ನೆನಪಾಗಿ ಕಣ್ತುಂಬಿ ಬಂತು.

ಪ್ರೀತಿಯ ಹರಿ,
ಮತ್ತೆ ನಾನೇ ಬರೀತಿದೀನಿ. ನಂಗೂ ಗೊತ್ತು. ನೀನೀಗ ಹನಿಮೂನ್ನ ಸಂಭ್ರಮದಲ್ಲಿದೀಯ. ನಿಂಗೆ ಅಂಟಿಕೊಂಡ ಹಾಗೆಯೇ ನಿನ್ನ ಹೆಂಡತಿ ಇದಾಳೆ. ಅವಳಿಗೆ ಗೊತ್ತೇ ಆಗದ ಹಾಗೆ ನೀನು ಈ ಪತ್ರ ಓದಬೇಕು. ಅವಳನ್ನು ಮುದ್ದಿಸ್ತೀಯಲ್ಲ-ಆವಾಗೆಲ್ಲ ಮೋಸ್ಟ್ಲೀ ನಿಂಗೆ ನಾನು ನೆನಪಾಗ್ತೀನಿ. ಆಗೆಲ್ಲ ನಿಂಗೆ ಕಸಿವಿಸಿಯಾಗುತ್ತಾ ? ನನ್ನ ಹೆಣ್ತನವನ್ನ ಕೊಳ್ಳೆ ಹೊಡೆದದ್ದಕ್ಕೆ ಖುಷಿ ಆಗುತ್ತಾ ? ಅಥವಾ ಒಂದು ತೆರನಾದ ಪಾಪಪ್ರಜ್ಞೆ ಕಾಡುತ್ತಾ ? ಇದ್ಯಾವುದೂ ಇಲ್ಲ ಅನ್ನೋದಾದ್ರೆ-ಮದುವೆಗೆ ಮುಂಚೆ ಸಿಕ್ಕಿದ್ದೆಲ್ಲ ಒಂಥರಾ ಜಾಕ್ಪಾಟ್ ಅಂತನ್ನಿಸಿ ವಿಕೃತ ಅಂತಾರಲ್ಲ-ಅಂಥಾ ಖುಷಿ ಆಗುತ್ತಾ ? ಹರೀ, ಓದ್ತಾ ಇದೀಯ ತಾನೆ ?
ಪತ್ರ ಶುರುಮಾಡಲು ಘಟನೆಯೇ ಆಗಬೇಕಿತ್ತಾ ? ಇಲ್ಲ. ಘಟನೆ ಯಾವುದಾದರೂ ಆಗಬಹುದಿತ್ತು. ಆದರೆ ಈ ಘಟನೆ ಗಂಟಲೊತ್ತಿ, ಮೆದುಳೊತ್ತಿ, ಆಚೆ ಬರಲು ಪ್ರಯತ್ನಿಸುತ್ತಿದೆ. ಬರೀತಾ ಬರೀತಾ ಕಣ್ಣಲ್ಲಿ ನೀರು ಬರ್ತಿದೆ. ಗಂಟಲುಬ್ಬುತ್ತಿದೆ. ಯಾಕೆ ಗೊತ್ತಾ ? ನಾನು ಎಲ್ಲವನ್ನೂ ಹತ್ತಿರದಿಂದ ನೋಡಿದೆ. ಹತ್ತಿರದಿಂದ ನೋಡಿದರೂ ದೂರದವಳ ಥರಾ ಚಡಪಡಿಸಿದೆ. ಅಲ್ಲಿ ಸಂಭ್ರಮವಿತ್ತು, ಸಲ್ಲಾಪವಿತ್ತು. ಸಂತೋಷವಿತ್ತು. ನನ್ನ ಹಿಂದೆ ಹಿಂದೆಯೇ ಓಡಾಡುತ್ತಿದ್ದವರ ಮಾತಿನಲ್ಲಿ ನಯವಿತ್ತು, ವಿನಯವಿತ್ತು. ಅನುಮಾನವಿತ್ತು. ಅಸಮಾಧಾನವಿತ್ತು. ಹಸಿದವರಿಗೆ ಊಟವಿತ್ತು. ಖುಷಿ ಪಡಲಿಕ್ಕೆ ಆರ್ಕೆಸ್ಟ್ರಾ ಇತ್ತು ! ಕೊಳೆಯಾಗಿ ಬಂದವರನ್ನು “ಘಂ’ ಎನಿಸುವ ಅತ್ತರು ಇತ್ತು. ಹೌದಲ್ವಾ ಹರೀ-ನಿನ್ನ ಮದುವೆ ನಡೀತಲ್ಲ-ಆ ಛತ್ರದಲ್ಲಿ ಏನಿರಲಿಲ್ಲ ಹೇಳು ?
ನಿಂಗೆ ಶಾಕ್ ಆಗುತ್ತೋ ಏನೋ. ಆದ್ರೂ ಹೇಳಿಬಿಡ್ತೀನಿ ಕೇಳು. ಚಪ್ಪರದ ದಿನವೇ ನಾನು ಛತ್ರಕ್ಕೆ ಬಂದೆ. ನನ್ನನ್ನ ಇಷ್ಟಿಷ್ಟೇ ವಂಚಿಸಿದ ನೀನು ವರದಕ್ಷಿಣೆಯ ಒಂದೇ ಆಸೆಗೆ ಕೈಕೊಟ್ಟೆಯಲ್ಲ-ಅವತ್ತೇ ನಿನ್ನನ್ನ ಮರೆತುಬಿಟ್ಟಿದ್ದೆ ನಿಜ. ಆದ್ರೆ ನಿನ್ನೂದ್ದಕ್ಕೂ ಹಣ ಜೋಡಿಸಿದ ಆ ಹುಡುಗಿ ಹೇಗಿರ್ತಾಳೋ ನೋಡಬೇಕು ಅನ್ನೋ ದುಷ್ಟ ಆಸೆ ನನ್ನ ಜತೆಯಾಯಿತು. ನಾನು ಮೌನಗೌರಿಯಂತೆ ಕಲ್ಯಾಣ ಮಂಟಪಕ್ಕೆ ನಡೆದು ಬಂದರೆ ನಿಮ್ಮಪ್ಪ ಎದುರಾದರು. ಅವರಿಗೆ ಭಯವಾಯಿತಾ ? ಕಸಿವಿಸಿಯಾಯಿತಾ ? ಪಾಪಪ್ರಜ್ಞೆ ಕಾಡಿತಾ ? ನನ್ನ ಸ್ಥಿತಿಗೆ ಮರುಕ ಹುಟ್ಟಿತಾ ? ಗೊತ್ತಿಲ್ಲ. ನಿಮ್ಮಪ್ಪ ಎರಡೂ ಕೈ ಜೋಡಿಸಿದರು ! ಅವರ ಹಿಂದೆಯೇ ಇದ್ದ ನಿಮ್ಮಮ್ಮ ಹೇಳಿದ್ದು- “ಚಂದ್ರಾ, ನಮ್ಮನ್ನ ಕ್ಷಮಿಸಿಬಿಡು….!’
ಅವರ ಮಾತೆಲ್ಲ ಕೇಳಿಸಿತು; ಉಹುಂ, ಕೇಳಿಸಲಿಲ್ಲ ! ನನ್ನ ಗಮನವೆಲ್ಲ ಇದ್ದದ್ದು-ನಿನ್ನ ಹೆಂಡತಿ ಆಗ್ತಿದ್ದಳಲ್ಲ-ಅವಳ ಮೇಲೆ ! ಅವಳು ನನಗಿಂತ ಶ್ರೀಮಂತೆ ನಿಜ, ಆದರೆ ನನಗಿಂತ ಚೆಲುವೆಯಾ ? ನನಗಿಂತ ಉದ್ದಕ್ಕಿದ್ದಾಳೆ ನಿಜ, ಆದರೆ ನನ್ನಷ್ಟೇ ಕೆಂಪಗಿದ್ದಾಳಾ ? ಡಿಗ್ರಿ ಓದಿದ್ದಾಳೆ ನಿಜ, ಆದ್ರೆ ಅವಳು ನನ್ನ ಥರಾನೇ ಇನ್ನೊಬ್ಬರಿಂದ ಮೋಸ ಹೋಗಿದ್ದಾಳಾ ? …. ಹೌದು ಹರೀ, ನಂಗಿದ್ದುದು ಬರೀ ಇಂಥವೇ ಕುತೂಹಲಗಳು.
ಅದೇ ನೆಪದಿಂದ ಸೀದಾ ಹೆಣ್ಣಿನ ಕಡೆಯವರ ರೂಮಿಗೆ ಇಣುಕಿದರೆ- ಅಲ್ಲಿ ಅವಳಿದ್ದಳು. ಅವಳ ಮೊಗದಲ್ಲಿ ಗೆಲುವಿತ್ತು. ಕಂಗಳಲ್ಲಿ ಹೊಳಪಿತ್ತು. ಫೇಶಿಯಲ್ ಮಾಡಿಸಿ, ಹುಬ್ಬು ತೀಡಿಕೊಂಡು, ನಾಳೆಗಾಗಿ ಸಜ್ಜಾಗಿದ್ದ ಕುರುಹು ಮುಖದಲ್ಲಿತ್ತು. ಕೂದಲು ಗಂಟು ಹಾಕಿದ್ದಳು-ಆದ್ರೆ ಹರೀ, “ಅವಳು ಚೆನ್ನಾಗಿದ್ದಾಳೆ’ ಅಂತ ತಮಾಷೆಗೆ ಹೇಳಲಿಕ್ಕೂ ಯಾಕೋ ಪಾಪ ಪ್ರಜ್ಞೆ ಕಾಡಿತು. ಅದರ ಹಿಂದೆಯೇ ನನ್ನ ಪ್ರೀತಿ, ನನ್ನ ಕನಸು, ನನ್ನ ಆಸೆ, ಕೊಟ್ಟ ಭಾಷೆ ಎಲ್ಲವೂ ಇಷ್ಟಿಷ್ಟೇ ನೆನಪಾಗಿ ಕಣ್ತುಂಬಿ ಬಂತು.
ಯಾವ ಹೂವು ಯಾರ ಮುಡಿಗೊ
ಯಾರ ಒಲವು ಯಾರ ಕಡೆಗೊ
ಇಂಥ ಪ್ರೇಮದಾಟದಿ, ಯಾರ ಹೃದಯ ಯಾರಿಗೋ….
ಈಗ ಹೇಳು. ನಿಂಗೆ ಮದುವೆಯಾಗುವ ಅರ್ಜೆಂಟಿತ್ತು ನಿಜ, ಆದ್ರೆ ನಂಗೆ ಮೋಸ ಮಾಡುವ ಅಗತ್ಯ ಏನಿತ್ತು ? ನೀನು ಗಂಡಸು. ಒಂದಲ್ಲ, ಎರಡಲ್ಲ ಮೂರು ಲವ್ ಡಿಸಪಾಯಿಂಟ್ಮೆಂಟ್ ಆದ್ರೂ ನೆಮ್ಮದಿಯಾಗೇ ಇರಬಲ್ಲೆ. ಯಾಕ್ ಹೇಳು ? ಜಗತ್ತು ಹುಡುಗಿಯರನ್ನ ಮಾತ್ರ ಅನುಮಾನದಿಂದ ನೋಡುತ್ತೆ. ಅವರನ್ನ ಮಾತ್ರ ಅಪಹಾಸ್ಯ ಮಾಡುತ್ತೆ. ಹೆಜ್ಜೆ ಹೆಜ್ಜೆಗೂ ಕಾಡುತ್ತೆ. ಪದೇ ಪದೆ ಕೆಣಕುತ್ತೆ. ಹೌದು ಹರೀ, ಈಗ ಕೂಡ ನನ್ನ ಕೈ ತುಂಬ ಮತ್ತು ಮೈ ತುಂಬ ನಿನ್ನ ಬೆವರ ಘಮವಿದೆ. ಬೆರಳ ಗುರುತಿದೆ. ನನ್ನ ಕೆನ್ನೆ ತುಂಬ, ಕೊರಳ ಆಚೀಚೆ ನಿನ್ನ ಚೆಂದುಟಿಯ ಸಹಿಯಿದೆ. ಹೇಳು, ಅದನ್ನೆಲ್ಲ ಹೇಗೆ ಅಳಿಸಲಿ ?
ಹರೀ, ನಾನೇ ಮುಂದಾಗಿ ಪ್ರೊಪೋಸ್ ಮಾಡಿಬಿಟ್ಟೆ. ನಿನ್ನ ಮೌನವನ್ನೇ ಸಮ್ಮತಿ ಅಂದುಕೊಂಡೆ. ನಿನ್ನ ಗೆಲುವಿಗಾಗಿ, ನಿನ್ನ ಖುಷಿಗಾಗಿ, ನಿನ್ನ ಸಂತೋಷಕ್ಕಾಗಿ ನನ್ನನ್ನೇ ಬರಿದು ಮಾಡಿಕೊಂಡೆ. ನಿನ್ನ ಗಾಂಭೀರ್ಯವನ್ನೇ “ದೊಡ್ಡಸ್ತಿಕೆ’ ಅಂತ ತಿಳಿದೆ. ನೀನು ಅದೊಂದು ಕತ್ತಲ ವೇಳೆಯಲ್ಲಿ ಮೆಲ್ಲಗೆ ಬಂದು ಕೈ ಹಿಡಿದೆಯಲ್ಲ-ನಾನಾಗ ಜಿಂಕೆಯಾದೆ. ನವಿಲಾದೆ. ನಿನ್ನ ನೆರಳಾದೆ. ನಿನ್ನೆದುರು ಬರಿದಾದೆ. ಅಷ್ಟಕ್ಕೇ ಸುಮ್ಮನಾದೆನಾ ? ಇಲ್ಲ, ನನ್ನದೆಲ್ಲವನ್ನೂ ನಿನಗೆ ಧಾರೆಯೆರೆದೆ !
ಅಂಥ ನನಗೆ ನೀನು ಅದ್ಯಾಕೆ ಮೋಸ ಮಾಡಿದೆ ಹರೀ ? ನಿನಗೇ ಗೊತ್ತಿದ್ದಂತೆ ನಾನು ಬಡವರ ಮನೆ ಹುಡುಗಿ. “ನನ್ನನ್ನ ಮದುವೆ ಆಗ್ಬೇಕು ಅನ್ನೋದಾದ್ರೆ ೧೦ ಲಕ್ಷ ಕೊಡ್ಬೇಕು’ ಅಂದ್ಯಲ್ಲ ಹರೀ, ಹಾಗೆ ಕೇಳೋಕೆ ನಿಂಗೆ ನಾಚಿಕೆ ಆಗಲಿಲ್ವಾ ? ಅಪ್ಪ-ಅಮ್ಮ ಒಪ್ಪಿರೋ ಹುಡುಗೀನ ಮದುವೆ ಆಗ್ತೀನಿ ಅಂದ್ಯಲ್ಲ-ಆಗೆಲ್ಲ ನನ್ನೊಂದಿಗೆ ಆಡಿದ ಆಟ, ಕೊಟ್ಟ ಭಾಷೆ, ದೇವರ ಮುಂದೆ ಮಾಡಿದ ಆಣೆ-ಪ್ರಮಾಣ ನೆನಪಾಗಲಿಲ್ವಾ ?
ನಂಬು, ನೀನು ಸಿಗಲಿಲ್ಲ ಅಂತ ಬೇಸರವಿದೆ ಅಷ್ಟೆ. ಆದ್ರೆ ನೋವಿಲ್ಲ. ನೀ ಅಲ್ಲದಿದ್ರೆ ಇನ್ನೊಬ್ಬ. ಆದ್ರೆ ಹರೀ, ನಿನ್ನಂಥ ಧನಪಿಶಾಚೀನಾ ನಾನು ಕೈ ಹಿಡೀಲಾರೆ. ಹಿಡಿ ಪ್ರೀತಿಯನ್ನೂ, ಎಂದೆಂದೂ ಮರೆಯಲಾರದಂಥ ಪಾಠವನ್ನೂ ಕಲಿಸಿದವ ನೀನು-ಆದ್ರೂ ತುಂಬು ಪ್ರೀತಿಯಿಂದಲೇ ಹೇಳ್ತಿದೀನಿ- ನಿಂಗೆ ಒಳ್ಳೆಯದಾಗಲಿ. ಅದಕ್ಕಿಂತ ಹೆಚ್ಚಿನ ಒಳ್ಳೆಯದು ನನಗೇ ಆಗಲಿ! ಹೇಳು, ಹನಿಮೂನ್ ಹ್ಯಾಗಿದೆ ? ನಿನ್ನ ಹುಡುಗೀನ ಮುಟ್ಟಿದಾಗಲೆಲ್ಲ ನಾನು ನೆನಪಾಗಲಿಲ್ವ ? ಆಗೆಲ್ಲ ನೀನು ಕಂಪಿಸಲಿಲ್ವ ? ಮಾತಾಡೋ….
ಚಂದ್ರಮತಿ !

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: