ಆಕೆ ಸಾವನ್ನೇ ಗೆದ್ದಳು!

null

ನಿಮಗೆ ಒಂದು ಕಥೆ ಹೇಳಬೇಕು.
ಅದು-ಯಮರಾಯನಿಗೆ ಸವಾಲು ಹಾಕಿ ಗೆದ್ದ ಹೆಣ್ಣು ಮಗಳೊಬ್ಬಳ ಕಥೆ. ಮಗಳಿಗಾಗಿ ತನ್ನನ್ನೇ ಮರೆತು ಬದುಕಿಬಿಟ್ಟ, ದೇವರನ್ನೂ ಮೀರಿಸಿದ ಅಪ್ಪನ ಕಥೆ. ನೊಂದವರಿಗೆ; ಅಸಹಾಯಕರಿಗೆ; ಬದುಕಲ್ಲಿ ಭರವಸೆಯನ್ನೇ ಕಳೆದುಕೊಂಡವರಿಗೆ ಮತ್ತು ಸಣ್ಣದೊಂದು ಸಂಕಟಕ್ಕೆ ಹೆದರಿಕೊಂಡು ಆತ್ಮಹತ್ಯೆಯಂಥ ಹೇಯಕೃತ್ಯಕ್ಕೆ ಮುಂದಾಗುವವರಿಗೆ ‘ಪಾಠ’ ಆಗುವಂಥ ಕಥೆ.
ನಮ್ಮ ಕಥಾನಾಯಕಿಯ ಹೆಸರು-ಜಾಕ್ವೆಲಿನ್ ಸಬುರಿಡೋ ಗಾರ್ಸಿಯಾ. ಈಕೆ, ಅಮೆಂಡೋ-ರೊಸಾಲಿನಾ ದಂಪತಿಯ ಒಬ್ಬಳೇ ಮಗಳು. ಅಮೆಂಡೋಗೆ ದೊಡ್ಡದೊಂದು ಫ್ಯಾಕ್ಟರಿಯಿತ್ತು. ತನ್ನ ನಂತರ ಮಗಳು ಫ್ಯಾಕ್ಟರಿ ನೋಡಿಕೊಳ್ಳಲಿ ಎಂದು ಆತ ಇಷ್ಟಪಟ್ಟಿದ್ದ. ಅದೇ ಕಾರಣದಿಂದ ಅವಳನ್ನು ಎಂಜಿನಿಯರಿಂಗ್ ಓದಿಸುತ್ತಿದ್ದ. ಎಲ್ಲ ಶ್ರೀಮಂತರ ಮನೆಯ ಮಕ್ಕಳ ಥರಾನೇ ಜಾಕ್ವೆಲಿನ್ ಕೂಡ ಸಖಥ್ ಸುಂದರಾಂಗಿ ಆಗಿದ್ಲು. ಅವಳು ಕಾಲೇಜಿಗೆ ಬಂದ ದಿನವೇ ಒಬ್ಬ ಸುಂದರಾಂಗ ಅವಳಿಗೆ ಗುಲಾಬಿ ಕೊಟ್ಟ. ಒಂದೆರಡೇ ತಿಂಗಳಲ್ಲಿ-ಅವರ ಲವ್ವು ಪಾಸಾಯಿತು. ಅವಳು ಅಪ್ಪನಿಗೆ ಎಲ್ಲವನ್ನೂ ಹೇಳಿಕೊಂಡಳು. ಆ ವೇಳೆಗೆ ಅದೇಕೋ ಏನೋ, ಅಮೆಂಡೋ-ರೊಸಾಲಿನಾ ದಾಂಪತ್ಯದಲ್ಲಿ ಒಡಕು ಕಾಣಿಸಿಕೊಂಡಿತ್ತು. ರೊಸಾಲಿನಾ ಗಂಡನಿಗೆ ಗುಡ್ಬೈ ಹೇಳಿ ಹೋಗಿಯೂ ಬಿಟ್ಟಿದ್ದಳು. ಮಗಳ ಪ್ರೇಮದ ಕಥೆ ಕೇಳಿದ ಅಮೆಂಡೋ, ತನ್ನ ಸಂಕಟವನ್ನೂ ಒಂದೆರಡೇ ಮಾತುಗಳಲ್ಲಿ ಹೇಳಿಕೊಂಡ. ನಂತರ- ‘ನಿನ್ನ ಬಾಯ್ಫ್ರೆಂಡ್ಗೆ ನಾನು ಕೇಳ್ದೆ ಅಂತ ಹೇಳು ಮಗಳೇ. ನಿಮ್ಮ ಮದುವೆಗೆ ನಾನು ಒಪ್ಕೊಂಡಿದೀನಿ’ ಅಂದ.
ಈ ಖುಷಿಯಲ್ಲೇ ಅವಳು ಗೆಳತಿಯೊಬ್ಬಳ ಬರ್ತ್ಡೇ ಪಾರ್ಟಿಗೆ ಹೋದಳು. ಅವತ್ತು ಸೆಪ್ಟೆಂಬರ್ ೧೯, ೧೯೯೯. ಪಾರ್ಟಿ ಮುಗಿದಾಗ ರಾತ್ರಿ ಹತ್ತೂವರೆ! ಆದಷ್ಟೂ ಬೇಗ ಹಾಸ್ಟೆಲ್ ತಲುಪಿಕೊಳ್ಳೋಣ ಎಂಬ ಅವಸರದಲ್ಲೇ ಗೆಳತಿಯರ ಹಿಂಡಿನೊಂದಿಗೆ ಕಾರು ಹತ್ತಿದಳು ಜಾಕ್ವೆಲಿನ್. ಎಲ್ಲರೂ ಹರಟಿಕೊಂಡು, ಪರಸ್ಪರ ಜೋಕ್ ಮಾಡಿಕೊಂಡು, ಹಾಡು ಹೇಳಿಕೊಂಡು ಬರುತ್ತಿದ್ದಾಗಲೇ ಎದುರಿನಿಂದ ವಿಮಾನದ ವೇಗದಲ್ಲಿ ಬಂದ ಕಾರೊಂದು, ಜಾಕ್ವೆಲಿನ್ ಇದ್ದ ಕಾರಿಗೆ ಡಿಕ್ಕಿ ಹೊಡೆಯಿತು. ಹೌದು. ಡಿಕ್ಕಿ ಹೊಡೆಸಿದ ಕಾರಲ್ಲಿದ್ದ ಎಲ್ಲರೂ ಕುಡಿದಿದ್ದರು. ಡಿಕ್ಕಿಯ ರಭಸ ಹೇಗಿತ್ತು ಅಂದರೆ, ಜಾಕ್ವೆಲಿನ್ ಜತೆಗಿದ್ದ ಐವರು ಗೆಳತಿಯರೂ ಕೆಲವೇ ನಿಮಿಷಗಳಲ್ಲಿ ಸುಟ್ಟು ಕರಕಲಾದರು.
ಸುದ್ದಿ ತಿಳಿದ ತಕ್ಷಣವೇ ಆಂಬುಲೆನ್ಸ್ ಧಾವಿಸಿ ಬಂತು. ಕಾರೊಳಗಿದ್ದ ಹುಡುಗಿಯರ ಶವಗಳನ್ನು ಸ್ಟ್ರೆಚರ್ಗೆ ಎತ್ತಿಕೊಂಡು ಹೋಗಲು ಬಂದ ಸಿಬ್ಬಂದಿ, ಜಾಕ್ವೆಲಿನ್ಳನ್ನು ಕಂಡು ನಂಬಲಾಗದೆ ನಂಬಿ ಉದ್ಗರಿಸಿದರು: ‘ಭಗವಂತಾ, ಈ ಹುಡುಗಿ ಇನ್ನೂ ಬದುಕಿದ್ದಾಳೆ! ಆದರೆ ಆಕೆ ಜಾಸ್ತಿ ಹೊತ್ತು ಬದುಕೋದಿಲ್ಲ ಅನಿಸುತ್ತೆ…’
ವೈದ್ಯರು ತಡಮಾಡಲಿಲ್ಲ. ತಕ್ಷಣವೇ ಅಮೆಂಡೋಗೆ ಸುದ್ದಿ ಮುಟ್ಟಿಸಿದರು. ಆತ ಮಿಂಚಿನ ವೇಗದಲ್ಲಿ ಓಡಿಬಂದ. ಮಗಳು ಐಸಿಯುನಲ್ಲಿ ಕ್ಷಣ ಕ್ಷಣವೂ ಸಾವಿನ ಜತೆ ಹೋರಾಡ್ತಾ ಇದ್ದಾಳೆ ಎಂಬುದು ಕೆಲವೇ ಕ್ಷಣದಲ್ಲಿ ಅವನಿಗೆ ಅರ್ಥವಾಗಿ ಹೋಯಿತು. ಉಹುಂ, ಇದು ಅಳುವ ಕ್ಷಣವಲ್ಲ ಅಂದುಕೊಂಡು ತನ್ನನ್ನು ತಾನೇ ನಿಗ್ರಹಿಸಿಕೊಂಡ. ನಂತರ ವೈದ್ಯರ ಬಳಿ ಹೋಗಿ ಹೇಳಿದ: ಡಾಕ್ಟರ್, ದುಡ್ಡಿನ ಮುಖ ನೋಡಬೇಡಿ. ಅದೆಷ್ಟೇ ಖರ್ಚಾದರೂ ಸರಿ, ನನ್ನ ಮಗಳನ್ನು ಉಳಿಸಿಕೊಡಿ, ಪ್ಲೀಸ್…
ವೈದ್ಯರು, ಅಮೆಂಡೋನನ್ನೇ ಒಮ್ಮೆ ಅನುಕಂಪದಿಂದ ನೋಡುತ್ತಾ ಒಂದು ಮೂಲೆಗೆ ಕರೆದುಕೊಂಡು ಹೋಗಿ ಹೇಳಿದರು: ‘ಸರ್, ನಿಮ್ಮ ಸೆಂಟಿಮೆಂಟ್ ಅರ್ಥವಾಗುತ್ತೆ. ಆದ್ರೆ ನಾನು ಹೇಳ್ತಿರೋದನ್ನು ಪೂರ್ತಾ ಕೇಳಿ. ನಿಮ್ಮ ಮಗಳು ಶೇ.೯೫ ಭಾಗ ಸುಟ್ಟು ಹೋಗಿದ್ದಾಳೆ. ಆಕೆಯ ಕಣ್ಣು, ಕಿವಿ, ತಲೆಗೂದಲು, ತುಟಿ, ಕೆನ್ನೆ, ಕೈ ಬೆರಳು ಸಂಪೂರ್ಣವಾಗಿ ಸುಟ್ಟು ಹೋಗಿವೆ. ಒಂದು ಕಿವಿ, ಒಂದು ಕಣ್ಣು ಮಾತ್ರ ಪರವಾಗಿಲ್ಲ ಅನ್ನುವಂತಿವೆ. ಅವು ಯಾವ ಕ್ಷಣದಲ್ಲಾದ್ರೂ ಹಾಳಾಗಬಹುದು. ಮೂಗಿನ ಎರಡೂ ಹೊಳ್ಳೆಗಳೂ ಸುಟ್ಟು ಹೋಗಿವೆ. ಬೆರಳುಗಳೆಲ್ಲ ಸುಟ್ಟು ಹೋಗಿ ಅಲ್ಲಿ ಕೀವು ತುಂಬಿಕೊಂಡಿದೆ. ಅದೇ ಕಾರಣದಿಂದ ಎರಡೂ ಮುಂಗೈಗಳನ್ನು ಕತ್ತರಿಸಬೇಕಿದೆ. ಕಾಲ್ಬೆರಳುಗಳ ಗತಿ ಕೂಡ ಹಾಗೇ ಆಗುತ್ತೆ. ಮುಖದ ಕಥೆ ಹೇಳೋದೇ ಬೇಡ. ವೈದ್ಯರಾಗಿ, ನಮಗೇ ಸುಮ್ಮನೇ ಎರಡು ಸೆಕೆಂಡ್ ನೋಡೋದಕ್ಕೂ ಅಸಹ್ಯ ಆಗುತ್ತೆ. ಚರ್ಮ ಸುಟ್ಟಿದೆ ನೋಡಿ, ಅದೇ ಕಾರಣಕ್ಕೆ ಗಾಯದಲ್ಲಿ ಮೇಲಿಂದ ಮೇಲೆ ಕೀವು ತುಂಬಿಕೊಳ್ಳುತ್ತೆ. ಅಂಥ ಮಗಳ ಜತೆ ಬದುಕಿದ್ರೆ ಇನ್ಫೆಕ್ಷನ್ ಆಗಿ ನಿಮಗೂ ರೋಗ ಬರಬಹುದು. ಹಾಗಾಗಿ ಮಗಳ ಬಗ್ಗೆ ಆಸೆ ಇಟ್ಕೋಬೇಡಿ. ಅವಳು ಸತ್ತು ಹೋದಳು ಅಂದುಕೊಳ್ಳಿ…’
ಡಾಕ್ಟರ್ ಹೇಳಿದ್ದನ್ನೆಲ್ಲ ತಾಳ್ಮೆಯಿಂದ ಕೇಳಿಸಿಕೊಂಡ ಅಮೆಂಡೊ ಕಡೆಗೊಮ್ಮೆ- ‘ಡಾಕ್ಟ್ರೇ, ಒಂದು ವೇಳೆ ಆಕೆ ನಿಮ್ಮ ಮಗಳೇ ಆಗಿದ್ರೆ ಆಗ್ಲೂ ಹೀಗಂತಿದ್ರಾ?’ ಅಂದುಬಿಟ್ಟ. ಈ ಮಾತು ಕೇಳಿದ್ದೇ- ಮಗಳ ನೆನಪಾಯಿತೇನೋ… ಆ ವೈದ್ಯ ತಕ್ಷಣವೇ ಕಣ್ಣೊರೆಸಿಕೊಂಡು- ಓ.ಕೆ. ಈಗ ಟ್ರೀಟ್ಮೆಂಟ್ ಶುರುಮಾಡ್ತೀನಿ. ನಿಮ್ಮ ಮಗಳನ್ನು ಉಳಿಸಿಕೊಳ್ಳೋಣ. ಆದ್ರೆ ಇಲ್ಲಿ ಕಷ್ಟ. ಅಮೆರಿಕದ ಟೆಕ್ಸಾಸ್ನಲ್ಲಿ ಆಕೆಗೆ ಒಳ್ಳೆಯ ಚಿಕಿತ್ಸೆ ಸಿಗುತ್ತೆ’ ಅಂದರು.
ಮರುದಿನವೇ ವಿಶೇಷ ಹೆಲಿಕ್ಯಾಪ್ಟರ್ನಲ್ಲಿ ಮಗಳನ್ನು ಟೆಕ್ಸಾಸ್ನ ಆಸ್ಪತ್ರೆಗೆ, ಅಮೆಂಡೊ ಕರೆ ತಂದೇಬಿಟ್ಟ. ಸಾವಿನೊಂದಿಗೆ ಜಾಕ್ವೆಲಿನ್ಳ ಹೋರಾಟ ಶುರುವಾಗಿದ್ದೇ ಆಗ.
***
‘ಅಮ್ಮ ಇಲ್ಲದ ಮಕ್ಕಳಿಗೆ ಅಪ್ಪನೇ ಅಮ್ಮ ಆಗ್ತಾನೆ’ ಎಂಬ ಮಾತಿದೆ. ಜಾಕ್ವೆಲಿನ್ಳ ವಿಷಯದಲ್ಲಿ ಹೀಗೇ ಆಯಿತು. ಅಮೆಂಡೋ ಮಗಳನ್ನು ಕ್ಷಣಕ್ಷಣವೂ ಬಿಡದೆ ಕಾಯ್ದುಬಿಟ್ಟ. ೧೯೯೯ರಿಂದ ೨೦೦೨ರವರೆಗೆ, ಅಖಂಡ ಮೂರು ವರ್ಷಗಳ ಕಾಲ ಆಸ್ಪತ್ರೆಯಲ್ಲಿದ್ದಳಲ್ಲ, ಆ ಅವಧಿಯಲ್ಲಿ ಒಂದೆರಡಲ್ಲ, ೪೮ ಆಪರೇಶನ್ಗಳಾದವು- ಜಾಕ್ವೆಲಿನ್ಳ ದೇಹದ ಮೇಲೆ! ಪ್ರತಿಯೊಂದು ಬಾರಿಯೂ ಏನೇ ಹೆಚ್ಚು ಕಡಿಮೆಯಾದರೂ ಅದಕ್ಕೆ ನಾನೇ ಜವಾಬ್ದಾರ ಎಂದು ಅಮೆಂಡೋ ಪತ್ರ ಬರೆದುಕೊಡುತ್ತಿದ್ದ. ಟೆಕ್ಸಾಸ್ನಲ್ಲಿ ಸ್ಪಾನಿಶ್ ಭಾಷೆಯಲ್ಲಿ ವ್ಯವಹರಿಸುವುದು ಕಷ್ಟ ಅನ್ನಿಸಿದಾಗ ಶ್ರದ್ಧೆಯಿಂದ ಕೆಲವೇ ದಿನದಲ್ಲಿ ಇಂಗ್ಲಿಷ್ ಕಲಿತುಬಿಟ್ಟ. ದಿನದ ಇಪ್ಪತ್ನಾಲ್ಕು ಗಂಟೆಯ ಅವಧಿಯಲ್ಲಿ ತಲಾ ಎರಡು ಗಂಟೆಗೆ ಒಂದು ಬಾರಿ ಜಾಕ್ವೆಲಿನ್ಗೆ ಐ ಡ್ರಾಪ್ಸ್ ಮತ್ತು ಇಯರ್ ಡ್ರಾಪ್ಸ್ ಹಾಕಬೇಕಿತ್ತು. ಆ ಕೆಲಸವನ್ನು ಇನ್ನಿಲ್ಲದ ಶ್ರದ್ಧೆಯಿಂದ ಮಾಡಿದ. ರಾತ್ರಿಯ ವೇಳೆ- ಸುಟ್ಟ ಗಾಯಗಳಿಂದ ಬರುತ್ತಿದ್ದ ವಾಸನೆಯಿಂದ ಅದೆಷ್ಟೋ ಬಾರಿ ತಲೆ ಸುತ್ತು ಬಂದು ಬಿದ್ದ. ಆದರೂ ಅಸಹ್ಯ ಪಡದೆ ಮಗಳ ಮುಂದೆ ಒಂದು ಛೇರ್ ಹಾಕಿಕೊಂಡೇ ಕೂತುಬಿಡುತ್ತಿದ್ದ. ಪ್ರತಿ ಎರಡು ಗಂಟೆಗೊಮ್ಮೆ ಡ್ರಿಪ್ಸ್ ಬದಲಿಸುತ್ತಿದ್ದ. ಐ ಡ್ರಾಪ್ಸ್ ಹಾಕುತ್ತಿದ್ದ. ಮಗಳು ಒಂದೇ ಕಣ್ಣಲ್ಲಿ ಹಾಗೇ ಸುಮ್ಮನೆ ನೋಡಿದರೆ- ‘ಹೆದರಬೇಡ, ನಾನಿದ್ದೇನೆ’ ಎನ್ನುತ್ತಿದ್ದ.
ಅಮೆಂಡೋನ ಈ ಶ್ರದ್ಧೆ, ಟೆಕ್ಸಾಸ್ನ ಎಲ್ಲ ವೈದ್ಯರ ಕಣ್ತೆರೆಸಿತು. ಅದುವರೆಗೂ ಸುಟ್ಟು ಗಾಯದ ಹುಡುಗಿ ಎಂದು ತಾತ್ಸಾರ ಮಾಡುತ್ತಿದ್ದವರೆಲ್ಲ ಜಾಕ್ವೆಲಿನ್ಳ ಬಗ್ಗೆ ವಿಶೇಷ ಕಾಳಜಿ ತಗೊಂಡರು. ಜಾಕ್ವೆಲಿನ್ಗೆ ಬೆಡ್ಶೀಟ್ ಹೊದಿಸಲೂ ಹಿಂಜರಿಯುತ್ತಿದ್ದ ನರ್ಸ್ಗಳು ತಾವಾಗಿಯೇ ಸೇವೆಗೆ ನಿಂತರು. ಮಗಳು ತೊದಲಿಸಿಕೊಂಡು ಮಾತಾಡಲು ಶುರು ಮಾಡಿದಾಗ ಈ ಅಮೆಂಡೊ, ಹಠಕ್ಕೆ ಬಿದ್ದು ಅವಳಿಗೂ ಇಂಗ್ಲಿಷ್ ಕಲಿಸಿಬಿಟ್ಟ. ಆನಂತರ- ‘ನೋಡು ಮಗಳೇ, ನಿನಗೀಗ ಕೈ-ಕಾಲಿನ ಬೆರಳುಗಳಿಲ್ಲ. ಮೂಗು, ಕಿವಿ, ಕಣ್ಣು ಯಾವುದೂ ಸರಿಯಾಗಿಲ್ಲ. ಬೆನ್ನ ಹಿಂದೆ ಇಳಿಬೀಳುತ್ತಿದ್ದ ಜಡೆಯಿಲ್ಲ. ಗೋಧಿ ಬಣ್ಣದ ಮೈಕಾಂತಿ- ಎಂದೆಂದೂ ಮರಳಿ ಸಿಗೊಲ್ಲ. ಆದರೆ ಮಗಳೇ, ನಿನ್ನೊಂದಿಗೆ ನಾನಿರ್ತೀನಿ. ಈ ಮೊದಲು ಇಷ್ಟಪಡ್ತಿದ್ದೆ ನೋಡು, ಅದಕ್ಕಿಂತ ಎರಡು ಪಟ್ಟು ಜಾಸ್ತಿ ಇಷ್ಟಪಡ್ತೀನಿ. ಐ ಲವ್ ಯೂ ಟಿಲ್ ಮೈ ಡೆತ್… ಅಂದುಬಿಟ್ಟ.
ಈ ವೇಳೆಗೆ ಜಾಕ್ವೆಲಿನ್ಗೂ ಎಲ್ಲ ಅರ್ಥವಾಗಿತ್ತು. ಅಮೆಂಡೋನ ಸಾಹಸದ ಬಗ್ಗೆ ವೈದ್ಯರೆಲ್ಲ ಹೇಳುತ್ತಿದ್ದರಲ್ಲ, ಆಗೆಲ್ಲ ಅವಳಿಗೆ ಸಂಕಟವಾಗುತ್ತಿತ್ತು. ಅಳಲು ಕಣ್ತುಂಬಿಕೊಂಡರೆ ಸಾಕು, ವೈದ್ಯರು ಸರಭರನೆ ಬಂದು ‘ಅಳಬೇಡಮ್ಮಾ, ಸೆಪ್ಟಿಕ್ ಆಗಿ ಇರುವ ಕಣ್ಣು ಕೂಡ ಹಾಳಾಗಿಬಿಡುತ್ತೆ’ ಅನ್ನುತ್ತಿದ್ದರು. ಉಳಿದದ್ದು ಏನೇ ಇರಲಿ, ಅಪ್ಪನ ಪ್ರೀತಿಯನ್ಣೂ ಪಡೆಯಲಿಕ್ಕಾದ್ರೂ ನಾನು ಬದುಕಲೇಬೇಕು ಅಂದುಕೊಂಡಳು ಜಾಕ್ವೆಲಿನ್. ಅದೇ ಕಾರಣದಿಂದ ಎಷ್ಟೇ ನೋವಾದರೂ ಹೇಳಿಕೊಳ್ಳದೆ
ಎಲ್ಲವನ್ನೂ ಸಹಿಸಿಕೊಂಡಳು. ಆದರೆ ಒಂದಲ್ಲ, ಅಖಂಡ ಎರಡು ವರ್ಷ ಆಸ್ಪತ್ರೆಯ ವಾರ್ಡ್ನಲ್ಲೇ ಅಟೆಂಡರ್ಗಿಂತ ಹೆಚ್ಚಾಗಿ ಅಲೆದಾಡಿ, ತನ್ನ ಸೇವೆ ಮಾಡಿದ ಅಪ್ಪನನ್ನು ಕಂಡು- ‘ನಾನು ಯಾರಿಗೋ ಹಿಂದಿನ ಜನ್ಮದಲ್ಲಿ ಅನ್ಯಾಯ ಮಾಡಿದ್ದೆ ಅನಿಸುತ್ತೆ. ಅದಕ್ಕೇ ದೇವರು ಇಂಥ ಶಿಕ್ಷೆ ಕೊಟ್ಟಿದ್ದಾನೆ. ಅಲ್ವೇನಪ್ಪಾ’ ಅಂದುಬಿಟ್ಟಳು. ಅಮೆಂಡೊ ತಕ್ಷಣವೇ ‘ಛೆ ಛೆ, ಹಾಗಲ್ಲ ಕಂದಾ. ಹಿಂದೆ ಯಾವತ್ತೋ ನಾನು ಮಾಡಿದ್ದ ತಪ್ಪಿಗೆ ದೇವರು ಹೀಗೆ ಶಿಕ್ಷೆ ಕೊಟ್ಟಿದಾನೆ. ನಿನ್ನ ಸೇವೆ ಮಾಡಿ ನನ್ನ ಪಾಪವೆಲ್ಲ ಕಳೆದು ಹೋಗ್ತಿದೆ’ ಅಂದ.
ಈ ಅಪ್ಪ ಮಗಳ ಹೋರಾಟಕ್ಕೆ ಕಡೆಗೂ ಯಮರಾಯ ಸೋತು ಹೋದ. ಟೆಕ್ಸಾಸ್ನ ಆಸ್ಪತ್ರೆಯ ವೈದ್ಯರ ನಿರೀಕ್ಷೆಯನ್ನೇ ಉಲ್ಟಾ ಆಗಿಸಿ ಜಾಕ್ವೆಲಿನ್ ಬದುಕಿಬಿಟ್ಟಳು. ವೈದ್ಯರು ಜಾಕ್ವೆಲೀನ್ಳ ವಿಲ್ಪವರ್ ಕಂಡು ಬೆರಗಾದರು. ಒಂದೆರಡಲ್ಲ, ನಲವತ್ತೆಂಟು ಆಪರೇಷನ್ ಮಾಡಿಸಿಕೊಂಡ ನಂತರವೂ ಬದುಕಬಹುದು ಎಂಬುದಕ್ಕೆ ಜಾಕ್ವೆಲೀನ್ ಸಾಕ್ಷಿಯಾದಳು. ಈ ಎಲ್ಲ ವಿವರವನ್ನೂ ಪತ್ರಿಕೆಗಳಲ್ಲಿ ಓದಿದ ಅಮೆಂಡೋನ ಹೆಂಡತಿ ರೋಸಾಲೀನಾ ಮರಳಿ ಅಮೆಂಡೋನ ಮನೆಗೆ-ಮನಕ್ಕೆ ವಾಪಸಾದಳು.
ನಂಬಿ, ನಾಲ್ಕು ವರ್ಷದ ಚಿಕಿತ್ಸೆಯ ನಂತರ ಜಾಕ್ವೆಲೀನ್ ಹೇಗಿದ್ದಾಳೆ ಎಂಬುದನ್ನು ವಿವರಿಸಲು ಇಲ್ಲಿ ಚಿತ್ರಗಳಿವೆ. ಯಮನನ್ನೇ ಹೆದರಿಸಿ ಕಳಿಸಿದ ಜಾಕ್ವೆಲಿನ್ ಈಗ ಅಮೆಂಡೊ, ಮಾರ್ಗದರ್ಶನದಲ್ಲಿ ಅದೇ ಮೋಟು ಕೈಗಳಿಂದ ಬರೆಯುತ್ತಾಳೆ. ಕಾರು ಓಡಿಸುತ್ತಾಳೆ. ತನ್ನ ಎಲ್ಲ ಕೆಲಸವನ್ನೂ ತಾನೇ ಮಾಡುತ್ತಾಳೆ. ಅಪ್ಪನ ಅಷ್ಟೂ ಆಸ್ತಿಯನ್ನು ಯಾವುದಾದ್ರೂ ಅನಾಥಾಶ್ರಮಕ್ಕೆ ದಾನ ಮಾಡ್ತೇನೆ ಅಂದಿದ್ದಾಳೆ. ನಾಲ್ಕು ಕಾಸು ಸಿಕ್ಕಿದ್ರೂ ದಾನ ಮಾಡಿ ನಮ್ಮಪ್ಪನಿಗೆ ಒಳ್ಳೆದಾಗಲಿ ದೇವರೇ ಎಂದು ಪ್ರಾರ್ಥಿಸುತ್ತಾಳೆ. ಈ ಅಮೆಂಡೊ ಆಗೆಲ್ಲಾ ಮಗಳ ಕೈ ಹಿಡಿದು- ‘ನೀನೇ ನನ್ನ ದೇವರು ಕಂದಾ’ ಅನ್ನುತ್ತಾನೆ.
***
ಈಗ ಯೋಚಿಸಿ. ಶೇ. ೯೯ರಷ್ಟು ಕುರೂಪ ಹೊಂದಿದ್ದರೂ ಬದುಕೇ ಬದುಕ್ತೀನಿ ಎನ್ನುತ್ತಿರುವ ಜಾಕ್ವೆಲೀನ್, ಸಣ್ಣ ಸಂಕಟಕ್ಕೆ ಡಿಪ್ರೆಶನ್ಗೆ ಈಡಾಗುವ; ಪದೇ ಪದೆ ಸಾವಿನ ಮಾತಾಡುವ ಎಲ್ಲರಿಗೂ ಒಂದು ಪಾಠದಂತಿದೆ, ಅಲ್ಲವೆ?
ಪೂರ್ವಿ ಕಳಿಸಿದ ಕಥೆಯಲ್ಲಿ- ದೇವರು ಯಾರು? ಅಮೆಂಡೋನೋ ಅಥವಾ ಜಾಕ್ವೆಲಿನ್ನೋ…

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: