ಕಾಫಿಯ ಲೋಟ ಕೈ ಸುಟ್ಟಾಗ ಹುಟ್ಟಿತು `ಅಮೃತವರ್ಷಿಣಿ’ಯ ಮಧುರಗೀತೆ!

null

ಚಿತ್ರ: ಅಮೃತ ವರ್ಷಿಣಿ
ಗೀತೆರಚನೆ: ಕೆ. ಕಲ್ಯಾಣ್
ಸಂಗೀತ: ದೇವಾ
ಗಾಯಕಿ: ಚಿತ್ರಾ
ತುಂತುರು ಅಲ್ಲಿ ನೀರ ಹಾಡು
ಕಂಪನ ಇಲ್ಲಿ ಪ್ರೀತಿ ಹಾಡು
ಹಗಲಿರಲಿ ಇರುಳಿರಲಿ
ನೀನಿರದೆ ಹೇಗಿರಲಿ
ನನ್ನ ತುಂಬು ಹೃದಯ ನೀ ತುಂಬಿದೆ
ನಿನ್ನ ಈ ತುಂಬು ಪ್ರೀತಿಯನು
ಕಣ್ಣ ಹಾಡಂತೆ ಕಾಯುವೆನು.

ಗಗನದ ಸೂರ್ಯ ಮನೆಮೇಲೆ
ನೀ ನನ್ನ ಸೂರ್ಯ ಹಣೆಮೇಲೆ
ಚಿಲಿಪಿಲಿ ಹಾಡು ಎಲೆ ಮೇಲೆ
ನಿನ್ನ ಪ್ರೀತಿ ಹಾಡು ಎದೆ ಮೇಲೆ
ಗಾಳಿ ಗಾಳಿ ತಂಪು ಗಾಳಿ
ಊರ ತುಂಬ ಇದೆಯೋ
ನಿನ್ನ ಹೆಸರ ಗಾಳಿಯೊಂದೆ ನನ್ನ ಉಸಿರಲ್ಲಿದೆಯೋ
ನಮ್ಮ ಪ್ರೀತಿ ಬೆಳಗೋ ಇತಿಹಾಸವು….
ನಿನ್ನ ಸಹಚಾರವೇ ಚೈತ್ರ
ಅಲ್ಲಿ ನನ್ನ ಇಂಚರ ಅಮರ….|| ತುಂತುರು ಅಲ್ಲಿ||

ಚೆಲುವನೆ ನಿನ್ನ ಮುಗುಳುನಗೆ
ಹಗಲಲಿ ಶಶಿಯು ಬೇಡುವೆನು
ರಸಿಕನೆ ನಿನ್ನ ರಸಿಕತೆಗೆ
ಮದನನು ಮರುಗಿ ಸೊರಗುವನು
ತಾಯಿ ತಂದೆ ಎಲ್ಲಾ ನೀನೆ ಯಾಕೆ ಬೇರೆ ನಂಟು
ಸಾಕು ಎಲ್ಲ ಸಿರಿಗಳ ಮೀರೊ ನಿನ್ನ ಪ್ರೀತಿ ಗಂಟು
ಜಗವೆಲ್ಲ ಮಾದರಿ ಈ ಪ್ರೇಮವೇ
ನನ್ನ ಎದೆಯೊಳು ಧಣಿ ನೀನೆ
ನಿನ್ನ ಸಹಚಾರಿಣಿ ನಾನೇ|| ತುಂತುರು ಅಲ್ಲಿ||

ತುಂತುರು ಅಲ್ಲಿ ನೀರ ಹಾಡು
ಕಂಪನ ಇಲ್ಲಿ ಪ್ರೀತಿ ಹಾಡು….
`ಅಮೃತವರ್ಷಿಣಿ’ಯ ಈ ಮಧುರಗೀತೆ ಕೇಳಿದಾಗಲೆಲ್ಲ ನಟಿ ಸುಹಾಸಿನಿಯ ಬೆಳದಿಂಗಳಂಥ ನಗೆ ಕಣ್ತುಂಬುತ್ತದೆ. ದಿನೇಶ್ಬಾಬು ಅವರ ಕ್ಯಾಮರಾದ ಮಾಯೆ ಕೈ ಹಿಡಿಯುತ್ತದೆ. ಶರತ್ಬಾಬು ಎಂಬ ಸುಂದರಾಂಗನ ಮುದ್ದು ಮುಖ ಛಕ್ಕನೆ ಎದುರು ನಿಲ್ಲುತ್ತದೆ. ಈ ಹಾಡು, ಅದರ ಭಾವ, ರಾಗದ ಮಾಧುರ್ಯ, ಗಾಯಕಿ ಚಿತ್ರಾ ಅವರ ಜೇನ್ದನಿಯ ಇಂಪು, ಸದಾ ಗುನುಗುತ್ತಲೇ ಇರಬೇಕು ಅನ್ನುವಂಥ ಪಲ್ಲವಿ-ವಾಹ್, ಅದೊಂದು ಮಾತಲ್ಲಿ ವಿವರಿಸಲಾಗದಂಥ ಮಧುರಾನುಭೂತಿ ಅಂದುಕೊಂಡಾಗಲೇ ಹಾಡು ಮುಂದುವರಿಯುತ್ತದೆ; ಹಗಲಿರಲಿ, ಇರುಳಿರಲಿ/ನೀನಿರದೆ ಹೇಗಿರಲಿ…
ಹಾಡಿನ ಮಾಧುರ್ಯದಲ್ಲಿ ತೇಲಿಹೋಗುವ ಮುನ್ನ `ಅಮೃತವರ್ಷಿಣಿ’ಯ ಕಥೆಯನ್ನೊಮ್ಮೆ ನೆನಪಿಸಿಕೊಳ್ಳಿ. ಅವರಿಬ್ಬರೂ ಪ್ರೀತಿಸಿ ಮದುವೆಯಾದವರು. ಅಪ್ಪ-ಅಮ್ಮ, ಇಬ್ಬರಿಗೂ ಇರುವುದಿಲ್ಲ. ಇಬ್ಬರೂ ತುಂಬಾನೇ ಭಾವುಕರು. ಅವರು ಅತ್ಯಂತ ಮುಚ್ಚಟೆಯಿಂದ ತೀರಾ ಹುಚ್ಚು ಹಿಡಿದವರಂತೆ ಪರಸ್ಪರ ಪ್ರೀತಿಸುತ್ತಿರುತ್ತಾರೆ. ಹೊಸದಾಗಿ ಹುಟ್ಟಿದ ಪ್ರೇಮವೊಂದರ ಕನಸು, ಆಸೆ, ಕನವರಿಕೆ, ತುಂಟತನ, ನಗು…. ಎಲ್ಲವೂ ಅವರ ಪ್ರೀತಿಯಲ್ಲಿರುತ್ತದೆ. ಅವರ ಪ್ರಪಂಚದಲ್ಲಿ ಅವರಿಬ್ಬರೇ. ಒಬ್ಬರನ್ನೊಬ್ಬರು ತಂ ತಂ ತಂ ತಂ ತಮಾಷೆ ಮಾಡಿಕೊಂಡು ಮಾತಿಗೆ ನಿಂತರೆ ಅವರಿಬ್ಬರೂ ಪ್ರೇಮಿಗಳೋ, ಸ್ನೇಹಿತರೋ, ಗಂಡ-ಹೆಂಡಿರೋ ಎಂಬ ಬಗ್ಗೆ ಅವರಿಗೇ ಗೊಂದಲ!
ಸ್ವಾರಸ್ಯವೆಂದರೆ, ಇಂಥ ಅಮರ ಪ್ರೇಮಿಗಳಿಗೆ ತಮ್ಮ ಮನದ ಭಾವನೆಗಳನ್ನು ಪರಸ್ಪರ ಹೇಳಿಕೊಳ್ಳುವುದಕ್ಕೂ ಪುರುಸೊತ್ತು ಇರುವುದಿಲ್ಲ. ಹೆಂಡತಿ ಮನೆಯಲ್ಲಿದ್ದಾಗ ಗಂಡ , ಫೋಟೋಗ್ರಫಿಯ ಹುಚ್ಚಿನಲ್ಲಿ ಹೊರಗಿರುತ್ತಾನೆ. ಗಂಡ ಮನೆಯಲ್ಲಿದ್ದಾಗ, ಈ ಹೆಂಡತಿ ದುಡಿಯಲು ಹೋಗಿರುತ್ತಾಳೆ. ಈ ಮಧ್ಯೆಯೇ ಒಂದಿಷ್ಟು ಪಿಸಪಿಸನೆ ಮಾತಾಡುವ ಆಸೆಯಾದಾಗಲೆಲ್ಲ ಅವರು ಟೇಪ್ರೇಕಾರ್ಡ್ರ್ಗೆ ಮಾತು ಕಲಿಸಿರುತ್ತಾರೆ! ಅವನು ಮಾತನಾಡಿ ರೆಕಾರ್ಡ್ ಮಾಡಿಟ್ಟು ಹೋಗಿರುತ್ತಾನೆ. ಇವಳು ಮನೆಗೆ ಬಂದಾಕ್ಷಣ, ಇನ್ನಿಲ್ಲದ ಆಸೆಯಿಂದ ಒಮ್ಮೆ ಆ ಟೇಪ್ ರೆಕಾರ್ಡರನ್ನೇ ನೋಡಿ, ಅದನ್ನು ಮುದ್ದಿಸಿ, ಒಂದು ಹೂಮುತ್ತು ನೀಡಿ ಕೆಸೆಟ್ ಹಾಕಿ ಆಲಿಸುತ್ತಾಳೆ! ಅವನ ಸರದಿ ಬಂದಾಗ ಮತ್ತೆ ಇದೆಲ್ಲ ರಿಪೀಟ್…
ಹೀಗಿದ್ದಾಗಲೇ ಒಮ್ಮೆ ಗಂಡ ಇಲ್ಲದಿರುವ ಸಂದರ್ಭದಲ್ಲಿ – ಆತನ ಪ್ರೀತಿ, ಅವನ ಇಂಪಾರ್ಟೆನ್ಸು, ಆತ ತನಗೆ ಕೊಟ್ಟ ಬದುಕು, ಭರವಸೆ, ತನ್ನ ಉಸಿರಲ್ಲಿ ಬೆರೆತುಹೋಗಿರುವ ರೀತಿಯನ್ನು ಮತ್ತೆ ಮತ್ತೆ ನೆನೆದು ನಾಯಕಿ ಹಾಡುತ್ತಾಳೆ. `ಇನಿಯಾ, ನಿನ್ನ ಹೊರತು ನನಗೆ ಯಾರೂ ಇಲ್ಲ’ ಎಂಬುದನ್ನು ವಿವರಿಸಲು ಆಕೆ `ಗಗನದ ಸೂರ್ಯ ಮನೆ ಮೇಲೆ ನೀ ನನ್ನ ಸೂರ್ಯ ನನ್ನ ಹಣೆ ಮೇಲೆ’ ಎನ್ನುತ್ತಾಳೆ! ‘ನಿನ್ನನ್ನು ಬಿಟ್ಟು ಬದುಕಲು ನನ್ನಿಂದ ಸಾಧ್ಯವಿಲ್ಲ ದೊರೇ’ ಎಂದು ಹೇಳಬೇಕಾದಾಗ -`ನೀನಿರದೇ ಹೇಗಿರಲಿ…’ ಅನ್ನುತ್ತಾಳೆ. ನನ್ನ ಪ್ರಪಂಚ ಅಂದರೆ ಅದು ನೀನೇ, ನೀನೊಬ್ಬನೇ ಎಂದು ಚೀರುವ ಬದಲು `ತಾಯಿ ತಂದೆ ಎಲ್ಲಾ ನೀನೆ ಯಾಕೆ ಬೇರೆ ನಂಟು….’ ಅನ್ನುತ್ತಾ ಹನಿಗಣ್ಣಾಗುತ್ತಾಳೆ. ಈ ಸಾಲು ಕೇಳಿಸಿದಾಕ್ಷಣ ಕಿವಿ ಕೇಳದವರಿಗೂ ಯಾಕೋ ಕಣ್ತುಂಬಿ ಬರುತ್ತದೆ. ಯಾಕೋ….

ಈ ಅಮರಾ ಮಧುರ ಹಾಡನ್ನು ಕೆ. ಕಲ್ಯಾಣ್ ಬರೆದದ್ದು ೧೯೯೭ರಲ್ಲಿ. ಅಮೃತವರ್ಷಿಣಿ ಬಿಡುಗಡೆಯಾಗಿದ್ದೂ ಆಗಲೇ. ಆಗಿನ್ನೂ ಬ್ರಹ್ಮಚಾರಿಯಾಗಿದ್ದ ಕಲ್ಯಾಣ್ಗೆ ಇಂಥ ಮಧುರ ಸಾಲುಗಳು ಹೊಳೆದದ್ದಾದರೂ ಹೇಗೆ?ಆ ವೇಳೆಗೆ ಏನಾದರೂ ಕಲ್ಯಾಣ್ ಪ್ರೀತಿಯ ಕಡಲಿಗೆ ಬಿದ್ದಿದ್ರೋ ಹೇಗೆ? ತಮ್ಮ ಅನುಭವವನ್ನೇ (?) ಪದಗಳಲ್ಲಿ ಹಿಡಿದಿಟ್ಟರೋ ಹೇಗೆ? ಇಂಥದೊಂದು ಪ್ರಶ್ನೆಯನ್ನು ಕಲ್ಯಾಣ್ ಮುಂದಿಟ್ಟರೆ-ಅಯ್ಯಯ್ಯೋ, ಅಂಥದೇನೂ ಇಲ್ಲ ಸಾರ್. ಆ ಹಾಡು ಹುಟ್ಟಿದ್ದಂತೂ ತೀರಾ ಆಕಸ್ಮಿಕ ಸಂದರ್ಭದಲ್ಲಿ ಎಂದು ಪುಟ್ಟ ವಿವರಣೆ ನೀಡುತ್ತಾರೆ. ಓವರ್ ಟು ಕಲ್ಯಾಣ್:
`ದಿನೇಶ್ಬಾಬು ಸಿನಿಮಾಗಳ ಸ್ಪೆಶಾಲಿಟಿಯೇ ಅದು. ಸೆಟ್ನಲ್ಲಿಯೇ, ಶೂಟಿಂಗ್ ನಡೀತಾ ಇರೋ ಸಂದರ್ಭದಲ್ಲಿಯೇ ಅವರು ಡೈಲಾಗ್ ಬರೀತಾರೆ. ಹಾಡುಗಳನ್ನೂ ಆಗಲೇ ಬರೆಸ್ತಾರೆ. ಆ ಉದ್ದೇಶದಿಂದಲೇ ನನ್ನನ್ನು ಚಿತ್ರೀಕರಣ ನಡೀತಿದ್ದ ಜಾಗಕ್ಕೆ ಕರೆಸಿ `ದೃಶ್ಯ’ ವಿವರಿಸಿದ್ರು. ಗಂಡನ ಮೇಲಿರುವ ಪ್ರೀತಿ, ಮಮತೆ, ಕರುಣೆ, ಮೋಹ, ನಂಬಿಕೆ…. ಮುಂತಾದುವೆಲ್ಲ ಒಂದೇ ಹಾಡಲ್ಲಿ ಬರಬೇಕು. ಅಂಥದೊಂದು ಹಾಡು ಬರೀರಿ ಅಂದರು.
`ಸರಿ’ ಸರ್ ಅಂದೆ. ಅದೆಷ್ಟೇ ಯೋಚಿಸಿದರೂ ಒಂದೇ ಒಂದು ಪದವೂ ಹೊಳೆಯಲಿಲ್ಲ. ಥತ್ತೇರಿಕೆ ಅಂದುಕೊಂಡು ಹೊರಗೆ ಬಂದೆ. ಜತೆಯಲ್ಲಿ ಪ್ರೊಡಕ್ಷನ್ ಮೆನೇಜರ್ ಗಂಗು ಇದ್ದರು. ಅವರೊಂದಿಗೆ ಕಷ್ಟ ಹೇಳಿಕೊಂಡೆ. ತಕ್ಷಣ ಅವರು -`ಒಂದು ಸ್ಟ್ರಾಂಗ್ ಕಾಫಿ ಕೊಡಿಸ್ತೀನಿ. ಕುಡೀರಿ, ಆಗ ಏನಾದ್ರೂ ಹೊಳೆಯಬಹುದು’ ಅಂದರು. ಕಾಫಿ ಬರುವ ವೇಳೆಗೆ ಹೊರಗೆ ಸೋನೆ ಮಳೆ ಶುರುವಾಯಿತು. ಚಿಕ್ಕಂದಿನಿಂದಲೂ ಅಷ್ಟೆ. ನನಗೆ ಮಳೆ ಅಂದ್ರೆ ತುಂಬಾ ಇಷ್ಟ. ಮಳೆ ಬಂದಾಗ ಮನೆಯಿಂದ ಹೊರಗೆ ಬಂದು ನಾನು ಹಾಡುತ್ತಾ, ಥೈ ಥೈ ಕುಣೀತಿದ್ದುದೂ ಉಂಟು. ಆ ಕ್ಷಣಕ್ಕೆ ಅದೆಲ್ಲ ನೆನಪಾಯಿತು. ಸೋನೆ ಮಳೆಯನ್ನು ಮತ್ತೆ ಮತ್ತೆ ಗಮನಿಸುತ್ತಲೇ ಕಾಫಿ ಲೋಟಕ್ಕೆ ಕೈ ಚಾಚಿದೆ. ಆಗಲೇ `ತುಂತುರು ಅಲ್ಲಿ ನೀರ ಹಾಡು’ ಎಂಬ ಸಾಲು ಹೊಳೆಯಿತು. ಖುಷಿಯಿಂದ ಮುಗುಳ್ನಗುವ ಮೊದಲೇ ಲೋಟದ ಬಿಸಿ ತಾಕಿ ಕೈ ಒಮ್ಮೆ ಕಂಪಿಸಿತು. ಅದನ್ನೇ `ಕಂಪನ ಇಲ್ಲಿ ಪ್ರೀತಿ ಹಾಡು’ ಎಂದು ಬದಲಿಸಿಕೊಂಡೆ. ಹೊರಗೆ ಕತ್ತಲಾಗುತ್ತಿದ್ದುದನ್ನು ಗಮನಿಸಿ `ಹಗಲಿರುಳು ನೀ ಜೊತೆಗಿರಲು ನನ್ನ ತುಂಬ ಹೃದಯ’ ಎಂದು ಸೇರಿಸಿದೆ. ಅದನ್ನು ಕಂಡ ಗಂಗು `ಹೃದಯ’ ಅಂದ್ರೆ ಸರಿ. ಆದ್ರೆ ತುಂಬು ಹೃದಯ ಅಂದರೆ ಅರ್ಥವೇನು ಅಂದರು. ಪ್ರೀತಿಯೆಂಬುದು ಓವರ್ ಫ್ಲೋ ಆದಾಗ `ತುಂಬು ಹೃದಯ’ ಆಗುತ್ತೆ ಎಂದು ವಿವರಿಸಿದೆ. ಎಲ್ಲರೂ ನಕ್ಕರು….
ಆ ದಿನಗಳಲ್ಲಿ ನಾನು ಪ್ರೀತಿಯ ಹೊಳಗೆ ಬಿದ್ದಿರಲಿಲ್ಲ ನಿಜ. ಆದರೆ ಪ್ರೀತಿಯ ಕುರಿತು ಒಂದು ಮಧುರಭಾವ ನನ್ನೊಳಗೂ ಇತ್ತು. ಅದನ್ನೆಲ್ಲ ಪದಗಳ ಹಾರ ಮಾಡಿಕೊಂಡೇ ಈ ಹಾಡು ಬರೆದೆ…
ಇಷ್ಟು ಹೇಳಿ ಕಲ್ಯಾಣ್ ಮಾತು ನಿಲ್ಲಿಸಿದಾಗ ಹೊರಗೆ ಸೋನೆ ಮಳೆ. ಮರುಕ್ಷಣವೇ ಆ ಮಧುರ ಹಾಡು ಅದೆಲ್ಲಿಂದಲೋ ತೇಲಿಬಂತು: ತುಂತುರು ಇಲ್ಲಿ ನೀರ ಹಾಡು….

Advertisements

1 Comment »

  1. ಈ ಹಾಡು ನಂಗೆ ಬಹಳ ಇಷ್ಟ. ಹಾಡಿನ ಚರಿತ್ರೆ ಜಾಲಾಡಿಸಿದ್ದಕ್ಕೆ ವಂದನೆಗಳು ಮಣಿ. 🙂


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: