ಅವನ ಒಳಗಣ್ಣಿಗೆ ನಾಟ್ಯ ಒಲಿಯಿತು!

ನಾನು ಗೆಲ್ಲಬೇಕು…
ಅಂಥದೊಂದು ಹಟ ಬಂದುಬಿಟ್ಟರೆ- ಕೈ ಇಲ್ಲದವನು ಗಿಟಾರ್ ನುಡಿಸುತ್ತಾನೆ, ಕಾಲಿಲ್ಲದವನು ಈಜಿಯೇ ಸಪ್ತಸಾಗರ ದಾಟುತ್ತಾನೆ, ಮೂಗ ಹಾಡು ಹೇಳುತ್ತಾನೆ, ಅಕ್ಷರದ ಗಂಧವೇ ಇಲ್ಲದವನು ಕಾದಂಬರಿ ಬರೆಯುತ್ತಾನೆ. ಸಣಕಲ, ಠೊಣಪನನ್ನು ಚಿತ್ ಮಾಡುತ್ತಾನೆ. Impossible ಎಂಬ ಪದದೊಳಗೇ possible ಎಂಬುದೂ ಇದೆ. ಹಾಗಾಗಿ ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ… ಇಂಥದೊಂದು ನಿರ್ಧಾರದೊಂದಿಗೆ ಎದ್ದು ನಿಂತವನಿಗೆ-ಆಕಾಶವೊಂದು ಮಿತಿಯಲ್ಲ, ಸಾಗರದ ಆಳ ಲೆಕ್ಕಕ್ಕೇ ಇರುವುದಿಲ್ಲ.
ಸೋಲನ್ನು ಮೇಲಿಂದ ಮೇಲೆ ಸೋಲಿಸುವ; ಆ ಮೂಲಕ ಗೆಲುವೇ ನಮ್ಮ ಬದುಕು ಎಂದು ಹೆಮ್ಮೆಯಿಂದ ಹೇಳುವ; ತಮ್ಮ ಸಾಧನೆಯಿಂದಲೇ ಹಲವರ ಆದರ್ಶವಾಗುವ ಹೀರೊಗಳು ನಮ್ಮ ಮಧ್ಯೆಯೇ ಇದ್ದಾರೆ. ಅದರಲ್ಲೂ- `ಎಲ್ಲ ಸರಿಯಾಗಿದೆ ಅಂದುಕೊಂಡವರಿಗಿಂತ ಸಮಾಜದ ಹಲವರಿಂದ `ಪಾಪ ಕಣ್ರೀ’ ಅನ್ನಿಸಿಕೊಳ್ಳುವ ವಿಕಲಚೇತನರು ಸಾಧಕರ ಪಟ್ಟಿಯಲ್ಲಿ ಯಾವತ್ತೂ ಮುಂದಿರುತ್ತಾರೆ. ಅಂಥವರ ಪೈಕಿ ಬುಸೇಗೌಡ ಪ್ರಮುಖರು. ವಿಶೇಷ ಏನೆಂದರೆ- ಗೌಡರು ಸುವಿಖ್ಯಾತ ಭರತನಾಟ್ಯ ಕಲಾವಿದರು. ಅವರು ಈಗಾಗಲೇ ಸಾವಿರಕ್ಕೂ ಹೆಚ್ಚು ಕಾರ್ಯಕ್ರಮ ನೀಡಿದ್ದಾರೆ. ಅವರ ಸಾಧನೆಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳು ಒಲಿದಿವೆ. ನಾಟ್ಯ ಕಲಾ ಕುಶಲ, ನಾಟ್ಯ ಕಲಾಪ್ರೇಮಿ, ಮಯೂರ ಎಂಬಿತ್ಯಾದಿ ಬಿರುದುಗಳು ಅವರ ಮುಡಿಯನ್ನು ಅಲಂಕರಿಸಿವೆ. ಅಯ್ಯೊ, ಭರತನಾಟ್ಯ ಕಲಾವಿದ ಅಂದ ಮೇಲೆ ಅವರಿಗೆ ಪ್ರಶಸ್ತಿ ಸಿಗೋದು ಮಾಮೂಲು. ಅದರಲ್ಲೇನಿದೆ ಸ್ಪೆಶಾಲಿಟಿ ಅನ್ನಬೇಡಿ.
ವಿಶೇಷ ಏನೆಂದರೆ- ಬುಸೇಗೌಡರು ಅಂಧರು! ಎರಡೂ ಕಣ್ಣು ಕಾಣದಿದ್ದರೂ ಅವರು ಭರತನಾಟ್ಯ ಕಲಿತದ್ದು, ಅದನ್ನು ಒಲಿಸಿಕೊಂಡದ್ದು, ಸಾಧನೆಯ ಹಾದಿಯಲ್ಲಿ ಒಂದೊಂದೇ ಹೆಜ್ಜೆ ನಡೆದು ಹೋದದ್ದು, ದಶಾವತಾರ ನೃತ್ಯರೂಪಕದಲ್ಲಿ ನಂಬರ್ ಒನ್ ಅನ್ನಿಸಿಕೊಂಡದ್ದು… ಓಹ್, ಹೇಳುತ್ತ ಹೋದರೆ, ಬುಸೇಗೌಡರದು ಎಂಥವರಿಗೂ ಸ್ಫೂರ್ತಿ ನೀಡಬಲ್ಲಂಥ ಕಥೆ.
* * *
ಬುಸೇಗೌಡರದು ಮೂಲತಃ ಮಂಡ್ಯದ ಸಮೀಪ ಒಂದು ಹಳ್ಳಿ. ಅವರು ಜನ್ಮತಃ ಅಂಧರಲ್ಲ. ಮೂರು ವರ್ಷದವರೆಗೂ ಅವರು ಉಳಿದೆಲ್ಲರಂತೆಯೇ ಇದ್ದರು. ಆದರೆ, ಮೂರನೇ ವರ್ಷದ ಕಡೆಯಲ್ಲಿ ನಡೆದ ಒಂದು ಅಪಘಾತದಲ್ಲಿ ಅವರ ಎರಡೂ ಕಣ್ಣುಗಳ ದೃಷ್ಟಿಯೇ ಹೋಗಿಬಿಟ್ಟಿತು. ಇದು ಇಪ್ಪತ್ತೊಂಬತ್ತು ವರ್ಷಗಳ ಹಿಂದಿನ ಮಾತು. ಹಾಲುಗಲ್ಲದ ಮಗುವಿಗೆ ಕಣ್ಣೇ ಕಾಣುವುದಿಲ್ಲ ಎಂದಾಗ ಆ ಕಂದನ ತಾಯ್ತಂದೆಯರೂ ಕಲ್ಲೂ ಕರಗುವಂತೆ ಗೋಳಾಡಿದರು. ಆಸ್ಪತ್ರೆ-ಆಸ್ಪತ್ರೆ ಸುತ್ತಿದರು. ಎಲ್ಲ ವೈದ್ಯರೂ- `ಉಹುಂ, ಏನೂ ಮಾಡಲು ಸಾಧ್ಯವಿಲ್ಲ’ ಎಂದು ಕೈಚೆಲ್ಲಿದಾಗ ಅಂಧ ಮಕ್ಕಳಿಗೆ ಶಿಕ್ಷಣ ಕೊಡುವ ಬೆಂಗಳೂರಿನ ರಮಣ ಮಹರ್ಷಿ ಶಾಲೆಗೆ ತಂದು ಬಿಟ್ಟರು.
ನಂತರದ ನಾಲ್ಕು ವರ್ಷಗಳು ಯಾವುದೇ ವಿಶೇಷಗಳಿಲ್ಲದೆ ಕಳೆದುಹೋದವು. ಆ ಸಂದರ್ಭದಲ್ಲಿಯೇ ಅಂಧ ಮಕ್ಕಳಿಗೆ ಡ್ಯಾನ್ಸ್ ಕಲಿಸಲು ಅಶೋಕ್‌ಕುಮಾರ್ ಎಂಬ ಉತ್ಸಾಹಿ ಶಿಕ್ಷಕರೊಬ್ಬರು ಬಂದರು. ಅವರನ್ನು- `ತಾರೇ ಜಮೀನ್ ಪರ್’ ಚಿತ್ರದ ಅಮೀರ್‌ಖಾನ್‌ನಂಥ ಸಹೃದಯಿ ಮೇಷ್ಟ್ರು ಎಂದೇ ಕರೆಯಿರಿ, ಅಭ್ಯಂತರವಿಲ್ಲ. ಸದಾ ಹೊಸತನಕ್ಕೆ, ಒಂದು ಹೊಸ ಸಾಹಸಕ್ಕೆ ತುಡಿಯುತ್ತಿದ್ದ ಅಶೋಕ್‌ಕುಮಾರ್, ಆ ಅಂಧ ಮಕ್ಕಳಿಗೆ ಕೋಲಾಟ ಕಲಿಸಿದರು. ಹೊರಗಣ್ಣು ಕಾಣದಿದ್ರೆ ಏನಂತೆ? ಒಳಗಣ್ಣು ಎಂಬುದಿದೆಯಲ್ಲ? ಅದರ ಮೂಲಕವೇ, ಉಳಿದವರಿರಲಿ, ಶಿಕ್ಷಕ ಅಶೋಕ್‌ಕುಮಾರೇ ಬೆರಗಾಗುವ ರೀತಿಯಲ್ಲಿ, ಕೇವಲ ಹನ್ನೆರಡೇ ದಿನದಲ್ಲಿ ಬುಸೇಗೌಡ ಮತ್ತು ಗೆಳೆಯರು ಕೋಲಾಟ ಕಲಿತರು. ಅಷ್ಟೇ ಅಲ್ಲ, ಚಿಕ್ಕದೊಂದು ಎಡವಟ್ಟನ್ನೂ ಮಾಡಿಕೊಳ್ಳದೆ ಅದನ್ನು ರಂಗದ ಮೇಲೆ ಪ್ರದರ್ಶಿಸಿಯೂಬಿಟ್ಟರು.
ಆಗಷ್ಟೇ `ನಾಟ್ಯಾಂಜಲಿ’ ಎಂಬ ನೃತ್ಯ ಕಲಿಕಾ ಶಾಲೆ ಆರಂಭಿಸಿದ್ದ ಅಶೋಕ್‌ಕುಮಾರ್‌ಗೆ ಆಗ ಆದ ಸಂತೋಷ ಅಷ್ಟಿಷ್ಟಲ್ಲ. ಈ ಮಕ್ಕಳಿಗೇ ಭರತನಾಟ್ಯ ಕಲಿಸಿದರೆ ಹೇಗೆ ಎಂಬ ಐಡಿಯಾ ಅವರಿಗೆ ಬಂದದ್ದೇ ಆಗ. ಅವರ ಉತ್ಸಾಹ ಅದೆಷ್ಟು ದೊಡ್ಡದಿತ್ತು ಅಂದರೆ- ತಕ್ಷಣವೇ ತಮ್ಮ ಅನಿಸಿಕೆಯನ್ನು ಎಲ್ಲ ಅಂಧ ವಿದ್ಯಾರ್ಥಿಗಳಿಗೂ ಹೇಳಿಯೂಬಿಟ್ಟರು. ಆಗ, ಅಲ್ಲಿದ್ದ ಹುಡುಗರ ಪೈಕಿಯೇ ತುಂಬ ಚುರುಕು ಅನ್ನಿಸಿಕೊಂಡಿದ್ದ ಬುಸೇಗೌಡ- `ಸರ್, ಭರತನಾಟ್ಯದ ಬಗ್ಗೆ ನಮ್ಗೆ ಏನಂದ್ರೆ ಏನೂ ಗೊತ್ತಿಲ್ವಲ್ಲ? ಅದನ್ನು ಕಲಿಯೋದು ಹೇಗೆ? ಪ್ರದರ್ಶಿಸೋದು ಹೇಗೆ?’ ಎಂದು ಮುಗ್ಧವಾಗಿ ಕೇಳಿದ್ದರಂತೆ.
ಎಲ್ಲರಿಗೂ ಗೊತ್ತಿರುವಂತೆ ಭರತನಾಟ್ಯಕ್ಕೆ ಒಂದು ಮೋಹಕತೆಯಿದೆ. ಒಂದು ಗಾಂಭೀರ್ಯವಿದೆ. ವಿಪರೀತದ ಶಿಸ್ತಿದೆ. ಅಲ್ಲಿ ಕಲಾವಿದನ ಕಣ್ಣು ಮಾತಾಡುತ್ತದೆ. ಹುಬ್ಬು ಒಂದೇ ಸಮನೆ ಎಗರುತ್ತಿದ್ದರೆ- ಅದು ಆ ಪಾತ್ರಕ್ಕೆ ಕೋಪ ಬಂದಿದೆ ಎಂದು ವಿವರಿಸುತ್ತದೆ. ಅದೆಷ್ಟೋ ಸಂದರ್ಭದಲ್ಲಿ ಪುರುಷ ಪಾತ್ರಧಾರಿಗಳೂ ಸ್ತ್ರೀಯರ ಥರವೇ ಬಾಗಿ, ಬಳುಕಿ ನಡೆಯಬೇಕಾಗುತ್ತದೆ. ಅದನ್ನೆಲ್ಲ ಉಳಿದವರಿಗೆ ಪ್ರತ್ಯಕ್ಷ ತೋರಿಸಿ ಹೇಳಿಕೊಡಬಹುದು. ಒಂದು ಬಾರಿಯಲ್ಲದಿದ್ದರೆ ಎರಡು ಬಾರಿ, ಬೇಕಾದರೆ ಇಪ್ಪತ್ತು ಬಾರಿ ಕುಣಿದು ತೋರಿಸಬಹುದು. ಆದರೆ, ಅಂಧರಿಗೆ ಅದನ್ನು ವಿವರಿಸಿ ಹೇಳುವುದು ಹೇಗೆ?
ನಿಮಗೆ ಭರತನಾಟ್ಯ ಹೇಳಿಕೊಡುತ್ತೇನೆ ಎಂದು ಬುಸೇಗೌಡ ಮತ್ತು ಗೆಳೆಯರಿಗೆ ಹೇಳಿದ ಕ್ಷಣದಿಂದಲೇ ಅಶೋಕ್‌ಕುಮಾರ್ ಅವರನ್ನು ಈ ಪ್ರಶ್ನೆ ಕಾಡತೊಡಗಿತು. ನೋಡೋಣ, ಆದದ್ದಾಗಲಿ ಎಂದು ಎಂಟು ವರ್ಷದವನಿದ್ದ ಬುಸೇಗೌಡನನ್ನೂ, ಅವನ ಜತೆಗಾರರನ್ನೂ ಎದುರು ನಿಲ್ಲಿಸಿಕೊಂಡು ಒಮ್ಮೆ ಕುಣಿದು ತೋರಿಸಿದರು. ಭರತನಾಟ್ಯದ ಪ್ರಾಮುಖ್ಯತೆ ವಿವರಿಸಿದರು. ನಂತರ, ಭರತನಾಟ್ಯ ಕಲಿಯುವವರಿಗೆಲ್ಲ ಪ್ರಪ್ರಥಮವಾಗಿ ಹೇಳಿಕೊಡುವ ಲಯಬದ್ಧ ತಾಳ- `ಥಂ ಕಿಟಥರ ಥಂ… ಥಾ… ಥೈ… ಥಾ… ಥೈ… ಥಂ… ಧಿತ್ಥಂ ಥೈ ಥಾ ಥೈ…’ ಎಂದು ಹೇಳಿ, ಅದಕ್ಕೆ ತಕ್ಕಂತೆ ಮತ್ತೆ ಹೆಜ್ಜೆ ಹಾಕಿದರು. ನಂತರ ಕುತೂಹಲದಿಂದ ಒಮ್ಮೆ ಎದುರಿಗಿದ್ದ ವಿದ್ಯಾರ್ಥಿಗಳ ಕಡೆ ನೋಡಿದರೆ-
ಅಲ್ಲಿ ಬರೀ ಪ್ರಶ್ನಾರ್ಥಕ ಚಿಹ್ನೆಯ ಮುಖಭಾವವೇ ಕಾಣಿಸಿತು.
ಓಹ್, ನಾನು ಹೇಳದ್ದು ಇವರಿಗೆ ನಯಾಪೈಸೆಯಷ್ಟೂ ಅರ್ಥವಾಗಿಲ್ಲ ಎಂದು ಅಶೋಕ್‌ಕುಮಾರ್‌ಗೆ ಆಗಲೇ ಅರ್ಥವಾಗಿಹೋಯಿತು. ಬೇರೆಯವರಾಗಿದ್ದರೆ-ಕುರುಡರಿಗೆ ಡಾನ್ಸು- ಅದೂ ಏನು? ಭರತನಾಟ್ಯ ಕಲಿಸುವ ಕರ್ಮ ಯಾರಿಗೆ ಬೇಕು ಎಂದುಕೊಂಡು ಎದ್ದುಹೋಗುತ್ತಿದ್ದರೇನೋ. ಆದರೆ, ಅಶೋಕ್ ಹಾಗೆ ಮಾಡಲಿಲ್ಲ. ಬದಲಿಗೆ ಶಿಷ್ಯರನ್ನು ಪಕ್ಕ ನಿಲ್ಲಿಸಿಕೊಂಡು ಸ್ಟೆಪ್ಸ್ ಹಾಕಿದರೆ ಹೇಗೆ? ಅಂದುಕೊಂಡರು. ಹಾಗೆ ಒಂದೊಂದು ಸ್ಟೆಪ್ ಹಾಕಿದಾಗಲೂ ಪಕ್ಕದಲ್ಲೇ ನಿಂತಿರುತ್ತಿದ್ದ ಬುಸೇಗೌಡರನ್ನು- ಈಗ ನನ್ನ ಕಾಲು ಮುಟ್ಟು. ಕಾಲು ಹೇಗೆ ಬಗ್ಗಿದೆ, ಮಾಂಸಖಂಡಗಳು ಹೇಗೆ ಹಿಗ್ಗಿವೆ ಎಂಬುದನ್ನು ಅರ್ಥಮಾಡಿಕೊ ಎಂದರು. ನಂತರ ಪಾದವನ್ನು ಮುಟ್ಟಿ, ಯಾವ Shಚಿಠಿeನಲ್ಲಿ ಹೆಜ್ಜೆ ಹಾಕಬೇಕು ಎಂಬುದನ್ನೂ ಹೇಳಿಕೊಟ್ಟರು. ಐದಾರು ಬಾರಿ ಈ ಪ್ರಯೋಗವಾದ ಮೇಲೆ- `ಈಗ ನೀನು ಮಾಡಿ ತೋರಿಸು’ ಅಂದರು.
ಆ ವೇಳೆಗೆ ಬುಸೇಗೌಡರ ಒಳಗಣ್ಣು ಭರತನಾಟ್ಯವನ್ನು ತಕ್ಕಮಟ್ಟಿಗೆ ಅರ್ಥಮಾಡಿಕೊಂಡಿತ್ತು. ಆತ ಶಿಕ್ಷಕರೇ ಬೆರಗಾಗುವಂತೆ ಹೆಜ್ಜೆ ಹಾಕಿ ತೋರಿಸಿದ! ಆತನ ಕಾಲುಗಳ ಚಲನೆ ಮತ್ತು ವೇಗವನ್ನು ಗಮನಿಸಿದರೆ ಆತ ಅಂಧ ಎಂದು ಹೇಳಲು ಸಾಧ್ಯವೇ ಇರಲಿಲ್ಲ. ಶಿಷ್ಯನ ಈ ಕಲಿಕೆಯಿಂದ ಖುಷಿಯಾದ ಅಶೋಕ್‌ಕುಮಾರ್ ಅದಕ್ಕೆ ಖಿouಛಿh ಚಿಟಿಜ ಈeeಟ (ಸ್ಪರ್ಶಿಸು ಮತ್ತು ಅರ್ಥಮಾಡಿಕೋ) ಶೈಲಿ ಎಂದೇ ನಾಮಕರಣ ಮಾಡಿದರು. ಅಂದಿನಿಂದ ಅಂಧ ಮಕ್ಕಳಿಗೆ ಭರತನಾಟ್ಯ ಕಲಿಸುವ ವಿಧಾನಕ್ಕೆ ಟಚ್ ಅಂಡ್ ಫೀಲ್ ಟೆಕ್ನಿಕ್ ಎಂದೇ ಹೆಸರು ಬಂತು.
ಭರತನಾಟ್ಯದ ಹೆಚ್ಚುಗಾರಿಕೆಯೇ ಅದು. ಅಲ್ಲಿ ದಶಾವತಾರವೂ ತೆರೆದುಕೊಳ್ಳುತ್ತದೆ. ರಾಮಾಯಣವೂ ಅರಳಿಕೊಳ್ಳುತ್ತದೆ. ಮಹಾಭಾರತದ ಅದೆಷ್ಟೋ ಪ್ರಸಂಗಗಳು ಬಯಕೆಗೆ ತಕ್ಕಂತೆ ಬಂದು ಹೋಗುತ್ತವೆ. ಒಂದೊಂದು ಪಾತ್ರದ ಅಭಿನಯವೂ ಒಂದೊಂದು ಥರ. ಅಲ್ಲಿ ಯಾವುದೇ ಸಂದರ್ಭದಲ್ಲೂ ಪಾತ್ರಧಾರಿ ಮಾತಾಡುವಂತಿಲ್ಲ. ಬದಲಿಗೆ ಅವನ ಕಣ್ಣು ಮಾತಾಡಬೇಕು. ಕೆನ್ನೆಯ ಅದುರು, ಹಣೆಯ ನಿರಿಗೆ, ಪದೇ ಪದೆ ಹಾರುವ ಹುಬ್ಬು ಕತೆ ಹೇಳಬೇಕು. ಎದುರಿಗಿದ್ದ ಶಿಷ್ಯ ಬುಸೇಗೌಡನಿಗೆ ಇದನ್ನೆಲ್ಲ ವಿವರಿಸಿ ಹೇಳಿದ ಅಶೋಕ್‌ಕುಮಾರ್, ಎಲ್ಲ ಪಾತ್ರಗಳಲ್ಲೂ ಅಭಿನಯಿಸಿದರು. ಆಯಾ ಸಂದರ್ಭದಲ್ಲಿ ತುಟಿ ಹೇಗೆ ಚಲಿಸಬೇಕು, ಶಾಂತ ಸಂಭಾಷಣೆಯಲ್ಲಿ; ರೌದ್ರ ಸಂದರ್ಭದಲ್ಲಿ , ರಮಣೀಯ ಸನ್ನಿವೇಶದಲ್ಲಿ ಕೆನ್ನೆಯ ಅದುರು- ಆ ಮೂಲಕ ಇಡೀ ಮುಖ ಹೇಗಿರಬೇಕು ಎಂಬುದನ್ನು ಕ್ಷಣಕ್ಷಣವೂ ಮುಟ್ಟಿ ಮುಟ್ಟಿ ಅರ್ಥ ಮಾಡಿಕೊಳ್ಳುವಂತೆ ಸೂಚಿಸಿದರು. ಯಾವ ಯಾವ ಸಂದರ್ಭದಲ್ಲಿ ಕತ್ತನ್ನು ಹೇಗೆ ಹೊರಳಿಸಬೇಕು; ಹಿಂದಕ್ಕೆ ಎಷ್ಟು ಹೆಜ್ಜೆ, ಮುಂದಕ್ಕೆಷ್ಟು ಹೆಜ್ಜೆ ಎತ್ತಿಡಬೇಕು? ಎಡಕ್ಕೆ, ಬಲಕ್ಕೆ ಯಾವಾಗ ತಿರುಗಬೇಕು, ಹಾಗೆ ತಿರುಗಿದ ಸಂದರ್ಭದಲ್ಲಿ ಹೇಗೆ ನಡೆದು ಬರಬೇಕು ಎಂಬುದನ್ನೆಲ್ಲ- ಅಭ್ಯಾಸದಲ್ಲಿ ತೊಡಗಿದ್ದ ತಮ್ಮ ಕೆನ್ನೆ, ಕೈ, ಕಾಲು, ಭುಜ ಸ್ಪರ್ಶಿಸಿಯೇ ಕಲಿಯುವಂತೆ ಮಾಡಿದರು.
ಅವರ ಶ್ರಮ ವ್ಯರ್ಥವಾಗಲಿಲ್ಲ. ತುಂಬ ಶ್ರದ್ಧೆಯಿಂದ, ತುಂಬ ಆಸೆಯಿಂದ ಬುಸೇಗೌಡ ಕಲಿತುಬಿಟ್ಟ. ತಾನು ಇಡುತ್ತಿರುವ ಹೆಜ್ಜೆ ಸರಿಯಿದೆಯೆ ಎಂದು ಖಚಿತಪಡಿಸಿಕೊಳ್ಳಲು ಗಂಟೆಗಟ್ಟಲೆ ಅಭ್ಯಾಸ ಮಾಡಿದ. ಕಡೆಗೆ, ಮುಖಭಾವ ಪ್ರದರ್ಶನದಲ್ಲಿ ಗುರುವನ್ನೇ ಮೀರಿಸಬಲ್ಲ ಶಿಷ್ಯ ಎಂಬ ಹೆಗ್ಗಳಿಕೆಗೂ ಪಾತ್ರನಾದ. ಹಿಂದೆಯೇ, ದಶಾವತಾರ ನೃತ್ಯರೂಪಕದಲ್ಲಿ ಪಳಗಿದ- ೧೯೯೫ರಲ್ಲಿ ಆರಂಗೇಟ್ರಂ ಆರಂಭಿಸಿ ಕುಣಿಯಲು ಶುರುವಿಟ್ಟ ನೋಡಿ- ಅವತ್ತೇ ಭರತನಾಟ್ಯವೆಂಬುದು ಆತನ ಗೆಳತಿಯಾಯಿತು. ಬಂಧುವಾಯಿತು. ಉಸಿರಾಯಿತು. ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ ಎಂಬ ಮಾತಿಗೆ ಬುಸೇಗೌಡರ ಬದುಕು ಸಾಕ್ಷಿಯೂ ಆಯಿತು.
* * *
ಮೊದಲೇ ಹೇಳಿದಂತೆ ಭರತನಾಟ್ಯಕ್ಕೆ ತನ್ನದೇ ಆದ ಗಾಂಭೀರ್ಯವಿದೆ. ಅಲ್ಲಿ ನೃತ್ಯಪಟುಗಳು ರಂಗ ಪ್ರವೇಶಿಸುವುದೇ ಒಂದು ಭಂಗಿಯಲ್ಲಿ. ಹಾಗೆಯೇ ನಿರ್ಗಮಿಸುವುದೇ ಒಂದು ಭಂಗಿಯಲ್ಲಿ. ಅಲ್ಲಿ ತಾಳಕ್ಕೆ, ಹಿನ್ನೆಲೆಗಾಯನಕ್ಕೆ ತಕ್ಕಂತೆ ನೃತ್ಯಪಟುವಿನ ಇಡೀ ದೇಹ ಬಾಗುವ, ಬಳುಕುವ, ಕಂಪಿಸುವ ಪ್ರಕ್ರಿಯೆಗೆ ಒಳಪಡುತ್ತಲೇ ಇರಬೇಕು. ಅತ್ಯುತ್ತಮ ದೃಷ್ಟಿ ಸಾಮರ್ಥ್ಯ ಹೊಂದಿದವರಿಗೇ ಸವಾಲಾಗಬಲ್ಲ ಈ ಕಲೆಯನ್ನು, ಅಂಧನೊಬ್ಬ -ಗುರುವನ್ನು ಮುಟ್ಟಿ ಮುಟ್ಟಿ ನೋಡುತ್ತಲೇ ಒಲಿಸಿಕೊಂಡ ಅಂದರೆ; ಈಗಾಗಲೇ ಹತ್ತಿರ ಹತ್ತಿರ ಸಾವಿರ ಪ್ರದರ್ಶನಗಳನ್ನು ನೀಡಿದ್ದಾನೆ ಅಂದರೆ ಸುಮ್ಮನೆ ಮಾತಲ್ಲ.
ವಿಪರ್ಯಾಸವೆಂದರೆ, ಈ ಅಪರೂಪದ ಸಾಧಕನ ಕುರಿತು ಹೆಚ್ಚಿನ ಮಾಹಿತಿಯೇ ಲಭ್ಯವಿಲ್ಲ. ಆದರೆ, ಅಂಧರಿಗೆ ಭರತನಾಟ್ಯ ಹೇಳಿಕೊಡುವ ಅಶೋಕ್‌ಕುಮಾರ್ ೯೪೪೮೦ ೬೭೯೫೨ ನಂಬರಿನಲ್ಲಿ ಮಾತಿಗೆ ಸಿಗುತ್ತಾರೆ. ಟಚ್ ಅಂಡ್ ಫೀಲ್ ಶೈಲಿಯ ಭರತನಾಟ್ಯದ ಪಟ್ಟುಗಳನ್ನು ಈಗಲೂ ಖುಷಿಯಿಂದ ವಿವರಿಸುತ್ತಾರೆ.
ಯಾವುದೋ ಚಿಕ್ಕ ಸೋಲಿಗೆ, ಒಂದು ಆಕಸ್ಮಿಕ ಹಿನ್ನಡೆಗೆ, ಕಿರುಬೆರಳಿಗಿಂತ ಚಿಕ್ಕದಾದ ಅಪಯಶಸ್ಸಿನಿಂದ ನೊಂದು ಬದುಕಿಗೇ ಗುಡ್‌ಬೈ ಹೇಳುವ ಜನ ನಮ್ಮ ಮಧ್ಯೆ ಇದ್ದಾರೆ. ಅಂಥವರಿಗೆಲ್ಲ ಬುಸೇಗೌಡರ ಸಾಧನೆ-ಸಾಹಸ ಮಾದರಿಯಾಗಲಿ. ಒಬ್ಬರ ಬದುಕು ಹತ್ತು ಮಂದಿಯ ಪಾಲಿಗೆ ದಾರಿದೀಪವಾದರೆ- ಅದನ್ನು ಮೀರಿದ ಖುಷಿ ಬೇರೇನಿದೆ?

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: