ಹೆಸರು ಹೇಳದ ಹುಡುಗಿ

ಇವರಿಗೆ,
ಹೆಸರು ಹೇಳದ ಹುಡುಗಿ
ಅ/o ಲಾಲ್ಬಾಗ್/ಕಬ್ಬನ್ಪಾರ್ಕ್ ಯಾ ಎಂ.ಜಿ. ರಸ್ತೆ
ಬೆಂಗಳೂರು.
ವಿಷಯ: ಪ್ರೇಮ ಪ್ರಸ್ತಾಪ ಯಾ ಐ ಲವ್ ಯೂ ಎಂಬ ತೊದಲ್ನುಡಿ !
ಡಿಯರ್ ಐಶೂ,
ನೇರಾ ನೇರ ನೋಡಕ್ಕೆ ನೀನು ಸಾಧಾರಣ ಸುಂದರಿ, ನಿಜ. ಆದರೆ ಸೈಡ್ ಆಂಗಲ್ನಿಂದ ನೋಡಿದ್ರೆ ನೀನು ಒಂಚೂರು ಐಶ್ವರ್ಯ ರೈ ಥರಾನೇ ಕಾಣಿಸ್ತೀಯ. ಸುಮ್ಸುಮ್ನೇ ಜಂಬಾ ಹೊಡೀತೀಯ. ಆಸೆ ಹುಟ್ಟಿಸಿ ಮೋಸ ಮಾಡ್ತೀಯ. ಅದಕ್ಕೇ ನೀನು ಐಶು ! ನೆನಪಿದೆಯಲ್ಲ, ಅಕ್ಟೋಬರ್ ೨ರ ಗಾಂಧಿ ಜಯಂತಿಯಂದು, ನಾನು ಫರೇಡ್ ಮೈದಾನಕ್ಕೆ ಬಂದಿದ್ದೆ. ಅವತ್ತು ನೀನು ಎಂ.ಜಿ. ರೋಡಲ್ಲಿದ್ದೆ ! ಅವತ್ತು ನಂಗೆ ಅದ್ಯಾಕೆ ಅಂಥ ಒಳ್ಳೆಯ (?!) ಬುದ್ಧಿ ಬಂತು ? ದೇವರಿಗೇ ಗೊತ್ತು. ಅವತ್ತು ಗಾಂಧಿ ಜಯಂತೀನ ಬಿಟ್ಹಾಕಿ ಎಂ.ಜಿ. ರಸ್ತೆಗೆ ಓಡೋಡಿ ಬಂದು ನಿಂಗೆ ಧೀಂ ಅಂತ ಡಿಕ್ಕಿ ಕೊಟ್ಟು ಒಂದಿಷ್ಟು ಬೆಚ್ಚಗಾದೆನಲ್ಲ-ಅವತ್ತಿನಿಂದಲೇ ನಾನು ನಿನ್ನ ಪ್ರೇಮಪಾಶದಲ್ಲಿ ಸಿಲುಕಿದ್ದೇನೆ ಎಂದು ತಿಳಿಸಲು ಸಂತೋಷವಾಗುತ್ತದೆ ! ಅದೇ ನೆಪದಲ್ಲಿ ನನ್ನನ್ನು ನಾನು ಭಾವೀ ಪ್ರೇಮಿಯೆಂದು ಕರೆದುಕೊಳ್ಳುತ್ತೇನೆ.
ಒಂದು ಸಲಹೆ-ಏನ್ ಗೊತ್ತ ? ಹೀಗೇ-ಯಾವುದಾದ್ರೂ ಫಂಕ್ಷನ್ ಇದ್ದಾಗ ನೀನು ಹಾಗೇ ಬಾ. ನಾನು ನಿನಗಿಂತ ಮೊದಲೇ ಬಂದಿರ್ತೀನಿ ! ಆದ್ರೆ ನಾವು ಅಮರ ಪ್ರೇಮಿಗಳಾಗೋದು ಬೇಡ. ಮದುವೆಯ ಬಗ್ಗೆ ಮಾತಾಡೋದೂ ಬೇಡ ! ಮೊದಲಿಗೆ, ಪಾರ್ಟ್ ಟೈಂ ಪ್ರೇಮಿಗಳಾಗೋಣ. ಪಾರ್ಟ್ ಟೈಂ ಪ್ರೇಮವನ್ನ ೬ ತಿಂಗಳ ಅವಧಿಗೆ ಫಿಕ್ಸ್ ಮಾಡಿಕೊಳ್ಳೋಣ ! ಆ ಸಂದರ್ಭದಲ್ಲಿ ನನಗೆ ನೀನು, ನಿನಗೆ ನಾನು ವಿಪರೀತ ಇಷ್ಟವಾದರೆ… ನಮ್ಮ ಪ್ರೇಮವನ್ನು ಕಾಯಂ ಮಾಡಿಕೊಳ್ಳೋಣ.
ನಾವು ಹೇಗಿರೋಣ ಅಂದ್ರೆ-ಆರಂಭದ ದಿನಗಳಲ್ಲಿ ಕಾಫಿ ಮತ್ತು ಇತರ ಮನರಂಜನೆಗಾಗಿ ಬರುವ ಖರ್ಚನ್ನ ಇಬ್ಬರೂ ಸಮವಾಗಿ ಹಂಚಿಕೊಳ್ಳೋಣ. ಕಾಫಿಗೆ ಬಂದಾಗ ನೀನು ಹೂಮುತ್ತನ್ನು ತೇಲಿಬಿಟ್ಟರೆ-ಕಾಫಿ ಖರ್ಚು ನನ್ನದು. ಬಂದ ಕೂಡಲೇ ಕೆನ್ನೆಗೆ ಮುತ್ತಿಟ್ಟರೆ-ತಿಂಡಿಯ ಖರ್ಚೂ ನನ್ನದು ! ಆ ಟೈಮಲ್ಲಿ ಏನೂ ಕಿರಿಕ್ಕು ಮಾಡದೆ ಜತೆಗೇ ಇದ್ದರೆ-ಮಧ್ಯಾಹ್ನ ಊಟದ ಖರ್ಚೂ ನನ್ನದು ! ಅಕಸ್ಮಾತ್ ನೀನು ಈ ಆರು ತಿಂಗಳ ಅವಧೀಲಿ ಒಂದೇ ಒಂದ್ಸಲ ಟೂರ್ಗೆ ಬಂದರೆ (ಒಬ್ಬಳೇ ಬಂದರೆ ಮಾತ್ರ !) ಆಗಿನ ಎಲ್ಲ ಖರ್ಚೂ ನನ್ನದು ! ಆಗಾಗ್ಗೆ ನೀನು ನನ್ನ ಮೊಬೈಲ್ ಬಳಸಬಹುದು. ಈ ಪತ್ರಕ್ಕೆ ಉತ್ತರಿಸಲು ನಿನಗೆ ೩೦ ದಿನಗಳ ಸಮಯ ನೀಡುತ್ತೇನೆ. ಈ ಕಾಲಾವಧಿಯಲ್ಲಿ ನೀನು ಉತ್ತರಿಸದೇ ಹೋದರೆ-ಯಾವುದೇ ನೋಟಿಸ್ ನೀಡದೆ ಈ ಪ್ರೇಮ ಪ್ರಸ್ತಾಪವನ್ನು ರದ್ದುಗೊಳಿಸಲಾಗುವುದು. ಜತೆಗೆ-ಪ್ರೇಮ ಪ್ರಸ್ತಾಪವನ್ನು ಬೇರೆ ಬೆಡಗಿಯರೊಂದಿಗೆ ಮಾಡಲಾಗುವುದು !
ನೀನು ಜಾಣೆ. ಸುಂದರಿ, ಒಳ್ಳೆಯವಳು. ಉದಾರಿ. ಬುದ್ಧಿವಂತೆ. ಹಾಗಂತ ನಂಬಿದೀನಿ ನಾನು. ನನ್ನ ನಂಬಿಕೆ ನಿಜ ಆಗ್ಬೇಕು ಅನ್ನೋದಾದ್ರೆ-ಈ ಪತ್ರವನ್ನು ನಿಮ್ಮ ಅಪ್ಪ-ಅಮ್ಮಂಗೆ ತೋರಿಸಬೇಡ ! ಸಿಟ್ಟು ಮಾಡ್ಕೊಂಡು ಪರಪರ ಹರಿದು ಹಾಕ್ಬೇಡ. ಸುಮ್ಸುಮ್ನೆ ಮಿಸ್ ಕಾಲ್ ಮಾಡಿ ಜೀವ ತಿನ್ಬೇಡಿ. ನೀನು ಇಂಥವನು ಅಂತ ಗೊತ್ತಿರ್ಲಿಲ್ಲ ಅಂದು ಗೋಳಾಡಬೇಡ. ನನ್ನ ಪ್ರೇಮ ಪ್ರಸ್ತಾಪ ನಿಂಗೆ ಇಷ್ಟವಾಗದಿದ್ರೆ-ದಯವಿಟ್ಟು ಇದನ್ನು ನಿನ್ನ ತಂಗಿಗೆ ಕೊಡು ! ನಂಗೆ ನೀನು ಸಿಕ್ಕರೆ ಖುಷಿ. ನಿನ್ನ ತಂಗಿಯೇ ಒಲಿದರೆ ಇನ್ನೂ ಖುಷಿ ! (ಪಾಲಿಗೆ ಬಂದದ್ದು ಪಂಚಾಮೃತ !) ನಿಂಗೆ ತಂಗಿಯರೇ ಇಲ್ಲ ಅನ್ನುವುದಾದರೆ ಇದೇ ಪತ್ರವನ್ನ-ನಿನ್ನ ಗೆಳತಿಯರಿಗೆ ದಾಟಿಸು. ಬೇಕಾದ್ರೆ ೧೦ ಕಾಪಿ ಜೆರಾಕ್ಸ್ ಮಾಡಿಸಿ ಹತ್ತು ಮಂದಿಗೆ ಕಳಿಸು ! ನೀನು ಹಾಗೆ ಮಾಡಿದ್ರೆ ನಂಗೆ ಖುಷಿಯಾಗುತ್ತೆ. ನಿನ್ಮೇಲೆ ಇನ್ನಷ್ಟು ಆಸೆಯಾಗುತ್ತೆ !
ಮರೆತೆ. ನಿಂಗೆ ಮೊದಲೇ ಹೇಳ್ಬೇಕಿತ್ತು. ನಾನಿನ್ನೂ “ಎಲ್’ ಬೋರ್ಡು. ಪಿಯುಸಿ ಓದ್ತಾ ಇದೀನಿ. ನಿನ್ನಂಥ ಹುಡುಗೀರ್ನ ಕಂಡರೆ ಕಾಲೇಜು ಬಿಟ್ಟು ಓಡಿಬರ್ಬೇಕು ಅನ್ಸುತ್ತೆ. ನಿನ್ಮುಂದೆ ನಿಂತ್ಕೋಬೇಕು ಅನ್ಸುತ್ತೆ. ಐ ಲವ್ ಯೂ ಅಂತ ಜೋರಾಗಿ ಹೇಳ್ಬೇಕು ಅನಿಸುತ್ತೆ. ಆದ್ರೆ ನಿನ್ಮುಂದೆ ನಿಂತ್ಕೊಳ್ಳೋಕೆ ಸಂಕೋಚವಲ್ಲ- ಹೆದರಿಕೆ ಆಗುತ್ತೆ.
ಈಗ ಹೇಳು. ನಾನು ಒಳ್ಳೆಯವನಲ್ವ ?ಮುಗ್ಧ ಅಲ್ವ ? ಈ ಪತ್ರ ನಿನಗೆ ಸಿಕ್ಕಲಿ. ನಿನ್ನ ಪ್ರೀತಿ ನನಗೇ ದಕ್ಕಲಿ.
ನಿನ್ನ ಪತ್ರದ ನಿರೀಕ್ಷೆಯಲ್ಲಿ….
ಡಿಕ್ಕಿ ಹೊಡೆದವನು !
(ಅಡ್ರೆಸ್ ಇಲ್ಲ !)

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: