ಕನ್ನಡಿಯೇ ಇಲ್ಲದಿದ್ದರೇ?

saak bidamma..

ನಿಜ ಹೇಳಿ, ನೀವು ಹೇಗಿದ್ದೀರಿ ಅಂತ ನಿಮಗೆ ಗೊತ್ತಾ?
ಛೆ, ಇದೆಂಥ ಅಸಂಬದ್ಧ ಪ್ರಶ್ನೆ ರೀ? ನಾವು ಹೇಗಿದೀವಿ ಅಂತ ಗೊತ್ತಿಲ್ದೆ ಏನು? ನಾವು ಚನ್ನಾಗಿದೀವಿ. ಒಂದಷ್ಟು ಜಾಸ್ತಿಯೋ, ಕಮ್ಮಿಯೋ- ಅಂತೂ ಸೌಂದರ್ಯವಿದೆ. ನಾವು ದಿನಾಲೂ ಕನ್ನಡಿಯ ಮುಂದೆ ನಿಂತು ಅದನ್ನೇ ನೋಡಿಕೊಳ್ತಾ ಇರ್ತೀವಿ. ಕನ್ನಡಿಯ ಮುಂದೆ ನಿಂತೇ ಕ್ರಾಪು ಸರಿಮಾಡ್ಕೋತೀವಿ. ಮೊಡವೇನ ಕಿತ್ತು ಹಾಕ್ತೀವಿ. ದಿಢೀರ್ ಕಾಣಿಸಿಕೊಂಡಿರುವ ಬಿಳಿ ಕೂದಲಿಗೆ ಒಂದು ಗತಿ ಕಾಣಿಸ್ತೀವಿ. ಚಿಕ್ಕಂದಿನಲ್ಲಿ ಜಗುಲಿ ಮೇಲಿಂದ ಬಿದ್ದಾಗ ಆದ ಗಾಯದ ಕಲೆಯನ್ನು; ಚಿಕ್ಕಂದಿನಲ್ಲಿ ಹಾಕಿಸಿಕೊಂಡ ಇಂಜಕ್ಷನ್ನಿಂದ ಆದ ಕಾಸಿನಗಲದ ಮಚ್ಚೆಯನ್ನು ದಿನಕ್ಕೆ ಎರಡು ಬಾರಿ ನೋಡ್ಕೊಳ್ತಾ ಇದೀವಿ. ಹೀಗಿರುವಾಗ ನೀವು ಹೇಗಿದೀರ ಅಂತ ಕೇಳ್ತೀರಲ್ಲ ಅನ್ನಬೇಡಿ.
ಪ್ರಶ್ನೆ ಇರೋದೇ ಅಲ್ಲಿ. ನೀವು ತೆಳ್ಳಗೆ-ಬೆಳ್ಳ ಬೆಳ್ಳಗೆ; ಗೋದಿ ಬಣ್ಣಕ್ಕೆ ಅಥವಾ ಆ ಕಡೆಗೆ ಪೂರ್ತಿ ಕಪ್ಪಲ್ಲ, ಈ ಕಡೇಲಿ ಪೂರ್ತಿ ಬಿಳಿಯಲ್ಲ ಅನ್ನೋ ಥರ-ಎಣ್ಣೆ ಗಂಪಿನ ದೇಹಸೌಂದರ್ಯ ಹೊಂದಿದವರೇ ಆಗಿರಬಹುದು. ಆದರೆ, ನಾವು ಹೇಗಿದೀವಿ, ನಮ್ಮ ಮುಖ ನಿಜಕ್ಕೂ ಹೇಗಿದೆ ಅನ್ನೋದು ಆ ಭಗವಂತನಾಣೆಗೂ ನಮಗೆ ಗೊತ್ತಿಲ್ಲ. ನಾವು ಹೇಗಿದ್ದೇವೆ ಅನ್ನೋದನ್ನು ತೋರಿಸಿಕೊಟ್ಟಿರೋದು-ಕನ್ನಡಿ! ಒಪ್ತೀರ ತಾನೆ?
ಈಗ ಹೇಳಿ: ಒಂದು ವೇಳೆ ಈ ಜಗತ್ತಿನಲ್ಲಿ ಕನ್ನಡಿ ಎಂಬುದೇ ಇಲ್ಲದಿರುತ್ತಿದ್ದರೆ ನಾವು ಹೇಗಿರ್ತಾ ಇದ್ವಿ?
ಇಂಥದೊಂದು ಪ್ರಶ್ನೆ ಹಾಕಿಕೊಂಡರೆ ಮೊದಲಿಗೆ ಅಚ್ಚರಿಯಾಗುತ್ತದೆ. ನಂತರ, ನಗು ಬರುತ್ತದೆ. ಹಿಂದೆಯೇ ಒಂಥರಾ ಹೆದರಿಕೆ ಕೂಡ ಆಗುತ್ತದೆ. ಯಾಕೆ ಗೊತ್ತಾ? ಇವತ್ತು ನಮಗೆಲ್ಲ ನಾವು ಹೀಗೇ ಇದೀವಿ ಅಂತ ತೋರಿಸಿಕೊಟ್ಟಿರುವುದೇ ಕನ್ನಡಿ. ಅದರಲ್ಲಿ ಮತ್ತೆ ಮತ್ತೆ ನಮ್ಮನ್ನು ನಾವೇ ನೋಡಿಕೊಂಡು, ಓಹ್ ಇದು ನಾನೇ ಎಂದು ಚಿಕ್ಕಂದಿನಿಂದಲೇ ಪಕ್ಕಾ ಮಾಡಿಕೊಂಡಿರುತ್ತೇವೆ. ಆ ನಂಬಿಕೆಯ ಆಧಾರದ ಮೇಲೆಯೇ ಮುಂದೆ ಫೋಟೊ ತೆಗೆಸಿಕೊಂಡು ನೋಡೋ, ನಾನು ಇಲ್ಲಿದೀನಿ ಎಂದು ಸಂಭ್ರಮ ಪಡ್ತಾ ಇರ್ತೀವಿ! ಬೈಛಾನ್ಸ್ ಕನ್ನಡಿಯೇ ಇಲ್ಲದೆ ಹೋಗಿದ್ದರೆ ಎದುರಿಗಿದ್ದವರು ಮಾತ್ರ ನೀನು ಹೀಗಿದ್ದೀ ನೋಡು ಅನ್ನುತ್ತಿದ್ದರೇನೋ. ಆಗ ಕೂಡ ನಾವು ಹಾಕಿಕೊಂಡಿರುತ್ತಿದ್ದ ಬಟ್ಟೆಯ ಆಧಾರದಲ್ಲಿ- ‘ವಾಹ್, ಇದೇ ನಾನು’ ಅಂತ ಗುರುತಿಸಬಹುದಿತ್ತೇನೋ. ಆದರೆ, ಅಪ್ಪಿತಪ್ಪಿ ನಮ್ಮೊಂದಿಗೆ ಫೋಟೊ ತೆಗೆಸಿಕೊಂಡವರೆಲ್ಲ ಒಂದೇ ಥರದ ಡ್ರೆಸ್ ಹಾಕಿಕೊಂಡಿದ್ದಿದ್ರೆ ಗತಿ? ಅದಕ್ಕಿಂತ ಹೆಚ್ಚಾಗಿ-ಕ್ಯಾಮರಾದೊಳಗಿರುವ ಕನ್ನಡಿಯೇ ತಾನೆ ನಮ್ಮ ಚಿತ್ರವನ್ನು ಸೆರೆಹಿಡಿಯೋದು? ಹಾಗಿರುವಾಗ, ಕನ್ನಡಿಯೇ ಇಲ್ಲದ ಜಗತ್ತು ಅಂದರೆ ಕ್ಯಾಮರಾ ಎಂಬ ಪದಕ್ಕೇ ಆಗ ಅರ್ಥ ಇರ್ತಾ ಇರಲಿಲ್ಲ. ಏನಂತೀರ?
ನಮ್ಮ-ನಿಮ್ಮ ವಿಷಯ ಬಿಟ್ಹಾಕಿ, ಅಂಥ ಅಮಿತಾಬ್ ಬಚ್ಚನ್ಗೆ; ಐಶ್ವರ್ಯರೈಗೆ-ಆ ಸಾನಿಯಾ ಮಿರ್ಜಾಗೆ ಕೂಡ ನಿನ್ನದು ಈಪಾಟಿ ಸೌಂದರ್ಯ ಅಂತ ಹೇಳಿರೋದೇ ಕನ್ನಡಿ! ಅದೇನಾದ್ರೂ ಇಲ್ದೇ ಹೋಗಿದ್ರೆ ಸೌಂದರ್ಯ ಎಂಬ ಮಾತಿಗೆ ಅರ್ಥವೇ ಇರ್ತಾ ಇರಲಿಲ್ಲ. ನಾನು ಹೇಗಿದೀನಿ ಅಂತ ಹುಡುಗೀರು- ಗೆಳೆಯರು ಗೆಳತಿಯರನ್ನೇ ಕೇಳಬೇಕಾಗಿ ಬರ್ತಿತ್ತು. ಆ ಗೆಳತಿ ಎಂಬ ಪುಣ್ಯಾತ್ಗಿತ್ತಿ ಹೊಟ್ಟೆಕಿಚ್ಚಿನಿಂದ, ಅಸೂಯೆಯಿಂದ, ಸುಮ್ಮನೇ ಕಿಚಾಯಿಸಬೇಕು ಎಂಬ ಒಂದೇ ಕಾರಣದಿಂದ- ಹೋಗ್ ಹೋಗೆ, ನೀನು ಹೇಗೆ ನೋಡಿದ್ರೂ ಮೀಡಿಯಂ ಸುಂದರಿ ಅಂದು ಬಿಟ್ಟಿದ್ದಿದ್ದರೆ? ಅಥವಾ ಒಬ್ಬೊಬ್ಬರು ಒಂದೊಂದು ಥರದ ಅಭಿಪ್ರಾಯ ಹೇಳಿದ್ದಿದ್ದರೆ – ಆಗ ಅದೆಷ್ಟು ರಂಪಾಟ ಆಗುತ್ತಿತ್ತೋ ಕಲ್ಪಿಸಿಕೊಳ್ಳಿ. ಕನ್ನಡಿಗಳಿಲ್ಲದ ಜಗತ್ತಿನಲ್ಲಿ ನಮ್ಮ ನಮ್ಮ ಸೌಂದರ್ಯದ ಬಗ್ಗೆ ತಿಳಿಯಲು ಹೋಗಿದ್ದರೆ, ನಾವೆಲ್ಲ ನಿಮ್ಹಾನ್ಸ್ನಲ್ಲೇ ಇರ್ತಾ ಇದ್ದೆವೋ ಏನೋ…
ಅಷ್ಟೇ ಅಲ್ಲ, ಕನ್ನಡಿಯೇ ಇಲ್ಲದ ಜಗತ್ತಿನಲ್ಲಿ ಹೆಂಗಸರು ಹೇಗಿರುತ್ತಿದ್ದರು? ಕಣ್ಣಿಗೆ ಕಾಡಿಗೆಯನ್ನು, ಹಣೆಗೆ ಬಿಂದಿಯನ್ನು ಹೇಗೆ ಇಟ್ಕೊಳ್ತಾ ಇದ್ರು? ಅದು ಹೇಗೆ ತರಹೇವಾರಿ ಸ್ಟೈಲ್ ಮಾಡುತ್ತಾ ದಿನಕ್ಕೊಂದು ರೀತಿಯಲ್ಲಿ ಬೈತಲೆ ತೆಗೆದು ತಲೆ ಬಾಚಿಕೊಳ್ತಿದ್ರು? ಸೀರೆಯ ನೆರಿಗೆಯನ್ನು ಅದು ಹೇಗೆ ಸರಿ ಮಾಡಿಕೊಳ್ತಿದ್ರು? ಹಾಗೇನೇ, ಕೆನ್ನೆ ಮೇಲೆ ಆಗಿರುವ ಗುರುತು ಗೆಳೆಯನ ಸಾಹಸವೋ ಅಥವಾ ಸೊಳ್ಳೆಯ ಕೆಲಸವೋ ಅನ್ನೋದನ್ನ ಅದು ಹೇಗೆ ಪತ್ತೆ ಮಾಡ್ತಿದ್ರು?
ಹೀಗೆಲ್ಲ ಕಲ್ಪಿಸಿಕೊಂಡು ಹಹ್ಹಹ್ಹಾ ಎಂದು ನಗುವ ಸಂದರ್ಭದಲ್ಲೇ-ಹುಡುಗರ ಲೋಕದ ಬಗ್ಗೆಯೂ ಒಂದೆರಡು ಮಾತು ಹೇಳಬೇಕಾಗುತ್ತದೆ. ಏನೆಂದರೆ, ಕನ್ನಡಿಯೇ ಇಲ್ಲದಿದ್ದರೆ- ಸಣಕಲ ಕೂಡ ಬಾಡಿಬಿಲ್ಡರ್ ಥರಾ ಕಪಿಚೇಷ್ಟೆ ಮಾಡಲು ಸಾಧ್ಯವಿರಲಿಲ್ಲ. ಹಾಗೆಯೇ ಮನೇಲೇ ಇದ್ದು ಶೇವಿಂಗ್ ಮಾಡ್ತೇನೆ ಎನ್ನಲು ಸಾಧ್ಯವೇ ಇರಲಿಲ್ಲ. ಹೇರ್ಸೆಲೂನ್ನಲ್ಲಿ ಕೂಡ ಕ್ಷೌರಿಕ ಮಾಡಿದ್ದೇ ಶೇವ್ ಅನ್ನಿಸಿಕೊಳ್ಳುತ್ತಿತ್ತು. ಗಿರಾಕಿಯ ಮೇಲೆ ಏನಾದರೂ ದ್ವೇಷವಿದ್ದರೆ ಆತ, ಒಂದು ಕಡೆಯ ಮೀಸೆಯನ್ನು ಪೂರ್ತಿ ತುಂಡ ಮಾಡಿ, ಇನ್ನೊಂದು ಕಡೆಯದನ್ನು ಸ್ವಲ್ಪ ಉದ್ದಕ್ಕೆ ಬಿಟ್ಟು ಎಲ್ಲರಿಗೂ ಮಜಾ ಕೊಡಬಹುದಿತ್ತು. ಅಥವಾ ಹಲವರನ್ನು ಚಾರ್ಲಿ ಚಾಪ್ಲಿನ್ ಥರಾ ಮಾಡಿ ಹೊರಗೆ ಬಿಡಬಹುದಿತ್ತು! ಹೌದು, ಆಗ ಯಾರೆಂದರೆ ಯಾರೂ ಕ್ಷೌರಿಕನಿಗೆ/ಬ್ಯೂಟಿಪಾರ್ಲರ್ನ ಬೆಡಗಿಗೆ ‘ಈ ಕಡೆ ಸ್ವಲ್ಪ ಟ್ರಿಮ್ ಮಾಡ್ರೀ’ ಎಂದು ಆರ್ಡರ್ ಮಾಡಲು ಸಾಧ್ಯವೇ ಇರಲಿಲ್ಲ!
***
ಬದುಕಿಡೀ ಕನ್ನಡಿಯ ಮುಂದೇನೇ ಕಾಲ ಕಳೆಯೋರು ಅಂದ್ರೆ ಹುಡುಗೀರು. ಚೆನ್ನಾಗಿರೋರು ಅದೇ ಕಾರಣಕ್ಕೆ ಮತ್ತೆ ಮತ್ತೆ ಕನ್ನಡಿಯ ಮುಂದೆ ನಿಂತು ತಮ್ಮನ್ನು ತಾವೇ ನೋಡಿಕೊಂಡು ಮೈಮರೀತಾರೆ. ಹಾಗೇನೇ ಚೆನ್ನಾಗಿಲ್ಲದವರು ಕೂಡ ದಿನಕ್ಕೆ ಅರವತ್ತು ಬಾರಿ ಅದೇ ಕನ್ನಡಿಯ ಮುಂದೆ ನಿಂತು ನಮ್ಮ ಚೆಲುವನ್ನು ಹೆಚ್ಚಿಸಿಕೊಳ್ಳೋದು ಹೇಗೆ ಎಂದು ಯೋಚಿಸಿ, ಏನೇನೇನೇನೇನೋ ಲೆಕ್ಕಾಚಾರ ಹಾಕಿ- ಕ್ಷಣ ಬಿಟ್ಟು ಅದೇ ಕನ್ನಡಿಯ ಮುಂದೆ ಬಂದು- ವಾಹ್, ಈಗ ಒಂದಿಷ್ಟು ಚನ್ನಾಗಿ ಕಾಣ್ತಾ ಇದೀನಿ ಅಂದುಕೊಳ್ತಾರೆ. ಮದುವೆಯಾಗುವವರೆಗೂ ಕನ್ನಡಿಯ ಮುಂದೆಯೇ ಬದುಕು ಕಳೆದ ಹುಡುಗಿಯರು, ಗಂಡನ ಮನೆ ಸೇರಿದ ಮರುಕ್ಷಣವೇ- ‘ಅಯ್ಯೋ ಬಿಡ್ರಿ, ಇನ್ನೆಂಥದುಂಟು ಕನ್ನಡಿ ನೋಡಲಿಕ್ಕೆ…’ ಎಂದು ವೈರಾಗ್ಯದ ಮಾತಾಡಿ ಸುಮ್ಮನಾಗಿಬಿಡುತ್ತಾರೆ. ಕರೆಕ್ಟಾ?
ಮಧ್ಯ ವಯಸ್ಸು ದಾಟಿದ ನಂತರ ಕನ್ನಡಿ ನೋಡುವುದನ್ನು ಹೆಂಗಸರು ಮಾತ್ರವಲ್ಲ, ಗಂಡಸರೂ ಯಾಕೆ ಕಡಿಮೆ ಮಾಡ್ತಾರೆ ಅಂದರೆ- ಆ ವಯಸ್ಸಿನಲ್ಲಿ ಕನ್ನಡಿ ತೋರಿಸುವ ಸತ್ಯವನ್ನು ಒಪ್ಪಿಕೊಳ್ಳಲು ಎಲ್ಲರೂ ಹಿಂಜರಿಯುತ್ತಾರೆ. ತಮಗೆ ವಯಸ್ಸಾಗುತ್ತಿದೆ ಎಂಬುದನ್ನು ಕನ್ನಡಿಯಲ್ಲಿ ನೋಡಿ ಎದೆ ಚುರುಗುಟ್ಟಿಸಿಕೊಳ್ಳುವುದು ಯಾರಿಗೆ ತಾನೆ ಇಷ್ಟವಾದೀತು ಹೇಳಿ?
‘ಕನ್ನಡಿ’ಯ ಜಗತ್ತಿಗೆ ಹೀಗೊಂದು ಮುನ್ನುಡಿ ಅಂದುಕೊಂಡಾಗ ಇಂಥವೇ ಸಂಗತಿಗಳನ್ನು ಇಡೀ ದಿನ ಇರಬಹುದೇನೋ. ಆದರೆ, ಕನ್ನಡಿಯ ಮುಂದೆ ನಿಂತು ತಮ್ಮದೇ ಕಣ್ಣು, ಮೂಗು, ತುಟಿಯಂಚಿನ ಮೊನಚನ್ನು ಮತ್ತೆ ಮತ್ತೆ ನೋಡಿಕೊಳ್ಳುತ್ತ- ತಮ್ಮ ಚೆಲುವಿಗೆ ತಾವೇ ನಾಚಿ, ಬೆರಗಾಗಿ, ಅನಾಹುತಗಳನ್ನು ಮಾಡಿದವರ ಪಸಂದ್ ಕಥೆಗಳನ್ನು ಹೇಳಿ ಕನ್ನಡಿಯ ಕಥೆಗೆ ಮಂಗಳ ಹಾಡೋಣ, ಕೇಳಿ:
ಯೂರೋಪಿನ ಸಾಮ್ರಾಜ್ಞಿ ಒಬ್ಬಳಿದ್ದಳು. ಅವಳಿಗೆ ಸರಿಸಮ ಎಂಬಂಥ ಸುಂದರಿ ಇರಲೇ ಇಲ್ಲ. ಹೀಗಿದ್ದಾಗಲೇ- ತನ್ನ ಈ ದೇಹ ಸೌಂದರ್ಯವನ್ನು ಶಾಶ್ವತವಾಗಿ ಉಳಿಸಬೇಕೆಂಬ ಯೋಚನೆ ಅವಳಿಗೆ ಬಂತು. ತಕ್ಷಣವೇ ಶಿಲ್ಪಿಗಳನ್ನು ಕರೆಸಿ-ತನ್ನ ಆಸೆ ಹೇಳಿಕೊಂಡಳು. ನನ್ನ ನಗ್ನ ಚಿತ್ರ ಬರೆಯಿರಿ ಎಂದು ಆಜ್ಞಾಪಿಸಿದಳು. ರಾಣಿಯ ಆಜ್ಞೆ ಅಂದ ಮೇಲೆ ಕೇಳಬೇಕೆ? ಆ ಶಿಲ್ಪಿ ತನ್ಮಯನಾಗಿ ಬರೆದ. ಆ ಚಿತ್ರ ರಾಣಿಯ ಚೆಲುವನ್ನೂ ಮೀರಿಸುವಂತಿತ್ತು. ಅದನ್ನು ಕಂಡದ್ದೇ ಈಕೆ ಮತ್ಸರದಿಂದ ಭದ್ರಕಾಳಿಯ ಅವತಾರ ತಾಳಿ ಚಿತ್ರವನ್ನು ಹರಿದೆಸೆದಳಂತೆ! ತನಗಿಂತ ಸುಂದರಿಯನ್ನು ಅವಳಾದರೂ ಹೇಗೆ ಸಹಿಸಿಯಾಳು?
ಆಸ್ಟ್ರಿಯಾದ ರಾಣಿ ಎಲಿಜಬೆತ್ ಎಂಬಾಕೆಯದು ಇನ್ನೊಂದು ಕಥೆ. ಆಕೆಗೆ ಬಂಗಾರ ಬಣ್ಣದ ಉದ್ದುದ್ದದ ಕೇಶವಿತ್ತು. ಕೇಶಾಲಂಕಾರದಲ್ಲೇ ದಿನ ಕಳೆಯುತ್ತಿದ್ದ ಆಕೆಗೆ ಅದೊಂದು ದಿನ, ನನ್ನ ತಲೇಲಿ ಎಷ್ಟು ಕೂದಲುಗಳಿವೆ ತಿಳಿಯಬೇಕು ಅನ್ನಿಸಿತು. ತಕ್ಷಣ ಸೇವಕರನ್ನು ಕರೆದು ‘ಹೂಂ, ನಾನು ಹೇಳಿದ ಕೆಲ್ಸ ಮಾಡಿ’ ಎಂದು ಆಜ್ಞೆ ಮಾಡಿಯೇ ಬಿಟ್ಟಳು ಆ ಅಮ್ಮಣ್ಣಿ. ಎಷ್ಟು ಕೂದಲುಗಳಿದ್ದವು ಎಂಬುದು ಅತ್ಲಾಗಿರಲಿ, ಆದರೆ ಎಣಿಸುವ ಶಿಕ್ಷೆಗೆ ಒಳಗಾದ ಆ ಸೇವಕರ ಪಾಡು ಏನಾಗಿರಬೇಡ?
ಹಂಗೇರಿಯ ಮದ್ಯದ ದೊರೆಯೊಬ್ಬನ ಹೆಂಡತಿಗೆ ಈ ಇಬ್ಬರಿಗಿಂತ ಡಿಫರೆಂಟ್ ಎಂಬಂಥ ಹುಚ್ಚಿತ್ತು. ಸುಮ್ನೇ ಅಲ್ಲ. ಅವಳೂ ಸಖತ್ ಸುಂದರಿಯೇ. ತರಹೇವಾರಿ ಕನ್ನಡಿಗಳಲ್ಲಿ ತನ್ನ ಸೌಂದರ್ಯ ನೋಡಬೇಕು ಎಂಬ ವಿಕ್ಷಿಪ್ತ ಆಸೆ ಅವಳದು. ಅದೇ ಕಾರಣದಿಂದ ಜಗತ್ತಿನ ನಾನಾ ಕಡೆಗಳಿಂದ ಆಕೆ ಕನ್ನಡಿ ತಂದಿಟ್ಟುಕೊಂಡಿದ್ದಳಂತೆ. ಅವಳ ಮನೇಲಿ, ಒಂದೆರಡಲ್ಲ ೨೭೫೦ ದುಬಾರಿ ಬೆಲೆಯ ಕನ್ನಡಿಗಳಿದ್ದವಂತೆ. (ಅಂದ ಮೇಲೆ ಅವುಗಳನ್ನು ನೇತು ಹಾಕಲು ಗೋಡೆಗೆ ಅದೆಷ್ಟು ಮೊಳೆ ಹೊಡೆದಿದ್ದಾಳೋ ಯೋಚಿಸಿ!) ಅವಳ ಗಂಡ, ಕನ್ನಡಿಗಳಿಗೆ ದುಡ್ಡು ಕೊಟ್ಟು-ಕೊಟ್ಟೇ ಬರ್ಬಾದ್ ಆಗಿ, ಆ ಸ್ಥಿತಿಯಲ್ಲೇ ಸತ್ತೂ ಹೋದನಂತೆ! ಮುಂದೆ ಈ ಸುಂದರಿ ಹೊಟ್ಟೆಪಾಡಿಗಾಗಿ ತಾನು ಅಷ್ಟೊಂದು ಪ್ರೀತಿಸಿದ್ದ ಕನ್ನಡಿಗಳನ್ನೇ ಒಂದೊಂದಾಗಿ ಮಾರಿಕೊಂಡಳಂತೆ. ಅದೊಂದು ದುರ್ದಿನ ದೊಡ್ಡ ನಿಲುವುಗನ್ನಡಿಯ ಮುಂದೆ ನಿಂತಿದ್ದವಳು, ಆಕಸ್ಮಿಕವಾಗಿ ಕಾಲು ಜಾರಿ ಅದೇ ಕನ್ನಡಿಯ ಮೇಲೆ ಬಿದ್ದು, ಗಾಜು ಚುಚ್ಚಿಕೊಂಡಿದ್ದರಿಂದ ಸತ್ತು ಹೋದಳಂತೆ!
***
ಕನ್ನಡಿ ಇಲ್ಲದಿದ್ದರೆ ಮುಖ ನೋಡಿಕೊಳ್ಳಲು ನದಿಗೆ ಹೋಗಬೇಕಿತ್ತೇನೋ! ಕನ್ನಡಿಯಿಲ್ಲದಿದ್ದರೆ ನಮ್ಮ ಜಗತ್ತು ಹೇಗಿರುತ್ತಿತ್ತು ಎಂದು ಶುರು ಮಾಡಿ, ಕನ್ನಡಿ ಮೋಹಿತರ ದುರಂತ ಕಥೆಯೊಂದಿಗೆ ಮಾತು ಮುಕ್ತಾಯವಾಗುತ್ತಿದೆ. ಇಲ್ಲಿ, ಬೆಂಗಳೂರಲ್ಲಿ ಭಾರೀ ಮಳೆ. ಅದು ಬಿಟ್ರೆ ಬೇರೇನೂ ವಿಶೇಷವಿಲ್ಲ. ನಿಮ್ಕಡೇಲಿ ಹೇಗೆ? ಅನ್ನುತ್ತಾ- ನಮಸ್ಕಾರ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: