ನಿನ್ನ ಕೋಪ ತಡ್ಕೊಳೋ ಶಕ್ತಿ ನಂಗಿಲ್ಲ

ನನ್ನ ಮುದ್ದು ಹಕ್ಕೀ,
ಇನ್ನೂ ಎಷ್ಟು ದಿನ ನಂಗೆ ಈ ಶಿಕ್ಷೆ ? ಅಸಲು ನಾ ಮಾಡಿದ ಅಂಥ ದೊಡ್ಡ ತಪ್ಪೇನು ? ನಿನ್ನ ಮುನಿಸು ಸಾಕು ಕಣೇ ಬಂಗಾರಿ… ಪ್ಲೀಸ್, ಕೋಪ ಬಿಡು.
“ಈ ಬಿಂಕ ಬಿಡು ಬಿಡು ನಾನಿನ್ನ ಬಲ್ಲೆನು…
ಮನಸನ್ನು ಕೊಡು ಕೊಡು ನಾನಲ್ಲಿ ನಿಲ್ಲುವೆನು….’
ನಿಂಗೊತ್ತಾ, ಅವತ್ತು ಅಪ್ಪ ಬೇಗ ಬಂದಿದ್ರು. ಅಮ್ಮ ಮನೇಲೇ ಇದ್ರು. ತಂಗಿ ಟ್ಯೂಷನ್ಗೆ ಹೋಗಿರ್ಲಿಲ್ಲ. ಹಾಗಿರೋವಾಗ ನಾನು ಹ್ಯಾಗ್ ಬರ್ಲಿ ಹೇಳು ? ನಿಂಗೆ ಮಾತ್ರನಾ ಬೇಜಾರು? ನಂಗಿರಲ್ವಾ ? ನಿನ್ನ ಪ್ರತಿ ಉಸಿರಿಗೆ, ಹೆಸರಿಗೆ… ಕಾಯುತ್ತೇನೆ ನಾನು. ರಾತ್ರಿಯ ಮೌನದಲ್ಲಿ ಇಂಪಾದ ಸಂಗೀತ ಕೇಳಿದ್ರೆ ಅದು ನಿನ್ನ ದನಿ. ತಂಪು ಗಾಳಿಯಲ್ಲಿ ನಿನ್ನ ಸ್ಪರ್ಶ. ನಕ್ಷತ್ರ ನಿನ್ನ ಕಣ್ಣ ಮಿಂಚು. ಚಂದಿರ ಕಂಡ್ರೆ ನಿನ್ನ ಮುಖ. ಬೆಳಗಿನ ಎಳೆಬಿಸಿಲು ನಿನ್ನ ಅಪ್ಪುಗೆಯ ಬಿಸಿ. ದಟ್ಟ ಮೋಡ ಕಂಡರೆ ಬೆನ್ನ ತುಂಬ ಹರಡಿದ ನಿನ್ನ ಕೂದಲ ಜಲಪಾತ. ಹೇಳೇ ಇನ್ನೂ ಹ್ಯಾಗೆ ಪ್ರೀತಿಸ್ಲಿ ನಿನ್ನ ?
ನಾನು ಬರುತ್ತೇನೆ ಅಂತ ಹೇಳಿ ಕೈ ಕೊಟ್ಟಿದ್ದು ನಿಜ. ನಿಂಗೆ ಬೇಜಾರಾಗಿದ್ದೂ ನಿಜ. ಆದರೆ ಅವತ್ತು ಅಸಹಾಯಕನಾಗಿ ನಾನೆಷ್ಟು ನರಳಿದೆ ಗೊತ್ತಾ ? ಅಂಥ ಹಸಿವಲ್ಲೂ ರಾತ್ರಿ ಊಟಕ್ಕೆ ರಜಾ. ನಂಬು, ನಿನ್ನನ್ನ ನೋಯಿಸಿದ್ದೆ ಎಂಬ ಒಂದೇ ಕಾರಣ ನಾನವತ್ತು ನೀರೂ ಕುಡಿಯದೆ ರಾತ್ರಿ ಕಳೆದೆ. ಮುಂಜಾನೆದ್ದು ಓಡಿ ಬಂದಿದ್ದು ನಿಮ್ಮನೆ ಎದುರಿಗೆ. ನೀನು ಮಹಾ ಮಳ್ಳಿ. ರಂಗೋಲಿ ಇಡಲು ಬರಲಿಲ್ಲ. ಅದಕ್ಕೇ ಬಿಡದೆ ೨೭ ಎಸ್ಎಂಎಸ್ ಮಾಡಿ ಸಾರಿ ಕೇಳಿದೆ. ಉಹುಂ… ನೀನು ಹಠ ಬಿಡಲಿಲ್ಲ. ಭಗವಂತ ನಿಂಗೆ ಹೃದಯದ ಜಾಗದಲ್ಲಿ ಕಲ್ಲು ಇಟ್ಟಿದಾನಾ ?
ಚಿನ್ನೀ, ಇನ್ನು ಕೆಲವೇ ತಿಂಗಳು ಕಣೇ…. ನಿನ್ನೆಲ್ಲ ಕನಸು ನನಸಾಗುತ್ತೆ. ನನ್ನ ಬಿಸಿನೆಸ್ ಚೇತರಿಸಿಕೊಳ್ಳುತ್ತೆ. ಒಂದಷ್ಟು ಜನ ನನ್ನ ಗುರುತಿಸ್ತಾರೆ. ಸ್ವಲ್ಪ ಟೈಮ್ ಕೊಡು. ಆಮೇಲೆ ನೀ ಕರೆದಾಗೆಲ್ಲ ಹಾಜರಾಗ್ತೀನಿ. ಬೇಡ ಎಂದರೂ ಉಸಿರುಗಟ್ಟಿಸುವ ಅಪ್ಪುಗೆ. ಮುತ್ತಿನ ಮಳೆಯಲ್ಲಿ ತೋಯ್ದು “ಸಾಕಪ್ಪಾ’ ಎನಿಸಬೇಕು ನಿಂಗೆ. ಹಾಗ್ಮಾಡ್ತೀನಿ ನೋಡು…. ಆದರೆ ಈ ಕೋಪ, ತಾಪ, ಅಳು ಬಿಟ್ಬಿಡು. ಇದರಿಂದ ನಿನ್ನ ಚೆಂದದ ವ್ಯಕ್ತಿತ್ವ ಮಂಕಾಗುತ್ತೆ. ನೀ ನಗ್ತಿದ್ರೇನೇ ನೋಡೋಕೆ ಚೆಂದ. ನಂಗೂ ಅದೇ ಇಷ್ಟ. ನೀ ನನ್ನ ಚೇತನ. ನನ್ನ ಅಂತಃ ಶಕ್ತಿ. ಅಂತರಾತ್ಮದ ಕನ್ನಡಿ. ಅಂತರಂಗದ ಪಿಸುನುಡಿ. ಆಂತರ್ಯದ ತುಣುಕು. ಅಂಧಕಾರದಲ್ಲಿ ಬೆಳಕು.
ಒಂದೇ ಮಾತಲ್ಲಿ ಹೇಳಿ ಬಿಡ್ತೀನಿ ಕೇಳು. ನೀ ನಗ್ತಿದ್ರೆ ನಿನ್ನ ತೆಕ್ಕೆ ಹಾರಿ ಬರಬೇಕು ಅನ್ಸುತ್ತೆ. ನೀ ಅಳ್ತಿದ್ರೆ ಯಾಕೆ ಬೇಕು ಬದುಕು ಅಂತ ಮನ ಮಂಕಾಗ್ಬಿಡುತ್ತೆ. ಸಾಕು ಚಿನ್ನು ನೊಂದಿದ್ದು. ನಾವು ನಗ್ತಿರಬೇಕು. ನಮ್ಮ ಪ್ರೀತಿ ಕ್ಷಣ ಕೂಡ ಬೋರ್ ಅನ್ನಿಸ್ಬಾರ್ದು. ತೆಕ್ಕೆ ಸಾಕು ಅನ್ನಿಸಿದ್ರೆ ಎಷ್ಟು ಕಂಬನಿ ಉಕ್ಕುತ್ತೆ ಅಲ್ವಾ ? ನೀನಿಲ್ಲದೇ ನಾನು ಬರಿಯ ಶೂನ್ಯ ಕಣೇ. ನಿನ್ನ ಕೋಪ ತಡ್ಕೊಳೋ ಶಕ್ತಿ ನಂಗಿಲ್ಲ. ಮಾತಾಡಿಸೋ ಯುಕ್ತಿ ಗೊತ್ತಿಲ್ಲ… ಪೆದ್ದ ನಾನು. ನನ್ನನ್ನ ಹೀಗೆಲ್ಲ ಸತಾಯಿಸೋದು ಸರೀನಾ ಹೇಳು.
ಸಿಂಪಲ್ ಹುಡುಗ !

ಮುದ್ದು ಹುಡುಗಾ,
ನಿನ್ನ ಪತ್ರ ಸಿಕ್ತು. ಸಾರಿ ಕಣೋ… ತಪ್ಪು ನಂದೇ; ನಿಂದಲ್ಲ. ನಿನ್ನನ್ನ ತುಂಬಾ ನೋಯಿಸಿದೆ. ನನ್ನ ಇದೊಂದು ಬಾರಿ ಕ್ಷಮಿಸಿಬಿಡೋ ಪ್ಲೀಸ್. ಏನೋ ಪ್ರಾಬ್ಲಂ ಆಗಿರುತ್ತೆ, ಅದಕ್ಕೇ ನೀನು ಬರ್ಲಿಲ್ಲ ಅಂತ ನಂಗೆ ಅನ್ನಿಸಿತ್ತು. ಆದರೂ ನಾನು ಕೆಟ್ಟ ಹಠಮಾರಿ… ಗೊತ್ತಲ್ಲ. ಅದಕ್ಕೇ ಸತಾಯಿಸಿದೆ.
ದೊರೇ, ನೀನೊಬ್ಬ ಒಲಿದು ನನ್ನ ಕೈ ಹಿಡಿಯೋದಾದ್ರೆ ತಿಂಗಳೇನು ವರ್ಷ ಪೂರ್ತಿ ಕಾಯ್ತೀನಿ. ಆಮೇಲೆ ಚಂದಿರನಾಣೆಗೂ ನಿನ್ನ ನೋಯಿಸಲ್ಲ. ಕೋಪ ಮಾಡ್ಕೊಂಡು ಅಳಲ್ಲ. ಮೊದಲು ನೀ ಬೆಳೆಯಬೇಕು. “ಯಶಸ್ವೀ ಬಿಸಿನೆಸ್ ಮ್ಯಾನ್!’ ಅನ್ನಿಸ್ಕೋಬೇಕು-ಆಗ ನಮ್ಮಪ್ಪನ ಕಣ್ಣಲ್ಲೂ ಕಂಡೂ ಕಾಣದಂತೆ ಮೆಚ್ಚುಗೆ ಇಣುಕಬೇಕು. ಅಮ್ಮನ ಬಿಂಕದಲ್ಲೂ ಪುಟ್ಟ ಹೆಮ್ಮೆ ಕಾಣಬೇಕು. ಅಷ್ಟಾದ ದಿನವೇ ನಾನು ಗರಿಗೆದರಿದ ನವಿಲು. ಆವಾಗ ನೀನು ಹೆಣ್ಣು ಕೇಳಲು ಬರ್ತೀಯ. ನಿನ್ನ ಹಳೆಯ ಪೋಲಿತನವೆಲ್ಲ ಈಗಿನ ಯಶಸ್ಸಿನ ಎದುರು ಕಾಣೋದೇ ಇಲ್ಲ. ಆಗ ನಿನ್ನನ್ನ ನಿರಾಕರಿಸಲಿಕ್ಕೆ ನಮ್ಮನೇಲಿ ಯಾರಿಗೂ ಕಾರಣವೇ ಸಿಗಲ್ಲ. ಹಾಂ ! ನಿಂಗೊತ್ತಾ ಹಿಮೂ, ಅಣ್ಣಂಗೆ, ಈಗಾಗ್ಲೇ ನಿನ್ನ ಹೆಜ್ಜೆಯ ಬಗ್ಗೆ ಬೆರಗಿದೆ. ಅಪ್ಪಂಗೂ ಹೇಳ್ತಾನೆ ಅನ್ಸುತ್ತೆ. ನೀನು ಸಭ್ಯನಾಗಿದೀಯ ಅಂತ ನಿಧಾನವಾಗಿ ಮನವರಿಕೆ ಆಗ್ತಿದೆ… ಅದಕ್ಕೇ ಇರಬೇಕು ನಂಗೆ ಕಣ್ಗಾವಲು ಸ್ವಲ್ಪ ಕಮ್ಮಿಯಾಗಿದೆ !
ಡಿಯರ್, ನಿನ್ನ ಸುಮ್ಮನೇ ನೆನಪಿಸಿದರೂ ಸಾಕು “ತುಟಿಯ ಮೇಲೆ ತುಂಟ ಕಿರುನಗೆ ಕೆನ್ನೆ ತುಂಬಾ ಕೆಂಡ ಸಂಪಿಗೆ’ ನಂಗೆ. ರಾತ್ರಿ ನಿದ್ದೇಲಿ ಮಗ್ಗುಲಾದಾಗ ಓಲೆ ಸರಿದಾಡುತ್ತೆ. ನೀನೇ ಕೆನ್ನೆ ಸವರಿದಂತೆ… ನಾಚುತ್ತೇನೆ. ಹಳದಿ ಸೀರೆ ಉಡುತ್ತಿದ್ದರಂತೂ ಮೈ-ಮನ ತುಂಬ ನೀನೇ ನೀನು. ಆಗೆಲ್ಲ ಮೊದಲ ಬಾರಿ ಚುಡಾಯಿಸಿ ಕಣ್ಣು ಹೊಡೆದ್ಯಲ್ಲ-ಅದು ನೆನಪಾಗುತ್ತೆ. ಹಿಂದೇನೋ ದೊಡ್ಡ ಖುಷಿಯಾಗುತ್ತೆ. ಆಮೇಲೆ…
ಹಿಮೂ, ಮನೇಲಿ ಒಪ್ಪಲಿ ಬಿಡಲಿ ಐ ಡೋಂಟ್ ಕೇರ್. ಅಕ್ಕ, ಭಾವ ನಂಗೇ ಸಪೋರ್ಟ್ ಮಾಡ್ತಿದಾರೆ. ಮುಂದಿನ ತುಳಸೀ ಪೂಜೇನ ನಿಮ್ಮನೆ ಸೊಸೆ ಆಗಿಯೇ ಮಾಡೋದು ಎಂದು ನಾನು ನಿರ್ಧರಿಸಿಬಿಟ್ಟಿದೀನಿ. ಆಮೇಲೂ ನನ್ನ ಕಾಯಿಸೊಲ್ಲ ಅಲ್ವಾ ? ಅಲ್ಲಿವರೆಗೂ ನೀ ಹೇಳಿದಂತೆ ನಡ್ಕೋತೀನಿ. ಆಮೇಲ್ ಮಾತ್ರ ನಿಂಗೆ ನಾನೇ ಬಾಸ್. ಅತ್ತೆ, ಮಾವರಿಗೆ ಮಾತ್ರ ವಿಧೇಯ ಸೊಸೆ…. ಬೆಳಗಿನ ತಿಂಡಿಯೆಲ್ಲ ಅವರ ಜತೆ. ಸಾಯಂಕಾಲ ಪಾನಿಪೂರಿಗೆ ನಿನ್ತಂಗಿ ಕಂಪನಿ. ನಿಂಗೊಂಚೂರೂ ಕಷ್ಟ ಆಗದಂತೆ ನೋಡ್ಕೋತೀನಿ. ಅಷ್ಟೆಲ್ಲ ಆದರೂ ನೀ ಸತಾಯಿಸುತ್ತಿದ್ರೆ ಮಾತ್ರ ನಿಂಜತೆ ಠೂ ಠೂ ಠೂ…. ವರ್ಷ ಪೂರ್ತಿ…. ಒ.ಕೆ. ಡಾರ್ಲಿಂಗ್ ?
ಕೋಪ ಬಿಟ್ಟವಳು
ಮುನಿಯಮ್ಮ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: