ಪರೋಪಕಾರಿ’ ಶಿವರಾಮಣ್ಣ ಅವರಿಗೆ….

ಹಿರಿಯರಾದ ಶ್ರೀ ಬನ್ನಂಜೆ ಗೋವಿಂದಾಚಾರ್ಯರು ಹೇಳಿದರು: `ನಮ್ಮ ಶಿವರಾಮಣ್ಣ ಅಜಾತ ಶತ್ರು. ಹೌದು, ಅವರು ಎಲ್ಲರಿಗೂ `ನಮ್ಮ’ ಶಿವರಾಮಣ್ಣ. ಯಾರಿಗೂ `ನಿಮ್ಮ’ ಶಿವರಾಮಣ್ಣ ಅಲ್ಲ. ಏಕೆಂದರೆ, ಅವರಿಗೆ ಹಗೆತನ, ದ್ವೇಷ ಎಂದರೆ ಏನೆಂದೇ ಗೊತ್ತಿಲ್ಲ. ಅವರು ಎಲ್ಲರನ್ನೂ ಪ್ರೀತಿಸಿದರು; ಎಲ್ಲರೂ ಅವರನ್ನು ಪ್ರೀತಿಸಿದರು. ಪ್ರೀತಿಯ ಬೀಜವನ್ನು ಬಿತ್ತಿದವರು ಪ್ರೀತಿಯ ಹಣ್ಣನ್ನೇ ಪಡೆಯುತ್ತಾರೆ. ನಿಜ ಜೀವನದಲ್ಲೂ ನಾಟಕ ಆಡುವ ಜನಗಳ ನಡುವೆ ನಟನೆಯಲ್ಲೂ ಸಹಜವಾಗಿ ಬದುಕುವ ಶಿವರಾಮಣ್ಣನಂಥ ಕಲಾವಿದರು ನಮ್ಮ ಕಣ್ಣ ಮುಂದಿರುವ ಅಪ್ಪಟ ಬಂಗಾರ; ಸಮಾಜದ ಸೊತ್ತು; ಸಂಪತ್ತು. ನಲವತ್ತೈದು ವರ್ಷಗಳ ಸುಧೀರ್ಘ ಕಾಲ ಚಿತ್ರರಂಗದಲ್ಲಿದ್ದರೂ ಅವರು ಆಸ್ತಿ ಗಳಿಸಿದವರಲ್ಲ. ಅವರೇ ಒಂದು ಆಸ್ತಿ. ಅವರು ಕೀರ್ತಿ ಬಯಸಿದವರಲ್ಲ. ಅವರೇ ಕನ್ನಡ ಚಿತ್ರರಂಗದ ಕೀರ್ತಿ…’
ಆಚಾರ್ಯರ ಮಾತುಗಳನ್ನೇ ಮತ್ತೆ ಮತ್ತೆ ನೆನಪು ಮಾಡಿಕೊಳ್ಳುತ್ತಾ, ಒಮ್ಮೆ ಅಭಿನಂದಿಸಬೇಕು. ನಮಸ್ಕರಿಸಬೇಕು. ನೆನಪು ಹೇಳಿಕೊಳ್ಳಬೇಕು. ಹಳೆಯ ಜೋಕೊಂದಕ್ಕೆ ನಗೆಯಾಗಬೇಕು ಎಂದುಕೊಂಡೇ ಸುಂದರ ಪ್ರಕಾಶನದ `ಗೌರಿಸುಂದರ್’ ನಡೆಸುತ್ತಿದ್ದ ಅಭಿನಂದನಾ ಕಾರ್ಯಕ್ರಮಕ್ಕೆ ಬಂದರೆ-ಸಭಾಂಗಣದ ತುಂಬ ಜನವೋ ಜನ. ಹೊರಗೂ ಜನ, ಒಳಗೂ ಜನ! ಎಲ್ಲರದ್ದೂ ಒಂದೇ ಮಾತು- `ಎಪ್ಪತ್ತು ತುಂಬಿದ್ದರೂ ಇಪ್ಪತ್ತರ ಹುಡುಗನ ಥರಾ ಚಟುವಟಿಕೆಯಿಂದಿರುವ ಶಿವರಾಮಣ್ಣನಿಗೆ ಅಭಿನಂದನೆ ಹೇಳ್ಬೇಕೂ….’
ಪ್ರೀತಿಯ ಶಿವರಾಮಣ್ಣ, ಅಷ್ಟೊಂದು ಅಭಿಮಾನಿಗಳ ಮಧ್ಯೆ ಅವಸರದಿಂದಲೇ ಬಂದು, ಒಮ್ಮೆ ಅವಸರದಲ್ಲಿ ಕೈ ಕುಲುಕಿ, ಬೊಕೆ ಕೊಟ್ಟು, ಫೋಟೊ ತೆಗೆಸಿಕೊಂಡು ಹೋಗಿಬಿಡುವ ಬದಲು, ಒಂದು ಪತ್ರದ ಮೂಲಕ ನಿಮ್ಮೊಂದಿಗೆ `ಹಾಗೇ ಸುಮ್ಮನೆ’ ಮಾತಾಡಬೇಕು ಅನ್ನಿಸಿತಲ್ಲ? ಆ ನೆಪದಲ್ಲಿಯೇ ಈ ಪತ್ರ…
**
ಹೌದಲ್ವ? ೨೮ ಜನವರಿ ೧೯೩೮ರಂದು ಹುಟ್ಟಿದವರು ನೀವು. ಬೆಂಗಳೂರು-ತಮಿಳ್ನಾಡಿನ ಮಧ್ಯೆ ಇರುವ, ಆನೇಕಲ್ಗೆ ಸಮೀಪದ ಚೂಡಸಂದ್ರ ನಿಮ್ಮೂರು. ನಿಮ್ಮ ತಂದೆ ಸುಬ್ಬರಾಯರು ಆ ಕಾಲಕ್ಕೇ ಹೆಲ್ತ್ ಇನ್ಸ್ಪೆಕ್ಟರ್ ಆಗಿದ್ದವರು. ಅವರಿಗೆ ಲ್ಯಾಂಡ್ಲಾರ್ಡ್ ಎಂದೇ ಹೆಸರಿತ್ತು. ಕನ್ನಡದ ಹೆಮ್ಮೆಯ ಸಾಹಿತಿ ಡಿ.ವಿ.ಜಿ.ಯವರ ಅಜ್ಜಿಯೂ ನಿಮ್ಮ ಅಜ್ಜಿಯೂ ಅಕ್ಕ-ತಂಗಿಯರು. ಹಾಗಾಗಿ ಡಿ.ವಿ.ಜಿ. ಕೂಡ ನಿಮಗೆ ಹತ್ತಿರದ ಬಂಧು. ಇಂಥ ದೊಡ್ಡ ಹಿನ್ನೆಲೆಯ ಕುಟುಂಬದಿಂದ ಬಂದ ನೀವು ಮೊದಲಿಗೆ ಬೆಂಗಳೂರಿನ ಜೆ.ಸಿ. ರಸ್ತೆಗೆ ಹತ್ತಿರವೇ ಇದ್ದ ಶ್ರೀವಾಣಿ ವಾಣಿಜ್ಯ ವಿದ್ಯಾಸಂಸ್ಥೆಯಲ್ಲಿ ಪ್ರಿನ್ಸಿಪಾಲ್ ಆಗಿದ್ರಿ. ಮುಂದೆ, ನಿಮ್ಮಣ್ಣ ರಾಮನಾಥನ್ ನಾಟಕಗಳತ್ತ ಆಕರ್ಷಿತರಾದರಲ್ಲ? ಅದೇ ಕಾರಣದಿಂದ-ನೀವೂ ನಾಟಕ ರಂಗದತ್ತ ಒಲವು ಬೆಳೆಸಿಕೊಂಡ್ರಿ. `ನಾಟಕದಲ್ಲಿ ನಟಿಸಿದರೆ ಮಗ ಕೆಟ್ಟು ಹೋಗ್ತಾನೆ’ ಎಬ ಭಯದಿಂದ ಮನೆಯಲ್ಲಿ ನಟಿಸಬೇಡ ಎಂದು ಕಂಡೀಷನ್ ಹಾಕಿದರೂ ಎಲ್ಲರ ಕಣ್ತಪ್ಪಿಸಿ ನಟಿಸಿ ಚಪ್ಪಾಳೆ ಗಿಟ್ಟಿಸಿದ್ರಿ. ಮುಂದೆ-ರಂಗಭೂಮಿ, ಚಿತ್ರರಂಗ ಎಂದು ಬಡಬಡಿಸುತ್ತಾ, ಗುರುತು ಪರಿಚಯವಿಲ್ಲದ ಯಾವುದೋ ಹುಡುಗಿಯನ್ನು ಮದುವೆಯಾಗಿ ಮಗ ಹಾಳಾಗಿಬಿಡ್ತಾನೆಂದು ಮನೆ ಮಂದಿ ಹೆದರಿಕೊಂಡಾಗ- `ನೀವು ಒಪ್ಪಿದ ಹುಡುಗಿಯನ್ನೇ ಮದುವೆಯಾಗ್ತೇನೆ ಎಂದು ಅಮ್ಮನಿಗೆ ಭಾಷೆ ಕೊಟ್ಟು ಹಾಗೆಯೇ ನಡೆದುಕೊಂಡ್ರಿ …’
ನಿಮ್ಮ ಬಗೆಗಿನ ಇಂಥ ಸಂಗತಿಗಳನ್ನು ಹೇಳುವಾಗಲೆಲ್ಲ ನಮಗೆ ಅದೆಷ್ಟು ಖುಷಿಯಾಗುತ್ತೆ ಗೊತ್ತಾ ಶಿವರಾಮಣ್ಣಾ…
`ತಮ್ಮ ಇಪ್ಪತ್ತೊಂದನೇ ವಯಸ್ಸಿನಲ್ಲಿ, ಕು.ರಾ. ಸೀತಾರಾಮಶಾಸ್ತ್ರಿ ಅವರಿಗೆ ಸಹಾಯಕ ನಿರ್ದೇಶಕರಾಗುವ ಮೂಲಕ ಶಿವರಾಂ ಚಿತ್ರರಂಗಕ್ಕೆ ಬಂದರು. ಈವರೆಗೂ ಮುನ್ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ತಮ್ಮ ಸೋದರ ರಾಮನಾಥನ್ ಜತೆ ಸೇರಿಕೊಂಡು- `ಗೆಜ್ಜೆ ಪೂಜೆ’, `ಬೆರೆತ ಜೀವ’, `ಉಪಾಸನೆ’, `ನಾನೊಬ್ಬ ಕಳ್ಳ’ ಸೇರಿದಂತೆ ಹತ್ತು ಚಿತ್ರಗಳನ್ನು ನಿರ್ಮಿಸಿದ್ದಾರೆ. ೬೦ ಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿ ದುಡಿದಿದ್ದಾರೆ. ಒಂದು ಚಿತ್ರ ನಿರ್ದೇಶಿಸಿದ್ದಾರೆ…’ ಇಂಥವೇ ವಿವರಗಳನ್ನು ನೀಡುವ ಗಾಂಧಿನಗರದ ಜನ ಅದೇ ಸಂದರ್ಭದಲ್ಲಿ- `ಭಾರತಿ’ ಎಂಬ ಹುಡುಗಿಗೆ `ಆರತಿ’ ಎಂದು ನಾಮಕರಣ ಮಾಡಿದ್ದು; ಲೋಕನಾಥ್/ಗಂಗಾಧರ್/ಉಪಾಸನೆ ಸೀತಾರಾಂರನ್ನು ತೆರೆಗೆ ಪರಿಚಯಿಸಿದ್ದು; ಸ್ವಲ್ಪ ಡುಮ್ಮಣ್ಣನಂತಿದ್ದ ಶ್ರೀನಾಥ್ ಅವರನ್ನೇ `ಶುಭ ಮಂಗಳ’ಕ್ಕೆ ಹೀರೋ ಮಾಡ್ಕೋಬೇಕು ಎಂದು ಹಠ ಹಿಡಿದು ಪುಟ್ಟಣ್ಣ ಕಣಗಾಲರನ್ನು ಒಪ್ಪಿಸಿದ್ದು; ಪುಟ್ಟಣ್ಣನ ಎಲ್ಲ ಸಿನಿಮಾಗಳ ಯಶಸ್ಸಿಗೆ ಪರೋಕ್ಷವಾಗಿ ಕಾರಣವಾದದ್ದು ಇದೇ ಶಿವರಾಮಣ್ಣ ಕಣ್ರೀ. ಕನ್ನಡ ಚಿತ್ರರಂಗಕ್ಕೆ ಅವರು ನೀಡಿರುವ ಕೊಡುಗೆ ಅನನ್ಯ’ ಎಂದು ಖುಷಿಯಿಂದ ಹೇಳುತ್ತಾರೆ. ಹೌದು ಶಿವರಾಮಣ್ಣಾ, ಅಂಥ ಸಂದರ್ಭದಲ್ಲೆಲ್ಲ `ಇಂಥ ದೊಡ್ಡ ಮನುಷ್ಯನ ಕಾಲದಲ್ಲಿ ನಾವು ಇದೀವಲ್ಲ? ಅದೇ ಪುಣ್ಯ’ ಅನ್ನಿಸಿಬಿಡ್ತದೆ.
***
ನಿಜ ಹೇಳಲಾ? ಶಿವರಾಂ ಅಂದ ತಕ್ಷಣ ನಮ್ಮ ಕಣ್ಮುಂದೆ ಬರೋದು `ನಾಗರಹಾವು’ ಸಿನಿಮಾದ ನಿಮ್ಮ ವರದಯ್ಯಂಗಾರ್ ಪಾತ್ರ. ಅದರಲ್ಲಿ ನಿಮ್ಮ ತಂಗಿ ಆರತೀನ `ಜಲೀಲ್’ ಅಂಬರೀಷ್ ಚುಡಾಯಿಸ್ತಾರೆ. ವಿಷಯ ತಿಳಿದ ನೀವು ಥೇಟ್ ಉತ್ತರ ಕುಮಾರನ ಸ್ಟೈಲ್ನಲ್ಲಿ ಆವಾಜ್ ಹಾಕ್ತೀರ. ಹೊಡೆಯೋಕೇ ಹೋಗಿಬಿಡ್ತೀರ. ಆದ್ರೆ ಜಲೀಲ್ ಕೆನ್ನೆ ಕುಣಿಸ್ತಾ, ಹುಬ್ಬು ಎಗರಿಸುತ್ತಾ ಜುಯ್ಯಂತ ಸೈಕಲ್ಲಲ್ಲಿ ಬಂದು ಡಿಕ್ಕಿ ಹೊಡೀತಾನೆ ನೋಡಿ… ಆಗ ನೀವು ಬೆಬ್ಬೆಬ್ಬೆ…! ಆ ಸೀನ್ ನೆನಪಾದ್ರೆ ಸಾಕು ಸಾರ್, ನಗು ಅನ್ನೋದು ಕಿಬ್ಬೊಟ್ಟೆಯಾಳದಿಂದ ನುಗ್ಗಿ ಬರುತ್ತೆ. ಹಾಗೇನೇ `ಶರಪಂಜರ’ದಲ್ಲಿ ಅಡುಗೆ ಭಟ್ಟ ಪಾತ್ರದಲ್ಲಿ ಬಾಯಿ ತುಂಬ ಎಲೆ ಅಡಿಕೆ ಅಗಿಯುತ್ತ `ಒಬ್ಬರಿಗೆ ಒಂದು ಬಡ್ಸಲಾ, ಎರಡು ಬಡ್ಸಲಾ? ಯಾಕೇಂದ್ರೆ… ನಾನೇನಾದ್ರೂ ಒಂದು ಬಡ್ಸಿದ್ರೇ… ನಿಮ್ಮಪ್ಪನ ಮನೆ ಗಂಟೇನು ಹೋಗುತ್ತೆ? ಎರಡು ಬಡ್ಸಿರಿ ಅಂತ ಹೇಳ್ತಾರೆ. ಎರಡು ಬಡ್ಸಿದ್ರೆ… ಇದೇನು ನಿಮ್ಮಪ್ಪನ ಗಂಟಾ ಎರಡು ಬಡಿಸ್ಲಿಕ್ಕೆ ಎಂದು ರೇಗ್ತಾರೆ. ಅದಕ್ಕೇ ನಿಮ್ಮ ಪ್ರಕಾರ ಒಂದೇ, ಎರಡೇ ಎಂದು ಕೇಳ್ದೆ… ನೀವು ಯಾಕೆ ನನ್ನನ್ನ ಪದೇ ಪದೆ ಹಾಗೆ ನೋಡುವುದು…’ ಅಂತೀರಲ್ಲ? ಅದನ್ನು ಕೇಳಿ ನಗದೇ ಇರುವ ಭೂಪ ಇನ್ನೂ ಹುಟ್ಟಿಲ್ಲ. ಮುಂದೆ ಹುಟ್ಟೋದೂ ಇಲ್ಲ! ಹೇಳಿ, ಒಬ್ಬ ನಟನಾಗಿ ನೀವು ಗ್ರೇಟ್ ಅಂಡ್ ಗ್ರೇಟೆಸ್ಟ್ ಎಂದು ವಿವರಿಸೋಕೆ ಇನ್ಯಾವ ಪದ ಬಳಸಲಿ ಶಿವರಾಮ್ಜೀ?
ಹಾಡು ಅಂದ ಮೇಲೆ ಅದು ನಾಯಕ-ನಾಯಕಿಗೆ ಮೀಸಲು. ಅಂಥದೊಂದು ನಂಬಿಕೆ ನಮ್ಮ ಚಿತ್ರರಂಗದಲ್ಲಿದೆ. ಆದರೆ- ನಿಮ್ಮ ಅಭಿನಯದಲ್ಲಿ ಚಿತ್ರಿಸಲಾಗಿರುವ `ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು!’, `ಬಾಜಿ ಕಟ್ಟಿ ನೋಡು ಬಾರೊ ಮೀಸೆ ಮಾವ’, `ಗುಂಡಿನ ಮತ್ತೇ ಗಮ್ಮತ್ತು’, `ಬಲು ಅಪರೂಪ ನಮ್ ಜೋಡಿ…’ ಹಾಡುಗಳು ಆಯಾ ಸಿನಿಮಾಗಳ ನಾಯಕ-ನಾಯಕಿಯನ್ನು ಮೀರಿ ಜನಪ್ರಿಯವಾಗಿವೆ. ಅವು ಮೇಲಿಂದ ಮೇಲೆ ನೆನಪಾಗಿ ಎಲ್ಲರನ್ನೂ ನಗಿಸಿವೆ, ಅಳಿಸಿವೆ, ಚಿಂತನೆಗೆ ಹಚ್ಚಿವೆ. ಅದರಲ್ಲೂ- `ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು…’ ಹಾಡು, ಅದರಲ್ಲಿನ ನಿಮ್ಮ ಅಭಿನಯವಿದೆಯಲ್ಲ? – ಅದ್ಭುತ, ಅದ್ಭುತ, ಅದ್ಭುತ. ಪ್ರಿಯ ಶಿವರಾಮಣ್ಣ, ನಿಮ್ಮನ್ನು ಮೇಲಿಂದ ಮೇಲೆ ನೆನಪು ಮಾಡಿಕೊಳ್ಳಲು ಇಂಥವೇ ಎಷ್ಟೆಲ್ಲ ಸಂಗತಿಗಳಿವೆ ಗೊತ್ತಾ….?
***
ಪ್ರಿಯ ಶಿವರಾಮಣ್ಣ, ನಿಮ್ಮ `ಪರೋಪಕಾರ’ದ ಬಗ್ಗೆಯೂ ಇಲ್ಲಿ ಒಂದೆರಡು ಮಾತು ಹೇಳಬೇಕು. ಈ ಹಿಂದೆ ಚಲನಚಿತ್ರ ಕಲಾವಿದರ ಸಂಘದ ಕಾರ್ಯದರ್ಶಿ ಆಗಿದ್ದಿರಲ್ಲ? ಆಗ ನೀವು ಅದೆಷ್ಟೋ ಕಲಾವಿದರ ಕಂಬನಿ ಒರೆಸಿದಿರಿ. ಸಂಕಟಕ್ಕೆ ಕಿವಿಯಾದಿರಿ. ಯಾವತ್ತೂ ಅಷ್ಟೆ. ಪರಿಚಿತರು ಅನ್ನಿಸಿಕೊಂಡ ಯಾರದೇ ಮನೆಯ ಶುಭ ಕಾರ್ಯವಾಗಲಿ, ನೀವು ಅಲ್ಲಿ ಹಾಜರಿರ್ತೀರಿ. ಮನೆಯವರಿಗಿಂತ ಹೆಚ್ಚಾಗಿ ಎಲ್ಲ ಜವಾಬ್ದಾರಿ ವಹಿಸಿಕೊಳ್ತೀರಿ. ಸಣ್ಣದೊಂದು ಲೋಪ ಕೂಡ ಆಗದ ಹಾಗೆ ಕೆಲಸ ಮುಗಿಸ್ತೀರಿ. ಅಷ್ಟೇ ಅಲ್ಲ- ಯಾರೋ ಕಲಾವಿದ/ಪರಿಚಿತ/ಅಪರಿಚಿತನೊಬ್ಬ ಸಂಕಟಕ್ಕೆ ಸಿಕ್ಕಿಬಿದ್ದರೆ, ಏನೇನೋ ಸಾಹಸ ಮಾಡಿ ಅವನನ್ನು ಬಚಾವ್ ಮಾಡಿಬಿಡ್ತೀರ. ಈ ವಿಷಯದಲ್ಲಿ ನಿಮ್ಮ ನಿಜ ಜೀವನದ ಹೀರೋ. ಆ ನಿಮ್ಮ ಪಾತ್ರವನ್ನು ಯಾರೂ ಮಾಡಲು ಸಾಧ್ಯವಿಲ್ಲ. ಇನ್ನು – ಸಾವಿನ ಮನೆಗೆ ಎಲ್ಲರಿಗಿಂತ ಮೊದಲೇ ನೀವು ಬಂದಿರ್ತೀರಿ. ಆ ಮನೆಯ ಹಿರಿಯನಂತೆ ನಿಂತು `ಎಲ್ಲ ಕಾರ್ಯ’ಕ್ಕೂ ಹೆಗಲುಕೊಡ್ತೀರಿ. ಅಂಥ ಸಂದರ್ಭದಲ್ಲೆಲ್ಲ `ನಿಮ್ಮೊಳಗೂ’ ದುಃಖವಿರುತ್ತೆ ನಿಜ. ಆದರೆ ಅದನ್ನು ತೋರ್ಪಡಿಸೋದೇ ಇಲ್ಲ. ಬದಲಿಗೆ, ಜತೆಗಿದ್ದವರಿಗೆ ಸಮಾಧಾನ ಹೇಳ್ತಾ ನಿಂತು ಬಿಡ್ತೀರಿ. ಇದನ್ನೆಲ್ಲ ಕಂಡವರು `ಈ ಶಿವರಾಮಣ್ಣ ನಮಗೆ ಯಾವ ಜನ್ಮದ ಬಂಧು? ಈತನ ಋಣವನ್ನು ತೀರಿಸೋದು ಹೇಗೆ ಅನ್ನುತ್ತಾರೆ. ಮುಂದುವರಿದು- ಈ ಪುಣ್ಯಾತ್ಮನದ್ದು ವಿಶಾಲ ಮನಸ್ಸು. ಈತ `ಮನುಷ್ಯನಲ್ಲ, ಶಾಪಗ್ರಸ್ಥ ಗಂಧರ್ವ’ ಎನ್ನುತ್ತಾ ನಿಂತಲ್ಲೇ ಕೈ ಮುಗಿಯುತ್ತಾರೆ.
ತುಂಬ ಆಸೆಪಟ್ಟು ಕಟ್ಟಿಸಿದ ಮನೆಯನ್ನು ಮಾರಿಕೊಂಡಾಗ; ಅದೊಂದು ಸಂದರ್ಭದಲ್ಲಿ ಕಾರ್ ಮಾರಿ ಕಲಾವಿದರಿಗೆ ಸಂಭಾವನೆ ನೀಡಬೇಕಾಗಿ ಬಂದಾಗ; ನಿರ್ಮಾಪಕರಿಂದ ಬಂದ ಚೆಕ್ಗಳು ಮೇಲಿಂದ ಮೇಲೆ ಬೌನ್ಸ್ ಆದಾಗ ನೀವು ನಿರ್ಲಿಪ್ತರಾಗಿಯೇ ಉಳಿದಿರಿ ಎಂಬ ವಿವರಣೆಯನ್ನು ಜತೆಗಾರರಿಂದ ಕೇಳಿದ ಮೇಲೆ; ೧೯೬೨ರ ಚೀನಾ ಯುದ್ಧದ ವೇಳೆ ಸೈನಿಕರಿಗೆ ನೆರವಾಗುವ ಉದ್ದೇಶದಿಂದ ಕೊರಳಲ್ಲಿದ್ದ ಚಿನ್ನದ ಸರವನ್ನೇ ನೀವು ಕಾಣಿಕೆ ನೀಡಿದ ವಿಷಯ ತಿಳಿದ ಮೇಲೆ -ನೀವು ಶಾಪಗ್ರಸ್ಥ ಗಂಧರ್ವರೇ ಇರಬೇಕೇನೋ ಎಂಬ ಅನುಮಾನ ಮೇಲಿಂದ ಮೇಲೆ ಕಾಡುತ್ತಿದೆ. ಅದೇ ನಿಜವಾದರೆ-ಶಿವರಾಮಣ್ಣಾ, ಆ ಶಾಪ ಮುಂದಿನ ಐವತ್ತು ವರ್ಷವೂ ಹಾಗೇ ಇರಲಿ! ಶಾಪ ವಿಮೋಚನೆಯವರೆಗೂ ನಿಮ್ಮ ಸ್ನೇಹದ ಸವಿಯಲ್ಲಿ ನಾವು ಖುಷಿಯಿಂದಿರಬಹುದಲ್ಲ?
ಶಿವರಾಮಣ್ಣ, ಈಗ ನಿಮಗೊಂದಿಷ್ಟು ಪ್ರಶ್ನೆ ಕೇಳೋದಿದೆ; ನೀವು ಒಳ್ಳೆಯ ಓದುಗ. ಒಳ್ಳೆಯ ಲೇಖಕ. ಗ್ರೇಟ್ ಅನ್ನುವಂಥ ಫೋಟೊಗ್ರಾಫರ್. ಅಷ್ಟೆಲ್ಲ ಆದ್ರೂ ಪುಸ್ತಕ ಬರೀದೇ ಉಳಿದುಬಿಟ್ರಿ. ಸರೀನಾ? ಅಪರೂಪದ ಫೋಟೊ ತೆಗೆದು ಗೆಳೆಯರಿಗೆಲ್ಲ ತೋರಿಸಿದ್ರಿ ನಿಜ. ಆದ್ರೆ ಒಂದು ಫೋಟೊ ಎಕ್ಸಿಬಿಷನ್ ಮಾಡಲಿಲ್ಲ. ನ್ಯಾಯಾನಾ? ಅದೆಷ್ಟೋ ಮಂದಿಯನ್ನು ಮುಂದಕ್ಕೆ ತಂದು ಅವರಿಗೆ ಒಂದು ವೇದಿಕೆ ಒದಗಿಸಿದ ನೀವೇ ಹಿಂದೆ ಉಳಿದುಬಿಟ್ಟಿದ್ದು ಅನ್ಯಾಯ ಅಲ್ವ? ಗಣೇಶನ್ ಎಂಬ ಆರ್ಡಿನರಿ ನಟ `ಶಿವಾಜಿ’ ಸಿನಿಮಾದಿಂದ ದೊಡ್ಡ ಹೆಸರು ಮಾಡಿ `ಶಿವಾಜಿ ಗಣೇಶನ್’ ಆದ. `ಜೆಮಿನಿ’ ಕಂಪನಿಯಿಂದ ಬಂದವನನ್ನು ಜನ `ಜೆಮಿನಿ ಗಣೇಶನ್’ ಅಂತಾನೇ ಕರೆದ್ರು. ಹಾಗೇನೇ `ಶರಪಂಜರ’ದ ನಿಮ್ಮ ಅಪರೂಪದ ಅಭಿನಯ ಮೆಚ್ಚಿ `ಶರಪಂಜರ ಶಿವರಾಂ’ ಅಂದ್ರೆ ನೀವು ಸಖತ್ ಸಿಟ್ಟು ಮಾಡ್ಕೋತೀರಂತಲ್ಲ, ಯಾಕೆ? ಇಂಥ ಪ್ರಶ್ನೆಗಳಿಗೆ ನೀವು ಹೇಗೆ ಉತ್ತರ ಹೇಳ್ತೀರಿ ಅನ್ನೋ ಕುತೂಹಲ ನನ್ನದು. ಬಿಡುವಾದಾಗ ಉತ್ತರ ಬರೀತೀರಾ? ಯಾವತ್ತೂ ಮಾಸದಿರುವ ನಿಮ್ಮ ಮುಗುಳ್ನಗೆಯ ಹಿಂದಿನ ರಹಸ್ಯ ಏನಂತ ಕೂಡ ಆಗ ಹೇಳ್ತೀರಾ ಸಾರ್?
ಕಡೆಯದಾಗಿ, ನಿಮಗೆ ಇಷ್ಟವಾದ ಕ್ರಿಕೆಟ್ನ ಭಾಷೆಯಲ್ಲೋ ಹೇಳ್ತಿದೀನಿ: ನಿಮ್ಮಲ್ಲಿನ್ನೂ ಇಪ್ಪತ್ತರ ಹುಡುಗನ ಫೋರ್ಸ್ ಇದೆ. ಅದೇ ಸಡಗರದಿಂದ ೭೦ ರನ್ ಹೊಡೆದಿದ್ದೀರಿ. ಇದೇ ಲಹರಿಯಲ್ಲಿ ಸೆಂಚುರಿ ಬಾರಿಸುವ ಸರದಿ ಕೂಡ ನಿಮ್ಮದಾಗಲಿ. ಆಗ ಚಪ್ಪಾಳೆ ಹೊಡೆಯುವ ಭಾಗ್ಯ ನಮ್ಮದಾಗಲಿ ಎಂಬ ಹಾರೈಕೆಯೊಂದಿಗೆ-
ನಮಸ್ಕಾರ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: