ರಾಯರು, ಮಾವನ ಮನೆಗೆ ರಾತ್ರಿಯೇ ಬಂದದ್ದೇಕೆ ಅನ್ನುತ್ತಾ….

ಅವರಿಗೆ ಆಗಷ್ಟೇ ಮದುವೆಯಾಗಿರುತ್ತದೆ. ಹೆಂಡತಿ ತವರಿನಲ್ಲಿರುತ್ತಾಳೆ. ಅಂಥ ಸಂದರ್ಭದಲ್ಲಿ ಮಾವನ ಮನೆಗೆ ಹೊರಟು ನಿಂತ ಅಳಿಯಂದಿರ ಮನಸ್ಥಿತಿ ಹೇಗಿರುತ್ತದೆ? ಒಂದೇ ಮಾತಲ್ಲಿ ಹೇಳಿಬಿಡುವುದಾದರೆ- ಅವರ ಮನಸಿನ ತುಂಬಾ ಆಸೆಗಳಿರುತ್ತವೆ. ನೂರು ಬಗೆಯ ಕನಸುಗಳಿರುತ್ತವೆ. ಒಂದಷ್ಟು ಕಲ್ಪನೆಗಳಿರುತ್ತವೆ. ಹೆಂಡತಿಯ ಮುಂದಷ್ಟೇ ಬಯಲಾಗುವ ಗುಟ್ಟುಗಳಿರುತ್ತವೆ. ವಾಂಛೆಗಳಿರುತ್ತವೆ. ರಾತ್ರಿಯ ಏಕಾಂತದಲ್ಲಿ ಪಿಸುಗುಡಲೆಂದೇ ಕಲಿತ ಒಂದೆರಡು ಪೋಲಿ ಮಾತುಗಳಿರುತ್ತವೆ. ಅವನ್ನೆಲ್ಲ ಎದೆಯೊಳಗೆ ಬಚ್ಚಿಟ್ಟುಕೊಂಡೇ ಈ ಅಳಿಯದೇವರುಗಳು-ಹೆಂಡತಿಗೆಂದು ಮಲ್ಲಿಗೆ ಖರೀದಿಸುತ್ತಾರೆ. ಸಂಪಿಗೆಯ ಎಸಳನ್ನೂ ಜತೆಗಿಡಿ ಅನ್ನುತ್ತಾರೆ. ಅವಳಿಗಿಷ್ಟವಾದ ತಿಂಡಿ ಖರೀದಿಸುತ್ತಾರೆ. ಇವೆಲ್ಲಾ ಅವಳಿಗಿಷ್ಟ ಎಂಬ ನಂಬಿಕೆಯಲ್ಲೇ ಇನ್ಯಾವುದೋ ಉಡುಗೊರೆಗೂ ಹಣ ಚೆಲ್ಲುತ್ತಾರೆ. ಮಾವನ ಮನೆಯವರ ಮುಂದೆ ಒಂದಷ್ಟು `ಜೋರಾಗಿ’ ಕಾಣಬೇಕೆಂಬ ಉದ್ದೇಶದಿಂದ ಒಂದಿಷ್ಟು ಸ್ನೋ-ಪೌಡರು ಬಳಿದುಕೊಂಡು ಸಿಂಗಾರ ಬಂಗಾರವಾಗಿ ಕಡೆಗೊಮ್ಮೆ ಹೊರಟೇ ಬಿಡುತ್ತಾರೆ.
ಹೀಗೆ, ನೂರೆಂಟು ಪೂರ್ವಸಿದ್ಧತೆಗಳೊಂದಿಗೇ ಹೊರಟ ಅಳಿಯರಾಯರು ಮಾವನ ಮನೆಯನ್ನು ತಲುಪಿದ್ದಾದರೂ ಹೇಗೆ ಮತ್ತು ಯಾವಾಗ ಎಂಬ ಎರಡನೇ ತುಂಟ ಪ್ರಶ್ನೆಯನ್ನು ನಾವು ಕೇಳುವ ಮೊದಲೇ- ಕೇಜಿಗಟ್ಟಲೆ ಮಾದಕತೆ, ಮೋಹ, ಮಾಯೆ, ಅರೆಪಾವಿನಷ್ಟು ಪೋಲಿತನ, ಚಟಾಕು ನಾಚಿಕೆ, ಮುಷ್ಟಿ ತುಂಟತನವನ್ನು ಕೊರಳಲ್ಲಿ ತುಂಬಿಕೊಂಡೇ ರತ್ನಮಾಲಾ ಪ್ರಕಾಶ್ ಹಾಡುತ್ತಾರೆ:
ರಾಯರು ಬಂದರು ಮಾವನ ಮನೆಗೆ
ರಾತ್ರಿಯಾಗಿತ್ತು
ಹುಣ್ಣಿಮೆ ಹರಸಿದ ಬಾನಿನ ನಡುವೆ
ಚಂದಿರ ಬಂದಿತ್ತು-ತುಂಬಿದ
ಚಂದಿರ ಬಂದಿತ್ತು
`ರಾಯರು ಬಂದರು ಮಾವನ ಮನೆಗೆ…’ ಎಂಬ ಸಾಲಲ್ಲಿನ ಸಲೀಸು ರಾಗ `ರಾಽಽತ್ರಿಯಾಗಿತ್ತು’ ಎನ್ನುವಾಗ ಮಾತ್ರ ಹಾಗೇ ಒಮ್ಮೆ ಬಾಗುತ್ತದೆ, ಬಳುಕುತ್ತದೆ. ಐದೇ ಅಕ್ಷರಗಳ ಆ ಪದವನ್ನು ರತ್ನಮಾಲಾ ಬೇಕೆಂದೇ ಸ್ವಲ್ಪ ದೀರ್ಘವಾಗುವಂತೆ ಹಾಡಿದ್ದಾರೆ ಅನಿಸುತ್ತದೆ. ಆ ಮೂಲಕ `ರಾತ್ರಿ’ ಎಂಬುದು ದಂಪತಿಗಳ ಪಾಲಿಗೆ ಯಾವತ್ತೂ ದೀರ್ಘವಾಗಿಯೇ ಇರಬೇಕು ಎಂಬ ಸಂದೇಶವೂ ಈ ಹಾಡಿನ ಹಿಂದಿದೆಯೇನೊ ಅನಿಸಿ ಖುಷಿಯಾಗುತ್ತದೆ. ಈ ಸಂಭ್ರಮದ ಮಧ್ಯೆಯೇ ಹಾಡು ಮುಂದುವರಿಯುತ್ತದೆ;
ಮಾವನ ಮನೆಯಲಿ ಮಲ್ಲಿಗೆ ಹೂಗಳ
ಪರಿಮಳ ತುಂಬಿತ್ತು.
ಬಾಗಿಲ ಬಳಿ ಕಾಲಿಗೆ ಬಿಸಿನೀರಿನ
ತಂಬಿಗೆ ಬಂದಿತ್ತು- ಒಳಗಡೆ
ದೀಪದ ಬೆಳಕಿತ್ತು.
ಈ ಮಧುರ ಹಾಡಿನ ಮಧ್ಯೆ ಕಳೆದುಹೋಗುತ್ತಿದ್ದ ಸಂದರ್ಭದಲ್ಲಿಯೇ ಹೊಳೆದದ್ದು ಈ ಪ್ರಶ್ನೆ. ಅಲ್ಲ, ಈ ರಾಯರು ಅರ್ಥಾತ್ ಅಳಿಯದೇವರು ಮಾವನ ಮನೆಗೆ ಅದ್ಯಾಕೆ ರಾತ್ರಿಯ ಹೊತ್ತಲ್ಲೇ ಬಂದರು? ಹೆಂಡತಿಯನ್ನು ನೋಡಬೇಕು, ಅವಳೊಂದಿಗೆ ಮಾತಾಡಬೇಕು. ಅವಳಿಗಷ್ಟೇ ಕೇಳುವಂತೆ ಹಾಡಬೇಕು, ಅವಳನ್ನಿಷ್ಟು ಕಾಡಬೇಕು, ಕಣ್ಣಲ್ಲೇ ಕರೆದು ಕೆರಳಿಸಬೇಕು ಎಂಬೆಲ್ಲ ಆಸೆ ಅವರಿಗಿತ್ತು ತಾನೆ? ಅಂದಮೇಲೆ ಬೆಳಗ್ಗೆ ಬೆಳಗ್ಗೆಯೇ ಅಥವಾ ಮಧ್ಯಾಹ್ನ ಊಟದ ಸಮಯಕ್ಕೆ ಸರಿಯಾಗಿ ಅವರೇಕೆ ಬರಲಿಲ್ಲ? ಹಾಗೆಲ್ಲ ಬರಬಾರದು ಎಂದೇನಾದರೂ ಶಾಸ್ತ್ರ ಇದೆಯೇ? ಹೌದು ಎನ್ನುವುದಾದರೆ, ಮುಸ್ಸಂಜೆಯ ಹೊತ್ತಿಗೇ ಅವರು ಬರಬಹುದಿತ್ತಲ್ಲ? ಅದನ್ನೆಲ್ಲ ಬಿಟ್ಟ ಈ ಮಹರಾಯರು ರಾತ್ರಿಯ ಹೊತ್ತೇ ಮಾವನ ಮನೆಗೆ ಬಂದುದಾದರೂ ಯಾಕೆ? ಬೆಳಗ್ಗೆ ಬೇಡ, ರಾತ್ರಿಯೇ ಬನ್ನಿ ಅಂತೇನಾದ್ರೂ ಹೆಂಡತಿಯೋ ಅಥವಾ ಮಾವನ ಮನೆಯವರೋ ಸೂಚನೆ ಕೊಟ್ಟಿದ್ರೋ ಹೇಗೆ?
ಉಹುಂ, `ರಾಯರು ಬಂದರು ಮಾವನ ಮನೆಗೆ’ ಪದ್ಯ ಓದಿದ ಬಹುಪಾಲು ಮಂದಿ ಇಂಥ ಪ್ರಶ್ನೆಗಳನ್ನು ಕೇಳಿಕೊಳ್ಳುವುದೇ ಇಲ್ಲ. ಅವರ ಮನಸ್ಸು ಮತ್ತೇನೋ ಪೋಲ್ ಪೋಲಿ ಸಂದರ್ಭಗಳನ್ನೇ ಕಲ್ಪಿಸಿಕೊಂಡು ಖುಷಿಪಡುತ್ತಿರುತ್ತದೆ. ಏಕೆಂದರೆ ಪದ್ಯದಲ್ಲೇ ಇರುವ ವಿವರಣೆಯಂತೆ-ಎದೆಯ ತುಂಬಾ ಒಂದಿಡೀ ವರ್ಷಕ್ಕೂ ಆಗಿ ಮಿಗುವಷ್ಟು ಆಸೆಗಳನ್ನು ತುಂಬಿಕೊಂಡ ರಾಯರು- ಹೆಂಡತಿ `ತಿಂಗಳ ರಜೆ’ ಪಡೆದ ಸಂದರ್ಭದಲ್ಲೇ ಓಡಿಬಂದಿರುತ್ತಾರೆ! ಅವರಿಗೋ ಕಣ್ತುಂಬ ಆಸೆ, ಒಳಗೆಲ್ಲೋ ಕಾಣದಂತೆ ಇದ್ದವಳಿಗೆ-ಕರುಳ ತುಂಬಾ ಸಂಕಟ. ಇಬ್ಬರ ಕಣ್ಣಿಗೂ ನಿದ್ರೆಯಿಲ್ಲ; ಇತ್ತ, ಮನೆಯೊಳಗಿನ ಯಾರಿಗೂ ಸಂತೋಷವಿಲ್ಲ! ಇದು, ರಾಯರು ಮಾವನ ಮನೆಗೆ ಬಂದಾಗಿನ ಪರಿಸ್ಥಿತಿ.
ಒಂದೆರಡು ನಿಮಿಷದ ಮಟ್ಟಿಗೆ ಈ ಪದ್ಯದೊಳಗಿನ ಹಳೇಕಾಲದ ರಾಯರನ್ನೂ, ಅವರ ಹೆಂಡತಿಯನ್ನೂ ಮರೆತು- ಈ ಕಾಲದ ದಂಪತಿಗಳ ಸಂದರ್ಭಕ್ಕೇ ಪದ್ಯವನ್ನು ತಂದು ನಿಲ್ಲಿಸಿದರೆ- ಉಹುಂ, ಕಾತರ, ರೋಮಾಂಚನ ಎಂಬ ಪದಗಳಿಗೆ ಅರ್ಥವೇ ಸಿಗುವುದಿಲ್ಲ. ಏಕೆಂದರೆ, ಈ ಕಾಲದ ಎಲ್ಲ ಗಂಡ-ಹೆಂಡತಿಯ ಬಳಿ ಮೊಬೈಲ್ ಇರುತ್ತದೆ! ಇಬ್ಬರೂ ಒಂದು ದಿನಕ್ಕೆ ಎಪ್ಪತ್ತೆರಡು ಬಾರಿ ಮಾತಾಡಿರುತ್ತಾರೆ. ಆ ಮಾತಿನ ಮಧ್ಯೆಯೇ ಫೋನ್‌ನಲ್ಲೇ `ಲೊಚ್’ ಎಂದು ಮುತ್ತು ಕೊಟ್ಟಿರುತ್ತಾರೆ. ಹೆಂಡತಿಯ `ತಿಂಗಳ ರಜೆ’ಯ ದಿನ ಅವನಿಗೆ ಮೊದಲೇ ಗೊತ್ತಿರುತ್ತದೆ. ಬೈ ಛಾನ್ಸ್, ಒಂದೆರಡು ದಿನ ಮೊದಲೇ ಅಂಥ ಸಂದರ್ಭ ಒದಗಿ ಬಂದರೆ- ಅದೂ ಕೂಡ ಅದೇ ಮೊಬೈಲಿನ ಮಾತುಗಳಲ್ಲಿ; ಎಸ್ಸೆಮ್ಮೆಸ್ ಸಂದೇಶದಲ್ಲಿ ಅವನನ್ನು ತಲುಪಿಬಿಡುತ್ತದೆ! ಹಾಗಾಗಿ, ಈ ಕಾಲದ ರಾಯರುಗಳೆಲ್ಲ ಹೆಂಡತಿಯ ತಿಂಗಳ ರಜೆ ಮುಗಿದಿದೆ ಎಂಬುದನ್ನು ಎರಡೆರಡು ಬಾರಿ ಗ್ಯಾರಂಟಿ ಮಾಡಿಕೊಂಡೇ ಮಾವನ ಮನೆಯ ಕಡೆಗೆ ಬೈಕು ಓಡಿಸುತ್ತಾರೆ.
ಹಾಗಾಗಿಬಿಟ್ಟರೆ – ಪದ್ಯ ಮುಂದುವರಿಯುವುದೇ ಇಲ್ಲ. ಹಾಗಾಗಿ, ಈಗಿನ ಕಾಲದ ರಾಯರುಗಳನ್ನು ಒಂದಿಷ್ಟು ಹೊತ್ತು ದೂರವಿಡೋಣ. ಆಗಿನ ಕಾಲದ ಅಳಿಯಂದಿರ ಫಜೀತಿಗಳು ಹೇಗೆಲ್ಲ ಇದ್ದವು ಎಂಬ ತುಂಟ ಪ್ರಶ್ನೆಯನ್ನು ಜತೆಗಿಟ್ಟುಕೊಂಡೇ- `ರಾಯರು, ಮಾವನ ಮನೆಗೆ ರಾತ್ರಿಯ ಹೊತ್ತೇ ಬಂದದ್ದೇಕೆ?’ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳೋಣ.
ಕೆ.ಎಸ್. ನರಸಿಂಹಸ್ವಾಮಿಯವರು `ರಾಯರು ಬಂದರು ಮಾವನ ಮನೆಗೆ…’ ಪದ್ಯ ಬರೆದದ್ದು ೧೯೬೦ರ ದಶಕದಲ್ಲಿ. ಆ ದಿನಗಳಲ್ಲಿ, ಓದಿದವರಿಗೆಲ್ಲ ತುಂಬ ಸುಲಭವಾಗಿ ಸಿಗುತ್ತಿದ್ದ ಕೆಲಸಗಳೆಂದರೆ ಉಪಾಧ್ಯಾಯ ವೃತ್ತಿ ಅಥವಾ ತಾಲೂಕಾಫೀಸಿನ ಗುಮಾಸ್ತೆಯ ಕೆಲಸವೇ. ಪದ್ಯದಲ್ಲಿ ಬರುವ `ರಾಯರು’ ಕೂಡ ಮಧ್ಯಮ ವರ್ಗದ ಆಸಾಮಿಯೇ ಆದ್ದರಿಂದ ಅವರೂ ಕೂಡ ಈ ಎರಡರ ಪೈಕಿ ಒಂದು ಕೆಲಸ ಮಾಡಿಕೊಂಡಿದ್ದರು ಅಂದುಕೊಳ್ಳೋಣ.
ಆಗಿನ ಕಾಲದಲ್ಲಿ – ಹೆಂಡತಿಯನ್ನು ನೋಡಲು ಹೋಗುವ ನೆಪ ಹೇಳಿ, ಈಗಿನಂತೆ ಭರ್ತಿ ನಾಲ್ಕು ದಿನ ರಜ ಹಾಕುವ ಹಾಗಿರಲಿಲ್ಲ. ಬದಲಿಗೆ, ಶ್ರದ್ಧೆಯಿಂದ ಕೆಲಸ ಮುಗಿಸಬೇಕಿತ್ತು. ನಂತರ, ಮಧ್ಯಾಹ್ನ ಮೂರೂವರೆಯ ವೇಳೆಗೆ ತನ್ನ ಮೇಲಧಿಕಾರಿಯ ಮುಂದೆ- ಗುಬ್ಬಚ್ಚಿಯಂತೆ ಮುದುರಿ ನಿಂತು- `ಸ್ವಲ್ಪ ಬೇಗ ಹೋಗಬೇಕು ಅಂತಿದೀನಿ ಸಾರ್’ ಎಂದು ಕೇಳಿ, ಒಪ್ಪಿಗೆ ಪಡೆಯಬೇಕಿತ್ತು. ನಂತರ, ತರಾತುರಿಯಿಂದಲೇ ನಡೆದುಕೊಂಡೋ, ಸೈಕಲ್ ತುಳಿದುಕೊಂಡೋ, ಒಂದಿಷ್ಟು ಕಾಸು ಜಾಸ್ತಿಯಿದ್ದರೆ ಜಟಕಾ ಹಿಡಿದುಕೊಂಡೋ ಅಥವಾ ಮೋಟಾರು ಹತ್ತಿಕೊಂಡೋ ಮಾವನ ಮನೆಯ ಕಡೆಗೆ ಪಯಣ ಬೆಳೆಸಬೇಕಿತ್ತು. ಹೀಗೆಲ್ಲ ಆಗಿ ಕಡೆಗೂ ಮಾವನ ಮನೆಗೆ ತಲುಪುವ ವೇಳೆಗೆ ಬೇಡ ಬೇಡ ಅಂದರೂ ರಾತ್ರಿಯಾಗಿಬಿಡುತ್ತಿತ್ತು!
ಈ ಅಂದಾಜಿಗೆ ಬದಲಾಗಿ, ರಾಯರು ರಾತ್ರಿಯೇ ಮಾವನ ಮನೆಗೆ ಬಂದದ್ದೇಕೆ ಎಂಬುದಕ್ಕೆ ಇನ್ನೂ ಒಂದು ಉತ್ತರವಿದೆ. ಏನೆಂದರೆ-
ಆ ಕಾಲದಲ್ಲಿ ಮಾವನ ಮನೆ ತಲುಪಬೇಕೆಂದರೆ- ಐದಾರು ಊರುಗಳನ್ನಾದರೂ ದಾಟಿ ಬರಬೇಕಿತ್ತು. ಆಗ ಬೈಕು/ಕಾರುಗಳು ಇರಲಿಲ್ಲವಲ್ಲ? ಹಾಗಾಗಿ ಎಲ್ಲ `ಅಳಿಯ ದೇವರುಗಳೂ’ ಹತ್ತಾರು ಮಂದಿಗೆ ಕಾಣಿಸಿಕೊಂಡೇ, ಅವರೊಂದಿಗೆ ಒಂದೆರಡು ಮಾತಾಡಿಯೇ ಮುಂದೆ ಹೋಗಬೇಕಿತ್ತು. ಒಂದು ವೇಳೆ ಬೆಳ್ಳಂಬೆಳಗ್ಗೆಯೋ, ಮಟಮಟ ಮಧ್ಯಾಹ್ನವೋ ಈ ರಾಯರು ನಡೆದು ಬಂದರೆ- ಎದುರಾದ ಜನ ಹಿಂದಿನಿಂದ-`ಹೆಂಡ್ತಿ ಮೇಲಿನ ಆಸೆ ನೋಡ್ರೀ, ಅದಕ್ಕೇ ಉರಿ ಬಿಸಿಲಲ್ಲಿ ಓಡೋಡಿ ಬಂದಿದಾರೆ’ ಎಂದು ಕಿಚಾಯಿಸುತ್ತಿದ್ದರು. ಹೇಳಿ ಕೇಳಿ ಊರಿಗೆ ಹೊಸಬರು ನೋಡಿ, ಅದೇ ಕಾರಣದಿಂದ `ರಾಯರಿಗೆ’ ಇಂಥ ಮಾತು ಕೇಳಿದರೆ ಒಂಥರಾ ನಾಚಿಕೆಯಾಗುತ್ತಿತ್ತು.
ಹಾಗೇನೇ, ಈ ಕುಹಕದ ಮಾತಿಗೆಲ್ಲಾ ಗೋಲಿಮಾರೋ ಎಂದುಕೊಂಡೇ ಅವರು ಮಧ್ಯಾಹ್ನವೇ ಮನೆಗೆ ಬಂದಿದ್ದರೆ ಏನಾಗುತ್ತಿತ್ತು ಅಂದರೆ- ಆಗ ಅವಿಭಕ್ತ ಕುಟುಂಬ ಪದ್ಧತಿ ಜಾರಿಯಲ್ಲಿತ್ತಲ್ಲ, ಹಾಗಾಗಿ, ಇಡೀ ಮನೆಯ ತುಂಬ ಜನ ತುಂಬಿರುತ್ತಿದ್ದರು. ಈ ಹೆಂಡತಿ ಎಂಬ ಮಹರಾಯಿತಿ ಅವರ ಮಧ್ಯೆಯೇ ಕಳೆದುಹೋಗಿರುತ್ತಿದ್ದಳು. ಹಾಗಿದ್ದಾಗ ಅವಳನ್ನು `ಹಾಗೇ ಸುಮ್ಮನೆ’ ಕರೆಯುವುದು ಸಾಧ್ಯವೇ ಇರಲಿಲ್ಲ. ಆಕಸ್ಮಿಕವಾಗಿ ಆಕೆ ಸಿಕ್ಕಾಗ ಕೂಡ ಸರಸಕ್ಕೆ ಮುಂದಾಗುವುದು ಸಭ್ಯತೆ ಅನ್ನಿಸಿಕೊಳ್ಳುತ್ತಿರಲಿಲ್ಲ! ಅಥವಾ, ಮನೆತುಂಬ ಜನ ಇರಲಿಲ್ಲ ಅಂದುಕೊಂಡರೂ `ಹೆಂಡತಿ’ಯೊಂದಿಗೆ ಅವರ ಅಮ್ಮ ಇರುತ್ತಿದ್ದರು. (ಅಳಿಯಂದಿರು ಬಂದಾಕ್ಷಣ ಆಕೆ ಏನೋ ಕೆಲಸ ಹುಡುಕಿಕೊಂಡು ಹೊರಗೆ ಹೋಗಬೇಕಿತ್ತು!) ಅಥವಾ ಮನೆಗೆ ಬೀಗ ಹಾಕಿಕೊಂಡು ಇಡೀ ಕುಟುಂಬದವರೆಲ್ಲ ಕೆಲಸದ ನೆಪದಲ್ಲಿ ಹೊಲ-ಗದ್ದೆ, ತೋಟದ ಕಡೆಗೆ ಹೋಗಿರುತ್ತಿದ್ದರು. ಉಹುಂ, ಮಾವನ ಮನೆಯಲ್ಲಿ ಹೀಗೆಲ್ಲ ಆಗಿರಬಹುದೆಂಬ ಚಿಕ್ಕದೊಂದು ಸೂಚನೆ ಕೂಡ ಅಳಿಯಂದಿರಿಗೆ ಸಿಗುತ್ತಿರಲಿಲ್ಲ.
ಹಾಗಾಗಿ, ಹೆಂಡತಿಯ ಮೋಹದಲ್ಲಿ ಮಟಮಟ ಮಧ್ಯಾಹ್ನವೇ ಬಂದೇಬಿಟ್ಟರೆ, ಆ ಕಾಲದ ರಾಯರುಗಳೆಲ್ಲ ಅನಿವಾರ್‍ಯವಾಗಿ ಹೊಲ-ಗದ್ದೆಯ ಹಾದಿ ಹಿಡಿಯಬೇಕಿತ್ತು. ನಂತರ, ಮಾವನ ಮನೆಯವರೊಂದಿಗೆ ಸೇರಿ ದುಡಿಯಬೇಕಿತ್ತು. ಹಾಗೆ, ಸಂಜೆಯವರೆಗೂ ದುಡಿದು, ದಣಿದು ಬಂದಿದ್ದರೆ-ರಾತ್ರಿ ಹೊಸ ಹೆಂಡತಿಯ ಜತೆ ರೊಮಾನ್ಸ್ ಮಾಡಲು ಆಗುತ್ತಿತ್ತಾ?
`ಬೆಳಗ್ಗೆಯೋ, ಮಧ್ಯಾಹ್ನವೋ ಬಂದು ಹೀಗೆಲ್ಲ ಫಜೀತಿ ಪಡುವ ಬದಲು ರಾಯರು ರಾತ್ರಿಯೇ ಬಂದದ್ದರಿಂದ ಎಷ್ಟೊಂದು ಅನುಕೂಲಗಳಿವೆ ಅಂದರೆ- ಅಳಿಯಂದಿರು ಬಂದರು ಎಂಬ ಒಂದೇ ಕಾರಣಕ್ಕೆ ಮಾವನ ಮನೆಯವರಿಗೆ ದೊಡ್ಡ ಖುಷಿಯಾಗುತ್ತದೆ. ಅದೆಷ್ಟೇ ದುಡಿದಿದ್ದರೂ ರಾಯರನ್ನು ಕಂಡಾಕ್ಷಣ ಹೆಂಡತಿಗೂ-ಆಯಾಸ ಮರೆತು ಹೋಗುತ್ತದೆ. ರಾಯರು ಬಂದರೆಂಬ ಒಂದೇ ಕಾರಣಕ್ಕೆ ಸಿಹಿಯೂಟ ಸಿದ್ಧವಾಗುತ್ತದೆ. ತುಂಬ ಬೇಗನೆ ಕತ್ತಲಾಗುತ್ತದೆ. ರಾತ್ರಿಯೆಂಬುದು ದೀರ್ಘವಾಗುತ್ತದೆ. ಮತ್ತು-
ಆ ರಾತ್ರಿಯ ಮಬ್ಬುಗತ್ತಲಿನಲ್ಲಿ; ಕಂಡೂ ಕಾಣದಂತೆ ಉರಿವ ದೀಪದ ಬೆಳಕಲ್ಲಿ `ಅವಳು’ ಮತ್ತಷ್ಟು ಮೋಹಕವಾಗಿ ಕಾಣುತ್ತಾಳೆ. ನಾಚಿಕೊಳ್ಳುತ್ತಲೇ ಹತ್ತಿರಾಗುತ್ತಾಳೆ. `ಹೋಗಿಬಿಡ್ತೀನಿ’ ಎಂದು ಹೆದರಿಸುತ್ತಲೇ ಜತೆಯಲ್ಲೇ ಉಳಿಯುತ್ತಾಳೆ. ಅಪ್ಪಿಕೊಂಡಷ್ಟೂ ಆಪ್ತವಾಗುತ್ತಾಳೆ. ಕಣ್ಣಲ್ಲೇ ಸಾವಿರ ಮಾತಾಡಿಬಿಡುತ್ತಾಳೆ. ಜೇನು ತುಟಿಗಳಿಂದ ಜೀವ ಝಲ್ಲೆನ್ನಿಸುತ್ತಾಳೆ ಮತ್ತು ಕನಸೇ ಬೀಳದಂತೆ ಕಾಡಿಬಿಡುತ್ತಾಳೆ!
ಇಂಥದೊಂದು ಸಂದರ್ಭ ಜತೆಯಾಗಬೇಕಾದರೆ ರಾತ್ರಿಯ ವೇಳೆಯೇ ಮನೆಗೆ ಹೋಗಬೇಕು ಅನ್ನಿಸಿತೇನೋ; ಅದಕ್ಕೇ ರಾಯರು…
***
ಈ ತುಂಟತನದ ಕಲ್ಪನೆಗಳಾಚೆಗೂ- ರಾಯರು ರಾತ್ರಿಯೇ ಮಾವನ ಮನೆಗೆ ಬಂದದ್ದೇಕೆ ಎಂಬ ಪ್ರಶ್ನೆಗೆ ಕೆ.ಎಸ್.ನ. ಅವರೇ ಹೇಳಿರುವ ಇನ್ನೊಂದು ಉತ್ತರವೂ ಇದೆ. ಏನೆಂದರೆ-ರಾಯರೇನೋ ಬೆಳಗ್ಗೆಯೇ ಹೊರಟರು. ಆಗ ವಾಹನ ಸೌಲಭ್ಯವಿರಲಿಲ್ಲವಲ್ಲ? ಹಾಗಾಗಿ, ನಡೆದುಕೊಂಡೇ ಹಳ್ಳ-ತಿಟ್ಟು ದಾಟಿ ಉಸ್ಸಪ್ಪಾ ಎನ್ನುತ್ತಾ ಮನೆ ತಲುಪುವುದರೊಳಗೆ ರಾತ್ರಿಯಾಗಿಯೇ ಬಿಟ್ಟಿತು!
ಇಂಥ ನೂರೆಂಟು ಅವಸ್ಥೆಗಳ ಮಧ್ಯೆ ಬಂದ ರಾಯರು, ಹೆಂಡತಿ `ತಿಂಗಳ ರಜೆ’ಯಲ್ಲಿರುವುದನ್ನು ತಿಳಿದು, ಬೇಸರಗೊಂಡು, ಸಂಕಟದಲ್ಲಿಯೇ ರಾತ್ರಿ ಕಳೆದು ಬೆಳಗ್ಗೆ ಎದ್ದವರೇ ಹುಸಿಮುನಿಸಿನಿಂದಲ- `ಹೋಗಿ ಬರ್‍ತೀನಿ’ ಎಂದ ಮರುಕ್ಷಣವೇ – ರಜೆಯ ಅವಧಿ ಮುಗಿಸಿ ಒಳಬರುತ್ತಾಳೆ ಹೆಂಡತಿ!
ಆಮೇಲೆ ಏನಾಯಿತು ಎಂಬುದನ್ನು -ನೀವು ಕೇಳಬಾರದು. ನಾನು ಹೇಳಬಾರದು!

Advertisements

1 Comment »

  1. 1

    ಒಂದು ಚಿಕ್ಕ ಪ್ರಶ್ನೆಗೆ ಎಷ್ಟೊಂದು ವಿಧವಾಗಿ ಯೋಚಿಸಿ ವಿವರಿಸಿದ್ದೀರಿ!!

    ಈಗಿನ ಕಾಲದಲ್ಲಿ ಸಾಫ್ಟ್‍ವೇರ್ ಎಂಜಿನಿಯರ್ ಮನೆಗೆ ಬರುವುದೂ ಕೂಡ ರಾತ್ರಿಯೇ 😉


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: