ಪ್ರೀತಿಯ ಅಂಚೆಯಣ್ಣ,

null

ಉಭಯ ಕುಶಲೋಪರಿ ಸಾಂಪ್ರತ…
ಪ್ರೀತಿಯ ಅಂಚೆಯಣ್ಣ,
ಹೌದಲ್ವ ? ನೀನೀಗ ಅಪರಿಚಿತ ಆಗ್ತಾ ಇದೀಯ. ಅಪರೂಪಕ್ಕೆ ಮಾತ್ರ ಸಿಕ್ತಾ ಇದೀಯ. ಈ ಹಿಂದೆ ಒಂದು ದಿನವೂ ತಪ್ಪದೆ ಮಟಮಟ ಮಧ್ಯಾಹ್ನವೇ ಮನೆಮುಂದೆ ನಿಲ್ಲುತ್ತಿದ್ದವ; ಆಗೆಲ್ಲ ಒಂದಿಡೀ ಊರಿಗೇ “ಉಭಯ ಕುಶಲೋಪರಿ ಸಾಂಪ್ರತ’ದ ಪತ್ರಗಳನ್ನು ಬಟವಾಡೆ ಮಾಡುತ್ತಿದ್ದವ ನೀನು. ಅಂಥ ನಿನಗೇ ಪತ್ರ ಬರೀತಿದೀನಲ್ಲ, ಇದು ಅಚ್ಚರಿ ಮತ್ತು ವಿಷಾದದ ಸಂಗತಿ. ಹೌದು, ಈ ಪತ್ರದಲ್ಲಿ ನಿನ್ನ ಪರಿಚಯವಿದೆ. ನಿನ್ನ ವೃತ್ತಿ ಕುರಿತು ಮೆಚ್ಚುಗೆಯಿದೆ. ಹಳೆಯ ಮಧುರ ನೆನಪಿದೆ. ಕಳೆದು ಹೋದ ಕ್ಷಣಗಳ ಮಾಧುರ್ಯವಿದೆ. ಹಿಂದೆ ಯಾವುದೋ ಮನೆಯ ಬಾಗಿಲಲ್ಲಿ ನಿಂತು, ಕಾಗದ ಒಡೆದು ಓದುತ್ತಿದ್ದೆಯಲ್ಲ, ಈಗ ಕೂಡ ಅದೇ ಥರಾ ಓದ್ತಾ ಹೋಗು, ಪ್ಲೀಸ್….
*****
ನೆನಪಿದೆ ತಾನೆ ? ಇಪ್ಪತ್ತು ವರ್ಷದ ಹಿಂದೆ ಮನೆಮನೆಯ ನೆಂಟನಾಗಿದ್ದವ ನೀನು. ಮಧ್ಯಾಹ್ನ ಹನ್ನೆರಡು ಗಂಟೆಗೆ ಸ್ಕೂಲ್ ಮುಂದಿನ ರಸ್ತೆಯಲ್ಲಿ ನೀನು ನಡೆದು ಬರುತ್ತಿದ್ದೆ. ನಿನ್ನನ್ನು ಕಂಡದ್ದೇ ತಡ, ಹೇಳುತ್ತಿದ್ದ ಪಾಠವನ್ನು ಅಲ್ಲಿಗೇ ನಿಲ್ಲಿಸುತ್ತಿದ್ದ ಮೇಸ್ಟ್ರು ರಾಗವಾಗಿ ಹಾಡುತ್ತಿದ್ದರು: “ಓಲೆಯ ಹಂಚಲು ಹೊರಡುವೆ ನಾನು /ತೋರಲು ಆಗಸದಲಿ ಬಿಳಿ ಬಾನು/ ಮನೆಯಲಿ ನೀವು ಬಿಸಿಲಲಿ ನಾನು/ಕಾಗದ ಬಂತು ಕಾಗದವು….’ ಮೇಸ್ಟ್ರ ಈ ಹಾಡಿನಲ್ಲಿ ಪ್ರೀತಿಯಿರುತ್ತಿತ್ತು. ಮೆಚ್ಚುಗೆ ಇರುತ್ತಿತ್ತು. ಅವರ ಹಾಡಿನಲ್ಲಿ, ಆ ರಾಗದಲ್ಲಿ ಎಂಥದೋ ಮೋದವಿರುತ್ತಿತ್ತು. ಮತ್ತು ಅದೇ ಕಾರಣಕ್ಕೆ ಆ ಹಾಡು ಎಲ್ಲ ಮಕ್ಕಳಿಗೂ ಬಾಯಿಪಾಠವಾಗಿತ್ತು ! ಮರುದಿನ ನೀನು ಅಷ್ಟು ದೂರದಲ್ಲಿ ಕಂಡಾಕ್ಷಣ ನಾವು ಹಾಡುತ್ತಿದ್ದೆವಲ್ಲ- ಓಲೆಯ ಹಂಚಲು ಹೊರಡುವೆ ನಾನು….
ಶಾಲೆಯ ಹಾದಿಯಿಂದಲೇ ನಮ್ಮ ಊರಿಗೂ ಬರ್ತಿದ್ದೆ ನೀನು ? ಇಲ್ಲ, ನೀನು ಬಂದಾಗ ಯಾರಿಗೂ ಬೆರಗಾಗ್ತಾ ಇರಲಿಲ್ಲ. ಬರದಿದ್ದರೆ ಮಾತ್ರ ಎಲ್ಲರಿಗೂ ಏನೋ ಕಳೆದುಕೊಂಡಂತೆ ಆಗ್ತಾ ಇತ್ತು. ಮನೆಯ ಮುಂದೆ ಸೈಕಲ್ ನಿಲ್ಲಿಸಿ “ಟ್ರಿಣ್ ಟ್ರಿಣ್’ ಅನ್ನಿಸಿದರೆ ಸಾಕು- “ಪೋಸ್ಟಾ, ಬಂದೆ ಬಂದೆ’ ಅನ್ನುತ್ತಲೇ ಮನೆಯೊಡತಿ ಓಡಿಬರುತ್ತಿದ್ದಳು. ಯಾವುದೋ ಕಾಗದಕ್ಕೆ ಕೈ ಒಡ್ಡುತ್ತಿದ್ದಳು. ನಿನ್ನ ಮುಖ ಕಂಡೇ- ಬಂದಿರುವುದು ಸಂತೋಷದ ಸುದ್ದಿಯೋ; ದುಃಖದ ವಾರ್ತೆಯೋ ಎಂದು ತಿಳಿದುಬಿಡುತ್ತಿದ್ದಳು. ಸಂತೋಷದ್ದಾದರೆ ನಕ್ಕು ಮಾತಾಡುತ್ತಿದ್ದಳು. ದುಃಖದ ಸಂಗತಿಯಾದರೆ ಅತ್ತು ಹಗುರಾಗುತ್ತಿದ್ದಳು. ಕೆಲವೊಮ್ಮೆ ಸರಸರನೆ ಕಾಗದ ಗೀಚಿ, “ಇದನ್ನು ಪೋಸ್ಟು ಮಾಡಬೇಕಲ್ಲಣ್ಣ….’ ಎಂದು ಬೇಡುತ್ತಿದ್ದಳು !
ಹೌದಲ್ವ ಮಾರಾಯ ? ಆಗೆಲ್ಲ ಗಡಿಯಾರದಷ್ಟೇ ಕರಾರುವಾಕ್ಕಾಗಿ ನೀನು ಕೆಲ್ಸ ಮಾಡ್ತಿದ್ದೆ. ಪ್ರತಿ ತಿಂಗಳ ಮೊದಲ ವಾರವೇ ಮನೆ ಮನೆಯ ಅಜ್ಜ-ಅಜ್ಜಿಯರಿಗೆ ಪಿಂಚಣಿ ತಲುಪಿಸ್ತಿದ್ದೆ. ಅವರ ಇಳಿವಯಸ್ಸಿನ ನೆಮ್ಮದಿ ಕಾಪಾಡ್ತಿದ್ದೆ. ಆಗಷ್ಟೆ ಎಸ್ಸೆಸ್ಸೆಲ್ಸಿ ದಾಟಿದ ಹುಡುಗಿಗೆ ಪತ್ರ ಬಂದರೆ, ಅದು ಲವ್ ಲೆಟರ್ರೇ ಅಂತ ಪತ್ತೆ ಮಾಡಿ ಗುಟ್ಟಾಗಿ ಆಕೆಗೇ ಕೊಡ್ತಿದ್ದೆ. ಆ ಹುಡುಗಿಯ ಕಷ್ಟಕ್ಕೆ ನೋಯುತ್ತಿದ್ದೆ. ಅಂಥ ಪತ್ರಗಳನ್ನು ಹುಡುಗರಿಗೂ ಕೊಟ್ಟು- “ಹ್ಯಂಗಿದಾಳಯ್ಯ ಆ ಹುಡುಗೀ’ ಎಂದು ಕೇಳುತ್ತಿದ್ದೆ. ಕಣ್ಣು ಹೊಡೀತಿದ್ದೆ. ನಿಮ್ ಮದುವೆಗೆ ನನ್ನನ್ನೂ ಕರೀರಯ್ಯ ಅಂತ ಪ್ರೀತಿಯಿಂದಲೇ ಡಿಮ್ಯಾಂಡು ಮಾಡುತ್ತಿದ್ದೆ….
ತಮಾಷೆ ನೋಡು ? ನಿಂಗೊಂದು ಹೆಸರಿರುತ್ತಿತ್ತು. ಅದು ಎಲ್ಲರಿಗೂ ಚೆನ್ನಾಗೇ ಗೊತ್ತಿರ್ತಿತ್ತು. ಆದ್ರೂ ನಾವು “ಪೋಸ್ಟು ಮ್ಯಾನೂ’ ಅಂತಿದ್ವಿ. ನಡು ಮಧ್ಯಾಹ್ನ ನಿನ್ನ ಮುಖ ಕಂಡಾಗ ಖುಷಿ ಪಡುತ್ತಿದ್ದವರು, ಅದೇ ದಿನ ಸಂಜೆಯೋ, ಮುಸ್ಸಂಜೆಯೋ ನಿನ್ನ ಸೈಕಲ್ನ ಟ್ರಿಣ್ಟ್ರಿಣ್ ಸದ್ದು ಕೇಳಿದ್ದರೆ- ದೇವ್ರೇ, ಯಾವ ಕೆಟ್ಟ ಸುದ್ದಿ ಕೇಳುವುದಿದೆಯೋ ಗೊತ್ತಿಲ್ವಲ್ಲ ಎಂದು ಬೆವರುತ್ತಿದ್ದರು. ಆಗೆಲ್ಲ ನೀನು ಅಕ್ಕರೆಯ ಅಮ್ಮನಾಗುತ್ತಿದ್ದೆ. ಸೇನೆಯಲ್ಲಿ ಮಗ ಸತ್ತ, ತವರಿನಲ್ಲಿ ತಾಯಿ ಸತ್ತ, ಅಣ್ಣನಿಗೆ ಆಕ್ಸಿಡೆಂಟ್ ಆದ ಸೂತಕದ ಸುದ್ದಿ ಹೇಳಿದವನೇ, ಸಮಾಧಾನದ ಮಾತಾಡುತ್ತಿದ್ದೆ. ಅಕಸ್ಮಾತ್ ದಿಢೀರನೆ ಬಂದದ್ದು ಕೆಲಸದ ಆರ್ಡರ್ ಆಗಿದ್ದರೆ ಇಡೀ ಮನೆಯ ಖುಷಿಗೆ ಕಾರಣವಾಗ್ತಿದ್ದೆ. ಇದರ ಜತೆಗೆ ಓದು, ಬರಹ ಬರದ ಅದೆಷ್ಟೋ ಮನೆಯವರಿಗೆ ಪತ್ರ ತಲುಪಿಸುತ್ತಿದ್ದವನೂ ನೀನೆ, ಅದನ್ನ ಓದುತ್ತಿದ್ದವನೂ ನೀನು. ಅದಕ್ಕೆ ಮಾರೋಲೆ ಬರೆಯುತ್ತಿದದವ ಕೂಡ ನೀನೆ. ಅಂಥ ವೇಳೆಯಲ್ಲಿ ರಾಗ-ದ್ವೇಷವನ್ನು ಮೀರಿ ನಿಂತು ಮನೆ ಮನೆಯ ಗುಟ್ಟು ಕಾಪಾಡುತ್ತಿದ್ದೆಯಲ್ಲ, ಅದೆಲ್ಲ ನಿನ್ನಿಂದ ಹ್ಯಾಗೆ ಸಾಧ್ಯವಾಯ್ತು ಮಾರಾಯ ?
ಈಗ ಏನಾಗಿದೆ ನೋಡು ? ಭಾರತೀಯ ಅಂಚೆ ಇಲಾಖೆಗೆ ಬರಾಬರ್ ೧೫೦ ವರ್ಷವಾಗಿದೆ. ಈ ಸಂಬಂಧವಾಗಿ ಅದೇ ಇಲಾಖೆಯ “ದೊಡ್ಡಜನ’ ಭಾಷಣ ಮಾಡ್ತಿದಾರೆ. ಪುಸ್ತಕ ಬರೀತಿದಾರೆ. ಜಾಹೀರಾತು ಕೊಡ್ತಾ ಇದಾರೆ. ಈ ಮಧ್ಯೆ ಅದೇ ಜನ ನಿನ್ನನ್ನ ಮರೆತೇ ಬಿಟ್ಟಿದಾರೆ. ಇಪ್ಪತ್ತು ವರ್ಷದ ಹಿಂದೆ ನಿನ್ನ ಸೇವೆಯಲ್ಲಿ, ಪ್ರಾಮಾಣಿಕತೆಯಲ್ಲಿ ವಿಪರೀತ ನಂಬಿಕೆಯಿಟ್ಟಿದ್ದ ಮಂದಿ ಈಗ “ಪೋಸ್ಟಾ’ ಅದು ತುಂಬಾ ಲೇಟು ಕಣ್ರೀ ಎಂದು ರಾಗ ಎಳೆಯುತ್ತಿದ್ದಾರೆ.
******
ಯಾಕಪ್ಪ ಹೀಗಾಯ್ತು ಅಂದೆಯಾ ? ಕಾರಣ ಸಿಂಪಲ್. ಈಗ ನಮಗೆ ಸಂಬಂಧ ಭಾರವಾಗಿದೆ. ಗೆಳೆತನ ಬೇಡವಾಗಿದೆ. ಸಹನೆ ಮಾಯವಾಗಿದೆ. ಪತ್ರ ಬರೆಯುವ ಉಮ್ಮೇದಿ ಕಣ್ಮರೆಯಾಗಿದೆ. ಅದಕ್ಕಿಂತ ಹೆಚ್ಚಾಗಿ ಎಲ್ಲರಿಗೂ ಇ-ಮೇಲ್ ಐಡಿ ಇದೆ. ಎಲ್ಲರ ಬಳಿಯೂ ಮೊಬೈಲ್ ಎಂಬ ಮಾಯೆಯಿದೆ. ಈ ಹಿಂದೆ ತುಂಬ ಪ್ರೀತಿಯಿಂದ ನೂರಾ ಇಪ್ಪತ್ತೆಂಟು ಸಾಲನ್ನೂ ಪುಟ್ಟ ಕಾಗದದಲ್ಲಿ ಬರೀತಿದ್ದ ನಾವೇ, ಈಗ ಸಿಡಿಮಿಡಿಯಿಂದ ನಾಲ್ಕೇ ಸಾಲಿನ ಎಸ್ಸೆಮ್ಮೆಸ್ ಕಳಿಸಿ ಸುಮ್ಮನಾಗ್ತಿದೀವಿ ! ಅಜ್ಜನ ಪಿಂಚಣಿಗೆ, ಅಜ್ಜಿಯ ನೆಮ್ಮದಿಗೆ ಬ್ಯಾಂಕಿನಲ್ಲಿ ಅಕೌಂಟು ತೆಗೆದು “ಆರಾಮ್’ ಆಗಿದೀವಿ. ಪೋಸ್ಟು ತುಂಬಾ ಲೇಟು, ಕೊರಿಯರ್ರೇ ಬೆಟರ್ರು. ಇ-ಮೇಲ್ ಅದಕ್ಕಿಂತ ಬೆಸ್ಟು ಎಂದು ಮಾತು ಮರೆಸುತ್ತಿದ್ದೇವೆ ! ನಿನ್ನನ್ನ ಪೂರ್ತ ಪೂರ್ತಾ ಮರೆತೇಬಿಟ್ಟಿದೀವಿ ! ಉಹುಂ, ನಮಗೆ ಪಾಪಪ್ರಜ್ಞೆ ಕಾಡ್ತಾನೇ ಇಲ್ಲ, ರವಷ್ಟೂ….
ಆದ್ರೆ, ಮೈ ಡಿಯರ್ ಪೋಸ್ಟ್ಮ್ಯಾನ್, ಇದೆಲ್ಲದರ ಮಧ್ಯೆಯೂ ನಿನ್ನನ್ನ ಪ್ರೀತಿಸಲಿಕ್ಕೆ, ನಿನ್ನನ್ನ ನೆನೆದು ಹೆಮ್ಮೆ ಪಡಲಿಕ್ಕೆ, ಖುಷಿಯಿಂದಲೇ ನಿನಗೆ ಚೆಂದದ ಸೆಲ್ಯೂಟು ಹೊಡೆಯಲಿಕ್ಕೆ ಕಾರಣವಿದೆ. ಏನೆಂದರೆ, ನೀನು; ನಿನ್ನವರು ಇಡೀ ಜನ್ಮದಲ್ಲಿ ಒಂದು ಪೈಸೆ ಲಂಚಕ್ಕೆ ಕೈ ಒಡ್ಡಿದವರಲ್ಲ. ಕೆಲಸಕ್ಕೆ ಕಳ್ಳ ಬಿದ್ದವರಲ್ಲ. ಮಳೆಬರಲಿ, ಬಿಸಿಲು ಉಕ್ಕಲಿ, ಚಳಿ ಅಪ್ಪಲಿ ನೀವೆಂದೂ ಕೆಲಸಕ್ಕೆ ನೆಪ ಹೇಳಲಿಲ್ಲ. ಇಂದಿನ ಕೆಲಸವನ್ನು ನಾಳೆ ಮಾಡಿದರಾಯ್ತು ಎನ್ನಲೂ ಇಲ್ಲ. ನಿಮ್ಮ ಕರ್ತೃತ್ವ ಶಕ್ತಿಗೆ ಶರಣು ಶರಣು….
ಇಲ್ಲ, ಇವತ್ತಿನ ಪರಿಸ್ಥಿತಿ ನೋಡಿದರೆ, ನಿನ್ನ ಬದುಕಿನ ವೈಭವದ ದಿನಗಳನ್ನು ಮತ್ತೆ ಕಂಡೇವೆಂಬ ನಂಬಿಕೆಯಿಲ್ಲ. ಈಗ ಕಾಲ ಬದಲಾಗಿದೆ. ನಾವೂ ಬದಲಾಗಿದೀವಿ. ಈಗಾಗಲೇ ನಿನ್ನ ಮೇಲಿನ ಹಾಡು ಮರೆತೇ ಹೋಗಿದೆ. ಇವತ್ತಲ್ಲ, ನಾಳೆ, ನಿನ್ನನ್ನೂ ಮರೆತುಬಿಡ್ತೀವಿ. ಪೋಸ್ಟು ಸರಿಯಿಲ್ಲ ಕಣ್ರಿ, ಕೊರಿಯರ್ರೇ ಸೈ ಅಂತ ವಾದ ಮಂಡಿಸ್ತೀವಿ. ಆದ್ರೆ ಅಮ್ಮನ ನೆನಪಾದಾಗ, ಆಕೆ ಅಜ್ಜಿಗೆ ಪತ್ರ ಬರೆಸಿದ್ದು; ಅಜ್ಜನ ಸಾವಿಗೆ ಅಮ್ಮ ಕಣ್ಣೀರಾದದ್ದು ನೆನಪಾದಾಗ, ಅಜ್ಜಿಯ ಸಾವಿಗೆ ಕಣ್ಣೀರಾದಾಗ ನಿನ್ನನ್ನ ನೆನಪು ಮಾಡಿಕೊಳ್ತೀವಿ. ಆ ನೆನಪಿನ ದೋಣಿಯಲ್ಲಿ ತೇಲಿ ಹೋಗ್ತೀವಿ.
ಮರೆತು ಬಿಡುವ ಮುನ್ನ ನಿಂಗೆ ಹೇಳಬಹುದಾದ ಮಾತು- ನಿಂಗೆ ತುಂಬ ಒಳ್ಳೆಯದಾಗಲಿ. ನಿನಗಿದ್ದ ಒಳ್ಳೆಯ ಬುದ್ಧಿ ನಮಗೂ ಬರಲಿ.
ನಮಸ್ಕಾರ-

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: