ಅಪ್ಪ ಹೇಳಿದ್ದ ಬುದ್ಧಿಮಾತು ಹಾಡಿನ ಮೊದಲ ಸಾಲಾಯಿತು!

hamsa

hamsa

ಚಿತ್ರ: ರಣಧೀರ, ಸಾಹಿತ್ಯ-ಸಂಗೀತ: ಹಂಸಲೇಖ
ಗಾಯನ: ಎಸ್ಪಿ. ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ

ಲೋಕವೇ ಹೇಳಿದ ಮಾತಿದು. ವೇದದ ಸಾರವೇ ಕೇಳಿದು
ನಾಳಿನ ಚಿಂತೆಯಲಿ ಬೇಯಬಾರದು, ಬಾಳಿನ ಮೂಲವಿಲ್ಲಿ ಕೇಳಬಾರದು
ಪ್ರೀತಿ ಮಾಡಬಾರದು, ಮಾಡಿದರೆ ಜಗಕೆ ಹೆದರಬಾರದು||

ಮರಳುಗಾಡೇ ಇರಲಿ, ಭೂಮಿಗೆ ಸೂರ್ಯನಿಳಿದು ಬರಲಿ
ಪ್ರೀತಿಸೋ ಜೀವಗಳು ಬಾಡಲಾರದಂಥ ಹೂವುಗಳು
ರಾಜಕೀಯವಿರಲಿ, ಶಕುನಿಗಳ ನೂರು ತಂತ್ರವಿರಲಿ
ಪ್ರೇಮದ ರಾಜ್ಯದಲಿ ಸಾವಿಗೆಂದೂ ಭಯ ಕಾಣದಿಲ್ಲಿ
ಲೋಕವ ಕಾಡುವ ರಾಕ್ಷಸರಿದ್ದರೂ ಭೂಮಿ ಕೇಳಲಿಲ್ಲ
ಬಾಯ್ತೆರೆಯಲಿಲ್ಲ, ಮಾತನಾಡಲಿಲ್ಲ
ಪ್ರೇಮಿಗಳಿಬ್ಬರು ಸೇರಿ ಪ್ರೀತಿಸಿ ಬಾಳೋದು ನೀವು
ಸಹಿಸಲಿಲ್ಲ, ಬಯ್ಯುತೀರಲ್ಲ, ಹೊಡೆಯುತೀರಲ್ಲ// ಪ್ರೀತಿ ಮಾಡಬಾರದು//

ದ್ವೇಷವೆಂಬ ವಿಷವ ಸೇವಿಸುತ ಖಡ್ಗ ಮಸೆಯುತಿರುವ
ಅಂಧರ ಕಣ್ಣಿಗೆ ಈ ಪ್ರೀತಿಯ ಸ್ವರೂಪ ಕಾಣಿಸದು
ಮನಸು ಕಣ್ಣು ತೆರೆದು ನೋಡಿದರೆ ಎಲ್ಲ ಶೂನ್ಯವಿಹುದು
ಪ್ರೀತಿಯ ನಂಬಿದರೆ ಅಂಧಕಾರದಲ್ಲೂ ಕಾಣುವುದು
ರಾಜ್ಯಗಳಳಿದು ಕೋಟೆ ಕೊತ್ತಲಗಳುರುಳಿದವು
ಹೆಣ್ಣಿಗಾಗಿ, ಈ ಮಣ್ಣಿಗಾಗಿ, ಈ ಹೊನ್ನಿಗಾಗಿ
ಜೀವದ ಆಸೆಯ ಬಿಟ್ಟು ವಿಷ ಕುಡಿದರಿಲ್ಲಿ
ಪ್ರೀತಿಗಾಗಿ, ಆನಂದವಾಗಿ, ಆಶ್ಚರ್ಯವಾಗಿ //ಪ್ರೀತಿ ಮಾಡಬಾರದು//

`ಪ್ರೇಮಲೋಕ’ ಚಿತ್ರದ ಮೂಲಕ ಏಕ್ದಂ ಸ್ಟಾರ್ ಆಗಿಬಿಟ್ಟವರು ಹಂಸಲೇಖ. ಅದಕ್ಕೂ ಹಿಂದೆ `ತ್ರಿವೇಣಿ’ ಸಿನಿಮಾಕ್ಕೆ `ನೀನಾ ಭಗವಂತ’ ಎಂಬ ಸೂಪರ್ಹಿಟ್ ಗೀತೆಯನ್ನೂ; ನಂತರ `ಹೆಣ್ಣೇ ನಿನಗೇನು ಬಂಧನ’ ಚಿತ್ರಕ್ಕೆ `ಹಾರಾಡೋ ಹಕ್ಕಿಗಳೇ’, ತೇಲಾಡೋ ಮೋಡಗಳೇ’ ಎಂಬ ಹಾಡನ್ನೂ ಬರೆದರು ನಿಜ. ಆದರೆ ಚಿತ್ರರಂಗ ಇವರನ್ನು ಗುರುತಿಸಲಿಲ್ಲ. ಹತ್ತಿರಕ್ಕೂ ಬಿಟ್ಟುಕೊಳ್ಳಲಿಲ್ಲ. ಆದರೆ ಪ್ರೇಮಲೋಕ ಬಂದದ್ದೇ ನೆಪ, ಹಂಸಲೇಖಾಗೆ ಜಾಕ್ಪಾಟ್ ಹೊಡೆಯಿತು. ಸಾಹಿತ್ಯದ ಜತೆಗೆ ಸಂಗೀತ ನಿರ್ದೇಶನದ ಹೊಣೆಯನ್ನೂ ಹೊತ್ತ ಮೊತ್ತ ಮೊದಲ ಗೀತರಚನೆಕಾರ ಎಂಬ ಹೆಗ್ಗಳಿಕೆ ಹಂಸಲೇಖಾ ಪಾಲಾಯಿತು. ಪರಿಣಾಮ, ರವಿಚಂದ್ರರನ್ನು ಮಾತ್ರವಲ್ಲ, ಹಂಸಲೇಖಾ ಅಲಿಯಾಸ್ ಗಂಗರಾಜುವನ್ನು ಎಲ್ಲರೂ ಬೆರಗಿನಿಂದಲೇ ನೋಡತೊಡಗಿದರು.
ಒಮ್ಮೆ ಗದ್ಯದಂತೆ, ಒಮ್ಮೆ ಪದ್ಯದಂತೆ, ಇನ್ನೊಮ್ಮೆ ಸರಳ ಭಾವಗೀತೆಯಂತೆ ಕಾಣುತ್ತಿದ್ದ `ಪ್ರೇಮಲೋಕ’ದ ಹಾಡುಗಳು ಎಲ್ಲರಿಗೂ ಇಷ್ಟವಾಗಿದ್ದವು ನಿಜ. ಆದರೆ, ಅದೇ ಸಂದರ್ಭದಲ್ಲಿ `ಈ ನಿಂಬೆ ಹಣ್ಣಿನಂಥ ಹುಡುಗಿ’ ಹಾಗೂ `ಗಂಗೂ, ಈ ಬೈಕು ಕಲಿಸಿಕೊಡು ನಂಗೂ…’ ಹಾಡುಗಳ ಮೂಲಕ ಗೀತಸಾಹಿತ್ಯಕ್ಕೆ ದ್ವಂದ್ವಾರ್ಥ ತಂದ ಆರೋಪಕ್ಕೂ ಹಂಸಲೇಖಾ ಗುರಿಯಾಗಿದ್ದರು. ಕೆಲವು ಮಡಿವಂತರಂತೂ ಇವರನ್ನು `ಧ್ವಂಸಲೇಖಾ’ ಎಂದೇ ಕರೆದು ತಮ್ಮ ಸಿಟ್ಟು ತೋರಿಸಿಕೊಂಡರು. ಮತ್ತೆ ಕೆಲವರು `ಹಂಸಲೇಖಾ ಅಂದ್ರೆ ಇಷ್ಟೇನೇ ಕಣ್ರೀ’ ಎಂದೂ ಅವಸರದ ತೀರ್ಪು ನೀಡಿಬಿಟ್ಟರು.
ಹೀಗೆ, ಮೆಚ್ಚುಗೆ-ಟೀಕೆ ಎರಡೂ ಸಮ-ಸಮನಾಗಿ ಕೈ ಹಿಡಿದ ಸಂದರ್ಭದಲ್ಲಿಯೇ ರವಿಚಂದ್ರನ್ ನಿರ್ಮಾಣ-ನಿರ್ದೇಶನದ `ರಣಧೀರ’ಕ್ಕೆ ಹಾಡು ಬರೆಯುವ ಹೊಣೆಗಾರಿಕೆ ಹಂಸ್ ಹೆಗಲಿಗೆ ಬಿತ್ತು. ಆ ವೇಳೆಗಾಗಲೇ ಹಿಂದಿಯಲ್ಲಿ ತೆರೆಕಂಡು ಹಿಟ್ ಆಗಿದ್ದ `ಹೀರೋ’ ಸಿನಿಮಾದ ಕನ್ನಡ ಅವತರಣಿಕೆಯಾಗಿ `ರಣಧೀರ’ ತಯಾರಾಗುತ್ತಿತ್ತು. ಹಾಡುಗಳ ಮೂಲಕವೇ ಒಂದು ಕ್ರೇಜ್ ಸೃಷ್ಟಿಸಬೇಕು ಎಂದುಕೊಂಡಿದ್ದ ರವಿಚಂದ್ರನ್-`ಪ್ರೇಮಲೋಕ’ದ ಬಗ್ಗೆ ಬಂದಿರೋ ಟೀಕೆಗಳನ್ನು ಮರೆತುಬಿಡಿ. ಒಂದು ಮೆಸೇಜ್ ಇರುವಂಥ, ಪ್ರೇಮಿಗಳಿಗೆ ಅಡ್ಡಿಪಡಿಸುವವರನ್ನು ಪ್ರಶ್ನಿಸುವಂಥ, ಎಲ್ಲ ಪ್ರೇಮಿಗಳಿಗೂ ಇಷ್ಟವಾಗುವಂಥ ಹಾಡು ಬರೀರಿ’ ಅಂದರು.
ಈ ಮಾತನ್ನೇ ಮನದಲ್ಲಿಟ್ಟುಕೊಂಡ ಹಂಸಲೇಖ-`ದೇವರು ನೀಡಿದ ಪ್ರೀತಿಗೆ| ನೀಡಿರಿ ನಿಮ್ಮಯ ಒಪ್ಪಿಗೆ| ಭೂಮಿ ಮೇಲೆ ಪ್ರೀತಿಸಿದ ನಮ್ಮ ತಪ್ಪಿಗೆ| ಸಾಯಲು ಹೇಳಿದರೆ ಸಾಕು ಒಟ್ಟಿಗೆ| ಜತೆಯಲ್ಲಿರಲು ಬಿಡಿರಿ| ಪ್ರೇಮಿಗಳ ದೂರ ಮಾಡಬೇಡಿರಿ…’ ಎಂದು ಪಲ್ಲವಿ ಬರೆದರು. ಅದನ್ನು ಟ್ಯೂನ್ ಸಮೇತ ರವಿಚಂದ್ರನ್ಗೆ ಹೇಳಿಯೂ ಬಿಟ್ಟರು. ಸರಿ, ಬೇಗ ಚರಣವನ್ನೂ ರೆಡಿ ಮಾಡಿಕೊಳ್ಳಿ. ಮದ್ರಾಸಿಗೆ ಹೋಗಿ ವಾಯ್ಸ್ ಮಿಕ್ಸಿಂಗ್ ಮಾಡಿಸೋಣ. ಅದರ ಮರುದಿನವೇ ನಾನು ಶೂಟಿಂಗ್ಗೆ ಹೋಗಬೇಕು ಅಂದರಂತೆ ರವಿಚಂದ್ರನ್. ಆಮೇಲೆ ಆ ಹಾಡಿಗೆ ಚರಣ ಬರೆಯಲು ಪಟ್ಟ ಪಾಡು ಮತ್ತು ಅದು ಸೃಷ್ಟಿಯಾದ ಸಂದರ್ಭವನ್ನು ಹಂಸಲೇಖಾ ರಸವತ್ತಾಗಿ ವರ್ಣಿಸುತ್ತಾರೆ. ಅದು ಹೀಗೆ:
ರವಿಚಂದ್ರನ್ ಅವರೊಂದಿಗೆ ಮದ್ರಾಸಿಗೆ ಹೋಗಿಬಿಟ್ಟೆ ನಿಜ. ಅವರೇನೋ ರಾತ್ರಿ ಒಂಬತ್ತು ಗಂಟೆಗೆ ವಾಯ್ಸ್ ಮಿಕ್ಸಿಂಗ್ ಎಂದು ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರಿಗೆ ಹೇಳಿದ್ದರು. ಅಷ್ಟರೊಳಗೆ ಹೇಗಾದರೂ ಚರಣ ಬರೆಯೋಣ ಅಂದುಕೊಂಡೆ ನಿಜ. ಆದರೆ, ಜಪ್ಪಯ್ಯ ಅಂದರೂ ರಾತ್ರಿ ಒಂಬತ್ತರವರೆಗೂ ಒಂದು ಸಾಲೂ ಹೊಳೆಯಲಿಲ್ಲ. ತಿಳಿಸಿದ್ದ ಸಮಯಕ್ಕೆ ಸರಿಯಾಗಿ ಎಸ್ಪಿ-ಎಸ್. ಜಾನಕಿ ಬಂದರು. ಆದರೆ, ಅದೆಷ್ಟೇ ಮಿಸುಕಾಡಿದರೂ ನನ್ನಿಂದ ಚರಣವನ್ನೇ ಬರೆಯಲು ಸಾಧ್ಯವಾಗ್ತಾ ಇಲ್ಲ. ಬರೀ ಪಲ್ಲವಿ ಮಾತ್ರ ರೆಡಿಯಾಗಿದೆ ಎಂದು ರವಿಚಂದ್ರನ್ಗೆ ಹೇಳಿದೆ. ಅವರು ಸಿಡಿಮಿಡಿಗೊಂಡರು. ನನ್ನ ಮೇಲೆ ಸ್ವಲ್ಪ ಜಾಸ್ತಿಯೇ ರೇಗಿ, ಎಸ್ಪಿ ಹಾಗೂ ಎಸ್. ಜಾನಕಿ ಅವರಲ್ಲಿ `ಸಾರಿ’ ಕೇಳಿ ಇಬ್ಬರನ್ನೂ ವಾಪಸ್ ಕಳುಹಿಸಿದರು.
ನಂತರ, ನನ್ನ ಕಡೆ ತಿರುಗಿ `ಬೆಳಗ್ಗೆ ಐದು ಗಂಟೆಗೆ ಏರ್ಫೋರ್ಟ್ಗೆ ಬನ್ನಿ. ಅಷ್ಟರೊಳಗೆ ಚರಣದ ಸಮೇತ ಹಾಡು ರೆಡಿ ಇರಬೇಕು ಅಂದರು. `ಸರಿ’ ಅನ್ನದೆ ಬೇರೆ ದಾರಿಯೇ ಇರಲಿಲ್ಲ. ಹೋಟೆಲಿಗೆ ಬಂದು ಅದೇನೇ ಯೋಚಿಸಿದರೂ ಒಂದು ಪದವೂ ಹೊಳೆಯಲಿಲ್ಲ. ಮಾತ್ರವಲ್ಲ, ಈಗಾಗಲೇ ಸಿದ್ಧವಾಗಿದ್ದ ಪಲ್ಲವಿಯ ಬಗೆಗೂ ನನಗೆ ಸಮಾಧಾನ ಇರಲಿಲ್ಲ. ಪಲ್ಲವಿ- ಚರಣವಿಲ್ಲದೆ ಹಾಡೇ ಮುಂದೆ ಹೋಗುವಂತಿಲ್ಲ…. ಥತ್ತೇರಿಕೆ ಅಂದುಕೊಂಡೆ. ಈಗ ಸ್ನಾನವನ್ನಾದರೂ ಮುಗಿಸೋಣ. ನಂತರ ನೋಡಿಕೊಂಡರಾಯ್ತು ಎಂದು ಸ್ನಾನದ ಮನೆಗೆ ಹೆಜ್ಜೆ ಇಟ್ಟ ತಕ್ಷಣ, ನಮ್ಮ ತಂದೆಯವರು ಮೇಲಿಂದ ಮೇಲೆ ಹೇಳುತ್ತಿದ್ದ `ನಾನು ನಾನು ಹೇಳಿದ ಮಾತಲ್ಲ ಕಣೋ, ಇದು ಲೋಕ ಹೇಳಿದ ಮಾತು’ ಎಂಬುದು ನೆನಪಿಗೆ ಬಂತು. ನನಗೆ ಬುದ್ಧಿ ಹೇಳಬೇಕು ಅನ್ನಿಸಿದಾಗೆಲ್ಲ ಅಪ್ಪ ಈ ಮಾತು ಬಳಸುತ್ತಿದ್ದರು. ಅಷ್ಟೆ. ಮಿಂಚು ಹೊಳೆದಂತಾಯಿತು. ಮರುಕ್ಷಣವೇ `ಲೋಕವೆ ಹೇಳಿದ ಮಾತಿದು| ವೇದದ ಸಾರವೆ ಕೇಳಿದು…’ ಸಾಲುಗಳು ಆಗಷ್ಟೆ ಹೆಜ್ಜೆ ಕಲಿತ ಕಂದನಂತೆ ಮನದ ತುಂಬಾ ಓಡಾಡಿದವು. ಆತುರದಲ್ಲಿ ಸ್ನಾನ ಮುಗಿಸಿ ಬಂದವನೇ-ಸರಸರನೆ ಹಾಡು ಬರೆದೆ. ಮರುಕ್ಷಣವೇ ಎಸ್ಪೀಬಿ ಹಾಗೂ ಎಸ್. ಜಾನಕಿಯವರಿಗೆ ಫೋನ್ ಮಾಡಿ ಹೊಸದಾಗಿ ಬರೆದ ಪಲ್ಲವಿ, ಚರಣವನ್ನು ಹಾಡಿ ತೋರಿಸಿದೆ.
ಅವರಿಬ್ಬರೂ- ಬೆಳಗ್ಗೆ ಕೇಳಿಸಿದ ಪಲ್ಲವಿ ಸುಮಾರಾಗಿದೆ. ಈಗ ಹೇಳಿದ್ರಲ್ಲ `ಅದು ತುಂಬಾ ಚೆನ್ನಾಗಿದೆ, ಇದನ್ನೇ ಇಟ್ಕೊಳ್ಳೋಣ ಅಂದರು. ನಂತರ ಮುಂಜಾನೆಯೇ ವಾಯ್ಸ್ ರೆಕಾರ್ಡಿಂಗ್ ಮುಗಿಸಿದೆ. ಈ ವೇಳೆಗೆ ರವಿಚಂದ್ರನ್ ಉಡುಪಿಯಲ್ಲಿ `ರಣಧೀರ’ದ ಶೂಟಿಂಗ್ನಲ್ಲಿದ್ದರು. ಅವರಿಗೂ ಕೇಳಿಸೋಣ ಎಂದುಕೊಂಡು ಮದ್ರಾಸಿನಿಂದ ಮಂಗಳೂರಿಗೆ ವಿಮಾನದಲ್ಲಿ ಹೋದೆ. ಅಲ್ಲಿಂದ ಉಡುಪಿಗೆ ಹೋಗುವ ತರಾತುರಿಯಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ ಹಾಡಿನ ತಟ್ಟೆಗಳಿದ್ದ ಸೂಟ್ಕೇಸನ್ನು ಮಂಗಳೂರು ಏರ್ಫೋರ್ಟಿನಲ್ಲೇ ಬಿಟ್ಟುಹೋಗಿದ್ದೆ. ಈ ಪರಿವೆಯೇ ಇಲ್ಲದೆ, ಉಡುಪಿಗೆ ಹೋಗಿ ರವಿಚಂದ್ರನ್ಗೆ ವಿಷಯ ತಿಳಿಸಿದೆ. ಹಾಡು ಕೇಳುವ ಆಸೆಯಿಂದ ಅವರು ಎರಡು ಗಂಟೆ ಮೊದಲೇ ಶೂಟಿಂಗ್ ನಿಲ್ಲಿಸಿದರು. ನಂತರ ನೋಡಿದರೆ-ಹಾಡಿನ ತಟ್ಟೆಗಳಿದ್ದ ಸೂಟ್ಕೇಸೇ ಮಾಯ!
ತಕ್ಷಣ ಮಂಗಳೂರು ಏರ್ಫೋರ್ಟ್ಗೆ ಕಾರು ಓಡಿಸಿ, ವಿಚಾರಿಸಿದೆ. ನನ್ನ ಅದೃಷ್ಟಕ್ಕೆ ಯಾರೋ ಪುಣ್ಯಾತ್ಮರು ಆ ಸೂಟ್ಕೇಸನ್ನು ಎತ್ತಿಟ್ಟಿದ್ದರು. ಅದನ್ನು ತಗೊಂಡು ಮತ್ತೆ ಉಡುಪಿ ತಲುಪಿದಾಗ ರಾತ್ರಿ ಎಂಟೂವರೆ. ಆಗಲೇ ಎಲ್ಲರಿಗೂ ಹಾಡು ಕೇಳಿಸಿದೆ. ಹಾಡು ಕೇಳಿ ಇಡೀ ಯುನಿಟ್ಟೇ ಕುಣಿಯಿತು…. ಮುಂದೆ ಸಿನಿಮಾ ಬಿಡುಗಡೆಯಾದಾಗ ನಾಡಿಗೆ ನಾಡೇ ಕುಣಿಯಿತು!
ಇಷ್ಟು ಹೇಳಿ ಛಕ್ಕನೆ ಮಾತು ನಿಲ್ಲಿಸಿ ಬಿಟ್ಟರು ಹಂಸಲೇಖಾ. ಬಹುಶಃ ಈವರೆಗೂ ಹೊಳೆಯದಿದ್ದ ಹಾಡಿನ ಸಾಲು ಛಕ್ಕನೆ ಕೈ ಹಿಡಿಯಿತೋ ಏನೋ….

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: