ರೈಲುಗಳೇಕೆ ಲೇಟಾಗಿ ಬರ್‍ತವೆ ಗೊತ್ತಾ?

 

ರೈಲು-ಬಸ್ ಪ್ರಯಾಣದ ವೇಳಾಪಟ್ಟಿ ಎಲ್ಲ ನಿಲ್ದಾಣಗಳಲ್ಲೂ ಕಡ್ಡಾಯ ಎಂಬಂತೆ ಇರುತ್ತದೆ. ಆದರೆ, ಆ ರೈಲು-ಬಸ್ಸುಗಳು ಇಡೀ ವರ್ಷದಲ್ಲಿ ಒಂದೇ ಒಂದು ದಿನವಾದರೂ ನಿಗದಿತ ಅವಧಿಗೆ ಸರಿಯಗಿ ಬರುವುದಿಲ್ಲ. ಅಪ್ಪಿತಪ್ಪಿ ನಮ್ಮ ದೇಶದಲ್ಲಿ ರೈಲು, ಬಸ್ಸುಗಳು ಇಡೀ ಒಂದು ವಾರದ ಅವಧಿ ಸಮಯಕ್ಕೆ ಸರಿಯಾಗಿ ಬಂದು ಬಿಟ್ಟವೆಂದರೆ, ಆ ವಾರ ಪೂರಾ ಸೂರ್ಯ ಪಶ್ಚಿಮದಲ್ಲಿ ಹುಟ್ಟಿದ್ದಾನೆ ಎಂದೇ ಅರ್ಥ!
ಇರಲಿ, ರೈಲು-ಬಸ್ಸುಗಳು ಸಮಯಕ್ಕೆ ಸರಿಯಾಗಿ ಯಾಕೆ ಬರುವುದಿಲ್ಲ ಎಂಬುದಕ್ಕೆ ಒಂದು ತಮಾಷೆಯ, ಸ್ವಾರಸ್ಯಕರ ಕತೆ ಇದೆ. ಇದು ಮಂಡ್ಯದಲ್ಲೋ, ಶ್ರೀರಂಗಪಟ್ಟಣದಲ್ಲೋ ನಡೆದದ್ದಂತೆ.
ಐವತ್ತರವತ್ತು ವರ್ಷಗಳ ಹಿಂದಿನ ಮಾತು. ಅದೊಂದು ದಿನ ಮೈಸೂರಿನಿಂದ ಬೆಳಗ್ಗೆ ಒಂಭತ್ತು ಗಂಟೆಗೆ ಮಂಡ್ಯಕ್ಕೆ / ಶ್ರೀರಂಗಪಟ್ಟಣಕ್ಕೆ ಬರಬೇಕಿದ್ದ ರೈಲು ಸಮಯಕ್ಕೆ ಸರಿಯಾಗಿ ಬಂದು, ಒಂದು ನಿಮಿಷ ನಿಂತಿದ್ದು ಬೆಂಗಳೂರಿಗೆ ಹೋಗಿಯೇಬಿಟ್ಟಿತು. ನಂತರದ ಹದಿನೈದು ನಿಮಿಷದಲ್ಲಿ ಆ ಸೀಮೆಗೇ ಹೆಸರಾಗಿದ್ದ ಪಟೇಲನೊಬ್ಬ ತನ್ನ ಪರಿವಾರದೊಂದಿಗೆ ಬಂದ. ನೋಡುತ್ತಾನೆ-ರೈಲು ಹೊರಟೇ ಹೋಗಿದೆ. ಆಗ, ಬಸ್ಸುಗಳೂ ಕಡಿಮೆಯಿದ್ದವು. ಮತ್ತೆ ರೈಲಿನಲ್ಲಿಯೇ ಬೆಂಗಳೂರು ತಲುಪಬೇಕೆಂದರೆ ಸಂಜೆಯವರೆಗೂ ಕಾಯಲೇಬೇಕಿತ್ತು.
ಇದರಿಂದ ಕಿಡಿಕಿಡಿಯಾದ ಪಟೇಲ ಸೀದಾ ಸ್ಟೇಷನ್ ಮಾಸ್ಟರ್ ಹತ್ತಿರ ಹೋಗಿ ಕೇಳಿದನಂತೆ; ಅಲ್ಲಪ್ಪಾ, ಆ ರೈಲು ಓಡಿಸುವವನಿಗೇನೋ ಬುದ್ಧಿ ಇರಲಿಲ್ಲ. ಅವನು ಟೈಮಿಗೆ ಸರಿಯಾಗಿ ಬಂದ, ಹೋಗಿಬಿಟ್ಟ. ನೀನು ಏನ್ ಮಾಡ್ತಿದ್ದೆ? ಅವನನ್ನು ಅರ್ಥಗಂಟೆ ನಿಲ್ಲಿಸ್ಕೋಬೇಕಿತ್ತು ಕಣಯ್ಯ ನೀನು. ಅವನು ಅರ್ಜೆಂಟಾಗಿ ಬೆಂಗ್ಳೂರಿಗೆ ರೈಲು ತಗೊಂಡೋಗಿ ಮಾಡೋದೇನಿದೆ? ನಾವು ಊರಿಂದ ನಡ್ಕಂಡು ಬರ್‍ಬೇಕು. ಆಗ ಲೇಟಾಯ್ತದಪ್ಪ. ಹಾಗಂತ ರೈಲು ಹೊಂಟೇ ಹೋಗೋದಾ?’ ಹೀಗೆಲ್ಲ ದಬಾಯಿಸಿದ ಆ ಪಟೇಲರು ನಂತರ ಸ್ಟೇಷನ್‌ನಲ್ಲಿ ಧರಣಿಯನ್ನೂ ನಡೆಸಿದರಂತೆ.
ಇದರಿಂದ ರೋಸಿಹೋದ ಸ್ಟೇಷನ್‌ಮಾಸ್ಟರು ಮರುದಿನವೇ ಒಂದು ಬೋರ್ಡು ಬರೆಸಿ ಹಾಕಿಸಿದರಂತೆ. ಅದರಲ್ಲಿ ಹೀಗಿತ್ತು, `ಇನ್ನು ಮುಂದೆ ಯಾವುದೇ ರೈಲು ಗಾಡಿ ನಿಗದಿತ ಸಮಯಕ್ಕೆ ಸರಿಯಾಗಿ ಹೋಗಿಬಿಟ್ಟರೆ ಅದಕ್ಕೆ ನಾವು ಜವಾಬ್ದಾರರಲ್ಲ!’
ಆ ಬೋರ್ಡು ಕಂಡ ಮೇಲೆ ಜನ ಹೇಗೆ ಪ್ರತಿಕ್ರಿಯಿಸಿದರೋ ಗೊತ್ತಿಲ್ಲ. ಆದರೆ ಅಂದಿನಿಂದ ರೈಲುಗಳು ಮಾತ್ರ ನಿಗಧಿತ ಅವಧಿಗೆ ಸರಿಯಾಗಿ ಬರುವುದನ್ನೇ ನಿಲ್ಲಿಸಿಬಿಟ್ಟವಂತೆ! ಈ ಗುಣವೇ ಮುಂದೆ ಬಸ್ಸುಗಳಿಗೂ ಅಂಟಿಕೊಂಡಿತಂತೆ!
-ಮಣೀ

Advertisements

1 Comment »

  1. ಮಣಿಕಾಂತ್ ಅವರೆ,
    ಬಹಳ ಸ್ವಾರಸ್ಯದ ಕತೆಯಿದು..
    ಇದೇ ಪರಿಸ್ಥಿತಿ ವಿಮಾನಗಳಿಗೂ ಅಂಟಿಕೊಂಡಿದೆ ಅಂದರೆ ತಪ್ಪಲ್ಲ ಅನ್ನಿಸುತ್ತದೆ 🙂


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: