ಹಿರಿಯೂರಿನ ಹಾದಿಯಲ್ಲಿ ಅಕಸ್ಮಾತ್ತಾಗಿ ಹೊಳೆಯಿತು ಲೆಕ್ಕದ ಹಾಡು…

 

ನಾಕೊಂದ್ಲ ನಾಕು, ನಾಕೆರಡ್ಲ ಎಂಟು
ಚಿತ್ರ : ಶುಭಮಂಗಳ. ಗೀತೆರಚನೆ : ಎಂ.ಎನ್. ವ್ಯಾಸರಾವ್
ಸಂಗೀತ`: ವಿಜಯಭಾಸ್ಕರ್. ಗಾಯನ : ಎಸ್.ಪಿ. ಬಾಲಸುಬ್ರಹ್ಮಣ್ಯಂ
ನಾಕೊಂದ್ಲ ನಾಕು ನಾಕೆರಡ್ಲ ಎಂಟು
ಇಷ್ಟೇ ಈ ಲೆಕ್ಕದ ನಂಟು, ಅಷ್ಟೇ ಆ ಲೆಖ್ಖದ ನೆಂಟು ||ಪ||
ಮಳೆಗೆರೆದ ಹನಿ ಹನಿಗೆ ಭೂತಾಯಿ ಬರೆದಳೆ ಲೆಕ್ಕಾ
ಚಿಗುರೊಡೆದ ಎಲೆ ಎಲೆಗೆ ವನದೇವಿ ಇಡುವಳೆ ಲೆಕ್ಕಾ
ಕೂಡದ ಕಳೆಯದ ಆ ಲೆಕ್ಕ ಕೂಡೋ ಕಳೆಯೋ ಈ ಲೆಕ್ಕಾ
ಯಾರಿಗೆ ಬೇಕು ಈ ಲೆಕ್ಕ ||೧||
ಕೋಗಿಲೆಯ ಇಂಚರಕೆ ವಸಂತ ಕೊಡುವನೆ ಲೆಕ್ಕಾ
ಅರಳಿದ ಹೂವು ಪರಿಮಳಕೆ ತಂಗಾಳಿ ಬರೆಯಿತೆ ಲೆಕ್ಕಾ
ಎಣಿಸದ ಗುಣಿಸದ ಆ ಲೆಕ್ಕ ಎಣಿಸೋ ಗುಣಿಸೊ ಈ ಲೆಕ್ಕಾ
ಯಾರಿಗೆ ಬೇಕು ಈ ಲೆಕ್ಕ ||೨||
ಪ್ರೇಮಿಗಳ ಸಂಗಮಕೆ ಋತುವು ಹೇಳಿತೆ ಲೆಕ್ಕಾ
ಪ್ರಿಯತಮನ ಚುಂಬನಕೆ ಪ್ರೇಯಸಿ ಇಡುವಳೆ ಲೆಕ್ಕಾ
ಕಾಣದ ಕೇಳದ ಆ ಲೆಕ್ಕ ಕಾಣುವ ಕೇಳುವ ಈ ಲೆಕ್ಕಾ
ಯಾರಿಗೆ ಬೇಕು ಈ ಲೆಕ್ಕ ||೩||

ಇದು, ೧೯೭೪ ರ ಮಾತು. ಒಂದು ವರ್ಷದ ಹಿಂದಷ್ಟೇ `ನಾಗರಹಾವು’ ಸಿನಿಮಾ ಬಿಡುಗಡೆಯಾಗಿತ್ತು. ಆ ಚಿತ್ರದಿಂದ ನಟ ವಿಷ್ಣುವರ್ಧನ್ ರಾತ್ರಿ ಕಳೆದು ಬೆಳಗಾಗುವುದರೊಳಗೆ ಸ್ಟಾರ್ ಆಗಿಬಿಟ್ಟಿದ್ದರು. ಈ ಚಿತ್ರವನ್ನು ವಿಪರೀತ ಮೆಚ್ಚಿಕೊಂಡ ಹಿಂದಿಯ ರಾಜ್‌ಕಪೂರ್ ತನ್ನ ಮಗ ರಿಷಿಕಪೂರ್‌ನನ್ನು ಹೀರೋ ಎಂದಿಟ್ಟುಕೊಂಡು ಇದೇ ಸಿನಿಮಾವನ್ನು ಹಿಂದಿಯಲ್ಲಿ ತೆಗೆಯುವಂತೆ ಪುಟ್ಟಣ್ಣ ಕಣಗಾಲರಿಗೆ ದುಂಬಾಲು ಬಿದ್ದರು. ಆಗ ಶುರುವಾದ `ನಾಗರ ಹಾವು’ ಸಿನಿಮಾದ ಹಿಂದಿ ವರ್ಷನ್‌ನ ಹೆಸರೇ ಝಹ್ರೀಲಾ ಇನ್ಸಾನ್.
ಇಡೀ ಚಿತ್ರವನ್ನು ಚಿತ್ರದುರ್ಗದ ಪರಿಸರದಲ್ಲಿಯೇ ಚಿತ್ರಿಸಬೇಕು ಎಂಬುದು ಪುಟ್ಟಣ್ಣ ಕಣಗಾಲ್ ಅವರ ನಿರ್ಧಾರವಾಗಿತ್ತು. ಒಂದು ಕಡೆಯಲ್ಲಿ `ಝಹ್ರೀಲಾ ಇನ್ಸಾನ್’ನ ಶೂಟಿಂಗ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡ ಪುಟ್ಟಣ್ಣ , ಅದೇ ಸಂದರ್ಭದಲ್ಲಿ ತಮ್ಮ ಮುಂದಿನ ಚಿತ್ರ `ಶುಭಮಂಗಳ’ದ ತಯಾರಿಕೆಗೆ ಸಂಬಂಧಿಸಿದಂತೆಯೂ ಒಂದೊಂದೇ ಸಿದ್ಧತೆ ಮಾಡಿಕೊಳ್ಳತೊಡಗಿದ್ದರು.
`ಶುಭಮಂಗಳ’ದ ನಿರ್ಮಾಪಕರೂ, ಪುಟ್ಟಣ್ಣ ಕಣಗಾಲ್ ಅವರ ಆತ್ಮೀಯರೂ ಆಗಿದ್ದ ಕೆ.ಎಸ್.ಎಲ್. ಸ್ವಾಮಿ (ರವೀ)ಯವರು ಅದೊಂದು ದಿನ ಕವಿ ಎಂ.ಎನ್. ವ್ಯಾಸರಾವ್ ಅವರ ಮನೆಗೆ ಬಂದರು. `ನಿಮ್ಮನ್ನು ಕರ್ಕೊಂಡು ಬರೋಕೆ ಪುಟ್ಟಣ್ಣ ಹೇಳಿದ್ದಾರೆ ಸಾರ್. ಬನ್ನಿ’ ಎಂದವರೇ, ಸೀದಾ ಪುಟ್ಟಣ್ಣ ಅವರಲ್ಲಿಗೆ ಕರೆತಂದೇ ಬಿಟ್ಟರು.
ಸ್ವಾರಸ್ಯವೆಂದರೆ, ಕವಿ ಕಂ ಬ್ಯಾಂಕ್ ಉದ್ಯೋಗಿಯಾಗಿದ್ದ ಎಂ.ಎನ್. ವ್ಯಾಸರಾವ್ ಅವರಿಗೆ ಅದುವರೆಗೂ ಪುಟ್ಟಣ್ಣ ಕಣಗಾಲ್ ಅವರ ಪರಿಚಯವೇ ಇರಲಿಲ್ಲ. ಅಪರಿಚಿತರು ಮತ್ತು ಹೆಸರಾಂತ ಚಿತ್ರ ನಿರ್ದೇಶಕರೂ ಆಗಿದ್ದ ಅವರೊಂದಿಗೆ ಮಾತನಾಡುವುದು ಹೇಗೆ ಎಂಬ ಹಿಂಜರಿಕೆ ವ್ಯಾಸರಾವ್ ಅವರಿಗೆ ಸಹಜವಾಗಿಯೇ ಇತ್ತು. ಹೀಗಿದ್ದಾಗಲೇ ಸಡಗರದಿಂದ ಬಳಿ ಬಂದು ಕೈ ಕುಲುಕಿದ ಪುಟ್ಟಣ್ಣ ಕೇಳಿದರಂತೆ: `ಕವಿಗಳೆ, ನಿಮ್ಮನ್ನು ನಾನು ಇಲ್ಲಿಗೆ ಯಾಕೆ ಕರೆಸಿದ್ದೀನಿ ಅಂತ ಗೊತ್ತಾ?`
`ಇಲ್ಲ ಸಾರ್. ಖಂಡಿತ ಗೊತ್ತಿಲ್ಲ` ಅಂದಿದ್ದಾರೆ ವ್ಯಾಸರಾವ್.
`ನೋಡಿ ಸ್ವಾಮಿ, ನಾನು ಇದುವರೆಗೂ ಪ್ರತಿ ಸಿನಿಮಾದಲ್ಲೂ ನಾಯಕ-ನಾಯಕಿ ಅಥವಾ ಪೋಷಕ ನಟರು/ ಖಳನಟರನ್ನು ಪರಿಚಯಿಸ್ತಾ ಇದ್ದೆ. ಆದ್ರೆ ನನ್ನ ಮುಂದಿನ ಸಿನಿಮಾ `ಶುಭಮಂಗಳ’ದಲ್ಲಿ ನಿಮ್ಮನ್ನು ಗೀತ ರಚನೆಕಾರರನ್ನಾಗಿ ಚಿತ್ರರಂಗಕ್ಕೆ ಪರಿಚಯಿಸಬೇಕು ಅಂತಿದ್ದೀನಿ. ಈಗ ಗೊತ್ತಾಯ್ತು ತಾನೆ? ನನ್ನ ಸಿನಿಮಾಕ್ಕೆ ನೀವು ಹಾಡು ಬರೀಬೇಕು` ಅಂದರಂತೆ ಪುಟ್ಟಣ್ಣ ಕಣಗಾಲ್.
ಅದುವರೆಗೂ ಕವನಗಳನ್ನು ಮಾತ್ರ ಬರೆದುಕೊಂಡು ಹಾಯಾಗಿದ್ದವರು ವ್ಯಾಸರಾವ್. ಅವರಿಗೆ ಸಿನಿಮಾಕ್ಕೆ ಹಾಡು ಬರೆದು ಗೊತ್ತೇ ಇರಲಿಲ್ಲ. ಜತೆಗೆ, ಟ್ಯೂನ್ ಕೇಳಿಸಿಕೊಂಡು ಅದಕ್ಕೆ ಹೊಂದುವಂತೆ ಹಾಡು ಬರೆದು ಅಭ್ಯಾಸವೂ ಇರಲಿಲ್ಲ. ಅದನ್ನೇ ಪುಟ್ಟಣ್ಣನವರ ಮುಂದೆ ಹೇಳಿಕೊಂಡು `ನಾನು ಸಿನಿಮಾಕ್ಕೆ ಹಾಡು ಬರೆದವನೇ ಅಲ್ಲ` ಅಂದಾಗ, ಆ ಮಾತನ್ನು ಅಷ್ಟಕ್ಕೇ ತಡೆದ ಪುಟ್ಟಣ್ಣ ಹೇಳಿದರಂತೆ: ` ನೀವು ಖಂಡಿತ ಬರೆಯಬಲ್ಲಿರಿ. ಈ ಚಿತ್ರದ ಸನ್ನಿವೇಶ ಹೇಳಿಬಿಡ್ತೀನಿ ಕೇಳಿ. ಚಿತ್ರದ ನಾಯಕಿ ಮಹಾಸ್ವಾಭಿಮಾನಿ. ತುಂಬ ಶ್ರೀಮಂತ ಕುಟುಂಬದಿಂದ ಬಂದ ಆಕೆ ಬದಲಾದ ಪರಿಸ್ಥಿತಿಯ ಕಾರಣದಿಂದಾಗಿ ನಾಯಕನ ಮನೆಯಲ್ಲಿ ಆಶ್ರಯ ಪಡೆಯುತ್ತಾಳೆ. ಆ ಸಂದರ್ಭದಲ್ಲಿ ಊಟ ಮಾಡಿದ್ದು, ತಿಂಡಿ ತಿಂದಿದ್ದನ್ನೂ ಸೇರಿಸಿ ಎಲ್ಲ ಲೆಕ್ಕವನ್ನೂ ಬರೆದಿಡುತ್ತಿರುತ್ತಾಳೆ. ಈಕೆಯ ಮೇಲೆ ಪ್ರೀತಿ ಹೊಂದಿದ್ದ ನಾಯಕ-ಇದೆಲ್ಲ ಯಾಕೆ? ಈ ಲೆಕ್ಕಕ್ಕೆ ಏನಾದರೂ ಅರ್ಥವಿದೆಯಾ ಎಂದು ಅವಳನ್ನು ಪ್ರಶ್ನಿಸಬೇಕು. ಹಾಗೆ ಪ್ರಶ್ನಿಸುತ್ತಲೇ ಛೇಡಿಸಬೇಕು. ಆ ಸನ್ನಿವೇಶವನ್ನು ಮನಮುಟ್ಟುವಂತೆ ಹೇಳಲು ನನಗೊಂದು ಹಾಡುಬೇಕು. ನೀವು ಕವಿ ಮತ್ತು ಬ್ಯಾಂಕ್ ಅಧಿಕಾರಿ. ದಿನವೂ ಲೆಕ್ಕಗಳ ಮಧ್ಯೆಯೇ ಕಳೆದು ಹೋಗುತ್ತೀರಿ. ಲೆಕ್ಕವನ್ನು ಹೇಗೆ ಬರೆಯಬೇಕು ಎಂದು ನಿಮಗೆ ಗೊತ್ತಿರುತ್ತೆ. ಹಾಗಾಗಿ ಈ ಸನ್ನಿವೇಶಕ್ಕೆ ಹೊಂದಿಕೆಯಾಗುವ ಹಾಡೊಂದನ್ನು ಬರೆದುಕೊಡಿ….`
****
` ಸರಿ ಸಾರ್, ಬರೆದುಕೊಡ್ತೇನೆ ಎಂದು ವ್ಯಾಸರಾವ್ ಅವರೇನೋ ಒಪ್ಪಿಕೊಂಡರು. ಆದರೆ, ನಂತರ ಒಂದು ವಾರ ಕಳೆದರೂ ಒಂದೇ ಒಂದು ಸಾಲೂ ಹೊಳೆಯಲಿಲ್ಲವಂತೆ. ಹೀಗಿದ್ದಾಗಲೇ ಮತ್ತೆ ವ್ಯಾಸರಾವ್ ಅವರ ಮನೆಗೆ ಬಂದ ನಿರ್ಮಾಪಕ ರವೀ, `ಬನ್ನಿ ಸಾರ್, ನಾನು, ನೀವು, ಪುಟ್ಟಣ್ಣ ಹಾಗೂ ಸಂಗೀತ ನಿರ್ದೇಶಕ ವಿಜಯಭಾಸ್ಕರ್ ಒಟ್ಟಿಗೇ ಚಿತ್ರದುರ್ಗಕ್ಕೆ ಹೋಗಿಬರೋಣ. ಅಲ್ಲಿ ನಿಮ್ಗೆ ಟ್ಯೂನ್ ಕೇಳಿಸ್ತೇವೆ ‘ ಅಂದಿದ್ದಾರೆ.
ಇದಕ್ಕೆ ಒಪ್ಪಿಕೊಂಡ ವ್ಯಾಸರಾವ್ ಕಾರು ಹತ್ತಿದ್ದಾರೆ. ಕಾರು ತುಮಕೂರು ದಾಟಿ, ಶಿರಾವನ್ನು ಹಿಂದಕ್ಕಿ ಹಿರಿಯೂರು ತಲುಪಿಕೊಂಡಾಗ ಆಗಷ್ಟೇ ಮಧ್ಯಾಹ್ನದ ಎಳೆ ಬಿಸಿಲು ಜತೆಯಾಗುತ್ತಿತ್ತು. ಇವತ್ತು ಹಾಡು ಬರೆಯಲೇಬೇಕು ಎಂದು ವ್ಯಾಸರಾವ್ ಹಾದಿಯುದ್ದಕ್ಕೂ ಮತ್ತೆ ಮತ್ತೆ ಅಂದುಕೊಳ್ಳುತ್ತಲೇ ಇದ್ದರು. ಆಗಲೇ ಎಳನೀರು ಕುಡಿಯಲೆಂದು ಅಲ್ಲಿ ಕಾರು ನಿಲ್ಲಿಸಲಾಯಿತು. ಕಾರಿಂದ ಇಳಿದವರು ಸಹಜವಾಗಿಯೇ `ಎಳನೀರಿಗೆ ಎಷ್ಟಪ್ಪಾ’ ಎಂದು ಲೆಕ್ಕ ಕೇಳಿದ್ದಾರೆ. ಆಗ ಏನೋ ಹೊಳೆದಂತಾದ ವ್ಯಾಸರಾವ್ ಪುಟ್ಟಣ್ಣ ಅವರಿಗೆ ಹೇಳಿದರಂತೆ : `ಅಲ್ಲ ಸಾರ್, ಎಷ್ಟೋ ವರ್ಷದಿಂದ ಆಕಾಶ ಮಳೆ ಸುರಿಸ್ತಾ ಇದೆ. ಆದರೆ ಹಾಗೆ ಸುರಿದ ಮಳೆ ನೀರಿನ ಪ್ರಮಾಣ ಎಷ್ಟು ಅಂತ ಈ ಭೂಮಿ ಲೆಕ್ಕ ಇಟ್ಟಿದೆಯಾ? ಇಲ್ಲ ಅಲ್ವ? ನಾವು ಈ ಚಿಕ್ಕಪುಟ್ಟದಕ್ಕೆಲ್ಲ ಲೆಕ್ಕ ಕೇಳ್ತೀವಲ್ಲ?’
ಈ ಮಾತಿಂದ ವಿಪರೀತ ಖುಷಿಯಾದ ಪುಟ್ಟಣ್ಣ ಕಣಗಾಲ್-`ಇದೇ, ಇದೇ… ಇದೇನೇ ನನ್ಗೆ ಬೇಕಿದ್ದುದ್ದು. ಕವಿಗಳಿಂದ ಹಾಡು ಬರೆಸಬೇಕು ಅನ್ನೋದೇ ಅದಕ್ಕೆ. ಬಹಳ ಚನ್ನಾಗಿ ಹೇಳಿದ್ರಿ. ಈಗ ಹಾಡು ಬರೆಯಲು ಶುರುಮಾಡಿ’ ಅಂದರಂತೆ.
ಈ ಹೊಗಳಿಕೆಯಿಂದ ಸಹಜವಾಗಿಯೇ ಖುಷಿಗೊಂಡ ವ್ಯಾಸರಾವ್ ` ಒಮ್ಮೆ ಪ್ರಕೃತಿ ನಮಗೆ ನೀಡುವ ಅಸಂಖ್ಯ ಕೊಡುಗೆ, ಅದನ್ನು ಲೆಕ್ಕ ಮಾಡಲಾಗದ ಮನುಷ್ಯನ ಫಜೀತಿಯನ್ನು ನೆನಪಿಸಿಕೊಂಡರು. ಇನ್ನೊಮ್ಮೆ ಕ್ಷಣಕ್ಷಣವೂ ಲೆಕ್ಕಾಚಾರದಲ್ಲೇ ಕಳೆದುಹೋಗುವ ಚಿತ್ರದ ನಾಯಕಿಯನ್ನು ಕಣ್ತುಂದೆ ತಂದುಕೊಂಡರು. ಈ ಮಧ್ಯೆಯೇ ಪ್ರಯಾಣ ಮುಂದುವರಿಯಿತು. ಆವತ್ತು ರಾತ್ರಿ ಚಿತ್ರ ದುರ್ಗದ ಹೋಟೆಲಿನಲ್ಲಿ ಹಾಡು ಒಂದೊಂದೇ ಪದವಾಗಿ ಜತೆಯಾಗುತ್ತಾ ಹೋಯಿತು. ಆ ಮೇಲೆ, ದಿನವೂ ಅಂಕಿ ಸಂಖ್ಯೆಗಳೊಂದಿಗೆ; ರೂಪಾಯಿನ ಲೆಕ್ಕಾಚಾರದೊಂದಿಗೆ ಆಟವಾಡುತ್ತಿದ್ದ ಅವರ ಮನಸ್ಸು ಪದಗಳೊಂದಿಗೆ ಆಟವಾಡಿತು. ಪರಿಣಾಮ, ನಾಕೊಂದ್ಲ ನಾಕು, ನಾಕೆರಡ್ಲ ಎಂಟು ಎಂದು ಶುರುಮಾಡಿ, ಕೂಡುವುದು, ಕಳೆಯುವುದು, ಗುಣಿಸುವುದನ್ನೆಲ್ಲ ಅವರು ಲೆಕ್ಕದ ಹಾಡಿನಲ್ಲಿ ತಂದೇಬಿಟ್ಟರು.
ಕಾಡುವ ಹಾಡುಗಳೆಲ್ಲ ಹೀಗೆ ಆಕಸ್ಮಿಕವಾಗಿ, ಯಾವುದೋ ಒತ್ತಡದ ಮಧ್ಯೆಯೇ ಸೃಷ್ಟಿಯಾಗುತ್ತವೆ ಎಂಬುದನ್ನು ನಾವು ಮರೆಯಬಾರದು….

Advertisements

3 Comments »

  1. 2

    Akkareya Pramod,
    Nimma Preetiya maatugalige Thanx.
    Manikanth.


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: