ನಮ್ಮಣ್ಣ…ದೊಡ್ಡಣ್ಣ..

null

ಅವರು ದೊಡ್ಡ ಖುಷಿಯಲ್ಲಿ ಹೇಳುತ್ತಿದ್ದರು: ‘ಹದಿನೈದು ದಿನದ ಹಿಂದೆ ಏನಾಯ್ತು ಗೊತ್ತ? ಹಾಗೇ ಸುಮ್ನೆ ಚಾಮರಾಜಪೇಟೆಗೆ; ಅಲ್ಲಿನ ವಿಆರ್ಎಲ್ ಆಫೀಸ್ಗೆ ಹೋಗಿದ್ದೆ. ಅಲ್ಲಿಂದ ಹೊರಬರುವಾಗ ‘ಚಲನಚಿತ್ರ ಕಲಾವಿದರ ಸಂಘ’ ಅನ್ನೋ ಬೋರ್ಡು ಕಾಣಿಸ್ತು. ಕುತೂಹಲದಿಂದ ಆ ಕಡೆ ನೋಡಿದ್ರೆ- ಅಲ್ಲಿ, ಅಚ್ಚ ಬಿಳಿ ಜುಬ್ಬಾ. ಪೈಜಾಮದ ಗೆಟಪ್ಪಿನಲ್ಲಿ ದೊಡ್ಡಣ್ಣ ಇದ್ರು. ಅದುವರೆಗೂ ಸಿನಿಮಾದಲ್ಲಿ ನೋಡಿದ್ದೆಷ್ಟೋ ಅಷ್ಟೆ. ಅಂಥ ದೊಡ್ಡಣ್ಣ ಕಣ್ಣೆದುರಿಗೇ ಇದ್ದರು. ಸಿನಿಮಾದಲ್ಲಿ ಖಳನಾಗಿ ಅಬ್ಬರಿಸುತ್ತಿದ್ದರಲ್ಲ- ಅದೆಲ್ಲ ದಿಢೀರ್ ನೆನಪಾಗಿ ಬಿಡ್ತು. ಈಗ ಪರಿಚಯ ಹೇಳಿಕೊಂಡರೂ ಆಸಾಮಿ ವಿಲನ್ ಥರಾನೇ ರೇಗಿದ್ರೆ ಗತಿ ಏನು ಅಂದುಕೊಂಡೆ. ಸಣ್ಣ ಹೆದರಿಕೆಯಾಯ್ತು. ಆದರೂ ಧೈರ್ಯ ತಂದುಕೊಂಡು- ‘ನಮಸ್ಕಾರ ಸಾರ್. ನಾನು ನಿಮ್ಮ ಅಭಿಮಾನಿ. ಒಂದು ನಿಮಿಷ ನಿಮ್ಜೊತೆ ಮಾತಾಡ್ಬೇಕು ಅಂತ ಆಸೆ’ ಅಂದುಬಿಟ್ಟೆ…
ಪವಾಡ ಜರುಗಿದ್ದೇ ಆಗ. ಸಿನಿಮಾಗಳಲ್ಲಿ ಚಿತ್ರಮಂದಿರವೇ ನಡುಗುವಂತೆ ಅಬ್ಬರಿಸುವ ದೊಡ್ಡಣ್ಣ-ತಕ್ಷಣ ಎದ್ದು ನಿಂತರು. ಕೈ ಮುಗಿದರು. ‘ನಿಮ್ಮ ಹೆಸರೇನು ಸ್ವಾಮೀ’ ಅಂದ್ರು. ಆಮೇಲೆ ಒಂದೊಂದೇ ಮಾತಾಡ್ತಾ ಮಾತಾಡ್ತ ಭರ್ತಿ ಹತ್ತು ನಿಮಿಷ ಮಾತಾಡಿದ್ರು. ಆಮೇಲೆ, ಇನ್ನೊಂದ್ಸಲ ಸಿಗೋಣ. ನಿಮ್ಮ ಪರಿಚಯವಾದದ್ದು ಖುಷಿ ಕೊಡ್ತು ಎಂದರು. ಮೊಬೈಲ್ನಲ್ಲಿ ನಿಮ್ಮ ಫೋಟೊ ತೆಗೀಲಾ ಅಂದೆ. ನನ್ನ ಸೈಜು ಅಲ್ಲಿ ಹಿಡಿಸಲ್ಲ ಸಾರ್ ಎಂದು ಜೋರಾಗಿ ನಕ್ಕು, ಫೋಸು ಕೊಟ್ಟು. ನಂತರ, ಕೈ ಜೋಡಿಸಿ, ಬೀಳ್ಕೊಟ್ಟರು. ಅವರ ಸರಳತೆ, ಆಪ್ತ ಮಾತುಗಾರಿಕೆ, ಎಲ್ಲರೊಳಗೊಂದಾಗುವ ಗುಣ ವಿಪರೀತ ಇಷ್ಟವಾಯಿತು. ಅನುಮಾನವೇ ಬೇಡ. ದೊಡ್ಡಣ್ಣ-ಕನ್ನಡ ಚಿತ್ರರಂಗದ ‘ದೊಡ್ಡ ಅಣ್ಣ’!
ಹಿರಿಯರಾದ ದೊಡ್ಡಣ್ಣ ಅವರೆ, ನಿಮ್ಮ ‘ಅಭಿಮಾನಿಯೊಬ್ಬರು’ ಹೀಗೆಲ್ಲಾ ಮೈಮರೆತು ಮಾತಾಡಿದ ಒಂದೆರಡೇ ದಿನಗಳಲ್ಲಿ ದೊಡ್ಡಣ್ಣ ಡೈರೆಕ್ಟರ್ ಆಗ್ತಾರಂತೆ ಎಂಬ ಸುದ್ದಿ ಗಾಂಧಿನಗರದಿಂದ ಸೇರಿಬಂತು. ನಿಮಗೊಂದು ಪತ್ರ ಬರೀಬೇಕು ಅನಿಸಿದ್ದು; ಆ ನೆಪದಲ್ಲಿ ಹಳೆಯ ದಿನಗಳತ್ತ ನಿಮ್ಮನ್ನು ಕರೆದೊಯ್ದು ಹೀಗೇ ಒಂದಿಷ್ಟು ಹೇಳಬೇಕು ಅನಿಸಿದ್ದು ಆಗಲೇ…
***
ಹೌದಲ್ವ ಸಾರ್? ಮೊದಲು ಭದ್ರಾವತಿಯ ಐರನ್ ಅಂಡ್ ಸ್ಟೀಲ್ ಫ್ಯಾಕ್ಟರಿಯಲ್ಲಿ ಕೆಲಸಕ್ಕಿದ್ದವರು ನಾವು. ಆಗ ಸಾಕಷ್ಟು ತೆಳ್ಳಗಿದ್ರಿ. ಚಿತ್ರರಂಗಕ್ಕೆ ಬಣ್ಣ ಹಚ್ಚಿ ಮಿಂಚಬೇಕು ಅಂತ ನಿಮಗೇನೋ ಆಸೆಯಿತ್ತು. ಆದರೆ, ಆ ದಿನಗಳಲ್ಲಿ; ಅಂದರೆ ಮೂವತ್ತು ವರ್ಷದ ಹಿಂದೆ ಛಾನ್ಸೇ ಸಿಗುತ್ತಿರಲಿಲ್ಲ. ಅದು ವಜ್ರಮುನಿ, ತೂಗುದೀಪ ಶ್ರೀನಿವಾಸ್, ಶಕ್ತಿ ಪ್ರಸಾದ್, ಧೀರೇಂದ್ರ ಗೋಪಾಲರ ರಾಜದರ್ಬಾರಿನ ಕಾಲ. ವಿಲನ್ಗಳು ಅಂದಾಕ್ಷಣ ನಮಗೆ ಅವರೇ ನೆನಪಾಗಿಬಿಡ್ತಿದ್ರು. ಇನ್ನು ಜೋಕರ್ ಥರದ ಪಾತ್ರಗಳಿಗೆ ಎನ್ನೆಸ್ರಾವು, ಮುಸುರಿ ಕೃಷ್ಣಮೂರ್ತಿ, ಮುಖ್ಯಮಂತ್ರಿ ಚಂದ್ರು ಮುಂತಾದವರು ಬ್ರ್ಯಾಂಡ್ ಆಗಿಬಿಟ್ಟಿದ್ರು. ಅದೇ ಕಾರಣದಿಂದ ಮೊದಲು ಮೊದಲು ನಿಮಗೆ ಅಂಥ ಒಳ್ಳೇ ಛಾನ್ಸು ಸಿಗಲೇ ಇಲ್ಲ.
ಆದ್ರೆ, ಅದೊಮ್ಮೆ ಸಿದ್ದಲಿಂಗಯ್ಯನವರು ಕರೆದು ಛಾನ್ಸು ಕೊಟ್ಟೇಬಿಟ್ರು. ಬೆಳ್ಳಿ ಪರದೆಯಷ್ಟೇ ಉದ್ದದ, ಚೂಪು ಕಣ್ಣಿನ ರಾಜಾ ಮೀಸೆಯ, ಸಿಡಿಗುಂಡಿನಂಥ ಅಬ್ಬರದ ನಿಮ್ಮ ಡೈಲಾಗಿಗೆ ಮೊದಲ ಚಿತ್ರದಲ್ಲೇ ಚಪ್ಪಾಳೆ ಮೇಲ್ ಚಪ್ಪಾಳೆ! ಜನ ಗುರುತಿಸಿಬಿಟ್ರು. ‘ಇವನ್ಯಾರೋ ದೊಡ್ಡಣ್ಣ ಅಂತೆ ಕಣ್ರೀ. ಹೊಸಬ. ಭಾಳಾ ಜೋರಾಗಿದಾನೆ. ವಿಲನ್ ಪಾರ್ಟು ಸಖತ್ತಾಗಿ ಮಾಡ್ತಾನೆ. ವಜ್ರಮುನಿ ಥರಾನೇ ಗುರುಗುಡ್ತಾನೆ ಅಂತೀನಿ…’ ಎಂದೆಲ್ಲ ಕಾಮೆಂಟ್ ಮಾಡಿದರು. ನಿಮ್ಮೊಳಗಿನ ವಿಲನ್ನು ಅದ್ಯಾವ ರೀತಿ ನೋಡಿದವರ ಮನದಲ್ಲಿ ‘ರಿಜಿಸ್ಟರ್’ ಆಗಿಬಿಟ್ಟಿದ್ದ ಅಂದ್ರೆ- ಕ್ಲೈಮ್ಯಾಕ್ಸ್ನಲ್ಲಿ ಹೀರೊಗಳು ಒಂದೊಂದೇ ಏಟು ಕೊಡ್ತಾ ಇದ್ರಲ್ಲ-ಆ ಕ್ಷಣದಲ್ಲಿ ಪ್ರೇಕ್ಷಕರೆಲ್ಲ ಅದು ಸಿನಿಮಾ ಅನ್ನೋದನ್ನು ಮರೆತು- ‘ಇನ್ನೊಂದೆರಡು ಹಾಕು ಅವನ್ಗೆ’ ಎಂದು ಆರ್ಡರ್ ಕೊಡುತ್ತಿದ್ದರು.
ಆಮೇಲಾಮೇಲೆ ಪ್ರತಿ ಸಿನಿಮಾಗಳಲ್ಲೂ ನಿಮಗೆ ವಿಲನ್ ಪಾತ್ರವೇ ಗಟ್ಟಿಯಾಯಿತು. ಅದೇ ಅಬ್ಬರ, ಅದೇ ಹಿಂಸೆ, ಅದದೇ ಡೈಲಾಗು ಕೇಳಿದವರೆಲ್ಲ-ಅಯ್ಯೋ, ಇಷ್ಟೇನಾ? ದೊಡ್ಡಣ್ಣ ಅಂದ್ರೆ ಇಷ್ಟೇನಾ? ಈತನೊಳಗಿನ ಕಲಾವಿದನಿಗೆ ಸವಾಲಾಗುವಂಥ ಪಾತ್ರ ಸಿಗೋದೇ ಇಲ್ವ? ಬರೀ ಚಿಲ್ಟು ಪಲ್ಟು ಹೀರೊಗಳಿಂದ ಕೂಡ ಈ ಹಿರಿಯ ನಟ ಪರದೆಯ ಮೇಲೆ ಏಟು ತಿನ್ನಬೇಕಾ? ಎಂದೆಲ್ಲ ಹತ್ತು ಹಲವು ಬಾರಿ ಕೇಳಿಕೊಂಡಾಗ ಬಂದೇ ಬಿಡ್ತಲ್ಲ- ಬೆಳ್ಳಿ ಮೋಡಗಳು? ಈ ಮಾತನ್ನು ಬೇಕಾದ್ರೆ ನೀವು ಹೊಗಳಿಕೆ ಅಂತಾನೇ ತಗೊಳ್ಳಿ ಸಾರ್- ‘ಬೆಳ್ಳಿ ಮೋಡಗಳು’ ಸಿನಿಮಾದ ಅಜ್ಜನ ಪಾತ್ರವಿದೆಯಲ್ಲ? ವಾಹ್, ಅದೊಂದು ವಂಡರ್, ಅದೊಂದು ಅದ್ಭುತ. ಅಲ್ಲಿ ನಿಮ್ಮೊಳಗಿದ್ದ ನಟ ಆ ಸಿನಿಮಾವನ್ನೂ ಮೀರಿ ಮಿಂಚಿಬಿಟ್ಟ. ಆ ಸಿನಿಮಾ ರಿಮೇಕ್ ಅಲ್ಲವೇ ಅಲ್ಲ ಅನ್ನುವಷ್ಟರ ಮಟ್ಟಿಗೆ ನಿಮ್ಮ ಅಭಿನಯವಿತ್ತು. ದೊಡ್ಡಣ್ಣ ಅಂದ್ರೆ ಏನು ಎಂಬ ಪ್ರಶ್ನೆಗೆ ಅಲ್ಲಿ ಉತ್ತರವಿತ್ತು. ದೊಡ್ಡಣ್ಣನಿಗೆ ದೊಡ್ಡಣ್ಣ ಮಾತ್ರ ಸಾಟಿ ಎಂಬ ಮಾತಿಗೆ ಅಲ್ಲಿ ಸಾಕ್ಷಿಯಿತ್ತು.
ಹೇಳಿ, ಆಮೇಲಾಮೇಲೆ ನೀವು ಅದ್ಯಾಕಿಷ್ಟು ಡುಮ್ಮಣ್ಣ ಆಗಿಬಿಟ್ರಿ? ಹೇಗಿದ್ರೂ ಹೆಸರೇ ದೊಡ್ಡಣ್ಣ ಅಂತಿತ್ತು ಅಲ್ವ? ನೀವು ತೆಳ್ಳಗಿದ್ರೂನೂ ನಾವೆಲ್ಲ ‘ದೊಡ್ಡಣ್ಣ’ ಅಂತಾನೇ ಕರೀತಿದ್ವಿ. ಆದ್ರೆ, ಒಂದೊಂದು ಸಿನಿಮಾದಲ್ಲೂ ನಿಮ್ಮ ದಿಲ್ ಪಸಂದ್ ಅಭಿನಯ ಕಂಡು ‘ನಮ್ ದೊಡ್ಡಣ್ಣ, ನಮ್ ದೊಡ್ಡಣ್ಣ’ ಅಂತ ನಾವು ಖುಷಿಯಿಂದ ಕರೆದ್ರೆ ನೀವು ಡುಮ್ಮಣ್ಣ ಆಗಿಬಿಡೋದಾ?
ನಿಮ್ಮ ಹೊಸ ಅವತಾರ ಕಂಡಾಗ ಗಾಂಧಿನಗರದ ಮಂದಿ ಆ ಕಡೆ ತಿರುಗಿ ನಕ್ಕರು. ‘ಈಪಾಟಿ ದಪ್ಪ ಆದ್ರಲ್ಲ? ಅವರಿಗೆ ಯಾರಪ್ಪಾ ಇನ್ಮೇಲೆ ಪಾತ್ರ ಕೊಡ್ತಾರೇ’ ಎಂದು ಕುಹಕವಾಡಿದ್ರು. ಉಹುಂ, ಅದನ್ನೆಲ್ಲ ನೀವು ಕೇರೇ ಮಾಡಲಿಲ್ಲ. ಬದಲಿಗೆ ಹೊಸ ಗೆಟಪ್ಪಿನಲ್ಲೂ ಹಳೆಯ ಉತ್ಸಾಹವನ್ನೇ ಉಳಿಸಿಕೊಂಡ್ರಿ. ವಿಲನ್ ಪಾತ್ರದಿಂದ ಹಾಸ್ಯನಟನ ಪಾತ್ರಕ್ಕೆ ಪ್ರೊಮೋಷನ್ (?) ಸಿಕ್ಕಾಗ ಮೀಸೆ ತೆಗೆದ್ರಿ. ಪಟಾಪಟಿ ಚೆಡ್ಡಿ-ಬನಿಯನ್ ಹಾಕ್ಕೊಂಡು ಅಭಿನಯಿಸೋದಕ್ಕೂ ಮುಂದಾಗಿಬಿಟ್ರಿ. ಖಳನಾಗಿ ಹಾಗೂ ಹಾಸ್ಯ ನಟನಾಗಿ ಅಭಿನಯಿಸಿದ ಬಹುತೇಕ ಸಿನಿಮಾಗಳು ನಮ್ಮ ಮನರಂಜಿಸಿವೆ. ಹಾಗಾಗಿ ಇಂಥ ಸಿನಿಮಾದಲ್ಲೇ ನೀವು ಗ್ರೇಟು ಅಂತ ಹೇಳುವ ಬದಲು- ಖಳ ಹಾಗೂ ಹಾಸ್ಯ ಪಾತ್ರಗಳಿಗೆ ಒಂದು ಖದರ್ ತಂದವರು ನೀವು ಅಂತ ಮಾತ್ರ ಹೇಳಬಹುದೇನೋ… ಆದ್ರೂ ಹೇಳೋದಾದ್ರೆ- ಒಂದು ‘ಸೂರ್ಯವಂಶ’, ಇನ್ನೊಂದು ‘ಯಾರೇ ನೀನು ಚೆಲುವೆ’ ಮತ್ತೊಂದು ‘ಡಕೋಟ ಎಕ್ಸ್ಪ್ರೆಸ್’ನ ನಿಮ್ಮ ಪಾತ್ರಗಳನ್ನು ಮರೆಯೋದಾದ್ರೂ ಹೇಗೆ ಸಾರ್?
ನಮ್ ದೊಡ್ಡಣ್ಣ ಅಂದುಕೊಂಡ ಹೀಗೆಲ್ಲ ಲೆಕ್ಕ ಹಾಕ್ತಾ ಇರೋವಾಗಲೇ- ‘ನಿಮ್ಮ ಮನೆಯೊಳಗೊಂದು ಹುತ್ತ ಇದೆ’ ಎಂಬ ಸಂಗತಿ ನೆನಪಾಗುತ್ತದೆ. ಒಂದು ಹೆದರಿಕೆಯನ್ನು ಅಂಗೈಲಿ ಹಿಡಿದುಕೊಂಡೇ ‘ಸಾರ್, ನಿಮ್ಮ ಮನೆಯೊಳಗೆ ಹಾವಿದೆ…’ ಎಂದು ತಡವರಿಸಿದರೆ- ಅದೇ ನಿರುಮ್ಮಳ ಧ್ವನಿಯಲ್ಲಿ ನೀವು ಹೇಳ್ತೀರಿ: ‘ನಮ್ಮ ಮನೇಲಿ ನಾಗರಾಜ ಇದಾನೆ. ಮುಖ್ಯವಾದ ಮಾತು ಅಂದ್ರೆ ನಾವಿದ್ದ ಜಾಗಕ್ಕೆ ಅವನು ಬಂದಿಲ್ಲ. ನಮಗೆ ಸೈಟ್ ಸಿಕ್ತಲ್ಲ, ಅಲ್ಲಿ ಹುತ್ತ ಇತ್ತು. ಅದನ್ನು ಕಿತ್ತು ಹಾಕಿ ಮನೆ ಕಟ್ಟೋದು ಅನಾಗರಿಕ ವರ್ತನೆ ಅನ್ನಿಸ್ತು. ಹಾಗಾಗಿ ಹುತ್ತವನ್ನು ಉಳಿಸಿಕೊಂಡೇ ಮನೆ ಕಟ್ಟಿದ್ವಿ. ಅಲ್ಲಿಗೆ ಹಾವು ಇದ್ದ ಜಾಗಕ್ಕೆ ನಾವೇ ಹೋದಂತಾಗಿದೆ. ಹುತ್ತದ ಜಾಗದಲ್ಲಿ ದೇವಸ್ಥಾನ ಕಟ್ಟಿದ್ದೇವೆ. ಈ ಹಿಂದೆ ಅಲ್ಲಿ ನಮಗೆ ಹಾವು ಕಾಣಿಸಿಕೊಂಡಿದೆ. ಮೊದಮೊದಲು ಭಯವಾಗಿದ್ದು ನಿಜ. ಆದರೆ, ನಾವು ಯಾರಿಗೂ ಕೆಟ್ಟದ್ದು ಮಾಡಿಲ್ಲ. ಹಾಗಾಗಿ ದೇವರು ಯಾವತ್ತೂ ನಮಗೆ ಕೆಡುಕು ಮಾಡಲ್ಲ ಅಂದ್ಕೊಂಡು ಬದುಕ್ತಾ ಇದೀವಿ. ಈ ಪ್ರಾಮಾಣಿಕ ನಂಬಿಕೆಯೇ ನಮ್ಮನ್ನು ಈವರೆಗೂ ಕಾಪಾಡಿದೆ. ಮುಂದೆಯೂ ಕಾಪಾಡಲಿದೆ. ಇತ್ತೀಚೆಗೆ ಹೆಚ್ಚಿದ ವಾಹನಗಳ ಗದ್ದಲದಿಂದ ನಾಗರಾಜ ನಮ್ಮ ಕಣ್ಣಿಗೆ ಬಿದ್ದಿಲ್ಲ. ಆದರೆ ಅವನ ಹಾರೈಕೆಯಂತೂ ನಮಗಿದ್ದೇ ಇದೆ…’
ಹೌದು ಸರ್, ಇಂಥ ಮಾತು ಕೇಳಿದಾಗೆಲ್ಲ- ದೊಡ್ಡಣ್ಣ, ಎಲ್ಲ ರೀತಿಯಲ್ಲೂ ದೊಡ್ಡಣ್ಣ ಅಂತ ಖುಷಿಯಿಂದ ಚೀರಬೇಕು ಅನ್ನಿಸಿಬಿಡ್ತದೆ.
***
ಸರ್, ಒಂದು ಪ್ರಶ್ನೆ. ಹೇಳಿ ಕೇಳಿ ಮಗು ಮನಸ್ಸಿನ ಆಸಾಮಿ ನೀವು. ಅಂಥವರು, ಬಣ್ಣ ಹಚ್ಕೊಂಡಾಗ ಮಾತ್ರ ಆ ಬ್ರಹ್ಮ ರಾಕ್ಷಸ ಕೂಡ ಹೆದರುವ ಹಾಗೆ ಅಬ್ಬರಿಸ್ತೀರಲ್ಲ? ಒಮ್ಮೆ ಕಣ್ಣು ಮೆಡ್ಡರಿಸಿ, ಮೂಗು ಅರಳಿಸಿ, ಕೆನ್ನೆಗಳನ್ನು ಕುಣಿಸಿ, ಹಣೆಯ ನೆರಿಗೆಗಳನ್ನು ಎತ್ತಿ ಎತ್ತಿ ಕುಣಿಸಿ ಪೋಷಕ ನಟನನ್ನು ಖಲ್ಲಾಸ್ ಮಾಡ್ತೀರಲ್ಲ? ಅಂಥ ಸಂದರ್ಭದಲ್ಲೆಲ್ಲ ನಿಮಗೆ ಒಂಥರಾ ಆಗಲ್ವ? ಹೆಣ್ಣು ಮಕ್ಕಳ ಬಗ್ಗೆ ವಿಪರೀತ ಗೌರವ ಹೊಂದಿರುವ ನೀವೇ, ಸಿನಿಮಾದಲ್ಲಿ ತುಂಬ ಕೆಟ್ಟ ಡೈಲಾಗು ಹೇಳಬೇಕಾಗಿ ಬಂದಾಗ ಮನೇಲಿ ಮಕ್ಕಳೇ ನಿಮ್ಮ ಪಾತ್ರ ಮೆಚ್ಚದಿದ್ದಾಗ, ಬಂಧುಗಳು ಕೂಡ ಕೊಂಕು ನುಡಿದಾಗ ‘ಹಿಂಸೆ’ ಅನ್ನಿಸಲ್ವ? ಒಂದು ಕೆಟ್ಟ ಡೈಲಾಗು, ಒಂದು ಕೆಟ್ಟ ಪಾತ್ರ ‘ಅಭಿನಯ’ ಮುಗಿದ ನಂತರವೂ ನಿಮ್ಮ ಮನದೊಳಗೆ ಚಿಮುಟದ ಥರಾ ಆಡಿ ನೋವು ಕೊಡಲ್ವ? ರಿಯಲ್ ಲೈಫ್ನಲ್ಲಿ ‘ಹೀರೋ’ ಥರಾ ಇದ್ರೂ ರೀಲ್ ಲೈಫ್ನಲ್ಲಿ ಅನಿವಾರ್ಯವಾಗಿ ವಿಲನ್ ಆದವರು ಹೇಗಿರ್ತಾರೆ? ಪಾತ್ರಗಳು ಅವರನ್ನು ಹೇಗೆಲ್ಲಾ ಕಾಡುತ್ತವೆ ಎಂದು ತಿಳಿವ ಕುತೂಹಲದಿಂದಷ್ಟೇ ಈ ಪ್ರಶ್ನೆ ಕೇಳ್ತಾ ಇದೀನಿ. ಉತ್ತರ ಹೇಳಿ ಸಾರ್…
ಒಂದು ದೊಡ್ಡ ಸಂತೋಷ ಅಂದ್ರೆ, ನಿಮಗೆ ಭ್ರಮೆಗಳಿಲ್ಲ. ಚಿತ್ರರಂಗದಿಂದ ನನಗೆ ಎಲ್ಲವೂ ಸಿಕ್ಕಿದೆ ಎಂದು ಖುಷಿಯಿಂದಲೇ ಹೇಳಿಬಿಡ್ತೀರಲ್ಲ- ಹಾಗಾಗಿ ನಿಮ್ಮ ನೋವು ಯಾರಿಗೂ ಗೊತ್ತಾಗೋದೂ ಇಲ್ಲ. ಅದೇ ಕಾರಣದಿಂದ ಜನ- ‘ಇದ್ರೆ ನಮ್ಮ ದೊಡ್ಡಣ್ಣನ ಥರಾ ಇರಬೇಕು ಕಣ್ರೀ. ಚಿತ್ರರಂಗದಲ್ಲಿ ಆತ ಅಜಾತಶತ್ರು. ಎರಡೂವರೆ ದಶಕಗಳ ಕಾಲ ಚಿತ್ರರಂಗದಲ್ಲಿದ್ರೂ ಜಂಭ ಎಂಬುದು ಅವರ ಹತ್ತಿರ ಸುಳಿದಿಲ್ಲ. ದ್ವೇಷ ಎಂಬ ಪದವೇ ಆತನಿಗೆ ಗೊತ್ತಿಲ್ಲ. ಶೂಟಿಂಗ್ ಇಲ್ಲ ಅಂದ್ರೆ ಆರಾಮಾಗಿ ಕೂತು ಪುಸ್ತಕ ಓದ್ತಾ ಇರ್ತಾರೆ. ಅವರ ಹತ್ರ ಅಪರೂಪದ ಸಾವಿರಾರು ಪುಸ್ತಕ ಇವೆಯಂತೆ…!’ ಎಂದೆಲ್ಲ ಮಾತಾಡಿಕೊಳ್ತಾರೆ.
ಹೀಗಿರುವಾಗಲೇ – ಮೈ ಡಿಯರ್ ದೊಡ್ಡಣ್ಣಾ… ನೀವು ನಿರ್ದೇಶಕರಾಗಲು ಹೊರಟಿದ್ದೀರಿ. ಈ ಹಿಂದೆ ಸಿದ್ದಲಿಂಗಯ್ಯ, ಪುಟ್ಟಣ್ಣ ಕಣಗಾಲ್ ಜತೆಗಿದ್ದ ಸಂದರ್ಭವನ್ನು; ಅವರಿಂದ ಕಲಿತ ಪಾಠವನ್ನು ನೆನಪು ಮಾಡ್ಕೋತಾ ಇದೀರಿ. ಹಿಂಸೆ, ಡಬ್ಬಲ್ ಮೀನಿಂಗು, ಐಟಂ ಸಾಂಗ್ ಇರದಂಥ; ಕುಟುಂಬ ಸಮೇತ ನೋಡುವಂಥ ನೀಟ್ ಸಿನಿಮಾ ಕೊಡಬೇಕು ಅನ್ನೋದು ನನ್ನ ಆಸೆ ಎಂದು ಹೇಳಿಕೊಂಡಿದೀರಿ. ಡೈರೆಕ್ಷನ್ ಮಾಡೋದು ದೊಡ್ಡ ಸವಾಲು. ಅದು ತುಂಬಾ ಕಷ್ಟದ ಕೆಲಸ ಅದೇ ಕಾರಣದಿಂದ ನನ್ನ ನಿರ್ದೇಶನದ ಸಿನಿಮಾದಲ್ಲಿ ನಾನು ನಿಟಿಸೋದಿಲ್ಲ ಎಂದೂ ಹೇಳಿಬಿಟ್ಟಿದ್ದೀರಿ! ಈ ಒಂದು ಮಾತು ಕೇಳಿದಾಗ್ಲೇ- ನಿಮ್ಮ ಬಾಯಿಗೆ ಮೈಸೂರು ಪಾಕು ಹಾಕಬೇಕು ಅನ್ನಿಸಿಬಿಟ್ಟಿದೆ. ಯಾಕಂದ್ರೆ ‘ನಟ’ ದೊಡ್ಡಣ್ಣನನ್ನು ನಾವೆಲ್ಲ ನೋಡಿದ್ದಾಗಿದೆ. ‘ನಿರ್ದೇಶಕ’ ದೊಡ್ಡಣ್ಣನನ್ನು ನೋಡುವ ಕಾತುರ ಹೆಚ್ಚಾಗಿದೆ. ಇಂಥ ಸಂದರ್ಭದಲ್ಲಿ ಎರಡೂ ದೋಣೀಲಿ ಕಾಲಿಟ್ಟು ಆಟ ಕೆಟ್ಟುಹೋದ್ರೆ ಎಂಬ ಭಯವನ್ನು ನೀವೇ ನಿವಾರಿಸಿದ್ದೀರಿ. ಅದಕ್ಕಾಗಿ ನಿಮಗೆ ಥ್ಯಾಂಕ್ಸ್, ಅಭಿನಂದನೆ, ನಮಸ್ಕಾರ. ನಿಮ್ಮ ಹೊಸ ಸಾಹಸ ಈಗಿಂದಲೇ ಶುರುವಾಗಲಿ- ರೆಡೀ, ಆಕ್ಷನ್, ಸ್ಟಾರ್ಟ್!
ಸ್ವಲ್ಪ ಮತ್ತು ಜಾಸ್ತಿ ಪ್ರೀತಿಯಿಂದ…

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: