ಕ್ಯಾನ್ಸರನ್ನು ಸೋಲಿಸಿಬಿಡಿ ಎನ್ನುತ್ತಾ…

 

ಚಂದುಲಾಲ್ ಜೈನ್

ಚಂದುಲಾಲ್ ಜೈನ್

ಅವರು ದುಗುಡದಿಂದಲೇ ಹೇಳಿದರು: `ನಿರ್ಮಾಪಕ ಚಂದೂಲಾಲ್ ಜೈನ್ ಗೊತ್ತಲ್ಲ? ಅವರ ವಯಸ್ಸು ಎಪ್ಪತ್ತೈದು. ನಿರ್ಮಿಸಿದ ಚಿತ್ರಗಳ ಸಂಖ್ಯೆ ಮೂವತ್ತೈದು. ಚಿತ್ರರಂಗದಲ್ಲಿ ಅವರು ಕಳೆದ ವರ್ಷಗಳ ಸಂಖ್ಯೆ ಕೂಡಾ ಮೂವತ್ತೈದು. ಒಂದು ಕಾಲದಲ್ಲಿ ಇಡಿಯ ಕನ್ನಡ ಚಿತ್ರರಂಗಕ್ಕೇ ಆಸರೆಯಾಗಿದ್ದ ಮನುಷ್ಯ ಆತ. ಅಂಥವರು ಇವತ್ತು ಎದ್ದು ನಿಲ್ಲುವುದಕ್ಕೂ ಬೇರೊಬ್ಬರ ಆಸರೆ ಪಡೆಯುವಂತಾಗಿದೆ. ಪಾಪ, ಅವರಿಗೆ ಬೆನ್ನು ಹುರಿಯ ಕ್ಯಾನ್ಸರ್ ಇದೆಯಂತೆ. ಹೃದಯದಲ್ಲೂ ಮೂರು ರಂಧ್ರಗಳು ಕಾಣಿಸಿವೆಯಂತೆ. ಒಂದು ಕಾಲದಲ್ಲಿ ಕನ್ನಡದ ಪ್ರತಿಷ್ಠಿತ ನಿರ್ಮಾಪಕ ಅನ್ನಿಸಿಕೊಂಡಿದ್ದ ಚಂದೂಲಾಲ್ ಜೈನ್, ಇವತ್ತು ರಾಜಾಜಿನಗರದ ಭಾಷ್ಯಂ ಸರ್ಕಲ್ ಹತ್ರ ಒಂದು ಬಾಡಿಗೆ ಮನೇಲಿದಾರಂತೆ. ಆರ್ಥಿಕವಾಗಿ ಕೂಡ ಅವರಿಗೆ ಒಂದಷ್ಟು ಜಾಸ್ತೀನೇ ಸಮಸ್ಯೆ ಇದೆಯಂತೆ. ಪಾಪ ಕಣ್ರೀ…’
ಪ್ರಿಯ ಚಂದೂಲಾಲ್ ಜೈನ್ ಜೀ, ಅವರು ಇಷ್ಟು ಹೇಳಿದ್ದೇ ತಡ, ಎದೆಯಾಳದಲ್ಲಿ ಒಂದು ಬಳ್ಳಿ ಹಾಗೇ ಸುಮ್ಮನೆ ಕದಲಿದಂತಾಯಿತು. ತುಂಬ ನೋವಾಯಿತು. ಒಂಥರಾ ಸಂಕಟವಾಯಿತು. ನಿಮಗೆ ಸಾಂತ್ವನ ಹೇಳಬೇಕು. ನಿಮ್ಮ ಆರೋಗ್ಯಕ್ಕಾಗಿ, ಒಳಿತಿಗಾಗಿ, ಕ್ಯಾನ್ಸರ್ ವಿರುದ್ಧದ ಗೆಲುವಿಗಾಗಿ ಪ್ರಾರ್ಥಿಸಬೇಕು ಅನ್ನಿಸ್ತು. ಅದೇ ವೇಳೆಗೆ, ಆರುತಿಂಗಳ ಹಿಂದೆ ಹಿರಿಯ ಪತ್ರಕರ್ತರೊಂದಿಗೆ ನೀವೇ ಹೇಳಿಕೊಂಡಿದ್ದ `ನಿಮ್ಮ ಬದುಕಿನ ಕಥೆ’ ಫ್ಲ್ಯಾಶ್ಬ್ಯಾಕ್ ಥರಾ ಕೇಳಿಸತೊಡಗಿತು. ಸ್ವಲ್ಪ ಸಂಕೋಚ, ಸ್ವಲ್ಪ ಸಂತಸ, ಒಂದಿಷ್ಟು ಹೆಮ್ಮೆಯಿಂದಲೇ ನೀವು ಹೇಳಿಕೊಂಡಿದ್ದಿರಿ:
ನಮ್ಮದು ದಾವಣಗೆರೆ. ಬಟ್ಟೆ ವ್ಯಾಪಾರ, ನನಗೆ ಹಿರಿಯರಿಂದ ಬಂದ ಬಳುವಳಿ. ಮೂಲತಃ ವ್ಯಾಪಾರಿಯಾದ ನನಗೆ ಚಿತ್ರರಂಗದ ಮೇಲಿನ ಆಕರ್ಷಣೆ ಅದ್ಯಾಕೆ ಬಂತೋ ಕಾಣೆ. ಅದೊಂದು ದಿನ ಮನೆ ಬಿಟ್ಟು ಓಡಿ ಹೋಗಿ ಮುಂಬೈ ತಲುಪಿಕೊಂಡೆ. ಅಲ್ಲಿ, ಮಲಗಲು ಜಾಗ ಸಿಕ್ಕಿದ್ದು ಗೇಟ್ವೇ ಆಫ್ ಇಂಡಿಯಾದ ಮೇಲಿರುವ ಕಲ್ಲು ಬೆಂಚಿನಲ್ಲಿ. ಮುಂಬಯಿಯನ್ನೂ, ಅಲ್ಲಿನ ಚಿತ್ರರಂಗವನ್ನೂ ನಾನು ಬೆರಗಿನಿಂದ ನೋಡುತ್ತಿದ್ದಾಗಲೇ ಅದೊಂದು ದಿನ ಜೇಬಲ್ಲಿದ್ದ ದುಡ್ಡು ಪಿಕ್ಪಾಕೆಟ್ ಆಗಿಹೋಯ್ತು. ಪರಿಣಾಮ ಉಪವಾಸ. ಇಡೀ ದಿನ ಹಾಗೇ ಕೂತಿರುತ್ತಿದ್ದೆ. ಆ ವೇಳೆಗೆ ಹಾಕಿದ್ದ ಶರ್ಟೂ ಅಲ್ಲಲ್ಲಿ ಹರಿದಿತ್ತು. ಅಂಥ ಸಂದರ್ಭದಲ್ಲೇ, ಅದೇ ಗೇಟ್ ವೇ ಆಫ್ ಇಂಡಿಯಾದ ಬಳಿ ಶೂಟಿಂಗ್ಗೆ ಬಂದ ಅವತ್ತಿನ ಹಿಂದಿ ಸೂಪರ್ಸ್ಟಾರ್ ದಿಲೀಪ್ ಕುಮಾರ್ ಪರಿಚಯವಾದರು. ಅವರೊಂದಿಗೆ ನನ್ನ ಕನಸು ಹೇಳಿಕೊಂಡೆ. ಚಿತ್ರರಂಗಕ್ಕೆ ಬರಬೇಕು ಅಂತಿದೀನಿ. ಹೆಲ್ಪ್ ಮಾಡಿ ಅಂದೆ. ದಿಲೀಪ್ ಕುಮಾರ್ ಒಮ್ಮೆ ನಕ್ಕರು. ನಂತರ ಚಿತ್ರರಂಗದಲ್ಲಿರುವ ದಗಲ್ಬಾಜಿತನವನ್ನು ವಿವರಿಸಿ, ಊರಿಗೆ ವಾಪಸಾಗಿ ಎಂದು ಪುಸಲಾಯಿಸಿದರು….
ಉಹುಂ, ನಾನು ಒಪ್ಪಲಿಲ್ಲ. ಹೇಗಾದ್ರೂ ಸರಿ, ಊರಿಗೆ ಈ ಸ್ಥಿತೀಲಿ ಹೋಗಬಾರದು. ಚಿತ್ರರಂಗದಲ್ಲೇ ಇದ್ದು ಸಾಧಿಸಬೇಕು ಅಂದುಕೊಂಡೆ. ಹಠವಿತ್ತು. ಆದ ಅವಮಾನ ಬೆನ್ನಿಗಿತ್ತು. ನನ್ನನ್ನು ಭಿಕ್ಷುಕನನ್ನಾಗಿ ಮಾಡಿತ್ತಲ್ಲ ಗೇಟ್ವೇ ಆಫ್ ಇಂಡಿಯಾದ ಫುಟ್ಪಾತು? ಅದೇ ಜಾಗದಲ್ಲಿ ಮುಂದೊಂದು ದಿನ ಸಿನಿಮಾ ಶೂಟಿಂಗ್ ಮಾಡ್ತೀನಿ ಅಂದುಕೊಂಡೆ. ಹಠವಿತ್ತು. ಆದ ಅವಮಾನ ಬೆನ್ನಿಗಿತ್ತು. ಬಾಂಬೆಯಿಂದ ಸೀದಾ ಚೆನ್ನೈಗೆ ಬಂದೆ. ಆರ್ಥಿಕವಾಗಿ ಒಂದಿಷ್ಟು ಚೇತರಿಸ್ಕೋಬೇಕು ಅನ್ನಿಸ್ತು. ಒಂದು ಬಟ್ಟೆ ಅಂಗಡಿ ಇಟ್ಟೆ. ಚಿತ್ರಂಗಕ್ಕೆ ಹೋಗಬೇಕು ಅನ್ನೋ ಆಸೆ ಜತೆಗೇ ಇತ್ತು. ಆ ದಿನಗಳಲ್ಲಿ ಪರಿಚಯವಾದವರೇ ಡಾ. ರಾಜ್ಕುಮಾರ್. ಆ ವೇಳೆಗೆ ನನಗೆ ಮದುವೆಯಾಗಿತ್ತು. ರಾಜ್ ಮೇಲಿನ ನನ್ನ ಅಭಿಮಾನ ಎಷ್ಟಿತ್ತು ಅಂದರೆ, ನನ್ನ ಹಿರಿಯ ಮಗನಿಗೂ ಆ ಪುಣ್ಯಾತ್ಮನ ಹೆಸರನ್ನೇ ಇಟ್ಟುಕೊಂಡಿದ್ದೆ…
…. ಹೀಗೆ ಬೆಳೆದ ಸ್ನೇಹವೇ ನನ್ನನ್ನು ನಿರ್ಮಾಪಕನಾಗಲು ಪ್ರೇರೇಪಿಸಿತು. ಆಗ ಜತೆಗೆ ನಿಂತು ಧೈರ್ಯ ತುಂಬಿದವರು ಡಾ. ರಾಜ್ ಸೋದರ ವರದಪ್ಪ. ಡಾ. ರಾಜ್, ಭಾರತಿ, ಎಂ.ವಿ. ರಾಜಮ್ಮ, ದ್ವಾರಕೀಶ್ರನ್ನು ಹಾಕಿಕೊಂಡು ನಿರ್ಮಿಸಿದ ಮೊದಲ ಚಿತ್ರವೇ `ತಾಯಿ ದೇವರು’. ಚಿತ್ರ ನೂರು ದಿನ ಓಡಿತು… ಮೊದಲ ಚಿತ್ರದಲ್ಲೇ ನನಗೆ ಜಾಕ್ಪಾಟ್ ಹೊಡೀತು.
***
ಪ್ರಿಯ ಚಂದೂಲಾಲ್ ಜೈನ್ಜೀ, ಮುಂದಿನ ಕಥೆ ಸಮಸ್ತ ಚಿತ್ರರಂಗಕ್ಕೇ ಗೊತ್ತಿದೆ. ಚಿತ್ರರಂಗ ಇನ್ನೂ `ತಾಯಿ ದೇವರು’ ಚಿತ್ರದ ಜಪದಲ್ಲಿದ್ದಾಗಲೇ, ಏಕಾಏಕಿ ದ್ವಾರಕೀಶ್ನನ್ನೇ ಹೀರೋ ಮಾಡ್ಕೊಂಡು `ಕುಳ್ಳ ಏಜೆಂಟ್ ೦೦೦’ ತಯಾರಿಸಲು ನೀವು ಸ್ಕೆಚ್ ಹಾಕಿದ್ರಿ. ಅದನ್ನು ಕಂಡವರು `ಹೋಗಿ ಹೋಗಿ ದ್ವಾರಕೀಶ್ಗೆ ಹೀರೋ ಪಾರ್ಟಾ’ ಎಂದು ನಕ್ಕರು. ಆದರೆ, ಆ ಸಿನಿಮಾ ಕೂಡ ಹಿಟ್ ಆಯ್ತು ನೋಡಿ, ಜನ ಮಾತೇ ಮರೆತರು. ಅವರು ತಿರುಗಿ ಪ್ರಶ್ನೆ ಕೇಳುವ ಮೊದಲೇ ಅದೇ ದ್ವಾರಕೀಶ್ ನಾಯಕತ್ವದ `ಕೌಬಾಯ್ ಕುಳ್ಳ’ ಬಂದ. ಅದೂ ಸಕ್ಸಸ್. ಈ ಎರಡೂ ಚಿತ್ರಗಳ ಲಾಭ ತಗೊಂಡು `ಭೂತಯ್ಯನ ಮಗ ಅಯ್ಯು’ ನಿರ್ಮಿಸಿದ್ರಲ್ಲ? ಆಗಂತೂ ಇಡೀ ಕನ್ನಡ ಚಿತ್ರರಂಗವೇ ನಿಮ್ಮನ್ನು ಕೊಂಡಾಡಿತು. ಈ ಮಾರ್ವಾಡಿ ಮುಟ್ಟಿದ್ದೆಲ್ಲ ಚಿನ್ನ ಆಗ್ತಾ ಇದೆ ಕಣ್ರೀ ಎಂದು ಮಾತಾಡಿಕೊಂಡಿತು.
ಹೌದಲ್ವ? ಆ ನಂತರದ್ದು ಸೋಲು- ಗೆಲುವಿನ ಹಾದಿ. `ಹೇಮಾವತಿ’, `ತಬ್ಬಲಿಯು ನೀನಾದೆ ಮಗನೆ’ ಸಿನಿಮಾಗಳು ಕೈ ಕಚ್ಚಿದವು. `ನಾರದ ವಿಜಯ’, `ಭೂಲೋಕದಲ್ಲಿ ಯಮರಾಜ’ ಚಿತ್ರಗಳು ಕೈ ಹಿಡಿದವು. ಆ ನಂತರ ಬಂದ `ಭಕ್ತ ಸಿರಿಯಾಳ’ವಂತೂ ಆ ಕಾಲಕ್ಕೆ ಸೂಪರ್ ಹಿಟ್ಟಾಯಿತು. ಒಂದು ಕಾಲದಲ್ಲಿ ಬರಿಗೈಲಿ ನಿಲ್ಲಿಸಿ ಅಣಕಿಸಿದ ಮುಂಬಯಿ ನಿಮಗೆ ನೆನಪಾಗಿದ್ದೇ ಆಗ. ಇದ್ದ ಬದ್ದ ಕಾಸನ್ನೆಲ್ಲ ಒಟ್ಟು ಮಾಡಿಸಿಕೊಂಡು, ಅವತ್ತಿನ ಮಟ್ಟಿಗೆ ಬಾಲಿವುಡ್ ಸೂಪರ್ಸ್ಟಾರ್ ಆಗಿದ್ದ ಗೋವಿಂದನನ್ನು ಹೀರೋ ಮಾಡಿಕೊಂಡು `ಪ್ಯಾರ್ ಕರ್ಕೆ ದೇಖೋ’ ಸಿನಿಮಾ ಶುರು ಮಾಡಿದ್ರಿ ನೀವು. ಅದೇ ಮುಂಬಯಿಯ ಗೇಟ್ ವೇ ಆಫ್ ಇಂಡಿಯಾದ ಮುಂದೆಯೇ ಶೂಟಿಂಗಾಯ್ತು. ಅದಕ್ಕೂ ಮೊದಲೇ ಓಂಪುರಿ, ನಾಸಿರುದ್ದೀನ್ಶಾರನ್ನು ಹಾಕಿಕೊಂಡು `ಗೋಧೂಳಿ’ ಸಿನಿಮಾ ತಯಾರಿಸಿ `ಚಂದೂಲಾಲ್ ಜೈನ್ ಅಂದ್ರೆ ಏನು ಅಂತ ಬಾಲಿವುಡ್ಗೆ ತೋರಿಸಿಕೊಟ್ಟಿದ್ರಿ. ಹೌದಲ್ವ ಸರ್ ?
ಮುಂದಿನದ್ದು ಕೂಡ ಪಸಂದ್ ಎಂಬಂಥ ಕಥೆಯೇ. ವಯೋ ಸಹಜ ಹುಮ್ಮಸ್ಸೋ ಅಥವಾ ಹಠವೋ ಗೊತ್ತಿಲ್ಲ. ಗಣ್ಯ ನಿರ್ಮಾಪಕ ಅನ್ನಿಸಿಕೊಂಡ ಮೇಲೆ ರಜನಿಕಾಂತ್, ಕಮಲ ಹಾಸನ್, ಸರಿತಾರನ್ನು ಹಾಕಿಕೊಂಡು ಬಾಲಚಂದರ್ ನಿರ್ದೇಶನದಲ್ಲಿ `ತಪ್ಪಿದ ತಾಳ’ ನಿರ್ಮಿಸಿದ್ರಿ. ಹಿಂದೆಯೇ `ಬೆಂಕಿಯಲ್ಲಿ ಅರಳಿದ ಹೂವು’, `ಪ್ರಾಯ ಪ್ರಾಯ ಪ್ರಾಯ’, `ರುದ್ರನಾಗ’, `ಅರ್ಚನಾ’, `ಗಂಗವ್ವ ಗಂಗಾಮಾಯಿ’ಗಳಿಗೆ ದುಡ್ಡು ಹಾಕಿದ್ರಿ. ಇಡೀ ಸಿನಿಮಾನ ಒಂದೇ ದಿನದಲ್ಲಿ ಯಾಕೆ ತೆಗೀಬಾರ್ದು ಎಂದು ಅದ್ಯಾರೋ ಹೇಳಿದರೆ ಹಿಂದೆ ಮುಂದೆ ನೋಡದೆ ದುಡ್ಡು ಹಾಕಿ `ಇದು ಸಾಧ್ಯ’ ಅಂದಿರಿ. ಮುಂದೆ, `ವೀರಪ್ಪನ್ ಅಟ್ಟಹಾಸ ಮುಗಿಲು ಮುಟ್ಟಿದ್ದ ದಿನಗಳಲ್ಲಿಯೇ `ವೀರಪ್ಪನ್’ ಸಿನಿಮಾ ನಿರ್ಮಿಸಿ ದುಡ್ಡು ಮಾಡಿಕೊಂಡ್ರಿ. (ಆ ಸಿನಿಮಾದಲ್ಲಿ ವೀರಪ್ಪನ್ ಪಾತ್ರಧಾರಿ ದೇವರಾಜ್ ಕೈಲಿ-ಚಂದೂಲಾಲ್ ಜೈನಾ? ಬರಿಗೈಲಿ ಬಂದು ಚೆಂಬಿನ ತುಂಬಾ ದುಡ್ಡು ಮಾಡ್ಕೊಂಡ ಏನು ಅವನು… ಎಂದೆಲ್ಲಾ ಹೇಳಿಸಿದ್ರಿ.) ಈ ವೇಳೆಗೆ ಅದೆಷ್ಟೋ ಪ್ರಶಸ್ತಿಗಳು ನಿಮ್ಮನ್ನೇ ಹುಡುಕಿಕೊಂಡು ಬಂದಿದ್ದವು.
ಪ್ರಿಯ ಚಂದೂಲಾಲ್ ಜೈನ್ ಜೀ, ಇದು ನಮಗೆಲ್ಲ ಗೊತ್ತಿರುವ `ನಿರ್ಮಾಪಕ’ ಚಂದೂಲಾಲ್ ಜೈನ್ ಚರಿತೆ…
***
ಸರ್, ಒಂದೆರಡಲ್ಲ, ಅದೆಷ್ಟೋ ಲಕ್ಷ ರೂ. ಖರ್ಚು ಮಾಡಿ ಸಿನಿಮಾ ತಯಾರಿಸುವವನು ನಿರ್ಮಾಪಕ. ಆ ಸಿನಿಮಾ ಹಿಟ್ ಆದರೆ ಲಕ್ಷ ಲಕ್ಷ ಬಾಚಿಕೊಳ್ಳುವವನೂ ಅದೇ ನಿರ್ಮಾಪಕ. ಹಾಗಾಗಿ, ನಿರ್ಮಾಪಕರು ಅಂದರೆ, ಅವರೆಲ್ಲ ಕುಬೇರನ ಅಣ್ಣ ತಮ್ಮಂದಿರು. ಅವರ ಮನೆಗಳಲ್ಲಿ ಲಕ್ಷ್ಮಿ ಕಾಲು ಮುರ್ಕೊಂಡು ಬಿದ್ದಿರ್ತಾಳೆ. ವಿಪರೀತ ದುಡ್ಡಿರ್ತದಲ್ಲ? ಅದೇ ಕಾರಣಕ್ಕೆ ಅವರು ಅರಮನೆಯಂ ಬಂಗಲೆಗಳಲ್ಲಿ ವಾಸವಾಗಿರ್ತಾರೆ. ಎರಡು ತಲೆಮಾರಿಗೂ ಆಗುವಷ್ಟು ಆಸ್ತಿ ಮಾಡಿರ್ತಾರೆ… ಇಂಥವೇ ನಂಬಿಕೆಗಳಿವೆ ಜನರಿಗೆ. ಅಖಂಡ ಮೂವತ್ತೈದು ವರ್ಷಗಳ ಕಾಲ ಚಿತ್ರರಂಗದಲ್ಲಿದ್ದ ನಿಮ್ಮ ಬಗೆಗೂ ಅಂಥದೊಂದು ಅಭಿಪ್ರಾಯ ನಿನ್ನೆ ಮೊನ್ನೆಯವರೆಗೂ ಹಲವರಿಗಿತ್ತು.
ಆದರೆ… ಒಂದು ಕಾಲದಲ್ಲಿ ಇಡೀ ಚಿತ್ರರಂಗಕ್ಕೆ ಆಸರೆಯಾಗಿದ್ದ ಚಂದೂಲಾಲ್ ಜೈನ್ಗೆ ಇವತ್ತು ಸ್ವಂತಕ್ಕೊಂದು ಮಗ ಹಾಗೂ ಹೆಂಡತಿಯೊಂದಿಗೆ ಜೈನ್ ಬಾಡಿಗೆ ಮನೆಯಲ್ಲಿದ್ದಾರೆ. ಒಂದು ಕಡೆ ಕ್ಯಾನ್ಸರ್, ಇನ್ನೊಂದು ಕಡೆ ಹೃದಯದ ತೊಂದರೆ. ಆಸ್ಪತ್ರೆಗೆ, ಔಷಧಿಗೆಂದು ವಿಪರೀತ ಓಡಾಡಬೇಕಲ್ಲ? ಹಾಗಾಗಿ ಕಂಗಾಲಾಗಿದ್ದಾರೆ. ಆರ್ಥಿಕವಾಗಿಯೂ ಬಳಲಿದ್ದಾರೆ… ಎಂಬರ್ಥದ ಸುದ್ದಿ ಕೇಳಿದ ಮೇಲೆ ನಮ್ಮ ಕಲ್ಪನೆಯ ಚಂದೂಲಾಲ್ ಜೈನ್ ಚಿತ್ರ ಮಾಯವಾಗಿದೆ. ಅಂಥ ದೊಡ್ಡ ನಿರ್ಮಾಪಕ ಸಂಕಷ್ಟದಲ್ಲಿದ್ದಾರೆ ಎಂದಾಕ್ಷಣ ಯಾವುದೋ ಸಂಕಟ ಹಿಂಡಿದಂತಾಗುತ್ತದೆ. ಯಾವಾಗಲೂ ಕನಸಿನ ಲೋಕದಲ್ಲೇ ವಿಹರಿಸುವ; ಬೆಳ್ಳಿ ತೆರೆಯ ಮೇಲೆ ಮೂರು ಲೋಕವನ್ನು ತೋರಿಸುವ ನಿರ್ಮಾಪಕರು ತಮ್ಮ ಕಷ್ಟದ ದಿನಗಳಿಗೆಂದು ದೊಡ್ಡದೊಂದು ಇಡುಗಂಟನ್ನು ಯಾಕೆ ಇಟ್ಟುಕೊಳ್ಳಲಿಲ್ಲ ಅನಿಸಿ ಬೇಸರವಾಗುತ್ತದೆ.
ಸರ್, ನೇರವಾಗಿ ಹೇಳ್ತಿದೀನಿ. ನಿಮ್ಮ ಬಗ್ಗೆ, ನಿಮ್ಮ ಸಾಹಸದ ಬಗ್ಗೆ, ತೆರೆಗಿತ್ತ ಸಿನಿಮಾಗಳ ಬಗ್ಗೆ ನಮಗೆ ಪ್ರೀತಿಯಿದೆ, ಗೌರವವಿದೆ. ಹಠವೊಂದಿದ್ದರೆ, ಸಾಧಿಸುವ ಛಲವಿದ್ದರೆ ಬರಿಗೈಲಿದ್ದವನೂ ಬಾನೆತ್ತರ ಬೆಳೆಯಬಹುದು ಎಂದು ತೋರಿಸಿಕೊಟ್ಟಿದ್ದೀರಲ್ಲ, ಆ ಕುರಿತು ಹೆಮ್ಮೆಯಿದೆ. ಒಂದು ಕಾಲದಲ್ಲಿ ಚಿತ್ರರಂಗದ ಅದೆಷ್ಟೋ ಮಿಥ್ಗಳನ್ನು ಸುಳ್ಳು ಮಾಡಿದವರು ನೀವು. ಅದೊಮ್ಮೆ ನಿರ್ಮಿಸಿದ ಚಿತ್ರಗಳೆಲ್ಲ ಗೋತಾ ಹೊಡೆದರೂ ಹೆದರದೆ ಮತ್ತೊಂದು ಹೊಸ ಚಿತ್ರಕ್ಕೆ ದುಡ್ಡು ಹಾಕಿ, ಸೋಲನ್ನೇ ಸೋಲಿಸಿದವರು ನೀವು. `ವೀರಪ್ಪನ್’ ಸಿನಿಮಾ ನಿರ್ಮಾಣದ ಸಂದರ್ಭದಲ್ಲಿ ವೀರಪ್ಪನ್ ಕಡೆಯಿಂದಲೇ ಏನಾದರೂ ತೊಂದರೆ ಆಗಿಬಿಡಬಹುದೇನೋ ಎಂದು ಎಲ್ಲರೂ ಹೆದರಿದ್ದಾಗ ಕೂಡ-ಹೆದರದೇ ಚಿತ್ರ ನಿರ್ಮಿಸಿದವರು ನೀವು. ಅಂಥ ನಿಮ್ಮನ್ನು ಈಗ ಕ್ಯಾನ್ಸರ್ ಹೆದರಿಸುತ್ತಿದೆ.
ನಮ್ಮ ಈ ಕ್ಷಣದ ಪ್ರಾರ್ಥನೆ ಏನೆಂದರೆ, ಕ್ಯಾನ್ಸರ್ ಎಂಬ ಹೆಮ್ಮಾರಿಯ ವಿರುದ್ಧ ನಿಮಗೆ ಗೆಲುವು ಸಿಗಲಿ. ಅದರ ಹಿಂದೆಯೇ ಅಥವಾ ಅದಕ್ಕೂ ಮೊದಲೇ ಹೃದಯದ ಸಮಸ್ಯೆ ಕೂಡ ವಾಸಿಯಾಗಲಿ. ಎಲ್ಲವನ್ನೂ ಕಳೆದುಕೊಂಡಿದ್ದ ಭಕ್ತ ಸಿರಿಯಾಳನಿಗೆ, ಆ ಸಿನಿಮಾದ ಕಡೆಯ ದೃಶ್ಯದಲ್ಲಿ ಪರಶಿವ ಒಂದೇ ನಿಮಿಷದಲ್ಲಿ ಎಲ್ಲವನ್ನೂ ಮರಳಿ ಕೊಡುತ್ತಾನಲ್ಲ? ಆ ಪವಾಡ ನಿಮ್ಮ ನಿಜ ಜೀವನದಲ್ಲೂ ನಡೆದು ಹೋಗಲಿ. ಶಿವ ಕೊಟ್ಟಿದ್ದು ಎಂಬ ನೆಪದಲ್ಲಿ ಹತ್ತಾರು ಕಡೆಯಿಂದ ಇಷ್ಟಿಷ್ಟೇ ದುಡ್ಡು ಬಂದು ನಿಮ್ಮ ಧೈರ್ಯ ಮತ್ತು ಸ್ಥೈರ್ಯವನ್ನು ಹೆಚ್ಚಿಸಲಿ. ಮುಂದೆ, ಎರಡೇ ತಿಂಗಳ ನಂತರ ಎಪ್ಪತ್ತೈದರ ನೀವು, ಆಗಷ್ಟೇ ಇಪ್ಪತ್ತೈದು ತುಂಬಿದ ಹುಡುಗನ ಥರಾ ಹೊಸದೊಂದು ಚಿತ್ರ ನಿರ್ಮಾಣಕ್ಕೆ ಮುಂದಾಗುವುದನ್ನು ನೋಡುವ ಖುಷಿ ಕನ್ನಡಿಗರದ್ದಾಗಲಿ.
ಅಂಥದೊಂದು ಪ್ರಾರ್ಥನೆಯೊಂದಿಗೆ, ನಿಮಗೆ ಮತ್ತೆ ಮತ್ತೆ ಒಳಿತು ಹಾರೈಸುತ್ತಾ-ನಮಸ್ಕಾರ…

Advertisements

2 Comments »

 1. 1
  kavya Says:

  chitrarangada hindina karaala mukavanna parichayisi kottiddira…adu adbhutavada nimmade shailiyalli…..

  thanks mani

 2. 2
  madhu Says:

  isht sundaravada vyaktiya hinde ishtu karala adyaya ide antha gotaythu mani thanks


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: