ಶರತ್ ಬಾಬು ಎಂಬ ಅದ್ಭುತ..:)

ಈ ಕಥಾನಾಯಕನ ಹೆಸರು ಇ. ಶರತ್ ಬಾಬು. ಈತ ಚೆನ್ನೈನ ಮಾದಿಪಕ್ಕಂ ಎಂಬ ಕೊಳೆಗೇರಿಯಿಂದ ಬಂದವನು. ಸ್ವಂತ ಪ್ರತಿಭೆಯಿಂದ ಅಹ್ಮದಾಬಾದ್ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಸೀಟು ಪಡೆದವನು. ಎಂಬಿಎನಲ್ಲಿ ಯೂನಿವರ್ಸಿಟಿಗೇ ಎರಡನೇ ರ್ಯಾಂಕು ತಗೊಂಡವನು. ಈ ಹುಡುಗ ರ್ಯಾಂಕ್ ಬಂದನಲ್ಲ? ಆ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾದ ಮರುದಿನವೇ ಅವನಿಗೆ ಸಾವಿರಾರು ಮಂದಿ ಹೊಸ ಹೊಸ ಬಂಧುಗಳು ಹುಟ್ಟಿಕೊಂಡರು. ಕಾಲೇಜಿನ ಪ್ರಾಚಾರ್ಯರಿಂದಲೇ ಇವನ ವಿಳಾಸ ಪಡೆದ ಮಲ್ಟಿ ನ್ಯಾಷನಲ್ ಕಂಪನಿಗಳ ಮುಖ್ಯಸ್ಥರು- `ತಿಂಗಳಿಗೆ ಒಂದೂವರೆ ಲಕ್ಷ ರೂ. ಸಂಬಳ ಕೊಡ್ತೀವಿ. ವರ್ಷಕ್ಕೆ ಎರಡು ಬಾರಿ ಫಾರಿನ್ ಟೂರು, ಜತೆಗೆ ಕಾರು, ಮನೆ, ಫೋನ್ ಬಿಲ್ಲು ಇತ್ಯಾದಿ… ಬಾ. ನಾಳೆಯಿಂದಲೇ ನಮ್ಮ ಕಂಪನಿ ಸೇರಿಕೋ…’ ಎಂದು ದುಂಬಾಲು ಬಿದ್ದರು. ಕೆಲವು ಶ್ರೀಂಂತರಂತೂ ತಾವಾಗಿಯೇ ಮುಂದೆ ಬಂದು ಮಗಳ ಫೋಟೊ ಎದುರಿಗಿಟ್ಟು- `ಸುಮ್ನೆ ಒಪ್ಪಿಕೊಳ್ಳಿ. ನಿಮ್ಮನ್ನೇ ಮನೆ ಅಳಿಯನನ್ನಾಗಿ ಮಾಡಿಕೊಳ್ತೀವಿ’ ಎಂದು ಆಸೆ ತೋರಿಸಿದರು. ಕೊಳೆಗೇರಿಯಿಂದ ಬಂದು ಎಂಬಿಎನಲ್ಲಿ ರ್ಯಾಂಕ್ ಪಡೆಯುವಷ್ಟು ಮಹತ್ಸಾಧನೆ ಮಾಡಿದ ಶರತ್ಬಾಬುಗೆ ಸರಕಾರಿ ನೌಕರಿ ನೀಡಲು ಸಿದ್ಧ ಎಂದು ತಮಿಳ್ನಾಡು ಸರಕಾರವೂ ಘೋಷಿಸಿಬಿಟ್ಟಿತು. ಆದರೆ, ಈ ಮಾತುಗಳು ತನಗೆ ಕೇಳಿಸಲೇ ಇಲ್ಲ ಎಂಬಂತೆ, ತನ್ನನ್ನು ಓಲೈಸಲು ಬಂದಿದ್ದವರ ಸಮ್ಮುಖದಲ್ಲಿಯೇ ಶರತ್ಬಾಬು ಹೀಗೆ ಘೋಷಿಸಿದ: `ಕ್ಷಮಿಸಿ. ಯಾರ ಕೈ ಕೆಳಗೂ ಕೆಲಸ ಮಾಡಲು ನಾನು ಸಿದ್ಧನಿಲ್ಲ- ನನ್ನದೇ ಸ್ವಂತ ಹೋಟೆಲ್ ಶುರು ಮಾಡ್ತೀನಿ…’
ಈ ಮಾತು ಕೇಳಿದ್ದೇ- ಕ್ಯೂ ನಿಂತಿದ್ದ ಕನ್ಯಾಪಿತೃಗಳು ಸದ್ದಿಲ್ಲದೆ ಸರಿದು ಹೋದರು. ದಿಢೀರ್ ಹುಟ್ಟಿಕೊಂಡಿದ್ದ ಬಂಧುಗಳು ಅಷ್ಟೇ ಬೇಗ ಮಾಯವಾದರು. ಶರತ್ಬಾಬುವಿನೊಂದಿಗೇ ಓದಿದ ಹುಡುಗ-ಹುಡುಗಿಯರು `ಇದೆಂಥ ಹುಚ್ಚೋ ನಿಂದು?’ ಸುಮ್ನೆ ಯಾವುದಾದ್ರೂ ಮಲ್ಟಿ ನ್ಯಾಷನಲ್ ಕಂಪನಿ ಸೇರ್ಕ. ಲಕ್ಷ ಗಟ್ಲೆ ಸಂಬಳ ಸಿಗುತ್ತೆ. ಆರಾಮಾಗಿ ಇರಬಹುದು. ಸ್ವಂತ ಬಿಜಿನೆಸ್ಸು ತಂತಿ ಮೇಲಿನ ನಡಿಗೆ. ಅದೆಲ್ಲ ಬೇಡ’ ಎಂದು ಬುದ್ಧಿ ಹೇಳಿದರು. ನೆರೆ ಹೊರೆಯವರಂತೂ – ಲಕ್ಷ್ಮಿದೇವಿ ಮನೆಗೆ ಬಂದ್ರೆ ಬಾಗಿಲು ಮುಚ್ಚಿದನಲ್ರಿ ಈ ಹುಡುಗ? ಇವನಿಗೆ ಓದಿ ಓದಿ ತಲೆಕೆಟ್ಟಿದೆ ಎಂದು ಕೊಂಕು ನುಡಿದರು. ಈ ಯಾವ ಮಾತಿಂದಲೂ ಶರತ್ಬಾಬು ಅಧೀರನಾಗಲಿಲ್ಲ. ಆತ್ಮವಿಶ್ವಾಸ ಕಳೆದುಕೊಳ್ಳಲಿಲ್ಲ. ಬದಲಿಗೆ ತಾನು ಎಂಬಿಎ ಪದವಿ ಪಡೆದ ಅಹಮದಾಬಾದ್ನಲ್ಲಿಯೇ ೨೦೦೬ರ ಆಗಸ್ಟ್ ೧೫ರಂದು ಒಂದು ಕ್ಯಾಂಟೀನ್ ಆರಂಭಿಸಿಯೇ ಬಿಟ್ಟ.
ಅವನಿಗೆ ಶುಭವಾಗುತ್ತದೆ ಎಂಬುದಕ್ಕೆ ಸಾಕ್ಷಿಯಾಗಿ ಅವತ್ತು ಹಲ್ಲಿ ಲೊಚಗುಡಲಿಲ್ಲ. ಯಾವ ಜ್ಯೋತಿಷಿಯೂ ಭವಿಷ್ಯ ಹೇಳಲಿಲ್ಲ.
ಹಾಗಿದ್ದರೂ ಇಂಥದೊಂದು ರಿಸ್ಕ್ ತೆಗೆದುಕೊಳ್ಳಲು ಶರತ್ಬಾಬು ನಿರ್ಧರಿಸಿದ್ದ. ಕೊಳೆಗೇರಿಯಲ್ಲಿಯೇ ಹುಟ್ಟಿ ಬೆಳೆದನಲ್ಲ? ಅದೇ ಕಾರಣದಿಂದ ಅವನಿಗೆ ಬಡತನದ ಕಷ್ಟ ಏನೆಂದು ಗೊತ್ತಿತ್ತು. ಬಡವರಿಗೆ ಕೈತುಂಬ ಸಂಬಳ ತರುವ ಕೆಲಸ ಸಿಗದಿರುವುದೇ ಎಲ್ಲ ಸಮಸ್ಯೆಗೂ ಮೂಲ ಎಂದು ಆತ ಅರ್ಥಮಾಡಿಕೊಂಡಿದ್ದ. ಈ ಶರತ್ಬಾಬುವಿನ ತಾಯಿ, ತಿಂಗಳಿಗೆ ೮೦೦ ರೂ. ಸಂಬಳದ ಅಂಗನವಾಡಿಯ ಆಯಾ ಆಗಿದ್ದಳು. ಅಪ್ಪ ಕೂಲಿ ಮಾಡುತ್ತಿದ್ದ. ಮನೆ ನಿರ್ವಹಣೆಗೆ ಇಬ್ಬರ ದುಡಿಮೆಯೂ ಸಾಲುತ್ತಿಲ್ಲ ಅನ್ನಿಸಿದಾಗ, ಬೆಳಗಿನ ಮೂರು ಗಂಟೆಗೇ ಏಳುತ್ತಿದ್ದ ಶರತ್ಬಾಬು ತಾಯಿ-ಹೊತ್ತು ಮೂಡುವ ವೇಳೆಗೆ ನೂರಕ್ಕೂ ಹೆಚ್ಚು ಇಡ್ಲಿ ಬೇಯಿಸುತ್ತಿದ್ದಳು. ನಂತರ ಅಷ್ಟನ್ನೂ ಅದೇ ಕೊಳೆಗೇರಿಯಲ್ಲಿ ಮಾರಿ, ಒಂದಿಷ್ಟು ಪುಡಿಗಾಸು ಸಂಪಾದಿಸುತ್ತಿದ್ದಳು. ಕೆಲವೇ ದಿನಗಳಲ್ಲಿ ಆಕೆಗೆ ವ್ಯಾಪಾರ ಕುದುರಿತು. ತಿಂಗಳಿಗೆ ಬರೋಬ್ಬರಿ ಎರಡು ಸಾವಿರ ರೂಪಾಯಿ- ಬರೀ ಇಡ್ಲಿ ಮಾರಾಟದಿಂದಲೇ ಸಿಗತೊಡಗಿತು.
ಎಂಬಿಎ ಪದವಿ ಪಡೆದ ನಂತರ- ಶರತ್ಬಾಬು ಸ್ವಂತ ಉದ್ದಿಮೆ ಆರಂಭಿಸಲು ಈ ಘಟನೆಯೇ ಪ್ರೇರಣೆಯಾಯಿತು. ಆದರೆ, ಫಲಿತಾಂಶ ಮಾತ್ರ ಅವನ ಪರವಾಗಿರಲಿಲ್ಲ. ಈ ಹುಡುಗ ವ್ಯವಹಾರಕ್ಕೆ ಹೊಸಬ ಎಂದು ಅರ್ಥವಾದ ತಕ್ಷಣ ಹಲವರು ಹೆಜ್ಜೆ ಹೆಜ್ಜೆಗೂ ಮೋಸ ಮಾಡಿದರು. ಕೆಲಸಕ್ಕೆ ಬಂದವರು, ಮೊದಲೇ ಅಡ್ವಾನ್ಸ್ ಪಡೆದು ನಾಪತ್ತೆಯಾದರು. ಇಂಥ ಸಂದರ್ಭದಲ್ಲಿಯೇ ಪರಿಚಿತರೊಬ್ಬರು- `ಹೇಳಿ ಕೇಳಿ ಇದು ಬಿಜಿನೆಸ್ಸು. ಒಂದೇ ಕಡೆ ನಂಬಿಕೊಂಡ್ರೆ ಲಾಭ ಮಾಡೋದು ಕಷ್ಟ. ಬೇರೊಂದು ಕಡೇಲಿ ಬ್ರ್ಯಾಂಚ್ ಥರಾ ಕೇಟರಿಂಗ್ ಉದ್ದಿಮೆ ಶುರು ಮಾಡು. ಹೇಗಿದ್ರೂ ಬ್ಯಾಂಕು ಸಾಲ ಕೊಡುತ್ತೆ. ಒಂದು ಕಡೇಲಿ ಲಾಸ್ ಆದ್ರೆ ಇನ್ನೊಂದು ಕಡೇಲಿ ಲಾಭ ಆಗಬಹುದು. ಆಗ ಹೇಗಾದ್ರೂ ಬ್ಯಾಲೆನ್ಸ್ ಮಾಡಬಹುದು’ ಅಂದರು.
ಸೋತವನು ಎಲ್ಲರ ಮಾತನ್ನೂ ನಂಬ್ತಾನಂತೆ. ಶರತ್ಬಾಬು ಕೂಡ ಹಾಗೇ ಮಾಡಿದ. ಹಿತೈಷಿಗಳ ಮಾತು ಕೇಳಿ ೨೦೦೬ರ ಅಕ್ಟೋಬರ್ ೨ರಂದು ಅಹಮದಾಬಾದ್ನ ಇನ್ನೊಂದು ಮೂಲೆಯಲ್ಲಿ ಎರಡನೇ ಹೋಟೆಲ್ ಶುರು ಮಾಡಿದ. ಪರಿಣಾಮ ಮಾತ್ರ ತುಂಬ ಕೆಟ್ಟದಿತ್ತು. ಎರಡೂ ಹೋಟೆಲುಗಳಲ್ಲಿ ಅದೆಷ್ಟೇ ಶುಚಿ-ರುಚಿಯ ಉಪಾಹಾರ ಮಾಡಿಟ್ಟರೂ ವ್ಯಾಪಾರ ಕುದುರಲೇ ಇಲ್ಲ. ವರ್ಷ ಕಳೆಯುವುದರೊಳಗೆ ಅನಾಮತ್ತು ಇಪ್ಪತ್ತು ಲಕ್ಷ ರೂ.ಗಳ ಸಾಲ ಇವನ ಹೆಗಲಿಗೇರಿತು.
ಇದೇ ವೇಳೆಗೆ ಅನಾರೋಗ್ಯದಿಂದ ಶರತ್ಬಾಬುವಿನ ತಂದೆ ತೀರಿಕೊಂಡ. ಅಲ್ಲಿಗೆ ಇಡೀ ಸಂಸಾರದ ಹೊಣೆ ಇವನ ಹೆಗಲೇರಿತು. ವಾಸಕ್ಕೆ ಮಾದಿಕಪ್ಪಂನ ಅದೇ ಕೊಳೆಗೇರಿಯಲ್ಲಿ ಮನೆಯಿತ್ತು. ಸಮಾಧಾನದ ಮಾತಾಡಲಿಕ್ಕೆ ಅಮ್ಮ ಇದ್ದಳು. ಆದರೆ, ಸಮಾಧಾನದಿಂದ ಸಾಲ ತೀರುತ್ತಾ? ದಿನೇ ದಿನೆ ಬೆಳೆಯುತ್ತ ಹೋದ ಸಾಲದ ಮೊತ್ತ ಮತ್ತು ಸುತ್ತಮುತ್ತಲಿನವರ ಅಪಹಾಸ್ಯದ ಮಾತುಗಳನ್ನು ಕೇಳಿ ಶರತ್ಬಾಬು ಕಂಗಾಲಾಗಿ ಹೋದ. ಈ ಮಧ್ಯೆಯೇ ಒಂದು ಹಾಸ್ಟೆಲ್ಗೆ ಊಟ ಪೂರೈಸುವ ಕಾಂಟ್ರ್ಯಾಕ್ಟ್ ಪಡೆಯಲು ಮುಂಬಯಿಗೆ ಹೊರಟು ನಿಂತರೆ- ಅಹಮದಾಬಾದ್ನಲ್ಲಿಯೇ ರೈಲು ಮಿಸ್ಸಾಯಿತು. ಆಗ ನಡುರಾತ್ರಿ. ವಾಪಸ್ ಮನೆಗೆ ಹೋಗಲು ಬಸ್ಸಿಲ್ಲ. ಆಟೊಗೆ ಆಗುವಷ್ಟು ದುಡ್ಡೂ ಜೇಬಲ್ಲಿಲ್ಲ. ಈತ ದಿಕ್ಕು ತೋಚದೆ ನಿಂತಿದ್ದಾಗಲೇ ಅಲ್ಲಿಗೆ ಬಂದ ರೈಲ್ವೆ ಪೊಲೀಸರು ಇವನ್ಯಾರೋ ಪೋಲಿ ಸುಬ್ಬಣ್ಣ ಅಂದುಕೊಂಡು ನಾಲ್ಕು ಒದ್ದು ಓಡಿಸಿದರು. ಈ ನೋವು, ನಿರಾಶೆ, ಅಪಮಾನಗಳ ಮಧ್ಯೆಯೂ ಆತ ಬದುಕಲ್ಲಿ ಭರವಸೆ ಕಳೆದುಕೊಳ್ಳಲಿಲ್ಲ. ಹಣ ಮಾಡಲು ಅಡ್ಡದಾರಿ ಹಿಡಿಯಲಿಲ್ಲ. ಬದಲಿಗೆ ತನಗೆ ತಾನೇ ಗೆದ್ದೇ ಗೆಲ್ಲುವೆ ಒಂದು ದಿನ, ಗೆಲ್ಲಲೇಬೇಕು ಒಳ್ಳೆತನ’ ಎಂದು ಹೇಳಿಕೊಂಡು ಮೌನವಾಗಿದ್ದ.
ಕಡೆಗೂ ಅವನ ಬದುಕಿಗೆ ಬಂಗಾರದ ದಿನ ಬಂದೇ ಬಂತು. ಅವತ್ತು ಮಾರ್ಚ್ ೫, ೨೦೦೭. ಗೋವಾದಲ್ಲಿ ಹೊಸದಾಗಿ ಶುರುವಾದ ಯೂನಿವರ್ಸಿಟಿ ಹಾಸ್ಟೆಲ್ನ ೧೫೦೦ ವಿದ್ಯಾರ್ಥಿಗಳಿಗೆ ಊಟ ಒದಗಿಸುವ ಕಾಂಟ್ರ್ಯಾಕ್ಟ್ ಶರತ್ಬಾಬುಗೆ ಸಿಕ್ಕಿತು. ಅಹಮದಾಬಾದ್ನ ಹೋಟೆಲುಗಳ ಉಸ್ತುವಾರಿಯನ್ನು ನಂಬಿಗಸ್ತನೊಬ್ಬನಿಗೆ ವಹಿಸಿಕೊಟ್ಟು ಈತ ಸೀದಾ ಗೋವೆಗೆ ಬಂದ. ಈ ಬದುಕಿನಲ್ಲಿ ಗೆಲ್ಲಲಿಕ್ಕೆ ಇದೇ ಕಡೆಯ ಅವಕಾಶ ಎಂದುಕೊಂಡೇ ಕೇಟರಿಂಗ್ ಕೆಲಸ ಆರಂಭಿಸಿದ. ತುಂಬ ಶ್ರದ್ಧೆ, ಉತ್ಸಾಹದಿಂದ ಒಂದಿಷ್ಟು ಖರ್ಚು ಹೆಚ್ಚಾಗಿ ಲಾಭ ಕಡಿಮೆ ಬಂದರೂ ಚಿಂತೆಯಿಲ್ಲ ಎಂದುಕೊಂಡು ಉಪಾಹಾರ ತಯಾರಿಗೆ ಮುಂದಾದ. ಒಂದೇ ವಾರದ ಅವಧಿಯಲ್ಲಿ ಶರತ್ಬಾಬುವಿನ ಹೆಸರು ಕ್ಯಾಂಪಸ್ನಲ್ಲಿ ಮನೆಮಾತಾಯಿತು. ಈಗ ತಯಾರಿಸುತ್ತಿದ್ದ ತಿಂಡಿಗಳ ಶುಚಿ-ರುಚಿಗೆ ಮನಸೋತ ಯೂನಿವರ್ಸಿಟಿಯ ಕುಲಪತಿಗಳು- `ಕಾಲೇಜಿನ ಎಲ್ಲ ಸಮಾರಂಭಗಳಿಗೂ ನೀನೇ ಊಟ, ತಿಂಡಿ, ಕಾಫಿ ಒದಗಿಸು’ ಅಂದರು.
ಪರಿಣಾಮ, ಹಾಸ್ಟೆಲ್ ವಿದ್ಯಾರ್ಥಿಗಳಿಗೆ ದಿನವೂ ಊಟ, ಯೂನಿವರ್ಸಿಟಿಗೆ ಕಾಫಿ ತಿಂಡಿ ಒದಗಿಸುವ ಕೆಲಸದಿಂದಲೇ ದಿನಕ್ಕೆ ಭರ್ತಿ ಒಂದು ಲಕ್ಷ ರೂಪಾಯಿ ಆದಾಯ ಶರತ್ಬಾಬುವಿನ ಕೈ ಸೇರತೊಡಗಿತು. ನೋಡ ನೋಡುತ್ತಲೇ ಅವನ ಹೋಟೆಲಿನಲ್ಲಿ ೧೦೦ ಜನ ಕೆಲಸಗಾರರು ಬಂದರು. ಆರು ತಿಂಗಳಲ್ಲಿ ನೌಕರರ ಸಂಖ್ಯೆ ದುಪ್ಪಟ್ಟಾಯಿತು. ಲಾಭವೂ ಕೈ ತುಂಬ ಬಂತು. ಪರಿಣಾಮ, ಎರಡು ವರ್ಷದಲ್ಲಿ ಮಾಡಿಕೊಂಡಿದ್ದ ಅಷ್ಟೂ ನಷ್ಟವನ್ನು ಈ ಶರತ್ಬಾಬು, ಕೇವಲ ಆರು ತಿಂಗಳಲ್ಲಿ ತೀರಿಸಿಬಿಟ್ಟ!
ಈಗ ಏನಾಗಿದೆ ಅಂದರೆ- ತಮಿಳ್ನಾಡು, ಗೋವಾ, ಬಾಂಬೆ, ಪೂನಾ, ಅಹಮದಾಬಾದ್ಗಳಲ್ಲಿ ಶರತ್ಬಾಬುವಿನ ಕೇಟರಿಂಗ್ ಸೆಂಟರ್ಗಳು ಆರಂಭವಾಗಿವೆ. ಎರಡು ತಿಂಗಳ ಹಿಂದಷ್ಟೇ ಆತ ಹೈದರಾಬಾದ್ನಲ್ಲೂ ಒಂದು ದೊಡ್ಡ ಹೋಟೆಲು ಆರಂಭಿಸಿದ್ದಾನೆ. ಅವನ ವಾರ್ಷಿಕ ಆದಾಯ ಈಗ ನಾಲ್ಕು ಕೋಟಿ ದಾಟಿದೆ. ತಮಿಳ್ನಾಡು ಸರಕಾರ ಅವನಿಗೆ `ಫುಡ್ ಕಿಂಗ್’ ಎಂಬ ಬಿರುದು ನೀಡಿ ಸನ್ಮಾನಿಸಿದೆ.
ಒಂದು ಸಂತೋಷವೆಂದರೆ, ಕೋಟ್ಯಾಧಿಪತಿಯಾದ ನಂತರವೂ ಶರತ್ಬಾಬು ಬದಲಾಗಿಲ್ಲ. ಶ್ರೀಮಂತಿಕೆ ಅವನ ತಲೆ ತಿರುಗಿಸಿಲ್ಲ. ತನ್ನ ಎಲ್ಲ ಹೋಟೆಲುಗಳಲ್ಲೂ ಆತ ಕಡು ಬಡವರಿಗೆ ನೌಕರಿ ಕೊಟ್ಟಿದ್ದಾನೆ. ಅವರಿಗೆ ಧಾರಾಳ ರಜೆ, ಕಾನೂನು ಬದ್ಧವಾದ ಎಲ್ಲ ಸವಲತ್ತು ಒದಗಿಸಿಕೊಟ್ಟಿದ್ದಾನೆ. ಸುಸ್ತಾದರೆ ರಜೆ ತಗೊಳ್ಳಿ. ಆದರೆ ಮೈಗಳ್ಳರಾಗಿ ಕೆಲಸಕ್ಕೆ ಬರಬೇಡಿ ಎಂದು ಜತೆಗಾರರಿಗೆ ನಿಷ್ಠುರವಾಗಿ ಹೇಳಿದ್ದಾನೆ. ಎಲ್ಲಕ್ಕಿಂತ ಹೆಚ್ಚಾಗಿ, ಕೋಟ್ಯಾಧಿಪತಿ ಅನ್ನಿಸಿಕೊಂಡ ನಂತರ ಕೂಡ, ಬೆಳಗಿನ ಜಾವ ೩ ಗಂಟೆಗೇ ಎದ್ದು ತಾನೂ ದುಡಿಮೆಗೆ ನಿಲ್ಲುತ್ತಿದ್ದಾನೆ….
****
ಅಲ್ರೀ, ಕೋಟಿ ಕೋಟಿ ದುಡ್ಡು ಕಾಲಡಿಗೆ ಬಂದು ಬಿದ್ದಿದೆ. ಈಗಾದ್ರೂ ದೊಡ್ಡದೊಂದು ಮನೆ ಕಟ್ಟಿಸೋದಿಲ್ವ? ಇನ್ನಾದ್ರೂ ರೆಸ್ಟ್ ತಗೋಬೇಕು ಅನ್ನಿಸ್ತಾ ಇಲ್ವ ಎಂದು ಪ್ರಶ್ನಿಸಿದರೆ ಅದೇ ನಿರ್ಮಲ ನಗೆಯೊಂದಿಗೆ ಶರತ್ಬಾಬು ಹೇಳುತ್ತಾನೆ: `ಅಮ್ಮನನ್ನು ಚೆನ್ನಾಗಿ ನೋಡ್ಕೋಬೇಕು. ಮೂರು ಹೊತ್ತೂ ಅವಳಿಗೆ ಒಳ್ಳೆಯ ಊಟ ಹಾಕಬೇಕು. ಪ್ರತಿ ಹಬ್ಬಕ್ಕೂ ಅವಳಿಗೆ ಒಂದೊಂದು ಹೊಸ ಸೀರೆ ತಂದುಕೊಡಬೇಕು. ಬೈ ಛಾನ್ಸ್ ಕಾಯಿಲೆ ಬಿದ್ದರೆ ಅಮ್ಮನಿಗೆ ಒಳ್ಳೆಯ ಚಿಕಿತ್ಸೆ ಕೊಡಿಸಬೇಕು. ಆಮೇಲೆ- ಅಮ್ಮನನ್ನು ಕಾರಿನಲ್ಲಿ ಕೂರಿಸ್ಕೊಂಡು ಹೋಗಬೇಕು ಅನ್ನೋದು ನನ್ನ ಹಿರಿಯಾಸೆಯಾಗಿತ್ತು. ಅಷ್ಟೂ ಆಸೆ ಈಡೇರಿದೆ. ಅಮ್ಮನ ಖುಷಿಗೆ ಅಂತಾನೇ ೩೫ ಲಕ್ಷ ರೂಪಾಯಿನ ಕಾರು ತಗೊಂಡಿದೀನಿ. ಅದರಲ್ಲಿ ಅವಳನ್ನು ಸುತ್ತಾಡಿಸಿದೀನಿ. ಪ್ರತಿ ಹಬ್ಬದಲ್ಲೂ ಅವಳಿಗೆ ಹೊಸಬಟ್ಟೆ ಕೊಡಿಸಿದ್ದೀನಿ. ಬೇರೆ ಏರಿಯಾದಲ್ಲಿ ಮನೆ ಕಟ್ಟಿಸೋಣ್ವಾ ಅಂದರೆ- `ಬೇಡಪ್ಪಾ. ಅದೆಲ್ಲ ಕೋಟ್ಯಂತರದ ವ್ಯವಹಾರ. ಈಗ ಇರುವ ಮನೆಯಲ್ಲೇ ನಮಗೆ ನೆಮ್ಮದಿ ಇದೆ. ಹೊಸ ಮನೆ ಖರೀದಿಗೆ ಬಳಸುವ ದುಡ್ಡನ್ನೇ ಇನ್ನೊಂದು ಪುಟ್ಟ ಹೋಟೆಲ್ ವ್ಯವಹಾರದಲ್ಲಿ ತೊಡಗಿಸು. ಹಾಗೆ ಮಾಡಿದ್ರೆ ಒಂದಷ್ಟು ಬಡವರಿಗೆ ಕೆಲಸ ಕೊಟ್ಟಂತಾಗುತ್ತೆ. ಒಂದಿಷ್ಟು ಕುಟುಂಬಕ್ಕೆ ಆಧಾರವಾದಂತಾಗುತ್ತೆ’ ಅಂದಿದ್ದಾಳೆ ಅಮ್ಮ. ಅವಳು ಹೇಳಿದಂತೆಯೇ ಕೇಳಬೇಕು. ಬದುಕಿರುವವರೆಗೂ ಬಡವರಿಗೆ ನೆರವಾಗಬೇಕು ಅನ್ನೋದೇ ನನ್ನ ಆಸೆ…’
ಕೋಟ್ಯಾಧಿಪತಿಯಾದ ನಂತರವೂ ಕೊಳೆಗೇರಿಯಲ್ಲೇ ಉಳಿದಿರುವ ಶರತ್ಬಾಬು ಬದುಕಿನ ಕಥೆ ಇವತ್ತು ಮನೆಮನೆಯ ಮಾತಾಗಿದೆ. ಆತನ ಯಶೋಗಾಥೆಯನ್ನು ಅವನಿಂದಲೇ ಕೇಳಲು ಅದೆಷ್ಟೋ ಯುನಿವರ್ಸಿಟಿಗಳು ದುಂಬಾಲು ಬಿದ್ದಿವೆ. ಶರತ್ ಬಾಬು ಕೂಡ ತನ್ನ ಎಲ್ಲ ಬ್ಯುಸಿ ಕೆಲಸದ ಮಧ್ಯೆ ಕರೆದಲ್ಲಿಗೆಲ್ಲ ಹೋಗಿ ಬಂದಿದ್ದಾನೆ. ಹಾಗೆ ಹೋದಲ್ಲೆಲ್ಲ – ತನ್ನ ಸಂಕಟದ, ನೋವಿನ ಸಾಹಸದ ಕತೆಯನ್ನು ಹೇಳಿಕೊಂಡು ಹಗುರಾಗಿದ್ದಾನೆ. ನಾನು ಹತ್ತನೇ ತರಗತಿಯ ತನಕ ಸೀಮೆಎಣ್ಣೆ ದೀಪದ ಬೆಳಕಲ್ಲೇ ಓದಿದವನು. ಶ್ರೀಮಂತರು ಮಾತ್ರ ಕೋಟ್ಯಾಧಿಪತಿಗಳಾಗ್ತಾರೆ ಅನ್ನೋ ವಾದ ಸುಳ್ಳು. ಗೆಲ್ಲಬೇಕು ಅಂತ ಆಸೆ ಪಡುವ ಪ್ರತಿಯೊಬ್ಬರೂ ಕೋಟಿ ವೀರರಾಗಬಹುದು. ಅದಕ್ಕೆ ನಾನೇ ಸಾಕ್ಷಿ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾನೆ. ಭಾರತ ಪ್ರಕಾಶಿಸುತ್ತಿದೆ, ಭಾರತ ಅಭಿವೃದ್ಧಿ ಹೊಂದುತ್ತಿದೆ ಎಂಬ ಮಾತು ನಿಜವಾಗಬೇಕಾದರೆ- ಎಲ್ಲ ಬಡವರಿಗೂ ಕೆಲಸ ಕೊಡಿ ಎಂದು ಸರಕಾರಗಳನ್ನು, ಸಿರಿವಂತರನ್ನು ಒತ್ತಾಯಿಸಿದ್ದಾನೆ.
`ಮೇರಾ ಭಾರತ್ ಮಹಾನ್’ ಎಂದು ಖುಷಿಯಿಂದ ಚೀರಬೇಕು ಅನ್ನಿಸುವುದು ಇಂಥ ಸಾಧಕರ ಕಥೆಯನ್ನು ಕೇಳಿದಾಗಲೇ. ಅಲ್ಲವೆ?

Advertisements

5 Comments »

 1. 1
  Venkateshulu Says:

  Great Story, Great Writting, Great Kanneeru,Great ummassu, Chala, Jeevandalli sotavarige dhairrya thumbuva kathe totally u r Great MANIKANT

 2. 3
  ಮಣಿಕಾಂತ್ Says:

  Thanku Venkatesh Ji..:)

 3. 4
  ಮಣಿಕಾಂತ್ Says:

  Rajayogi Danyavaadagalu

 4. 5
  kattimani 45E Says:

  ಪ್ರಿಯ ಮಣಿಕಾಂತ್ ಸರ್,

  ಶರತ್ ಕುರಿತ ನಿಮ್ಮ ಬರಹ ಇಶ್ಟವಾಯಿತು, ನಮ್ಮಂತಮದ್ಯಮವರ್ಗದವರಿಗೆ ಬಡತನದಿಂದ ಫಿನಿಕ್ಸ್ ನಂತೆ ಮೇಲೆದ್ದವರ ಕಥೆ ಮನ ತಟ್ಟುತ್ತದೆ, ಅಂಬಾನಿಮಕ್ಕಳಾಗಲಿ, ಅಭಿಶೆಕ್ ಬಚ್ಚನ್, ಪುನಿತ್,ಮಲ್ಯ,ಇವರಿಗಿಂತ ಶಾರುಖ್ ,ಬೆಳಗೆರೆ, ಸಚಿನ್, ಉಪೇಂದ್ರ[ಸದ್ಯದ ಸ್ಥಿತಿಯಲ್ಲ, ಆರಂಭದ ಉಪೇಂದ್ರ ] ಆಪ್ತರೆನಿಸುತ್ತಾರೆ ,ಇನ್ನೂ. ಅಮ್ಮನ ಕುರಿತು ನಿಮ್ಮದು ಯಾವಾಗಲು ತಣ್ಣನೆಯ ಮನಸು,


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: