ನಮ್ಮ ಎಸ್ ಪಿ ಬಿ…

null

* “ಇದು ಎಪ್ಪತ್ತರ ದಶಕದ ಮಾತು. ನಾನಾಗ ಕನ್ನಡ ಚಿತ್ರರಂಗಕ್ಕೆ ಹೊಸಬ. ಆ ವೇಳೆಗೆ ಐದಾರು ಸಿನಿಮಾಗಳಿಗೆ ಹಾಡಿದ್ದೆ ನಿಜ. ಆದರೆ ದೊಡ್ಡ ಬ್ರೇಕ್ ಸಿಕ್ಕಿರಲಿಲ್ಲ. ಜನ ನನ್ನನ್ನು ಬ್ಯಾಕ್ಗ್ರೌಂಡ್ ಸಿಂಗರ್ ಎಂದಷ್ಟೇ ಗುರುತಿಸಿದ್ದರು. ಪ್ರೇಮಗೀತೆಗಳನ್ನು, ವಿರಹದ ಹಾಡನ್ನು ಎದೆತುಂಬಿ ಹಾಡಬೇಕು ಅಂತ ತುಂಬ ಆಸೆಯಿತ್ತು. ಆದ್ರೆ ಅವಕಾಶ ಸಿಕ್ಕಿರಲಿಲ್ಲ. ನಾನು ಆಂಧ್ರದಿಂದ/ತಮಿಳ್ನಾಡಿನಿಂದ ಬಂದಿದ್ದೆನಲ್ಲ-ಅದೇ ಕಾರಣಕ್ಕೆ ಕೆಲವರು ಅವಮಾನಿಸಿದರು. ಹಲವರು ಅನುಮಾನಿಸಿದರು. ಬೇಕಾಬಿಟ್ಟಿ ಗೇಲಿ ಮಾಡಿದರು. ಚುಚ್ಚಿ ಮಾತಾಡಿದರು. ಇಂಥ ಸಂದರ್ಭದಲ್ಲೆಲ್ಲ-ಒಂದು ಒಳ್ಳೆಯ ಹಾಡು ಸಿಕ್ಕರೆ ಎಲ್ಲರನ್ನೂ ಗೆಲ್ಲಬಲ್ಲೆ, ಎಲ್ಲ ನೋವು ಮರೆಯಬಲ್ಲೆ ಅನ್ನೋ ನಂಬಿಕೆ ನನಗಿತ್ತು. ಅದೇ ವೇಳೆಗೆ “ದೇವರ ಗುಡಿ’ ಚಿತ್ರಕ್ಕೆ ಹಾಡಲು ಕರೆಬಂತು….
ಹಾಡಲು ನಿಂತೆನಲ್ಲ-ಆ ಹಾಡು, ಅದರ ರಾಗ ಕೇಳಿ ರೋಮಾಂಚನವಾಯಿತು. ಖುಷಿಯಾಯಿತು. ಕಣ್ತುಂಬಿ ಬಂತು. ನನ್ನೆದೆಯ ನೋವೇ ಹಾಡಾಗಿದೆ ಅನ್ನಿಸಿತು. ನನ್ನ ಸಂಕಟವೆಲ್ಲ ಚಿ. ಉದಯಶಂಕರ್ಗೆ ಹೇಗೆ ಗೊತ್ತಾಯಿತು ಎಂಬ ಪ್ರಶ್ನೆಯನ್ನು ಅಂಗೈಲಿ ಹಿಡಿದೇ ತನ್ಮಯನಾಗಿ ಹಾಡಿದೆ; “ಮಾಮರವೆಲ್ಲೋ ಕೋಗಿಲೆಯೆಲ್ಲೋ/ಏನೀ ಸ್ನೇಹಾ ಸಂಬಂಧ, ಎಲ್ಲಿಯದೋ ಈ ಅನುಬಂಧ….’ ಆ ಕ್ಷಣದಲ್ಲೇ ಕನ್ನಡ, ಕನ್ನಡಿಗರು, ಅವರ ಪ್ರೀತಿ, ನನ್ನ ರೀತಿ ನೆನಪಾಯ್ತು. ಹಾಡಿನ ಸಾಲೂ ಹಾಗೆಯೇ ಇತ್ತಲ್ಲ- ಮುಂದುವರಿದೆ… “ಸೂರ್ಯನು ಎಲ್ಲೊ, ತಾವರೆ ಎಲ್ಲೊ/ನೋಡಲು ಅರಳುವ ಸಡಗರವೇನೊ/ಚಂದಿರನೆಲ್ಲೊ, ನೈದಿಲೆ ಎಲ್ಲೊ /ಕಾಣಲು ಕಾತುರ ಕಾರಣವೇನೋ/ಎಲ್ಲೇ ಇರಲಿ, ಹೇಗೆ ಇರಲಿ/ಕಾಣುವ ಆಸೆ, ಏತಕೋ ಏನೋ….’
ಅದೊಂದು ಭಾನುವಾರದ ಕಾರ್ಯಕ್ರಮದಲ್ಲಿ ಇಂಥದೊಂದು ನೆನಪಿನ ದೋಣಿಯಲ್ಲಿ ತೇಲಿ ಹೋಗುವ ಮೂಲಕ ಎಲ್ಲರ ಮನಗೆದ್ದ ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಮಣ್ಯಂ ಅಲಿಯಾಸ್ ಎಸ್ಪಿ ಬಾಲಸುಬ್ರಹ್ಮಣ್ಯಂ ಯಾನೆ ಎಸ್ಪಿ ಸಾಹೇಬರಿಗೆ ಪ್ರೀತಿ, ನೆನಪು, ನಮಸ್ಕಾರ.
*****
ಬಾಲು ಸಾರ್, ದಶಕದ ಹಿಂದೆ “ಸ್ನೇಹದ ಕಡಲಲ್ಲೀ, ನೆನಪಿನ ದೋಣಿಯಲೀ’ ಎಂದು ಹಾಡಿ ಕನ್ನಡಿಗರನ್ನು ನೆನಪಿನ ದೋಣಿಯಲ್ಲಿ ತೇಲಿಸಿದವರು ನೀವು. ಅಂಥ ನಿಮ್ಮನ್ನೇ ಒಮ್ಮೆ ಅದೇ ನೆನಪ ದೋಣಿಯಲ್ಲಿ ಕೂರಿಸಿ ಹೇಳ್ತೀನಿ, ಕೇಳಿ: “ಹಾಡುಗಾರ ಆಗ್ಬೇಕು ಅಂತ ನೀವು ಚಿಕ್ಕಂದಿನಿಂದ ಆಸೆ ಪಟ್ಟಿದ್ರಿ. ಆದ್ರೆ-ನನ್ನ ಮಗ ಇಂಜಿನಿಯರ್ರೇ ಆಗಬೇಕ್ ಅನ್ನೋದು ನಿಮ್ಮ ತಂದೆಯ ಬಯಕೆಯಾಗಿತ್ತು. ನೀವು ಇಂಜಿನಿಯರಿಂಗ್ ಸೇರಿದ್ರಿ. ಓದಿದ್ರಾ ? ಇಲ್ಲ, ಇಲ್ಲ ! ಅಲ್ಲೂ ಹಾಡು ಹೇಳ್ತಿದ್ರಿ. ಒಂದು ಸಮಾರಂಭದಲ್ಲಿ ನಿಮ್ಮ ಹಾಡು ಕೇಳಿದ ಎಸ್.ಪಿ. ಕೋದಂಡಪಾಣಿ ನಿಮಗೆ ಸಿನಿಮಾದಲ್ಲಿ ಹಾಡಲು ಅವಕಾಶ ಕೊಟ್ರು….
ಸಿಕ್ಕಿದ್ದೇ ಛಾನ್ಸು. ಬಿಡ್ತೀರಾ ನೀವು ? ಇಂಜಿನಿಯರಿಂಗ್ಗೆ ಸಲಾಂ ಹೊಡೆದ್ರಿ. ಆರಂಭದಲ್ಲಿ ತೆಲುಗಿನ ಶೋಭನ್ಬಾಬು, ಕೃಷ್ಣ ಇಬ್ಬರಿಗೆ ಮಾತ್ರ ಹಾಡ್ತಾ ಇದ್ದವರು ಕೆಲವೇ ದಿನಗಳಲ್ಲಿ ಎನ್.ಟಿ.ಆರ್; ಅಕ್ಕಿ ನೇನಿಗೂ ಸ್ಯೂಟ್ ಆಗೋ ಹಾಗೆ ದನಿ ಬದಲಿಸಿಕೊಂಡಿರಿ. ಅಲ್ಲಿಂದ ತಮಿಳು ಚಿತ್ರರಂಗಕ್ಕೆ ಬಂದವರೇ- ಅಜ್ಜನಂತಿದ್ದ ಎಂ.ಜಿ.ಆರ್.ಗೆ; ಕೃಷ್ಣನಂತಿದ್ದ ಕಮಲಹಾಸನ್ಗೆ; ರವರವ ಉರಿಯುತ್ತಿದ್ದ ರಜನಿಗೆ, ಆನಂತರ ಬಂದ ಎಲ್ಲ ಕಿರಿಯರಿಗೆ ಕೂಡ ದನಿಯಾದಿರಿ, ಅಲ್ಲಿಂದ ಕನ್ನಡಕ್ಕೆ ಬಂದವರು-ನಮ್ಮ ವಿಷ್ಣು, ಅಂಬರೀಷ್, ಶ್ರೀನಾಥ್, ಲೋಕೇಶ್, ರವಿಚಂದ್ರನ್, ಶಂಕರ್ನಾಗ್, ಅನಂತನಾಗ್ ಕಡೆಗೆ ಕಾಶೀನಾಥ್, ಜಗ್ಗೇಶ್ ಸಾಹೇಬರ ಸಿನಿಮಾಗಳಿಗೂ ಅವರ ಥರಾನೇ ಹಾಡಿಬಿಟ್ರಿ; ಕನ್ನಡದಲ್ಲೇ ಗೆದ್ದ ಮೇಲೆ “ಹಿಂದಿ’ ಯಾವ ಲೆಕ್ಕ ಅಂದ್ಕೊಂಡು ಬಾಂಬೆಗೂ ನುಗ್ಗಿ ಬಾಲಿವುಡ್ನವರ ಮನಗೆದ್ದಿರಲ್ಲ-ಇದನ್ನು ಕಂಡ ಎಲ್ಲರೂ ದೊಡ್ಡ ಪ್ರೀತಿಯಿಂದ ಹೇಳ್ತಾರೆ: ಬಾಲು ಸಾರ್, ನೀವು ಗ್ರೇಟ್, ನಾವು ಗ್ರೇಟ್ಫುಲ್ !
ಹೌದಲ್ವ ? ನೀವು ಚಿತ್ರರಂಗಕ್ಕೆ ಬಂದಾಗ ಘಂಟಸಾಲ ಇದ್ರು. ದಿ ಗ್ರೇಟ್ ಪಿ.ಬಿ.ಎಸ್. ಇದ್ರು. ಪಿ.ಬಿ.ಎಸ್. ಯುಗದ ನಂತರ ಎಸ್.ಪಿ.ಬಿ. ಯುಗ ಶುರುವಾಗುತ್ತೆ ಅಂತ ನಮಗಲ್ಲ- ಬಹುಶಃ ನಿಮಗೂ ನಂಬಿಕೆ ಇರಲಿಲ್ಲ. ಆದ್ರೂ ನೀವು ಅಸಾಧ್ಯವಾದದ್ದನ್ನು ಸಾಧಿಸಿಬಿಟ್ಟಿರಿ. ಒಂದೇ ದಿನದಲ್ಲಿ ೧೪ ದನಿಯಲ್ಲಿ ಅಷ್ಟೇ ಹಾಡು ಹೇಳಿದ್ರಿ. ದಾಖಲೆ ಬರೆದ್ರಿ. ಇಡೀ ಚಿತ್ರರಂಗ ನಿಮ್ಮನ್ನ ಸಾವಿರ ಹಾಡುಗಳ ಸರದಾರ ಅಂತ ಪ್ರೀತಿಯಿಂದ ಕರೆದಾಗ; ಒಂದು ಕ್ಷಣವೂ ಉಸಿರು ನಿಲ್ಲಿಸದೇ ಹಾಡಿ ಸೂಪರ್ಫಾಸ್ಟ್ ಸಿಂಗರ್ ಎಂಬ ಬಿರುದನ್ನೂ ನಿಮ್ಮದಾಗಿಸಿಕೊಂಡಿರಿ.
ಬಾಲು ಸಾರ್, ಕನ್ನಡಿಗರು ಇದನ್ನೆಲ್ಲ ಬೆರಗಿನಿಂದ, ಕುತೂಹಲದಿಂದ ನೋಡಿದ್ದಾರೆ. ನಿಮ್ಮ ಇನಿದನಿಗೆ ಮರುಳಾಗಿದ್ದಾರೆ. ಒಂದೇ ಒಂದ್ಸಲ ನಿಮ್ಮ ಕೈ ಮುಟ್ಟಲು, ಮಾತಾಡಿಸಲು, ಎದುರಾಎದುರು ಕೂತು ನಿಮ್ಮ ಹಾಡು ಕೇಳಲು ಕಾತರಿಸಿದ್ದಾರೆ. ಹಳೆಯ ಹಾಡು ಕೇಳಿಸಿದ ತಕ್ಷಣ “ಕೋಗಿಲೆಯೇ ನಾಚುವಂತೆ ಹಾಡಲು ಎಸ್ಪಿಯಿಂದ ಮಾತ್ರ ಸಾಧ್ಯ ಕಣ್ರೀ’ ಅಂದಿದ್ದಾರೆ. “ನೂರೊಂದು ನೆನಪು ಎದೆಯಾಳದಿಂದ’ ಹಾಡು ಕೇಳಿ ಬಿಕ್ಕಳಿಸಿದ್ದಾರೆ. “ದೊಡ್ಡವರೆಲ್ಲ ಜಾಣರಲ್ಲ, ಚಿಕ್ಕವರೆಲ್ಲ ಕೋಣರಲ್ಲ’ ಎಂದಾಗ ನಕ್ಕು ಹಗುರಾಗಿದ್ದಾರೆ. “ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು’, “ಸಂಗೀತವೆ ನೀ ನುಡಿಯುವ ಮಾತೆಲ್ಲ’ ಹಾಡು ಕೇಳಿದ ಮೇಲೆ ಹಳೆಯ ಪ್ರೇಮ ನೆನಪಾಗಿ ಜಗತ್ತನ್ನೇ ಗೆದ್ದ ಖುಷಿಯಲ್ಲಿ ಹಾಡಿದ್ದಾರೆ- ಆಕಾಶದಿಂದ ಧರೆಗಿಳಿದ ರಂಬೆ, ಇವಳೇ, ಇವಳೇ ಚಂದನದ ಗೊಂಬೆ….
ಹೀಗೆ ಎಲ್ಲರನ್ನೂ ಹಾಡಿನ ಮೂಲಕವೇ ಕಾಡುತ್ತೀರ ಸಾರ್ ? ಹೇಳಿ, ವಿರಹಗೀತೆ ಹಾಡುವಾಗ ನೀವು ಕಳೆದು ಹೋದ ಗೆಳೆತಿಯನ್ನ ನೆನಪು ಮಾಡ್ಕೋತೀರಾ ? ಪ್ರೇಮಗೀತೆಗೆ ದನಿಯಾದಾಗ “ಲವ್ ಮೂಡ್’ ತಂದ್ಕೋತೀರ ? ತಮಾಷೆಯಾಗಿ ಹಾಡಬೇಕಾದಾಗ ಜೋಕು ಕೇಳಿ ರೆಡಿಯಾಗ್ತೀರಾ ? ನಿಜ ಹೇಳಿ – ನೀವು ಹಿಂದಿನ ಜನ್ಮದಲ್ಲಿ ಕೋಗಿಲೆ ಆಗಿ ಹುಟ್ಟಿದ್ರಾ ? ಒಂದು ಮಧುರ ರಾತ್ರಿಯಲ್ಲಿ ಬಯಸಿದ ಕಂಠ ನನ್ನದಾಗಲಿ ಎಂದು ದೇವರಿಂದ ವರ ಪಡೆದುಕೊಂಡ್ರಾ ? ಅದೆಲ್ಲ ಸುಳ್ಳು ಅನ್ನುವುದಾದರೆ ಇಡೀ ದೇಶದಲ್ಲಿ ಯಾರಿಗೂ ಇಲ್ಲದ ಸಿರಿಕಂಠ ನಿಮಗೆ ಮಾತ್ರ ದಕ್ಕಿದ್ದು ಹೇಗೆ ? ಹೇಗೆ ?
*****
ಬಾಲು ಸಾರ್, ನಾವೆಲ್ಲ ಖುಷಿಯಿಂದ ಒಪ್ತೀವಿ. ನೀವು ಒಳ್ಳೆಯ ನಟ. ಅದ್ಭುತ ಗಾಯಕ. ಅಮರ ಗಾಯಕ ಕೂಡ. ಜಿದ್ದಿಗೆ ಬಿದ್ದು ಹಾಡೋಕೆ ನಿಂತರೆ ನಿಮ್ಮನ್ನ ಗಂಧರ್ವರು ಕೂಡ ಸೋಲಿಸಲಾರರೇನೊ ? ಅದೇ ಕಾರಣಕ್ಕೆ ಇವತ್ತಿನ ಎಲ್ಲ ಗಾಯಕ/ಗಾಯಕಿಯರೂ ನಿಮ್ಮೊಂದಿಗೆ ಒಂದೇ ಒಂದ್ಸಲ ಹಾಡಲು ಇಷ್ಟಪಡ್ತಾರೆ. ಆದರೆ… ಆದರೆ…. ಬೇಡ ಬೇಡ ಅಂದ್ರೂ ನಿಮ್ಮ ಮೇಲಿರೋ ದೂರುಗಳು ನೆನಪಾಗ್ತವೆ. ಕೇಳಿ:
ಕಿರಿಯ ಗಾಯಕರು ಬೆಳೆಯಲಿಕ್ಕೇ ನೀವು ಪ್ರೋತ್ಸಾಹ ಕೊಡಲ್ವಂತೆ ? “ಸಂಭ್ರಮ’ ಸಿನಿಮಾದಲ್ಲಿ ರಮೇಶ್ಚಂದ್ರ ಚೆನ್ನಾಗಿ ಹಾಡಿದ್ರೂ ಸಹ, ಆ ಹಾಡು ಕಿತ್ತು ಹಾಕಿಸಿ ನೀವೇ ಹಾಡಿದ್ರಲ್ಲ ಯಾಕೆ ? ನಾನು ಸೂಚಿಸಿದ ಹಿನ್ನೆಲೆ ಗಾಯಕಿಯೇ ಆಗಬೇಕ್ ಅಂತ ಕೂಡ ಒಮ್ಮೊಮ್ಮೆ ಪಟ್ಟು ಹಿಡೀತೀರಂತೆ ? ಒಂದು ಹಾಡಿಗೆ ಇಂತಿಷ್ಟೇ ದುಡ್ಡು ಕೊಡಬೇಕು ಅಂತ ಖಡಕ್ ಹೇಳಿಬಿಡ್ತೀರಂತಲ್ಲ, ಹೀಗ್ಯಾಕೆ ಸಾರ್ ?
ಸರ್, ಬೇಜಾರಾಗಬೇಡಿ. ಇದೆಲ್ಲ ಅವರಿವರ ಮಾತು. ಇದೆಲ್ಲ ನಿಜವಾ ? ಇದು ನನ್ನ ಪ್ರಶ್ನೆ. ಇದು ನಿಜವಾಗದಿರಲಿ, ಇದು ನನ್ನ ಪ್ರಾರ್ಥನೆ. ಈವತ್ತು ಮಾತ್ರವಲ್ಲ, ಮುಂದೆ ಅದೆಷ್ಟೋ ನೂರು ವರ್ಷ ನೀವು ನಮ್ಮೊಂದಿಗಿರಬೇಕು. ನಿಮ್ಮ ಹಾಡು ಕೇಳಿ ನಾವು ನಗುವಾಗಬೇಕು. ಚಿಕ್ಕ ಮಗುವಾಗಬೇಕು. ಅದನ್ನು ಕಂಡು ನೀವು ಮುಪ್ಪಿನಿಂದ ಹರಯಕ್ಕೆ ಜಾರಿಕೊಂಡು “ಸ್ನೇಹದ ಕಡಲಲ್ಲಿ’ ಎಂದು ಹಾಡುವಂತಾಗಬೇಕು. ನಿಮಗೆ ತುಂಬ ಒಳ್ಳೆಯದಾಗಲಿ ಎಂಬುದು ನನ್ನ; ನನ್ನಂಥ ಲಕ್ಷ ಮಂದಿಯ ಪ್ರಾರ್ಥನೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: