದ್ರೂ ಆ ಸಾಹುಕಾರ; ಅವನ ಜತೆಗಿದ್ದವರು ಇವರನ್ನು ನೆಮ್ಮದಿಯಿಂದ ಬದುಕಲು ಬಿಡ್ತಾರೆ ಅನ್ನೋಕೆ ಯಾವ ಗ್ಯಾರಂಟಿ ಕೂಡ ಇರಲಿಲ್ಲ. ಈ ಬಡವ, ತಲೆ ಮೇಲೆ ಕೈ ಹೊತ್ತುಕೊಂಡು ಮನೆಗೆ ಬಂದ. ಮಗಳಿಗೆ ನಡೆದದ್ದನ್ನೆಲ್ಲ ಹೇಳಿದ. ನಮ್ಮ ಮನೆಯ ಗಿಣಿ ಮರೀನ ಆ ಹಾಳು ಗಿಡುಗ ಕಚ್ಕೊಂಡು ಹೋಗೋಕೆ ತಯಾರಿದೆ ಮಗಳೇ. ನಾನು ಪಾಪಿ ಕಣಮ್ಮಾ- ನಾನು ಪಾಪೀ ಎನ್ನುತ್ತಾ ಬಿಕ್ಕಿ ಬಿಕ್ಕಿ ಅತ್ತ.
ಒಂದೆರಡು ದಿನ ಈ ಅಪ್ಪ-ಮಗಳು ಮನೆಯಿಂದ ಹೊರಗೇ ಬರಲಿಲ್ಲ. ಆದರೆ ಶ್ರೀಮಂತ ಸುಮ್ಮನಿರ್ತಾನಾ? ಅವನು ಹಿಂಡಿನೊಂದಿಗೇ ಬಂದ. ಈ ತಂದೆ-ಮಗಳನ್ನು ಅಯ್ಯೋ ಪಾಪ ಎಂಬಂತೆ ನೋಡುತ್ತಾ ಹೇಳಿದ: ‘ನೋಡೋ ಇವ್ನೆ, ನಾನು ಕೇಡಿ ಥರಾ ನಿನ್ನ ಮಗಳನ್ನು ಹಾರಿಸ್ಕಂಡು ಹೋಗಿಲ್ಲ. ಈಗ ಒಂದು ಕೆಲಸ ಮಾಡೋಣ. ಕಾನೂನು ಬದ್ಧವಾಗಿಯೇ ಒಂದು ಸ್ಪರ್ಧೆ ಒಡ್ತೀನಿ. ಏನ್ ಗೊತ್ತ? ನೀನು, ನಿನ್ನ ಮಗಳು-ಜತೆಗೆ ಊರಿನ ನೂರಾರು ಮಂದಿ ನಿಮ್ಮದೇ ಜಮೀನಿಗೆ ಹೋಗೋಣ. ಅಲ್ಲಿ ಸಣ್ಣ ಸಣ್ಣ ಕಲ್ಲುಗಳ ಒಂದು ಗುಡ್ಡವೇ ಇದೆ ತಾನೆ? ಆ ಗುಡ್ಡದಿಂದ ನಾನು ಎರಡು ನೈಸ್ ನೈಸ್ ಆಗಿರುವಂಥ ಕಲ್ಲು ತಗೋತೀನಿ. ಒಂದು ಕಪ್ಪು ಬಣ್ಣದ್ದು. ಇನ್ನೊಂದು ಬಿಳೀ ಬಣ್ಣದ್ದು. ಆ ಕಲ್ಲುಗಳನ್ನು ಒಂದು ಖಾಲಿ ಬ್ಯಾಗ್ಗೆ ಹಾಕ್ತೀನಿ. ಆಮೇಲೆ ಊರಿನ ಎಲ್ಲರ ಸಮ್ಮುಖದಲ್ಲಿ ನಿನ್ನ ಮಗಳು, ಕಣ್ಮುಚ್ಚಿಕೊಂಡು ಆ ಬ್ಯಾಗಿನಿಂದ ಒಂದೇ ಒಂದು ಕಲ್ಲು ಎತ್ಕೋಬೇಕು. ಅದನ್ನು ಎಲ್ಲರಿಗೂ ತೋರಿಸಬೇಕು. ಅವಳೇನಾದ್ರೂ ಕಪ್ಪು ಕಲ್ಲು ಎತ್ತಿಕೊಂಡರೆ- ನನ್ನನ್ನು ಮದುವೆಯಾಗಬೇಕು. ಹಿಂದೇನೇ ನಿನ್ನ ಸಾಲ ಕೂಡ ಮನ್ನಾ ಆಗಿರುತ್ತೆ. ಅದರ ಬದಲಿಗೆ, ಆಕೆ ಎತ್ತಿಕೊಂಡಾಗ ಬಿಳೀಕಲ್ಲು ಬಂದು ಬಿಟ್ರೆ- ಆಕೆ ನನ್ನನ್ನು ಮದುವೆಯಾಗೋದೇ ಬೇಡ. ಆದರೆ, ಆಗ ಕೂಡ ನಿನ್ನ ಸಾಲ ಮನ್ನಾ ಆಗುತ್ತೆ. ಮಾತು ಅಂದ್ರೆ ಮಾತು. ಏನಂತೀಯ?’ ಅಂದ. ಹಿಂದೆಯೇ ಇದ್ದ ಅವನ ‘ಬೆಂಬಲಿಗರು ಇದು ಕಣ್ರೀ ನ್ಯಾಯ ಅಂದ್ರೆ. ನಡೆದೇಬಿಡಲಿ’ ಅಂದೇಬಿಟ್ಟರು.
***
ಅಂದುಕೊಂಡ ದಿನ ಬಂದೇ ಬಂತು. ಸಾಹುಕಾರ ತನ್ನ ಹಿಂಬಾಲಕರೊಂದಿಗೆ ಅಮರೀಷ್ಪುರಿಯ ಗತ್ತಿನಲ್ಲೇ ನಡೆದುಬಂದ. ಈ ಬಡವನೂ, ಅವನ ಮಗಳೂ ದೊಡ್ಡ ಆತಂಕದಲ್ಲಿಯೇ ನಿಂತಿದ್ದರು. ನುಣುಪು ಕಲ್ಲುಗಳಿದ್ದ ಜಾಗಕ್ಕೆ ಹಿಂಬಾಲಕರೊಂದಿಗೇ ಶ್ರೀಮಂತ ನಡೆದು ಹೋದ. ಆತ ಆ ರಾಶಿಯಿಂದ ಎರಡು ಕಲ್ಲುಗಳನ್ನು ತೆಗೆದು ಖಾಲಿ ಬ್ಯಾಗ್ಗೆ ಹಾಕಿದ್ದನ್ನು ಈ ಎಲ್ಲರೂ ಗಮನಿಸಿದರು. ಆದರೆ ಶ್ರೀಮಂತ ಎರಡೂ ಕಪ್ಪು ಕಲ್ಲುಗಳನ್ನೇ ಆರಿಸಿಕೊಂಡ ಎಂಬುದು ಈ ಹುಡುಗಿಯ ತೀಕ್ಷ್ಣ ನೋಟಕ್ಕೆ ಅರ್ಥವಾಗಿ ಹೋಯಿತು. ಅದರರ್ಥ- ಈ ಹುಡುಗಿಗೆ ಬೇರೆ ಆಯ್ಕೆಯೇ ಇರಲಿಲ್ಲ. ಆಕೆ ಊರ ಜನರ ಮಧ್ಯೆ ಏನೂ ಜಾಣತನ ಪ್ರದರ್ಶಿಸುವಂತಿರಲಿಲ್ಲ. ಬ್ಯಾಗ್ನೊಳಗೆ ಎರಡೂ ಕಪ್ಪು ಕಲ್ಲುಗಳೇ ಇದ್ದುದರಿಂದ ಆಕೆಯ ಕೈಗೆ ಕಪ್ಪಗಿನದ್ದೇ ಸಿಗುತ್ತಿತ್ತು. ನಿಯಮದ ಪ್ರಕಾರ ಅದನ್ನೇ ಎಲ್ಲರಿಗೂ ತೋರಿಸಬೇಕಿತ್ತು ಮತ್ತು ಶ್ರೀಮಂತನನ್ನು ಮದುವೆಯಾಗಬೇಕಿತ್ತು. ಮೊದಲೇ ನಿಬಂಧನೆಗೆ ಒಪ್ಪಿಕೊಂಡಿದ್ದರಿಂದ ನಮಗೆ ಈ ಸ್ಪರ್ಧೇಲಿ ನಂಬಿಕೆ ಇಲ್ಲ ಅನ್ನುವಂತಿರಲಿಲ್ಲ. ಮೋಸ ಎಂದು ಚೀರುವಂತೆಯೂ ಇರಲಿಲ್ಲ.
ಒಂದರೆಕ್ಷಣ ಏನು ಮಾಡಬೇಕೆಂದೇ ತೋಚದೆ ಈ ಹುಡುಗಿ ತಂದೆಯ ಕಡೆ ನೋಡಿದಳು. ಆ ಬಡವ ನಿಂತಲ್ಲೇ ನಡುಗುತ್ತಿದ್ದ. ನನ್ನ ಮಗಳಿಗೆ ಕೆಟ್ಟದಾಗದಿರಲಿ, ತೊಂದರೆಯಾಗದಿರಲಿ ಎಂದು ಪದೇ ಪದೆ ಪ್ರಾರ್ಥಿಸುತ್ತಾ ಆಕಾಶ ನೋಡುತ್ತಾ ಕೈ ಮುಗಿಯುತ್ತಿದ್ದ. ಶ್ರೀಮಂತನಿಗೆ ಇದೆಲ್ಲಾ ಯಾವ ಲೆಕ್ಕ? ಅವನು ವ್ಯಂಗ್ಯವಾಗಿ ನಗುತ್ತಾ- ‘ನೋಡು ಸುಂದ್ರೀ, ನಿನಗೋಸ್ಕರ ಏನು ಮಾಡಲಿ ಹೇಳು? ಏಳು ಸಾಗರ ದಾಟಿ ಬರಬೇಕಾ? ಶಿವನ ತಲೆಯ ಮೇಲಿರುವ ಚಂದ್ರನನ್ನು ತಂದಿಡಬೇಕಾ? ಕುಬೇರ ನಾಚುವಷ್ಟು ಸಂಪತ್ತು ತೋರಿಸಬೇಕಾ? ಅಥವಾ ವಜ್ರ ವೈಢೂರ್ಯದ ಮಧ್ಯೆಯೇ ನಿನ್ನನ್ನು ಮುಳುಗಿಸಬೇಕಾ? ಎಲ್ಲಕ್ಕೂ ನಾನು ರೆಡಿ. ಈ ಸ್ಪರ್ಧೆ ಯಾಕೆ ಬೇಕು? ಸುಮ್ನೆ ಒಪ್ಕೋ’ ಅಂದ.
ಈ ಹುಡುಗಿ ಅದಕ್ಕೆ ನಿಂತಲ್ಲೇ ನಿರಾಕರಿಸಿಬಿಟ್ಟಳು. ಅಷ್ಟೆ, ಶ್ರೀಮಂತನಿಗೆ ತಿರುಗಿಸಿ ಹೊಡೆದಂತಾಯಿತು. ಆತ ಒಳಗೊಳಗೇ ಸಿಡಿಸಿಡಿ ಅನ್ನುತ್ತಾ- ‘ಹೂಂ, ಹಾಗಾದ್ರೆ ನಡೆದೇಬಿಡಲಿ ಸ್ಪರ್ಧೆ. ಆಕೆಯ ಕಣ್ಣಿಗೆ ಬಟ್ಟ ಕಟ್ಟಿ. ಬ್ಯಾಗ್ನಿಂದ ಆಕೆ ಕಪ್ಪು ಕಲ್ಲು ಎತ್ತಿಕೊಂಡ್ರೆ ನನ್ನನ್ನು ಮದುವೆ ಆಗಬೇಕು. ಒಂದು ವೇಳೆ ಅವಳ ಕೈಗೆ ಬಿಳೀಕಲ್ಲು ಬಂತು ಅಂದ್ರೆ-ನಾನೇ ಅವಳನ್ನು ಬಿಟ್ಟುಕೊಡ್ತೀನಿ’ ಎಂದು ಅಬ್ಬರಿಸಿದ. ಹಿಂದೆಯೇ ಆ ಹುಡುಗಿಯತ್ತ ನೋಡುತ್ತಾ ವ್ಯಂಗ್ಯವಾಗಿ ನಕ್ಕ.
ಎಲ್ಲರೂ ನೋಡುತ್ತಿದ್ದಂತೆಯೇ ಆ ಹುಡುಗಿಯ ಕಣ್ಣಿಗೆ ಬಟ್ಟೆ ಕಟ್ಟಲಾಯಿತು. ಬಡವನ ಕಡೆಗೆ ಒಂದಷ್ಟು ಜನ, ಶ್ರೀಮಂತನ ಕಡೆಗೆ ಒಂದಷ್ಟು ಜನ ನಿಂತುಕೊಂಡರು. ಎಲ್ಲರಿಗೂ ಕುತೂಹಲ. ಆ ಗೊಂದಲದ ಮಧ್ಯೆಯೇ ಮುಂದೆ ಏನಾಗಬಹುದು ಎಂಬ ವಿಷಯವಾಗಿ ಗುಸುಗುಸು ಚರ್ಚೆ ನಡೆಯಿತು. ಒಂದಿಬ್ಬರು ಬೆಟ್ ಕಟ್ಟಿದರು ಕೂಡಾ. ಹೀಗಿದ್ದಾಗಲೇ ನಡುಗುತ್ತಲೇ ಮುಂದೆ ಬಂದ ಈ ಹುಡುಗಿ ನಡುಗುತ್ತಲೇ ಬ್ಯಾಗ್ಗೆ ಕೈ ಹಾಕಿದಳು.
ಒಂದೆರಡು ನಿಮಿಷ ಏನೋ ಲೆಕ್ಕಾಚಾರ ಹಾಕಿದವಳಂತೆ ಒಂದೇ ಸಮನೆ ತಡಕಾಡುತ್ತ ಕಡೆಗೊಮ್ಮೆ ನಿಧಾನವಾಗಿ ಒಂದು ಕಲ್ಲು ಹಿಡಿದುಕೊಂಡು ನಿಧಾನವಾಗಿ ಕೈ ಮೇಲೆತ್ತಿದಳು. ಅದನ್ನು ಕಂಡದ್ದೇ ಶ್ರೀಮಂತನ ಮುಖ ಊರಗಲವಾಯಿತು. ಅಂತೂ ಕಡೆಗೂ ತಂತ್ರ ಫಲಿಸಿತು. ಈ ಬೆಡಗಿ ಇನ್ನೊಂದೆರಡು ಕ್ಷಣಗಳ ನಂತರ ನನ್ನವಳೇ ಎಂದುಕೊಂಡ…
ಊರ ಜನರೆಲ್ಲ ಮುಂದೆ ಏನಾದೀತೋ ಎಂದು ಕಾಯುತ್ತಿದ್ದಾಗಲೇ ಈ ಹುಡುಗಿ ಬ್ಯಾಗಿನಿಂದ ಕೈತೆಗೆದವಳು ಅನಿರೀಕ್ಷಿತವಾಗಿ, ಆದರೆ ಯಾರಿಗೂ ಅನುಮಾನ ಬಾರದಂತೆ ಆ ಕಲ್ಲನ್ನು ಬೀಳಿಸಿಬಿಟ್ಟಳು. ಮೊದಲೇ ದುಂಡುದುಂಡಾಗಿದ್ದ ಆ ಕಲ್ಲು ಕ್ಷಣ ಮಾತ್ರದಲ್ಲೇ ಗುಡ್ಡದ ಅದೆಷ್ಟೋ ಕಲ್ಲುಗಳ ಮಧ್ಯೆ ಸೇರಿಹೋಯ್ತು.
ತಕ್ಷಣವೇ ಮುಖ ಚಿಕ್ಕದು ಮಾಡಿಕೊಂಡು ಅಳು ಮೋರೆಯಲ್ಲಿ ಆ ಹುಡುಗಿ ಹೇಳಿದಳು: ‘ಸಾಹುಕಾರ್ರೆ, ಊರ ಹಿರಿಯರೆ, ದಯವಿಟ್ಟು ಕ್ಷಮಿಸಬೇಕು. ನಾನು ಗಾಬರೀಲಿದ್ದೆ. ಆ ಕಾರಣದಿಂದಲೇ ಬ್ಯಾಗ್ನಿಂದ ತಗೊಂಡ ಕಲ್ಲು ಕೈ ಜಾರಿ ಬಿದ್ದು ಹೋಯ್ತು. ನಮ್ಮ ಸಾಹುಕಾರರ ನಿಬಂಧನೆಗೆ ನನ್ನ ಒಪ್ಪಿಗೆ ಇದೆ. ಆ ಪ್ರಕಾರ ನಾನು ತೆಗೆದಿರೋದು ಎರಡರಲ್ಲಿ ಒಂದು ಬಣ್ಣದ ಕಲ್ಲು ತಾನೆ? ಇನ್ನೊಂದು ಬಣ್ಣದ್ದು ಬ್ಯಾಗ್ನ ಒಳಗೇ ಇದೆ. ಅಲ್ಲಿರೋದು ಕಪ್ಪು ಬಣ್ಣದ್ದಾಗಿದ್ರೆ ನಾನು ಎತ್ಕೊಂಡಿರೋದು ಬಿಳೀ ಬಣ್ಣದ ಕಲ್ಲು ಅಂತ ಅರ್ಥ. ಒಂದು ವೇಳೆ ಬ್ಯಾಗ್ನೊಳಗೆ ಬಿಳೀ ಬಣ್ಣದ್ದೇ ಸಿಕ್ಕಿದ್ದೆ ನಾನು ಬೀಳಿಸಿರೋದೇ ಕಪ್ಪು ಬಣ್ಣದ್ದು ಎಂದರ್ಥ. ತಗೊಳ್ಳಿ. ನೀವೇ ನೋಡಿ’ ಎಂದು ಊರ ಹಿರಿಯರಿಗೆ ಕೊಟ್ಟುಬಿಟ್ಟಳು.
ಹುಡುಗಿ ಮಾಡಿದ ಟ್ರಿಕ್ ಏನೆಂದು ಶ್ರೀಮಂತನಿಗೆ ತಕ್ಷಣ ಅರ್ಥವಾಯಿತು. ಅವಳ ಜಾಣತನಕ್ಕೆ ಒಂದರೆಕ್ಷಣ ಮೆಚ್ಚುಗೆಯಾದರೂ, ಬೇಟೆ ಕೈ ತಪ್ಪಿ ಹೋದುದಕ್ಕೆ ನಿಂತಲ್ಲಿಯೇ ಒದ್ದಾಡಿ ಹೋದ. ಅದೇ ವೇಳೆಗೆ ಊರಿನ ಮುಖಂಡರು- ‘ಬ್ಯಾಗ್ ಒಳಗೆ ಕಪ್ಪು ಬಣ್ಣದ ಕಲ್ಲು ಸಿಕ್ಕಿದೆ. ಅದರರ್ಥ, ಹುಡುಗಿ ಎತ್ಕೊಂಡಿರೋದು ಬಿಳೀ ಬಣ್ಣದ ಕಲ್ಲು ಎಂದೇ ಅರ್ಥ. ನಿಬಂಧನೆಯ ಪ್ರಕಾರ ಇವಳು ಶ್ರೀಮಂತರನ್ನು ಮದುವೆಯಾಗಬೇಕಿಲ್ಲ. ಆಕೆಯ ತಂದೆ ಇನ್ಮುಂದೆ ಸಾಹುಕಾರರಿಗೆ ಸಾಲಾನೂ ಕೊಡಬೇಕಿಲ್ಲ’ ಎಂದು ಘೋಷಿಸಿಬಿಟ್ಟರು…
***
ರೀಡರ್ ಡಿಯರ್, ಇದು ಕಥೆ ನಿಜ. ಹುಶಾರಾಗಿ ಯೋಚಿಸಿ ನೋಡಿ. ಇದರೊಳಗೆ ನಾವು ನೀವೆಲ್ಲ ಇದ್ದೇವೆ. ನಮ್ಮ ಸರಕಾರ, ಅದರ ಭಾಗವೇ ಆಗಿರುವ ಜನನಾಯಕರು ಇದ್ದಾರಲ್ಲ, ಅವರು ಶ್ರೀಮಂತನನ್ನು ಪ್ರತಿನಿಸ್ತಾರೆ. ಬಡವನ ಜಾಗದಲ್ಲಿ ಓಟು ಹಾಕಿದ ನಾವೆಲ್ಲ ಇದ್ದೇವೆ. ನಮ್ಮ ಸರಕಾರಗಳು ಥೇಟ್ ಈ ಕಥೆಯ ಸಾಹುಕಾರನಂತೆಯೇ ನಮ್ಮ ಬದುಕಿನೊಂದಿಗೆ ಅದೆಷ್ಟೋ ವರ್ಷದಿಂದಲೂ ಚೆಲ್ಲಾಟ ಆಡ್ತಾ ಇವೆ. ಒಂದು ಸತ್ಯ ಏನಪಾ ಅಂದ್ರೆ- ಈ ಸರಕಾರಕ್ಕೆ ಬುದ್ಧಿ ಕಲಿಸುವ ಒಬ್ಬರಿಗಾಗಿ ನಾವೆಲ್ಲ ಕಾಯ್ತಾನೇ ಇದೀವಿ. ಈ ಬಡವನಿಗೆ ಮಗಳು ಸಿಕ್ಕ ಹಾಗೇ ನಮ್ಮ ಬದುಕಿಗೆ ಒಂದು ಆಶಾಕಿರಣ ಇನ್ನೂ ಸಿಕ್ಕಿಲ್ಲ. ಬಹುಶಃ ಅಂಥದೊಂದು ಬೆಳಕು ಕಾಣುವ ಭರವಸೆ ಕೂಡ ಇಲ್ಲ. ಹಾಗಾಗಿ, ಈ ಹೊಸ ಸರಕಾರಕ್ಕೆ; ಅದರ ಜನನಾಯಕರಿಗೆ ಶ್ರೀಮಂತನಿಗಿರುವ ಕೆಟ್ಟ ಬುದ್ಧಿ ಬಾರದಿರಲಿ ಅಂತ ಪ್ರಾರ್ಥಿಸೋಣ. ಅಂದ ಹಾಗೆ, ನೀವು ಕುಶಲವಷ್ಟೆ?

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: