ಅವನು ಕುಡಿಯೋದು ನಿಲ್ಲಿಸಿದ್ದ..!

ರಾಜ್ಕುಮಾರ್ ರಸ್ತೆಯ ತಿರುವಿನಲ್ಲಿದ್ದ ಆ ಬಾರ್ ಅದೇಕೋ ಏನೋ, ನೋಡಿದ ತಕ್ಷಣವೇ ಸರ್ದಾರ್ಜಿಗೆ ಇಷ್ಟವಾಗಿ ಹೋಯಿತು. ಆತ ಸಡಗರದಿಂದಲೇ ಬಾರ್ ಹೊಕ್ಕ. ಒಂದು ಚೆಂದುಳ್ಳಿ ನಗೆಯೊಂದಿಗೆ ಸೆಲ್ಯೂಟ್ ಹೊಡೆದು ನಿಂತ ವೈಟರ್ಗೆ ‘ಮೂರು ಗ್ಲಾಸ್ ಬಿಯರ್ ಕೊಡು’ ಅಂದ. ಬಹುಶ: ಈ ಆಸಾಮಿಯ ಇಬ್ಬರು ಗೆಳೆಯರು ಇನ್ನೊಂದ್ಹತ್ತು ನಿಮಿಷ ಬಿಟ್ಕಂಡು ಬರಬಹುದೇನೋ ಅಂದುಕೊಂಡ ವೈಟರ್ ಹಾಗೇ ಮಾಡಿದ.
ಉಹುಂ, ಅರ್ಧ ಗಂಟೆ ಕಳೆದರೂ ಯಾರೆಂದರೆ ಯಾರೂ ಬರಲಿಲ್ಲ. ಬದಲಿಗೆ, ಈ ಪುಣ್ಯಾತ್ಮ ಸರ್ದಾರ್ಜಿ, ಆ ಮೂರೂ ಗ್ಲಾಸ್ನಲ್ಲಿದ್ದ ಬಿಯರನ್ನು ಒಂದರ ನಂತರ ಒಂದರಂತೆ ಇಷ್ಟಿಷ್ಟೇ ಕುಡಿಯ ತೊಡಗಿದ. ವೈಟರ್ಗೆ ಇದೊಂಥರಾ ತಮಾಷಿ ಅನ್ನಿಸಿತು. ಆತ ಸರ್ದಾರ್ಜಿ ಹತ್ತಿರ ಬಂದು ಹೇಳಿದ : ‘ಸರ್, ಬೀರ್ನ ಮೊದಲೇ ಗ್ಲಾಸ್ಗೆ ಹಾಕಿಟ್ಟು ಹತ್ತು ನಿಮಿಷದ ನಂತರ ಕುಡಿದ್ರೆ ಅದರ ಟೇಸ್ಟೇ ಹೊರಟು ಹೋಗ್ತದೆ. ಕುಡೀತಿರೋದು ನೀವು ಒಬ್ಬರೇ ತಾನೆ? ಒಂದೇ ಲೋಟಕ್ಕೆ ಹಾಕ್ಕಂಡು ಆರಾಮಾಗಿ ಕುಡೀಬಹುದಲ್ವ?’
ಈ ಮಾತಿಗೆ ಸರ್ದಾರ್ಜಿ ಕೂಲಾಗಿ ಹೀಗೆಂದ : ‘ಬ್ರದರ್, ನೀನು ಹೇಳ್ತಿರೋದು ನಿಜ. ಆದರೆ, ನಾನು ಹೀಗೆ ಕುಡೀತಿರೋದರ ಹಿಂದೆ ಒಂದು ಸ್ವಾರಸ್ಯವಿದೆ. ನಾವು ಮೂವರು ಸೋದರರು. ಇಷ್ಟುದಿನ ಮೂವರೂ ಜತೇಲಿ ಕೂತು ಕುಡೀತಿದ್ವಿ. ಈಗ ನೌಕರಿಯ ನಿಮಿತ್ತ ಒಬ್ಬ ಬಾಂಬೇಲಿದಾನೆ, ಇನ್ನೊಬ್ಬ ಪಂಜಾಬ್ನಲ್ಲಿದಾನೆ. ನಾನು ಬೆಂಗಳೂರಲ್ಲಿದೀನಿ. ಡ್ರಿಂಕ್ಸ್ಗೆ ಕೂತಾಗಲೆಲ್ಲ ಸೋದರರ ನೆನಪಾಗಿಬಿಡುತ್ತೆ. ಅವರು ಜತೇಲೇ ಇದಾರೆ ಅನ್ನೋ ಭಾವ ಬರಲಿ ಅಂತಾನೇ ಹೀಗೆ ಕುಡೀತಿರೋದು…’
ಸರ್ದಾರ್ಜಿಯ ಸೆಂಟಿಮೆಂಟ್ ವೈಟರ್ಗೆ ವಿಪರೀತ ಇಷ್ಟವಾಗಿಹೋಯಿತು. ಆತ ಇನ್ನಿಲ್ಲದ ಅಕ್ಕರೆಯಿಂದ ಸರ್ವ್ ಮಾಡಿದ. ಇತ್ತ ಈ ಬಾರ್ನ ವಾತಾವರಣ ಕೂಡ ಸರ್ದಾರ್ಜಿಗೆ ಖುಷಿ ನೀಡಿತು. ಆತ ದಿನಾದಿನ ಇಲ್ಲಿಗೇ ಬರಬೇಕು ಅಂದುಕೊಂಡ.
ಅಂದಿನಿಂದಲೇ ಆ ಬಾರ್ಗೆ ಸರ್ದಾರ್ಜಿ ಕಾಯಂ ಗಿರಾಕಿಯಾದ. ದಿನಾ ಸಂಜೆ ಬಂದು, ಮೂರು ಗ್ಲಾಸ್ಗಳಲ್ಲಿ ಬೀರ್ ತುಂಬಿಸಿಕೊಂಡು ಇಷ್ಟಿಷ್ಟೇ ಕುಡಿಯುವುದು ಅವನ ಹವ್ಯಾಸವಾಯಿತು. ವೈಟರ್ ಅಂತೂ ನಾಲ್ಕೇ ದಿನಗಳಲ್ಲಿ ಸರ್ದಾರ್ಜಿಗೆ ಆಪ್ತ ಮಿತ್ರನೇ ಆಗಿಬಿಟ್ಟ.
ವಾರದ ನಂತರ ಬಾರ್ಗೆ ಬಂದ ಸರ್ದಾರ್ಜಿ ಯಾಕೋ ಒಂದಿಷ್ಟು ‘ಡಲ್’ ಆದವನಂತೆ ಕಂಡ. ಸಡಗರದಿಂದಲೇ ಹತ್ತಿರ ಬಂದ ವೈಟರ್ಗೆ ‘ಎರಡು ಗ್ಲಾಸ್ ಬಿಯರ್ ’ ಅಂದ !
ವೈಟರ್ಗೆ ಶಾಕ್ ಆಯಿತು. ದಿನಾಲೂ ಮೂರು ಗ್ಲಾಸ್ ಬಿಯರ್ ಅನ್ನುತ್ತಿದ್ದವನು ಇವತ್ತು ಎರಡು ಗ್ಲಾಸ್ ಕೇಳಿದನಲ್ಲ? ಅದರರ್ಥ? ಇಬ್ಬರು ಸೋದರರ ಪೈಕಿ ಒಬ್ಬ ಸತ್ತು ಹೋಗಿರಬೇಕು. ಅದೇ ದುಃಖದಿಂದ ಈತ ಸರಿಯಾಗಿ ಮಾತೂ ಆಡದೆ ಕುಡೀತಿದ್ದಾನೆ ಅಂದುಕೊಂಡ. ನೊಂದವನಿಗೆ ಸಾಂತ್ವನ ಹೇಳಬೇಕು ಅನ್ನಿಸಿತು. ನಿಧಾನವಾಗಿ ಸರ್ದಾರ್ಜಿ ಬಳಿ ಬಂದು ಪರಿತಾಪದ ಧ್ವನಿಯಲ್ಲಿ ಹೇಳಿದ: ‘ಸರ್, ಸಮಾಧಾನ ಮಾಡಿಕೊಳ್ಳಿ. ಹುಟ್ಟಿದ ಮೇಲೆ ಎಲ್ರೂ ಸಾಯಲೇಬೇಕು ಅಲ್ವ? ದುಃಖಿಸಬೇಡಿ ಸಾರ್, ನಿಮ್ಮ ನೋವಿನಲ್ಲಿ ನಾನೂ ಭಾಗಿ…’
ಆತ ಏನು ಹೇಳಲು ಹೊರಟಿದ್ದಾನೆ ಎಂಬುದು ಸರ್ದಾರ್ಜಿಗೆ ತಕ್ಷಣ ಅರ್ಥವಾಗಿ ಹೋಯಿತು. ಆತ ತಕ್ಷಣವೇ ನಕ್ಕು, ಅಡ್ಡಡ್ಡ ತಲೆಯಾಡಿಸುತ್ತ ಹೇಳಿದ; ‘ಅಯ್ಯಯ್ಯೋ, ನೀನು ಅಂದುಕೊಂಡಂಥ ಅನಾಹುತವೇನೂ ಆಗಿಲ್ಲ ಮಾರಾಯಾ. ನನ್ನ ಇಬ್ಬರೂ ಸೋದರರೂ ಆರಾಮಾಗಿದ್ದಾರೆ. ಏನ್ ಗೊತ್ತ? ನಿನ್ನೆಯಿಂದ ನಾನು ಕುಡಿಯೊದು ಬಿಟ್ಟಿದೀನಿ ! ಅದಕ್ಕೇ ಎರಡು ಗ್ಲಾಸ್ ಅಂದೆ…’

Advertisements

2 Comments »

  1. 1

    ಹ್ಹ…ಹ್ಹ..ಹ್ಹ… ಗ್ರೇಟ್ ಸರ್ದಾರ್ಜಿ!

  2. ಹಿಂದೊಮ್ಮೆ ಕೇಳಿದ್ದ / ಓದಿದ್ದ ಸರ್ದಾರ್ಜಿ ಜೋಕ್ ಅನ್ನು ಮತ್ತೊಮ್ಮೆ ಓದಿ ಖುಷಿಯಾಯಿತು!!


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: