ಆನಂದ್ ಭಕ್ಷಿಯವರ ಒತ್ತಾಯದ ಮಾತು ಹಾಡಾಗಿ ಅರಳಿತು ನೋಡಾ….

ಹೋಗದಿರೀ ಸೋದರರೇ….
ಚಿತ್ರ: ನಮ್ಮ ಊರು ಗೀತೆರಚನೆ: ಸಿ.ವಿ. ಶಿವಶಂಕರ್
ಗಾಯನ: ಪಿ.ಬಿ.ಶ್ರೀನಿವಾಸ್, ಸಂಗೀತ: ಆರ್. ರತ್ನ
ಹೋಗದಿರಿ ಸೋದರರೇ…| ಹೋಗದಿರಿ ಬಂಧುಗಳೇ…
ಮನೆಯನು ತೊರೆದು ಹೋಗುವಿರಾ…|
ಮನಗಳ ಮರೆತು ಅಗಲುವಿರಾ…||
ಇಲ್ಲಿಗೆ ಮುಗಿಯದು ಋಣಾನುಬಂದಾ…|
ಊರಿನ ಸೋದರ ಸಂಬಂಧಾ…|
ನಮ್ಮೂರಿನ ಸೋದರ ಸಂಬಂಧಾ…

ಚಿನ್ನವ ಬೆಳೆಯುವ ಮಣ್ಣನು ಮರೆತು ಅನ್ನಕೆ ಕೈಯನು ಚಾಚುವಿರಾ…
ಹಿಡಿ ಅನ್ನಕೆ ಕೈಯನು ಚಾಚುವಿರಾ…|
ಹುಟ್ಟಿದ ಊರನು ಬಿಟ್ಟು ಹೋದರೆ… ಕಟ್ಟುವರಾರೀ ನಮ್ಮೂರಾ…|
ಕೆರೆ ಕಟ್ಟೆಯ ಬಯಸುವ ನಮ್ಮೂರಾ…
ನಾವೆಲ್ಲ ಹುಟ್ಟಿ ಬೆಳೆದುದೇ ಇಲ್ಲಿ…|
ರಾಮಾಯಣವು ಬದುಕಿಹುದಿಲ್ಲಿ…||
ಮಹಾಭಾರತ ನಡೆದುದೇ ಇಲ್ಲಿ…|
ಕಲ್ಲು ಕಲ್ಲು ಕಥೆ ಹೇಳುವುದಿಲ್ಲಿ…

ನೀವೆಲ್ಲೆ ಹೋದರೂ ಬರಲೇಬೇಕು…|
ನಮ್ಮೂರಿನಲ್ಲೇ ಬದುಕಲುಬೇಕು…||
ಪರದೇಶದಲ್ಲೂ ಸ್ಥಳ ನಿಮಗಿಲ್ಲ…||
ಹುಟ್ಟಿದ ಊರೇ ನಮಗೆಲ್ಲಾ…
ಕನ್ನಡಿಗರು ಎಂದೆಂದೂ ಮರೆಯಲಾಗದಂಥ ಗೀತೆಗಳನ್ನು ಕೊಟ್ಟವರು ಸಿ.ವಿ. ಶಿವಶಂಕರ್. `ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ, ಭಿಕ್ಷುಕನಾದರೂ ಕನ್ನಡ ನಾಡಲ್ಲೆ ಉಳಿವೆ’, `ಬೆಳೆದಿದೆ ನೋಡಾ ಬೆಂಗಳೂರು ನಗರ’, `ನಾನೋಡಿ ನಲಿಯುವ ಕಾರವಾರ,’ `ಹೋಗದಿರೀ ಸೋದರರೇ, ಹೋಗದಿರೀ ಬಂಧುಗಳೇ….’ `ಕನ್ನಡದ ರವಿ ಮೂಡಿ ಬಂದ…’ ಈ ಮಧುರ ಗೀತೆಗಳೆಲ್ಲ ಅವರ ಅನುಪಮ ಸೃಷ್ಟಿಗಳೇ. ಒಂದು ಸ್ವಾರಸ್ಯವೆಂದರೆ ಚಿ. ಉದಯಶಂಕರ್ ಹಾಗೂ ಈ ಶಿವಶಂಕರ್ ಒಂದೇ ಊರಿನವರು. ಇಬ್ಬರ ಮಧ್ಯೆ ಚೆಂದದ ಗೆಳೆತನವಿತ್ತು. ಸಲುಗೆಯಿತ್ತು. ಆರೋಗ್ಯಕರ ಪೈಪೋಟಿಯೂ ಇತ್ತು.
ಶಿವಶಂಕರ್ ಗೀತರಚನೆಕಾರರು ಮಾತ್ರವಲ್ಲ, ನಿರ್ಮಾಪಕರೂ ಹೌದು. ನಿರ್ದೇಶಕರೂ ಹೌದು. ಜನಪ್ರಿಯತೆಯಲ್ಲಿ ಇಂದಿಗೂ ನಂಬರ್ ಒನ್ ಅನ್ನಿಸಿಕೊಂಡಿರುವ `ಹೋಗದಿರೀ ಸೋದರರೇ….’ ಹಾಡು ಶಿವಶಂಕರ್ ನಿರ್ದೇಶನದ `ನಮ್ಮ ಊರು’ ಚಿತ್ರದ್ದು. ನಟ ರಾಜೇಶ್ ಬೆಳ್ಳಿತೆರೆಗೆ ಪರಿಚಯವಾದದ್ದು ಈ ಚಿತ್ರದ ಮೂಲಕವೇ. ಸರ್, ಈ ಹಾಡು ಸೃಷ್ಟಿಯಾದ ಸಂದರ್ಭ ಹೇಳ್ತೀರಾ ಎಂದು ಕೇಳಿದರೆ- `ಹಾಡು ಸೃಷ್ಟಿಯಾದದ್ದು ಮಾತ್ರವಲ್ಲ, ರಾಜೇಶ್ಗೆ ಈ ಪಾತ್ರ ಹ್ಯಾಗೆ ಸಿಕ್ತು ಅನ್ನೋದನ್ನೂ ಹೇಳ್ತೀನಿ’ ಎಂದು ಶುರು ಮಾಡಿಯೇ ಬಿಟ್ಟರು ಶಿವಶಂಕರ್. ನಂತರ ಅವರ ಮಾತಿನ ಝರಿ ಹರಿದಿದ್ದು ಹೀಗೆ:
`ಆಗಷ್ಟೇ’ ಮನೆ ಕಟ್ಟಿ ನೋಡು’ ಸಿನಿಮಾ ನಿರ್ದೇಶಿಸಿದ್ದೆ. ಚಿತ್ರ ಜಯಭೇರಿ ಹೊಡೆಯಿತು. ಈ ಸುದ್ದಿ ತಿಳಿದ ಮುಂಬಯಿಯ ಬಿ.ಎಸ್. ನಾರಾಯಣ್ ಮತ್ತು ಗೋಪಾಲ ಭಟ್ ಎಂಬಿಬ್ಬರು ಆ ಸಿನಿಮಾ ನೋಡುವ ಇಚ್ಛೆ ವ್ಯಕ್ತಪಡಿಸಿದರು. ಮುಂಬಯಿಗೆ ಒಂದು ಪ್ರಿಂಟ್ ಕೊಂಡೊಯ್ದು ಅವರಿಗೆ ಸಿನಿಮಾ ತೋರಿಸಿದೆ. ಎಲ್ಲರೂ ಮೆಚ್ಚಿಕೊಂಡರು. ಮರುದಿನ ಅಂದಿನ ಘಟಾನುಘಟಿಗಳೆಂದೇ ಹೆಸರಾಗಿದ್ದ ಅಶೋಕ್ಕುಮಾರ್, ಅನೂಪ್ಕುಮಾರ್, ಆನಂದ ಭಕ್ಷಿ, ಅಶೋಕ್ ಕುಮಾರ್ ಕೂಡ ಚಿತ್ರ ನೋಡಿದರು. ನಂತರ ಹರಟುತ್ತಾ ಮೇರಿನ್ ಡ್ರೈವ್ ಬೀಚ್ನಲ್ಲಿ ಬರುತ್ತಿದ್ದಾಗ-` ಏನೇ ಹೇಳಿ, ಹಿಂದಿ ಚಿತ್ರಗಳಿಗೆ ಸವಾಲು ಹಾಕುವಂಥ ಸಿನಿಮಾ ತಯಾರಿಕೆ ನಿಮ್ಮಿಂದ ಸಾಧ್ಯವಿಲ್ಲ’ ಅಂದರು. ಅಷ್ಟಕ್ಕೇ ಸುಮ್ಮನಾಗದೆ, ಆಗಷ್ಟೇ ತೆರೆಕಂಡಿದ್ದ ಮನೋಜ್ಕುಮಾರ್ ಅಭಿನಯದ ಸಿನಿಮಾವೊಂದರ ಹೆಸರು ಹೇಳಿ ಅಂಥ ಸಿನಿಮಾ ಮಾಡ್ತೀರಾ? ಧೈರ್ಯವಿದೆಯಾ? ಎಂದು ಬಿಟ್ಟರು.
ಯಾಕೋಪ್ಪ, ಅವರ ಛಾಲೆಂಜಿಗೆ ಒಪ್ಪಿಕೋಬೇಕು ಅನ್ನಿಸ್ತು. ನಂತರದ ಎರಡು ದಿನ ಮುಂಬಯಿಯಲ್ಲೇ ಉಳಿದು ಒಂದು ಕಥೆ ಬರೆದೆ. ಸಂಭಾಷಣೆ ಸಿದ್ಧಪಡಿಸಿದೆ. ನಂತರ ಅದನ್ನು ಹಿಂದಿಯಲ್ಲಿ ರೆಕಾರ್ಡ್ ಮಾಡಿಕೊಂಡು ಟೇಪ್ ರೆಕಾರ್ಡರ್ ಸಮೇತ ಕಿಶೋರ್ ಕುಮಾರ್ ಹಾಗೂ ಆನಂದ್ ಭಕ್ಷಿಯವರ ಮನೆಗೆ ಹೋದೆ. ಎಲ್ಲರಿಗೂ ಕಥೆ ಹೇಳಿದೆ. ಟೇಪ್ ರೆಕಾರ್ಡರ್ ಆನ್ ಮಾಡಿ ಡೈಲಾಗ್ ಕೇಳಿಸಿದೆ. ಕೇಳುತ್ತಾ ಕೂತಿದ್ದ ಆನಂದ್ ಭಕ್ಷಿ ಹಾಗೂ ಕಿಶೋರ್ಕುಮಾರ್ರ ಹೆಂಡತಿ, ಮಕ್ಕಳು ಕಣ್ಣೀರು ಹಾಕಲು ಶುರು ಮಾಡಿದರಂತೆ. ಓಹ್, ಈ ಕಥೆ ಕೇಳಿಯೇ ಹೆಂಗಸರು ಅಳ್ತಾ ಇದಾರೆ ಅಂದರೆ ಅದು ಹಿಟ್ ಆಗುತ್ತೆ ಅಂತಾನೇ ಅರ್ಥ ಅಂದುಕೊಂಡೆ.
ನಂತರ, ಒಂದು ಒಳ್ಳೆಯ ಕಥೆ ಕೇಳಿಸಿದ್ರು. ಈಗ ಹೇಗಿದ್ರೂ ಊಟದ ಸಮಯವಾಗಿದೆ. ಊಟ ಮಾಡಿಕೊಂಡೇ ಹೋಗಿ. ನೀವು ನಮಗೆ ಸ್ನೇಹಿತರು ಮಾತ್ರವಲ್ಲ, ಬಂಧುಗಳೂ ಹೌದು ಎಂದು ಒತ್ತಾಯಿಸಿದರು ಆನಂದ್ ಭಕ್ಷಿ. ಬೇಡ, ಇನ್ನೊಮ್ಮೆ ಬರ್ತೀವಿ ಅಂತ ನಾವು, ಉಹುಂ, ಹಾಗೇ ಹೋಗಬೇಡಿ ಅಂತ ಅವರು!
ಅವತ್ತು ಆನಂದ್ ಭಕ್ಷಿ ಅವರಿಗೆ ಕೇಳಿಸಿದ ಕಥೆಯೇ `ನಮ್ಮ ಊರು’ ಚಿತ್ರದ್ದು. ಭಕ್ಷಿ ದಂಪತಿ ಭೋಜನಕ್ಕೆ ವ್ಯವಸ್ಥೆ ಮಾಡುತ್ತಿದ್ದಾಗಲೇ ಆ ಸಿನಿಮಾಕ್ಕೆ ಹೇಗೆ ಹಾಡು ಬರೆಯಬಹುದೆಂದು ನಾನು ಯೋಚಿಸುತ್ತಿದ್ದೆ. ವಿದ್ಯೆ ಕಲಿತು, ತನ್ನ ಹುಟ್ಟೂರು, ಕುಟುಂಬ ಮರೆತು ನಗರಕ್ಕೆ ಹೊರಟು ನಿಂತವರಿಗೆ ನಾಯಕ ಬುದ್ಧಿಮಾತು ಹೇಳುವ ರೂಪದಲ್ಲಿ ಒಂದು ಹಾಡು ಹಾಕಬೇಕು ಅನ್ನಿಸಿತು. ಆಗಲೇ ಆನಂದ್ ಭಕ್ಷಿಯವರು ಕೆಲ ನಿಮಿಷಗಳ ಹಿಂದಷ್ಟೇ `ನಾವೆಲ್ಲ ಸೋದರರು, ಬಂಧುಗಳು, ನೀವು ಊಟ ಮಾಡದೇ ಹೋಗಬೇಡಿ’ ಎಂದು ಹೇಳಿದ ಮಾತು ನೆನಪಿಗೆ ಬಂತು. ಆಗಲೇ, ಆ ಕ್ಷಣವೇ `ಹೋಗದಿರೀ ಸೋದರರೇ ಹೋಗದಿರೀ ಬಂಧುಗಳೇ’ ಎಂಬ ಮೊದಲ ಸಾಲು ಹೊಳೆಯಿತು. ಭಕ್ಷಿಯವರ ಪತ್ನಿ ಹಪ್ಪಳ ಕರಿಯುವ ಅವಸರದಲ್ಲಿದ್ದರು. ಹಪ್ಪಳ ಆಮೇಲೆ ತನ್ನಿ. ಸದ್ಯಕ್ಕೆ ಅರ್ಜೆಂಟಾಗಿ ಒಂದು ಪೇಪರ್ ಕೊಡಿ ಅಂದೆ. ಕೊಟ್ಟರು. ಹಾಡಿನ ಮೊದಲ ಸಾಲು ಬರೆದೆ, ನಂತರದ ನಿಮಿಷಗಳಲ್ಲಿ ವಿದ್ಯೆ ಕಲಿತು, ದೇಶ ಮರೆತು, ವಿದೇಶಕ್ಕೆ ಓಡುವ ಯುವಕರನ್ನು ನೆನಪಿಟ್ಟುಕೊಂಡೇ ಬರೆಯುತ್ತಾ ಹೋದೆ. ನೆಹರೂ ಚಿಂತನೆಯ ಕೈಗಾರೀಕರಣಕ್ಕಿಂತ, ಗಾಂಧಿ ಕಲ್ಪನೆಯ ಗ್ರಾಮೋದ್ಧಾರದ ಕನಸೇ ದೊಡ್ಡದು ಎಂದು ಬರೆಯುತ್ತಾ ಹೋದೆ. ಹಾಡೆಂಬುದು ಕಂದನಂತೆ ಅಂಬೆಗಾಲಿಡುತ್ತಾ ನನ್ನ ಜತೆ ಜತೆಗೇ ಬಂತು. ಕಡೆಗೆ, ನನ್ನ ಕೈ ಹಿಡಿದು ನಡೆಸಿತು!’
ಇಷ್ಟು ಹೇಳಿ ಭಾವಪರವಶರಾಗಿ ಕ್ಷಣ ಮೌನಿಯಾಗಿದ್ದ ಶಿವಶಂಕರ್, ನಟ ರಾಜೇಶ್ ಬೆಳ್ಳಿತೆರೆಗೆ ಬಂದ ಕತೆಯನ್ನು ವಿವರಿಸಿದ್ದು ಹೀಗೆ:
ಮುಂಬಯಿಯಿಂದ ಬಂದ ನಂತರ ` ನಮ್ಮ ಊರು’ ಕಥೆ ಸಿದ್ಧವಾಯಿತು. ಸಂಭಾಷಣೆ ಬರೆದಿದ್ದೂ ಆಯಿತು. ಮುಂಬಯಿಯ ಬಿ.ಎಸ್. ನಾರಾಯಣ್ ನಿರ್ಮಾಪಕರಾದರು. ಬ್ಯಾಂಕ್ ಉದ್ಯೋಗಿಯಾಗಿದ್ದ ರಮೇಶ್ ಎಂಬಾತನನ್ನು ನಾಯಕನ ಪಾತ್ರಕ್ಕೆ ಆಯ್ಕೆ ಮಾಡಲಾಗಿತ್ತು. ಮುಹೂರ್ತಕ್ಕೆ ಅಂದಿನ ಹಿರಿಯ ರಾಜಕಾರಣಿ ದೇವರಾಜ ಅರಸರೇ ಬರಲೊಪ್ಪಿದ್ದರು. ಆದರೆ ಮುಹೂರ್ತಕ್ಕೆ ನಾಲ್ಕೇ ದಿನ ಬಾಕಿ ಎನ್ನುವಾಗ ರಮೇಶ್ ಕೈ ಕೊಟ್ಟರು. ತಕ್ಷಣವೇ ಶ್ರೀನಾಥ್ ಅಥವಾ ಗಂಗಾಧರ್ ಅವರನ್ನು ನಾಯಕನ ಪಾತ್ರಕ್ಕೆ ಹಾಕಿಕೊಳ್ಳೋಣ ಎಂದು ನಿರ್ಮಾಪಕರಿಗೆ ಹೇಳಿದೆ. ಅವರು ಒಪ್ಪಲಿಲ್ಲ. ಹೀಗಿದ್ದಾಗಲೇ ಮುಹೂರ್ತದ ದಿನ ಬಂದೇ ಬಿಟ್ಟಿತು. ಎಲ್ಲ ಇದ್ದಾರೆ. ನಾಯಕನೇ ಇಲ್ಲ. ಈ ಸಂದರ್ಭದಲ್ಲಿ ನಾಯಕಿ ಬಂದವಳೇ-` ಸಾರ್, ನನ್ನ ಹೀರೋ ರಮೇಶ್ ಎಲ್ಲಿ ಸಾರ್’ ಎಂದಳು. ನನಗೆ ರೇಗಿಹೋಯಿತು. ದನಿ ಎತ್ತರಿಸಿ `ಅಯ್ಯೋ, ರಮೇಶನೋ, ರಾಜೇಶನೋ ಯಾರೋ ಒಬ್ರು ಬರ್ತಾರೆ. ನೀನು ಬಣ್ಣ ಹಚ್ಚಿಕೊಂಡು ರೆಡಿಯಾಗಿರಮ್ಮ’ ಅಂದೆ. ಛೆ, ನಾಯಕನೇ ಇಲ್ಲವಲ್ಲ ಎಂದು ಚಿಂತೆಯಿಂದ ಕೂತಿದ್ದಾಗ ನನ್ನ ಪರಿಚಯದ ಹುಡುಗ ದಿವ್ಯಾಸಾಗರ ಆ ದಾರಿಯಲ್ಲಿ ಬಂದ. ಆತ ನಿಜಕ್ಕೂ ಚೆಂದಕ್ಕಿದ್ದ. ಇವನನ್ನೇ ಯಾಕೆ ಹೀರೋ ಮಾಡಬಾರದು ಅಂದುಕೊಂಡೆ. ನಂತರ ಅವಸರದಲ್ಲಿಯೇ ಅವನ ಬಳಿ ಹೋಗಿ ಎಲ್ಲವನ್ನೂ ಅವಸರದಲ್ಲೇ ಹೇಳಿ-ಇವತ್ತಿನಿಂದ ನಿನ್ನ ಹೆಸರು ರಾಜೇಶ್. ಸುಮ್ನೆ ಒಪ್ಪಿಕೋ… ಈ ಹೆಸರಿಂದ, ಸಿನಿಮಾದಿಂದ ನಿನಗೆ ದೊಡ್ಡ ಹೆಸರು ಬರುತ್ತೆ’ ಅಂದೆ. ವಿದ್ಯಾಸಾಗರ್ ಒಪ್ಪಿಕೊಂಡು ಮುಂದೆ- ಸಿನಿಮಾ ಹಿಟ್ ಆಯಿತು. ಹಾಡೂ ಹಿಟ್ ಆಯಿತು. ನಟ ರಾಜೇಶ್ರನ್ನು ಕಂಡವರೆಲ್ಲ, `ಶಿವಾಜಿ ಗಣೇಶನ್’ ಥರಾನೇ ಇದಾನಲ್ಲ ಎಂದು ಮಾತಾಡಿಕೊಂಡರು!
ಇಷ್ಟು ಹೇಳಿ ಮಾತು ಮುಗಿಸಿದರು ಶಿವಶಂಕರ್. ಹಾಡಿನ ಸೆರಗು ಹಿಡಿದು ಹೊರಟರೆ, ಕಾಡುವ ಹೀರೊ ಕಥೆಯೂ ಸಿಕ್ಕಿತು!

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: