ದೇವ್ರಿದಾನೆ ಬಿಡಪ್ಪಾ…

Dear Ramnaresh

Dear Ramnaresh

ಇದು, ಸಾವಿಗೆ ಸವಾಲು ಹಾಕಿದ ಧೀರನೊಬ್ಬನ ಕಥೆ. `ಸೋಲು’ ಎಂಬುದನ್ನು ಹೆಜ್ಜೆ ಹೆಜ್ಜೆಗೂ ಸೋಲಿಸುತ್ತಲೇ ಇರುವ ಛಲಗಾರನೊಬ್ಬನ ಕಥೆ. Sky is the limit ಎಂದುಕೊಂಡರೆ, ಯಾವುದೂ ಅಸಾಧ್ಯವಲ್ಲ ಎಂದು ಜಗತ್ತಿಗೇ ತೋರಿಸಿಕೊಟ್ಟಿರುವ ಸಾಧಕನೊಬ್ಬನ ಕಥೆ.
ಈ ಕಥೆಯ ಹೀರೋ-ರಾಮ್ ನರೇಶ್ ಕರುತರ. ಈತ, ಆಂಧ್ರಪ್ರದೇಶದ ಗೋದಾವರಿ ನದೀ ತೀರದಲ್ಲಿರುವ ತೀಪಾರು ಎಂಬ ಹಳ್ಳಿಯವನು. ಈ ರಾಮ್ನರೇಶನ ಅಕ್ಕನ ಹೆಸರು ಸಿರೀಶಾ. ಇವನ ತಂದೆ ಒಬ್ಬ ಲಾರಿ ಡ್ರೈವರ್. ತಾಯಿ ಹೌಸ್ವೈಫ್.
ರಾಮ್ನರೇಶನ ತಂದೆ-ತಾಯಿಗೆ ಅಕ್ಷರದ ಗಂಧವೇ ಇಲ್ಲ. ಈ ದಂಪತಿಗೆ ಅದೇ ಒಂದು ದೊಡ್ಡ ಕೊರಗಾಗಿತ್ತು. ಅದನ್ನು ಮತ್ತೆ ಮತ್ತೆ ಮಕ್ಕಳೆದುರು ಹೇಳಿಕೊಳ್ಳುತ್ತಾ- `ನಾವಂತೂ ಓದಲಿಲ್ಲ. ನೀವು ಚನ್ನಾಗಿ ಓದಬೇಕು’ ಎನ್ನುತ್ತಿದ್ದರು. ಅಷ್ಟೇ ಅಲ್ಲ, ಎಂಥ ಸಂಕಟದ ಸಂದರ್ಭದಲ್ಲೂ ಎದೆಗುಂದಬಾರದು ಎಂಬ ಕಿವಿಮಾತು ಹೇಳಿಕೊಟ್ಟಿದ್ದರು. ರಾಮ್ನರೇಶ್ನ ತಂದೆಯಂತೂ ಯಾವುದೇ ಸಮಸ್ಯೆ ಎದುರಾದರೂ- `ದೇವ್ರಿದಾನೆ ಬಿಡಪ್ಪಾ, ಎಲ್ಲ ಸರಿ ಹೋಗುತ್ತೆ’ ಎಂದು ಬಿಡುತ್ತಿದ್ದ. ತಮಾಷೆಯೆಂದರೆ, ಬಾಲ್ಯದಲ್ಲಿ ಅರ್ಥವಾಗದ ಗಣಿತದ ಲೆಕ್ಕಗಳೊಂದಿಗೆ ಮಗ ಎದುರು ನಿಂತಾಗ ಕೂಡ ಈ ಲಾರಿ ಡ್ರೈವರ್ರು- `ದೇವ್ರಿದಾನೆ ಬಿಡಪ್ಪಾ, ಎಲ್ಲಾ ಸಮಸ್ಯೆ ಮುಗಿದು ಹೋಗುತ್ತೆ’ ಎಂದು ಉತ್ತರ ಕೊಡುತ್ತಿದ್ದ!
ರಾಮ್ನರೇಶ್ನ ಬಾಲ್ಯ ಕೂಡ ಉಳಿದ ಎಲ್ಲ ಮಕ್ಕಳ ಥರಾನೇ ಇತ್ತು. ಆತ ಓದಿನಲ್ಲಿ ಮುಂದಿದ್ದ ನಿಜ. ಆದರೆ ಅದಕ್ಕಿಂತ ಹೆಚ್ಚಿನ ತುಂಟತನವನ್ನು ಮೈಗೂಡಿಸಿಕೊಂಡಿದ್ದ. ಬೇರೆಯವರ ತೋಪಿಗೆ ನುಗ್ಗಿ ಮಾವಿನ ಹಣ್ಣು ಕೀಳುವುದು, ಮಾಲೀಕರು ಬರುವುದು ಕಂಡ ಕೂಡಲೇ ಛಂಗನೆ ಜಿಗಿದು ಓಡುವುದರಲ್ಲಿ ಅವನಿಗೆ ಪ್ರತಿಸ್ಪರ್ಧಿಗಳೇ ಇರಲಿಲ್ಲ. ಆದರೆ, ಹುಡುಗ ತುಂಬ ಬುದ್ಧಿವಂತ ಅನ್ನಿಸಿಕೊಂಡಿದ್ದನಲ್ಲ? ಆ ಕಾರಣಕ್ಕೆ ಈ ತುಂಟತನವನ್ನು ಎಲ್ಲರೂ ಮಾಫಿ ಮಾಡಿದ್ದರು.
ಅದು ೧೯೯೩ರ ಜನವರಿ ತಿಂಗಳು. ಸಂಕ್ರಾಂತಿ ನೆಪದಲ್ಲಿ ಶಾಲೆಗೆ ಐದು ದಿನಗಳ ರಜೆ ಇತ್ತು. ಈ ಅವಧಿಯಲ್ಲಿ ತಾಯಿ ಮತ್ತು ಅಕ್ಕನೊಂದಿಗೆ ಅಜ್ಜಿ ಊರಿಗೆ ಹೋದ ರಾಮ್ ನರೇಶ್ ರಜೆ ಮುಗಿಯಲು ಒಂದು ದಿನ ಬಾಕಿ ಅನ್ನುವಾಗಲೇ ತಮ್ಮೂರಿಗೆ ಹೊರಟು ನಿಂತ. ಇವರು ಬಸ್ ನಿಲ್ದಾಣಕ್ಕೆ ಬಂದು ಐದು ನಿಮಿಷ ಕಳೆದಿರಲಿಲ್ಲ. ಅಷ್ಟರಲ್ಲಿ, ಅದೇ ಮಾರ್ಗವಾಗಿ ರಾಮ್ನರೇಶನ ತಂದೆಯ ಸ್ನೇಹಿತ ಲಾರಿ ಓಡಿಸಿಕೊಂಡು ಬಂದ. ಇವರನ್ನು ಕಂಡವನೇ- `ಊರಿಗೆ ಬಿಡ್ತೀನಿ. ಹತ್ಕೊಳ್ಳಿ’ ಅಂದ. ವಯೋಸಹಜ ಕುತೂಹಲ ನೋಡಿ, ಈ ರಾಮ್ನರೇಶ್-ಡ್ರೈವರ್ನ ಪಕ್ಕದಲ್ಲೇ ಕೂತು ಏನೇನೋ ಮಾತಾಡುತ್ತಲೇ ಇದ್ದ.
ಹೀಗೆ ಸಾಗುತ್ತಿದ್ದಾಗಲೇ ಅನಾಹುತ ನಡೆದೇ ಹೋಯಿತು. ಹೇಳಿ ಕೇಳಿ ಅದು ಕಬ್ಬಿಣದ ಉತ್ಪನ್ನಗಳನ್ನೂ ಸಾಗಿಸುತ್ತಿದ್ದ ಹಳೆಯ ಲಾರಿ. ಅದರ ನಟ್ಟು-ಬೋಲ್ಟುಗಳೆಲ್ಲಾ ಸಡಿಲಾಗಿದ್ದವು. ಇದೇನೂ ಗೊತ್ತಿಲ್ಲದ ರಾಮ್ನರೇಶ್, ಡ್ರೈವರ್ನ ಬಲಭಾಗದಲ್ಲಿದ್ದ ಒಂದಿಷ್ಟು ಜಾಗದಲ್ಲೇ ಕುಕ್ಕರುಗಾಲಿನಲ್ಲಿ ಕುಳಿತಿದ್ದ. ವೇಗವಾಗಿ ಹೋಗುತ್ತಿದ್ದ ಲಾರಿ ಅದೊಮ್ಮೆ ದಿಢೀರನೆ ಜೆರ್ಕ್ ಪಡೆದುಕೊಂಡಾಗ ಡ್ರೈವರ್ ಕ್ಯಾಬಿನ್ನ ಬಾಗಿಲು ಇದ್ದಕ್ಕಿದ್ದಂತೆಯೇ ತೆರೆದುಕೊಂಡಿತು. ಈ ರಾಮ್ನರೇಶ್ ರಸ್ತೆಗೆ ಬಿದ್ದ. ಹಿಂದೆಯೇ ಲಾರಿಯಲ್ಲಿದ್ದ ಒಂದೆರಡು ಕಬ್ಬಿಣದ ತುಂಡುಗಳೂ ಅವನ ಕಾಲಿನ ಮೇಲೆ ಬಿದ್ದವು. ಅಪಘಾತ ನಡೆದ ಜಾಗದಲ್ಲೇ ಒಂದೇ ನರ್ಸಿಂಗ್ ಹೋಂ ಇತ್ತು. ಲಾರಿಯಲ್ಲಿದ್ದ ಜನರೆಲ್ಲ ಈ ಹುಡುನನ್ನು ಅಲ್ಲಿಗೆ ಕೊಂಡೊಯ್ದರೆ, ಅಲ್ಲಿನ ವೈದ್ಯರು- `ಇದು ಆಕ್ಸಿಡೆಂಟ್ ಕೇಸು ತಾನೆ? ಸೀದಾ ಸರಕಾರಿ ಆಸ್ಪತ್ರೆಗೆ ತಗೊಂಡು ಹೋಗಿ. ಯಾಕಂದ್ರೆ ಇದೆಲ್ಲಾ ಕೇಸ್ ಆಗುತ್ತೆ. ಆಮೇಲೆ ಯಾವನಿಗ್ರೀ ಬೇಕು ತಲೆನೋವು?’ ಅಂದವರೇ, ಕನಿಷ್ಠ ಪ್ರಥಮ ಚಿಕಿತ್ಸೆ ಕೊಡುವುದಕ್ಕೂ ನಿರಾಕರಿಸಿದರು.
ಈ ವೇಳೆಗೆ ರಾಮ್ನರೇಶ್ನ ತಂದೆಯೂ ಅಲ್ಲಿಗೆ ಬಂದ. ಮಗನ ಸ್ಥಿತಿ ಕಂಡು ಅವನಿಗೆ ಗಂಟಲುಬ್ಬಿ ಬಂತು ನಿಜ. ಆದರೆ ಎಲ್ಲರ ಮುಂದೆ ತಾನೇ ಅತ್ತರೆ ಇದ್ದದ್ದೂ ಆತಂಕ ಶುರುವಾದೀತು ಅಂದುಕೊಂಡು `ದೇವ್ರಿದಾನೆ ಬಿಡಪ್ಪಾ…’ ಎಂದು ಮೌನವಾದ. ನಂತರ ರಾಮ್ನರೇಶನ ಊರಿಗೆ ಹತ್ತಿರವೇ ಇದ್ದ ಸರಕಾರಿ ಆಸ್ಪತ್ರೆಯ ವೈದ್ಯರು ಕಾಲಿಗೆ ಬ್ಯಾಂಡೇಜ್ ಸುತ್ತಿ `ಏನೂ ಆಗಿಲ್ಲ ಹೋಗ್ರಿ. ಒಂದು ವಾರದೊಳಗೆ ಎಲ್ಲಾ ಸರಿಯಾಗುತ್ತೆ’ ಎಂದು ಉಡಾಫೆಯ ಮಾತಾಡಿದರು.
ಹಾಂ, ಹೂಂ ಅನ್ನುವುದರೊಳಗೆ ವಾರ ಕಳೆದೇ ಹೋಯಿತು. ಉಹುಂ, ಗಾಯ ವಾಸಿಯಾಗಲಿಲ್ಲ. ಮಾಗಲಿಲ್ಲ. ಬದಲಿಗೆ ಕೀವು ತುಂಬಿಕೊಂಡಿತು. ಮನೆ ತುಂಬಾ ದುರ್ವಾಸನೆ. ಇದರಿಂದ ಗಾಬರಿಬಿದ್ದ ರಾಮ್ನರೇಶನ ತಂದೆ-ತಾಯಿ, ಮಗನನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯುವ ವೇಳೆಗಾಗಲೇ ತುಂಬ ತಡವಾಗಿತ್ತು. ಅವನನ್ನು ಪರೀಕ್ಷಿಸಿದ ವೈದ್ಯರು- `ಈಗಾಗಲೇ ಗ್ಯಾಂಗ್ರಿನ್ ತೊಡೆಯತನಕ ವ್ಯಾಪಿಸಿದೆ. ಇಷ್ಟು ದಿನ ಕತ್ತೆ ಮೇಯಿಸ್ತಾ ಇದ್ರೇನ್ರೀ’ ಎಂದು ರೇಗಿದರು. ನಂತರ-ನಿಮ್ಮ ಮಗನ ಜೀವ ಉಳಿಯಬೇಕು ಅನ್ನೋದಾದ್ರೆ `ತೊಡೆಯ ತನಕ ಎರಡೂ ಕಾಲುಗಳನ್ನು ಕತ್ತರಿಸಬೇಕು. ಅದು ಬಿಟ್ರೆ ಬೇರೆ ದಾರಿಯೇ ಇಲ್ಲ’ ಅಂದರು. ಈ ಸುದ್ದಿ ಕೇಳಿದ ನಂತರ ರಾಮ್ನರೇಶ್ನ ಅಪ್ಪ ಗೋಡೆಗೆ ಹಣೆಪಟ್ಟಿ ಕೊಂಡು ಗೋಳಾಡಿದನಂತೆ. ನಂತರ ಮನಸ್ಸು ಗಟ್ಟಿ ಮಾಡಿಕೊಂಡು `ನನ್ನ ಮಗನ ಜೀವ ಉಳಿಸಿ ಡಾಕ್ಟ್ರೇ, ಕಾಲು ಇಲ್ಲದಿದ್ರೆ ಪರವಾಗಿಲ್ಲ. ಅವನನ್ನ ನಾನು ನೋಡ್ಕೋತೀನಿ’ ಅಂದನಂತೆ.
ಮುಂದೆ, ರಾಮ್ನರೇಶ್ಗೆ ಪ್ರಜ್ಞೆ ಬಂದದ್ದು ನಾಲ್ಕು ದಿನಗಳ ನಂತರ. ಕಣ್ಣು ಬಿಟ್ಟರೆ ವಿಪರೀತ ನೋವು. ಅರೆ, ಏನಾಯ್ತು ನನಗೆ ಅಂದುಕೊಂಡು ಸುಮ್ಮನೇ ಕಾಲು ಜಾಡಿಸಲು ನೋಡಿದರೆ, ಅರೆ-ಕಾಲುಗಳೇ ಇಲ್ಲ! ತಕ್ಷಣವೇ ಶಾಕ್ಗೆ ಒಳಗಾದ ರಾಮ್ನರೇಶ್- `ಅಪ್ಪಾ, ಅಮ್ಮಾ, ನನ್ನ ಕಾಲು ಎಲ್ಲಿ? ಏನಾಗಿದೆ ನಂಗೆ?’ ಅಂದನಂತೆ. ತಕ್ಷಣವೇ ಅವನ ತಾಯಿ ಗೋಳೋ ಎನ್ನಲು ಶುರು ಮಾಡಿದರೆ- ರಾಮ್ನರೇಶ್ನ ತಂದೆ ಮಾತ್ರ- `ಜೀವನದ ಜತೆ ಇವತ್ತಿಂದ ನೀನು ಕ್ಷಣ ಕ್ಷಣವೂ ಕುಸ್ತಿ ಮಾಡಬೇಕು ಮಗನೇ. ದೇವ್ರಿದಾನೆ ಬಿಡಪ್ಪಾ, ಹೆದರಬೇಡ’ ಎಂದನಂತೆ.
***
ಹೀಗೆ, ಅಂಗವೈಕಲ್ಯದೊಂದಿಗೆ ಹೋರಾಟ ಶುರು ಮಾಡಿದಾಗ ರಾಮ್ನರೇಶ್ ಇನ್ನೂ ಎಂಟನೇ ತರಗತಿಯ ವಿದ್ಯಾರ್ಥಿ. ಅವನನ್ನು ವ್ಹೀಲ್ ಚೇರ್ನಲ್ಲಿ ಕೂರಿಸಿಕೊಂಡು ಸ್ಕೂಲಿಗೆ ಕರೆದೊಯ್ಯುವುದೇ ಕಷ್ಟವಾಗುತ್ತದೆ ಅನ್ನಿಸಿದಾಗ, ಸ್ಕೂಲ್ನಿಂದ ನಾಲ್ಕೇ ಹೆಜ್ಜೆ ದೂರದಲ್ಲಿ ಬಾಡಿಗೆಗೆ ಮನೆ ಹಿಡಿದರಂತೆ ರಾಮ್ ನರೇಶ್ನ ತಂದೆ. ನಂತರ, ಶಾಲೆಯಲ್ಲಿ ಅಕಸ್ಮಾತ್ ದಿಢೀರನೆ ಶೌಚಾಲಯಕ್ಕೆ ಹೋಗಬೇಕು ಅನ್ನಿಸಿದರೆ; ಹಾಗೆ ಒಂದೇ ಕಡೆ ಕೂತು ಬೇಸರವಾಗಿ ಸುಮ್ಮನೇ ಒಮ್ಮೆ ಮಿಸುಕಾಡಿ ಮೈ ಹಗುರ ಮಾಡಿಕೊಳ್ಳಬೇಕೆಂದರೆ ಯಾರಾದರೂ ಮಗನ ಜತೆಗಿರಬೇಕು ಅನ್ನಿಸಿದಾಗ- ರಾಮ್ನರೇಶನಿಗಿಂತ ಎರಡು ತರಗತಿ ಮುಂದಿದ್ದ ತಮ್ಮ ಮಗಳನ್ನೇ ಕರೆದು- ನಿನ್ನ ತಮ್ಮನ ಜೀವ ಉಳಿಸಲಿಕ್ಕಾಗಿ, ಅವನ ತರಗತಿಯಲ್ಲೇ ಓದು ಮಗಳೇ. ಅಂದರೆ, ಇವತ್ತಿಂದ ಮತ್ತೆ ನೀನು ಎಂಟನೇ ತರಗತೀಲಿ ಓದಬೇಕು ಅಂದರಂತೆ. ಆಕೆ ಅದೆಂಥ ತಾಯ್ತನದ ಹೆಣ್ಣು ಮಗಳು ಅಂದರೆ- ಎರಡನೇ ಮಾತೇ ಇಲ್ಲದೆ, ಅಪ್ಪನ ಮಾತಿಗೆ ಒಪ್ಪಿಕೊಂಡಳು. ತಮ್ಮನನ್ನು ಅಮ್ಮನಿಗಿಂತ ಹೆಚ್ಚಾಗಿ, ದೇವರಿಗಿಂತ ಮಿಗಿಲಾಗಿ ನೋಡಿಕೊಂಡಳು. ಮನೆ ಮಂದಿ ತನಗಾಗಿ ಪಡುತ್ತಿರುವ ಕಷ್ಟವನ್ನು ರಾಮ್ನರೇಶ್ ಕೂಡ ಅರ್ಥಮಾಡಿಕೊಂಡ. `ನನಗೆ ಕಾಲಿಲ್ಲ’ ಎಂದು ಆತ ಕನಸಲ್ಲೂ ಯೋಚಿಸಲಿಲ್ಲ. ಬದಲಿಗೆ, ಅಪ್ಪ ಪದೇ ಪದೆ ಹೇಳುತ್ತಿದ್ದ- `ದೇವ್ರಿದಾನೆ ಬಿಡಪ್ಪಾ’ ಎಂಬ ಮಾತನ್ನೇ ಮೇಲಿಂದ ಮೇಲೆ ಹೇಳಿಕೊಂಡು ಶ್ರದ್ಧೆಯಿಂದ ಓದಿದ.
ಪರಿಣಾಮ, ಎಸ್ಸೆಸ್ಸೆಲ್ಸಿಯಲ್ಲಿ ತಾಲೂಕಿಗೇ ಮೊದಲಿಗನಾಗಿ ಪಾಸಾದ. ಕಾಲುಗಳಿಲ್ಲದ ಈ ಹುಡುಗನ ಸಾಧನೆ ಹಲವರ ಕಣ್ತೆರೆಸಿತು. ಪತ್ರಿಕೆಗಳಲ್ಲಿ ದೊಡ್ಡ ಸುದ್ದಿಯಾಯಿತು. ಆ ವೇಳೆಗೆ ತ್ರಿಚಕ್ರವಾಹನದಲ್ಲಿ ಅಡ್ಡಾಡುವ ಮಟ್ಟಿಗೆ ರಾಮ್ ನರೇಶ್ ಸುಧಾರಿಸಿಕೊಂಡಿದ್ದ. ಗಣಿತದ ಸಮಸ್ಯೆ ಬಿಡಿಸುವಲ್ಲಿ ಚಾಣಾಕ್ಷ ಅನ್ನಿಸಿಕೊಂಡಿದ್ದ. ಈ ಹುಡುಗನ ಪ್ರತಿಭೆ ಕಂಡ ಭಾಸ್ಕರಲಾಲ್ ಎಂಬ ಅಧ್ಯಾಪಕರು, ಇವನಿಗೆ ಸ್ಕಾಲರ್ಶಿಪ್ನ ವ್ಯವಸ್ಥೆ ಮಾಡಿದರು. ಮುಂದೆ, ಗೌತಮ್ ಜೂನಿಯರ್ ಕಾಲೇಜು ಎಂಬಲ್ಲಿ ಒಂದಿಷ್ಟು ಟಿಪ್ಸ್ ಪಡೆದುಕೊಂಡ ರಾಮ್ನರೇಶ್, ಚೆನ್ನೈನ ಪ್ರತಿಷ್ಠಿತ ಐಐಟಿ ಕಾಲೇಜಿನಲ್ಲಿ ಕಂಪ್ಯೂಟರ್ ಎಂಜಿನಿಯರಿಂಗ್ ಓದಲು ಬಂದ.
ಒಂದು ಸಂತೋಷವೆಂದರೆ- ಬದುಕಿನುದ್ದಕ್ಕೂ ಯಾರೆಂದರೆ ಯಾರೂ ಇವನ್ನು ಕೀಳರಿಮೆಯಿಂದ ನೋಡಲಿಲ್ಲ ಅಥವಾ ಹಾಗೆ ನೋಡಲು ಇವನು ಯಾರಿಗೂ ಅವಕಾಶವನ್ನೇ ಕೊಡಲಿಲ್ಲ. ಚೆನ್ನೈನ ಐಐಟಿಯಲ್ಲಂತೂ ಈ ಹುಡುಗನನ್ನು ಇಡೀ ಕಾಲೇಜಿನ ಸಿಬ್ಬಂದಿ `ಮಗುವಿನ ಥರಾ’ ನೋಡಿಕೊಂಡಿತು. ಕಾಲೇಜಿಗೆ ತ್ರಿಚಕ್ರ ವಾಹನದಲ್ಲಿ ಬಂದು, ನಂತರ ಗೆಳೆಯರ ನೆರವಿನಿಂದ, ವ್ಹೀಲ್ಚೇರ್ನಲ್ಲಿ ಮಹಡಿಯಲ್ಲಿದ್ದ ತರಗತಿಗಳಿಗೆ ಹೋಗಬೇಕಿತ್ತು. ಇದನ್ನು ಗಮನಿಸಿದ ಕಾಲೇಜಿನ ಆಡಳಿತ ಮಂಡಳಿ, ರಾಮ್ನರೇಶ್ಗೆ ಅನುಕೂಲವಾಗಲಿ ಎಂಬ ಒಂದೇ ಕಾರಣದಿಂದ ಕಾಲೇಜಿಗೆ ಲಿಫ್ಟ್ ಹಾಕಿಸಿತು. ಅಷ್ಟೇ ಅಲ್ಲ, ಅವನನ್ನು ತರಗತಿಗೆ ಹುಷಾರಾಗಿ ಬಿಟ್ಟು ಬರುವಂತೆ ; ತರಗತಿಯ ನಂತರ ಮರಳಿ ಕರೆದೊಯ್ಯುವಂತೆ ಲಿಫ್ಟ್ ಆಪರೇಟರ್ಗೆ ಆದೇಶ ನೀಡಿತು. ಅಷ್ಟೇ ಅಲ್ಲ, ಈ ಹುಡುಗನ ಒಂದೊಂದು ಚಿಕ್ಕ ಗೆಲುವನ್ನೂ ಕಾಲೇಜಿನಲ್ಲಿ ದೊಡ್ಡ ಹಬ್ಬದಂತೆ ಆಚರಿಸಲಾಯಿತು.
ಆಮೇಲೆ, ಪ್ರತಿಭಾವಂತರಿಗೆ ಮೀಸಲಾದ ಎಲ್ಲ ಸ್ಕಾಲರ್ಶಿಪ್ಗಳೂ ಈ ರಾಮ್ನರೇಶನನ್ನೂ ಹುಡುಕಿಕೊಂಡು ಬಂದವು. ಎಲ್ಲಕ್ಕೂ ಮಿಗಿಲಾಗಿ- ಕಾರ್ತಿಕ್ ಎಂಬ ಐಐಟಿಯ ಮೊದಲ ರ್ಯಾಂಕ್ ವಿದ್ಯಾರ್ಥಿ, ರಾಮ್ನರೇಶನೊಂದಿಗೆ ಹಾಸ್ಟೆಲ್ನ ರೂಂ ಹಂಚಿಕೊಳ್ಳಲು ನಿರ್ಧರಿಸಿದ. ನಮಗೆ ಶೌಚಾಲಯವೂ ಜತೆಗಿರುವಂಥ ರೂಂ ಕೊಡಿ ಎಂದು ಹಾಸ್ಟೆಲ್ ವಾರ್ಡನ್ಗೆ ಒತ್ತಾಯಿಸಿ, ಅದರಲ್ಲಿ ಯಶಸ್ವಿಯಾದ. ಒಂದೇ ಮಾತಲ್ಲಿ ಹೇಳುವುದಾದರೆ – ಚೂರೂ ಸಂಕೋಚ ಪಡದೆ ಈ ರಾಮ್ನರೇಶನ ಸ್ನಾನ, ಶೌಚದ ವ್ಯವಸ್ಥೆಯನ್ನೆಲ್ಲ ಕಾರ್ತಿಕ್ ನೋಡಿಕೊಂಡ. ಇದಕ್ಕೆಲ್ಲ ಹೇಗೆ ಕೃತಜ್ಞತೆ ಹೇಳುವುದೋ ಅರ್ಥವಾಗದೆ ಈ ವಿಕಲಾಂಗ ಹುಡುಗ ಕಣ್ತುಂಬಿಕೊಂಡರೆ- `ದೇವ್ರಿದಾನೆ ಬಿಡಪ್ಪಾ’ ಎಂದು ಇವನದೇ ಡೈಲಾಗ್ ಹೊಡೆದು ನಗಿಸುತ್ತಿದ್ದ.
ಮುಂದೆ ಐಐಟಿ ಕಾಲೇಜಿನಲ್ಲಿ ಅತಿ ಹೆಚ್ಚು ಅಂಕ ಪಡೆದು ಪದವಿ ಪಡೆದ ದಿನ, ರಾಮ್ನರೇಶ್ಗೆ ಬೀಳ್ಕೊಡುಗೆ ನೀಡಲೆಂದೇ ಒಂದು ವಿಶೇಷ ಸಮಾರಂಭ ನಡೆಸಲಾಯಿತು. ಅವತ್ತಿನವರೆಗೂ ಒಮ್ಮೆಯೂ ಕಣ್ಣೀರು ಹಾಕದಿದ್ದ ರಾಮ್ನರೇಶ್ ಅವತ್ತು ಮಾತ್ರ ಹಸು ಕಂದನಂತೆ ಬಿಕ್ಕಳಿಸಿ ಅಳುತ್ತಾ ಹೇಳಿದನಂತೆ: `ನಿಮ್ಮೆಲ್ಲರ ಕಂಗಳಲ್ಲಿ, ನಡವಳಿಕೆಯಲ್ಲಿ, ಪ್ರೀತಿಯಲ್ಲಿ, ಮೆಚ್ಚುಗೆಯಲ್ಲಿ, ತಮಾಷೆಯಲ್ಲಿ, ಪಿಸು ಮಾತಿನಲ್ಲಿ, ನನ್ನ ರೂಂಮೇಟ್ ಕಾರ್ತಿಕ್ನ ಒಂದು ಬೆಚ್ಚನೆಯ ಸ್ಪರ್ಶದಲ್ಲಿ ನನಗೆ ದೇವರು ಕಾಣಿಸಿದ್ದಾನೆ. ನಿಮ್ಮೆಲ್ಲರ ಪ್ರೀತಿಗೆ ಋಣಿ. ನಾನು ವಿಕಲಾಂಗ ಅಂತ ಗೊತ್ತಾದ ಮೇಲೆ ನನಗೆ ಒಂದು ಚೆಂದದ ವ್ಹೀಲ್ ಛೇರ್ ಮತ್ತು ತ್ರಿಚಕ್ರ ವಾಹನ ಕೊಟ್ರಲ್ಲ, ಆ ದಾನಿಗಳಿಗೂ ಋಣಿ….’
***
ಪ್ರಿಯರೆ, ಈ ರಾಮ್ನರೇಶ್ ಈಗ ನಮ್ಮೊಂದಿಗೇ, ಈ ಬೆಂಗಳೂರಿನಲ್ಲೇ ಇದ್ದಾನೆ! ಗೂಗಲ್ ವೆಬ್ಸೈಟ್ ಕಂಪನಿಯಲ್ಲಿ ಅವನು ದೊಡ್ಡ ಸಂಬಳದ, ಕಂಪ್ಯೂಟರ್ ಎಂಜಿನಿಯರ್! ಅವನದು ಅದೆಂಥ ಪ್ರಚಂಡ ಆತ್ಮವಿಶ್ವಾಸ ಅಂದರೆ- ಈಗಲೂ `ದೇವ್ರಿದಾನೆ ಬಿಡಪ್ಪಾ’ ಎಂದು ಹೇಳಿಕೊಂಡೇ ಈ ಬೆಂಗಳೂರಿನ ರಸ್ತೆಯಲ್ಲಿ ರೊಯ್ಯನೆ ತನ್ನ ಟ್ರೈಸೈಕಲ್ ಓಡಿಸುತ್ತಾನೆ. ಅಪ್ಪನ ಧೈರ್ಯ, ಅಮ್ಮನ ಪ್ರೀತಿ, ಅಕ್ಕನ ತ್ಯಾಗ, ಗೆಳೆಯರ-ಅಧ್ಯಾಪಕರ ಒಲುಮೆಯೇ ಈವರೆಗೂ ನನ್ನ ಕೈ ಹಿಡಿದು ನಡೆಸಿದೆ ಎನ್ನುತ್ತಾನೆ. ಛೆ, ನನಗೆ ಕಾಲುಗಳಿಲ್ಲ ಎಂಬ ಕೀಳರಿಮೆ ನನ್ನನ್ನು ಯಾವತ್ತೂ ಕಾಡಿಲ್ಲ ಎಂದು ಸಡಗರದಿಂದಲೇ ಹೇಳುತ್ತಾನೆ.
ಎರಡೂ ಕಾಲಿಲ್ಲದ ಆ ರಾಮ್ನರೇಶ್ನ ಸಾಧನೆಯ ಮುಂದೆ, ಎಲ್ಲವೂ `ಸರಿಯಿರುವ’ ನಾವೆಲ್ಲ ವೇಸ್ಟ್ ಬಾಡಿಗಳು ಅನಿಸಲ್ವ?

Advertisements

5 Comments »

 1. 1
  naveen Says:

  Devre idanna odi nijaku naavella yeshtondu somarigalu annisibidtu….ramnaresh nijaku grettttttttttttttt and isht chandavaagi bardiddira nimge 100001 thanks dear manikanth….

 2. 2
  usharani Says:

  ನಿಜಕ್ಕೂ ರಾಮ್ನರೇಶ್ ಎಲ್ಲರಿಗೂ ಆದರ್ಶಪ್ರಾಯವಾದ ಹುಡುಗ, ಪ್ರತಿಯೊಬ್ಬರಲ್ಲೂ ಇಂತಹದೇ ಹಠ,ಛಲ ಇದ್ದರೂ ಎಲ್ಲರೂ ಸಾಧನೆಯ ಹಾದಿಯಲ್ಲಿ ಮುಂದೆ ಬರಬಹುದು. ಇವನ ಮುಂದೆ ನಾವೆಲ್ಲರೂ ನಿಜಕ್ಕೂ ವೇಸ್ಟ್ ಬಾಡಿಗಳು.

 3. 3
  Tina Says:

  ಮಣಿಕಾಂತ್,
  ಈ ಬರಹಕ್ಕಾಗಿ ಧನ್ಯವಾದ.
  You don’t know what this writeup means for me.
  ಬಹಳ ನೆರವಾಗಿದ್ದಾರೆ ನಿಮ್ಮ ಗೆಳೆಯ ರಾಮ್ ನರೇಶ್. ಪರೋಕ್ಷವಾಗಿ.
  ಅವರಿಗೊಂದು ದೊಡ್ಡ ಥ್ಯಾಂಕ್ಯೂ ಹೇಳುತ್ತೀರ? ಪ್ಲೀಸ್!!
  -ಟೀನಾ

 4. 4

  ಪ್ರೀತಿಯ ಮಣಿ,

  ತುಂಬಾ ಚೆನ್ನಾಗಿದೆ ಬ್ಲಾಗ್ . ನಿಮ್ಮ ಬರಹಗಳನ್ನು ನಾನು ತಪ್ಪದೇ ವಿಜಯ ಕರ್ನಾಟಕದಲ್ಲಿ ನೋಡ್ತಿರ್ತೀನಿ.
  ಹೀಗೆ ಜೀವನ್ಮುಖಿಯಾಗಿರೋ ಬರಹಗಳನ್ನು ಪ್ರಕಟಿಸ್ತಾ ಇರಿ.

  ವಿಜಯ ಕರ್ನಾಟಕ ಬಳಗಕ್ಕೂ ಅಭಿನಂದನೆಗಳು.

  ಪ್ರೀತಿಯಿಂದ ,
  ಸಂದೀಪ್ ಕಾಮತ್


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: