ಚಂಬಲ್ ಕಣಿವೆಯಲ್ಲಿ ಸೃಷ್ಟಿಯಾಯಿತು ಮರುಳು ಮಾಡುವ ಹಾಡು!

Ashwath And LN Bhat

Ashwath And LN Bhat

ಎಂಥ ಮರುಳಯ್ಯಾ ಇದು ಎಂಥಾ ಮರುಳು…
ಚಿತ್ರ: ಸ್ಪಂದನ. ಗೀತೆ ರಚನೆ: ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ
ಸಂಗೀತ: ಅಶ್ವಥ್-ವೈದಿ. ಗಾಯನ: ಎಸ್.ಪಿ. ಬಾಲಸುಬ್ರಹ್ಮಣ್ಯಂ
ಎಂಥ ಮರುಳಯ್ಯಾ ಇದು ಎಂಥಾ ಮರುಳು
ಬೆಳಗಿನ ಹಿಮದಂತೆ ಹರಿವಾ ನೆರಳು
ಫಳಫಳ ಮಿನುಗಿ-ಸೋಕಲು ಕರಗಿ
ಸರಿವುದು ಈ ಬಾಳಿನೆಲ್ಲಾ ತಿರುಳು|| ಎಂಥಾ ಮರುಳಯ್ಯಾ||

ಹರಿಯುವ ನೀರಿಗೆ ಯಾವ ಹೊಣೆ?
ಹಾರುವ ಹಕ್ಕಿಗೆ ಎಲ್ಲಿ ಮನೆ?
ಬಾಳಿನ ಕಡಲಿನ ತೆರೆಗಳ ಸೀಳಿ
ತಲುಪುವುದಾಚೆಯ ದಡದ ಕೊನೆ|| ಎಂಥಾ ಮರುಳಯ್ಯಾ||

ಸಂಜೆಯ ನೇಸರ ಬಣ್ಣದ ಲೀಲೆ
ನೀರಲಿ ಹಾರುತ ಬೆಳ್ಳಕ್ಕಿ ತೇಲೆ
ಕಡಲಿಗೆ ಸಾಲಾಗಿ ಮೂಡುತ ಮುಳುಗುತ
ಬೆನ್ನಟ್ಟಿ ಸಾಗುವ ತೆರೆಗಳ ಹಾಳೆ
ಸೃಷ್ಟಿಯೆ ಸುಂದರ ಸುಳ್ಳಿನ ಮಾಲೆ|| ಎಂಥಾ ಮರುಳಯ್ಯಾ||
ಮೂವತ್ತು ವರ್ಷಗಳ ಹಿಂದೆ ತೆರೆಕಂಡ ಸ್ಪಂದನ ಚಿತ್ರದ ಒಂದು ಸನ್ನಿವೇಶ: ಅದು ಸೂರ್ಯಾಸ್ತದ ಸಮಯ. ನಾಯಕ ದೋಣಿಯಲ್ಲಿ ಕೂತು ನದಿ ದಾಟುವ ಸಂದರ್ಭ. ಅಂಬಿಗ ಸಾವಕಾಶವಾಗಿ ಹುಟ್ಟು ಹಾಕುತ್ತಿರುತ್ತಾನೆ. ನಾಯಕ ತನ್ನೆದುರು ತೆರೆದುಕೊಂಡ ಪ್ರಕೃತಿಸಿರಿಯನ್ನೇ ಮೈಮರೆತು ನೋಡುತ್ತಿರುತ್ತಾನೆ. ಆಗಲೇ-ಹಾಗೇ ಸುಮ್ಮನೆ ತೇಲಿ ಬಂದ ಸುಮದ ಪರಿಮಳದಂತೆ; ಗೆಳತಿಯ ತುಂಟಾಟದ ಸ್ಯಾಂಪಲ್ಲಿನಂತೆ; ಆಗಷ್ಟೇ ನಡೆಯಲು ಕಲಿತ ಮಗುವಿನ ಹೆಜ್ಜೆ ಸದ್ದಿನಂತೆ `ಮರುಳು ಮಾಡುವ’ ಹಾಡೊಂದು ಅಲೆಯಲೆಯಾಗಿ ಕೇಳಿಬರುತ್ತದೆ: `ಎಂಥಾ ಮರುಳಯ್ಯ ಇದು ಎಂಥಾ ಮರುಳು/ಬೆಳಗಿನ ಹಿಮದಂತೆ ಸರಿವಾ ನೆರಳು/ ಥಳಥಳ ಮಿನುಗಿ-ಸೋಕಲು ಕರಗಿ…’
ಅನುಮಾನವೇ ಬೇಡ. ಇದೊಂದು ಅಮರಗೀತೆ, ಮಧುರಗೀತೆ, ಎಲ್ಲ ಕಾಲಕ್ಕೂ ಸಲ್ಲುವಂತಿರುವ ಈ ಗೀತೆ, ಕವಿ ಲಕ್ಷ್ಮೀನಾರಾಯಣ ಭಟ್ಟರ ಅನುಪಮ ಸೃಷ್ಟಿ. ಏಕಕಾಲಕ್ಕೆ ತತ್ತ್ವಪದ, ಭಾವಗೀತೆ, ಪ್ರಕೃತಿ ವರ್ಣನೆಯ ಗೀತೆ, ಮಧುರ ಚಿತ್ರಗೀತೆ….ಎಲ್ಲವೂ ಆಗಿಬಿಡುವುದು ಈ ಗೀತೆಯ ಹೆಚ್ಚುಗಾರಿಕೆ. ಮೂರು ದಶಕಗಳಿಂದಲೂ ಕನ್ನಡಿಗರನ್ನು ಕಾಡುತ್ತಲೇ ಇರುವ ಈ ಹಾಡು ಸೃಷ್ಟಿಯಾದದ್ದು ಬೆಳದಿಂಗಳ ರಾತ್ರಿಯಲ್ಲಿ. ಅದೂ, ದೂರದ ಚಂಬಲ್ ಕಣಿವೆಯಲ್ಲಿ ಅಂದರೆ ನಂಬುತ್ತೀರಾ?
ನಂಬಲೇ ಬೇಕು. ಯಾಕೆಂದರೆ ಇದು ನಿಜ.
ಈ ಮರುಳು ಮಾಡುವ ಹಾಡಿಗೂ, ಚಂಬಲ್ ಕಣಿವೆಗೂ ಎಲ್ಲಿಂದೆಲ್ಲಿಯ ಸಂಬಂಧ?ಎಂಬ ಕುತೂಹಲದ ಪ್ರಶ್ನೆಗೆ ಇಲ್ಲಿ ಉತ್ತರವಿದೆ. ಅದು ೧೯೭೭ರ ಜಮಾನಾ. ನಟ ಸಿ.ಆರ್. ಸಿಂಹ ನೇತೃತ್ವದ `ನಟರಂಗ’ಕ್ಕೆ ಕವಿ ಲಕ್ಷ್ಮೀನಾರಾಯಣ ಭಟ್ಟರು ಶೂದ್ರಕನ `ಮೃಚ್ಛಕಟಿಕ’ ನಾಟಕದ ಕನ್ನಡಾನುವಾದ ಮಾಡಿಕೊಟ್ಟಿದ್ದರು. ದಿಲ್ಲಿಯಲ್ಲಿ ನಡೆಯಲಿದ್ದ ಕನ್ನಡ ರಾಜ್ಯೋತ್ಸವದಲ್ಲೇ ನಾಟಕದ ಮೊದಲ ಪ್ರದರ್ಶನವೆಂದು ನಿರ್ಧಾರವಾಗಿತ್ತು.
ನಾಟಕದ ಮೊದಲ ಪ್ರದರ್ಶನ, ಅದೂ ದೂರದ ದಿಲ್ಲಿಯಲ್ಲಿ ಅಂದಮೇಲೆ ಕೇಳಬೇಕೆ? `ನಟರಂಗ’ದ ಎಲ್ಲರಿಗೂ ಹಿಗ್ಗೋಹಿಗ್ಗು. ಸಿಂಹ ಅವರ ಸಾರಥ್ಯದಲ್ಲಿ ನಾಟಕಕ್ಕೆ ಸಂಗೀತ ನಿರ್ದೇಶನ ಮಾಡಿದ್ದ ಸಿ. ಅಶ್ವತ್ಥ್, ಕವಿ ಲಕ್ಷ್ಮೀನಾರಾಯಣ ಭಟ್ಟರು-ಸೇರಿದಂತೆ ಒಟ್ಟು ನಲವತ್ತೈದು ಮಂದಿ ರೈಲಿನಲ್ಲಿ ದಿಲ್ಲಿಗೆ ಹೊರಟರು.
ತಂಡದ ಎಲ್ಲ ಸದಸ್ಯರೂ ಒಂದೇ ಬೋಗಿಯಲ್ಲಿದ್ದರು. ಹಾಗಾಗಿ ತಿಂಡಿ-ತೀರ್ಥದ ಸಮಾರಾಧನೆ ಜೋರಾಗಿಯೇ ನಡೆಯುತ್ತಿತ್ತು. ನಾಟಕ ತಂಡದವರ ಹಾಡು-ಕುಣಿತ-ತಮಾಷೆ-ಕೇಕೆಯ ಮಧ್ಯೆಯೇ ಹಗಲು ಕಳೆದು ಕತ್ತಲಾಯಿತು. ಅದು ಬೆಳದಿಂಗಳ ರಾತ್ರಿ, ರೈಲು ಓಡುತ್ತಿದ್ದುದು ಚಂಬಲ್ ಕಣಿವೆಯಲ್ಲಿ. ನಮ್ಮ ಶಿರಾಡಿಘಾಟ್ನ ತಿರುವುಗಳಂತೆ ಕಾಣುತ್ತಿದ್ದ ಆ ಪ್ರದೇಶದಲ್ಲಿ ಚಂದ್ರನ ಬೆಳಕು ಸುಮ್ಮನೇ ಒಮ್ಮೆ ತೇಲಿಹೋದರೆ ನೆರಳು ಬೆಳಕಿನ ಆಟ ನಡೆದಂತೆ ಕಾಣುತ್ತಿತ್ತು.
ಮುಂದೆ ಏನಾಯಿತು ಎಂಬುದನ್ನು ಕವಿ ಲಕ್ಷ್ಮೀನಾರಾಯಣ ಭಟ್ಟರ ಮಾತುಗಳಲ್ಲೇ ಕೇಳಬೇಕು. ಓವರ್ ಟು ಲ.ನಾ. ಭಟ್: `ನನ್ನ ಪಕ್ಕದಲ್ಲಿ ಕುಳಿತಿದ್ದ ಅಶ್ವತ್ಥ್, ಯಾವುದೋ ರಾಗ ಹಾಕುತ್ತ, ಸಿಗರೇಟನ್ನು ಭಂಗಿಯಂತೆ ಸೇದುತ್ತ ಆನಂದದ ಅಮಲಿನಲ್ಲಿದ್ದರು. ಏನಾಯಿತೋ ಏನೋ- ಹಠಾತ್ತನೆ ನನ್ನ ಕಡೆ ತಿರುಗಿ `ಒಂದು ಕವಿತೆ ಕೊಡಿ ಮೇಸ್ಟ್ರೇ. ಸೊಗಸಾದ ರಾಗ ಉಡಿಸಿಬಿಡುತ್ತೇನೆ’ ಎಂದರು. ಅದು, ಬುದ್ಧಿಗೆ ಮಂಕು ಕವಿಸುವ ಬೆಳದಿಂಗಳ ರಾತ್ರಿ, ರೈಲು ಯಾವುದೋ ಅಪರಿಚಿತ ಕಾಡು ಮರಗಳ ನಡುವೆ ಇರುಳಿನ ಗೂಢತೆಯನ್ನು ಸೀಳುವಂತೆ ಸಾಗುತ್ತಿತ್ತು. ನಾನೂ ಲಹರಿಯಲ್ಲಿದ್ದೆ. ರೈಲಿನ ತಾಳದಲ್ಲಿ ಹಳೆಯ ಸ್ಮೃತಿಯೊಂದು ನೆಪಕ್ಕೆಂಬಂತೆ ಬಿಚ್ಚಿಕೊಂಡಿತು. ಬಳಿಯಲ್ಲಿದ್ದ ಸಿಗರೇಟು ಪ್ಯಾಕಿನ ಕಾಗದದ ಮೇಲೆ `ಎಂಥಾ ಇರುಳಯ್ಯ ಇದು ಎಂಥಾ ಇರುಳು/ಬೆಳಗಿನ ಹಿಮದಂತೆ ಸರಿವಾ ನೆರಳೂ….’ ಎಂದು ಬರೆದೇಬಿಟ್ಟೆ. ನೋಡನೋಡುತ್ತಲೇ ಪದ್ಯ ಸೃಷ್ಟಿಯಾಯಿತು. ಜತೆಗಿದ್ದ ರಾಜಾರಾಮ್ ತಬಲ ಎತ್ತಿಕೊಂಡರು. ಅಶ್ವತ್ಥ್ ಮೈ ಮರೆತು ಹಾಡತೊಡಗಿದರು. ನಾಟಕ ರಂಗದವರ ಚಪ್ಪಾಳೆ ತಾಳದಲ್ಲಿ ಹಾಡು ಗೆರೆಯಾಗಿ, ಝರಿಯಾಗಿ, ತೊರೆಯಾಗಿ, ಹಿರಿಯ ಪ್ರವಾಹವಾಗಿ ಹರಿಯಿತು….’
ನೆನಪಿಡಿ: ಚಂಬಲ್ ಕಣಿವೆಯಲ್ಲಿ ನಿಗೂಢವನ್ನು ಬೇಧಿಸಿಕೊಂಡು ಸಾಗುವ ರೈಲು; ಬೆಳದಿಂಗಳ ತೇಲು ಮೇಲಾಟ, ಆಗೊಮ್ಮೆ, ಈಗೊಮ್ಮೆ ಕಾಣುತ್ತಿದ್ದ ಹಿಮವನ್ನು ನೋಡುತ್ತಾ ಬರೆದ ಹಾಡಿದು! ಹಾಡಿನ ಮೊದಲ ಸಾಲು’ ಎಂಥಾ ಇರುಳಯ್ಯ ಇದು ಎಂಥಾ ಇರುಳು’ ಎಂದಿತ್ತು. ಮುಂದೆ, ಸ್ಪಂದನ ಸಿನಿಮಾ ತಯಾರಾಯಿತಲ್ಲ? ಆಗ ಆ ಸಿನಿಮಾಕ್ಕೆ ಸಂಗೀತ ನಿರ್ದೇಶನದ ಹೊಣೆ ಹೊತ್ತುಕೊಂಡ ಸಿ. ಅಶ್ವತ್ಥ್ ಮತ್ತೆ ಭಟ್ಟರ ಬಳಿ ಬಂದು-`ನೀವು ಬರೆದ ಕವಿತೆಗೇ ಟ್ಯೂನ್ ಮಾಡ್ತೀನಿ. ಒಂದು ಹಾಡು ಕೊಡಿ ಅಂದರು. ತಕ್ಷಣ-`ಎಂಥಾ ಇರುಳಯ್ಯ’ ಎಂಬುದನ್ನು `ಎಂಥಾ ಮರುಳಯ್ಯ’ ಎಂದು ಬದಲಿಸಿ, ಹಳೆಯ ಟ್ಯೂನ್ ಉಳಿಸಿಕೊಂಡು ಇಡೀ ಹಾಡನ್ನೇ ಭಟ್ಟರು ಹೊಸದಾಗಿ ಬರೆದರು…..
ಆ ಹಾಡಿಗೆ ಲೋಕ ಮರುಳಾಗಿದೆ. ಹಿಂದೆ ನಮ್ಮ ಅಪ್ಪಂದಿರು ಅದನ್ನು ಹಾಡಿದ್ದರು. ಈಗ ನಾವು ಹಾಡುತ್ತಿದ್ದೇವೆ. ಮುಂದೆ ನಮ್ಮ ಮಕ್ಕಳೂ ಹಾಡಲಿದ್ದಾರೆ…..

Advertisements

2 Comments »

  1. […] ಮಮಕಾರ’ ಎಂದು ನಂಬುವ ಬ್ಲಾಗಿಗ ಮಣಿಕಾಂತ್ ಚಂಬಲ್ ಕಣಿವೆಯಂಥ ಪ್ರದೇಶದಲ್ಲಿ ಹುಟ್ಟಿದ ಗ…ಯೊಂದರ ಬಗ್ಗೆ ಸ್ವಾರಸ್ಯಕರವಾಗಿ […]

  2. 2
    ವಿಜಯರಾಜ್ ಕನ್ನಂತ Says:

    like thsi


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: