ನಮ್ಮೂರ ಮಂದಾರ ಹೂವೇ….

ಚಿತ್ರ: ಅಲೆಮನೆ, ಗೀತರಚನೆ: ದೊಡ್ಡರಂಗೇಗೌಡ
ಸಂಗೀತ: ಸಿ. ಅಶ್ವತ್ಥ್-ವೈದಿ. ಗಾಯನ: ಎಸ್.ಪಿ. ಬಾಲಸುಬ್ರಹ್ಮಣ್ಯಂ.
ನಮ್ಮೂರ ಮಂದಾರ ಹೂವೇ
ನನ್ನೊಲುಮೆ ಬಾಂದಳದ ಚೆಲುವೇ
ಬಳಿ ಬಂದು ಬಾಳನ್ನು ಬೆಳಗು-ನನ್ನ
ಬರಿದಾದ ಮನದಲ್ಲಿ ಮಿನುಗು!

ಕಣ್ಣಲ್ಲೆ ಕರೆದು ಹೊಂಗನಸ ತೆರೆದು
ಸಂಗಾತಿ-ಸಂಪ್ರೀತಿ-ಸೆಳೆದೆ
ಅನುರಾಗ ಹೊಳೆದು ಅನುಬಂಧ ಬೆಳೆದು
ಸಮ್ಮೋಹ-ಸಂಬಂಧ-ಮಿಡಿದೆ ||೧||

ಒಡನಾಟ ಮೆರೆದು, ಒಡಲಾಳ ಮೊರೆದು
ಒಡನಾಡಿ-ಬಾಂಧವ್ಯ- ಕಂಡೆ
ಋತುಮಾನ ಮೀರಿ ಹೊಸಗಾನ ತೋರಿ
ಹಿತವಾದ ಮಾಧುರ್ಯ ಮಿಂದೆ
ತೀರದಾ-ಮೋಹದಾ-ಇನಿದಾದ ಆನಂದ ತಂದೆ ||೨||

ಈಗಿನ ಮಾತು ಬಿಡಿ. ೮೦ರ ದಶಕದ ಮಧ್ಯಭಾಗದವರೆಗೂ ಚಿತ್ರರಂಗದ ಎಲ್ಲ ಚಟುವಟಿಕೆಗಳೂ ನಡೆಯುತ್ತಿದ್ದುದು ಚೆನ್ನೈನಲ್ಲಿ. ಹಾಡು-ಸಂಭಾಷಣೆ, ಚಿತ್ರಕಥೆ ರಚನೆಯ ಕೆಲಸ ಕೂಡ ಆಗ ಚೆನ್ನೈನ ಹೋಟೆಲುಗಳಲ್ಲಿಯೇ ನಡೆಯುತ್ತಿತ್ತು. ಆ ದಿನಗಳಲ್ಲಿ ಬ್ಯುಸಿ ಗೀತರಚನೆಕಾರರೆಂದೇ ಹೆಸರಾಗಿದ್ದ ಚಿ ಉದಯಶಂಕರ್, ಆರ್.ಎನ್. ಜಯಗೋಪಾಲ್, ವಿಜಯ ನಾರಸಿಂಹ ಕೂಡ ಚೆನ್ನೈನಲ್ಲೇ ವಾಸವಾಗಿದ್ದರಿಂದ ಅದೊಂದು ಪ್ರಯಾಣದ ಆಯಾಸದ ಸಮಸ್ಯೆಯ ಕೆಲಸ ಎಂದು ಯಾರೂ ಭಾವಿಸಿರಲಿಲ್ಲ.
ಇಂಥ ಸಂದರ್ಭದಲ್ಲಿಯೇ `ಪರಸಂಗದ ಗೆಂಡೆತಿಮ್ಮ’ ತೆರೆಗೆ ಬಂತು. ಆ ಚಿತ್ರದ ಸೂಪರ್ಡ್ಯೂಪರ್ ಹಾಡುಗಳ ಮೂಲಕ ಹೆಸರಾಂತ ಗೀತರಚನಕಾರರ ಪಟ್ಟಿಗೆ ಕವಿ ದೊಡ್ಡರಂಗೇಗೌಡ ಅವರ ಹೆಸರೂ ಸೇರಿಕೊಂಡಿತು. ಚಿತ್ರರಂಗದ ಮಂದಿಯಂತೂ `ಗ್ರಾಮೀಣ ಹಿನ್ನೆಲೆಯ ಸಿನಿಮಾ ಮಾಡುವುದಾದರೆ, ಅದಕ್ಕೆ ದೊಡ್ಡರಂಗೇಗೌಡರಿಂದಲೇ ಹಾಡು ಬರೆಸಬೇಕು. ಹಳ್ಳಿಗಾಡಿನ ಪರಿಸರಕ್ಕೆ ಅಚ್ಚುಕಟ್ಟಾಗಿ ಹೊಂದಿಕೊಳ್ಳುವ ಗೀತೆರಚನೆಯಲ್ಲಿ ಗೌಡರಿಗೆ ಗೌಡರೇ ಸಾಟಿ’ ಎನ್ನುತ್ತಿದ್ದರು. ಆಗ ಬೆಂಗಳೂರಿನಲ್ಲಿ ಕಾಲೇಜು ಅಧ್ಯಾಪಕರಾಗಿದ್ದ ದೊಡ್ಡರಂಗೇಗೌಡರು ಯಾವುದಾದರೂ ಚಿತ್ರಕ್ಕೆ ಹಾಡು ಬರೆಯಲು ಕರೆಬಂದರೆ, ಒಂದೆರಡು ದಿನ ರಜೆ ಹಾಕಿ ಚೆನ್ನೈನ ಬಸ್ ಹತ್ತಬೇಕಿತ್ತು.
ಹೀಗಿರುವಾಗಲೇ ಸುರೇಶ್ ಹೆಬ್ಳೀಕರ್ ನಿರ್ದೇಶನದ, ಹಬ್ಳೀಕರ್-ರೂಪಾ ಚಕ್ರವರ್ತಿ ಜೋಡಿಯ `ಅಲೆಮನೆ’ ಚಿತ್ರಕ್ಕೆ ಹಾಡು ಬರೆಯಲು ಗೌಡರಿಗೆ ಕರೆ ಬಂತು. ಈ ಆಹ್ವಾನವನ್ನು ಕೈಲಿ ಹಿಡಿದುಕೊಂಡೇ ಬಂದ ಅಶ್ವತ್ಥ್- `ನೋಡಿ ಮೇಸ್ಟ್ರೆ, `ಆಲೆಮನೆ’ಗೆ ನಾನು-ವೈದಿ ಸಂಗೀತದ ಹೊಣೆ ಹೊತ್ತಿದೀವಿ. ಹೆಸರೇ ಸೂಚಿಸುವ ಹಾಗೆ ಅದು ಗ್ರಾಮೀಣ ಕಥಾ ಹಂದರದ ಸಿನಿಮಾ. ನೀವು ಅದಕ್ಕೆ ಹಾಡು ಬರೆಯಬೇಕು. ಆ ಹಾಡುಗಳು ಥೇಟ್ ಭಾವಗೀತೆಯ ಥರಾ ಇರಬೇಕು! ಸಿನಿಮಾದ ಕಥೆಯನ್ನು ಪಕ್ಕಕ್ಕಿಟ್ಟು ನೋಡಿದರೂ ಹಾಡುಗಳು ವಿಪರೀತ ನೆನಪಾಗಬೇಕು. ಅವುಗಳಲ್ಲಿ ಮೆಲೋಡಿ ಇರಬೇಕು. ಅವು ಕೇಳುಗರನ್ನು ಬಿಟ್ಟೂ ಬಿಡದೆ ಕಾಡಬೇಕು. ಈ ಹಾಡುಗಳ ಮೂಲಕ ನಾವು ಪ್ರೇಕ್ಷಕರನ್ನು ಬೇರೆಯದೇ ಭಾವಲೋಕಕ್ಕೆ ಕರೆದೊಯ್ಯಬೇಕು. ಅಂಥ ಹಾಡುಗಳನ್ನು ಬರೀರಿ. ಮದ್ರಾಸಿನ ಪಾಮ್ ಗ್ರೂಂ ಹೋಟೆಲಿನಲ್ಲಿ ನಿಮಗೆ ರೂಂ ಬುಕ್ ಮಾಡಿಸ್ತೀವಿ ಅಂದರು.
`ಒಂದು ಸನ್ನಿವೇಶ. ಅದರಲ್ಲಿ ನಾಯಕ ತನ್ನ ಪ್ರಿಯತಮೆಯನ್ನು ನೆನಪು ಮಾಡಿಕೊಳ್ಳುತ್ತಾನೆ. ಆಕೆಯ ಚೆಲುವು, ಪ್ರೀತಿ ಆರಾಧನೆಯನ್ನು ವರ್ಣಿಸುತ್ತಾನೆ. ಆಕೆಯೊಂದಿಗೆ ಕಳೆದ ಸುಂದರ ಕ್ಷಣಗಳ ನೆನಪು ಮಾಡಿಕೊಂಡು; ಆಕೆ ತನ್ನ ಬದುಕಿಗೆ ಬಂದ ಮೇಲೆ ಉಂಟಾದ ಬದಲಾವಣೆಗಳನ್ನು ಮೆಲುಕು ಹಾಕುತ್ತಾ ಖುಷಿಯಾಗುತ್ತಾನೆ. ಭಾವಪರವಶನಾಗುತ್ತಾನೆ. ಈ ಸನ್ನಿವೇಶಕ್ಕೆ ಹೊಂದಿಕೆಯಾಗುವಂತಹ ಹಾಡು ಬರೆಯಬೇಕು’ ಎಂದಿದ್ದರು ಅಶ್ವತ್ಥ್.
`ಸರಿ’ ಎಂದ ದೊಡ್ಡರಂಗೇಗೌಡರು, ಶನಿವಾರ ಕಾಲೇಜು ಮುಗಿಸಿಕೊಂಡು ಮದ್ರಾಸಿನ ಬಸ್ಸು ಹತ್ತಿದರು. ಭಾನುವಾರ ಇಡೀ ದಿನ ಫ್ರೀ ಇರುತ್ತಲ್ಲ? ಸಂಜೆ ವೇಳೆಗೆ ಹಾಡು ಬರೆದು ಅವತ್ತೇ ರಾತ್ರಿ ಬಸ್ ಹಿಡಿದು ಬೆಂಗಳೂರು ತಲುಪುವುದು. ಸೋಮವಾರ ಎಂದಿನಂತೆ ಕಾಲೇಜಿಗೆ ಹೋಗುವುದು…. ಇದು ಗೌಡರ ಲೆಕ್ಕಾಚಾರವಾಗಿತ್ತು.
ಆದರೆ, ಆ ಭಾನುವಾರ ಬೆಳಗಿನಿಂದ ಮದ್ರಾಸಿನ ಪಾನ್ಗ್ರೂಂ ಹೋಟೆಲಿನಲ್ಲಿ ಕುಳಿತು ಅದೇನೇ ತಿಣುಕಿದರೂ ಗೌಡರಿಗೆ ಒಂದು ಸಾಲೂ ಹೊಳೆಯಲಿಲ್ಲ. ಈ ಫಜೀತಿಯಲ್ಲೇ ಮಧ್ಯಾಹ್ನ ಮುಗಿದೇಹೋಯಿತು. ಓಹ್, ಟೈಮಾಗ್ತಾಯಿದೆ ಅಂದುಕೊಂಡ ಗೌಡರು ಮತ್ತೆ ಆ ಸನ್ನಿವೇಶವನ್ನು ನೆನಪಿಸಿಕೊಂಡರು: ನಾಯಕ ತನ್ನ ಪ್ರಿಯತಮೆಯನ್ನು ನೆನಪಿಸಿಕೊಳ್ತಾನೆ. ಆಕೆಯ ಚೆಲುವಿನಿಂದ, ಲಜ್ಜೆಯಿಂದ, ಸರಸದಿಂದ, ಪಿಸುಮಾತಿನಿಂದ, ಕಣ್ಸನ್ನೆಯಿಂದ ತನ್ನಲ್ಲಿ ಉಂಟಾದ ಭಾವನೆಗಳನ್ನು ಹಾಡಾಗಿ ಹರಿಯಬಿಡುತ್ತಾನೆ…. ಹೀಗೆಂದುಕೊಂಡ ಕೂಡಲೇ ದೊಡ್ಡರಂಗೇಗೌಡರಿಗೆ ತಮ್ಮ ಬಾಳಸಂಗಾತಿ ರಾಜೇಶ್ವರಿಯವರ ನೆನಪಾಗಿ, ಹಾಡಿನ ಸಾಲೊಂದು ಫಳ್ಳನೆ ಮಿಂಚಿತಂತೆ. ಈ ವಿಷಯವನ್ನು ಗೌಡರೇ ಸಂಭ್ರಮದಿಂದ ವರ್ಣಿಸುವುದು ಹೀಗೆ:
`ನಮ್ಮದು ಪ್ರೇಮವಿವಾಹ. ಅಂತರಕಾಲೇಜು ಚರ್ಚಾಸ್ಪರ್ಧೆಯಲ್ಲಿ ಪರಿಚಯವಾದವರು ರಾಜೇಶ್ವರಿ. ಆಕೆ ನನ್ನ ಕವಿತೆಗಳನ್ನು ಮೆಚ್ಚಿಕೊಂಡಿದ್ದರು. ಮುಂದೆ ನನ್ನನ್ನೂ ಮೆಚ್ಚಿಕೊಂಡು ಪ್ರೇಮ ಪತ್ರ ಬರೆದೇಬಿಟ್ಟರು. ಮೊದಲು ಪ್ರೊಪೋಸ್ ಮಾಡಿದ್ದು ಅವರು. ಆದರೆ, ಬಾಯಿಬಿಟ್ಟು-`ಐ ಲವ್ ಯೂ’ ಅಂದವನು ಮಾತ್ರ ನಾನು. ಉಳಿದೆಲ್ಲರ ಪ್ರೇಮಕಥಾನಕದ ಥರಾನೇ ನಮ್ಮ ಪ್ರೇಮಪರ್ವ ಕೂಡ ಆಸೆ, ಕಾತುರ, ಮೋಹದಿಂದ ತುಂಬಿಹೋಗಿತ್ತು. ಇಬ್ಬರೂ ಪ್ರೇಮಪತ್ರ ಬರೆದುಕೊಳ್ತಿದ್ವಿ. ಅಷ್ಟೇ ಅಲ್ಲ, ರಾಜೇಶ್ವರಿಯ ಮೇಲೆ ನಾನು, ನನ್ನ ಮೇಲೆ ಆಕೆ ಪದ್ಯ ಬರೆದು ಪರಸ್ಪರ ವಿನಿಮಯ ಮಾಡಿಕೊಂಡಿದ್ದೆವು…. ಮುಂದೆ ೧೯೭೧ರಲ್ಲಿ ನಮ್ಮ ಮದುವೆಯಾಯಿತು.
`ಆಲೆಮನೆ’ಚಿತ್ರಕ್ಕೆ ನಾಯಕನ ಕನಸಿನ ಭಾವಲಹರಿಗೆ ಹೊಂದುವಂಥ ಹಾಡು ಬರೆಯಬೇಕು ಅಂದಾಗ ಪ್ರೇಮದ ದಿನಗಳಲ್ಲಿ ರಾಜೇಶ್ವರಿಯೊಂದಿಗೆ ಕಳೆದ ರೋಮಾಂಚಕ ಕ್ಷಣಗಳನ್ನು ಒಮ್ಮೆ ನೆನಪು ಮಾಡಿಕೊಂಡೆ. ಆಗಲೇ `ನಮ್ಮೂರ ಮಂದಾರ ಹೂವೆ’ ಎಂಬ ಸಾಲು ಛಕ್ಕನೆ ಹೊಳೆಯಿತು. ಮುಂದೆ ನಾಯಕಿಯ ಚೆಲುವನ್ನು, ಮೋಹವನ್ನು ವರ್ಣಿಸುವ ನೆಪದಲ್ಲಿ ನನ್ನ ಬದುಕಿನ ನಾಯಕಿಯನ್ನೇ ನೆನಪು ಮಾಡಿಕೊಂಡೆ. ಮದುವೆಯಾದ ಹೊಸತು ನೋಡಿ, ಅವಳ ಪ್ರೇಮದ ನಡೆ-ನುಡಿ ನನ್ನನ್ನು ಜ್ವರದಂತೆ ಕಾಡತೊಡಗಿತು. ಆ ಮೋಹದಲ್ಲಿ ತೇಲುತ್ತಲೇ- ನಮ್ಮ ಪ್ರೀತಿ, ಮಧುರ ಪ್ರೇಮ ನಮ್ಮ ನಂತರವೂ ನೆನಪಲ್ಲಿರಲಿ ಎಂದು ಧ್ಯಾನಿಸುತ್ತಾ ಒಂದೇ ಸಿಟ್ಟಿಂಗ್ನಲ್ಲಿ ಹಾಡು ಬರೆದು ಮುಗಿಸಿಬಿಟ್ಟೆ…..
… ಆ ದಿನಗಳಲ್ಲಿ ಎಸ್ಪಿ ಬಾಲಸುಬ್ರಹ್ಮಣ್ಯಂ ತುಂಬ ಬೇಡಿಕೆಯಲ್ಲಿದ್ದ ಗಾಯಕ. ಆತ ದಿನವೊಂದಕ್ಕೆ ೧೫-೨೦ ಹಾಡು ಹಾಡುತ್ತಿದ್ದರು. ನಮ್ಮೂರ ಮಂದಾರ ಹೂವೆ…. `ಯ’ `ಋತುಮಾನ ಮೀರಿ…’ `ಒಡನಾಟ ಮೆರೆದು…’ ಎಂಬಂಥ ಪದಗಳು ಅವರಿಗೆ ತಕ್ಷಣ ಅರ್ಥವಾಗಲಿಲ್ಲವಂತೆ. ತಕ್ಷಣ ಬಳಿ ಬಂದು-` ಸಾರ್, ಈ ಪದಗಳ ಅರ್ಥ ಹೇಳಿ ಅಂದರು ಎಸ್ಪಿ. ವಿವರಿಸಿದೆ. ನಂತರ ಆ ಹಾಡನ್ನೇ ಮತ್ತೆ ಮತ್ತೆ ಹಾಡಿ ಖುಷಿಪಟ್ಟರು. ಅವತ್ತೇ ರಾತ್ರಿ ಹಾಡನ್ನು ಅಶ್ವತ್ಥ್ಗೂ ಫೋನ್ ಮಾಡಿ ಇಡೀ ಹಾಡನ್ನು ಎರಡೆರಸು ಬಾರಿ ಹಾಡಿ ತೋರಿಸಿ-`ನೋಡ್ತೀರಿ, ಈ ಹಾಡು ಸೂಪರ್ ಹಿಟ್ ಆಗುತ್ತೆ. ನನಗಂತೂ ವಿಪರೀತ ಇಷ್ಟವಾಗಿದೆ’ ಎಂದು ಮೊದಲೇ ಭವಿಷ್ಯ ಹೇಳಿದ್ದರು….’
ಇಷ್ಟು ಹೇಳಿ ಮೌನವಾಗುತ್ತಾರೆ ದೊಡ್ಡರಂಗೇಗೌಡ. ಎಸ್ಪಿ ಮೂವತ್ತೈದು ವರ್ಷಗಳ ಹಿಂದೆಯೇ ಹೇಳಿದ್ದ ಭವಿಷ್ಯ ನಿಜವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿ-ಎಲ ಎಲಾ, ನೀವೂ ಈ ಹಾಡನ್ನು ಹಾಡುತ್ತಿದ್ದೀರಿ!

Advertisements

2 Comments »

 1. 1

  ಈ ಹಾಡು ನೀವು ಹೇಳೋ ಹಾಗೆ ಮೂವತ್ತೈದು ವರ್ಷ ಆಗಿಲ್ಲ ರೀ..ಎಲ್ಲೋ ನಿಮ್ಮ ಲೆಕ್ಕ ತಪ್ಪಿದೆ ಅನ್ಸತ್ತೆ. ಪರಸಂಗದ ಗೆಂಡೆ ತಿಮ್ಮ ಬಂದು ಹೆಚ್ಚು ಅಂದ್ರೆ ಮೂವತ್ತು ವರ್ಷ ಆಗಿರಬಹುದೇನೋ.

  ಹಾಡು ಚೆನ್ನಾಗಿದೆ ಅನ್ನೋದರ ಬಗ್ಗೆ ಎರಡು ಮಾತಿಲ್ಲ.

 2. 2

  IS THIS SONG COMPLETE I DOUBT ABOUT

  VERY GOOD KANNADA SONG

  THANKS


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: