ಗೆಂಡೆತಿಮ್ಮನೇ ತಾವಾಗಿ ಗೌಡರು ತೇರಾ ಏರಿ… ಹಾಡು ಬರೆದರು!

null

ತೇರಾ ಏರಿ ಅಂಬರದಾಗೆ…
ಚಿತ್ರ: ಪರಸಂಗದ ಗೆಂಡೆತಿಮ್ಮ
ಗೀತ ರಚನೆ: ದೊಡ್ಡರಂಗೇಗೌಡ
ಗಾಯಕರು: ಎಸ್.ಪಿ. ಬಾಲಸುಬ್ರಹ್ಮಣ್ಯಂ
ಸಂಗೀತ: ರಾಜನ್-ನಾಗೇಂದ್ರ

ತೇರಾ ಏರಿ ಅಂಬರದಾಗೆ ನೇಸರ ನಗುತಾನೆ
ಮರಗಿಡ ತೂಗ್ಯಾವೆ-ಹಕ್ಕಿ ಹಾರ್ಯಾವೇ
ಬೀರ್ಯಾವೇ… ಚೆಲುವ… ಬೀರ್ಯಾವೇ
ಬಾ ನೋಡಿ ನಲಿಯೋಣ ತಮ್ಮಾ||

ಬೇಲಿ ಮ್ಯಾಗೆ ಬಣ್ಣ ಬಣ್ಣದ ಹೂವು ಅರಳ್ಯಾವೆ
ಆ ಹೂವಿನ ತುಂಬ ಸಣ್ಣ ಚಿಟ್ಟೆ ಕುಂತಾವೆ
ಬಾಗಿ ಬೀಗಿ ಅತ್ತ ಇತ್ತ ಬಾಳೆ ಬಳುಕ್ಯಾವೆ
ಆ ಬಾಳೆವನವೇ ನಕ್ಕು ಹಣ್ಣು ತಂದಾವೆ
ಕುಂತರೆ ಸೆಳೆವಾ ಸಂತಸ ತರುವಾ
ಹೊಂಗೆ ಟೊಂಗೆ ತೂಗಿ ತೂಗಿ ಗಾಳಿ ಬೀಸ್ಯಾವೆ||

ಭೂಮಿ ಮ್ಯಾಗೆ ಹಚ್ಚ ಹಚ್ಚಗೆ ಹಾದಿ ತೆರೆದಾವೆ
ಆ ಹಾದಿ ಅಕ್ಕ ಪಕ್ಕ ಬಳ್ಳಿ ಬೆಳೆದಾವೆ
ಸಾಲುಸಾಲು ಬೆಟ್ಟ ಗುಡ್ಡ ಮೌನ ತಳೆದಾವೆ
ಆ ಮೌನದ ಗಾನ ಎಲ್ಲರ ಮನಸ ಸೆಳೆದಾವೆ
ಭಾವ ಬಿರಿದು ಹತ್ತಿರ ಕರೆದು
ಮಾವು ಬೇವು ತಾಳೆ ತೆಂಗು ಲಾಲಿ ಹಾಡ್ಯಾವೆ||

ಭೇದ ಭಾವ ಮುಚ್ಚುಮರೆ ಒಂದೂ ಮಾಡ್ದೇನೆ
ಆ ಸೂರ್ಯ ಒಂದೇ ಬೆಳಕ ನಮಗೆ ನೀಡ್ಯಾನೆ
ಗಾಳಿ ನೀರು ಎಲ್ಲ ಕೊಟ್ಟು ಜಗವ ನಡೆಸ್ಯಾನೆ
ಆ ಸಿರಿಯ ಹಂಚಿಕೊಂಡರೆ ಬಾಳು ಸವಿಜೇನೆ
ಪ್ರೀತಿ ಬೆಳೆದು ಸ್ನೇಹ ತಳೆದು
ನಗ್ತಾ ನಗ್ತಾ ನಾವು ನೀವು ಸವಿಯುವ ಸುಖವನ್ನೇ||

ದೊಡ್ಡ ರಂಗೇಗೌಡ್ರು, ಹಚ್ಚೊಂಡ್ರು ಪೌಡ್ರು…..
`ಪರಸಂಗದ ಗೆಂಡೆತಿಮ್ಮ’ ಸಿನಿಮಾಕ್ಕೆ ದೊಡ್ಡ ರಂಗೇಗೌಡರು ಹಾಡು ಬರೆಯಲು ಒಪ್ಪಿಕೊಂಡಾಗ ಹಲವಾರು ಜನ ಹೀಗೆ ತಮಾಷೆ ಮಾಡಿದ್ದರಂತೆ. `ಗೆಂಡೆ ತಿಮ್ಮ’ನಿಗೂ ಮೊದಲು ಪುಟ್ಟಣ್ಣ ಕಣಗಾಲ್ ನಿರ್ದೇಶನದ `ಪಡುವಾರಹಳ್ಳಿ ಪಾಂಡವರು’ ಚಿತ್ರಕ್ಕೆ `ಏಸು ವರ್ಸ ಆಯ್ತೆ ನಿಂಗೆ ನನ್ನ ಬಂಗಾರಿ’ ಎಂಬ ಸೂಪರ್ ಹಿಟ್ ಗೀತೆಯನ್ನು ರಚಿಸಿದ್ದುದು ನಿಜವಾದರೂ ಅದೇಕೋ ಚಿತ್ರರಂಗ ಗೌಡರನ್ನು ಸೀರಿಯಸ್ಸಾಗಿ ತೆಗೆದುಕೊಂಡಿರಲಿಲ್ಲ. ಬದಲಿಗೆ, ಕವಿಯಾಗಿ ದೊಡ್ಡ ಹೆಸರು ಮಾಡಿರುವ ದೊಡ್ಡ ರಂಗೇಗೌಡರು ಚಿತ್ರರಂಗಕ್ಕೆ ಬರಬಾರದಿತ್ತೇನೋ ಎಂದೇ ಆಗ ಅಭಿಪ್ರಾಯಪಡಲಾಗಿತ್ತು.
ಆದರೆ, ಹಳ್ಳಿಯ ಕಥೆ ಹೊಂದಿದ್ದ `ಪರಸಂಗದ ಗೆಂಡೆತಿಮ್ಮ’ಕ್ಕೆ ಜಾನಪದ ಶೈಲಿಯ ಹಾಡು ಬರೆಯಲು ದೊಡ್ಡರಂಗೇಗೌಡರೇ ಸರಿ ಎಂದು ಆ ಚಿತ್ರದ ನಿರ್ದೇಶಕ ಮಾರುತಿ ಶಿವರಾಂ ನಿರ್ಧರಿಸಿಬಿಟ್ಟಿದ್ದರು. `ಪಡುವಾರಳ್ಳಿ…’ ಸಿನಿಮಾಕ್ಕೆ ಗೌಡರು ಬರೆದಿದ್ದ ಹಾಡುಗಳು ಅವರನ್ನು ತುಂಬ ಇಂಪ್ರೆಸ್ ಮಾಡಿದ್ದವು. ಅದನ್ನೇ ಖುಷಿಯಿಂದ ಹೇಳಿಕೊಂಡ ಶಿವರಾಂ- `ನೀವು ಆರಾಮಾಗಿದ್ಕೊಂಡು ಹಾಡು ಬರೀರಿ. ಮದ್ರಾಸಿನ ಸ್ವಾಗತ್ ಹೋಟೆಲ್ನಲ್ಲಿ ರೂಂ ಮಾಡಿಕೊಡ್ತೇನೆ’ ಅಂದರಂತೆ.
ಇದು ಎಪ್ಪತ್ತರ ದಶಕದ ಮಾತು. ಆಗ ಚಿ. ಉದಯಶಂಕರ್ ಜನಪ್ರಿಯತೆಯ ತುತ್ತ ತುದಿಯಲ್ಲಿದ್ದರು. ವಿಪರೀತ ಬಿಜಿಯಾಗಿದ್ದ ಅವರು ದಿನಕ್ಕೆ ೮-೯ ಚಿತ್ರಗಳಿಗೆ ಹಾಡು ಬರೀತಿದ್ದುದೂ ಉಂಟು. ಇಂಥ ಸಂದರ್ಭದಲ್ಲಿಯೇ ಸಂಗೀತ ನಿರ್ದೇಶಕರಾದ ರಾಜನ್-ನಾಗೇಂದ್ರರ ಮುಂದೆ ದೊಡ್ಡರಂಗೇಗೌಡರನ್ನು ಕರೆದೊಯ್ದು ನಿಲ್ಲಿಸಿದ ಮಾರುತಿ ಶಿವರಾಂ, ಇವರೇ ನನ್ನ ಸಿನಿಮಾದ ಗೀತೆರಚನೆಕಾರರು ಎಂದರಂತೆ. ಗೌಡರ ಆಗಿನ ಪೀಚು ದೇಹಾಕೃತಿಯನ್ನು ಕಂಡ ರಾಜನ್-ನಾಗೇಂದ್ರ, `ಉದಯಶಂಕರ್ಗೆ ಜಾಸ್ತಿ ದುಡ್ಡು ಕೊಡಬೇಕಾಗುತ್ತದೆ ಅಂತ ಇವರನ್ನ ಸೆಲೆಕ್ಟ್ ಮಾಡ್ಕೊಂಡ್ರಾ’ ಎಂದು ತರಾಟೆಗೆ ತೆಗೆದುಕೊಂಡರಂತೆ. ಆಗ ಶಿವರಾಂ-`ಖಂಡಿತ ಹಾಗಿಲ್ಲ. ಇವರು ಸಾಹಿತ್ಯದ ಮೇಸ್ಟ್ರು, ತುಂಬಾ ಓದಿಕೊಂಡಿದ್ದಾರೆ. ಗ್ರಾಮ್ಯಶೈಲಿಯ ಹಾಡು ಬರೆಯಲು ಇವರೇ ಸರಿ ಅನಿಸಿದ್ದರಿಂದ ಕರ್ಕೊಂಡು ಬಂದಿದೀನಿ’ ಅಂದರಂತೆ….
ಈ ಪರಿಚಯದ ನಂತರ ಸನ್ನಿವೇಶಕ್ಕೆ ತಕ್ಕಂತೆ ಹಾಡು ಬರೆಯಲು ಚರ್ಚೆ ಶುರುವಾಯಿತು. `ಗೆಂಡೆತಿಮ್ಮ ಬೆಳಗ್ಗೆಯೇ ತನ್ನ ಗೂಡೆ (ಬಿದರಿನ ಬುಟ್ಟಿ)ಯಲ್ಲಿ ಹಳ್ಳಿಗರಿಗೆ ಬೇಕಿದ್ದ ವಸ್ತುಗಳನ್ನೆಲ್ಲ ತುಂಬಿಕೊಂಡು ಹೊರಟಿರುತ್ತಾನೆ. ಮೊಬೈಲ್ ವರ್ಕ್ಶಾಪ್ನಂಥ ಅದರೊಳಗೆ ಬೀಡಿ, ಬಳೆ, ಬೆಂಕಿಪೊಟ್ಟಣ…. ಮುಂತಾದ ವಸ್ತುಗಳಿರುತ್ತವೆ. ಅದೇ ವೇಳೆಯಲ್ಲಿ ತೀರಾ ಹಿಂದುಳಿದಿದ್ದ ಹಳ್ಳಿಯ ಹೆಂಗಸರಿಗೆ ಅವನು `ಚೌಲಿ, ಲಂಗ, ಪೆಟಿಕೋಟ್, ಬ್ರಾ…..ಇತ್ಯಾದಿಗಳನ್ನೂ ತಂದುಕೊಟ್ಟು ಒಂದಷ್ಟು ಜನಪ್ರಿಯನಾಗಿರುತ್ತಾನೆ. ಅಂಥ ಗೆಂಡೆತಿಮ್ಮ ಗೂಡೆ ಹೊತ್ತುಕೊಂಡು ಖುಷಿಯಾಗಿ ಹಾಡು ಹೇಳುತ್ತಾ ಬರುತ್ತಾನೆ. ಅವನ ಜತೆಯಲ್ಲಿ ಒಬ್ಬ ಹುಡುಗನೂ ಇರುತ್ತಾನೆ….’
ಇದು ಸನ್ನಿವೇಶ.
ಅದನ್ನು ಅದ್ಭುತ ಎಂಬಂತೆ ಹೇಳಿದ್ದು `ತೇರಾ ಏರಿ ಅಂಬರದಾಗೆ…’ ಹಾಡು. ಈ ಗೀತೆ ಹಾಡು ಸೃಷ್ಟಿಯಾದದ್ದು ಹೇಗೆ? ದೊಡ್ಡರಂಗೇಗೌಡರು ಹೇಳುತ್ತಾರೆ: ಹಾಡು ಬರೆಯಲು ಕೂತಾಗ ನನಗೆ ತಕ್ಷಣವೇ ನನ್ನೂರು ನೆನಪಾಯಿತು. ಮನೆಯಿಂದ ಹೊರಬಂದ ರೈತಾಪಿ ಜನರೆಲ್ಲ ಮೊದಲು ಮುಗಿಲು ನೋಡುತ್ತಾರೆ. ಸೂರ್ಯದೇವನಿಗೆ ನಮಸ್ಕರಿಸುತ್ತಾರೆ. ಗೆಂಡೆತಿಮ್ಮ ಕೂಡ ಹಾಗೇ ಮಾಡಬೇಕು ಅಂದುಕೊಂಡೆ. ಮತ್ತೆ ಮತ್ತೆ ನಮ್ಮೂರಿನ ಅಡಿಕೆ ತೋಟ, ತೆಂಗಿನ ತೋಟ, ಕೊಕ್ಕರೆ, ಬೆಳ್ಳಕ್ಕಿ, ಸುವರ್ಣಮುಖಿ ನದಿ ಎಲ್ಲವೂ ನೆನಪಾದವು. ರಾಜನ್-ನಾಗೇಂದ್ರ ಹಾಕಿದ ಟ್ಯೂನ್ಗೆ ಮೊದಲು `ತೇರಾ ಏರಿ ಅಂಬರದಾಗೆ ನೇಸರ ನಗುತಾನೆ’ ಎಂದು ಬರೆದ ಮರುಕ್ಷಣದಿಂದಲೇ’ ನಾನೇ ಗೆಂಡೆತಿಮ್ಮ ಆಗಿಹೋದೆ. ಬಾಲ್ಯದ ನನ್ನೆಲ್ಲ ಅನುಭವವನ್ನೂ ; ನಮ್ಮ ಊರಿನ ಅಷ್ಟೂ ಪರಿಸರವನ್ನು ಆ ಹಾಡಲ್ಲಿ ತಂದೆ. ತಿಮ್ಮನ ಜತೆಯಲ್ಲಿ ಒಬ್ಬ ಹುಡುಗನೂ ಕುಣಿಯುತ್ತಾ ಬರ್ತಾ ಇರ್ತಾನಲ್ಲ-ಅದೇ ಕಾರಣದಿಂದ ನಾವ್, ಹಾಡಿ ಕುಣಿಯೋಣ ತಮ್ಮ’ ಎಂದು ಸೇರಿಸಿದೆ.
ಎರಡನೇ ಪ್ಯಾರಾ ಬರೆವ ಸಂದರ್ಭದಲ್ಲಿ ಮತ್ತೆ ನನ್ನೂರೇ ನೆನಪಾಯಿತು. ಸದಾ ಮೌನವಾಗಿರುತ್ತಿದ್ದ ಬೆಟ್ಟ-ಗುಡ್ಡದ ಸಾಲು, ಆ ಮೌನವನ್ನೇ ನಾವೆಲ್ಲ ಪ್ರೀತಿಸುತ್ತಿದ್ದ ರೀತಿ ನೆನೆದು `ಸಾಲು ಸಾಲು ಬೆಟ್ಟಗುಡ್ಡ ಮೌನ ತಳೆದಾವೇ, ಆ ಮೌನದ ಗಾನ ಎಲ್ಲರ ಮನಸಾ ಸೆಳೆದಾವೇ’ ಎಂದು ಬರೆದೆ.
ಏನೇ ಹಳ್ಳಿ ಮುಕ್ಕ ಅನ್ನಿಸಿಕೊಂಡರೂ `ಗೆಂಡೆತಿಮ್ಮ’ ಬದಲಾವಣೆಗೆ ತುಡಿಯುವ ಜೀವ. ಹಳ್ಳಿಯಲ್ಲಿ ಚಾಲ್ತಿಯಲ್ಲಿದ್ದ ಮೇಲು-ಕೀಳಿನ ಭಾವನೆ ಕಂಡು ಅವನು ಬೇಸರಗೊಂಡಿರ್ತಾನೆ. ಅದನ್ನೂ ಹೇಳಬೇಕು ಅನ್ನಿಸಿ `ಬೇಧ-ಭಾವ ಮುಚ್ಚುಮರೆ ಒಂದೂ ಮಾಡ್ದೇನೇ….’ ಎಂದು ಮೂರನೇ ಚರಣ ಬರೆದೆ. ಜೆಮಿನಿ ಸ್ಟುಡಿಯೋದಲ್ಲಿ ರೀ ರೆಕಾರ್ಡಿಂಗ್ ನಡೆದಾಗ ಅಲ್ಲಿದ್ದವರೆಲ್ಲ ಹಾಡು ಗುನುಗಲು ಶುರುಮಾಡಿದ್ರು. ನಾನು ಗೆದ್ದೆ ಅನಿಸಿದ್ದೇ ಆಗ….’
ಇಷ್ಟು ಹೇಳಿ ದೊಡ್ಡರಂಗೇಗೌಡರು ಮೌನವಾದರು. ಮರುಕ್ಷಣದಿಂದಲೇ ಗೆಂಡೆತಿಮ್ಮ, ಅವನ ಅಸಡಾ ಬಸಡಾ ಡ್ಯಾನ್ಸು, ಆ ತಾಳ, ಗೆಜ್ಜೆ ನಾದದಂಥ ಸಂಗೀತ ಬಿಡದೆ ಕಾಡತೊಡಗಿತು…
ಹೇಳಿ, ಕಾಡುವ ಹಾಡೆಂದರೆ ಸುಮ್ನೇನಾ?

Advertisements

1 Comment »

  1. 1
    somu Says:

    ondu haadina hinde yeshtella kathe irute antha gotaythu…thanks …heege innashtu hadina rahasyagalu horabarali…..


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: