ಅವರಿಲ್ಲದ ಲೋಕದಲ್ಲಿ ಹಾಡುಗಳೂ ಅನಾಥವಾಗಿವೆ…


‘ಗಗನವು ಎಲ್ಲೋ ಭೂಮಿಯು ಎಲ್ಲೋ
ಒಂದೂ ಅರಿಯೇ ನಾ
ಎನಗೆ ನೀ ನೀಡಿದ ವಚನವ ಕೇಳಿ
ತೇಲಿ ತೇಲಿ ಹೋದೆ ನಾ…’
ಈ ಹಾಡು ಕೇಳಿದಾಗಲೆಲ್ಲ ‘ಗೆಜ್ಜೆ ಪೂಜೆ’ ಸಿನಿಮಾದಲ್ಲಿ ನಟಿ ಕಲ್ಪನಾ ಹರ್ಷದಿಂದ ಹುಚ್ಚೆದ್ದು ಕುಣಿವ ಸನ್ನಿವೇಶ ನೆನಪಾಗುತ್ತದೆ. ಹಾಗೆ ನೋಡಿದರೆ ‘ಗಗನವು ಎಲ್ಲೋ ಭೂಮಿಯು ಎಲ್ಲೋ…’ ಎಂಬ ಸಾಲಿನಲ್ಲೇ ಅಚ್ಚರಿಯಿದೆ. ರೋಮಾಂಚನವಿದೆ. ಒಂದು ಸಂಭ್ರಮವಿದೆ. ಭೂಮಿಗೂ-ಬಾನಿಗೂ ಹೋಲಿಕೆ ಮಾಡುವ ಕ್ಷಣವಿದೆಯಲ್ಲ, ಅದು ಜಗವ ಗೆದ್ದಾಗ ಆಗುವ ಸಂತೋಷ. ಅಸಾಧ್ಯ ಎಂದುಕೊಂಡದ್ದು ಮಡಿಲಿಗೇ ಬಂದು ಬಿದ್ದಾಗ ಆಗುವ ಅನುಭಾವ. ಈ ಹಾಡು ಕೇಳಿಬರುವ ಸಂದರ್ಭ ಕೂಡ ಹಾಗೇ ಇದೆ. ವೇಶ್ಯೆಯ ಮಗಳನ್ನು; ತನಗೆ ಮದುವೆಯಾಗುವ ಭಾಗ್ಯವೇ ಇಲ್ಲ ಎಂದುಕೊಂಡವಳನ್ನು ಸುಶಿಕ್ಷಿತ ತರುಣನೊಬ್ಬ ಪ್ರೀತಿಸುತ್ತಾನೆ. ನಿನ್ನನ್ನೇ ಮದುವೆಯಾಗುತ್ತೇನೆ ಎಂದು ಭಾಷೆ ಕೊಡುತ್ತಾನೆ. ಈ ಕ್ಷಣದಲ್ಲಿ ಅವಳಿಗೆ ಆದ ಸಂಭ್ರಮವನ್ನು ಸಾವಿರವಲ್ಲ, ಲಕ್ಷ ಮಾತುಗಳಲ್ಲಿ ಕೂಡ ಹೇಳಲು ಸಾಧ್ಯವಿರಲಿಲ್ಲ. ಆದರೆ ಅದನ್ನೆಲ್ಲ ‘ಗಗನವು ಎಲ್ಲೋ…’ ಎಂಬ ಒಂದೇ ಹಾಡು ಪರಿಣಾಮಕಾರಿಯಾಗಿ ಹೇಳಿಬಿಟ್ಟಿತು!
ಅಂಥದೊಂದು ಅಪರೂಪದ, ಅನನ್ಯ ಗೀತೆ ಸೃಷ್ಟಿಸಿದವರು ಆರ್.ಎನ್. ಜಯಗೋಪಾಲ್.
ತಮ್ಮ ಮಧುರ ಹಾಡುಗಳಿಂದ ಇಡೀ ಸನ್ನಿವೇಶದ ತೀವ್ರತೆಯನ್ನು ಹೆಚ್ಚಿಸುತ್ತಿದ್ದ ಆರ್ಎನ್ಜೆ ಮನೆ ತುಂಬಾ ಸಿನಿಮಾದ ವಾತಾವರಣವಿತ್ತು. ಮೂಲತಃ ಆರ್ಎನ್ಜೆ ವಿಜ್ಞಾನ ಪದವೀಧರ. ಅವರು ಸೌಂಡ್ ಎಂಜಿನಿಯರ್ ಆಗಿ ಚಿತ್ರರಂಗಕ್ಕೆ ಬಂದವರು. ಒಂದಷ್ಟು ದಿನ ಆ ಕೆಲಸ ಮಾಡಿದರು ಕೂಡ. ನಂತರ ‘ಪ್ರೇಮದ ಪುತ್ರಿ’ ಸಿನಿಮಾದಲ್ಲಿ ಆಕಸ್ಮಿಕವಾಗಿ ಗೀತರಚನಕಾರರಾದರು. ಮುಂದೆ, ಒಂದೊಂದು ಹಾಡು ಬರೆದಂತೆಲ್ಲ ಆರ್ಎನ್ಜೆ ಎತ್ತರೆತ್ತರ ಬೆಳೆದೇ ಬೆಳೆದರು. ಇಡೀ ಸಿನಿಮಾದ ಆಶಯವನ್ನು ಒಂದು ಹಾಡಿನಲ್ಲಿಯೇ ಹೇಳಿ, ಆ ಸಿನಿಮಾದ ಅರ್ಥವಂತಿಕೆಯನ್ನು ಹೆಚ್ಚಿಸುವ ಶಕ್ತಿ ಆರ್ಎನ್ಜೆ ಅವರಿಗಿತ್ತು. ಅದಕ್ಕೆ ಉದಾಹರಣೆಯಾಗಿ ‘ವಿಜಯನಗರದ ವೀರಪುತ್ರ’ ಚಿತ್ರದ ‘ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು’, ‘ಸೊಸೆ ತಂದ ಸೌಭಾಗ್ಯ’ ಸಿನಿಮಾದ ‘ರವಿವರ್ಮನ ಕುಂಚದಾ ಕಲೆ’, ‘ಒಲವಿನ ಉಡುಗೊರೆ’ಯ ‘ಒಲವಿನ ಉಡುಗೊರೆ ಕೊಡಲೇನು’ ಇತ್ಯಾದಿ ಇತ್ಯಾದಿ ಹಾಡುಗಳನ್ನು ಉದಾಹರಿಸಬಹುದು. ಇವತ್ತಿಗೂ ಮಧುರ ಗೀತೆಗಳ ಪಟ್ಟಿಯಲ್ಲಿ ತಪ್ಪದೇ ಕಾಣಿಸಿಕೊಳ್ಳುವ ‘ಮಂಗಳದಾ ಈ ಸುದಿನಾ ಮಧುರವಾಗಲಿ’, ‘ದೇಹಕೆ ಉಸಿರೇ ಸದಾ ಭಾರಾ’, ‘ನೀರಿನಲ್ಲಿ ಅಲೆಯ ಉಂಗುರಾ’, ‘ಹೂವು ಚೆಲುವೆಲ್ಲಾ ನಂದೆಂದಿತು’, ‘ನಾ ಮೆಚ್ಚಿದ ಹುಡುಗನಿಗೆ’, ‘ಕಣ್ಣ ರೆಪ್ಪೆ ಒಂದನೊಂದು ಮರೆವುದೆ’, ‘ಬರೆದೆ ನೀನು ನಿನ್ನ ಹೆಸರ…’, ‘ನೀ ಬಂದು ನಿಂತಾಗ ನಿಂತು ನೀ ನಕ್ಕಾಗ’, ‘ಮೌನವೇ ಆಭರಣ’… ಮುಂತಾದ ಮುನ್ನೂರಕ್ಕೂ ಹೆಚ್ಚು ಗೀತೆಗಳು ಆರ್ಎನ್ಜೆ ಅವರ ಅನುಪಮ ಸೃಷ್ಟಿಯೇ.
ತಮ್ಮ ಅನುಭವಕ್ಕೆ ದಕ್ಕಿದಷ್ಟನ್ನೂ ಹಾಡುಗಳಲ್ಲಿ ಹಿಡಿದಿಡುತ್ತಿದ್ದುದು ಆರ್ಎನ್ಜೆ ಅವರ ಹೆಚ್ಚುಗಾರಿಕೆ. ಕನ್ನಡ ಅಕ್ಷರಮಾಲೆಯನ್ನೇ ಬಳಸಿಕೊಂಡು ‘ಅ ಆ ಇ ಈ ಕನ್ನಡದಾ ಅಕ್ಷರ ಮಾಲೆ’ ಎಂದು ಬರೆದ ಆರ್ಎನ್ಜೆ, ದಶಕಗಳ ಕಾಲ ಎಲ್ಲರ ಬಾಯಲ್ಲೂ ನಲಿದಾಡಿದ ‘ನಿನ್ನೊಲುಮೆ ನಮಗಿರಲಿ ತಂದೆ’ ಹಾಡನ್ನೂ ಬರೆದರು. ಹೊಸದಾಗಿ ಕಾರು ಖರೀದಿಸಿ, ಆಗಷ್ಟೇ ಡ್ರೈವಿಂಗ್ ಕಲಿತು ಅಡ್ಡಾದಿಡ್ಡಿಯಾಗಿ ಕಾರು ಓಡಿಸಿದಾಗ ಆದ ಅನುಭವವನ್ನೇ ಅಂಗೈಲಿ ಹಿಡಿದುಕೊಂಡು ‘ಮುಗಿಲೆತ್ತ ಓಡುತಿದೆ ಗಿರಿಗಳ ಕಡೆಗೆ’ ಎಂದು ಬರೆದರು. ಆದರೆ ಆರ್ಎನ್ಜೆಯವರ ಅಪೂರ್ವ ಸಾಮರ್ಥ್ಯ ಅದ್ಭುತ ಎಂಬಂತೆ ಹೊರಹೊಮ್ಮಿದ್ದು ‘ಬೇಡಿ ಬಂದವಳು’ ಚಿತ್ರಕ್ಕೆ ಬರೆದ ಹಾಡಿನಲ್ಲಿ. ವಿಜ್ಞಾನದ ವಿಷಯವನ್ನೂ ಒಂದು ಸಿನಿಮಾದ ಹಾಡಾಗಿಸಬಹುದು ಎಂಬ ಕಲ್ಪನೆಯೇ ಯಾರಿಗೂ ಬಾರದ ಸಂದರ್ಭದಲ್ಲಿ ಆರ್ಎನ್ಜೆ ಹೀಗೆ ಬರೆದಿದ್ದರು:
ಏಳು ಸ್ವರವು ಸೇರಿ ಸಂಗೀತವಾಯಿತು/ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು…’ ಹೀಗೆ ಆರಂಭವಾದ ಹಾಡಿನಲ್ಲಿ ಮುಂದೆ ಹೀಗಿತ್ತು ಮಿಂಚು: ‘ಕಡಲಿನಿಂದ ನೀರ ಆವಿ ಮೋಡವಾಯಿತು/ಮೋಡ ಗಿರಿಗೆ ಮುತ್ತನಿಡೆ ಮಳೆಯು ಆಯಿತು/ಮಳೆಯು ನೆಲಕೆ ಬೀಳಲು ಬೆಳೆಯು ಆಯಿತು/ಬೆಳೆಯ ಕಾಳು ನಮಗೆ ತಾನು ಅನ್ನವಾಯಿತು!’
ಅದಕ್ಕೂ ಮೊದಲು ಬೆಳ್ಳಿ ಮೋಡ ಸಿನಿಮಾದಲ್ಲಿ ನಾಯಕಿ ‘ಕಿಸ್’ ಎಂಬ ಪದಕ್ಕೆ ಅರ್ಥ ಕೇಳಿದಾಗ- ‘ಇದೇ ನನ್ನ ಉತ್ತರಾ ಕೊಡುವೆ ಬಾರೇ ಹತ್ತಿರ’ ಎಂದು ಶುರು ಮಾಡಿದ ಜಯಗೋಪಾಲ್ ‘ಕುಲುಕಿ ನಡೆವಾ ಹೆಜ್ಜೆಗೆ ಗೆಜ್ಜೆ ಕೊಡುವಾ ಉತ್ತರ/ತನ್ನ ಮಿಡಿದಾ ಬೆರಳಿಗೆ ವೀಣೆ ಕೊಡುವಾ ಉತ್ತರ’ ಎಂದು ಬರೆದಿದ್ದರು! ‘ಬೇಡಿ ಬಂದವಳು’ ಸಿನಿಮಾದ ‘ನೀರಿನಲ್ಲಿ ಅಲೆಯ ಉಂಗುರಾ’ ಹಾಡಿನಲ್ಲಿ ನಾಯಕ-ನಾಯಕಿಯ ಪ್ರೇಮದ ತೀವ್ರತೆ ವಿವರಿಸಲು ‘ಆಗೇ ನಿನ್ನ ಕೈಯ ಸಂಚರ ಎನ್ನ ಹೃದಯವೊಂದು ಡಂಗುರ’ ಎಂದಿದ್ದರು!
ಇಂಥ ಅದ್ಭುತ, ರಮ್ಯ ಹಾಡುಗಳು ಅವರಿಗೆ ಹೊಳೆದದ್ದು ಹೇಗೆ? ಕೇವಲ ಉರಿದು ಹೋಗುತ್ತಿದ್ದ ಕರ್ಪೂರವನ್ನು ಕಂಡೇ ‘ಕರ್ಪೂರದಾ ಗೊಂಬೆ ನಾನು, ಮಿಂಚಂತೆ ಬಳಿ ಬಂದೆ ನೀನು’ ಎಂದು ಬರೆಯಲು ಆರ್ಎನ್ಜೆಗೆ ಸಾಧ್ಯವಾದದ್ದಾದರೂ ಹೇಗೆ?
‘ಕೇಳೋಣವೆಂದರೆ ಆರ್ಎನ್ಜೆ ಸಣ್ಣದೊಂದು ಸುಳಿವೂ ಕೊಡದೆ ಹೋಗಿಬಿಟ್ಟಿದ್ದಾರೆ. ಅವರಿಲ್ಲದ ಜಗತ್ತಿನಲ್ಲಿ ಹಾಡುಗಳೂ ಅನಾಥವಾಗಿವೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: