ಏಕಾಂತದ ಸಂಕಟದಲ್ಲಿ ಕಂಬವನ್ನೇ ದಿಟ್ಟಿಸಿ ಮಾತಾಡಿಕೊಂಡಾಗ ಹಾಡು ಹೊಳೆಯಿತು !

ಕಂಬದಾ ಮ್ಯಾಲಿನಾ ಗೊಂಬೆಯೇ…
ಚಿತ್ರ : ನಾಗಮಂಡಲ. ಗೀತೆರಚನೆ : ಗೋಪಾಲ ಯಾಜ್ಞಿಕ್.
ಸಂಗೀತ : ಸಿ. ಅಶ್ವತ್ಥ್, ಗಾಯನ : ಸಂಗೀತಾ ಕಟ್ಟಿ ಕುಲಕರ್ಣಿ.
ಕಂಬದಾ ಮ್ಯಾಲಿನಾ ಗೊಂಬೆಯೇ
ನಂಬಲೇನಾ ನಿನ್ನಾ ನಗೆಯನ್ನಾ
ಭಿತ್ತಿಯ ಮ್ಯಾಲಿನ ಚಿತ್ತಾರವೇ
ಚಿತ್ತಗೊಟ್ಟು ಹೇಳ ಉತ್ತಾರವಾ
ಒಬ್ಬಳೇ ನಾನಿಲ್ಲಿ ತಬ್ಬಿಬ್ಬುಗೊಂಡಿಹೆನ
ಮಬ್ಬು ಹರಿಯುವುದೇನಾ, ಹಬ್ಬವಾಗುವುದೇನಾ || ೧ ||
ನೀರೊಲೆಯ ನಿಗಿಕೆಂಡ ಸತ್ಯವೇ
ಈ ಅಭ್ಯಂಜನವಿನ್ನು ನಿತ್ಯವೇ?!
ಒಳ್ಳೆ ಗಮಗುಡುತಿಯಲ್ಲೆ ಸೀಗೆಯೇ
ನಿನ್ನ ವಾಸನೆ ಹರಡಿರಲಿ ಹೀಗೆಯೇ
ಒಬ್ಬಳೇ ನಾನಿಲ್ಲಿ ತಬ್ಬಿಬ್ಬುಗೊಂಡಿಹೆನ
ಮಬ್ಬು ಹರಿಯುವುದೇನಾ ಹಬ್ಬವಾಗುವುದೇನಾ || ೨ ||
ಒಪ್ಪಿಸುವೆ ಹೂ ಹಣ್ಣು ಭಗವಂತ
ನೆಪ್ಪೀಲೇ ಹರಸು ನಗಿ ಇರಲಂತ
ಕರ್ಪುರವ ಬೆಳಗೂವೆ ದೇವನೆ
ತಪ್ಪದೇ ಬರಲೆನ್ನ ಗುಣವಂತ
ಒಬ್ಬಳೇ ನಾನಿಲ್ಲಿ ತಬ್ಬಿಬ್ಬುಗೊಂಡಿಹೆನ
ಮಬ್ಬುಹರಿಯುವುದೇನಾ ಹಬ್ಬವಾಗುವುದೇನಾ || ೩ ||

ನೆನಪಿದೆ ತಾನೆ ನಾಗಮಂಡಲ ?
ಅದರಲ್ಲಿ ಒಂದಲ್ಲ ಎರಡಲ್ಲ, ಒಟ್ಟು ಹದಿನಾರು ಹಾಡುಗಳಿವೆ. ಸ್ವಾರಸ್ಯ ವೆಂದರೆ ಅಷ್ಟೂ ಹಾಡುಗಳು ಇಂಪಿಂಪಿಂಪಿಂಪು ಎನ್ನುವಷ್ಟು ಇಂಪಾಗಿವೆ. ಆರಾಧಾನಾ ಭಾವದ ಈ ಹಾಡುಗಳನ್ನು ಬರೆದ ವರು ಹಿರಿಯ ಪತ್ರಕರ್ತ ಗೋಪಾಲ ವಾಜಪೇಯಿ. `ನಾಗಮಂಡಲ’ದ ಟೈಟಲ್ ಕಾರ್ಡ್ನಲ್ಲಿ ಮಾತ್ರ ಅವರ ಹೆಸರು ಗೋಪಾಲ ಯಾಜ್ಞಿಕ್ ಎಂದಾಗಿದೆ! ವಾಜಪೇಯಿ ಎಂಬುದು ಯಾಜ್ಞಿಕ್ ಎಂದು ಬದಲಾಗಿದ್ದು ಯಾಕೆ ಎಂದು ಹುಡುಕಲು ಹೊರಟರೆ ಒಂದು ಚೆಂದದ ಕಥೆಯೇ ಸಿಗುತ್ತದೆ.
ಈ ನಾಗಮಂಡಲ ಸಿನಿಮಾ ತಯಾರಾದದ್ದು ೧೯೯೭-೯೮ರಲ್ಲಿ. ಆಗ ಗೋಪಾಲ ವಾಜಪೇಯಿ ಯವರು ಕೆ. ಶಾಮರಾವ್ ದರ್ಬಾರಿನ `ಸಂಯುಕ್ತ ಕರ್ನಾಟಕ’ದಲ್ಲಿ ನೌಕರಿಗಿದ್ದರು. `ಕಸ್ತೂರಿ’ ಮಾಸಿಕದ ನಿರ್ವಹಣೆ ಅವರ ಹೆಗಲಿಗಿತ್ತು. ಈ ಸಂದರ್ಭದಲ್ಲಿಯೇ ವಾಜಪೇಯಿ ಅವರನ್ನು ಭೇಟಿ ಮಾಡಿದ ಸಂಗೀತ ನಿರ್ದೇಶಕ ಸಿ. ಅಶ್ವತ್ಥ್ ಮತ್ತು ನಿರ್ದೇಶಕ ನಾಗಾಭರಣ-`ನಾಗಮಂಡಲ’ವನ್ನು ಸಿನಿಮಾ ಮಾಡ್ತಾ ಇದೀವಿ. ಅದಕ್ಕೆ ನೀವೇ ಹಾಡು ಮತ್ತು ಸಂಭಾಷಣೆ ಬರೆಯಬೇಕು ಎಂದು ಒತ್ತಾಯಿಸಿದರು. ಅದಕ್ಕೂ ಮೊದಲು ನಟ ಶಂಕರ್ನಾಗ್, ಇದೇ `ನಾಗಮಂಡಲ’ ನಾಟಕಕ್ಕೆ ವಾಜಪೇಯಿಯವರಿಂದ ಹಾಡು ಬರೆಸಿದ್ದರು. ಹಾಗಾಗಿ, ಸಿನಿಮಾಕ್ಕೆ ಹಾಡು-ಸಂಭಾಷಣೆ ಬರೆಯಲು ಕಷ್ಟವೇನೂ ಆಗದು ಎಂದು ವಾಜಪೇಯಿಯವರಿಗೆ ಗ್ಯಾರಂಟಿ ಇತ್ತು. ಆದರೆ ಕ್ಷಣಕ್ಷಣವೂ ಇದ್ದುದು ಶಾಮರಾಯರ ಭಯ. ಒಂದು ವೇಳೆ ಸಿನಿಮಾಕ್ಕೆ ಹಾಡು-ಸಂಭಾಷಣೆ ಬರೆದ ವಿಷಯ ಗೊತ್ತಾದರೆ, ಆಕ್ಷಣವೇ ಶಾಮರಾಯರು ನೌಕರಿಯಿಂದ ಕಿತ್ತೆಸೆಯುತ್ತಾರೆ ಎಂದು ವಾಜಪೇಯಿಯವರಿಗೆ ಗೊತ್ತಿತ್ತು.
ಅದನ್ನೇ ಅಶ್ವತ್ಥ್ ಮತ್ತು ನಾಗಾಭರಣರಿಗೆ ಹೇಳಿಕೊಂಡ ವಾಜಪೇಯಿ- `ನೀವು ವಿಶ್ವಾಸವಿಟ್ಟು ಕೇಳಿದ್ದೀರಿ. ನಾನೂ ಒಪ್ಪಿಕೊಂಡಿದ್ದೇನೆ. ಖಂಡಿತ ಬರೆದುಕೊಡ್ತೇನೆ. ಆದರೆ ಒಂದು ಕಂಡೀಷನ್. ಯಾವುದೇ ಕಾರಣಕ್ಕೂ, ಯಾವ ಸಂದರ್ಭದಲ್ಲೂ ಹಾಡು ಬರೆದದ್ದು `ವಾಜಪೇಯಿ’ ಎಂದು ಹೇಳಬಾರದು. ಅಪ್ಪಿ ತಪ್ಪಿ ನೀವೇನಾದ್ರೂ ಹೇಳಿದ್ರೆ ನಾನೀಗ ತಿಂತಾ ಇರೋ ಅನ್ನಕ್ಕೂ ಕಲ್ಲು ಬೀಳುತ್ತೆ’ ಅಂದರು.
`ಸರಿ, ನೀವು ಮೊದಲು ಬರೆಯಲು ಶುರುಮಾಡಿ. ನಾವು ಮಾತಿಗೆ ತಪ್ಪೋದಿಲ್ಲ’ ಎಂದರಂತೆ ಅಶ್ವತ್ಥ್ -ಭರಣ.
ಹಾಡು -ಸಂಭಾಷಣೆ ಎರಡೂ ಸಿದ್ಧವಾದ ಮೇಲೆ ಉತ್ತರ ಕನ್ನಡ ಜಿಲ್ಲೆಯ ಮಂಚಿಕೆರೆಗೆ ಶೂಟಿಂಗ್ಗೆ ಹೋಗುವುದೆಂದು ನಿರ್ಧಾರ
ವಾಯಿತು. ಅದನ್ನು ಪತ್ರಿಕೆಯವರಿಗೆ ತಿಳಿಸಲೆಂದು ಬೆಂಗಳೂರಿನ ಸಿಟಿ ಇನ್ಸ್ಟಿಟ್ಯೂಟ್ನಲ್ಲಿ ಪತ್ರಿಕಾಗೋಷ್ಠಿ ಏರ್ಪಾಡಾಗಿತ್ತು. ಶಾಮ ರಾಯರ ಭಯದಿಂದ ವಾಜಪೇಯಿಯವರೂ ಪತ್ರಕರ್ತರ ಸಾಲಲ್ಲೇ ಕುಳಿತಿದ್ದರು. ಒಂದೆರಡು ನಿಮಿಷದ ನಂತರ ವಾಜಪೇಯಿಯವರನ್ನು ಕರೆದುಕೊಂಡು ಇನ್ನೊಂದು ಬದಿಗೆ ಬಂದ ಅಶ್ವತ್ಥ್-`ಡೈಲಾಗು-ಲಿರಿಕ್ಸು ಯಾರದು ಅಂತ ಪ್ರೆಸ್ನವರು ಕೇಳ್ತಿದಾರೆ ಏನಾದ್ರೂ ಒಂದು ಹೆಸರು ಹೇಳಬೇಕಲ್ಲಪ್ಪ” ಎಂದರು.
`ಸರ್, ನನಗಿದು ನಿಜಕ್ಕೂ ಅಗ್ನಿಪರೀಕ್ಷೆ, ಏನು ಮಾಡಲಿ? ಹಾಡು- ಡೈಲಾಗ್ ಬರೆದವ ನಾನು ಅಂತ ಬಹಿರಂಗವಾದ್ರೆ ನಾಳೆಯೇ ಕೆಲ್ಸ ಹೋಗುತ್ತೆ’ ಅಂದರಂತೆ ವಾಜಪೇಯಿ.
ಅದೇ ವೇಳೆಗೆ ಅಲ್ಲಿಗೆ ಬಂದ ಗಿರೀಶ್ ಕಾರ್ನಾಡ್ ಅವರಿಗೆ ಅಶ್ವತ್ಥ್ ಎಲ್ಲವನ್ನೂ ವಿವರಿಸಿದ್ದಾರೆ. ಕಾರ್ನಾಡ್ ಒಂದು ನಿಮಿಷ ಯೋಚಿಸಿ ಹೀಗೆಂದರು: `ವಾಜಪೇಯ ಅನ್ನೋದು ಒಂದು ಯಾಗ. ಅದನ್ನು ಮಾಡಿದ ಯಾಜ್ಞಿಕರೇ ವಾಜಪೇಯಿಗಳು, ಅಶ್ವತ್ಥ್, ಹಾಡು ಸಂಭಾಷಣೆ ಬರೆದವರ ಹೆಸರು `ಗೋಪಾಲ ಯಾಜ್ಞಿಕ್ ಅಂತ ಹೇಳಿಬಿಡಿ’ ಅಂದರು.
ಇದು, ವಾಜಪೇಯಿಯವರು `ಯಾಜ್ಞಿಕ್’ ಆಗಿದ್ದರ ಹಿನ್ನೆಲೆ!
ಈವರೆಗೂ ಹೇಳಿದ್ದು, ಹಾಡು ಬರೆದ ನಂತರದ ಸ್ಥಿತಿ. ಹಾಡು ಬರೆಯುವಾಗ ವಾಜಪೇಯಿಯವರ ಮನಃಸ್ಥಿತಿ ಹೇಗಿತ್ತು, ಎಂಥ ಒತ್ತಡದಲ್ಲಿ ಅವರು ಹಾಡು ಬರೆದರು? ಆ ಸಂಕಟದ ಮಧ್ಯೆಯೇ ಅಪರೂಪದ ಹಾಡುಗಳು ಹೇಗೆ ಕೈ ಹಿಡಿದವು ಎಂದರೆ ಅವರು ಹೀಗೆನ್ನುತ್ತಾರೆ: `ನಾಗಮಂಡಲ’ಕ್ಕೆ ಹಾಡು -ಸಂಭಾಷಣೆ ಬರೆಯಲೆಂದೇ ಮಿನರ್ವ ಸರ್ಕಲ್ನಲ್ಲಿರುವ ಕಾಮತ್ ಹೋಟೆಲಿನಲ್ಲಿ ಭರಣ -ಅಶ್ವತ್ಥ್ ನನಗೆ ರೂಮು ಮಾಡಿಕೊಟ್ಟಿದ್ದರು. ಅದಕ್ಕೂ ಮುಂಚೆ ಆ ಸಿನಿಮಾಕ್ಕೆ ಹಿರಿಯ ಕವಿ ಡಾ. ಎಚ್.ಎಸ್. ವೆಂಕಟೇಶಮೂರ್ತಿಯವರಿಂದ ಹಾಡು-ಸಂಭಾಷಣೆ ಬರೆಸಲಾಗಿತ್ತು. ನಂತರ ಯಾಕೋ ಅದು ಇಷ್ಟವಾಗದೆ ಎಲ್ಲವನ್ನೂ ನನ್ನ ಹೆಗಲಿಗೆ ವರ್ಗಾಯಿಸಿದ್ದರು. ಅವತ್ತಿಗೂ-ಇವತ್ತಿಗೂ
ಎಚ್ಎಸ್ವಿ ಅವರ ಮುಂದೆ ನಾನು ಬಚ್ಚಾ. ಎಳಸು. ಅವರು ಬಿಟ್ಟ ಕೆಲಸವನ್ನು ನಾನು ಮುಂದುವರಿಸಬೇಕಿತ್ತು. ಅದನ್ನು ನೆನಪಿಸಿಕೊಂಡಾಗ ಸಹಜವಾಗಿಯೇ ಹೆದರಿಕೆಯಾಯಿತು.
ಈ ಮಧ್ಯೆಯೇ ದಿನಕ್ಕೆ ಒಂದು ಹಾಡಿನಂತೆ ಹದಿನಾರು ಹಾಡು ಬರೆಯಲು ನಿರ್ಧರಿಸಿದೆ. ಆದರೆ ಆಫೀಸಿನ ಕೆಲಸ ಮುಗಿಸಿ ರೂಂಗೆ ಬಂದರೆ, ಅಲ್ಲೂ ಶಾಮರಾಯರ ಭಯ. ಅವರ ಗೂಢಚಾರರು ಹಿಂದೆ ಬಿದ್ದಿದ್ದಾರೇನೋ ಎಂಬ ಅನುಮಾನ. ಕೆಲಸ ಹೋದರೆ ಎಂಬ ಸಂಕಟ. ಬೈಛಾನ್ಸ್ ಹಾಡೇ ಹೊಳೆಯದಿದ್ದರೆ? ಎಂಬ ಅಪನಂಬಿಕೆ… ಇದರ ಮಧ್ಯೆಯೇ ಅಡ್ಡಾಡುತ್ತಾ ಅದೊಮ್ಮೆ ಹಾಡು ಬರೆಯಲು ಕುಳಿತೆ.
ಆ ಸನ್ನಿವೇಶ ಹೀಗಿತ್ತು. ಒಲಿಯದ ಗಂಡ ಅಪ್ಪಣ್ಣ, ಕಥಾನಾಯಕಿ ರಾಣಿಯನ್ನು ಅರಮನೆಯಂಥ ದೊಡ್ಡ ಮನೆಯಲ್ಲಿ ಕೂಡಿ ಹಾಕಿ, ಹೊರಗಿಂದ ಬೀಗ ಹಾಕಿಕೊಂಡು ವೇಶ್ಯೆಯ ಮನೆಗೆ ಹೋಗಿಬಿಡುತ್ತಾನೆ. ನಂತರದಲ್ಲಿ ದಿನವೂ ಹೀಗೇ ಅದಾಗ ಕಥಾನಾಯಕಿ ಬದುಕಿನಲ್ಲಿ ಆಸಕ್ತಿಯನ್ನೇ ಕಳೆದುಕೊಳ್ಳುತ್ತಾಳೆ. ಈ ಮಧ್ಯೆಯೇ ಇದೊಂದು ಬೇರು ಕುದಿಸಿ, ಅದನ್ನು ಹಾಲಿನಲ್ಲಿ ಬೆರೆಸಿ ನಿನ್ನ ಗಂಡನಿಗೆ ಕೊಡು. ಆಗ ಅವನು ನಿನ್ನೊಂದಿಗೂ ಉಳೀತಾನೆ ಎಂದು ಕುರುಡವ್ವ ಹೇಳಿರುತ್ತಾಳೆ. ಆಗ ಕಥಾನಾಯಕಿಯದು ಯಾವುದನ್ನು ನಂಬಬೇಕು, ಯಾವುದನ್ನು ಬಿಡಬೇಕು ಎಂಬುದೇ ಅರ್ಥವಾಗದಂಥ ದಿಗ್ಭ್ರಾಂತ ಸ್ಥಿತಿ. ಕೋಟೆಯಂಥ ಆ ಮನೆಯೊಳಗೆ ಆಕೆಗೆ ಸಮಾಧಾನ ಹೇಳುವವರೂ ಇಲ್ಲ. ಭಯವಾದಾಗ ಖುಷಿಯಾದಾಗ, ಕಷ್ಟ ಬಂದಾಗ ಆಕೆ ಯಾರೊಂದಿಗೆ ಮಾತನಾಡಬೇಕು? ಮನೆಯ ಕಂಬದೊಂದಿಗೆ, ಅಲ್ಲಿದ್ದ ನಿರ್ಜೀವ ಗೊಂಬೆಯೊಂದಿಗೆ, ಗೋಡೆಯೊಂದಿಗೆ, ಗೋಡೆಯ ಮೇಲಿನ ಚಿತ್ತಾರದೊಂದಿಗೆ…
ಹೀಗೆಲ್ಲ ಯೋಚಿಸಿದಾಗ ಹಾಡಿನ ಮೊದಲ ಸಾಲು ಹೊಳೆಯಿತು. ವಾಸ್ತವವಾಗಿ ಕುಟುಂಬದವರೇ ಒಂದು ಕಡೆ, ನಾನೇ ಒಂದು ಕಡೆ ಇದ್ದ ದಿನಗಳವು. ನನ್ನ ಸಂಕಟವನ್ನೂ ಸಹ ನಾನು ಯಾರೊಂದಿಗೂ ಹೇಳಿಕೊಳ್ಳುವಂತಿರಲಿಲ್ಲ. ಮೊಬೈಲ್ ಇಲ್ಲದ ಆ ದಿನಗಳಲ್ಲಿ ನಾನೂ ಗೋಡೆಯೊಂದಿಗೆ, ಪೆನ್ನು-ಪುಸ್ತಕದೊಂದಿಗೆ, ಕುರ್ಚಿ-ಮೇಜಿನೊಂದಿಗೆ ಮಾತನಾಡಿಕೊಳ್ಳುತ್ತಿದ್ದೆ. ಕಥಾ ನಾಯಕಿಯ ಸಂಕಟ ನನ್ನದೂ ಆಯಿತಲ್ಲ? ಅದೇ ನೆಪದಲ್ಲಿ `ಕಂಬದಾ ಮ್ಯಾಲಿನಾ ಗೊಂಬೆಯೆ’ ಹಾಡು ಈರುಳ್ಳಿಯ ಪಕಳೆಗಳಂತೆ ಬಿಚ್ಚಿಕೊಳ್ಳುತ್ತಾ ಹೋಯಿತು.
ಗಂಡನ, ಒಳ್ಳೆಯ ದಿನಗಳ ನಿರೀಕ್ಷೆಯಲ್ಲಿರುವ ಕಥಾನಾಯಕಿ ಅದನ್ನು ಕನವರಿಸುತ್ತಲೇ ದಿಢೀರನೇ ಗಂಡ ಬಂದುಬಿಟ್ಟರೆ ಮುಂದೆ ಹೇಗೋ ಏನೋ ಎಂದು ನೆನದು ತಬ್ಬಿಬ್ಬಾಗುತ್ತಾಳೆ ಎಂದು ಊಹಿಸಿಕೊಂಡಾಗ ಮುಂದಿನ ಸಾಲುಗಳು ತಾವೇ ನನ್ನ ಕೈ ಹಿಡಿದು ಬರೆಸಿಕೊಂಡವು. ಆ ಮೇಲೆ, ನನ್ನನ್ನು ಹಿಂದಿಕ್ಕಿ ಜನಪ್ರಿಯವಾಗಿ ಹೋದವು…
ಹೀಗೆನ್ನುತ್ತಾ, ಖುಷಿಯಿಂದ ಕಣ್ತುಂಬಿಕೊಳ್ಳುತ್ತಾರೆ ವಾಜಪೇಯಿ.

Advertisements

1 Comment »

  1. 1
    sreenivasa Says:

    i was always wondering about magic of kannada words in “nagamandala’ songs and after reading in “mayura – feb 10 ” issue opened the i-net to look for nagamandala . Vandanegalu Vajapayee avare.


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: