ನಮ್ಮ ಗೆಳೆತನದ ಬಳ್ಳಿ ಬಾಡಿಹೋಗೋದು ಬೇಡ


ಗೆಳತಿ,
ಸೂರ್ಯನಿಗಾಗಿ ಭೂಮಿ ದಿನವೂ ಹಾತೊರೆಯುತ್ತದೆ. ಚಂದ್ರ, ಕ್ಷಣಕ್ಷಣವೂ ಭೂಮಿಯನ್ನು ಪ್ರೀತಿಸುತ್ತಾನೆ. ತಾರೆ, ನಕ್ಷತ್ರಗಳಿವೆಯಲ್ಲ, ಅವು ಅನುದಿನವೂ ಚಂದ್ರಮನ ಸಾಂಗತ್ಯಕ್ಕೆ ಹಾತೊರೆಯುತ್ತವೆ, ಹಪಹಪಿಸುತ್ತವೆ. ಸಾಗರದಲ್ಲಿದ್ದರೂ, ಚಿಪ್ಪಿನೊಳಗಿನ ಜೀವ ಪರಿತಪಿಸುತ್ತದೆ-ಒಂದೊಂದು ಹನಿಗಾಗಿ ! ಹಾಗೆಯೇ ಪ್ರತಿ ಆತ್ಮಕ್ಕೂ ಪ್ರೀತಿಯ ದಾಹ. ಯಾವ ಮೋಡದಲ್ಲಿ ಯಾರಿಗಾಗಿ, ಯಾವ ಹನಿ ಕಾದು ಕೂತಿರುತ್ತದೋ…. ಬಲ್ಲವರಾರು ?
ನೆನಪು ಮಾಡ್ಕೋ. ವರ್ಷದ ಹಿಂದೆ-ಯಾವುದೋ ಒಂದು ತಿರುವಲ್ಲಿ ಪರಿಚಯವಾದವಳು ನೀನು. ಅದೂ ಏನು ? ಇ-ಮೇಲ್ ಮೂಲಕ ! “ಆಮೇಲೆ’ ಅನ್ನುವ ಮಾತೇ ಇರಲಿಲ್ಲ ನಮ್ಮಲ್ಲಿ. ಜಗಳಾಡಲಿಕ್ಕೂ ಇ-ಮೇಲು ರಾಜಿ ಆಗೋದಕ್ಕೂ ಇ-ಮೇಲು, ಕನಸಿಗೆ ಬರಬಹುದಾ ? ಮನದಲ್ಲಿ ನಿಲ್ಲಬಹುದಾ ? ಒಂದೇ ಒಂದ್ಸಲ ತಬ್ಕೋಬಹುದಾ ? ಕೆನ್ನೆಗೆ ಒಂದು, ತುಟಿಗೆ ಹನ್ನೆರಡು ಮುತ್ತು ಕೊಡಬಹುದಾ ? ಪೋಲಿ ಜೋಕು ಹೇಳಬಹುದಾ ? ಪೋಲ್ಪೋಲಿಯಾಗಿ ಆಡಬಹುದಾ ….? ಇಂಥವೇ ಏನೇನೇನೋಲ್ಲ ಕೇಳಲಿಕ್ಕೂ ನಮಗೆ ನೆರವಾದದ್ದು ಅದೇ ಇ-ಮೇಲು! ಹೌದಲ್ವ ಮೀನಾ ಡಿಯರ್ ? ಒಂದಿಡೀ ವರ್ಷದ ಪರಿಚಯದಲ್ಲಿ ನಾವು ಒಬ್ಬರನ್ನೊಬ್ಬರು ನೋಡಲೇ ಇಲ್ಲ. ಆದರೆ-
ನನ್ನ ಮನದಲ್ಲಿ ನೀನಿದ್ದೆ. ನಿನ್ನ ಎದೆಯೊಳಗೆ ನಾನಿದ್ದೆ ! ಪರಿಚಯವಾದ ಎರಡೇ ತಿಂಗಳಲ್ಲಿ, ಒಂದೇ ಜೀವ, ಎರಡು ದೇಹ ಅನ್ನೋ ಹಾಗೆ ನಾವಿದ್ದೆವಲ್ಲ-ಆ ದಿನಗಳು ಎಷ್ಟೊಂದು ಮಧುರವಾಗಿದ್ದವು ! ಆಗ ನಮ್ಮೊಳಗೇ ಒಂದು ಜಗತ್ತಿತ್ತು. ಆ ಜಗತ್ತಿನಲ್ಲಿ ಇದ್ದವರು ನಾವಿಬ್ಬರೇ. ನಮಗೆ ಯಾರ ಹಂಗೂ ಇರಲಿಲ್ಲ. ನಮ್ಮನ್ನು ಯಾವ ಬಂಧನವೂ ತಡೆಯಲಿಲ್ಲ. ಯಾವ ಶಕ್ತಿಯೂ ಎದುರು ನಿಲ್ಲಲಿಲ್ಲ. ಆ ಕ್ಷಣದಲ್ಲಿ ನಾನು ಹಾಡಿದ್ದೆಷ್ಟು ? ನೀನು ಕಾಡಿದ್ದೆಷ್ಟು ? ನಾನು ನರಳಿದ್ದೆಷ್ಟು ?ನೀನು ನಲಿಸಿದ್ದೆಷ್ಟು ? ನಾನು ಹುಡುಕಿದ್ದೆಷ್ಟು ? ನೀನು ಮಿಡುಕಿದ್ದೆಷ್ಟು ? ಹೇಳು, ಯಾವುದನ್ನಾದ್ರೂ ನೀನು ಲೆಕ್ಕ ಇಟ್ಟಿದೀಯ ?
ಹೌದು. ಅವೆಲ್ಲ ಕಳೆದು ಹೋದ ದಿನಗಳು. ಅವು ಇನ್ನೆಂದೂ ಮರಳಿ ಬರೋದಿಲ್ಲ. ಅದು ನನಗೂ ಚೆನ್ನಾಗಿ ಗೊತ್ತಿದೆ. ಹಾಗಿದ್ರೂ ನಿನ್ನ ನೆನಪು ಬಿಡದೆ ಕಾಡುತ್ತೆ. ನನ್ನನ್ನ ತುಂಬ ಡಿಸ್ಟರ್ಬ್ ಮಾಡತ್ತೆ. ಆಗೆಲ್ಲ-ನಿನ್ನನ್ನ ಮರೆತು ಬಿಡಬೇಕು ಅಂದ್ಕೋತೀನಿ ಉಹುಂ, ಸಾಧ್ಯವಾಗಲ್ಲ. ಹೇಳು, ಒಡನಾಟ ಕೊನೆಯಾಗಬಹುದು. ಆದರೆ, ನೆನಪುಗಳಿಂದ ಎಲ್ಲಿಯ ಬಿಡುಗಡೆ ? ನಿನ್ನ ನೆನಪಾದಾಗಲೆಲ್ಲ ಮೈ ಮನಸ್ಸು ಹಗುರಾಗುತ್ತೆ. ದೊಡ್ಡ ಖುಷಿಯಾಗುತ್ತೆ. ಹರಯ ಮೈ ತುಂಬುತ್ತೆ. ನಿನ್ನ ಸಂಗಕ್ಕೆ ಮೈ-ಮನ ಹಾತೊರೆಯುತ್ತೆ….
ನಿನ್ನ ಸವಿನೆನಪೆ ಮನದಲ್ಲಿ ಆರಾಧನೆ
ಪ್ರೀತಿಯ ಸವಿಮಾತೆ ಉಪಾಸನೆ
ನಿನ್ನ ಸಂಗದಲಿ ಅಂಗಾಂಗ ಮಿಂಚಾಯಿತು
ಶೃಂಗಾರ ರಸಧಾರೆ ಬಯಲಾಯಿತು…
ಈಗ ಎಲ್ಲವನ್ನೂ ನೆನಪು ಮಾಡಿಕೊಂಡಾಗ ಮತ್ತೆ ಮತ್ತೆ ನನಗೆ ನಾನೇ ಹೇಳಿಕೊಳ್ತೇನೆ: ನಮ್ಮ ಮಧುರ ಪ್ರೇಮದ ದಿನಗಳಿದ್ದವಲ್ಲ-ಅವು ದಿನಗಳಾಗದೇ ಪಕ್ಷಿಗಳಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ! ಹಾಗೇನಾದರೂ ಆಗಿದ್ದರೆ-ನಾವು ಅವುಗಳನ್ನು ಪಂಜರದಲ್ಲಿ ಬಂಧಿಸಿಟ್ಟು ಬಿಡುತ್ತಿದ್ದೆ. ತಿನ್ನಲು ಸಾಮಾನ್ಯ-ಕಾಳು ಕಡ್ಡಿಯನ್ನಲ್ಲ, ಮುತ್ತುಗಳನ್ನೇ ಕೊಡುತ್ತಿದ್ದೆ ! ಈ ಎಲ್ಲ ಮಾತುಗಳ ಅರ್ಥ ಇಷ್ಟೇ ಡಿಯರ್-ನಂಗೆ ಪ್ರೀತಿ ಬೇಕು. ಅದರ ಮೋದ ಬೇಕು. ನಿನ್ನ ಮೋಹ ಬೇಕು. ನಿನ್ನ ಮೋಹವೇ ಸಾಕು !
ಹೌದು. ನಾನು ಅದೇ ಮಮಕಾರದಿಂದ ಹೇಳ್ತಿದೀನಿ. ನಮ್ಮ ಗೆಳೆತನದ ಬಳ್ಳಿ ಬಾಡಿಹೋಗೋದು ಬೇಡ. ಅದು ಇನ್ನೊಂದ್ಸಲ ಚಿಗುರಲಿ. ಅಷ್ಟೆತ್ತರ ಬೆಳೆಯಲಿ. ಹೌದು ಕಣೇ ನಿಜವಾದ ಪ್ರೀತಿ ಇದ್ದ ಕಡೆ ಪ್ರೀತಿಯೂ ಸಾಧ್ಯ, ಪ್ರೇಮವೂ ಸಾಧ್ಯ. ಪ್ರೇಮದ ಜತೆಗೆ ಮೋಹವೂ ಸಾಧ್ಯ ! ನಂಗೆ ಚನ್ನಾಗಿ ಗೊತ್ತು-ನಿನ್ನ ಕಂಗಳಲ್ಲಿ ಒಲುಮೆಯ ತೇವವಿದೆ. ಹೃದಯದಲ್ಲಿ ಪ್ರೇಮದ ಚಿಲುಮೆಯಿದೆ. ಹೃದಯದ ಒಂದೊಂದು ಮಿಡಿತದಲ್ಲೂ ನನ್ನ ಹೆಸರಿದೆ. ನನ್ನ ಉಸಿರಿದೆ. ಇಷ್ಟೆಲ್ಲ ಗೊತ್ತಿರುವುದರಿಂದಲೇ ನಾವಿಬ್ಬರೂ ಒಂದಾಗುವ ಗಳಿಗೆ ಎಂದು ಬರುತ್ತದೋ ಎಂದು ಕಾಯುತ್ತಲೇ ಇದ್ದೇನೆ ನಾನು !
ನಿಂಗೆ ಇಂಥ ಯಾವ ಭಾವವೂ ಕಾಡೋದಿಲ್ವ ? ಪ್ಲೀಸ್, ಮಾತಾಡೇ…

ಗೆಳೆಯ…

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: