ನವಿಲುಗರಿಯಲ್ಲಿ ಕಣ್ಣಿನ ಚಿತ್ರ ಬಂದದ್ದೇಕೆ ಗೊತ್ತ?

ನವಿಲಿನ ಸೌಂದರ್ಯಕ್ಕೆ ಮರುಳಾಗದವರಿಲ್ಲ. ಅದರ ಚೆಲುವನ್ನು ವರ್ಣಿಸಿ ಕವಿಗಳು ಕವಿತೆ ಬರೆದಿದ್ದಾರೆ. ನವಿಲುಗರಿಯನ್ನು ಕಂಡಾಕ್ಷಣ ಮಕ್ಕಳು ಅಳು ನಿಲ್ಲಿಸುತ್ತಾರೆ. ಬಾಯ್ಫ್ರೆಂಡ್ ಕೊಟ್ಟ ನವಿಲುಗರಿಯನ್ನು ಅವನು ಕೈ ತಪ್ಪಿ ಹೋದ ನಂತರವೂ ಹುಡುಗಿಯರು ಜತೆಗಿಟ್ಟುಕೊಳ್ಳುತ್ತಾರೆ; ಅವನ ನೆನಪಿಗಾಗಿ ಮತ್ತು ನವಿಲುಗರಿಯ ಮೋಹಕ್ಕೆ ಮರುಳಾಗಿ… ಬೆರಗಾಗಿ…
ಅಲ್ಲ, ನವಿಲುಗರಿಯ ಮೇಲೆ ಕಣ್ಣುಗಳ ಚಿತ್ರವಿದೆಯಲ್ಲ; ಅದು ಬಂದುದಾದರೂ ಹೇಗೆ? ಇದು ಹಲವರ ಪ್ರಶ್ನೆ. ಈ ಪ್ರಶ್ನೆಗೆ ಉತ್ತರವಾಗುವಂಥ ಒಂದು ಸುಂದರ ಜಾನಪದ ಕಥೆ ಇಲ್ಲಿದೆ.
ನೂರಾರು ವರ್ಷಗಳ ಹಿಂದಿನ ಮಾತು. ಆಗ ಕೂಡ ನವಿಲು ಸೌಂದರ್ಯಕ್ಕೆ, ಒಯ್ಯಾರಕ್ಕೆ ಹೆಸರಾಗಿತ್ತು. ಆಗಲೂ ನವಿಲುಗರಿಗಳು ನಯವಾಗಿಯೂ, ಬಣ್ಣ ಬಣ್ಣದ್ದಾಗಿಯೂ ಕಣ್ಣು ಕುಕ್ಕುವಷ್ಟು ಹೊಳಪಾಗಿಯೂ ಇದ್ದವು. ಆದರೆ ಆಗ ಅಲ್ಲಿ ಕಣ್ಣಿನ ಚಿತ್ರ ಇರಲಿಲ್ಲ. ಚೆಂದದ ಗರಿಗಳನ್ನು ಹೊಂದಿದ್ದೇನೆ ಎಂಬ ಕಾರಣದಿಂದಲೇ ನವಿಲಿಗೆ ವಿಪರೀತ ಜಂಭವಿತ್ತು. ಅದು ಎಲ್ಲರ ಮುಂದೆಯೂ ತನ್ನನ್ನು ತಾನೇ ಹೊಗಳಿಕೊಂಡು ಮರೆಯುತ್ತಿತ್ತು.
ಹೀಗಿರಲೊಮ್ಮೆ ಸೂರ್ಯದೇವನ ಮಗಳು ಆಕಾಶದಿಂದ ಈ ಮೋಹಕ ನವಿಲಿನ ನರ್ತನವನ್ನು ನೋಡಿದಳು. ಮೊದಲ ನೋಟದಲ್ಲೇ ಅವಳಿಗೆ ನವಿಲಿನ ಮೇಲೆ ಮೋಹವುಂಟಾಯಿತು. ಅದನ್ನು ತಂದೆಗೆ ಹೇಳಿಕೊಂಡು `ಅದನ್ನು ಆಕಾಶಕ್ಕೆ ಕರೆಸು. ಅದರೊಂದಿಗೆ ಮದುವೆಯ ಮಾತುಕತೆ ನಡೆಸು’ ಎಂದು ದುಂಬಾಲು ಬಿದ್ದಳು.
`ಬೇಡ ಮಗಳೇ. ನೀನು ಅದರ ಬಹಿರಂಗ ಸೌಂದರ್ಯಕ್ಕೆ ಮರುಳಾಗಿದ್ದೀ. ಆದರೆ ಅಂತರಂಗ ನಿನಗೆ ಗೊತ್ತಿಲ್ಲ. ಅದಕ್ಕೆ ಅಹಂಕಾರ ಜಾಸ್ತಿ. ಒಂದು ವೇಳೆ ಅದರೊಂದಿಗೆ ಮದುವೆಯಾದರೆ ನೀನು ಕಣ್ಣೀರಿನಲ್ಲೇ ಕೈ ತೊಳೆಯುತ್ತಾ ಬದುಕಬೇಕಾಗುತ್ತೆ’ ಎಂದು ಸೂರ್ಯದೇವ ಬುದ್ಧಿ ಮಾತು ಹೇಳಿದ.
ಆದರೆ, ಹುಚ್ಚು ಪ್ರೀತಿಯ ಮೋಹದಲ್ಲಿ ಮುಳುಗಿಹೋಗಿದ್ದ ಸೂರ್ಯಪುತ್ರಿ ಇದೇನನ್ನೂ ಕೇಳಲಿಲ್ಲ. ನವಿಲನ್ನು ಕರೆಸಲೇಬೇಕೆಂದು ಹಠ ಹಿಡಿದ ಆಕೆ ಊಟ-ತಿಂಡಿ ಬಿಟ್ಟು ಉಪವಾಸ ಕೂತಳು.
ಮಗಳ ಬೇಡಿಕೆಗೆ ಸೂರ್ಯ ಕಡೆಗೂ ಮಣಿದ. ಆ ಪಕ್ಷಿಯನ್ನು ಕರೆತರಲು ಒಂದು ರಥದಲ್ಲಿ ದೇವದೂತರನ್ನು ಕಳಿಸಿದ. ಅವರು ನವಿಲಿನ ಬಳಿ ಬಂದು ವಜ್ರ ವೈಢೂರ್ಯದ ಕಾಣಿಕೆ ಸಲ್ಲಿಸಿ- `ನಾವು ಸೂರ್ಯದೇವನ ದೂತರು. ಆತ ತನ್ನ ಸುಂದರಿ ಮಗಳನ್ನು ನಿಮಗೆ ಕೊಟ್ಟು ಮದುವೆ ಮಾಡಲು ಯೋಚಿಸಿದ್ದಾನೆ. ದಯವಿಟ್ಟು ಬನ್ನಿ’ ಎಂದು ವಿನಂತಿಸಿದರು.
ಇದು ನವಿಲಿನ ಅಹಮಿಕೆಯನ್ನು ಇನ್ನಷ್ಟು ಹೆಚ್ಚಿಸಿತು. ಅದು ಗರ್ವದಿಂದ ಮೆರೆಯುತ್ತಲೇ ದೇವಲೋಕಕ್ಕೆ ಹೋಯಿತು. ಅಳಿಯನಾಗಲಿರುವವನನ್ನು ಸ್ವಾಗತಿಸಲು ಸೂರ್ಯನ ಹೆಂಡತಿಯೇ ಬಂದಳು. ಈ ನವಿಲು ಅವಳನ್ನೂ ಅವಮಾನಿಸಿತು. ಇದರಿಂದ ಕ್ರುದ್ಧನಾದ ಸೂರ್ಯ- `ಎಲೈ ಧೂರ್ತ ಪಕ್ಷಿಯೆ, ಮಗಳ ಮುಖ ನೋಡುತ್ತ ನಿನ್ನ ಅಹಂಕಾರವನ್ನು ಇಲ್ಲಿಯವರೆಗೂ ಸಹಿಸಿಕೊಂಡೆ. ಇನ್ನು ಸಾಧ್ಯವಿಲ್ಲ. ನನ್ನ ಮಗಳನ್ನು ನಿನಗೆ ಕೊಡಲಾರೆ. ತೊಲಗು ಇಲ್ಲಿಂದ’ ಎಂದು ಅದನ್ನು ಭೂಲೋಕಕ್ಕೆ ತಳ್ಳಿಸಿದ.
***
ನಂತರ ತನ್ನ ಪ್ರಿಯತಮನ ಅಗಲಿಕೆಯನ್ನು ತಾಳಲಾರದ ಸೂರ್ಯನ ಪುತ್ರಿ ಆಕಾಶದಿಂದ ಕಂಬನಿ ಸುರಿಸಿದಳಂತೆ. ಆ ವೇಳೆಗೆ ತನ್ನ ತಪ್ಪು ಹಾಗೂ ಸೂರ್ಯಪುತ್ರಿಯ ಪ್ರೇಮದ ಬಗ್ಗೆ ತಿಳಿದುಕೊಂಡಿದ್ದ ನವಿಲು, ಆ ಕಂಬನಿಯ ಹನಿಗಳೆಲ್ಲ ನೆಲಕ್ಕೆ ಬೀಳದಂತೆ ತನ್ನ ರೆಕ್ಕೆ ಒಡ್ಡಿತಂತೆ. ಆ ಕಂಬನಿಯ ಹನಿಗಳೇ ಕಣ್ಣಿನ ಚಿತ್ರವಾಗಿ ನವಿಲುಗರಿಯ ಮೇಲೆ ಶಾಶ್ವತವಾಗಿ ಉಳಿದವಂತೆ.
ಈಗಲೂ ಅಷ್ಟೇ, ತನ್ನ ಪ್ರಿಯತಮೆಯ, ಪ್ರೇಮದ ನೆನಪಾದಾಗಲೆಲ್ಲ ನವಿಲು ಗರಿ ಬಿಚ್ಚಿ ಕುಣಿಯುತ್ತದ್ದಂತೆ.
-ನೀಲಿ

1 Comment »


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: