ಆಟೋಗ್ರಾಫ್ಗಳಲ್ಲಿ ಕಡ್ಡಾಯವಾಗಿರುವ ಈ ಹಾಡನ್ನು ಇಬ್ಬರು ಬರೆದರು!

ನೀ ನಡೆವ ಹಾದಿಯಲ್ಲಿ….
ಚಿತ್ರ: ಬಂಗಾರದ ಹೂ ಗೀತರಚನೆ: ವಿಜಯನಾರಸಿಂಹ
ಗಾಯನ: ಎಸ್. ಜಾನಕಿ, ಪಿ ಸುಶೀಲ. ಸಂಗೀತ: ರಾಜನ್-ನಾಗೇಂದ್ರ

ನೀ ನಡೆವ ಹಾದಿಯಲ್ಲಿ ನಗೆಹೂವು ಬಾಡದಿರಲಿ
ಈ ಬಾಳ ಬುತ್ತಿಯಲಿ ಸಿಹಿಪಾಲು ನಿನಗಿರಲಿ
ಕಹಿ ಎಲ್ಲ ನನಗಿರಲಿ ||ಪ||

ಸಹನೆ ಮೀರಿ ಕಾಣದ ಕೈ
ಮಾಡಿತೇನೊ ಮುಯ್ಯಿಗೆ ಮುಯ್ಯಿ
ಯಾರೂ ಇದಕೆ ಹೊಣೆಯೇ ಅಲ್ಲ
ಇರಲಿ ನನಗೆ ನಿಂದನೆಯೆಲ್ಲ
ವಿಧಿಯು ಹೂಡಿ ಒಳಸಂಚನ್ನು
ಒಡೆಯಿತೆನ್ನ ಹೊಂಗನಸನ್ನು
ನೋವ ನುಂಗಿ ಬಾಳುವೆ ನಾನು
ಸುಖವು ನಿನ್ನ ಕಾಡಿತೇನು
ಈ ಬೇಗೆ ನೀಗಲಿ ಮನಸು ಹಗುರವಾಗಲಿ ||ಪ||

ಏನೇನೊ ಬಯಸಿತು ಮನಸು
ಕೈ ಸೇರೆ ಎಲ್ಲಾ ಸೊಗಸು
ಕೈ ಜಾರೆ ಎಲ್ಲಾ ಕನಸು
ಆಸೆ ಮರೆತರೇ ಲೇಸು
ನನ್ನ ಕಣ್ಣ ನೀರಿನಲ್ಲಿ
ನಿನ್ನ ಬಿಂಬ ಕಾಣುತಿರಲಿ
ಈ ಬಾಳು ಇಂತೇ ಇರಲಿ
ನಿನ್ನ ನೆನಪು ಚಿರವಾಗಿರಲಿ
ಈ ಬೇಗೆ ನೀಗಲಿ, ಮನಸು ಹಗುರವಾಗಲಿ ||ಪ||
ಅದು ಆಗಷ್ಟೇ ಅರಳಿಕೊಂಡ ಪ್ರೇಮ. ತನ್ನ ಮನದ ಎಲ್ಲ ಭಾವನೆಯನ್ನೂ ಅವಳೆದುರು ಬಿಚ್ಚಿಡಲು ಹುಡುಗನಿಗೆ ಆಸೆ. ಆದರೆ ಹಾಗೆ ಮಾಡಲು ನಾಚಿಕೆ, ಸಂಕೋಚ, ಎಂಥದೋ ಹಿಂಜರಿಕೆ. ಆದರೆ ಮನಸ್ಸಿನಲ್ಲಿರುವುದನ್ನು ಹೇಳದೇ ಹೋದರೆ ಸಮಾಧಾನವಿಲ್ಲ. ಒಲಿದ ಗೆಳತಿಗೆ ಒಂದು ಗ್ರೀಟಿಂಗ್ ಕಾರ್ಡ್ ಕೊಟ್ಟರೆ ಹೇಗೆ ಎಂಬ ದಿವ್ಯ ಯೋಚನೆ ಹುಡುಗನಿಗೆ ಬರುತ್ತಿದ್ದುದೇ/ಬರುವುದೇ ಅಂಥ ಸಂದರ್ಭದಲ್ಲಿ. ಸಡಗರದಿಂದಲೇ ಅಂಗಡಿಗೆ ಹೋಗಿ ಗ್ರೀಟಿಂಗ್ ಕಾರ್ಡನ್ನೋ, ಆಟೋಗ್ರಾಫ್ ಪುಸ್ತಕವನ್ನೋ ತರುವ ಹುಡುಗ ಒಳಗೆ ಏನೆಂದು ಬರೆಯಲಿ ಎಂದು ಇಡೀ ರಾತ್ರಿ ತಲೆಕೆಡಿಸಿಕೊಳ್ಳುತ್ತಾನೆ. ಮರುದಿನ ನಡುಗುತ್ತಲೇ ಅದನ್ನು ತನ್ನ ಹುಡುಗಿಗೆ ದಾಟಿಸಿಯೂ ಬಿಡುತ್ತಾನೆ. ಹುಡುಗಿ ಒಂದು ಕುತೂಹಲದಿಂದಲೇ ಪುಟ ತೆರೆದರೆ ಅಲ್ಲಿ-`ನೀ ನಡೆವ ಹಾದಿಯಲ್ಲಿ/ ನಗೆ ಹೂವು ಬಾಡದಿರಲಿ/ ಈ ಬಾಳ ಬುತ್ತಿಯಲಿ ಸಿಹಿಪಾಲು ನಿನಗಿರಲಿ/ ಕಹಿಯೆಲ್ಲ ನನಗಿರಲಿ….’ ಎಂಬ ದಿವ್ಯ ಸಾಲಿರುತ್ತದೆ. ಹುಡುಗಿ ನಿಂತಲ್ಲಿಯೇ ಕಣ್ತುಂಬಿಕೊಳ್ಳುತ್ತಾಳೆ. ಅವನ ಪ್ರೀತಿಗೆ, ಅದರ ರೀತಿಗೆ ಸೋತುಹೋಗುತ್ತಾಳೆ!
ಅಂದಹಾಗೆ, ಇಲ್ಲಿ ಆಟೋಗ್ರಾಫ್ ಪುಸ್ತಕ/ ಗ್ರೀಟಿಂಗ್ ಕಾರ್ಡ್ ಕೊಡುವವರ ಗೆಟಪ್ಟಿನಲ್ಲಿ ಕೇವಲ ಹುಡುಗರೇ ಇರುತ್ತಾರೆಂದು ಭಾವಿಸಬಾರದು. ಅದು ಹುಡುಗಿಯೂ ಆಗಿರಬಹುದು. ಆದರೆ ಹುಡುಗ-ಹುಡುಗಿ ಇಬ್ಬರೂ ತಮ್ಮ ಪ್ರೇಮ ಎಂಥದು ಎಂದು ತೋರಿಸಿಕೊಳ್ಳಲು ಬಳಸುತ್ತಿದ್ದ; ಮತ್ತು ಈಗಲೂ ಬಳಸುವ ಹಾಡು ಮಾತ್ರ ಅದೇ- `ನೀ ನಡೆವ ಹಾದಿಯಲ್ಲಿ….’
**********
ಅವರಿಬ್ಬರೂ ಪ್ರೀತಿಸುತ್ತಿದ್ದುದು ನಿಜ. ಮದುವೆಯಾಗಲು ನಿರ್ಧರಿಸಿದ್ದುದೂ ನಿಜ. ಪರಸ್ಪರರ ಹೆಸರನ್ನು ಕೈಗಳ ಮೇಲೆ ಹಚ್ಚೆ ಹುಯ್ಯಿಸಿಕೊಂಡಿದ್ದೂ ನಿಜ. ಆದರೆ ಅಂಥ ಮಧುರ ಸಂಬಂಧದಲ್ಲೂ ಏನೋ ನಡೆದುಹೋಗುತ್ತದೆ-ಅದು ಪ್ರೇಮ ವಿವಾಹಕ್ಕೆ ಅಪ್ಪ-ಅಮ್ಮನ ನಿರಾಕರಣೆಯೋ; ಹುಡುಗ/ಹುಡುಗಿಗೆ ಬಯಸದೇ ಬಂದ ಕಾಯಿಲೆಯೋ ಅಥವಾ ಜಾತಿ ವಿಷಯವಾಗಿ ಎದ್ದು ನಿಂತ ತಡೆಗೋಡೆಯೋ…. ಹೀಗೆ ಯಾವುದೋ ಒಂದು. ಅಂಥ ಸಂದರ್ಭದಲ್ಲಿ, ಕೈ ತಪ್ಪಿ ಹೋದ ಗೆಳತಿಗೆ ಕಡೆಯದಾಗಿ ನಾಲ್ಕು ಮಾತು ಹೇಳಬೇಕು ಅನ್ನಿಸಿದಾಗ ಹುಡುಗ ಬಿಕ್ಕುತ್ತ ಬಿಕ್ಕುತ್ತಲೇ ಹೀಗೆ ಬರೆಯುತ್ತಾನೆ: ` ವಿಧಿಯು ಹೊಡಿ ಒಳಸಂಚನ್ನು/ ಒಡೆಯಿತೆನ್ನ ಹೊಂಗನಸನ್ನು/ ನೋವು ನುಂಗಿ ಬಾಳುವೆ ನಾನು/ ಸುಖವು ನಿನ್ನ ಕಾಡಿತೇನು….’
ಇವನ ಪತ್ರ ತಲುಪಿದ ಮರುದಿನವೇ ಕಂಬನಿಯನ್ನೇ ಅಕ್ಷರವನ್ನಾಗಿಸಿ ಹುಡುಗಿ ಬರೆಯುತ್ತಾಳೆ: `ನನ್ನ ಕಣ್ಣ ನೀರಿನಲ್ಲಿ/ ನಿನ್ನ ಬಿಂಬ ಕಾಣುತಿರಲಿ/ ಈ ಬಾಳು ಇಂತೇ ಇರಲಿ/ನಿನ್ನ ನೆನಪು ಚಿರವಾಗಿರಲಿ… ನೀ ನಡೆವಾ ಹಾದಿಯಲ್ಲಿ….
ಹೀಗೆ, ಏಕಕಾಲಕ್ಕೆ ಪ್ರೇಮಗೀತೆ ಹಾಗೂ ವಿರಹಗೀತೆ ಎರಡೂ ಆಗುವಂಥ ವೈಶಿಷ್ಟ್ಯದ `ನೀ ನಡೆವ ಹಾದಿಯಲ್ಲಿ’ ಹಾಡು ಬಂಗಾರದ ಹೂ’ ಚಿತ್ರದ್ದು. ಸರಿಸುಮಾರು ನಾಲ್ಕು ದಶಕಗಳಿಂದಲೂ ಆಟೋಗ್ರಾಫ್ಗಳಲ್ಲಿ ಕಡ್ಡಾಯವಾಗಿ ಕಾಣಿಸಿಕೊಳ್ಳುತ್ತಿರುವ ಈ ಗೀತೆಯನ್ನು ಇಬ್ಬರು ಗೀತೆರಚನಕಾರರು ಸೇರಿ ಬರೆದರು ಎಂಬುದು ಹಲವರಿಗೆ ಗೊತ್ತಿಲ್ಲ. ಹೇಳಿದರೆ, ಅದೇ ಒಂದು ಚೆಂದದ ಕಥೆ.
೪೦ ವರ್ಷಗಳ ಹಿಂದಿನ ಮಾತು. ಅದು ಕುಷ್ಠರೋಗ ಎಲ್ಲರನ್ನೂ ಕಾಡುತ್ತಿದ್ದ ಕಾಲ. ಆ ರೋಗದ ಬಗ್ಗೆ ತಿಳಿವಳಿಕೆ ನೀಡುವ ಸದಾಶಯದಿಂದ `ಬಂಗಾರದ ಹೂ’ ಸಿನಿಮಾ ತಯಾರಿಗೆ ಮುಂದಾದರು ಬಿ.ಎ. ಅರಸುಕುಮಾರ್. ಚಿತ್ರ ಪರಿಣಾಮಕಾರಿಯಾಗಿ ಬರಲಿ ಎಂಬ ಆಸೆಯಿಂದ ಆ ಕಾಲಕ್ಕೆ ದೊಡ್ಡ ಹೆಸರು ಮಾಡಿದ್ದ ಗೀತರಚನಕಾರರಾದ ಚಿ. ಉದಯಶಂಕರ್, ಆರ್.ಎನ್. ಜಯಗೋಪಾಲ್ ಮತ್ತು ವಿಜಯನಾರಸಿಂಹರನ್ನು ಕರೆಸಿ ತಲಾ ಒಂದೊಂದು ಹಾಡು ಬರೆದುಕೊಡುವಂತೆ ಕೇಳಿಕೊಂಡರು. ಹಾಡುಗಳ ಸಂದರ್ಭ ವಿವರಿಸಿದರು. ಮೂವರು ಗೀತೆರಚನಕಾರರ ಮಧ್ಯೆ ಆಗ ಬೊಂಬಾಟ್ ಗೆಳೆತನವಿತ್ತು. ಆರೋಗ್ಯಕರ ಪೈಪೋಟಿಯೂ ಇತ್ತು. ಉದಯಶಂಕರ್ ಸುಮ್ಮನೇ ಒಂದೆರಡು ಬಾರಿ ಅತ್ತಿಂದಿತ್ತ ಓಡಾಡಿ ಬಂದವರೇ – `ಓಡುವ ನದಿ ಸಾಗರವ ಸೇರಲೆಬೇಕು….’ ಹಾಡು ಬರೆದರು. ಆರ್.ಎನ್.ಜೆ ಕೂಡ ಹಿಂದೆ ಬೀಳಲಿಲ್ಲ. ಅವರು `ಆ ಮೊಗವು ಎಂಥಾ ಚೆಲುವು ಮನವ ಸೆಳೆವ ಬಂಗಾರದ ಹೂ’ ಎಂಬ ಗೀತೆ ಬರೆದರು.
ನಂತರದ ಸರದಿ ವಿಜಯನಾರಸಿಂಹ ಅವರದು. ಯಾಕೋ ಅವರಿಗೆ ಆಗ ಹಾಡಿನ ಸಾಲು ಹೊಳೆಯಲಿಲ್ಲ. ನಂತರ ಒಂದು ದಿನ ಕಳೆಯಿತು. ಎರಡನೇ ದಿನವೂ ಮುಗಿಯಿತು. ಕಡೆಗೆ ಮೂರು ದಿನ ಕಳೆದರೂ ಅವರ ಕಡೆಯಿಂದ ಸುದ್ದಿಯೇ ಇಲ್ಲ. ಕಡೆಗೆ ಆ ಹಾಡನ್ನೂ ನೀವೇ ಬರೆದುಬಿಡಿ ಎಂದು ಆರ್.ಎನ್.ಜೆ.ಗೆ ಕೇಳಿಕೊಂಡರು ಅರಸುಕುಮಾರ್. ಇದಕ್ಕೆ ಒಪ್ಪಿಕೊಂಡ ಆರ್ಎನ್ಜೆ `ನೀ ನಡೆದ ಹಾದಿಯಲ್ಲಿ/ ನಗೆಹೂವು ಬಾಡದಿರಲಿ/ ಈ ಬಾಳ ಬುತ್ತಿಯಲ್ಲಿ ಸಿಹಿಪಾಲು ನಿನಗಿರಲಿ/ ಕಹಿ ಎಲ್ಲ ನನಗಿರಲಿ…’ ಎಂದು ಪಲ್ಲವಿ ಬರೆದು ನಿರ್ದೇಶಕರಿಗೆ ತೋರಿಸಿದರಂತೆ. ಅವರು ಸಂತೋಷಪಟ್ಟು-`ತುಂಬಾ ಚೆನ್ನಾಗಿದೆ, ಮುಂದುವರಿಸಿ….’ ಅಂದರಂತೆ.
ಆರ್ಎನ್ಜೆ ಚರಣ ಬರೆಯಲು ಆರಂಭಿಸಬೇಕು ಎನ್ನುವಷ್ಟರಲ್ಲಿ ಅಲ್ಲಿಗೆ ಬಂದ ವಿಜಯನಾರಸಿಂಹ ಪಲ್ಲವಿ ಗಮನಿಸಿದರು. ಮರುಕ್ಷಣವೇ ಅವರಿಗೆ ಈ ಹಾಡನ್ನು ನಾನೇ ಬರೆಯಬೇಕು ಅನ್ನಿಸಿತಂತೆ. ಇದನ್ನೇ ಆರ್ಎನ್ಜೆ ಮುಂದೆ ಹೇಳಿಕೊಂಡ ಅವರು `ನಾನು ಮುಂದುವರಿಸ್ತೇನೆ. ದಯವಿಟ್ಟು ಬಿಟ್ಟು ಕೊಡಿ’ ಅಂದರಂತೆ.
ಮಗು ಮನಸ್ಸಿನ ಆರ್ಎನ್ಜೆ ಆ ಮಾತಿಗೆ ಒಪ್ಪಿಕೊಂಡದ್ದು ಎಲ್ಲ ದಾಖಲಾಗಲೇ ಇಲ್ಲ. ಆದರೆ ಆರ್ಎನ್ಜೆ ಮತ್ತು ವಿಜಯನಾರಸಿಂಹರನ್ನು ಮೀರಿ ಆ ಹಾಡು ಮಧುರವಾಯಿತು. ಅಮರವಾಯಿತು….
ಕಾಡುವ ಹಾಡುಗಳ ಕಥೆ ಅಂದ್ರೆ ಸುಮ್ನೇನಾ?

Advertisements

3 Comments »

 1. 1
  Pramod Says:

  ತು೦ಬಾ ಸು೦ದರವಾದ ಹಾಡು. ಇದ್ರ ಹಿಸ್ಟರಿನೂ ಇಷ್ಟು ಚೆನ್ನಾಗಿದೆ ಅ೦ತ ಈಗ ಗೊತ್ತಾಯಿತು.
  Just awesome 🙂

 2. 3
  santhosh cb Says:

  nice lyrics ever thanks to both lyrics writer,vijaynarasimha and R N J


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: