ಬಿಡದೆ ಕಾಡುವ ಈ ಹಾಡಿನ ಹಿಂದೆ ಕಥೆ ಇದೆ; ವ್ಯಥೆಯೂ…

null

ನೀನೇ ಸಾಕಿದಾ ಗಿಣಿ….
ಚಿತ್ರ: ಮಾನಸ ಸರೋವರ. ಗೀತೆರಚನೆ: ವಿಜಯ ನಾರಸಿಂಹ
ಗಾಯನ: ಎಸ್ಪಿ ಬಾಲಸುಬ್ರಹ್ಮಣ್ಯಂ. ಸಂಗೀತ: ವಿಜಯಭಾಸ್ಕರ್

ನೀನೇ ಸಾಕಿದ ಗಿಣಿ, ನಿನ್ನಾ ಮುದ್ದಿನಾ ಗಿಣಿ
ಹದ್ದಾಗಿ ಕುಕ್ಕಿತಲ್ಲೋ ನಿನ್ನ ಹದ್ದಾಗಿ ಕುಕ್ಕಿತಲ್ಲೋ ||ಪ||

ಚಿನ್ನಾದ ಚೂರಿ ಚೆಂದಾವ ತೋರಿ
ಬೆನ್ನಲ್ಲೇ ತೂರಿತಲ್ಲೊ ನಿನ್ನ ನೆತ್ತಾರು ಹೀರಿತಲ್ಲೋ
ನೆತ್ತಾರು ಹೀರಿತಲ್ಲೋ ನಿನ್ನ ನೆತ್ತಾರು ಹೀರಿತಲ್ಲೋ ||೧||

ಬೀಸೋ ಗಾಳಿ ಬಿರುಗಾಳಿಯಾಗಿ
ಬೆಂಕಿಯಾ ಮಳೆ ತಂತಲ್ಲೋ
ಬೆಂಕೀಲಿ ಬೆಂದೆಯಲ್ಲೋ ಉರಿ ಬೆಂಕೀಲಿ ಬೆಂದೆಯಲ್ಲೋ ||೨||

ಹೂವಾಗಿ ಅರಳಿ ಹೂವಾಗಿ ಕೆರಳಿ
ಪ್ರಾಣಾವ ಹಿಂಡಿತಲ್ಲೋ ಪ್ರಾಣಾವ ಹಿಂಡಿತಲ್ಲೋ
ಎದೆಯೆಲ್ಲ ಸಿಡಿಯಿತಲ್ಲೋ
ವರ್ಷಗಳ ಕಾಲ ಪ್ರೀತಿಸಿದವಳು; ಜತೆಗೇ ಬದುಕುವ ಮಾತಾಡಿದವಳು; ಹೊಸ ಬದುಕಿನ ಕನಸು ಕಂಡವಳು; ಅದೆಷ್ಟೋ ಇರುಳು ಜೊತೆಗೇ ಇದ್ದು ಜತೆಯಾಗಿ ನಕ್ಷತ್ರ ಎಣಿಸಿದವಳು; ಯಾವುದೋ ಜೋಕಿಗೆ ನಗುವಾಗಿ ಅರಳಿದವಳು-ಕಡೆಗೊಂದು ದಿನ ಯಾವುದೋ ಕಾರಣ ಹೇಳಿ ಅಥವಾ ಕಾರಣವನ್ನೇ ಹೇಳದೆ ಬೇರೊಂದು ನೆರಳಿನೆಡೆಗೆ ಹೋಗಿ ಬಿಡುತ್ತಾಳಲ್ಲ? ಈ ಆಘಾತವನ್ನು ನನ್ನ ಹುಡುಗ ಸಹಿಸಲಾರ ಎಂದು ಗೊತ್ತಿದ್ದೂ ಕೈ ಎತ್ತಿಬಿಡುತ್ತಾಳಲ್ಲ? ಅಂಥ ಸಂದರ್ಭದಲ್ಲಿ ಎಲ್ಲ ಭಗ್ನ ಪ್ರೇಮಿಗಳಿಗೂ ನೆನಪಾಗುವ; ಆಪ್ತ ಅನ್ನಿಸುವ, ನನ್ನೆದೆಯ ರಾಗ ಎನ್ನಿಸುವ ಹಾಡೇ- `ನೀನೇ ಸಾಕಿದಾ ಗಿಣಿ….’
ಸ್ವಾರಸ್ಯವೆಂದರೆ, ಅಂಥದೊಂದು ಭಗ್ನಪ್ರೇಮದ ನೋವು ಜತೆಯಾಗಿದ್ದ ಸಂದರ್ಭದಲ್ಲಿಯೇ ನಿರ್ದೇಶಕ ಪುಟ್ಟಣ್ಣಕಣಗಾಲ್ ಈ ಹಾಡು ಬರೆಸಿದರು. ಅಷ್ಟೇ ಅಲ್ಲ. ತಮ್ಮ ಭಗ್ನಪ್ರೇಮದ ಕತೆಯನ್ನೇ `ಮಾನಸ ಸರೋವರ’ ಹೆಸರಿನ ಸಿನಿಮಾ ಮಾಡಿ, ಗೆದ್ದರು. ಈ ಸಿನಿಮಾದ ಕತೆಗೆ ಹಾಗೂ `ನೀನೇ ಸಾಕಿದ ಗಿಣಿ’ ಹಾಡಿಗೆ ಕಾರಣರಾದವರು ನಟಿ ಆರತಿ!
ಎಲ್ಲರೂ ಬಲ್ಲಂತೆ `ಗೆಜ್ಜೆಪೂಜೆ’ ಚಿತ್ರದಲ್ಲಿ ಒಂದು ಚಿಕ್ಕ ಪಾತ್ರದ ಮೂಲಕ ಪುಟ್ಟಣ್ಣನವರ ಕ್ಯಾಂಪಿಗೆ ಬಂದವರು ಆರತಿ. ಮುಂದೆ `ನಾಗರಹಾವು’ ಸಿನಿಮಾ ತಯಾರಾಗುವ ವೇಳೆಗೆ ಆರತಿ-ಪುಟ್ಟಣ್ಣನ ಮಧ್ಯೆ ಗುಪ್ತ್ ಗುಪ್ತ್ ಎಂಬಂಥ ಅಫೇರ್ ಶುರುವಾಗಿತ್ತು. ಆಗಷ್ಟೇ ಚಿಗುರುತ್ತಿದ್ದ ಪ್ರೇಮ ನೋಡಿ, ಅದೇ ಕಾರಣದಿಂದ ಹೇಗಾದರೂ ಸರಿ, ಆರತಿಯನ್ನು ಖುಷಿಪಡಿಸಬೇಕು ಎಂದು ಮೇಲಿಂದ ಮೇಲೇ ಯೋಚಿಸುತ್ತಿದ್ದರು ಪುಟ್ಟಣ್ಣ. ನಂತರ ಆರತಿಗೆಂದೇ `ಬಾರೆ ಬಾರೇ ಚೆಂದದ ಚೆಲುವಿನ ತಾರೆ’ ಹಾಡು ಬರೆಸಿದ್ದರು. ಮುಂದೆ `ಶುಭಮಂಗಳ’ದ ವೇಳೆಗೆ ಅವರಿಬ್ಬರ ಸಂಬಂಧ ಮತ್ತಷ್ಟು ಗಟ್ಟಿಯಾಗಿತ್ತು. ಆಗ `ಈ ಶತಮಾನದ ಮಾದರಿ ಹೆಣ್ಣು’ ಎಂಬ ಹಾಡು ಬರೆಸಿ ಆರತಿಯನ್ನು ಬೆರಗಾಗಿಸಿದ್ದ ಪುಟ್ಟಣ್ಣ, ಮುಂದೆ ಮದುವೆಯಾದ ನಂತರ `ರಂಗನಾಯಕಿ ಚಿತ್ರದಲ್ಲಿ `ಮಂದಾರ ಪುಷ್ಪವು ನೀನು…’ ಎಂಬ ಸುಮಧುರ ಹಾಡು ಬರೆಸಿ ಆರತಿಯವರ ಮನಸ್ಸು ಗೆದ್ದಿದ್ದರು.
ಸ್ವಾರಸ್ಯವೆಂದರೆ, ನಾಗರಹಾವು, ಉಪಾಸನೆ, ರಂಗನಾಯಕಿ ಧರ್ಮಸೆರೆ, ಶುಭಮಂಗಳ ಚಿತ್ರದಲ್ಲಿ ಆರತಿಯನ್ನು ಹಾಡಿ ಹೊಗಳುವಂಥ ಹಾಡುಗಳನ್ನು ಬರೆಸಿದ ಪುಟ್ಟಣ್ಣ, ಅದೇ ಸಂದರ್ಭದಲ್ಲಿ ಆ ಎಲ್ಲ ಹಾಡುಗಳೂ ಚಿತ್ರದ ಸಂದರ್ಭಕ್ಕೆ ಪೂರಕವಾಗಿರುವಂತೆ; ಸನ್ನಿವೇಶದ ತೀವ್ರತೆಯನ್ನು ಹೆಚ್ಚಿಸುವಂತೆ ನೋಡಿಕೊಂಡರು. ಆ ಮೂಲಕ ಆರತಿಯ ಮೇಲಿನ ಮೋಹ ತಮ್ಮ ಇಮೇಜು ಕೆಡಿಸದಂತೆ; ಚಿತ್ರದ ಯಶಸ್ಸಿಗೆ ತೊಡರುಗಾಲಾಗದಂತೆ ನೋಡಿಕೊಂಡರು.
ಅಂಥ ಪುಟ್ಟಣ್ಣ; ಮೇಲಿಂದ ಆರತಿಯನ್ನು ಹಾಡಿ ಹೊಗಳುವ ಹಾಡು ಬರೆಸಿದ ಪುಟ್ಟಣ್ಣ; ಅಕೆಗೆಂದೇ ವಿಶೇಷ ಪಾತ್ರ ಸೃಷ್ಟಿಸಿದ ಪುಟ್ಟಣ್ಣ, ಅದೇ ಆರತಿಯನ್ನು ಹಾವಿಗೂ, ಹದ್ದಿಗೂ, ಬೆಂಕಿಗೂ ಹೋಲಿಸಿ ಹಾಡು ಬರೆಸಿದರಲ್ಲ? ಆ ಹಾಡು ನಾಡಿನ ಸಮಸ್ತರನ್ನು ಪರಿಣಾಮಕಾರಿಯಾಗಿ ತಲುಪುವಂತೆ ನೋಡಿಕೊಂಡರಲ್ಲ? ಅವರ ಹಿಂದೊಂದು ಕಥೆಯೇ ಇದೆ.
*********
ಆರತಿಯನ್ನು ಮದುವೆಯಾದರಲ್ಲ? ಆನಂತರದಲ್ಲಿ ಉಳಿದೆಲ್ಲ ದಂಪತಿಯರಂತೆಯೇ ಒಂದು ಹೊಸ ಮನೆ ಕಟ್ಟಿಸುವ ಯೋಜನೆ ಹಾಕಿಕೊಂಡಿದ್ದರು ಪುಟ್ಟಣ್ಣ. ಅದಕ್ಕೆ ಆರತಿಯವರ ಸಮ್ಮತಿಯೂ ಇತ್ತು. ಸೈಟು ಖರೀದಿಸಿದ್ದಾಯಿತು. ಮನೆಯ ನೀಲನಕ್ಷೆ ತಯಾರಾಯಿತು. ಗುದ್ದಲಿ ಪೂಜೆಯೂ ಮುಗಿಯಿತು. ಪುಟ್ಟಣ್ಣ ತುಂಬ ಸಡಗರದಿಂದ ಓಡಾಡುತ್ತ ಮನೆ ಕಟ್ಟಿಸುತ್ತಿದ್ದರು. ಆದರೆ, ಗೃಹನಿರ್ಮಾಣ ಕಾರ್ಯ ಮುಗಿದ ವೇಳೆಗೆ ಆರತಿ-ಪುಟ್ಟಣ್ಣರ ಸಂಬಂಧದಲ್ಲಿ ಬಿರುಕುಂಟಾಗಿತ್ತು. ತಮ್ಮ ಹೊಸಮನೆ `ಬೆಳ್ಳಿತೆರೆ’ಯ ಗೃಹಪ್ರವೇಶಕ್ಕೆ ಆರತಿಯವರು ಎಲ್ಲರಿಗೂ ಆಹ್ವಾನ ಪತ್ರಿಕೆ ಕಳುಹಿಸಿದರು; ಅಂಥವರ ಪಟ್ಟಿಯಲ್ಲಿ ಪುಟ್ಟಣ್ಣ ಕಣಗಾಲರ ಹೆಸರಿರಲಿಲ್ಲ!
ಈ ವಿಷಯ ತಿಳಿದು ಪುಟ್ಟಣ್ಣನವರಿಗೆ ಅಪಾರ ವೇದನೆಯಾಯಿತು. ಆ ಸಂಕಟವನ್ನು ಒಂಟಿಯಾಗಿ ಭರಿಸಲಾಗದೆ ತನ್ನ ಸುಖ-ದುಃಖದಲ್ಲಿ ಭಾಗಿಯಾಗುತ್ತಿದ್ದ ಪ್ರಿಯ ಗೆಳೆಯ ವಿಜಯನಾರಸಿಂಹ ಅವರಿಗೆ ತುರ್ತಾಗಿ ಬರುವಂತೆ ಹೇಳಿ ಕಳುಹಿಸಿದರು.
ವಿಜಯ ನಾರಸಿಂಹ ಗಾಬರಿಯಿಂದಲೇ ಓಡೋಡಿ ಬಂದಾಗ-ಒಂದು ಇಟ್ಟಿಗೆಯನ್ನು ತಲೆಯ ಕೆಳಗೆ ಇಟ್ಟುಕೊಂಡು ಪುಟ್ಟಣ್ಣ ಬಿಕ್ಕಳಿಸಿ ಅಳುತ್ತಿದ್ದರಂತೆ. ಯಾಕೆ? ಏನಾಯ್ತು ಎಂದು ಕೇಳಿದ್ದಕ್ಕೆ -`ನಾಳೆ ಆರತಿ ಮನೆಯ ಗೃಹಪ್ರವೇಶವಂತೆ. ಆ ಮನೆಯ ಒಂದೊಂದು ಇಟ್ಟಿಗೆಯಲ್ಲೂ ನನ್ನ ಪರಿಶ್ರಮದ ಪಾಲಿದೆ. ಆದರೆ ಆಕೆ ನನ್ನನ್ನು ಕರೆದಿಲ್ಲ’ ಎಂದು ಮತ್ತಷ್ಟು ಅತ್ತರಂತೆ.
ಪುಟ್ಟಣ್ಣ ಅಳುವುದನ್ನು ಕಂಡು ತಾವೂ ಗದ್ಗದರಾದ ವಿಜಯನಾರಸಿಂಹ ನಂತರ ಸಾವರಿಸಿಕೊಂಡು-`ಸಮಾಧಾನ ತಂದುಕೋ ಪುಟ್ಟಣ್ಣ. ಒಂದು ಹೆಣ್ಣಿಗಾಗಿ ನೀನು ಇಷ್ಟೊಂದು ಕೊರಗುವುದು ಸರಿಯಲ್ಲ’ ಎಂದರು. ತಕ್ಷಣ ಅಳು ನಿಲ್ಲಿಸಿದ ಪುಟ್ಟಣ್ಣ- `ಲೋ ವಿಜಯ, ನನ್ನ ಈ ಸ್ಥಿತಿಯನ್ನು ನೋಡಿರುವೆ. ಆರತಿಗೆ ನಾನು ಕೊಟ್ಟ ಪ್ರೀತಿ, ಅದಕ್ಕೆ ಪ್ರತಿಯಾಗಿ ಆಕೆ ನನಗೆ ಮಾಡಿದ ಮೋಸವನ್ನೇ ನೆಪವಾಗಿಟ್ಟುಕೊಂಡು ಒಂದು ಹಾಡು ಬರಿ. ಅದನ್ನು ಮುಂದಿನ ಚಿತ್ರದಲ್ಲಿ ಬಳಸುತ್ತೇನೆ’ ಎಂದರಂತೆ. ಆಗ ಸೃಷ್ಟಿಯಾದದ್ದೇ-`ನೀನೇ ಸಾಕಿದ ಗಿಣಿ…’
ಸ್ವಾರಸ್ಯವೆಂದರೆ, `ನಾಗರಹಾವು’ ಚಿತ್ರದ ಸಂದರ್ಭದಲ್ಲಿ ಆರತಿಯನ್ನು ತನ್ನ ಬದುಕಿಗೆ ಪುಟ್ಟಣ್ಣ ಪರೋಕ್ಷವಾಗಿ ಸ್ವಾಗತಿಸಿದಂತಿದ್ದ `ಬಾರೆ ಬಾರೆ ಚೆಂದದ ಚೆಲುವಿನ ತಾರೆ’ಯನ್ನು ವಿಜಯನಾರಸಿಂಹರೇ ಬರೆದಿದ್ದರು. ಮುಂದೆ ಅದೇ ಪುಟ್ಟಣ್ಣ ಆರತಿಯನ್ನು ಟೀಕಿಸುವಂತ ಹಾಡನ್ನೂ ಅವರೇ ರಚಿಸಿದರು!
ಮುಂದೆ-`ಮಾನಸ ಸರೋವರ’ ತಯಾರಾದಾಗ, ಈ ಹಾಡನ್ನು ಒಂದು ಮೀಡಿಯಂ ಸ್ವರದಲ್ಲಿ ಹಾಡಿದರಂತೆ ಎಸ್ಪಿ ಬಾಲಸುಬ್ರಹ್ಮಣ್ಯಂ. ಆಗ ಪುಟ್ಟಣ್ಣ-ಬಾಲೂ, ಒಂದು ಹೆಣ್ಣಿನಿಂದ ಈ ಪುಟ್ಟಣ್ಣ ಅನುಭವಿಸಿದ ನೋವು, ವಂಚನೆ ಎಂಥದೆಂದು ಎಲ್ಲರಿಗೂ ಗೊತ್ತಾಗಲಿ. ನೀನು ತಾರಕಕ್ಕೆ ಹೋಗಿ ಹಾಡಪ್ಪಾ’ ಅಂದರಂತೆ. ಮುಂದೆ ಎಸ್ಪಿ ಹಾಗೆಯೇ ಹಾಡಿದರು. ಈ ತಾರಕ ಸ್ವರ ಖಂಡಿತವಾಗಿಯೂ ಪರಿಣಾಮ ಬೀರಿತು. ಚಿತ್ರ ಬಿಡುಗಡೆಯಾದಾಗ ಥೇಟರಿನಲ್ಲಿದ್ದ ಜನ ಈ ಹಾಡು ಕೇಳಿದಾಕ್ಷಣ-`ಆರತಿ, ಆರತಿ’ ಎಂದು ಪಿಸುಗುಟ್ಟಿಕೊಂಡರು.
ಕಡೆಯದಾಗಿ ಒಂದು ಮಾತು: ಹಿರಿಯ ನಟಿ ಆರತಿ ಅಥವಾ ದಿವಂಗತ ನಿರ್ದೇಶಕ ಪುಟ್ಟಣ್ಣ ಅವರ ಕುಟುಂಬ ವರ್ಗದವರನ್ನು ನೋಯಿಸುವ ಸಣ್ಣದೊಂದು ಆಶಯ ಕೂಡ ಈ ಬರಹದ್ದಲ್ಲ. ಬದಲಿಗೆ, ಕಾಡುವ ಹಾಡು ಸೃಷ್ಟಿಯಾದ ಸಂದರ್ಭಕ್ಕೆ ಕನ್ನಡಿ ಹಿಡಿಯುವ ಆಪ್ತ ಪ್ರಯತ್ನ, ಅಷ್ಟೆ.

Advertisements

7 Comments »

 1. 1
  kavitha Says:

  nimma niroopana shaily bombaat…blaag tumba channagi maadiddiri..nammanta paradeshagallilorge tumba vishya tilsikodta iddiri…tumba tumba thanks ishtolle blg maadi namagella oduva hucchu hattisuttirodke..:)

  ee haadina hindina kathe modale gottittaadaru..mattomme adbhutavaagi heliddiri..

  nimma abhimaani

  Kavitha
  Uganda

 2. 2

  Akkareya Kavitha medam,
  Nimma Preetiya maatugalige Runi.
  Nimma preeti Doddadu.
  Nanna Khushi ge anta bareyutta iddene.
  Nimmantha Olleya Odugaru Sikkirodu nanna Punya.
  Nimma native place yaavudu?
  Bangalore ge yaavaaga baruttiri? tilisi.. Uganda da Life hegide anta kuda biduvu maadikondu tilisi… idu prarthane…
  Preetiyinda…
  Manikanth.

 3. There is noticeably a bundle to know about this. I suppose you made certain nice
  points in

  features also.

 4. 5
  sahana chandrasheksriah Says:

  yandigu mareyalagadantha hadu……………………….
  old is gold

 5. 6
  B C Patil Says:

  ಚೆನ್ನಾಗಿದೆ ಸರ್

 6. 7
  B C Patil Says:

  ಸರ್ ಇದು ನಿಜ ಜೀವನದ ಹಾಡು ಹೆಣ್ಣನ್ನು ಎಷ್ಟು ಪ್ರೀತಿ ಮಾಡಿದರು ಅವರು ಮೋಸ ಮಾಡುತ್ತಾರೆ I like you song sir


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: