ಗಗನವು ಎಲ್ಲೊ ಭೂಮಿಯು ಎಲ್ಲೊ…..

null

ಚಿತ್ರ: ಗೆಜ್ಜೆಪೂಜೆ, ಸಂಗೀತ: ವಿಜಯಭಾಸ್ಕರ್
ಗೀತೆರಚನೆ: ಆರ್.ಎನ್. ಜಯಗೋಪಾಲ್, ಗಾಯನ: ಎಸ್. ಜಾನಕಿ

ಗಗನವು ಎಲ್ಲೊ ಭೂಮಿಯು ಎಲ್ಲೊ
ಒಂದೂ ಅರಿಯೇ ನಾ
ಎನಗೆ ನೀ ನೀಡಿದ ವಚನವ ಕೇಳಿ
ತೇಲಿ ತೇಲಿ ಹೋದೆ ನಾ // ಪ//

ನೂತನ ಜಗದಾ ಬಾಗಿಲು ತೆರೆಯಿತು
ಮನವನು ಕವಿದಾ ತೆರೆಯೂ ಸರಿಯಿತು
ಕಂಗಳು ಒಲವಿನ ಕಥೆಯೂ ಬರೆಯಿತು
ಕಾಲ್ಗಳು ಹರುಷದಿ ಕುಣಿಕುಣಿದಾಡಿತು //೧//

ಪ್ರೇಮವಸಂತದ ರಾಗವು ಮಿಡಿಯಿತು
ಆಶಾಗಾನದ ಪಲ್ಲವಿ ಹಾಡಿತು
ನವಜೀವನದ ಜ್ಯೋತಿಯು ಬೆಳಗಿತು
ಉಲ್ಲಾಸದಿ ಮನ ನಲಿನಲಿದಾಡಿತು //೨//

ಗಂಧರ್ವಗೀತೆ ಎಂದಾಕ್ಷಣ ನೆನಪಾಗುವುದು `ಗಗನವು ಎಲ್ಲೊ ಭೂಮಿಯು ಎಲ್ಲೊ ಒಂದೂ ಅರಿಯೆ ನಾ…’ ಗೀತೆ. ಗಾಯಕಿಯರಿಗೆ ಒಂದು ಸವಾಲಾಗಿ, ಕೇಳುವವರಿಗೆ ಒಂದು ಮಾಧುರ್ಯವಾಗಿ ಉಳಿದುಹೋಗಿರುವ ಈ ಹಾಡು, ಅಪರಾತ್ರಿಯಲ್ಲಿ ಆಕಸ್ಮಿಕವಾಗಿ ಹುಟ್ಟಿಕೊಂಡದ್ದು! ಅಂದರೆ….

ಪುಟ್ಟಣ್ಣ ಕಣಗಾಲ್ ನಿರ್ದೇಶನದ `ಗೆಜ್ಜೆಪೂಜೆ’ಯ ಆ ಸನ್ನಿವೇಶವನ್ನು ಮತ್ತೊಮ್ಮೆ ನೆನಪು ಮಾಡಿಕೊಳ್ಳಿ. ವೇಶ್ಯೆಯ ಮಗಳಾಗಿದ್ದ ನಾಯಕಿಯನ್ನು ಎದುರು ಮನೆಯ ವಿದ್ಯಾವಂತ ತರುಣನೊಬ್ಬ ಮನಸಾರೆ ಪ್ರೀತಿಸುತ್ತಾನೆ. ಮದುವೆಯಾಗುತ್ತೇನೆಂದು ಭಾಷೆ ಕೊಡುತ್ತಾನೆ. ಅವನ ಮಾತು, ಭರವಸೆ-ಹುಡುಗಿಯ ಮನಸ್ಸು ನವಿಲಾಗುವಂತೆ ಮಾಡುತ್ತದೆ. ಆ ಸಂದರ್ಭದಲ್ಲಿ ಆಕೆಯ ಮನಸ್ಥಿತಿ ಹೇಗಿತ್ತು ಎಂಬುದನ್ನು ಮಾತಲ್ಲಿ ವಿವರಿಸಲು-ಉಹುಂ, ಸಾಧ್ಯವೇ ಇಲ್ಲ. ಆದರೆ, ಇಡೀ ಸನ್ನಿವೇಶದ ಚಿತ್ರಣ ಒಂದೇ ಒಂದು ಹಾಡಿನಲ್ಲಿ ದಕ್ಕಿ ಹೋಗುತ್ತದೆ. ಆ ಕ್ಷಣಕ್ಕೆ ನಾಯಕಿಯ ಅಂತರಂಗವೇ ತಾನೆಂಬಂತೆ ಎಸ್. ಜಾನಕಿ ಭಾವಪರವಶರಾಗಿ, ತನ್ಮಯತೆಯಿಂದ ಹಾಡುತ್ತಾರೆ; `ಗಗನವು ಎಲ್ಲೋ ಭೂಮಿಯು ಎಲ್ಲೊ/ಒಂದೂ ಅರಿಯೇ ನಾ/ ಎನಗೆ ನೀ ನೀಡಿದ ವಚನವ ಕೇಳಿ/ ತೇಲಿ ತೇಲಿ ಹೋದೆ ನಾ….’
ಈ ಹಾಡನ್ನು ನೆನಪಿಸಿಕೊಂಡಾಗಲೆಲ್ಲ `ಗೆಜ್ಜೆಪೂಜೆ’ ಚಿತ್ರದಲ್ಲಿ ನಟಿ ಕಲ್ಪನಾ ಹರ್ಷದಿಂದ ಹುಚ್ಚೆದ್ದು ಕುಣಿವ ದೃಶ್ಯ ಕಣ್ಮುಂದೆ ಬಂದು ನಿಲ್ಲುತ್ತದೆ. `ಗಗನವು ಎಲ್ಲೊ ಭೂಮಿಯು ಎಲ್ಲೋ `ಒಂದೂ ಅರಿಯೇ ನಾ’ ಎಂಬ ಸಾಲೇ ಒಂದು ಸಂಭ್ರಮದ ಸ್ಥಿತಿಯನ್ನು ತಿಳಿಸುತ್ತದೆ. ಅದು ಜಗವ ಗೆದ್ದ ಸಂತೋಷ. ಅಸಾಧ್ಯವಾದುದನ್ನು ಸಾಧಿಸಿದಾಗ ಆಗುವ ಖುಷಿ. ಗೌರಿಶಂಕರದ ತುದಿಯಲ್ಲಿ ನಿಂತಾಗ ಆಗುವ `ಅನುಭಾವ’ದ ಆನಂದ. ಈ ಹಾಡಿನಲ್ಲಿ ಪುಟ್ಟಣ್ಣ ಕಣಗಾಲರ ಜಾಣ್ಮೆ, ಎಸ್. ಜಾನಕಿಯವರ ಸಿರಿಕಂಠ, ನಟಿ ಕಲ್ಪನಾ ಅವರ ಅದ್ಭುತ ನಟನೆ, ವಿಜಯ ಭಾಸ್ಕರ್ ಸಂಗೀತದ ಇಂಪು, ಗೀತರಚನೆಕಾರ ಆರ್.ಎನ್. ಜಯಗೋಪಾಲರ ಪ್ರತಿಭೆಯ ಕಂಪು ಇಷ್ಟಿಷ್ಟಿಷ್ಟಿಷ್ಟೇ ಹದವಾಗಿ ಸೇರಿಕೊಂಡಿದೆ. ಪರಿಣಾಮವಾಗಿಯೇ ಚಿತ್ರ ತೆರೆಕಂಡ ಮೂವತ್ತೆಂಟು ವರ್ಷಗಳ ನಂತರ ಕೂಡ `ಗಗನವು ಎಲ್ಲೋ….’ ಹಾಡು ಜನಪ್ರಿಯತೆಯಲ್ಲಿ ನಂಬರ್ ಒನ್ ಆಗಿಯೇ ಉಳಿದುಕೊಂಡಿದೆ.
ಎಲ್ಲ ಸರಿ, ಈ ಅಮರಾ ಮಧುರಾ ಗೀತೆ `ಗೆಜ್ಜೆಪೂಜೆ’ ಚಿತ್ರದ ಚಿತ್ರೀಕರಣವೆಲ್ಲ ಮುಗಿದುಹೋದ ಮೇಲೆ ಬರೆದದ್ದು ಎಂದರೆ;-`ಗೆಜ್ಜೆಪೂಜೆ’ಸಿನಿಮಾ ವಿಷಯವಾಗಿ ಮಾಡಿಕೊಂಡಿದ್ದ ಲೆಕ್ಕಾಚಾರದ ಪ್ರಕಾರ ಕಲ್ಪನಾ,ಆ ಹಾಡು ಹೇಳಿಕೊಂಡು ಕುಣಿಯುವ ದೃಶ್ಯದ ಪ್ರಸ್ತಾಪವೇ ಇರಲಿಲ್ಲ ಎಂದರೆ; ಆ ಸನ್ನಿವೇಶವನ್ನು ಕೇವಲ ಡೈಲಾಗ್ಗಳಲ್ಲಿಯೇ ತುಂಬಿಸಲಾಗಿತ್ತು ಎಂದರೆ ನಂಬುತ್ತೀರಾ?
ನಂಬಲೇಬೇಕು. ಏಕೆಂದರೆ ಅದು ನಿಜ.
ಸತ್ಯ ಏನೆಂದರೆ, `ಗೆಜ್ಜೆಪೂಜೆ’ಗೆ ಚಿ. ಉದಯಶಂಕರ್, ವಿಜಯನಾರಸಿಂಹ ಹಾಗೂ ಆರ್.ಎನ್. ಜಯಗೋಪಾಲ್ರಿಂದ ಹಾಡು ಬರೆಸಿದ್ದರು ಪುಟ್ಟಣ್ಣ. ಹೀಗೆ ಬರೆಯಲಾಗಿದ್ದ ಹಾಡುಗಳ ಪಟ್ಟಿಯಲ್ಲಿ `ಗಗನವು ಎಲ್ಲೋ ಭೂಮಿಯು ಎಲ್ಲೋ….’ ಇರಲೇ ಇಲ್ಲ. ಎದುರು ಮನೆಯಲ್ಲಿದ್ದ ವಿದ್ಯಾವಂತ ತರುಣ ಪ್ರೀತಿಸುವುದಾಗಿ, ಮದುವೆಯಾಗುವುದಾಗಿ ನಾಯಕಿಗೆ ಹೇಳುವ ಸನ್ನಿವೇಶಕ್ಕೆ `ಆಪ್ತ’ ಅನ್ನಿಸುವಂಥ ಡೈಲಾಗ್ ಬರೆದು ಚಿತ್ರೀಕರಣ ಮುಗಿಸಲಾಗಿತ್ತು. ಆದಷ್ಟು ಬೇಗ ಡಬ್ಬಿಂಗ್ ಹಾಗೂ ಎಡಿಟಿಂಗ್ ಕೆಲಸ ಮುಗಿಸಿ ತರಾತುರಿಯಲ್ಲಿ ಸಿನಿಮಾ ಬಿಡುಗಡೆ ಮಾಡುವ ಲೆಕ್ಕಾಚಾರದಲ್ಲಿ ನಟ, ನಿರ್ಮಾಪಕ ಶಿವರಾಂ ಅವರಿದ್ದರು.
ಹೀಗಿದ್ದಾಗಲೇ ಅದೊಂದು ರಾತ್ರಿ ಚೆನ್ನೈ (ಆಗಿನ ಮದ್ರಾಸ್)ನ ಬೆಸೆಂಟ್ ನಗರದಲ್ಲಿದ್ದ ತಮ್ಮ ಮನೆಯ ಮೊದಲ ಮಹಡಿಯಲ್ಲಿ ನಿಂತು ಹಾಗೇ ಒಮ್ಮೆ ಆಕಾಶವನ್ನು ದಿಟ್ಟಿಸಿ ನೋಡಿದರು ಆರ್.ಎನ್. ಜಯಗೋಪಾಲ್. ಮರುಗಳಿಗೆಯೇ ಭೂಮಿಯನ್ನೂ ಒಮ್ಮೆ ನೋಡಿದರು. ಆ ಕ್ಷಣದಲ್ಲಿ ಅವರಿಗೆ `ಎಲ್ಲಿಯ ಆಕಾಶ, ಎಲ್ಲಿಯ ಭೂಮಿ, ಅದೆಲ್ಲಿಯ ನಾವು’ ಅನ್ನಿಸಿತು. ಹಿಂದೆಯೇ `ಗಗನವು ಎಲ್ಲೋ, ಭೂಮಿಯು ಎಲ್ಲೋ ಒಂದೂ ಅರಿಯೇ ನಾ’ ಎಂಬ ಅಪೂರ್ವ ಸಾಲು ಮಿಂಚಿನಂತೆ ಹೊಳೆಯಿತು. ತಕ್ಷಣವೇ ಪುಟ್ಟಣ್ಣ ಕಣಗಾಲ್ ಅವರಿಗೆ ಫೋನ್ ಮಾಡಿದ ಜಯಗೋಪಾಲ್- `ಇನ್ನೊಂದು ಒಳ್ಳೆಯ ಹಾಡು ಕೊಡ್ತೀನಿ. ಅದನ್ನು `ಗೆಜ್ಜೆ ಪೂಜೆ’ಗೆ ಬಳಸಿಕೊಳ್ಳೀರಾ?’ ಅಂದರಂತೆ.
`ಈಗಾಗಲೇ ಚಿತ್ರೀಕರಣವೆಲ್ಲ ಮುಗಿದುಹೋಗಿದೆ. ನಿಮ್ಮ ಹಾಡು ತಗೋಬೇಕು ಎಂದರೆ ಮತ್ತೆ ಶೂಟಿಂಗ್ ಮಾಡಬೇಕು ಮಿಗಿಲಾಗಿ, ಆ ಹಾಡು ಸಿನಿಮಾದ ಒಂದು ಸನ್ನಿವೇಶಕ್ಕೆ ಹೊಂದಿಕೆಯಾಗಬೇಕು. ಇದೆಲ್ಲ ಸ್ವಲ್ಪ ಕಷ್ಟದ ಕೆಲಸ. ಇರಲಿ. ನೀವು ಒಮ್ಮೆ ಸಂಗೀತ ನಿರ್ದೇಶಕ ವಿಜಯಭಾಸ್ಕರ್ ಅವರನ್ನು ಸಂಪರ್ಕಿಸಿ, ಅವರಿಗೆ ವಿಷಯ ತಿಳಿಸಿ. ಅವರು ಒಳ್ಳೆಯ ಟ್ಯೂನ್ ಕೊಟ್ಟರೆ ಬಳಸಿಕೊಳ್ಳುವ ಬಗ್ಗೆ ಯೋಚಿಸೋಣ’ ಎಂದರಂತೆ ಪುಟ್ಟಣ್ಣ.
ತಕ್ಷಣ ವಿಜಯಭಾಸ್ಕರ್ಗೆ ಫೋನ್ ಮಾಡಿದ ಆರ್.ಎನ್.ಜೆ. ಎಲ್ಲ ವಿಷಯ ಹೇಳಿದ್ದಾರೆ. ಹಿಂದೆಯೇ `ಗಗನವು ಎಲ್ಲೋ ಭೂಮಿಯು ಎಲ್ಲೋ’ ಎಂಬ ಹೊಸ ಹಾಡಿನ ಸಾಲನ್ನೂ ಗುನುಗಿದ್ದಾರೆ. ಈ ಪದಗಳಲ್ಲಿ ಎಂಥದೋ ಸೆಳತವಿದೆ, ಒಂದು ಮೋಡಿಯಿದೆ ಅಂದುಕೊಂಡ ವಿಜಯಭಾಸ್ಕರ್ ನಂತರದ ಒಂದೆರಡೇ ನಿಮಿಷದಲ್ಲಿ ಟ್ಯೂನ್ ಕೊಟ್ಟರಂತೆ. ಜತೆಗೆ `ಈ ಹಾಡನ್ನು `ಗೆಜ್ಜೆ ಪೂಜೆ’ಯಲ್ಲಿ ಬೆಳೆಸುವಂತೆ ಪುಟ್ಟಣ್ಣನಿಗೆ ಒತ್ತಾಯಿಸೋಣ. ಜತೆಗೆ ನಾನಿರ್ತೇನೆ, ಹೆದರಬೇಡಿ’ ಎಂದು ಭರವಸೆ ನೀಡಿದರಂತೆ. ಈ ಧೈರ್ಯದ ಮಾತು ಕಿವಿಗೆ ಬಿದ್ದ ಕ್ಷಣದಲ್ಲೇ ಆರ್ಎನ್ಜೆ, ಅದೇ ಹಾಡನ್ನು ಹೀಗೆ ಮುಂದುವರಿಸಿದರು: ` ಎನಗೆ ನೀ ನೀಡಿದ ವಚನವ ಕೇಳಿ ತೇಲಿ ತೇಲಿ ಹೋದೆ ನಾ…’
ಮರುದಿನ ಈ ಹಾಡು ಮತ್ತು ಅದರ ಟ್ಯೂನನ್ನು ಪುಟ್ಟಣ್ಣ ಕಣಗಾಲರಿಗೆ ಕೇಳಿಸಿದ್ದಾಯಿತು. ಅವರು ತುಂಬಾ ಖುಷಿಪಟ್ಟು-`ಕಥಾನಾಯಕ ಮದುವೆಯಾಗುವುದಾಗಿ ಭಾಷೆ ಕೊಡ್ತಾನಲ್ಲ? ಆ ಸನ್ನಿವೇಶಕ್ಕೆ ಈ ಹಾಡು ಬಳಸಿದರೆ ಹೇಗೆ? ಅಂದರು. ಮುಂದಿನ ಕೆಲವೇ ಕ್ಷಣಗಳಲ್ಲಿ ಹಾಡು ಇಡಿಯಾಗಿ ಸಿದ್ಧವಾಯಿತು. ತಕ್ಷಣವೇ ನಿರ್ಮಾಪಕ ಶಿವರಾಂ ಅವರ ಮನೆಗೇ ಬಂದ ಪುಟ್ಟಣ್ಣ ಕಣಗಾಲ್, ಮತ್ತೆ ಒಂದು ಹಾಡಿನ ಚಿತ್ರೀಕರಣ ಆಗಬೇಕು. ಅದಕ್ಕೆ ವ್ಯವಸ್ಥೆ ಮಾಡಿ ಅಂದಿದ್ದಾರೆ. `ಅಯ್ಯಯ್ಯೋ’ ಹಾಗೆಲ್ಲ ಮಾಡಿದ್ರೆ ಬಜೆಟ್ ಜಾಸ್ತಿಯಾಗುತ್ತೆ’ ಎಂದು ಶಿವರಾಂ ಹೇಳಿದರೂ, ಅದಕ್ಕೆ ಒಪ್ಪದ ಪುಟ್ಟಣ್ಣ -` ಈ ಹಾಡಿನಿಂದ ನಿಮ್ಮ ಸಿನಿಮಾಕ್ಕೆ ಒಳ್ಳೇ ಹೆಸರು ಬರುತ್ತೆ. ನೀವು ಒಪ್ಪಲೇಬೇಕು’ ಎಂದು ಹಠ ಹಿಡಿದು ಒಪ್ಪಿಸಿದರಂತೆ. ಪರಿಣಾಮ, ನಿಗದಿತ ಬಜೆಟ್ಗಿಂತ ಐವತ್ತು ಸಾವಿರ ರೂ. ಜಾಸ್ತಿ ಮೊತ್ತ ಶಿವರಾಂಗೆ ಖರ್ಚಾಯಿತು.
ಈಗ ಯೋಚಿಸಿದರೆ-`ಗಗನವು ಎಲ್ಲೋ…’ ಹಾಡಿಲ್ಲದ `ಗೆಜ್ಜೆಪೂಜೆ’ ಸಿನಿಮಾವನ್ನು ಕಲ್ಪಿಸಿಕೊಳ್ಳಲಿಕ್ಕೂ ಕಷ್ಟವಾಗುತ್ತದೆ. ಆ ಹಾಡಿಲ್ಲದಿದ್ದರೆ ಇಡೀ ಚಿತ್ರದ ಅರ್ಥವೇ ಕೆಟ್ಟುಹೋಗುತ್ತದೆ ಅನಿಸುತ್ತದೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: