ಡಿಯರ್ ಕಾಂಚನ ಮೇಡಮ್..

null

“ನಿಮ್ಗೆ ಗೊತ್ತುಂಟಾ ? ಒಂದು ಕಾಲದಲ್ಲಿ ನಾನು ಗಗನಸಖಿಯಾಗಿದ್ದಾಕೆ. ಎರಡು ವರ್ಷ ಆಕಾಶದಲ್ಲಿ ಹಾರಾಡಿದಾಕೆ ನಾನು. ಅಲ್ಲಿ ಶಿಷ್ಟಾಚಾರದ ನಗುವಿಗೆ ಕೊರತೆಯಿರಲಿಲ್ಲ. ವಿಮಾನದಲ್ಲಿ ಪ್ರಯಾಣಿಸ್ತಾ ಇದ್ದವರೆಲ್ಲ ಲಕ್ಷಾಧಿಪತಿಗ. ಶ್ರೀಮಂತರೇ. ಆದ್ರೂ ಅವರ ಮುಖದಲ್ಲಿ ಕಿರುನಗೆ ಇರ್ತಿರಲಿಲ್ಲ. ಹೌದು, ಅವರ ಬಳಿ ಹಣವಿತ್ತು. ನೆಮ್ಮದಿ ಇರಲಿಲ್ಲ. ಮುಖ ಗಂಟಿಕ್ಕಿಕೊಂಡು ಕೂತಿದ್ದವರ ಬಳಿ ಹೋಗಿ ಒಂದು ಚೆಂದದ ಫ್ರೆಶ್ ನಗೆ ನಕ್ಕರೆ ಅವರು ಧನ್ಯ ಧನ್ಯ ಎನ್ನುವಷ್ಟು ಖುಷಿಯಾಗ್ತಿದ್ರು. ಗಗನ ಸಖಿಯಾಗಿದ್ದಾಗ ನಾನು ಕಲಿತದ್ದು ಎರಡೇ: ಒಂದು-ನಗು. ಮತ್ತೊಂದು- ಆರೈಕೆ, ಹಾರೈಕೆ…
…..ಅಲ್ಲಿಂದ ಚಿತ್ರರಂಗಕ್ಕೆ ಬಂದೆನಲ್ಲ- ಅಲ್ಲೂ ನಾನು ಸ್ವಲ್ಪೇ ಸ್ವಲ್ಪ ನಗ್ತಿದ್ದೆ. ಚೂರೇ ಚೂರು ಮಾತಾಡ್ತಿದ್ದೆ. ಚಿತ್ರರಂಗದ ಮಂದಿ ನನ್ನನ್ನ ಜಿಪುಣಿ ಅಂದರು! ಜಾಸ್ತಿ ಮಾತೇ ಬರಲ್ಲ ಅಂತ ಆಡಿಕೊಂಡ್ರು! ನಕ್ಕರೆ ಮುತ್ತು ಸುರೀತದಾ ಅಂತ ಗೇಲಿ ಮಾಡಿದ್ರು. ಅಂದಿನಿಂದ ನಾನು ಮನಸಾರೆ ನಗಲು ಕಲಿತೆ. ಮನಬಿಚ್ಚಿ ಮಾತಾಡಲು ಕಲಿತೆ. ಪರಿಣಾಮ, ಮಂದಿ ಹತ್ತಿರ ಬಂದರು. ಬಂಧುವಾದರು. ಬಳಗವಾದರು… ಈಗಲೂ ಅಷ್ಟೆ, ದಾರಿಯಲ್ಲಿ ನಡೆದುಕೊಂಡು ಹೋಗ್ತಾ ಇರುವಾಗ ಯಾರಾದ್ರೂ ದುಗುಡದ ಮುಖ ಹೊತ್ತು ಎದುರು ಬಂದರೆ-ನಾನೇ ಮುಂದಾಗಿ ಹೋಗಿ ಮಾತಾಡಿಸ್ತೀನಿ. ಅವರಿಗೆ ಆಶ್ಚರ್ಯವಾಗುತ್ತೆ….
…….ಇಷ್ಟಾಯ್ತಲ್ಲ, ಈಗ ನಾನು ಹೇಗಿದೀನಿ ಅಂದಿರಾ ? ಕೇಳಿ : ನಂಗೆ ವಯಸ್ಸಾಗಿದೆ, ಸೌಖ್ಯವಿಲ್ಲ. ಮಾತು ಬೇಡವೆಂದೆನಿಸಿದೆ. ನನಗೀಗ ನೆಮ್ಮದಿ ಬೇಕು. ಏಕಾಂತ ಬೇಕು. ಏಕಾಂತದ ಬದುಕು ಬೇಕು. ಧ್ಯಾನ, ಪಠಣ, ]ಜೆ ಇದಿಷ್ಟೇ ಸಾಕು ಅನ್ನಿಸಿದೆ…’
ಅಜ್ಜಿಯ ಮುದ್ದು ಪ್ರೀತಿ; ಅಮ್ಮನ ಪೆದ್ದು ಮಮತೆ ಎರಡರ ಸಮ್ಮಿಲನದಂತಿರುವ ಕಾಂಚನಾ ಮೇಡಂ- “ನಾನು ಗಗನಸಖಿಯಾಗಿದ್ದೆ ಎಂದು ಆರಂಭಿಸಿ, ನಂಗೀಗ ಧ್ಯಾನ, ಪಠಣವೇ ಸಾಕಾಗಿದೆ ಎಂಬಂಥ ಮಾತುಗಳನ್ನು ನೀವು ಹೇಳಿ ವರ್ಷವೇ ಕಳೆಯಿತು. ಉಹುಂ, ಒಂದಿಡೀ ವರ್ಷದಿಂದ ನೀವು ಎಲ್ಲೂ ಕಾಣಿಸಿಕೊಳ್ಳಲಿಲ್ಲ. ಸುದ್ದಿಯಾಗಲಿಲ್ಲ. ಅಲ್ಲೊಂದು ಇಲ್ಲೊಂದು ವೇದಿಕೆ ಹತ್ತಲಿಲ್ಲ. ಎರಡೇ ನಿಮಿಷದ ಭಾಷಣ ಮಾಡಲಿಲ್ಲ. ಅರೆ, ಕಾಂಚನಾ ಎಲ್ಲಿದ್ದಾರೆ ? ಈಗ ಹೇಗಿದ್ದಾರೆ? ಬೆಂಗಳೂರಲ್ಲೇ ಅದೂ ಯಲಹಂಕದ ಅದೇ ಮನೆಯಲ್ಲೇ ಇದಾರಾ ? ಇನ್ನಷ್ಟು ಇಳಿದು ಹೋಗಿದ್ದಾರಾ ? ದೇವರ ಧ್ಯಾನದಲ್ಲಿ ಎಲ್ಲರನ್ನೂ, ಎಲ್ಲವನ್ನೂ ಮರೆತು ಬಿಟ್ಟಿದ್ದಾರಾ ? ಹೀಗೆ ಯೋಚಿಸುತ್ತ ಕೂತಂತೆಲ್ಲ ಎದ್ದು ನಿಂತದ್ದು ಪ್ರಶ್ನೆ, ಪ್ರಶ್ನೆ, ಪ್ರಶ್ನೆ ಮತ್ತು ಪ್ರಶ್ನೆ!
******
ನಿಮ್ಮನ್ನ ಅಜ್ಜಿ ಅಂತ ಕರೆಯೋಣ ಅನಿಸುತ್ತೆ. ಮನಸ್ಸು ಒಪ್ಪಲ್ಲ! ಮೇಡಂ, ಅನ್ನೋಕೆ ಇಷ್ಟ ಆಗಲ್ಲ! ಯಾಕ್ ಗೊತ್ತಾ ? ನಿಮ್ಮನ್ನ ನೆನ[ ಮಾಡಿಕೊಂಡಾಗಲೆಲ್ಲ ನಮ್ಗೆ “ಬಬ್ರುವಾಹನ’ ಸಿನಿಮಾ ನೆನಪಾಗುತ್ತೆ. ಅದರಲ್ಲಿ ನಿಮ್ಮ ಬಳುಕಿನ ನೋಟ ಕಣ್ತುಂಬುತ್ತೆ. ನಿಮ್ಮ ಫಳಫಳಫಳಫಳ ಚೆಲುವು ಇಷ್ಟಿಷ್ಟಿಷ್ಟಿಷ್ಟೇ ನೆನಪಾಗುತ್ತೆ. ಆ ಕ್ಷಣದಲ್ಲೇ ಸೋಲನೆಂದು ಕಾಣದಂಥ ಧೀರ ಪಾರ್ಥನು/ನಿನ್ನ ಕಣ್ಣ ಬಾಣದಿಂದ ಸೋತು ಹೋದನೂ/ಚೆಲುವೆ ನಿನ್ನ ಸ್ನೇಹದಲ್ಲಿ ಕರಗಿ ನೀರಾದನು…./ ಎಂದೆಲ್ಲ ನಿಮ್ಮ ಅಂದ ಚೆಂದ ವಿವರಿಸುವ ನಿನ್ನ ಕಣ್ಣ ನೋಟದಲ್ಲಿ……ಹಾಡು ನೆನಪಾಗಿಬಿಡುತ್ತೆ.
ಅದೇ ಹಾಡಿನ ಜಾಡಿನಲ್ಲಿ “ಶಂಕರ್ಗುರು’, “ನಾನೊಬ್ಬ ಕಳ್ಳ’, “ತಾಯಿಗೆ ತಕ್ಕ ಮಗ’ ಸಿನಿಮಾಗಳೂ ನೆನಪಾಗಿ ಬಿಡ್ತವೆ ನೋಡಿ-ನಿಮ್ಮನ್ನ ಮೇಡಂ ಅನ್ನುವ ಮನಸ್ಸು ಮಾಯವಾಗುತ್ತೆ. ಕಾಂಚನಾ ಮಿಸ್ ಅಂತ ಕರೆಯೋ ಆಸೆಯಾಗುತ್ತೆ! ಹಳೆ ಹಳೆಯ ಸಿನಿಮಾಗಳಲ್ಲಿ ಅಪ್ಸರೆಯ ಥರಾ, ಮೇನಕೆಯ ಅಕ್ಕನ ಥರಾ, ಊರ್ವಶಿಯ ತಂಗಿಯ ಥರಾ ಮಿರಮಿರಮಿರ ಮಿಂಚ್ತಾ ಇದ್ರಲ್ಲ-ನಿಮ್ಮ ಸೌಂದರ್ಯದ ಗುಟ್ಟೇನು ಮೇಡಂ ಅಂತ ತುಂಟತನದಿಂದ ಕೇಳ್ಬೇಕು ಅನ್ನಿಸಿಬಿಡುತ್ತೆ!
ಕಾಂಚನಾ ಮಿಸ್, ಹಳೆಯ ಸಿನಿಮಾಗಳ; ಹಳೆಯ ಹಾಡುಗಳ ನೆಪದಲ್ಲಿ-ಹಳೆಯ ಮಧುರ ನೆನಪಲ್ಲಿ ತೇಲುವಾಗಲೇ ಒಂದೆರಡಲ್ಲ-ಐದಾರೇಳೆಂಟೊಂಬತ್ತು ಪ್ರಶ್ನೆಗಳನ್ನು ನಿಮಗೆ ಕೇಳ್ಬೇಕು ಅನ್ನೋದು ಚಿತ್ರಪ್ರಿಯರ ಅದೆಷ್ಟೋ ವರ್ಷದ ಆಸೆ. ಹಿಂದೊಮ್ಮೆ ಸಮಸ್ತ ಚಿತ್ರಪ್ರೇಮಿಗಳನ್ನ, ಬಹುಪಾಲು ಚಿತ್ರನಟರನ್ನ ಮರಳು ಮಾಡಿದ್ದ ನಿಮ್ಮ ಕಣ್ಣ ನೋಟಕ್ಕೆ; ನಡಿಗೆಯ ಮಾಟಕ್ಕೆ ಒಂದು ಚೆಂದದ ಸಲಾಂ ಹೊಡೆದೇ ಕೇಳ್ತಿದೀನಿ:
ರಜತ ಪರದೆಯ ಮೇಲೆ ಅಕ್ಕರೆಯ ಅಮ್ಮನಾಗಿ; ಮಮತೆಯ ಅತ್ತಿಗೆಯಾಗಿ; ವಾತ್ಸಲ್ಯದ ಅಜ್ಜಿಯಾಗಿ “ಅಭಿನಯಿಸಿದವರು’ ನೀವು. ಅಂಥ ನಿಮಗೇ, ನಿಜ ಬದುಕು ಸಂಕಟದ ಮಡುವೇ ಆಗಿಬಿಡ್ತಲ್ಲ ಯಾಕೆ ? ಸಿನಿಮಾದಲ್ಲಿ ಪ್ರತಿಯೊಂದು ದೃಶ್ಯದಲ್ಲೂ ಲೆಕ್ಕಾಚಾರದಿಂದ ನಟಿಸಿದ ನಿಮಗೆ ನಿಜ ಬದುಕು-ಲೆಕ್ಕಕ್ಕೇ ಸಿಗಲಿಲ್ಲ ಯಾಕೆ ? ಪ್ರತಿಯೊಂದು ಸಿನಿಮಾದಲ್ಲೂ ನಿಮ್ಮ ಕಷ್ಟಕ್ಕೆ ಸ್ಪಂದಿಸದ ದಯಾಮಯಿ(?!) ದೇವರು ನಿಜ ಬದುಕಲ್ಲಿ ನಿಮ್ಮ ಸಂಕಟಗಳಿಗೆ ಕೊನೆ ಹಾಡಲಿಲ್ಲವಲ್ಲ ಯಾಕೆ ? ಇದನ್ನೆಲ್ಲ ನೀವು ಹಣೆಬರಹ ಅಂತೀರಾ ? ದುರಾದೃಷ್ಟ ಅಂತ ಕರೀತೀರಾ ? ವಿಧಿಯಾಟ ಅನ್ನೋ ಕಾರಣ ಹೇಳ್ತೀರಾ ? ಇದೆಲ್ಲ ದೈವಲೀಲೆ ಅಂತ ತಿಳಿದು “ದೇವರ ಆಟ ಬಲ್ಲವರಾರೂ… ಅಂತ ಹಾಡಿ ಹಗುರಾಗ್ತೀರಾ ಅಥವಾ ಅದು ರೀಲ್ ಲೈಫು, ಇದು ರಿಯಲ್ ಲೈ# ಎಂದು ಹೇಳಿ ಸುಮ್ಮನಾಗ್ತೀರಾ ?
ಹೇಳಿ ಮೇಡಂ, ಲೆಕ್ಕಾಚಾರಕ್ಕೆ ಸಿಗದೇಹೋಗಿರೋ ನಿಮ್ಮ ಬದುಕನ್ನ ನೀವು ಏನಂತ ಕರೀತೀರಿ ? ನಿಜ ಬದುಕು ನಿಮ್ಗೆ ಕೊಟ್ಟ ಅಸಂಖ್ಯ ನೋವನ್ನ ಹೇಗೆ ಮರೀತೀರಿ ?
ಮೇಡಂ, ಚಿತ್ರರಂಗವನ್ನು ಜನ ಬೆರಗಿನಿಂದ ನೋಡ್ತಾರೆ. ನಟರನ್ನು ಅಭಿಮಾನದಿಂದ, ನಟಿಯರನ್ನ ಕುತೂಹಲದಿಂದ ನೋಡ್ತಾರೆ. ನೀವು ಹಿಂದೊಮ್ಮೆ-ನಮ್ಮ ತಾಯ್ತಂದೆಯರೇ ನನ್ನನ್ನ ಶತ್ರುಗಳಂತೆ ಕಾಣ್ತಿದಾರೆ ಅಂದಿರಲ್ಲ, ಅವತ್ತು ಜನರ ಕಂಗಳಲ್ಲಿ ನಿಮ್ಮ ಕುರಿತು ಸಣ್ಣ ಕರುಣೆ ಮಾತ್ರವಲ್ಲ, ಕೆಟ್ಟ ಕುತೂಹಲವೂ ಇತ್ತು. ಅದು ಈಗಲೂ ಇದೆ. ಆದ್ರೆ ಎಂಥ ಕಷ್ಟಕ್ಕೂ ನೀವು ಅಂಜದೆ ನಿಮ್ಮ ಪಾಡಿಗೆ ನೀವು ಉಳಿದಿದ್ದೀರಲ್ಲ-ಆ ಕುರಿತು ಮೆಚ್ಚುಗೆ ಕೂಡ ಇದೆ. ಹೊರನೋಟಕ್ಕೆ ಕಠೋರವಾಗಿ ವರ್ತಿಸುವವರು ಒಬ್ಬರೇ ಒಳಿದಾಗ ನೆಮ್ಮದಿಯಾಗಿ ಅಳ್ತಾರಂತೆ. ಒಂಟಿಯಾಗಿದ್ದಾಗ ನೀವು ಬಿಕ್ಕಳಿಸಿ ಅಳ್ತೀರಾ ? ಥೇಟ್ ಸಿನಿಮಾದಲ್ಲಿ ಆಗ್ತದಲ್ಲ ಅದೇ ಥರಾ-ದೇವ್ರ ಮುಂದೆ ಕೂತ ಯಾಕಪ್ಪಾ ನಂಗೀ ಕಷ್ಟ ಅಂತ ರೊಚ್ಚಿನಿಂದ ಕೇಳ್ತೀರಾ ? ಕಷ್ಟಗಳನ್ನೆಲ್ಲ ನೆನೆದು ಕಣ್ಣೀರಾಗ್ತೀರಾ ?
ಕೇಳಿ : ಅದೇ ಯಲಹಂಕದ ಮನೆಗೆ ಬಂದು ಬರಾಬರ್ ಐದಾರು ಗಂಟೆ ಮಾತಾಡ್ಬೇಕು ಅಂತ ಆಸೆಯಾಗುತ್ತೆ. ನಿಮ್ಮ ಜತೆ ವಾದ ಮಾಡಬೇಕು ಅನಿಸುತ್ತ. ಆದ್ರೆ ವಾದಕ್ಕೆ ನಿಂತರೆ ನೀವೂ ಮಾತೇ ಆಡಲ್ಲ ಅನ್ನೋ ಇನ್ನೊಂದು ಸಂಗತಿ ನೆನಪಾದ್ರೆ ಒಂಥರಾ ಕಸಿವಿಸಿ ಆಗುತ್ತೆ.
ಇನ್ನೂ ಬರೆಯೋದಿತ್ತು. ಇವತ್ತು ಹೇಳಿ ಕೇಳಿ ಗುರುವಾರ. ನೀವು ಧ್ಯಾನಕ್ಕೆ ಕೂತಿರ್ತೀರಿ. ]ಜೇಲಿ ಮುಳುಗಿರ್ತೀರಿ. ದೇವರ ಧ್ಯಾನದಲ್ಲಿರ್ತೀರಿ ನಿಮಗೆ ಜಾಸ್ತಿ ಡಿಸ್ಟರ್ಬ್ಮಾಡೋಕೆ ಮನಸ್ಸಾಗ್ತಲ್ಲ. ನಿಮ್ಮ ಬದುಕಲ್ಲಿ ಸಂತೋಷ ಬರಲಿ. ನಿಮ್ಮ ಆಸ್ತಿ ನಿಮ್ಮದೇ ಆಗಲಿ. ನಿಮ್ಮ ತಾಯ್ತಂದೆ ಹಠ ಬಿಡಲಿ. ನಿಮ್ಮ ಹಳೆಯ ನಗೆ, ಹಳೆಯ ನೋಟ, ಹಳೆಯ ಆಟ ಮತ್ತು ಹಳೆಯ ಹಾಡು ನಮ್ಮ ಕಣ್ತುಂಬಲಿ ಎಂದು ಪ್ರೀತಿಯ ಸದಾಶಯಗಳೊಂದಿಗೆ…..
ನಮಸ್ಕಾರ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: