ಹಾಡಿನ ನೆಪದಲ್ಲಿ ಕಾಡಬಾರದೇಕೆ?

null

ಈಗ ವೇಳೆ ಏಳು ಗಂಟೆ ನಲವತ್ತೈದು ನಿಮಿಷ ಹದಿನಾರು ಸೆಕೆಂಡುಗಳು. ಈಗ ಚಿತ್ರಗೀತೆಗಳು….’ ಆಕಾಶವಾಣಿಯ ನಿರೂಪಕಿ ಮೂರನೇ ಮಾತು ಹೇಳುವ ಮೊದಲೇ ಹಾಡು ಶುರುವಾಗಿಬಿಟ್ಟಿತು: `ಅನುರಾಗದ ಅಲೆಗಳ ಮೇಲೆ/ಸಂಗೀತ ಸ್ವರಗಳ ಲೀಲೆ/ನಡೆದಾಗ ಜೀವನ ರಾಗ ರಸಪೂರ್ಣವು ಓ ಮನಸೆ/ಮುಗಿಲಾಗಿ ಬಾ ಕಡಲಾಗುವೆ…’ ಐದು ನಿಮಿಷದ ನಂತರ ಹಾಡು ಮುಗಿದಾಗ ನಿರೂಪಕಿ-ಈಗ `ಗಜಪತಿ ಗರ್ವಭಂಗ’ ಚಿತ್ರದ ಗೀತೆ ಅಂದಳು. ಆಕೆಯ ಎರಡನೇ ಮಾತಿಗೂ ಮೊದಲೇ ಹಾಡು ಕೇಳಿಬಂತು: `ಒಲಿದ ಸ್ವರಗಳು ಒಂದಾದರೆ ಬಲು ಇಂಪಾದ ಸಂಗೀತ….’ ಹಾಡು ಮುಗಿದದ್ದೇ ತಡ-ಜತೆಗಿದ್ದ ಗೆಳೆಯ ಉದ್ಗರಿಸಿದ: `ಇವೆರಡೂ ರಾಘವೇಂದ್ರ ರಾಜ್ಕುಮಾರ್ ಹಾಡಿರುವ ಗೀತೆಗಳು. ಎಷ್ಟೊಂದು ಚೆನ್ನಾಗಿವೆ ಅಲ್ವ? ಇಷ್ಟು ಚೆನ್ನಾಗಿ ಹಾಡಿದ ರಾಘವೇಂದ್ರ ರಾಜ್ಕುಮಾರ್ ಸಿನಿಮಾದಲ್ಲಿ ನಟಿಸೋದನ್ನೇ ನಿಲ್ಲಿಸಿಬಿಟ್ರಲ್ಲ, ಛೆ, ಅನ್ಯಾಯ ಕಣ್ರಿ. ಅವರು ಹಾಡೋದನ್ನು ನಿಲ್ಲಿಸಿದ್ದಂತೂ ದೊಡ್ಡ ಅನ್ಯಾಯ…’

ಪ್ರೀತಿಯ ರಾಘಣ್ಣ, ಗೆಳೆಯನ ಮಾತು ಮುಗಿದಿದ್ದೇ ತಡ-ಹದಿನೈದು ವರ್ಷಗಳ ಹಿಂದೆ ನಮ್ಮನ್ನು ಒಂದು `ಕ್ರೇಜ್’ಗೆ ಈಡು ಮಾಡಿದ್ದ ನಟ ರಾಘವೇಂದ್ರ ರಾಜ್ಕುಮಾರ್ ಚಿತ್ರ ಕಣ್ಮುಂದೆ ಬಂದು ನಿಂತಿತು. ನಿಮ್ಮ, ಆ ದಿನಗಳ ವೈಭವ, ಈಗಿನ ಮೌನ, ಎಂದೆಂದೂ, ಎಂಥವರನ್ನೂ ಮೋಡಿ ಮಾಡುವಂಥ ಸಿರಿಕಂಠದ ಬಗ್ಗೆ ಒಂದಿಷ್ಟು ಮಾತಾಡಬೇಕು, ಒಂದಷ್ಟು ಪ್ರಶ್ನೆ ಕೇಳಬೇಕು, ಜತೆಗೇ ಏನೋ ಒಂದಿಷ್ಟು ಮಾತಾಡಬೇಕು ಅನ್ನಿಸಿದ್ದರಿಂದ ನಿಮಗೆ ಈ ಪತ್ರ…

***

ಹೌದು ರಾಘಣ್ಣಾ, ನೀವು ಮೂವರ ಪೈಕಿ, ನಮಗೆಲ್ಲ ಮೊದಲು ಪರಿಚಯವಾದವನು, ಫ್ರೆಂಡೂ ಆಗಿಬಿಟ್ಟವನು ಪುನೀತು. ಮುಂದೆ `ಆನಂದ್’ ಸಿನಿಮಾದ ಮೂಲಕ ಶಿವರಾಜ್‌ಕುಮಾರ್ ಕೂಡ ಬೆಳ್ಳಿತೆರೆಗೆ ಬಂದಾಗ `ಅಣ್ಣಾವ್ರ ದೊಡ್ಡ ಮಗ’ ಎಂಬ ಕುತೂಹಲದಿಂದಲೇ ನಾವೆಲ್ಲ ಆ ಸಿನಿಮಾ ನೋಡಿದ್ವಿ. ಮೊದಲ ನೋಟದಲ್ಲೇ ಶಿವಣ್ಣನ ಫ್ಯಾನ್ಸ್ ಆಗಿಬಿಟ್ವಿ. ಒಂದೆರಡು ವರ್ಷಗಳ ನಂತರ `ಅಣ್ಣಾವ್ರ ಎರಡನೇ ಮಗ ರಾಘವೇಂದ್ರ ಕೂಡ ಸಿನಿಮಾಕ್ಕೆ ಬರ್‍ತಾರಂತೆ. ಅವರ ಹೊಸ ಸಿನಿಮಾದ ಹೆಸರು `ಚಿರಂಜೀವಿ ಸುಧಾಕರ್’ ಅಂತ ಎಂಬ ಸುದ್ದಿ ಕೇಳಿಬಂದಾಗ ನಮಗೊಂದು ಕುತೂಹಲವಿತ್ತು. ರಾಘವೇಂದ್ರ ಚೆನ್ನಾಗಿ ಹಾಡ್ತಾರಂತೆ. ಮಗ ಡಾಕ್ಟರ್ ಆಗಬೇಕು ಅನ್ನೋದೇ ಅಣ್ಣಾವ್ರ ಆಸೆಯಾಗಿತ್ತಂತೆ. ಆದ್ರೆ ಅವರು ಆಕ್ಟರ್ ಆಗಲು ಬಂದರಂತೆ ಎಂಬ ಇನ್ನೊಂದು ಮಾತು ಕೇಳಿದಾಗ ಕುತೂಹಲ ಇನ್ನಷ್ಟು ಹೆಚ್ಚಿತು. ಒಂದು ಬೆರಗಿನಿಂದಲೇ ಥಿಯೇಟರಿಗೆ ನಡೆದು ಬಂದರೆ ನೀವು-ಕೋಗಿಲೆಗೂ ಸೈಡು ಹೊಡೆದು ಹಾಡ್ತಾ ಇದ್ರಿ: `ಗೆಲುವೇ ಗೆಲುವೇ ಗೆಲುವೇ/ನಮಗೆಂದೆಂದಿಗೂ ಗೆಲುವೆ/ ದಿನವೂ ದುಡಿವಾ ಛಲವೆ/ಮನಕೆಂದೆಂದು ಆನಂದವೆ…’

ಅನುಮಾನವೇ ಬೇಡ. ನಿಮ್ಮ ಸಿರಿಕಂಠಕ್ಕೆ ಎಂಥವರನ್ನೂ ಮರುಳು ಮಾಡುವ ಶಕ್ತಿಯಿದೆ. ನಾವೆಲ್ಲ ಇನ್ನೂ ಆ ಹಾಡಿನ ಗುಂಗಿನಲ್ಲಿ ಇದ್ದಾಗಲೇ `ನಂಜುಂಡಿ ಕಲ್ಯಾಣ’ ಬಂತು. ನಂತರದ ಇಡೀ ಒಂದು ವರ್ಷ ಆ ಸಿನಿಮಾ ಎಲ್ಲರನ್ನೂ ಜ್ವರದಂತೆ ಕಾಡಿಬಿಡ್ತು. `ಒಳಗೆ ಸೇರಿದರೆ ಗುಂಡು…’ ಎಂಬ ಹಾಡಂತೂ ಎಲ್ಲ ವಯೋಮಾನದವರಿಗೂ ಹುಚ್ಚು ಹಿಡಿಸಿತು. ನಂತರ ಬಂದ `ಗಜಪತಿ ಗರ್ವಭಂಗ’ದ `ಮದುವೆಯ ವಯಸು ಎಷ್ಟೊಂದು ಸೊಗಸು, ಕಣ್ತುಂಬ ನೂರಾರು ಕನಸು…’ ಮತ್ತು `ತರಕಾರಿ ತಾಯಮ್ಮ ಮನೆಯಾಳ ಮಾಚಮ್ಮ/ಈ ಹೆಣ್ಣ ಏಕೆ ಹಿಡ್ಕೊಂಡೆ…’ ಹಾಡುಗಳಂತೂ ಪಡ್ಡೆಗಳ ಪಾಲಿನ ರಾಷ್ಟ್ರಗೀತೆಯೇ ಆಗಿಹೋದವು.

ಇದಾದ ಮೇಲೆ `ಟುವ್ವಿ ಟುವ್ವಿ’, `ನಾವಿಬ್ಬರು ನಮಗಿಬ್ಬರು’, `ಅನುಕೂಲಕ್ಕೊಬ್ಬ ಗಂಡ’, `ಕಲ್ಯಾಣ ಮಂಟಪ’, `ಅನುರಾಗದ ಅಲೆಗಳು’, `ಸ್ವಸ್ತಿಕ್’, `ಪಕ್ಕದ್ಮನೆ ಹುಡ್ಗಿ…’ ಸಿನಿಮಾಗಳು ಹೀಗೆ ಬಂದು ಹಾಗೆ ಹೋಗಿಬಿಟ್ಟವು. ಬಹುಶಃ ಆಗ ನಿಮ್ಮ ಟೈಮೇ ಸರಿ ಇರಲಿಲ್ಲ ಅನ್ನಿಸ್ತದೆ. ಭಾರೀ ಭರವಸೆ ಮೂಡಿಸಿದ್ದ ಸಿನಿಮಾಗಳೆಲ್ಲ ಸಾಧಾರಣ ಎಂಬಂಥ ಯಶಸ್ಸು ಕಂಡವು. ಅರೆ, ಎಲ್ಲಿ, ಏನು ತಪ್ಪಾಯ್ತು ಎಂದು ಎಲ್ಲರೂ ಲೆಕ್ಕಾಚಾರ ಮಾಡ್ತಾ ಇದ್ದಾಗಲೇ ನೀವು ಸೈಲೆಂಟಂದ್ರೆ ಸೈಲೆಂಟಾಗಿ ಬೆಳ್ಳಿ ತೆರೆಯಿಂದ ದೂರ ಉಳಿದುಬಿಟ್ರಿ…

***

ರಾಘಣ್ಣ ನೀವೀಗ ಹೊಸ ಗೆಟಪ್ಪಿನಲ್ಲಿ ನಿಂತು ಕೆಲಸ ಮಾಡ್ತಾ ಇದೀರಿ. ಒಂದು ಕಡೇಲಿ ಮನೆಯ ಜವಾಬ್ದಾರಿ, ಇನ್ನೊಂದು ಕಡೇಲಿ ಅಣ್ಣಾವ್ರ ಹೆಸರಲ್ಲಿ ಕಟ್ಟಿಸಿರುವ ಹೋಟೆಲ್ ನಿರ್ವಹಣೆ, ಮತ್ತೊಂದು ಕಡೆಯಲ್ಲಿ ನಿಮ್ಮ ಸಂಸ್ಥೆಯಿಂದ ತಯಾರಾದ ಸಿನಿಮಾಗಳ ಹಂಚಿಕೆ ವ್ಯವಹಾರ, ಮಗದೊಂದು ಕಡೆಯಲ್ಲಿ ಪುನೀತ್ ಸಿನಿಮಾಗಳಿಗೆ ಕಥೇನ ಆಯ್ಕೆ ಮಾಡೋದು, ಈ ಮಧ್ಯೆಯೇ ಅಭಿಮಾನಿಗಳ ಮಾತಿಗೆ ಕಿವಿಯಾಗುವುದು… ಉಫ್, ಇಷ್ಟೊಂದು ಕೆಲಸಗಳನ್ನು ಅದು ಹೇಗೆ ನಿರ್ವಹಿಸ್ತೀರಿ ರಾಘಣ್ಣಾ?

ಅದರಲ್ಲೂ-ಪುನೀತ್ ರಾಜ್‌ಕುಮಾರ್ ಅಭಿನಯದ ಸಿನಿಮಾಗಳಿಗೆ ಕಥೇನ ಆಯ್ಕೆ ಮಾಡೋದು ಇದೆಯಲ್ಲ, ಅದಕ್ಕಿಂತ ಮಹತ್ವದ, ತಲೆಬಿಸಿಯ ಕೆಲಸ ಇನ್ನೊಂದಿರಲಾರದು ಅನಿಸುತ್ತೆ. ಯಾಕೆ ಅಂದರೆ-ಈ ಹಿಂದೆ, ಅಣ್ಣಾವ್ರ ಸಿನಿಮಾಗಳಿಗೆ, ನೀವು ಮೂರೂ ಜನ ಸಹೋದರರ ಸಿನಿಮಾಗಳಿಗೆ- ಕಥೆ ಹೀಗೇ ಇರಬೇಕು. ಹಾಡು ಇಷ್ಟೇ ಇರಬೇಕು. ಇಂಥ ಸಂದರ್ಭದಲ್ಲಿ ಮಾತ್ರ ಒಂದು ಫೈಟಿಂಗ್ ಸೀನು ಹೀಗೆ ಬಂದು ಹಾಗೆ ಹೋಗಿಬಿಡಬೇಕು. ಯಾವುದೂ `ಅತೀ’ ಅನ್ನಿಸಬಾರದು. ಯಾವ ಸಿನಿಮಾ ಕೂಡ ಕುಟುಂಬ ಸಮೇತ ಬಂದವರಿಗೆ ಮುಜುಗರ ಉಂಟು ಮಾಡಬಾರದು. ಒಂದು ಸಿನಿಮಾ ಈ ಕಡೆಯಲ್ಲಿ ಗೆಲ್ಲಲೂಬೇಕು. ಆ ಕಡೇಲಿ ಒಂದು ಮೆಸೇಜನ್ನೂ ಕೊಡಬೇಕು… ಹೀಗೆಲ್ಲ ಯೋಚಿಸುತ್ತಿದ್ದವರು ಶ್ರೀ ವರದಪ್ಪ. ಅವರ ಲೆಕ್ಕಾಚಾರ, ದೂರದೃಷ್ಟಿ ಅದೆಷ್ಟು `ಖಡಕ್’ ಆಗಿರ್‍ತಾ ಇತ್ತು ಅಂದ್ರೆ-ವರದಪ್ಪ ಒಪ್ಪಿದ ಕಥೆ ಅಂದಮೇಲೆ ಆ ಸಿನಿಮಾ ಗೆಲ್ಲದೇ ಇರೋಕೆ ಸಾಧ್ಯವೇ ಇಲ್ಲ ಎಂಬ ಮಾತು ಗಾಂಧಿನಗರದ ತುಂಬಾ ಚಾಲ್ತಿಯಲ್ಲಿತ್ತು. ಅದು ನಿಜವೂ ಆಗಿರುತ್ತಿತ್ತು.

ಈಗ, ಅಂಥದೇ ಗುರುತರ ಜವಾಬ್ದಾರಿ ನಿಮ್ಮ ಹೆಗಲೇರಿದೆ. ಹೇಗೇ ಲೆಕ್ಕ ಹಾಕಿದ್ರೂ ನಿಮ್ಮದು ಇನ್ನೂ ಚಿಕ್ಕ ವಯಸ್ಸು. ಹೀಗಿರುವಾಗ ಒಂದೊಂದು ಸಿನಿಮಾಕ್ಕೂ ಡಿಫರೆಂಟ್ ಅನ್ನಿಸುವಂಥ ಕಥೆಗಳನ್ನು ಆಯ್ಕೆ ಮಾಡಬೇಕಲ್ಲ? ಆಗೆಲ್ಲ ತುಂಬ ಕಷ್ಟ ಅನಿಸೋದಿಲ್ವ ರಾಘಣ್ಣ? ಒಂದೊಂದ್ಸಲ ತುಂಬ ಇಷ್ಟಪಟ್ಟು ಒಪ್ಪಿಕೊಂಡ ಕಥೆ ಸಿನಿಮಾ ಆದ ನಂತರ ತೀರಾ ಡಲ್ ಎನ್ನುವಂತೆ ಮೂಡಿ ಬಂದಿರುತ್ತಲ್ಲ, ಆಗೆಲ್ಲ ಬೇಸರ ಆಗಲ್ವ? ಯಾವುದೋ ಒತ್ತಡಕ್ಕೆ; ಗೆಳೆತನಕ್ಕೆ, ಬಾಂಧವ್ಯಕ್ಕೆ ಗಂಟುಬಿದ್ದು ಒಂದೊಂದ್ಸಲ ಸಿನಿಮಾ ತಯಾರಿಸಬೇಕಾಗುತ್ತಲ್ಲ ಆಗೆಲ್ಲ ಹಿಂಸೆ ಅನ್ನಿಸಿಬಿಡಲ್ವ? ಇಂಥ ಸಂದರ್ಭಗಳನ್ನು ವರದಪ್ಪನವರು ಹೇಗೆ ನಿಭಾಯಿಸ್ತಾ ಇದ್ರೋ ಗೊತ್ತಿಲ್ಲ. ಆದ್ರೆ ನೀವು…. ಹೇಳಿ ರಾಘಣ್ಣಾ, ಅಂಥ ಒತ್ತಡದ ಸಂದರ್ಭಗಳನ್ನು ನೀವು ಹೇಗೆ ನಿಭಾಯಿಸ್ತೀರಿ?

ಹೌದು. ಒಂದೆರಡಲ್ಲ, ಬರೋಬ್ಬರಿ ಹತ್ತು ವರ್ಷಗಳ ಸುದೀರ್ಘ ಅವಧಿಯವರೆಗೆ `ಹೀರೋ’ ಆಗಿ ಮರೆದವರು ನೀವು. ಅಂಥ ನೀವು ಇವತ್ತು ಅದೇ ಗಾಂಧಿನಗರದಲ್ಲಿ `ಹೀರೋ’ ಅಲ್ಲದ ವೇಷದಲ್ಲಿ ಉಳಿದುಬಿಟ್ಟಿದೀರ. ಒಂದೇ ಮಾತಲ್ಲಿ ಹೇಳಿಬಿಡೋದಾದ್ರೆ `ಬಣ್ಣದ ಮಾಯೆ’ ಅಷ್ಟು ಸುಲಭವಾಗಿ ಬಿಡಲು ಆಗದಂಥಾದ್ದು. ಹೀಗಿರುವಾಗ ದಿನಕ್ಕೆ ಒಬ್ಬ ಹೊಸ ಹೀರೋ ಎದ್ದು ನಿಲ್ಲುವ ದೃಶ್ಯ ನಿಮಗೆ ಮತ್ತೆ ಮತ್ತೆ ಕಾಣ್ತಾನೇ ಇರುತ್ತೆ. ಆಗೆಲ್ಲ ಮನೆಯ ಜವಾಬ್ದಾರಿಯನ್ನು ಒಂದಷ್ಟು ದಿನ ಮರೆತು ಮತ್ತೆ ಹೀರೋ ಆಗಬೇಕು ಎಂಬ ತುಡಿತ ನಿಮ್ಮನ್ನು ಪದೇ ಪದೆ ಕಾಡಲ್ವ ರಾಘಣ್ಣಾ? ಹೇಳಿ, ಅಂಥ ಸಂದರ್ಭದಲ್ಲಿ ನಿಮ್ಮನ್ನ ನೀವೇ ಹೇಗೆ ಸಮಾಧಾನ ಮಾಡಿಕೊಳ್ತೀರಿ? ಇಂಥ ಸಂಕಟದ ಸಂದರ್ಭದಲ್ಲೆಲ್ಲ ಯಾವ ಹಾಡನ್ನ ಪದೇ ಪದೆ ಹಾಡ್ತಾ ಇರ್‍ತೀರಿ?

ಇವತ್ತಿಗೂ ಅಷ್ಟೇ ಸರ್, ಯಾವುದೋ ಒಂದು ಸಿನಿಮಾದಲ್ಲಿ, ಒಂದು ಪತ್ರಿಕೆಯಲ್ಲಿ, ಒಂದು ಸುದ್ದಿಯ ನೆಪದಲ್ಲಿ ಅಣ್ಣಾವ್ರ ನಗುಮುಖ ನೋಡಿದ್ರೆ ಸಾಕು, ನಮಗೆ ಕಣ್ತುಂಬಿ ಬರ್‍ತದೆ. ಅವರ ಒಂದೇ ಒಂದು ಹಾಡು; ಒಂದು ಡೈಲಾಗು ನಮ್ಮೊಳಗೆ ಒಂದು ಸ್ಫೂರ್ತಿ, ಸಂತೋಷ, ಸಂಕಟ ಎಲ್ಲವನ್ನೂ ಉಂಟು ಮಾಡಿಬಿಡುತ್ತೆ. `ಅಭಿಮಾನಿಗಳು’ ಅನ್ನಿಸಿಕೊಂಡ ನಮ್ಮ ಕಥೆಯೇ ಹೀಗಿರುವಾಗ ದಿನದಿನವೂ ಅಪ್ಪಾಜಿಯ ನೆನಪಿನಲ್ಲಿ ನಿಮಗೆ ಆಗುವ ಸಂಕಟವಿದೆಯಲ್ಲ? ಸರ್, ಅದನ್ನು ಪದಗಳಲ್ಲಿ ಹಿಡಿದಿಡುವುದಕ್ಕೆ ಸಾಧ್ಯವೇ ಇಲ್ಲ. ಆದರೆ, ಈವತ್ತಿನ ತನಕ ಅಂಥದೊಂದು ನೋವನ್ನು ನೀವು ತೋರ್ಪಡಿಸಿಕೊಂಡೇ ಇಲ್ಲ. ಬದಲಿಗೆ ಅಪ್ಪಾಜಿ ಎಲ್ಲೂ ಹೋಗಿಲ್ಲ. ಅಭಿಮಾನಿಗಳ ಪ್ರೀತಿಯಲ್ಲಿ, ಸಿನಿಮಾದ ಪಾತ್ರಗಳಲ್ಲಿ, ಹಾಡುಗಳ ಮಾಧುರ್‍ಯದಲ್ಲಿ, ನಮ್ಮ ಅಮ್ಮನ ಹಣೆಯ ಕುಂಕುಮದಲ್ಲಿ ಅವರು ಚಿರವಾಗಿ ಉಳಿದಿದ್ದಾರೆ. ಅವರ ಮಾರ್ಗದರ್ಶನವೇ ನನ್ನನ್ನು, ನಮ್ಮ ಕುಟುಂಬವನ್ನು ಈವರೆಗೂ ಕಾಪಾಡಿದೆ. ಮುಂದೆ ಕೂಡ ಕಾಪಾಡುತ್ತೆ ಎಂದು ಭಾವುಕರಾಗಿ ಹೇಳ್ತೀರಿ. ಆ ಮಾತು ಕೇಳಿದವರು ಚಪ್ಪಾಳೆ ಹೊಡೆಯುವುದನ್ನೂ ಮರೆತು ಕುಳಿತಿದ್ದಾಗ ಹಾಡಲು ಶುರು ಮಾಡಿಬಿಡ್ತೀರಿ- `ಆಡಿಸಿ ನೋಡು ಬೀಳಿಸಿ ನೋಡೂ ಉರುಳಿ ಹೋಗದು….’

ರಾಘಣ್ಣಾ, ಆ ಹಾಡು ಕೇಳ್ತಾ ಇದ್ರೆ ನಮ್ಮ ಅಣ್ಣಾವ್ರೇ ಕಣ್ಮುಂದೆ ಬಂದಂತಾಗುತ್ತೆ. ನಿಮ್ಮ ನಯ, ವಿನಯ, ಹೃದಯವಂತಿಕೆ, ಎರಡನೇ ಭೇಟಿಗೇ ಆಪ್ತರಾಗಿಬಿಡುವ ವಿಶೇಷ ಗುಣ ಮೇಲಿಂದ ಮೇಲೆ ಅಣ್ಣಾವ್ರನ್ನೇ ನೆನಪು ಮಾಡಿಕೊಡುತ್ತೆ. ಹೇಳಿ ರಾಘಣ್ಣಾ, ನನ್ನ ಬದುಕು ಇಂಥ ಸ್ಟೇಜ್‌ಗೂ ತಲುಪಿಕೊಳ್ಳಬಹುದು ಎಂಬ ಒಂದು ಅಂದಾಜು, ಹೀರೋ ಆದ ಮೊದಲ ದಿನ ನಿಮಗೆ ಇತ್ತಾ?

****

ಎಲ್ಲರಿಗೂ ಗೊತ್ತಿದೆ. ಅಣ್ಣಾವ್ರು, ವರದಪ್ಪ ಇಬ್ರೂ ಹೋಗಿಬಿಟ್ಟ ಮೇಲೆ ಬಹುದೊಡ್ಡ ಜವಾಬ್ದಾರಿ ನಿಮ್ಮ ಹೆಗಲೇರಿದೆ. ಒಂದು ದೊಡ್ಡ ಖುಷಿ ಅಂದರೆ ಅದನ್ನು ತುಂಬ ಯಶಸ್ವಿಯಾಗಿ ನೀವು ನಿಭಾಯಿಸ್ತಾ ಇದೀರ. ಈ ಎಲ್ಲ ಜವಾಬಾರಿಗಳ ಮಧ್ಯೆ ನೀವು ನಟಿಸೋದನ್ನ ನಿಲ್ಲಿಸಿಬಿಟ್ಟಿದೀರ. ಅದಕ್ಕೆ ನಮ್ಮ ತಕರಾರಿಲ್ಲ. ಆದ್ರೆ ಸರ್, ನೀವು ಹಾಡುವುದನ್ನೂ ನಿಲ್ಲಿಸಿದ್ದೀರಲ್ಲ? ಹೇಳಿ, ಅದು ಸರೀನಾ? `ಸಿನಿಮಾಗಳೇ ಇಲ್ವಲ್ಲ ಸಾರ್, ಅದಕ್ಕೇ ಹಾಡ್ತಾ ಇಲ್ಲ’ ಅನ್ನಬಹುದು ನೀವು. ಆದರೆ, ಭಕ್ತಿಗೀತೆ, ಭಾವಗೀತೆಗಳಿಗೆ ನೀವು ದನಿಯಾಗಬಹುದಲ್ವ ರಾಘಣ್ಣಾ….?

ನಿಮಗೇ ಗೊತ್ತಿರುವ ಹಾಗೆ ಸಾವಿರದಲ್ಲಿ ಒಬ್ಬರಿಗೆ ಮಾತ್ರ ಮಧುರ ಕಂಠವಿರುತ್ತೆ. ಹಾಗೆ ಸಿರಿಕಂಠ ಪಡೆದವರ ಪೈಕಿ ನೀವೂ ಒಬ್ಬರು. ಹೀಗಿರುವಾಗ ನೀವು ಹಾಡುವುದನ್ನೇ ನಿಲ್ಲಿಸಿಬಿಡೋದು ಎಷ್ಟು ಸರಿ? ಇವತ್ತಿನ ಸಂದರ್ಭದಲ್ಲಿ ಭಕ್ತಿಗೀತೆ ಹಾಗೂ ಭಾವಗೀತೆ ಕ್ಷೇತ್ರದಲ್ಲಿ ಒಂದಷ್ಟು ಹೊಸ ಕಂಠಗಳು ಬೇಕೇ ಬೇಕು ಅನ್ನಿಸ್ತಾ ಇದೆ. ಅದೇ ಕಾರಣದಿಂದ ನಾಡಿನ ಅಷ್ಟೂ ಅಭಿಮಾನಿಗಳ ಪರವಾಗಿ ಹೇಳ್ತಾ ಇದೀನಿ: ನೀವು ಹಾಡಬೇಕು. ಒಂದು ಹಾಡಿನ ಮೂಲಕ, ರಾಗದ ಮೂಲಕ, ಚರಣದ ಮೂಲಕ ಎಲ್ಲರನ್ನೂ ಕಾಡಬೇಕು. ಒಂದು ಭಕ್ತಿಗೀತೆಯನ್ನು ನೀವು ಮೈಮರೆತು ಹಾಡಿದಾಗ ಕಂಡೂ ಕಾಣದಂತೆ ನಮ್ಮ ಜತೆಗಿರುವ ಅಣ್ಣಾವ್ರು `ಎಷ್ಟು ಚೆನ್ನಾಗಿ ಹಾಡಿದ್ಯೋ ಕಂದಾ’ ಎಂದು ಖುಷಿಪಡ್ತಾರೆ. ಸಮಸ್ತ ಅಭಿಮಾನಿಗಳು ಸಂಭ್ರಮದಿಂದ ಚಪ್ಪಾಳೆ ಹೊಡೀತಾರೆ.

`ಅಭಿಮಾನಿಗಳ’ ಕೋರಿಕೆಯನ್ನು ಅಣ್ಣಾವ್ರೇ ಒಪ್ಪಿಕೊಳ್ತಾ ಇದ್ರು. ನೀವೂ ಹಾಗೇ ಮಾಡಬೇಕು. ಓಕೆನಾ? ಈ ಕಾರಣದಿಂದಲೇ ದೊಡ್ಡ ಖುಷಿಯೊಂದಿಗೆ ಗಾಯನ ಕ್ಷೇತ್ರಕ್ಕೆ ನಡೆದು ಬನ್ನಿ ಎಂಬ ಪ್ರೀತಿಯ ಬೇಡಿಕೆಯೊಂದಿಗೆ- ನಮಸ್ಕಾರ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: