ನಟ್ಟಿರುಳು ಮಳೆಯ ಸದ್ದಿನಂತೆ ಆ ಕ್ಷಣಗಳ ನೆನಪು ಬರುತ್ತಲೇ ಇದೆ

ದಕ್ಕದೇ ಹೋದ ಚೆಂಡು ಹೂವೆ,
ನೀನು ನನ್ನನ್ನ ತಿರಸ್ಕರಿಸಿದ್ದು ಯಾಕೆ ? ಅದಕ್ಕೂ ಮೊದಲು ಹಠಕ್ಕೆ ಬಿದ್ದವಳಂತೆ ಪ್ರೀತಿಸಿದ್ದು ಯಾಕೆ? ಆರಂಭದಲ್ಲಿ ನನ್ನ ಒಂದೊಂದೇ ಗೆಲುವಿಗೆ ಕಾರಣಳಾದವಳು, ಕಡೆಗೆ ಅಷ್ಟೆತ್ತರದಿಂದ ಪ್ರಪಾತಕ್ಕೆ ನೂಕಿ ಬಿಟ್ಟೆಯಲ್ಲ, ಯಾಕೆ? ಕಳೆದ ಎಂಟು ವರ್ಷಗಳಿಂದ ಈ ಪ್ರಶ್ನೇನ ಮತ್ತೆ ಮತ್ತೆ ಕೇಳಿಕೊಳ್ತಾನೇ ಇದೀನಿ. ಉಹುಂ, ಉತ್ತರ ಸಿಗುತ್ತಿಲ್ಲ. “ಛೆ, ಛೆ, ನನ್ನ ಹುಡುಗಿ ಕೆಟ್ಟವಳಲ್ಲ. ಅವಳಿಗೆ ದುರಾಸೆಯಿಲ್ಲ. ನನ್ಮೇಲೆ ಅಪನಂಬಿಕೆಯಿಲ್ಲ. ಯಾವುದೋ ಒತ್ತಡಕ್ಕೆ ಸಿಲುಕಿ ಆಕೆ ಹೀಗೆಲ್ಲ ಮಾಡಿಬಿಟ್ಟಿದಾಳೆ. ಇಂಥ ಮಾತನ್ನ ನನಗೆ ನಾನೇ ಹೇಳಿಕೊಳ್ತೀನಿ. ಆದ್ರೂ ಸಮಾಧಾನ ಸಿಗ್ತಾ ಇಲ್ಲ !
ಹೌದಲ್ವೇನೆ ಚಿತ್ರಾ ? ನನ್ನ ಫಸ್ಟ್ ಲವರ್ ನೀನು. ತುಂಬ ದೂರದವಳಲ್ಲ. ಸ್ವಂತ ಅತ್ತೆಯ ಮಗಳು. ಸ್ವಲ್ಪ ಬೆಳ್ಳಗಿದ್ದೆ. ಸ್ವಲ್ಪ ಕುಳ್ಳಗಿದ್ದೆ. ಉಹುಂ, ನೀನು ತೆಳ್ಳಗಿರಲೇ ಇಲ್ಲ. ಸಣ್ಣ ಡ್ರಮ್ಮಿನ ಹಾಗೆ ಡುಮ್ಮಿಯಾಗಿದ್ದೆ. ನಿಂಗೆ ಹೋಲಿಸಿ ನೋಡಿದ್ರೆ ನಾನೇ ಚೆನ್ನಾಗಿದ್ದೆ. ಚೆನ್ನಾಗಿ ಓದ್ತಾ ಇದ್ದೆ. ಮುದ್ಮುದ್ದಾಗಿ ಬರೀತಿದ್ದೆ. ಪೆದ್ದು ಪೆದ್ದಾಗಿ ನಗ್ತಾ ಇದ್ದೆ. ಇದೆಲ್ಲದರ ಜತೆಗೇ ನಿನ್ನನ್ನ ಸುಮ್ಸುಮ್ನೆ ಪ್ರೀತಿಸ್ತಾ ಇದ್ದೆ. ಇಲ್ಲ ಚಿತ್ರಾ, ನೀನು ತಿರಸ್ಕರಿಸಬಹುದು ಅನ್ನೋ ಸಣ್ಣ ಕಲ್ಪನೆ ಕೂಡ ನಂಗಿರ್ಲಿಲ್ಲ. ನನ್ನ ಡೈರಿಯ ಪ್ರತಿ ಪುಟದಲ್ಲೂ “ಐ ಲವ್ ಯೂ’ ಅಂತ ಬರೀತಿದ್ದೆನಲ್ಲ, ಆಗ ಚೂರೂ ಹೆದರಿಕೆ ಆಗ್ತಿರಲಿಲ್ಲ….
ನನ್ನ ಪ್ರೀತಿಯನ್ನ, ಅದರ ರೀತಿಯನ್ನ ಕರೆಕ್ಟಾಗಿ ಆರು ತಿಂಗಳು ಒಪ್ಪಿಕೊಂಡವಳು ನೀನು. ಆಸೆಗಳ ಬೆಲೂನು ಊದಿ ಆಕಾಶಕ್ಕೆ ಬಿಟ್ಟವಳೂ ನೀನು. ಅಂಥ ನೀನು ಅದೊಂದು ದಿನ ನನ್ನೆದುರು ನಿಂತೆ. ಕಂಗಳಲ್ಲಿ ಬೆಳಕಿರಲಿಲ್ಲ. ಮೊಗದಲ್ಲಿ ನಗೆಯಿರಲಿಲ್ಲ. ಮಾತಿನಲ್ಲಿ ಸೌಜನ್ಯ, ಅನುಕಂಪ, ಸಂಕೋಚ, ಸಂತಾಪ, ಪ್ರೀತಿ, ಕರುಣೆ… ಉಹುಂ, ಈ ಯಾವುದೂ ಇರಲಿಲ್ಲ. ಮೇಸ್ಟ್ರಿಗೆ ಪಾಠ ಒಪ್ಪಿಸುವಂತೆ ನೀನು ಹೇಳಿಬಿಟ್ಟೆ: “ಕೇಳು ಸುಧೀ, ಅಪ್ಪಂಗೆ ನೀನು ಇಷ್ಟವಾಗಿಲ್ಲ. ಅಮ್ಮ ನಿನ್ನನ್ನ ಒಪ್ತಾ ಇಲ್ಲ. ಅವರನ್ನ ಧಿಕ್ಕರಿಸಿ ನಡೆಯೋಕೆ ನಂಗೂ ಸಾಧ್ಯವಿಲ್ಲ. ಪ್ಲೀಸ್ ಕಣೋ, ನನ್ನನ್ನ ಮರೆತುಬಿಡು. ಸಾಧ್ಯವಾದ್ರೆ ಕ್ಷಮಿಸಿಬಿಡು…’
ಈ ಬದುಕಿಂದ ನೀನು ಎದ್ದು ಹೋದೆಯಲ್ಲ ಚಿತ್ರಾ, ಅವತ್ತು ದುಃಖವಾದದ್ದು ನಿಜ. ಜೋರಾಗಿ ಅಳಬೇಕು ಅನಿಸಿದ್ದು ನಿಜ. ಸತ್ತು ಹೋಗಬೇಕು ಅನಿಸಿದ್ದೂ ನಿಜ. ಆದ್ರೆ ಡಿಯರ್, ಒಂದೇ ದಿನದ ನಂತರ ಆ ನಿರ್ಧಾರ ಬದಲಾಗಿತ್ತು. ಇಲ್ಲ, ನಾನು ಸೋಲಬಾರದು. ನೋವಲ್ಲಿ ನರಳಬಾರದು. ಅವಳ ನೆನಪಲ್ಲೇ ಮೀಯಬಾರದು. ಅವಳೆದುರೇ ಎದ್ದು ನಿಲ್ಲಬೇಕು. ಅವಳಿಗಿಂತ ಚೆಂದದ ಹುಡುಗಿಯ ಹೆಗಲು ಮುಟ್ಟಬೇಕು. ಅವಳೊಂದಿಗೇ ಬದುಕು ಕಟ್ಟಬೇಕು. ನಾನು ಇಂಥ ಕನಸುಗಳ ಮೈದಾನದಲ್ಲಿ ನಡೆಯುತ್ತಿದ್ದಾಗಲೇ ಆ ಹುಡುಗಿ ಕಾಣಿಸಿಬಿಟ್ಟಳು….
ಸುಳ್ಳೇಕೆ ? ಈಕೆ ನಿನಗಿಂತ ಬೆಳ್ಳಗಿದ್ದಳು, ಕುಳ್ಳಗಿದ್ದಳು ಮತ್ತು ತೆಳ್ಳಗಿದ್ದಳು. ಮೊದಲ ನೋಟಕ್ಕೇ ಇಷ್ಟವಾದಳು. ಮೂರನೇ ದಿನ ಮತ್ತೆ ಸಿಕ್ಕಾಗ ನಾನು ಹೇಳಿಯೇ ಬಿಟ್ಟೆ: “ಹುಡುಗೀ, ಐ ಲವ್ ಯೂ…’ ಆಕೆ ಮಾತಾಡಲಿಲ್ಲ, ಮೋಹಕವಾಗಿ ನಕ್ಕಳು. ಗುಲಾಬಿ ಬಣ್ಣದ ಚೂಡಿದಾರ್ನಲ್ಲಿ ಆಕೆಯೇ ಒಂದು ಗುಲಾಬಿಯಂತೆ ಕಂಡಳು. ನನ್ನ ಕಥೆ ಹೇಳಿಕೊಂಡೆ. ಮೌನವಾಗಿ ಕೇಳಿಸಿಕೊಂಡಳು. ಸಂಕಟ ತೋಡಿಕೊಂಡೆ, ಸಮಾಧಾನ ಹೇಳಿದಳು. ನಿನ್ನ ನೆನಪಾಗಿ ಕಣ್ಣೀರಾದೆ, ಕಂಬನಿ ಒರೆಸಿ ಕೈ ಹಿಡಿದು ನಡೆದಳು !
ಈಗ, ನಾವು ನೆಮ್ಮದಿಯಿಂದಿದೀವಿ. ನಿಮ್ಮಷ್ಟು ಶ್ರೀಮಂತರಾಗಿಲ್ಲ. ತುಂಬ ಬಡತನದಲ್ಲೂ ಬದುಕ್ತಾ ಇಲ್ಲ. ನೀನೇ ನೋಡಿದೆಯಲ್ಲ ಮೊನ್ನೆ ? ನಾನೀಗ ಸ್ವಲ್ಪ ದಪ್ಪವಾಗಿದ್ದೇನೆ. ಒಂದಿಷ್ಟು ತಲೆಗೂದಲು ಉದುರಿದೆ. ಗಡ್ಡದಲ್ಲಿ ನಾಕಾರು ಬಿಳಿಕೂದಲು ನುಸುಳಿವೆ. ಆಗೊಮ್ಮೆ, ಈಗೊಮ್ಮೆ ಮದುವೆಗಳಲ್ಲೋ, ಹುಟ್ಟು ಹಬ್ಬದ ಪಾರ್ಟಿಯಲ್ಲೋ, ಯಾರದೋ ಎಂಗೇಜ್ಮೆಂಟಿನಲ್ಲೋ ನೀನು ಕಾಣಿಸಿಕೊಳ್ತೀಯ. ಮೊದಲಿನಂತೆಯೇ ಮಾತಾಡಿಸ್ತೀಯ ನಿಜ. ಆದ್ರೆ- ನಿನ್ನೆದುರು ನಿಂತಾಕ್ಷಣ ನಂಗೆ ಹಳೆಯ ಪ್ರೀತಿಯೇ ನೆನಪಾಗಿ ಬಿಡುತ್ತೆ. ಇನ್ನೊಂದ್ಸಲ “ಐ ಲವ್ ಯೂ’ ಅಂದು ಬಿಡಬೇಕು ಅಂತ ಆಸೆಯಾಗಿಬಿಡುತ್ತೆ !
ಹೌದು ಚಿತ್ರಾ, ಇದೇ ಸತ್ಯ. ಎಷ್ಟೋ ದೂರದಲ್ಲಿರುವ ನಿನ್ನುಸಿರು ಈಗಲೂ ನನ್ನೆದೆಗೆ ಮೆತ್ತಿಕೊಂಡಿದೆ. ನಾವು ಹಿಂದೆಂದೋ ಆಡಿದ ಮಾತು ಮಂದಗಾಳಿಯಂತೆ ಕೇಳುತ್ತಲೇ ಇದೆ. ನಟ್ಟಿರುಳು ಮಳೆಯ ಸದ್ದಿನಂತೆ ಆ ಕ್ಷಣಗಳ ನೆನಪು ಬರುತ್ತಲೇ ಇದೆ. ನಾನು, ಆ ನೆನಪುಗಳ ಮಧ್ಯೆಯೇ ಸುಖಿಸುತ್ತಾ ನಿದ್ದೆ ಬಾರದ ರಾತ್ರಿಗಳನ್ನು ಕಳೆಯುತ್ತಿದ್ದೇನೆ. ಆದರೂ ಸುಖವಾಗಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದೇನೆ !
ಇದು, ಈವಾಗಿನ ನನ್ನ ಪಾಡು. ಹೇಳು, ನೀನು ಹೇಗಿದ್ದೀ ?
ಹಳೆಯ ಗೆಳೆಯ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: