ಮರೆಯಲಾಗದ ಮಹಾನುಭಾವ….

null

ಮೊನ್ನೆಯಷ್ಟೇ ಬದುಕಿಗೆ ಗುಡ್ಬೈ ಹೇಳಿದ ಹಿರಿಯ ನಟ ಎಂ.ಪಿ. ಶಂಕರ್ ಅವರನ್ನು ಕುರಿತು ಹೇಳಬಹುದಾದ ಒನ್ಲೈನ್ ಅಭಿಪ್ರಾಯ ಇದು. ಭಾರೀ ದರ್ಪದ ಪಟೇಲನ ಪಾತ್ರ, ಒಂದು ಕಿಡಿನೋಟದಲ್ಲೇ ಮಕ್ಕಳನ್ನು `ಒಂದಾ’ ಮಾಡಿಕೊಳ್ಳುವಂತೆ ಮಾಡುವ ಖಳನಾಯಕನ ಪಾತ್ರ ಅಥವಾ ಧೀರ ಗಂಭೀರ ನಿಲುವಿನ ಮಹಾರಾಜನ ಪಾತ್ರ ಅಂದಾಕ್ಷಣ ನೆನಪಾಗುತ್ತಿದ್ದವರೇ ಎಂ.ಪಿ. ಶಂಕರ್. ಒಬ್ಬ ಪಟೇಲ, ಅಲಲಲಲಾ ಎಂದು ಅಬ್ಬರಿಸುವ ಕೇಡಿಗ ಅಥವಾ ಒಂದು ಮುಗುಳ್ನಗೆಯಲ್ಲೇ ನೆಮ್ಮದಿಯ ಭಾವ ಉಂಟು ಮಾಡುತ್ತಿದ್ದ ರಾಜ ಅನ್ನಿಸಿಕೊಂಡವನು-ಇದ್ದರೆ ಎಂ.ಪಿ. ಶಂಕರ್ ಥರಾ ಇರಬೇಕು. ಇಲ್ಲವಾದರೆ ಅಂಥ ಪಾತ್ರವೇ ಇರಬಾರದು ಎಂದು ಹೇಳುವಷ್ಟರ ಮಟ್ಟಿಗೆ ಎಂ.ಪಿ. ಶಂಕರ್ ಒಂದೊಂದು ಪಾತ್ರಗಳನ್ನು ಆವರಿಸಿಕೊಂಡಿರುತ್ತಿದ್ದರು. ಅವರನ್ನು ಎಂದೆಂದಿಗೂ ಮರೆಯಲು ಸಾಧ್ಯವೇ ಎಂಬಂಥ ನೆನಪುಗಳು ನೂರರ ಸಂಖ್ಯೆಯಲ್ಲಿವೆ.
* ಮೇಲ್ನೋಟಕ್ಕೆ ಭಾರೀ ಜರ್ಬಿನ ಆಸಾಮಿಯಂತೆ ಎಂ.ಪಿ. ಶಂಕರ್ ಕಾಣುತ್ತಿದ್ದುದು ನಿಜ. ಆದರೆ ಅವರ ಒಳಮನದಲ್ಲಿ ಯಾವತ್ತಿಗೂ ಒಬ್ಬ ಅಮ್ಮ ಇದ್ದೇ ಇದ್ದಳು. ನನಗೆ ಕೆಟ್ಟದಾದರೂ ಚಿಂತೆಯಿಲ್ಲ. ಜತೆಗಿರುವವರು ಚೆನ್ನಾಗಿರಲಿ ಎಂದು ಪ್ರತಿಕ್ಷಣವೂ ಬಯಸಿದ ಎಂ.ಪಿ. ಶಂಕರ್, ಹಾಗೆಯೇ ಬದುಕಿದರು. ವಿಪರ್ಯಾಸ ಏನೆಂದರೆ, ಎಂ.ಪಿ. ಶಂಕರ್ ಅವರನ್ನೇ ಒಂದು ಏಣಿ ಮಾಡಿಕೊಂಡು ಬೆಳೆದವರು ಒಂದು ಸ್ಟೇಜ್ ತಲುಪಿದ ಮರುಕ್ಷಣವೇ ಹತ್ತಿದ ಏಣಿಯನ್ನೇ ಒದ್ದುಬಿಟ್ಟರು. ಶಂಕರ್ ಅದೆಂಥ ಅಮಾಯಕರು ಅಂದರೆ, ಅಂಥ ಸಂದರ್ಭದಲ್ಲೆಲ್ಲ- `ಅವರು ನೆಮ್ಮದಿಯಾಗಿರ್ಲಿ ಬಿಡೀಪ್ಪಾ, ನನ್ನ ಹಣೇಲಿ ಬರೆದಿರೋ ಸೌಭಾಗ್ಯವೇ ಇಷ್ಟೇನೋ’ ಅಂದು ಸುಮ್ಮನಾಗುತ್ತಿದ್ದರು.
* ಎಂ.ಪಿ. ಶಂಕರ್ ಅಂದ್ರೆ ಏನು ಎಂದು ಯಾರಾದರೂ ಮುಂದೊಂದು ದಿನ ಪ್ರಶ್ನೆ ಕೇಳಿದರೆ- ಅದಕ್ಕೆ ಉತ್ತರವಾಗಿ `ಗಂಧದ ಗುಡಿ’ ಸಿನಿಮಾ ತೋರಿಸಿದರೆ ಸಾಕು. ಮುಂದೊಮ್ಮೆ ಕನ್ನಡದಲ್ಲಿ ಕೋಟಿ ಕೋಟಿ ಬಜೆಟ್ನ ಸಿನಿಮಾಗಳು ಸಾವಿರದ ಸಂಖ್ಯೆಯಲ್ಲಿ ಬರಬಹುದು. ಆದರೆ, `ಗಂಧದ ಗುಡಿ’ಯಂಥ ಸಿನಿಮಾ ಬರುವುದಿಲ್ಲ. ಟಾರ್ಜಾನ್ನನ್ನು ನಾಚಿಸುವಂಥ ಬಾಡಿಬಿಲ್ಡರ್ಗಳು ಹೀರೋ ಪಾತ್ರದಲ್ಲಿ ಮಿಂಚಬಹುದು. ಆದರೆ, `ಕಾಡಿನ ರಾಜ’ದಂಥ ಮತ್ತೊಂದು ಸಿನಿಮಾ ಕನ್ನಡದಲ್ಲಿ ಬರಲು ಸಾಧ್ಯವೇ ಇಲ್ಲ. ಎಂ.ಪಿ. ಶಂಕರ್ ಯಾವತ್ತಿಗೂ ಗ್ರೇಟ್ ಅನ್ನುವುದು ಇದೇ ಕಾರಣಕ್ಕೆ.
* ಒಂದು ಪಾತ್ರ, ಒಂದು ಸನ್ನಿವೇಶ ಅಥವಾ ಒಂದು ಹಾಡಿನ ಮೂಲಕ ಕಲ್ಲು ಹೃದಯದವರನ್ನೂ ಅಳಿಸಿಬಿಡುವ ಛಾತಿ ಎಂ.ಪಿ. ಶಂಕರ್ ಅವರಿಗಿತ್ತು. ಗಂಧದ ಗುಡಿಯ `ಎಲ್ಲೂ ಹೋಗೊಲ್ಲ ಮಾಮ ಎಲ್ಲೂ ಹೋಗೊಲ್ಲ’ ಎಂಬ ಹಾಡನ್ನೇ ತೆಗೆದುಕೊಳ್ಳಿ. ತಮಾಷೆಯಾಗಿ ಶುರುವಾಗುವ ಈ ಹಾಡಿನಲ್ಲಿ ನಡುವೆ ಗೊಂಬೆಯಂಥ ಆ ಹುಡುಗಿ `ಅಪ್ಪ ಇಲ್ಲ ಅಮ್ಮ ಇಲ್ಲ ನೀನೇ ನನಗೆಲ್ಲ…’ ಅನ್ನುತ್ತದಲ್ಲ? ಆಗ ಹಾಡು ಕೇಳುತ್ತಿದ್ದಂತೆಯೇ ಕಣ್ಣೀರು ಕಪಾಲಕ್ಕೆ ಇಳಿದಿರುತ್ತದೆ. ಹಾಗೆಯೇ ರಾಮಲಕ್ಷ್ಮಣ’ ಸಿನಿಮಾದ `ಹೇಳಿದ್ದು ಸುಳ್ಳಾಗಬಹುದು, ಕೇಳಿದ್ದು ಸುಳ್ಳಾಗಬಹುದು …’ ಹಾಡು. ಕಥನ ಕಾವ್ಯದಂತಿರುವ ಈ ಹಾಡು ಮುಗಿಯುವ ವೇಳೆಗೆ ನಮಗೇ ಗೊತ್ತಿಲ್ಲದಂತೆ ಕಣ್ಣೀರು ಕೆನ್ನೆಯನ್ನು ತಾಕಿರುತ್ತದೆ. ಹಾಗೆಯೇ `ಗಂಧದಗುಡಿ’ಯಲ್ಲಿ ಮೊದಲು ಕೇಡಿಗನಾಗಿದ್ದ ಎಂ.ಪಿ. ಶಂಕರ್ ಒಳ್ಳೆಯವನಾಗುವ ಸನ್ನಿವೇಶ; `ಹುಲಿಯ ಹಾಲಿನ ಮೇವು’ ಸಿನಿಮಾದಲ್ಲಿ ಚೆಂಗುಮಣಿಯ ಪಾತ್ರಧಾರಿ ಡಾ. ರಾಜ್ಗೆ ಹುಲಿಯ ಹಾಲು ಕುಡಿಸುತ್ತಾ ಮೌನವಾಗಿ ಅಳುವ ದೃಶ್ಯ… ಅದನ್ನು ನೋಡುತ್ತ ನೋಡುತ್ತಲೇ ಕಣ್ಣೀರು ಹಾಕದವರು-ಬಿಡಿ, ಅಂಥವರು ಈ ಲೋಕದಲ್ಲೇ ಇಲ್ಲ.
* ಇದನ್ನು ತಮಾಷೆ ಎನ್ನಬೇಕೋ ಅಥವಾ ವಿಪರ್ಯಾಸ ಎಂದು ಕರೆಯಬೇಕೋ ಗೊತ್ತಾಗುತ್ತಿಲ್ಲ. ಏನೆಂದರೆ-ತಮ್ಮ ಸಿನಿಮಾಗಳಲ್ಲಿ ಕಾಡು ಪ್ರಾಣಿಗಳ ಪಾತ್ರಕ್ಕೆ ಒಂದು ಕ್ರೇಜ್ ತಂದುಕೊಟ್ಟವರು ಎಂ.ಪಿ. ಶಂಕರ್. ಸ್ವಾರಸ್ಯವೆಂದರೆ- ಎಲ್ಲ ಕಾಡು ಪ್ರಾಣಿಗಳೂ ಪ್ರತಿ ಬಾರಿಯೂ ಅವರ ಕೈ ಹಿಡಿದವು. ಅವರಿಗೆ (ಸಿನಿಮಾ ಯಶಸ್ಸಾಗಲು) ನೆರವಾದವು. ಆದರೆ `ನಾಡಿನ ಪ್ರಾಣಿಗಳು’ ಅವರಿಗೆ ಸರಿಯಾಗಿಯೇ ಕೈಕೊಟ್ಟವು! ಮಾತು ಬಾರದ ಕಾಡು ಪ್ರಾಣಿಗಳು ಮೌನದಲ್ಲಿಯೇ ಎಂ.ಪಿ. ಶಂಕರ್ ಸಂಕಟ, ಸಂತೋಷವನ್ನು ಅರ್ಥಮಾಡಿಕೊಂಡು ಜತೆಗಿದ್ದವು. ಆದರೆ ಮಾತು ಬರುತ್ತಿದ್ದ ನಾಡಪ್ರಾಣಿಗಳು ಆಗಿಂದಾಗ್ಗೆ ಅವರಿಗೆ ಮೋಸ ಮಾಡುತ್ತಲೇ ಹೊಟ್ಟೆ ತುಂಬಿಸಿಕೊಂಡವು!
* ಎಂ.ಪಿ. ಶಂಕರ್ಗೆ ಮರ್ಮಾಘಾತ ನೀಡಿದ್ದು `ಗಿಡ್ಡೂದಾದ’ ಸಿನಿಮಾ. ಅದು ದ್ವಾರಕೀಶ್ ನಿರ್ದೇಶನದ ಚಿತ್ರ. ಆ ಚಿತ್ರ ನಿರ್ದೇಶಿಸುವಾಗ ದ್ವಾರಕೀಶ್ ಹೆಜ್ಜೆ ಹೆಜ್ಜೆಗೂ ವಂಚಿಸಿದರು ಎಂದು ಎಲ್ಲರೊಂದಿಗೂ ಹೇಳಿಕೊಂಡಿದ್ದರು ಎಂ.ಪಿ. ಶಂಕರ್. ಆ ಸಿನಿಮಾ ತಯಾರಿಸಲೆಂದೇ ತಮ್ಮ ಅರಮನೆಯಂಥ ಮನೆಯ ಮೇಲೆ ಸಾಲ ಪಡೆದಿದ್ದರು. ತಿಂಗಳಿಗೆ ೫೦ ರಿಂದ ೬೦ ಸಾವಿರದವರೆಗೆ ಬಡ್ಡಿ ಕಟ್ಟಬೇಕಿತ್ತು. ಬಡ್ಡಿ ಕಟ್ಟುವುದು ಸ್ವಲ್ಪ ತಡವಾದರೂ- `ನಿಮಗೆ ಹಾಗೆ ಮಾಡ್ತೀವಿ. ಹೀಗೆ ಮಾಡ್ತೀವಿ’ ಎಂದು ಸಾಲ ಕೊಟ್ಟವರು ಬೆದರಿಕೆ ಹಾಕುತ್ತಿದ್ದರಂತೆ. ಇಂಥ ಉಪಟಳ ತಡೆಯಲಾಗದೆ ಕಡೆಗೊಮ್ಮೆ ಆ ಮನೆಯನ್ನೇ ಮಾರಿಬಿಟ್ಟ ಶಂಕರ್ ಹೇಳಿದ್ದರು: ಹುಲಿ, ಸಿಂಹ, ಆನೆ, ಚಿರತೆಯಂಥ ಕ್ರೂರ ಪ್ರಾಣಿಗಳಿಗೆ ನಾನು ಯಾವತ್ತೂ ಹೆದರಲಿಲ್ಲ. ಆದರೆ ಮನುಷ್ಯ ಎಂಬ ಪ್ರಾಣಿಗೆ ವಿಪರೀತ ಹೆದರಿಬಿಟ್ಟೆ…
* ನಿರ್ಮಾಪಕನಾಗಬೇಕು ಎಂದು ಎಂ.ಪಿ. ಶಂಕರ್ ಆಸೆಪಟ್ಟಾಗ ಅವರಿಗೆ ಗಾಡ್ಫಾದರ್ ಥರಾ ನಿಂತವರು ಎನ್. ವೀರಾಸ್ವಾಮಿ. ಅದೇ ಕಾರಣಕ್ಕೆ ಬದುಕಿದ್ದಕ್ಕೂ ವೀರಾಸ್ವಾಮಿಯವರೆಡೆಗೆ ನಿಷ್ಠೆ ಉಳಿಸಿಕೊಂಡಿದ್ದ ಶಂಕರ್, ತಮ್ಮ ನಿರ್ಮಾಣದ ಎಲ್ಲ ಸಿನಿಮಾಗಳನ್ನೂ ವೀರಾಸ್ವಾಮಿಯವರ ಈಶ್ವರೀ ಪ್ರೊಡಕ್ಷನ್ ಮೂಲಕವೇ ಬಿಡುಗಡೆ ಮಾಡುತ್ತಿದ್ದರು. ಅದೊಮ್ಮೆ, ಕನ್ನಡದಲ್ಲಿ ರಾಜ್ಕುಮಾರ್, ತಮಿಳಿನಲ್ಲಿ ಕಮಲಹಾಸನ್ರನ್ನು ಹಾಕಿಕೊಂಡು ಸಿನಿಮಾ ಮಾಡಲು ಮುಂದಾದರು. ಇಬ್ಬರೂ ಕಲಾವಿದರ ಕಾಲ್ಶೀಟ್ ಕೂಡ ಸಿಕ್ಕಿತ್ತು. ಇನ್ನೇನು ಚಿತ್ರೀಕರಣ ಶುರುವಾಗಬೇಕು ಅನ್ನುವಾಗ- `ಚಿತ್ರದ ಹಂಚಿಕೆಯನ್ನು ನಮಗೆ ಕೊಡಿ’ ಅಂದರಂತೆ ಪಾರ್ವತಮ್ಮ, ನನ್ನ ಸಿನಿಮಾಗಳಿಗೆ ವೀರಾಸ್ವಾಮಿಯವರೇ ವಿತರಕರು. ಅವರೇ ನನ್ನ ಧಣಿ. ನನ್ನ ನಿಷ್ಠೆ ಬದಲಿಸಲಾರೆ ಅಂದಿದ್ದಾರೆ ಶಂಕರ್. ಈ ಮಾತಿಂದ ಬೇಸರಗೊಂಡ ಪಾರ್ವತಮ್ಮನವರು- `ಹಾಗಾದ್ರೆ ಅಣ್ಣಾವ್ರ ಕಾಲ್ಶೀಟ್ ಸಿಗೋದು ಕಷ್ಟ’ ಅಂದುಬಿಟ್ಟಿದ್ದಾರೆ. ಅಷ್ಟಕ್ಕೇ ಆ ಪ್ರಾಜೆಕ್ಟನ್ನೇ ಕೈಬಿಟ್ಟರು ಶಂಕರ್. ವಿಪರ್ಯಾಸ ಕೇಳಿ: ಇಂಥ ನಿಷ್ಠಾವಂತನನ್ನು, ಕಡೆಗೆ ಸರಿಯಾದ ಕಾರಣವನ್ನೂ ನೀಡದೆ ವೀರಾಸ್ವಾಮಿಯವರು ಕೈಬಿಟ್ಟರು! ಆಗ ಕೂಡ-ಧಣಿಗಳು ಚನ್ನಾಗಿರಲಿ ಎಂದು ಹಾರೈಸಿದ ಹೃದಯವಂತ ಎಂ.ಪಿ. ಶಂಕರ್.
* `ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ’ ಎಂದು ಶುರು ಮಾಡಿ `ಡಿಂಗಿರಿ ಡಿಂಗಿರಿ ಡಿಂಗಿರಿ ಡಿಂಗಿರಿ…’ ಎಂದು ಹಾಡುತ್ತಾ ವೀರಬಾಹುವಿನ ಪಾತ್ರದಲ್ಲಿ ಕುಣಿದು ರಾತ್ರೋರಾತ್ರಿ ಹೆಸರಾದದ್ದು ಶಂಕರ್ ಅವರ ಹೆಚ್ಚುಗಾರಿಕೆ. `ಸದಾ ಸ್ಮಶಾನದಲ್ಲೇ ಇರುವ ದರ್ಪದ ಮನುಷ್ಯನೊಬ್ಬ ಹೀಗಿರಬಹುದೇನೋ ಎಂದು ಅಂದಾಜು ಮಾಡಿಕೊಂಡು ಕುಣಿದಿದ್ದೆ. ಅದಕ್ಕೆ ಹುಣಸೂರು ಕೃಷ್ಣಮೂರ್ತಿ ಅವರ ಮಾರ್ಗದರ್ಶನವಿತ್ತು. `ಭೂತಯ್ಯ’ನ ಪಾತ್ರ ಮಾಡುವಾಗ ನಿರ್ದೇಶಕ ಸಿದ್ಧಲಿಂಗಯ್ಯನವರ ಗೈಡೆನ್ಸ್ ನೆರವಿಗೆ ಬಂತು. ಮುಂದೆ `ಭೂಲೋಕದಲ್ಲಿ ಯಮರಾಜ’ನ ಪಾತ್ರ ಮಾಡಿದಾಗ ನಾಟಕಗಳಲ್ಲಿ ಮಾತ್ರ ನೋಡಿದ್ದ `ಯಮ’ನನ್ನು ನೆನಪು ಮಾಡ್ಕೊಂಡೇ ಅಭಿನಯಿಸಿದ್ದೆ. ಕನ್ನಡಿಗರ ಪ್ರೀತಿ ದೊಡ್ಡದು. ಅವರು ನನ್ನನ್ನು ತುಂಬಾನೇ ಇಷ್ಟಪಟ್ರು ಎಂದು ಸಂಭ್ರಮದಿಂದ ಹೇಳಿಕೊಂಡಿದ್ದರು ಶಂಕರ್. ಈಗಲೂ ಒಮ್ಮೊಮ್ಮೆ ಅನಿಸುವುದಿಷ್ಟೆ: ಒಂದು ವೇಳೆ ನಿಜವಾದ ವೀರಬಾಹು, ಭೂತಯ್ಯ ಮತ್ತು ಯಮರಾಜರು ಇದ್ದಿದ್ದೇ ನಿಜವಾದರೂ ಅವರೆಲ್ಲ ನಮ್ಮ ಎಂ.ಪಿ. ಶಂಕರ್ ಮುಂದೆ ಡಲ್ಲು ಹೊಡೀತಿದ್ರು!
* ಒಬ್ಬ ಜನಪ್ರಿಯ ನಟನನ್ನು; ಅದರಲ್ಲೂ ಡಾ. ರಾಜ್ ಅವರಂಥ ಸೂಪರ್ಸ್ಟಾರ್ನನ್ನೂ ಅವರ ೧೫೦ನೇ ಸಿನಿಮಾದಲ್ಲಿ ಹೇಗೆ ತೋರಿಸಿದರೆ ಚೆಂದ ಎಂಬ ಒಂದು ಐಡಿಯಾ ಶಂಕರ್ಗೆ ಮೊದಲೇ ಇತ್ತು ಅನಿಸುತ್ತದೆ. ಏಕೆಂದರೆ, ರಾಜ್ ಅಭಿನಯದ ನೂರನೇ ಚಿತ್ರ ಎಂಬ ಹೆಗ್ಗಳಿಕೆಯ `ಭಾಗ್ಯದ ಬಾಗಿಲು’ ಆಗಲಿ, ಇನ್ನೂರನೇ ಸಿನಿಮಾ ಎಂಬ ಹೆಗ್ಗಳಿಕೆಯ `ದೇವತಾ ಮನುಷ್ಯ’ ಆಗಲಿ ಅಂಥ ಅಪರೂಪದ ಯಶಸ್ಸು ಪಡೆಯಲಿಲ್ಲ. ಆದರೆ, ೧೫೦ನೇ ಸಿನಿಮಾ ಎಂಬ ಹೆಗ್ಗಳಿಕೆಯ ಗಂಧದ ಗುಡಿ? ಬಿಡಿ, ಅದಕ್ಕೆ ಅದೇ ಸಾಟಿ. ಎಂ.ಪಿ. ಶಂಕರ್ ನೆನಪು ಚಿರಸ್ಥಾಯಿಯಾಗಿ ಉಳಿಯಲು ಅಷ್ಟು ಸಾಕಲ್ಲವೆ?
* `ನೀವು ಅತ್ತಿದ್ದು ಯಾವಾಗ?’ ಒಮ್ಮೆ ಅಚಾನಕ್ಕಾಗಿ ಹೀಗೆ ಕೇಳಿದಾಗ ಶಂಕರ್ ಹೇಳಿದ್ದರು: ನನ್ನ ೩೫ ವರ್ಷದ ಶ್ರಮದಂತಿದ್ದ ಮನೇನ ಆಗಷ್ಟೇ ಮಾರಿದ್ದೆ. ಅದು ಸುದ್ದಿಯಾಗಿಬಿಡ್ತು. ಬೀದಿಗೆ ಬಂದರೆ ಸಾಕು, ಸಿಕ್ಕವರೆಲ್ಲ ಅದೇ ವಿಷಯ ಕೇಳ್ತಿದ್ರು. ಬೇಜಾರಾಗಿ ಹೊರಗೆ ಬರೋದನ್ನೇ ನಿಲ್ಲಿಸ್ದೆ. ಆಗ ಹೆಂಡತಿ, ಮಕ್ಕಳೆಲ್ಲ- ಅದು ನೀವೇ ದುಡಿದದ್ದು. ನೀವೇ ಮಾರಿದ್ದು. ಕಷ್ಟ ಬಂದಾಗ ನೆರವಿಗೆ ಬಂತಲ್ಲ, ಅಷ್ಟೇ ಸಮಾಧಾನ. ಆ ಬಗ್ಗೆ ಬೇಸರ ಬೇಡ. ನಮಗೆ ಮನೆ, ಮರ್ಯಾದೆ, ವಿಳಾಸ, ಆಸ್ತಿ, ಪಾಸ್ತಿ ಎಲ್ಲವೂ ನೀವೇ ಅಂದರಂತೆ. ಅದನ್ನು ಕೇಳಿ ಮೌನವಾಗಿ ಅತ್ತಿದ್ದ ಶಂಕರ್, ಕಡೆಗೆ ಹೆಂಡತಿ ಮಕ್ಕಳಿಗೆಂದು ಬಾಡಿಗೆ ಮನೆಯೊಂದನ್ನು ಹಿಡಿದಾಗ ಬಿಕ್ಕಿಬಿಕ್ಕಿ ಅತ್ತು ಬಿಟ್ಟಿದ್ದರಂತೆ.
ಸಿನಿಮಾದಲ್ಲಾದರೆ ಅಳುವಿಗೆ ಆಕ್ಷನ್-ಸ್ಟಾರ್ಟ್-ಕಟ್ಗಳಿರುತ್ತವೆ. ಆದರೆ, ನಿಜ ಜೀವನದಲ್ಲಿ…
* `ಗಂಧದ ಗುಡಿ’ ನೋಡಿದ ಅದೆಷ್ಟೋ ಯುವಕರು ಅವರಿಂದ ಸ್ಫೂರ್ತಿ ಪಡೆದು `ಅರಣ್ಯ ಇಲಾಖೆ’ ಸೇರಿದ್ದುಂಟು. `ರಾಮಲಕ್ಷ್ಮಣ’ ನೋಡಿದ ಮಕ್ಕಳು ಪ್ರಾಣಿ ಸಾಕುವಂತೆ ಪೋಷಕರಿಗೆ ಒತ್ತಡ ತಂದ್ದು ಉಂಟು. ಇಂಥದನ್ನೆಲ್ಲ ಆಗಿಂದಾಗ್ಗೆ ಹೇಳಿಕೊಂಡು ಖುಷಿಪಡುತ್ತಿದ್ದ ಶಂಕರ್-ನಿಜವಾದ ಪ್ರಶಸ್ತಿ ಅಂದ್ರೆ ಇದೇನೇ ಅನ್ನುತ್ತಿದ್ದರು.
ಅಮಿತಾಬ್ಬಚ್ಚನ್ ನಾಯಕತ್ವದ ಒಂದು ಸಿನಿಮಾ ಮಾಡಬೇಕು ಎಂಬ ಕನಸನ್ನು ಎರಡೂವರೆ ದಶಕದ ಹಿಂದೆಯೇ ಕಂಡಿದ್ದವರು ಎಂ.ಪಿ. ಶಂಕರ್. ಅದಕ್ಕೆ ಒಪ್ಪಿದ್ದ ಅಮಿತಾಬ್, ಶಂಕರ್ ಹೇಳಿದ ಕಥೆ ಕೇಳಿ ಥ್ರಿಲ್ ಆಗಿದ್ದರು. ಆದರೆ, ಮಧ್ಯೆ ಯಾರೋ ಕಡ್ಡಿ ಆಡಿಸಿದಾಗ ಆ ಪ್ರಾಜೆಕ್ಟ್ ಕೂಡ ಬಿದ್ದು ಹೋಯಿತು. ಶಂಕರ್ರದು ಎಂಥ ಹೂಮನಸ್ಸು ಎಂದರೆ- ಆಗ ಕೂಡ ಅವರು ಬೇಸರದ ಮಾತಾಡಲಿಲ್ಲ. ಬದಲಿಗೆ, ಎಲ್ಲರಿಗೂ ಒಳಿತಾಗಲಿ ಎಂದಷ್ಟೇ ಹೇಳಿದರು.
ನಿಷ್ಠೆ, ಪ್ರಾಮಾಣಿಕತೆ, ಹೃದಯವಂತಿಕೆ, ಧೈರ್ಯ ಎಂಬ ಪದಗಳಿಗೆ ಪರ್ಯಾಯ ಎಂಬಂತಿದ್ದ ಶಂಕರ್, ಈಗ ನಾವ್ಯಾರೂ ಕಾಣದ ಲೋಕದಲ್ಲಿದ್ರಾರೆ. ಅದೇ ಲೋಕದಲ್ಲಿ ನಮ್ಮ ಅಣ್ಣಾವ್ರು ಹಾಗೂ `ಭೂತಯ್ಯನ ಮಗ’ ಲೋಕೇಶ್ ಕೂಡ ಇದ್ದಾರೆ! ಅಲ್ಲಿ ಅವರೆಲ್ಲ ಕೂತು ಪಟ್ಟಾಂಗ ಹೊಡೆಯುತ್ತಿದ್ದಾರೋ ಏನೋ… ಇಂತಿರುವಾಗಲೇ `ವೀರಬಾಹು’ವಿನ ಕಣ್ಮರೆಯೊಂದಿಗೆ `ಕುಲದಲ್ಲಿ ಕೀಳ್ಯಾವುದೋ’ ಹಾಡು ತಬ್ಬಲಿಯಾಗಿದೆ. ಒಂದರ್ಥದಲ್ಲಿ ನಾಡೂ…
ಕಡೆಗೆ, ಶಂಕರ್ ಅವರ ಹೃದಯವಂತಿಕೆಯನ್ನೇ ನೆನೆದು ಹೇಳೋಣ: ವೀರಬಾಹುವಿಗೆ ನಮಸ್ಕಾರ-

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: