ಎಲ್ಲರ ತುಟಿಯ ಮೇಲೂ ನಲಿಯುತ್ತಿರುವ ಈ ಹಾಡು ಡೈರಿಯೊಳಗಿನ ಪದ್ಯವಾಗಿತ್ತು!

ತುಟಿಯ ಮೇಲೆ ತುಂಟ ಕಿರುನಗೆ…
ಚಿತ್ರ: ಮನ ಮೆಚ್ಚಿದ ಮಡದಿ ಗೀತರಚನೆ: ಕು.ರಾ. ಸೀತಾರಾಮಶಾಸ್ತ್ರಿ
ಸಂಗೀತ: ವಿಜಯಭಾಸ್ಕರ್, ಗಾಯನ: ಪಿ.ಬಿ. ಶ್ರೀನಿವಾಸ್ ಮತ್ತು ಪಿ. ಸುಶೀಲ

ತುಟಿಯ ಮೇಲೆ ತುಂಟ ಕಿರುನಗೆ…
ಕೆನ್ನೆ ತುಂಬಾ ಕೆಂಡಸಂಪಿಗೆ
ಒಲವಿನ ನೊಸಗೆ…. ಎದೆಯ ಬೆಸುಗೆ
ಈ ಬಗೆ…. ಹೊಸ ಬಗೆ… ಹೊಸಬಗೆ ||ಪ||

ನಿನ್ನ ಮೊಗ ಕಂಡ ಕ್ಷಣ ಹಿಗ್ಗಿನೌತಣ
ಬಣ್ಣನೆಗೆ ಬಾರದಿಹ ನೂರು ತಲ್ಲಣಾ!
ಏನೊ ಕಸಿವಿಸಿ…ಏರಿ ಮೈ ಬಿಸಿ…
ತಂದಿತೆನ್ನ ಕೆನ್ನೆಗೆ ಕೆಂಡಸಂಪಿಗೆ ||೧||

ತುಂಬಿ ಬಂದ ಒಲವಿನಂದ ಈ ಸವಿಬಂಧ
ಬಿಡಿಸಲಾಗದಂಥ ಒಗಟು ಪ್ರೇಮದ ನಂಟು
ಅಲ್ಲೇ ಕೌಶಲ… ಅಲ್ಲೇ ತಳಮಳ….
ಚಿಗುರು ಪ್ರೇಮ ಸಂಭ್ರಮಾ… ಒಗರು ಸಂಯಮಾ ||೨||

ಹಳೆಯ ತಲೆಮಾರಿನ ಶ್ರೇಷ್ಠ ಗೀತರಚನೆಕಾರರು ಎಂದುಕೊಂಡಾಗ ತಕ್ಷಣ ನೆನಪಾಗುವ ಹೆಸರು ಕು.ರಾ. ಸೀತಾರಾಮಶಾಸ್ತ್ರಿ ಅವರದು. ಗಂಡು-ಹೆಣ್ಣಿನ ನಡುವಿನ ಮಾರ್ದವ ಗಳಿಗೆಗಳನ್ನು; ಪ್ರೇಮದ ನೂರು ತರಂಗಗಳನ್ನು ಶಬ್ದಗಳಲ್ಲಿ ಹಿಡಿದಿಟ್ಟ ಮೊದಲ ಚಿತ್ರ ಸಾಹಿತಿ ಎಂಬ ಹೆಗ್ಗಳಿಕೆ ಅವರದು. ಅದರಲ್ಲೂ ಹೆಣ್ಣನ್ನು ವರ್ಣಿಸುವ, ಹಾಗೇ ಸುಮ್ಮನೆ ಛೇಡಿಸುವ ಗೀತೆರಚನೆ ಅಂದರಂತೂ ಸೀತಾರಾಮ ಶಾಸ್ತ್ರಿಗಳ ಲೇಖನಿಗೆ ನೂರ್ಮಡಿ ಉತ್ಸಾಹ ಬಂದುಬಿಡುತ್ತಿತ್ತು. ಅಂಥದೊಂದು ಖುಷಿಯನ್ನು ಜತೆಗಿಟ್ಟುಕೊಂಡೇ, ತಮ್ಮ ಕಲ್ಪನೆಯ ನಾಯಕಿಯನ್ನು ಕಣ್ಮುಂದೆ ತಂದುಕೊಂಡ ಶಾಸ್ತ್ರಿಗಳು `ಬಿಂಕದ ಸಿಂಗಾರಿ/ ಮೈ ಡೊಂಕಿನ ವೈಯಾರಿ/ ಈ ಸವಿ ಘಳಿಗೆ ರಸ ದೀವಳಿಗೆ/ ನಿನ್ನಂತರಂಗ ಮಧುರಂಗ…. ಎಂಬ ಗೀತೆ ಬರೆದರು. ಕೆಲ ದಿನಗಳ ನಂತರ ಈ ಹಿಂದೆ ಹೊಗಳಿದ್ದು ಅತಿಯಾಯಿತು ಎಂಬ ನಿರ್ಧಾರಕ್ಕೆ ಬಂದವರಂತೆ-` ಸ್ವಾಭಿಮಾನದ ನಲ್ಲೆ/ ಸಾಕು ಸಂಯಮ ಬಲ್ಲೆ/ ಹೊರಗೆ ಸಾಧನೆ ಒಳಗೆ ವೇದನೆ/ ಇಳಿದು ಬಾ ಬಾಲೆ….’ ಎಂದು ಛೇಡಿಸಿ ಬರೆದರು. ಮುಂದೆ -ಅದೇ ಸುಂದರಿ, ಸುರಸುಂದರಿ ನಾಯಕಿಯೊಂದಿಗೆ ಡ್ಯುಯೆಟ್ ಹಾಡಿದರೆ ಹೇಗಿರಬಹುದು ಎಂಬ ಕಲ್ಪನೆಯಲ್ಲಿ ತೇಲಿ ಹೋಗಿ `ಮೆಲ್ಲುಸಿರೇ ಸವಿಗಾನ /ಎದೆ ಝಲ್ಲೆನೆ ಹೂವಿನ ಬಾಣ/ ಮನದಾಚೆ ದೂಡಿದ ಬಯಕೆ/ ಕನಸಾಗಿ ಕಾಡುವುದೇಕೆ….’ ಎಂದು ಬರೆದು ಒಂದೊಂದು ಪದದಲ್ಲೂ ಆಸೆ, ಪ್ರೇಮ, ನಡುಕ, ತವಕ, ತಲ್ಲಣಗಳನ್ನಿಟ್ಟರು.
ಸೀತಾರಾಮ ಶಾಸ್ತ್ರಿಗಳು ಒಂದೊಂದು ಪದಕ್ಕೂ ರಾಗ-ಭಾವದ ಜೇನು ತುಂಬಿ ಸೃಷ್ಟಿಸಿದ ಮಧುರಗೀತೆಗಳ ಪಟ್ಟಿ ಇಷ್ಟಕ್ಕೆ ನಿಲ್ಲುವುದಿಲ್ಲ. ೬೦ರ ದಶಕದಿಂದ ಈ ದಿನದವರೆಗೂ ಸೂಪರ್‌ಹಿಟ್ ಗೀತೆಗಳೆಂದೇ ಹೆಸರಾಗಿರುವ `ರಾಮನ ಅವತಾರ/ರಘುಕುಲ ಸೋಮನ ಅವತಾರ’, `ಜಯತೇ, ಜಯತೇ, ಜಯತೇ… ಸತ್ಯಮೇವ ಜಯತೇ’ `ಅಂಕದ ಪರದೆ ಜಾರಿದ ಮೇಲೆ…’ ಹಾಡುಗಳನ್ನು ಬರೆದದ್ದೂ ಶಾಸ್ತ್ರಿಗಳೇ. ಅಷ್ಟೇ ಅಲ್ಲ, ಈಗಲೂ, ನೂರು ದಾಟಿದ ಮುಪ್ಪಾನು ಮುದುಕರನ್ನೂ ಥೈ ಥೈ ಕುಣಿಯುವಂತೆ ಮಾಡಬಲ್ಲ `ದೂರದಿಂದ ಬಂದಂಥ ಸುಂದರಾಂಗ ಜಾಣ/ನೋಟದಲ್ಲೆ ಸೂರೆಗೊಂಡ ಅಂತರಂಗ ಪ್ರಾಣ/ ಈತನಂತರಾಳ ಏನೊ ರೀತಿ ನೀತಿ ಹೇಗೊ/ ನಾ ಕಾಣೆ ನಾ ಕಾಣೆ ನನ್ನ ದೇವರಾಣೆ/ ಭಲಾರೆ, ಇವಾ ಭಾರಿ ಮೋಜುಗಾರ, ಭಲಾರೆ….’ ಎಂಬ ಕ್ಯಾಬರೆ ಹಾಡು ಬರೆದವರು ಕೂಡ ಕು.ರಾ. ಸೀತಾರಾಮ ಶಾಸ್ತ್ರಿಗಳೇ.
***
ಸ್ವಾರಸ್ಯವೆಂದರೆ, ಕು.ರಾ.ಸೀ., ಗೀತರಚನೆಕಾರರಾಗಬೇಕೆಂಬ ಹಂಬಲದಿಂದ ಚಿತ್ರರಂಗಕ್ಕೆ ಬಂದವರಲ್ಲ. ಅವರು ಸ್ವಾತಂತ್ರ್ಯ ಪೂರ್ವ ಕಾಲದಲ್ಲಿಯೇ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಚಿನ್ನದ ಪದಕ ಪಡೆದಿದ್ದ ಪ್ರತಿಭಾವಂತ. ಜತೆಗೆ ಕಾನೂನು ಪದವಿಯನ್ನೂ ಪಡೆದಿದ್ದ ಅವರು ಚಿತ್ರರಂಗಕ್ಕೆ ಬಂದದ್ದೇ ಆಕಸ್ಮಿಕ. ಹಾಗೆ ಚಿತ್ರರಂಗಕ್ಕೆ ಬಂದದ್ದು ನಟನಾಗಿ, ೧೯೪೩ರಲ್ಲಿ. `ಹೇಮರೆಡ್ಡಿ ಮಲ್ಲಮ್ಮ’ ಚಿತ್ರದಲ್ಲಿ ವೇಮಣ್ಣನ ಪಾತ್ರಕ್ಕಾಗಿ ಬಣ್ಣ ಹಚ್ಚಿದ ಶಾಸ್ತ್ರಿಗಳನ್ನು ಹತ್ತಿರ ಕರೆದ ಬೆಳ್ಳಾವೆ ನರಹರಿ ಶಾಸ್ತ್ರಿಗಳು, `ಒಂದು ರಾಗ ಸಿದ್ಧಪಡಿಸಿದ್ದೀನಿ. ಅದಕ್ಕೊಂದು ಹಾಡು ಬರೆಯಯ್ಯ’ ಅಂದರಂತೆ. ಪರಿಣಾಮ, ಆ ಕ್ಷಣವೇ- `ಸೇವೆಯ ಕೊಡು, ತೋರು ದಯೆ ದೇವರ ದೇವ’ ಎಂಬ ಹಾಡು ಬರೆದ ಶಾಸ್ತ್ರಿಗಳು ಅಂದಿನಿಂದಲೇ ನಟ ಮತ್ತು ಗೀತರಚನೆಕಾರ ಆಗಿಹೋದರು.
ಶಾಸ್ತ್ರಿಗಳಿಗೆ, ಆ ಕಾಲದಲ್ಲಿಯೇ ಚುಟುಕು, ಪದ್ಯಗಳನ್ನು ಬರೆಯುವ ಗೀಳೂ ಅಂಟಿಕೊಂಡಿತ್ತು. ಹಾಗೆ ಬರೆದದ್ದನ್ನೆಲ್ಲ ಒಂದು ಪುಸ್ತಕದಲ್ಲಿ ಜೋಡಿಸಿಡುವ ಶಿಸ್ತೂ ಜತೆಗಿತ್ತು. ಹೊಸದು ಯಾವುದೇ ಇರಲಿ, ಅದನ್ನು ಕಲಿಯಬೇಕು ಎಂಬ ಉತ್ಸಾಹ ಹೊಂದಿದ್ದ ಶಾಸ್ತ್ರಿಗಳು, ಮೊದಲು `ಗೋರ ಕುಂಬಾರ’ ಹಾಗೂ `ಗುಣಸಾಗರಿ’ ಚಿತ್ರಗಳ ಸಾಹಿತ್ಯ ಹಾಗೂ ಸಹ ನಿರ್ದೇಶನದ ಜವಾಬ್ದಾರಿ ನಿರ್ವಹಿಸಿದರು. ನಂತರ ಸಿಂಗಾಪುರಕ್ಕೆ ತೆರಳಿ ಒಂದಿಷ್ಟು ಸಿಂಗಪೂರ್ ಭಾಷಾ ಚಿತ್ರಗಳನ್ನೂ ನಿರ್ದೇಶಿಸಿ ಅಲ್ಲಿನ ಜನರಿಂದಲೂ `ಶಹಭಾಷ್’ ಅನ್ನಿಸಿಕೊಂಡರು.
ಇಂಥ ಸ್ವಾರಸ್ಯಕರ ಹಿನ್ನೆಲೆಯ ಕು.ರಾ. ಸೀತಾರಾಮಶಾಸ್ತ್ರಿಗಳು `ಮನ ಮೆಚ್ಚಿದ ಮಡದಿ’ ಚಿತ್ರದಲ್ಲಿ ಕುವೆಂಪು ಅವರ `ಜೈ ಭಾರತ ಜನನಿಯ ತನುಜಾತೆ’ ಗೀತೆಯನ್ನು ಟೈಟಲ್ ಕಾರ್ಡ್ ಹಾಡಾಗಿ ಬಳಸಿ ಹೊಸತನ ತಂದರು. ಅವರ ಪಾಂಡಿತ್ಯ, ತಿಳಿವಳಿಕೆ ಕುರಿತು ಎಲ್ಲರಿಗೂ ಗೌರವವಿತ್ತು. `ಮನ ಮೆಚ್ಚಿದ ಮಡದಿ’ಯ ಶೂಟಿಂಗ್ ಸಂದರ್ಭದಲ್ಲಿಯೇ ಶಾಸ್ತ್ರಿಗಳು ಕವಿತೆ ಬರೆಯುವರೆಂಬ ಸಂಗತಿ ಡಾ. ರಾಜ್‌ಕುಮಾರ್‌ಗೆ ಗೊತ್ತಾಯಿತು. ಅದೊಂದು ಸಂಜೆ ಶಾಸ್ತ್ರಿಗಳ ಬಳಿ ಬಂದ ರಾಜ್- `ಗುರುಗಳೇ, ನಿಮ್ಮ ಕವಿತೆಗಳನ್ನು ಕೊಡಿ. ಈಗ ಹೇಗಿದ್ರೂ ಬಿಡುವಿದೆ. ಓದಿ ಕೊಡ್ತೇನೆ’ ಅಂದರಂತೆ.
ಅವತ್ತು ರಾತ್ರಿ- ಶ್ರದ್ಧೆ, ಕುತೂಹಲದಿಂದ ಪದ್ಯ ಓದಲು ಕೂತ ರಾಜ್ ಅವರನ್ನು ಒಂದು ಪದ್ಯ ಬಹಳವಾಗಿ ಸೆಳೆಯಿತು. ಅದೇ, ಈಗಲೂ ಎಲ್ಲರ ತುಟಿಯ ಮೇಲೂ ನಲಿಯುತ್ತಿರುವ- `ತುಟಿಯ ಮೇಲೆ ತುಂಟ ಕಿರುನಗೆ!’ ಮರುದಿನ ಸರಸರನೆ ಶಾಸ್ತ್ರಿಗಳ ಬಳಿ ಬಂದ ರಾಜ್‌ಕುಮಾರ್ `ಗುರುಗಳೇ, ಈ ಪದ್ಯ ತುಂಬಾ ಚೆನ್ನಾಗಿದೆ. ನನ್ನನ್ನು ವಿಪರೀತ ಕಾಡ್ತಾ ಇದೆ. ಇದನ್ನು ನಮ್ಮ ಚಿತ್ರದಲ್ಲಿ ಡ್ಯುಯೆಟ್ ಸಾಂಗ್ ಆಗಿ ಬಳಸೋಣ’ ಅಂದರಂತೆ.
ಅದಕ್ಕೆ ಒಪ್ಪದ ಶಾಸ್ತ್ರಿಗಳು- ` ನೋಡಪ್ಪಾ ಮುತ್ತುರಾಜ, ನಮ್ಮ ಸಿನಿಮಾದ ಕಥಾನಾಯಕ ಹಳ್ಳಿಗಮಾರ. ಆದರೆ ಈ ಗೀತೆ ಪಾಂಡಿತ್ಯ ಪೂರ್ಣವಾಗಿದೆ. ಹಾಗಾಗಿ, ಇದನ್ನು ಚಿತ್ರದಲ್ಲಿ ಅಳವಡಿಸಿದರೆ, ಆ ಸನ್ನಿವೇಶದ ತೀವ್ರತೆಗೆ ಧಕ್ಕೆ ಬರುತ್ತದೆ ‘ ಎಂದರಂತೆ. ಮುಂದುವರಿದು ಹಳ್ಳಿಯವನಾದ ನಾಯಕನಿಂದ ` ಕೌಶಲ, ಸಂಯಮಾ, ಒಲವಿನಂದ…’ ಎಂಬಂಥ ಪದಗಳನ್ನು ಹೇಳಿಸಿದರೆ ಅದು ಅಸಹಜವಾಗಿ ಕಾಣುತ್ತದೆ. ಅದನ್ನು ಜನ ಒಪ್ಪುವುದಿಲ್ಲ’ ಅಂದರಂತೆ.
ಆದರೆ ಕು.ರಾ.ಸೀ., ಬರೆದಿದ್ದ ಹಾಡಿನ ಮೇಲೆ ಅದೇನೋ ಮೋಹ ಹೊಂದಿದ್ದ ರಾಜ್‌ಕುಮಾರ್-`ಹಾಗಲ್ಲ ಗುರುಗಳೇ. ಚಿತ್ರಗೀತೆ ಅಂದರೆ ಕಲ್ಪನೆ ತಾನೆ? ಅಲ್ಲೇನು ನಾಯಕನ ನೈಜವಾದ ಚಿತ್ರಣ ಬರುತ್ತದೆಯೆ? ಇಲ್ಲವಲ್ಲ… ಹಾಗಿರುವಾಗ ಈ ಹಾಡು ಅಸಹಜವಾಗುವುದಾದರೂ ಹೇಗೆ?’ ಎಂದು ಪ್ರತಿವಾದ ಹೂಡಿದರು.
ಈ ಇಬ್ಬರ ಮಾತುಗಳನ್ನೂ ಕೇಳಿ ಮಧ್ಯೆ ಪ್ರವೇಶಿಸಿದ ಸಂಗೀತ ನಿರ್ದೇಶಕ ವಿಜಯ ಭಾಸ್ಕರ್-` ಒಂದು ಕೆಲಸ ಮಾಡೋಣ. ಇದೇ ಹಾಡಿಗೆ ನಾನು ಟ್ಯೂನ್ ಮಾಡ್ತೇನೆ. ಅದು ಎಲ್ಲರಿಗೂ ಇಷ್ಟವಾದರೆ ಮಾತ್ರ ಚಿತ್ರದಲ್ಲಿ ಬಳಸೋಣ. ಇಲ್ಲವಾದರೆ ಬೇಡ ‘ ಎಂದರು. ಈ ಮಾತಿಗೆ ಕು.ರಾ.ಸೀ. ಕೂಡ ಒಪ್ಪಿದರು. ನಂತರ, ವಿಜಯ ಭಾಸ್ಕರ್ ಹಾಕಿದ ಟ್ಯೂನ್ ಕೇಳಿದ ಕು.ರಾ.ಸೀ-`ನಿಮ್ಮ ಟ್ಯೂನ್ ಚೆನ್ನಾಗಿದೆ. ಇದನ್ನು ಚಿತ್ರದಲ್ಲಿ ಬಳಸೋಣ’ ಅಂದರಂತೆ !
`ತುಟಿಯ ಮೇಲೆ ತುಂಟ ಕಿರುನಗೆ’ ಹಾಡು `ಮನ ಮೆಚ್ಚಿದ ಮಡದಿ’ ಚಿತ್ರದಲ್ಲಿ ಬಳಕೆಯಾದದ್ದು ಹೀಗೆ !

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: