ನಾಯಕನ ತುಟಿ ಚಲನೆ ನೋಡಿ ಪದ ಜೋಡಿಸಿದಾಗ-ಜಯತು ಜಯ ವಿಠ್ಠಲಾ!


ಜಯತು ಜಯ ವಿಠ್ಠಲಾ…
ಚಿತ್ರ: ಸಂತ ತುಕಾರಾಂ. ಗೀತೆ ರಚನೆ: ಚಿ. ಸದಾಶಿವಯ್ಯ
ಗಾಯನ: ಪಿ.ಬಿ. ಶ್ರೀನಿವಾಸ್. ಸಂಗೀತ: ವಿಜಯಭಾಸ್ಕರ್

ಜಯತು ಜಯ ವಿಠ್ಠಲಾ… ಪಾಂಡುರಂಗಾ.. ಪಂಢರಿನಾಥ….||
ಜಯತು ಜಯ ವಿಠ್ಠಲಾ..| ನಿನ್ನ ನಾಮವು ಶಾಂತಿಧಾಮವು…
ಸೌಖ್ಯದಾರಾಮಾ… |ಪ|

ಪಾವನಾಂಗ ಪಂಢರಿನಾಥಾ… ಪಾದಸೇವಾ ಪುಣ್ಯವ ನೀತಾ…|
ಕರುಣಿಸಿ ಬಾರಯ್ಯಾ… ದರುಶನ ತಾರಯ್ಯಾ…
ನೀ ಎನ್ನ ಭಾಗ್ಯವಯ್ಯಾ… ಪಾಂಡುರಂಗ ಪಾಂಡುರಂಗಯ್ಯ||೧||

ಕನಸು ಮನಸಿನ ಜೀವವು ನೀನೆ… ಅಂತರಾತ್ಮನ ಭಾವವು ನೀನೇ|
ಅನ್ಯವು ಇಲ್ಲಯ್ಯ… ಎಲ್ಲವು ನೀನಯ್ಯಾ…|
`ತುಕಾ’ ಎಂದ ಮಾತಿದಯ್ಯಾ… ಪಾಂಡುರಂಗ ಪಾಂಡುರಂಗಯ್ಯಾ||೨||

ಕಾಡುವ ಹಾಡುಗಳ ನೆಪದಲ್ಲಿ ಈ ವಾರ ನಮ್ಮ ಕೈ ಜಗ್ಗಲಿರುವ ಸಾಹಿತಿ ಚಿ. ಸದಾಶಿವಯ್ಯ. ಅವರು ಚಿ. ಉದಯಶಂಕರ್ ಅವರ ತಂದೆ. ೧೯೦೮ರಲ್ಲಿ ಜನಿಸಿ, ೧೯೮೨ರ ಜನವರಿ ೧೪ರಂದು ನಿಧನರಾದ ಸದಾಶಿವಯ್ಯ, ಬಾಲ್ಯದಲ್ಲೇ ಸಾಹಿತ್ಯ, ನಾಟಕದ ಗೀಳು ಹಚ್ಚಿಕೊಂಡ ಮನುಷ್ಯ. ಹಿರಿಯ ಸಾಹಿತಿ ಅ.ನ.ಕೃ.ರವರ ಆಪ್ತ ಮಿತ್ರರೂ ಆಗಿದ್ದ ಸದಾಶಿವಯ್ಯ, ನಾಟಕ ಹಾಗೂ ಕಾದಂಬರಿಗಳನ್ನೂ ಬರೆದು ಗೆದ್ದವರು.
ಸಂಬಳದಾರರ ಪಾಡನ್ನು, ಮಧ್ಯಮ ವರ್ಗದವರ ಆಶೋತ್ತರಗಳನ್ನು ಒಂದೊಂದಾಗಿ ವಿವರಿಸುವ ಹಾಡೊಂದಿದೆ. ಅದು `ಮೊದಲ ತೇದಿ’ ಚಿತ್ರದ್ದು. `ಮೊದಲ್ ತೇದಿ, ಇಂದು ಮೊದಲ್ ತೇದಿ/ ನಾಡಿನ ಜನವೆಲ್ಲ ಮುದದಿಂದ ಎದುರ್ ನೋಡುವ ಮೊದಲ್ ತೇದಿ/ ಒಂದರಿಂದ ಇಪ್ಪತ್ತರವರೆಗೂ ಉಂಡಾಟ, ಉಂಡಾಟ/ ಇಪ್ಪತ್ತೊಂದರಿಂದ ಮೂವತ್ತರವರೆಗೂ ಭಂಡಾಟ, ಭಂಡಾಟ’…. ಮಕ್ಕಳ ಕುಂಟೋಬಿಲ್ಲೆಯಂತೆ ಸಾಗುವ ಈ ಹಾಡು ಕೂಡ ಸದಾಶಿವಯ್ಯ ಅವರ ಸೃಷ್ಟಿಯೇ.
ಸದಾಶಿವಯ್ಯನವರ ನಿಜವಾದ ಸತ್ವ ಅನಾವರಣಗೊಂಡಿದ್ದು-`ಅಮರಶಿಲ್ಪಿ ಜಕಣಾಚಾರಿ’ ಚಿತ್ರದಲ್ಲಿ. ಈ ಚಿತ್ರಕ್ಕಂತೂ ಅವರು ಒಂದಕ್ಕಿಂತ ಒಂದು ಸುಂದರ ಗೀತೆಗಳನ್ನು ರಚಿಸಿದರು. ನೃತ್ಯದ ಪರಿಸರವನ್ನು ವರ್ಣಿಸುವ, ನೃತ್ಯಗೀತೆಯ ಮಾದರಿಯಲ್ಲೇ ಇರುವ `ಚೆಲುವಾಂತ ಚೆನ್ನಿಗನೆ ನಲಿದಾಡು ಬಾ/ ಈ ಸಿಂಗಾರ ಶಿಲೆಯೊಡನೆ ಕುಣಿದಾಡು ಬಾರಾ’ ಹಾಡಿನಲ್ಲಿ ತಾಳ ಮೇಳ, ಗಾಳಿಗಂಧ, ಭಾವಭಂಗಿಯ ಅವಿನಾಭಾವ ಸಂಬಂಧವನ್ನೇ ತೆರೆದಿಟ್ಟರು.
ಮುಂದೆ, ಯಾವ ಭಾವಗೀತೆಗೂ ಕಡಿಮೆ ಇಲ್ಲದಂಥ `ಕನಸಿನಾ ದೇವಿಯಾಗಿ/ ಮನಸಿನಾ ನಲ್ಲೆಯಾಗಿ/ ಅಂದವೇ ರೂಪಗೊಂಡ ತರುಣಿ ಯಾರಿದು?’ ಎಂಬ ಹಾಡನ್ನು `ಪ್ರತಿಜ್ಞೆ’ ಚಿತ್ರಕ್ಕೆ ಬರೆದದ್ದು; ತುಂಟತನ ಮತ್ತು ರಸಿಕತೆ ಎರಡಕ್ಕೂ ಸಾಕ್ಷಿಯಾಗುವ `ಬೇಡ ಕೃಷ್ಣ ರಂಗಿನಾಟ ಸೀರೆ ನೆನೆವುದು ಮಧ್ಯರಾತ್ರಿ ತುಂಬು ಚಳಿಯ ತುಂಬುತಿರುವುದು’ ಎಂಬ ಮಿಂಚನ್ನು ಪದಗಳಲ್ಲಿ ಕಟ್ಟಿಕೊಟ್ಟದ್ದು ಕೂಡ ಇದೇ ಸದಾಶಿವಯ್ಯನವರು. ಅಷ್ಟೇ ಅಲ್ಲ, ಡಾ. ರಾಜ್‌ಕುಮಾರ್ ಹಾಡಿದ ಪ್ರಪ್ರಥಮ ಗೀತೆ -`ಮಹಿಷಾಸುರ ಮರ್ಧಿನಿಯ `ಹುಣ್ಣಿಮೆ ಚಂದಿರ ತಾ ನಗಲು/ ಉಕ್ಕುವುದೇತಕೆ ಆ ಕಡಲು’ ಎಂಬ ಒಗಟಿನ ಹಾಡನ್ನು ಬರೆದದ್ದು ಕೂಡ ಸದಾಶಿವಯ್ಯನವರೇ.
********
ಇಂಥ ಹಿನ್ನೆಲೆಯ ಸದಾಶಿವಯ್ಯನವರು, ತುಂಬ ವಿಚಿತ್ರ-ಛಾಲೆಂಜಿಂಗ್ ಎಂಬಂಥ ಸನ್ನಿವೇಶದಲ್ಲಿ `ಸಂತ ತುಕಾರಾಂ’ ಚಿತ್ರದ `ಜಯತು ಜಯ ವಿಠ್ಠಲಾ’ ಹಾಡು ಬರೆದರು. ಅದರ ಹಿನ್ನೆಲೆ ಕೇಳಿದರೆ, ಇವತ್ತಿಗೂ ರೋಮಾಂಚನವಾಗುತ್ತದೆ. ಕ್ಷಣಕಾಲ ಮೈ ಕಂಪಿಸುತ್ತದೆ. ಹಿಂದೆಯೇ ಚಿ. ಸದಾಶಿವಯ್ಯನವರ ಪ್ರತಿಭೆಗೆ, ಪಿ.ಬಿ. ಶ್ರೀನಿವಾಸ್ ಅವರ ಆರೋಹಣ-ಅವರೋಹಣದ ಗಾನವೈಭವಕ್ಕೆ ನಿಂತಲ್ಲಿಯೇ ಕೈ ಮುಗಿವ ಆಸೆಯಾಗುತ್ತದೆ. ಈಗಲೂ, ಒಂದು ಪವಾಡದಂತೆ ಕಾಣುವ, ನಂಬಲು ಸಾಧ್ಯವೇ ಇಲ್ಲ ಎಂದು ಉದ್ಗರಿಸುವಂತೆ ಮಾಡುವ ಆ ಸಂದರ್ಭದ ವಿವರಣೆ ಹೀಗಿದೆ:
ಅದು ೧೯೬೩ರ ಮಾತು. ಆಗಷ್ಟೇ ಪ್ರಭಾತ್ ಸಂಸ್ಥೆಯವರ, ದಾಮಲೆಯವರ ನಿರ್ದೇಶನ, ವಿಷ್ಣು ಪಂತ ಪಗ್ನಿಸ್ ಅಭಿನಯದ ಮರಾಠಿ ಚಿತ್ರ `ಸಂತ ತುಕಾರಾಂ’ ಬಿಡುಗಡೆಯಾಗಿ ಜಯಭೇರಿ ಹೊಡೆದಿತ್ತು. `ಜಯತು ಜಯ ವಿಠ್ಠಲಾ’ ಎಂಬುದು ಆ ದಿನಗಳಲ್ಲಿ ತುಂಬ ಜನಪ್ರಿಯವಾಗಿದ್ದ ಮರಾಠಿ ಗೀತೆ. ಈ ಚಿತ್ರವನ್ನೇ ರಾಜಕುಮಾರ್ ನಾಯಕತ್ವದಲ್ಲಿ ಕನ್ನಡದಲ್ಲಿ ತೆಗೆದರೆ ಹೇಗೆ ಎಂಬ ಯೋಚನೆ ನಿರ್ದೇಶಕ ಸುಂದರ ನಾಡಕರ್ಣಿಯವರಿಗೆ ಬಂತು. ಅವರು ತಾವೇ ನಿರ್ಮಾಣ ಮತ್ತು ನಿರ್ದೇಶನದ ಹೊಣೆಹೊತ್ತರು. ನೋಡ ನೋಡುತ್ತಲೇ ಚಿತ್ರೀಕರಣ ಶುರುವಾಗಿಯೇ ಹೋಯಿತು. ಆ ಸಂದರ್ಭದಲ್ಲಿಯೇ ‘ಜಯತು ಜಯ ವಿಠ್ಠಲಾ’ ಗೀತೆಯನ್ನು ಅದೇ ಭಾವದೊಂದಿಗೆ ತಮ್ಮ ಸಿನಿಮಾದಲ್ಲಿ ಅಳವಡಿಸಲು ನಾಡಕರ್ಣಿ ನಿರ್ಧರಿಸಿದರು. ಆದರೆ ಅವರ ಅರ್ಜೆಂಟಿಗೆ ತಕ್ಕಂತೆ ಹಾಡು ಸಿದ್ಧವಾಗಿರಲಿಲ್ಲ!
ಆಗ ನಾಡಕರ್ಣಿಯವರಿಗೆ ಒಂದು ಉಪಾಯ ಹೊಳೆಯಿತು. ಹಾಡು ಸಿದ್ಧವಿಲ್ಲ ಎಂಬ ಕಾರಣಕ್ಕೇ ಚಿತ್ರೀಕರಣ ನಿಲ್ಲಿಸುವುದು ಬೇಡ ಎಂದೇ ಅವರು ನಿರ್ಧರಿಸಿದರು. ನಂತರ ಮರಾಠಿ ಗೀತೆಯ ಗ್ರಾಮಾಪೋನ್ ರೆಕಾರ್ಡ್ ತಂದು, ಅದನ್ನೇ ರಾಜ್‌ಕುಮಾರ್‌ಗೆ ಕೇಳಿಸಿದರು. ನಂತರ- `ಈ ಹಾಡಿನ ಭಾವಾರ್ಥ ಗ್ರಹಿಸಿ ನೀವು ಹಾಗೇ ತುಟಿಚಲನೆಯೊಂದಿಗೆ ಅಭಿನಯಿಸಿಬಿಡಿ. ಈಗ ಚಿತ್ರೀಕರಣ ಮುಗಿಸಿಬಿಡೋಣ. ನಂತರ ಹಾಡು ಬರೆಸಿದರಾಯ್ತು’ ಅಂದರು ನಾಡಕರ್ಣಿ. ನಿರ್ದೇಶಕರ ಮಾತು ಮತ್ತು ಮನಸ್ಸನ್ನು ಅರಿತವರಂತೆ, ಸಾಕ್ಷಾತ್ ತುಕಾರಾಮನೇ ಒಪ್ಪುವಂತೆ ಹಾಡಿನ ದೃಶ್ಯದಲ್ಲಿ, ಒಂದು ಪದವೂ ಗೊತ್ತಿಲ್ಲದಿದ್ದರೂ ಡಾ. ರಾಜ್ ಅಭಿನಯಿಸಿಬಿಟ್ಟರು. ನಂತರ, ಮರಾಠಿ ಗೀತೆಯ ಟ್ಯೂನನ್ನು ಕನ್ನಡಕ್ಕೆ ಹೊಂದುವಂತೆ ಬದಲಾಯಿಸಿದ ಸಂಗೀತ ನಿರ್ದೇಶಕ ವಿಜಯಭಾಸ್ಕರ್ `ನನ್ನ ಕೆಲಸವೂ ಮುಗೀತು’ ಎಂದರು.
ನಿಜವಾದ ಸವಾಲು ಎದುರಾದದ್ದು ಚಿ. ಸದಾಶಿವಯ್ಯನವರಿಗೆ. ಏಕೆಂದರೆ, ಅವರು ಚಿತ್ರೀಕರಣವಾದ ದೃಶ್ಯದ ರಷಸ್ ನೋಡಿ, ನಾಯಕನ ತುಟಿ ಚಲನೆಯನ್ನೇ ಇಂಚಿಂಚಾಗಿ ಗಮನಿಸಿ, ಅದಕ್ಕೆ ಸರಿಯಾಗಿ ಹೊಂದುವಂಥ ಪದ ಬಳಸಿ ಅವರು ಹಾಡು ಬರೆಯಬೇಕಿತ್ತು! ಅದೇ ಸಂದರ್ಭಕ್ಕೆ ಆ ದಿನಗಳಲ್ಲಿ ತುಂಬ ಜನಪ್ರಿಯವಾಗಿದ್ದ ಮರಾಠಿಯ `ಜಯತು ಜಯ ವಿಠ್ಠಲಾ’ಕ್ಕೆ ಸರಿಸಮವಾಗಿ ನಿಲ್ಲುವಂತೆಯೂ ಎಚ್ಚರಬೇಕಾಗಿತ್ತು. ಎಂಥ ಪ್ರತಿಭಾವಂತರನ್ನೂ ಬೆಚ್ಚಿ ಬೀಳಿಸುವ; ಅವರ ತಾಕತ್ತನ್ನೇ ಪರೀಕ್ಷೆಗೊಡ್ಡುವ ಸಂದರ್ಭ ಅದು. ಅಂಥ ಛಾಲೆಂಜಿಗೆ ಸದಾಶಿವಯ್ಯ ಒಪ್ಪಿದರು. ನಂತರ ಯಾವುದೋ ಧ್ಯಾನದಲ್ಲಿ ಕುಳಿತವರಂತೆ `ಜಯತು ಜಯತು ವಿಠ್ಠಲಾ’ ಹಾಡು ಬರೆದೇ ಬಿಟ್ಟರು.
ನಂತರ, ಹಾಡನ್ನು ಜತೆಗಿಟ್ಟುಕೊಂಡೇ ರಷಸ್ ನೋಡಿದ ಗಾಯಕ ಪಿ.ಬಿ. ಶ್ರೀನಿವಾಸ್, ಆ ವಿಠ್ಠಲನಿಗೂ ಅನುಮಾನ ಬಾರದ ರೀತಿಯಲ್ಲಿ ರಾಜ್‌ಕುಮಾರ್‌ರ ತುಟಿ ಚಲನೆಗೆ ಠಾಕುಠೀಕಾಗಿ ಹೊಂದಿಕೆಯಾಗುವಂತೆ ಮಧುರವಾಗಿ ಹಾಡಿಬಿಟ್ಟರು. ಕನ್ನಡ ಗೀತೆಯ ಲಾಲಿತ್ಯ, ಸದಾಶಿವಯ್ಯನವರ ಪದವೈಭವ, ವಿಜಯಭಾಸ್ಕರ್‌ರ ಮಧುರ ಸಂಗೀತ, ಪಿ.ಬಿ. ಶ್ರೀನಿವಾಸ್ ಅವರ ಜೇನ್ದನಿ ಮತ್ತು ರಾಜ್‌ಕುಮಾರ್ ಅವರ ಅನನ್ಯ ಅಭಿನಯ ಮರಾಠಿ ಹಾಡನ್ನು ಹಿಂದಿಕ್ಕಿತು. ಅಷ್ಟೇ ಅಲ್ಲ, ನಾಯಕನ ತುಟಿಚಲನೆ ಗಮನಿಸುತ್ತಾ ಪದ ಜೋಡಿಸಿ ಹಾಡು ಬರೆಯಲಾಯಿತು ಎಂದು ನಂಬಲೂ ಸಾಧ್ಯವಾಗದಂತೆ ಹಾಡಿನ ಧ್ವನಿಗ್ರಹಣ ನಡೆಸಿ, ಗೆದ್ದದ್ದೂ ಆಯಿತು.
ಬಹುಶಃ: ತುಟಿ ಚಲನೆ ಗಮನಿಸಿ, ಒಂದು ಅಂದಾಜಿನ ಮೇಲೆ ಹಾಡು ಬರೆದ; ಒಂದು ಅಂದಾಜಿನ ಮೇಲೆಯೇ ಅದನ್ನು ಹಾಡಿಯೂ ಬಿಟ್ಟ ಮತ್ತೊಂದು ಉದಾಹರಣೆ ಇಲ್ಲವೇನೋ….
ಈ ಅಪರೂಪದ ವಿವರವನ್ನು ಅಂಗೈಲಿ ಹಿಡಿದೇ ಮತ್ತೊಮ್ಮೆ ಸಂತ ತುಕಾರಾಂ ಸಿನಿಮಾ ನೋಡಿ. ರೋಮಾಂಚನಗೊಳ್ಳುವ ಸರದಿ ನಿಮ್ಮದಾಗಲಿ.

Advertisements

4 Comments »

 1. 1
  Pramod Says:

  Very very interesting 🙂
  I like this column – ‘ಹಾಡು ಹುಟ್ಟಿದ ಸಮಯ’

 2. 2

  ಈ ಹಾಡು ನನಗೆ ಬಹಳ ಇಷ್ಟದ್ದಾದರೂ ನೀವು ತಿಳಿಸಿರುವ ವಿಷಯ ಗೊತ್ತಿರಲಿಲ್ಲ. ಥ್ಯಾಂಕ್ಸ್ 🙂

 3. 4
  ravishankar Says:

  ನಿನ್ನೆಯಷ್ಟೇ ಈ ಸಿನಿಮಾ ನೋಡಿದೆ.. ನೀವೂ ಹೇಳಿದ್ದನ್ನು ನಂಬಲು ಆಗ್ತಾ ಇಲ್ಲ . ಇವತ್ತು ಮತ್ತೊಮ್ಮೆ ನೋಡ್ತೀನಿ 🙂
  ಈ ಹಾಡಿಗೆ ಕಾರಣಕರ್ತರಾದ ಎಲ್ಲರಿಗೂ, ಈ ಅಪರೂಪದ ವಿಷಯ ತಿಳಿಸಿದ ನಿಮಗೂ ಧನ್ಯವಾದಗಳು


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: